ಮೊದಲೇ ಒಂದೆರಡು ಮಾತು :
ಪ್ರವಾಸ ಕಥನ ಬರೆಯುವುದು ಅಂದರೆ ನನಗೆ ಬಹಳ ಅಚ್ಚುಮೆಚ್ಚು. ಬಹಳ ದಿನಗಳ ಹಿಂದೆ ಹಲವು ಪ್ರವಾಸ ಕಥನಗಳನ್ನು ಬರೆದಿದ್ದೆ. ಆಮೇಲೆ ಅದೆಷ್ಟೋ ನೂರಾರು ಪಯಣಗಳು, ಟ್ರೆಕ್ಕಿಂಗುಗಳನ್ನು ಮಾಡಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಮಿತ್ರರ ಜೊತೆ ಸಜ್ಜನಘಡಕ್ಕೆ ಹೋಗಿದ್ದೆ. ಬಹಳ ದಿನಗಳ ಆಸೆ. ಅವುಗಳ ಬಗ್ಗೆ ಇಲ್ಲಿ ಬರೆದಿದ್ದೇನೆ.
****
ಸಜ್ಜನಘಡಕ್ಕೆ ಒಂದ್ ಸಾರಿ ಹೋಗ್ ಬರವು.. ಇಂತದ್ದೊಂದು ಆಲೋಚನೆ ನನ್ನಲ್ಲಿ ಮೂಡಲು ಪ್ರಮುಖ ಕಾರಣ ಎಂದರೆ ದೊಡ್ಡಮ್ಮನ ಮಗ ಗಿರೀಶ ಕಲ್ಲಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಅಕ್ಟೋಬರ್ ರಜೆಯ ಸಂದರ್ಭದಲ್ಲಿ ಆತ ನನ್ನ ಬಳಿ ಸಜ್ಜನಘಡಕ್ಕೆ ಹೋಗಿ ಬರೋಣ್ವಾ ಎಂದು ಕೇಳಿದ್ದ. ಆದರೆ ಅದೇನು ಕಾರಣವೋ, ನಮಗೆ ಅದು ಸಾಧ್ಯವಾಗಿರಲಿಲ್ಲ. ಪಾಪ ಗಿರೀಶಣ್ಣ ನನ್ನ ಬಳಿ ಪ್ರತಿ ವರ್ಷ ಹೋಗೋಣ್ವಾ ಎಂದು ಕೇಳುತ್ತಲೇ ಇದ್ದ. ನಾನೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ತದನಂತರ ಅದೇನು ನೆಪವೋ ನಮಗೆ ಹೋಗಲಾಗುತ್ತಿರಲಿಲ್ಲ.
ಈ ಸಜ್ಜನಘಡದ ವಿಷಯವನ್ನು ಮಾವನ ಮಗ ಪ್ರಶಾಂತನ ಬಳಿ ಗಿರೀಶ ಹೇಳಿದ್ದ. ನಂತರದ ದಿನಗಳಲ್ಲಿ ನಾನೂ ಅಲ್ಲಿಗೆ ಹೋಗಿ ಬರೋಣ ಎಂದು ಮಾತನಾಡಿದ್ದೆ. ಆತನೂ ಒಪ್ಪಿಕೊಂಡಿದ್ದ. ಇದೂ ಕೂಡ ಒಂದೆರಡು ವರ್ಷಗಳ ಹಿಂದಿನ ಮಾತು. ಆಮೇಲೆ ನಮಗೆ ಸಜ್ಜನಘಡಕ್ಕೆ ಹೋಗಿ ಬರಬೇಕೆಂಬ ಬಯಕೆ ಪದೇ ಪದೆ ಮನಸ್ಸಿನಲ್ಲಿ ಮೂಡುತ್ತಲೇ ಇತ್ತು. ಹೋಗಿದ್ದಾಗ ಕಳೆದ ಒಂದೂವರೆ ತಿಂಗಳಿನ ಹಿಂದೆ ಪ್ರಶಾಂತ ಭಾವ ಇದ್ದಕ್ಕಿದ್ದಂತೆ ಪೋನ್ ಮಾಡಿ, `ವಿನಯಾ.. ಸಜ್ಜನಘಡಕ್ಕೆ ಹೋಗಿ ಬಪ್ಪನಾ. ಬತ್ಯನಾ?' ಎಂದ. ನಾನು ಹೂ ಅಂದೆ.
ಮನಸ್ಸಿನಲ್ಲಿ ಈ ಸಾರಿಯೂ ಅಲ್ಲಿಗೆ ಹೋಗುವುದರ ಬಗ್ಗೆ ಸಂದೇಹಗಳಿದ್ದವು. ಆದರೆ ಪ್ರಶಾಂತ ಭಾವನ ಜೊತೆ ನಾನು ಹೊರಟರೆ ಏನಾದರೂ ಮಾಡಿ ಬಿಡುತ್ತೇವೆ ಎನ್ನುವ ಆಲೋಚನೆಯೂ ಬಂದಿತು. ಈ ಹಿಂದೊಮ್ಮೆ ತಿರುಪತಿಗೆ ನಾವಿಬ್ಬರೇ ಹೋಗಿದ್ದೆವು. ಮದ್ಯಾಹ್ನ ಹುಬ್ಬಳ್ಳಿಗೆ ಹೋಗಿ, ಹರಿಪ್ರಿಯಾ ಎಕ್ಸ್ ಪ್ರೆಸ್ ಹತ್ತಿ, ಮರುದಿನ 11 ಗಂಟೆಯ ವೇಳೆಗೆ 45 ರು. ವೆಚ್ಚದಲ್ಲಿ ತಿರುಪತಿ ಮುಟ್ಟಿದ್ದ ನಾವು ಸಂಜೆಯ ಒಳಗೆ ತಿರುಪತಿ ದೇವರ ದರ್ಶನ ಮಾಡಿದ್ದೆವು. ನಂತರ ಸಂಜೆ ತಿರುಪತಿ-ಮೈಸೂರು ರೈಲು ಹತ್ತಿ, ಬೆಂಗಳೂರಿಗೆ ಮರುದಿನ ಬೆಳಿಗ್ಗೆ ವೇಳೆಗೆ ಬಂದಿಳಿದಿದ್ದೆವು. ಅಲ್ಲಿಂದ ಯಲ್ಲಾಪುರ ಬಸ್ಸನ್ನು ಹತ್ತಿ ಎರಡು ದಿನಗಳ ಒಳಗಾಗಿ ವಾಪಸಾಗಿದ್ದೆವು.
ವಿಚಿತ್ರವೆಂದರೆ 2008ರ ಸಂದರ್ಭ ಅದು, ನನಗಿನ್ನೂ ಉದ್ಯೋಗ ಸಿಕ್ಕಿರಲಿಲ್ಲ. ನನ್ನ ಬಳಿ ನಯಾಪೈಸೆ ದುಡ್ಡಿರಲಿಲ್ಲ. ಮನೆಯಲ್ಲಿಯೂ ಬಹಳ ಕಷ್ಟದ ದಿನಗಳು ಅವು. ಅಮ್ಮನ ಬಳಿ ತಿರುಪತಿ ಟ್ರಿಪ್ಪಿನ ವಿಷಯ ಹೇಳಿದಾಗ ಅಲ್ಲಿ ಇಲ್ಲಿ ಹುಡುಕಿ 150 ರು. ಕೊಟ್ಟಿದ್ದರು. ಅದರಲ್ಲಿ ಹುಬ್ಬಳ್ಳಿ ಬಸ್ಸಿನಲ್ಲಿ ಟಿಕೆಟ್ ಕೊಂಡು ಹೋಗಿದ್ದಾಗ ಟಿಕೆಟ್ ಕಳೆದು ಹೋಗಿ ಗಲಾಟೆ ಆಗಿತ್ತು. ಕೊನೆಗೆ ದಮ್ಮಯ್ಯ ದಾತಾರಾ ಎಂದು ಹೇಳಿ ಹುಬ್ಬಳ್ಳಿ ತಲುಪಿದ್ದೆ. ನಂತರ ಪ್ರಶಾಂತ ಭಾವನೇ ನನ್ನೆಲ್ಲ ಖರ್ಚುಗಳನ್ನು ಹಾಕಿಕೊಂಡು ತಿರುಪತಿ ದರ್ಶನ ಮಾಡಿಸಿದ್ದ.
ಸಜ್ಜನಘಡಕ್ಕೆ ಹೋಗೋಣ ಎಂದು ಹೇಳಿದಾಗಲೂ ನನ್ನ ಪರಿಸ್ತಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೆಸರಿಗೆ ನಾನು ಕನ್ನಡಪ್ರಭದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆದರೆ ಕಳೆದ 6 ತಿಂಗಳಿನಿಂದ ಸಂಬಳ ಕೊಟ್ಟಿರಲಿಲ್ಲ. ಕೇಳಿದರೆ ಇವತ್ತು, ನಾಳೆ ಎಂದು ಸಬೂಬು ಹೇಳುತ್ತಿದ್ದರು. ಕನ್ನಡಪ್ರಭಕ್ಕೆ, ಅದರ ಮ್ಯಾನೇಜ್ ಮೆಂಟಿಗೆ ಪ್ರತಿದಿನ ಹಿಡಿಶಾಪ ಹಾಕುತ್ತಿದ್ದೆ. ಆ ಸಂದರ್ಭದಲ್ಲಿ ಪ್ರಶಾಂತ ಭಾವ ಪೋನ್ ಮಾಡಿ ಸಜ್ಜನಘಡಕ್ಕೆ ಹೋಗುವ ಬಗ್ಗೆ ತಿಳಿಸಿದ್ದ. ನಾನು ಒಪ್ಪಿಕೊಂಡ ಮೇಲೆ ಆತನ ಬಳಿ ಕನ್ನಡಪ್ರಭದವರು ದುಡ್ಡು ಕೊಟ್ಟಿಲ್ಲ. ನನ್ನ ಖರ್ಚನ್ನು ನೀನೇ ನೋಡಿಕೊಳ್ಳಬೇಕು ಎಂದು ಹೇಳಿದ್ದೆ. ಆತ ಒಪ್ಪಿಕೊಂಡಿದ್ದ.
`ನಮ್ ಜೊತೆ ಇನ್ಯಾರಾದರೂ ಬರ್ತಿ ಅಂದ್ರೆ ಅವ್ಕೆಲ್ಲಾ ಹೇಳಲಕ್ಕನೋ..' ಎಂದು ಪ್ರಶಾಂತ ಭಾವನ ಬಳಿ ಕೇಳಿದ್ದೆ. `ಹೇಳು ಮಾರಾಯಾ.. ತೊಂದರೆ ಇಲ್ಲ..' ಎಂದಿದ್ದ. ನಾನು ನನ್ನ ತಂಗಿ ಸುಪರ್ಣ ಹಾಗೂ ಭಾವ ನಾಗರಾಜನ ಬಳಿ ಹೇಳಿದ್ದೆ. ಮೊದ ಮೊದಲು ಅವರು ಒಪ್ಪಿಕೊಂಡಿದ್ದರು. ಆದರೆ ಅವರಿಗೂ ಕನ್ನಡಪ್ರಭದ ಸಂಬಳ ಬಂದಿರಲಿಲ್ಲ. ಹಾಗಾಗಿ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದು ಮಾಡಿದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೋಸ್ತ ನಾಗರಾಜ ವೈದ್ಯನ ಬಳಿ ಪ್ರಶಾಂತ ಭಾವ ಕೇಳಿದ್ದನಂತೆ. ಆತನೂ ಬರಲಿಕ್ಕಾಗುವುದಿಲ್ಲ ಎಂದಿದ್ದ. ಕೊನೆಗೆ ದೊಡ್ಡಮ್ಮನ ಮಗ ಗುರುವಿನ ಬಳಿ ಹೇಳಲಾಯಿತು. ಮೊದ ಮೊದಲು ಬರಲು ಒಪ್ಪಿದ್ದ ಗುರು ನಂತರದ ದಿನಗಳಲ್ಲಿ ಬರಲಿಕ್ಕಾಗುವುದಿಲ್ಲ ಎಂದ. ಗಿರೀಶನೂ ಆಗುವುದಿಲ್ಲ ಎಂದ. ಕೊನೆಗೆ ಮಿತ್ರ ಸಂಜಯ ಭಟ್ಟ ಬೆಣ್ಣೆ ನೆನಪಾದ. ಆತನಿಗೆ ಹೊರಡಲು ಎರಡು ದಿನ ಇದ್ದಾಗ ಪೋನ್ ಮಾಡಿದೆ. `ದೋಸ್ತಾ, ತಿರುಗಾಟ ಎಲ್ಲೇ ಇರ್ಲಿ. ಹೇಳಾ ನೀನು. ಆನು ಬತ್ತಿ..' ಎಂದವನೇ ತಯಾರಾಗಿದ್ದ.
ನಂತರದ ದಿನಗಳಲ್ಲಿ ಹೋಗುವ ತಯಾರಿ ಸ್ವಲ್ಪ ಭರದಿಂದ ನಡೆಯಿತು. ಜುಲೈ 11 ಹಾಗೂ 12ರಂದು ಸಜ್ಜನಘಡಕ್ಕೆ ಹೋಗುವುದು ನಿಕ್ಕಿಯಾಗಿತ್ತು. ಹೋಗುವ ಮೊದಲು ನಾನು ಹಾಗೂ ಪ್ರಶಾಂತ ಭಾವ ಹೆಗೆ ಹೋಗೋದು ಎನ್ನುವ ಬಗ್ಗೆ ಬಹಳ ಮಾತನಾಡಿಕೊಂಡಿದ್ದೆವು. ನಾನೂ ನನ್ನ ಮೊಬೈಲಿನಲ್ಲಿ ರೂಟ್ ಮ್ಯಾಪ್ ನೋಡಿಕೊಂಡಿದ್ದೆ. ರೈಲಿನಲ್ಲಿ ಹೋಗುವುದು ಚೀಪ್ ಎಂಡ್ ಬೆಸ್ಟ್ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಶಿರಸಿಯಿಂದ ಸಜಮಾಸು 500 ಕಿಮಿ ದೂರದಲ್ಲಿರುವ ಸಜ್ಜನ ಘಡಕ್ಕೆ ಹೋಗುವ ಮೊದಲು ಸತಾರಾ ವರೆಗೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಹೋಗುವುದು ಎನ್ನುವ ತೀರ್ಮಾನಕ್ಕೆ ನಾವು ಬಂದೆವು. ಆದರೆ ನಮಗೆ ರೈಲು ಟಿಕೆಟ್ ಸಿಕಬೇಕಲ್ಲ ಮಾರಾಯ್ರೆ. ಹುಬ್ಬಳ್ಳಿಯಲ್ಲಿ ಮದ್ಯಾಹ್ನ 3.30ಕ್ಕೆ ಹೊರಡುವ ರೈಲು ಮಧ್ಯರಾತ್ರಿ 12 ಗಂಟೆಗೆ ಸತಾರಾಕ್ಕೆ ತಲುಪುತ್ತದೆ. ಅಲ್ಲಿಂದ ಸಜ್ಜನಘಡಕ್ಕೆ ಹೋಗುವುದೆಂದರೆ ರಾತ್ರಿಯ ವೇಳೆ ಅಸಾಧ್ಯದ ಮಾತು. ಮೊದಲು ಸತಾರಾ ತನಕ ಹೋಗೋಣ ಆಮೇಲೆ ಮುಂದಿನದ್ದನ್ನು ನೋಡೋಣ ಎಂದುಕೊಂಡೆವು.
ನಾನು ಯಾವುದಕ್ಕೂ ಇರಲಿ ಎಂದು ನನ್ನ ಸೀನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಮಹಾದೇವ ಸರ್ ಅವರ ಬಳಿ ಸಜ್ಜನಘಡದ ವಿಷಯವನ್ನು ಹೇಳಿದ್ದೆ. `ನೀವ್ ಯಾಕ್ರೀ ತಲೆ ಕೆಡಿಸ್ಕಳ್ತೀರಿ. ಬರ್ರೀ ಸುಮ್ನೆ. ಟಿಕೆಟ್ ವಿಷ್ಯ ನಂಗ್ ಬಿಡ್ರಿ..' ಎಂದು ಹೇಳಿದ್ದರು. `ಬರುವಾಗ ನಿಮ್ಮ ಐಡೆಂಟಿಟಿ ಕಾರ್ಡ್ ತರೋದನ್ನ ಮರೀಬ್ಯಾಡ್ರೀ..' ಎಂದೂ ತಿಳಿಸಿದ್ದರು. ನಾನು `ಬೇಡ ಬಿಡ್ರೀ...' ಎಂದು ಹೇಳುತ್ತಿದ್ದರೂ ಅವರು ಪೋನ್ ಇಟ್ಟಿದ್ದರು.
ಜುಲೈ 11ರಂದು ಮುಂಜಾನೆ ನನಗೆ ಅನೇಕ ಕೆಲಸಗಳಿದ್ದವು. ಮದ್ಯಾಹ್ನ 2 ಗಂಟೆ ಒಳಗೆ ಹುಬ್ಬಳ್ಳಿಯನ್ನು ತಲುಪಿ ಅಲ್ಲಿ ಊಟ ಮುಗಿಸಿ ರೈಲು ಹತ್ತಬೇಕಿತ್ತು. ಮುಂಜಾನೆಯೇ ಸ್ನಾನ ಮುಗಿಸಿ ತಯಾರಾಗಿದ್ದೆ. ಅಷ್ಟರಲ್ಲಿ ಸಂಜಯ ಪೋನ್ ಮಾಡಿ `ಆನು ಬರ್ತಾ ಇದ್ದಿ.. ಬೈಕ್ ಎಲ್ಲಿಡವೋ..' ಎಂದಿದ್ದ. ಆತನನ್ನು ಶಿರಸಿಯ ತಂಗಿಯ ಮನೆಗೆ ಕರೆಸಿಕೊಂಡು ಆತನ ಬೈಕ್ ಇರಿಸಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ ಶಿರಸಿ ಬಸ್ ನಿಲ್ದಾಣದ ಕಡೆ ಹೊರಡುವ ವೇಳೆಗೆ 12 ಗಂಟೆಯಾಗುತ್ತಿತ್ತು. ಅದೇನೋ ಮರೆತೆವು ಎಂದು ಮತ್ತೆ ರೂಮಿಗೆ ವಾಪಾಸಾಗಿ ಮರಳಿ ಬಸ್ ಹತ್ತುವ ವೇಳೆಗೆ ಆಗಲೇ 12.15.
ಬೆಳಿಗ್ಗೆಯೇ ಹೆಗ್ಗಾರಿನಿಮದ ಹೊರಟಿದ್ದ ಪ್ರಶಾಂತ ಭಾವ ಹುಬ್ಬಳ್ಳಿಯನ್ನು ತಲುಪಿ ಪೋನ್ ಮೇಲೆ ಪೋನ್ ಮಾಡುತ್ತಿದ್ದ. `ಥೋ.. ಇನ್ನೂ ಬಂಜ್ರಿಲ್ಯನಾ ಮಾರಾಯಾ.. ಟೈಮ್ ಆಗೋತು. ಬಡಾ ಬಡಾ ಬನ್ನಿ ನೋಡ್ವಾ.. ರೈಲು ತಪ್ಪಿ ಹೋದ್ರೆ ನಮ್ ಕಥೆ ಅಷ್ಟೇಯಾ..' ಎಂದು ಹೇಳುತ್ತಿದ್ದ. ಅವನಿಗೆ ಏನೇನೋ ಸಬೂಬು ಹೇಳಿದ್ದಾಯಿತು.
ನಾವು ಹತ್ತಿದ್ದ ಬಸ್ ವೇಗವಾಗಿಯಾದರೂ ಸಾಗುತ್ತದೆಯೇ ಇಲ್ಲ. ಕುಯ್ಯೋ.. ಮರ್ರೋ.. ಎಂದು ನಿಧಾನವಾಗಿ ಸಾಗುತ್ತಿತ್ತು. ನಾವು ದಾರಿಯನ್ನು ಸವೆಸಬೇಕಾದರೆ ಬೇಸರ ಆಗದಿರಲಿ ಎಂದು ಸುದ್ದಿ ಹೇಳಿದೆವು. ಮುಂಡಗೋಡಿನಲ್ಲಿ ಜೋಳವನ್ನು ತಿಂದು ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಆಗಲೇ 2.45 ಆಗಿತ್ತು. ಟೈಮಿಲ್ಲ ಮಾರಾಯ್ರೇ ಎಂದುಕೊಂಡವರಿಗೆ ಮಾದೇವ ಸರ್ ಸಿಕ್ಕಿರಲಿಲ್ಲ. ಅವರು ಟಿಕೆಟ್ ಕೊಡುತ್ತೇನೆ ಸಿಗ್ರಿ ಎಂದು ಹೇಳಿದ್ದರು. ನಮಗೆ ಊಟವೂ ಆಗಿರಲಿಲ್ಲ. ಮಾದೇವ ಸರ್ ಪೋನ್ ಮಾಡಿ `ನೀವು ಊಟ ಮುಗಿಸಿ. ಅಷ್ಟರಲ್ಲಿ ನಾನು ನಿಮಗೆ ಸಿಗ್ತೀನಿ. ಟಿಕೆಟ್ ಕೊಡ್ತೀನಿ..' ಎಂದಿದ್ದರು. ಆಗಲೇ ಗಡಿಯಾರದಲ್ಲಿ ಮೂರು ಗಂಟೆ ತೋರಿಸುತ್ತಿತ್ತು. ಟೈಂ ಆಗ್ತಾ ಇದೆ ಬನ್ರೋ ಬೇಗ ಎಂದು ಪ್ರಶಾಂತ ಭಾವ ಊಟ ಮಾಡಲಿಕ್ಕೂ ಬಿಡದಂತೆ ನಿಮಿಷಕ್ಕೊಂದು ಪೋನ್ ಮಾಡುತ್ತಿದ್ದ.
ಅಯೋಧ್ಯಾ ಹೊಟೆಲಿನಲ್ಲಿ ಊಟ ಮುಗಿಸುವ ವೇಳೆಗೆ ಸರಿಯಾಗಿ ಮಾದೇವ ಸರ್ ಬಂದಿದ್ದರು. ಟಿಕೆಟ್ ಕೊಟ್ಟರು. 3 ಬರ್ತ್ ಸೀಟುಗಳನ್ನು ಬುಕ್ಕಿಂಗ್ ಮಾಡಿಸಿದ್ದರು. 250*3 ರಂತೆ 750 ರು. ಆಗಿತ್ತು. ನಾವು ಟಿಕೆಟ್ ದುಡ್ಡು ಕೊಡಲು ನೋಡಿದರೆ ಮಾದೇವ ಸರ್ ಇಸ್ಕೊಳ್ಳಲಿಲ್ಲ. ಎಷ್ಟು ಒತ್ತಾಯ ಮಾಡಿದರೂ ಕೊನೆಗೂ ಇಸ್ಕೊಳ್ಳಲೇ ಇಲ್ಲ ಬಿಡಿ. ಆಗಲೇ 3.15 ಆಗಿತ್ತು. ಮತ್ತೊಮ್ಮೆ ಪೋನ್ ಮಾಡಿದ ಪ್ರಶಾಂತ ಭಾವ `ಯಾವ್ದೋ ರೈಲು ಹೊರಡ್ತಾ ಇದ್ದು. ಬೇಗ ಬರ್ರೋ..' ಎಂದು ಮತ್ತೊಮ್ಮೆ ಪೋನ್ ಮಾಡಿದ್ದ. ತಡಿಯಾ ಬತ್ತಾ ಇದ್ಯ ಎಂದು ಹೇಳಿ ಆಟೋವೊಂದನ್ನು ಹತ್ತಿ ರೈಲ್ವೆ ನಿಲ್ದಾಣದ ಬಳಿ ಬಳಿ ಬರುವಾಗಲೇ 3.25. ಇನ್ನೈದು ನಿಮಿಷದಲ್ಲಿ ನಿಲ್ದಾಣದ ಒಳಗೆ ಹೋಗಿ, ಪ್ರಶಾಂತ ಭಾವನನ್ನು ಹುಡುಕಿ, ಟ್ರೈನನ್ನು ಹಿಡಿಯಲು ಇನ್ನು ಕನಿಷ್ಟ 10 ನಿಮಿಷ ಬೇಕಾಗುತ್ತದೆ. ರೈಲು ತಪ್ಪೋದು ಗ್ಯಾರಂಟಿ ಎಂದುಕೊಂಡೆವು. ಓಡೋಡುತ್ತ ನಿಲ್ದಾಣದ ಒಳಗೆ ಹೋದರೆ ಪ್ರಶಾಂತ ಭಾವ ನಮಗಾಗಿ ಕಾಯುತ್ತ ನಿಂತಿದ್ದ.
`ಬೇಗ್ನೆ ಬನ್ನಿ ಹೇಳಿದ್ದಿ. ನಿಂಗವ್ ಬಂಜ್ರಿಲ್ಲೆ. ಆನು ಬಂದು ಆಗ್ಲೆ 2-3 ತಾಸು ಆತು ನೋಡಿ..' ಎಂದ. ನಾನು ರೈಲು ಟಿಕೆಟ್ ತೋರಿಸಿದೆ. 3.45ಕ್ಕೆ ರೈಲಿನ ಸಮಯ ನಿಗದಿಯಾಗಿತ್ತು. ಒಮ್ಮೆ ನಿರಾಳರಾಗಿ ಪ್ಲಾಟ್ ಫಾರ್ಮನ್ನು ಹತ್ತಿ ರೈಲಿನ ಬಳಿಗೆ ಹೋದೆವು. ಸತಾರಾ, ಪುಣಾ ಮಾರ್ಗವಾಗಿ ಹೋಗಲು 3.30ಕ್ಕೆ ಒಂದು ಹಾಗೂ 3.45ಕ್ಕೆ ಇನ್ನೊಂದು ರೈಲುಗಳಿದ್ದವು. ಪ್ರಶಾಂತ ಭಾವ ನಾವು ಹೋಗಬೇಕಿದ್ದುದು 3.30ರ ರೈಲು ಇರಬೇಕು ಎಂದುಕೊಂಡು ಬಹಳ ಗಡಬಡೆ ಮಾಡಿದ್ದ. ನಾವು ಎದ್ದೋಬಿದ್ದೋ ಬಂದಿದ್ದೆವು. ಆದರೆ ನಾವು ಹೋಗಬೇಕಿದ್ದ 3.45ರ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ನಮಗಾಗಿಯೇ ಕಾಯುತ್ತಿತ್ತು.
ನಮಗೆ ಬುಕ್ ಆಗಿದ್ದ ಟಿಕೆಟಿನಲ್ಲಿ ನನಗೆ ಹಾಗೂ ಸಂಜಯನಿಗೆ 1 ಬೋಗಿಯಲ್ಲಿ 2 ಸೀಟ್ ಸಿಕ್ಕಿದ್ದರೆ ಪ್ರಶಾಂತ ಭಾವನಿಗೆ ಮಾತ್ರ ಇನ್ನೊಂದು ಬೋಗಿಯಲ್ಲಿ ಸೀಟ್ ಸಿಕ್ಕಿತ್ತು. ಟಿಸಿ ಬಂದು ಕೇಳಿದರೆ ಏನಾದರೂ ಸಬೂಬು ಹೇಳೋಣ ಎಂದುಕೊಂಡ ಕುಳಿತೆವು. ಅಷ್ಟರಲ್ಲಿ ಒಂದಿಷ್ಟು ತಿಂಡಿ ಸೇವನೆಯೂ ನಡೆಯಿತು. ರೈಲು ನಿಧಾನವಾಗಿ ಹೊರಡಲು ಅನುವಾಯಿತು. ಒಂದೆರಡು ಸಾರಿ ಕೂಗಿಕೊಂಡ ರೈಲು ನಿಧಾನವಾಗಿ ಮುನ್ನಡೆಯಿತು. ನಾಳೆ ಬೆಳಗಾದರೆ ಸಜ್ಜನಘಡ ಎಂಬ ಕನಸಿನೊಂದಿಗೆ ನಾವು ಹಿಗ್ಗಿದೆವು. ಟ್ರೈನಿನಲ್ಲಿ ಜನರೇ ಇರಲಿಲ್ಲ. ಮತ್ತೊಂದು 10 ನಿಮಿಷಕ್ಕೆ ಧಾರವಾಡ ರೈಲು ನಿಲ್ದಾಣ ಬಂದಿತು. ನಮ್ಮ ಕೈಗೆ ಮೊಬೈಲುಗಳು ಬಂದಿದ್ದವು. ಒಂದೆರಡು ಸೆಲ್ಫಿಗಳನ್ನು ಕ್ಲಿಕ್ಕಿಸಿಯೂ ಆಗಿತ್ತು. ಆಗಲೇ ಫೇಸ್ ಬುಕ್ಕಿಗೆ ಏರಿಸಿ ನಾಲ್ಕೈದು ಲೈಕುಗಳೂ ಬಂದಿದ್ದವು. ಖಾಲಿಯಿದ್ದ ರೈಲಿನಲ್ಲಿ, ನಿಂತು, ಕುಳಿತು, ಮಲಗಿ, ಬಾಗಿಲಿನಲ್ಲಿ ನಿಂತು ಈ ಮುಂತಾದ ಬಗೆಯಲ್ಲೆಲ್ಲ ಪೋಟೋಗಳನ್ನು ಕ್ಲಿಕ್ಕಿಸಿದ್ದಾಯಿತು. ಈ ನಡುವೆ ಎಂದೋ ಪರಿಚಯವಾಗಿ ಮರೆತು ಹೋಗವಂತಾಗಿದ್ದ ಪ್ರಶಾಂತ ಹಾಗೂ ಸಂಜಯರನ್ನು ಮತ್ತೊಮ್ಮೆ ಪರಿಚಯ ಮಾಡಿಕೊಟ್ಟು ಮಾತಾಡ್ಕಳ್ಳಿ ಎಂದು ನಾನು ಸುಮ್ಮನಾಗಿದ್ದೆ. ಅಂತೂ ಇಂತೂ ಮೂವರೂ ಸಜ್ಜನಘಡದ ಕಡೆಗೆ ಹೊರಟಿದ್ದೆವು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದ್ದ ಸಮರ್ಥರಾಮದಾಸರ ಭೂಮಿ, ಶಿವಾಜಿಗೆ ಮಾರ್ಗ ತೋರಿದ ನಾಡು, ಸದ್ಗುರು ಶ್ರೀಧರ ಸ್ವಾಮೀಜಿಗಳು ತಪಸ್ಸನ್ನಾಚರಿಸಿದ ಮಹಿಮಾ ಸ್ಥಳದ ಕಡೆಗೆ ನಾವು ಹೊರಟಿದ್ದೆವು. ಸೂರ್ಯ ಪಶ್ಚಿಮದ ಕಡೆಗೆ ಮುಖ ಮಾಡಿದ್ದನಾದರೂ ತೇಜಸ್ಸು ಕಡಿಮೆಯಾಗಿರಲಿಲ್ಲ.
(ಮುಂದುವರಿಯುತ್ತದೆ)