Tuesday, September 22, 2015

ಮಾಸ್ತರ್ ಮಂದಿ-7

             ಇಲ್ಲಿಯ ತನಕ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದ ಶಿಕ್ಷಕರ ಬಗ್ಗೆ ಬರೆದಿದ್ದೇನೆ. ನಂತರ ಹೈಸ್ಕೂಲಿನಲ್ಲಿ ಕಲಿಸಿದವರ ಬಗ್ಗೆ ಬರೆಯಲೇ ಬೇಕು. ಪ್ರತಿಯೊಬ್ಬರ ಬದುಕಿನಲ್ಲಿಯೂ ಹೈಸ್ಕೂಲು ಎನ್ನುವುದು ಬದಲಾವಣೆಯ ಪ್ರಮುಖ ಘಟ್ಟ. ಬಾಲ್ಯದ ಬದುಕನ್ನು ಕಳೆದು ಟೀನೇಜ ಬದುಕಿಗೆ ಕಾಲಿಡುವ ಘಳಿಗೆ ಇದು. ಯಾವು ಯಾವುದೋ ಆಕರ್ಷಣೆ, ಹುಚ್ಚು ಬಯಕೆಗಳಿಗೆ ಬಿದ್ದುಬಿಡುವ ಸಮಯವೂ ಇದೆ. ಇಂತಹ ಸಂದರ್ಭದಲ್ಲಿ ಕಲಿಸುವ ಶಿಕ್ಷಕರು ಬಹಳ ಪ್ರಭಾವ ಬೀರುತ್ತಾರೆ ಎನ್ನುವುದು ಸುಳ್ಳಲ್ಲ ನೋಡಿ. ಅಂದಹಾಗೆಯೇ ನಾನು ಹೈಸ್ಕೂಲನ್ನು ಓದಲು ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಕಾನಲೆಯಲ್ಲಿ. ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ಜಸ್ಟ್ ಹಿಸೆ ಆಗಿತ್ತು. ಅಪ್ಪನ ಕೈಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ. ಹೆಂಗಪ್ಪಾ ಓದಿಸೋದು ಎಂದು ಹೇಳುತ್ತಿದ್ದ ಹಾಗೆಯೇ ನಾನು ಕಾನಲೆಯಲ್ಲಿ ಓದುತ್ತೇನೆ ಎಂದು ಹೇಳಿಬಿಟ್ಟಿದ್ದೆ. ನನಗೆ ಗುರಣ್ಣ ಹಾಗೂ ಗಿರೀಶಣ್ಣ ಇರುತ್ತಾರೆ ಎನ್ನುವ ಕಾರಣವೂ ಮುಖ್ಯವಾಗಿತ್ತು. ಕಾನಲೆಯಲ್ಲಿ ದೊಡ್ಡಪ್ಪನ ಮನೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದಾಗ ಓಕೆ ಎಂದಿದ್ದರು. ಅರ್ಧ ಭಯದಿಂದ, ಅರ್ಧ ಕುತೂಹಲದಿಂದ ನನ್ನ ಹಡಪ ಕಟ್ಟಿಕೊಂಡು ಹೈಸ್ಕೂಲಿಗೆ ಕಾಲಿಟ್ಟಿದ್ದೆ.
                ಕಾನಲೆ ಹೈಸ್ಕೂಲಿನ ಬಗ್ಗೆ ಕೆಲವು ಮಾತುಗಳನ್ನು ಹೇಳಿದ ನಂತರವೇ ನನಗೆ ಕಲಿಸಿದ ಶಿಕ್ಷಕರ ಬಗ್ಗೆ ವಿವರಗಳನ್ನು ನೀಡುತ್ತೇನೆ. ಕಾನಲೆಯಲ್ಲಿ ಮುಖ್ಯವಾಗಿ ಮೂರು ಕೇರಿಗಳಿವೆ. ಬ್ರಾಹ್ಮಣರ ಕೇರಿ, ಅಚ್ಚೆಕೇರಿ ಹಾಗೂ ಇನ್ನೊಂದು ಕೇರಿ. ಸಾಗರ ಹಾಗೂ ಸಿದ್ದಾಪುರಕ್ಕೆ ಖಾಸಗಿ ಬಸ್ಸುಗಳು ಹೆಚ್ಚಾಗಿ ಓಡಾಡುವ ಮೇನ್ ರೋಡಿನಲ್ಲಿ ಬ್ರಾಹ್ಮಣರ ಕೇರಿಯಿದ್ದರೆ ಆ ಕೇರಿಯ ಕೊಟ್ಟ ಕೊನೆಯಲ್ಲಿ ಗುಡ್ಡದ ಮೇಲೆ ಕಾನಲೆ ಹೈಸ್ಕೂಲಿತ್ತು. 5 ಎಕರೆಯ ಕಂಪೌಂಡಿನಲ್ಲಿದ್ದ ಹೈಸ್ಕೂಲಿಗೆ ನಾನು ಬರುವ ವೇಳೆಗೆ ಹೊಸ ಕಟ್ಟಡ ನಿರ್ಮಾಣವಾಗಿ ಮೂರೋ ನಾಲ್ಕೋ ವರ್ಷಗಳು ಕಳೆದಿದ್ದವು. ಇಂಗ್ಲೀಷಿನ L ಆಕಾರದಲ್ಲಿ ಕೈಸ್ಕೂಲಿ ನಿರ್ಮಾಣವಾಗಿದ್ದರೆ ಅದಕ್ಕೆ ತಾಗಿಕೊಂಡಂತೆ ದೊಡ್ಡ ಮೈದಾನವಿತ್ತು. ಗೊಚ್ಚುಮಣ್ಣಿನ ಮೈದಾನದಲ್ಲಿ ಉರುಳಿಬಿದ್ದರೆ ಮೈ ಕೈ ತರಚಿ ಹೋಗುತ್ತಿತ್ತು ಬಿಡಿ. ಹೈಸ್ಕೂಲಿಗೆ ಹೋಗುವ ರಸ್ತೆಯ ಕುರಿತಂತೆ ಗಲಾಟೆ ನಡೆಯುತ್ತಿತ್ತು.
            ಕಾನಲೆಯ ಹೈಸ್ಕೂಲು ಐದು ಎಕರೆ ಕಂಪೌಂಡು ಎಂದು ಆಗಲೇ ಹೇಳಿದ್ದೆನಲ್ಲ. ಈ ಐದು ಎಕರೆ ಜಮೀನು ಕಾನಲೆಯ ಬ್ರಾಹ್ಮಣರ ಕೇರಿಗೆ ಸರ್ಕಾರಿ ಗೋಮಾಳ ಎನ್ನುವ ಹೆಸರಿನಲ್ಲಿತ್ತು. ಆದರೆ ಊರಿಗೆ ಹೈಸ್ಕೂಲು ಬಂದರೆ ಒಳ್ಳೆಯದಲ್ಲವೇ ಎನ್ನುವ ಕಾರಣಕ್ಕಾಗಿ ಊರ ಬ್ರಾಹ್ಮಣರ ಮುಖಂಡರುಗಳು ಸೇರಿಕೊಂಡು ಜಾಗ ಬಿಟ್ಟುಕೊಟ್ಟಿದ್ದರು. ಆದರೆ ಈ ಹೈಸ್ಕೂಲಿಗೆ ಬರಲು ರಸ್ತೆಯೇ ಸರಿ ಇರಲಿಲ್ಲ. ಗಡೇಮನೆ ಹಾಗೂ ಕಾನಲೆಗೆ ಸೇರಿದ ಗುಡ್ಡದ ಹಿಂಭಾಗದಲ್ಲಿ ಹೈಸ್ಕೂಲಿಗೆ ಬರಲು ಗುಡ್ಡವನ್ನು ಹತ್ತಬೇಕು. ಹೈಸ್ಕೂಲಿಗೆ ಬರಲು ರಸ್ತೆಗೆ ಜಾಗವನ್ನು ನೀಡಲು ಯಾರೂ ತಯಾರಿರಲಿಲ್ಲ. ಈ ಕಾರಣದಿಂದ ಒಂದಿಷ್ಟು ದಿನ ಕಾಲುಹಾದಿಯೇ ಹೈಸ್ಕೂಲಿಗೆ ಗತಿಯಾಗಿತ್ತು. ನಂತರದ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಸೊಸೈಟಿ ರಾಮಪ್ಪ ಎನ್ನುವವನ ಮನೆಯ ಪಕ್ಕದಲ್ಲಿ ರಸ್ತೆಯಾಯಿತು. ನಂತರ ಪುಟ್ಟಜ್ಜನ ಮನೆ ಪಕ್ಕದಲ್ಲಿ ರಸ್ತೆಯಾಯಿತು.
           ಪುಟ್ಟಜ್ಜನ ಮನೆಯ ಪಕ್ಕದಲ್ಲಿ ಪುಟ್ಟಜ್ಜನ ಮನೆ ಜಾಗದಲ್ಲಿಯೇ ರಸ್ತೆ ಮಾಡಿದ್ದು ಹಲವಾರು ದಿನಗಳ ಕಾಲ ಗಲಾಟೆಗೂ ಕಾರಣವಾಗಿತ್ತು. ಪುಟ್ಟಜ್ಜ ಮೂರು ಮೂರು ಇಂಜೆಕ್ಷನ್ ಅರ್ಜಿಗಳನ್ನೂ ಹಾಕಿದ್ದರು. ಆದರೆ ಆ ನಂತರದ ದಿನಗಳಲ್ಲಿ ಕಾನಲೆಯ ಶೇಷಗಿರಿಯಣ್ಣ ಹಾಗೂ ಇತರರು ಜಾಗವನ್ನು ಬಿಟ್ಟುಕೊಡುವ ಮೂಲಕ ದೊಡ್ಡತನ ಮೆರೆದಿದ್ದರು. ಪದೆ ಪದೆ ನಡೆಯುತ್ತಿದ್ದ ಗಲಾಟೆಗೆ ಪುಲ್ ಸ್ಟಾಪ್ ಹಾಕಿದ್ದರು. ಇಂತಹ ಕಾನಲೆಯ ಹೈಸ್ಕೂಲಿನಲ್ಲಿ ನಾನು ಓದುತ್ತಿದ್ದ ಸಂದರ್ಬದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅವರಲ್ಲಿ ನನ್ನ ಕ್ಲಾಸಿನಲ್ಲಿ ನಾವು ನಾಲ್ಕು ಜನ ಹಾಗೂ ಮೇಲಿನ ಕ್ಲಾಸಿನಲ್ಲಿ ನಾಲ್ಕು ಜನ ಸೇರಿ ಒಟ್ಟೂ ಎಂಟು ಜನ ಬ್ರಾಹ್ಮಣರ ಹುಡುಗರಿದ್ದರು. ಉಳಿದವರೆಲ್ಲ ದೀವರು, ಗೌಡರು, ಒಕ್ಕಲಿಗರು, ಶೆಟ್ಟರು ಈ ಮುಂತಾದವರೇ ಆಗಿದ್ದರು. ಹೈಸ್ಕೂಲಿನ ಶಿಕ್ಷಕರ ವಿಷಯ ಸಾಕಷ್ಟು ಹೇಳಲೇಬೇಕು ಬಿಡಿ. ಬಿಆರ್.ಎಲ್, ಸಿ.ಆರ್.ಎಲ್, ಪಿಬಿಎನ್, ವನಮಾಲಾ ಟೀಚರ್, ವಿನೋದಾ ನಾಯ್ಕ, ಕೆಬಿಎನ್, ಲಕ್ಷಪ್ಪ ಸರ್, ಭಾರತೀ ಹೆಗಡೆ, ಎಚ್.ಎಸ್.ಎಸ್., ಗ್ರೇಸ್ ಪ್ರೇಮಕುಮಾರಿ ಇವರ ಬಗ್ಗೆ ಹೇಳುವುದು ಸಾಕಷ್ಟಿದೆ ಎನ್ನಿ.

ವನಮಾಲಾ ಮೇಡಮ್ :
ಸಾಗರದಿಂದ ಕಾನಲೆಗೆ ಡೈಲಿ ಬಂದು ಹೋಗಿ ಮಾಡುತ್ತಿದ್ದ ವನಮಾಲಾ ಮೇಡಮ್ ಆ ದಿನಗಳಲ್ಲಿ ನನ್ನ ಕ್ಲಾಸಿನ ಅನೇಕ ಹುಡುಗರ ಮನಸ್ಸನ್ನು ಕದ್ದವರು ಬಿಡಿ. ನೋಡಲು ಸುಂದರವಾಗಿದ್ದರು. ನಕ್ಕರೆ ಗುಳಿಕೆನ್ನೆ ಎದ್ದು ಕಾಣುತ್ತಿತ್ತು. ಅಪರೂಪಕ್ಕೆ ಬಯ್ಯುತ್ತಿದ್ದರು. ಸಿಟ್ಟು ಕಡಿಮೆ. ಧ್ವನಿ ಕೂಡ ಬಹಳ ಕಡಿಮೆ. ನಿಧಾನವಾಗಿ ಪಾಠ ಮಾಡುತ್ತಿದ್ದ ವನಮಾಲಾ ಮೇಡಮ್ಮಿಗೆ ಬಹುಶಃ 25-26ರ ಆಜೂಬಾಜಿನಲ್ಲಿ ವಯಸ್ಸಾಗಿತ್ತೇನೋ ಬಿಡಿ. ಇನ್ನೂ ಮದುವೆಯಾಗಿರಲಿಲ್ಲ. ವಿ.ಎನ್.ಆರ್. ಎಂದು ಶಾರ್ಟ್ ಫಾರ್ಮಿನಲ್ಲಿ ಕರೆಯುತ್ತಿದ್ದೆವು. ಸಮಾಜ ವಿಜ್ಞಾನವನ್ನು ಕಲಿಸಲು ಬರುತ್ತಿದ್ದರು. ಎಂಟನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ಇವರ ಮೊದಲ ತರಗತಿಗೆ ನಾನು ಅಟೆಂಡ್ ಆಗಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೈಸ್ಕೂಲಿನಲ್ಲಿ ಉತ್ತರ ಕನ್ನಡದಿಂದ ಬಂದಿದ್ದ ಏಕೈಕ ಹುಡುಗ ನಾನಾಗಿದ್ದೆ ಬಿಡಿ. ಶಿವಮೊಗ್ಗ ಸೀಮೆಯಲ್ಲಿ ಪ್ರತಿಯೊಬ್ಬರ ಹೆಸರನ್ನೂ ಇನ್ ಶಿಯಲ್ ಮೂಲಕ ಕರೆಯುತ್ತಿದ್ದರೆ ನಮ್ಮಲ್ಲಿ ಮಾತ್ರ ಉದ್ದುದ್ದಕ್ಕೆ ಕರೆಯುತ್ತಿದ್ದರು. ಹೆಸರಿನ ಮುಂದೆ ಅಪ್ಪನ ಹೆಸರು ಹಾಗೂ ಊರಿನ ಹೆಸರನ್ನು ಶಿವಮೊಗ್ಗ ಸೀಮೆಯಲ್ಲಿ ಮೊದಲ ಅಕ್ಷರದ ಜೊತೆಗೆ ಕರೆಯುತ್ತಿದ್ದರು. ಆದರೆ ನನಗೆ ಹಾಗಲ್ಲ ನೋಡಿ. ನಾನು ವಿನಯ ಸುಬ್ರಾಯ ಹೆಗಡೆ ಎಂದೇ ಕರೆಸಿಕೊಳ್ಳಬೇಕಿತ್ತು. ಒಮ್ಮೆ ವನಮಾಲಾ ಮೇಡಮ್ ಈ ಹೆಸರನ್ನು ಕೇಳಿ ತಮಾಷೆಯೂ ಮಾಡಿದ್ದರು.
ಎಂಟನೇ ಕ್ಲಾಸಿನಲ್ಲಿ ನಾನು ಹೈಸ್ಕೂಲಿಗೆ ಬುದ್ಧಿವಂತ ಹುಡುಗ ಎನ್ನುವ ಬಿರುದು ಬಾವಲಿಯನ್ನು ಗಳಿಸಿಕೊಂಡಿದ್ದೆ. ಅಕ್ಷರವೂ ಸಾಕಷ್ಟು ಸುಂದರವಾಗಿ ಮೂಡುತ್ತಿತ್ತು. ಆ ಕಾರಣದಿಂದ ನಾನು ಮಾಡಿಕೊಳ್ಳುತ್ತಿದ್ದ ನೋಟ್ಸಿಗೆ ಸಾಕಷ್ಟು ಬೇಡಿಕೆ ಬರುತ್ತಿತ್ತು. ಹೈಸ್ಕೂಲಿನ ಹುಡುಗಿಯರ ವಲಯದಲ್ಲಿ ನನ್ನ ನೋಟ್ ಪುಸ್ತಕ ಯಾವಾಗಲೂ ಓಡಾಡುತ್ತಿತ್ತು. ವನಮಾಲಾ ಮೇಡಮ್ ಕೂಡ ಪರೀಕ್ಷೆಯ ದಿನಗಳಲ್ಲಿ ನನ್ನ ನೋಟ್ಸನ್ನು ಪಡೆದುಕೊಂಡು ಹೋಗಿ ಅದರಲ್ಲಿನ ವಿಷಯಗಳನ್ನು ಪ್ರಶ್ನೆ ರೂಪದಲ್ಲಿ ಕೇಳುತ್ತಿದ್ದರು.
ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಒಂದು ಘಟನೆ ಜರುಗಿತ್ತು. ವನಮಾಲಾ ಮೇಡಂ ಅವರಿಗೆ ಸಿಕ್ಕಾಪಟ್ಟೆ ಜ್ವರ. ಮೂರ್ನಾಲ್ಕು ದಿನ ಹೈಸ್ಕೂಲಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿಯೇ ಎಕ್ಸಾಂ ಕೂಡ ಬಂದಿತ್ತು. ಯಥಾಪ್ರಕಾರ ನನ್ನ ನೋಟ್ಸನ್ನು ತೆಗೆದುಕೊಂಡು ಹೋದ ವನಮಾಲಾ ಮೇಡಮ್ ಅದರ ಮೇಲೆ ಪ್ರಶ್ನೆ ಪತ್ರಿಕೆ ತಯಾರು ಮಾಡಿದ್ದರು. ಬರೆಯಲು ಅಸಾಧ್ಯ ಎನ್ನುವಂತಾಗಿದ್ದರಿಂದ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿನಿಯಿಂದ ಪ್ರಶ್ನೆಗಳನ್ನು ಬರೆಸಿದ್ದರು. ಆ ದಿನಗಳಲ್ಲಿ ಪರೀಕ್ಷೆಗಳಲ್ಲಿ ನನಗೆ 25ಕ್ಕೆ 20ರ ಮೇಲೆ ಅಂಕಗಳು ಬೀಳುತ್ತಿತ್ತು ಎಂದೆನಲ್ಲ. ನನಗೆ ಪ್ರತಿಸ್ಪರ್ಧಿಗಳೂ, ಆಗದೇ ಇದ್ದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರು ಈ ಸಾರಿ ಮಾತ್ರ ನನ್ನಿಂದ ವನಮಾಲಾ ಮೇಡಂ ನೋಟ್ಸನ್ನು ಪಡೆದು ಪ್ರಶ್ನೆ ಪತ್ರಿಕೆ ರೂಪಿಸಿದ್ದಾರೆ ಎನ್ನುವುದನ್ನು ತಿಳಿದು ಸುಳ್ಳು ಸುಳ್ಳೇ ಗಾಳಿ ಸುದ್ದಿಯನ್ನು ಹಬ್ಬಿಸಿಬಿಟ್ಟರು. ವಿನಯನ ನೋಟ್ ಬುಕ್ಕಿನ ಮೇಲೆ ವನಮಾಲಾ ಮೇಡಂ ಯಾವ ಯಾವ ಪ್ರಶ್ನೆ ತೆಗೆದಿದ್ದೇನೆ ಎಂದು ಟಿಕ್ ಮಾಡಿದ್ದಾರೆ. ಇದರಿಂದ ವಿನಯನಿಗೆ ಜಾಸ್ತಿ ಅಂಕಗಳು ಬೀಳುತ್ತವೆ. ಎಂಟನೇ ತರಗತಿ ವಿದ್ಯಾರ್ಥಿನಿಯಿಂದ ಬರೆಸಿದ್ದಾರೆ ಎಂದೂ ಹಬ್ಬಿಸಿದರು. ಅಷ್ಟೇ ಅಲ್ಲದೇ ಈ ವಿಷಯವನ್ನು ಇಂಗ್ಲೀಷ್ ಕಲಿಸಲು ಬರುತ್ತಿದ್ದ ಬಿ.ಆರ್.ಎಲ್. ಅವರ ಬಳಿ ಹೇಳಿಬಿಟ್ಟಿದ್ದರು. ಅವರೋ ಶಾಲೆಯಲ್ಲಿ ಗಲಾಟೆಯನ್ನೂ ಮಾಡಿದರು ಎನ್ನಿ. ಈ ಸಂದರ್ಭದಲ್ಲಿ ಜ್ವರ ಕಡಿಮೆಯಾದ ಮೇಲೆ ಶಾಲೆಗೆ ವಾಪಾಸು ಬಂದ ವನಮಾಲಾ ಮೇಡಂ ಮೊಟ್ಟ ಮೊದಲ ಬಾರಿಗೆ ಬಂದು ಜಗಳ ಮಾಡಿದ್ದು ನೋಡಬೇಕಿತ್ತು. ಚೆಂದದ ಮೇಡಮ್ ಇಷ್ಟು ಸಿಟ್ಟು ಮಾಡಿಕೊಳ್ಳಲು ಸಾಧ್ಯವೇ ಎಂದು ಬೆರಗಿನಿಂದ ನೋಡಿದ್ದೆ.
ನನ್ನ ನೋಟ್ ಬುಕ್ಕಿನ ತಪಾಸಣೆಯೂ ಆಗಿತ್ತು. ಅದರ ಮೇಲೆ ಯಾವುದೇ ಟಿಕ್ಕುಗಳಿರಲಿಲ್ಲ. ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಪ್ರಶ್ನೆ ಪತ್ರಿಕೆಯನ್ನು ತನ್ನ ಕೈಯಲ್ಲಿ ಮೇಡಮ್ ಬರೆಸಿರುವುದಾಗಿ ಒಪ್ಪಿಕೊಂಡಳು. ಕೊನೆಗೆ ಗಲಾಟೆ ಹೆಚ್ಚಾಗಿ ಮರು ಪರೀಕ್ಷೆ ಮಾಡಲಾಯಿತು. ವಿಚಿತ್ರ ಎಂದರೆ ಮೊದಲು ಮಾಡಿದ್ದ ಪರೀಕ್ಷೆಯಲ್ಲಿ ನನಗೆ 25ಕ್ಕೆ 21 ಅಂಕಗಳು ಬಿದ್ದಿದ್ದವು. ಆದರೆ 2ನೇ ಸಾರಿ ಮಾಡಿದ ಪರೀಕ್ಷೆಯಲ್ಲಿ ನನಗೆ 25ಕ್ಕೆ 24 ಅಂಕಗಳು ಬೀಳುವ ಮೂಲಕ ನನ್ನ ಮೇಲೆ ಬರುತ್ತಿದ್ದ ಆಪಾದನೆಯನ್ನೂ ತಪ್ಪಿಸಿಕೊಂಡಿದ್ದೆ ಬಿಡಿ.
ನಮಗೆ ದೈಹಿಕ ಶಿಕ್ಷಕರಾಗಿ ಸಿ.ಆರ್. ಲಿಂಗರಾಜು ಎನ್ನುವವರಿದ್ದರು. ಅದೇನು ಕಾರಣವೋ ಗೊತ್ತಿಲ್ಲ. ವನಮಾಲಾ ಮೇಡಮ್ಮಿಗೂ ಲಿಂಗರಾಜ ಸರ್ ಗೂ ಬಹಳ ಗಲಾಟೆ ನಡೆಯುತ್ತಿತ್ತು. ಕ್ಲಾಸಿನ ನಡುವೆಯೇ ಒಂದೆರಡು ಸಾರಿ ಈ ಇಬ್ಬರೂ ಜಗಳ ಮಾಡಿಕೊಂಡಿದ್ದನ್ನು ನಾವಿಬ್ಬರೂ ಕಂಡಿದ್ದೇವೆ. ಸಮಾಜ ವಿಜ್ಞಾನದ ತರಗತಿ ಸಂದರ್ಭದಲ್ಲಿ ಲಿಂಗರಾಜು ಸರ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಲಿಂಗರಾಜು ಸರ್ ಕ್ಲಾಸ್ ಸಂದರ್ಭದಲ್ಲಿ ವನಮಾಲಾ ಮೇಡಂ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಗಲಾಟೆ ಬಹಳ ಆಗಿತ್ತೆನ್ನಿ. ಗಲಾಟೆ ನಮಗೆ ಮಜಾ ಅನ್ನಿಸಿತ್ತು. ಆ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳೆಲ್ಲ ವನಮಾಲಾ ಮೇಡಂ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೆವು. ನಮಗೆಲ್ಲ ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಲಿಂಗರಾಜ ಮಾಸ್ಟರ್ರಿಗೆ ಶರಂಪರ ಬಯ್ಯುತ್ತಿದ್ದೆವು ಬಿಡಿ. ಇತ್ತೀಚೆಗೆ ಕಾನಲೆ ಹೈಸ್ಕೂಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ವನಮಾಲಾ ಮೇಡಮ್ ಇರಲಿಲ್ಲ. ಯಾವುದೋ ಹೈಸ್ಕೂಲಿಗೆ ವರ್ಗವಾಗಿದೆ ಎನ್ನುವ ಮಾಹಿತಿ ಬಂತು. ತಕ್ಷಣವೇ ಈ ಘಟನೆಗಳೆಲ್ಲ ನೆನಪಾಯಿತು.

(ಮುಂದುವರಿಯುತ್ತದೆ)

No comments:

Post a Comment