Thursday, November 30, 2017

ದಾಸ್ಯ (ಕಥೆ)-2

ಏನಾಗಿರಬಹುದು ಎನ್ನುವ ಕುತೂಹಲ ನನ್ನನ್ನು ಕಾಡುತ್ತಿರುವಂತೆಯೇ ಅಜ್ಜಿ ಮಾತನ್ನು ಮುಂದುವರಿಸಿದರು.
ಯಾರೋ ನಮ್ಮನ್ನೆಲ್ಲ ಸುತ್ತುವರಿದಿದ್ದರು. ನಮಗೆಲ್ಲ ಏನಾಗುತ್ತಿದೆ ಎಂಬುದು ಗೊತ್ತೇ ಆಗಲಿಲ್ಲ. ನೋಡಿದರೆ ಬ್ರಿಟೀಷರ ಪರ ಕೆಲಸ ಮಾಡುತ್ತಿದ್ದ ನಮ್ಮದೇ ನಾಡಿನ ಪೊಲೀಸರು ಬಂದು ಮುತ್ತಿಗೆ ಹಾಕಿದ್ದರು. ನಮ್ಮದೇ ಬಟ್ಟೆ ಧರಿಸಿದ್ದರು. ತಕ್ಷಣ ನಮ್ಮಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಲಾಠಿಯ ಮೂಲಕ ನಮ್ಮನ್ನು ಹೆಡೆಮುರಿ ಕಟ್ಟಲು ಆರಂಭಿಸಿದ್ದರು. ನಾವು ಎದ್ದೆವೋ ಬಿದ್ದೆವೋ ಎಂದು ಓಡಲು ಆರಂಬಿಸಿದ್ದೆವು. ಈ ನಡುವೆ ಯಾರೋ ಬಿದ್ದರು. ಯಾರೋ ಎದ್ದರು. ಬಿದ್ದವರ ಮೇಲೆ ಇನ್ನಷ್ಟು ಜನರು ಬಿದ್ದರು. ಮೆಟ್ಟಿದ್ದರು. ತುಳಿದರು. ನಾವು ಚಿಕ್ಕವರು. ಹುರುಪಿನಲ್ಲಿ ಓಡಿದೆವು. ಓಡುತ್ತಲೇ ಇದ್ದೆವು. ಅಲ್ಲೆಲ್ಲೋ ಸ್ವಲ್ಪ ದೂರ ಹೋದ ಮೇಲೆ ನಮ್ಮ ಹಿಂದೆ ಯಾರೂ ಬರುತ್ತಿಲ್ಲ ಎನ್ನುವುದು ಖಾತ್ರಿಯಾಯಿತು. ನಾವು ತಿರುಗಿ ನೋಡಿದಾಗ ಭಾಷಣ ನಡೆಯುತ್ತಿದ್ದ ಕಟ್ಟೆಯ ಕಡೆಯಿಂದ ಕೂಗಾಟ, ಚೀರಾಟ ಕೇಳುತ್ತಿತ್ತು...'
`ಇದೇ ಸಮಯದಲ್ಲಿ ನನಗೆ ಹುಚ್ಚು ಆವೇಶ ಬಂದಿತು ನೋಡು. ಸೀದಾ ವಾಪಾಸಾಗಲು ಆರಂಭಿಸಿದೆ. ನನ್ನ ಜೊತೆಗಿದ್ದವರು ನನ್ನನ್ನು ಹೋಗದೇ ಇರುವಂತೆ ಮಾಡುತ್ತಿದ್ದರೂ ನಾನು ಕೇಳಲಿಲ್ಲ. ಭಾಷಣ ನಡೆದ ಸ್ಥಳಕ್ಕೆ ಹತ್ತಿರ ಬರುತ್ತಿದ್ದಂತೆ ಯಾರೋ ಒಬ್ಬ ಪೊಲೀಸಿನವ ನನ್ನನ್ನು ಗಮನಿಸಿ ನನ್ನತ್ತ ನುಗ್ಗಿದ. ನಾನು ಸೀದಾ ಬಗ್ಗಿ ಕಾಲ ಬುಡದಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡು ರಪ್ಪನೆ ಅವನ ಕಡೆಗೆ ಬೀಸಿದೆ. ಸೀದಾ ಅವನ ಹಣೆಗೆ ಬಿತ್ತು ಅದು. ಹಣೆಯಿಂದ ರಕ್ತ ಬರಲು ಆರಂಭಿಸಿತು. ಇಲ್ಲಿಯವರೆಗೂ ಹುಚ್ಚು ಹುಮ್ಮಸ್ಸಿದ್ದ ನನಗೆ ಯಾವಾಗ ರಕ್ತ ಕಂಡೆನೋ ಆಗ ಭಯವಾಯಿತು. ತಕ್ಷಣ ಓಡಲು ಆರಂಭಿಸಿದೆ. ಪೊಲೀಸಿನವನು ನನ್ನನ್ನು ಹಿಂಬಾಲಿಸಿದ. ನನ್ನ ಜೊತೆಗಿದ್ದವರೆಲ್ಲ ಚದುರಿದ್ದರು. ನಾನು ಹೇಗೋ ತಪ್ಪಿಸಿಕೊಂಡು ಮನೆ ಸೇರಿದ್ದೆ. ಹಿಂಬಾಲಿಸಿದ ಪೊಲೀಸ ಎಲ್ಲಿ ಹೋದನೋ ತಿಳಿಯಲಿಲ್ಲ..' ಅಜ್ಜಿ ಇನ್ನೊಮ್ಮೆ ಸುಮ್ಮನಾಗಿದ್ದರು.
ನಾನು ಇನ್ನಷ್ಟು ಕುತೂಹಲದಿಂದ ಅವರ ಮಾತನ್ನು ಆಲಿಸಲು ಆರಂಭಿಸಿದ್ದೆ. ಹಾಗೆಯೇ ತನ್ನ ಬಳಿ ಇದ್ದ ಕುಟ್ಟಾಣಿಯನ್ನು ತೆಗೆದುಕೊಂಡು ಅಡಿಕೆ ಹಾಗೂ ವೀಳ್ಯದೆಲೆಯನ್ನು ಸಣ್ಣದಾಗಿ ಕತ್ತರಿಸಿ, ಅದನ್ನು ಕುಟ್ಟಲು ಆರಂಭಿಸಿದರು.
`ನಾನು ಮಾಡಿದ ಘನಾಂದಾರಿ ಕೆಲಸ ನಿಧಾನವಾಗಿ ಎಲ್ಲ ಕಡೆ ಹಬ್ಬಲು ಆರಂಭವಾಗಿತ್ತು. ಆರಂಭದಲ್ಲಿ ನಾನು ಏನನ್ನೂ ಮಾಡದಿದ್ದರೂ ನಂತರದಲ್ಲಿ ನಿಧಾನವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಹರತಾಳದಲ್ಲಿ ತೊಡಗುವುದು, ಘೋಷಣೆ ಕೂಗುವುದು ಇತ್ಯಾದಿಗಳೆಲ್ಲ ನಡೆದೇ ಇದ್ದವು. ನನ್ನದು ಬಾಯಿ ಜೋರು. ಈ ಕಾರಣದಿಂದ ಹರತಾಳದಲ್ಲಿದ್ದ ನನಗೆ ನಿಧಾನವಾಗಿ ಮುಂದಾಳತ್ವವೂ ಸಿಕ್ಕಿತು. ನನ್ನ ಕುರಿತು ಸುತ್ತಮುತ್ತಲ ಫಾಸಲೆಯಲ್ಲಿ ಸುದ್ದಿಯಾಗಲು ಶುರುವಾಯಿತು. ಬಹುಶಃ ಆಗಲೇ ಬ್ರಿಟೀಷರಿಗೆ ಪೀಕಲಾಟ ಶುರುವಾಗಿರಬೇಕು..
ಆದರೆ ನಾನು ಹೆಂಗಸಾದ ಕಾರಣ, ಗಂಡಸರಂತೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗಿರಲಿಲ್ಲ. ಈ ಸಂಗತಿಯ ಬಗ್ಗೆ ಬ್ರಿಟೀಷರು ತಲೆಕೆಡಿಸಿಕೊಂಡಿರಬೇಕು. ಆದರೆ ಆಗೀಗ ನನ್ನನ್ನು ಬಂಧಿಸುವುದು, ಬಿಡುಗಡೆ ಮಾಡುವುದು ನಡೆದೇ ಇತ್ತು. ಗಂಡಸರನ್ನಾದರೆ ಹೆಡೆಮುರಿ ಕಟ್ಟಿ ಬಿಡಬಹುದು. ಆದರೆ ನಮಗೆ ಹಾಗಾಗುವುದಿಲ್ಲವಲ್ಲ. ನಮಗೆ ಸ್ವಲ್ಪವೇ ಏನಾದರೂ ಆದರೆ ದೊಡ್ಡ ಸುದ್ದಿಯಾಗಿ ಆಮೇಲೆ ಅದು ಬ್ರಿಟೀಷರಿಗೆ ಅವಮಾನ ಉಂಟಾದರೆ... ಬ್ರಿಟಿಷ್ ರಾಣಿಗೆ ಅವಮಾನ ಆದರೆ ಅಂತೆಲ್ಲ ಆಲೋಚನೆ ಮಾಡಿದರು ಬ್ರಿಟೀಷರು. ನನ್ನನ್ನು ಸುಮ್ಮನೆ ಬಿಟ್ಟರೂ ಆಗುವುದಿಲ್ಲ. ಆದರೆ ಏನು ಮಾಡುವುದು ಎನ್ನುವ ವಿಷಯ ಅವರಿಗೂ ಗೊತ್ತಿರಲಿಲ್ಲ. ನಾನಂತೂ ಸ್ವಾತಂತ್ರ್ಯ ಚಳುವಳಿಯ ಕಾವಿನಲ್ಲಿ ಮನೆಯನ್ನೂ ಮರೆಯುವ ಹಂತಕ್ಕೆ ಬಂದಿದ್ದೆ. ಅಪ್ಪನಂತೂ ಅದೆಷ್ಟು ಸಿಟ್ಟಾಗಿದ್ದನೋ. ಆದರೆ ಕಾಂಗ್ರೆಸ್, ಚಳವಳಿ, ಗಾಂಧೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದ ಅಪ್ಪ ಕೊನೆಗೊಮ್ಮೆ ನನ್ನ ಮೇಲಿನ ಸಿಟ್ಟನ್ನು ಕಡಿಮೆ ಮಾಡಿದ್ದ. ಏನಾದ್ರೂ ಮಾಡ್ಕೊ ಎಂದು ಬಿಟ್ಟು ಬಿಟ್ಟಿದ್ದ. ನನಗೆ ಇದರಿಂದ ರೆಕ್ಕೆ ಬಂದಂತಾಗಿ ಖುಷಿಯಾಗಿದ್ದೆ.
ಹಿಂಗೇ ಇದ್ದಾಗ ಒಂದಿನ ಒಬ್ಬಾತ ಬಂದ. ಅಪ್ಪನಿಗೆ ಹಳೆಯ ಪರಿಚಯವಂತೆ. ಆಗತಾನೆ ಯವ್ವನ ಮುಗಿದಿತ್ತು. ಆರಡಿಯ ಕಟ್ಟುಮಸ್ತಾದ ಆಳು. ನನಗೆ ಆತನನ್ನು ಎಲ್ಲೋ ನೋಡಿದಂತಿದೆಯಲ್ಲ ಅನ್ನಿಸಿತು. ಆದರೆ ಎಲ್ಲಿರಬಹುದು ಎನ್ನುವುದು ನೆನಪಾಗಲಿಲ್ಲ. ಆತ ಕೆಲಕಾಲ ಅಪ್ಪನ ಬಳಿ ಮಾತನಾಡಿ ಹೋದ. ಹೋಗುವ ಮೊದಲು ನನ್ನ ಬಳಿ ನಿಂತು ಹಾಗೆಯೇ ನಕ್ಕು ಹೋದ. ನನ್ನ ಮನಸ್ಸಿನಲ್ಲಿ ಗೊಂದಲ ಮೂಡಿತ್ತು. ಆ ವ್ಯಕ್ತಿ ಹೋದ ನಂತರ ಅಪ್ಪ ನನ್ನ ಬಳಿ ಬಂದು ನೋಡು ಅವರು ನಮ್ಮ ಪಕ್ಕದೂರಿನ ಪಟೇಲರು. ಅವರು ನಿನ್ನನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಅವರಿಗೆ ನಿನ್ನ ಹರತಾಳ, ಚಳವಳಿಗಳ ಸುದ್ದಿ ಕಿವಿಗೆ ಬಿದ್ದಿದೆಯಂತೆ. ಅದನ್ನು ಕೇಳಿ, ಆದರೆ ನಿನ್ನಂತವಳನ್ನೇ ಮದುವೆ ಆಗಬೇಕು ಎಂದುಕೊಂಡು ಇಲ್ಲಿಯ ತನಕ ಬಂದಿದ್ದರಂತೆ ನೋಡು ಎಂದರು. ನಾನು ಮಾತನಾಡಲಿಲ್ಲ. ಭಾರತದ ಸ್ವಾತಂತ್ರದ ಬಗ್ಗೆ ಬಹಳ ಒಲವಿಟ್ಟುಕೊಂಡವರು. ಬಹಿರಂಗವಾಗಿ ಅಲ್ಲದಿದ್ದರೂ ಗುಟ್ಟಾಗಿ ಭಾರತದ ಸ್ವಾತಂತ್ರ ಹೋರಾಟಕ್ಕೆ ಸಹಾಯ ಮಾಡುತ್ತಿರುವ ಗಣಪಯ್ಯ ಪಟೇಲರು ಅವರು. ಅವರಿಗೆ ನಿನ್ನ ಮೇಲೆ ಮನಸ್ಸಾಗಿದೆಯಂತೆ. ಹೇಳು ಅವರಿಗೆ ನಾನು ಏನು ಹೇಳಲಿ? ನಿನ್ನನ್ನು ಕೇಳುವ ಜರೂರತ್ತಿರಲಿಲ್ಲ. ಆದರೂ ಕೇಳಿದೆ ಅಂದ ಅಪ್ಪ. ಆಗಲೂ ನಾನು ಸುಮ್ಮನೆ ಇದ್ದೆ.
ನನ್ನ ಮನಸ್ಸು ಹುಯ್ದಾಡುತ್ತಿತ್ತು. ಆ ವ್ಯಕ್ತಿಯನ್ನು ಮದುವೆಯಾಗಲೇ? ಬೇಡವೇ..? ಭಾರತದ ಸ್ವಾತಂತ್ರ್ಯಕ್ಕಾಗಿ ನನ್ನನ್ನು ನಾನು ಮುಡಿಪಾಗಿ ಇಡುವ ನಿಶ್ಚಯ ಮಾಡಿದ್ದೆ. ಆದರೆ ಮದುವೆಯಾದ ಮೇಲೆ ಅವೆಲ್ಲ ನಿಂತುಹೋದರೆ? ದ್ವಂದ್ವ ಕಾಡಿತು. ಅಪ್ಪ... ಮದುವೆಯ ನಂತರವೂ ನಾನು ಸ್ವಾತಂತ್ರ ಹೋರಾಟದಲ್ಲಿ ತೊಡಗಿಕೊಳ್ಳುತ್ತೇನೆ. ಇದಕ್ಕೆ ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಒಪ್ಪುತ್ತಾರೆ ಅಂತ ಆದರೆ ಮದುವೆಗೆ ನನ್ನ ಒಪ್ಪಿಗೆ ಇದೆ ಎಂದು ಹೇಳಿದ್ದೆ. ಅಪ್ಪ ನಿಟ್ಟುಸಿರು ಬಿಟ್ಟು ವಿಷಯವನ್ನು ಅವರಿಗೆ ತಿಳಿಸೋಣ. ಆಮೇಲೆ ಏನನ್ನುತ್ತಾರೋ ನೋಡೋಣ ಎಂದಿದ್ದ. ಮರುದಿನವೇ ಜನರನ್ನು ಕಳಿಸಿ ವಿಷಯವನ್ನು ಪಟೇಲರ ಮನೆಗೆ ಮುಟ್ಟಿಸಿದ್ದ.

--------------


ಇದಾಗಿ ಕೆಲವೇ ದಿನಗಳಲ್ಲಿ ಧಾಂ ಧೂಂ ಆಗಿ ನನ್ನ ಮದುವೆ ಆಯಿತು. ಶುಭಗಳಿಗೆಯಲ್ಲಿ ನಾನು ಅವರ ಮನೆಯ ಅವಿಭಾಜ್ಯ ಅಂಗವಾಗಿದ್ದೆ. ಇತ್ತ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇನ್ನಷ್ಟು ಉಗ್ರವಾಗಿತ್ತು. ಅಲ್ಲೆಲ್ಲೋ ಸುಭಾಷರ ಹೋರಾಟ, ಇನ್ನೆಲ್ಲೋ ಗಾಂಧೀಜಿಯವರ ಹರತಾಳ ಎಲ್ಲ ಕಿವಿಗೆ ಬೀಳುತ್ತಿತ್ತು. ಈ ನಡುವೆಯೇ ಸುಭಾಷರು ವಿಮಾನ ಅಪಘಾತದಲ್ಲಿ ಮಡಿದರಂತೆ ಎಂಬ ಸುದ್ದಿಯೂ ನನ್ನ ಕಿವಿಗೆ ಬಿದ್ದು ಅಪಾರ ದುಃಖವಾಗಿತ್ತು. ಹೀಗಿದ್ದಾಗಲೇ ನನ್ನ ಸಂಸಾರ ನೌಕೆಯೂ ಕೂಡ ಸಾಗಿತ್ತು. ಮದುವೆಯಾಗಿ ನಾಲ್ಕೈದು ತಿಂಗಳಿಗೆಲ್ಲ ನನಗೆ ಮುಟ್ಟು ನಿಂತಿತ್ತು. ಅಲ್ಲಿಗೆ ನಾನು ಗರ್ಭಿಣಿ ಎನ್ನುವ ವಿಷಯ ಪಕ್ಕಾ ಆಗಿತ್ತು. ಹೀಗಿದ್ದಾಗಲೇ ಒಂದಿಷ್ಟು ಚಳವಳಿಗಾರರು ಬಂದು ನನ್ನ ಬಳಿ, ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಕೋರಿದ್ದರು. ನನಗೆ ಹೋಗಬೇಕೆಂಬ ಆಸೆ. ಬಸುರಿ ಬೇರೆ. ಪಟೇಲರು ಏನೆಂದಾರೋ ಎನ್ನುವ ಆತಂಕವೂ ಕಾಡದೇ ಇರಲಿಲ್ಲ. ಕೊನೆಗೊಮ್ಮೆ ಪಟೇಲರ ಬಳಿ ಕೇಳೀಯೂಬಿಟ್ಟೆ. ಅದಕ್ಕವರು ಹೇಳಿದ ಒಂದೇ ಉತ್ತರ `ಗರ್ಭಿಣೀ ನೀನು. ಇಂತಹ ಪರಿಸ್ಥಿತಿಯಲ್ಲಿ ಚಳವಳಿಯ ಉಸಾಬರಿ ಏಕೆ..?'
ನನಗೆ ಏನೆನ್ನಬೇಕೋ ತಿಳಿಯಲಿಲ್ಲ. ಪರಿಸ್ಥಿತಿ, ಪಟೇಲರು ಹೇಳಿದ ಉತ್ತರ, ಎಲ್ಲ ಸಮಂಜಸವಾಗಿದ್ದವು. ಆದರೆ ದೇಶಸೇವೆಯ ಬಯಕೆ ತಣಿಯಬೇಕಲ್ಲ. ನಾನು ಹಟ ಮಾಡಿದೆ. ಅವರು ನಕಾರಾತ್ಮಕವಾಗಿ ಮಾತನಾಡುತ್ತಲೇ ಇದ್ದರು. ಹೀಗೇ ಮೂರ್ನಾಲ್ಕು ತಿಂಗಳು ಕಳೆದವು. ಅಷ್ಟಾಗುವ ವೇಳೆಗೆ ನನಗೆ ಒಂದು ವಿಷಯ ಮನದಟ್ಟಾಗಿತ್ತು. ನಾನು ಏನೆಂದರೂ ಪಟೇಲರು ನನ್ನನ್ನು ಚಳವಳಿಗೆ ತೆರಳಲು ಬಿಡುವುದಿಲ್ಲ ಎನ್ನುವುದು. ಒಂದಿಷ್ಟು ದಿನಗಳ ಕಾಲ ನಾನು ಸಾವಧಾನದಿಂದ ಕೇಳಿದೆ. ಅದಕ್ಕೆ ನಕಾರಾತ್ಮಕ ಉತ್ತರವೇ ಬಂದಿತ್ತು. ಆದರೆ ದಿನಗಳೆದಂತೆಲ್ಲ ನನ್ನ ಸಹನೆಯ ಕಟ್ಟೆ ಒಡೆಯಲು ಆರಂಭವಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ತೀವ್ರವಾದಂತೆ ಒಂದು ದಿನ ನಾನು ಪಟೇಲರ ಬಳಿ ಜಗಳ ಕಾದೆ.


(ಮುಂದುವರಿಯುತ್ತದೆ)

ಭಾರತದ ರಾಜ್ಯಗಳ ಕುರಿತು ಆಸಕ್ತಿಕರ ಅಂಶಗಳು

 
           ದೇಶದಾದ್ಯಂತ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯಗಳೂ ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಗಾತ್ರದಲ್ಲಿ, ಜನಸಂಖ್ಯೆ ಪ್ರಮಾಣದಲ್ಲಿ ಹೀಗೆ ಹಲವಾರು ಸಂಗತಿಗಳಲ್ಲಿ ವಿಭಿನ್ನತೆಯನ್ನು ಹೊಂದಿದೆ. ಅದೇ ರೀತಿ ದೇಶದ ಜಿಡಿಪಿಗೆ ಯಾವ ರಾಜ್ಯದ ಕೊಡುಗೆ ಎಷ್ಟಿದೆ? ಆರ್ಥಿಕವಾಗಿ ಉತ್ತಮ ಪ್ರಗತಿ ಹೊಂದಿದ ರಾಜ್ಯ ಯಾವುದು, ದೇಶದಲ್ಲಿಯೇ ಹಿಂದುಳಿದ ರಾಜ್ಯ ಯಾವುದು? ಅತಿ ಹೆಚ್ಚು ತಲಾದಾಯ (ಪರ್‌ಕ್ಯಾಪಿಟಾ ಇನ್ ಕಮ್) ಇರುವ ರಾಜ್ಯ ಯಾವುದು... ಹೀಗೆ ದೇಶದ ಆರ್ಥಿಕತೆಯ ದಿಕ್ಸೂಚಿಯಂತಿರುವ ಅಂಶಗಳನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುವುದು ಸಹಜವೇ. ಭಾರತವು ಒಕ್ಕೂಟ ವ್ಯವಸ್ಥೆಯೇ ಆದರೂ ಇಲ್ಲಿ ರಾಜ್ಯ ರಾಜ್ಯಗಳ ಮಧ್ಯವೇ ವಿವಿಧ ವಿಷಯಗಳಲ್ಲಿ  ಆರೋಗ್ಯಕರವಾದ ಸ್ಪರ್ಧೆ ಇದೆ. ಜತೆಗೆ ಆಯಾ ರಾಜ್ಯಕ್ಕೆ ಬೇಕಾದ ನೆರವು ಕೊಟ್ಟು, ಅಭಿವೃದ್ಧಿಗೆ ಸಹಕರಿಸಬೇಕಾದ ದೊಡ್ಡಣ್ಣನಂಥ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ ಎಂಬುದು ಕೂಡ ಅಷ್ಟೇ ಸತ್ಯ. ಕಾಲ ಕಾಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರವು ಅಗತ್ಯದ ಅನುದಾನಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳ ಬೆನ್ನಿಗೆ ನಿಲ್ಲುತ್ತಿದೆ. ಹೀಗಿದ್ದರೂ ರಾಜ್ಯಗಳು ತನ್ನದೇ ಆದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದೆ. ಕೆಲವು ರಾಜ್ಯಗಳು ಮುನ್ನಡೆಯಲು ಎಡವಿದೆ. ಅಂತಹ ವಿಶಿಷ್ಟ ಅಂಶಗಳನ್ನು ಇಲ್ಲಿಡಲಾಗಿದೆ.
ದೇಶದಲ್ಲಿ ಪ್ರತಿ ವರ್ಷ ವಿವಿಧ ರಾಜ್ಯಗಳ ಅಭಿವೃದ್ಧಿ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮಾಡಲಾಗುತ್ತದೆ. ಅಂತಿಮವಾಗಿ ಈ ಸಮೀಕ್ಷಾ ವರದಿಯನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡುತ್ತದೆ. ದೇಶದಲ್ಲಿನ ವಿವಿಧ ರಾಜ್ಯಗಳಿಗೆ ಅವುಗಳ ಪ್ರಗತಿಯ ಆಧಾರದ ಮೇಲೆ ವಿವಿಧ ರಾಂಕು ನೀಡಲಾಗಿದೆ. ಪ್ರತಿ ವರ್ಷ ಕೂಡ ಈ ರಾಜ್ಯಗಳು ಪಡೆದ ರ್ಯಾಂಕುಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬಹಳ ಆಸಕ್ತಿಕರ ಅಂಶಗಳನ್ನು ಒಳಗೊಂಡಿರುವ ಇದು ಪ್ರತಿಯೊಬ್ಬರಲ್ಲಿಯೂ ಕುತೂಹಲವನ್ನು ಹುಟ್ಟಿಸಬಲ್ಲದು. ದೇಶದಾದ್ಯಂತ ವಿವಿಧ ಸಂಸ್ಥೆಗಳು ದೇಶದಾದ್ಯಂತ ಸರ್ವೇಯನ್ನು ಕೈಗೊಂಡು ಈ ಮಾಹಿತಿಯನ್ನು ಕಲೆ ಹಾಕಿದೆ. 2016- 17ನೇ ಸಾಲಿನ ಈ ಅಂಕಿಗಳನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡಿದೆ.

ಅತಿ ದೊಡ್ಡ ಆರ್ಥಿಕತೆ ಇರುವಂಥ ರಾಜ್ಯಗಳು

ಭಾರತದ ಅತ್ಯಂತ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಕೊಟ್ಟಕೊನೆಯ ಸ್ಥಾನದಲ್ಲಿದೆ. ಲಕ್ಷದ್ವೀಪದ ವಾರ್ಷಿಕ ಆದಾಯ 407 ಕೋಟಿ ರೂ.ಗಳಾಗಿದೆ. ಸಾಮಾನ್ಯವಾಗಿ ಭೌಗೋಳಿಕವಾಗಿ ವಿಶಾಲವಾಗಿರುವ ರಾಜ್ಯಗಳ ಆರ್ಥಿಕತೆ ಹೆಚ್ಚಿದೆ. ಅದೇ ರೀತಿ ಸಣ್ಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕತೆ ಕಡಿಮೆಯಿದೆ.

ಮಹಾರಾಷ್ಟ್ರ -25.35 ಲಕ್ಷ ಕೋಟಿ
ಉತ್ತರಪ್ರದೇಶ  - 14.46 ಲಕ್ಷ ಕೋಟಿ
ತಮಿಳುನಾಡು  - 13.39 ಲಕ್ಷ ಕೋಟಿ
ಕರ್ನಾಟಕ  - 12.80 ಲಕ್ಷ ಕೋಟಿ
ಗುಜರಾತ್ - 12.75 ಲಕ್ಷ ಕೋಟಿ

ಅತಿ ಹೆಚ್ಚು ತಲಾದಾಯ ಹೊಂದಿದ ರಾಜ್ಯಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸಿಸುತ್ತಿರುವವರ ತಲಾ ಆದಾಯವು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದುಘಿ, ದೆಹಲಿ ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮವೇ ಮೂಲ ಆದಾಯವಾಗಿರುವ ಗೋವಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಯಾದಿಯಲ್ಲಿ ಮಣಿಪುರ ಕೊಟ್ಟ ಕೊನೆಯ ಸ್ಥಾನದಲ್ಲಿದೆ. ಬಿಹಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ತಲಾದಾಯ ಹನ್ನೊಂದು ಪಟ್ಟು ಹೆಚ್ಚಿದೆ.


ದೆಹಲಿ -5,55,882
ಗೋವಾ -4,66,632
ಚಂಡೀಘಡ- 3,75,454
ಸಿಕ್ಕೀಂ  -2,77,282
ಪುದುಚ್ಚೇರಿ - 2,36,450

ಅತಿ ವೇಗದ ಅಭಿವೃದ್ಧಿ ದಾಖಲಿಸುತ್ತಿರುವ ರಾಜ್ಯಗಳು
2005ರಿಂದ 2015ರವರೆಗಿನ ಅವಯಲ್ಲಿ ಅಭಿವೃದ್ಧಿ ದಾಖಲಿಸಿದ ಯಾದಿಯಲ್ಲಿ ಈಶಾನ್ಯ ರಾಜ್ಯ ಸಿಕ್ಕೀಂ ಮೊದಲ ಸ್ಥಾನ ಪಡೆದುಕೊಂಡಿದೆ. ಈಶಾನ್ಯ ಭಾಗಕ್ಕೆ ಸೇರಿದ ಅಸ್ಸಾಂ, ತ್ರಿಪುರ ಹಾಗೂ ನಾಗಾಲ್ಯಾಂಡ್‌ಗಳು ಕೊಟ್ಟಕೊನೆಯ ಸ್ಥಾನದಲ್ಲಿವೆ.

ಸಿಕ್ಕೀಂ  -ಶೇ 26.6
ಉತ್ತರಾಖಂಡ -ಶೇ 19.57
ಬಿಹಾರ -ಶೇ 18.10
ತೆಲಂಗಾಣ  -ಶೇ 17.92
ರಾಜಸ್ಥಾನ  -ಶೇ 16.74

ಒಟ್ಟಾರೆ ಅಭಿವೃದ್ಧಿ ದಾಖಲಿಸಿದ ರಾಜ್ಯಗಳ ವಿವರ
ದೇಶದ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಸರ್ವತೋಮುಖ ಅಭೀವೃದ್ಧಿ ಸಾಸಿದ್ದರೆ, ಛತ್ತೀಸಘಡ ಕೊನೆಯ ಸ್ಥಾನದಲ್ಲಿದೆ. ತೆಲಂಗಾಣವು ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಜಾರ್ಖಂಡ್ ನಂತರದ ಸ್ಥಾನದಲ್ಲಿದೆ. ಸಾಕ್ಷರತೆಯಲ್ಲಿ ಕೇರಳ ಹಾಗೂ ಲಕ್ಷದ್ವೀಪಗಳು ಮೊದಲೆರಡು ಸ್ಥಾನದಲ್ಲಿವೆ. ರಾಜ್ಯಾದ್ಯಂತ ಆರೋಗ್ಯ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ರಾಷ್ಟ್ರಗಳಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಾನೂನು ಹಾಗೂ ಸುವ್ಯವಸ್ಥೆ ಕಲ್ಪಿಸಿದ ರಾಜ್ಯಗಳ ಯಾದಿಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಕೊಟ್ಟಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಿಮಾಚಲ ಪ್ರದೇಶವು ಅತ್ಯಂತ ಹೆಚ್ಚಿನ ವೌಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ.ಆಡಳಿತದಲ್ಲಿ ಕೇರಳ ಮೊದಲ ಹಾಗೂ ಬಿಹಾರ ಕೊನೆಯ ಸ್ಥಾನದಲ್ಲಿದೆ. ಸಮಗ್ರ ಅಭಿವೃದ್ಧಿ ಯಲ್ಲಿ ಹರ್ಯಾಣ ಮೊದಲ ಹಾಗೂ ಪ್ರವಾಸೋದ್ಯಮದಲ್ಲಿ  ಹರ್ಯಾಣ ಮತ್ತು ಗೋವಾಗಳು ಮೊದಲೆರಡು ಸ್ಥಾನ ಪಡೆದುಕೊಂಡಿವೆ. ಪರಿಸರ ಹಾಗೂ ಸ್ವಚ್ಛತೆಗೆ ತೆಲಂಗಾಣ ರಾಜ್ಯವು ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ.

ಒಟ್ಟು ಸಾಧನೆ: ಹಿಮಾಚಲ ಪ್ರದೇಶ
ಆರ್ಥಿಕತೆ: ತೆಲಂಗಾಣ
ಕೃಷಿ: ಮಧ್ಯ ಪ್ರದೇಶ
ಸಾಕ್ಷರತೆ : ಕೇರಳ
ಆರೋಗ್ಯ: ಆಂಧ್ರ ಪ್ರದೇಶ
ಮೂಲಸೌಕರ್ಯ:  ಹಿಮಾಚಲ ಪ್ರದೇಶ
ಕಾನೂನು ಮತ್ತು ಸುವ್ಯವಸ್ಥೆ: ಗುಜರಾತ್
ಆಡಳಿತ: ಕೇರಳ
ಸಮಗ್ರ ಅಭಿವೃದ್ಧಿ:  ಹರಿಯಾಣ
ಪ್ರವಾಸೋದ್ಯಮ:  ಹರಿಯಾಣ
ಉದ್ಯಮಶೀಲತೆ:  ಕರ್ನಾಟಕ
ಪರಿಸರ ಮತ್ತು ಸ್ವಚ್ಛತೆ: ತೆಲಂಗಾಣ

ಸಣ್ಣ ರಾಜ್ಯಗಳ ಸಾ‘ನೆ
ಭೌಗೋಳಿಕವಾಗಿ ದೊಡ್ಡದಾಗಿರುವ ರಾಜ್ಯಗಳ ಅಭಿವೃದ್ಧಿ ಸುಲಭವಲ್ಲ. ಆದರೆ ಸಣ್ಣ ರಾಜ್ಯಗಳ ಅಭಿವೃದ್ಧಿ ಕಾರ್ಯ ಸಲೀಸು ಎನ್ನುವ ಭಾವನೆಗಳಿವೆ. ಭೌಗೋಳಿಕವಾಗಿ ಚಿಕ್ಕದಾಗಿರುವ ರಾಜ್ಯಗಳು ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿವೆ. ದಕ್ಷಿಣ ಭಾರತದಲ್ಲಿರುವ ಕೇಂದ್ರಾಡಳಿತ ಪ್ರದೇಶ ಪುದುಚ್ಚೇರಿ ಸರ್ವತೋಮುಖ ಅಭಿವೃದ್ದಿಯನ್ನು ಹೊಂದಿರುವ ಪ್ರದೇಶ ಎನ್ನುವ ಹೆಸರನ್ನು ಪಡೆದುಕೊಂಡಿದೆ.

ಒಟ್ಟಾರೆ ಅಭಿವೃದ್ಧಿ: ಪುದುಚೆರಿ
ಆರ್ಥಿಕತೆ: ದೆಹಲಿ
ಕೃಷಿ: ನಾಗಾಲ್ಯಾಂಡ್
ಶಿಕ್ಷಣ: ಅರುಣಾಚಲ ಪ್ರದೇಶ
ಆರೋಗ್ಯ: ದೆಹಲಿ
ಮೂಲಸೌಕರ್ಯ: ಸಿಕ್ಕಿಂ
ಕಾನೂನು ಮತ್ತು ಸುವ್ಯವಸ್ಥೆ: ಪುದುಚೆರಿ
ಪ್ರವಾಸೋದ್ಯಮ: ಪುದುಚೆರಿ

ಬಡ ರಾಜ್ಯಗಳು ಹಾಗೂ ಬಡತನದ ಪ್ರಮಾಣ

ಖನಿಜ ಸಂಪತ್ತು ಹೇರಳವಾಗಿದೆ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿರುವ ಛತ್ತೀಸ್‌ಘಡ ದೇಶದ ಅತ್ಯಂತ ಬಡ ರಾಜ್ಯ ಎನ್ನುವ ಕುಖ್ಯಾತಿಗೂ ಪಾತ್ರವಾಗಿದೆ. ಛತ್ತೀಸ್‌ಘಡದ ಪಕ್ಕದಲ್ಲೇ ಇರುವ ಜಾರ್ಖಂಡ್ ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗೋವಾ ಈ ಯಾದಿಯಲ್ಲಿ ಕೊಟ್ಟ ಕೊನೆಯ ಸ್ಥಾನದಲ್ಲಿದ್ದುಘಿ, ಅತ್ಯಂತ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ.

ಛತ್ತೀಸ್ ಗಢ  ಶೇ 39.9
ಜಾರ್ಖಂಡ್  ಶೇ 37
ಮಣಿಪುರ  ಶೇ 36.9
ಅರುಣಾಚಲ ಪ್ರದೇಶ  ಶೇ 34.7
ಬಿಹಾರ ಶೇ 33.7
ಒಡಿಶಾ ಶೇ 32.6
ಅಸ್ಸಾಂ ಶೇ 32
ಮಧ್ಯ ಪ್ರದೇಶ  ಶೇ 31.7
ಉತ್ತರಪ್ರದೇಶ  ಶೇ 29.4
ಕರ್ನಾಟಕ  ಶೇ 20.9

ಶ್ರೀಮಂತ ರಾಜ್ಯಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ

ಪ್ರವಾಸಿ ರಾಜ್ಯ ಗೋವಾ ದೇಶದ ಅತ್ಯಂತ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ. ಈ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 5.1 ರಷ್ಟು ಮಾತ್ರ ಇದೆ. ಈ ಯಾದಿಯಲ್ಲಿ ಕೊಟ್ಟ ಕೊನೆಯ ಸ್ಥಾನವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರಹವೇಲಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.39.31ರಷ್ಟು.

ಗೋವಾ  ಶೇ 5.1
ಕೇರಳ  ಶೇ 7.1
ಸಿಕ್ಕಿಂ  ಶೇ 8.2
ಹಿಮಾಚಲ ಪ್ರದೇಶ ಶೇ 8.1
ಪಂಜಾಬ್ ಶೇ 8.3
ಆಂಧ್ರ ಪ್ರದೇಶ 9.2
ಪುದುಚೆರಿ ಶೇ 9.7
ದೆಹಲಿ  ಶೇ 10
ಜಮ್ಮು ಮತ್ತು ಕಾಶ್ಮೀರ ಶೇ 10.4
ಹರಿಯಾಣ ಶೇ 11.2


(ಈ ಲೇಖನವು ಡಿ.30, 2017ರಂದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

Tuesday, November 21, 2017

ಕೃಷ್ಣನೇಕೆ ಸಾರಥಿಯೇ ಆದ?


------------------------

ಆತ ಮನಸ್ಸು ಮಾಡಿದ್ದರೆ
ಕೌರವರನ್ನೆಲ್ಲ ಉಣುಗು
ನೊರೆದಂತೆ ನೊರೆಯಬಹುದಿತ್ತು |
ಪಂಚ ಪಾಂಡವರನ್ನೆಲ್ಲ
ಕಿರುಬೆರಳಿನಲ್ಲಿಯೇ ಗೋವರ್ಧನ
ಗಿರಿಯೆತ್ತರಕ್ಕೆ ನಿಲ್ಲಿಸಬಹುದಿತ್ತು |

ಆತ ಮನಸ್ಸು ಮಾಡಿದ್ದರೆ
ಕುರುಕ್ಷೇತ್ರದಲ್ಲಿ ಸುದರ್ಶನನ
ನರ್ತನ ಮಾಡಿಸಬಹುದಿತ್ತು |
ಕೌರವ ಕುಲವನ್ನೆಲ್ಲ
ಕಂಸನಂತೆ ಕೊಲ್ಲಬಹುದಿತ್ತು
ಕ್ಷಣ ಮಾತ್ರದಲ್ಲಿ ಹನನ ಮಾಡಬಹುದಿತ್ತು |

ಆತ ಮನಸ್ಸು ಮಾಡಿದ್ದರೆ
ಶಕಟನ ಒದ್ದಂತೆ ಲಟಲಟನೆ
ಅರೆಘಳಿಗೆಯಲ್ಲಿ ಮುರಿದು ಹಾಕಬಹುದಿತ್ತು |
ಪೂತನಿಯೆದೆಯ ಹಾಲಿನೊಡನೆ
ರಕುತವ ಹೀರಿದಂತೆ
ತಮವ ಹೀರಬಹುದಿತದತ್ತು |

ಹಾಗಾಗದ ಕೃಷ್ಣ
ಹೀಗೇಕೆ ಆದ?

ಗೀತೆಯ ಸಾರ ತಿಳಿಸಲು
ಸಾರಥಿಯಾದ
ಉಡುಗಿದ್ದ ಆತದಮಸ್ಥೈರ್ಯ
ಮೆರೆಸಲು ಮುನ್ನಡೆದ |

ಕೈಕಲ್ಲಿ ಕಿರುಗತ್ತಿ ಇಲ್ಲದೆಯೂ
ಯುದ್ಧಗೆಲ್ಲಬಹುದೆಂದು ಸಾರಿದ
ನಾ ನಾರಾಯಣ.. ನೀನು ನರ
ಎಂಬ ತತ್ವ ಮೆರೆಸಿದ |

ನಾನು ನೆಪ ಮಾತ್ರ
ನಿನ್ನೊಳಗೆ ಎಲ್ಲವೂ ಇದೆ ಎಂದು
ನರನ ಕೈಹಿಡಿದು ಮುನ್ನಡೆಸಿದ
ನಮ್ಮೊಳಗಿನ ಸುಪ್ತ ಶಕ್ತಿ ಮೆರೆಸಲು
ಕೃಷ್ಣ ಸಾರಥಿಯೇ ಆದ |


-------------------

(ಈ ಕವಿತೆಯನ್ನು ಬರೆದಿದ್ದು 21 ನವೆಂಬರ್ 2017ರಂದು ಬೆಂಗಳೂರಿನಲ್ಲಿ)

Wednesday, November 15, 2017

ಸಾಹಸಕ್ಕೂ ಸೈ.... ಸಂಭ್ರಮಕ್ಕೂ ಜೈ ಹೆಬ್ಬಾರಗುಡ್ಡ

ಒಂದೆಡೆ ಬಾನೆತ್ತರವನ್ನು ಹಬ್ಬಿ ನಿಂತಿರುವ ಪಶ್ಚಿಮ ಘಟ್ಟದ ಗಿರಿಸಾಲು. ಇನ್ನೊಂದೆಡೆಗೆ ಭವ್ಯ ಕರಾವಳಿಯ ನಯನಮನೋಹರ ನೋಟ. ಸಹ್ಯಾದ್ರಿಯ ಗಿರಿಪಂಕ್ತಿಯ ನಟ್ಟನಡುವೆ ಇರುವ ಹೆಬ್ಬಾರಗುಡ್ಡದಲ್ಲಿ ಇಂತದ್ದೊಂದು ಸುಂದರ ದೃಶ್ಯವನ್ನು ಆಸ್ವಾದಿಸಲು ಸಾಧ್ಯ. ನೋಡುಗರ ಮನಸ್ಸನ್ನು ಸದಾ ತನ್ನತ್ತ ಸೆಳೆದಿಡುವಂತಹ ದೃಶ್ಯ ವೈಭವ ಹೆಬ್ಬಾರಗುಡ್ಡದ್ದು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಮಚಾಯತಿಯ ಹೆಬ್ಬಾರಗುಡ್ದದಲ್ಲಿ ಸ್ವರ್ಗವೇ ಧರೆಗಿಳಿದು ಬಂದಿದೆ. ಇಲ್ಲಿಗೆ ಬಂದರೆ ಸಾಕು ಮಲೆನಾಡಿನ ಸೌಂದರ್ಯವೆಲ್ಲ ನಮ್ಮ ಮುಂದೆ ಬರುತ್ತದೆ. ಭೂದೇವಿ ಹೆಬ್ಬಾರಗುಡ್ಡದಲ್ಲಿ ಮೈಮರೆತು ನಿಂತಿದ್ದಾಳೇನೋ ಎನ್ನುವಷ್ಟು ಚೆನ್ನಾದ ಊರು ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಈ ಊರಿಗೆ ಬಂದರೆ ಏನುಂಟು ಏನಿಲ್ಲ? ಸೂರ್ಯೋದಯ, ಸೂರ್ಯಾಸ್ತವನ್ನು ಕಣ್ತುಂಬಿಸಿಕೊಳ್ಳುವಂತ ಪ್ರದೇಶ, ಅಂಕುಡೊಂಕಿನ ಕಡಿದಾದ ದಾರಿ, ಬಾನನ್ನು ಮುತ್ತಿಕ್ಕುವ ಮರಗಳು, ದಟ್ಟ ಕಾಡುಗಳು, ಮುಗ್ಧ ಜನ, ಮೈಮನಗಳನ್ನು ಕ್ರಿಯಾಶೀಲಗೊಳಿಸುವಂತಹ ಸುಂದರ ಜಲಪಾತ ಎಲ್ಲವೂ ಇದೆ.
ಇಂತಹ ಹೆಬ್ಬಾರಗುಡ್ಡಕ್ಕೆ ಹೋಗುವುದು ಸುಲಭದ ಸಂಗತಿಯಲ್ಲ ನೋಡಿ. ಬಸ್ ಮೂಲಕ ತೆರಳುವವರು ಕನಿಷ್ಟ ೮-೯ ಕಿಲೋಮೀಟರ್ ನಡೆಯುವುದಂತೂ ಕಡ್ಡಾಯವೇ. ಅದೂ ೮೦ ಡಿಗ್ರಿಗಿಂತ ಎತ್ತರದ ಗುಡ್ಡವನ್ನು ಒಂದೇ ಉಸಿರಿನಲ್ಲಿ ಹತ್ತಬೇಕು. ಇನ್ನು ವಾಹನಗಳನ್ನು ಕೊಂಡೊಯ್ಯುವವರಂತೂ ಇನ್ನೊಂದು ಸಾಹಸಕ್ಕೆ ಸಜ್ಜಾಗಿರಬೇಕು. ಕಡಿದಾದ ದಾರಿ, ಕೊರಕಲು ಬಿದ್ದ ರಸ್ತೆಗಳು ಬೈಕ್ ಸವಾರರನ್ನು ಸವಾಲಿಗೆ ಒಡ್ಡುತ್ತವೆ. ತಾಕತ್ತಿದ್ದರೆ ಬೈಕ್ ರೈಡ್ ಮಾಡು ಬಾ ಎಂದು ಕೈಬೀಸಿ ಕರೆಯುವಂತೆ ಭಾಸವಾಗುತ್ತದೆ. ಕಷ್ಟಪಟ್ಟು ಹತ್ತಿದರೆ ಮಾತ್ರ ಆಹಾ ಅಲ್ಲಿ ಕಾಣುವ ದೃಶ್ಯ ಮರೆಯಲು ಅಸಾಧ್ಯವಾದುದು. ಹೆಬ್ಬಾರ ಗುಡ್ಡದ ನೆತ್ತಿಯಿಂದ ಕಾಣ್ಣು ಹಾಯಿಸಿದರೆ ಕೆಳಗೆ ಕಾಣುವ ಗಂಗಾವಳಿ ನದಿಯ ಕಣಿವೆ ಎಲ್ಲರ ಚಿತ್ತವನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ದೂರದಲ್ಲಿ ಅಂಕುಡೊಂಕಾಗಿ ಹರಿಯುವ ಗಂಗಾವಳಿ ನದಿಯು ಚಿಕ್ಕಮಕ್ಕಳ ಅಸ್ತವ್ಯಸ್ತ ರೇಖೆಗಳನ್ನು ನೆನಪಿಗೆ ತರುತ್ತವೆ.
ಹೆಬ್ಬಾರಗುಡ್ಡದ ಇನ್ನೊಂದು ವಿಶೇಷವನ್ನು ಹೇಳಲೇಬೇಕು. ಈ ಊರಿನಲ್ಲಿ ಅಜಮಾಸು ೨೦-೩೦ ಕುಟುಂಬಗಳು ವಾಸ ಮಾಡುತ್ತಿವೆ. ಹೆಚ್ಚಿನವರು ಉತ್ತರ ಕನ್ನಡದಲ್ಲಿ ಮಾತ್ರ ಕಾಣಸಿಗುವಂತಹ ಸಿದ್ದಿಗಳು. ಈ ಊರಿನಲ್ಲಿ ಇರುವ ಹಲವು ವಿಶೇಷಗಳಲ್ಲಿ ಇನ್ನೊಂದನ್ನು ಹೇಳಲೇಬೇಕು. ಅಂದಹಾಗೇ ಈ ಊರಿಗೆ ತೆರಳುವವರನ್ನು ವಿದ್ಯುದ್ದೀಪಗಳು ಸ್ವಾಗತಿಸುವುದಿಲ್ಲ. ಮೊಬೈಲುಗಳು ರಿಂಗಣಿಸುವುದಿಲ್ಲ. ಚಿಮಣಿ ದೀಪಗಳು, ಅಪರೂಪಕ್ಕೊಮ್ಮೆ ಗ್ಯಾಸ್‌ಲೈಟುಗಳು ಬೆಳಗುತ್ತವೆ. ಹೆಬ್ಬಾರಗುಡ್ಡದಲ್ಲಿ ಒಂದೇ ಒಂದು ಮನೆಗಳಲ್ಲಿಯೂ ಕೂಡ ವಿದ್ಯುತ್ ದೀಪ ಇಲ್ಲ. ಅಚ್ಚರಿಯಾಗಬಹುದು. ನಿಜ. ಹೆಬ್ಬಾರಗುಡ್ಡದ ಜನರು ದಿನನಿತ್ಯ ಚಿಮಣಿ ಬೆಳಕಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಹೊರ ಜಗತ್ತಿನ ಹಂಗನ್ನು ಸೀಮಿತವಾಗಿ ಮಾತ್ರ ಬಳಕೆ ಮಾಡಿಕೊಳ್ಳುವ ಈ ಗ್ರಾಮಸ್ಥರು, ಸಿಲಿಕಾನ್ ಸಿಟಿಯಲ್ಲಿ ಬದುಕುತ್ತಿರುವ ಜನರಿಗಿಂತ ಸುಖಿಗಳು. ಸಂತೃಪ್ತರು.
ದಟ್ಟ ಕಾಡಿನ ನಡುವೆ ಪುಟ್ಟ ಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಿರುವ ಈ ಗ್ರಾಮಸ್ಥರು, ಹೊರ ಜಗತ್ತಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬರುತ್ತಾರೆ. ಕೆಲವೇ ಕೆಲವು ಅಗತ್ಯದ ವಸ್ತುಗಳಿಗೆ ಮಾತ್ರ ಅಂಗಡಿಗೆ ತೆರಳುತ್ತಾರೆ. ದಟ್ಟ ಮಳೆ ಸುರಿಯುವ ಆರು ತಿಂಗಳುಗಳ ಕಾಲ ಈ ಗ್ರಾಮಸ್ಥರು ಬೇರೆಡೆಗೆ ಬರುವುದು ಸವಾಲಿನ ಕೆಲಸವೇ ಹೌದು. ಡಟ್ಟ ಕಾಡನ್ನು, ಘಟ್ಟವನ್ನು ಪ್ರಯಾಸದಿಂದ ಹತ್ತಿಳಿದು ಬದುಕು ಕಾಣುತ್ತಿದ್ದಾರೆ. ಆದರೂ ಇವರ ಬದುಕು ತೃಪ್ತಿಯಿಂದ ಕೂಡಿದೆ. ಹೆಬ್ಬಾರ ಗುಡ್ಡದ ಸೌಂದರ್ಯ ಆಸ್ವಾದಿಸಲು ವರ್ಷದ ಎಲ್ಲ ಕಾಅಲದಲ್ಲಿಯೂ ಬರಬಹುದು. ಮಳೆಗಾಲದಲ್ಲಿ ಉಂಬಳಗಳು, ದಿನವಿಡಿ ಸುರಿಯುವ ಮಳೆಗೆ ಸಜ್ಜಾಗಿರಬೇಕಷ್ಟೇ. ಇನ್ನು ಚಳಿಗಾಲ ಹಾಗೂ ಬೇಸಿಗೆಯಲ್ಲಂತೂ ಹೆಬ್ಬಾರಗುಡ್ಡ ಸ್ವರ್ಗವೇ ಸರಿ. ಬಾನಿಂದ ಭುವಿಗಿಳಿಯುವ ಮಂಜಿನ ಧಾರೆಯಲ್ಲಿ ಹೆಬ್ಬಾರಗುಡ್ಡದ ನೆತ್ತಿಯ ಮೇಲೆ ನಿಂತು ಸುತ್ತಲಿನ ದೃಶ್ಯವೈಭವವನ್ನು ಕಣ್ತುಂಬಿಕೊಂಡರೆ ಆಹಾ.
ವರ್ಷದಲ್ಲಿ ಒಂದೆರಡು ಸಂದರ್ಭದಲ್ಲಿ ಹೆಬ್ಬಾರ ಗುಡ್ಡದ ತುಂಬೆಲ್ಲ ಕೆಂಪು-ಹಳದಿ ಬಣ್ಣದ ಡ್ಯಾಫೋಡಿಲ್ಸ್ ರೀತಿಯ ಹೂವುಗಳು ಅರಳುತ್ತವೆ. ಈ ಸಂದ‘ರ್ದಲ್ಲಿ ಆ ದೇವರೇ ಭೂಮಿಯನ್ನು ಹೂಗಳಿಂದ ಕಸೂತಿ ಮಾಡಿದ್ದಾನೇನೋ ಅನ್ನಿಸುತ್ತದೆ. ಬೇಸಿಗೆಗೂ ಮುನ್ನ ಕೋಟ್ಯಂತರ ಏರೋಪ್ಲೇನ್ ಚಿಟ್ಟೆಗಳು ಈ ಊರಿನಲ್ಲಿ ಸಂತಾನಾಭಿವೃದ್ಧಿ ಮಾಡಿಕೊಂಡು ಹಾರಾಟ ನಡೆಸುವಾಗ ಕಾಣುವ ಚಿತ್ರಣದ ಬೆರಗೇ ಬೇರೆ. ಈ ಹೆಬ್ಬಾರಗುಡ್ಡದಲ್ಲಿ ಕೆಲ ಸಮಯಗಳಲ್ಲಿ ಪಾತರಗಿತ್ತಿಗಳು ತಮ್ಮ ಸಂತಾನಾಭಿವೃದ್ಧಿ ಕಾರ್ಯ ಕೈಗೊಳ್ಳುತ್ತವೆ. ಆ ಸಂದರ್ಭದಲ್ಲಿ ಕೆಂಪು, ಹಳದಿ, ಕಪ್ಪು, ಬಿಳಿ ಹೀಗೆ ಹತ್ತೆಂಟು ಬಣ್ಣದ ಪಾತರಗಿತ್ತಿಗಳು ಹಾರಾಟ ನಡೆಸುವ ಈ ಸ್ಥಳವನ್ನಂತೂ ಮರೆಯಲು ಸಾಧ್ಯವೇ ಇಲ್ಲ.
ಹೆಬ್ಬಾರಗುಡ್ಡಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ ಕೆರೆಮನೆ ಎನ್ನುವ ಹೆಬ್ಬಾರಗುಡ್ಡದ ರೀತಿಯಲ್ಲಿಯೇ ಇರುವ ಚಿಕ್ಕದೊಂದು ಊರು ಸಿಗುತ್ತದೆ. ಇಲ್ಲಿಯೇ ಒಂದು ಚಿಕ್ಕ ಜಲಪಾತವಿದೆ. ಈ ಜಲಪಾತವನ್ನು ಅದರ ನೆತ್ತಿಯ ಮೇಲಿನಿಂದಲೂ ಹಾಗೂ ಅದರ ಬುಡಕ್ಕೂ ಸುಲಭದಲ್ಲಿ ತೆರಳಿ ವೀಕ್ಷಣೆ ಮಾಡಬಹುದು. ಚಿಕ್ಕದೊಂದು ಹಳ್ಳದ ಸೃಷ್ಟಿಯಾಗಿರುವ ಈ ಜಲಪಾತದ ಸೊಬಗು ವರ್ಣಿಸಲಸದಳ.
ಈ ಊರಿಗೆ ಯಲ್ಲಾಪುರ ತಾಲೂಕಿನಿಂದ ಗುಳ್ಳಾಪುರ ಮೂಲಕ ಹಳವಳ್ಳಿಗೆ ಬಂದು, ನಡೆದು ಬರಬಹುದು. ಅಂಕೋಲಾ ಕಡೆಯಿಂದ ಬರುವವರು ರಾಮನಗುಳಿಯಲ್ಲಿ ಇಳಿದು ತೂಗುಸೇತುವೆ ದಾಟಿ ಬರಬಹುದು. ಹಿಲ್ಲೂರು ಬಳಿ ಸೇತುವೆ ದಾಟಿ ಅಚವೆಯಿಂದ ಅನಾದಿ ಕಾಲದಲ್ಲಿ ಮಾಡಿದ ಡಾಂಬರು ರಸ್ತೆಯೊಂದಿದೆ. ಈ ಮಾರ್ಗದಲ್ಲಿಯೂ ಬರಬಹುದು. ಹೆಬ್ಬಾರ ಗುಡ್ಡಕ್ಕೆ ಬರುವವರು ಸ್ಥಳೀಯರ ಮಾಹಿತಿಯನ್ನು ಪಡೆದು ಬರುವುದು ಉತ್ತಮ. ಇಲ್ಲವಾದಲ್ಲಿ ಕಾಡುಪಾಲಾಗುವುದು ನಿಶ್ಚಿತ.
ವಿಶೇಷ ಸೂಚನೆ :
ಪ್ರಕೃತಿ ನಡುವೆ ಇರುವ ಈ ಊರು ಶುದ್ಧವಾಗಿದೆ. ಸಮೃದ್ಧವಾಗಿದೆ. ನೋಡುವ ಆಸಕ್ತಿ ಉಳ್ಳವರು ಸುಮ್ಮನೇ ಹೋಗಿಬನ್ನಿ. ಈ ಊರನ್ನು ನೋಡಲು ಬರುವವರು ಹೊರಜಗತ್ತನ ಕಲ್ಮಶಗಳನ್ನು ಹಾಕುವ ಕಾರ್ಯ ಮಾಡಲೇಬೇಡಿ. ಸಮೃದ್ಧವಾಆಗಿ ಜೀವನ ಮಾಡುತ್ತಿರುವವರ ಬದುಕನ್ನು ಹಾಳುಮಾಡುವ ಪ್ರಯತ್ನವನ್ನಂತೂ ಊಹೂ ಮಾಡಲೇಬೇಡಿ. ಗ್ರಾಮಸ್ಥರು ಗ್ರಾಮಕ್ಕೆ ವಿದ್ಯುತ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಯಾರಾದರೂ ಕೂಡ ಸಹಾಯ ಮಾಡಬಹುದು. ಅದರ ಬದಲು ಪ್ರಕೃತಿಯನ್ನು ಹಾಳು ಮಾಡುವ, ಪ್ಲಾಸ್ಟಿಕ್ ಎಸೆಯುವ ಅಥವಾ ಇನ್ಯಾವುದೋ ಹಾಳು ಕಾರ್ಯ ಮಾಡಬೇಡಿ. ಅಷ್ಟಾದರೆ ಮಾತ್ರ ಹೆಬ್ಬಾರ ಗುಡ್ಡಕ್ಕೆ ಹೋಗಿ ಬನ್ನಿ.



---------------

(ಈ ಲೇಖನವು 15 ನವೆಂಬರ್ 2017ರ ಹೊಸದಿಗಂತ ಪತ್ರಿಕೆಯ ಅಂತರಗಂಗೆ ಪುರವಣಿಯ ಯುವರಾಗ ಅಂಕಣದಲ್ಲಿ ಪ್ರಕಟಗೊಂಡಿದೆ)


Tuesday, November 7, 2017

ಹಳೆಯ ಅಂಗಿ

ಹಳೆಯ ಅಂಗಿಗಳನ್ನೆಲ್ಲ
ಬಿಟ್ಟು ಬಿಡಬೇಕು...

ಒಂದೆರಡು ಗುಂಡಿ ಕಿತ್ತಿರುವ
ಬಗಲಲ್ಲಿ ಹರಿದಿರುವ
ಹಳೆಯ ಅಂಗಿಗಳನ್ನೆಲ್ಲ
ಬಿಟ್ಟೇ ಬಿಡಬೇಕು...

ಬೆನ್ನಲ್ಲಿ ಪಿಸಿದಿರುವ
ಜೇಬಿನ ಬಳಿ ಹಿಂಜಿರುವ
ಹಳೆಯ ಅಂಗಿಗಳನ್ನೆಲ್ಲ
ಬಿಟ್ಟೇಬಿಡಬೇಕು...

ತೊಳೆದರೂ ಹೋಗದಂತಹ
ಕೊಳೆ ಹೊತ್ತಿರುವ..
ಚಹಾದ ಅಂಟು ಮೆತ್ತಿರುವ ಹಳೇ
ಅಂಗಿಯನ್ನು ಬಿಡಲೇಬೇಕು...

ಹೌದು ಬಿಟ್ಟೇ ಬಿಡಬೇಕು..
ಮನಸ್ಸಿನೊಳಗಿನ
ಹಳೆಯ ಅಂಗಿಗಳನ್ನೆಲ್ಲ
ಬಿಟ್ಟೇ ಬಿಡಬೇಕು...