Wednesday, November 15, 2017

ಸಾಹಸಕ್ಕೂ ಸೈ.... ಸಂಭ್ರಮಕ್ಕೂ ಜೈ ಹೆಬ್ಬಾರಗುಡ್ಡ

ಒಂದೆಡೆ ಬಾನೆತ್ತರವನ್ನು ಹಬ್ಬಿ ನಿಂತಿರುವ ಪಶ್ಚಿಮ ಘಟ್ಟದ ಗಿರಿಸಾಲು. ಇನ್ನೊಂದೆಡೆಗೆ ಭವ್ಯ ಕರಾವಳಿಯ ನಯನಮನೋಹರ ನೋಟ. ಸಹ್ಯಾದ್ರಿಯ ಗಿರಿಪಂಕ್ತಿಯ ನಟ್ಟನಡುವೆ ಇರುವ ಹೆಬ್ಬಾರಗುಡ್ಡದಲ್ಲಿ ಇಂತದ್ದೊಂದು ಸುಂದರ ದೃಶ್ಯವನ್ನು ಆಸ್ವಾದಿಸಲು ಸಾಧ್ಯ. ನೋಡುಗರ ಮನಸ್ಸನ್ನು ಸದಾ ತನ್ನತ್ತ ಸೆಳೆದಿಡುವಂತಹ ದೃಶ್ಯ ವೈಭವ ಹೆಬ್ಬಾರಗುಡ್ಡದ್ದು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಮಚಾಯತಿಯ ಹೆಬ್ಬಾರಗುಡ್ದದಲ್ಲಿ ಸ್ವರ್ಗವೇ ಧರೆಗಿಳಿದು ಬಂದಿದೆ. ಇಲ್ಲಿಗೆ ಬಂದರೆ ಸಾಕು ಮಲೆನಾಡಿನ ಸೌಂದರ್ಯವೆಲ್ಲ ನಮ್ಮ ಮುಂದೆ ಬರುತ್ತದೆ. ಭೂದೇವಿ ಹೆಬ್ಬಾರಗುಡ್ಡದಲ್ಲಿ ಮೈಮರೆತು ನಿಂತಿದ್ದಾಳೇನೋ ಎನ್ನುವಷ್ಟು ಚೆನ್ನಾದ ಊರು ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಈ ಊರಿಗೆ ಬಂದರೆ ಏನುಂಟು ಏನಿಲ್ಲ? ಸೂರ್ಯೋದಯ, ಸೂರ್ಯಾಸ್ತವನ್ನು ಕಣ್ತುಂಬಿಸಿಕೊಳ್ಳುವಂತ ಪ್ರದೇಶ, ಅಂಕುಡೊಂಕಿನ ಕಡಿದಾದ ದಾರಿ, ಬಾನನ್ನು ಮುತ್ತಿಕ್ಕುವ ಮರಗಳು, ದಟ್ಟ ಕಾಡುಗಳು, ಮುಗ್ಧ ಜನ, ಮೈಮನಗಳನ್ನು ಕ್ರಿಯಾಶೀಲಗೊಳಿಸುವಂತಹ ಸುಂದರ ಜಲಪಾತ ಎಲ್ಲವೂ ಇದೆ.
ಇಂತಹ ಹೆಬ್ಬಾರಗುಡ್ಡಕ್ಕೆ ಹೋಗುವುದು ಸುಲಭದ ಸಂಗತಿಯಲ್ಲ ನೋಡಿ. ಬಸ್ ಮೂಲಕ ತೆರಳುವವರು ಕನಿಷ್ಟ ೮-೯ ಕಿಲೋಮೀಟರ್ ನಡೆಯುವುದಂತೂ ಕಡ್ಡಾಯವೇ. ಅದೂ ೮೦ ಡಿಗ್ರಿಗಿಂತ ಎತ್ತರದ ಗುಡ್ಡವನ್ನು ಒಂದೇ ಉಸಿರಿನಲ್ಲಿ ಹತ್ತಬೇಕು. ಇನ್ನು ವಾಹನಗಳನ್ನು ಕೊಂಡೊಯ್ಯುವವರಂತೂ ಇನ್ನೊಂದು ಸಾಹಸಕ್ಕೆ ಸಜ್ಜಾಗಿರಬೇಕು. ಕಡಿದಾದ ದಾರಿ, ಕೊರಕಲು ಬಿದ್ದ ರಸ್ತೆಗಳು ಬೈಕ್ ಸವಾರರನ್ನು ಸವಾಲಿಗೆ ಒಡ್ಡುತ್ತವೆ. ತಾಕತ್ತಿದ್ದರೆ ಬೈಕ್ ರೈಡ್ ಮಾಡು ಬಾ ಎಂದು ಕೈಬೀಸಿ ಕರೆಯುವಂತೆ ಭಾಸವಾಗುತ್ತದೆ. ಕಷ್ಟಪಟ್ಟು ಹತ್ತಿದರೆ ಮಾತ್ರ ಆಹಾ ಅಲ್ಲಿ ಕಾಣುವ ದೃಶ್ಯ ಮರೆಯಲು ಅಸಾಧ್ಯವಾದುದು. ಹೆಬ್ಬಾರ ಗುಡ್ಡದ ನೆತ್ತಿಯಿಂದ ಕಾಣ್ಣು ಹಾಯಿಸಿದರೆ ಕೆಳಗೆ ಕಾಣುವ ಗಂಗಾವಳಿ ನದಿಯ ಕಣಿವೆ ಎಲ್ಲರ ಚಿತ್ತವನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ದೂರದಲ್ಲಿ ಅಂಕುಡೊಂಕಾಗಿ ಹರಿಯುವ ಗಂಗಾವಳಿ ನದಿಯು ಚಿಕ್ಕಮಕ್ಕಳ ಅಸ್ತವ್ಯಸ್ತ ರೇಖೆಗಳನ್ನು ನೆನಪಿಗೆ ತರುತ್ತವೆ.
ಹೆಬ್ಬಾರಗುಡ್ಡದ ಇನ್ನೊಂದು ವಿಶೇಷವನ್ನು ಹೇಳಲೇಬೇಕು. ಈ ಊರಿನಲ್ಲಿ ಅಜಮಾಸು ೨೦-೩೦ ಕುಟುಂಬಗಳು ವಾಸ ಮಾಡುತ್ತಿವೆ. ಹೆಚ್ಚಿನವರು ಉತ್ತರ ಕನ್ನಡದಲ್ಲಿ ಮಾತ್ರ ಕಾಣಸಿಗುವಂತಹ ಸಿದ್ದಿಗಳು. ಈ ಊರಿನಲ್ಲಿ ಇರುವ ಹಲವು ವಿಶೇಷಗಳಲ್ಲಿ ಇನ್ನೊಂದನ್ನು ಹೇಳಲೇಬೇಕು. ಅಂದಹಾಗೇ ಈ ಊರಿಗೆ ತೆರಳುವವರನ್ನು ವಿದ್ಯುದ್ದೀಪಗಳು ಸ್ವಾಗತಿಸುವುದಿಲ್ಲ. ಮೊಬೈಲುಗಳು ರಿಂಗಣಿಸುವುದಿಲ್ಲ. ಚಿಮಣಿ ದೀಪಗಳು, ಅಪರೂಪಕ್ಕೊಮ್ಮೆ ಗ್ಯಾಸ್‌ಲೈಟುಗಳು ಬೆಳಗುತ್ತವೆ. ಹೆಬ್ಬಾರಗುಡ್ಡದಲ್ಲಿ ಒಂದೇ ಒಂದು ಮನೆಗಳಲ್ಲಿಯೂ ಕೂಡ ವಿದ್ಯುತ್ ದೀಪ ಇಲ್ಲ. ಅಚ್ಚರಿಯಾಗಬಹುದು. ನಿಜ. ಹೆಬ್ಬಾರಗುಡ್ಡದ ಜನರು ದಿನನಿತ್ಯ ಚಿಮಣಿ ಬೆಳಕಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಹೊರ ಜಗತ್ತಿನ ಹಂಗನ್ನು ಸೀಮಿತವಾಗಿ ಮಾತ್ರ ಬಳಕೆ ಮಾಡಿಕೊಳ್ಳುವ ಈ ಗ್ರಾಮಸ್ಥರು, ಸಿಲಿಕಾನ್ ಸಿಟಿಯಲ್ಲಿ ಬದುಕುತ್ತಿರುವ ಜನರಿಗಿಂತ ಸುಖಿಗಳು. ಸಂತೃಪ್ತರು.
ದಟ್ಟ ಕಾಡಿನ ನಡುವೆ ಪುಟ್ಟ ಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಿರುವ ಈ ಗ್ರಾಮಸ್ಥರು, ಹೊರ ಜಗತ್ತಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬರುತ್ತಾರೆ. ಕೆಲವೇ ಕೆಲವು ಅಗತ್ಯದ ವಸ್ತುಗಳಿಗೆ ಮಾತ್ರ ಅಂಗಡಿಗೆ ತೆರಳುತ್ತಾರೆ. ದಟ್ಟ ಮಳೆ ಸುರಿಯುವ ಆರು ತಿಂಗಳುಗಳ ಕಾಲ ಈ ಗ್ರಾಮಸ್ಥರು ಬೇರೆಡೆಗೆ ಬರುವುದು ಸವಾಲಿನ ಕೆಲಸವೇ ಹೌದು. ಡಟ್ಟ ಕಾಡನ್ನು, ಘಟ್ಟವನ್ನು ಪ್ರಯಾಸದಿಂದ ಹತ್ತಿಳಿದು ಬದುಕು ಕಾಣುತ್ತಿದ್ದಾರೆ. ಆದರೂ ಇವರ ಬದುಕು ತೃಪ್ತಿಯಿಂದ ಕೂಡಿದೆ. ಹೆಬ್ಬಾರ ಗುಡ್ಡದ ಸೌಂದರ್ಯ ಆಸ್ವಾದಿಸಲು ವರ್ಷದ ಎಲ್ಲ ಕಾಅಲದಲ್ಲಿಯೂ ಬರಬಹುದು. ಮಳೆಗಾಲದಲ್ಲಿ ಉಂಬಳಗಳು, ದಿನವಿಡಿ ಸುರಿಯುವ ಮಳೆಗೆ ಸಜ್ಜಾಗಿರಬೇಕಷ್ಟೇ. ಇನ್ನು ಚಳಿಗಾಲ ಹಾಗೂ ಬೇಸಿಗೆಯಲ್ಲಂತೂ ಹೆಬ್ಬಾರಗುಡ್ಡ ಸ್ವರ್ಗವೇ ಸರಿ. ಬಾನಿಂದ ಭುವಿಗಿಳಿಯುವ ಮಂಜಿನ ಧಾರೆಯಲ್ಲಿ ಹೆಬ್ಬಾರಗುಡ್ಡದ ನೆತ್ತಿಯ ಮೇಲೆ ನಿಂತು ಸುತ್ತಲಿನ ದೃಶ್ಯವೈಭವವನ್ನು ಕಣ್ತುಂಬಿಕೊಂಡರೆ ಆಹಾ.
ವರ್ಷದಲ್ಲಿ ಒಂದೆರಡು ಸಂದರ್ಭದಲ್ಲಿ ಹೆಬ್ಬಾರ ಗುಡ್ಡದ ತುಂಬೆಲ್ಲ ಕೆಂಪು-ಹಳದಿ ಬಣ್ಣದ ಡ್ಯಾಫೋಡಿಲ್ಸ್ ರೀತಿಯ ಹೂವುಗಳು ಅರಳುತ್ತವೆ. ಈ ಸಂದ‘ರ್ದಲ್ಲಿ ಆ ದೇವರೇ ಭೂಮಿಯನ್ನು ಹೂಗಳಿಂದ ಕಸೂತಿ ಮಾಡಿದ್ದಾನೇನೋ ಅನ್ನಿಸುತ್ತದೆ. ಬೇಸಿಗೆಗೂ ಮುನ್ನ ಕೋಟ್ಯಂತರ ಏರೋಪ್ಲೇನ್ ಚಿಟ್ಟೆಗಳು ಈ ಊರಿನಲ್ಲಿ ಸಂತಾನಾಭಿವೃದ್ಧಿ ಮಾಡಿಕೊಂಡು ಹಾರಾಟ ನಡೆಸುವಾಗ ಕಾಣುವ ಚಿತ್ರಣದ ಬೆರಗೇ ಬೇರೆ. ಈ ಹೆಬ್ಬಾರಗುಡ್ಡದಲ್ಲಿ ಕೆಲ ಸಮಯಗಳಲ್ಲಿ ಪಾತರಗಿತ್ತಿಗಳು ತಮ್ಮ ಸಂತಾನಾಭಿವೃದ್ಧಿ ಕಾರ್ಯ ಕೈಗೊಳ್ಳುತ್ತವೆ. ಆ ಸಂದರ್ಭದಲ್ಲಿ ಕೆಂಪು, ಹಳದಿ, ಕಪ್ಪು, ಬಿಳಿ ಹೀಗೆ ಹತ್ತೆಂಟು ಬಣ್ಣದ ಪಾತರಗಿತ್ತಿಗಳು ಹಾರಾಟ ನಡೆಸುವ ಈ ಸ್ಥಳವನ್ನಂತೂ ಮರೆಯಲು ಸಾಧ್ಯವೇ ಇಲ್ಲ.
ಹೆಬ್ಬಾರಗುಡ್ಡಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ ಕೆರೆಮನೆ ಎನ್ನುವ ಹೆಬ್ಬಾರಗುಡ್ಡದ ರೀತಿಯಲ್ಲಿಯೇ ಇರುವ ಚಿಕ್ಕದೊಂದು ಊರು ಸಿಗುತ್ತದೆ. ಇಲ್ಲಿಯೇ ಒಂದು ಚಿಕ್ಕ ಜಲಪಾತವಿದೆ. ಈ ಜಲಪಾತವನ್ನು ಅದರ ನೆತ್ತಿಯ ಮೇಲಿನಿಂದಲೂ ಹಾಗೂ ಅದರ ಬುಡಕ್ಕೂ ಸುಲಭದಲ್ಲಿ ತೆರಳಿ ವೀಕ್ಷಣೆ ಮಾಡಬಹುದು. ಚಿಕ್ಕದೊಂದು ಹಳ್ಳದ ಸೃಷ್ಟಿಯಾಗಿರುವ ಈ ಜಲಪಾತದ ಸೊಬಗು ವರ್ಣಿಸಲಸದಳ.
ಈ ಊರಿಗೆ ಯಲ್ಲಾಪುರ ತಾಲೂಕಿನಿಂದ ಗುಳ್ಳಾಪುರ ಮೂಲಕ ಹಳವಳ್ಳಿಗೆ ಬಂದು, ನಡೆದು ಬರಬಹುದು. ಅಂಕೋಲಾ ಕಡೆಯಿಂದ ಬರುವವರು ರಾಮನಗುಳಿಯಲ್ಲಿ ಇಳಿದು ತೂಗುಸೇತುವೆ ದಾಟಿ ಬರಬಹುದು. ಹಿಲ್ಲೂರು ಬಳಿ ಸೇತುವೆ ದಾಟಿ ಅಚವೆಯಿಂದ ಅನಾದಿ ಕಾಲದಲ್ಲಿ ಮಾಡಿದ ಡಾಂಬರು ರಸ್ತೆಯೊಂದಿದೆ. ಈ ಮಾರ್ಗದಲ್ಲಿಯೂ ಬರಬಹುದು. ಹೆಬ್ಬಾರ ಗುಡ್ಡಕ್ಕೆ ಬರುವವರು ಸ್ಥಳೀಯರ ಮಾಹಿತಿಯನ್ನು ಪಡೆದು ಬರುವುದು ಉತ್ತಮ. ಇಲ್ಲವಾದಲ್ಲಿ ಕಾಡುಪಾಲಾಗುವುದು ನಿಶ್ಚಿತ.
ವಿಶೇಷ ಸೂಚನೆ :
ಪ್ರಕೃತಿ ನಡುವೆ ಇರುವ ಈ ಊರು ಶುದ್ಧವಾಗಿದೆ. ಸಮೃದ್ಧವಾಗಿದೆ. ನೋಡುವ ಆಸಕ್ತಿ ಉಳ್ಳವರು ಸುಮ್ಮನೇ ಹೋಗಿಬನ್ನಿ. ಈ ಊರನ್ನು ನೋಡಲು ಬರುವವರು ಹೊರಜಗತ್ತನ ಕಲ್ಮಶಗಳನ್ನು ಹಾಕುವ ಕಾರ್ಯ ಮಾಡಲೇಬೇಡಿ. ಸಮೃದ್ಧವಾಆಗಿ ಜೀವನ ಮಾಡುತ್ತಿರುವವರ ಬದುಕನ್ನು ಹಾಳುಮಾಡುವ ಪ್ರಯತ್ನವನ್ನಂತೂ ಊಹೂ ಮಾಡಲೇಬೇಡಿ. ಗ್ರಾಮಸ್ಥರು ಗ್ರಾಮಕ್ಕೆ ವಿದ್ಯುತ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಯಾರಾದರೂ ಕೂಡ ಸಹಾಯ ಮಾಡಬಹುದು. ಅದರ ಬದಲು ಪ್ರಕೃತಿಯನ್ನು ಹಾಳು ಮಾಡುವ, ಪ್ಲಾಸ್ಟಿಕ್ ಎಸೆಯುವ ಅಥವಾ ಇನ್ಯಾವುದೋ ಹಾಳು ಕಾರ್ಯ ಮಾಡಬೇಡಿ. ಅಷ್ಟಾದರೆ ಮಾತ್ರ ಹೆಬ್ಬಾರ ಗುಡ್ಡಕ್ಕೆ ಹೋಗಿ ಬನ್ನಿ.



---------------

(ಈ ಲೇಖನವು 15 ನವೆಂಬರ್ 2017ರ ಹೊಸದಿಗಂತ ಪತ್ರಿಕೆಯ ಅಂತರಗಂಗೆ ಪುರವಣಿಯ ಯುವರಾಗ ಅಂಕಣದಲ್ಲಿ ಪ್ರಕಟಗೊಂಡಿದೆ)


No comments:

Post a Comment