Thursday, November 30, 2017

ಭಾರತದ ರಾಜ್ಯಗಳ ಕುರಿತು ಆಸಕ್ತಿಕರ ಅಂಶಗಳು

 
           ದೇಶದಾದ್ಯಂತ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯಗಳೂ ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಗಾತ್ರದಲ್ಲಿ, ಜನಸಂಖ್ಯೆ ಪ್ರಮಾಣದಲ್ಲಿ ಹೀಗೆ ಹಲವಾರು ಸಂಗತಿಗಳಲ್ಲಿ ವಿಭಿನ್ನತೆಯನ್ನು ಹೊಂದಿದೆ. ಅದೇ ರೀತಿ ದೇಶದ ಜಿಡಿಪಿಗೆ ಯಾವ ರಾಜ್ಯದ ಕೊಡುಗೆ ಎಷ್ಟಿದೆ? ಆರ್ಥಿಕವಾಗಿ ಉತ್ತಮ ಪ್ರಗತಿ ಹೊಂದಿದ ರಾಜ್ಯ ಯಾವುದು, ದೇಶದಲ್ಲಿಯೇ ಹಿಂದುಳಿದ ರಾಜ್ಯ ಯಾವುದು? ಅತಿ ಹೆಚ್ಚು ತಲಾದಾಯ (ಪರ್‌ಕ್ಯಾಪಿಟಾ ಇನ್ ಕಮ್) ಇರುವ ರಾಜ್ಯ ಯಾವುದು... ಹೀಗೆ ದೇಶದ ಆರ್ಥಿಕತೆಯ ದಿಕ್ಸೂಚಿಯಂತಿರುವ ಅಂಶಗಳನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುವುದು ಸಹಜವೇ. ಭಾರತವು ಒಕ್ಕೂಟ ವ್ಯವಸ್ಥೆಯೇ ಆದರೂ ಇಲ್ಲಿ ರಾಜ್ಯ ರಾಜ್ಯಗಳ ಮಧ್ಯವೇ ವಿವಿಧ ವಿಷಯಗಳಲ್ಲಿ  ಆರೋಗ್ಯಕರವಾದ ಸ್ಪರ್ಧೆ ಇದೆ. ಜತೆಗೆ ಆಯಾ ರಾಜ್ಯಕ್ಕೆ ಬೇಕಾದ ನೆರವು ಕೊಟ್ಟು, ಅಭಿವೃದ್ಧಿಗೆ ಸಹಕರಿಸಬೇಕಾದ ದೊಡ್ಡಣ್ಣನಂಥ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ ಎಂಬುದು ಕೂಡ ಅಷ್ಟೇ ಸತ್ಯ. ಕಾಲ ಕಾಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರವು ಅಗತ್ಯದ ಅನುದಾನಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳ ಬೆನ್ನಿಗೆ ನಿಲ್ಲುತ್ತಿದೆ. ಹೀಗಿದ್ದರೂ ರಾಜ್ಯಗಳು ತನ್ನದೇ ಆದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದೆ. ಕೆಲವು ರಾಜ್ಯಗಳು ಮುನ್ನಡೆಯಲು ಎಡವಿದೆ. ಅಂತಹ ವಿಶಿಷ್ಟ ಅಂಶಗಳನ್ನು ಇಲ್ಲಿಡಲಾಗಿದೆ.
ದೇಶದಲ್ಲಿ ಪ್ರತಿ ವರ್ಷ ವಿವಿಧ ರಾಜ್ಯಗಳ ಅಭಿವೃದ್ಧಿ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮಾಡಲಾಗುತ್ತದೆ. ಅಂತಿಮವಾಗಿ ಈ ಸಮೀಕ್ಷಾ ವರದಿಯನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡುತ್ತದೆ. ದೇಶದಲ್ಲಿನ ವಿವಿಧ ರಾಜ್ಯಗಳಿಗೆ ಅವುಗಳ ಪ್ರಗತಿಯ ಆಧಾರದ ಮೇಲೆ ವಿವಿಧ ರಾಂಕು ನೀಡಲಾಗಿದೆ. ಪ್ರತಿ ವರ್ಷ ಕೂಡ ಈ ರಾಜ್ಯಗಳು ಪಡೆದ ರ್ಯಾಂಕುಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬಹಳ ಆಸಕ್ತಿಕರ ಅಂಶಗಳನ್ನು ಒಳಗೊಂಡಿರುವ ಇದು ಪ್ರತಿಯೊಬ್ಬರಲ್ಲಿಯೂ ಕುತೂಹಲವನ್ನು ಹುಟ್ಟಿಸಬಲ್ಲದು. ದೇಶದಾದ್ಯಂತ ವಿವಿಧ ಸಂಸ್ಥೆಗಳು ದೇಶದಾದ್ಯಂತ ಸರ್ವೇಯನ್ನು ಕೈಗೊಂಡು ಈ ಮಾಹಿತಿಯನ್ನು ಕಲೆ ಹಾಕಿದೆ. 2016- 17ನೇ ಸಾಲಿನ ಈ ಅಂಕಿಗಳನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡಿದೆ.

ಅತಿ ದೊಡ್ಡ ಆರ್ಥಿಕತೆ ಇರುವಂಥ ರಾಜ್ಯಗಳು

ಭಾರತದ ಅತ್ಯಂತ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಕೊಟ್ಟಕೊನೆಯ ಸ್ಥಾನದಲ್ಲಿದೆ. ಲಕ್ಷದ್ವೀಪದ ವಾರ್ಷಿಕ ಆದಾಯ 407 ಕೋಟಿ ರೂ.ಗಳಾಗಿದೆ. ಸಾಮಾನ್ಯವಾಗಿ ಭೌಗೋಳಿಕವಾಗಿ ವಿಶಾಲವಾಗಿರುವ ರಾಜ್ಯಗಳ ಆರ್ಥಿಕತೆ ಹೆಚ್ಚಿದೆ. ಅದೇ ರೀತಿ ಸಣ್ಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕತೆ ಕಡಿಮೆಯಿದೆ.

ಮಹಾರಾಷ್ಟ್ರ -25.35 ಲಕ್ಷ ಕೋಟಿ
ಉತ್ತರಪ್ರದೇಶ  - 14.46 ಲಕ್ಷ ಕೋಟಿ
ತಮಿಳುನಾಡು  - 13.39 ಲಕ್ಷ ಕೋಟಿ
ಕರ್ನಾಟಕ  - 12.80 ಲಕ್ಷ ಕೋಟಿ
ಗುಜರಾತ್ - 12.75 ಲಕ್ಷ ಕೋಟಿ

ಅತಿ ಹೆಚ್ಚು ತಲಾದಾಯ ಹೊಂದಿದ ರಾಜ್ಯಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸಿಸುತ್ತಿರುವವರ ತಲಾ ಆದಾಯವು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದುಘಿ, ದೆಹಲಿ ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮವೇ ಮೂಲ ಆದಾಯವಾಗಿರುವ ಗೋವಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಯಾದಿಯಲ್ಲಿ ಮಣಿಪುರ ಕೊಟ್ಟ ಕೊನೆಯ ಸ್ಥಾನದಲ್ಲಿದೆ. ಬಿಹಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ತಲಾದಾಯ ಹನ್ನೊಂದು ಪಟ್ಟು ಹೆಚ್ಚಿದೆ.


ದೆಹಲಿ -5,55,882
ಗೋವಾ -4,66,632
ಚಂಡೀಘಡ- 3,75,454
ಸಿಕ್ಕೀಂ  -2,77,282
ಪುದುಚ್ಚೇರಿ - 2,36,450

ಅತಿ ವೇಗದ ಅಭಿವೃದ್ಧಿ ದಾಖಲಿಸುತ್ತಿರುವ ರಾಜ್ಯಗಳು
2005ರಿಂದ 2015ರವರೆಗಿನ ಅವಯಲ್ಲಿ ಅಭಿವೃದ್ಧಿ ದಾಖಲಿಸಿದ ಯಾದಿಯಲ್ಲಿ ಈಶಾನ್ಯ ರಾಜ್ಯ ಸಿಕ್ಕೀಂ ಮೊದಲ ಸ್ಥಾನ ಪಡೆದುಕೊಂಡಿದೆ. ಈಶಾನ್ಯ ಭಾಗಕ್ಕೆ ಸೇರಿದ ಅಸ್ಸಾಂ, ತ್ರಿಪುರ ಹಾಗೂ ನಾಗಾಲ್ಯಾಂಡ್‌ಗಳು ಕೊಟ್ಟಕೊನೆಯ ಸ್ಥಾನದಲ್ಲಿವೆ.

ಸಿಕ್ಕೀಂ  -ಶೇ 26.6
ಉತ್ತರಾಖಂಡ -ಶೇ 19.57
ಬಿಹಾರ -ಶೇ 18.10
ತೆಲಂಗಾಣ  -ಶೇ 17.92
ರಾಜಸ್ಥಾನ  -ಶೇ 16.74

ಒಟ್ಟಾರೆ ಅಭಿವೃದ್ಧಿ ದಾಖಲಿಸಿದ ರಾಜ್ಯಗಳ ವಿವರ
ದೇಶದ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಸರ್ವತೋಮುಖ ಅಭೀವೃದ್ಧಿ ಸಾಸಿದ್ದರೆ, ಛತ್ತೀಸಘಡ ಕೊನೆಯ ಸ್ಥಾನದಲ್ಲಿದೆ. ತೆಲಂಗಾಣವು ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಜಾರ್ಖಂಡ್ ನಂತರದ ಸ್ಥಾನದಲ್ಲಿದೆ. ಸಾಕ್ಷರತೆಯಲ್ಲಿ ಕೇರಳ ಹಾಗೂ ಲಕ್ಷದ್ವೀಪಗಳು ಮೊದಲೆರಡು ಸ್ಥಾನದಲ್ಲಿವೆ. ರಾಜ್ಯಾದ್ಯಂತ ಆರೋಗ್ಯ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ರಾಷ್ಟ್ರಗಳಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಾನೂನು ಹಾಗೂ ಸುವ್ಯವಸ್ಥೆ ಕಲ್ಪಿಸಿದ ರಾಜ್ಯಗಳ ಯಾದಿಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಕೊಟ್ಟಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಿಮಾಚಲ ಪ್ರದೇಶವು ಅತ್ಯಂತ ಹೆಚ್ಚಿನ ವೌಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ.ಆಡಳಿತದಲ್ಲಿ ಕೇರಳ ಮೊದಲ ಹಾಗೂ ಬಿಹಾರ ಕೊನೆಯ ಸ್ಥಾನದಲ್ಲಿದೆ. ಸಮಗ್ರ ಅಭಿವೃದ್ಧಿ ಯಲ್ಲಿ ಹರ್ಯಾಣ ಮೊದಲ ಹಾಗೂ ಪ್ರವಾಸೋದ್ಯಮದಲ್ಲಿ  ಹರ್ಯಾಣ ಮತ್ತು ಗೋವಾಗಳು ಮೊದಲೆರಡು ಸ್ಥಾನ ಪಡೆದುಕೊಂಡಿವೆ. ಪರಿಸರ ಹಾಗೂ ಸ್ವಚ್ಛತೆಗೆ ತೆಲಂಗಾಣ ರಾಜ್ಯವು ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ.

ಒಟ್ಟು ಸಾಧನೆ: ಹಿಮಾಚಲ ಪ್ರದೇಶ
ಆರ್ಥಿಕತೆ: ತೆಲಂಗಾಣ
ಕೃಷಿ: ಮಧ್ಯ ಪ್ರದೇಶ
ಸಾಕ್ಷರತೆ : ಕೇರಳ
ಆರೋಗ್ಯ: ಆಂಧ್ರ ಪ್ರದೇಶ
ಮೂಲಸೌಕರ್ಯ:  ಹಿಮಾಚಲ ಪ್ರದೇಶ
ಕಾನೂನು ಮತ್ತು ಸುವ್ಯವಸ್ಥೆ: ಗುಜರಾತ್
ಆಡಳಿತ: ಕೇರಳ
ಸಮಗ್ರ ಅಭಿವೃದ್ಧಿ:  ಹರಿಯಾಣ
ಪ್ರವಾಸೋದ್ಯಮ:  ಹರಿಯಾಣ
ಉದ್ಯಮಶೀಲತೆ:  ಕರ್ನಾಟಕ
ಪರಿಸರ ಮತ್ತು ಸ್ವಚ್ಛತೆ: ತೆಲಂಗಾಣ

ಸಣ್ಣ ರಾಜ್ಯಗಳ ಸಾ‘ನೆ
ಭೌಗೋಳಿಕವಾಗಿ ದೊಡ್ಡದಾಗಿರುವ ರಾಜ್ಯಗಳ ಅಭಿವೃದ್ಧಿ ಸುಲಭವಲ್ಲ. ಆದರೆ ಸಣ್ಣ ರಾಜ್ಯಗಳ ಅಭಿವೃದ್ಧಿ ಕಾರ್ಯ ಸಲೀಸು ಎನ್ನುವ ಭಾವನೆಗಳಿವೆ. ಭೌಗೋಳಿಕವಾಗಿ ಚಿಕ್ಕದಾಗಿರುವ ರಾಜ್ಯಗಳು ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿವೆ. ದಕ್ಷಿಣ ಭಾರತದಲ್ಲಿರುವ ಕೇಂದ್ರಾಡಳಿತ ಪ್ರದೇಶ ಪುದುಚ್ಚೇರಿ ಸರ್ವತೋಮುಖ ಅಭಿವೃದ್ದಿಯನ್ನು ಹೊಂದಿರುವ ಪ್ರದೇಶ ಎನ್ನುವ ಹೆಸರನ್ನು ಪಡೆದುಕೊಂಡಿದೆ.

ಒಟ್ಟಾರೆ ಅಭಿವೃದ್ಧಿ: ಪುದುಚೆರಿ
ಆರ್ಥಿಕತೆ: ದೆಹಲಿ
ಕೃಷಿ: ನಾಗಾಲ್ಯಾಂಡ್
ಶಿಕ್ಷಣ: ಅರುಣಾಚಲ ಪ್ರದೇಶ
ಆರೋಗ್ಯ: ದೆಹಲಿ
ಮೂಲಸೌಕರ್ಯ: ಸಿಕ್ಕಿಂ
ಕಾನೂನು ಮತ್ತು ಸುವ್ಯವಸ್ಥೆ: ಪುದುಚೆರಿ
ಪ್ರವಾಸೋದ್ಯಮ: ಪುದುಚೆರಿ

ಬಡ ರಾಜ್ಯಗಳು ಹಾಗೂ ಬಡತನದ ಪ್ರಮಾಣ

ಖನಿಜ ಸಂಪತ್ತು ಹೇರಳವಾಗಿದೆ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿರುವ ಛತ್ತೀಸ್‌ಘಡ ದೇಶದ ಅತ್ಯಂತ ಬಡ ರಾಜ್ಯ ಎನ್ನುವ ಕುಖ್ಯಾತಿಗೂ ಪಾತ್ರವಾಗಿದೆ. ಛತ್ತೀಸ್‌ಘಡದ ಪಕ್ಕದಲ್ಲೇ ಇರುವ ಜಾರ್ಖಂಡ್ ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗೋವಾ ಈ ಯಾದಿಯಲ್ಲಿ ಕೊಟ್ಟ ಕೊನೆಯ ಸ್ಥಾನದಲ್ಲಿದ್ದುಘಿ, ಅತ್ಯಂತ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ.

ಛತ್ತೀಸ್ ಗಢ  ಶೇ 39.9
ಜಾರ್ಖಂಡ್  ಶೇ 37
ಮಣಿಪುರ  ಶೇ 36.9
ಅರುಣಾಚಲ ಪ್ರದೇಶ  ಶೇ 34.7
ಬಿಹಾರ ಶೇ 33.7
ಒಡಿಶಾ ಶೇ 32.6
ಅಸ್ಸಾಂ ಶೇ 32
ಮಧ್ಯ ಪ್ರದೇಶ  ಶೇ 31.7
ಉತ್ತರಪ್ರದೇಶ  ಶೇ 29.4
ಕರ್ನಾಟಕ  ಶೇ 20.9

ಶ್ರೀಮಂತ ರಾಜ್ಯಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ

ಪ್ರವಾಸಿ ರಾಜ್ಯ ಗೋವಾ ದೇಶದ ಅತ್ಯಂತ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ. ಈ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 5.1 ರಷ್ಟು ಮಾತ್ರ ಇದೆ. ಈ ಯಾದಿಯಲ್ಲಿ ಕೊಟ್ಟ ಕೊನೆಯ ಸ್ಥಾನವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರಹವೇಲಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.39.31ರಷ್ಟು.

ಗೋವಾ  ಶೇ 5.1
ಕೇರಳ  ಶೇ 7.1
ಸಿಕ್ಕಿಂ  ಶೇ 8.2
ಹಿಮಾಚಲ ಪ್ರದೇಶ ಶೇ 8.1
ಪಂಜಾಬ್ ಶೇ 8.3
ಆಂಧ್ರ ಪ್ರದೇಶ 9.2
ಪುದುಚೆರಿ ಶೇ 9.7
ದೆಹಲಿ  ಶೇ 10
ಜಮ್ಮು ಮತ್ತು ಕಾಶ್ಮೀರ ಶೇ 10.4
ಹರಿಯಾಣ ಶೇ 11.2


(ಈ ಲೇಖನವು ಡಿ.30, 2017ರಂದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

No comments:

Post a Comment