Friday, July 11, 2014

ದುಬಾಯ್ ರಾಜು


      `ದುಬಾಯ್ ರಾಜು' ಇಂತದ್ದೊಂದು ಹೆಸರು ರಾಜೇಂದ್ರನಿಗೆ ಅಂಟಿಕೊಳ್ಳಲು ದೊಡ್ಡದೊಂದು ಹಿನ್ನೆಲೆಯೇ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸುಖಾ ಸುಮ್ಮನೆ ದುಬಾಯಿ ರಾಜು ಎಂದು ಸಾರ್ವಜನಿಕರೂ ಆತನನ್ನು ಕರೆದಿಲ್ಲ ಬಿಡಿ. ತನ್ನೂರನ್ನು ಬಿಟ್ಟು ದುಬಾಯಿಗೆ ಹೋಗಿ ನಾಲ್ಕೆಂಟು ವರ್ಷ ಕೆಲಸ ಮಾಡಿ ಬಂದ ಕಾರಣಕ್ಕಾಗಿಯೇ ಆತನನ್ನು ದುಬಾಯಿ ರಾಜು ಎಂದು ಕರೆಯಲಾರಂಭಿಸಿದ್ದು.
          ರಾಜೇಂದ್ರ ಎನ್ನುವ ಹೆಸರಿನ ಮೂರ್ನಾಲ್ಕು ಮಂದಿ ಆತನ ಊರಿನಲ್ಲಿ ಇದ್ದರು. ಒಬ್ಬ ರಾಜೇಂದ್ರನನ್ನು ಕರೆದರೆ ಮತ್ತೊಬ್ಬ ಮಾತನಾಡುತ್ತಿದ್ದ, ಮತ್ಯಾರನ್ನೋ ಕರೆದರೆ ಇನ್ನೊಬ್ಬ. ಈ ಗೊಂದಲ ತಪ್ಪಿಸಲೋಸುಗ ಪ್ರತಿಯೊಬ್ಬ ರಾಜೇಂದ್ರನಿಗೂ ಒಂದೊಂದು ಅಡ್ಡ ಹೆಸರನ್ನು ಇಟ್ಟು ಕರೆಯಲು ಪುರಜನರು ಮುಂದಾಗಿದ್ದರು. ಹೀಗಾಗಿ ಇರುವ ಮೂರ್ನಾಲ್ಕು ರಾಜೇಂದ್ರರೂ ಕೆಂಪು ರಾಜೇಂದ್ರ, ಕುಳ್ಳ ರಾಜೇಂದ್ರ, ತುದಿಮನೆ ರಾಜೇಂದ್ರ ಹಾಗೂ ದುಬಾಯ್ ರಾಜೇಂದ್ರ ಎಂದು ಕರೆಸಿಕೊಳ್ಳಲಾರಂಭಿಸಿದ್ದರು. ಈ ಎಲ್ಲ ರಾಜೇಂದ್ರರ ಪೈಕಿ ಈತ ಎಲ್ಲರಿಗೂ ಸ್ವಲ್ಪ ಆಪ್ತನಾದ ಕಾರಣ ಹಾಗೂ ತನ್ನ ವಿಲಕ್ಷಣ ಬುದ್ಧಿಯಿಂದ ದುಬಾಯ್ ರಾಜು ಆಗಿ ಬದಲಾಗಿದ್ದ.
           ದುಬಾಯ್ ರಾಜು ಒಂತರಾ ವ್ಯಕ್ತಿ. ಮಜವಾಗಿರುತ್ತಿದ್ದ. ಇತರರನ್ನು ನಗಿಸುವ ಕಾರ್ಯ ಮಾಡುತ್ತಿದ್ದ. ಹೆಂಗಸರಿದ್ದರಂತೂ ಪುಂಖಾನುಪುಂಕವಾಗಿ ಎರಡರ್ಥದ ಶಬ್ದಗಳನ್ನು ವಗಾಯಿಸಿ ವಗಾಯಿಸಿ ಇತರರು ನಗುವ ಮುನ್ನ ತಾನೇ ನಕ್ಕು ಹಾಸ್ಯಕ್ಕೆ ಕಾರಣವಾಗುತ್ತಿದ್ದ, ಹಾಸ್ಯಾಸ್ಪದವಾಗುತ್ತಿದ್ದ. ಸಾಮಾನ್ಯವಾಗಿ ದುಬಾಯಿ ರಾಜು ಯಾರ ಬಳಿಯಾದರೂ ಮಾತನಾಡಲು ಬಂದ ಎಂದರೆ ಎದುರಿಗಿದ್ದವರು ಮಾರು ದೂರ ನಿಂತುಕೊಂಡೇ ಮಾತನಾಡುತ್ತಿದ್ದರು. ಆತನ ಬಾಯಲ್ಲಿ ಸದಾಕಾಲ ಕವಳವೋ ಅಥವಾ ಗುಟ್ಕಾವೋ ಇದ್ದೇ ಇರುತ್ತಿತ್ತು. ಒಂದರೆಘಳಿಗೆಯೂ ಆತನ ಬಾಯಿ ಖಾಲಿಯಿರುತ್ತಿರಲಿಲ್ಲ. ಹೀಗಾಗಿ ಆತನ ಬಾಯಿಯನ್ನು ಎಲ್ಲರೂ ಜೈವಿಕ ಗ್ರೈಂಡರ್ ಎಂದೇ ಕರೆಯುತ್ತಿದ್ದರು. ಕವಳವನ್ನು ಜಗಿದು ಜಗಿದೂ ಆತನ ತುಟಿ, ನಾಲಿಗೆ ಹಾಗೂ ಹಲ್ಲುಗಳು ತಮ್ಮ ನೈಜಬಣ್ಣವನ್ನು ಅದ್ಯಾವುದೋ ಶತಮಾನದಲ್ಲಿ ಕಳೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಆತನ ಬಾಯಿ, ಹಲ್ಲು ಹಾಗೂ ತುಟಿ ಈ ಮೂರೂ ಒಂದೇ ಬಣ್ಣವಾಗಿದ್ದವು.
            ದುಬಾಯ್ ರಾಜು ದುಬಾಯಿಯಲ್ಲಿ ಅದೇನು ಕೆಲಸ ಮಾಡಿದ್ದನೋ ಗೊತ್ತಿಲ್ಲ. ಆತ ದುಬಾಯಿಗೆ ಹೋಗುವ ಮುನ್ನ ಹೇಗಿದ್ದ, ಅಲ್ಲಿ ಹೋಗಿದ್ದೇನು ಮಾಡಿದ ಆ ನಂತರ ಬಂದು ಏನು ಮಾಡುತ್ತಿದ್ದಾನೆ ಎಂದು ಗಮನಿಸಿದವರೂ ಇದ್ದಾರೆ. ದುಬಾಯಿ ರಾಜುವನ್ನು ಗಮನಿಸಿದ ಮಹನೀಯರನ್ನು ವಿಚಾರಿಸಿದರೆ ಯಾವುದಾದರೂ ಪಿಎಚ್ಡಿಯನ್ನು ಮಂಡಿಸಬಹುದಾದಷ್ಟು ಸರಕು ಲಭ್ಯವಾಗುತ್ತದೆ. ದುಬಾಯಿಬಾಬು ಆಗಿನಕಾಲಕ್ಕೇ ಎಲ್ಲರಿಗಿಂತ ಹೆಚ್ಚು ಓದಿದ್ದ. ಆದರೆ  ಆತ ಬದುಕಿನ ದಾರಿಯಲ್ಲಿ ಏಳು ಬೀಳು ಕಾಣಲಾರಂಭಿಸಿದಾಗಲೇ ತಾನು ಓದಿದ್ದು ಯಾವ ಮೂಲೆಗೂ ಸಾಲುವುದಿಲ್ಲ ಎಂದುಕೊಂಡಿದ್ದು. ಹೀಗಿದ್ದಾಗಲೇ ಅವನಿಗೆ ಯಾರೋ ದುಬಾಯಿಯ ಕನಸಿನ ಬೀಜ ಬಿತ್ತಿದ್ದರು. ದುಬಾಯಿಯಲ್ಲಿ ಎಣ್ಣೆ ಬಾವಿಗಳಿವೆ. ಅಲ್ಲಿ ಹೋಗಿ ಕೆಲಸ ಮಾಡಿದರೆ ಭಾರತದ ಒಂದು ವರ್ಷಕ್ಕಾಗುವಷ್ಟು ಹಣವನ್ನು ಒಂದೇ ತಿಂಗಳಲ್ಲಿ ದುಡಿಯಬಹುದು ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದನೋ. ಈತ ಆ ಕುರಿತು ತನ್ನ ಶತಪ್ರಯತ್ನವನ್ನು ಆರಂಭಿಸಿದ್ದ.
            ದುಬಾಯಿಗೆ ಹೋಗಬೇಕು ಎಂದರೆ ಸುಮ್ಮನೆ ಆಗಿಬಿಡುತ್ತದೆಯೇ? ಪಾಸ್ಪೋರ್ಟು, ವಿಸಾ ಎಲ್ಲಾ ಆಗಬೇಕು, ಹಣಕಾಸಿಗೆ ಕೊರತೆಯಿರಲಿಲ್ಲ. ಆದರೆ ಈ ಎಲ್ಲವುಗಳಿಗಿಂತ ಪ್ರಮುಖ ಸಮಸ್ಯೆಯೊಂದಿತ್ತು. ರಾಜುವಿಗೆ ಇಂಗ್ಲೀಷು ಬರುತ್ತಲೇ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಂಗ್ಲೀಷಿನಲ್ಲಿ ಮಾತನಾಡಬೇಕು ಎಂದು ಯಾರೋ ರಾಜೇಂದ್ರನ ಕಿವಿ ಕಚ್ಚಿಬಿಟ್ಟಿದ್ದರು. ಅದಕ್ಕೆ ಆತ ಇಂಗ್ಲೀಷನ್ನು ಕಲಿಯಲು ಸಕಲ ರೀತಿಯಿಂದ ಪ್ರಯತ್ನವನ್ನು ಆರಂಭಿಸಿದ್ದ. ಹಳ್ಳಿಗನಿಗೆ ಇಂಗ್ಲೀಷು ಸುಲಭಕ್ಕೆ ಒಗ್ಗಲಿಲ್ಲ ಬಿಡಿ. ಕೊನೆಗೆ ಅದ್ಯಾರೋ ಬರೆದುಕೊಟ್ಟ ಇಂಗ್ಲೀಷ್ ಚೀಟಿಯನ್ನು ಉರು ಹೊಡೆದು ಅಲ್ಪ ಮಟ್ಟಿಗೆ ಇಂಗ್ಲೀಷು ಬಲ್ಲವರ ರೀತಿಯಲ್ಲಿ ಆಡತೊಡಗಿದ್ದ.
            ದುಬಾಯಿಯಲ್ಲಿ ಆತ ಅದೇನು ಕೆಲಸ ಮಾಡಿದನೋ ದೇವರಿಗೇ ಪ್ರೀತಿ.  ಕೇಳಿದವರ ಬಳಿಯಲ್ಲೆಲ್ಲ ಯಾವುದೋ ಆಯಿಲ್ ಕಂಪನಿಯ ಮ್ಯಾನೇಜರ್ ಆಗಿದ್ದೆನೆಂದು ಹೇಳುತ್ತಿದ್ದ. ಸರಿ ಸುಮಾರು ನಾಲ್ಕು ವರ್ಷಗಳಿಗಿಮತಲೂ ಅಧಿಕ ಸಮಯ ಅಲ್ಲಿದ್ದ. ಬರುವಾಗ ದುಬಾಯಿ ದೊರೆಗಳು ಬೇಡ ಎಂದು ಬಿಸಾಕಿದ್ದನೆಲ್ಲ ಭಕ್ತಿಯಿಂದ ಎತ್ತಿಕೊಂಡು ಬಂದಿದ್ದ. ಈ ನಾಡಿನಲ್ಲಿ ಆತನನ್ನು ವಿಸ್ಮಯದಿಂದ ನೋಡಿದ್ದರು.
           ದುಬಾಯಿ ರಾಜು ದುಬಾಯಿಗೆ ಹೋದವನು ಇದ್ದಕ್ಕಿದ್ದಂತೆ ಮನೆಗೆ ವಾಪಾಸು ಬಂದಿರುವುದರ ಕುರಿತು ಹಲವು ರೀತಿಯಲ್ಲಿ ತರ್ಕಿಸುತ್ತಾರೆ. ಮದುವೆಯಾಗಬೇಕು ಎನ್ನುವ ಕಾರಣಕ್ಕೆ ವಾಪಾಸು ಬಂದ ಎಂದು ಒಂದಿಬ್ಬರು ಹೇಳಿದರೆ ಅವಿಭಕ್ತ ಕುಟುಂಬವಾದ ಮನೆಯಲ್ಲಿ ಹಿಸೆ ಆದರೆ ಆಸ್ತಿಯಲ್ಲಿ ಪಾಲು ಕೇಳಬೇಕು ಎನ್ನುವ ಕಾರಣಕ್ಕಾಗಿ ಮನೆಗೆ ಮರಳಿ ಬಂದ ಎಂದು ಹೇಳುವವರೂ ಇದ್ದಾರೆ. ಇವರು ಹೀಗಂದಿದ್ದಕ್ಕೆ ತಲೆದೂಗುವವರು ಸಾಕಷ್ಟು ಜನರಿರುವ ಕಾರಣ ತರ್ಕಕ್ಕೆ ಬೆಲೆ ಬಂದಿದೆ. ಆ ತರ್ಕ ಬಹುಮಟ್ಟಿಗೆ ಸತ್ಯವೂ ಆಗಿರುವುದರಿಂದ ತರ್ಕಿಸಿದ ಮಹನೀಯರೆಲ್ಲ ತರ್ಕಶಾಸ್ತ್ರ ಪಂಡಿತರೆಂದು ಕರೆಸಿಕೊಳ್ಳಲು ಆರಂಭಿಸಿದ್ದಾರೆ.
           ದುಬಾಯ್ ರಾಜು ಕೆಲವೊಂದು ದುರ್ಗುಣಗಳನ್ನು ಹೊಂದಿದ್ದಾನೆ ಎನ್ನುವುದನ್ನು ಬಿಟ್ಟರೆ ಬಹುತೇಕ ಒಳ್ಳೆಯವನೇ. ಇಲ್ಲಿನದನ್ನು ಅಲ್ಲಿಗೆ ಹೇಳುವುದು, ಅಲ್ಲಿನದ್ದನ್ನು ಇಲ್ಲಿಗೆ ಹೇಳುವುದು ಆತನ ಪ್ರಮುಖ ದುರ್ಗುಣ. ಆದ್ದರಿಂದ ದುಬಾಯ್ ರಾಜುವಿನ ಆರಲ್ಲಿ ನಾರದ, ಶಕುನಿ ಮುಂತಾದ ಹಲವಾರು ಬಿರುದುಗಳನ್ನೂ ಹೊಂದಿದ್ದಾನೆ. ಈತನ ಕಾರಣದಿಂದಲೇ ಊರಲ್ಲಿ ಮೂರ್ನಾಲ್ಕು ಮಹಾಯುದ್ಧಗಳೂ ಜರುಗಿವೆ. ಸಾಮಾನ್ಯವಾಗಿ ಆತ ಯಾರು ಯಾರಿಗೆ ಆಗುವುದಿಲ್ಲವೋ ಅಂತವರ ಪಟ್ಟಿ ಮಾಡಿಕೊಂಡು ಅವರ ಹಾಗೂ ಇವರ ನಡುವಿನ ವಕ್ತಾರನಾಗಿಯೂ, ಅವರ ಮಾತನ್ನು ಇವರಿಗೆ ತಿಳಿಸಿ, ಇವರ ಮಾತನ್ನು ಅವರಿಗೆ ತಿಳಿಸಿ ತನ್ನ ಬೇಳೆಯನ್ನು ಬೇಯಿಸಿಕೊಂಡವನು. ಆತನ ಊರಿನಲ್ಲಿ ದುಬಾಯಿ ರಾಜುವಿನ ಈ ದುರ್ಗುಣ ಬಹು ದಿನಗಳ ವರೆಗೆ ಯಾರಿಗೂ ತಿಳಿದೇ ಇರಲಿಲ್ಲ. ಕೊನೆಗೊಂದು ದಿನ ಮಹಾನುಭಾವರೊಬ್ಬರು ಹೊಂಚು ಹಾಕಿ ಗೊತ್ತು ಮಾಡಿದಾಗ ದುಬಾಯಿ ರಾಜು `ನಾನವನಲ್ಲ.. ನಾನವನಲ್ಲ..' ಎಂದು ಹುಯ್ಯಲೆಬ್ಬಿಸಿ, ಕಿಡಿಕಾರಿ, ಹಲುಬಿಕೊಂಡು ಗಲಾಟೆಯನ್ನೂ ಮಾಡಿದ್ದಿದೆ.
            ದುಬಾಯ್ ರಾಜುವಿನ ಮನೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಆಸ್ತಿ ಗಲಾಟೆಯ ಹಿಂದಿನ ರೂವಾರಿ ದುಬಾಯಿ ರಾಜು ಎನ್ನುವ ವಿಷಯವನ್ನು ಮುಚ್ಚಿಟ್ಟರೂ ಸದ್ದಿಲ್ಲದೆ ಜಗಜ್ಜಾಹೀರಾಗಿಬಿಟ್ಟಿದೆ. ಇದು ಖಂಡಿತ ದುಬಾಯಿ ರಾಜುವಿನ ತಪ್ಪಲ್ಲ ಬಿಡಿ. ದುಬಾಯ್ ರಾಜುವಿನ ಮನೆಯಲ್ಲಿ ಆರೆಂಟು ಜನ ಸದಸ್ಯರು. ಅಂತವರು ಹಿಸೆಗಾಗಿ ಮನೆಯಲ್ಲಿ ಕಿತ್ತಾಡಿದರೆ ಅದು ಜಗತ್ತಿಗೆ ತಿಳಿಯುವುದಿಲ್ಲವೇ.. ಆದರೆ ಎಲ್ಲವುಗಳಿಗೂ ದುಬಾಯ್ ರಾಜುವೇ ಮೂಲ ಎಂದು ಗೂಬೆ ಕೂರಿಸಲು ಆತನ ದುರ್ಗುಣವೇ ಕಾರಣ.
           ತನ್ನೂರಿನಲ್ಲಿ ಸರ್ಕಾರ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲಿ ಅದರಲ್ಲಿ ಮೂಗು ತೂರಿಸುವುದರಲ್ಲಿ ದುಬಾಯಿರಾಜು ಶತಸಿದ್ಧ. ಕಾಮಗಾರಿಗಳಲ್ಲಿ ಹುಳುಕು ಹುಡುಕುವ ದುಬಾಯಿ ರಾಜು ತಾನು ಅದನ್ನು ಜಗತ್ತಿನ ಎದುರು ಇಡುವ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ. ತನ್ನೂರಿನ ಇತರರ ಬಳಿ ಹೇಳಿಕೊಂಡು ನೀನು ಆ ಕುರಿತು ಮಾತನಾಡು ಅದು ಸರಿಯಿಲ್ಲ, ನೀನು ಈ ಕುರಿತು ಮಾತನಾಡು ಇದು ಸರಿಯಿಲ್ಲ ಎಂದು ಹೇಳುವ ಮೂಲಕ ಯೋಜನೆ ವಿರುದ್ಧ ಮಾತನಾಡುವಂತೆ ಮಾಡುತ್ತಾನೆ. ದುಬಾಯಿ ರಾಜುವಿನ ಮಾತು ಕಟ್ಟಿಕೊಂಡು ಆ ವ್ಯಕ್ತಿ ಮಾತನಾಡಿದ ಎಂದರೆ ದುಬಾಯಿ ರಾಜುವೇ ಮುಂದೆ ನಿಂತುಕೊಂಡು `ಊರಿನ ಅಭಿವೃದ್ಧಿಗೆ ಎದುರು ಮಾತನಾಡುತ್ತಿದ್ದಾನೆ. ಊರಿನ ಅಭಿವೃದ್ಧಿ ಕಂಡರೆ ಆಗುವುದಿಲ್ಲ. ಇವನದ್ದು ಯಾವಾಗಲೂ ಹೀಗೆಯೇ ವಿರೋಧ ಮಾಡುವ ಸ್ವಭಾವ..' ಎನ್ನುವ ಮೂಲಕ ಉಲ್ಟಾ ಹೊಡೆಯುವ ಮೂಲಕ ಹಲವರ ದ್ವೇಷವನ್ನೂ ಕಟ್ಟಿಕೊಂಡಿದ್ದಾನೆ.
            ಇತ್ತೀಚಗೆ ಒಂದು ದೊಡ್ಡ ಘಟನೆ ಜರುಗಿದೆ. ಅದೇನೆಂದರೆ ದುಬಾಯಿ ರಾಜುವಿನ ಮದುವೆ. ಆತನ ಊರನ್ನೂ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದುಬಾಯ್ ರಾಜುವಿನ ಮದುವೆ ಬಹುದೊಡ್ಡ ಸುದ್ದಿ. ಮದುವೆಯಾದ ನಂತರ ಆತನ ಹಲವು ನಡವಳಿಗೆಳು ಸರಿಯಾಗಬಹುದು ಎಂದು ಪುರಜನರು ಭಾವಿಸಿದ್ದರು. ಆದರೆ ಬದಲಾಗಿ ಇನ್ನಷ್ಟು ಉಪದ್ವಾಪಿಯಾಗಿ ಬದಲಾಗಿರುವುದು ದುರಂತದ ಸಂಗತಿಯೆನ್ನಬಹುದು. ಮೊದಲು ತನಗೊಬ್ಬನಿಗೆ ಎಂದುಕೊಂಡಿದ್ದ ದುಬಾಯಿ ರಾಜು ಇದೀಗ ತನ್ನ ಹಾಗೂ ತನ್ನ ಪತ್ನಿಗೆ ಎನ್ನುವುದು ಒಳ್ಳೆಯ ಸಂಗತಿಯಾದರೂ ಇದಕ್ಕಾಗಿ ಅಡ್ಡದಾರಿಯನ್ನು ಹಿಡಿದಿರುವುದು ಬೇಸರದ ಸಂಗತಿಯೆನ್ನಬಹುದು. ಈ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಪಕ್ಕದ ಮನೆಯ ಮಾವಿನ ಮರದ ಹಣ್ಣುಗಳು, ಹಲಸಿನ ಹಣ್ಣುಗಳು, ಪೇರಲ, ತರಕಾರಿಗಳು ಸೇರಿದಂತೆ ಬಹು ಅಮೂಲ್ಯ ವಸ್ತುಗಳೆಲ್ಲ ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದೆ. ಈ ಕಾರಣಕ್ಕಾಗಿ ದುಬಾಯಿ ರಾಜು ಮತ್ತೊಮ್ಮೆ ತರಾಟೆಯನ್ನು ಎದುರಿಸಬೇಕಾಗಿ ಬಂದಿದ್ದೂ ಇದೆ. ಯಥಾ ಪ್ರಕಾರ ನಾನವನಲ್ಲ ಎಂದು ಹೇಳಿದ ದುಬಾಯ್ ರಾಜು ನೀವು ಕಂಡಿದ್ದೀರಾ..? ದಾಖಲೆಯಿದ್ದರೆ ಕೊಡಿ ಎನ್ನುವ ಮೂಲಕ ಹೊಸ ವರಸೆಯನ್ನು ಶುರು ಮಾಡಿಕೊಂಡಿದ್ದರ ಹಿಂದೆ ಹೆಂಡಿತ ಕೈವಾಡವನ್ನೂ ಸಂಶಯಿಸುವವರಿದ್ದಾರೆ.
          ಇಂತಿಪ್ಪ ದುಬಾಯಿ ರಾಜು ತನಗಷ್ಟೇ ಅಲ್ಲದೇ ಇತರರಿಗೂ ಹೊರೆಯಾಗಿ, ಪರಾವಲಂಬಿಯಾಗಿ, ಅವರಿವರಿಗೆ ಕಾಟಕೊಡುತ್ತಿರುವ ಸುದ್ದಿ ಹಳೆಯದಾಗುತ್ತಿದೆ. ತಾನು ದುಬಾಯಿಗೆ ಹೋಗಿದ್ದೆ ಎನ್ನುವ ವಿಷಯ ಬಹುಶಃ ಇದೀಗ ಅವನಿಗೂ ನೆನಪಿಲ್ಲವೇನೋ. ಸ್ಥಳೀಯ ರಾಜಕಾರಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವ ದುಬಾಯಿ ರಾಜು ಮುಂದಿನ ದಿನಗಳಲ್ಲಿ ಪಂಚಾಯ್ತಿಯ ಚುನಾವಣೆಗೂ ನಿಲ್ಲಬಹುದು ಎನ್ನುವ ಮಾತುಗಳು ಕೇಳಿಬರುತ್ತಲಿವೆ. ಹೀಗಾದರೆ ದೇವರೇ ಗತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದಿನದನ್ನು ಕಾದು ನೋಡಬೇಕಾಗಿದೆ.

Wednesday, July 9, 2014

ಹನಿಗವಳ

ರಾವಣ

ಹತ್ತು ತಲೆಗಳಿದ್ದರೂ
ಒಂದೇ ಒಂದು ತಲೆಯನ್ನೂ
ಬುದ್ಧಿಗಾಗಿ ಉಪಯೋಗಿಸದೇ,
ಸೀತೆಯನ್ನು ಅಪಹರಿಸಿ
ತನ್ನ ಸಾವನ್ನು ತಾನೇ
ತಂದುಕೊಂಡ ಭೂಪ |

ಕೃಷ್ಣ

ಒಬ್ಬಾಕೆ ಹೆಂಡತಿಯನ್ನು
ಕಟ್ಟಿಕೊಂಡು ಸಂಸಾರ ಮಾಡಲು
ಕಷ್ಟವಾಗುತ್ತಿದ್ದ ಕಾಲದಲ್ಲಿ
16 ಸಾವಿರ ಹೆಂಡತಿಯರ
ಕಾಟವನ್ನೆಲ್ಲ ಸಮರ್ಥವಾಗಿ
ಎದುರಿಸಿದವನು |


ಶಕುನಿ

ಆಧುನಿಕ ವ್ಯಕ್ತಿಗಳೆಲ್ಲರ
ಪ್ರತಿರೂಪಿ, ಜೊತೆಗೆ
ಅವರೆಲ್ಲರ ಆದರ್ಶವಾಗಿ ಹೋದ
ಫಿಟ್ಟಿಂಗ್ ವ್ಯಕ್ತಿ |

ಕರ್ಣ

ಕುಂತಿಯಿಂದ ಕಾನಿನನಾಗಿ
ಜನಿಸಿ, ಕರ್ಣಕುಂಡಲ ಮಾತ್ರದಿಂದ
ಹೇಗ್ಹೇಗೋ ಬದುಕಿ, ಕೊನೆಗೆ
ತಮ್ಮನಿಂದಲೇ ಕೊಲ್ಲಲ್ಪಡುವ
ನತದೃಷ್ಟ ಮನುಷ್ಯ |
ಇಂದ್ರ

ಸದಾ ಯಾವಾಗಲೂ
Rambhe, Urvashi,
Menakeಯರ ಜೊತೆ
ಸುರೆ ಕುಡಿಯುತ್ತಿರುವಾತ |

ಚಿತ್ರಗುಪ್ತ

ಜಗತ್ತಿನ ಒಟ್ಟೂ ಪಾಪಿಗಳ
ಪಾಪಗಳ ಲೆಕ್ಕ ಇಟ್ಟು
ಕಾಲಾಂತರದಲ್ಲಿ ಅವುಗಳಿಗೆ
ಗತಿ ಕಾಣಿಸಿ ಪಾಪಕ್ಕೆ
ಶಿಕ್ಷೆ ಕೊಡುವ ಜಡ್ಜು |

ಬ್ರಹ್ಮ

ತನ್ನ ಮಗಳನ್ನೇ
ಮದುವೆಯಾದರೂ
ತಾನು ಸೃಷ್ಟಿಸಿದ್ದನ್ನು ತನ್ನ
ಕೈಯಲ್ಲೇ ನಿಯಂತ್ರಿಸಲಾಗದ ಭೂಪ |

Tuesday, July 8, 2014

ಸಪ್ತಪದಿಗೊಂದು ಹೊಸ ಭಾಷ್ಯ

(ಸಪ್ತಪದಿಯ ಅಸಲಿ ಅರ್ಥ)
ಮದುವೆಯ ಸಪ್ತಪದಿಗೆ
ಹೊಸದೊಂದು ಭಾಷ್ಯ|

ಹೆಜ್ಜೆ ಒಂದು : ಗಂಡೇ
ನಿನ್ನ ಜುಟ್ಟು ನನ್ನ ಕೈಯಲ್ಲಿ |

ಹೆಜ್ಜೆ ಎರಡು : ಗಂಡೇ
ನಿನ್ನದೇನಿದ್ದರೂ ಇನ್ನು
ಮನೆಯ ಅಡುಗೆಯ ಕೆಲಸ |

ಹೆಜ್ಜೆ ಮೂರು : ನೀನು
ತಗ್ಗಿ ಬಗ್ಗಿ ನಡೆಯದಿದ್ದರೆ,
ಗಂಡೇ ನನ್ನ ಕೈಲಿದೆ
ಲಟ್ಟಣಿಗೆ |

ಹೆಜ್ಜೆ ನಾಲ್ಕು : ಗಂಡ
ನಿನ್ನ ತಿಂಗಳ ಸಂಬಳ
ಇನ್ನು ನನಗಿರಲಿ |

ಹೆಜ್ಜೆ ಐದು : ಗಂಡೇ
ಇನ್ನು ನೀನು ಮನೆಯಲ್ಲಿ
ಮಕ್ಕಳ ನೋಡಿಕೋ, ಅವರ
ಹೋಂವರ್ಕ್ ಮಾಡಿಸು |

ಹೆಜ್ಜೆ ಆರು : ನನಗೆ ತಿಂಗಳಿಗೊಂದು
ಸೀರೆ ನೆಕ್ಲೆಸ್ ಕೊಳ್ಳು |

ಹೆಜ್ಜೆ ಏಳು : ಇವೆಲ್ಲವುಗಳಿಗೆ ನೀನು
ಒಪ್ಪದಿದ್ದರೆ ನಾನು ಹೋಗುವೆ
ಕೋರ್ಟಿಗೆ, ಇದು ಹಕ್ಕು |

**
(ಆಧುನಿಕ ಕಾಲದಲ್ಲಿ ಸಪ್ತಪದಿಯ ಕುರಿತು ಒಂದು ಹೊಸ ಆಲೋಚನೆ. ಹೆಣ್ಣಿನ ದೃಷ್ಟಿಯಲ್ಲಿ ಸಪ್ತಪದಿ ಹೀಗೂ ಆಗಬಹುದು. ಸುಮ್ನೆ ತಮಾಷೆಗೆ ಬರೆದಿದ್ದು.. ಓದಿ ಖುಷಿಪಡಿ)

ಬೆಂಗಾಲಿ ಸುಂದರಿ-17

(ಸುಂದರಬನದಲ್ಲಿ ಜಿಂಕೆ ಜೋಡಿ)
         ಫೈನಲ್ ಎದುರಾಳಿ ಬಾಂಗ್ಲಾದೇಶಕ್ಕೆ ತವರು ಮನೆಯ ಬಲ. ಪಂದ್ಯವನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಕಬ್ಬಡ್ಡಿ ಆಟಗಾರರೂ ಬಂದಿದ್ದರು. ವಿಶ್ವಕಪ್ ನಡೆಯುತ್ತಿದ್ದ ನ್ಯಾಷನಲ್ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಹಿಂದಿನ ಯಾವುದೇ ಪಂದ್ಯಗಳಲ್ಲಿಯೂ ಇಷ್ಟು ಜನರಿರಲಿಲ್ಲ. `ಕಬ್ಬಡ್ಡಿ' ಗೂ ಇಷ್ಟೆಲ್ಲ ಜನ ಬರುತ್ತಾರಲ್ಲ ಎಂದುಕೊಂಡ ವಿನಯಚಂದ್ರ. ಕಬ್ಬಡ್ಡಿಯ ಖದರ್ರೇ ಆತರಹದ್ದು. ರೋಚಕತೆಯೇ ಇದರ ಜೀವಾಳ. ಕ್ಷಣಾರ್ಧದಲ್ಲಿ ನಂಬಿಕೆಗಳೆಲ್ಲ ಬುಡಮೇಲಾಗಿಬಿಡುತ್ತವೆ. ನಾವಂದುಕೊಂಡಿದ್ದು ಅರೆ ಘಳಿಗೆಯಲ್ಲಿ ಇನ್ನೇನೋ ಆಗಿಬಿಡುತ್ತದೆ. ಅಯ್ಯೋ ಹೀಗಾಗಬಾರದಿತ್ತು ಎನ್ನುವಷ್ಟರಲ್ಲ ಸಮಾಧಾನ ನೀಡುವಂತಹ ಆಟ ಮೂಡಿರುತ್ತದೆ. ಏಳು ಜನರ ಆಟ ಏಳು ಖಂಡಕ್ಕೂ ಹಬ್ಬುವ ದಿನಗಳ ದೂರವಿಲ್ಲ ಎಂದುಕೊಂಡ ವಿನಯಚಂದ್ರ.
             ಫುಟ್ ಬಾಲ್ ಜಗದ್ವಿಖ್ಯಾತ ಕ್ರೀಡೆ. ಅದನ್ನು ವೀಕ್ಷಣೆ ಮಾಡಲು ಸಾಕಷ್ಟು ಜನರು ಬರುತ್ತಾರೆ. ಟೆನ್ನಿಸ್ ಕೂಡ ಅಷ್ಟೇ ಖ್ಯಾತಿಯನ್ನು ಗಳಿಸಿಕೊಂಡಿದೆ. ವಿಂಬಲ್ಡನ್, ಪ್ರೆಂಚ್ ಓಪನ್, ಯುಸ್ ಓಪನ್, ಆಷ್ಟ್ರೇಲಿಯನ್ ಓಪನ್ ಗಳಿಗೂ ವೀಕ್ಷಕರ ಸಂಖ್ಯೆ ಬಹಳಷ್ಟಿರುತ್ತದೆ. ಕ್ರಿಕೆಟ್ ಕೂಡ ಲಕ್ಷಗಟ್ಟಲೇ ಜನರನ್ನು ವೀಕ್ಷಕರಾಗಿ ಪಡೆದುಕೊಂಡಿದೆ. ಆದರೆ ಕಬ್ಬಡ್ಡಿಯೆಲ್ಲ ಯಾರಿಗೆ ಗೊತ್ತು? ಭಾರತ ಉಪಖಂಡದಲ್ಲಿ ಖ್ಯಾತಿಯಲ್ಲಿರುವ ಈ ಕ್ರೀಡೆ ಮತ್ತಿನ್ಯಾರು ನೋಡುತ್ತಾರೆ? ಎಂದುಕೊಂಡಿದ್ದ ವಿನಯಚಂದ್ರ. ಆದರೆ ಆ ಕ್ರೀಡೆ ಇದೀಗ ಗಡಿದಾಟಿದೆ. ದೂರ ದೂರದ ಖಂಡಗಳಿಗೂ ವ್ಯಾಪಿಸಿದೆ. ಕಬ್ಬಡ್ಡಿಯನ್ನೂ ಕುತೂಹಲದಿಂದ ನೋಡುವವರಿದ್ದಾರೆ. ನಿಧಾನವಾಗಿ ಅದು ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ ಎನ್ನುವುದು ವಿನಯಚಂದ್ರನಿಗೆ ಅರಿವಾಯಿತು.
            ಸಾಮಾನ್ಯವಾಗಿ ಭಾರತ-ಬಾಂಗ್ಲಾದೇಶ, ಭಾರತ-ಪಾಕಿಸ್ತಾನ, ಪಾಕಿಸ್ತಾನ-ಬಾಂಗ್ಲಾದೇಶಗಳ ನಡುವಣ ಪಂದ್ಯಗಳೆಂದರೆ ಏನೋ ತುರುಸು. ಜಿದ್ದಾಜಿದ್ದಿ. ಎದುರಾಳಿಗಳನ್ನು ಸದಾ ಹಣಿಯುವ ಕಾತರತೆ. ಸಾಂಪ್ರದಾಯಿಕ ಎದುರಾಳಿಗಳು ಎನ್ನುವ ಬಿರುದುಗಳೂ ಇರುವ ಕಾರಣ ರೋಚಕತೆಗೆ ಕೊರತೆಯಿಲ್ಲ. ಫೈನಲ್ ಪಂದ್ಯವೂ ಅಂತಹ ಕ್ಷಣಗಳಿಗೆ ಸಾಕ್ಷಿಯಾಗಲಿತ್ತು.
            ಮೊದಲ ಏಳು ಜನರಲ್ಲಿ ಒಬ್ಬ ಆಟಗಾರನಾಗಿ ವಿನಯಚಂದ್ರ ಕಣಕ್ಕಿಳಿದಿದ್ದ. ಕಾಯ್ದಿಟ್ಟ ಆಟಗಾರರ ಸಾಲಿನಲ್ಲಿ ಸೂರ್ಯನ್ ಇದ್ದ. ಟಾಸ್ ಹಾಕಲಾಯಿತು. ಭಾರತದ ಪರವಾಗಿ ಟಾಸ್ ಬಂದಿತು. ಭಾರತ ತಂಡ ರೈಡಿಂಗನ್ನು ಆಯ್ಕೆ ಮಾಡಿಕೊಂಡಿತು. ಯಾವುದೇ ಪಂದ್ಯಗಳಲ್ಲಿಯೂ ಮೊದಲು ದಾಳಿ ಮಾಡುವವನಿಗೆ ಸಾಕಷ್ಟು ಅವಕಾಶಗಳು ಲಭ್ಯವಾಗುತ್ತವೆ. ಭಾರತ ರೈಡಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಬಾಂಗ್ಲಾದೇಶ ಕೋರ್ಟನ್ನು ಆರಿಸಿಕೊಳ್ಳಬೇಕಾಯಿತು. ಯಾವುದೋ ಒಂದು ಕೋರ್ಟನ್ನು ಆಯ್ಕೆ ಮಾಡಿಕೊಂಡಿತು. ವಿನಯಚಂದ್ರನಿಗೆ ಸೂರ್ಯನ್ ಜೊತೆಯಲ್ಲಿಯೇ ಪರಿಚಯವಾಗಿದ್ದ ತಮಿಳುನಾಡಿನ ಇನ್ನೊಬ್ಬಾತ ರೈಡಿಂಗಿಗೆ ಹೋದ. ಸಾಕಷ್ಟು ಪ್ರಯತ್ನ ಪಟ್ಟರೂ ಒಂದೇ ಒಂದು ಅಂಕಗಳನ್ನು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎದುರಾಳಿ ರೈಡಿಂಗಿಗೆ ಬಂದ. ಭಾರತ ತಂಡ ಜಾಗರೂಕವಾಗಿ ಆಡಿದ ಕಾರಣ ಯಾವುದೇ ಅಂಕವನ್ನು ಎದುರಾಳಿಗೆ ಬಿಟ್ಟುಕೊಡಲಿಲ್ಲ. ಮತ್ತೆ ದಾಳಿ ಭಾರತದ ಪಾಲಿಗೆ ಒದಗಿತು. ಆಂಧ್ರದ ಆಟಗಾರ ರೈಡ್ ಮಾಡಲು ಹೋದ. ಕೆಲ ಹೊತ್ತು ಹೀಗೆ ಆಟ ಸಾಗುತ್ತಿದ್ದಾಗ ಬಾಂಗ್ಲಾದೇಶೀ ಆಟಗಾರರು ಭಾರತದ ರೈಡರ್ ನನ್ನು ರಪ್ಪನೆ ಹಿಡಿದು ಹೆಡೆಮುರಿ ಕಟ್ಟಿದರು. ಬಾಂಗ್ಲಾಕ್ಕೆ ಒಂದಂಕ ಲಭ್ಯವಾಯಿತು. ಒಮ್ಮೆ ಅವಾಕ್ಕಾಯಿತು ಭಾರತ ತಂಡ.
          ಎದುರಾಳಿ ರೈಡಿಂಗಿಗೆ ಬಂದ. ಬಂದವನೇ ಭಾರತದ ಒಬ್ಬ ಆಟಗಾರನನ್ನು ಬಡಿದುಕೊಂಡು ಹೋದ. ಪರಿಣಾಮ ಬಾಂಗ್ಲಾ ಎರಡಂಕ. ಭಾರತ ಸೊನ್ನೆ. ಭಾರತದಿಂದ ರೈಡಿಂಗ್. ಒಬ್ಬನನ್ನು ಹೊಡೆದುಕೊಂಡು ಬಂದ. ಪರಿಣಾಮ ಬಾಂಗ್ಲಾ 2 ಭಾರತ 1. ಹಿನ್ನಡೆ ಆತಂಕವನ್ನು ತಂದಿದ್ದರೂ ಇನ್ನೂ ಸಮಯ ಸಾಕಷ್ಟಿತ್ತು. ಮತ್ತೊಬ್ಬ ರೈಡಿಂಗಿಗೆ ಬಂದ. ಈ ಸಾರಿ ಸರಿಯಾದ ಅವಕಾಶಕ್ಕೆ ಕಾದಿದ್ದ ವಿನಯಚಂದ್ರ ರಪ್ಪನೆ ಎದುರಾಳಿಯ ಕಾಲನ್ನು ಹಿಡಿದು ಕೆಡವಿದ. ಬಿದ್ದರೂ ಮಧ್ಯದ ಗೆರೆಯನ್ನು ಮುಟ್ಟಲು ಕೊಸರಾಡುತ್ತಿದ್ದವನ ಮೇಲೆ ಇತರೆ ಆಟಗಾರರು ಬಂದು ಹೆಡೆಮುರಿ ಕಟ್ಟಿದರು. ವಿನಯಚಂದ್ರನ ದೆಸೆಯಿಂದ ಅಂಕ ಸಮನಾಯಿತು. ಒಮ್ಮೆ ನಿರಾಳತೆ ಆವರಿಸಿತು. ಕೆಲ ಹೊತ್ತು 2-2 ಅಂತರದಲ್ಲಿಯೇ ಆಟ ಸಾಗಿತು. ಯಾರೊಬ್ಬರೂ ಮುನ್ನಡೆಯಲಿಲ್ಲ. ಯಾರೂ ಹಿಂದಕ್ಕೆ ಬೀಳಲಿಲ್ಲ. ತಪ್ಪುಗಳಿಗಾಗಿ ಪರಸ್ಪರರು ಕಾಯುತ್ತಿದ್ದಂತೆ ಕಂಡಿತು. ಇದೇ ಹೊತ್ತಿನಲ್ಲಿ ಜಾಧವ್ ಅವರು ಸೂರ್ಯನ್ ನ್ನು ಅಂಗಣಕ್ಕೆ ಬಿಟ್ಟರು. ಮಧ್ಯಂತರ ಬಂದಿತು. ಈ ವೇಳೆಗೆ ಭಾರತ ತಂಡ 10-8ರಿಂದ ಮುನ್ನಡೆಯನ್ನು ಹೊಂದಿತ್ತು. ಮುನ್ನಡೆ ಅತ್ಯಲ್ಪದ್ದಾಗಿರುವ ಕಾರಣ ಯಾವುದೇ ಸಮಯದಲ್ಲಿಯೂ ಸೋಲು ಧುತ್ತನೆ ಕಾಡಬಹುದಾಗಿತ್ತು.
           ಮಧ್ಯಂತರದ ಅವಧಿಯಲ್ಲಿ ಜಾಧವ್ ಅವರು ಆಟಗಾರರ ಆಟದ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಸರಿಯಾದ ರೀತಿಯಲ್ಲಿ ಯಾರೂ ಆಟವನ್ನೇ ಆಡಿಲ್ಲ ಎಂದೂ ಝಾಡಿಸಿದರು. ಸಮರ್ಪಕವಾಗಿ ಆಡುವಂತೆ ಹೇಳಿದರಷ್ಟೇ ಅಲ್ಲದೇ ಇನ್ನು ನಾಲ್ಕೋ ಐದೋ ನಿಮಿಷ ಭವಿಷ್ಯವನ್ನು ನಿರ್ಧರಿಸುತ್ತದೆ. ಅಷ್ಟರಲ್ಲಿ ಹೇಗಾದರೂ ಮಾಡಿ ಗೆಲುವನ್ನು ಸವಿಯಿರಿ, ಏನು ಬೇಕಾದರೂ ಆಗಲಿ ಎನ್ನುವಂತೆ ಹೇಳಿದರು. ಎಲ್ಲರಲ್ಲೂ ಈ ಮಾತು ಕಿಚ್ಚು, ಕೆಚ್ಚನ್ನು ಹೊತ್ತಿಸಿತ್ತು. ದ್ವಿತೀಯಾರ್ಧ ಆರಂಭಗೊಂಡ ನಂತರ ಭಾರತ ತಂಡದವರು ಆಕ್ರಮಣಕಾರಿಯಾಗಿ ಆಡಲು ಆರಂಭಿಸಿದರು. ಬಾಂಗ್ಲಾದವರೂ ಸುಮ್ಮನಿರಲಿಲ್ಲ. ವಿನಯಚಂದ್ರ ಎರಡು ಸಾರಿ ರೈಡಿಂಗಿಗೆ ಹೋಗಿ ಒಟ್ಟೂ ಮೂರು ಅಂಕಗಳನ್ನು ಪಡೆದುಕೊಂಡು ಬಂದ. ಅಲ್ಲದೇ ನಾಲ್ಕು ಕ್ಯಾಚ್ ಹಿಡಿದ. ಕೊನೆಗೊಮ್ಮೆ ಈತ ರೈಡಿಂಗಿಗೆ ಹೋದಾಗ ಎದುರಾಳಿ ತಂಡದವರು ವಿನಯಚಂದ್ರನನ್ನು ಹಿಡಿದು ಹೆಡೆಮುರಿ ಕಟ್ಟಿದರು. ಕೆಳಗೆಬಿದ್ದ ವಿನಯಚಂದ್ರನ ಮೇಲೆ ಯಾವ ಕಾಲದ ಸಿಟ್ಟೋ ಎನ್ನುವಂತೆ ಹತ್ತಿ ಕುಣಿದುಬಿಟ್ಟರು. ನೆಲಕ್ಕೆ ಬಿದ್ದ ರಭಸಕ್ಕೆ ಒಂದೆರಡು ಕಡೆಗಳಲ್ಲಿ ಗಾಯವೂ ಆಯಿತು. ಮೈಕೈ ಎಲ್ಲ ನುಜ್ಜುಗುಜ್ಜಾದ ರೀತಿ ಆಗಿತ್ತು. ನರನಾಡಿಗಳಲ್ಲಿ ನೋವು ತುಂಬಿಕೊಂಡಿತ್ತು. ತಕ್ಷಣಕ್ಕೆ ಜಾಧವ್ ಅವರು ವಿನಯಚಂದ್ರನನ್ನು ಅಂಗಣದಿಂದ ಹೊರಕ್ಕೆ ಕರೆದುಕೊಂಡು ಬದಲಿ ಆಟಗಾರನನ್ನು ಕಳಿಸಿದರು. ಅಷ್ಟರಲ್ಲಿ ಅಂತಿಮ ಸಮಯ ಬಂದಿತ್ತು. ಭಾರತ 28-22 ರಿಂದ ಮುನ್ನಡೆಯನ್ನು ಸಾಧಿಸಿತ್ತು. ಅಂತಿಮ ಸೀಟಿ ಊದುವ ವೇಳೆಗೆ ಭಾರತ 31 ಬಾಂಗ್ಲಾದೇಶ 25 ಅಂಕಗಳನ್ನು ಪಡೆದುಕೊಂಡಿತ್ತು. ಆರು ಅಂಕಗಳ ಮುನ್ನಡೆಯ ಮೂಲಕ ಗೆಲುವನ್ನು ಸಾಧಿಸಿತ್ತು ಅಷ್ಟೇ ಅಲ್ಲದೇ ವಿಶ್ವಕಪ್ಪನ್ನು ಮತ್ತೊಮ್ಮೆ ತನ್ನ ಮುಡಿಗೆ ಏರಿಸಿಕೊಂಡಿತ್ತು.
             ಗೆದ್ದು ಬಂದ ಭಾರತೀಯ ಆಟಗಾರರು ವಿನಯಚಂದ್ರನನ್ನು ಸುತ್ತುವರಿದಿದ್ದರು. ಆತನಿಗೆ ಗಂಭೀರವಾಗಿ ಗಾಯವಾಗಿರಲಿಲ್ಲ. ನಿಟ್ಟುಸಿರುವು ಬಿಟ್ಟಿದ್ದರು. ವಿಶ್ವಕಪ್ಪನ್ನು ಗೆದ್ದ ಖುಷಿ ಬಿದ್ದ ನೋವನ್ನು ಮರೆಸಿ ಹಾಕಿತ್ತು. ಸತತವಾಗಿ ವಿಶ್ವಕಪ್ಪನ್ನು ಗೆದ್ದು ಇತಿಹಾಸದ ಪುಟಗಳಲ್ಲಿ ಭಾರತದ ಕಬ್ಬಡ್ಡಿ ತಂಡ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿತ್ತು. ಪಂದ್ಯದಲ್ಲಿ ಭಾರತದ ಆಟಗಾರನಿಗೆ ಪಂದ್ಯಪುರುಷೋತ್ತಮ ಲಭಿಸಿದರೆ ವಿನಯಚಂದ್ರನಿಗೆ ಅತ್ಯುತ್ತಮ ಕ್ಯಾಚರ್ ಪ್ರಶಸ್ತಿ ಲಭಿಸಿತು. ಅಲ್ಲದೇ ವಿಶೇಷ ಪ್ರಶಸ್ತಿಯನ್ನೂ ಪಡೆದುಕೊಂಡ. ವಿಶ್ವಕಪ್ಪನ್ನು ತಂಡದ ನಾಯಕನ ಕೈಗಿತ್ತಾಗಲಂತೂ ಸ್ವರ್ಗವೇ ಸಿಕ್ಕ ಅನುಭವ.  ಕೂಗಿದರು, ಕಬ್ಬರಿದರು. ಸಂತಸಕ್ಕೆ ಪಾರವೇ ಇರಲಿಲ್ಲ. ಒಂದು ವಿಶ್ವಕಪ್ ಎಷ್ಟೆಲ್ಲ ಸಂತೋಷವನ್ನು ನೀಡುತ್ತದಲ್ಲ ಎಂದುಕೊಂಡ ವಿನಯಚಂದ್ರ. ಆ ದಿನವಿಡಿ ಸಂತಸದ ಹೊಳೆ ಹರಿದಿತ್ತು. ಜಾಧವ್ ಸರ್ ಅವರಂತೂ ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ವಿನಯಚಂದ್ರನಿಗಂತೂ ತನಗಾದ ಗಾಯ, ಮೈಕೈ ನೋವು ಮರೆತಂತೆ ಖುಷಿಪಟ್ಟ. ಒಂದು ಗೆಲುವು ಅದೆಷ್ಟೋ ಕಾಲದ ಕಷ್ಟ, ನೋವುಗಳನ್ನು ಮರೆ ಮಾಚುತ್ತದೆ ಎಂದುಕೊಂಡ ವಿನಯಚಂದ್ರ.
          ಸಂಜೆ ಹೊಟೆಲಿನಲ್ಲಂತೂ ಸಂಭ್ರಮ ಮೇರೆ ಮೀರಿತ್ತು. ಎಲ್ಲರೂ ಪಂದ್ಯಾವಳಿಯಲ್ಲಿ ತಮ್ಮ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವವರೇ ಆಗಿದ್ದರು. ವಿನಯಚಂದ್ರ ಮೊದಲು ಮನೆಗೆ ಪೋನ್ ಮಾಡಿ ವಿಷಯ ತಿಳಿಸಿದ. ಮನೆಯಲ್ಲಿಯೂ ಸಂಭ್ರಮದ ವಾತಾವರಣ ಮೇರೆ ಮೀರಿತ್ತು. ಮಧುಮಿತಾ ಮೊದಲು ಬಂದವಳೇ ವಿನಯಚಂದ್ರನನ್ನು ತಬ್ಬಿಕೊಂಡು ಕಂಗ್ರಾಟ್ಸ್ ಎಂದಳು. ಗೊತ್ತಾದರೂ ಗೊತ್ತಾಗದಂತೆ ವಿನಯಚಂದ್ರನ ತುಟಿಗೆ ಮುತ್ತನ್ನು ಕೊಟ್ಟುಬಿಟ್ಟಿದ್ದಳು. ವಿನಯಚಂದ್ರ ಒಮ್ಮೆ ಅವಾಕ್ಕಾದರೂ ನಂತರ ರೋಮಾಂಚನದಿಂದ ಮುತ್ತಿನ ಸವಿಯನ್ನು ಅನುಭವಿಸಿದ್ದ. ನಂತರ ಅವನಿಗಾದ ಗಾಯಗಳು ಅವಳ ಅರಿವಿಗೆ ಬಂದಿತು. ವಿನಯಚಂದ್ರ ಮುಜುಗರದಿಂದ ಬೇಡ ಬೇಡ ಎನ್ನುತ್ತಿದ್ದರೂ ಕೇಳದೇ ಆತನನ್ನು ರೂಮಿಗೆ ಎಳೆದೊಯ್ದು ಗಾಯಗಳನ್ನೆಲ್ಲ ತೊಳೆದು ಔಷಧಿ ಹಚ್ಚಿದಳು. ವಿನಯಚಂದ್ರ ಮತ್ತೊಮ್ಮೆ ಅವಳ ಕೈಗಳನ್ನು ಚುಂಬಿಸಿದ್ದ. `ಜಗತ್ತಿನಲ್ಲಿ ಯಾರು ಯಾರು ಹೇಗೆ ಸೇರುತ್ತಾರೋ ಗೊತ್ತಿಲ್ಲ.. ಈ ಕಬ್ಬಡ್ಡಿ ನಮ್ಮಿಬ್ಬರನ್ನು ಸೇರಿಸಿದೆ. ಇದಕ್ಕೊಂದು ಸಲಾಂ..' ಎಂದ ವಿನಯಚಂದ್ರ. ಮಧುಮಿತಾಳ ಕಣ್ಣಲ್ಲಿ ಬೆರಗು ಮೂಡಿತ್ತು.

**

        ಮರುದಿನ ಬಂಗಾಳ ಕೊಲ್ಲಿಯ ಅಕ್ಕಪಕ್ಕದಲ್ಲಿದ್ದ ಸುಂದರಬನ್ಸ್ ಪ್ರದೇಶವನ್ನು ನೊಡಲು ಭಾರತದ ಕಬ್ಬಡ್ಡಿ ತಂಡ ತೆರಳಬೇಕಿತ್ತು. ಬಂಗಾಳದ ಹುಲಿಗಳು, ಗಂಗಾನದಿ ಸಮುದ್ರವನ್ನು ಸೇರುವ ಪ್ರದೇಶವನ್ನೆಲ್ಲ ನೋಡಬೇಕು ಎನ್ನುವುದು ತಂಡದ ಯೋಚನೆಯಾಗಿತ್ತು. ಆದರೆ ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಎಲ್ಲರ ಚಿಂತೆಗೆ ಕಾರಣವಾಗಿತ್ತು. ಸುಂದರಬನ್ಸ್ ನೋಡಲು ತೆರಳುವುದೋ ಬೇಡವೋ ಎನ್ನುವ ಸಂದಿಗ್ಧತೆ ಎಲ್ಲರಲ್ಲೂ ಇದ್ದುದು ಸುಳ್ಳಲ್ಲ. ಆದರೆ ಆಟಗಾರರಿಗೆಲ್ಲ ಸುಂದರಬನ್ಸ್, ಬಂಗಾಳದ ಬಿಳಿಯ ಹುಲಿಗಳು, ಭಾರತದ ಪವಿತ್ರ ನದಿ ಗಂಗೆ ತನ್ನ ಬಳಗದ ಜೊತೆಗೂಡಿ ಸಮುದ್ರವನ್ನು ಸೇರುವ ಸ್ಥಳವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆಯನ್ನು ತಡೆದುಕೊಳ್ಳಲಾಗಲಿಲ್ಲ. ಒತ್ತಾಯಿಸಿದ ಪರಿಣಾಮ ಅಲ್ಲಿಗೆ ತೆರಳುವುದು ನಿಶ್ಚಯವಾಯಿತು. ಕೋಚ್ ಜಾಧವ್ ಅವರ ಮೂಲಕ ಮಧುಮಿತಾಳೂ ಅಲ್ಲಿಗೆ ಬರುವಂತೆ ಮಾಡಿಸಿಕೊಳ್ಳಲು ವಿನಯಚಂದ್ರ ಯಶಸ್ವಿಯಾದ.
          ತಂಡದ ಪ್ರತಿಯೊಬ್ಬ ಆಟಗಾರರಿಗೂ ವಿನಯಚಂದ್ರ ಹಾಗೂ ಮಧುಮಿತಾರ ಪ್ರೇಮದ ವಿಷಯ ತಿಳಿದುಹೋಗಿತ್ತು. ಮೊದ ಮೊದಲು ಎಲ್ಲರಿಗೂ ಇದು ಬೆರಗಿಗೆ ಕಾರಣವಾದರೆ ನಂತರ ಮಾತ್ರ ಪ್ರತಿಯೊಬ್ಬರೂ ಖುಷಿ ಪಟ್ಟಿದ್ದರು. ಏನೇ ಸವಾಲುಗಳು ಎದುರಾಗಲಿ, ಅದೇನೇ ಕಷ್ಟಗಳು ಬರಲಿ ಈ ಜೋಡಿಯನ್ನು ಒಂದುಗೂಡಿಸಬೇಕು ಎಂದು ಪಣತೊಟ್ಟವರಂತೆ ವರ್ತಿಸುತ್ತಿದ್ದರು.
         ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆ ಕಾರಣದಿಂದಾಗಿ ಹಿಂಸಾಚಾರ ಪೀಡಿತ ಪ್ರದೇಶವನ್ನು ತಪ್ಪಿಸಿಕೊಂಡು ಸುತ್ತು ಬಳಸಿನ ದಾರಿಯಲ್ಲಿ ಸುಂದರಬನ್ಸ್ ಪ್ರದೇಶಕ್ಕೆ ತೆರಳಬೇಕಿತ್ತು. ಸಾಕಷ್ಟು ಸವಾಲಿನ ಕಾರ್ಯವಾದ್ದರಿಂದ ಒಂದೆರಡು ತಾಸು ವಿಳಂಬವೂ ಆಯಿತು. ಗಂಗಾನದಿಯ ಮುಖಜ ಪ್ರದೇಶದಲ್ಲಿ ಅಂಕುಡೊಂಕಿನ ದಾರಿಯಲ್ಲಿ ಸಾಗಿ ಕೊನೆಗೊಮ್ಮೆ ಬಂಗಾಳಕೊಲ್ಲಿಯ ತೀರಕ್ಕೆ ಬಂದರು. ಆಟಗಾರೆರಿಗೆಲ್ಲ ಅದೇನೋ ಹೆಮ್ಮೆ. ಮನಸ್ಸಿನ ತುಂಬೆಲ್ಲ ಗೌರವದ ಭಾವನೆ. ಭಾರತದ ಕೊಲ್ಕತ್ತಾದಿಂದ ಬಾಂಗ್ಲಾದೇಶದ ಹಲವು ಕಡೆಗಳಲ್ಲಿ ಗಂಗಾನದಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗಂಗೆ ಸಮುದ್ರ ಸೇರುವ ಮುನ್ನ ಗೋಮತಿ, ಮೇಘನಾ, ಬ್ರಹ್ಮಪುತ್ರಾ ಈ ಮುಂತಾದ ನದಿಗಳನ್ನು ಬಾಂಗ್ಲಾದೇಶದ ಫಾಸಲೆಯಲ್ಲಿಯೇ ತನ್ನ ತೆಕ್ಕೆಗೆ ಎಳೆದುಕೊಂಡು ಭರತಖಂಡದ ಬಹುದೊಡ್ಡ ನದಿಯಾಗಿ ಪರಿವರ್ತನೆಯಾಗುತ್ತಾಳೆ.
           `ನಿಂಗೊತ್ತಾ ವಿನು.. ಗಂಗಾ ನದಿ ಸಮುದ್ರವನ್ನು ಸೇರಿದ ನಂತರವೂ ಮೂರ್ನಾಲ್ಕು ಕಿ.ಮಿಗಳಷ್ಟು ದೂರ ಸಮುದ್ರದ ಉಪ್ಪು ನೀರಿನೊಂದಿಗೆ ಬೆರೆಯದೇ ಮುಂದಕ್ಕೆ ಹರಿಯುತ್ತಲೇ ಇರುತ್ತಾಳೆ. ಆ ನಂತರವೇ ಸಮುದ್ರದ ಉಪ್ಪು ನೀರು ಗಂಗೆಯ ನೀರಿನೊಂದಿಗೆ ಬೆರಯಲು ಆರಂಭವಾಗುತ್ತದೆ..' ಎಂದಳು ಮಧುಮಿತಾ..
           `ಹುಂ.. ಎಲ್ಲೋ ಚಿಕ್ಕಂದಿನಲ್ಲಿ ಓದಿದ್ದ ನೆನಪು. ಮಧು ಇದೇ ಜಾಗದಲ್ಲಿ ಅಲ್ಲವಾ ಪದೇ ಪದೆ ಚಂಡಮಾರುತಗಳು ಅಪ್ಪಳಿಸುತ್ತವೆ. ಬಂಗಾಳಕೊಲ್ಲಿಯಲ್ಲೆದ್ದ ಚಂಡಮಾರುತ ಇದೇ ತೀರದ ಮೂಲಕ ಬಾಂಗ್ಲಾದೇಶದಲ್ಲಿ ಹಾವಳಿ ಮಾಡುತ್ತವೆ.. ಅಲ್ಲವಾ..' ಎಂದ ವಿನಯಚಂದ್ರ.
           `ಹುಂ.. ಹೌದು. ಆದರೆ ಗಂಗಾನದಿಯ ಮುಖಜ ಭೂಮಿಯ ತುಂಬೆಲ್ಲ ಕಾಂಡ್ಲಾ ವನವಿದೆಯಲ್ಲ. ಈ ಕಾಂಡ್ಲಾ ವನದಿಂದೊಡಗೂಡಿದ ಪ್ರದೇಶವನ್ನೇ ಸುಂದರಬನ್ಸ್ ಎಂದು ಕರೆಯುರೆ. ಇದು ರಕ್ಷಿತಾರಣ್ಯ. ಈ ಅರಣ್ಯವಿರುವ ಕಾರಣದಿಂದಲೇ ಚಂಡಮಾರುತದ ಸಾಕಷ್ಟು ತೊಂದರೆಗಳು ಕಡಿಮೆಯಾಗುತ್ತವೆ. ವಿಶ್ವದ ಅತ್ಯಪರೂಪದ ಅರಣ್ಯಗಳಲ್ಲಿ ಇದೂ ಒಂದು. ವಿಶಿಷ್ಟ ಬಗೆಯ ಬಂಗಾಲದ ಬಿಳಿ ಹುಲಿಗಳು ಇಲ್ಲಿ ಮಾತ್ರ ಬದುಕುತ್ತವೆ. ಇಲ್ಲಿ ಬೇಟೆ ನಿಷಿದ್ದ. ಅಳಿವಿನ ಅಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಣೆ ಮಾಡಲು ಈ ಜಾಗ ಬಳಕೆಯಾಗಿವೆ. ಆದರೆ ಸರ್ಕಾರದ ಕಣ್ಣು ತಪ್ಪಿಸಿ ಆಗೀಗ ಬೇಟೆ ಮಾಡಲಾಗುತ್ತದೆ.. ಈ ಅರಣ್ಯ ಇದೆಯಲ್ಲ ಇದೊಂದು ರೀತಿಯ ವಿಚಿತ್ರ. ಇಲ್ಲಿ ಯಾವಾಗ, ಯಾವ ಕಡೆಗಳಲ್ಲಿ ಸಮುದ್ರ ಒಳನುಗ್ಗಿದೆ ಎಂದು ಹೇಳುವುದು ಕಷ್ಟ. ಅದೇ ರೀತಿ ಗಂಗಾ ನದಿಯ ಕವಲು ಯಾವ ಪ್ರದೇಶದಲ್ಲಿ ಹಾದು ಹೋಗಿದೆ ಎನ್ನುವುದೂ ಕೂಡ ಊಹೆ ಮಾಡಲು ಸಾಧ್ಯವಿಲ್ಲ. ನಡು ನಡುವೆ ನೀರು, ಅಲ್ಲಲ್ಲಿ ಜವುಳು ಮಣ್ಣು, ಮುಳ್ಳು ಕಂಡಿಗಳ ಗಿಡ, ಕಾಂಡ್ಲಾ ಸಸ್ಯಸಂಕುಲ. ಆದರೆ ಅರಣ್ಯದಲ್ಲಿ ವನ್ಯಜೀವಿಗಳ ಸಮೂಹವೇ ಜೀವನ ನಡೆಸುತ್ತಿದೆ ನೋಡು ' ಎಂದಳು ಮಧುಮಿತಾ.
         `ಭಾರತದ ಲಕ್ಷ್ಮೀಮಾಖತ ಪುರದಿಂದ ಬಾಂಗ್ಲಾದೇಶ ಫಿರೋಜ್ ಪುರದವರೆಗೂ ಸುಂದರಬನ್ಸ್ ರಕ್ಷಿತಾರಣ್ಯ ಹಬ್ಬಿನಿಂತಿದೆ. ಈ ಅರಣ್ಯ ವ್ಯಾಪ್ತಿಯಲ್ಲಿ ಸರಿಸುಮಾರು 2000 ಬಿಳಿ ಹುಲಿಗಳಿವೆ. ನಿಮ್ಮ ಕಡೆಗಳಲ್ಲಿ ಹುಲಿಯ ಬಣ್ಣ ಬೇರೆ. ಇಲ್ಲಿಯ ಹುಲಿಗಳ ಬಣ್ಣವೇ ಬೇರೆ. ಬಿಳಿ ಬಣ್ಣದ ಹುಲಿಗಳ ಮೇಲೆ ಕಪ್ಪು, ಕಂದು ಪಟ್ಟೆಗಳು. ಈ ಹುಲಿಗಳು ಬಾಂಗ್ಲಾದೇಶದ ಸ್ವಾಭಿಮಾನ, ಹೋರಾಟದ ಸಂಕೇತ. ಈ ಕಾರಣದಿಂದಲೇ ಬಾಂಗ್ಲಾದೇಶದ ಕ್ರಿಕೆಟ್ ತಂಡವನ್ನು ಹುಲಿಗಳ ತಂಡ ಎಂದೂ ಕರೆಯುತ್ತಾರೆ. ಬಾಂಗ್ಲಾದೇಶದ ಯಾವುದೇ ಕ್ರೀಡೆಯ ಸಮವಸ್ತ್ರದ ಮೇಲೆ ಬೆಂಗಾಲಿ ಹುಲಿಗಳ ಚಿತ್ತಾರವನ್ನು ಹಾಕಿರುತ್ತಾರೆ. ನೋಡಿದ್ದೀಯಲ್ಲ. ಸಮುದ್ರದವೆರೂ ಹಬ್ಬಿನಿಂತಿರುವ ಕಾಂಡ್ಲಾ ಅರಣ್ಯ ಹಾಗೂ ಇತರ ಪ್ರದೇಶಗಳು ಬಿಳಿ ಹುಲಿಗಳಿಗೆ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವಾಗಿದೆ. ಜಗತ್ತಿನ ಅತ್ಯಪರೂಪದ ಜೈವಿಕ ತಾಣ ಇದು..' ಎಂದು ಮಧುಮಿತಾಳೆ ಮುಂದುವರಿದು ಹೇಳಿದಳು.
          `ಇನ್ನು ಗಂಗಾನದಿಯ ಕುರಿತು ಹೇಳುವುದಾದರೆ ಅದರ ಉಪ ಹೆಸರುಗಳೂ ಸೇರಿದಂತೆ ಮುಖಜಭೂಮಿಗಳು ಬಹುದೊಡ್ಡವು. ಭಾರತದ ಮಂದಾರಮನಿ ಎಂಬಲ್ಲಿಂದ ಬಾಂಗ್ಲಾದೇಶದ ಮಗ್ದಾರಾ ಎಂಬಲ್ಲಿವರೆಗೂ ಹಲವು ಕವಲುಗಳ ಮೂಲಕ ಗಂಗೆ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಅಂದರೆ ಗಂಗಾನದಿಯ ಮುಖಜ ಭೂಮಿಯ ವ್ಯಾಪ್ತಿ 150 ಕಿ.ಮಿಯಿಂದ 300 ಕಿ.ಮಿ ವರೆಗೆ ಹಬ್ಬಿದೆ ಎನ್ನಬಹುದು. ಭಾರತದಿಂದ ಕೊಚ್ಚಿಕೊಂಡು ಬಂದ ಫಲವತ್ತಾದ ಮಣ್ಣುಗಳನ್ನು ಇಲ್ಲಿ ರಾಶಿ ರಾಶಿಯಾಗಿ ಗುಡ್ಡೆ ಹಾಕುತ್ತದೆ ಗಂಗೆ. ಅದರಿಂದ ಬಾಂಗ್ಲಾದೇಶಿಯರು ಹೇರಳ ಬೆಳೆ ಬೆಳಯಲು ಯತ್ನಿಸುತ್ತಾರೆ. ಆದರೆ ಗಂಗೆ ಹಾಗೂ ಉಪನದಿಗಳಲ್ಲಿನ ಪ್ರವಾಹದ ಕಾರಣ ಬೆಳೆದ ಬೆಳೆ ಕೊಚ್ಚಿಕೊಂದು ಹೋಗುತ್ತದೆ. ಹೀಗಾಗಿಯೇ ಬಾಂಗ್ಲಾದೇಶವನ್ನು ಅನಿಶ್ಚಿತತೆಯ ತಾಣ ಎಂದೂ ಕರೆಯಲಾಗುತ್ತದೆ..' ಎಂದು ವಿವರಣೆ ನೀಡಿದಾಗ ಕೇಳುತ್ತಿದ್ದ ವಿನಯಚಂದ್ರ ಮೂಕವಿಸ್ಮಿತನಾಗಿ ಅವಳನ್ನೇ ನೋಡುತ್ತಿದ್ದ.
          `ಸುಂದರಬನ್ಸ್ ವ್ಯಾಪ್ತಿಯಲ್ಲಿ ಭಾರತ-ಬಾಂಗ್ಲಾ ಗಡಿ ನಿರ್ದಿಷ್ಟವಾಗಿಲ್ಲ. ಹುಲಿಯಂತಹ ಸಂರಕ್ಷಿತ ಪ್ರಾಣಿಗಳು ಅಡ್ಡಾಡಲೋಸುಗ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಬಾಂಗ್ಲಾದೇಶಿಯರು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದೊಳಗೆ ನುಸುಳುತ್ತಾರೆ. ಅವರೇ ಭಾರತದ ಪಾಲಿಗೆ ಅಕ್ರಮ ನುಸುಳುಕೋರರು, ಬಾಂಗ್ಲಾ ವಲಸಿಗರು. ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಮುಂದಾದರೆ ವನ್ಯಮೃಗಗಳಿಗೆ ಸಮಸ್ಯೆಯಾಗುತ್ತದೆ. ಬೇಲಿ ನಿರ್ಮಾಣ ಮಾಡದೇ ಇದ್ದರೆ ಮನುಷ್ಯರೇ ಸಮಸ್ಯೆಗಳಾಗುತ್ತಾರೆ..' ಎಂದಾಗ ವಿನಯಚಂದ್ರ ನಿಟ್ಟುಸಿರು ಬಿಟ್ಟ.
            `ಬಾಂಗ್ಲಾದೇಶದಲ್ಲಿ ರಸ್ತೆ ಸಾರಿಗೆ ಎಷ್ಟು ಅಭಿವೃದ್ಧಿಯಾಗಿದೆಯೋ ಅಷ್ಟೇ ಮುಖ್ಯವಾಗಿ ಜಲಸಾರಿಗೆಯೂ ಇಲ್ಲಿ ಜೀವನಾಡಿ. ಗಂಗೆ, ಮೇಘನಾ, ಗೋಮತಿಗಲ್ಲಿ ದೊಡ್ಡ ದೊಡ್ಡ ದೋಣಿಗಳು ತಿರುಗಾಡುತ್ತವೆ. ಅತಿಯಾಗಿ ಪ್ರಯಾಣಿಕರನ್ನು ಹೇರುವ ಕಾರಣದಿಂದಲೇ ದೋಣಿ ಅವಘಡಗಳು ಹೆಚ್ಚು ಹೆಚ್ಚು ಜರುಗುತ್ತಿರುತ್ತವೆ. ಗಂಗಾ ನದಿಗೆ ಬಾಂಗ್ಲಾದೇಶದ ವ್ಯಾಪ್ತಿಯಲ್ಲಿ ಸೇತುವೆಗಳು ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ಇದೆ ಎನ್ನುವುದನ್ನು ಬಿಟ್ಟರೆ ನದಿ ದಾಟಲು ಬಾರ್ಜುಗಳು, ಹಡಗುಗಳೇ ಬಳಕೆಯಾಗುತ್ತವೆ. ನಾವು ಬರುವಾಗಲೂ ಅಷ್ಟೇ ಬಸ್ಸು ಗಂಗಾನದಿಯನ್ನು ಬಾರ್ಜಿನ ಮೂಲಕವೇ ದಾಟಿದ್ದನ್ನು ನೀನು ಗಮನಿಸಿರಬಹುದು. ಈಗೀಗ ಒಂದೆರಡು ಸೇತುವೆ ನಿರ್ಮಾಣಕ್ಕೂ ಚಿಂತನೆ ನಡೆಸಲಾಗುತ್ತಿದೆ. ಆದರೆ ಸೇತುವೆ ಕಾಮಗಾರಿ ಕೈಗೊಂಡರೆ ಮುಗಿಯುವುದು ಇನ್ಯಾವ ಕಾಲದಲ್ಲೋ..' ಎಂದಳು ಮಧುಮಿತಾ.
               `ಇನ್ನೊಂದು ಪ್ರಮುಖ ವಿಷಯ. ಬಾಂಗ್ಲಾದೇಶ ಶೆ.90ರಷ್ಟು ಗಡಿಯನ್ನು ಭಾರತದ ಜೊತೆಗೆ ಹಂಚಿಕೊಂಡಿದೆ. ಚಿತ್ತಗಾಂಗ್ ಪ್ರದೇಶದಲ್ಲಿ ಬರ್ಮಾದ ಜೊತೆಗೆ ಕೊಂಚ ಗಡಿಯನ್ನು ಹಂಚಿಕೊಂಡಿರುವ ಬಾಂಗ್ಲಾದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದರೆ ಭಾರದ ನೆರವು ಬೇಕೇ ಬೇಕು. ಇದೀಗ ಬಾಂಗ್ಲಾದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೆಲವು ಸೇತುವೆಗಳಿಗೆ ಭಾರತದ ಸಹಾಯ ಸಹಕಾರ ಇದ್ದೇ ಇದೆ..' ಎಂದಳು ಮಧುಮಿತಾ.
(ದೋಣಿಮನೆಗಳು)
           ಅಷ್ಟರಲ್ಲಿ ಒಂದು ದೋಣಿ ಬಂದಿತು. ಮಧುಮಿತಾ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ್ನು ವೀಕ್ಷಣೆ ಮಾಡಿಸುವ ಸಲುವಾಗಿ ದೋಣಿಯನ್ನು ಆಯ್ಕೆ ಮಾಡಿಕೊಂಡಿದ್ದಳು. ಭಾರತದ ಆಟಗಾರರಿಗೆ ಒಮ್ಮೆಲೆ ಅಚ್ಚರಿಯಾಗಿದ್ದು ಸುಳ್ಳಲ್ಲ. ವಾಹನಗಳ ಮೂಲಕ ಕಾಡಿನೊಳಗೆ ಸಫಾರಿ ಹೋಗುತ್ತಿದ್ದ ಭಾರತೀಯರು ದೋಣಿಯ ಮೂಲಕ ಹೋಗಲು ಸಾಧ್ಯ ಎನ್ನುವ ಕಲ್ಪನೆ ಮೂಡಿಸಿಕೊಂಡು ರೋಮಾಂಚಿತರಾದರು. ಎಲ್ಲರೂ ದೋಣಿಯೇರಬೇಕೆನ್ನುವ ಆಜ್ಞೆ ಸಿಕ್ಕ ತಕ್ಷಣ ಬೇಗನೆ ಏರಿ ಕುಳಿತರು. ನದಿ ಮುಖಜ ಭೂಮಿಯಲ್ಲಿ, ಅಳಿವೆಯೊಳಗೆಲ್ಲ ದೋಣಿ ಮುಂದ ಮುಂದಕ್ಕೆ ಸಾಗುತ್ತಿತ್ತು. ಮುಂದೆ ಮುಂದೆ ಹೋದಂತೆಲ್ಲ ಕಾಂಡ್ಲಾ ವನಗಳು, ನೀರಿಗೆ ಬಾಗಿ ಬಂದಿದ್ದ ಗಿಡಗಳು ಎಲ್ಲರನ್ನೂ ಕೈಬೀಸಿ ಕರೆದವು. ಅಷ್ಟೇ ಅಲ್ಲದೇ ಮುಖ ಮೈಮನಸ್ಸುಗಳಿಗೆಲ್ಲ ಅವುಗಳ ಎಲೆ, ರೆಂಬೆ, ಕೊಂಬೆಗಳು ತಾಗಿ ಪುಳಕಿತಗೊಳಿಸಿದವು. ದೋಣಿ ಮುಂದೆ ಮುಂದೆ ಸಾಗಿದಂತೆಲ್ಲ ದಾರಿ ಇರುಕಾಗುತ್ತಿತ್ತು. ಅಕ್ಕಪಕ್ಕದ ಗಿಡ ಮರಗಳಿಂದ ಹಕ್ಕಿಗಳ ದಂಡು ಪುರ್ರನೆ ಸದ್ದು ಮಾಡುತ್ತ ಹಾರಿ ಹೋಗುತ್ತಿದ್ದವು. ದೋಣಿಯ ಮೇಲೆ ಕುಳಿತು ವೀಕ್ಷಣೆ ಮಾಡುತ್ತಿದ್ದವರ ಮುಖಕ್ಕೆ ಢಿಕ್ಕಿ ಹೊಡೆದು ಹಾರಿ ಹೋಗುತ್ತವೆಯೇನೋ ಎನ್ನುವಷ್ಟು ಸನಿಹಕ್ಕೆ ಹಕ್ಕಿಗಳು ಬಂದು ಹೋಗುತ್ತಿದ್ದವು.
          `ಶ್.. ಸದ್ದು ಮಾಡಬೇಡಿ.. ಅದೋ ಆ ದಡದ ಮೇಲೆ ಬಿಳಿಯ ಹುಲಿಯೊಂದು ಆರಾಮಾಗಿ ಮಲಗಿದೆ ನೋಡಿ..' ಎಂದು ಜೊತೆಯಲ್ಲಿಯೇ ಬಂದಿದ್ದ ಗೈಡ್ ಹೇಳುತ್ತಿದ್ದಂತೆ ಮಾತನಾಡುತ್ತ ಬರುತ್ತಿದ್ದ ಆಟಗಾರರು ಸುಮ್ಮನಾದರು. ದಡದ ಮೇಲೊಂದು ಬಿಳಿಯ ಹುಲಿ ಒಬ್ಬಂಟಿಯಾಗಿ, ಆರಾಮಗಿ ನಿದ್ರಿಸುತ್ತಿತ್ತು. ಈ ಲೋಕದ ಪರಿವೆಯೇ ಇಲ್ಲವೇನೋ ಎನ್ನುವಷ್ಟು ಗಾಢವಾಗಿ ನಿದ್ದೆ ಮಾಡುತ್ತಿತ್ತು ಅದು. ದೋಣಿ ಮುಂದೆ ಸಾಗಿದಂತೆಲ್ಲ ಹೊಸದೊಂದು ಪ್ರಾಣಿಲೋಕ ಅನಾವರಣಗೊಂಡಿತು. ಅಲ್ಲೊಂದು ಕಡೆ ಜೋಡಿ ಪ್ಯಾಂಗೋಲಿನ್ನುಗಳು ಖುಷಿ ಖುಷಿಯಿಂದ ಸಾಗುತ್ತಿದ್ದವು. ಮತ್ತೊಂದು ದಡದಲ್ಲಿದ್ದ ಮೊಸಳೆಗಳ ಹಿಂಡು ದೋಣಿಯನ್ನು ಕಂಡ ತಕ್ಷಣ ಸರಸರನೆ ಬಂದು ಬುಳುಕ್ ಎನ್ನುವ ಸದ್ದು ಮಾಡುತ್ತ ನೀರಿಗಿಳಿದವು.
                ಮತ್ತೊಂದೆರಡು ಕಿ.ಮಿ ಬಂದ ನಂತರ ಅಲ್ಲೊಂದು ಕಡೆ ದೋಣಿ ನಿಂತಿತು. ದಡದ ಮೇಲೆ ಪಂಜರದ ರೀತಿಯಲ್ಲಿ ದಾರಿಯೊಂದನ್ನು ಮಾಡಲಾಗಿತ್ತು. ಆ ದಾರಿಯಲ್ಲಿ ಸಾಗಬೇಕು ಎಂದು ಗೈಡ್ ಹೇಳಿದ. ಇಕ್ಕೆಲಗಳಲ್ಲಿ ಕಾಡು. ನಡುವಲ್ಲಿ ಪಂಜರದ ಹಾದಿ.  ಮುಂದೆ ಮುಂದೆ ಸಾಗಿದಂತೆಲ್ಲ ಸುಂದರಬನ್ಸ್ ಹೊಸ ಹೊಸ ರೀತಿಯಲ್ಲಿ ಗೋಚರವಾಗತೊಡಗಿತು. ಜಿಂಕೆಗಳು, ಕಡವೆಗಳ ಹಿಂಡು ಅಲ್ಲಲ್ಲಿ ನೀರು ಕುಡಿಯಲು ಬಂದಿದ್ದವು. ಕಾಡು ನೋಡಲು ಬಂದಿದ್ದ ಮನುಷ್ಯರನ್ನು ಕತ್ತೆತ್ತಿ ವಿಸ್ಮಯದಿಂದ ನೋಡುತ್ತಿದ್ದವು. ಒಂದೆರಡು ಮೈಲಿ ನಡೆದ ನಂತರ ಕಾಡಿನ ನಡುವೊಂದು ಚಿಕ್ಕಮನೆ ಕಾಣಿಸಿತು. ಅದು ಬಾಂಗ್ಲಾ ಸರ್ಕಾರ ನಿರ್ಮಾಣ ಮಾಡಿದ್ದ ವಿಶ್ರಾಂತಿ ಗೃಹವೆಂದು ಮಾಹಿತಿ ತಿಳಿಯಿತು. ಅಲ್ಲಿ ತಿಂಡಿ, ತಿನಿಸುಗಳನ್ನು ಮುಗಿಸಿ ಮತ್ತೆ ಮರಳುವಷ್ಟರಲ್ಲಿ ಸೂರ್ಯ ಪಶ್ಚಿಮದತ್ತ ಮುಖಮಾಡಿನಿಂತಿದ್ದ.

(ಮುಂದುವರಿಯುತ್ತದೆ.)

Monday, July 7, 2014

ಗಣಪಜ್ಜಿಯ ಹಾಡುಗಳು

          ಈಗೊಂದು ಐದಾರು ವರ್ಷಗಳ ಹಿಂದೆ ನಾನು ಹಾಗೂ ಗೆಳೆಯ ಸಂಜಯ ಭಟ್ಟ ಬೆಣ್ಣೆಗದ್ದೆ ಹಳೆಯ ಹವ್ಯಕ ಹಾಡುಗಳನ್ನು ಸಂಗ್ರಹ ಮಾಡುವ ಕಾರ್ಯಕ್ಕಾಗಿ ಶಿರಸಿ-ಸಿದ್ದಾಪುರ ಸೀಮೆಯ ಹಲವಾರು ಹಳ್ಳಿಗಳನ್ನು ಹೊಕ್ಕಿದ್ದೆವು. ಆ ಹಳ್ಳಿಗಳ ಅಥವಾ ನಮಗೆ ಮಾಹಿತಿ ಬಂದ ಹಿರಿಯ ಹವ್ಯಕ ಮಹಿಳೆಯರನ್ನು ಹುಡುಕಿಕೊಂಡು ಹೋಗಿ ಅವರನ್ನು ಹಿಂದೂ ಬಿಡದೇ ಮುಂದೂ ಬಿಡದೆ ಕಾಡಿ, ಬೇಡಿ ಅವರ ಬಳಿಯಿಂದ ಹಳೆಯ ಹವ್ಯಕ ಹಾಡುಗಳನ್ನು ಸಂಗ್ರಹಿಸಿ ಬಂದಿದ್ದೆವು. ನಾವು ಹಾಡನ್ನು ಸಂಗ್ರಹಿಸಲು ತೆರಳಿದ ಬಹುತೇಕರು 80 ವರ್ಷ ವಯಸ್ಸನ್ನು ಮೀರಿದವರು. ಅವರಲ್ಲಿ ಹಲವರು ಹಾಸಿಗೆಯನ್ನು ಹಿಡಿದಿದ್ದರು. ಆ ಅಜ್ಜಿಯರೇ ಹೇಳಿದಂತೆ ಇದುವರೆಗೂ ಹೀಗೆ ಹವ್ಯಕ ಹಾಡುಗಳನ್ನು ಬರೆದುಕೊಳ್ಳುತ್ತೇವೆ ಎಂದು ಬಂದಿದ್ದು ನಾವೇ ಮೊದಲಂತೆ. ನಮಗೆ ಹೆಮ್ಮೆಯಾಗಿತ್ತು. ನನ್ನ ಹರಪೆಗೆ ಸಂಜಯ ಬಂದಿದ್ದ. ಆತನ ಹರಪೆಗೆ ನಾನು ಹೋಗಿದ್ದೆ.
           ಹಲವು ಅಜ್ಜಿಯರು ನಾವು ಬಂದ ಕಾರಣವನ್ನು ತಿಳಿಸಿದಾಗ ಖುಷಿಯಿಂದ ಹಾಡನ್ನು ಹೇಳಲು ತೊಡಗಿಕೊಂಡಿದ್ದರೆ ಮತ್ತೆ ಹಲವರ ಬಳಿ ಹಾಡನ್ನು ಬಾಯಿ ಬಿಡಿಸಲು ನಾವು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಈ ಅಜ್ಜಿಯರಿದ್ದಾರಲ್ಲ ಅವರಷ್ಟು ಕೊಮಣೆ ಮಾಡುವವರು ಇನ್ನೊಬ್ಬರಿಲ್ಲವೇನೋ ಅಂದುಕೊಂಡಿದ್ದೆವು. ಆದರೆ ಅಜ್ಜಿಯರಿಂದ ಆರಂಭದಲ್ಲಿ ಒಂದು ಹಳ್ಳಿ ಹಾಡನ್ನು ಬಾಯಿಬಿಡಿಸುವುದೇ ತಡ. ನೂರಾರು ಹಾಡುಗಳು ಸರ ಸರನೆ ಹೊರಬೀಳುತ್ತಿದ್ದವು. ನಾನು ಹಾಗೂ ಸಂಜಯ ಜಿದ್ದಿಗೆ ಬಿದ್ದಂತೆ ಅವರ ಬಾಯಿಂದ ಬರುತ್ತಿದ್ದ ಹಾಡನ್ನು ಬರೆದುಕೊಳ್ಳುತ್ತಿದ್ದರೂ ಕೈ ಸೋಲುತ್ತಿತ್ತು. ಅಷ್ಟು ಹಾಡುಗಳನ್ನು ಹಾಡುತ್ತಿದ್ದರು.
           ನನ್ನ ಬಳಿ ಅದ್ಯಾರೋ ಕೋಡ್ಸರದ ಗಣಪಜ್ಜಿಯ ವಿಷಯವನ್ನು ಹೇಳಿದ್ದರು. ಆಕೆ ನಮ್ಮ ಭಾಗದಲ್ಲಿ ಅತ್ಯಂತ ಹಿರಿಯ ಮಹಿಳಾ ಜೀವಿ ಎಂದೂ ಹೇಳಿದ್ದರು. ಅಜ್ಜಿಗೆ ಸಾವಿರಾರು ಹಳ್ಳಿ ಹಾಡುಗಳು ಗೊತ್ತಿವೆ. ಅಜ್ಜಿಗೆ ಹುಷಾರಿಲ್ಲ ಹಾಸಿಗೆ ಹಿಡಿದಿದ್ದಾರೆ ಎಂದೂ ಮಾಹಿತಿ ತಿಳಿಸಿದ್ದರು. ಸರಿ ಎಂದುಕೊಂಡು ನಾನು ಸಂಜಯನಿಗೆ ಪೋನಾಯಿಸಿದೆ. ಮರುದಿನವೇ ಬಂದ. ನಾನು, ಸಂಜಯ ಹಾಗೂ ನನ್ನ ತಂದೆಯವರಾದ ಸುಬ್ರಾಯ ಹೆಗಡೆಯವರು ನಮ್ಮೂರಿನಿಂದ ಕೋಡ್ಸರಕ್ಕೆ ನಡೆದುಕೊಂಡು ಅಜ್ಜಿಯನ್ನು ಹುಡುಕಿ ಹೊರಟೆವು. ಮನೆಗೆ ಹೋಗಿ ತಲುಪಿದಾಗ ನನ್ನ ತಂದೆಯವರು `ನನಗೆ ಈ ಮನೆಯವರು ಗೊತ್ತು. ಇವರು ಪರಿಚಯಸ್ಥರು. ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದರು..' ಎಂದು ಮಾಹಿತಿ ನೀಡಿದಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ.
         ಶತಮಾನಗಳಷ್ಟು ಹಳೆಯ ಮನೆ. ಆ ಮನೆಯ ಒಳ ಮೂಲೆಯಲ್ಲಿ ಕತ್ತಲೆಯಲ್ಲಿ ಅಜ್ಜಿ ಕುಳಿತಿದ್ದರು. ಹಾಸಿಗೆಯ ಮೇಲೆ ಮಲಗಿಕೊಂಡಿದ್ದರಿರಬೇಕು. ನಾವು ಬಂದ ವಿಷಯವನ್ನು ಆಕೆಯ ಮಗ ಅವರಿಗೆ ಹೇಳಿದರೂ ಗಣಪಜ್ಜಿಗೆ ಸ್ಪಷ್ಟವಾಗಿರಲಿಲ್ಲ. ಕೊನೆಗೆ ನನ್ನ ತಂದೆಯವರು `ನಾನು ಸುಬ್ರಾಯ, ದಂಟಕಲ್ ಮಂಕಾಳಕ್ಕನ ಮಗ, ಯಲೂಗಾರು ಅಜ್ಜನಮನೆ..' ಎಂದ ತಕ್ಷಣ ಅಜ್ಜಿಗೆ ಹಳೆಯ ನೆನಪುಗಳು ಮರುಕಳಿಸಿತಿರಬೇಕು. ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಗಣಪಜ್ಜಿ ನಾನು ನಿಮ್ಮ ಮನೆಗೆ ಬಂದಿದ್ದೆ ಎಂದರು. ನನ್ನ ಅಜ್ಜಿಯಾದ ಮಂಕಾಳಿ ಕೋಂ ವಿಘ್ನೇಶ್ವರ ಹೆಗಡೆಯವರ ಕುರಿತು ಹಲವಾರು ಸುದ್ದಿಗಳನ್ನು ಹೇಳಿದರು. ಇಂತಹ ಅಜ್ಜಿಗೆ ವಯಸ್ಸಾಗಿತ್ತಲ್ಲದೇ ವಯೋ ಸಹಜ ಕಾರಣದಿಂದ ಹಾಸಿಗೆ ಹಿಡಿದಿದ್ದು ಸಹಜವಾಗಿತ್ತು. ಅಜ್ಜಿಯ ವಳಿ ಈಗಲೇ ಬಂದು ಒಳ್ಳೆಯ ಕೆಲಸವನ್ನೇ ಮಾಡಿದೆವು. ಅಜ್ಜಿಯನ್ನು ನೋಡಿದರೆ ಜಾಸ್ತಿ ವರ್ಷ ಬದುಕಲಾರಳು ಎಂದುಕೊಂಡೆವು. ಆದರೆ ಅಜ್ಜಿಯ ಬಳಿ ಮಾತ್ರ ನಮ್ಮ ಅಸಲಿ ಕಾರಣವನ್ನು ಹೇಳಿದರೆ ಅಜ್ಜಿಗೆ ನಾಚಿಕೊಂಡಳು. ಹಳೆಯ ಹವ್ಯಕ ಹಾಡನ್ನು ಹೇಳಿ ಎಂದರೆ ಗೊತ್ತೇ ಇಲ್ಲ ಎನ್ನುವಂತೆ ಮಾಡಿದಳು. ನಮಗೆ ಒಮ್ಮೆ ಭ್ರಮ ನಿರಸನ.
           `ಸಂಜಯ ಈ ಅಜ್ಜಿಗೆ ಸಿಕ್ಕಾಪಟ್ಟೆ ಹಾಡು ಗೊತ್ತಿದೆ. ನಮ್ಮ ಸಂಗ್ರಹಕ್ಕೆ ಒಳ್ಳೆಯ ಸರಕುಗಳು ಸಿಗಬಹುದು..' ಎಂದು ಬೇರೆ ಹೇಳಿದ್ದೆ. ಸಂಜಯನಿಗೆ ನಾನು ಸುಳ್ಳು ಹೇಳಿದೆ ಎನ್ನುವ ಭಾವವೂ ಕಾಡಿತ್ತಂತೆ.(ಇತ್ತೀಚೆಗೆ ಸಿಕ್ಕಾಗ ಹೇಳಿದ್ದು). ಇವ ಪೊಕಳೆ ಬಿಟ್ಟ. ವಿನಯನನ್ನು ನಂಬಿ ನಾನು ಬಂದೆ ಥತ್... ಎಂದುಕೊಂಡ. ನನಗೋ ಅವಮಾನವಾದಂತಹ ಅನುಭವ. ಅಜ್ಜಿ ಬಾಯಿಬಿಡಲೊಲ್ಲೆ ಎನ್ನುತ್ತಿದ್ದಳು. ಕೊನೆಗೂ ಬಹಳ ಹೊತ್ತಿನ ನಂತರ ಅಜ್ಜಿ ಬಾಯಿಬಿಟ್ಟಳು. ನಮಗೆ ಅದರಲ್ಲೂ ನನಗೆ ಬಹಳ ಖುಷಿಯಾಯಿತು. ಆ ಅಜ್ಜಿ ಕೊನೆ ಕೊನೆಗೆ ಸುಮಾರು 50-60 ಹಾಡನ್ನು ಹೇಳಿರಬೇಕು. ಹಳೆಯಕಾಲದ ಹವ್ಯಕ ಹಾಸ್ಯ ಗೀತೆಗಳನ್ನು ಬಹಳಷ್ಟು ಹೇಳಿದಳು. ಮಾತು ಕೇಳದ ಮಗ, ತುಂಟ ತನ ಮಾಡುವ ಚಿಕ್ಕ ಹುಡುಗರನ್ನು ರಮಿಸುವುದು, ಸೊಕ್ಕಿನ ಸೊಸೆ, ಗಂಗೆ-ಗೌರಿ ಜಗಳ ಹೀಗೆ ಹತ್ತು ಹಲವು. ನಾವು ತೆಗೆದುಕೊಂಡು ಹೋಗಿದ್ದ ಪಟ್ಟಿ ಖಾಲಿಯಾಗಿ ಅವರ ಮನೆಯಲ್ಲಿ ಖಾಲಿ ಹಾಳೆಯನ್ನು ಕಡ ತೆಗೆದುಕೊಳ್ಳುವಷ್ಟು ಹಾಡನ್ನು ಹೇಳಿದಳು.
         ಅಜ್ಜಿಯ ಹಾಡಿನಿಂದ ಮದ್ಯಾಹ್ನ ಊಟವೂ ಅಲ್ಲಿಯೇ ಆಯಿತು. ರಾತ್ರಿಯ ಊಟವನ್ನೂ ಮಾಡಿದೆವು. ರಾತ್ರಿ ಅವರ ಮನೆಯಲ್ಲಿಯೇ ಉಳಿಯುವ ಒತ್ತಾಯವನ್ನು ಮಾಡಿದರಾದರೂ ನಾವು ಒಪ್ಪಲಿಲ್ಲ. ಇಂತಹ ಅಜ್ಜಿ ಹಳ್ಳಿ ಹಾಡಿನ ಜೊತೆಗೆ ಕೆಲವು ಆರೋಗ್ಯದ ಟಿಪ್ಸ್ ಗಳನ್ನೂ ಕೊಟ್ಟಿದ್ದು ವಿಶೇಷವಾಗಿತ್ತು. ನಮ್ಮ ಅದೃಷ್ಟವೋ ಜೊತೆಗೆ ದುರಾದೃಷ್ಟವೋ ಗೊತ್ತಿಲ್ಲ. ನಾವು ಅಲ್ಲಿಗೆ ಹೋಗಿ ಬಹಳಷ್ಟು ಹಾಡನ್ನು ಬರೆದುಕೊಂಡು ಬಂದಿದ್ದೆವು. ಇನ್ನೂ ಬಹಳಷ್ಟು ಹಾಡುಗಳನ್ನು ಬರೆಯುವುದು ಬಾಕಿ ಇತ್ತು. ಇನ್ನೊಂದು ದಿನ ಬರುತ್ತೇವೆ ಎಂದು ಬಂದಿದ್ದೆವು. ನಾವು ಹೋಗಿ ಬಂದ ತಿಂಗಳೊಪ್ಪತ್ತಿನಲ್ಲೇ ಆ ಅಜ್ಜಿ ತೀರಿಕೊಂಡ ಸುದ್ದಿ ಬಂದಿತು. ಓಹ್.. ಆ ಅಜ್ಜಿಯ ಜೊತೆಗೆ ಮರೆಯಾಗುತ್ತಿದ್ದ ಅದೆಷ್ಟೋ ಹಾಡುಗಳನ್ನು ಬರೆದಿಟ್ಟುಕೊಂಡೆವಲ್ಲ ಎನ್ನುವ ಸಮಾಧಾನ ಒಂದುಕಡೆಯಾದರೆ ಇನ್ನೂ ಅದೆಷ್ಟೋ ಹಾಡುಗಳನ್ನು ಬರೆದುಕೊಳ್ಳ ಬಹುದಿತ್ತು. ಆ ರಾತ್ರಿ ನಾವು ಅಲ್ಲಿ ಉಳಿದಿದ್ದರೆ ಮತ್ತಷ್ಟು ಹಾಡುಗಳನ್ನು ಬರೆದುಕೊಳ್ಳಬಹುದಿತ್ತಲ್ಲ.. ಎಷ್ಟೋ ಅಮೂಲ್ಯ ಹಾಡುಗಳು ಮರೆಯಾದವಲ್ಲ ಎನ್ನುವ ಭಾವನೆ ಕಾಡುತ್ತಿದೆ. ಅಜ್ಜಿಯ ಪೋಟೋ ಹೋಡೆದುಕೊಳ್ಳಲು ನಾವು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ನಾಚಿಕೆ ಕೊಟ್ಟೆಯಾದ ಅಜ್ಜಿ ಕೊನೆಗೂ ಪೋಟೋಕ್ಕೆ ನಿಲ್ಲಲಿಲ್ಲ. ನಮಗೆ ಈಗಲೂ `ಬ್ಯಾಡದಾ ತಮಾ.. ಯನ್ನ ಪೋಟೋ ಹೊಡೆಯದು ಬ್ಯಾಡಾ.. ಇಶ್ಶಿ.. ಸರಿ ಕಾಣ್ತಿಲ್ಲೆ.. ಥೋ ಆನು ಮುದುಕಿನಾ..' ಎಂದು ಹೇಳಿದ್ದು ಸದಾ ನೆನಪಾಗುತ್ತಿರುತ್ತದೆ.
             ಆ ಅಜ್ಜಿ ಹೇಳಿದ ಹಾಡುಗಳು ನಿಮ್ಮೆದುರು ಇಡುತ್ತಿದ್ದೇನೆ. ಈ ಹಾಡುಗಳಲ್ಲಿ ಹಲವು ಅಪೂರ್ಣವಾಗಿವೆ. ವಯಸ್ಸಾಗಿದ್ದ ಅಜ್ಜಿ  ಕಷ್ಟಪಟ್ಟು ನೆನಪು ಮಾಡುಕೊಂಡು ಹೇಳುತ್ತಿತ್ತು. ಆಗಾಗ ಅಜ್ಜಿಯ ಹಾಡಿನ ಸಾಲು ತಪ್ಪಿ ಹೋಗುತ್ತಿತ್ತು. ಆದ್ದರಿಂದ ಸಿಕ್ಕಷ್ಟು, ಇಲ್ಲಿಡುತ್ತೇನೆ. ಹಾಡುಗಳು ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ಅದನ್ನು ಪೂರ್ಣಗೊಳಿಸಿ..
**
ಬಾರೋ ಮಗನೆ ಮನಿಗೆ ಇಂದು
ದೂರ ಕೇಳಲಾರೆನಾ,
ನಾವು ನಮ್ಮ ಮನಿಗೆ ಹೋಗಿ
ದೇವರ ಪೂಜೆ ಮಾಡುವಾ..|
ಸಂಪಿಗೆ ವನಕೆ ಹೋಗಿ
ಸಂಪಿಂಗ್ಹೂವ ಕೊಯ್ವನಾ
ಸಂಪಿಗ್ಹೂವ ಕೊಯ್ದು ತಂದು
ದೇವರ ಚರಣಕೆ ಹಾಕ್ವನಾ |
ಬಾರೋ ಮಗನೆ ಮನಿಗೆ ಇಂದು
ದೂರ ಕೇಳಲಾರೆನಾ..
(ಮೊಮ್ಮಗನ ತಂಟೆಯ ಬಗ್ಗೆ ಅಕ್ಕಪಕ್ಕದ ಮನೆಯವರಿಂದ ಅತಿಯಾದ ದೂರುಗಳು ಬರಲಾರಂಭಿಸಿದಾಗ ಅಜ್ಜಿಯರು ರಮಿಸಿ ಕರೆಯುವ ಬಗೆ ಹೀಗಿತ್ತು.)

**
    ಸ್ಥಳದಲ್ಲಿಯೇ ಹಾಡನ್ನು ಹೊಸೆದು ಹಾಡುವ ಸಾಮರ್ಥ್ಯ ಹೊಂದಿದ್ದ ಅಜ್ಜಿ ನಾವು ಅಲ್ಲಿಗೆ ಹೋದಾಗ ಒಂದು ಹಾಡನ್ನು ಹೇಳಿದ್ದು ಹೀಗೆ..
ಅರ್ಧ ರಾತ್ರಿಲಿ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ಸರಗೆ ಕೊಡ್ತಿ ಹೇಳಿದ್ರಿ (ಸರಗೆ=ಆಭರಣ)
ಮನಿಗೆ ಹಾದಿ ಹಿಡಿದಿದ್ರಿ
ಸುಬ್ರಾಯ ಹೆಗಡೆರ ಬೆಡಗೆ
ಸುಬ್ರಾಯ ಹೆಗಡೆರ ಸೊಬಗೆ
ಸಂಜೆ ಹೊತ್ತಿಗೆ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ವಾಲೆ ಹೊತ್ತಿಗೆ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ಸುಬ್ರಾಯ ಹೆಗಡೆರ ಬೆಡಗೇ
ಸುಬ್ರಾಯ ಹೆಗಡೆರ ಸೊಬಗೆ...

**
ಇನ್ನೊಂದು ಮಜವಾದ ಸಾಲುಗಳಿವೆ.. ಆದರೆ ಅರ್ಧಮರ್ಧ ಹೇಳಿದ ಅಜ್ಜಿಗೆ ಪೂರ್ತಿ ನೆನಪಾಗಲಿಲ್ಲ.. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ಎಂಟಕ್ಕೆದ್ದು ಗಂಟೆ ನೋಡಿ
ಗಂಟು ಮೋರೆ ಹಾಕ್ತಾಳ್ರೀ
ಗಂಟಿಗಷ್ಟು ಬುದ್ಧಿ ಇಲ್ಲ
ಎಂದು ನಮ್ಮವ್ವ ಹೇಳ್ತಾಳ್ರೀ..|
ಎಂತಾ ಕಾಲ ಬಂದೋಯ್ತು..
ಇಂತಾ ಕಾಲ ಬಂದದ್ದಿಲ್ಲ
ಎಂದು ನಮ್ಮವ್ವ ಹೇಳ್ತಾಳ್ರೀ..|

**
ತವರು ಮನೆಯಿಂದ ಗಂಡನ ಮನೆಗೆ ಹೊರಟ ಮಗಳ ಬಳಿ ತಾಯಿ ಕೆಲವು ಮಜಾ ಸಂಗತಿಗಳನ್ನು ಹೇಳಿಕೊಡುತ್ತಾಳೆ. ಕೆಲಸದ ಶ್ರಮ ತಪ್ಪಿಕೊಳ್ಳಲೋಸುಗ ಆಕೆ ಹೇಳುವ ಪಾಟ ಮಜವಾಗಿದೆ.  ಓದಿ ನೋಡಿ.. ಹಾಡು ಅಪೂರ್ಣವಾಗಿದೆ.. ಪೂರ್ತಿ ಗೊತ್ತಿದ್ದವರು ತಿಳಿಸಬಹುದು..

ಬೆಳಗು ಮುಂಜಾಮದಿ
ಏಳಕ್ಕೆದ್ದು ಚಹಾ ಆಯಿತೆ
ಎಂದೇ ಕೇಳು
ಬುದ್ದಿಯ ಮಾತ ಹೇಳುವೆ ನಿನಗೆ
ಸದ್ದಿಲ್ಲದೆ ನೀ ಕೇಳು|

ತೆಳ್ಳನೆ ಸೀರೆ ಒಳ್ಳೆಯ ಶೋಭೆ
ಗಂಡನ ಮನೆಯಲಿ ಪಡೆ ಮಗಳೆ
ಹೊಟೆಲಿನಿಂದ ಊಟಕೆ ತರಿಸಿ
ಅಡುಗೆಯ ಕಾಟವ ತಪ್ಪಿಸಿಕೊ..|

(ಈ ಹಾಡಿನಲ್ಲಿ ಸೂಕ್ಷ್ಮವಾಗಿ ಇರುವ ಪೋಲಿ ಶಬ್ದಗಳನ್ನು ಗಮನಿಸಿ.. ತೆಳ್ಳನೆ ಸೀರೆಯಲ್ಲಿ ಮೈ ಕಾಣುವಂತಿರಬೇಕು ಎನ್ನುವ ಮಾತನ್ನು ತಾಯಿ ಮಗಳಿಗೆ ಹೇಳುತ್ತಾಳೆ. ಗಂಡ ನಿನ್ನ ಬಳಿಯೇ ಗಮನ ಇರಿಸುತ್ತಾನೆ ಎಂದೂ ಹೇಳುತ್ತಾಳೆ.)(ಈ ಹಾಡು ಪೂರ್ತಿಯಾಗಿ ಸಿಕ್ಕರೆ ಇನ್ನೆಷ್ಟು ಮಜವಾಗಿರುತ್ತಿತ್ತೋ.. ಛೇ..)

(ಮುಂದಿನ ಕಂತಿನಲ್ಲಿ ಇನ್ನಷ್ಟು ಹಾಡುಗಳು ಕೊಡುತ್ತೇನೆ... ಗಣಪಜ್ಜಿ ಮರಳಲಿದ್ದಾಳೆ.. ಕಾಯಬೇಕಿದೆ..)