ಅವು
ಎಷ್ಟು ಅನ್ಯೋನ್ಯ ಎಂದರೆ, ಗಂಡು ಹಾಗೂ ಹೆಣ್ಣು ಹಕ್ಕಿ ಎರಡೂ
ಕೂಡಿ ಸರಿಯಾದ ಪೊಟರೆ ಒಂದನ್ನು ಹುಡುಕಿ ಗೂಡು ಕಟ್ಟುತ್ತವೆ. ಆ ಗೂಡಿನಲ್ಲಿ ಹೆಣ್ಣು ಹಕ್ಕಿ
ಮೊಟ್ಟೆ ಇಟ್ಟು ಕಾವಿಗೆ ಕೂತರೆ, ಗಂಡು ಹಕ್ಕಿ ಆ ಪೊಟರೆಯ ಸುತ್ತ
ರಕ್ಷಣಾ ಕವಚದ ರೂಪದಲ್ಲಿ ಮಣ್ಣಿನ ಪ್ಲಾಸ್ಟರ್ ಮಾಡಲು ಮುಂದಾಗುತ್ತದೆ. ತನ್ನ ಕೊಕ್ಕಿನ ಮೂಲಕ ಹಸಿ
ಮಣ್ಣನ್ನು ಕಿತ್ತು ತಂದು ಅದನ್ನು ಪೊರೆಯ ಸುತ್ತ ನಿಧಾನವಾಗಿ ಮೆತ್ತುತ್ತದೆ. ಪೊಟರೆಯೊಳಗೆ
ಹೆಣ್ಣು ಹಕ್ಕಿ ಇರುವಂತೆಯೇ ಮಣ್ಣಿನ ಪ್ಲಾಸ್ಟರ್ ಮಾಡುವ ಗಂಡು ಹಕ್ಕಿ, ಕೊನೆಗೆ ಆಹಾರ ತರಲು ಮುಂದಾಗುತ್ತದೆ.
ಪ್ರತಿ ದಿನ, ಪ್ರತಿ ಕ್ಷಣ ನೂರಾರು ಕಿಲೋಮೀಟರ್
ಹಾರಾಟ ಮಾಡಿ, ಅಲೆದಾಟ ನಡೆಸಿ ಆಹಾರ ಅರಸಿ ಬರುವ
ಗಂಡು ಹಂಕ್ಕಿ, ಆ ಪ್ಲಾಸ್ಟರ್ ಮಧ್ಯದಲ್ಲಿರುವ
ಚಿಕ್ಕದೊಂದು ಕಿಂಡಿಯ ಮೂಲಕ ಹೆಣ್ಣು ಹಕ್ಕಿಗೆ ಆಹಾರವನ್ನು ತಂದುಕೊಡುತ್ತದೆ.
ಹೀಗೆ
ಒಂದೆರಡು ದಿನವಲ್ಲ, ತಿಂಗಳುಗಳ ಕಾಲ ಮಾಡುತ್ತದೆ. ಯಾವಾಗ
ಮೊಟ್ಟೆ ಒಡೆದು ಮರಿಗಳು ಬೆಳೆದು ರೆಕ್ಕೆ ಬಲಿಯುತ್ತದೆಯೋ ಆಗ ಗಂಡು ಹಕ್ಕಿಯೇ ಪ್ಲಾಸ್ಟರ್ ಒಡೆದು
ಗೃಹಬಂಧನದಿಂದ ಬಿಡಿಸುತ್ತದೆ. ಒಂದು ವೇಳೆ ಆಹಾರ ತರಲಿಕ್ಕೆ ಹೋದ ಗಂಡು ಹಕ್ಕಿ ಬೇಟೆಗಾರರಿಗೋ, ಇತರ ಪ್ರಾಣಿ ಪಕ್ಷಿಗಳ ದಾಳಿಗೋ
ಬಲಿಯಾದರೆ, ಪೊಟರೆಯೊಳಕ್ಕೆ ಬಂಧಿಯಾದ ಹಕ್ಕಿ
ಅಲ್ಲೇ ಉಪವಾಸ ಬಿದ್ದು ಸಾಯುತ್ತದೆ. ಇಂತಹದ್ದೊಂದು ವಿಶಿಷ್ಟ ಜೀವನ ಕ್ರಮವನ್ನು ಲಕ್ಷಾಂತರ
ವರ್ಷಗಳಿಂದ ಬೆಳೆಸಿಕೊಂಡು ಬಂದು, ಮನುಷ್ಯರಿಗೂ
ಆದರ್ಶಪ್ರಾಯವಾಗಿರುವ ಹಕ್ಕಿಯೇ ಹಾರ್ನಬಿಲ್.
ಮಂಗಟ್ಟೆ
ಎಂದು ಕನ್ನಡದಲ್ಲಿ ಕರೆಸಿಕೊಳ್ಳುವ ಹಾರ್ನಬಿಲ್ ಗಳು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳು.
ಭಾರತದಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮೀಝೋರಾಂ, ಮಣಿಪುರಗಳನ್ನು ಬಿಟ್ಟರೆ ಪಶ್ಚಿಮ
ಘಟ್ಟಗಳಲ್ಲಿ ಮಾತ್ರ ಕಾಣಸಿಗುವಂತಹ ಅಪರೂಪದ ಪಕ್ಷಿ. ಕರ್ನಾಟಕದ ದಾಂಡೇಲಿ ಹಾಗೂ ಸುತ್ತಮುತ್ತಲ
ಪ್ರದೇಶಗಳಲ್ಲಿ ಮಾತ್ರ ಇರುವ ವಿಶಿಷ್ಟ ಪಕ್ಷಿ.
ಗ್ರೇಟ್
ಮಲಬಾರ್ ಗ್ರೇ ಹಾರ್ನಬಿಲ್ ಎಂದು ಆಂಗ್ಲ ಭಾಷೆಯಲ್ಲಿ ಕರೆಸಿಕೊಳ್ಳುವ ಮಂಗಟ್ಟೆಗಳು ಅವುಗಳ ಆಕರ್ಷಕ
ಬಣ್ಣಗಳು, ಹಾಗೂ ಆಕಾರದಿಂದ ಎಲ್ಲರನ್ನೂ
ಸೆಳೆಯುತ್ತವೆ. ಈ ಹಾರ್ನಬಿಲ್ ಗಳು ಅವುಗಳ ವಿಶಿಷ್ಟ ರಚನೆಯ ಕೊಕ್ಕುಗಳಿಂದಲೇ ಇನ್ನಷ್ಟು
ಆಕರ್ಷಕವಾಗಿ ಕಾಣುತ್ತವೆ. ಆದರೆ ಹಾರ್ನಬಿಲ್ ಗಳ ಆಕಾರ, ಅದರ
ಆಕರ್ಷಕ ಪುಕ್ಕಗಳು, ಕೊಕ್ಕುಗಳ ಕಾರಣದಿಂದಲೇ ಹೆಚ್ಚಿನ
ಸಂಖ್ಯೆಯಲ್ಲಿ ಬೇಟೆಗಾರರಿಗೆ ಬಲಿಯಾಗುತ್ತಿವೆ.
ಒಮ್ಮೆಲೆ
ಮೂರು-ನಾಲ್ಕು ಮೊಟ್ಟೆಗಳನ್ನು ಇಡುವ ಹಾರ್ನಬಿಲ್ ಗಳು ಬದುಕಿಗಾಗಿ ದಿನಂಪ್ರತಿ ಹೋರಾಟವನ್ನು
ನಡೆಸುತ್ತಿವೆ. ಆಹಾರದ ಅಭಾವ, ಪ್ರಾಕೃತಿಕ ಸಮಸ್ಯೆ, ಹಾವು, ಹದ್ದುಗಳಂತಹ ಕಾಡುವ ಶತ್ರುಗಳು, ಯಾವ ಕ್ಷಣದಲ್ಲಿ ಯಾವ ಬೇಟೆಗಾರನ
ಬಂದೂಕಿನ ಏಟಿಗೆ ಬಲಿಪಶು ಆಗಬೇಕೋ ಎಂಬ ಆತಂಕದ ನಡುವೆಯೇ ಗುಟುಕು ಜೀವ ಹಿಡಿದುಕೊಂಡಿವೆ.
ಗುಂಪು
ಗುಂಪಾಗಿ ವಾಸ ಮಾಡುವ ಹಾರ್ನಬಿಲ್ ಏಕಪತ್ನಿ ವೃತಸ್ಥ. ಗುಬ್ಬಿಗಳಂತೇ ಇವು, ಒಂದು ಸಂಗಾತಿ ಮರಣಿಸಿದರೆ
ಇನ್ನೊಂದನ್ನು ಹುಡುಕಿ ಹೋಗುವುದಿಲ್ಲ. ಬದಲಾಗಿ ಜತೆಗಾರ ಹಕ್ಕಿಯ ನೆನಪಿನಲ್ಲೇ ಪ್ರಾಣ
ಬಿಡುತ್ತವೆ. ಗಂಡು ಹಕ್ಕಿ ಸತ್ತರೆ ಹೆಣ್ಣು ಹಕ್ಕಿ ಹಾಗೂ ಹೆಣ್ಣು ಹಕ್ಕಿ ಸತ್ತರೆ ಗಂಡು ಹಕ್ಕಿ, ಒಬ್ಬಂಟಿಯಾಗಿ ಉಳಿದು, ಕೊನೆಗೆ ಸಾಯುತ್ತವೆ. ಹಾರ್ನಬಿಲ್
ಸಣ್ಣಪುಟ್ಟ ಕಾಡುಗಳಲ್ಲಿ ವಾಸ ಮಾಡುವುದೇ ಇಲ್ಲ. ಈ ಹಾರ್ನಬಿಲ್ ವಾಸ ಮಾಡುವ ಕಾಡುಗಳು ಅತ್ಯಂತ
ಸಮೃದ್ಧವಾದುದು ಎಂದೇ ಹೆಸರಾಗಿದೆ. ಮಾನವನ ಹಸ್ತಕ್ಷೇಪವನ್ನು ಎಳ್ಳಷ್ಟೂ ಸಹಿಸದ ಇವು, ದಟ್ಟ ಕಾನನದ ನಡುವೆ ಎಲ್ಲೋ ಜೀವನ
ನಿರ್ವಹಣೆ ಮಾಡುತ್ತವೆ.
ರಾಮಪತ್ರೆ, ಕಾಸರಕನ ಹಣ್ಣು, ಕಾಡು ಹಣ್ಣುಗಳನ್ನು ತಿಂದು ಜೀವಿಸುವ
ಹಾರ್ನಬಿಲ್ ತನ್ನ ಆಹಾರ ಹುಡುಕಿಕೊಂಡು ದಿನವೊಂದಕ್ಕೆ ಏನಿಲ್ಲವೆಂದರೂ ಕನಿಷ್ಠ ೧೬೦ಕ್ಕೂ ಹೆಚ್ಚು
ಕಿಲೋಮೀಟರ್ ಗಳಷ್ಟು ದೂರ ಹಾರಾಟ ಮಾಡುತ್ತವೆ. ಇವುಗಳ ಆಹಾರ ಸಣ್ಣ ಕಾಡುಗಳಲ್ಲಿ ದೊರಕುವುದಿಲ್ಲ.
ದಟ್ಟ, ಸೂರ್ಯನ ಕಿರಣಗಳು ಭೂಮಿಯನ್ನು
ತಲುಪಲು ಸಾಧ್ಯವಿಲ್ಲದಂತಹ ಕಾಡುಗಳಲ್ಲೇ ಬೆಳೆಯುವುದರಿಂದ, ತಾನು
ಗೂಡು ಕಟ್ಟಿದ ಕಾಡಿನಿಂದ ಬಹುದೂರದ ಇನ್ನೊಂದು ದಟ್ಟಾರಣ್ಯಕ್ಕೆ ಹಾರಾಟ ಮಾಡಿ, ಬೇಟೆ ಹಾಗೂ ಆಹಾರವನ್ನು ಅರಸಿ, ಅದೇ ದಿನ ಮತ್ತೆ ತನ್ನ
ಸ್ವಸ್ಥಾನಕ್ಕೆ ಮರಳುತ್ತವೆ. ತಜ್ಞರ ಅಧ್ಯಯನದ ಪ್ರಕಾರ ದಾಂಡೇಲಿಯಲ್ಲಿ ಗೂಡು ಕಟ್ಟಿದ ಹಾರ್ನಬಿಲ್, ಆಹಾರವನ್ನು ಹುಡುಕಿ ಶರಾವತಿ ನದಿಯ
ಗೇರುಸೊಪ್ಪೆಯ ಮೌನ ಕಣಿವೆ ಪ್ರದೇಶದವರೆಗೂ ಪ್ರತಿದಿನ ಹಾರಾಟ ನಡೆಸುತ್ತದಂತೆ.
ಇವುಗಳ
ಪುಕ್ಕಗಳು ಅದೃಷ್ಟದ ಸಂಕೇತ ಎನ್ನುವ ಮೂಢ ನಂಬಿಕೆ ಇತ್ತು. ಅಲ್ಲದೇ ಇವುಗಳ ಕೊಕ್ಕುಗಳು ಔಷಧೀಯ
ಗುಣಗಳನ್ನು ಹೊಂದಿದೆ ಎನ್ನುವ ಮಾತುಗಳೂ ಇದ್ದವು. ಈ ಕಾರಣದಿಂದಲೇ ಬೇಟೆಗಾರರು ಇವನ್ನು
ಬೇಟೆಯಾಡುತ್ತಾರೆ. ಅಲ್ಲದೇ ಇವನ್ನು ಹಿಡಿದು ಕಳ್ಳ ಸಾಗಾಣಿಕೆ ಮಾಡುವವರ ಸಂಖ್ಯೆಗೂ ಹೆಚ್ಚಿದೆ.
(ನಾಗಾಲ್ಯಾಂಡ್ ನಲ್ಲಿ ಹಾರ್ನಬಿಲ್ ಹಬ್ಬವೇ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಗಾಲ್ಯಾಂಡಿನ
ಗ್ರಾಮಗಳ ಜನರು, ಹಾರ್ನಬಿಲ್ ಪುಕ್ಕಗಳಿಂದ ತಯಾರಿಸಿದ
ವಿಚಿತ್ರ ಹಾಗೂ ವಿಶಿಷ್ಟ ಬಗೆಯ ಧಿರಿಸನ್ನು ಧರಿಸುತ್ತಾರೆ. ಇದು ಅದೃಷ್ಟದ ಸಂಕೇತ ಹಾಗೂ
ಸಮಾಜದಲ್ಲಿನ ಹೆಸರುಗಳಿಗೂ ಕಾರಣವಾಗುತ್ತದೆ ಎನ್ನುವ ನಂಬಿಕೆ ಇದೆ.) ಅಲ್ಲದೇ ಹಾರ್ನಬಿಲ್ ಗಳಿಗೆ ಪೂರಕವಾದ
ಆಹಾರಗಳೂ ಸಿಗುತ್ತಿಲ್ಲ. ಈ
ಕಾರಣಗಳಿಂದ ಹಾರ್ನಬಿಲ್ ಅಳಿವಿನ ಅಂಚಿನಲ್ಲಿದೆ.
ಹಿಂದೆ
ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾರ್ನಬಿಲ್ ಗಳ
ಮಹತ್ವವನ್ನು ಅರಿತು, ದಾಂಡೇಲಿಯನ್ನು ಹಾರ್ನಬಿಲ್
ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ಹಾರ್ನಬಿಲ್ ಗಳ ಪ್ರಮುಖ ಆಹಾರವಾದ
ರಾಮಪತ್ರೆ ಈ ಮುಂತಾದ ಮರಗಳನ್ನು ಬೆಳೆಸಲು ಅನುವಾಗುವಂತೆ ಸಾಕಷ್ಟು ಅನುದಾನವನ್ನೂ ಘೋಷಣೆ
ಮಾಡಿದ್ದರು. ಆ ನಂತರದಲ್ಲಿ ದಾಂಡಡೇಲಿಯ ಪ್ರದೇಶದಲ್ಲಿ ಹಾರ್ನಬಿಲ್ ಸಂರಕ್ಷಿತ ಅರಣ್ಯ ಪ್ರದೇಶ
ಎನ್ನುವ ಬೋರ್ಡುಗಳೂ ಕಾಣಿಸಿಕೊಂಡವು. ಆದರೆ ದಿನಗಳೆಂದಂತೆ ಹಾರ್ನಬಿಲ್ ಸಂರಕ್ಷಣೆ ಎನ್ನುವುದು
ಕಡತಕ್ಕೆ ಮಾತ್ರ ಸೀಮಿತವಾಯಿತು. ಯಡಿಯೂರಪ್ಪ ಘೋಷಣೆ ಮಾಡಿದ ಅನುದಾನ ಅವರ ಅಧಿಕಾರಾವಧಿಯ ನಂತರದ
ದಿನಗಳಲ್ಲಿ ಎಲ್ಲಿಗೆ ಹೋಯಿತೋ ಗೊತ್ತಿಲ್ಲ. ಹಾರ್ನಬಿಲ್ ಗಳಿಗೆ ಅಗತ್ಯವಾದ ರಾಮಪತ್ರೆಯ
ಗಿಡಗಳನ್ನು ಬೆಳೆಸುವುದು ಕಡತಗಳಿಗೆ ಮಾತ್ರ ಸೀಮಿತವಾಯಿತು.
ಯಡಿಯೂರಪ್ಪರ
ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯರಿಗಂತೂ ಹಾರ್ನಬಿಲ್ ಗಳಂತಹ ಪಕ್ಷಿಗಳ, ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ
ಕುರಿತು ಚಿಂತಿಸಲು ಸಮಯವೇ ಇರಲಿಲ್ಲ ಬಿಡಿ. ಅವರು ಅವುಗಳನ್ನೆಲ್ಲ ಕಡೆಗಣನೆ ಮಾಡಿ, ಧರ್ಮ, ಮತ, ಜಾತಿ, ಸಮಾಜ, ಅಹಿಂದ ಹೀಗೆ ಹಲವು ಮಾರ್ಗಗಳನ್ನು
ಹಿಡಿದು ಹೊರಟರು. ಇನ್ನು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿಗಳಿಗಂತೂ ಇಂತದ್ದೊಂದು ಪಕ್ಷಿ ಸಂಕುಲ
ಇದೆ ಎನ್ನುವುದನ್ನು ಮತ್ತೆ ಮತ್ತೆ ತಿಳಿಸಿಹೇಳಬೇಕೇನೋ. ಬಿಡಿ.
ಯಡಿಯೂರಪ್ಪರು
ಹಾರ್ನಬಿಲ್ ಗೆ ಮೀಸಲು ಜಾಗವನ್ನೇನೋ ಘೋಷಣೆ ಮಾಡಿದರು, ಆದರೆ
ಕುಮಾರಸ್ವಾಮಿ ಹಕ್ಕಿಗಳಿಗೆ ಸಂಬಂಧಿಸಿದಂತೆ, ತಮ್ಮ
ಪಕ್ಷಕ್ಕೆ ಮತ ಹಾಕದ ಪ್ರದೇಶದಲ್ಲಿದೆ. ಆದ್ದರಿಂದ ಅವುಗಳ ಕುರಿತು ತಾನೇಕೆ ತಲೆ
ಕೆಡಿಸಿಕೊಳ್ಳಬೇಕು ಎಂದು ಹೇಳೀದರೂ ಆಶ್ಚರ್ಯವಿಲ್ಲ.
ಮುಖ್ಯಮಂತ್ರಿಗಳಾದವರಿಗೆ ಸೂಕ್ಷ್ಮ
ಸಂವೇದನೆ ಇರಬೇಕು. ರಾಜ್ಯದ ಜನರ ಕಡೆಗೆ ಇರುವಷ್ಟು ಉತ್ತಮ ಭಾವನೆಗಳನ್ನು ಪ್ರಾಣಿ, ಪಕ್ಷಿಗಳ
ಕಡೆಗೂ ತೋರ್ಪಡಿಸಬೇಕು. ಯಾವುದೇ ವಿಷಯದ ಕುರಿತು ತ್ವರಿತವಾಗಿ ಸ್ಪಂದನೆ ಮಾಡುವ ಗುಣ
ಬೆಳೆಸಿಕೊಂಡಿರಬೇಕು. ಆದರೆ ಇಂದಿನ ಮುಖ್ಯಮಂತ್ರಿಗಳು ಹಾಗೂ ಅವರ ಬಳಗ ಮನುಷ್ಯರನ್ನೇ ಪ್ರಾಣಿಗಳ
ರೀತಿಯಲ್ಲಿ ಕಾಣುತ್ತಿದ್ದಾರೆ. ನೆರೆ ಸಂತ್ರಸ್ಥರಿಗೆ ಆಹಾರವನ್ನೇ ನಾಯಿಗಳಿಗೆ ಎಸೆದಂತೆ ಎಸೆಯುವ
ಮಂತ್ರಿಗಳನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಹಾರ್ನಬಿಲ್ ಗಳಂತಹ ನಿಷ್ಪಾಪಿ ಪಕ್ಷಿಗಳು, ಅಳಿವಿನ
ಅಂಚಿನಲ್ಲಿರುವ ಜೀವಿ ಜಗತ್ತು ಕಾಣಲು ಸಾಧ್ಯವೇ? ಮೈತ್ರಿಯ ಮೆಟ್ಟಿಲಲ್ಲಿ ಒಂದ ಕಾಲು ಇಟ್ಟು ಗಟ್ಟಿ ನಿಲ್ಲಲ್ಲು
ಹೆಣಗಾಡುತ್ತಿರುವ ಮುಖ್ಯಮಂತ್ರಿಗಳು ಹಾಗೂ ಅವರ ಪಕ್ಷದ ಜತೆಗಾರರಿಂದ ಅರಣ್ಯ ಸಂರಕ್ಷಣೆ, ಪಕ್ಷಿಗಳ
ಉದ್ಧಾರ ಎನ್ನುವುದು ಕನಸೇ ಸರಿ.