Wednesday, December 20, 2017

ಆಗುಂಬೆಯ ತಮ್ಮ ಜೇನುಕಲ್ಲುಗುಡ್ಡ


ಬಹುತೇಕರು ಆಗುಂಬೆಯನ್ನು ನೋಡಿಯೇ ಇರುತ್ತಾರೆ. ಆಗುಂಬೆಯ ಸೂರ್ಯಾಸ್ತವನ್ನು ನೋಡಿ ಮನದಣಿದವರು ಅನೇಕರಿದ್ದಾರೆ. ಆಗುಂಬೆಯಂತಹುದೇ ಒಂದು ಸ್ಥಳ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ. ಥಟ್ಟನೆ ನೋಡಿದರೆ ಆಗುಂಬೆಗಿಂತಲೂ ಚನ್ನಾಗಿ ಕಾಣುವ ಈ ತಾಣವೇ ಜೇನುಕಲ್ಲುಗುಡ್ಡ.
ಇದ್ದಕ್ಕಿದ್ದಂತೆ ಭೂಮಿಯ ಕೊನೆಯ ಭಾಗ ಬಂದೇ ಹೋಯಿತೇನೋ ಎನ್ನುವಂತೆ ಕಾಣುವ ಕಡಿದಾದ ಕಲ್ಲಿನ ಗುಡ್ಡ. ಕಣಿವೆಯಾಳದಲ್ಲಿ ಬಳುಕಿ ಹರಿಯುವ ಗಂಗಾವಳಿ ನದಿ. ಕೇಳಿಯೂ ಕೇಳದಂತಹ ನದಿ ಹರಿವಿನ ಶಬ್ದ. ಇಣುಕಿ ನೋಡಿದಲ್ಲೆಲ್ಲ ಸಹ್ಯಾದ್ರಿ ವನರಾಶಿ. ಆಹಾ ಜೇನುಕಲ್ಲು ಗುಡ್ಡದ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಆಗುಂಬೆಯಂತೆಯೇ ಇದೂ ಕೂಡ ಸೂರ್ಯಾಸ್ಥಕ್ಕೆ ಹೆಸರಾದುದು. ರೌದ್ರ ರೂಪ ತಾಳಿದ ಸೂರ್ಯ ಪಡುವಣದತ್ತ ಇಳಿದು ಅರಬ್ಬಿ ಸಮುದ್ರದಾಚೆ ಮುಳುಗಿ ಹೋಗುವ ಆ ಸಂಜೆಯ ಸಂದರ್ಭವಂತೂ ವರ್ಣಿಸಲಸದಳ. ಬಾನು ಕೆಂಪಾಗಿ, ಸೂರ್ಯ ಕೂಡ ದೊಡ್ಡದೊಂದು ಚೆಂಡಿನ ಆಕಾರ ಪಡೆದು ಅಸ್ತಮಿಸುತ್ತಿದ್ದರೆ ಜೇನುಕಲ್ಲು ಗುಡ್ಡದಿಂದ ನೋಡುಗರ ಮನಸ್ಸಂತೂ ಸ್ವರ್ಗದಲ್ಲಿ ಇದ್ದಂತೆ ಭಾಸವಾಗುತ್ತದೆ.
ಈ ಜೇನುಕಲ್ಲು ಗುಡ್ಡಕ್ಕೆ ಹೋದರೆ ನಾವು ಮೋಡಗಳ ಮೇಲೆ ನಿಂತಂತೆ ಭಾಸವಾಗುತ್ತದೆ. ಗಂಗಾವಳಿ ಕಣಿವೆಯ ಆಳದಲ್ಲಿ ಹಾದು ಬರುವ ಮೋಡ ಸಹ್ಯಾದ್ರಿ ಶೃಂಗಗಳಿಗೆ ಢಿಕ್ಕಿ ಹೊಡೆದು ನಿಂತಿರುತ್ತದೆ. ಈ ದೃಶ್ಯವಂತೂ ನಾವೇ ಮೋಡಕ್ಕಿಂತ ಮೇಲೆ ನಿಂತಿದ್ದೇವೇನೋ ಅನ್ನಿಸುತ್ತದೆ. ಅಷ್ಟೇ ಅಲ್ಲ ಪಶ್ಚಿಮ ಘಟ್ಟಗಳ ಮೇಲೆ ಮೋಡಗಳ ಚಾಪೆ ಹಾಸಲಾಗಿದೆಯೇನೋ ಅನ್ನಿಸುತ್ತದೆ. ಮಳೆಗಾಲದಲ್ಲಂತೂ ಜೇನುಕಲ್ಲು ಗುಡ್ಡದ ಸೌಂದರ್ಯ ನೂರ್ಮಡಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಣಿವೆಯಾಳದಲ್ಲಿ ಕಾಣುವ ಅಂಕೋಲಾ ತಾಲೂಕಿನ ಪ್ರದೇಶಗಳು, ನಡು ನಡುವೆ ತಲೆಯೆತ್ತಿರುವ ಗುಡ್ಡಗಳು, ಹಸಿರ ತೋಟಗಳು, ಬಾನಿನ ಕಡೆಗೆ ಮುಖ ಮಾಡಿ ನಿಂತ ಕಾನನದ ಮರಗಳು, ನಡು ನಡುವೆ ಗದ್ದೆಗಳು ಇವೆಲ್ಲವೂ ಕೂಡ ಕಣ್ಮನ ಸೆಳೆಯುತ್ತವೆ.
ಜೇನಕಲ್ಲು ಗುಡ್ಡ ಹೆಸರೇ ಹೇಳುವ ಹಾಗೆ ಜೇನುಗಳ ಕಲ್ಲು ಕೂಡ ಹೌದು. ಕಡಿದಾದ ಕಲ್ಲು ಬಂಡೆ. ಆ ಕಲ್ಲುಬಂಡೆಯ ಪಾರ್ಶ್ವದಲ್ಲೆಲ್ಲ ಜೇನುಗಳು ಗೂಡು ಕಟ್ಟಿಕೊಂಡಿದೆ. ಈ ಜೇನುಕಲ್ಲು ಗುಡ್ಡದ ನೆತ್ತಿಯ ಮೇಲೆ ನಿಂತರೆ ಎಷ್ಟು ಆಹ್ಲಾದವೋ, ಅಷ್ಟೇ ಅಪಾಯಕಾರಿ ತಾಣವೂ ಇದಾಗಿದೆ. ಕಬ್ಬಿಣದ ಬೇಲಿ ಇಲ್ಲಿದ್ದರೂ ಕೊಂಚ ಯಾಮಾರಿದರೆ ಕೈಲಾಸವೇ ಗತಿ ಎನ್ನುವಂತಹ ಸ್ಥಳ. ನೆತ್ತಿಯ ಮೇಲೆ ಒಂದೆರಡು ವೀಕ್ಷಣಾ ಗೋಪುರಗಳೂ ಇದೆ. ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿದಂತಹ ಸ್ಥಳ. ದಟ್ಟವಾದ ಕಾಡಿನಿಂದಾವೃತವಾದ ಈ ತಾಣಕ್ಕೆ ವರ್ಷದ ಯಾವುದೇ ಕಾಲದಲ್ಲಿಯೂ ಕೂಡ ಹೋಗಿ ಬರಬಹುದು. ಈ ತಾಣದವರೆಗೂ ಬಸ್ ಸೌಕರ್ಯವಿಲ್ಲ. ಸ್ವಂತ ವಾಹನವನ್ನು ಬಳಸುವುದು ಅನಿವಾರ್ಯ. ಕಚ್ಚಾ ರಸ್ತೆ ದ್ವಿಚಕ್ರ ವಾಹನ ಸವಾರರನ್ನು ಹೈರಾಣಾಗಿಸಬಹುದು. ಆದರೆ ಜೇನುಕಲ್ಲು ಗುಡ್ಡದಲ್ಲಿ ವಿಹರಿಸಿದರೆ ಮನಸ್ಸಿನ ಕ್ಲೇಷ, ಆಯಾಸ, ಪ್ರಯಾಸಗಳೆಲ್ಲ ಕ್ಷಣಾರ್ದದಲ್ಲಿ ದೂರವಾಗುತ್ತದೆ.
ಜೇನುಕಲ್ಲು ಗುಡ್ಡ ನೋಡಲು ಬಂದರೆ ಅಕ್ಕಪಕ್ಕದಲ್ಲಿಯೇ ಮಾಗೋಡು ಜಲಪಾತ ಹಾಗೂ ಕವಡೀಕೆರೆಗಳಿದೆ. ಆರೇಳು ಕಿಲೋಮೀಟರ್ ದೂರದಲ್ಲಿಯೇ ಈ ತಾಣಗಳಿದ್ದು ಇವನ್ನೂ ಕೂಡ ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲ, ಹತ್ತಿರದಲ್ಲಿಯೇ ಚಂದಗುಳಿಯ ಘಂಟೆ ಗಣಪನ ಸನ್ನಿಯೂ ಇದೆ. ಘಂಟೆಯನ್ನು ಹರಕೆಯ ರೂಪದಲ್ಲಿ ಸಮರ್ಪಿಸಿದರೆ ಇಷ್ಟಾರ್ಥ ಕರುಣಿಸುತ್ತಾನೆ ಎನ್ನುವ ಪ್ರತೀತಿ ಹೊಂದಿರುವವ ಗಣಪನ ದೇವಾಲಯ ಹತ್ತಿರದಲ್ಲೇ ಇದೆ. ಜೇನುಕಲ್ಲು ಗುಡ್ಡವನ್ನು ನೋಡಲು ಬರುವವರು ಇವುಗಳನ್ನೂ ನೋಡಬಹುದು.
ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳು ಮೋಜು ಮಸ್ತಿಗೆ ಬಳಕೆಯಾಗುತ್ತಿವೆ. ಇಂತಹ ತಾಣಕ್ಕೆ ಬರುವವರು ನಿರ್ಮಲ ಮನಸ್ಸಿನಿಂದ ಬಂದು ಹೋಗುವುದು ಬಿಟ್ಟು ಗುಂಡುಗಲಿಗಳಾಗುತ್ತಿದ್ದಾರೆ. ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಸೇರಿದಂತೆ ತಾವು ತರುವ ವಸ್ತುಗಳನ್ನು ಇಂತಹ ತಾಣಗಳಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಜೇನುಕಲ್ಲು ಗುಡ್ಡಕ್ಕೆ ಹೋಗುವವರು ತ್ಯಾಜ್ಯವನ್ನು ಎಸೆಯಲು ಅವಕಾಶ ಕೊಡಬಾರದು. ಪ್ರಕೃತಿಯ ಮಧ್ಯದಲ್ಲಿರುವ ತಾಣವನ್ನು ಮಲಿನ ಮಾಡದೇ ತಾಣದ ಸಹಜತೆ ಉಳಿಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಷ್ಟಾದಾಗ ಮಾತ್ರ ಇಂತಹ ತಾಣಗಳ ಸೌಂದರ್ಯ ಸಹಜವಾಗಿರುತ್ತದೆ, ಇನ್ನಷ್ಟು ಹೆಚ್ಚುತ್ತದೆ.
ಹೋಗುವ ಬಗೆ :
ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬಂದು ಅಲ್ಲಿಂದ 15-18 ಕಿ.ಮಿ ದೂರದಲ್ಲಿರುವ ಜೇನುಕಲ್ಲು ಗುಡ್ಡಕ್ಕೆ ಹೋಗಬಹುದು. ಶಿವಮೊಗ್ಗ-ಶಿರಸಿಯ ಮೂಲಕ ಬರುವವರು ಯಲ್ಲಾಪುರ ರಸ್ತೆಯಲ್ಲಿ ಸಾಗಿ ಮಳಲಗಾಂವ್ ಅಥವಾ ಉಪಳೇಶ್ವರದಲ್ಲಿ ಎಡಕ್ಕೆ ತಿರುಗಿ ಚಂದಗುಳಿ, ಮಾಗೋಡ ಫಾಲ್ಸ್ ಮೂಲಕ ಜೇನುಕಲ್ಲು ಗುಡ್ಡಕ್ಕೆ ತೆರಳಬಹುದು. ಮಂಗಳೂರು ಭಾಗದಿಂದ ಬರುವವರು ಅಂಕೋಲಾಕ್ಕೆ ಬಂದು ಅಲ್ಲಿಂದ ಯಲ್ಲಾಪುರ ಮೂಲಕ ಈ ತಾಣವನ್ನು ತಲುಪಲು ಸಾಧ್ಯವಿದೆ. ಯಾವುದೇ ಹೊಟೆಲುಗಳು ಅಥವಾ ಇನ್ನಿತರ ಅಂಗಡಿಗಳು ಇಲ್ಲಿಲ್ಲದ ಕಾರಣ ದಿನವಿಡೀ ಇರಲು ಬಯಸುವವರು ಊಟ ಅಥವಾ ತಿಂಡಿ ಕಟ್ಟಿಕೊಂಡು ಬರುವುದು ಅನಿವಾರ್ಯ. ಯಲ್ಲಾಪುರದಲ್ಲಿ ಉಳಿಯಲು ವಸತಿಗೃಹಗಳಿವೆ. ಒಂದು ಅಥವಾ ಎರಡು ದಿನಗಳ ಅವಯಲ್ಲಿ ಜೇನುಕಲ್ಲು ಗುಡ್ಡ ಸೇರಿದಂತೆ ಯಲ್ಲಾಪುರ ತಾಲೂಕಿನ ಎಲ್ಲ ಪ್ರವಾಸಿ ತಾಣಗಳ ದರ್ಶನ ಮಾಡಬಹುದಾಗಿದೆ.

-----------

(ಈ ಲೇಖನ 2017ರ ಡಿಸೆಂಬರ್ 20ರಂದು ಹೊಸದಿಗಂತದ ಅಂತರಗಂಗೆ ಪುರವಣಿಯ ಯುವರಾಗ ಪುಟದಲ್ಲಿ ಪ್ರಕಟವಾಗಿದೆ)

Wednesday, December 13, 2017

ಭೂಮಿಯ ಮೇಲಿಂದ ಅಳಿದು ಹೋದ ಪ್ರಾಣಿಗಳು

(ಗ್ರೇಟ್ ಆಕ್)
ಮನುಷ್ಯನ ದುರಾಸೆ, ಬೇಟೆಯಾಡುವ ಚಪಲ, ಆಹಾರದ ಬಯಕೆ ಈ ಹಲವಾರು ಕಾರಣಗಳಿಂದಾಗಿ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತದೆ. ವನ್ಯ ಪ್ರಾಣಿಗಳನ್ನಂತೂ ಸುಖಾ ಸುಮ್ಮನೆ ಕೊಂದು ಹಾಕಿದ ನಿದರ್ಶನಗಳೂ ಇದೆ. ಮನುಷ್ಯನ ಸ್ವಾರ್ಥಕ್ಕಾಗಿ ಜಗತ್ತಿನಲ್ಲಿ ಅದೆಷ್ಟೋ ಪ್ರಾಣಿಗಳು ಅಳಿದು ಹೋಗಿದೆ. ಪಕ್ಷಿಗಳು ವಿನಾಶ ಹೊಂದಿವೆ. ಅಷ್ಟೇ ಏಕೆ ಈಗಲೂ ಕೂಡ ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲಗಳು ವಿನಾಶದ ಅಂಚಿನಲ್ಲಿವೆ. ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದ ವನ್ಯ ಮೃಗಗಳು ಒಂದೇ ಒಂದೂ ಕಾಣದಂತೆ ನಾಶವಾಗಿದೆ. ಯಾಂತ್ರೀಕರಣ, ಉದ್ದಿಮೆಗಳು, ಕಾರ್ಖಾನೆಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರಣಗಳಿಂದ ಪ್ರಾಣಿ, ಪಕ್ಷಿಗಳ ನಾಶ ಹೆಚ್ಚಿವೆ. ಕಳೆದ ೩೦೦-೪೦೦ ವರ್ಷಗಳಲ್ಲಿ ಅಪರೂಪದ, ವಿಶಿಷ್ಟ ಪ್ರಾಣಿಗಳು-ಪಕ್ಷಿಗಳು ನಶಿಸಿಹೋಗಿದೆ. ಮುಂದಿನ ಜನಾಂಗಕ್ಕೆ ಇವುಗಳ ಸಣ್ಣ ಕುರುಹೂ ಕೂಡ ಉಳಿದಿಲ್ಲ.  ಕಳೆದ ಮೂರು ಶತಮಾನಗಳಲ್ಲಿ ಅಳಿದು ಹೋಗಿರುವ ೧೧ ಅಪರೂಪದ ಪ್ರಾಣಿಗಳ ಕುರಿತು ಚಿಕ್ಕ ಮಾಹಿತಿ ಇಲ್ಲಿದೆ.

ಗ್ರೇಟ್ ಆಕ್
ಪೆಂಗ್ವಿನಸ್ ಇಂಪೆನ್ನಿಸ್ ಎಂಬ ವೈಜ್ಞಾನಿಕ ನಾಮಧೇಯವನ್ನು ಹೊಂದಿರುವ ಗ್ರೇಟ್ ಆಕ್ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಅಳಿದು ಹೋಗಿದೆ. ಕೆನಡಾ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್,  ಸ್ಕಾಂಡಿನೇವಿಯಾ, ಬ್ರಿಟೀಷ್ ದ್ವೀಪಗಳು, ಉತ್ತರ ಅಟ್ಲಾಂಟಿಕ್ ಹಾಗೂ ರಾಕಿ ಐಲ್ಯಾಂಡ್‌ಗಳಲ್ಲಿ ವಾಸ ಮಾಡುತ್ತಿದ್ದ ಈ ಪಕ್ಷಿ ಸಾಧು ಸ್ವಭಾವದಿಂದ ಎಲ್ಲರನ್ನು ಸೆಳೆಯುತ್ತಿತ್ತು.  ಕಪ್ಪು ಹಾಗೂ ಬಿಳಿ ಬಣ್ಣ ಮಿಶ್ರಣದ ೭೫ ರಿಂದ ೮೫ ಸೆಂ.ಮಿ ಎತ್ತರದ ಈ ಪಕ್ಷಿ  ೫ ಕೆಜಿವರೆಗೆ ತೂಗುತ್ತಿತ್ತು. ೧೮ನೇ ಶತಮಾನದಲ್ಲಿ ಈ ಪಕ್ಷಿಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಬೇಟೆಯಾಡಲಾಯಿತು. ೧೮೫೦ರ ದಶಕದ ವೇಳೆಗೆ ಇವುಗಳ ಸಂಖ್ಯೆ ಕಡಿಮೆಯಾದಂತೆಲ್ಲ ಈ ಪ್ರಾಣಿಗಳನ್ನು ಬೇಟೆಯಾಡಿ, ಅವನ್ನು ಸಂಗ್ರಹಿಸುವುದು ಪ್ರತಿಷ್ಠೆಯ ಪ್ರತೀಕವಾಯಿತು. ಸಿಗುರೌರ್ ಹಾಗೂ ಆತನ ಇಬ್ಬರು ಜೊತೆಗಾರರು ೧೮೪೪ರ ಜುಲೈ ೩ರಂದು ಕೊಟ್ಟಕೊನೆಯ ಗ್ರೇಟ್ ಆಕ್ ಜೋಡಿ ಹಕ್ಕಿಗಳನ್ನು ಬೇಟೆಯಾಡುವುದರೊಂದಿಗೆ ಈ ಸಂತತಿ ಭೂಮಿಯ ಮೇಲಿಂದ ನಶಿಸಿಹೋಯಿತು. ಈ ಹಕ್ಕಿಯನ್ನು ಇದೀಗ ಮ್ಯೂಸಿಯಂಗಳಲ್ಲಿ ಪಳೆಯುಳಿಕೆಗಳ ಹಾಗೂ ಪ್ರತಿಕೃತಿಗಳ ರೂಪದಲ್ಲಿ ಮಾತ್ರ ನೋಡಲು ಸಾಧ್ಯ.

(ಡೋಡೋ)
ಡೋಡೋ
ಪಾರಿವಾಳಗಳ ಕುಟುಂಬಕ್ಕೆ ಸೇರಿದ ಡೋಡೋ ಮಾರಿಷಸ್ ದ್ವೀಪಗಳಲ್ಲಿ ವಾಸಿಸುತ್ತಿತ್ತುಘಿ. ೧೫೯೮ರ ವೇಳೆಗೆ ಡಚ್ ನೌಕಾಯಾನಿಗಳು ಮಾರಿಷಸ್ಸಿನಲ್ಲಿ ಅಪರೂಪದ ಈ ಪಕ್ಷಿ ಸಂಕುಲವನ್ನು ಕಂಡರು. ಅದನ್ನು ನಂತರ ಹೊರ ಜಗತ್ತಿಗೆ ಪರಿಚಯಿಸಿದರು. ಈ ಪಕ್ಷಿಗಳು ವರ್ಷಕ್ಕೊಮ್ಮೆ ಮಾತ್ರ ಮೊಟ್ಟೆಯನ್ನಿಟ್ಟು ಮರಿ ಮಾಡುತ್ತಿದ್ದವು. ೧ ಮೀಟರ್ ಎತ್ತರದ ಈ ಪಕ್ಷಿಗಳು ಗರಿಷ್ಠ ೧೮ ಕೆಜಿ ತೂಕವನ್ನು ಹೊಂದಿದ್ದವು. ಡಚ್ಚರು ಮಾರಿಷಸ್‌ಗೆ ಭೇಟಿ ನೀಡುವುದಕ್ಕೂ ಮೊದಲು ಲಕ್ಷಾಂತರ ಸಂಖ್ಯೆಯಲ್ಲಿದ್ದ ಡೋಡೋಗಳು ನಂತರ  ಕೆಲವೇ ವರ್ಷಗಳಲ್ಲಿ ಅಳಿವಿನ ಅಂಚು ತಲುಪಿದವು. ಮಾರಿಷಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಡೊಡೋಗಳನ್ನು ಬೇಟೆಯಾಡಲಾಯಿತು. ಅಷ್ಟೇ ಅಲ್ಲದೇ ಮಾರೀಷಸ್ ದ್ವೀಪಕ್ಕೆ ಡಚ್ಚರು ನಾಯಿ, ಬೆಕ್ಕುಘಿ, ಹಂದಿ, ಇಲಿ, ಏಡಿಗಳನ್ನು ತಿನ್ನುವ ಕೋತಿಗಳನ್ನು ಅಮದು ಮಾಡಿಕೊಂಡ ನಂತರ ಡೋಡೋಗಳ ನಾಶ ಇಮ್ಮಡಿಸಿತು. ೧೮೮೭ರಲ್ಲಿ ಕೊಟ್ಟ ಕೊನೆಯ ಡೋಡೋ ಸಾವನ್ನಪ್ಪಿತು.  ಡೋಡೊಗಳು ಯಾವ ರೀತಿ ಸಾವನ್ನಪ್ಪಿದವೆಂದರೆ ಇವುಗಳ  ಸಾವಿನ ಕುರಿತಂತೆಯೇ ಇಂಗ್ಲೀಷಿನಲ್ಲಿ ಡೆಡ್ ಆಸ್ ಡೋಡೋ ಹಾಗೂ ಟು ಗೋ ದ ವೇ ಆಫ್ ದ ಡೋಡೋ ಎನ್ನುವ ಎರಡು ರೂಪಕಗಳೇ ಹುಟ್ಟಿಕೊಂಡಿವೆ.

(ಎಲಿಫೆಂಟ್ ಬರ್ಡ್ ನ ಮೊಟ್ಟೆ)
ಎಲಿಫೆಂಟ್ ಬರ್ಡ್
ಭೂಮಿಯ ಮೇಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹೆಚ್ಚು ತೂಕವನ್ನು ಹೊಂದಿರುವ ಪಕ್ಷಿ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದ್ದ ಎಲಿಫೆಂಟ್ ಬರ್ಡ್ ಭೂಮಿಯ ಮೇಲಿಂದ ಅಳಿದು ಹೋಗಿದೆ. ೧೦ ಅಡಿ ಎತ್ತರ ಹಾಗೂ ೧೦೦೦ ಪೌಂಡ್ ತೂಕವನ್ನು ಹೊಂದಿದ್ದ ಈ ಬೃಹತ್ ಗಾತ್ರದ ಪಕ್ಷಿ ಮಡಗಾಸ್ಕರ್ ದ್ವೀಪದಲ್ಲಿ ವಾಸಿಸುತ್ತಿತ್ತುಘಿ. ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ದೊಡ್ಡ ಪಕ್ಷಿಗಳು ಎನ್ನುವ ಖ್ಯಾತಿ ಗಳಿಸಿಕೊಂಡಿರುವ ಆಸ್ಟ್ರಿಚ್ ಹಾಗೂ ಎಮುಗಳ ಜಾತಿಗೆ ಹತ್ತಿರದ ಪಕ್ಷಿ ಇದಾಗಿತ್ತು. ಇದೂ ಕೂಡ ಹಾರಲಾರದ ಪಕ್ಷಿಯಾಗಿತ್ತು. ವೇಗವಾಗಿ ಓಡಬಲ್ಲ ಈ ಪಕ್ಷಿ, ತನ್ನ ಬೃಹತ್ ಗಾತ್ರದ ಕಾರಣ ಹಾರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಭೂಮಿಯ ಮೇಲೆ ಹಕ್ಕಿಗಳೇ ಬಹುಸಂಖ್ಯಾತವಾಗಿದ್ದ ಸಂದರ್ಭದಿಂದಲೂ  ಅಂದರೆ ಕನಿಷ್ಟ ೬೦ ಸಾವಿರ ವರ್ಷಗಳಿಂದ ಜೀವಿಸಿದ್ದ ಎಲಿಫೆಂಟ್ ಬರ್ಡ್ ಮನುಷ್ಯನ ಬೇಟೆಯ ಚಪಲಕ್ಕೆ ಭೂಮಿಯಿಂದಲೇ ನಾಪತ್ತೆಯಾಯಿತು. ೧೭ನೇ ಶತಮಾನದ ಮೊದಲಾರ್ಧ  ಭಾಗದಲ್ಲಿ ಎಲಿಫೆಂಟ್ ಬರ್ಡ್ ವಿನಾಶ ಹೊಂದಿತು.

(ಟಾಸ್ಮೇನಿಯನ್ ಟೈಗರ್)
ಥೈಲಸಿನ್ಸ್ (ಟಾಸ್ಮೇನಿಯನ್ ಟೈಗರ್)
ಟಾಸ್ಮೇನಿಯನ್ ಟೈಗರ್ ಅಥವಾ ಟಾಸ್ಮೇನಿಯನ್ ತೋಳ ಎಂದು ಕರೆಸಿಕೊಳ್ಳುತ್ತಿದ್ದ ಥೈಲಸಿನ್ಸ್  ಆಸ್ಟ್ರೇಲಿಯಾ ಖಂಡದ ಟಾಸ್ಮೇನಿಯಾ ದ್ವೀಪದ ಅಪರೂಪದ ಪ್ರಾಣಿಗಳಲ್ಲಿ ಒಂದಾಗಿತ್ತು. ನ್ಯೂ ಗಿನಿಯಾ ಮುಂತಾದ ಪ್ರದೇಶಗಳೂ ಇವುಗಳ ಆವಾಸ ಸ್ಥಾನಗಳಾಗಿದ್ದವು. ಅತ್ಯಂತ ವಿಶಿಷ್ಟವಾದ ಪ್ರಾಣಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದ ಥೈಲಸಿನ್ಸ್ ನಾಯಿಯ ತಲೆ ಹಾಗೂ ಕಾಂಗರೂಗಳಿಗೆ ಇರುವಂತೆ ಹೊಟ್ಟೆಯಲ್ಲಿ ಚೀಲವನ್ನು ಹೊಂದಿತ್ತು. ಟಾಸ್ಮೇನಿಯಾದಲ್ಲಿ ಜನವಸತಿ ಹೆಚ್ಚಿದಂತೆಲ್ಲ  ಥೈಲಸಿನ್ಸ್‌ಗಳ ಬೇಟೆ ತೀವ್ರಗೊಂಡಿತು. ವ್ಯಾನ್ ಡೀಮನ್ಸ್ ಲ್ಯಾಂಡ್ ಕಂಪನಿ ಈ ಪ್ರಾಣಿಗಳ ತುಪ್ಪಳಕ್ಕಾಗಿ ವುಗಳನ್ನು ಬೇಟೆಯಾಡಿತು. ಬಹುಶಃ ಈ ಪ್ರಾಣೀಗಳು ಅಳಿದು ಹೋಗಲು ಈ ಕಂಪನಿಯ ಪಾತ್ರ ಪ್ರಮುಖವಾದುದು ಎಂದರೆ ತಪ್ಪಾಗಲಿಕ್ಕಿಲ್ಲ. ೧೯೩೬ರಲ್ಲಿ ಆಸ್ಟ್ರೇಲಿಯಾದ ಹೋಬರ್ಟ್ ಮೃಗಾಲಯದಲ್ಲಿದ್ದ ಬೆಂಜಮಿನ್ ಎಂಬ ಹೆಸರಿನ ಕೊಟ್ಟಕೊನೆಯ ಥೈಲಸಿನ್ಸ್ ಸಾವನ್ನಪ್ಪುವುದರೊಂದಿಗೆ ಈ ಪ್ರಾಣಿ ಸಂಕುಲ ವಿನಾಶ ಹೊಂದಿತು.

(ಮಸ್ಕಾಕ್ಸ್)
ಮಸ್‌ಕಾಕ್ಸ್
ಆರ್ಕ್‌ಟಿಕ್ ಪ್ರದೇಶದಲ್ಲಿ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿದ್ದ ಮಸ್‌ಕಾಕ್ಸ್‌ಗಳು ೧೯೦೦ ರಿಂದ ೧೯೩೦ರ ವೇಳೆಗೆ ಭೂಮಿಯಿಂದ ವಿನಾಶಹೊಂದಿತು. ಹಿಮಾವೃತ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದ ಉದ್ದ ಕೂದಲಿನ, ನೋಡಲು ಎಮ್ಮೆ ಹಾಗೂ ಕಾಡುಕೋಣದ ಗಾತ್ರದಲ್ಲಿದ್ದ ಮಸ್‌ಕಾಕ್ಸ್‌ಗಳು ಸಾಧುಪ್ರಾಣಿಗಳು. ಇವುಗಳು ಗರಿಷ್ಠ ೧.೫ ಮೀಟರ್ ಎತ್ತರವಾಗಿದ್ದವು ಹಾಗೂ ೨೮೦ ರಿಂದ ೪೧೦ ಕೆಜಿ ತೂಕವನ್ನು ಹೊಂದಿದ್ದವು. ಇವುಗಳ ತಲೆ, ಬಹುಮಾನ ಹಾಗೂ ಕಪ್‌ಗಳಿಗಾಗಿಯೇ ಇವುಗಳನ್ನು ಕೊಲ್ಲಲಾಯಿತು. ಇವುಗಳ ಮಾಂಸಕ್ಕೆ ಆ ದಿನಗಳಲ್ಲಿ ಒಂದು ಔನ್ಸ್‌ಗೆ ೪೦ರಿಂದ ೮೦ ಅಮೆರಿಕನ್ ಡಾಲರ್ ಬೆಲೆಯಿತ್ತು.  ಈ ಪ್ರಾಣೀಗಳ ಕುಟುಂಬಕ್ಕೆ ಸೇರಿದ ಇತರ ಪ್ರಾಣಿಗಳ ಜೀವಕೋಶಗಳನ್ನು ಬಳಸಿ, ೧೯೦೦-೩೦ರ ದಶಕದಲ್ಲಿ ಹತ್ಯೆ ಮಾಡಲ್ಪಟ್ಟ ಮಸ್‌ಕಾಕ್ಸ್‌ಗಳ ಜೀವಕೋಶಗಳನ್ನು ಬಳಕೆ ಮಾಡಿ ಇವನ್ನು ಪುನರ್ ಸೃಷ್ಟಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

(ಮಾಂಕ್ ಸೀಲ್, ಮೆಡಟರೇನಿಯನ್)
ಮೆಡಟರೇನಿಯನ್ ಮಾಂಕ್ ಸೀಲ್
ಯಾಂತ್ರೀಕರಣ, ಕಾರ್ಖಾನೆಗಳ ಹೆಚ್ಚಳ, ಸಮುದ್ರವನ್ನು ಸೇರುತ್ತಿರುವ ತ್ಯಾಜ್ಯಗಳು ಇತ್ಯಾದಿ ಕಾರಣದಿಂದ ಮೆಡಟರೇನಿಯನ್ ಮಾಂಕ್ ಸೀಲ್‌ಗಳ ಅಂತ್ಯವಾಗಿದೆ. ಅಪರೂಪದ ಸಮುದ್ರ ಸಸ್ತನಿ ಜಾತಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದ ಇವುಗಳು ಇತ್ತೀಚಿನ ದಿನಗಳಲ್ಲಿ ಅಳಿದಿವೆ. ಇವುಗಳು ಕನಿಷ್ಠ ೮೦ ಸೆಂ.ಮೀ. ಉದ್ದವಾಗಿ ಬೆಳೆಯುತ್ತಿದ್ದವು.  ೧೫-೧೮ ಕೆ.ಜಿ. ತೂಕವನ್ನು ಹೊಂದಿದ್ದವು. ಮೆಡಟರೇನಿಯನ್ ಸಮುದ್ರ ಪ್ರದೇಶದಲ್ಲಿ ವಾಸಿಸುತ್ತಿದ್ದ ಈ ಪ್ರಾಣಿಗಳನ್ನು ಯೂರೋಪ್ ಹಾಗೂ ಆಪ್ರಿಕಾ ದೇಶಗಳ ಜನರು ಗುಂಡಿಟ್ಟು ಬೇಟೆ ಮಾಡಿದ ಕಾರಣ ವಿನಾಶವನ್ನು ಹೊಂದಿವೆ. ಇತ್ತೀಚೆಗೆ ಇವುಗಳನ್ನು ಅಲ್ಲೊಮ್ಮೆ-ಇಲ್ಲೊಮ್ಮೆ ನೋಡಿದ್ದಾಗಿ ವರದಿಗಳು ಬಿತ್ತರಗೊಂಡಿದ್ದರೂ, ೨೦೧೫ರ ವೇಳೆಗೆ ಇವುಗಳು ೧೦೦ಕ್ಕೂ  ಕಡಿಮೆ ಸಂಖ್ಯೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.

(ಬಾರ್ಬೇರಿಯನ್ ಸಿಂಹ)
ಬಾರ್ಬೇರಿ ಸಿಂಹಗಳು
ಅಟ್ಲಾಸ್ ಲಯನ್ಸ್ ಅಥವಾ ಬಾರ್ಬೇರಿ ಲಯನ್ಸ್ ಎಂದು ಕರೆಯಲ್ಪಡುತ್ತಿದ್ದ ಈ ಪ್ರಾಣಿಗಳು ಉತ್ತರ ಆಪ್ರಿಕಾದ ಮೊರಾಕ್ಕೋದಿಂದ ಈಜಿಪ್ಟ್ ವರೆಗಿನ ಸಹಾರಾ ಮರುಭೂಮಿಯಲ್ಲಿನ ಗುಡ್ಡ ಬೆಟ್ಟಗಳಲ್ಲಿ ವಾಸ ಮಾಡುತ್ತಿದ್ದವು. ಸಿಂಹದ ಜಾತಿಗೆ ಸೇರಿದ ಈ ಪ್ರಾಣೀಗಳು ತಮ್ಮ ದೊಡ್ಡ ಗಾತ್ರದಿಂದ ಎಲ್ಲರನ್ನೂ ಸೆಳೆಯುತ್ತಿದ್ದವು. ಇವುಗಳ ಎತ್ತರ ಗರಿಷ್ಠ ೨.೮ ಮೀಟರ್‌ಗಳಷ್ಟಿದ್ದವು. ಅನಾಮತ್ತು ೨೭೦ರಿಂದ ೩೦೦ ಕೆ.ಜಿ. ತೂಕವನ್ನು ಹೊಂದಿದ್ದವು. ಆಫ್ರಿಕಾ ಮರುಭೂಮಿಯಲ್ಲಿ ಅವ್ಯಾಹತವಾದ ಬೇಟೆಯಿಂದಾಗಿ ಇವುಗಳು ವಿನಾಶ ಹೊಂದಿದವು. ದಾಖಲೆಗಳ ಪ್ರಕಾರ ೧೯೪೨ರಲ್ಲಿ ಕೊಟ್ಟ ಕೊನೆಯ ಬಾರ್ಬೇರಿ ಸಿಂಹವನ್ನು ಹತ್ಯೆ ಮಾಡಲಾಯಿತು ಎನ್ನಲಾಗಿದೆ. ಇನ್ನೂ ಕೆಲವರ ಪ್ರಕಾರ ೧೯೬೦ರಲ್ಲಿ ಕೊಟ್ಟ ಕೊನೆಯ ಬಾರ್ಬೇರಿ ಸಿಂಹವನ್ನು ಹತ್ಯೆ ಮಾಡಲಾಗಿದೆ.

(ವಾರ್ರಾಹ್)
ವಾರ್ರಾಹ್
ಫಾಕ್‌ಲ್ಯಾಂಡ್ ಐಲ್ಯಾಂಡ್ ತೋಳ ಎನ್ನುವ ಹೆಸರಿನಿಂದಲೂ ಕರೆಸಿಕೊಳ್ಳುವ ವಾರ್ರಾಹ್‌ಗಳು ೧೭೬೦ರ ದಶಕದಲ್ಲಿ ಮನುಷ್ಯ ಫಾಕ್‌ಲ್ಯಾಂಡ್‌ಗೆ ಕಾಲಿರಿಸುವವರೆಗೂ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಆದರೆ ಯಾವಾಗ ಮನುಷ್ಯ ಎಲ್ಲಿಗೆ ಹೋದನೋ, ಅಂದಿನಿಂದ ಇವುಗಳ ಅಳಿವು ಆರಂಭವಾಯಿತು. ದಕ್ಷಿಣ ಅಮೇರಿಕದ ತುತ್ತತುದಿಯಾದ ಚಿಲಿ ಹಾಗೂ ಅರ್ಜೆಂಟೇನಾದ ದ್ವೀಪಗಳು ಇವುಗಳ ವಾಸಸ್ಥಾನವಾಗಿದ್ದವು. ಆದರೆ ೧೮೭೬ರ ವೇಳೆಗೆ ಅಂದರೆ ಮನುಷ್ಯ ಕಾಲಿರಿಸಿದ ೧೧೬ ವರ್ಷಗಳಲ್ಲಿಯೇ ಇವುಗಳು ವಿನಾಶ ಹೊಂದಿದವು.

(ಸ್ಕೋಂಬಾರ್ಕ್ಸ್ ಜಿಂಕೆ)
ಸ್ಕೋಂಬರ್ಕ್ ಜಿಂಕೆ
ಥೈಲ್ಯಾಂಡ್‌ನಲ್ಲಿ ಜೀವಿಸುತ್ತಿದ್ದ ಸ್ಕೋಂಬರ್ಕ್ ಜಿಂಕೆಯ ಕೊಂಬುಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂಬುದು ಸ್ಥಳೀಯರ ನಂಬಿಕೆಯಾಗಿತ್ತು. ಥೈಲ್ಯಾಂಡಿನ ಮಾಂತ್ರಿಕರು ಇವುಗಳ ಕೊಂಬುಗಳನ್ನು ವಿಶೇಷವಾಗಿ ಬಳಕೆ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಭಾರಿ ಪ್ರಮಾಣದಲ್ಲಿ ಇವುಗಳನ್ನು ಬೇಟೆಯಾಡಲಾಯಿತು. ಕೊಟ್ಟ ಕೊನೆಯ ಸ್ಕೋಂಬರ್ಕ್ ಜಿಂಕೆಯನ್ನು ೧೯೩೨ರಂದು ಬೇಟೆಯಾಡಲಾಯಿತು. ಆದರೂ ಥೈಲ್ಯಾಂಡಿನಲ್ಲಿ ಸಾಕಲಾಗಿದ್ದ ಕೊನೆಯದು ಎನ್ನಲಾಗುವ ಸ್ಕೋಂಬರ್ಕ್ ಜಿಂಕೆಯು ೧೯೩೮ರಂದು ಸಾವನ್ನಪ್ಪುವ ಮೂಲಕ ಇನ್ನೊಂದು ಪ್ರಾಣಿ ಸಂಕುಲ ವಿನಾಶ ಹೊಂದಿತು.

(ಟೆಕೋಪಾ ಪಫಿಶ್)
ಟೆಕೋಪಾ ಪಫಿಶ್
ಅಮೆರಿಕದ ಮೊಜಾವೆ ಮರುಭೂಮಿಯಲ್ಲಿದ್ದ ಓಯಸ್ಸಿಸ್‌ಗಳು ಹಾಗೂ ಇತರ ನೀರಿನ ಮೂಲಗಳಲ್ಲಿ ಬದುಕಿದ್ದ ಟೆಕೋಪಾ ಪಫೀಶ್ ಈಗಾಗಲೇ ವಿನಾಶವನ್ನು ಹೊಂದಿದೆ. ಅತ್ಯಂತ ಹೆಚ್ಚಿನ ಬಿಸಿ ನೀರನ್ನು ತಾಳಿಕೊಳ್ಳುವ ಶಕ್ತಿ ಹೊಂದಿದ್ದ ಟೆಕೋಪಾ ಪಫಿಶ್‌ಗಳ ಪೈಕಿ ಗಂಡು ಮೀನು ಗಾಢನೀಲಿ ಹಾಗೂ ಹೆಣ್ಣು ಮೀನು ತಿಳಿ ನೀಲಿ ಬಣ್ಣವನ್ನು ಹೊಂದಿದ್ದವು. ಮೊಜಾವೆ ಮರುಭೂಮಿಯ ನೀರಿನ ಮೂಲಗಳಲ್ಲಿ ೧೯೫೦ರ ದಶಕದಲ್ಲಿ ಈಜಲು ಬರುವವರ ಸಂಖ್ಯೆ ಜಾಸ್ತಿಯಾಯಿತು. ಅವರು ಈ ಮೀನುಗಳನ್ನು ಹಿಡಿದು ತಿನ್ನಲು ಆರಂಭಿಸಿದರು. ತದನಂತರ ಟೆಕೋಪಾ ಪಫಿಶ್‌ಗಳ ಅಳಿವು ಆರಂಭವಾಯಿತು. ೧೯೭೦ರ ಫೆಬ್ರವರಿ ೨ರಂದು ಕೊಟ್ಟ ಕೊನೆಯದಾಗಿ ಟೆಕೋಪಾ ಪಫಿಶ್‌ಗಳನ್ನು ನೋಡಿರುವ ಬಗ್ಗೆ ಉಲ್ಲೇಖಗಳಿವೆ.

(ಸೀ ಮಿಂಕ್)


ಸೀ ಮಿಂಕ್
ಉತ್ತರ ಅಮೆರಿಕದ ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯ ಗಲ್ ಆಫ್ ಮೈನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸೀ ಮಿಂಕ್‌ಗಳು ಇತ್ತೀಚೆಗಷ್ಟೇ ವಿನಾಶ ಹೊಂದಿದೆ.  ೧೮೬೦ರ ಸಂದ‘ರ್ದಲ್ಲಿ ಈ ಪ್ರಾಣಿಗಳನ್ನು ಬೇಟೆಯಾಡಿ ತಂದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿತ್ತುಘಿ. ೧೮೦೦ ರಿಂದ ೧೯೦೦ರ ಅವಯಲ್ಲಿ ಇಂಗ್ಲೆಂಡ್ ಹಾಗೂ ಕೆನಡಾ ನಡುವಿನ ಅಟ್ಲಾಂಟಿಕ್ ಸಮುದ್ರದಲ್ಲಿ ಭಾರಿ ಸಂಖ್ಯೆಯಲ್ಲಿದ್ದ ಸೀ ಮಿಂಕ್‌ಗಳು ೨೦೦೦ದ ವೇಳೆಗೆ ಸಂಪೂರ್ಣವಾಗಿ ವಿನಾಶ ಹೊಂದಿವೆ.

Monday, December 4, 2017

ಅಬ್ಬಬ್ಬಾ ಹೆಸರೇ...!

ಕ್ರಿಕೆಟ್ ಆಡುವ ದೇಶಗಳು ಹಲವಾರು.. ಕ್ರಿಕೆಟ್ ಆಡುವ ಆಟಗಾರರ ಹೆಸರು ಮಾತ್ರ ಮಜವಾಗಿದೆ. ಕೆಲವು ಆಟಗಾರರ ಹೆಸರಂತೂ ಕಿಲೋಮೀಟರ್ಗಳಷ್ಟು ಉದ್ದವಿದೆ. ಶ್ರೀಲಂಕಾದ ಆಟಗಾರರ ಹೆಸರಂತೂ ಅದಷ್ಟು ಉದ್ದವಿದೆ ಅಂದರೆ.. ಆಹಾ ಬೆರಗಾಗುತ್ತೀರಿ. ಭಾರತದ ಕೆಲವು ಆಟಗಾರರ ಹೆಸರೂ ಸುದೀರ್ಘವಾಗಿದೆ. ಅಂತಹ ಕೆಲವು ವಿಶಿಷ್ಟ ಹಾಗೂ ಉದ್ದ ಹೆಸರನ್ನು ಇಲ್ಲಿ ಇಡುತ್ತಿದ್ದೇನೆ.. ಸುಮ್ನೆ ನೋಡಿ...

ಇಲ್ ಬುಲಾ
1947ರಿಂದ 1954ರ ನಡುವೆ ಫಿಜಿ ದೇಶದಲ್ಲಿ ಹಲವಾರು ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಬುಲಾ ಎಂಬ ಆಟಗಾರನ ಹೆಸರು ಎಷ್ಟು ಉದ್ದವಿದೆ ಎಂದರೆ... ಆಹಾ.. ಇಲಿಕೆನಾ ಲಸರುಸಾ ತಲೆಬುಲಾಮೈನವಾಲೆನಿವೈವಕಬುಲೈಮೈನಕುಲಲಕೆಬಲೌ- ಇದು ಆ ಪುಣ್ಯಾತ್ಮನ ಹೆಸರಂತೆ. ಈ ಹೆಸರನ್ನು ಒಂದೇ ಉಸುರಿಗೆ, ಹೇಳಿ ಅಂದರೆ ಎಂತವರೂ ತಬ್ಬಿಬ್ಬಾಗಬಹುದು. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಅಂದರೆ ಜಪ್ಪಯ್ಯಾ ಅಂದರೂ ಆಗೋದಿಲ್ಲ ಬಿಡಿ. ಅಂದಹಾಗೆ ಈತ ಹಾರ್ಡ್ ಹಿಟ್ಟರ್ ಆಗಿದ್ದನಂತೆ. ಎರಡು ಶತಕಗಳನ್ನೂ ಬಾರಿಸಿದ್ದಾನಂತೆ. ಆತನ ಹೆಸರನ್ನು ಬರೆಯಹೋದರೆ ಸ್ಕೋರ್ ಕಾರ್ಡಿನಲ್ಲಿ ಜಾಗ ಸಾಲುವುದಿಲ್ಲ ಬಿಡಿ. ಅದಕ್ಕೇ ಆತ ಇಲ್ ಬುಲಾ ಅಂತ ಚಿಕ್ಕದಾಗಿ ಮಾಡಿಕೊಂಡನಂತೆ.

ಚಮಿಂಡಾ ವಾಸ್
ಶ್ರೀಲಂಕಾದ ಎಡಗೈ ವೇಗದೂತ ಬೌಲರ್ ಚಮಿಂಡಾ ವಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದ ಈ ವಾಸ್ ನ ಪೂರ್ಣಹೆಸರು ಕೇಳಿದರೆ ಅಚ್ಚರಿಯಾಗಬಹುದು. ವರ್ಣಕುಲಸೂರಿಯಾ ಪಟಬೆಂಡಿಗೆ ಉಷಾಂತ ಜೋಸೆಫ್ ಚಮಿಂಡಾ ವಾಸ್ ಎನ್ನುವುದು ಆತನ ಪೂರ್ತಿ ಹೆಸರು. 400 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಈತ 761 ವಿಕೆಟ್ ಪಡೆದು ಸಾಧನೆ ಮಾಡಿದ್ದಾನೆ.

ಇಬಿ ಡ್ವಾಯರ್
ಸಿಡ್ನಿ ಮೂಲದ, ಇಂಗ್ಲೆಂಡ್ ಪರ ಆಡಿದ ಆಟಗಾರ ಎಡ್ ಡ್ವಾಯರ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಕೈಚಳಕ ತೋರಿದವರು ಇವರು. ಇವರ ಪೂರ್ಣ ಹೆಸರು ಜಾನ್ ಎಲಿಸಿಯಸ್ ಬೆನೆಡಿಕ್ಟ್ ಬೆರ್ನಾರ್ಡ್ ಪ್ಲೆಸಿಡ್ ಕ್ವಿರ್ಕ್ ಕ್ಯಾರಿಂಗ್ಟನ್ ಡ್ವಾಯರ್ ಎಂದು.

ಚನಕ ವಲಗೆದರಾ
ಶ್ರೀಲಂಕಾದ ಆಟಗಾರರ ಹೆಸರು ಸುದೀರ್ಘವಾಗಿದೆ. ಚಮಿಂಡಾ ವಾಸ್ ಹೆಸರನ್ನು ಈಗಾಗಲೇ ಓದಿದ್ದೀರಿ. ಚನಕ ವಲಗೆದರಾನ ಹೆಸರೂ ಕೂಡ ಸುದೀರ್ಘವಾಗಿದೆ. ಉಡಾ ವಲವ್ವೆ ಮಹಿಮ್ ಬಂಡಾರಲಗೆ ಚನಕ ಅಸಂಗ ವಲಗೆದರಾ ಎನ್ನುವುದನ್ನು ಸ್ಕೋರ್ ಕಾರ್ಡಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಚನಕ ವಲಗೆದರಾ ಅಂತ ಚಿಕ್ಕದು ಮಾಡಿಕೊಂಡಿರಬೇಕು ಬಿಡಿ. ಈ ಆಟಗಾರ ಈಗಾಗಲೇ 50 ವಿಕೆಟ್ ಕಬಳಿಸಿದ್ದಾರೆ.

ರಾಸ್ ಟೇಲರ್
ನ್ಯೂಝಿಲೆಂಡ್ ನ ಆಪದ್ಭಾಂಧವ, ಮಧ್ಯಮ ಕ್ರಮಾಂಕದ ಆಟಗಾರ ರಾಸ್ ಟೇಲರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯಾವ ದೇಶದ ವಿರುದ್ಧ ಆಡದಿದ್ದರೂ ಭಾರತದ ವಿರುದ್ಧ ಅಂತೂ ಉತ್ತಮವಾಗಿಯೇ ಆಡುವ ಟೇಲರ್ ಹೆಸರೂ ಕೂಡ ಸಾಕಷ್ಟು ದೀರ್ಘವಾಗಿದೆ. ಲುಟೆರು ರಾಸ್ ಪೌಟೋವಾ ಲೊಟೆ ಟೇಲರ್ ಎನ್ನುವುದು ರಾಸ್ ಟೇಲರ್ ನ ಪೂರ್ತಿ ಹೆಸರು.

ಹೆನ್ರಿ ಗೋವರ್
ಇಂಗ್ಲೆಂಡಿನ ಸರ್ರೇ ತಂಡದ ನಾಯಕ ಹೆನ್ರಿ ಗೋವರ್ ನ ಪೂರ್ಣ ಹೆಸರು ಹೆನ್ರಿ ಡ್ಯೂಡ್ಲಿ ಗ್ರೆಶಮ್ ಲೆವೆಸನ್ ಗೋವರ್ ಎಂದು. ಇವರಿಗೆ ಇಂಗ್ಲೆಂಡ್ ಸರ್ ಪದವಿಯನ್ನು ನೀಡಿ ಗೌರವಿಸಿತ್ತು.

ಪ್ರಿನ್ಸ್ ಕ್ರಿಸ್ಟಿಯನ್ ವಿಕ್ಟರ್
ರಾಣಿ ವಿಕ್ಟೋರಿಯಾಳ ಮೊಮ್ಮಗ ಪ್ರಿನ್ಸ್ ಕ್ರಿಸ್ಟಿಯನ್ ವಿಕ್ಟರ್ 1887ರಲ್ಲಿ ಕ್ರಿಕೆಟ್ ಆಡಿದವರು. ಇವರ ಪೂರ್ತಿ ಹೆಸರು ಪ್ರಿನ್ಸ್ ವಿಕ್ಟರ್ ಆಲ್ಬರ್ಟ್ ಲುಡ್ವಿಗ್ ಅರ್ನೆಸ್ಟ್ ಆಂಟನ್ ಕ್ರಿಸ್ಟಿಯನ್ ಆಫ್ ಶ್ಲೆಸ್ವಿಗ್ ಹೋಲ್ಸ್ಟೈನ್ ಎಂದು. ಇಂಗ್ಲೆಂಡಿನಲ್ಲಿ ಪ್ರಥಮದರ್ಜೆ ಪಂದ್ಯಗಳನ್ನು ಮಾತ್ರ ಆಡಿರುವ ಇವರು, ಡಬ್ಲೂ ಜಿ. ಗ್ರೇಸ್ ಅವರ ಸಮಕಾಲೀನರು.

ಫೌಡ್ ಬುಚ್ಚಸ್

1978-79ರಲ್ಲಿ ಭಾರತದ ವಿರುದ್ಧದ ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 250ರನ್ ಭಾರಿಸಿದ ವೆಸ್ಟ್ ಇಂಡೀಸಿನ ಆಟಗಾರ ಫೌಡ್ ಬುಚ್ಚಸ್ ನ ಪೂರ್ಣ ಹೆಸರು ಶೇಕ್ ಫೌಡ್ ಅಹಮುಲ್ ಫಸಿಯೇಲ್ ಬುಚ್ಚಸ್ ಎಂದು. ವೆಸ್ಟಿಂಡೀಸಿನಲ್ಲಿ ಕೇವಲ ನಾಲ್ಕು ಜನರು ಮಾತ್ರ ನಾಲ್ಕು ಶಬ್ದಗಳ ಹೆಸರನ್ನು ಒಳಗೊಂಡಿದ್ದಾರೆ. ಅವರಲ್ಲೊಬ್ಬರು ಫೌಡ್ ಬುಚ್ಚಸ್.

ರಜಿತಾ ಅಮುನುಗಮ
ಶ್ರೀಲಂಕಾದ ಈ ಆಟಗಾರನ ಹೆಸರನ್ನು ಓದಿದರೆ ಹೌಹಾರುತ್ತೀರಿ. 1990ರ ದಶಕದಲ್ಲಿ ಶ್ರೀಲಂಕಾದ ಪರ ಆಡಿತ ಈತ ಕ್ರಿಕೆಟ್ ನಲ್ಲಿ ಹೆಸರಾಗದಿದ್ದರೂ, ತನ್ನ ಹೆಸರಿನ ಮೂಲಕ ಹೆಸರಾಗಿದ್ದಾನೆ. ಅಮುನುಗಮ ರಾಜಪಕ್ಸೆ ರಾಜಕರುಣ ಅಬೆಯೂಕೂನ್ ಪಂಡಿತಾ ವಸಲಮುಡಿಯನ್ಸೆ ರಲಹಮಿಲಗೆ ರಾಜಿತಾ ಕ್ರಿಶಂತಾ ಬಂಡಾರ ಅಮುನುಗಮ. 11 ಶಬ್ದಗಳ 51 ಅಕ್ಷರಗಳ ಹೆಸರಿನ ಈತ ಕ್ರಿಕೆಟ್ ನಲ್ಲಿ ಅಲ್ಲದಿದ್ದರೂ ಹೆಸರಿನಲ್ಲಿ ಅರ್ಧಶತಕ ಭಾರಿಸಿದ್ದಾನೆ ಬಿಡಿ

ಎಂಕೆಜಿಸಿಪಿ ಲಕ್ಷಿತಾ
ಚಮಿಲಾ ಗಮಗೆ ಎನ್ನುವ ಹೆಸರಿನಿಂದ ಖ್ಯಾತಿ ಪಡದಿರುವ ಶ್ರೀಲಂಕಾದ ವೇಗದ ಬೌಲರ್ ನ ಪೂರ್ಣ ಹೆಸರು ಮತರಂಬ ಕನತ್ತಾ ಗಮಗೆ ಚಮಿಲಾ ಪ್ರೇಮನಾಥ ಲಕ್ಷಿತಾ ಎಂದು. ಶ್ರೀಲಂಕಾದ ಪರ ಈತ 2 ಟೆಸ್ಟ್ ಹಾಗೂ 7 ಏಕದಿನ ಪಂದ್ಯಗಳನ್ನಾಡಿದ್ದಾನೆ.

ರಂಗಣ ಹೆರಾತ್
ಮುತ್ತಯ್ಯ ಮುರಳೀಧರನ್ ನಂತರ ಶ್ರೀಲಂಕಾದ ಸ್ಪಿನ್ ಸಾರಥ್ಯ ವಹಿಸಿಕೊಂಡಿರುವ 3 ವರ್ಷದ ರಂಗಣ ಹೆರಾತ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬರೀ ರಂಗಣ ಹೆರಾತ್ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ಆತನ ಪೂರ್ಣನಾಮಧೇಯ ಹೆರಾತ್ ಮುದಿಯನಸೆಲಗೆ ರಂಗಣ ಕೀರ್ತಿ ಭಂಟಾರ ಹೆರಾತ್ ಎಂದು. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ನೋಡೋಣ...!

ಲಕ್ಸನ್ ಸಂದಕನ್
ಶ್ರೀಲಂಕಾದ ಯುವ ಸ್ಪಿನ್ನರ್ ಸಂದಕನ್ ಹೆಸರು ಕೂಡ ಸುದೀರ್ಘವಾಗಿದೆ. 2016ರಲ್ಲಿ ಮೊದಲ ಟೆಸ್ಟ್ ಆಡಿದ ಸಂದಕನ್ ನ ಪೂರ್ಣ ಹೆಸರು ಪತ್ತಂಪೆರುಮಾ ಅರ್ಚಿಗೆ ಡಾನ್ ಲಕ್ಷನ್ ರಂಗಿಕು ಸಂದಕನ್ ಎಂದು.

ಗಿಹನ್ ರೂಪಸಿಂಗೆ
2009ರಲ್ಲಿ ಶ್ರೀಲಂಕಾ ಪರ ಆಡಿದ ಈ ಆಟಗಾರನ ಪೂರ್ಣ ಹೆಸರು ರೂಪಸಿಂಗೆ ಜಯವರ್ಧನೆ ಮುದಿಯನಸಲಗೆ ಗಿಹನ್ ಮಧುಶಂಕ ರೂಪಸಿಂಘೆ.

ಅಖಿಲ ಧನಂಜಯ
ಮಹಾಮರಕ್ಕಲ ಕುರುಕುಲಸೂರಿಯಾ ಪಟಬೆಂಡಿಗೆ ಅಖಿಲ ಧನಂಜಯ ಪೆರೇರಾನನ್ನು ಅಖಿಲ ಧನಂಜಯ ಎಂದೇ ಕರೆಯೋಣ. ಪೂರ್ಣ ಹೆಸರು ಹೇಳಲು ಹೋದರೆ ಸುಸ್ತಾಗಬಹುದು.

ಹೇಮಂತ ವಿಕ್ರಮರತ್ನೆ
ಶ್ರೀಲಂಕಾದ ಪರವಾಗಿ 1993ರಲ್ಲಿ ಕೆಲವು ಪಂದ್ಯಗಳನ್ನಾಡಿದ ಹೇಮಂತ ವಿಕ್ರಮಸಿಂಘೆಯ ಪೂರ್ಣ ಹೆಸರು ರಣಸಿಂಘೆ ಪಟ್ಟಿಕಿರಿಕೊರಲಲಗೆ ಅರುಣ ಹೇಮಂತ ವಿಕ್ರಮರತ್ನೆ ಎಂದು.

ಸಚಿತ್ರ ಸೇನಾನಾಯಕೆ
ಶ್ರೀಲಂಕಾದ ಸ್ಪಿನ್ನರ್ ಸಚಿತ್ರ ಸೇನಾನಾಯಕೆಯ ಪೂರ್ಣ ಹೆಸರು ಸೇನಾನಾಯಕೆ ಮುದಿಯನಿಸಲಗೆ ಸಚಿತ್ರ ಮಧುಶಂಕ ಸೇನಾನಾಯಕೆ ಎಂದು.

ಬಿಡಿ ಶ್ರೀಲಂಕಾದ ಹಲವು ಆಟಗಾರರ ಹೆಸರು ಸುದೀರ್ಘವಾಗಿಯೇ ಇದೆ. ಭಾರತದವರ ಕಡೆಗೆ ನೋಡೋಣ. ಭಾರತದ ಆಟಗಾರರ ಹೆಸರುಗಳೂ ಕೂಡ ಸುದೀರ್ಘವಾಗಿದೆ. ಸುಮ್ಮನೆ ನಿಮ್ಮ ಕುತೂಹಲಕ್ಕೆ ಅವನ್ನು ಕೊಡುತ್ತಿದ್ದೇನೆ. ನೋಡಿ,

ವೆಂಕಟ್
ಉದ್ದದ ಹೆಸರುಗಳ ಯಾದಿಯಲ್ಲಿ ಭಾರತದ ಆಟಗಾರರ ಹೆಸರೂ ಇದೆ. ಅವರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಆಫ್ ಸ್ಪಿನ್ನರ್ ಎಸ್. ವೆಂಕಟರಾಘವನ್. ಭಾರತದ ನಾಯಕರೂ ಆಗಿದ್ದ ಇವರು 156 ವಿಕೆಟ್ ಪಡೆದಿದ್ದಾರೆ. ದೀರ್ಘಕಾಲದಿಂದ ಅಂಪಾಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಂದಹಾಗೆ ಇವರ ಪೂರ್ತಿ ಹೆಸರು ಶ್ರೀನಿವಾಸ ರಾಘವನ್ ವೆಂಕಟ ರಾಘವನ್ ಎಂದು.

ವಿವಿಎಸ್ ಲಕ್ಷ್ಮಣ್
ಭಾರತ ಕಂಡ ಸಾರ್ವಕಾಲಿಕ ಟೆಸ್ಟ್ ಆಟಗಾರರಲ್ಲಿ ಒಬ್ಬರಾದ ವಿವಿಎಸ್ ಲಕ್ಷ್ಮಣ್ ರ ಪೂರ್ಣ ಹೆಸರು ವೆಂಗಿಪುರುಪ್ಪು ವೀರವೆಂಕಟ ಸಾಯಿ ಲಕ್ಷ್ಮಣ್

ಸ್ಟುವರ್ಟ್ ಬಿನ್ನಿ
ಬಿನ್ನಿ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ.. ಅಪ್ಪ ರೋಜರ್ ಬಿನ್ನಿ, ಮಗ ಸ್ಟುವರ್ಟ್ ಬಿನ್ನಿ ಎಲ್ಲರಿಗೂ ಗೊತ್ತು. ಆದರೆ ಆತನ ಪೂರ್ಣ ಹೆಸರು ಗೊತ್ತಾ? ಗೊತ್ತಲ್ಲವಾದರೆ ಇಲ್ಲಿ ನೋಡಿ... ಸ್ಟುವರ್ಟ್ ಟೆರೆನ್ಸ್ ರೋಜರ್ ಬಿನ್ನಿ. ಇದು ಸ್ಟುವರ್ಟ್ ಬಿನ್ನಿಯ ಪೂರ್ಣ ನಾಮಧೇಯ.

ಚೇತನ್ ಚೌಹಾಣ್
ಭಾರತದ ಮಾಜಿ ಆಟಗಾರ ಚೇತನ್ ಚೌಹಾಣ್ ಒಂದು ಕಾಲದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಟೆಸ್ಟ್ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿ ಗಳಿಸಿಕೊಂಡಿದ್ದರು. ಇವರ ಪೂರ್ಣ ಹೆಸರು ಚೇತನ್ ಪ್ರತಾಪ್ ಸಿಂಗ್ ಚೌಹಾಣ್.

ಎಸ್ ಎಂ ಎಚ್ ಕಿರ್ಮಾನಿ
ಭಾರತದ ಅತ್ಯುತ್ತಮ ವಿಕೇಟ್ ಕೀಪರ್ ಗಳಲ್ಲಿ ಒಬ್ಬರಾಗಿದ್ದ ಕಿರ್ಮಾನಿ ಅವರ ಪೂರ್ಣ ಹೆಸರು ಸಯ್ಯದ್ ಮುಜ್ತಾಬ್ ಹುಸೇನ್ ಕಿರ್ಮಾನಿ ಎಂದು.

ರೋಜರ್ ಬಿನ್ನಿ
ಮಗ ಸ್ಟುವರ್ಟ್ ಬಿನ್ನಿಯ ಉದ್ದ ಹೆಸರನ್ನೇನೋ ನೋಡಿದಿರಿ. ಅಪ್ಪ ರೋಜರ್ ಬಿನ್ನಿಯದ್ದು ಹೇಳುವುದು ಬೇಡವೇ? ರೋಜರ್ ಬಿನ್ನಿಯ ಪೂರ್ತಿ ಹೆಸರು ರೋಜರ್ ಮೈಖೆಲ್ ಹಂಫ್ರಿ ಬಿನ್ನಿ.

ವೆಂಕಟೇಶ್ ಪ್ರಸಾದ್
ಕನ್ನಡಿಗ, ಶ್ರೀನಾಥ್ ರ ಸಮಕಾಲೀನ ವೇಗದ ಬೌಲರ್ ವೆಂಕಟೇಶ ಪ್ರಸಾದರು ನೆನಪಾದಾಗಲೆಲ್ಲ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅಮೀರ್ ಸೊಹೈಲ್ ಜೊತೆಗಿನ ಕಾದಾಟ, ಜಿದ್ದು ನೆನಪಾಗುತ್ತದೆ. ಇಂತಹ ಹೆಸರಾಂತ ಬೌಲರ್ ವೆಂಕಟೇಶ ಪ್ರಸಾದ ಪೂರ್ಣ ಹೆಸರು ಬಾಪು ಕೃಷ್ಣರಾವ್ ವೆಂಕಟೇಶ್ ಪ್ರಸಾದ್ ಎಂದು.

ಇಎಎಸ್ ಪ್ರಸನ್ನ
ಭಾರತದ ಸಾರ್ವಕಾಲಿಕ ಶ್ರೇಷ್ಟ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಇಎಎಸ್ ಪ್ರಸನ್ನರ ಪೂರ್ಣ ಹೆಸರು ಎರಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ.

ಗುಲಾಂ ಪಾರ್ಕರ್
1980ರ ದಶಕದಲ್ಲಿ ಭಾರತದ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ ಗುಲಾಮ್ ಪಾರ್ಕರ್ ಎನ್ನುವ ಕ್ರಿಕೆಟ್ ಆಟಗಾರನ ಪೂರ್ಣ ಹೆಸರು ಗುಲಾಮ್ ಅಹಮದ್ ಹಸನ್ ಮೊಹಮ್ಮದ್ ಪಾರ್ಕರ್.

ಇಷ್ಟು ಸಾಕೇನೋ ಅಲ್ಲವಾ
ಇಂತಹ ಹೆಸರುಗಳು ನಿಮಗೆ ಸಿಕ್ಕರೆ ಹೇಳಿ... ಕುತೂಹಲದಿಂದ ಓದಿ ನೋಡೋಣ.. ಖುಷಿ ಪಡೋಣ...

Sunday, December 3, 2017

ಭಾರತವನ್ನು ಕಾಡಿದ ಚಂಡಮಾರುತಗಳು

ಚಂಡಮಾರುತಗಳು ಭಾರತವನ್ನು ಪದೇ ಪದೆ ಕಾಡುತ್ತವೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರಗಳಲ್ಲಿ ರೂಪುಗೊಳ್ಳುವ ಚಂಡಮಾರುತಗಳು ಭಾರತದ ಕಡೆಗೆ ಬೀಸಿ ಬಂದು ಭಾರತದಲ್ಲಿ ಭಾರಿ ಪ್ರಮಾಣದ ಹಾನಿಯನ್ನು ಕೈಗೊಳ್ಳುತ್ತವೆ. ಇತ್ತೀಚೆಗಂತೂ ವರ್ಷಕ್ಕೆ ಕನಿಷ್ಟ ಎರಡಾದರೂ ಚಂಡಮಾರುತ ಭಾರತದ ಕಡೆಗೆ ಬೀಸಿ ಬರುತ್ತಿವೆ. ಇವುಗಳ ಮಾಡುವ ಹಾನಿ ಭಾರೀ ಪ್ರಮಾಣದ್ದಾಗಿದೆ. ಇದೀಗ ಒಖಿ ಚಂಡಮಾರುತ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಹಾವಳಿಯನ್ನು ಎಬ್ಬಿಸುತ್ತಿದೆ.


ಭಾರತದಲ್ಲಿಯೂ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳು, ಓರಿಸ್ಸಾ, ಪಶ್ಚಿಮ ಬಂಗಾಳ, ತಮಿಳುನಾಡುಗಳ ಮೇಲೆ ಚಂಡಮಾರುತಗಳ ಪ್ರಭಾವ ತೀವ್ರವಾಗಿದೆ. ಈ ರಾಜ್ಯಗಳಲ್ಲಿ ಆಗಾಗ ಚಂಡ ಮಾರುತಗಳು ಎಬ್ಬಿಸಿದ ಹಾವಳಿ ಬಹಳ. ಲಕ್ಷಾಂತರ ಜನರು ಮನೆ-ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಚಂಡಮಾರುತಕ್ಕೆ ಜೀವ ಕಳೆದುಕೊಂಡಿದ್ದಾರೆ. ಭಾರತ ಉಪಖಂಡದಲ್ಲಿ ಸಾಮಾನ್ಯವಾಗಿ ಚಳಿಗಾಲದ ನಂತರ ಹಾಗೂ ಬೇಸಿಗೆಯಲ್ಲಿ ಚಂಡಮಾರುತಗಳು ಕಾಣಿಸಿಕೊಳ್ಳುವುದು ಸಹಜ ಎಂಬಂತಾಗಿದೆ. ಯಾವುದೇ ಕಡೆಗಳಲ್ಲಿಯೂ ಗಾಳಿಯ  ಒತ್ತಡ ಕಡಿಮೆಯಾದ ಸಂದರ್ಭಗಳಲ್ಲಿ ಚಂಡಮಾರುತಗಳು ರೂಪುಗೊಂಡು ಹಾವಳಿ ಉಂಟುಮಾಡುತ್ತವೆ. ಭಾರತದ ಮೇಲೆ ಬೀಸಿ, ಅಪಾರ ಹಾನಿಯನ್ನು ಉಂಟುಮಾಡಿದ ಚಂಡಮಾರುತಗಳ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ.

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಹಾನಿ :
1970ರಿಂದೀಚೆಗೆ ಪಶ್ಚಿಮ ಬಂಗಾಳ ಹಲವಾರು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ. 1970ರ ಭೋಲಾ ಚಂಡಮಾರುತ, 1981ರ ಬಾಬ್ 3, 1988ರಲ್ಲಿ ಬೀಸಿದ ಬಾಬ್ 5, 1997ರಲ್ಲಿ ಬೀಸಿದ ಬಾಬ್ 7, 1998ರಲ್ಲಿ ಬೀಸಿದ ಬಾಬ್ 6, 2000ರ ಬಾಬ್ 4, 2002ರಲ್ಲಿ ಬಾಬ್ 3 ಚಂಡಮಾರುತಗಳು ಹಾವಳಿ ಎಬ್ಬಿಸಿದೆ. 2007ರಲ್ಲಿ ಸಿದ್ರ್‌, 2008ರಲ್ಲಿ ರಶ್ಮಿ, 2009ರಲ್ಲಿ ಆಲಿಯಾ, 2015ರಲ್ಲಿ ಕೋಮೆನ್, 2016ರಲ್ಲಿ ರೌನು ಹಾಗೂ 2017ರಲ್ಲಿ ಮೋರಾ ಚಂಡಮಾರುತಗಳು ಹಾವಳಿ ಎಬ್ಬಿಸಿವೆ.

ಆಂಧ್ರ ಪ್ರದೇಶದಲ್ಲಿ ಚಂಡಮಾರುತದ ಹಾವಳಿ
ಆಂದ್ರಪ್ರದೇಶದಲ್ಲಿ 1990ರಲ್ಲಿ ಬಾಬ್ 1, 1998ರಲ್ಲಿ ಬಾಬ್ 5, 2003ರಲ್ಲಿ 03ಬಿ, 2007ರಲ್ಲಿ ಯೇಮೈನ್, 2008ರಲ್ಲಿ ಖೈಮುಕ್, 2010ರಲ್ಲಿ ಲೈಲಾ, 2012ರಲ್ಲಿ ನೀಲಂ, 2013ರಲ್ಲಿ ಹೆಲನ್ ಹಾಗೂ ಲೆಹರ್, 2014ರಲ್ಲಿ ಹುಡ್‌ಹುಡ್ ಹಾಗೂ 2016ರಲ್ಲಿ ಕ್ಯಾಂಟ್ ಚಂಡಮಾರುತಗಳು ಅಪ್ಪಳಿಸಿ ಹಾನಿ ಮಾಡಿವೆ.

ಗುಜರಾತ್‌ಗೆ ಅಪ್ಪಳಿಸಿದ ಚಂಡಮಾರುತಗಳು
1996ರಲ್ಲಿ ಎಆರ್‌ಬಿ01, 1998ರಲ್ಲಿ ಎಆರ್‌ಬಿ 02 ಹಾಗೂ ಎಆರ್ ಬಿ 05, 2001ರಲ್ಲಿ ಎಆರ್‌ಬಿ 01, 2004ರಲ್ಲಿ ಓನಿಲ್, 2007ರಲ್ಲಿ ಯೇಮೈನ್, 2016ರಲ್ಲಿ ಎಆರ್‌ಬಿ 02 ಚಂಡಮಾರುತಗಳು ಗುಜರಾತಿನಲ್ಲಿ ಹಾವಳಿ ಮಾಡಿವೆ.

ಮಹಾರಾಷ್ಟ್ರದಲ್ಲಿ ಚಂಡಮಾರುತ
1994ರಲ್ಲಿ ಎಆರ್‌ಬಿ 02 ಹಾಗೂ 2009ರಲ್ಲಿ ಫಿಯಾನ್ ಚಂಡಮಾರುತಗಳು ಮಹಾರಾಷ್ಟ್ರವನ್ನು ನಡುಗಿಸಿವೆ.

ಓಡಿಸ್ಸಾದಲ್ಲಿ ಚಂಡಮಾರುತದ ಅವಾಂತರ
ಓಡಿಸ್ಸಾದಲ್ಲಿ 1999ರಲ್ಲಿ ಬಾಬ್ 05 ಹಾಗೂ ಬಾಬ್ 06, 2013ರಲ್ಲಿ ೈಲಿನ್ ಚಂಡಮಾರುತಗಳು ವಿನಾಶವನ್ನು ಕೈಗೊಂಡಿವೆ.

ತಮಿಳುನಾಡಿನಲ್ಲಿ ಚಂಡಮಾರುತದ ನರ್ತನ
ಅತ್ಯಂತ ಹೆಚ್ಚು ಚಂಡಮಾರುತಗಳು ತೊಂದರೆ ನೀಡಿದ್ದು ತಮಿಳುನಾಡಿಗೆ. 1991ರಲ್ಲಿ ಬಾಬ್ 09, 1992ರಲ್ಲಿ ಬಾಬ್ 06, 1993ರಲ್ಲಿ ಬಾಬ್ 03, 1996ರಲ್ಲಿ 08ಬಿ, 2000ರಲ್ಲಿ  ಬಾಬ್ 05, 2005ರಲ್ಲಿ ನೂಸ್, 2008ರಲ್ಲಿ ನಿಶಾ, 2010ರಲ್ಲಿ ಜಲ್, 2011ರಲ್ಲಿ ಥೇನ್, 2012ರಲ್ಲಿ ನೀಲಂ, 2013ರಲ್ಲಿ ಮ್ಯಾಡಿ, 2016ರಲ್ಲಿ  ರೌನು, ಕ್ಯಾಂಟ್, ನಾಡಾ ಹಾಗೂ ವಾರ್‘ಾ ಚಂಡಮಾರುತಗಳು ಅಪ್ಪಳಿಸಿವೆ.


ಹುಡ್‌ಹುಡ್ - 2014
2014 ರಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದ ಹುಡ್‌ಹುಡ್ ಎಂಬ ಚಂಡಮಾರುತ 185 ಕಿ.ಮೀ.ವೇಗದಲ್ಲಿ ವಿಶಾಖಪಟ್ಟಣಂ ಅನ್ನು ಅಪ್ಪಳಿಸಿತ್ತು. ಈ ಚಂಡಮಾರುತದಿಂದ 124 ಜನ ಮೃತರಾಗಿದ್ದರೆ, 21,900 ಕೋಟಿ ರೂ.ಗೂ ಹೆಚ್ಚು ಹಾನಿಹಾಗಿತ್ತು. ಈ ಸಮಯದಲ್ಲಿ ಎರಡೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಹಲವು ದಿನ ವಿದ್ಯುತ್ ಕೈಕೊಟ್ಟು ಜನ ಪರಿತಪಿಸಿದ್ದರು.

ಫೈಲಿನ್ - 2013
2013 ರ ಅಕ್ಟೋಬರ್‌ನಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ಫೈಲಿನ್ ಎಂಬ ಚಂಡಮಾರುತ, ದಸರಾ ಸಂಭ್ರಮವನ್ನೇ ನಾಶಗೊಳಿಸಿ 1,154,725 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ತಕ್ಷಣವೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ 3000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿತ್ತು.

ನೀಲಂ - 2012
2012 ಅಕ್ಟೋಬರ್ 31 ರಂದು ತಮಿಳುನಾಡಿನ ಕರಾವಳಿ ಪ್ರದೇಶವಾದ ಮಹಾಬಲಿಪುರಂ ಅನ್ನು ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ 12 ಜನ ಮೃತರಾಗಿದ್ದರು. 3000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. 100 ಕೋಟಿ ರೂ.ಗೂ ಅಕ ಮೌಲ್ಯದ ಆಸ್ತಿ ಹಾನಿಯಾಗಿತ್ತು.

ಜಾಲ್ - 2010
2010 ರಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿದ ಜಾಲ್ ಚಂಡಮಾರುತಕ್ಕೆ 54 ಜನ ಬಲಿಯಾಗಿದ್ದರು. 70,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಈ ಚಂಡಮಾರುತಕ್ಕೆ 3,00,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಯೆಲ್ಲವೂ ನಾಶವಾಗಿ ರೈತರ ಬದುಕನ್ನು ಮೂರಾಬಟ್ಟೆ ಮಾಡಿತ್ತು.

ಫಿಯಾನ್ - 2009
2009 ರಲ್ಲಿ ಸಂಭವಿಸಿದ ಫಿಯಾನ್ ಚಂಡಮಾರುತಕ್ಕೆ 300 ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದರು. ಮುಂಬೈ, ಡಿಯು, ದಮನ್, ಥಾಣೆ ಮುಂತಾದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಅಸಂಖ್ಯ ಆಸ್ತಿ-ಪಾಸ್ತಿ ಹಾನಿಯಾಗಿತ್ತು.

ನಿಶಾ- 2008
2008 ರ ನವೆಂಬರ್‌ನಲ್ಲಿ ತಮಿಳುನಾಡಿಗೆ ಅಪ್ಪಳಿಸಿದ ನಿಶಾ ಚಂಡಮಾರುತಕ್ಕೆ 180 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಈ ಸಮಯದಲ್ಲಿ 1280 ಮಿ.ಮೀ. ಗೂ ಹೆಚ್ಚು ಮಳೆ ಸುರಿದು ದಾಖಲೆಯಾಗಿತ್ತು. ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಈ ಚಂಡಮಾರುತ ತಮಿಳುನಾಡಿನ ಕರಾವಳಿ ತತ್ತರಿಸುವಂತೆ ಮಾಡಿತ್ತು.

ರಶ್ಮಿ- 2008
2008 ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ರಶ್ಮಿ ಚಂಡಮಾರುತಕ್ಕೆ ಬಲಿಯಾದವರು 15 ಜನ. ಅತಿಯಾಗಿ ಮಳೆಯಾಗುವ ಎಚ್ಚರಿಕೆಯನ್ನು ಜನರಿಗೆ ಮೊದಲೇ ನೀಡಿದ್ದರೂ 15 ಜನರ ಸಾವನ್ನು ತಪ್ಪಿಸುವುದಕ್ಕೆ ಮಾತ್ರ ಸಾಧ್ಯವಾಗಲಿಲ್ಲ. ಅಕ್ಟೋಬರ್ 27 ರಂದು ಸಂಭವಿಸಿದ ಈ ಚಂಡಮಾರುತ ಕಳೆದು ಕೇವಲ ಹದಿನೈದು ದಿನಗಳಲ್ಲಿ, ಇದೇ ಪ್ರದೇಶದಲ್ಲಿ ಖಾಯ್ ಮುಕ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಿತ್ತು.

ಇತರ ಭಯಾನಕ ಚಂಡಮಾರುತಗಳು
1977ರಲ್ಲಿ  ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ಚಂಡಮಾರುತದಿಂದಾಗಿ ಕನಿಷ್ಟ 50 ಸಾವಿರ ಜನರು ಸಾವನ್ನಪ್ಪಿದ್ದರು. ದೇಶದ ಅತ್ಯಂತ ಭೀಕರ ಚಂಡಮಾರುತಗಳ ಸಾಲಿನಲ್ಲಿ ಇದು ಮೊದಲ ಸ್ಥಾನದಲ್ಲಿದೆ. 1999ರಲ್ಲಿ ಓರಿಸ್ಸಾಕ್ಕೆ ಅಪ್ಪಳಿಸಿದ್ದ ಚಂಡಮಾರುತಕ್ಕೆ ಕನಿಷ್ಟ 15 ಸಾವಿರ ಜನರು ಸಾವನ್ನಪ್ಪಿದ್ದರು. ಸೂಪರ್ ಸೈಕ್ಲೋನ್ ಎಂದೇ ಹೆಸರಾಗಿದ್ದ ಈ ಚಂಡಮಾರುತ ಗಂಟೆಗೆ 260 ಕಿಮಿ ವೇಗದಲ್ಲಿ ಬೀಸಿತ್ತು.

ಚಂಡಮಾರುತದ ವಿಶಿಷ್ಟ ಹೆಸರುಗಳು

ಸಾಮಾನ್ಯವಾಗಿ ಸೀಯರ ಹೆಸರುಗಳನ್ನೇ ಹೆಚ್ಚಿರುವ ಚಂಡಮಾಡುತಗಳಿಗೆ ಹೆಚ್ಚಾಗಿ ಇಡಲಾಗುತ್ತದೆ. ಪೂರ್ವ ನಿರ್ಧಾರಿತ ಪಟ್ಟಿಯಂತೆ ಅರ್ದದಷ್ಟು ಮಾತ್ರ ಮಹಿಳೆಯರ ಹೆಸರಿರುತ್ತದೆ. ಪುರುಷರು, ಹಕ್ಕಿಗಳ ಹೆಸರನ್ನೂ ಕೂಡ ಚಂಡಮಾರುತಗಳಿಗೆ  ಇಡಲಾಗುತ್ತದೆ.
ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (ಡಬ್ಲೂಎಂಒ) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. ಡಬ್ಲೂಎಂಒ ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಇಡಲಾರಂಭಿಸಿತು. ನಂತರದ ದಿನಗಳಲ್ಲಿ ಚಂಡಮಾರುತದ ಬಾಧೆಗೆ ಒಳಗಾದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು ಡಬ್ಲೂಎಂಒ ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.

ಡಬ್ಲೂಎಂಒ ಹೆಸರುಗಳ ಪಟ್ಟಿ
ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ( ಡಬ್ಲೂಎಂಒ) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( ಕ್ಯೂ, ಯು, ಎಕ್ಸ್‌ಘಿ, ವೈ ಹಾಗೂ ಝಡ್ ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ. 2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ. ಆಗ ಐಡೆಂಟಿಟಿ ಬಿಕ್ಕಟ್ಟು ತಲೆ ದೋರುತ್ತದೆ.

ಪುರುಷರ ಹೆಸರೂ ಬಳಕೆ
1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಪ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಅಮೆರಿಕದ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

ದಕ್ಷಿಣ ಏಷ್ಯಾದಲ್ಲಿ ಹೆಸರುಗಳು
ದಕ್ಷಿಣ ಏಷ್ಯಾದಲ್ಲಿ ಪ್ರಮುಖವಾಗಿ ಹಿಂದೂ ಮಹಾಸಾಗರದಲ್ಲಿ ಏಳುವ ಚಂಡಮಾರುತಗಳಿಗೆ  ಮಹಾಸಾಗರದ ವ್ಯಾಪ್ತಿಯಲ್ಲಿ ಬರುವ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್‌ಗಳು ವಿವಿಧ ಹೆಸರುಗಳನ್ನು ಇಡುತ್ತವೆ. ಹಿಂದೂ ಮಹಾಸಾಗರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಏಳುವುದು ಹೆಚ್ಚು. 2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ.ಮೇಲ್ಕಂಡ ರಾಷ್ಟ್ರಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ.

ವೈವಿಧ್ಯ ಮಯ ಹೆಸರುಗಳು
ಭಾರತದಲ್ಲಿ 2004ರಲ್ಲಾದ ಚಂಡಮಾರುತಗಳಿಗೆ ಲೆಹೆರ್, ಆಕಾಶ್, ಅಗ್ನಿ, ಬಿಜಲಿ, ಜಲ್ ಹೆಸರನ್ನಿಡಲಾಗಿದೆ. ಮೇಘ್, ಸಾಗರ್ ಮತ್ತು ವಾಯು ಮೊದಲಾದ ಭಾರತೀಯ ಹವಾಮಾನ ಇಲಾಖೆ ಪಟ್ಟಿಯಲ್ಲಿದೆ. ಇತ್ತೀಚೆಗೆ ಥಾಯ್ಲೆಂಡ್ ನಿಂದ ಮೋರಾ ಹೆಸರು ಸಿಕ್ಕಿತ್ತು. ಇದೀಗ ಕಾಣಿಸಿಕೊಂಡಿರುವ ಚಂಡಮಾರುತಕ್ಕೆ ಓಖಿ ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರನ್ನು ಸೂಚಿಸಿದ್ದು ಬಾಂಗ್ಲಾದೇಶ. ಬೆಂಗಾಲಿಯಲ್ಲಿ ಓಖಿ ಎಂದರೆ ಕಣ್ಣು ಎಂದರ್ಥ. ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರು ನೀಡಿತ್ತು. ಮುರ್ಜಾನ್ ಚಂಡಮಾರುತಕ್ಕೆ ಓಮನ್ ಹೆಸರು ನೀಡಿತ್ತು. ಹೀಗೆ ವಿವಿಧ ರಾಷ್ಟ್ರಗಳು ತಮ್ಮ ಸರದಿ ಬಂದಾಗ ಹೆಸರು ನೀಡುತ್ತವೆ.

ಭಯಂಕರ ಚಂಡಮಾರುತಗಳು
1970ರಲ್ಲಿ ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ್ದ ದಿ ಗ್ರೇಟ್ ಓಟಾ ಭೋಲಾ ಚಂಡಮಾರುತದಿಂದಾಗಿ 3 ರಿಂದ 5 ಲಕ್ಷ ಜನರು ಸಾವನ್ನಪ್ಪಿದ್ದರು. 1737ರಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ್ದ ಹೂಗ್ಲಿ ನದಿ ಚಂಡಮಾರುತ, 1881ರಲ್ಲಿ ವಿಯೆಟ್ನಾಮಿನಲ್ಲಿ ಹಾವಳಿ ಮಾಡಿದ್ದ ಹೈಪಾಂಗ್ ಚಂಡಮಾರುತ, 1839ರಲ್ಲಿ ಅಪ್ಪಳಿಸಿದ ಭಾರತದ ಕೊರಿಂಗಾ ಚಂಡಮಾರುತಗಳಲ್ಲಿ ತಲಾ 3 ಲಕ್ಷಕ್ಕೂ ಅಕ ಜನ ಸಾವನ್ನಪ್ಪಿದ್ದರು. ಇತಿಹಾಸದ ಪುಟಗಳನ್ನು ತೆರೆದಾಗ ಬಂಗಾಳ ಕೊಲ್ಲಿಯಲ್ಲಿಯೇ ಅತ್ಯಂತ ಹೆಚ್ಚಿನ ಚಂಡಮಾರುತಗಳು ಎದ್ದಿದ್ದು ಗಮನಕ್ಕೆ ಬರುತ್ತವೆ. ಅತ್ಯಂತ ಭೀಕರ ಚಂಡಮಾರುತಗಳು ಕಾಣಿಸಿಕೊಂಡಿದ್ದೂ ಕೂಡ ಇದೇ ಕೊಲ್ಲಿಯಲ್ಲಿ. ದಕ್ಷಿಣ ಭಾರತದ ರಾಜ್ಯಗಳ ಮೇಲೆ ಚಂಡಮಾರುತ ಎಷ್ಟೇ ಪ್ರತಾಪ ತೋರಿದ್ದರೂ ಇದುವರೆಗಿನ ಒಂದೇ ಒಂದು ಚಂಡಮಾರುತವೂ ಕರ್ನಾಟಕದ ಮೇಲೆ ನೇರವಾಗಿ ಅಪ್ಪಳಿಸದೇ ಇರುವುದು ಅದೃಷ್ಟ ಹಾಗೂ ವಿಶೇಷ ಸಂಗತಿಯಾಗಿದೆ.

ಓಖಿ ಅಬ್ಬರ
ಇದೀಗ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಓಖಿ ಚಂಡಮಾರುತ ಅಬ್ಬರಿಸಿದೆ. ಈಗಾಗಲೇ 9 ಜನರನ್ನು ಬಲಿತೆಗೆದುಕೊಂಡ ಓಖಿ, ತಮಿಳುನಾಡು, ಕೇರಳ ರಾಜ್ಯಗಳ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಮಳೆಯ ಅಬ್ಬರದಿಂದ ಈ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಂತೂ ಓಖಿ ಉಂಟುಮಾಡಿರುವ ಅವಾಂತರ ಹೇಳತೀರದು. ಈಗಾಗಲೇ ನೂರಾರು ಮನೆಗಳು ನಾಶವಾಗಿವೆ. 150ರಷ್ಟು ಮೀನುಗಾರರು ಕಾಣೆಯಾಗಿದ್ದಾರೆ. ಓಖಿ ಚಂಡಮಾರುತದ ಕುರಿತಂತೆ ಹವಾಮಾನ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದ್ದರೂ ಕೂಡ, ಅದೆಷ್ಟೋ ಜನರು ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದು, ಜೀವಕಳೆದುಕೊಂಡಿದ್ದಾರೆ. ನೌಕಾಸೇನೆ ಇವರಲ್ಲಿ ಹಲವರನ್ನು ರಕ್ಷಿಸಿದೆ. ಲಕ್ಷದ್ವೀಪದಲ್ಲಿ ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದೆ.


Saturday, December 2, 2017

ಮಧ್ಯಪ್ರಾಚ್ಯ-ಯುರೋಪ್ ಕಡೆಗೆ ಹಬ್ಬದ ಭಾರತೀಯ ಸಾಮ್ರಾಜ್ಯಗಳು : ಕಾರಣಗಳೇನು?

 ಬಹುತೇಕರಲ್ಲಿ ಇಂತದ್ದೊಂದು ಕುತೂಹಲ ಇರುವುದು ಸಹಜವೇ.. ಭಾರತದಲ್ಲಿ ಆಳಿದ ರಾಜರುಗಳು, ಸಾಮ್ರಾಜ್ಯಗಳ ಆಳ್ವಿಕೆಯತ್ತ ಕಣ್ಣು ಹಾಯಿಸಿದರೆ ಅವುಗಳು ಭಾರತದಲ್ಲಿ ಮಾತ್ರ ಸಾಮ್ರಾಜ್ಯ ಕಟ್ಟಿ ಮೆರೆದಿರುವುದು ಕಣ್ಣಿಗೆ ಬೀಳುತ್ತದೆ. ಎಲ್ಲೋ ಒಂದಿಬ್ಬರು ಮಾತ್ರ ಪಕ್ಕದ ಬರ್ಮಾ ಕಡೆಗೋ ಅಥವಾ ಅದರಾಚೆಗಿರುವ ಕಂಪೂಚಿಯಾ (ಈಗಿನ ಕಾಂಬೋಡಿಯಾ) ದಾಟಿ ಸಾಮ್ರಾಜ್ಯ ನಿರ್ಮಾಣ ಮಾಡಿರುವುದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ತಿಳಿದು ಬರುತ್ತದೆ.
                ಭಾರತದ ರಾಜರು ಅರಬ್ ಕಡೆಗೋ, ಯೂರೋಪ್ ಕಡೆಗೋ ಅಥವಾ ಚೀನಾ ಕಡೆಗೋ ಮುಖ ಮಾಡಬಹುದಿತ್ತು ಎನ್ನುವುದು ಎಲ್ಲರಂತೆ ನನ್ನನ್ನೂ ಕಾಡಿದ ಪ್ರಶ್ನೆ. ಈ ಪ್ರದೇಶಗಳಿಗೆ ಭಾರತದ ರಾಜರು ಸಾಮ್ರಾಜ್ಯ ವಿಸ್ತರಿಸಿ ಹೋಗಿದ್ದರೆ ಅಲ್ಲಿಯೂ ಕೂಡ ಭಾರತೀಯ ಸಂಸ್ಕೃತಿ ಇರಬಹುದಿತ್ತು ಎನ್ನುವ ಭಾವನೆ ನನ್ನನ್ನು ಕಾಡದೇ ಇರಲಿಲ್ಲ. ಹೀಗೆಕೆ ಎಂದು ಆಲೋಚಿಸುತ್ತಿದ್ದಾಗಲೇ ಕೆಲವು ಮಾಹಿತಿಗಳು ನನಗೆ ಸಿಕ್ಕವು. ಅವನ್ನು ನಿಮ್ಮ ಮುಂದೆ ಇಟ್ಟರೆ ನನ್ನ ಸಂದೇಹಗಳಿಗೆ ಸಿಕ್ಕ ಉತ್ತರ ನಿಮಗೂ ಸಿಗಬಹುದು.
                 ಭಾರತದ ಇತಿಹಾಸವನ್ನು ಗಮನಿಸಿದರೆ ಅಲೆಕ್ಸಾಂಡರ್, ಮೊಹಮ್ಮದ್ ಘಝ್ನಿ, ಮೊಹಮ್ಮದ್ ಘೋರಿ, ಬಾಬರ್, ಮಂಗೋಲಿಯನ್ನರು ಹೀಗೆ ಅದೆಷ್ಟೋ ಜನರು ಭಾರತದ ಮೇಲೆ ದಂಡೆತ್ತಿ ಬಂದರು ಎನ್ನುವುದನ್ನು ನಾವು ಗಮನಿಸುತ್ತೇವೆ. 10ಕ್ಕೂ ಹೆಚ್ಚಿನ ಸಾರಿ ಘಝ್ನಿ ಹಾಗೂ ಘೋರಿಗಳು ಭಾರತದ ಮೇಲೆ ಧಾಳಿ ಮಾಡಿದರು ಎಂದೆಲ್ಲ ಓದಿದ್ದೇವೆ. ಆದರೆ ಭಾರತದ ಅರಸರು ಮಾತ್ರ ಯೂರೋಪ್ ಮೇಲೆ ಧಾಳಿ ಮಾಡಿದರು, ಚೀನಾ ಮೇಲೆ ದಾಳಿ ಮಾಡಿದರು, ಮಂಗೋಲಿಯಾ, ಅರಬ್ ಹೀಗೆ ಭಾರತ ಉಪಖಂಡವನ್ನು ಹೊರತು ಪಡಿಸಿ ಉಳಿದ ಕಡೆಗೆ ದಾಳಿ ಮಾಡಿದರು ಎಂಬ ಅಂಶಗಳನ್ನು ಕೇಳಿಯೇ ಇಲ್ಲ. ಭಾರತವನ್ನು ಯೂರೋಪಿನಿಂದ ಬಂದವರು ವಸಾಹತುವನ್ನಾಗಿ ಮಾಡಿಕೊಂಡಿದ್ದರು ಎಂಬ ವಿಷಯವನ್ನು ಕೇಳಿದಾಗಲೆಲ್ಲ , ಭಾರತವೂ ಯೂರೋಪನ್ನು ವಸಾಹತು ಮಾಡಿಕೊಳ್ಳಬಹುದಿತ್ತು. ಆದರೆ ಯಾಕೆ ಹಾಗೆ ಮಾಡಿಕೊಳ್ಳಲಿಲ್ಲ ಎನ್ನುವ ಅಂಶಗಳು ಕಾಡಿದ್ದವು. ಅವುಗಳನ್ನು ನಾನು ನನ್ನದೇ ಆದ ರೀತಿಯಲ್ಲಿ ತರ್ಕಿಸಲು ಆರಂಭಿಸಿದೆ. ಈ ಕುರಿತಂತೆ ಜಾಲತಾಣವನ್ನು ಜಾಲಾಡಿದಾಗ ಹಲವು ಮಾಹಿತಿಗಳೂ ಸಿಕ್ಕವು. ಅವುಗಳನ್ನು ನಿಮ್ಮ ಮುಂದೆ ಇಡುವ ಯತ್ನ ಮಾಡುತ್ತೇನೆ.

1) ಚಿಕ್ಕ ಚಿಕ್ಕ ರಾಜಮನೆತನಗಳು
ಭಾರತದ ರಾಜಮನೆತನಗಳು ಬಹಳ ಚಿಕ್ಕವು. ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯದ ರಾಜರುಗಳು ಪ್ರಭಲರು ಹಾಗೂ ದೊಡ್ಡ ದೊಡ್ಡ ಸಾಮ್ರಾಜ್ಯವನ್ನು ಹೊಂದಿರುವವರು ಎಂದರೆ ತಪ್ಪಾಗಲಿಕ್ಕಿಲ್ಲ. ಚಿಕ್ಕ ಮನೆತನಗಳು, ತಮ್ಮ ಅಕ್ಕ-ಪಕ್ಕದ ರಾಜ್ಯಗಳನ್ನು ಸೋಲಿಸಿ, ಅವುಗಳ ಮೇಲೆ ನಿಯಂತ್ರಣ ಹೇರುವುದಕ್ಕಷ್ಟೇ ಸೀಮಿತವಾಗಿದ್ದವು. ಇಂತಹ ರಾಜ್ಯಗಳ ಚುಕ್ಕಾಣಿ ಹಿಡಿದಿದ್ದ ರಾಜರುಗಳಿಗೆ ದೂರದ ಯೂರೋಪ್, ಚೀನಾ, ಮಧ್ಯಪ್ರಾಚ್ಯಗಳ ಕಡೆಗೆ ಗಮನ ಹರಿಸುವ ಆಲೋಚನೆಯೇ ಬರಲಿಲ್ಲ ಬಿಡಿ.

2) ಸಣ್ಣ ಸೈನ್ಯ :
ರಾಜ್ಯಗಳು ಸಣ್ಣವು. ಅದಕ್ಕೆ ತಕ್ಕಂತೆ ಇಲ್ಲಿಂದ ಸೈನ್ಯಗಳೂ ಕೂಡ ಚಿಕ್ಕವು. ಆನೆಗಳು ಹೇರಳವಾಗಿದ್ದರೂ ಅಶ್ವದಳಕ್ಕೋ ಅಥವಾ ಇನ್ಯಾವುದಕ್ಕೋ ಬೇರೆ ಬೇರೆ ದೇಶಗಳ ಕಡೆಗೆ ಮುಖ ಮಾಡುವ ಅನಿವಾರ್ಯತೆ ಭಾರತದ ರಾಜರಿಗಿತ್ತು. ಭಾರತದ ವಾತಾವರಣಕ್ಕೆ ಹೊಂದಿಕೊಂಡ ಪದಾತಿದಳ (ಕಾಲಾಳು)ಗಳು, ಗಜಪಡೆ ಇತ್ಯಾದಿಗಳು ಉಪಖಂಡದಿಂದ ಹೊರ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಾಧ್ಯವಿಲ್ಲ ಬಿಡಿ. ಹೀಗಾಗಿ ದೊಡ್ಡ ಸೈನ್ಯ ಕಟ್ಟಬೇಕು, ಸಾಮ್ರಾಜ್ಯ ದೊಡ್ಡದು ಮಾಡಬೇಕೆಂಬ ಉಸಾಬರಿಗೆ ಹೋಗಲಿಲ್ಲ. ಭಾರತದ ಸೈನಿಕರು ಪರಾಕ್ರಮಿಗಳೇನೋ ಹೌದು. ಆದರೆ ಬಹುದೊಡ್ಡ ಸೈನ್ಯದ ಎದುರು ಜಯಗಳಿಸುವಷ್ಟು ಸಂಖ್ಯೆ ಇರಲಿಲ್ಲ ಎನ್ನಲೇ ಬಹುದು.

3) ಶ್ರೀಮಂತ ರಾಜ್ಯಗಳು
ಭಾರತದಲ್ಲಿದ್ದ ಸಣ್ಣ ಪುಟ್ಟ ರಾಜ್ಯಗಳು ಭೌಗೋಳಿಕವಾಗಿ ಚಿಕ್ಕದೇ ಆಗಿದ್ದರೂ ಕೂಡ ಸಾಕಷ್ಟು ಶ್ರೀಮಂತವಾಗಿದ್ದವು. ಹಣಕಾಸು, ವೈಭೋಗದಲ್ಲಿ ಭಾರತದ ರಾಜಸಂಸ್ಥಾನಗಳನ್ನು ಮೀರಿಸಲು ಸಾಧ್ಯವೇ ಇರಲಿಲ್ಲ ಬಿಡಿ. ಭಾರತದ ಉಪಖಂಡವನ್ನು ದಾಟಿದರೆ ಸಿಗಬಹುದಾದ ಪ್ರದೇಶಗಳೆಲ್ಲ ಬಡತನದಿಂದಲೇ ಕೂಡಿದ್ದವು. ಅರೆಬಿಯಾ ಇರಲಿ, ಮಧ್ಯ ಏಷ್ಯಾ ಇರಲಿ ಭಾರತದ ಚಿಕ್ಕ ಸಂಸ್ಥಾನದ ಅರ್ಧದಷ್ಟೂ ಸಂಪತ್ತನ್ನು ಹೊಂದಿರಲಿಕ್ಕೆ ಸಾಧ್ಯವೇ ಇಲ್ಲ ಬಿಡಿ. ಶ್ರೀಮಂತವಾಗಿರುವ ರಾಜ್ಯಗಳ ಕಣ್ಣು ಬಡ ಸಂಸ್ಥಾನಗಳ ಮೇಲೆ ಬೀಳುವುದಿಲ್ಲ. ಭಾರತದ ರಾಜರುಗಳಿಗೂ ಆಗಿದ್ದು ಇದೇ. ಹೀಗಾಗಿ ಭಾರತದ ರಾಜರುಗಳು ಉಪಖಂಡದ ಆಚೆಗೆ ದೃಷ್ಟಿ ಹಾಯಿಸಲಿಲ್ಲ ಎನ್ನಬಹುದು.

4) ಭೌಗೋಳಿಕ ಅಡೆತಡೆಗಳು
ಭಾರತದ ರಾಜರುಗಳು ಯೂರೋಪಿಗೋ ಅಥವಾ ಅರೆಬಿಯಾಕ್ಕೋ ಅಥವಾ ಮಧ್ಯಪ್ರಾಚ್ಯಕ್ಕೋ ಹೋಗಬೇಕೆಂದರೆ ಭಾರಿ ಪ್ರಮಾಣದ ಭೌಗೋಳೀಕ ಅಡೆತಡೆಗಳನ್ನು ಎದುರಿಸಲೇಬೇಕಿತ್ತು. ಈ ಭಾಗದಲ್ಲಿ ನಡುವೆ ಸಿಗುವ ವಿಶಾಲವಾದ ಮರಳುಗಾಡು (ಥಾರ್ ಇತ್ಯಾದಿ), ಹಿಂದು-ಕುಶ್ ಪರ್ವತ ಶ್ರೇಣಿಗಳು, ಅರೆಬಿಯಾದ ಮರಳುಗಾಡು ಇತ್ಯಾದಿಗಳು ಭಾರತದ ರಾಜರುಗಳಿಗೆ, ಸೈನಿಕರಿಗೆ ಸುಲಭವಂತೂ ಆಗಿರಲಿಲ್ಲ. ಅಲ್ಲದೇ ಆಗಿನ ಗಾಂಧಾರ, ಈಗಿನ ಅಫ್ಘಾನಿಸ್ಥಾನದ ಆಚೆಗಿನ ಗುಡ್ಡಗಾಡು, ಖಾಲಿ ಖಾಲಿ ಪ್ರದೇಶಗಳು, ಜನವಸತಿ ರಹಿತ ಗುಡ್ಡಗಾಡುಗಳು ಯಾವುದಕ್ಕೂ ನಿರುಪಯುಕ್ತ ಎನ್ನುವಂತಾಗಿದ್ದವು. ಮಧ್ಯ ಏಷ್ಯಾದವರಿಗೆ, ಅರಬ್ಬರಿಗೆ, ಅಥವಾ ಖೀಲ್ಜಿ, ಘೋರಿ ಘಜ್ನಿಗಳಂತಹ ಮುಸಲ್ಮಾನ ದೊರೆಗಳಿಗೆ ಭಾರತದ ಸಂಪತ್ತಿನ ಮೇಲೆ ಕಣ್ಣಿತ್ತು. ಆದರೆ ಭಾರತದ ರಾಜರುಗಳು ಕಣ್ಣಿಡಲು ಮಧ್ಯ ಏಷ್ಯಾದಲ್ಲಿ ಏನೂ ಇರಲಿಲ್ಲ. ಮಧ್ಯ ಏಷ್ಯಾದ ರಾಜರುಗಳು ಖೈಬರ್ ಹಾಗೂ ಬೋಲಾನ್ ಕಣವೆಗಳನ್ನು ಬಳಸಿಕೊಂಡು ಹಿಂದು-ಕುಷ್ ಪರ್ವತ ದಾಟಿ ಭಾರತಕ್ಕೇನೋ ಬಂದರು. ಆದರೆ ಭಾರತೀಯ ಅರಸರಿಗೆ ಅದರ ಅಗತ್ಯವೇ ಇರಲಿಲ್ಲ.
ಇವು ಪ್ರಮುಖ ಕಾರಣಗಳು ಎನ್ನಬಹುದಾದರೂ ಚಿಕ್ಕಪುಟ್ಟ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತದ ಅರಸೊತ್ತಿಗೆಗಳ ಬಳಿ ಕುದುರೆಗಳು ಕಡಿಮೆ ಇದ್ದವು. ಮರಳುಗಾಡಿನ ಹಡಗುಗಳಾದ ಒಂಟೆಗಳ ಸಂಖ್ಯೆ ವಿರಳವಾಗಿತ್ತು. ಇವುಗಳೂ ಕೂಡ ಮುಖ್ಯ ಕಾರಣಗಳೆನ್ನಿಸಿಕೊಳ್ಳುತ್ತವೆ.
ಇಷ್ಟಾದರೂ ಕೂಡ ಭಾರತ ಸಾಂಸ್ಕೃತಿಕವಾಗಿ ಯೂರೋಪ್, ಚೀನಾ, ಅರೆಬಿಯಾಗಳ ಮೇಲೆ ಆಳ್ವಿಕೆ ನಡೆಸಿತು ಎನ್ನಬಹುದು. ಬೌದ್ಧ ಧರ್ಮವನ್ನು ಚೀನಾ ಹಾಗೂ ಇಂಡೋಚೀನಾ ಕಡೆಗಳಲ್ಲಿ ಬೆಳೆಸಿತು. ಇಂಡೋ-ಚೀನಾಗಳಲ್ಲಿ ಹಿಂದೂ ಧರ್ಮವನ್ನು ಬೆಳೆಸಿತು. ಇನ್ನು ಅರೆಬಿಯಾಗಳಿಗೆ ಭಾರತದ ಅಂಕಿಗಳನ್ನೂ, ಪ್ರಮೇಯಗಳನ್ನೂ ನೀಡಿತು. ಯೂರೋಪ್ ರಾಷ್ಟ್ರಗಳಗೆ ಕಾಳೂಮೆಣಸು ಮುಂತಾದ ಸಾಂಬಾರ ಪದಾರ್ಥಗಳನ್ನು ನೀಡುವ ಮೂಲಕ ಅವರನ್ನು ಅಂಕೆಯಲ್ಲಿ ಇರಿಸಿಕೊಂಡಿತು. ಇಂತಹ ರಾಷ್ಟ್ರದ ಮೇಲೆ ವಿದೇಶಿಗರು ಆಕ್ರಮಣ ಮಾಡಿದ ನಂತರ ಭಾರತದಲ್ಲಿ ಏನೇನಾಯ್ತು ಎನ್ನುವುದು ಎಲ್ಲಿರಿಗೂ ತಿಳಿದಿದ್ದೇ....