Sunday, December 3, 2017

ಭಾರತವನ್ನು ಕಾಡಿದ ಚಂಡಮಾರುತಗಳು

ಚಂಡಮಾರುತಗಳು ಭಾರತವನ್ನು ಪದೇ ಪದೆ ಕಾಡುತ್ತವೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರಗಳಲ್ಲಿ ರೂಪುಗೊಳ್ಳುವ ಚಂಡಮಾರುತಗಳು ಭಾರತದ ಕಡೆಗೆ ಬೀಸಿ ಬಂದು ಭಾರತದಲ್ಲಿ ಭಾರಿ ಪ್ರಮಾಣದ ಹಾನಿಯನ್ನು ಕೈಗೊಳ್ಳುತ್ತವೆ. ಇತ್ತೀಚೆಗಂತೂ ವರ್ಷಕ್ಕೆ ಕನಿಷ್ಟ ಎರಡಾದರೂ ಚಂಡಮಾರುತ ಭಾರತದ ಕಡೆಗೆ ಬೀಸಿ ಬರುತ್ತಿವೆ. ಇವುಗಳ ಮಾಡುವ ಹಾನಿ ಭಾರೀ ಪ್ರಮಾಣದ್ದಾಗಿದೆ. ಇದೀಗ ಒಖಿ ಚಂಡಮಾರುತ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಹಾವಳಿಯನ್ನು ಎಬ್ಬಿಸುತ್ತಿದೆ.


ಭಾರತದಲ್ಲಿಯೂ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳು, ಓರಿಸ್ಸಾ, ಪಶ್ಚಿಮ ಬಂಗಾಳ, ತಮಿಳುನಾಡುಗಳ ಮೇಲೆ ಚಂಡಮಾರುತಗಳ ಪ್ರಭಾವ ತೀವ್ರವಾಗಿದೆ. ಈ ರಾಜ್ಯಗಳಲ್ಲಿ ಆಗಾಗ ಚಂಡ ಮಾರುತಗಳು ಎಬ್ಬಿಸಿದ ಹಾವಳಿ ಬಹಳ. ಲಕ್ಷಾಂತರ ಜನರು ಮನೆ-ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಚಂಡಮಾರುತಕ್ಕೆ ಜೀವ ಕಳೆದುಕೊಂಡಿದ್ದಾರೆ. ಭಾರತ ಉಪಖಂಡದಲ್ಲಿ ಸಾಮಾನ್ಯವಾಗಿ ಚಳಿಗಾಲದ ನಂತರ ಹಾಗೂ ಬೇಸಿಗೆಯಲ್ಲಿ ಚಂಡಮಾರುತಗಳು ಕಾಣಿಸಿಕೊಳ್ಳುವುದು ಸಹಜ ಎಂಬಂತಾಗಿದೆ. ಯಾವುದೇ ಕಡೆಗಳಲ್ಲಿಯೂ ಗಾಳಿಯ  ಒತ್ತಡ ಕಡಿಮೆಯಾದ ಸಂದರ್ಭಗಳಲ್ಲಿ ಚಂಡಮಾರುತಗಳು ರೂಪುಗೊಂಡು ಹಾವಳಿ ಉಂಟುಮಾಡುತ್ತವೆ. ಭಾರತದ ಮೇಲೆ ಬೀಸಿ, ಅಪಾರ ಹಾನಿಯನ್ನು ಉಂಟುಮಾಡಿದ ಚಂಡಮಾರುತಗಳ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ.

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಹಾನಿ :
1970ರಿಂದೀಚೆಗೆ ಪಶ್ಚಿಮ ಬಂಗಾಳ ಹಲವಾರು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ. 1970ರ ಭೋಲಾ ಚಂಡಮಾರುತ, 1981ರ ಬಾಬ್ 3, 1988ರಲ್ಲಿ ಬೀಸಿದ ಬಾಬ್ 5, 1997ರಲ್ಲಿ ಬೀಸಿದ ಬಾಬ್ 7, 1998ರಲ್ಲಿ ಬೀಸಿದ ಬಾಬ್ 6, 2000ರ ಬಾಬ್ 4, 2002ರಲ್ಲಿ ಬಾಬ್ 3 ಚಂಡಮಾರುತಗಳು ಹಾವಳಿ ಎಬ್ಬಿಸಿದೆ. 2007ರಲ್ಲಿ ಸಿದ್ರ್‌, 2008ರಲ್ಲಿ ರಶ್ಮಿ, 2009ರಲ್ಲಿ ಆಲಿಯಾ, 2015ರಲ್ಲಿ ಕೋಮೆನ್, 2016ರಲ್ಲಿ ರೌನು ಹಾಗೂ 2017ರಲ್ಲಿ ಮೋರಾ ಚಂಡಮಾರುತಗಳು ಹಾವಳಿ ಎಬ್ಬಿಸಿವೆ.

ಆಂಧ್ರ ಪ್ರದೇಶದಲ್ಲಿ ಚಂಡಮಾರುತದ ಹಾವಳಿ
ಆಂದ್ರಪ್ರದೇಶದಲ್ಲಿ 1990ರಲ್ಲಿ ಬಾಬ್ 1, 1998ರಲ್ಲಿ ಬಾಬ್ 5, 2003ರಲ್ಲಿ 03ಬಿ, 2007ರಲ್ಲಿ ಯೇಮೈನ್, 2008ರಲ್ಲಿ ಖೈಮುಕ್, 2010ರಲ್ಲಿ ಲೈಲಾ, 2012ರಲ್ಲಿ ನೀಲಂ, 2013ರಲ್ಲಿ ಹೆಲನ್ ಹಾಗೂ ಲೆಹರ್, 2014ರಲ್ಲಿ ಹುಡ್‌ಹುಡ್ ಹಾಗೂ 2016ರಲ್ಲಿ ಕ್ಯಾಂಟ್ ಚಂಡಮಾರುತಗಳು ಅಪ್ಪಳಿಸಿ ಹಾನಿ ಮಾಡಿವೆ.

ಗುಜರಾತ್‌ಗೆ ಅಪ್ಪಳಿಸಿದ ಚಂಡಮಾರುತಗಳು
1996ರಲ್ಲಿ ಎಆರ್‌ಬಿ01, 1998ರಲ್ಲಿ ಎಆರ್‌ಬಿ 02 ಹಾಗೂ ಎಆರ್ ಬಿ 05, 2001ರಲ್ಲಿ ಎಆರ್‌ಬಿ 01, 2004ರಲ್ಲಿ ಓನಿಲ್, 2007ರಲ್ಲಿ ಯೇಮೈನ್, 2016ರಲ್ಲಿ ಎಆರ್‌ಬಿ 02 ಚಂಡಮಾರುತಗಳು ಗುಜರಾತಿನಲ್ಲಿ ಹಾವಳಿ ಮಾಡಿವೆ.

ಮಹಾರಾಷ್ಟ್ರದಲ್ಲಿ ಚಂಡಮಾರುತ
1994ರಲ್ಲಿ ಎಆರ್‌ಬಿ 02 ಹಾಗೂ 2009ರಲ್ಲಿ ಫಿಯಾನ್ ಚಂಡಮಾರುತಗಳು ಮಹಾರಾಷ್ಟ್ರವನ್ನು ನಡುಗಿಸಿವೆ.

ಓಡಿಸ್ಸಾದಲ್ಲಿ ಚಂಡಮಾರುತದ ಅವಾಂತರ
ಓಡಿಸ್ಸಾದಲ್ಲಿ 1999ರಲ್ಲಿ ಬಾಬ್ 05 ಹಾಗೂ ಬಾಬ್ 06, 2013ರಲ್ಲಿ ೈಲಿನ್ ಚಂಡಮಾರುತಗಳು ವಿನಾಶವನ್ನು ಕೈಗೊಂಡಿವೆ.

ತಮಿಳುನಾಡಿನಲ್ಲಿ ಚಂಡಮಾರುತದ ನರ್ತನ
ಅತ್ಯಂತ ಹೆಚ್ಚು ಚಂಡಮಾರುತಗಳು ತೊಂದರೆ ನೀಡಿದ್ದು ತಮಿಳುನಾಡಿಗೆ. 1991ರಲ್ಲಿ ಬಾಬ್ 09, 1992ರಲ್ಲಿ ಬಾಬ್ 06, 1993ರಲ್ಲಿ ಬಾಬ್ 03, 1996ರಲ್ಲಿ 08ಬಿ, 2000ರಲ್ಲಿ  ಬಾಬ್ 05, 2005ರಲ್ಲಿ ನೂಸ್, 2008ರಲ್ಲಿ ನಿಶಾ, 2010ರಲ್ಲಿ ಜಲ್, 2011ರಲ್ಲಿ ಥೇನ್, 2012ರಲ್ಲಿ ನೀಲಂ, 2013ರಲ್ಲಿ ಮ್ಯಾಡಿ, 2016ರಲ್ಲಿ  ರೌನು, ಕ್ಯಾಂಟ್, ನಾಡಾ ಹಾಗೂ ವಾರ್‘ಾ ಚಂಡಮಾರುತಗಳು ಅಪ್ಪಳಿಸಿವೆ.


ಹುಡ್‌ಹುಡ್ - 2014
2014 ರಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದ ಹುಡ್‌ಹುಡ್ ಎಂಬ ಚಂಡಮಾರುತ 185 ಕಿ.ಮೀ.ವೇಗದಲ್ಲಿ ವಿಶಾಖಪಟ್ಟಣಂ ಅನ್ನು ಅಪ್ಪಳಿಸಿತ್ತು. ಈ ಚಂಡಮಾರುತದಿಂದ 124 ಜನ ಮೃತರಾಗಿದ್ದರೆ, 21,900 ಕೋಟಿ ರೂ.ಗೂ ಹೆಚ್ಚು ಹಾನಿಹಾಗಿತ್ತು. ಈ ಸಮಯದಲ್ಲಿ ಎರಡೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಹಲವು ದಿನ ವಿದ್ಯುತ್ ಕೈಕೊಟ್ಟು ಜನ ಪರಿತಪಿಸಿದ್ದರು.

ಫೈಲಿನ್ - 2013
2013 ರ ಅಕ್ಟೋಬರ್‌ನಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ಫೈಲಿನ್ ಎಂಬ ಚಂಡಮಾರುತ, ದಸರಾ ಸಂಭ್ರಮವನ್ನೇ ನಾಶಗೊಳಿಸಿ 1,154,725 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ತಕ್ಷಣವೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ 3000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿತ್ತು.

ನೀಲಂ - 2012
2012 ಅಕ್ಟೋಬರ್ 31 ರಂದು ತಮಿಳುನಾಡಿನ ಕರಾವಳಿ ಪ್ರದೇಶವಾದ ಮಹಾಬಲಿಪುರಂ ಅನ್ನು ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ 12 ಜನ ಮೃತರಾಗಿದ್ದರು. 3000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. 100 ಕೋಟಿ ರೂ.ಗೂ ಅಕ ಮೌಲ್ಯದ ಆಸ್ತಿ ಹಾನಿಯಾಗಿತ್ತು.

ಜಾಲ್ - 2010
2010 ರಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿದ ಜಾಲ್ ಚಂಡಮಾರುತಕ್ಕೆ 54 ಜನ ಬಲಿಯಾಗಿದ್ದರು. 70,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಈ ಚಂಡಮಾರುತಕ್ಕೆ 3,00,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಯೆಲ್ಲವೂ ನಾಶವಾಗಿ ರೈತರ ಬದುಕನ್ನು ಮೂರಾಬಟ್ಟೆ ಮಾಡಿತ್ತು.

ಫಿಯಾನ್ - 2009
2009 ರಲ್ಲಿ ಸಂಭವಿಸಿದ ಫಿಯಾನ್ ಚಂಡಮಾರುತಕ್ಕೆ 300 ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದರು. ಮುಂಬೈ, ಡಿಯು, ದಮನ್, ಥಾಣೆ ಮುಂತಾದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಅಸಂಖ್ಯ ಆಸ್ತಿ-ಪಾಸ್ತಿ ಹಾನಿಯಾಗಿತ್ತು.

ನಿಶಾ- 2008
2008 ರ ನವೆಂಬರ್‌ನಲ್ಲಿ ತಮಿಳುನಾಡಿಗೆ ಅಪ್ಪಳಿಸಿದ ನಿಶಾ ಚಂಡಮಾರುತಕ್ಕೆ 180 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಈ ಸಮಯದಲ್ಲಿ 1280 ಮಿ.ಮೀ. ಗೂ ಹೆಚ್ಚು ಮಳೆ ಸುರಿದು ದಾಖಲೆಯಾಗಿತ್ತು. ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಈ ಚಂಡಮಾರುತ ತಮಿಳುನಾಡಿನ ಕರಾವಳಿ ತತ್ತರಿಸುವಂತೆ ಮಾಡಿತ್ತು.

ರಶ್ಮಿ- 2008
2008 ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ರಶ್ಮಿ ಚಂಡಮಾರುತಕ್ಕೆ ಬಲಿಯಾದವರು 15 ಜನ. ಅತಿಯಾಗಿ ಮಳೆಯಾಗುವ ಎಚ್ಚರಿಕೆಯನ್ನು ಜನರಿಗೆ ಮೊದಲೇ ನೀಡಿದ್ದರೂ 15 ಜನರ ಸಾವನ್ನು ತಪ್ಪಿಸುವುದಕ್ಕೆ ಮಾತ್ರ ಸಾಧ್ಯವಾಗಲಿಲ್ಲ. ಅಕ್ಟೋಬರ್ 27 ರಂದು ಸಂಭವಿಸಿದ ಈ ಚಂಡಮಾರುತ ಕಳೆದು ಕೇವಲ ಹದಿನೈದು ದಿನಗಳಲ್ಲಿ, ಇದೇ ಪ್ರದೇಶದಲ್ಲಿ ಖಾಯ್ ಮುಕ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಿತ್ತು.

ಇತರ ಭಯಾನಕ ಚಂಡಮಾರುತಗಳು
1977ರಲ್ಲಿ  ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ಚಂಡಮಾರುತದಿಂದಾಗಿ ಕನಿಷ್ಟ 50 ಸಾವಿರ ಜನರು ಸಾವನ್ನಪ್ಪಿದ್ದರು. ದೇಶದ ಅತ್ಯಂತ ಭೀಕರ ಚಂಡಮಾರುತಗಳ ಸಾಲಿನಲ್ಲಿ ಇದು ಮೊದಲ ಸ್ಥಾನದಲ್ಲಿದೆ. 1999ರಲ್ಲಿ ಓರಿಸ್ಸಾಕ್ಕೆ ಅಪ್ಪಳಿಸಿದ್ದ ಚಂಡಮಾರುತಕ್ಕೆ ಕನಿಷ್ಟ 15 ಸಾವಿರ ಜನರು ಸಾವನ್ನಪ್ಪಿದ್ದರು. ಸೂಪರ್ ಸೈಕ್ಲೋನ್ ಎಂದೇ ಹೆಸರಾಗಿದ್ದ ಈ ಚಂಡಮಾರುತ ಗಂಟೆಗೆ 260 ಕಿಮಿ ವೇಗದಲ್ಲಿ ಬೀಸಿತ್ತು.

ಚಂಡಮಾರುತದ ವಿಶಿಷ್ಟ ಹೆಸರುಗಳು

ಸಾಮಾನ್ಯವಾಗಿ ಸೀಯರ ಹೆಸರುಗಳನ್ನೇ ಹೆಚ್ಚಿರುವ ಚಂಡಮಾಡುತಗಳಿಗೆ ಹೆಚ್ಚಾಗಿ ಇಡಲಾಗುತ್ತದೆ. ಪೂರ್ವ ನಿರ್ಧಾರಿತ ಪಟ್ಟಿಯಂತೆ ಅರ್ದದಷ್ಟು ಮಾತ್ರ ಮಹಿಳೆಯರ ಹೆಸರಿರುತ್ತದೆ. ಪುರುಷರು, ಹಕ್ಕಿಗಳ ಹೆಸರನ್ನೂ ಕೂಡ ಚಂಡಮಾರುತಗಳಿಗೆ  ಇಡಲಾಗುತ್ತದೆ.
ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (ಡಬ್ಲೂಎಂಒ) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. ಡಬ್ಲೂಎಂಒ ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಇಡಲಾರಂಭಿಸಿತು. ನಂತರದ ದಿನಗಳಲ್ಲಿ ಚಂಡಮಾರುತದ ಬಾಧೆಗೆ ಒಳಗಾದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು ಡಬ್ಲೂಎಂಒ ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.

ಡಬ್ಲೂಎಂಒ ಹೆಸರುಗಳ ಪಟ್ಟಿ
ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ( ಡಬ್ಲೂಎಂಒ) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( ಕ್ಯೂ, ಯು, ಎಕ್ಸ್‌ಘಿ, ವೈ ಹಾಗೂ ಝಡ್ ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ. 2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ. ಆಗ ಐಡೆಂಟಿಟಿ ಬಿಕ್ಕಟ್ಟು ತಲೆ ದೋರುತ್ತದೆ.

ಪುರುಷರ ಹೆಸರೂ ಬಳಕೆ
1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಪ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಅಮೆರಿಕದ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

ದಕ್ಷಿಣ ಏಷ್ಯಾದಲ್ಲಿ ಹೆಸರುಗಳು
ದಕ್ಷಿಣ ಏಷ್ಯಾದಲ್ಲಿ ಪ್ರಮುಖವಾಗಿ ಹಿಂದೂ ಮಹಾಸಾಗರದಲ್ಲಿ ಏಳುವ ಚಂಡಮಾರುತಗಳಿಗೆ  ಮಹಾಸಾಗರದ ವ್ಯಾಪ್ತಿಯಲ್ಲಿ ಬರುವ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್‌ಗಳು ವಿವಿಧ ಹೆಸರುಗಳನ್ನು ಇಡುತ್ತವೆ. ಹಿಂದೂ ಮಹಾಸಾಗರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಏಳುವುದು ಹೆಚ್ಚು. 2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ.ಮೇಲ್ಕಂಡ ರಾಷ್ಟ್ರಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ.

ವೈವಿಧ್ಯ ಮಯ ಹೆಸರುಗಳು
ಭಾರತದಲ್ಲಿ 2004ರಲ್ಲಾದ ಚಂಡಮಾರುತಗಳಿಗೆ ಲೆಹೆರ್, ಆಕಾಶ್, ಅಗ್ನಿ, ಬಿಜಲಿ, ಜಲ್ ಹೆಸರನ್ನಿಡಲಾಗಿದೆ. ಮೇಘ್, ಸಾಗರ್ ಮತ್ತು ವಾಯು ಮೊದಲಾದ ಭಾರತೀಯ ಹವಾಮಾನ ಇಲಾಖೆ ಪಟ್ಟಿಯಲ್ಲಿದೆ. ಇತ್ತೀಚೆಗೆ ಥಾಯ್ಲೆಂಡ್ ನಿಂದ ಮೋರಾ ಹೆಸರು ಸಿಕ್ಕಿತ್ತು. ಇದೀಗ ಕಾಣಿಸಿಕೊಂಡಿರುವ ಚಂಡಮಾರುತಕ್ಕೆ ಓಖಿ ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರನ್ನು ಸೂಚಿಸಿದ್ದು ಬಾಂಗ್ಲಾದೇಶ. ಬೆಂಗಾಲಿಯಲ್ಲಿ ಓಖಿ ಎಂದರೆ ಕಣ್ಣು ಎಂದರ್ಥ. ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರು ನೀಡಿತ್ತು. ಮುರ್ಜಾನ್ ಚಂಡಮಾರುತಕ್ಕೆ ಓಮನ್ ಹೆಸರು ನೀಡಿತ್ತು. ಹೀಗೆ ವಿವಿಧ ರಾಷ್ಟ್ರಗಳು ತಮ್ಮ ಸರದಿ ಬಂದಾಗ ಹೆಸರು ನೀಡುತ್ತವೆ.

ಭಯಂಕರ ಚಂಡಮಾರುತಗಳು
1970ರಲ್ಲಿ ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ್ದ ದಿ ಗ್ರೇಟ್ ಓಟಾ ಭೋಲಾ ಚಂಡಮಾರುತದಿಂದಾಗಿ 3 ರಿಂದ 5 ಲಕ್ಷ ಜನರು ಸಾವನ್ನಪ್ಪಿದ್ದರು. 1737ರಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ್ದ ಹೂಗ್ಲಿ ನದಿ ಚಂಡಮಾರುತ, 1881ರಲ್ಲಿ ವಿಯೆಟ್ನಾಮಿನಲ್ಲಿ ಹಾವಳಿ ಮಾಡಿದ್ದ ಹೈಪಾಂಗ್ ಚಂಡಮಾರುತ, 1839ರಲ್ಲಿ ಅಪ್ಪಳಿಸಿದ ಭಾರತದ ಕೊರಿಂಗಾ ಚಂಡಮಾರುತಗಳಲ್ಲಿ ತಲಾ 3 ಲಕ್ಷಕ್ಕೂ ಅಕ ಜನ ಸಾವನ್ನಪ್ಪಿದ್ದರು. ಇತಿಹಾಸದ ಪುಟಗಳನ್ನು ತೆರೆದಾಗ ಬಂಗಾಳ ಕೊಲ್ಲಿಯಲ್ಲಿಯೇ ಅತ್ಯಂತ ಹೆಚ್ಚಿನ ಚಂಡಮಾರುತಗಳು ಎದ್ದಿದ್ದು ಗಮನಕ್ಕೆ ಬರುತ್ತವೆ. ಅತ್ಯಂತ ಭೀಕರ ಚಂಡಮಾರುತಗಳು ಕಾಣಿಸಿಕೊಂಡಿದ್ದೂ ಕೂಡ ಇದೇ ಕೊಲ್ಲಿಯಲ್ಲಿ. ದಕ್ಷಿಣ ಭಾರತದ ರಾಜ್ಯಗಳ ಮೇಲೆ ಚಂಡಮಾರುತ ಎಷ್ಟೇ ಪ್ರತಾಪ ತೋರಿದ್ದರೂ ಇದುವರೆಗಿನ ಒಂದೇ ಒಂದು ಚಂಡಮಾರುತವೂ ಕರ್ನಾಟಕದ ಮೇಲೆ ನೇರವಾಗಿ ಅಪ್ಪಳಿಸದೇ ಇರುವುದು ಅದೃಷ್ಟ ಹಾಗೂ ವಿಶೇಷ ಸಂಗತಿಯಾಗಿದೆ.

ಓಖಿ ಅಬ್ಬರ
ಇದೀಗ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಓಖಿ ಚಂಡಮಾರುತ ಅಬ್ಬರಿಸಿದೆ. ಈಗಾಗಲೇ 9 ಜನರನ್ನು ಬಲಿತೆಗೆದುಕೊಂಡ ಓಖಿ, ತಮಿಳುನಾಡು, ಕೇರಳ ರಾಜ್ಯಗಳ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಮಳೆಯ ಅಬ್ಬರದಿಂದ ಈ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಂತೂ ಓಖಿ ಉಂಟುಮಾಡಿರುವ ಅವಾಂತರ ಹೇಳತೀರದು. ಈಗಾಗಲೇ ನೂರಾರು ಮನೆಗಳು ನಾಶವಾಗಿವೆ. 150ರಷ್ಟು ಮೀನುಗಾರರು ಕಾಣೆಯಾಗಿದ್ದಾರೆ. ಓಖಿ ಚಂಡಮಾರುತದ ಕುರಿತಂತೆ ಹವಾಮಾನ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದ್ದರೂ ಕೂಡ, ಅದೆಷ್ಟೋ ಜನರು ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದು, ಜೀವಕಳೆದುಕೊಂಡಿದ್ದಾರೆ. ನೌಕಾಸೇನೆ ಇವರಲ್ಲಿ ಹಲವರನ್ನು ರಕ್ಷಿಸಿದೆ. ಲಕ್ಷದ್ವೀಪದಲ್ಲಿ ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದೆ.


Saturday, December 2, 2017

ಮಧ್ಯಪ್ರಾಚ್ಯ-ಯುರೋಪ್ ಕಡೆಗೆ ಹಬ್ಬದ ಭಾರತೀಯ ಸಾಮ್ರಾಜ್ಯಗಳು : ಕಾರಣಗಳೇನು?

 ಬಹುತೇಕರಲ್ಲಿ ಇಂತದ್ದೊಂದು ಕುತೂಹಲ ಇರುವುದು ಸಹಜವೇ.. ಭಾರತದಲ್ಲಿ ಆಳಿದ ರಾಜರುಗಳು, ಸಾಮ್ರಾಜ್ಯಗಳ ಆಳ್ವಿಕೆಯತ್ತ ಕಣ್ಣು ಹಾಯಿಸಿದರೆ ಅವುಗಳು ಭಾರತದಲ್ಲಿ ಮಾತ್ರ ಸಾಮ್ರಾಜ್ಯ ಕಟ್ಟಿ ಮೆರೆದಿರುವುದು ಕಣ್ಣಿಗೆ ಬೀಳುತ್ತದೆ. ಎಲ್ಲೋ ಒಂದಿಬ್ಬರು ಮಾತ್ರ ಪಕ್ಕದ ಬರ್ಮಾ ಕಡೆಗೋ ಅಥವಾ ಅದರಾಚೆಗಿರುವ ಕಂಪೂಚಿಯಾ (ಈಗಿನ ಕಾಂಬೋಡಿಯಾ) ದಾಟಿ ಸಾಮ್ರಾಜ್ಯ ನಿರ್ಮಾಣ ಮಾಡಿರುವುದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ತಿಳಿದು ಬರುತ್ತದೆ.
                ಭಾರತದ ರಾಜರು ಅರಬ್ ಕಡೆಗೋ, ಯೂರೋಪ್ ಕಡೆಗೋ ಅಥವಾ ಚೀನಾ ಕಡೆಗೋ ಮುಖ ಮಾಡಬಹುದಿತ್ತು ಎನ್ನುವುದು ಎಲ್ಲರಂತೆ ನನ್ನನ್ನೂ ಕಾಡಿದ ಪ್ರಶ್ನೆ. ಈ ಪ್ರದೇಶಗಳಿಗೆ ಭಾರತದ ರಾಜರು ಸಾಮ್ರಾಜ್ಯ ವಿಸ್ತರಿಸಿ ಹೋಗಿದ್ದರೆ ಅಲ್ಲಿಯೂ ಕೂಡ ಭಾರತೀಯ ಸಂಸ್ಕೃತಿ ಇರಬಹುದಿತ್ತು ಎನ್ನುವ ಭಾವನೆ ನನ್ನನ್ನು ಕಾಡದೇ ಇರಲಿಲ್ಲ. ಹೀಗೆಕೆ ಎಂದು ಆಲೋಚಿಸುತ್ತಿದ್ದಾಗಲೇ ಕೆಲವು ಮಾಹಿತಿಗಳು ನನಗೆ ಸಿಕ್ಕವು. ಅವನ್ನು ನಿಮ್ಮ ಮುಂದೆ ಇಟ್ಟರೆ ನನ್ನ ಸಂದೇಹಗಳಿಗೆ ಸಿಕ್ಕ ಉತ್ತರ ನಿಮಗೂ ಸಿಗಬಹುದು.
                 ಭಾರತದ ಇತಿಹಾಸವನ್ನು ಗಮನಿಸಿದರೆ ಅಲೆಕ್ಸಾಂಡರ್, ಮೊಹಮ್ಮದ್ ಘಝ್ನಿ, ಮೊಹಮ್ಮದ್ ಘೋರಿ, ಬಾಬರ್, ಮಂಗೋಲಿಯನ್ನರು ಹೀಗೆ ಅದೆಷ್ಟೋ ಜನರು ಭಾರತದ ಮೇಲೆ ದಂಡೆತ್ತಿ ಬಂದರು ಎನ್ನುವುದನ್ನು ನಾವು ಗಮನಿಸುತ್ತೇವೆ. 10ಕ್ಕೂ ಹೆಚ್ಚಿನ ಸಾರಿ ಘಝ್ನಿ ಹಾಗೂ ಘೋರಿಗಳು ಭಾರತದ ಮೇಲೆ ಧಾಳಿ ಮಾಡಿದರು ಎಂದೆಲ್ಲ ಓದಿದ್ದೇವೆ. ಆದರೆ ಭಾರತದ ಅರಸರು ಮಾತ್ರ ಯೂರೋಪ್ ಮೇಲೆ ಧಾಳಿ ಮಾಡಿದರು, ಚೀನಾ ಮೇಲೆ ದಾಳಿ ಮಾಡಿದರು, ಮಂಗೋಲಿಯಾ, ಅರಬ್ ಹೀಗೆ ಭಾರತ ಉಪಖಂಡವನ್ನು ಹೊರತು ಪಡಿಸಿ ಉಳಿದ ಕಡೆಗೆ ದಾಳಿ ಮಾಡಿದರು ಎಂಬ ಅಂಶಗಳನ್ನು ಕೇಳಿಯೇ ಇಲ್ಲ. ಭಾರತವನ್ನು ಯೂರೋಪಿನಿಂದ ಬಂದವರು ವಸಾಹತುವನ್ನಾಗಿ ಮಾಡಿಕೊಂಡಿದ್ದರು ಎಂಬ ವಿಷಯವನ್ನು ಕೇಳಿದಾಗಲೆಲ್ಲ , ಭಾರತವೂ ಯೂರೋಪನ್ನು ವಸಾಹತು ಮಾಡಿಕೊಳ್ಳಬಹುದಿತ್ತು. ಆದರೆ ಯಾಕೆ ಹಾಗೆ ಮಾಡಿಕೊಳ್ಳಲಿಲ್ಲ ಎನ್ನುವ ಅಂಶಗಳು ಕಾಡಿದ್ದವು. ಅವುಗಳನ್ನು ನಾನು ನನ್ನದೇ ಆದ ರೀತಿಯಲ್ಲಿ ತರ್ಕಿಸಲು ಆರಂಭಿಸಿದೆ. ಈ ಕುರಿತಂತೆ ಜಾಲತಾಣವನ್ನು ಜಾಲಾಡಿದಾಗ ಹಲವು ಮಾಹಿತಿಗಳೂ ಸಿಕ್ಕವು. ಅವುಗಳನ್ನು ನಿಮ್ಮ ಮುಂದೆ ಇಡುವ ಯತ್ನ ಮಾಡುತ್ತೇನೆ.

1) ಚಿಕ್ಕ ಚಿಕ್ಕ ರಾಜಮನೆತನಗಳು
ಭಾರತದ ರಾಜಮನೆತನಗಳು ಬಹಳ ಚಿಕ್ಕವು. ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯದ ರಾಜರುಗಳು ಪ್ರಭಲರು ಹಾಗೂ ದೊಡ್ಡ ದೊಡ್ಡ ಸಾಮ್ರಾಜ್ಯವನ್ನು ಹೊಂದಿರುವವರು ಎಂದರೆ ತಪ್ಪಾಗಲಿಕ್ಕಿಲ್ಲ. ಚಿಕ್ಕ ಮನೆತನಗಳು, ತಮ್ಮ ಅಕ್ಕ-ಪಕ್ಕದ ರಾಜ್ಯಗಳನ್ನು ಸೋಲಿಸಿ, ಅವುಗಳ ಮೇಲೆ ನಿಯಂತ್ರಣ ಹೇರುವುದಕ್ಕಷ್ಟೇ ಸೀಮಿತವಾಗಿದ್ದವು. ಇಂತಹ ರಾಜ್ಯಗಳ ಚುಕ್ಕಾಣಿ ಹಿಡಿದಿದ್ದ ರಾಜರುಗಳಿಗೆ ದೂರದ ಯೂರೋಪ್, ಚೀನಾ, ಮಧ್ಯಪ್ರಾಚ್ಯಗಳ ಕಡೆಗೆ ಗಮನ ಹರಿಸುವ ಆಲೋಚನೆಯೇ ಬರಲಿಲ್ಲ ಬಿಡಿ.

2) ಸಣ್ಣ ಸೈನ್ಯ :
ರಾಜ್ಯಗಳು ಸಣ್ಣವು. ಅದಕ್ಕೆ ತಕ್ಕಂತೆ ಇಲ್ಲಿಂದ ಸೈನ್ಯಗಳೂ ಕೂಡ ಚಿಕ್ಕವು. ಆನೆಗಳು ಹೇರಳವಾಗಿದ್ದರೂ ಅಶ್ವದಳಕ್ಕೋ ಅಥವಾ ಇನ್ಯಾವುದಕ್ಕೋ ಬೇರೆ ಬೇರೆ ದೇಶಗಳ ಕಡೆಗೆ ಮುಖ ಮಾಡುವ ಅನಿವಾರ್ಯತೆ ಭಾರತದ ರಾಜರಿಗಿತ್ತು. ಭಾರತದ ವಾತಾವರಣಕ್ಕೆ ಹೊಂದಿಕೊಂಡ ಪದಾತಿದಳ (ಕಾಲಾಳು)ಗಳು, ಗಜಪಡೆ ಇತ್ಯಾದಿಗಳು ಉಪಖಂಡದಿಂದ ಹೊರ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಾಧ್ಯವಿಲ್ಲ ಬಿಡಿ. ಹೀಗಾಗಿ ದೊಡ್ಡ ಸೈನ್ಯ ಕಟ್ಟಬೇಕು, ಸಾಮ್ರಾಜ್ಯ ದೊಡ್ಡದು ಮಾಡಬೇಕೆಂಬ ಉಸಾಬರಿಗೆ ಹೋಗಲಿಲ್ಲ. ಭಾರತದ ಸೈನಿಕರು ಪರಾಕ್ರಮಿಗಳೇನೋ ಹೌದು. ಆದರೆ ಬಹುದೊಡ್ಡ ಸೈನ್ಯದ ಎದುರು ಜಯಗಳಿಸುವಷ್ಟು ಸಂಖ್ಯೆ ಇರಲಿಲ್ಲ ಎನ್ನಲೇ ಬಹುದು.

3) ಶ್ರೀಮಂತ ರಾಜ್ಯಗಳು
ಭಾರತದಲ್ಲಿದ್ದ ಸಣ್ಣ ಪುಟ್ಟ ರಾಜ್ಯಗಳು ಭೌಗೋಳಿಕವಾಗಿ ಚಿಕ್ಕದೇ ಆಗಿದ್ದರೂ ಕೂಡ ಸಾಕಷ್ಟು ಶ್ರೀಮಂತವಾಗಿದ್ದವು. ಹಣಕಾಸು, ವೈಭೋಗದಲ್ಲಿ ಭಾರತದ ರಾಜಸಂಸ್ಥಾನಗಳನ್ನು ಮೀರಿಸಲು ಸಾಧ್ಯವೇ ಇರಲಿಲ್ಲ ಬಿಡಿ. ಭಾರತದ ಉಪಖಂಡವನ್ನು ದಾಟಿದರೆ ಸಿಗಬಹುದಾದ ಪ್ರದೇಶಗಳೆಲ್ಲ ಬಡತನದಿಂದಲೇ ಕೂಡಿದ್ದವು. ಅರೆಬಿಯಾ ಇರಲಿ, ಮಧ್ಯ ಏಷ್ಯಾ ಇರಲಿ ಭಾರತದ ಚಿಕ್ಕ ಸಂಸ್ಥಾನದ ಅರ್ಧದಷ್ಟೂ ಸಂಪತ್ತನ್ನು ಹೊಂದಿರಲಿಕ್ಕೆ ಸಾಧ್ಯವೇ ಇಲ್ಲ ಬಿಡಿ. ಶ್ರೀಮಂತವಾಗಿರುವ ರಾಜ್ಯಗಳ ಕಣ್ಣು ಬಡ ಸಂಸ್ಥಾನಗಳ ಮೇಲೆ ಬೀಳುವುದಿಲ್ಲ. ಭಾರತದ ರಾಜರುಗಳಿಗೂ ಆಗಿದ್ದು ಇದೇ. ಹೀಗಾಗಿ ಭಾರತದ ರಾಜರುಗಳು ಉಪಖಂಡದ ಆಚೆಗೆ ದೃಷ್ಟಿ ಹಾಯಿಸಲಿಲ್ಲ ಎನ್ನಬಹುದು.

4) ಭೌಗೋಳಿಕ ಅಡೆತಡೆಗಳು
ಭಾರತದ ರಾಜರುಗಳು ಯೂರೋಪಿಗೋ ಅಥವಾ ಅರೆಬಿಯಾಕ್ಕೋ ಅಥವಾ ಮಧ್ಯಪ್ರಾಚ್ಯಕ್ಕೋ ಹೋಗಬೇಕೆಂದರೆ ಭಾರಿ ಪ್ರಮಾಣದ ಭೌಗೋಳೀಕ ಅಡೆತಡೆಗಳನ್ನು ಎದುರಿಸಲೇಬೇಕಿತ್ತು. ಈ ಭಾಗದಲ್ಲಿ ನಡುವೆ ಸಿಗುವ ವಿಶಾಲವಾದ ಮರಳುಗಾಡು (ಥಾರ್ ಇತ್ಯಾದಿ), ಹಿಂದು-ಕುಶ್ ಪರ್ವತ ಶ್ರೇಣಿಗಳು, ಅರೆಬಿಯಾದ ಮರಳುಗಾಡು ಇತ್ಯಾದಿಗಳು ಭಾರತದ ರಾಜರುಗಳಿಗೆ, ಸೈನಿಕರಿಗೆ ಸುಲಭವಂತೂ ಆಗಿರಲಿಲ್ಲ. ಅಲ್ಲದೇ ಆಗಿನ ಗಾಂಧಾರ, ಈಗಿನ ಅಫ್ಘಾನಿಸ್ಥಾನದ ಆಚೆಗಿನ ಗುಡ್ಡಗಾಡು, ಖಾಲಿ ಖಾಲಿ ಪ್ರದೇಶಗಳು, ಜನವಸತಿ ರಹಿತ ಗುಡ್ಡಗಾಡುಗಳು ಯಾವುದಕ್ಕೂ ನಿರುಪಯುಕ್ತ ಎನ್ನುವಂತಾಗಿದ್ದವು. ಮಧ್ಯ ಏಷ್ಯಾದವರಿಗೆ, ಅರಬ್ಬರಿಗೆ, ಅಥವಾ ಖೀಲ್ಜಿ, ಘೋರಿ ಘಜ್ನಿಗಳಂತಹ ಮುಸಲ್ಮಾನ ದೊರೆಗಳಿಗೆ ಭಾರತದ ಸಂಪತ್ತಿನ ಮೇಲೆ ಕಣ್ಣಿತ್ತು. ಆದರೆ ಭಾರತದ ರಾಜರುಗಳು ಕಣ್ಣಿಡಲು ಮಧ್ಯ ಏಷ್ಯಾದಲ್ಲಿ ಏನೂ ಇರಲಿಲ್ಲ. ಮಧ್ಯ ಏಷ್ಯಾದ ರಾಜರುಗಳು ಖೈಬರ್ ಹಾಗೂ ಬೋಲಾನ್ ಕಣವೆಗಳನ್ನು ಬಳಸಿಕೊಂಡು ಹಿಂದು-ಕುಷ್ ಪರ್ವತ ದಾಟಿ ಭಾರತಕ್ಕೇನೋ ಬಂದರು. ಆದರೆ ಭಾರತೀಯ ಅರಸರಿಗೆ ಅದರ ಅಗತ್ಯವೇ ಇರಲಿಲ್ಲ.
ಇವು ಪ್ರಮುಖ ಕಾರಣಗಳು ಎನ್ನಬಹುದಾದರೂ ಚಿಕ್ಕಪುಟ್ಟ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತದ ಅರಸೊತ್ತಿಗೆಗಳ ಬಳಿ ಕುದುರೆಗಳು ಕಡಿಮೆ ಇದ್ದವು. ಮರಳುಗಾಡಿನ ಹಡಗುಗಳಾದ ಒಂಟೆಗಳ ಸಂಖ್ಯೆ ವಿರಳವಾಗಿತ್ತು. ಇವುಗಳೂ ಕೂಡ ಮುಖ್ಯ ಕಾರಣಗಳೆನ್ನಿಸಿಕೊಳ್ಳುತ್ತವೆ.
ಇಷ್ಟಾದರೂ ಕೂಡ ಭಾರತ ಸಾಂಸ್ಕೃತಿಕವಾಗಿ ಯೂರೋಪ್, ಚೀನಾ, ಅರೆಬಿಯಾಗಳ ಮೇಲೆ ಆಳ್ವಿಕೆ ನಡೆಸಿತು ಎನ್ನಬಹುದು. ಬೌದ್ಧ ಧರ್ಮವನ್ನು ಚೀನಾ ಹಾಗೂ ಇಂಡೋಚೀನಾ ಕಡೆಗಳಲ್ಲಿ ಬೆಳೆಸಿತು. ಇಂಡೋ-ಚೀನಾಗಳಲ್ಲಿ ಹಿಂದೂ ಧರ್ಮವನ್ನು ಬೆಳೆಸಿತು. ಇನ್ನು ಅರೆಬಿಯಾಗಳಿಗೆ ಭಾರತದ ಅಂಕಿಗಳನ್ನೂ, ಪ್ರಮೇಯಗಳನ್ನೂ ನೀಡಿತು. ಯೂರೋಪ್ ರಾಷ್ಟ್ರಗಳಗೆ ಕಾಳೂಮೆಣಸು ಮುಂತಾದ ಸಾಂಬಾರ ಪದಾರ್ಥಗಳನ್ನು ನೀಡುವ ಮೂಲಕ ಅವರನ್ನು ಅಂಕೆಯಲ್ಲಿ ಇರಿಸಿಕೊಂಡಿತು. ಇಂತಹ ರಾಷ್ಟ್ರದ ಮೇಲೆ ವಿದೇಶಿಗರು ಆಕ್ರಮಣ ಮಾಡಿದ ನಂತರ ಭಾರತದಲ್ಲಿ ಏನೇನಾಯ್ತು ಎನ್ನುವುದು ಎಲ್ಲಿರಿಗೂ ತಿಳಿದಿದ್ದೇ....

Thursday, November 30, 2017

ದಾಸ್ಯ (ಕಥೆ)-2

ಏನಾಗಿರಬಹುದು ಎನ್ನುವ ಕುತೂಹಲ ನನ್ನನ್ನು ಕಾಡುತ್ತಿರುವಂತೆಯೇ ಅಜ್ಜಿ ಮಾತನ್ನು ಮುಂದುವರಿಸಿದರು.
ಯಾರೋ ನಮ್ಮನ್ನೆಲ್ಲ ಸುತ್ತುವರಿದಿದ್ದರು. ನಮಗೆಲ್ಲ ಏನಾಗುತ್ತಿದೆ ಎಂಬುದು ಗೊತ್ತೇ ಆಗಲಿಲ್ಲ. ನೋಡಿದರೆ ಬ್ರಿಟೀಷರ ಪರ ಕೆಲಸ ಮಾಡುತ್ತಿದ್ದ ನಮ್ಮದೇ ನಾಡಿನ ಪೊಲೀಸರು ಬಂದು ಮುತ್ತಿಗೆ ಹಾಕಿದ್ದರು. ನಮ್ಮದೇ ಬಟ್ಟೆ ಧರಿಸಿದ್ದರು. ತಕ್ಷಣ ನಮ್ಮಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಲಾಠಿಯ ಮೂಲಕ ನಮ್ಮನ್ನು ಹೆಡೆಮುರಿ ಕಟ್ಟಲು ಆರಂಭಿಸಿದ್ದರು. ನಾವು ಎದ್ದೆವೋ ಬಿದ್ದೆವೋ ಎಂದು ಓಡಲು ಆರಂಬಿಸಿದ್ದೆವು. ಈ ನಡುವೆ ಯಾರೋ ಬಿದ್ದರು. ಯಾರೋ ಎದ್ದರು. ಬಿದ್ದವರ ಮೇಲೆ ಇನ್ನಷ್ಟು ಜನರು ಬಿದ್ದರು. ಮೆಟ್ಟಿದ್ದರು. ತುಳಿದರು. ನಾವು ಚಿಕ್ಕವರು. ಹುರುಪಿನಲ್ಲಿ ಓಡಿದೆವು. ಓಡುತ್ತಲೇ ಇದ್ದೆವು. ಅಲ್ಲೆಲ್ಲೋ ಸ್ವಲ್ಪ ದೂರ ಹೋದ ಮೇಲೆ ನಮ್ಮ ಹಿಂದೆ ಯಾರೂ ಬರುತ್ತಿಲ್ಲ ಎನ್ನುವುದು ಖಾತ್ರಿಯಾಯಿತು. ನಾವು ತಿರುಗಿ ನೋಡಿದಾಗ ಭಾಷಣ ನಡೆಯುತ್ತಿದ್ದ ಕಟ್ಟೆಯ ಕಡೆಯಿಂದ ಕೂಗಾಟ, ಚೀರಾಟ ಕೇಳುತ್ತಿತ್ತು...'
`ಇದೇ ಸಮಯದಲ್ಲಿ ನನಗೆ ಹುಚ್ಚು ಆವೇಶ ಬಂದಿತು ನೋಡು. ಸೀದಾ ವಾಪಾಸಾಗಲು ಆರಂಭಿಸಿದೆ. ನನ್ನ ಜೊತೆಗಿದ್ದವರು ನನ್ನನ್ನು ಹೋಗದೇ ಇರುವಂತೆ ಮಾಡುತ್ತಿದ್ದರೂ ನಾನು ಕೇಳಲಿಲ್ಲ. ಭಾಷಣ ನಡೆದ ಸ್ಥಳಕ್ಕೆ ಹತ್ತಿರ ಬರುತ್ತಿದ್ದಂತೆ ಯಾರೋ ಒಬ್ಬ ಪೊಲೀಸಿನವ ನನ್ನನ್ನು ಗಮನಿಸಿ ನನ್ನತ್ತ ನುಗ್ಗಿದ. ನಾನು ಸೀದಾ ಬಗ್ಗಿ ಕಾಲ ಬುಡದಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡು ರಪ್ಪನೆ ಅವನ ಕಡೆಗೆ ಬೀಸಿದೆ. ಸೀದಾ ಅವನ ಹಣೆಗೆ ಬಿತ್ತು ಅದು. ಹಣೆಯಿಂದ ರಕ್ತ ಬರಲು ಆರಂಭಿಸಿತು. ಇಲ್ಲಿಯವರೆಗೂ ಹುಚ್ಚು ಹುಮ್ಮಸ್ಸಿದ್ದ ನನಗೆ ಯಾವಾಗ ರಕ್ತ ಕಂಡೆನೋ ಆಗ ಭಯವಾಯಿತು. ತಕ್ಷಣ ಓಡಲು ಆರಂಭಿಸಿದೆ. ಪೊಲೀಸಿನವನು ನನ್ನನ್ನು ಹಿಂಬಾಲಿಸಿದ. ನನ್ನ ಜೊತೆಗಿದ್ದವರೆಲ್ಲ ಚದುರಿದ್ದರು. ನಾನು ಹೇಗೋ ತಪ್ಪಿಸಿಕೊಂಡು ಮನೆ ಸೇರಿದ್ದೆ. ಹಿಂಬಾಲಿಸಿದ ಪೊಲೀಸ ಎಲ್ಲಿ ಹೋದನೋ ತಿಳಿಯಲಿಲ್ಲ..' ಅಜ್ಜಿ ಇನ್ನೊಮ್ಮೆ ಸುಮ್ಮನಾಗಿದ್ದರು.
ನಾನು ಇನ್ನಷ್ಟು ಕುತೂಹಲದಿಂದ ಅವರ ಮಾತನ್ನು ಆಲಿಸಲು ಆರಂಭಿಸಿದ್ದೆ. ಹಾಗೆಯೇ ತನ್ನ ಬಳಿ ಇದ್ದ ಕುಟ್ಟಾಣಿಯನ್ನು ತೆಗೆದುಕೊಂಡು ಅಡಿಕೆ ಹಾಗೂ ವೀಳ್ಯದೆಲೆಯನ್ನು ಸಣ್ಣದಾಗಿ ಕತ್ತರಿಸಿ, ಅದನ್ನು ಕುಟ್ಟಲು ಆರಂಭಿಸಿದರು.
`ನಾನು ಮಾಡಿದ ಘನಾಂದಾರಿ ಕೆಲಸ ನಿಧಾನವಾಗಿ ಎಲ್ಲ ಕಡೆ ಹಬ್ಬಲು ಆರಂಭವಾಗಿತ್ತು. ಆರಂಭದಲ್ಲಿ ನಾನು ಏನನ್ನೂ ಮಾಡದಿದ್ದರೂ ನಂತರದಲ್ಲಿ ನಿಧಾನವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಹರತಾಳದಲ್ಲಿ ತೊಡಗುವುದು, ಘೋಷಣೆ ಕೂಗುವುದು ಇತ್ಯಾದಿಗಳೆಲ್ಲ ನಡೆದೇ ಇದ್ದವು. ನನ್ನದು ಬಾಯಿ ಜೋರು. ಈ ಕಾರಣದಿಂದ ಹರತಾಳದಲ್ಲಿದ್ದ ನನಗೆ ನಿಧಾನವಾಗಿ ಮುಂದಾಳತ್ವವೂ ಸಿಕ್ಕಿತು. ನನ್ನ ಕುರಿತು ಸುತ್ತಮುತ್ತಲ ಫಾಸಲೆಯಲ್ಲಿ ಸುದ್ದಿಯಾಗಲು ಶುರುವಾಯಿತು. ಬಹುಶಃ ಆಗಲೇ ಬ್ರಿಟೀಷರಿಗೆ ಪೀಕಲಾಟ ಶುರುವಾಗಿರಬೇಕು..
ಆದರೆ ನಾನು ಹೆಂಗಸಾದ ಕಾರಣ, ಗಂಡಸರಂತೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗಿರಲಿಲ್ಲ. ಈ ಸಂಗತಿಯ ಬಗ್ಗೆ ಬ್ರಿಟೀಷರು ತಲೆಕೆಡಿಸಿಕೊಂಡಿರಬೇಕು. ಆದರೆ ಆಗೀಗ ನನ್ನನ್ನು ಬಂಧಿಸುವುದು, ಬಿಡುಗಡೆ ಮಾಡುವುದು ನಡೆದೇ ಇತ್ತು. ಗಂಡಸರನ್ನಾದರೆ ಹೆಡೆಮುರಿ ಕಟ್ಟಿ ಬಿಡಬಹುದು. ಆದರೆ ನಮಗೆ ಹಾಗಾಗುವುದಿಲ್ಲವಲ್ಲ. ನಮಗೆ ಸ್ವಲ್ಪವೇ ಏನಾದರೂ ಆದರೆ ದೊಡ್ಡ ಸುದ್ದಿಯಾಗಿ ಆಮೇಲೆ ಅದು ಬ್ರಿಟೀಷರಿಗೆ ಅವಮಾನ ಉಂಟಾದರೆ... ಬ್ರಿಟಿಷ್ ರಾಣಿಗೆ ಅವಮಾನ ಆದರೆ ಅಂತೆಲ್ಲ ಆಲೋಚನೆ ಮಾಡಿದರು ಬ್ರಿಟೀಷರು. ನನ್ನನ್ನು ಸುಮ್ಮನೆ ಬಿಟ್ಟರೂ ಆಗುವುದಿಲ್ಲ. ಆದರೆ ಏನು ಮಾಡುವುದು ಎನ್ನುವ ವಿಷಯ ಅವರಿಗೂ ಗೊತ್ತಿರಲಿಲ್ಲ. ನಾನಂತೂ ಸ್ವಾತಂತ್ರ್ಯ ಚಳುವಳಿಯ ಕಾವಿನಲ್ಲಿ ಮನೆಯನ್ನೂ ಮರೆಯುವ ಹಂತಕ್ಕೆ ಬಂದಿದ್ದೆ. ಅಪ್ಪನಂತೂ ಅದೆಷ್ಟು ಸಿಟ್ಟಾಗಿದ್ದನೋ. ಆದರೆ ಕಾಂಗ್ರೆಸ್, ಚಳವಳಿ, ಗಾಂಧೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದ ಅಪ್ಪ ಕೊನೆಗೊಮ್ಮೆ ನನ್ನ ಮೇಲಿನ ಸಿಟ್ಟನ್ನು ಕಡಿಮೆ ಮಾಡಿದ್ದ. ಏನಾದ್ರೂ ಮಾಡ್ಕೊ ಎಂದು ಬಿಟ್ಟು ಬಿಟ್ಟಿದ್ದ. ನನಗೆ ಇದರಿಂದ ರೆಕ್ಕೆ ಬಂದಂತಾಗಿ ಖುಷಿಯಾಗಿದ್ದೆ.
ಹಿಂಗೇ ಇದ್ದಾಗ ಒಂದಿನ ಒಬ್ಬಾತ ಬಂದ. ಅಪ್ಪನಿಗೆ ಹಳೆಯ ಪರಿಚಯವಂತೆ. ಆಗತಾನೆ ಯವ್ವನ ಮುಗಿದಿತ್ತು. ಆರಡಿಯ ಕಟ್ಟುಮಸ್ತಾದ ಆಳು. ನನಗೆ ಆತನನ್ನು ಎಲ್ಲೋ ನೋಡಿದಂತಿದೆಯಲ್ಲ ಅನ್ನಿಸಿತು. ಆದರೆ ಎಲ್ಲಿರಬಹುದು ಎನ್ನುವುದು ನೆನಪಾಗಲಿಲ್ಲ. ಆತ ಕೆಲಕಾಲ ಅಪ್ಪನ ಬಳಿ ಮಾತನಾಡಿ ಹೋದ. ಹೋಗುವ ಮೊದಲು ನನ್ನ ಬಳಿ ನಿಂತು ಹಾಗೆಯೇ ನಕ್ಕು ಹೋದ. ನನ್ನ ಮನಸ್ಸಿನಲ್ಲಿ ಗೊಂದಲ ಮೂಡಿತ್ತು. ಆ ವ್ಯಕ್ತಿ ಹೋದ ನಂತರ ಅಪ್ಪ ನನ್ನ ಬಳಿ ಬಂದು ನೋಡು ಅವರು ನಮ್ಮ ಪಕ್ಕದೂರಿನ ಪಟೇಲರು. ಅವರು ನಿನ್ನನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಅವರಿಗೆ ನಿನ್ನ ಹರತಾಳ, ಚಳವಳಿಗಳ ಸುದ್ದಿ ಕಿವಿಗೆ ಬಿದ್ದಿದೆಯಂತೆ. ಅದನ್ನು ಕೇಳಿ, ಆದರೆ ನಿನ್ನಂತವಳನ್ನೇ ಮದುವೆ ಆಗಬೇಕು ಎಂದುಕೊಂಡು ಇಲ್ಲಿಯ ತನಕ ಬಂದಿದ್ದರಂತೆ ನೋಡು ಎಂದರು. ನಾನು ಮಾತನಾಡಲಿಲ್ಲ. ಭಾರತದ ಸ್ವಾತಂತ್ರದ ಬಗ್ಗೆ ಬಹಳ ಒಲವಿಟ್ಟುಕೊಂಡವರು. ಬಹಿರಂಗವಾಗಿ ಅಲ್ಲದಿದ್ದರೂ ಗುಟ್ಟಾಗಿ ಭಾರತದ ಸ್ವಾತಂತ್ರ ಹೋರಾಟಕ್ಕೆ ಸಹಾಯ ಮಾಡುತ್ತಿರುವ ಗಣಪಯ್ಯ ಪಟೇಲರು ಅವರು. ಅವರಿಗೆ ನಿನ್ನ ಮೇಲೆ ಮನಸ್ಸಾಗಿದೆಯಂತೆ. ಹೇಳು ಅವರಿಗೆ ನಾನು ಏನು ಹೇಳಲಿ? ನಿನ್ನನ್ನು ಕೇಳುವ ಜರೂರತ್ತಿರಲಿಲ್ಲ. ಆದರೂ ಕೇಳಿದೆ ಅಂದ ಅಪ್ಪ. ಆಗಲೂ ನಾನು ಸುಮ್ಮನೆ ಇದ್ದೆ.
ನನ್ನ ಮನಸ್ಸು ಹುಯ್ದಾಡುತ್ತಿತ್ತು. ಆ ವ್ಯಕ್ತಿಯನ್ನು ಮದುವೆಯಾಗಲೇ? ಬೇಡವೇ..? ಭಾರತದ ಸ್ವಾತಂತ್ರ್ಯಕ್ಕಾಗಿ ನನ್ನನ್ನು ನಾನು ಮುಡಿಪಾಗಿ ಇಡುವ ನಿಶ್ಚಯ ಮಾಡಿದ್ದೆ. ಆದರೆ ಮದುವೆಯಾದ ಮೇಲೆ ಅವೆಲ್ಲ ನಿಂತುಹೋದರೆ? ದ್ವಂದ್ವ ಕಾಡಿತು. ಅಪ್ಪ... ಮದುವೆಯ ನಂತರವೂ ನಾನು ಸ್ವಾತಂತ್ರ ಹೋರಾಟದಲ್ಲಿ ತೊಡಗಿಕೊಳ್ಳುತ್ತೇನೆ. ಇದಕ್ಕೆ ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಒಪ್ಪುತ್ತಾರೆ ಅಂತ ಆದರೆ ಮದುವೆಗೆ ನನ್ನ ಒಪ್ಪಿಗೆ ಇದೆ ಎಂದು ಹೇಳಿದ್ದೆ. ಅಪ್ಪ ನಿಟ್ಟುಸಿರು ಬಿಟ್ಟು ವಿಷಯವನ್ನು ಅವರಿಗೆ ತಿಳಿಸೋಣ. ಆಮೇಲೆ ಏನನ್ನುತ್ತಾರೋ ನೋಡೋಣ ಎಂದಿದ್ದ. ಮರುದಿನವೇ ಜನರನ್ನು ಕಳಿಸಿ ವಿಷಯವನ್ನು ಪಟೇಲರ ಮನೆಗೆ ಮುಟ್ಟಿಸಿದ್ದ.

--------------


ಇದಾಗಿ ಕೆಲವೇ ದಿನಗಳಲ್ಲಿ ಧಾಂ ಧೂಂ ಆಗಿ ನನ್ನ ಮದುವೆ ಆಯಿತು. ಶುಭಗಳಿಗೆಯಲ್ಲಿ ನಾನು ಅವರ ಮನೆಯ ಅವಿಭಾಜ್ಯ ಅಂಗವಾಗಿದ್ದೆ. ಇತ್ತ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇನ್ನಷ್ಟು ಉಗ್ರವಾಗಿತ್ತು. ಅಲ್ಲೆಲ್ಲೋ ಸುಭಾಷರ ಹೋರಾಟ, ಇನ್ನೆಲ್ಲೋ ಗಾಂಧೀಜಿಯವರ ಹರತಾಳ ಎಲ್ಲ ಕಿವಿಗೆ ಬೀಳುತ್ತಿತ್ತು. ಈ ನಡುವೆಯೇ ಸುಭಾಷರು ವಿಮಾನ ಅಪಘಾತದಲ್ಲಿ ಮಡಿದರಂತೆ ಎಂಬ ಸುದ್ದಿಯೂ ನನ್ನ ಕಿವಿಗೆ ಬಿದ್ದು ಅಪಾರ ದುಃಖವಾಗಿತ್ತು. ಹೀಗಿದ್ದಾಗಲೇ ನನ್ನ ಸಂಸಾರ ನೌಕೆಯೂ ಕೂಡ ಸಾಗಿತ್ತು. ಮದುವೆಯಾಗಿ ನಾಲ್ಕೈದು ತಿಂಗಳಿಗೆಲ್ಲ ನನಗೆ ಮುಟ್ಟು ನಿಂತಿತ್ತು. ಅಲ್ಲಿಗೆ ನಾನು ಗರ್ಭಿಣಿ ಎನ್ನುವ ವಿಷಯ ಪಕ್ಕಾ ಆಗಿತ್ತು. ಹೀಗಿದ್ದಾಗಲೇ ಒಂದಿಷ್ಟು ಚಳವಳಿಗಾರರು ಬಂದು ನನ್ನ ಬಳಿ, ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಕೋರಿದ್ದರು. ನನಗೆ ಹೋಗಬೇಕೆಂಬ ಆಸೆ. ಬಸುರಿ ಬೇರೆ. ಪಟೇಲರು ಏನೆಂದಾರೋ ಎನ್ನುವ ಆತಂಕವೂ ಕಾಡದೇ ಇರಲಿಲ್ಲ. ಕೊನೆಗೊಮ್ಮೆ ಪಟೇಲರ ಬಳಿ ಕೇಳೀಯೂಬಿಟ್ಟೆ. ಅದಕ್ಕವರು ಹೇಳಿದ ಒಂದೇ ಉತ್ತರ `ಗರ್ಭಿಣೀ ನೀನು. ಇಂತಹ ಪರಿಸ್ಥಿತಿಯಲ್ಲಿ ಚಳವಳಿಯ ಉಸಾಬರಿ ಏಕೆ..?'
ನನಗೆ ಏನೆನ್ನಬೇಕೋ ತಿಳಿಯಲಿಲ್ಲ. ಪರಿಸ್ಥಿತಿ, ಪಟೇಲರು ಹೇಳಿದ ಉತ್ತರ, ಎಲ್ಲ ಸಮಂಜಸವಾಗಿದ್ದವು. ಆದರೆ ದೇಶಸೇವೆಯ ಬಯಕೆ ತಣಿಯಬೇಕಲ್ಲ. ನಾನು ಹಟ ಮಾಡಿದೆ. ಅವರು ನಕಾರಾತ್ಮಕವಾಗಿ ಮಾತನಾಡುತ್ತಲೇ ಇದ್ದರು. ಹೀಗೇ ಮೂರ್ನಾಲ್ಕು ತಿಂಗಳು ಕಳೆದವು. ಅಷ್ಟಾಗುವ ವೇಳೆಗೆ ನನಗೆ ಒಂದು ವಿಷಯ ಮನದಟ್ಟಾಗಿತ್ತು. ನಾನು ಏನೆಂದರೂ ಪಟೇಲರು ನನ್ನನ್ನು ಚಳವಳಿಗೆ ತೆರಳಲು ಬಿಡುವುದಿಲ್ಲ ಎನ್ನುವುದು. ಒಂದಿಷ್ಟು ದಿನಗಳ ಕಾಲ ನಾನು ಸಾವಧಾನದಿಂದ ಕೇಳಿದೆ. ಅದಕ್ಕೆ ನಕಾರಾತ್ಮಕ ಉತ್ತರವೇ ಬಂದಿತ್ತು. ಆದರೆ ದಿನಗಳೆದಂತೆಲ್ಲ ನನ್ನ ಸಹನೆಯ ಕಟ್ಟೆ ಒಡೆಯಲು ಆರಂಭವಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ತೀವ್ರವಾದಂತೆ ಒಂದು ದಿನ ನಾನು ಪಟೇಲರ ಬಳಿ ಜಗಳ ಕಾದೆ.


(ಮುಂದುವರಿಯುತ್ತದೆ)

ಭಾರತದ ರಾಜ್ಯಗಳ ಕುರಿತು ಆಸಕ್ತಿಕರ ಅಂಶಗಳು

 
           ದೇಶದಾದ್ಯಂತ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯಗಳೂ ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಗಾತ್ರದಲ್ಲಿ, ಜನಸಂಖ್ಯೆ ಪ್ರಮಾಣದಲ್ಲಿ ಹೀಗೆ ಹಲವಾರು ಸಂಗತಿಗಳಲ್ಲಿ ವಿಭಿನ್ನತೆಯನ್ನು ಹೊಂದಿದೆ. ಅದೇ ರೀತಿ ದೇಶದ ಜಿಡಿಪಿಗೆ ಯಾವ ರಾಜ್ಯದ ಕೊಡುಗೆ ಎಷ್ಟಿದೆ? ಆರ್ಥಿಕವಾಗಿ ಉತ್ತಮ ಪ್ರಗತಿ ಹೊಂದಿದ ರಾಜ್ಯ ಯಾವುದು, ದೇಶದಲ್ಲಿಯೇ ಹಿಂದುಳಿದ ರಾಜ್ಯ ಯಾವುದು? ಅತಿ ಹೆಚ್ಚು ತಲಾದಾಯ (ಪರ್‌ಕ್ಯಾಪಿಟಾ ಇನ್ ಕಮ್) ಇರುವ ರಾಜ್ಯ ಯಾವುದು... ಹೀಗೆ ದೇಶದ ಆರ್ಥಿಕತೆಯ ದಿಕ್ಸೂಚಿಯಂತಿರುವ ಅಂಶಗಳನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುವುದು ಸಹಜವೇ. ಭಾರತವು ಒಕ್ಕೂಟ ವ್ಯವಸ್ಥೆಯೇ ಆದರೂ ಇಲ್ಲಿ ರಾಜ್ಯ ರಾಜ್ಯಗಳ ಮಧ್ಯವೇ ವಿವಿಧ ವಿಷಯಗಳಲ್ಲಿ  ಆರೋಗ್ಯಕರವಾದ ಸ್ಪರ್ಧೆ ಇದೆ. ಜತೆಗೆ ಆಯಾ ರಾಜ್ಯಕ್ಕೆ ಬೇಕಾದ ನೆರವು ಕೊಟ್ಟು, ಅಭಿವೃದ್ಧಿಗೆ ಸಹಕರಿಸಬೇಕಾದ ದೊಡ್ಡಣ್ಣನಂಥ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ ಎಂಬುದು ಕೂಡ ಅಷ್ಟೇ ಸತ್ಯ. ಕಾಲ ಕಾಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರವು ಅಗತ್ಯದ ಅನುದಾನಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳ ಬೆನ್ನಿಗೆ ನಿಲ್ಲುತ್ತಿದೆ. ಹೀಗಿದ್ದರೂ ರಾಜ್ಯಗಳು ತನ್ನದೇ ಆದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದೆ. ಕೆಲವು ರಾಜ್ಯಗಳು ಮುನ್ನಡೆಯಲು ಎಡವಿದೆ. ಅಂತಹ ವಿಶಿಷ್ಟ ಅಂಶಗಳನ್ನು ಇಲ್ಲಿಡಲಾಗಿದೆ.
ದೇಶದಲ್ಲಿ ಪ್ರತಿ ವರ್ಷ ವಿವಿಧ ರಾಜ್ಯಗಳ ಅಭಿವೃದ್ಧಿ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮಾಡಲಾಗುತ್ತದೆ. ಅಂತಿಮವಾಗಿ ಈ ಸಮೀಕ್ಷಾ ವರದಿಯನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡುತ್ತದೆ. ದೇಶದಲ್ಲಿನ ವಿವಿಧ ರಾಜ್ಯಗಳಿಗೆ ಅವುಗಳ ಪ್ರಗತಿಯ ಆಧಾರದ ಮೇಲೆ ವಿವಿಧ ರಾಂಕು ನೀಡಲಾಗಿದೆ. ಪ್ರತಿ ವರ್ಷ ಕೂಡ ಈ ರಾಜ್ಯಗಳು ಪಡೆದ ರ್ಯಾಂಕುಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಬಹಳ ಆಸಕ್ತಿಕರ ಅಂಶಗಳನ್ನು ಒಳಗೊಂಡಿರುವ ಇದು ಪ್ರತಿಯೊಬ್ಬರಲ್ಲಿಯೂ ಕುತೂಹಲವನ್ನು ಹುಟ್ಟಿಸಬಲ್ಲದು. ದೇಶದಾದ್ಯಂತ ವಿವಿಧ ಸಂಸ್ಥೆಗಳು ದೇಶದಾದ್ಯಂತ ಸರ್ವೇಯನ್ನು ಕೈಗೊಂಡು ಈ ಮಾಹಿತಿಯನ್ನು ಕಲೆ ಹಾಕಿದೆ. 2016- 17ನೇ ಸಾಲಿನ ಈ ಅಂಕಿಗಳನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡಿದೆ.

ಅತಿ ದೊಡ್ಡ ಆರ್ಥಿಕತೆ ಇರುವಂಥ ರಾಜ್ಯಗಳು

ಭಾರತದ ಅತ್ಯಂತ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಕೊಟ್ಟಕೊನೆಯ ಸ್ಥಾನದಲ್ಲಿದೆ. ಲಕ್ಷದ್ವೀಪದ ವಾರ್ಷಿಕ ಆದಾಯ 407 ಕೋಟಿ ರೂ.ಗಳಾಗಿದೆ. ಸಾಮಾನ್ಯವಾಗಿ ಭೌಗೋಳಿಕವಾಗಿ ವಿಶಾಲವಾಗಿರುವ ರಾಜ್ಯಗಳ ಆರ್ಥಿಕತೆ ಹೆಚ್ಚಿದೆ. ಅದೇ ರೀತಿ ಸಣ್ಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕತೆ ಕಡಿಮೆಯಿದೆ.

ಮಹಾರಾಷ್ಟ್ರ -25.35 ಲಕ್ಷ ಕೋಟಿ
ಉತ್ತರಪ್ರದೇಶ  - 14.46 ಲಕ್ಷ ಕೋಟಿ
ತಮಿಳುನಾಡು  - 13.39 ಲಕ್ಷ ಕೋಟಿ
ಕರ್ನಾಟಕ  - 12.80 ಲಕ್ಷ ಕೋಟಿ
ಗುಜರಾತ್ - 12.75 ಲಕ್ಷ ಕೋಟಿ

ಅತಿ ಹೆಚ್ಚು ತಲಾದಾಯ ಹೊಂದಿದ ರಾಜ್ಯಗಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಸಿಸುತ್ತಿರುವವರ ತಲಾ ಆದಾಯವು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದುಘಿ, ದೆಹಲಿ ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮವೇ ಮೂಲ ಆದಾಯವಾಗಿರುವ ಗೋವಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಯಾದಿಯಲ್ಲಿ ಮಣಿಪುರ ಕೊಟ್ಟ ಕೊನೆಯ ಸ್ಥಾನದಲ್ಲಿದೆ. ಬಿಹಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ತಲಾದಾಯ ಹನ್ನೊಂದು ಪಟ್ಟು ಹೆಚ್ಚಿದೆ.


ದೆಹಲಿ -5,55,882
ಗೋವಾ -4,66,632
ಚಂಡೀಘಡ- 3,75,454
ಸಿಕ್ಕೀಂ  -2,77,282
ಪುದುಚ್ಚೇರಿ - 2,36,450

ಅತಿ ವೇಗದ ಅಭಿವೃದ್ಧಿ ದಾಖಲಿಸುತ್ತಿರುವ ರಾಜ್ಯಗಳು
2005ರಿಂದ 2015ರವರೆಗಿನ ಅವಯಲ್ಲಿ ಅಭಿವೃದ್ಧಿ ದಾಖಲಿಸಿದ ಯಾದಿಯಲ್ಲಿ ಈಶಾನ್ಯ ರಾಜ್ಯ ಸಿಕ್ಕೀಂ ಮೊದಲ ಸ್ಥಾನ ಪಡೆದುಕೊಂಡಿದೆ. ಈಶಾನ್ಯ ಭಾಗಕ್ಕೆ ಸೇರಿದ ಅಸ್ಸಾಂ, ತ್ರಿಪುರ ಹಾಗೂ ನಾಗಾಲ್ಯಾಂಡ್‌ಗಳು ಕೊಟ್ಟಕೊನೆಯ ಸ್ಥಾನದಲ್ಲಿವೆ.

ಸಿಕ್ಕೀಂ  -ಶೇ 26.6
ಉತ್ತರಾಖಂಡ -ಶೇ 19.57
ಬಿಹಾರ -ಶೇ 18.10
ತೆಲಂಗಾಣ  -ಶೇ 17.92
ರಾಜಸ್ಥಾನ  -ಶೇ 16.74

ಒಟ್ಟಾರೆ ಅಭಿವೃದ್ಧಿ ದಾಖಲಿಸಿದ ರಾಜ್ಯಗಳ ವಿವರ
ದೇಶದ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಸರ್ವತೋಮುಖ ಅಭೀವೃದ್ಧಿ ಸಾಸಿದ್ದರೆ, ಛತ್ತೀಸಘಡ ಕೊನೆಯ ಸ್ಥಾನದಲ್ಲಿದೆ. ತೆಲಂಗಾಣವು ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಜಾರ್ಖಂಡ್ ನಂತರದ ಸ್ಥಾನದಲ್ಲಿದೆ. ಸಾಕ್ಷರತೆಯಲ್ಲಿ ಕೇರಳ ಹಾಗೂ ಲಕ್ಷದ್ವೀಪಗಳು ಮೊದಲೆರಡು ಸ್ಥಾನದಲ್ಲಿವೆ. ರಾಜ್ಯಾದ್ಯಂತ ಆರೋಗ್ಯ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ರಾಷ್ಟ್ರಗಳಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಾನೂನು ಹಾಗೂ ಸುವ್ಯವಸ್ಥೆ ಕಲ್ಪಿಸಿದ ರಾಜ್ಯಗಳ ಯಾದಿಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಕೊಟ್ಟಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಿಮಾಚಲ ಪ್ರದೇಶವು ಅತ್ಯಂತ ಹೆಚ್ಚಿನ ವೌಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ.ಆಡಳಿತದಲ್ಲಿ ಕೇರಳ ಮೊದಲ ಹಾಗೂ ಬಿಹಾರ ಕೊನೆಯ ಸ್ಥಾನದಲ್ಲಿದೆ. ಸಮಗ್ರ ಅಭಿವೃದ್ಧಿ ಯಲ್ಲಿ ಹರ್ಯಾಣ ಮೊದಲ ಹಾಗೂ ಪ್ರವಾಸೋದ್ಯಮದಲ್ಲಿ  ಹರ್ಯಾಣ ಮತ್ತು ಗೋವಾಗಳು ಮೊದಲೆರಡು ಸ್ಥಾನ ಪಡೆದುಕೊಂಡಿವೆ. ಪರಿಸರ ಹಾಗೂ ಸ್ವಚ್ಛತೆಗೆ ತೆಲಂಗಾಣ ರಾಜ್ಯವು ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ.

ಒಟ್ಟು ಸಾಧನೆ: ಹಿಮಾಚಲ ಪ್ರದೇಶ
ಆರ್ಥಿಕತೆ: ತೆಲಂಗಾಣ
ಕೃಷಿ: ಮಧ್ಯ ಪ್ರದೇಶ
ಸಾಕ್ಷರತೆ : ಕೇರಳ
ಆರೋಗ್ಯ: ಆಂಧ್ರ ಪ್ರದೇಶ
ಮೂಲಸೌಕರ್ಯ:  ಹಿಮಾಚಲ ಪ್ರದೇಶ
ಕಾನೂನು ಮತ್ತು ಸುವ್ಯವಸ್ಥೆ: ಗುಜರಾತ್
ಆಡಳಿತ: ಕೇರಳ
ಸಮಗ್ರ ಅಭಿವೃದ್ಧಿ:  ಹರಿಯಾಣ
ಪ್ರವಾಸೋದ್ಯಮ:  ಹರಿಯಾಣ
ಉದ್ಯಮಶೀಲತೆ:  ಕರ್ನಾಟಕ
ಪರಿಸರ ಮತ್ತು ಸ್ವಚ್ಛತೆ: ತೆಲಂಗಾಣ

ಸಣ್ಣ ರಾಜ್ಯಗಳ ಸಾ‘ನೆ
ಭೌಗೋಳಿಕವಾಗಿ ದೊಡ್ಡದಾಗಿರುವ ರಾಜ್ಯಗಳ ಅಭಿವೃದ್ಧಿ ಸುಲಭವಲ್ಲ. ಆದರೆ ಸಣ್ಣ ರಾಜ್ಯಗಳ ಅಭಿವೃದ್ಧಿ ಕಾರ್ಯ ಸಲೀಸು ಎನ್ನುವ ಭಾವನೆಗಳಿವೆ. ಭೌಗೋಳಿಕವಾಗಿ ಚಿಕ್ಕದಾಗಿರುವ ರಾಜ್ಯಗಳು ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿವೆ. ದಕ್ಷಿಣ ಭಾರತದಲ್ಲಿರುವ ಕೇಂದ್ರಾಡಳಿತ ಪ್ರದೇಶ ಪುದುಚ್ಚೇರಿ ಸರ್ವತೋಮುಖ ಅಭಿವೃದ್ದಿಯನ್ನು ಹೊಂದಿರುವ ಪ್ರದೇಶ ಎನ್ನುವ ಹೆಸರನ್ನು ಪಡೆದುಕೊಂಡಿದೆ.

ಒಟ್ಟಾರೆ ಅಭಿವೃದ್ಧಿ: ಪುದುಚೆರಿ
ಆರ್ಥಿಕತೆ: ದೆಹಲಿ
ಕೃಷಿ: ನಾಗಾಲ್ಯಾಂಡ್
ಶಿಕ್ಷಣ: ಅರುಣಾಚಲ ಪ್ರದೇಶ
ಆರೋಗ್ಯ: ದೆಹಲಿ
ಮೂಲಸೌಕರ್ಯ: ಸಿಕ್ಕಿಂ
ಕಾನೂನು ಮತ್ತು ಸುವ್ಯವಸ್ಥೆ: ಪುದುಚೆರಿ
ಪ್ರವಾಸೋದ್ಯಮ: ಪುದುಚೆರಿ

ಬಡ ರಾಜ್ಯಗಳು ಹಾಗೂ ಬಡತನದ ಪ್ರಮಾಣ

ಖನಿಜ ಸಂಪತ್ತು ಹೇರಳವಾಗಿದೆ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿರುವ ಛತ್ತೀಸ್‌ಘಡ ದೇಶದ ಅತ್ಯಂತ ಬಡ ರಾಜ್ಯ ಎನ್ನುವ ಕುಖ್ಯಾತಿಗೂ ಪಾತ್ರವಾಗಿದೆ. ಛತ್ತೀಸ್‌ಘಡದ ಪಕ್ಕದಲ್ಲೇ ಇರುವ ಜಾರ್ಖಂಡ್ ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗೋವಾ ಈ ಯಾದಿಯಲ್ಲಿ ಕೊಟ್ಟ ಕೊನೆಯ ಸ್ಥಾನದಲ್ಲಿದ್ದುಘಿ, ಅತ್ಯಂತ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ.

ಛತ್ತೀಸ್ ಗಢ  ಶೇ 39.9
ಜಾರ್ಖಂಡ್  ಶೇ 37
ಮಣಿಪುರ  ಶೇ 36.9
ಅರುಣಾಚಲ ಪ್ರದೇಶ  ಶೇ 34.7
ಬಿಹಾರ ಶೇ 33.7
ಒಡಿಶಾ ಶೇ 32.6
ಅಸ್ಸಾಂ ಶೇ 32
ಮಧ್ಯ ಪ್ರದೇಶ  ಶೇ 31.7
ಉತ್ತರಪ್ರದೇಶ  ಶೇ 29.4
ಕರ್ನಾಟಕ  ಶೇ 20.9

ಶ್ರೀಮಂತ ರಾಜ್ಯಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ

ಪ್ರವಾಸಿ ರಾಜ್ಯ ಗೋವಾ ದೇಶದ ಅತ್ಯಂತ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ. ಈ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 5.1 ರಷ್ಟು ಮಾತ್ರ ಇದೆ. ಈ ಯಾದಿಯಲ್ಲಿ ಕೊಟ್ಟ ಕೊನೆಯ ಸ್ಥಾನವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರಹವೇಲಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.39.31ರಷ್ಟು.

ಗೋವಾ  ಶೇ 5.1
ಕೇರಳ  ಶೇ 7.1
ಸಿಕ್ಕಿಂ  ಶೇ 8.2
ಹಿಮಾಚಲ ಪ್ರದೇಶ ಶೇ 8.1
ಪಂಜಾಬ್ ಶೇ 8.3
ಆಂಧ್ರ ಪ್ರದೇಶ 9.2
ಪುದುಚೆರಿ ಶೇ 9.7
ದೆಹಲಿ  ಶೇ 10
ಜಮ್ಮು ಮತ್ತು ಕಾಶ್ಮೀರ ಶೇ 10.4
ಹರಿಯಾಣ ಶೇ 11.2


(ಈ ಲೇಖನವು ಡಿ.30, 2017ರಂದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

Tuesday, November 21, 2017

ಕೃಷ್ಣನೇಕೆ ಸಾರಥಿಯೇ ಆದ?


------------------------

ಆತ ಮನಸ್ಸು ಮಾಡಿದ್ದರೆ
ಕೌರವರನ್ನೆಲ್ಲ ಉಣುಗು
ನೊರೆದಂತೆ ನೊರೆಯಬಹುದಿತ್ತು |
ಪಂಚ ಪಾಂಡವರನ್ನೆಲ್ಲ
ಕಿರುಬೆರಳಿನಲ್ಲಿಯೇ ಗೋವರ್ಧನ
ಗಿರಿಯೆತ್ತರಕ್ಕೆ ನಿಲ್ಲಿಸಬಹುದಿತ್ತು |

ಆತ ಮನಸ್ಸು ಮಾಡಿದ್ದರೆ
ಕುರುಕ್ಷೇತ್ರದಲ್ಲಿ ಸುದರ್ಶನನ
ನರ್ತನ ಮಾಡಿಸಬಹುದಿತ್ತು |
ಕೌರವ ಕುಲವನ್ನೆಲ್ಲ
ಕಂಸನಂತೆ ಕೊಲ್ಲಬಹುದಿತ್ತು
ಕ್ಷಣ ಮಾತ್ರದಲ್ಲಿ ಹನನ ಮಾಡಬಹುದಿತ್ತು |

ಆತ ಮನಸ್ಸು ಮಾಡಿದ್ದರೆ
ಶಕಟನ ಒದ್ದಂತೆ ಲಟಲಟನೆ
ಅರೆಘಳಿಗೆಯಲ್ಲಿ ಮುರಿದು ಹಾಕಬಹುದಿತ್ತು |
ಪೂತನಿಯೆದೆಯ ಹಾಲಿನೊಡನೆ
ರಕುತವ ಹೀರಿದಂತೆ
ತಮವ ಹೀರಬಹುದಿತದತ್ತು |

ಹಾಗಾಗದ ಕೃಷ್ಣ
ಹೀಗೇಕೆ ಆದ?

ಗೀತೆಯ ಸಾರ ತಿಳಿಸಲು
ಸಾರಥಿಯಾದ
ಉಡುಗಿದ್ದ ಆತದಮಸ್ಥೈರ್ಯ
ಮೆರೆಸಲು ಮುನ್ನಡೆದ |

ಕೈಕಲ್ಲಿ ಕಿರುಗತ್ತಿ ಇಲ್ಲದೆಯೂ
ಯುದ್ಧಗೆಲ್ಲಬಹುದೆಂದು ಸಾರಿದ
ನಾ ನಾರಾಯಣ.. ನೀನು ನರ
ಎಂಬ ತತ್ವ ಮೆರೆಸಿದ |

ನಾನು ನೆಪ ಮಾತ್ರ
ನಿನ್ನೊಳಗೆ ಎಲ್ಲವೂ ಇದೆ ಎಂದು
ನರನ ಕೈಹಿಡಿದು ಮುನ್ನಡೆಸಿದ
ನಮ್ಮೊಳಗಿನ ಸುಪ್ತ ಶಕ್ತಿ ಮೆರೆಸಲು
ಕೃಷ್ಣ ಸಾರಥಿಯೇ ಆದ |


-------------------

(ಈ ಕವಿತೆಯನ್ನು ಬರೆದಿದ್ದು 21 ನವೆಂಬರ್ 2017ರಂದು ಬೆಂಗಳೂರಿನಲ್ಲಿ)