Wednesday, August 19, 2015

ಹುಡುಕು

ಕಣ್ಣೀರ ಮಳೆಯಲ್ಲಿ
ಮಿಂದೆದ್ದು ಬಂದಾಗ
ಸಿಕ್ಕಿತಲ್ಲ ಮನಕೆ
ಒಂದು ಶಾಂತಿ |

ಬೇಸರದ ಒಡಲಿಂದ
ಜಿಗಿದು ಹೊರ ಬಂದಾಗ
ಮಿಡಿಯಿತಲ್ಲಾ ಮನದಿ
ಸಂತಸದ ತಂತಿ |

ಭಯದ ಕೋಟೆಯನೀಗ
ಸೀಳಿ ಹೊರಬಂದಾಗ
ಮೂಡಿತಲ್ಲಾ ಮನದಿ
ಹೊಸತೊಂದು ಶಕ್ತಿ |

ಕಷ್ಟಗಳ ಸೆಳವಿಂದ
ಈಜಿ ಹೊರಬಂದಾಗ
ದೊರಕಿತಲ್ಲಾ ಜೀವ
ಜೀವಕ್ಕೆ ಮುಕ್ತಿ |

ದುಃಖವು ಕರಗಿದೊಡೆ
ಸಂತಸ ಮೂಡಿದೊಡೆ
ಹುಡುಕಿತಲ್ಲಾ ಮನವು
ಕವನಕ್ಕೆ ಸ್ಪೂರ್ತಿ ||


*****

(ಈ ಕವಿತೆಯನ್ನು ಬರೆದಿರುವುದು 08-12-2005ರಂದು ದಂಟಕಲ್ಲಿನಲ್ಲಿ)

Tuesday, August 18, 2015

ಮಾರ್ಗಸೂಚಿ

               ವಾಯವ್ಯ ಕರ್ನಾಟಕ ರಸ್ತೆ ಸಾರಿ ಸಂಸ್ಥೆ ಜನೋಪಯೋಗಿ ಕಾರ್ಯ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಹಳ್ಳಿಹಳ್ಳಿಗಳಿಗೆ ಸರ್ಕಾರಿ ಸಾರಿಗೆಯನ್ನು ಓಡಿಸುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ನೆಲೆನಿಂತಿದೆ. ದೂರದ ಊರುಗಳಿಗೂ ಬಸ್ಸುಗಳನ್ನು ಓಡಿಸುವ ಮೂಲಕ ಜನಸಂಪರ್ಕಕ್ಕೆ ದಾರಿ ಮಾಡಿಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಾಕಷ್ಟು ಬಸ್ ಸೇವೆಗಳನ್ನು ನೀಡುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ದಾಂಡೇಲಿ, ಹಳಿಯಾಳ ಹಾಗೂ ಜೋಯಿಡಾ ಪ್ರದೇಶಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ಕಡೆಗಳಲ್ಲಿಯೂ ಶಿರಸಿಯನ್ನು ಕೇಂದ್ರಸ್ಥಾನವನ್ನಾಗಿಸಿಕೊಂಡು ಸಾರಿಗೆ ಸಂಸ್ಥೆ ಕೆಲಸ ಮಾಡುತ್ತಿದೆ. ದಿನವಹಿ ಸಾವಿರಾರು ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುವ ಮೂಲಕ ಖ್ಯಾತಿ ಗಳಿಸಿಕೊಂಡಿದೆ. ಈಗಾಗಲೂ ನೂರಾರು ಮಾರ್ಗಗಳಲ್ಲಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಇನ್ನೂ ಹಲವಾರು ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸುವ ಅಗತ್ಯವಿದೆ. ಸಾರಿಗೆ ಸಂಸ್ಥೆ ಓಡಿಸಬಹುದಾದ ಕೆಲವೊಂದು ಮಾರ್ಗಗಳನ್ನು ನಾನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಮಾರ್ಗಗಳ ಬಗ್ಗೆ ಶಿರಸಿಯ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಿದ್ದೇನೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ಪಟ್ಟಿ ಮಾಡುತ್ತ ಹೋಗಿದ್ದೇನೆ. ಸುಮ್ಮನೇ ಗಮನಿಸಬಹುದು.

* ಶಿರಸಿ-ಸಿದ್ದಾಪುರ-ಜೋಗ ಜಲಪಾತ
           ಶಿರಸಿಯಿಂದ ಸಿದ್ದಾಪುರ ಮೂಲಕ ವಿಶ್  ವಿಖ್ಯಾತವಾದ ಜೋಗ ಜಲಪಾತಕ್ಕೆ ತೆರಳಲು ಕೇವಲ ಒಂದು ಅಥವಾ ಎರಡು ಬಸ್ಸುಗಳು ಮಾತ್ರ ದಿನಂಪ್ರತಿ ಓಡಾಟ ಮಾಡುತ್ತಿವೆ. ಬದಲಾಗಿ ಪ್ರತಿ ಒಂದೂವರೆ ಗಂಟೆಗೆ ಒಂದು ಬಸ್ಸಿನಂತೆ ಅಥವಾ ಎರಡು ತಾಸಿಗೊಂದರಂತೆ ಬಸ್ಸುಗಳನ್ನು ಓಡಿಸಿದರೆ ಉತ್ತಮ. ಸಾಗರ, ಶಿವಮೊಗ್ಗದಿಂದ ಪ್ರತಿ 10 ಅಥವಾ 15 ನಿಮಿಷಕ್ಕೊಂದರಂತೆ ಬಸ್ಸುಗಳು ಜೋಗ ಜಲಪಾತಕ್ಕೆ ಓಡಾಟ ಮಾಡುತ್ತವೆ. ಇದರಲ್ಲಿ ಖಾಸಗಿ ಬಸ್ಸುಗಳದ್ದು ಸಿಂಹಪಾಲು. ನಡು ನಡುವೆ ಸರ್ಕಾರಿ ಬಸ್ಸುಗಳೂ ಓಡಾಟ ಮಾಡುತ್ತಿವೆ. ಈ ಕಾರಣದಿಂದಲೇ ಜೋಗಜಲಪಾತಕ್ಕೆ ಶಿವಮೊಗ್ಗ ಅಥವಾ ಆ ಭಾಗದಿಂದ ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿದೆ. ಆದರೆ ಜೋಗಜಲಪಾತದ ಒಂದು ಭಾಗ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಉತ್ತರ ಕನ್ನಡದ ವಿವಿಧ ಪ್ರದೇಶಗಳಿಂದ ಜೋಗಕ್ಕೆ ತರಳಲು ಅದರಲ್ಲೂ ವಿಶೇಷವಾಗಿ ಶಿರಸಿ, ಯಲ್ಲಾಪುರ, ಮುಂಡಗೋಡ ಹಾಗೂ ಪಕ್ಕದ ಹುಬ್ಬಳ್ಳಿ, ಬೆಳಗಾವಿಗಳಿಂದ ಬಂದು ಹೋಗಿ ಮಾಡಲು ನೇರವಾಗಿ ಬಸ್ಸುಗಳೇ ಇಲ್ಲ. ಶಿರಸಿಯಿಂದ ದಿನಕ್ಕೆ ಒಂದೋ ಅಥವಾ ಎರಡೋ ಬಸ್ಸುಗಳು ಮಾತ್ರ ಓಡಾಟ ಮಾಡುತ್ತಿವೆ. ಬಸ್ ಸೌಕರ್ಯ ಸಮರ್ಪಕವಾಗಿ ಇಲ್ಲದ ಕಾರಣ ಈ ಭಾಗದ ಪ್ರವಾಸಿಗರು ಖಾಸಗಿ ವಾಹನವನ್ನು ಮಾಡಿಕೊಂಡು ಜೋಗಜಲಪಾತ ವೀಕ್ಷಣೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯಿಂದ ಬರುವವರಿಗಂತೂ ನೇರವಾದ ಬಸ್ಸು ಇಲ್ಲವೇ ಇಲ್ಲ. ಶಿರಸಗೆ ಬಂದು ಅಲ್ಲಿಂದ ಸಿದ್ದಾಪುರ ಮೂಲಕ ತಾಳಗುಪ್ಪಕ್ಕೆ ಹೋಗಿ ಅಲ್ಲಿಂದ ಜೋಗಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಬದಲಾಗಿ ಹುಬ್ಬಳ್ಳಿಯಿಂದ ಒಂದೆರಡು ಬಸ್ಸುಗಳನ್ನು ನೇರವಾಗಿ ಜೋಗ ಜಲಪಾತಕ್ಕೆ ಓಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅಲ್ಲದೇ ಸಂಸ್ಥೆಯ ಆದಾಯವೂ ಹೆಚ್ಚಾಗಬಲ್ಲದು. 60 ಕಿ.ಮಿ ಅಂತರದ ಮಾರ್ಗ ಇದಾಗಿದೆ.

* ಬನವಾಸಿ-ಶಿರಸಿ-ಜೋಗಜಲಪಾತ/ ಬನವಾಸಿ-ಚಂದ್ರಗುತ್ತಿ-ಸಿದ್ದಾಪುರ-ಜೋಗ ಜಲಪಾತ
          ಪ್ರವಾಸೋದ್ಯಮದ ಅಭಿವೃದ್ಧಿಯನ್ನೇ ಪ್ರಮುಖ ಅಂಶವನ್ನಾಗಿಟ್ಟುಕೊಂಡು ಈ ಮಾರ್ಗವನ್ನು ಜಾರಿಗೆ ತರಬಹುದು. ಪ್ರವಾಸಿಗರನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಬನವಾಸಿ-ಶಿರಸಿ-ಸಿದ್ದಾಪುರ ಜೋಗಜಲಪಾತ ನಡುವೆ ದಿನವಹಿ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಬಸ್ಸುಗಳನ್ನು ಓಡಿಸಿದರೆ ಉತ್ತಮ. ಇದಲ್ಲದೇ ಬನವಾಸಿ-ಹರೀಶಿ-ಚಂದ್ರಗುತ್ತಿ-ಸಿದ್ದಾಪುರ-ಜೋಗ ಜಲಪಾತ ನಡುವೆ ಬಸ್ಸುಗಳನ್ನು ಓಡಿಸಿದರೆ ಜನಸ್ನೇಹಿಯೂ ಆಗುತ್ತದೆ, ಪ್ರವಾಸಿ ತಾಣಗಳಾದ ಬನವಾಸಿ, ಚಂದ್ರಗುತ್ತಿ ಹಾಗೂ ಜೋಗಜಲಪಾತಗಳನ್ನು ಸಂಪರ್ಕಿಸಬಹುದಾಗಿದೆ. ಈ ಮಾರ್ಗದಿಂದ ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಸಿದ್ದಾಪುರ ಪ್ರದೇಶಗಳ ಜನರಿಗೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ, ಹರೀಶಿ ಭಾಗಗಳ ಜನರಿಗೂ ಅನುಕೂಲವಾಗಲಿದೆ. ಬನವಾಸಿ-ಸಿರಸಿ-ಜೋಗಜಲಪಾತ ಮಾರ್ಗ 82 ಕಿ.ಮಿ ದೂರದ್ದಾಗಿದ್ದರೆ ಬನವಾಸಿ-ಚಂದ್ರಗುತ್ತಿ-ಜೋಗ ಮಾರ್ಗ 75ರಿಂದ 80 ಕಿ.ಮಿ ದೂರದ್ದಾಗಿದೆ.

* ಶಿರಸಿ-ಜೋಗಜಲಪಾತ- ಭಟ್ಕಳ
            ಇದು ಅಪರೂಪದ ಮಾರ್ಗ. ಭಟ್ಕಳ ಸಾರಿಗೆ ಘಟಕ ಹಾಗೂ ಶಿರಸಿ ಸಾರಿಗೆ ಘಟಕಗಳು ಒಟ್ಟಾಗಿ ಈ ಮಾರ್ಗದ ಮೂಲಕ ಬಸ್ಸುಗಳನ್ನು ಓಡಿಸಿದರೆ ಉತ್ತಮ. ಶಿರಸಿ-ಸಿದ್ದಾಪುರ-ಜೋಗಜಲಪಾತ-ಕಾರ್ಗಲ್-ಕೂಗಾರ ಘಟ್ಟ-ನಾಗವಳ್ಳಿ-ಭಟ್ಕಳ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದರಿಂದ ಭಟ್ಕಳ ಭಾಗದ ಜನರು ಜೋಗ ಜಲಪಾತವನ್ನು ವೀಕ್ಷಣೆ ಮಾಡಲು ಅನುಕೂಲವಾಗಲಿದೆ. ಈ ಮಾರ್ಗದಿಂದಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಜೋಗದಿಂದ ಭಟ್ಕಳ ಮಾರ್ಗದಲ್ಲಿ ಕೆಲವು ಖಾಸಗಿ ಬಸ್ಸುಗಳು ಓಡಾಟ ನಡೆಸುತ್ತವೆ. ಅಲ್ಲದೇ ದಿನಕ್ಕೆ ಮೂರೋ ನಾಲ್ಕೋ ಸರ್ಕಾರಿ ಬಸ್ಸುಗಳು ಮಾತ್ರ ಓಡಾಡುತ್ತವೆ. ಈ ಭಾಗದ ಜನರಿಗೆ ಬಸ್ಸುಗಳ ಸೌಕರ್ಯದ ಅನಿವಾರ್ಯತೆಯಿದೆ. ಶಿರಸಿಯಿಂದ ಬೆಳಿಗ್ಗೆ 2 ಬಸ್ಸುಗಳು, ಸಂಜೆ 2 ಬಸ್ಸುಗಳು (ಒಂದೊಂದೊಂದು ಬಸ್ಸು ಓಡಿಸಬಹುದು) ಅದೇ ರೀತಿ ಭಟ್ಕಳದಿಂದಲೂ ತಲಾ ಎರಡೆರಡು ಬಸ್ಸುಗಳನ್ನು ಓಡಿಸಿದರೆ ಉತ್ತಮ. ಜೋಗಕ್ಕೆ ತೆರಳುವ ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ. ಈ ಮಾರ್ಗದ ಮೂಲಕ ಬಸ್ಸುಗಳನ್ನು ಓಡಿಸಿದರೆ ಸರಿಸುಮಾರು 130 ಕಿಲೋಮೀಟರ್ ಅಂತರ.

* ಕುಮಟಾ-ಸಿದ್ದಾಪುರ-ಸೊರಬ
         ಕುಮಟಾ ಹಾಗೂ ಸೊರಬಗಳ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲು ಈ ಮಾರ್ಗ ಸಹಕಾರಿಯಾಗಲಿದೆ. ಸೊರಬದ ಜನರು ಕುಮಟಕ್ಕೆ ತೆರಳಬೇಕೆಂದರೆ ಶಿರಸಿಗೆ ಬಂದು ಹೋಗಬೇಕಾದ ಅನಿವಾರ್ಯತೆಯಿದೆ. ಅಥವಾ ಸಿದ್ದಾಪುರಕ್ಕೆ ಬಂದು ಹೋಗಬೇಕಾಗುತ್ತದೆ. ಇದರ ಬದಲಾಗಿ ಕುಮಟಾದಿಂದ ಸಿದ್ದಾಪುರ ಮಾರ್ಗವಾಗಿ ಸೊರಬದ ವರೆಗೆ ನೇರವಾಗಿ ಬಸ್ಸುಗಳನ್ನು ಓಡಿಸಿದರೆ ಅನುಕೂಲವಾಗುತ್ತದ. ಸಿದ್ದಾಪುರದಿಂದ ಸೊರಬ ಭಾಗದ ಜನರಿಗೆ ಹೇಗೆ ಈ ಬಸ್ಸು ಸಹಕಾರಿಯೋ ಅದೇ ರೀತಿ ಸಿದ್ದಾಪುರದಿಂದ ಕುಮಟಾಕ್ಕೆ ತೆರಳುವ ಜನಸಾಮಾನ್ಯರಿಗೂ ಇದು ಉಪಯೋಗಕಾರಿ. ಈ ಮಾರ್ಗದ ನಡುವೆ 110 ಕಿ.ಮಿ ಅಂತರವಿದೆ.

* ಶಿರಸಿ-ಸಿದ್ದಾಪುರ-ಜೋಗಜಲಪಾತ-ಹೊನ್ನಾವರ
           ದೂರದ ಲೆಕ್ಖದಲ್ಲಿ ಹೇಳುವುದಾದರೆ ಈ ಮಾರ್ಗ ಸುತ್ತುಬಳಸಿನದ್ದಾಗಿದೆ. ಶಿರಸಿಯಿಂದ ಕುಮಟಾ ಮೂಲಕ ಹೊನ್ನಾವರ ತಲುಪುವುದು ಸುಲಭದ ಮಾರ್ಗ. ಆದರೆ ಸಿದ್ದಾಪುರ ಜೋಗ ಜಲಪಾತದ ಮೂಲಕ ಹೊನ್ನಾವರಕ್ಕೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳನ್ನು ಓಡಿಸಿದರೆ ಶಿರಸಿ ಹಾಗೂ ಹೊನ್ನಾವರದ ಪ್ರವಾಸಿಗರಿಗೆ ಜೋಗ ಜಲಪಾತಕ್ಕೆ ತೆರಳುವುದು ಅನುಕೂಲಕರ. ಅಲ್ಲದೇ ಮಾವಿನಗುಂಡಿ, ಬಂಗಾರಮಕ್ಕಿ, ಗೇರುಸೊಪ್ಪಾ ಈ ಮುಂತಾದ ಪ್ರದೇಶಗಳ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ. ಈ ಮಾರ್ಗದ ಮೂಲಕ ಸಾಗಿದರೆ ಎರಡೂ ಸ್ಥಳಗಳ ನಡುವಿನ ಅಂತರ 140ರಿಂದ 150 ಕಿ.ಮಿ ಆಗುತ್ತದೆ.

* ಶಿರಸಿ-ಯಾಣ-ಅಂಕೋಲಾ
         ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಮಾರ್ಗ ಇದಾಗಿದೆ. ಶಿರಸಿ ಹಾಗೂ ಅಂಕೋಲಾ ನಡುವಿನ ಈ ಮಾರ್ಗದ ಅಂತರ 65 ರಿಂದ 70 ಕಿ.ಮಿ. ಮಾರ್ಗ ಮಧ್ಯದಲ್ಲಿ ಲೋಕವಿಖ್ಯಾತಿ  ಗಳಿಸಿರುವ ಯಾಣ ಹಾಗೂ ವಿಭೂತಿ ಜಲಪಾತಗಳನ್ನು ಬೆಸೆಯಬಹುದಾಗಿದೆ. ಅಲ್ಲದೇ ಮತ್ತೀಘಟ್ಟ, ದೇವನಳ್ಳಿ, ಅಚವೆ, ವಡ್ಡಿ ಘಟ್ಟಗಳು ಸಿಗುತ್ತವೆ. ಈ ಎಲ್ಲ ಊರುಗಳಿಗೆ ಈ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದು ಅನುಕೂಲ ಕಲ್ಪಿಸುತ್ತದೆ. ಮತ್ತಿಘಟ್ಟಾ, ದೇವನಳ್ಳಿ ಈ ಮುಂತಾದ ಭಾಗಗಳ ಜನರು ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ತೆರಳಲು ಸಿರಸಿಗೆ ಆಗಮಿಸುವುದೂ ತಪ್ಪುತ್ತದೆ. ಅಲ್ಲದೇ ಸಿರಸಿಯಿಂದ ಕಾರವಾರಕ್ಕೆ ಈಗ ದೇವಿಮನೆ ಘಟ್ಟದ ಮೂಲಕ ಮಾರ್ಗವಿದ್ದು 120 ಕಿ.ಮಿ ಅಂತರವಿದೆ. ಆದರೆ ಯಾಣ ಮೂಲಕ ಬಸ್ ಓಡಿಸಿದರೆ ಕನಿಷ್ಟ 10ರಿಂದ 15 ಕಿಮಿ ಉಳಿತಾಯವಾಗಲಿದೆ. ಮಾರ್ಗಮಧ್ಯದಲ್ಲಿ ವಡ್ಡಿ ಘಟ್ಟ ಸಿಗುತ್ತದೆ. ಈ ಘಟ್ಟದಲ್ಲಿ ರಸ್ತೆಯನ್ನು ಸರಿಪಡಿಸಿಕೊಂಡರೆ ಸಂಚಾರ ಸುಗಮವಾಗುತ್ತದೆ. ಇದೇ ಮಾರ್ಗದಲ್ಲಿಯೇ ಸಂಚಾರ ವಿಸ್ತರಿಸಿ ಸಿರಸಿ-ಯಾಣ-ಗೋಕರ್ಣಕ್ಕೂ ಬಸ್ ಓಡಿಸಬಹುದಾಗಿದೆ. ಶೈವ ಕ್ಷೇತ್ರಗಳಾದ ಯಾಣ ಹಾಗೂ ಗೋಕರ್ಣಗಳನ್ನು ಇದರಿಂದ ಬೆಸೆಯಬಹುದಾಗಿದೆ. ಇದಲ್ಲದೇ ಶಿರಸಿ-ಯಾಣ-ಅಂಕೋಲಾ-ಕಾರವಾರ ನಡುವೆ ಬಸ್ಸುಗಳನ್ನೂ ಓಡಿಸಬಹುದಾಗಿದೆ. ಜನಸಾಮಾನ್ಯರಿಗೆ ಈ ಮಾರ್ಗ ಬಹು ಉಪಯೋಗಿ. ಈ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿತ್ತ ಹರಿಸಬೇಕಾಗಿದೆ.

* ಶಿರಸಿ-ಧೋರಣಗಿರಿ-ಗುಳ್ಳಾಪುರ-ಅಂಕೋಲಾ
         ಶಿರಸಿ ತಾಲೂಕಿನ ಹುಲೇಕಲ್, ವಾನಳ್ಳಿ, ಜಡ್ಡೀಗದ್ದೆ, ಕಕ್ಕಳ್ಳಿ, ದೋರಣಗಿರಿ, ಅಂಕೋಲಾ ತಾಲೂಕಿನ ಸುಂಕಸಾಳ, ಹೆಗ್ಗಾರ, ವೈದ್ಯಹೆಗ್ಗಾರ, ಗುಳ್ಳಾಪುರ ಈ ಭಾಗದ ಜನಸಾಮಾನ್ಯರಿಗೆ ಅನುಕೂಲವಾಗುವ ಈ ಮಾರ್ಗ ಸಾರಿಗೆ ಇಲಾಖೆಗೆ ಹೇರಳ ಆದಾಯವನ್ನು ತರಬಲ್ಲದು. ಹುಲೇಕಲ್, ವಾನಳ್ಳಿ ಭಾಗದ ಜನಸಾಮಾನ್ಯರು ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಲು ಸಿರಸಿಯನ್ನು ಸುತ್ತು ಬಳಸುವುದು ಇದರಿಂದ ತಪ್ಪುತ್ತದೆ. ಶಿರಸಿಯಿಂದ ಗುಳ್ಳಾಪುರಕ್ಕೆ 45 ರಿಂದ 50 ಕಿ.ಮಿ ದೂರವಿದೆ. ಅಲ್ಲಿಂದ ಅಂಕೋಲಾ 50 ಕಿಮಿ ಫಾಸಲೆಯಲ್ಲಿದೆ. 100 ಕಿ.ಮಿ ಅಂತರದ ಮಾರ್ಗ ಇದಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಈ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವುದು ಉತ್ತಮ. ಇದೇ ಮಾರ್ಗದಲ್ಲಿ ಈ ಹಿಂದೆ ಶಿರಸಿ-ದೋರಣಗಿರಿ-ಗುಳ್ಳಾಪುರ-ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ದಿನಕ್ಕೆ ಒಂದು ಬಸ್ ಓಡಾಟ ಮಾಡುತ್ತಿತ್ತು. ಈ ಬಸ್ ಸಂಚಾರವನ್ನು ಪುನಾರಂಭ ಮಾಡಬೇಕಾದ ಅಗತ್ಯವೂ ಇದೆ. ಸೋಂದಾದಿಂದ ಹುಲೇಕಲ್, ವಾನಳ್ಳಿ, ಗುಳ್ಳಾಪುರ, ಯಲ್ಲಾಪುರ, ಶಿರಸಿ ಮೂಲಕ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಸ್ಸೊಂದು ಓಡಾಟ ಮಾಡುತ್ತಿತ್ತು. ಈ ಮಾರ್ಗವನ್ನು ನಂತರದ ದಿನಗಳಲ್ಲಿ ನಿಲ್ಲಿಸಲಾಯಿತು. ಈ ಮಾರ್ಗ ಸರ್ವಋತುವಾಗಿರದ ಕಾರಣ ಸಂಚಾರ ನಿಲ್ಲಿಸಲಾಯಿತು. ಮಾರ್ಗವನ್ನು ಸರ್ವಋತು ಮಾಡುವುದರ ಜೊತೆಗೆ ಇಂತಹ ಬಸ್ ಸಂಚಾರ ಪುನಾರಂಭ ಮಾಡುವುದರಿಂದ ಶಿರಸಿಗರಿಗೆ ಮಾತ್ರವಲ್ಲ, ಕೊಡಸಳ್ಳಿ ಅಣೆಕಟ್ಟೆ ನಿರಾಶ್ರಿತರಿಗೆ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಜನರಿಗೆ ಅನುಕೂಲವಾಗಲಿದೆ. ಕೊಡಸಳ್ಳಿ ಅಣೆಕಟ್ಟೆಯಿಂದ ನಿರಾಶ್ರಿತರಾದ ಜನರು ಶಿರಸಿಗೆ ಬರಬೇಕೆಂದರೆ ಯಲ್ಲಾಪುರವನ್ನು ಸುತ್ತುಬಳಸುವುದು ತಪ್ಪುತ್ತದೆ. ಸರಿಸುಮಾರು 35 ರಿಂದ 40 ಕಿ.ಮಿ ಉಳಿತಾಯವಾಗಲಿದೆ. ಅಲ್ಲದೇ ಇದೇ ಮಾರ್ಗದಲ್ಲಿ ದೋರಣಗಿರಿಯಿಂದ ಹೆಗ್ಗಾರ-ಹಳವಳ್ಳಿ-ಕಮ್ಮಾಣಿ ಬಳಿ ಬಂದು ಹಿಲ್ಲೂರಿನ ಮೂಲಕ ಅಂಕೋಲಾಕ್ಕೆ ಸಂಪರ್ಕವನ್ನೂ ಕಲ್ಪಿಸಿದರೆ ಈ ಎಲ್ಲ ಭಾಗಗಳ ಜನಸಾಮಾನ್ಯರಿಗೆ ಬಹು ಅನುಕೂಲವಾಗಲಿದೆ.

* ಸಿದ್ದಾಪುರ-ನಿಲ್ಕುಂದ-ಕುಮಟಾ
         ಸಿದ್ದಾಪುರ ಮೂಲಕ ನಿಲ್ಕುಂದ ಹಾಗೂ ಬಂಡಲದ ಮೂಲಕ ಕುಮಟಾಕ್ಕೆ ಬಸ್ ಸಂಚಾರವನ್ನು ಆರಂಭಿಸಿದರೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ. ಸಿದ್ದಾಪುರದಿಂದ ಈ ಮಾರ್ಗದಲ್ಲಿ 70ರಿಂದ 80 ಕಿಮಿ ಅಂತರದಲ್ಲಿ ಕುಮಟಾ ಸಿಗುತ್ತದೆ. ಮಾರ್ಗ ಮದ್ಯದಲ್ಲಿ ಕೋಲಸಿರ್ಸಿ, ಬಿದ್ರಕಾನ್, ಹೆಗ್ಗರಣಿ, ಹಾರ್ಸಿಕಟ್ಟಾ, ನಿಲ್ಕುಂದ, ಕಂಚೀಕೈ, ಬಂಡಲ, ಮಾಸ್ತಿಹಳ್ಳ ಈ ಮಾರ್ಗದ ಜನರಿಗೆ ಅನುಕೂಲವಾಗುತ್ತದೆ. ಇಲಾಖೆ ಸಿದ್ದಾಪುರ-ನಿಲ್ಕುಂದ-ಬಂಡಲ-ಕುಮಟಾ-ದೊಡ್ಮನೆ-ಸಿದ್ದಾಪುರದ ಮೂಲಕ ಬಸ್ ಓಡಿಸಿದರೆ ಬಸ್ ರೌಂಡ್ ಸಿಕ್ಕಂತಾಗುತ್ತದೆ. ದಿನಕ್ಕೆರಡು ಸಾರಿ ಬಸ್ ಓಡಿಸುವುದು ಅನುಕೂಲಕರ.

* ಯಲ್ಲಾಪುರ-ಸೋಂದಾ-ಹುಲೇಕಲ್- ಶಿರಸಿ
          ಈ ಮಾರ್ಗದ ಮೂಲಕ 10-15 ಕಿಮಿ ಸುತ್ತು ಬಳಸಿದರೂ ಜನಸಾಮಾನ್ಯರಿಗೆ ಅನುಕೂಲಕರ ಹಾಗೂ ಇಲಾಖೆಗೆ ಆದಾಯ ತರುವಾ ಮಾರ್ಗ ಇದಾಗಿದೆ. ಯಲ್ಲಾಪುರದಲ್ಲಿ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ನಡೆದುಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ನೇರವಾಗಿ ಬಸ್ ಸೌಕರ್ಯ ಸಿಕ್ಕಂತಾಗುತ್ತದೆ. ಅಲ್ಲದೇ ಮಾರ್ಗಮಧ್ಯದ ವಾದೀರಾಜಮಠ ಹಾಗೂ ಸ್ವಾದಿ ಜೈನಮಠಗಳಿಗೂ ಜನಸಾಮಾನ್ಯರು ಹೋಗಿ ಬರಬಹುದಾಗಿದೆ. ಸಾಗರ ಹಾಗೂ ಸಿರಸಿ ನಡುವೆ ಪ್ರತಿ ದಿನ ಮುಂಜಾನೆ ಬಸ್ಸೊಂದಿದೆ. ಪೋಸ್ಟಲ್ ಕಾರ್ಯಕ್ಕೆ ಬಳಕೆಯಾಗುವ ಈ ಬಸ್ ಸಾಗರದಿಂ 7 ಗಂಟೆಗೆ ಹೊರಟು ತಾಳಗುಪ್ಪ, ಕಾರ್ಗಲ್, ಜೋಗ, ಮಾವಿನಗುಂಡಿ, ಸಿದ್ದಾಪುರ, ಕೋಲಸಿರ್ಸಿ, ಹಾರ್ಸಿಕಟ್ಟಾ, 16ನೇ ಮೈಲಕಲ್ ಮೂಲಕ ಸಿರಸಿಗೆ ಬರುತ್ತದೆ. ಈ ಮಾರ್ಗ ಬಹು ದೀರ್ಘವಾದುದುದಾದರೂ ಜನಸಾಮಾನ್ಯರಿಗೆ ಬಹು ಉಪಯೋಗಿಯಾಗಿದೆ. ಕಾಲೇಜು, ಶಾಲೆಗಳ ವಿದ್ಯಾರ್ಥಿಗಳಿಗಂತೂ ಈ ಬಸ್ಸು ಬಹು ಅನುಕೂಲ ಕಲ್ಪಿಸಿದೆ. ಅದೇ ರೀತಿ ಯಲ್ಲಾಪುರ-ಸೋಂದಾ-ಶಿರಸಿ ಬಸ್ ಓಡಿಸಿದರೆ ಅನುಕೂಲವಾಗುತ್ತದೆ.

* ಶಿರಸಿ-ಜೋಗಜಲಪಾತ-ಕೂಗಾರ-ನಾಗೋಡಿ-ಕೊಲ್ಲೂರು
           ಶಿರಸಿಯಿಂದ ಕೊಲ್ಲೂರಿಗೆ ಬಸ್ ಸಂಚಾರವೇ ಇಲ್ಲ. ದಶಕಗಳ ಹಿಂದೆ ಕೊಲ್ಲೂರಿಗೆ ಶಿರಸಿಯಿಂದ ಬಸ್ ಓಡಾಟ ಮಾಡುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಈ ಬಸ್ ಸಂಚಾರ ನಿಲ್ಲಿಸಲಾಯಿತು. ಆದರೆ ಶಿರಸಿಯಿಂದ ಜೋಗ ಜಲಪಾತ, ಕೂಗಾರ, ನಾಗೋಡಿ  ಮೂಲಕ ಕೊಲ್ಲೂರಿಗೆ ಬಸ್ ಸಂಚಾರ ಆರಂಭಿಸಿದರೆ ಕೊಲ್ಲೂರಿಗೆ ಶಿರಸಿ, ಸಿದ್ದಾಪುರ ಭಾಗದ ಜನಸಾಮಾನ್ಯರು ಕೊಲ್ಲೂರು ಮೂಕಾಂಬಿಕೆ ದರ್ಶನವನ್ನು ಸುಲಭವಾಗಿ ಕೈಗೊಳ್ಳಬಹುದಾಗಿದೆ. 150 ರಿಂದ 160 ಕಿಮಿ ದೂರದ ಈ ಮಾರ್ಗದಿಂದ ಹೇರಳ ಆದಾಯ ಸಾಧ್ಯವಿದೆ. ಜೋಗಜಲಪಾತಕ್ಕೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಜೋಗದಿಂದ ಬಸ್ ಸಂಚಾರ ಕಡಿಮೆಯಿರುವ ಕೂಗಾರ, ಮಾಗೋಡ, ನಾಗೋಡಿಗಳಿಗೆ ಹಾಗೂ ಈ ಮಾರ್ಗ ಮಧ್ಯದ ಜನಸಾಮಾನ್ಯರಿಗಂತೂ ಈ ಬಸ್ ಸಂಚಾರದಿಂದ ಬಹಳ ಉಪಕಾರಿಯಾಗುತ್ತದೆ. ಈ ಮಾರ್ಗ ಸ್ವಲ್ಪ ಸುತ್ತು ಬಳಸಿನ ದಾರಿಯೂ ಹೌದು. ನಾಗೋಡಿಯ ಬಳಿಯಲ್ಲಿ ಕೊಡಚಾದ್ರಿಯೂ ಇರುವುದರಿಂದ ಕೊಡಚಾದ್ರಿಗೆ ತೆರಳುವ ಪ್ರವಾಸಿಗರಿಗೂ ಈ ಮಾರ್ಗ ಉಪಕಾರಿ. ಈ ಮಾರ್ಗವಲ್ಲದೇ ಕೊಲ್ಲೂರಿಗೆ ಸಾಗರ-ಸಿಗಂದೂರು ಮೂಲಕವೂ ಬಸ್ ಸಂಚಾರವನ್ನೂ ಕೈಗೊಳ್ಳಬಹುದಾಗಿದೆ. ಈ ಮಾರ್ಗವೂ ಆದಾಯವನ್ನು ತರಬಲ್ಲದಾಗಿದೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತದೆ. ಸಾಗರದ ಸಾರಿಗೆ ಘಟಕದ ಸಹಯೋಗವಿದ್ದರೆ ಈ ಮಾರ್ಗದಲ್ಲಿ ಬಸ್ ಓಡಿಸುವುದು ಸುಲಭ. ದಿನಕ್ಕೆ ಒಂದು ಅಥವಾ ಎರಡು ಬಸ್ಸುಗಳನ್ನು ಓಡಿಸುವುದು ಅನುಕೂಲಕರ.

*ಶಿರಸಿ-ಸಾಗರ-ಹೊಸನಗರ-ರಾಮಚಂದ್ರಾಪುರಮಠ
           ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಬಸ್ ಸಂಚಾರ ಉಪಕಾರಿ. ಈಗಿನ ಪರಿಸ್ಥಿತಿಯಲ್ಲಿ ಶಿರಸಿ, ಸಿದ್ದಾಪುರ ಪ್ರದೇಶದ ಜನರು (ವಿಶೇಷವಾಗಿ ಹವ್ಯಕರು) ರಾಮಚಂದ್ರಾಪುರ ಮಠಕ್ಕೆ ತೆರಳಬೇಕೆಂದರೆ ನೇರವಾಗಿ ಬಸ್ ಸೌಕರ್ಯವಿಲ್ಲ. ಸಾಗರ, ಹೊಸನಗರಗಳಲ್ಲಿ ಬಸ್ ಬದಲಾಯಿಸುವ ಅನಿವಾರ್ಯತೆಯಿದೆ. ಬದಲಾಗಿ ಶಿರಸಿಯಿಂದ ನೇರವಾಗಿ ಬಸ್ ಸೌಕರ್ಯ ಒದಗಿಸಿದರೆ ಅನುಕೂಲವಾಗಬಲ್ಲದು. ದಿನಕ್ಕೊಂದು ಅಥವಾ ಎರಡು ಬಸ್ ಓಡಿಸುವುದು ಉತ್ತಮ. ಮುಂದಿನ ದಿನಗಳಲ್ಲಿ ಸ್ವರ್ಣವಲ್ಲಿ ಮಠದಿಂದ ರಾಮಚಂದ್ರಾಪುರ ಮಠದ ನಡುವೆ ಬಸ್ ಸಂಚಾರವನ್ನೂ ಒದಗಿಸಬಹುದಾಗಿದೆ. ಆದಾಯದ ದೃಷ್ಟಿಯಿಂದ ಈ ಬಸ್ ಸಂಚಾರ ಬಹು ಉತ್ತಮ. ಸಿರಸಿಯಿಂದ ಅಜಮಾಸು 140 ರಿಂದ 160 ಕಿಮಿ ಅಂತರದಲ್ಲಿ  ರಾಮಚಂದ್ರಾಪುರ ಮಠವಿದೆ. ಸಾರಿಗೆ ಇಲಾಖೆ ತ್ವರಿತವಾಗಿ ಈ ಬಸ್ ಸಂಚಾರ ಕೈಗೊಳ್ಳುವ ಬಗ್ಗೆ ಚಿತ್ತ ಹರಿಬಹುದಾಗಿದೆ. ಜೊತೆಯಲ್ಲಿ ಸಿರಸಿಯಿಂದ ತೀರ್ಥಹಳ್ಳಿ ಮೂಲಕ ಶೃಂಗೇರಿಗೆ ದಿನಕ್ಕೊಂದು ಬಸ್ ಓಡಿಸಬಹುದು. ರಾತ್ರಿ ಬಸ್ ಆದರೆ ಉತ್ತಮ. ಸಂಜೆ ಹೊರಟು ಬೆಳಗಿನ ಜಾವ ಶೃಂಗೇರಿ ತಲುಪುವಂತಹ ಮಾರ್ಗ ಇದಾಗಿದೆ.

          ಜೊತೆಯಲ್ಲಿ ಹುಬ್ಬಳ್ಳಿ-ಮುಂಡಗೋಡ-ಬನವಾಸಿ (ಚಂದ್ರಗುತ್ತಿಗೆ ವಿಸ್ತರಣೆ ಮಾಡಬಹುದು),  ಮುಂಡಗೋಡ-ಬನವಾಸಿ( ಪ್ರತಿ 1 ಅಥವಾ 2 ತಾಸಿಗೊಮ್ಮೆ), ಯಲ್ಲಾಪುರ-ಮುಂಡಗೋಡ-ಬನವಾಸಿ, ಮುಂಡಗೋಡ-ಬನವಾಸಿ-ಸೊರಬ, ಶಿರಸಿ-ಕ್ಯಾಸಲ್ ರಾಕ್ (ದಿನಕ್ಕೆ 1 ಅಥವಾ 2 ಬಸ್, ವಾರಾಂತ್ಯದಲ್ಲಿ ಹೆಚ್ಚುವರಿ ಬಸ್), ಯಲ್ಲಾಪುರದಿಂದ ಕ್ಯಾಸಲ್ ರಾಕ್ ಈ ಮಾರ್ಗದಲ್ಲಿ ಬಸ್ ಓಡಿಸಬಹುದಾಗಿದೆ. ತನ್ಮೂಲಕ ಸಾರಿಗೆ ಇಲಾಖೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ಜೊತೆಯಲ್ಲಿ ಹೇರಳ ಆದಾಯವನ್ನು ಗಳಿಸಿಕೊಳ್ಳಬಹುದಾಗಿದೆ.

             ಇವಿಷ್ಟು ನನ್ನ ಗಮನಕ್ಕೆ ಬಂದ ಮಾರ್ಗಸೂಚಿಯಾಗಿದೆ. ಇದು ಶಿರಸಿ ಹಾಗೂ ಸಿದ್ದಾಪುರವನ್ನು ಗಮನದಲ್ಲಿ ಇರಿಸಿಕೊಂಡು ಆಲೋಚಿಸಿದ ಮಾರ್ಗಗಳು. ಮುಂದಿನ ದಿನಗಳಲ್ಲಿ ಯಲ್ಲಾಪುರ, ದಾಂಡೇಲಿ, ಹಳಿಯಾಳ, ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಹಾಗೂ ಹೊನ್ನಾವರಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾರ್ಗಸೂಚಿ ನೀಡುವ ಕೆಲಸವನ್ನು ಮಾಡುತ್ತೇನೆ. ಸಾರಿಗೆ ಇಲಾಖೆಯ ಗಮನಕ್ಕೆ ಈ ಮಾರ್ಗಗಳ ಬಗ್ಗೆ ತಿಳಿಸಲಾಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸುತ್ತಾರೆ ಎನ್ನುವ ಆಶಾಭಾವ ನಮ್ಮದಾಗಿದೆ.  
           


Thursday, August 13, 2015

ಒಲವಿನ ಗೆಳೆಯ

ಗೆಳೆಯ ನಿನ್ನೆಯ ಬೆಡಗು ಬೆರಗು
ನನ್ನ ಮನದಲಿ ಕುಣಿದಿದೆ
ಆಸೆ ಬಣ್ಣದಿ ಪ್ರೇಮ ಕುಂಚವು
ಹೊಸತು ಚಿತ್ರವ ಬಿಡಿಸಿದೆ ||

ನಿನ್ನ ಎದೆಗೆ ಒರಗಿ ನಿಂತು
ಹೃದಯ ಬಡಿತ ಕೇಳಲೇ
ಕೈಯ ಒಳಗೆ ಕೈಯ ಇಟ್ಟು
ನಾಡಿ ಮಿಡಿತವ ಅರಿಯಲೇ ||

ನಾನು ನೀನು ಮನಸ ಕೊಟ್ಟು
ಜನುಮ ಜನುಮವೆ ಕಳೆದಿದೆ
ಕಾಲ ಕಾಲಕೆ ಪ್ರೀತಿ ಮಳೆಯು
ಧಮನಿ ಧಮನಿಯ ತೊಯ್ದಿದೆ ||

ನಿನ್ನ ಹಾದಿಯ ನಡುವೆ ನಾನು
ಹೆಜ್ಜೆ ಹೆಜ್ಜೆಗೂ ಇಣುಕಲೇ
ಕೈಯ ಹಿಡಿದು ಮನಸು ಮಿಡಿದು
ಬದುಕಿನುದ್ದಕೂ ಸಾಗಲೇ ||

*****

(ಈ ಕವಿತೆಯನ್ನು ಬರೆದಿರುವುದು 13-08-2015ರಂದು ಶಿರಸಿಯಲ್ಲಿ)


Tuesday, August 11, 2015

ಅಘನಾಶಿನಿ ಕಣಿವೆಯಲ್ಲಿ-25

              ಪೊಲೀಸರು ಹಾಗೂ ಫಾರೆಸ್ಟ್ ಅಧಿಕಾರಿಗಳಿಗೆ ಅದ್ಹೇಗೆ ತಿಳಿದಿತ್ತೋ? ಕಾಡಿನೊಳಕ್ಕೆ ಬಂದಿದ್ದ ಅವರು ಘಟನೆ ನಡೆದ ಸ್ಥಳವನ್ನು ಪರಿಶೀಲನೆ ಮಾಡಲು ಆರಂಭಿಸಿದ್ದರು. ಪ್ರದೀಪ ಹಾಗೂ ತಂಡವನ್ನು ಕಂಡೊಡನೆಯೇ ಪರಿಶೀಲಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ `ಓಹೋ.. ನೀವೇನೋ ಪ್ರದೀಪ್.. ಬನ್ನಿ.. ನಿಮ್ಮನ್ನ ವಿಚಾರಣೆ ಮಾಡಬೇಕಿದೆ..' ಎಂದು ಕರೆದೊಯ್ದ. ಗಂಟೆಗಟ್ಟಲೆ ಕಾಲ ಮಾತುಕತೆ ನಡೆಯಿತು. ಅದೇನು ಮಾತನಾಡಿಕೊಂಡರೋ ಗೊತ್ತಾಗಲಿಲ್ಲ. ಪ್ರದೀಪ ಏನೋ ಹೇಳುತ್ತಿದ್ದ, ಅಧಿಕಾರಿ ಇನ್ನೇನನ್ನೋ ಬರೆದುಕೊಳ್ಳುತ್ತಿದ್ದ. ನಡು ನಡುವೆ ಪೊಲೀಸ್ ಅಧಿಕಾರಿ ಬೆವರು ಒರೆಸಿಕೊಳ್ಳುತ್ತಿದ್ದುದೂ ತಿಳಿಯಿತು. ವಿಷ್ಣು ಮೊದಲಿನಿಂದಲೂ ಪ್ರದೀಪನ ಮೇಲೆ ಕಣ್ಣಿಟ್ಟಿದ್ದ. ಪ್ರದೀಪ ಸಾಮಾನ್ಯದವನೇನಲ್ಲ. ಈತ ತಮಗೆಲ್ಲರಿಗೂ ಏನನ್ನೋ ಮುಚ್ಚಿಟ್ಟಿದ್ದಾನೆ ಎನ್ನುವುದು ವಿಷ್ಣುವಿಗೆ ಖಾತರಿಯಾಗಿತ್ತು. ಇದೀಗ ಪ್ರದೀಪ ಪೊಲೀಸ್ ಅಧಿಕಾರಿಯ ಬಳಿ ಮಾತನಾಡುತ್ತಿರುವುದನ್ನು ನೋಡಿದಾಗ ವಿಷಯ ಪಕ್ಕಾ ಆಯಿತು.
             ಪ್ರದೀಪ ಪೊಲೀಸ್ ಅಧಿಕಾರಿಗೆ ಏನು ಏಳಿದನೋ ಗೊತ್ತಾಗಲಿಲ್ಲ. ಪ್ರದೀಪನ ಅಣತಿಯಂತೆ ಚಕಚಕನೆ ಕಾರ್ಯಗಳು ನಡೆಯುತ್ತಿದ್ದವು. ವಿನಾಯಕ ಸ್ವಲ್ಪ ದೂರದಲ್ಲಿದ್ದ ದಡೆಯ ಬಳಿ ಹೋಗಿ, ಫಾರೆಸ್ಟ್ ಅಧಿಕಾರಿಗೆ ಎಲ್ಲವನ್ನೂ ತೋರಿಸಿದ್ದ. ಫಾರೆಸ್ಟ್ ಅಧಿಕಾರಿ ಕೊಯ್ಯಲಾಗಿದ್ದ ಎಲ್ಲಾ ಮರಗಳನ್ನೂ, ತುಂಡುಗಳನ್ನೂ ಲೆಕ್ಕಹಾಕಿ, ಯಾವ ಜಾತಿಯ ಮರ, ಎಷ್ಟು ತುಂಡುಗಳಿವೆ ಎನ್ನುವುದನ್ನೆಲ್ಲ ತನ್ನ ಲೆಕ್ಖದ ಪಟ್ಟಿಯಲ್ಲಿ ಬರೆದಿಟ್ಟುಕೊಂಡು ಮಹಜರು ನಮೂದಿಸಿಕೊಳ್ಳುತ್ತಿದ್ದ. ಸಾಕಷ್ಟು ಬೆಲೆ ಬಾಳುವ ಮರಗಳನ್ನೇ ಕಡಿದು ಅವುಗಳಿಂದ ವಿವಿಧ ಗಾತ್ರದ ನಾಟಾಗಳನ್ನು ತಯಾರಿಸಲಾಗುತ್ತಿತ್ತು. ದೊಡ್ಡ ದೊಡ್ಡ ತೊಲೆಗಳು, ತುಂಡುಗಳನ್ನು ಅಚ್ಚುಕಟ್ಟಾಗಿ ತಯಾರು ಮಾಡಿ ಪೇರಿಸಿ ಇಡಲಾಗಿತ್ತು. ಅಲ್ಲಿ ಪೇರಿಸಿ ಇಡಲಾಗಿದ್ದ ಮರದ ತುಂಡುಗಳನ್ನು ಗಮನಿಸಿದರೆ ಅಜಮಾಸು ಒಂದು ವಾರಕ್ಕೂ ಅಧಿಕ ಕಾಲದಿಂದ ಮರಕ್ಕೆ ಕೊಡಲಿ ಹಾಕುವ ಕಾರ್ಯ ನಿರಂತರವಾಗಿ ಸಾಗಿರುವುದು ಸ್ಪಷ್ಟವಾಗುತ್ತಿತ್ತು.
            ಫಾರೆಸ್ಟ್ ಆಫೀಸರ್ ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿದ್ದರು. ಫಾರೆಸ್ಟ್ ಆಫೀಸರ್ ತನ್ನ ವ್ಯಾಪ್ತಿಯಲ್ಲಿ ಇಷ್ಟು ರಾಜಾರೋಷವಾಗಿ ಮರಗಳ್ಳತನ ನಡೆಯುತ್ತಿದ್ದರೂ ಸುಮ್ಮನಿದ್ದಾನೆ ಎಂದು ಹಿರಿಯ ಅಧಿಕಾರಿಗಳಿಂದ ಆಗಲೇ ಮೂರ್ನಾಲ್ಕು ಸಾರಿ ಬೈಗುಳಗಳನ್ನು ಎದುರಿಸಿಯಾಗಿತ್ತು. ಆತ ಚಡಪಡಿಸುತ್ತಿದ್ದ. ಮನಸ್ಸಿನಲ್ಲಿಯೇ ಹಿಡಿಶಾಪವನ್ನು ಹಾಕುತ್ತಿದ್ದ.
           ಪೊಲೀಸರಿಗೆ ಮಾತ್ರ ಪ್ರದೀಪನಿಂದ ಹೊಡೆತ ತಿಂದು ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಹೇಗೆ ಪತ್ತೆ ಹಚ್ಚುವುದಪ್ಪಾ ದೇವರೆ ಎನ್ನುವ ಚಿಂತೆ ಕಾಡುತ್ತಿತ್ತು. ಕೂಡಲೇ ಸುತ್ತಮುತ್ತಲ ಊರುಗಳಿಗೆ ಪೊಲೀಸರನ್ನು ಕಳುಹಿಸಿ ಯಾರಾದರೂ ಅಕಾಲಿಕವಾಗಿ ಮರಣ ಹೊಂದಿದ್ದಾರೆಯೋ ಹೇಗೆ ಎನ್ನುವುದನ್ನು ತಿಳಿದುಕೊಂಡು ಬರುವಂತೆ ಹೇಳಲಾಯಿತು. ದಂಟಕಲ್ಲಿನಿಂದ ಸುತ್ತಮುತ್ತ ಇದ್ದ ಎಲ್ಲ ಊರುಗಳಿಗೂ ತಲಾ ಒಬ್ಬರಂತೆ ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ ತೆರಳಿದರು. ಪ್ರದೀಪ ಈ ಎಲ್ಲ ಕಾರ್ಯಗಳೂ ನಡೆದ ನಂತರ ನಿರಾಳನಾದಂತೆ ಅನ್ನಿಸಿತು. ವಿಕ್ರಮ ಹಾಗೂ ವಿನಾಯಕ ಪ್ರದೀಪನ ಕಾರ್ಯವೈಖರಿಯ ಕುರಿತು ಅನುಮಾನ ಬಂದು ಕೇಳಿದಾಗ `ಮಂತ್ರಿಗಳ ಹೆಸರನ್ನು ಹೇಳಿ ಕೆಲಸ ಮಾಡಿಸಿದೆ ನೋಡಿ..' ಎಂದು ಮೊದಲೇ ಹೇಳಿದ್ದ ಮಾತನ್ನು ಪುನರುಚ್ಚಾರ ಮಾಡಿದ. ಆದರೆ ಈ ಸಾರಿ ಪ್ರದೀಪನ ಮಾತನ್ನು ಯಾರೂ ನಂಬಲು ತಯಾರಿರಲಿಲ್ಲ.

*****

                `ಏನ್ರೀ.. ಏನ್ ಯಡವಟ್ಟು ಮಾಡಿಕೊಂಡಿರಿ? ಇದೆಲ್ಲಾ ಹೇಗಾಯ್ತು. ಯಾವಾಗಲೂ ನಾವು ಕೈ ಹಾಕಿದ ಕೆಲಸದಲ್ಲಿ ಸೋಲು ಬಂದಿರಲಿಲ್ಲ. ಆದರೆ ಈ ದಿನ ನೀವೆಲ್ಲ ಸೋತು ಬಂದಿದ್ದೀರಿ ಎಂದರೆ ಏನು? ನಮ್ಮ ತಂಡದ ಒಬ್ಬ ವ್ಯಕ್ತಿ ಸಾಯೋದು ಅಂದರೇನು? ಮಾನ ಮರ್ಯಾದೆ ಇಲ್ಲವಾ ನಿಮಗೆ.. ಏನಿದೆಲ್ಲಾ..' ಎಂದು ಆ ನಾಯಕ ಗದರುತ್ತಿದ್ದರೆ ಆತನ ಮುಂದೆ ನಿಂತಿದ್ದ ನಾಲ್ಕಕ್ಕೂ ಹೆಚ್ಚಿನ ಜನ ತಲೆ ತಗ್ಗಿಸಿ ಮಾತು ಕೇಳುತ್ತಿದ್ದರು. ತಪ್ಪಾಗಿದ್ದಂತೂ ನಿಜ. ಮರಗಳ್ಳತನ ಮಾಡುವಾಗ ಯಾರೋ ಒಂದಷ್ಟು ಜನರು ಪೋಟೋ ಹೊಡೆದುಕೊಳ್ಳತೊಡಗಿದ್ದರು. ಅವರ ಮೇಲೆ ದಾಳಿ ಮಾಡಿದರೆ ಪ್ರತಿ ದಾಳಿ ಕೂಡ ನಡೆಯಿತು. ಅದರಲ್ಲಿ ಒಬ್ಬಾತ ಅಸುನೀಗಿದ್ದ. ಅಷ್ಟೇ ಅಲ್ಲದೇ ಇನ್ನೊಬ್ಬನ ಮೇಲೆ ನಾಯಿ ದಾಳಿ ಮಾಡಿ ಕಾಲಿಗೆ ಗಾಯ ಮಾಡಿತ್ತು. ಆ ಭಾಗದ ಕಾಳದಂಧೆಯಲ್ಲಿ ಒಮ್ಮೆಯೂ ಇಂತಹ ಸೋಲು ಕಾಳದಂದೆ ಮಾಡುವವರಿಗೆ ಎದುರಾಗಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಅಂತಹ ಸೋಲು ಎದುರಾಗಿತ್ತು. ನಾಯಕ ಚಡಪಡಿಸಿದ್ದ.
               ಇಷ್ಟು ದಿನ ಹೆದರಿಕೊಂಡಂತಿದ್ದ ಜನರ ನಡುವೆ ಇಂದು ಯಾರೋ ಒಂದಿಷ್ಟು ಜನ ಬಂದು ತಿರುಗಿ ನಿಂತರು, ಪ್ರತಿದಾಳಿ ನಡೆಸಿದರು ಎನ್ನುವುದು ಸಿಟ್ಟಿಗೂ ಕಾರಣವಾಗಿತ್ತು. ಭಯವನ್ನು ಹುಟ್ಟಿಸುವ ಮೂಲಕ ಆ ಭಾಗದಲ್ಲಿ ಮರಗಳ್ಳರು ಹಾಗೂ ಸೂರ್ಯ ಶಿಖಾರಿ ತಂಡ ಪ್ರಖ್ಯಾತಿ ಗಳಿಸಿತ್ತು. ಆದರೆ ಇದ್ದಕ್ಕಿದ್ದಂತೆ ಪ್ರತಿದಾಳಿ ನಡೆದು ಭಯವೇ ಹೋದಂತಹ ಅನುಭವ. ಕೂಡಲೇ ಇದನ್ನು ತಡೆಯಬೇಕು ಎಂದುಕೊಂಡ ಗುಂಪಿನ ನಾಯಕ.
              `ಯಾರು ನಿಮ್ಮ ಮೇಲೆ ದಾಳಿ ಮಾಡಿದ್ದು?' ಸಿಟ್ಟಿನಿಂದ ಕೂಗಿದ್ದ ನಾಯಕ
              `ಗೊತ್ತಿಲ್ಲ. ನಾಲ್ಕೋ ಐದೋ ಜನ ಇದ್ದರು. ಒಬ್ಬಳು ಹುಡುಗಿ ಇದ್ದಳು..'
              `ಹುಡುಗಿ ಇದ್ದಳಾ? ಯಾರು ಅವರು ಪತ್ತೆ ಮಾಡಿ..'
              `ಗೊತ್ತಾಗಲಿಲ್ಲ.. ನಮ್ಮ ಕಡೆಯವರಲ್ಲ ಅವರು.. ಯಾರೋ ಹೊಸಬರು. ಜೊತೆಗೆ ನಾಯಿ ಇತ್ತು. ನಮ್ಮ ಮೇಲೆ ಮರುದಾಳಿ ಮಾಡಿದವನು ಸಾಮಾನ್ಯ ವ್ಯಕ್ತಿಯಲ್ಲ. ಹೊಡೆದ ಒಂದೇ ಹೊಡೆತಕ್ಕೆ ನಮ್ಮವ ಸತ್ತು ಹೋದ. ಅಷ್ಟೇ ಅಲ್ಲ ಆತನ ಹಿಂದೆ ಬರುತ್ತಿದ್ದ ನಮ್ಮನ್ನೂ ಬೆನ್ನಟ್ಟಿ ಬಂದ. ನಾವು ವಾಪಾಸು ಓಡಿ ಬಂದೆವು..'
             `ನಾಚಿಕೆ ಆಗೋದಿಲ್ಲವಾ ನಿಮಗೆ.. ಸೋತು ಬಂದಿದ್ದೀರಿ ಅಂತ ಹೇಳೋಕೆ. ಇಷ್ಟೆಲ್ಲ ಜನ ಇದ್ದೀರಿ ನೀವು. ನಿಮಗೆ ಬೇಕಾದ ಆಯುಧ ಕೂಡ ಕೊಟ್ಟಿದ್ದೆ. ಸರಿಯಾಗಿ ಇಕ್ಕಬೇಕಿತ್ತು ಅವನಿಗೆ.'
             `ಆಗಲಿಲ್ಲ ಬಾಸ್.. ಅದೇ ವೇಳೆ ನಾಯಿ ಕೂಡ ದಾಳಿ ಮಾಡಿತಲ್ಲ.. ನನಗೆ ಕಾಲು ಊರಲು ಆಗುತ್ತಿಲ್ಲ.. ನಾನೇ ಎಲ್ಲರನ್ನೂ ಹೇಗೋ ವಾಪಾಸು ಕರೆತಂದೆ. ಆಮೇಲೆ ಬಹಳ ಹೊತ್ತಿನ ನಂತರ ಸತ್ತು ಹೋಗಿದ್ದ ನಮ್ಮವನ ದೇಹವನ್ನು ಹೊತ್ತು ತಂದು ಹಾಕಿಕೊಂಡು ಬಂದಿದ್ದೇವೆ..'
             `ಥೂ.. ಮತ್ತೆ ಮತ್ತೆ ತಪ್ಪನ್ನೇ ಮಾಡಿದ್ದೀರಲ್ಲೋ.. ಆ ದೇಹವನ್ನು ಎಲ್ಲಾದರೂ ಮಣ್ಣು ಮಾಡಿ. ಅಥವಾ ಕಾಣೆ ಮಾಡಿ. ನೀವು ಹೊತ್ತುಕೊಂಡು ಬಂದ ಮಾರ್ಗದ ಜಾಡು ಹಿಡಿದು ಬಂದರೆ ಏನು ಮಾಡ್ತೀರಿ? ಎಲ್ಲಾ ಕೆಲಸನೂ ತಪ್ಪಾಗಿಯೇ ಮಾಡಿದ್ದೀರಿ.. ಏನಾಗಿದೆ ನಿಮಗೆ? ಈ ಸಾರಿ ಬಚಾವಾಗೋದು ಕಷ್ಟವಿದೆಯಲ್ಲ. ಇನ್ನು ಮೇಲೆ ಪೊಲೀಸರೂ ಚುರುಕಾಗುತ್ತಾರೆ. ಮೊದಲಿನ ಹಾಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟು ಕೆಲಸ ಮಾಡಿಸಲು ಆಗೋದಿಲ್ಲ. ಎಲ್ಲಾ ಕೆಲಸ ಎಡವಟ್ಟು ಮಾಡಿದಿರಲ್ಲ..' ಎಂದು ಬಾಸ್ ಬಯ್ಯುತ್ತಲೇ ಇದ್ದ.
             ಬಹಳ ಹೊತ್ತಿನ ನಂತರ ಬಯ್ಯುವುದನ್ನು ನಿಲ್ಲಿಸಿದ ಆತ ಹಲವು ಸೂಚನೆಗಳನ್ನು ನೀಡಿದ. ಧಾಳಿ ಮಾಡಿದ ತಂಡವನ್ನು ಹುಡುಕುವುದು, ನಾಯಿಯ ದಾಳಿಗೆ ಗಾಯಗೊಂಡಿದ್ದವನು ಹೊರ ಜಗತ್ತಿನಲ್ಲಿ ಯಾರಾದರೂ ಕೇಳಿದರೆ ಏನು ಹೇಳುವುದು ಎಂಬುದನ್ನೂ ತಿಳಿಸಿದ್ದ. ಸತ್ತವನನ್ನು ಅಘನಾಶಿನಿ ನದಿಯಲ್ಲಿ ತೇಲಿಸಿ ಬಿಡಿ. ತೇಲಿಸುವ ಮುನ್ನ ಮುಖವನ್ನು ಸಂಪೂರ್ಣ ಜಜ್ಜಿ ಹಾಕಿ. ಗುರುತು ಸಿಗದಂತೆ ಮಾಡಿ ಎಂದೂ ಹೇಳುವುದನ್ನು ಮರೆಯಲಿಲ್ಲ. ಆ ನಾಯಕ ಹೇಳಿದಂತೆ ಮುಂದಿನ ಎಲ್ಲ ಕಾರ್ಯಗಳನ್ನೂ ಚಕಚಕನೆ ನೆರವೇರಿಸಿತು ಆತನ ತಂಡ.

****

             `ವಿಕ್ರಂ. ಮೊದಲು ನಾವು ರಾಮು ಯಾರ ಮೇಲೆ ದಾಳಿ ಮಾಡಿತೋ ಆತನನ್ನು ಹುಡುಕೋಣ..' ಎಂದ ಪ್ರದೀಪ.
             `ಹೇಗೆ ಸಾಧ್ಯ?' ಎಂದ ವಿಕ್ರಂ
              `ರಾಮು ಯಾರ ಮೇಲೆ ದಾಳಿ ಮಾಡಿತ್ತೋ ಆತ ಸುತ್ತಮುತ್ತಲ ಊರಿನವನಿರಬೇಕು. ಕಾಲಿಗೆ ಯಾರಿಗೆ ಗಾಯವಾಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಕಾಲಿಗೆ ಗಾಯವಾಗಿರುವವನೇ ರಾಮುವಿನ ದಾಳೀಗೆ ಒಳಗಾಗಿರುವ ವ್ಯಕ್ತಿ. ಹೀಗೆ ಮಾಡಿದರೆ ಹುಡುಕಬಹುದು ನೋಡು. ಸುತ್ತಮುತ್ತಲ ಊರುಗಳಲ್ಲಿ ನಾಳೆಯಿಂದಲೇ ನಾವು ಆರೋಗ್ಯ ಕಾರ್ಯಕರ್ತರು ಎನ್ನುವ ಸೊಗಿನಲ್ಲಿ ಹೋಗೋಣ. ಖಾಯಿಲೆ ಬಗ್ಗೆ ಮಾಹಿತಿ ಪಡೆದುಕೊಳ್ಳು ನಾಟಕವನ್ನು ಆಡೋಣ. ಆಗ ನಮಗೆ ಗಾಯಗೊಂಡವನ ಸುಳಿವು ಸಿಕ್ಕರೂ ಸಿಗಬಹುದು. ಹೇಗೂ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ. ಅವರು ಬೇರೆಯ ಮಾರ್ಗದಲ್ಲಿ ಪತ್ತೆ ಹಚ್ಚುತ್ತಾರೆ..' ಎಂದ ಪ್ರದೀಪ.
            `ಇದು ಸಕ್ಸಸ್ ಆಗ್ತದೆ ಅಂತೀಯಾ? ಈಗಾಗಲೇ ಕಾಡಿನಲ್ಲಿ ನಡೆದ ದಾಳಿ, ಒಬ್ಬ ಸತ್ತಿರುವುದು ಇವೆಲ್ಲ ಸುತ್ತಮುತ್ತಲೂ ಹಬ್ಬಿರುತ್ತದೆ. ಅಂತದ್ದರಲ್ಲಿ ದಾಳಿಗೆ ಒಳಗಾದವರು ನಮ್ಮ ಕೈಗೆ ಸಿಗುತ್ತಾರೆ ಅಂತೀಯಾ? ಸಿಕ್ಕರೂ ಅವರು ನಿಜ ಹೇಳಬೇಕಲ್ಲ..' ವಿಕ್ರಂ ಸಂದೇಹವನ್ನು ತೋಡಿಕೊಂಡ.
            `ನೀ ಹೇಳೋದು ನಿಜ. ಆದರೆ ಒಂದು ಕಲ್ಲು ಹೊಡೆಯೋಣ. ಸಿಕ್ಕರೆ ಒಂದು ಕಾಯಿ. ಇಲ್ಲವಾದರೆ ತೊಂದರೆ ಇಲ್ಲ. ಸಿಕ್ಕಿದರು ಅಂತಾದರೆ ನಿಜ ಹೇಳದಿದ್ದರೆ ತೊಂದರೆಯೇನಿಲ್ಲ. ಆದರೆ ಆತನ ಮೇಲೆ ಕಣ್ಣು ಇಡಬಹುದು ಅಲ್ಲವಾ. ಕಣ್ಣಿಟ್ಟರೆ ಸೂರ್ಯಶಿಖಾರಿ ತಂಡವನ್ನು ಪತ್ತೆ ಹಚ್ಚ ಬಹುದೇನೋ..' ಎಂದು ಪ್ರದೀಪ ಹೇಳಿದ್ದ. ಪ್ರದೀಪನ ಮಾತಿನ ವೈಖರಿಯಿಂದ ವಿಕ್ರಮನ ಆದಿಯಾಗಿ ಎಲ್ಲರೂ ಅಚ್ಚರಿ ಹೊಂದಿದ್ದರು.
            `ಇನ್ನೊಂದು ವಿಷಯ. ಖಂಡಿತ ನಮ್ಮಿಂದ ದಾಳಿಗೆ ಒಳಗಾದವರು ಸುಮ್ಮನೆ ಕೂರುವುದಿಲ್ಲ. ಅವರ ಮೇಲೆ ಯಾರು ದಾಳಿ ಮಾಡಿರಬಹುದು ಎನ್ನುವುದನ್ನು ತಲಾಶ್ ಮಾಡಲು ಆರಂಭಿಸುತ್ತಾರೆ. ಅವರ ಕಣ್ಣು ಇವತ್ತಲ್ಲಾ ನಾಳೆ ನಮ್ಮ ಮೇಲೆ ಬಿದ್ದೇ ಬೀಳುತ್ತದೆ. ಆದ್ದರಿಂದ ಎಲ್ಲರೂ ಹುಷಾರಾಗಿರ್ರಪ್ಪಾ..' ಎಂದು ಪ್ರದೀಪ ಹೇಳುವುದನ್ನು ಮರೆಯಲಿಲ್ಲ. ಪ್ರದೀಪನ ಆಲೋಚನಾ ಸರಣಿಗೆ ಎಲ್ಲರೂ ತಲೆದೂಗಿದರು. ಮುಂದೆ ಹುಷಾರಾಗಿರುತ್ತೇವೆ ಎಂದೂ ಹೇಳಿದರು. ಅಘನಾಶಿನಿ ಕಣಿವೆ ಒಮ್ಮೆ ಬೆಚ್ಚಿ ಬಿದ್ದಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ದುರಂತಗಳಿಗೆ, ನೋವುಗಳಿಗೆ, ಜನಸಾಮಾನ್ಯರೂ ನಡುಗಿ ಹೋಗುವಂತಹ ತಿರುವುಗಳಿಗೆ ಮರಗಳ್ಳರ ಮೇಲಿನ ದಾಳಿ ಕಾರಣವಾಗಲಿತ್ತು. ಪ್ರದೀಪ ಇವೆಲ್ಲವನ್ನೂ ಅಂದಾಜು ಮಾಡಿದ್ದ.

(ಮುಂದುವರಿಯುತ್ತದೆ)

Sunday, August 9, 2015

ಕಡಲುಕ್ಕಿದಾಗ

ಪ್ರೀತಿ ನೀಡುವ ಕಡಲು
ಉಕ್ಕಿ ಬಂದಾಗ
ಹಡಗು ಒಡೆಯಿತಲ್ಲ
ಬಾಳು ಮರುಗಿತಲ್ಲ ||

ಜಲದ ರಾಶಿಯ ಕಡಲು
ಮೈದುಂಬಿ ಬಂದಾಗ,
ಬದುಕು ಮುರಿಯಿತಲ್ಲ
ಸಾವೇ ಬಂದಿತಲ್ಲ ||

ಶಕ್ತಿ ನೀಡುವ ಕಡಲು
ರೌದ್ರವಾದಾಗ,
ಮನೆಯೇ ತೊಳೆಯಿತಲ್ಲ
ನೋವು ತುಂಬಿತಲ್ಲ ||

ಭೂಮಿ ತಣಿಸುವ ಕಡಲು
ಸಿಡಿಲಿನಂತಾಗಿ
ಮನಸ ಇರಿಯಿತಲ್ಲ
ಜೀವ ನುಂಗಿತಲ್ಲ ||

ರಕ್ಷೆ ನೀಡುವ ಕಡಲು
ಶಿಕ್ಷೆ ಕೊಟ್ಟಾಗ
ಜೀವ ಅರಿಯದಲ್ಲ
ಎಲ್ಲಾ ಮುಗಿಯಿತಲ್ಲ ||

****

(ಈ ಕವಿತೆಯನ್ನು ಬರೆದಿರುವುದು 03-04-2006ರಂದು ದಂಟಕಲ್ಲಿನಲ್ಲಿ)