(ಜಿಮ್ ಕಾರ್ಬೆಟ್ ತಾನೇ ಹೊಡೆದ ಹುಲಿಯೊಂದಿಗೆ) |
`ತಮ್ಮಂದಿಕ್ಕಳಾ.. ಅಡಿಕೆ ಬೆಳೆಗಾರ ಆಕ್ಯಂಡು ನೀವು ಕವಳ ಹಾಕ್ತ್ನಿಲ್ಲೆ ಅಂದ್ರೆ ಬೆಳೆಗಾರರಿಗೆ ಮೋಸ ಮಾಡಿದಾಂಗೆ ಆಗ್ತಾ.. ನಾವು ಬೆಳೆದಿದ್ದು ನಾವೇ ತಿನ್ನದಿಂದ್ರೆ ಹೆಂಗೆ..? ಕವಳ ಹಾಕಡಿ, ಭಂಗಿ ಪಾನಕ ಕುಡಿಯಡಿ.. ನಿಂಗವ್ವು ಈಗಿನವ್ವು ಇಂತದ್ದು ಮಾಡದೇ ಅದೆಂತಾ ನಮನಿ ಬಾಳ್ವೆ ಮಾಡತ್ರೋ..' ಎಂದು ಛೇಡಿಸಿದರು. ಎಲ್ಲರೂ ನಾಚಿಕೆಯಿಂದ ತಲೆತಗ್ಗಿಸಿದರು
`ಎಲ್ಲಿ ತಂಕಾ ಹೇಳಿದ್ನಾ..' ಎಂದು ಕೇಳಿದಾಗ `ಕೊಟ್ಟಿಗೆಯಲ್ಲಿ ಹುಲಿ ಅಬ್ಬರ'ದ ಬಗ್ಗೆ ನೆನಪು ಮಾಡಿದ ವಿಕ್ರಮ.
`ಕೊಟ್ಗೇಲಿ ಯನ್ನ ಕೈಯಲ್ಲಿದ್ದ ಲಾಟೀನಿನ ಬೆಳಕು ಆಮೇಲೆ ಬ್ಯಾಟರಿ ಲೈಟಿಗೆ ಎಂತದ್ದೂ ಸರಿ ಕಾಣ್ತಾ ಇತ್ತಿಲ್ಲೆ. ಮಸುಬು ಮಸುಬಾಗಿ ಕಾಣ್ತಾ ಇತ್ತು. ಹುಲಿಯದ್ದಾ ಬೇರೆ ಎಂತ್ರದ್ದೋ ಗೊತ್ತಾಜಿಲ್ಲೆ.. ಗ್ವರ್ ಗುಡದೊಂದು ಕೇಳತಿತ್ತು. ಸದ್ದು ಬಂದ್ ಬದಿಗೆ ಬಂದೂಕು ಗುರಿ ಇಟ್ಟು ಢಂ.. ಅನ್ನಿಸಿದಿ.. ಬಂದೂಕಿನಿಂದ ಗುಂಡು ಹಾರುವಾಗ ಒಂದ್ ಸಾರಿ ಬಂದೂಕು ಹಿಂದೆ ವದ್ಚು ನೋಡು.. ಯನ್ನ ಭುಜ ನಾಕ್ ದಿನ ಕೆಂಪಗೆ ಆಕ್ಯಂಡು ಇತ್ತು..ಇಡೀ ಅಘನಾಶಿನಿ ಕಣಿವೆಯಲ್ಲಿ ಅದರ ಶಬ್ದ ಗುಡ್ಡದಿಂದ ಗುಡ್ಡಕ್ಕೆ ಬಡಿದು ಪ್ರತಿಫಲನ ಆಗುತ್ತಿತ್ತು.. ಯಾರಾದ್ರೂ ಶಬ್ದ ಕೇಳಿ ಹೆದರ್ಕಂಡಿರ್ಲಕ್ಕೂ ಸಾಕು.. ಗುಂಡು ಹೊಡೆ ಮೇಲೆ ಎಂತದೋ ಓಡಿ ಹೋದಾಂಗೆ ಅನುಭವ ಆತು. ಹೆಂಗಿದ್ರೂ ಹುಲಿ ಬಿದ್ದಿರ್ತು ತಗಾ.. ಅಂದ್ಕಂಡಿ.. ಲಾಟೀನ್ ಬೆಳಕು ದೊಡ್ಡದು ಮಾಡಿ ನೋಡಿದ್ರೆ ಕೊಟಗೇಲಿ ಎಂತದೂ ಕಂಡಿದ್ದಿಲ್ಲೆ.. ಸುಮಾರ್ ಹೊತ್ತು ಹುಡುಕಿದಿ.. ಊಹೂಂ.. ಕತ್ಲೆಲ್ಲಿ ಯಂತದೂ ಕಂಡಿದ್ದಿಲ್ಲೆ..ಸಾಯ್ಲಿ ಇದು ಹೇಳಿ ಬೈಕ್ಯಂಡು ಆವತ್ತು ಮನಗಿ ಬೆಳಗು ಹಾಯಿಸಿದಿ ನೋಡು..' ಎಂದ ಗಪ್ಪಜ್ಜ ..
ಎಲ್ಲರಿಗೂ ಕುತೂಹಲ ಇಮ್ಮಡಿಸಿತ್ತು... ಜಿಮ್ ಕಾರ್ಬೆಟ್ಟನ ಹುಲಿ ಕೊಮದ ಕಥೆಗಳನ್ನು ಓದಿ ತಿಳಿದವರಿಗೆ ಎದುರಿಗೆ ಅಜ್ಜ ಹೇಳುತ್ತಿದ್ದ ಕಥೆ ಮೈಯಲ್ಲಿ ರೂಮಾಂಚನ ಹುಟ್ಟು ಹಾಕಿತ್ತು `ಮುಂದೆಂತಾ ಆತಾ..? ಹುಲಿ ಬಿದ್ದಿತ್ತಾ..?.. ನೀ ಬಾಲ ಕಿತ್ಕಂಡು ಹೋಗಿ ಪಟೇಲಂಗೆ ಕೊಟ್ಯಾ..?' ಗಡಬಡೆಯಿಂದ ಕೇಳಿದ ವಿಕ್ರಮ.
`ತಡ್ಯಾ ತಮಾ.. ಸಾವಕಾಶ ಹೇಳ್ತಿ.. ಯಂಗೆ ವಯಸ್ಸಾತು.. ಇಷ್ಟೆಲ್ಲ ಜೋರು ಹೇಳಲಾಗ್ತಿಲ್ಲೆ.. ಎಂದು ಮತ್ತೊಂದು ಕವಳವನ್ನು ಹೊಸೆಯತೊಡಗಿದರು.
`ಬೆಳಿಗ್ಗೆ ಎಲ್ಲಾ ಏಳದಕ್ಕಿಂತ ಮುಂಚೆ ಎದ್ದು ನೋಡಿದ್ರೆ ಕ್ವಟ್ಗೆಲಲ್ಲ.. ಅದರ ಸುತ್ತಮುತ್ತಲೆಲ್ಲೂ ಹುಲಿ ಬಿದ್ದ ಕುರುಹು ಇಲ್ಲೆ. ಆ ಗುಂಡು ಹೊಡೆದಿದ್ದು ಎಂತಾ ಆಗಿಕ್ಕು ಹೇಳಿ ಹುಡುಕಾಡದಿ.. ಕ್ವಟ್ಗೆ ಕಂಭಕ್ಕೆ ತಾಗಿತ್ತು. ಆದರೆ ಇಡೀ ಕೊಟ್ಗೆ ತುಂಬಾ ನೆತ್ತರು ಹರಕಂಡು ಇತ್ತು. ಅರೇ ಹುಲಿಗೆ ಗುಂಡು ತಾಗಿಕ್ಕಾ.. ಅಂದ್ಕಂಡ್ರೆ ಒಂದು ಹಂಡಾ ಪಟ್ಟೆ ದನೀಕರ ರಾತ್ರಿ ಹುಲಿ ಬಾಯಿಗೆ ಸಿಕ್ಕು ಸತ್ತುಬಿದ್ದಕಂಡು ಇತ್ತು. ರಾತ್ರಿ ಹುಲಿ ಆ ದನಿಕರದ ಕುತ್ಗಿಗೆ ಬಾಯಿ ಹಾಕಿತ್ತು.. ಅದು ಕಚ್ಚಿದ ಜಾಗದಿಂದ ನೆತ್ತರು ರಾಶಿ ಹರಿದು ಹೋಗಿತ್ತು.. ಕರ ಸತ್ತಬಿದ್ದಿತ್ತು.. ಓಹೋ ರಾತ್ರಿ ಬಂದ ಗ್ವರ ಗ್ವರ ಶಬ್ದ ಇದೇಯಾ ಅಂದಕಂಡಿ..ಥೋ.. ಯಮ್ಮನೆ ಕೊಟ್ಗಿಗೆ ಬಂದು ದನಿಕರ ಕೊಂದಿದ್ದಲಾ ಹುಲಿ.. ಇದರ ಬಿಟ್ರೆ ಸುಖ ಇಲ್ಲೆ ಅಂದ್ಕಂಡು ಕೋವಿ ಎತ್ಗಂಡು ಹೊಂಟಿ.. ಎಲ್ಲೇ ಹೋದ್ರೂ ಆ ಹುಲಿ ಕೊಲ್ಲದೇಯಾ.. ಅಷ್ಟರ ಮೇಲೆ ಆ ಮನಿಗೆ ಬರ್ತಿ ಹೇಳಿ ಅಪ್ಪಯ್ಯಂಗೆ ಹೇಳಿ ಅಂವ ಉತ್ರ ಕೊಡದ್ರೋಳಗೆ ಹೊರಟಿದ್ದಿ.. ಆಸ್ರಿಗೆನೂ ಕುಡದಿದ್ನಿಲ್ಯಾ ಆವತ್ತು ಮಾರಾಯಾ..' ಎಂದ ಗಪ್ಪಜ್ಜ..
`ಹುಲಿ ಸಾಮಾನ್ಯವಾಗಿ ಹಿಂಗೇ ಹೋಗಿಕ್ಕು ಹೇಳಿ ಜಾಡು ಹಿಡದು ಹೊಂಟಿ. ಅದು ಮುತ್ಮುರ್ಡ್ ಬದಿಗೆ ಹೋಗಿತ್ತು. ಆನೂ ಅದೇ ಹಾದಿ ಕೂಡದಿ.. ಮುತ್ಮೂರ್ಡ್ ಹತ್ರಕ್ಕೆ ಹೋಪಕಿದ್ರೆ ಯನ್ನ, ಸುಬ್ಬಜ್ಜ ಇದ್ನಲಾ.. ಅಂವ ಕಂಡ..ಎಂತದಾ ಗಪ್ಪತಿ.. ಕೋವಿ ಹಿಡಕಂಡು ಹೊಂಟಿದ್ದೆ.. ಯತ್ಲಾಗೆ ಹೊಂಟಿದ್ಯಾ..? ಎಂದ..
`ಆನು ಹುಲಿ ಸುದ್ದಿ ಹೇಳಿ ಹಿಂಗಿಂಗೆ ಅಂದಿ.. ಅಂವ ಹೌದಾ ಮಾರಾಯಾ.. ಮದ್ಯರಾತ್ರಿಯಪ್ಪಗೆ ಬಂದಿತ್ತಾ.. ಅದು ಬಾಳಗಾರ ದಿಕ್ಕಿಗೆ ಹೋದಾಂಗಾಜು ನೋಡು.. ಅಂದ.. ಆ ಇನ್ನೇನು ಹೊರಡವ್ವು ಹೇಳಿ ಇದ್ದಾಗ ಸುಬ್ಬಜ್ಜ ತಡಿಯಾ.. ಆನು ಬತ್ತಿ... ಅಲ್ಲಿಗೆ ಹೋಪನ.. ಆ ಹುಲಿಗೆ ಒಂದ್ ಗತಿ ಕಾಣಿಸದೇ ಇದ್ರೆ ನಮಗೆ ಉಳಿಗಾಲ ಇಲ್ಲೆ.. ಎಂದ ತನ್ನತ್ರ ಇದ್ದಿದ್ದ ಕೋವೀನು ತಗಂಡು ಬಂದ.. ಯಂಗಳ ಸವಾರಿ ಬಾಳಗಾರ ಬದಿಗೆ ಹೊಂಟ್ಚು.. ಅಲ್ಲಿಗೆ ಹೋಗಿ ಕೇಳದಾಗ ಬೆಳಗಿನ ಜಾವದಲ್ಲಿ ಹುಲಿ ಕೂಗಿದ್ದು ಕೇಳಿದ್ಯ ಅಂದ.. ಬಂದಳಿಕೆ ಬದಿಗೆ ಹೋಗಿಕ್ಕು ನೋಡು ಅಂದ.. ಬಂದಳಿಕೆಗೆ ಬಂದ್ರೆ ಅವರ ಮನೆಯಲ್ಲಿ ಒಂದ್ ದನ ಹಿದಡು ಎಳಕಂಡು ಹೋಗಿತ್ತಡಾ ಹುಲಿ.. ಯಂಗಂತೂ ಪಿತ್ಥ ನೆತ್ತಿಗೆ ಏರಿದಂತಾತು.. ಸಿಟ್ಟು ಸಿಕ್ಕಾಪಟ್ಟೆ ಬಂತು.. ಸುಬ್ರಾಯಾ.. ಇವತ್ತು ಈ ಹುಲಿ ಬಿಡಲಾಗ್ದಾ.. ಎಂದೆ... ಸುಬ್ಬಜ್ಜನೂ ಹೌದಾ.. ಎಂದ'
ಮತ್ತೊಮ್ಮೆ ತನ್ನ ಮಾತಿನ ಸರಣಿಗೆ ನಿಲುಗಡೆ ನೀಡಿದ ಗಪ್ಪಜ್ಜ .. ಇಂವ ಇಂತಕ್ಕೆ ಜೋರಾಗಿ ಓಡ್ತಾ ಇರೋ ಬಾಳೆಸರ ಬಸ್ಸು ಆಗಾಗ ನಿತ್ಕಂಡ ಹಾಂಗೆ ನಿತ್ಕತ್ತ ಅಷ್ಟ್ ಅಷ್ಟ್ ಹೊತ್ತೊಗೆ ಸುಮ್ಮನಾಗ್ತಾ ಎಂದು ವಿನಾಯಕನ ಮನಸ್ಸಿನಲ್ಲಿ ಮೂಡಿದರೂ ಕೇಳಿಲು ಹೋಗಲಿಲ್ಲ.
`ಬಂದಳಿಕೆಯಲ್ಲಿ ದನವನ್ನು ಎಳಕಂಡ್ ಹೋಗಿದ್ ಹುಲಿ ಅಲ್ಲಿಂದ ಭತ್ತಗುತ್ತಿಗೆ ಹೋಗುವ ಹಾದಿ ಮಧ್ಯದ ದೊಡ್ಡ ಮುರ್ಕಿ ಹತ್ರ ಇರೋ ಮರದ ಹತ್ತಿರ ದನದ ದೇಹ ವಗದಿಕ್ ಹೋಗಿತ್ತು. ಸುಮಾರ್ ಹೊತ್ತು ಯಂಗ ಅಲ್ಲಿ ಸುಳಿದಾಡಿದ್ರೂ ಹುಲಿ ಪತ್ತೆಯಾಜಿಲ್ಲೆ.. ಕೊನೆಗೆ ಬಂದಳಿಕೆಗೆ ವಾಪಸ್ ಹೋಗಿ ಊಟ ಮುಗಿಸ್ಕಂಡು ಮತ್ತೆ ವಾಪಸ್ ಬಂದು ಮರ ಹತ್ತಿ ಕುತ್ಗಂಡ್ಯ. ಮದ್ಯಾಹ್ನ ಆತು, ಸಾಯಂಕಾಲ ಆದ್ರೂ ಹುಲಿ ಪತ್ತೇನೇ ಇಲ್ಲೆ. ಈ ಹುಲಿ ಹಿಂದ್ ಹೋಪ ಸಾವಾಸ ಸಾಕ್ರೋ.. ಹೇಳಿ ಅನಿಶಿ ಹೋತು. ಹಗೂರ್ಕೆ ಸೂರ್ಯನೂ ಕಂತತಾ ಇದ್ದಿದ್ದ.. ಕಪ್ಪಾಪ್ಲೆ ಆಗ್ತಾ ಇತ್ತು. ಯಂಗಕ್ಕಿಗೆ ಮರ ಇಳಿಯಲೆ ಒಂಥರಾ ಆಪಲೆ ಹಿಡತ್ತು. ಹಂಗೆ ಹೇಳಿ ಅಲ್ಲೇ ಕುತ್ಗಂಡು ಇಪ್ಪಲೂ ಆಗ್ತಿಲ್ಲೆ.. ಹಿಂಗೆ ಸುಮಾರ್ ಹೊತ್ತಾತು. ಕೊನಿಗೆ ಸುಮಾರ್ ಕಪ್ಪಾಗ್ತಾ ಇದ್ದು ಹೇಳ ಹೊತ್ತಿಗೆ ಬಂತು ನೋಡು ಹುಲಿ.. ಅನಾಮತ್ತು 8 ಅಡಿ ಉದ್ದ ಇತ್ತು. ಎಂತಾ ಗಾಂಭೀರ್ಯದಲ್ಲಿ ಅದು ನೆಡ್ಕಂಡು ಬಂತು ಅಂದ್ರೆ.. ಆಹಾ.. ಅದು ಸೀದಾ ದನದ ಹತ್ರಕ್ಕೆ ಬಂತು. ಯಂಗಂತೂ ಮೈ ರೋಮೆಲ್ಲಾ ನೆಟ್ಟಗಾಗಿತ್ತು. ಮೊದಲನೇ ಸಾರಿ ಹುಲಿ ಹೊಡೆತಾ ಇದ್ದಿದ್ನಲಾ.. ಜೊತಿಗೆ ನಿನ್ನೆ ರಾತ್ರಿ ಹಾರಿಸಿದ ಈಡು ಹುಸಿಯಾಗಿತ್ತಲಾ.. ಕೋವಿ ನೆಟ್ಟಗ್ ಮಾಡ್ಕಂಡು ಗುರಿ ಹಿಡದಿ. ಮತ್ತೂ ಹತ್ರಕ್ಕೆ ಬಂತು. ಹಂಗೇ ಢಂ. ಅನ್ಸಿದಿ. ಪಕ್ಕದಲ್ಲಿ ಕುತ್ಗಂಡ್ ಇದ್ದಿದ್ದ ಸುಬ್ಬಜ್ಜ ಒಂದ್ ಸಾರಿ ಕುಮಟಿ ಬಿದ್ದಿದ್ದ. ಮೈಯೆಲ್ಲಾ ಥರಗುಡ್ತಾ ಇತ್ತು. ಹುಲಿಗೆ ಗುಂಡು ತಾಗಿತ್ತು. ಬಿದ್ದಿದ್ದು ಕಾಣ್ತಾ ಇತ್ತು. ಯಾವ್ದಕ್ಕೂ ಇರಲಿ, ಎಲ್ಲಾರೂ ಜೀಂವ ಇದ್ದಿಕ್ಕು ಹೇಳಿ ಇನ್ನೊಂದು ಕೋವಿ ಲೋಡು ಮಾಡ್ಕ್ಯಂಡಿ. ಸುಮಾರ್ ಹೊತ್ತಾತು.. ಹುಲಿ ಬಿದ್ಕಂಡಿದ್ದು ಮಿಸುಕಾಡಿದ್ದಿಲ್ಲೆ.. ಇನ್ನೇನು ಇಳಿಯವು ಹೇಳ ಹೊತ್ತಲ್ಲಿ ಆ ಹುಲಿ ಹತ್ರಕ್ಕೆ ಎಂತದೋ ಅಲ್ಲಾಡಿದ ಹಂಗಾತು. ಸರಿಯಾಗಿ ನೋಡಿದ್ರೆ ಎರಡು ಹುಲಿಮರಿ..' ಎಂದು ಹೇಳಿ ಸುಮ್ಮನಾದ ಗಪ್ಪಜ್ಜ ..
ಮುಂದೇನಾಯ್ತು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು ಸುಳ್ಳಲ್ಲ.. ಹುಲಿ ಹೊಡೆದ ಎನ್ನುವ ವಿಷಯವೇನೋ ತಿಳಿಯುತು. ಹುಲಿಮರಿಯನ್ನೂ ಹೊಡೆದ್ನಾ? `ಮುಂದೆಂತ ಆತು..?' ಕುತೂಹಲ ತಡೆಯಲಾಗದೇ ಕೇಳಿದ್ದಳು ವಿಜೇತಾ.
`ಆವಾಗ್ಲೆ ಹೇಳಿದ್ನಲೆ.. ಮಧ್ಯ ಬಾಯಿ ಹಾಕಡಾ ಹೇಳಿ.. ಸ್ವಲ್ಪ ಸಂಪ್ರನ್ಶಕತ್ತಿ ತಡಿ..' ಅಂದ. ನಾನು ಸುಮ್ಮನೆ ಕುಳಿತೆ.
`ಹ್ವಾ ಗಪ್ಪತಿ... ಹೆಣ್ಣು ಹುಲಿಯಾಗಿತ್ತು ಕಾಣ್ತಾ ಹೊಡೆದಿದ್ದು.. ಮರೀನೂ ಇದ್ದಲಾ.. ಹೊಡೆಯದೇಯನಾ..? ಎರಡಿದ್ದು ಎಂದು ಕೇಳಿದ ಪಕ್ಕದಲ್ಲಿದ್ದ ಸುಬ್ಬಜ್ಜ.
`ಮರಿ ಪಾಪದ್ದಲಾ ಬಿಟ್ಹಾಕನನಾ..? ಆನು ಕೇಳಿದಿ.. ಬ್ಯಾಡದಾ ಗಪ್ಪತಿ.. ಹಾವು ಸಣ್ಣದಿದ್ರೂ ದೊಡ್ಡದಿದ್ರೂ ವಿಷನೇ ಅಲ್ದನಾ.. ಹಂಗೇಯಾ ಹುಲಿನೂವಾ ಮಾರಾಯಾ.. ಮರಿ ಇದ್ರೂ ಸೇಡಿಟ್ಕತ್ತಡಾ.. ಮುಂದೆ ದೊಡ್ಡಾಗಿ ತ್ರಾಸು ಕೊಡ್ತ್ವಿಲ್ಯನಾ..? ಒಂದ್ ಹುಲಿ ಒಂದ್ ಬಾಲ ಒಂದೇ ಇನಾಮು ಸಿಕ್ತಿತ್ತಲಾ.. ಈಗ ಇವೆರಡನ್ನೂ ಕೊಂದ್ರೆ ಮೂರು ಹುಲಿ, ಮೂರು ಬಾಲ, ಮೂರು ಇನಾಮು ಸಿಕ್ತಲಾ.. ಹೊಡಿಯಾ ಗುಂಡ.. ಎಂದ. ಯಂಗೆ ಮನಸಿತ್ತಿಲ್ಲೆ.. ಕೊನಿಗೆ ಹ್ಯಾಂಗಂದ್ರೂ ಕೋವಿ ಲೋಡಾಕ್ಕಂಡಿತ್ತು ಒಂದ್ ಮರಿಗೆ ಹೊಡದಿ. ಅದನ್ನು ನೋಡಿ ಇನ್ನೊಂದು ತಪಶ್ಗ್ಯಂಡ್ ಹೋಪಲೆ ನೋಡಚು.. ಸುಬ್ಬಜ್ಜನ ಕೈಲಿದ್ದ ಬಂದೂಕಿಂದ ಅವನೂ ಗುಂಡು ಹೊಡೆದ ಅದೂ ಬಿತ್ತು.. ಸುಮಾರ್ ಹೊತ್ತು ಬಿಟ್ಟು ಯಂಗವ್ ಮರ ಇಳಿದ್ಯ. ಅಷ್ಟೊತ್ತಿಗೆ ಯಂಗಳ ಕೋವಿ ಸದ್ದು ಕೇಳಿ ಹುಲಿ ಹೊಡೆದಿಕ್ಕು ಹೇಳಿ ಭತ್ತಗುತ್ತಿಗೆ, ಬಂದಳಿಕೆಯಿಂದ ಒಂದೆರಡು ಜನ ಬಪ್ಪಲೆ ಹಿಡದ.
ಆನು ಹುಲಿ ಹತ್ತಿರಕ್ಕೆ ಹೋಗಿ ನೋಡದಿ. ಎಂತಾ ಹುಲಿ ಗೊತ್ತಿದ್ದ. ಅಗಲಕ್ಕಿತ್ತು.. ಉದ್ದವೂ ಇತ್ತು. ಮರಿಗಳು ಚಂದಿದ್ವಾ.. ಆದ್ರೆ ಅವನ್ ಹೊಡೆದಿದ್ದಕ್ಕೆ ಯಂಗೆ ಬೇಜಾರಾಗೋತು.. ಅಷ್ಟೊತ್ತಿಗೆ ಯಲ್ಲಾ ಬಂದಿದ್ವಲಾ... ಯಂಗಳನ್ ಹೊಗಳಲೆ ಹಿಡಿದ್ವಾ.. ಹುಲಿ ಬೇಟೆಯಂತೂ ಆತು.. ಮುಂದಿನ ಕೆಲಸ ಮಾಡಕಾತು ಹೇಳಿ ಅಲ್ಲಿದ್ದವ್ಕೆ ಹೇಳದಿ. ಎಂತೆಂತೋ ತಂದ. ಹುಲಿ ಬಾಲ ತಗಂಡು ಹೊಂಟ್ಯ. ಕೊನಿಗೆ ಇನಾಮೂ ಸಿಕ್ತು. ಹುಲಿ ಚರ್ಮ ಇದ್ದಾ..' ಎಂದ ಗಪ್ಪಜ್ಜ .
`ಯಂಗೆ ಹುಲಿ ಬಾಲ ನೋಡಕಾಗಿತ್ತಲಾ.. ತೋರಿಸ್ತ್ಯಾ..?' ಎಂದು ವಿಜೇತಾ ಕೇಳಿದ ತಕ್ಷಣ ಇದ್ದಕ್ಕಿದ್ದಂತೆ ರೇಗಿದ ಗಪ್ಪಜ್ಜ ` ಎಂತದೇ.. ಮಧ್ಯ ಮಾತಾಡಡಾ ಹೇಳಿದ್ನಲೆ.. ಅದೆಂತಾ ಮಧ್ಯ ಮಧ್ಯ ಕಚಪಚ ಹಲುಬ್ತ್ಯೇ? ಸುಮ್ನೆ ಕುತ್ಗ ನೋಡನ' ಎಂದ..
ಮುಂದುವರಿದು `ಹುಲಿ ಬಾಲ ಇತ್ತಾ.. ಮೊನ್ನೆ ಮೊನ್ನೆವರೆಗೂ ಇತ್ತು. ಯನ್ನ ಮಗ ಬೆಂಗಳೂರಲ್ಲಿದ್ನಲಾ.. ಅಂವ ಬೇಕು ಹೇಳಿ ತಗಂಡ್ ಹೋದ..' ಅಂದ ಗಪ್ಪಜ್ಜ..
`ನಿಂಗವ್ ಬೇಕಾದ್ರೆ ಒಂದ್ ಸಾರಿ ಭತ್ತಗುತ್ತಿಗೆ ಗೆ ಹೋಗ್ ಬನ್ನಿ.. ಆ ಹುಲಿ ಹೊಡೆದ ಜಾಗ ನೋಡ್ಕ್ಯಂಡ್ ಬನ್ನಿ.. ದೊಡ್ ಮರ ಇದ್ದು.. ಭತ್ತಗುತ್ತಿಗೆ ಹೊಳೆ ಇದ್ದಲ್ರಾ ಅದಕ್ಕಿಂತ ಸ್ವಲ್ಪ ಮೇಲೆ ಆಗ್ತು.. ಅಲ್ಲೊಂದು ಯತ್ನಗಾಡಿ ರಸ್ತೆ ಇತ್ತು ಆಗ. ಅಲ್ಲೇ ಆಗ್ತು. ಆಗ ರಾಶಿ ಕಾಡಿತ್ತಾ.. ಕೊನಿಗೆ ಎಲ್ಲಾ ಬೋಳು ಹರಸಿಗಿದ. ಆನು ಮರ ಹತ್ತಗ್ಯಂಡು ಗುಂಡು ಹೊಡೆದ ಮರ ಇದ್ದ, ಕಡದಿಗಿದ್ವ ಗೊತ್ತಿಲ್ಲೆ.. ನಿಂಗವ್ ನೋಡ್ಕ್ಯಂಡು ಬನ್ನಿ.. ಯಂಗೂ ಹೇಳಿ ಹೀಗ ಅಲ್ಲಿ ಹ್ಯಾಂಗಿದ್ದು ಹೇಳಿ ಎಂದು ಸುಮ್ಮನಾದ.
ಗಪ್ಪಜ್ಜನ ಸಾಹಸಗಾಥೆ ಎಲ್ಲರಲ್ಲಿಯೂ ಬೆರಗನ್ನು ಮೂಡಿಸಿತು. ಆ ಕಾಲದಲ್ಲಿ ಹೀಗೆಲ್ಲಾ ನಡೆದಿತ್ತಾ ಎಂದುಕೊಂಡರು ಎಲ್ಲರೂ. ಪ್ರತಿಯೊಬ್ಬರಿಗೂ ಜಿಮ್ ಕಾರ್ಬೆಟ್ಟಿನ ಹುಲಿ ಹೊಡೆದ ಕಥೆಯನ್ನು ಕಣ್ಣಾರೆ ಕಂಡೆವೇನೋ ಎನ್ನುವಂತಹ ಅನುಭವ. ಯಾರಿಗೂ ಕ್ಷಣಕಾಲ ಬಾಯಿಂದ ಮಾತು ಹೊರಡಲೇ ಇಲ್ಲ. ಎಲ್ಲರೂ ಅಚ್ಚರಿಯಿಂದ ಕೇಳುತ್ತಲೇ ಇದ್ದರು. ಈಗಲೇ ಗವ್ವೆನ್ನುವ ಕಾಡು ಆಗ ಹೇಗಿ ಇದ್ದಿರಬೇಡ ಎಂದುಕೊಂಡರು ಎಲ್ಲರೂ. ಹಲವು ಕ್ಷಣಗಳ ನಂತರ ಎಲ್ಲರೂ ವಾಸ್ತವಕ್ಕೆ ಮರಳಿದರು.
`ಮೂರು ಹುಲಿಗಳದ್ದೂ ಬಾಲ ಕಿತ್ತುಕಂಡು ಹೋಗಿ ಯಂಗವ್ವು ಪಟೇಲಂಗೆ ತೋರ್ಸಿದ್ಯ. ನಂಗಕ್ಕಿಗೆ ಇನಾಮು ಸಿಕ್ಕಿತ್ತು. ಹುಲಿ ಹೊಡೆದ ಎರಡು ದಿನ ಭತ್ತಗುತ್ತಿಗೆ ಯಿಂದ ಹಿಡಿದು ಕುಚಗುಂಡಿ ತನಕ ಎಲ್ಲೆಲ್ಲಿ ಹುಲಿ ಕಾಟ ಇತ್ತೋ ಅಲ್ಲೆಲ್ಲ ಹುಲಿ ಹೊಡೆದ ಯಂಗಳನ್ನು ಮೆರವಣಿಗೆ ಮಾಡಿಸಿದ್ದ. ಹಬ್ಬ ಮಾಡಿದಿದ್ದ. ಅದಿನ್ನೂ ಯನ್ನ ಕಣ್ಣಲ್ಲಿ ಕಟ್ಟಿದ ಹಾಂಗೆ ಇದ್ದು ನೋಡಿ..' ಎಂದರು ಗಣಪಜ್ಜ. ಎಲ್ಲರಿಗೂ ಗಣಪಜ್ಜನ ಎದುರು ಒಮ್ಮೆ ಎದ್ದು ನಿಂತು ಸೆಲ್ಯೂಟ್ ಮಾಡಬೇಕು ಎನ್ನಿಸಿತು. ಒಂದಿಬ್ಬರು ಎದ್ದು ನಿಂತೂ ನಿಂತಿದ್ದರು.
(ಮುಂದುವರಿಯುತ್ತದೆ..)