ಬೆಂಗಾಲಿ ಸೀರೆಯ ಸುಂದರಿಯಾಗಿ ಆಗಮಿಸಿದ್ದ ಮಧುಮಿತಾ ವಿನಯಚಂದ್ರನ ಮಾತನ್ನು ಕದ್ದೇ ಬಿಟ್ಟಿದ್ದಳು. ಆಕೆಯ ಸೌಂದರ್ಯವನ್ನು ವೀಕ್ಷಿಸುವಲ್ಲಿಯೇ ವಿನಯಚಂದ್ರ ಮೌನಿಯಾಗಿಬಿಟ್ಟಿದ್ದ. ಅಪರೂಪಕ್ಕೆಂಬಂತೆ ಆತನ ಮನಸ್ಸು ಮತ್ತೊಮ್ಮೆ ಬಾವುಕತೆಯ ಪರೀಧಿಯೊಳಗೆ ನುಗ್ಗಿಬಿಟ್ಟಿತ್ತು. ಸಮಯಸಿಕ್ಕರೆ ಆತ ಕವಿತೆಯನ್ನು ಬರೆದು ಮುಗಿಸುತ್ತಿದ್ದನೇನೋ. ಆಗಲೆ ಪದಗಳನ್ನು ಮನಸ್ಸು ಪೊಣಿಸಲು ಶುರುಮಾಡಿತ್ತು.
ಕಾಡುವೆಯಲ್ಲೇ ಬಂಗಾಳದ ಬೆಡಗಿ..
ನನ್ನ ಪ್ರೀತಿಯ ಹುಡುಗಿ..
ಮಾತು ಬೇಡವೇ ಕಥೆಯು ಬೇಡವೆ
ಎದೆ ನಿಂತಿದೆ ಗುಡುಗಿ...
ಎಂದೇನೋ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ಆಕೆ ಹಾಯ್ ಎಂದಿದ್ದಳು. ಈತ ಮುಗುಳ್ನಕ್ಕಿದ್ದ. ಮನಸ್ಸು ಹೂವಾಗಿತ್ತು.
ಮುಂದಿನ ಹಲವು ಕ್ಷಣಗಳನ್ನು ವಿನಯಚಂದ್ರ ಹಾಗೂ ಮಧುಮಿತಾ ರೋಮಾಂಚನದಿಂದ ಕಳೆದರು. ಆಕೆ ಹೇಳುತ್ತಾಳೆಂದು ಆತ.. ಆತನೇ ಹೇಳುತ್ತಾನೆಂದು ಆಕೆ.. ಇಬ್ಬರೂ ಏನೊಂದನ್ನೂ ಹೇಳಲಿಲ್ಲ. ಆರಂಭದ ಕೆಲವು ಕ್ಷಣಗಳು ಮೌನ ಮೆರೆದು ನಿಂತಿತು. ಪರಸ್ಪರರು ಮಾತನ್ನು ಆರಂಭಿಸುತ್ತಿದ್ದರಾದರೂ ಮುಂದುವರಿಯದೇ ಹಳಿತಪ್ಪಿ ಇನ್ಯಾವುದೋ ವಿಷಯದ ಕಡೆಗೆ ಹರಿಯುತ್ತಿದ್ದವು. ಕೊನೆಗೊಮ್ಮೆ ವಿನಯಚಂದ್ರ ಧೈರ್ಯಮಾಡಿ ತನ್ನ ಮನದ ವಿಷಯವನ್ನು ಆಕೆಯ ಬಳಿ ಹೇಳಿಯೇಬಿಟ್ಟ. `ನಾ ನಿನ್ನ ಪ್ರೀತಿಸುತ್ತಿದ್ದೇನೆ..' ಎಂದವನು ಆಕೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೋ ಎಂದುಕೊಂಡು ಕಾದ.
ಸಿಟ್ಟಾದರೆ ಏನು ಮಾಡುವುದು ಎಂದು ಮಧುಮಿತಾಳ ಕಣ್ಣೊಟವನ್ನು ತಪ್ಪಿಸಿದ. ಯಾವುದೇ ರೀತಿಯ ಪ್ರತಿಕ್ರಿಯೆಗೆ ಸಿದ್ಧವಾಗಿರಬೇಕಲ್ಲ ಎಂದುಕೊಂಡ. ಆಕೆ ಮಾತಾಡಲಿಲ್ಲ. ವಿನಯಚಂದ್ರನ ಡುಗುಡ ಹೆಚ್ಚಾಯಿತು. ಆದರೆ ಆಕೆ ಮುಗುಳ್ನಕ್ಕಳು. ವಿನಯಚಂದ್ರ ಅರ್ಥವಾಗದವನಂತೆ ನೋಡಿದ. ಕೆಲವು ಕ್ಷಣಗಳನ್ನು ಆಕೆ ಸುಮ್ಮನೇ ಕಾದಳು. ಅದೇನೋ ಆಲೋಚನೆ ಮಾಡುವಂತೆ ನಟಿಸಿದಳು. ವಿನಯಚಂದ್ರ ಕಾದ ಕಬ್ಬಿಣದ ಬಾಣಲೆಯ ಮೇಲೆ ಕುಳಿತಂತೆ ಚಡಪಡಿಸತೊಡಗಿದ್ದ. ಆಕೆ ಮತ್ತೊಮ್ಮೆ ನಕ್ಕು ಸ್ಪಷ್ಟವಾಗಿ ಹುಂ ಅಂದಳು. ಏನು ಎಂಬಂತೆ ನೋಡಿದ ವಿನಯಚಂದ್ರ. ಏ ಹೋಗೋ.. ಅಷ್ಟೂ ಗೊತ್ತಾಗಲ್ವಾ ನಿಂಗೆ.. ಎನ್ನುವಂತೆ ಮುಖ ಮಾಡಿದ ಮಧುಮಿತಾ ವಿನಯಚಂದ್ರನನ್ನು ಒಮ್ಮೆ ಹಿತವಾಗಿ ದೂಡಿದಳು. ವಿನಯಚಂದ್ರನಿಗೆ ಮನಸ್ಸೊಮ್ಮೆ ಹೂವಾಯಿತು. ಆಕಾಶವೇ ಕೈಗೆ ಸಿಕ್ಕಂತೆ ಅನುಭವವಾಯಿತು. ತನ್ನ ಪ್ರೇಮ ನಿವೇದನೆಯನ್ನು ಒಂದೇ ಘಳಿಗೆಯಲ್ಲಿ ಅವಳು ಒಪ್ಪುಕೊಳ್ಳುತ್ತಾಳೆ ಎಂದುಕೊಂಡಿರಲಿಲ್ಲ ಆತ. ಆಕೆ ಒಪ್ಪಿದ್ದು ಆತನಿಗೆ ಅಚ್ಚರಿಯ ಜೊತೆಗೆ ಸಂತೋಷವನ್ನು ನೀಡಿತ್ತು. ಮತ್ತೆ ವಿನಯಚಂದ್ರ ಮೌನಿಯಾಗಿದ್ದ. ಏನು ಹೇಳಬೇಕೋ ಗೊತ್ತಾಗದೇ ಸುಮ್ಮನೇ ಉಳಿದಿದ್ದ. ಸುಮ್ಮನೆ ಆಕೆಯ ಕೈ ಹಿಡಿದು ಕೈಮೇಲೆ ಹೂ ಮುತ್ತೊಂದನ್ನು ನೀಡಿಬಿಟ್ಟಿದ್ದ. ಮುಖವನ್ನು ಹತ್ತಿರಕ್ಕೆ ಎಳೆದು ಹಣೆಗೊಂದು ಮುತ್ತನ್ನು ಕೊಟ್ಟು ಸದಾಕಾಲ ನಿನ್ನ ಜೊತೆಗೆ ಇರುತ್ತೇನೆ ಎಂದು ಪಿಸುಗುಟ್ಟಿದ. ಹನಿಗೂಡಿದ ಕಣ್ಣಿನೊಂದಿಗೆ ನಸುನಾಚಿದಳು ಮಧುಮಿತಾ.
ಹಲವು ಗಂಟೆಗಳ ಬಳಿಕ ರೂಮಿಗೆ ಮರಳಿದ್ದ ವಿನಯಚಂದ್ರನನ್ನು ಸೂರ್ಯನ್ ಎದುರುಗೊಂಡವನೇ ಏನಾಯ್ತೆಂದು ಕೇಳಿದ. ಅದಕ್ಕೆ ವಿನಯಚಂದ್ರ ನಡೆದಿದ್ದೆಲ್ಲವನ್ನೂ ಹೇಳಿದ. ಸುದ್ದಿ ಕೇಳಿವ ಸೂರ್ಯನ್ ವಿನಯಚಂದ್ರನಷ್ಟೇ ಸಂತಸ ಪಟ್ಟಿದ್ದ. ವಿನಯಚಂದ್ರನಿಗೆ ಕಂಗ್ರಾಟ್ಸ್ ಹೇಳಿದ್ದ. ಆ ದಿನ ವಿನಯಚಂದ್ರನಿಗೆ ಕನಸಿನಲ್ಲಿ ನಡೆದಂತೆ ಆಗಿತ್ತು. ಸಂತಸದ ಅಣೆಕಟ್ಟೆ ಒಡೆದು ಹೋಗಿ ಎಲ್ಲೆಡೆ ಚಿಮ್ಮಿದೆಯೇನೋ ಎಂಬಂತಾಗಿತ್ತು.
****
ಮರುದಿನ ಮತ್ತೊಂದು ಕಬ್ಬಡ್ಡಿ ಪಂದ್ಯವಿತ್ತು. ಎರಡು ಪಂದ್ಯಗಳು ನೇರವಾಗಿ ಜರುಗುವುದಿತ್ತು. ಮೊದಲ ಪಂದ್ಯ ದಕ್ಷಿಣ ಕೋರಿಯಾದ ವಿರುದ್ಧವಿದ್ದರೆ ಎರಡನೇ ಪಂದ್ಯ ಥೈಲ್ಯಾಂಡ್ ವಿರುದ್ಧ ನಡೆಯಲಿದ್ದವು. ಈ ಎರಡೂ ತಂಡಗಳು ಅಷ್ಟೇನೂ ಪ್ರಬಲ ತಂಡಗಳಾಗಿರದ ಕಾರಣ ಭಾರತದ ಕಬ್ಬಡ್ಡಿ ತಂಡದವರು ಚಿಂತಿಸಬೇಕಾದ ಪರಿಸ್ಥಿತಿಯಿರಲಿಲ್ಲ. ಆದರೆ ಕೋಚ್ ಜಾಧವ್ ಮಾತ್ರ ಯಾವುದೇ ಕಾರಣಕ್ಕೂ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಬಾರದು. ಎದುರು ಆಡುತ್ತಿರುವ ತಂಡ ನಮಗಿಂತ ಭಲಿಷ್ಟವಾಗಿದೆ. ಆದರೂ ಅದನ್ನು ಸೋಲಿಸಿಯೇ ಸೋಲಿಸುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿರಬೇಕು ಎಂದು ಹೇಳಿಬಿಟ್ಟಿದ್ದರು. ನ್ಯೂಝಿಲ್ಯಾಂಡ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ನಡೆದಿದ್ದ ತಪ್ಪುಗಳು ಮರುಕಳಿಸಬಾರದು ಎಂದೂ ತಾಕೀತು ಮಾಡಿದ್ದರು.
ಮಧುಮಿತಾ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದ ಕಾರಣ ವಿನಯಚಂದ್ರ ಸ್ವರ್ಗದಲ್ಲಿ ವಿಹಾರ ಮಾಡುತ್ತಿದ್ದೇನೇನೋ ಎಂದುಕೊಂಡಿದ್ದ. ಹುರುಪಾಗಿದ್ದ. ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಉತ್ತಮ ಸಾಧನೆಯನ್ನು ಮಾಡುತ್ತೇನೆ ಎನ್ನುವ ವಿಶ್ವಾಸ ಆತನದ್ದಾಗಿತ್ತು. ದಕ್ಷಿಣ ಕೋರಿಯ ತಂಡದ ವಿರುದ್ಧ ಪಂದ್ಯ ಆರಂಭವಾಗಿಯೇ ಬಿಟ್ಟಿತು. ಕೋಚ್ ಜಾಧವ್ ಅವರು ಈ ಸಾರಿ ವಿನಯಚಂದ್ರನನ್ನು ಮೊದಲಿನ ಪಂದ್ಯದಂತೆಯೇ ಆರಂಭದಲ್ಲಿ ಆಡಲು ಬಿಡಲಿಲ್ಲ. ವಿನಯಚಂದ್ರ ಉತ್ತಮ ಕ್ಯಾಚರ್ ಆಗಿರುವ ಕಾರಣ ತಂಡಕ್ಕೆ ಸಂದಿಗ್ಧ ಸಮಸ್ಯೆ ಎದುರಾದರೆ ಉಪಯೋಗಿಸಬೇಕೆಂದು ನಿರ್ಧರಿಸಿದ್ದರು. ಪಂದ್ಯ ಆರಂಭವಾಗಿಯೇ ಬಿಟ್ಟತು.
ಚೀನಾದ ಒಡಲಿನಲ್ಲಿಯೇ ಇರುವ ದಕ್ಷಿಣ ಕೋರಿಯಾದ ಆಟಗಾರರು ಕುಳ್ಳರು. ಚಿಕ್ಕ ಕಣ್ಣು. ಆದರೆ ದಷ್ಟಪುಷ್ಟವಾಗಿದ್ದರು. ಇವರನ್ನು ಅಂಗಣದಲ್ಲಿ ಕ್ಯಾಚ್ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುಳ್ಳಗಿದ್ದ ಕಾರಣ ಹೇಗೆ ಹಿಡಿದರೂ ಪುಸಕ್ಕನೆ ತಪ್ಪಿಸಿಕೊಂಡು ಹೋಗಬಲ್ಲ ಛಾತಿಯನ್ನು ಹೊಂದಿದ್ದರು. ನಂಬರ್ 1 ಟೀಂ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿತ್ತು. ತಂಡದ ರೈಡರ್ ಗಳು ಅತ್ಯುತ್ತಮವಾದ ರೀತಿಯಲ್ಲಿ ಬಲಿಯನ್ನು ಪಡೆದು ಮರಳುತ್ತಿದ್ದರು. ಆದರೆ ಕ್ಯಾಚಿಂಗ್ ಸಮಯದಲ್ಲಿಯೇ ಒಂದೆರಡು ಕ್ಯಾಚ್ ಗಳು ವಿಫಲವಾಗಿದ್ದವು. ಜಾಧವ್ ಅವರು ಥಟ್ಟನೆ ಜಾಗೃತರಾಗಿ ತಂಡ ಟೈಮೌಟ್ ಪಡೆಯುವಂತೆ ನೋಡಿಕೊಂಡರು. ಅಷ್ಟರಲ್ಲಿ ತಂಡ 10-4ರಿಂದ ಭಾರತ ತಂಡ ಮುನ್ನಡೆ ಸಾಧಿಸಿತ್ತು. ಟೈಂಔಟ್ ಮುಗಿಯುವ ವೇಳಗೆ ವಿನಯಚಂದ್ರನನ್ನು ಅಂಗಣಕ್ಕಿಳಿಸಿದರು ಜಾಧವ್. ಅಂಗಣ ಪ್ರವೇಶಿಸುವ ಮುನ್ನ `ವಿನಯಚಂದ್ರ ಬಿ. ಕೇರ್ ಪುಲ್. ಗಡಬಡಿ ಮಾಡಬೇಡಿ. ಸಿಕ್ಕ ಅವಕಾಶ ಮಿಸ್ ಆಗುವುದೂ ಬೇಡ. ಇವತ್ತಿನ ದಿನ ನಿಮ್ಮದಾಗಬೇಕು ವಿನಯ್ ಆಲ್ ದಿ ಬೆಸ್ಟ್..' ಎಂದಿದ್ದರು. ವಿನಯಚಂದ್ರ ಮೈದಾನದ ಸುತ್ತ ಮಧುಮಿತಾಳಿಗಾಗಿ ನೋಡಿದ. ಯಾವುದೋ ಒಂದು ಭಾಗದಲ್ಲಿ ಕುಳಿತು ಚಪ್ಪಾಳೆ ತಟ್ಟುತ್ತಾ ಆಲ್ ದಿ ಬೆಸ್ಟ್ ಎಂದಿದ್ದಳು. ವಿನಯಚಂದ್ರನ ಹುರುಪು ಇಮ್ಮಡಿಸಿತ್ತು.
ವಿನಯಚಂದ್ರ ಅಂಗಣಕ್ಕಿಳಿದ ನಂತರ ಮೊದಲಿಗೆ ವಿಶೇಷವೇನೂ ನಡೆದಿರಲಿಲ್ಲ. ತಂಡದ ರೈಡರ್ ಗಳು ಯಥಾಪ್ರಕಾರ ಅಂಕಗಳನ್ನು ಗಳಿಸಿಕೊಂಡು ಮರಳುತ್ತಲೇ ಇದ್ದರು. ವಿನಯಚಂದ್ರ ಉತ್ತಮ ಕ್ಯಾಚರ್ ಎಂಬುದು ತಂಡದ ಆಟಗಾರರಿಗೆ ಗೊತ್ತಾಗಿದ್ದ ಕಾರಣ ಆತನಿಗೆ ಅಂಗಣದಲ್ಲಿ ವಿಶೇಷ ಸ್ಥಾನ ಸಿಕ್ಕಿತ್ತು. ಅಪ್ಪಿತಪ್ಪಿ ಯಾವುದೇ ಸಂದರ್ಭದಲ್ಲಿಯೂ ಪ್ರಮಾದವಾಗಿ ವಿನಯಚಂದ್ರ ಔಟಾಗಿ ಆತನ ಅಂಕ ಕಳೆದುಹೋಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರನ ಮೇಲೆ ದಾಳಿ ಮಾಡುವುದನ್ನು ತಪ್ಪಿಸುತ್ತಿದ್ದರು.
ಒಬ್ಬ ದಕ್ಷಿಣ ಕೋರಿಯನ್ ಆಟಗಾರ ರೈಡ್ ಮಾಡುತ್ತ ಬಂದ. ಭಾರತದ ಪಾಯಿಂಟು ಜಾಸ್ತಿಯಿದ್ದ ಕಾರಣ ಆಗಲೇ ತಂಡ ಟೈಂಪಾಸ್ ಶುರುಮಾಡಿಕೊಂಡಿತ್ತು. ಆ ಆಟಗಾರ ಹೇಗಾದರೂ ಮಾಡಿ ಭಾರತೀಯ ಆಟಗಾರರನ್ನು ಔಟ್ ಮಾಡಬೇಕು ಎಂದುಕೊಂಡು ಪದೇ ಪದೆ ದಾಳಿಗೆ ಯತ್ನಿಸುತ್ತಿದ್ದ. ಭಾರತ ತಂಡ ಈತನ ರೈಡಿಂಗಿನಲ್ಲಿಯೇ ನಾಲ್ಕು ಅಂಕಗಳನ್ನು ಕಳೆದುಕೊಂಡಿತ್ತು. ದೃಢಕಾಯನಾಗಿ, ಕುಳ್ಳಗಿದ್ದ ಈತನನ್ನು ಹಿಡಿಯಲು ಭಾರತೀಯ ಆಟಗಾರರು ಯತ್ನಿಸಿ ಸೋತಿದ್ದರು. ಈತನನ್ನು ಹಿಡಿದರೆ ರಪ್ಪನೆ ಜಿಗಿದೋ ಅಥವಾ ಪುಸಕ್ಕನೆ ಜಾರಿಯೋ ತಪ್ಪಿಸಿಕೊಂಡು ಔಟ್ ಮಾಡುತ್ತಿದ್ದ. ಈ ಸಾರಿ ಹಿಡಿಯಬೇಕೆಂಬ ಜಿದ್ದು ಎಲ್ಲರಲ್ಲಿಯೂ ಮೂಡಿತ್ತು. ವಿನಯಚಂದ್ರ ಮಧ್ಯದಲ್ಲಿದ್ದ. ಎದುರಾಳಿ ತಂಡಕ್ಕೆ ವಿನಯಚಂದ್ರ ಸಾಮಾನ್ಯ ಆಟಗಾರನಿರಬೇಕು, ಅಂತಹ ಕ್ಯಾಚರ್ ಅಲ್ಲ ಎಂದು ಬಿಂಬಿಸುವ ಯತ್ನವನ್ನು ಭಾರತೀಯ ಆಟಗಾರರು ಮಾಡಿ ಯಾಮಾರಿಸುವಲ್ಲಿ ಸಫಲರಾಗಿದ್ದರು.
ಆಟದಲ್ಲಿ ಮಾನಸಿಕವಾಗಿ ಗೆಲ್ಲುವುದು ಮೊದಲ ತಂತ್ರವಾಗಿರುತ್ತದೆ. ಎದುರಾಳಿಯ ಮನದಲ್ಲಿ ಬೇರೆಯದೇ ಆದ ಅಂಶವನ್ನು ಹುಟ್ಟುಹಾಕಿ ಅಚ್ಚರಿಯನ್ನು ನೀಡಿ ಗಲಿಬಿಲಿಗೊಳಿಸಿ ಎದುರಾಳಿಯ ಸೋಲಿಗೆ ಕಾರಣವಾಗುವುದು ಪ್ರಮುಖ ಅಂಶವಾಗುತ್ತದೆ. ಇಂತದ್ದನ್ನು ಮೂಡಿಸುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದರು. ಮಧ್ಯದಲ್ಲಿದ್ದ ವಿನಯಚಂದ್ರ ರೈಡಿಂಗಿಗೆ ಬಂದಿದ್ದ ದಕ್ಷಿಣ ಕೋರಿಯನ್ ಆಟಗಾರನ ಕಾಲನ್ನು ರಪ್ಪನೆ ಹಿಡಿದಿದ್ದ. ಎಷ್ಟು ವೇಗವಾಗಿ ಕ್ಯಾಚ್ ಮಾಡಿದ್ದನೆಂದರೆ ಕ್ಷಣಾರ್ಧದಲ್ಲಿ ಎದುರಾಳಿ ಆಟಗಾರ ಗಲಿಬಿಲಿಯಾಗಿದ್ದ. ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆಗಾಗಲೇ ವಿನಯಚಂದ್ರ ಆತನ ಕಾಲನ್ನು ತಿರುಪಿ ನೆಲಕ್ಕೆ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಅಷ್ಟರಲ್ಲಿ ಭಾರತೀಯ ಆಟಗಾರರು ಮುಗಿಬಿದ್ದಿದ್ದರು. ಒಂದಂಕ ಸುಲಭವಾಗಿ ಸಿಕ್ಕಿತ್ತಷ್ಟೇ ಅಲ್ಲ, ವಿನಯಚಂದ್ರ ಅದ್ಭುತ ಕ್ಯಾಚರ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು. ಇದು ಆತನ ಎರಡನೇ ಕ್ಯಾಚ್ ಕೂಡ ಆಗಿತ್ತು.
ಪಂದ್ಯದುದ್ದಕ್ಕೂ ವಿನಯಚಂದ್ರ ಸಂಪೂರ್ಣವಾಗಿ ಮಿಂಚಿದ. ಇನ್ನೂ ಎಂಟು ಕ್ಯಾಚುಗಳನ್ನು ಹಿಡಿದ ವಿನಯಚಂದ್ರ ರೈಡಿಂಗಿನಲ್ಲಿಯೂ ಮೂರು ಅಂಕಗಳನ್ನು ಗಳಿಸಿಕೊಂಡು ಬಂದಿದ್ದ. ಪಂದ್ಯದಲ್ಲಿ ಭಾರತ ತಂಡ 30-8 ಅಂಕಗಳಿಂದ ದಕ್ಷಿಣ ಕೋರಿಯಾವನ್ನು ಸೆದೆಬಡಿದಿತ್ತು. ಪಂದ್ಯ ಸಂಪೂರ್ಣವಾಗಿ ವಿನಯಚಂದ್ರನಿಂದಲೇ ಭಾರತ ಗೆದ್ದಿದೆ ಎನ್ನುವಂತಾಗಿತ್ತು. ಎಲ್ಲ ವಿಭಾಗದಲ್ಲಿಯೂ ಮಿಂಚಿನ ಆಟವನ್ನಾಡಿದ ವಿನಯಚಂದ್ರ ಪಂದ್ಯದ ಅತ್ಯುತ್ತಮ ಕ್ಯಾಚರ್ ಹಾಗೂ ಅತ್ಯುತ್ತಮ ಆಟಗಾರ ಈ ಎರಡೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ. ಮುಂದಿನ ಪಂದ್ಯ ಥೈಲ್ಯಾಂಡಿನ ವಿರುದ್ಧವಿತ್ತು. ಅಲ್ಲಿಯೂ ಭಾರತ ದಿಗ್ವಿಜಯ ಹೊಂದಿತು. 36-5 ಅಂಕಗಳೊಂದಿಗೆ ಥೈಲ್ಯಾಂಡನ್ನು ಸೋಲಿಸಿದ ತಂಡದಲ್ಲಿ ವಿನಯಚಂದ್ರ ಮತ್ತೊಮ್ಮೆ ಅದ್ಭುತ ಕ್ಯಾಚರ್ ಆಗಿ ಹೊರಹೊಮ್ಮಿದ್ದ. ವಿನಯಚಂದ್ರನಿಗೆ ತನ್ನ ಆಟ ಬಹಳ ಖುಷಿ ನೀಡಿತ್ತು. ವಿನಯಚಂದ್ರ ನೀಡಿದ ಪ್ರದರ್ಶನ ಭಾರತದ ಆಟಗಾರರಿಗೆ ಅಚ್ಚರಿ, ಸಂತೋಷವನ್ನು ಒಟ್ಟೊಟ್ಟಿಗೆ ನೀಡಿತ್ತು. ಜಾಧವ್ ಅವರಂತೂ ವಿನಯಚಂದ್ರನನ್ನು ಮೆಚ್ಚುಗೆಯಿಂದ ನೋಡಿದ್ದರು. ವಿನಯಚಂದ್ರ ಮಾತ್ರ ಮಧುಮಿತಾ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿರುವುದೇ ತನ್ನ ಈ ಆಟಕ್ಕೆ ಕಾರಣ ಎಂದುಕೊಂಡಿದ್ದ. ಸೂರ್ಯನ್ ಕೂಡ ಹೀಗೆ ಛೇಡಿಸಿದಾಗ `ಇರಬಹುದೇನೋ..' ಎಂದು ಸುಮ್ಮನಾಗಿದ್ದ..
ನಿಧಾನವಾಗಿ ವಿಶ್ವಕಪ್ ರಂಗೇರುತ್ತಿತ್ತು. ಎ. ಗುಂಪಿನಿಂದ ಭಾರತ ಮೂರು ಪಂದ್ಯಗಳನ್ನಾಡಿ ಮೂರರಲ್ಲೂ ಗೆದ್ದು ಅಜೇಯವಾಗಿ ಉಳಿದಿತ್ತು. ಅಷ್ಟೇ ಅಲ್ಲದೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಪಾಕಿಸ್ತಾನ ನಂತರದ ಸ್ಥಾನದಲ್ಲಿತ್ತು. ಬಿ. ಗುಂಪಿನಲ್ಲಿ ಬಾಂಗ್ಲಾದೇಶ ಸಹ ಮೂರು ಪಂದ್ಯಗಳನ್ನಾಡಿ ಮೂರರಲ್ಲಿಯೂ ಗೆದ್ದು ಅಗ್ರಸ್ಥಾನಿಯಾಗಿ ಮುನ್ನಡೆದಿತ್ತು. ಮುಂದಿನ ಪಂದ್ಯಗಳು ಕಠಿಣವಾಗಲಿದ್ದವು. ವಿನಯಚಂದ್ರ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನದಿಂದ ಕಬ್ಬಡ್ಡಿ ವಿಶ್ವಕಪ್ ನ ಹೊಸ ಪ್ರತಿಭೆ ಹಾಗೂ ವಿಶೇಷ ಆಟಗಾರ ಎನ್ನುವ ಬಿರುದನ್ನೂ ಗಳಿಸಿಕೊಂಡಿದ್ದ. ಕಬ್ಬಡ್ಡಿ ಆಟಗಾರರು ಈತನ ಆಟವನ್ನು ಗಮನಿಸಲು ಆರಂಭಿಸಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಐದನೇ ಆಟಗಾರನಾಗಿದ್ದ. ಮೊದಲೆರಡು ಸ್ಥಾನಗಳಲ್ಲಿ ಬಾಂಗ್ಲಾದೇಶದ ಆಟಗಾರರಿದ್ದರೆ ಮೂರನೇ ಸ್ಥಾನದಲ್ಲಿ ಭಾರತೀಯ ಆಟಗಾರ, ನಾಲ್ಕನೆಯ ಸ್ಥಾನದಲ್ಲಿ ಪಾಕಿಸ್ತಾನದ ಒಬ್ಬ ಆಟಗಾರ ಹಾಗೂ ಐದನೆಯ ಸ್ಥಾನದಲ್ಲಿ ವಿನಯಚಂದ್ರ ಇದ್ದ. ಜಾಧವ್ ಸರ್ ಅವರು ವಿನಯಚಂದ್ರನ ಆಟದ ಮೇಲೆ ಹೆಚ್ಚಿನ ಒತ್ತನ್ನು ನೀಡಿದ್ದರು. ತಾಲೀಮು ಜೋರಾಗಿತ್ತು. ಬಿಡುವಿಗೆ ಆಸ್ಪದವಿಲ್ಲದಂತೆ ತರಬೇತಿಯನ್ನು ಕೈಗೊಳ್ಳಲಾಗುತ್ತಿತ್ತು. ವಿಶ್ವಕಪ್ ಕಬ್ಬಡ್ಡಿ ರಂಗೇರುತ್ತಿತ್ತು.
(ಮುಂದುವರಿಯುತ್ತದೆ.)