Saturday, June 14, 2014

ಹಲಸೆಂಬ ಕಲ್ಪವೃಕ್ಷ

ಹಸಿದು ಹಲಸು ಉಂಡು ಮಾವು ತಿನ್ನಬೇಕು ಎನ್ನುವ ನಾಣ್ಣುಡಿ ಚಾಲ್ತಿಯಲ್ಲಿದೆ. ಅರ್ಥಾತ್ ಹಸಿವಾಗಿದ್ದಾಗ ಹಲಸಿನ ಹಣ್ಣನ್ನು ತಿನ್ನಬೇಕು, ಊಟವಾದ ನಂತರ ಮಾವಿನ ಹಣ್ಣನ್ನು ತಿನ್ನಬೇಕು ಎನ್ನುವ ಹಿರಿಯರ ನಾಣ್ಣುಡಿ ಅರ್ಥಪೂರ್ಣವಾಗಿದೆ.
ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಕಲ್ಪವೃಕ್ಷದ ಸಾಲಿನಲ್ಲಿ ನಿಲ್ಲುವ ಇನ್ನೊಂದು ವೃಕ್ಷವೆಂದರೆ ಅದು ಹಲಸು. ಬೇರಿನಿಂದ ಹಿಡಿದು ಎಲೆಯ ತುದಿಯವರೆಗೂ ಹಲಸು ಮನುಷ್ಯನಿಗೆ ಬಳಕೆಗೆ ಬೇಕೇ ಬೇಕು. ಹಲಸಿನ ಚಿಕ್ಕ ಮಿಡಿಯಿಂದ ಹಣ್ಣಿನವರೆಗೂ ವಿವಿಧ ಖಾದ್ಯಗಳಿಗಾಗಿ ಬಳಕೆ ಮಾಡಲಾಗುತ್ತದೆ. ಖಾದ್ಯಕ್ಕೆ ಬಳಕೆಯಾಗಿ, ಆದಾಯದ ಮೂಲಕ್ಕೂ ಕಾರಣವಾಗಬಲ್ಲ ಹಲಸು ಇಂದಿನ ಕಾಲದಲ್ಲಿ ಕಲ್ಪವೃಕ್ಷ ಎಂದು ಕರೆಯಬಹುದಾಗಿದೆ.
ಹಲವು ಬಹು ಉಪಯೋಗಿ. ಆದರೆ ಹಲಸಿನ ಉಪಯೋಗದ ಕುರಿತು ಹೆಚ್ಚಿನವರಿಗೆ ಸರಿಯಾದ ಮಾಹಿತಿಯೇ ಇಲ್ಲ. ಗ್ರಾಮೀಣ ಭಾಗದವರಿಗಂತೂ ಹಲಸಿನ ಮೌಲ್ಯವರ್ಧನೆ ಹಾಗೂ ಆದಾಯದ ಮೂಲವಾಗಿ ಹಲಸನ್ನು ಬಳಕೆ ಮಾಡುವುದರ ಕುರಿತು ತಿಳುವಳಿಕೆ ಕಡಿಮೆಯಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ನಗರ ಪ್ರದೇಶದಲ್ಲಿ ಹಲಸಿನ ಹಣ್ಣಿನ ಬಳಕೆ ಮಾಡುವುದಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅದನ್ನು ಹಾಳು ಮಾಡುವುದೇ ಅಧಿಕ ಎನ್ನಬಹುದು. ನಗರ ಪ್ರದೇಶಗಳಲ್ಲಿ ಹಲಸಿನ ಹಣ್ಣು ಹಾಳಾಗದಂತೆ ಬಳಕೆ ಮಾಡಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಒಂದು ಹಾಳಾದರೆ ಇನ್ನೊಂದು ಎನ್ನುವ ಭಾವನೆಯಿಂದ ಹಲಸು ಹಾಳಾಗುವುದೇ ಹೆಚ್ಚು. ಮಲೆನಾಡಿನಲ್ಲಿ ಹಲಸಿನ ಬಳಕೆಯನ್ನು ಹಲವು ವಿಧಗಳಲ್ಲಿ ಮಾಡುತ್ತಾರೆ. ಹಲಸನ್ನು ಬಹು ಉಪಯೋಗಿಯಾಗಿ ಬಳಕೆ ಮಾಡುವುದರಲ್ಲಿ ಕೇರಳಿಗರು ನಿಸ್ಸೀಮರು. ಹೊಸ ಹೊಸ ರುಚಿಯ ತಿನಿಸುಗಳು, ಖಾದ್ಯಗಳನ್ನು ತಯಾರು ಮಾಡುವ ಕೇರಳಿಗರ ಎದುರು ನಮ್ಮ ಮಲೆನಾಡಿಗರ ಜ್ಞಾನ ಕಡಿಮೆಯೇ ಎನ್ನಬಹುದು.
ಹಲಸು ಬಹುಉಪಯೋಗಿ. ಹಲಸಿನ ತೊಗಟೆಗಳು ಯಜ್ಞ ಯಾಗಾದಿಗಳಲ್ಲಿ ಬಳಕೆಯಾದರೆ ಹಲಸಿನ ಎಲೆಗಳನ್ನು ಸಮಿತ್ತುಗಳಾಗಿ ಬಳಕೆ ಮಾಡಲಾಗುತ್ತದೆ. ಮರವನ್ನು ಮನೆಗಳಲ್ಲಿ ಹೊಸ್ತಿಲಿಗೆ ಬಳಕೆ ಮಾಡುವುದರ ಜೊತೆಗೆ ಪೀಠೋಪಕರಣಗಳಿಗೆ ಉಪಯೋಗಿಸಲಾಗುತ್ತದೆ. ಹಲಸು ಮರಗಳ ಜಾತಿಯಲ್ಲೇ ಶ್ರೇಷ್ಟವಾದುದು ಎನ್ನುವ ಕಾರಣದಿಂದಾಗಿ ಪೀಠೋಪಕರಣಗಳಲ್ಲಿ ಹಲಸಿನಿಂದ ಮಾಡಿರುವುದಕ್ಕೆ ಬೆಲೆಯೂ ಹೆಚ್ಚು ಬೇಡಿಕೆಯೂ ಜಾಸ್ತಿ ಎನ್ನಬಹುದು. ಹಲಸಿನ ಹಣ್ಣು ರುಚಿಕರ. ಹಲಸಿನ ಮಿಡಿಯನ್ನು ತರಕಾರಿಯ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಹಲಸಿನ ಕಾಯಿಯನ್ನು ಚಿಪ್ಸ್, ಚಾಟ್ಸ್ ಸೇರಿದಂತೆ ಹಲವಾರು ಖಾದ್ಯಗಳ ಬಳೆಕೆಗೆ ಉಪಯೋಗಿಸಲಾಗುತ್ತದೆ. ಹಣ್ಣುಗಳ ಉಪಯೋಗ ಬಹುತೇಕರಿಗೆ ತಿಳಿದೇ ಇದೆ. ಹಲಸಿನ ಬೀಜಗಳನ್ನು ಉಪ್ಪು ಹಾಕಿ ಹುರಿದು ಹುರಿಗಡಲೆಯಂತೆ ತಿನ್ನುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಬಳಕೆಗೆ ಬಂದಿದೆ.
ಯಲ್ಲಾಪುರದ ಕೆಲವು ಭಾಗಗಳಲ್ಲಿ ವರ್ಷವೊಂದರಲ್ಲಿ ಎಂಟು ತಿಂಗಳುಗಳ ಕಾಲ ಹಲಸಿನ ಬಳಕೆ ಮಾಡುತ್ತಾರೆ. ಮಿಳ್ಳೆಯಿಂದ ಹಿಡಿದು ಹಣ್ಣಾಗಿ ಉದುರಿ ಹೋಗುವವರೆಗೂ ಪ್ರತಿದಿನ ಹಲಸಿನಿಂದ ಮಾಡಿದ ವಿವಿಧ ತಿಂಡಿಗಳನ್ನು ಈ ಭಾಗದಲ್ಲಿ ಬಳಕೆ ಮಾಡುತ್ತಾರೆ. ಶಿರಸಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲಸಿನ ಮೌಲ್ಯ ವರ್ಧನೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಕೆಲವರು ಹಲಸಿನ ಹಣ್ಣಿನ ತ್ಯಾಜ್ಯಗಳಿಂದ ಪಶು ಆಹಾರ ತಯಾರಿಕೆಯ ಪ್ರಯತ್ನಗಳನ್ನು ನಡೆಸಿದ್ದಾರೆ. ಹಲಸಿನ ಉಪ್ಪಿನಕಾಯಿ, ಹಲಸಿನ ಜ್ಯಾಂ, ಟೆಟ್ರಾ ಪ್ಯಾಕುಗಳಲ್ಲಿ ಹಲಸಿನ ಕಡುಬುಗಳನ್ನು ತುಂಬಿ ವಿದೇಶಗಳಿಗೆ ಕಳಿಸುವುದು, ವಿವಿಧ ರುಚಿಯ ಹಲಸಿನ ಕಾಯಿಯ ಚಿಪ್ಸ್, ಹಲಸಿನ ಉಪ್ಪಿಟ್ಟುಹೀಗೆ ಹಲಸನ್ನು ಎಲ್ಲ ರೀತಿಯಿಂದ ಬಳಕೆ ಮಾಡಲು ಮುಂದಾಗುತ್ತಿದ್ದಾರೆ.
ಹಾಳಾಗುವ ಹಲಸನ್ನು ಮೌಲ್ಯವರ್ಧನೆ ಮಾಡಿ ಆದಾಯದ ಮೂಲವನ್ನಾಗಿ ಮಾಡಲು ವಿಪುಲ ಅವಕಾಶವಿದೆ. ತ್ಯಾಜ್ಯವಾಗುವ ಹಲಸು ಕಾಸನ್ನು ತಂದುಕೊಡಬಲ್ಲದು. ಉಪ ಉತ್ಪನ್ನಗಳನ್ನು ತಯಾರಿಸಿ ಈ ಮೂಲಕ ಹಣಗಳಿಸಬಹುದಾಗಿದೆ. ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಗೆ ಕಳಿಸಿದರೆ ಹಾಳಾಗುವ ಹಲಸು ಆದಾಯದ ಮೂಲವಾಗಬಲ್ಲದು. ಹಲಸಿನ ಕಾಯಿ ಅಥವಾ ಹಣ್ಣನ್ನು ಹಾಳು ಮಾಡುವ ಬದಲು ಅದರ ಉಪ ಉತ್ಪನ್ನಗಳನ್ನು ತಯಾರಿಸಿದರೆ ಹಣವನ್ನು ತಂದುಕೊಡಲು ಸಾಧ್ಯವಿದೆ. ನಗರದಲ್ಲಿ ಹಲಸಿನ ಮೇಳದ ಮೂಲಕ ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳು ಅನಾವರಣಗೊಳ್ಳುತ್ತಿವೆ. ಗ್ರಾಮೀಣ ಭಾಗದ ಜನರು ಹಲಸಿನ ಮೂಲಕ ಆದಾಯ ಗಳಿಸಿಕೊಳ್ಳುವಂತಾದರೆ ಹಲಸು ಕಲ್ಪವೃಕ್ಷವಾಗುವ ದಿನಗಳು ದೂರವಿಲ್ಲ.

**
(ಈ ಬರಹ 14-06-2014ರ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ)

Thursday, June 12, 2014

ನಿನ್ನ ದೆಸೆಯಿಂದ

ನೀನೆ ನನ್ನ ಬಾಳು-ಬದುಕು
ಭಾವ ಲಹರಿ ಪ್ರತಿಬಿಂಬ
ನೀನೆ ನನ್ನ ಕನಸು-ಮನಸು
ಎದೆಯ ತುಂಬ ಸವಿಬಿಂಬ ||

ನೀನೆ ನನ್ನ ಮನದ ದುಗುಡ
ಪ್ರೀತಿ ಮನಸು ಜೇನ್ಗಡಲು
ನೀನೆ ನನ್ನ ಬಾಳ ದಡ
ತುಂಬಿ ತುಳುಕೋ ಮನದೊಡಲು ||

ನೀನೆ ನನ್ನ ಜೀವದುಸಿರು
ಬದುಕು ನೀಡ್ವ ಪ್ರಾಣ ಪಕ್ಷಿ
ನೀನೆ ನನ್ನ ಬಾಳ ಹೆಸರು
ಬಯಸಿತಲ್ಲೇ ನನ್ನ ಅಕ್ಷಿ ||

ನೀನೆ ನನ್ನ ಸವಿಯ ಪ್ರೀತಿ
ಬಾಳಿಗೊಂದು ಅರ್ಥವು
ನಿನ್ನಿಂದಲೆ ರೀತಿ ನೀತಿ
ಇರದಿರದುವೆ ವ್ಯರ್ಥವು ||

ನೀನೆ ನನ್ನ ಇಡಿಯ ವಿಶ್ವ
ಸರ್ವ ಸಕಲ ಚೇತನ
ನೀನಿಲ್ಲದೆ ನನ್ನ ಬದುಕು
ಸಾವು ಸನಿಹ ಕ್ಷಣ ಕ್ಷಣ ||

**
(ಈ ಕವಿತೆಯನ್ನು ಬರೆದಿರುವುದು 16-07-2006ರಂದು ದಂಟಕಲ್ಲಿನಲ್ಲಿ..)

Wednesday, June 11, 2014

ಒಲವ ಲತೆಗೆ ನೀರನೆರೆದ.. ಭಾಗ-3

                  ನಂತರದ ದಿನಗಳಲ್ಲಿ ಸಿಂಧು ಹಾಗೂ ದಿಗಂತ ಇಬ್ಬರ ಬಾಳಿನಲ್ಲಿಯೂ ಅನೇಕ ತಿರುವುಗಳು ಘಟಿಸಿದ್ದವು. ಬದುಕಿನಲ್ಲಿ ಇಬ್ಬರೂ ಅನೇಕ ಪಯಣಗಳನ್ನು ಕೈಗೊಳ್ಳಬೇಕಾಗಿಯೂ ಬಂದಿದ್ದವು. ಮೊದ ಮೊದಲು ಮಾಡೆಲ್ ಆಗಿ ಬೆಂಗಳೂರಿನಲ್ಲಿ ಪರಿಚಯವಾದ ಸಿಂಧು ಕೊನೆಗೊಮ್ಮೆ ಸಿನೆಮಾ ಜಗತ್ತಿಗೆ ಕಾಲಿಟ್ಟಿದ್ದಳು. ಹೆಸರಾಂತ ನಟ ಹಾಗೂ ನಿರ್ದೇಶಕರಿಬ್ಬರ ಪರಿಚಯವೂ ಆಗಿತ್ತು. ನಟನೊಂದಿಗೆ ನಟಿಸಲು ಒಪ್ಪಿದ್ದಳು. ಆಕೆ ನಟಿಸಿದ ಮೊದಲ ಚಿತ್ರವೇ ಶತದಿನವನ್ನು ಆಚರಿಸಿದ್ದರಿಂದ ಬಿಡುವಿಲ್ಲದಷ್ಟು ಅವಕಾಶಗಳು ಲಭ್ಯವಾಗಿದ್ದವು. ಕನಿಷ್ಟ ಮೂರು ವರ್ಷಗಳ ಕಾಲ ಬಿಡುವಿಲ್ಲದಂತೆ ಸಿನೆಮಾ ಜಗತ್ತನ್ನು ಆಳಿದಳು ಸಿಂಧು. ಚಿತ್ರ ಜಗತ್ತು ಆಕೆಗೆ ಅನೇಕ ಪ್ರಶಸ್ತಿಗಳನ್ನೂ, ಬಿರುದನ್ನೂ ನೀಡಿತ್ತು. ಹೆಸರು, ಅಭಿಮಾನಿಗಳನ್ನು ನೀಡಿತ್ತು.
**
                 ಸಿಂಧು ಒಂದೇ ಮಾತಿನಿಂದ ದಿಗಂತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ಉಪ್ಪರಿಗೆಯ ಮೇಲೆ ಹಾಯಾಗಿ ವಿಹಾರ ಮಾಡುತ್ತಿದ್ದವನು ಧಡಕ್ಕನೆ ಚರಂಡಿಗೆ ಬಿದ್ದಂತಹ ಆಘಾತವಾಗಿತ್ತು ದಿಗಂತನಿಗೆ. ತಾನು ನಂಬಿದ್ದ ಬದುಕು ತನ್ನನ್ನು ಅಸಹ್ಯವಾಗಿ ನೋಡುತ್ತಿದ್ದೆಯೇನೋ ಅನ್ನಿಸಿತ್ತು. ಮಾತಿನ ಮಹಲಿನಲ್ಲಿ ಆರಾಮಾಗಿದ್ದ ದಿಗಂತ ಇದ್ದಕ್ಕಿದ್ದಂತೆ ಮೌನದ ಕೋಟೆಯೊಳಗೆ ಸೇರಿಕೊಂಡ. ಡಿಗ್ರಿ ಮುಗಿಸುವ ವೇಳೆಗೆ ದಿಗಂತನಲ್ಲಿ ಮಾತು ಸತ್ತುಹೋಗಿದೆಯೇನೋ ಅನ್ನಿಸುವಂತಾಗಿತ್ತು. ದಿಗಂತನ ಜೊತೆಗೆ ಟ್ರೆಕ್ಕಿಂಗಿಗೆ ಹೋಗಿ ಚಾರಣ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದ ಮಿತ್ರರೆಲ್ಲ ದಿಗಂತನ ಸ್ಥಿತಿಗೆ ತೀವ್ರ ಬೇಸರವನ್ನು ವ್ಯಕ್ತ ಪಡಿಸಿದ್ದರು. ಒಂದೆರಡು ವರ್ಷಗಳ ಕಾಲ ದಿಗಂತ ಮೌನಿಯಾಗಿಯೇ ಇದ್ದ. ಎಷ್ಟು ಬೇಕೋ ಅಷ್ಟು ಮಾತುಗಳು. ಮನಸ್ಸಿನಲ್ಲಿ ಯಾವಾಗಲೂ ಅದೇನೋ ಯೋಚನೆಗಳನ್ನು ಕೈಗೊಳ್ಳುತ್ತಿದ್ದಂತೆ ಅನ್ನಿಸುತ್ತಿತ್ತು.
               ಡಿಗ್ರಿ ಮುಗಿಯುತ್ತಿದ್ದಂತೆ ದಿಗಂತ ಮಾಡಿದ ಮೊದಲನೇ ಕೆಲಸವೇ ವೆಬ್ ಸೈಟ್ ಮಾಡಿದ್ದು. ವೆಬ್ ಸೈಟ್ ಮೂಲಕ ಚಾರಣದ ಎಲ್ಲ ಸಾದ್ಯತೆಗಳನ್ನೂ, ಶಿಬಿರಗಳನ್ನೂ ಕೈಗೊಂಡ. ಚಾರಣ ಆತನಿಗೆ ಹೆಸರನ್ನು ತಂದುಕೊಟ್ಟಿತು. ಚಾರಣ ಜಗತ್ತು ಎಷ್ಟು ಕಠಿಣವೋ ಆತನ ಮನಸ್ಸೂ ಕಠಿಣತೆಯ ಕಡೆಗೆ ಸಾಗಿತ್ತು. ಸಾಕಷ್ಟು ದುಡ್ಡಾದ ತಕ್ಷಣವೇ ಆತ ಬೆಂಗಳೂರಿಗೆ ಕಾಲಿರಿಸಿದ್ದ. ತನ್ನೆಲ್ಲ ಕಾಂಟ್ಯಾಕ್ಟುಗಳು, ಹೆಸರು, ಮಿತ್ರರ ಸಹಾಯದಿಂದ ಸಿಂಧುವಿಗೆ ಸೆಡ್ಡು ಹೊಡೆಯುತ್ತೇನೆ ಎಂಬಂತೆ ಸಿನೆಮಾ ಜಗತ್ತಿಗೆ ಕಾಲಿಟ್ಟುಬಿಟ್ಟಿದ್ದ.
              ದಿಗಂತನ ಸಿನೆಮಾ ಲೋಕದ ಆರಂಭ ಸಿಂಧುವಿನಂತೆ ಇರಲಿಲ್ಲ. ಗಾಡ್ ಫಾದರ್ ಇಲ್ಲದೆಯೇ ಚಿತ್ರರಂಗದಲ್ಲಿ ಕಾಲೂರುವುದು ಕಷ್ಟವೇ ಆಗಿತ್ತು. ಆರಂಭದಲ್ಲಿ ಸೈಡ್ ರೋಲುಗಳಲ್ಲಿ ನಟಿಸಿದ. ಹೀರೋನ ಜೊತೆಗೆ ಹೊಡೆದಾಡುವ ಪಾತ್ರವೋ, ಹೀರೋಗೆ ಸಹಾಯ ಮಾಡುವ ಪಾತ್ರ, ಹೀರೋನ ತಮ್ಮ, ಕಾಲೇಜಿನ ಗೆಳೆಯ, ಹೀರೋಯಿನ್ ತಮ್ಮ, ವಿಲನ್ನು, ರೌಡಿ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಆತ ನಟಿಸಿದ. ಸಿಕ್ಕ ಪಾತ್ರಗಳಲ್ಲೇ ನಟನೆಯನ್ನು ಪ್ರಚುರಪಡಿಸಿದ. ಅವಕಾಶ ಸಿಕ್ಕಾಗಲೆಲ್ಲ ಸಂಭಾಷಣೆಯನ್ನು ಬರೆಯುವುದೋ, ನಿರ್ದೇಶಕನಿಗೆ ಸಹಾಯ ಮಾಡುವುದೋ ಇತ್ಯಾದಿ ಕೆಲಸಗಳನ್ನೂ ನಿರ್ವಹಿಸಿದ. ಸಿನೆಮಾಗಳಲ್ಲಿ ನಟಿಸಿದಂತೆಲ್ಲ ಹೊಸಬರು, ಹಲವರು, ಹಿರಿಯರು ಪರಿಚಿತರಾದರು. ಯಶಸ್ಸೆಂಬುದು ಆರಂಭದ ದಿನಗಳಲ್ಲಿ ದಿಗಂತನಿಗೆ ಸುಲಭವಾಗಿ ದಕ್ಕಲೇ ಇಲ್ಲ. ಧೃತಿಗೆಡದ ದಿಗಂತ ಒಂದೊಂದೇ ಮೆಟ್ಟಿಲುಗಳನ್ನು ಕಟ್ಟುತ್ತ ಹೊರಟ. ಒಂದು ವರ್ಷದಲ್ಲಿ ಮುಖ್ಯ ಪಾತ್ರವನ್ನು ಹೊರತು ಪಡಿಸಿ ಇತರ ಪಾತ್ರಗಳಲ್ಲೆಲ್ಲ ನಟಿಸಿ ಸೈ ಎನ್ನಿಸಿಕೊಂಡ. ಸಹಾಯಕ ಪಾತ್ರಗಳಲ್ಲಿ ಒಂದೆರಡು ಪ್ರಶಸ್ತಿಗಳೂ ದಿಗಂತನನ್ನು ಅರಸಿ ಬಂದವು. ಕನ್ನಡ ಚಿತ್ರ ಜಗತ್ತು ಆತನಿಗೆ ಸಂಪೂರ್ಣವಾಗಿ ಅರ್ಥವಾಗುವ ವೇಳೆಗೆ ತಮಿಳು ಚಿತ್ರರಂಗ ದಿಗಂತನನ್ನು ಕರೆದುಬಿಟ್ಟಿತ್ತು.
            ಅಚಾನಕ್ಕಾಗಿ ಬಂದ ತಮಿಳು ಚಿತ್ರರಂಗದ ಅವಕಾಶವನ್ನು ಟಪ್ಪನೆ ಬಾಚಿಕೊಂಡಿದ್ದ ದಿಗಂತ. ಯಾವುದೋ ಕನ್ನಡ ಸಿನೆಮಾದಲ್ಲಿ ಈತನ ಅಭಿನಯವನ್ನು ನೋಡಿ ಇಷ್ಟಪಟ್ಟಿದ್ದ ಹೆಸರಾಂತ ನಿರ್ದೇಶಕರೊಬ್ಬರು ದಿಗಂತನನ್ನು ಕರೆದಿದ್ದರು. ಇಬ್ಬರು ನಾಯಕ ನಟರಿರುವ ಕಲಾತ್ಮಕ ಚಿತ್ರದಲ್ಲಿ ಅಭಿನಯಿಸುತ್ತೀಯಾ ಎಂದೂ ಕೇಳಿಬಿಟ್ಟದ್ದರು. ಮೊದಲು ಭಯವಿತ್ತಾದರೂ ದಿಗಂತ ಒಪ್ಪಿಕೊಂಡುಬಿಟ್ಟಿದ್ದ.  ಚಿತ್ರದಲ್ಲಿ ನಟಿಸಿದ್ದು ಸಾಕಷ್ಟು ಹೆಸರನ್ನು ತಂದಿತ್ತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಓಡಲಿಲ್ಲ. ಆದರೆ ದಿಗಂತನ ಹೆಸರು ಎಲ್ಲೆಡೆ ಹರಡಿತ್ತು. ಒಂದೆರಡು ಪ್ರಶಸ್ತಿಗಳೂ ಸಿಕ್ಕಿದ್ದವು.
             ಹಲವು ತಿಂಗಳುಗಳ ನಂತರ ಸಿಂಧು ದಿಗಂತನ ಹೆಸರನ್ನು ಕೇಳಿದ್ದಳು. ಕನ್ನಡ ಚಿತ್ರಗಳಲ್ಲಿ ದಿಗಂತ ನಟಿಸುತ್ತಿದ್ದನಾದರೂ ಕಾಕತಾಳೀಯವೋ ಅಥವಾ ಇನ್ಯಾವ ಕಾರಣವೋ ದಿಗಂತನ ಭೇಟಿ ಅಥವಾ ಆತನ ಕುರಿತು ಮಾಹಿತಿ ಸಿಂಧುವಿಗೆ ಸಿಕ್ಕಿರಲಿಲ್ಲ. ದಿಗಂತ ಎಂಬ ಹೆಸರನ್ನು ಕೇಳಿದ್ದಳೇನೋ ಆದರೆ ಇವನೇ ಅವನು ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿದ ದಿಗಂತ ಯಾರಿರಬಹುದೆಂದು ಆಲೋಚಿಸಿ ಮಾಹಿತಿ ಪಡೆದಾಗ ದಿಗಂತ ತನಗೆ ಪರಿಚಿತನೇ ಎಂದಾಗ ಆಕೆಯ ಮನಸ್ಸಿನ ಭಾವನೆಗಳು ಹೇಳಿಕೊಳ್ಳಲಾಗದಂತಾಗಿದ್ದವು. ಮೊದಲ ಬಾರಿಗೆ ಆಘಾತವಾಗಿತ್ತಾದರೂ ಅದನ್ನು ತೋರಿಸಿಕೊಂಡಿರಲಿಲ್ಲ.
           ದಿಗಂತನಿಗೆ ತಮಿಳು ಚಿತ್ರರಂಗದಲ್ಲಿ ಹಲವು ಅವಕಾಶಗಳು ಸಿಕ್ಕಿದ್ದವು. ನಾಯಕ ನಟನಾಗಿ ತಮಿಳು ಚಿತ್ರಂಗದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ದಿಗಂತ. ಒಂದೆರಡು ಚಿತ್ರಗಳು ಚನ್ನಾಗಿ ಓಡಿದ ಪರಿಣಾಮ ದಿಗಂತನ ಬದುಕಿನ ದಿಕ್ಕು ಬದಲಾವಣೆ ಹಾದಿಯಲ್ಲಿ ಸಾಗಲಾರಂಭಿಸಿತ್ತು. ಪಕ್ಕದ ತೆಲುಗು ಚಿತ್ರರಂಗವೂ ಆತನನ್ನು ಕರೆದಿತ್ತು. ಅಳೆದು ತೂಗಿ ಅಲ್ಲಿಯೂ ನಟನೆ ಮಾಡಿದ್ದ. ಒಂದೆರಡು ಚಿತ್ರಗಳು ಅವರೇಜ್ ಆಗಿ ಗೆದ್ದಾಗ ಕನ್ನಡ ಚಿತ್ರಂರಂಗ ಈತ ತಮ್ಮವನು ಎಂದುಕೊಂಡು ಮತ್ತೆ ಕರೆದಿತ್ತು.
            ಕನ್ನಡ ಚಿತ್ರರಂಗದಿಂದ ನಾಯಕನಾಗಿ ನಟಿಸಲು ಆಹ್ವಾನ ಬಂದಾಗ ಸಾಕಷ್ಟು ಬಾರಿ ಆಲೋಚನೆ ಮಾಡಿದ್ದ ದಿಗಂತ. ಕಥೆ, ನಿರ್ದೇಶಕ, ನಾಯಕಿಯ ಬಗ್ಗೆ ಆಲೋಚಿಸಿದ್ದ. ಯಾರೋ ಹೊಸ ನಿರ್ದೇಶಕರಿದ್ದರು. ಕಥೆ ಮಾತ್ರ ಬಹಳ ಚನ್ನಾಗಿತ್ತು. ನಾಯಕಿಯೂ ಯಾರೋ ಹೊಸಬರಿದ್ದರು. ಒಪ್ಪಿಕೊಂಡು ನಟಿಸಿದ್ದ. ಚಿತ್ರ ಚನ್ನಾಗಿ ಓಡಿತ್ತು. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದ ದಿಗಂತ. ನಂತರ ಹಲವು ಚಿತ್ರಗಳಲ್ಲಿ ನಟಿಸಿದ ದಿಗಂತ ಮುಂದೊಮ್ಮೆ ನಿರ್ದೇಶಕನಾಗಿಯೂ ಹೆಸರು ಮಾಡಿದ. ಹೀಗಿದ್ದಾಗಲೇ ಸಿಂಧುವಿನ ಕುರಿತು ಕೇಳಿಬಂದ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತ್ತು. ದಿಗಂತ ಆಘಾತವನ್ನು ಹೊಂದಿದ್ದ.
***
           ಸಿಂಧುವಿಗೆ ನಿರ್ದೇಶಕನ ಜೊತೆಗೆ ಸಂಬಂಧವಿದೆ ಎಂದು ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ದಪ್ಪಕ್ಷರದಲ್ಲಿ ಮುದ್ರಿಸಿತ್ತು. ಅದೇ ವಿಷಯವನ್ನು ಎರಡು-ಮೂರು ವಾರಗಳ ಕಾಲ ಸರಣಿ ಸರಣಿಯಾಗಿ ಬರೆದಿತ್ತು. ಅಷ್ಟಕ್ಕೆ ಸಾಲದೆಂಬಂತೆ ಒಂದೆರಡು ವಾಹಿನಿಗಳೂ ಮೂರ್ನಾಲ್ಕು ದಿನಗಳ ಕಾಲ ಇದೇ ವಿಷಯವನ್ನು ಜಗ್ಯಾಡಿ ಜಗ್ಯಾಡಿ ಪ್ರಸಾರ ಮಾಡಿದ್ದವು. ಪ್ಯಾನಲ್ ಚರ್ಚೆಯೂ ನಡೆದಿತ್ತು. ಸಿಂಧು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸರಣಿ ಸರಣಿಯಾಗಿ ಪ್ರಸಾರ ಮಾಡುತ್ತಿದ್ದ ಮಾಧ್ಯಮ ಜಗತ್ತು ಒಮದು ಕಡೆಯಾಗಿದ್ದರೆ ಇನ್ನೊಂದು ಕಡೆಯಲ್ಲಿ ಈಕೆ ಮಾನಸಿಕವಾಗಿ ಕೆಳಕ್ಕಿಳಿಯುತ್ತ ಹೋಗಿದ್ದಳು. ಸಾಲದೆಂಬಂತೆ ಒಮದೆರಡು ಸಂಘಟನೆಗಳು ಪ್ರತಿಭಟನೆಯನ್ನೂ ಕೈಗೊಂಡಿದ್ದವು.
           ದಿಗಂತನಿಗೆ ವಿಷಯ ಗೊತ್ತಾದಾಗ ಕುದ್ದು ಹೋಗಿದ್ದ. ಎಷ್ಟೇ ಹೆಸರು ಗಳಿಸಿದ್ದರೂ ಸಿಂಧು ತೀರಾ ನೈತಿಕ ಅಧಃಪತನಕ್ಕೆ ಇಳಿಯಲಾರಳು ಎಂಬ ಆತ್ಮವಿಶ್ವಾಸ ದಿಗಂತನದ್ದಾಗಿತ್ತು. ನಿರ್ದೇಶಕನ ಜೊತೆಗೆ ಸಿಂಧುವಿಗೆ ಸಂಬಂಧವಿದೆ ಎನ್ನುವುದು ಖಂಡಿತ ಸತ್ಯ ಸುದ್ದಿಯಲ್ಲ. ಇದು ಸುಳ್ಳು ಸುದ್ದೇ ಇರಬೇಕು, ತೇಜೋವಧೆ ಮಾಡಲು ಮಾಡಿರಬೇಕು ಎಂದುಕೊಂಡ ದಿಗಂತ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಸಿಂಧುವಿಗೆ ಪೋನ್ ಮಾಡಲು ಯತ್ನಿಸಿದ.
           ತನ್ನ ವಿರುದ್ಧ ಬಿತ್ತರಗೊಳ್ಳುತ್ತಿರುವ ಸುದ್ದಿ ಸುಳ್ಳು ಎಂದು ಎಷ್ಟೋ ಸಾರಿ ಸಿಂಧು ಹೇಳಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈಕೆಯ ತೇಜೋವಧೆಯನ್ನೇ ಪರಮಗುರಿಯಾಗಿರಿಸಿಕೊಂಡಿದ್ದವರು ಅದನ್ನು ಸಾಧಿಸುವಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದರು. ಮಾನಸಿಕ ಆಘಾತದ ಪರಿಣಾಮ ಸಿಂಧು ಯಾರನ್ನೂ ನಂಬಬಾರದು ಎನ್ನುವಂತಹ ಸ್ಥಿತಿ ತಲುಪಿದ್ದಳು. ಹೀಗಿದ್ದಾಗಲೇ ದಿಗಂತ ಪೋನ್ ಮಾಡಿದ್ದ. ಪೋನೆತ್ತಿಕೊಂಡವಳಿಗೆ ಅಚ್ಚರಿಯಾಗಿತ್ತು. ದಿಗಂತ ಆಕೆಗೆ ಸಾಂತ್ವನ ಹೇಳಿದ್ದ. ಹಲವು ವರ್ಷಗಳ ನಂತರ ಆಕೆಗೆ ಏನೋ ನೆಮ್ಮದಿ, ಸಮಾಧಾನ ಸಿಕ್ಕಂತಾಗಿತ್ತು. ದಿಗಂತ ಆಕೆಯ ಬೆನ್ನಿಗೆ ನಿಲ್ಲಲು ಮುಂದಾಗಿದ್ದ. ಆಕೆಯ ಪರವಾಗಿ ಪದೇ ಪದೆ ಹೇಳಿಕೆಗಳನ್ನು ನೀಡಿದ ನಂತರವೇ ಆಕೆಯ ವಿರುದ್ಧ ಅಪಪ್ರಚಾರ ನಿಂತಿತ್ತು. ಆದರೆ ಸಿಂಧು ಮಾನಸಿಕವಾಗಿ ಜರ್ಝರಿತಳಾಗಿದ್ದಳು. ಅವಳನ್ನು ಮಾನಸಿಕವಾಗಿ ಮೊದಲಿನ ಸ್ಥಿತಿಗೆ ತರಬೇಕಾದ ಪ್ರಮುಖ ಗುರಿ ದಿಗಂತನ ಎದುರಿಗಿತ್ತು..

(ಮುಂದುವರಿಯುತ್ತದೆ...)

Monday, June 9, 2014

ಮುಖಿ...

ಜೀವನ್ಮುಖಿ...
ಸಪ್ತ ಶರಧಿಯನ್ನೂ, ಶರ
ಬಂಧನವನ್ನೂ ದಾಟುವಾ...

ಪ್ರೇಮಮುಖಿ...
ಹೊಸದೊಂದು ಕಾವ್ಯಕಟ್ಟಿ
ಹೊಸ ಲೋಕ ಕಟ್ಟುವಾ...

ಸಖಿ...
ಭಾವ ಸಾಗರದೊಳಗೆ
ಬಾಳುವಾ, ಗೆದ್ದು ಮರಳುವಾ...

ಅಗ್ನಿಶಿಖಿ...
ಒಡಲೊಳಗಿನ ಬಿಸಿ ಆರಿ
ಒಮ್ಮೆ ತಂಪಾಗುವಾ...

ಮುಖಿ...
ಬಾಳುವಾ, ಬಾಳೊಳು
ಸುಖ, ದುಃಖ ಅರಿಯುವಾ...

ಸಾರ್ಥಕ್ಯವೆಂಬ ಅರ್ಥ 
ಹುಡುಕುವಾ...

***
(ಈ ಕವಿತೆಯನ್ನು ಬರೆದಿರುವುದು ಶಿರಸಿಯಲ್ಲಿ 06.03.2007ರಂದು)
(ಈ ಕವಿತೆ ಎಂ.ಇ.ಎಸ್. ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 2007-08ರ ವಾರ್ಷಿಕ ಸಂಚಿಕೆ ಮಯೂರದಲ್ಲಿ ಪ್ರಕಟವಾಗಿದೆ..)

Sunday, June 8, 2014

ಬೆಂಗಾಲಿ ಸುಂದರಿ -14


                 ಬೆಂಗಾಲಿ ಸೀರೆಯ ಸುಂದರಿಯಾಗಿ ಆಗಮಿಸಿದ್ದ ಮಧುಮಿತಾ ವಿನಯಚಂದ್ರನ ಮಾತನ್ನು ಕದ್ದೇ ಬಿಟ್ಟಿದ್ದಳು. ಆಕೆಯ ಸೌಂದರ್ಯವನ್ನು ವೀಕ್ಷಿಸುವಲ್ಲಿಯೇ ವಿನಯಚಂದ್ರ ಮೌನಿಯಾಗಿಬಿಟ್ಟಿದ್ದ. ಅಪರೂಪಕ್ಕೆಂಬಂತೆ ಆತನ ಮನಸ್ಸು ಮತ್ತೊಮ್ಮೆ ಬಾವುಕತೆಯ ಪರೀಧಿಯೊಳಗೆ ನುಗ್ಗಿಬಿಟ್ಟಿತ್ತು. ಸಮಯಸಿಕ್ಕರೆ ಆತ ಕವಿತೆಯನ್ನು ಬರೆದು ಮುಗಿಸುತ್ತಿದ್ದನೇನೋ. ಆಗಲೆ ಪದಗಳನ್ನು ಮನಸ್ಸು ಪೊಣಿಸಲು ಶುರುಮಾಡಿತ್ತು.
ಕಾಡುವೆಯಲ್ಲೇ ಬಂಗಾಳದ ಬೆಡಗಿ..
ನನ್ನ ಪ್ರೀತಿಯ ಹುಡುಗಿ..
ಮಾತು ಬೇಡವೇ ಕಥೆಯು ಬೇಡವೆ
ಎದೆ ನಿಂತಿದೆ ಗುಡುಗಿ...
ಎಂದೇನೋ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ಆಕೆ ಹಾಯ್ ಎಂದಿದ್ದಳು. ಈತ ಮುಗುಳ್ನಕ್ಕಿದ್ದ. ಮನಸ್ಸು ಹೂವಾಗಿತ್ತು.
               ಮುಂದಿನ ಹಲವು ಕ್ಷಣಗಳನ್ನು ವಿನಯಚಂದ್ರ ಹಾಗೂ ಮಧುಮಿತಾ ರೋಮಾಂಚನದಿಂದ ಕಳೆದರು. ಆಕೆ ಹೇಳುತ್ತಾಳೆಂದು ಆತ.. ಆತನೇ ಹೇಳುತ್ತಾನೆಂದು ಆಕೆ.. ಇಬ್ಬರೂ ಏನೊಂದನ್ನೂ ಹೇಳಲಿಲ್ಲ. ಆರಂಭದ ಕೆಲವು ಕ್ಷಣಗಳು ಮೌನ ಮೆರೆದು ನಿಂತಿತು. ಪರಸ್ಪರರು ಮಾತನ್ನು ಆರಂಭಿಸುತ್ತಿದ್ದರಾದರೂ ಮುಂದುವರಿಯದೇ ಹಳಿತಪ್ಪಿ ಇನ್ಯಾವುದೋ ವಿಷಯದ ಕಡೆಗೆ ಹರಿಯುತ್ತಿದ್ದವು. ಕೊನೆಗೊಮ್ಮೆ ವಿನಯಚಂದ್ರ ಧೈರ್ಯಮಾಡಿ ತನ್ನ ಮನದ ವಿಷಯವನ್ನು ಆಕೆಯ ಬಳಿ ಹೇಳಿಯೇಬಿಟ್ಟ. `ನಾ ನಿನ್ನ ಪ್ರೀತಿಸುತ್ತಿದ್ದೇನೆ..' ಎಂದವನು ಆಕೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೋ ಎಂದುಕೊಂಡು ಕಾದ.
                ಸಿಟ್ಟಾದರೆ ಏನು ಮಾಡುವುದು ಎಂದು ಮಧುಮಿತಾಳ ಕಣ್ಣೊಟವನ್ನು ತಪ್ಪಿಸಿದ. ಯಾವುದೇ ರೀತಿಯ ಪ್ರತಿಕ್ರಿಯೆಗೆ ಸಿದ್ಧವಾಗಿರಬೇಕಲ್ಲ ಎಂದುಕೊಂಡ. ಆಕೆ ಮಾತಾಡಲಿಲ್ಲ. ವಿನಯಚಂದ್ರನ ಡುಗುಡ ಹೆಚ್ಚಾಯಿತು. ಆದರೆ ಆಕೆ ಮುಗುಳ್ನಕ್ಕಳು. ವಿನಯಚಂದ್ರ ಅರ್ಥವಾಗದವನಂತೆ ನೋಡಿದ. ಕೆಲವು ಕ್ಷಣಗಳನ್ನು ಆಕೆ ಸುಮ್ಮನೇ ಕಾದಳು. ಅದೇನೋ ಆಲೋಚನೆ ಮಾಡುವಂತೆ ನಟಿಸಿದಳು. ವಿನಯಚಂದ್ರ ಕಾದ ಕಬ್ಬಿಣದ ಬಾಣಲೆಯ ಮೇಲೆ ಕುಳಿತಂತೆ ಚಡಪಡಿಸತೊಡಗಿದ್ದ. ಆಕೆ  ಮತ್ತೊಮ್ಮೆ ನಕ್ಕು ಸ್ಪಷ್ಟವಾಗಿ ಹುಂ ಅಂದಳು. ಏನು ಎಂಬಂತೆ ನೋಡಿದ ವಿನಯಚಂದ್ರ. ಏ ಹೋಗೋ.. ಅಷ್ಟೂ ಗೊತ್ತಾಗಲ್ವಾ ನಿಂಗೆ.. ಎನ್ನುವಂತೆ ಮುಖ ಮಾಡಿದ ಮಧುಮಿತಾ ವಿನಯಚಂದ್ರನನ್ನು ಒಮ್ಮೆ ಹಿತವಾಗಿ ದೂಡಿದಳು. ವಿನಯಚಂದ್ರನಿಗೆ ಮನಸ್ಸೊಮ್ಮೆ ಹೂವಾಯಿತು. ಆಕಾಶವೇ ಕೈಗೆ ಸಿಕ್ಕಂತೆ ಅನುಭವವಾಯಿತು. ತನ್ನ ಪ್ರೇಮ ನಿವೇದನೆಯನ್ನು ಒಂದೇ ಘಳಿಗೆಯಲ್ಲಿ ಅವಳು ಒಪ್ಪುಕೊಳ್ಳುತ್ತಾಳೆ ಎಂದುಕೊಂಡಿರಲಿಲ್ಲ ಆತ. ಆಕೆ ಒಪ್ಪಿದ್ದು ಆತನಿಗೆ ಅಚ್ಚರಿಯ ಜೊತೆಗೆ ಸಂತೋಷವನ್ನು ನೀಡಿತ್ತು. ಮತ್ತೆ ವಿನಯಚಂದ್ರ ಮೌನಿಯಾಗಿದ್ದ. ಏನು ಹೇಳಬೇಕೋ ಗೊತ್ತಾಗದೇ ಸುಮ್ಮನೇ ಉಳಿದಿದ್ದ. ಸುಮ್ಮನೆ ಆಕೆಯ ಕೈ ಹಿಡಿದು ಕೈಮೇಲೆ ಹೂ ಮುತ್ತೊಂದನ್ನು ನೀಡಿಬಿಟ್ಟಿದ್ದ. ಮುಖವನ್ನು ಹತ್ತಿರಕ್ಕೆ ಎಳೆದು ಹಣೆಗೊಂದು ಮುತ್ತನ್ನು ಕೊಟ್ಟು ಸದಾಕಾಲ ನಿನ್ನ ಜೊತೆಗೆ ಇರುತ್ತೇನೆ ಎಂದು ಪಿಸುಗುಟ್ಟಿದ. ಹನಿಗೂಡಿದ ಕಣ್ಣಿನೊಂದಿಗೆ ನಸುನಾಚಿದಳು ಮಧುಮಿತಾ.
               ಹಲವು ಗಂಟೆಗಳ ಬಳಿಕ ರೂಮಿಗೆ ಮರಳಿದ್ದ ವಿನಯಚಂದ್ರನನ್ನು ಸೂರ್ಯನ್ ಎದುರುಗೊಂಡವನೇ ಏನಾಯ್ತೆಂದು ಕೇಳಿದ. ಅದಕ್ಕೆ ವಿನಯಚಂದ್ರ ನಡೆದಿದ್ದೆಲ್ಲವನ್ನೂ ಹೇಳಿದ. ಸುದ್ದಿ ಕೇಳಿವ ಸೂರ್ಯನ್ ವಿನಯಚಂದ್ರನಷ್ಟೇ ಸಂತಸ ಪಟ್ಟಿದ್ದ. ವಿನಯಚಂದ್ರನಿಗೆ ಕಂಗ್ರಾಟ್ಸ್ ಹೇಳಿದ್ದ. ಆ ದಿನ ವಿನಯಚಂದ್ರನಿಗೆ ಕನಸಿನಲ್ಲಿ ನಡೆದಂತೆ ಆಗಿತ್ತು. ಸಂತಸದ ಅಣೆಕಟ್ಟೆ ಒಡೆದು ಹೋಗಿ ಎಲ್ಲೆಡೆ ಚಿಮ್ಮಿದೆಯೇನೋ ಎಂಬಂತಾಗಿತ್ತು.

****

              ಮರುದಿನ ಮತ್ತೊಂದು ಕಬ್ಬಡ್ಡಿ ಪಂದ್ಯವಿತ್ತು. ಎರಡು ಪಂದ್ಯಗಳು ನೇರವಾಗಿ ಜರುಗುವುದಿತ್ತು. ಮೊದಲ ಪಂದ್ಯ ದಕ್ಷಿಣ ಕೋರಿಯಾದ ವಿರುದ್ಧವಿದ್ದರೆ ಎರಡನೇ ಪಂದ್ಯ ಥೈಲ್ಯಾಂಡ್ ವಿರುದ್ಧ ನಡೆಯಲಿದ್ದವು. ಈ ಎರಡೂ ತಂಡಗಳು ಅಷ್ಟೇನೂ ಪ್ರಬಲ ತಂಡಗಳಾಗಿರದ ಕಾರಣ ಭಾರತದ ಕಬ್ಬಡ್ಡಿ ತಂಡದವರು ಚಿಂತಿಸಬೇಕಾದ ಪರಿಸ್ಥಿತಿಯಿರಲಿಲ್ಲ. ಆದರೆ ಕೋಚ್ ಜಾಧವ್ ಮಾತ್ರ ಯಾವುದೇ ಕಾರಣಕ್ಕೂ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಬಾರದು. ಎದುರು ಆಡುತ್ತಿರುವ ತಂಡ ನಮಗಿಂತ ಭಲಿಷ್ಟವಾಗಿದೆ. ಆದರೂ ಅದನ್ನು ಸೋಲಿಸಿಯೇ ಸೋಲಿಸುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿರಬೇಕು ಎಂದು ಹೇಳಿಬಿಟ್ಟಿದ್ದರು. ನ್ಯೂಝಿಲ್ಯಾಂಡ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ನಡೆದಿದ್ದ ತಪ್ಪುಗಳು ಮರುಕಳಿಸಬಾರದು ಎಂದೂ ತಾಕೀತು ಮಾಡಿದ್ದರು.
             ಮಧುಮಿತಾ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದ ಕಾರಣ ವಿನಯಚಂದ್ರ ಸ್ವರ್ಗದಲ್ಲಿ ವಿಹಾರ ಮಾಡುತ್ತಿದ್ದೇನೇನೋ ಎಂದುಕೊಂಡಿದ್ದ. ಹುರುಪಾಗಿದ್ದ. ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಉತ್ತಮ ಸಾಧನೆಯನ್ನು ಮಾಡುತ್ತೇನೆ ಎನ್ನುವ ವಿಶ್ವಾಸ ಆತನದ್ದಾಗಿತ್ತು. ದಕ್ಷಿಣ ಕೋರಿಯ ತಂಡದ ವಿರುದ್ಧ ಪಂದ್ಯ ಆರಂಭವಾಗಿಯೇ ಬಿಟ್ಟಿತು. ಕೋಚ್ ಜಾಧವ್ ಅವರು ಈ ಸಾರಿ ವಿನಯಚಂದ್ರನನ್ನು ಮೊದಲಿನ ಪಂದ್ಯದಂತೆಯೇ ಆರಂಭದಲ್ಲಿ ಆಡಲು ಬಿಡಲಿಲ್ಲ. ವಿನಯಚಂದ್ರ ಉತ್ತಮ ಕ್ಯಾಚರ್ ಆಗಿರುವ ಕಾರಣ ತಂಡಕ್ಕೆ ಸಂದಿಗ್ಧ ಸಮಸ್ಯೆ ಎದುರಾದರೆ ಉಪಯೋಗಿಸಬೇಕೆಂದು ನಿರ್ಧರಿಸಿದ್ದರು. ಪಂದ್ಯ ಆರಂಭವಾಗಿಯೇ ಬಿಟ್ಟತು.
           ಚೀನಾದ ಒಡಲಿನಲ್ಲಿಯೇ ಇರುವ ದಕ್ಷಿಣ ಕೋರಿಯಾದ ಆಟಗಾರರು ಕುಳ್ಳರು. ಚಿಕ್ಕ ಕಣ್ಣು. ಆದರೆ ದಷ್ಟಪುಷ್ಟವಾಗಿದ್ದರು. ಇವರನ್ನು ಅಂಗಣದಲ್ಲಿ ಕ್ಯಾಚ್ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುಳ್ಳಗಿದ್ದ ಕಾರಣ ಹೇಗೆ ಹಿಡಿದರೂ ಪುಸಕ್ಕನೆ ತಪ್ಪಿಸಿಕೊಂಡು ಹೋಗಬಲ್ಲ ಛಾತಿಯನ್ನು ಹೊಂದಿದ್ದರು. ನಂಬರ್ 1 ಟೀಂ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿತ್ತು. ತಂಡದ ರೈಡರ್ ಗಳು ಅತ್ಯುತ್ತಮವಾದ ರೀತಿಯಲ್ಲಿ ಬಲಿಯನ್ನು ಪಡೆದು ಮರಳುತ್ತಿದ್ದರು. ಆದರೆ ಕ್ಯಾಚಿಂಗ್ ಸಮಯದಲ್ಲಿಯೇ ಒಂದೆರಡು ಕ್ಯಾಚ್ ಗಳು ವಿಫಲವಾಗಿದ್ದವು.  ಜಾಧವ್ ಅವರು ಥಟ್ಟನೆ ಜಾಗೃತರಾಗಿ ತಂಡ ಟೈಮೌಟ್ ಪಡೆಯುವಂತೆ ನೋಡಿಕೊಂಡರು. ಅಷ್ಟರಲ್ಲಿ ತಂಡ 10-4ರಿಂದ ಭಾರತ ತಂಡ ಮುನ್ನಡೆ ಸಾಧಿಸಿತ್ತು. ಟೈಂಔಟ್ ಮುಗಿಯುವ ವೇಳಗೆ ವಿನಯಚಂದ್ರನನ್ನು ಅಂಗಣಕ್ಕಿಳಿಸಿದರು ಜಾಧವ್. ಅಂಗಣ ಪ್ರವೇಶಿಸುವ ಮುನ್ನ `ವಿನಯಚಂದ್ರ ಬಿ. ಕೇರ್ ಪುಲ್. ಗಡಬಡಿ ಮಾಡಬೇಡಿ. ಸಿಕ್ಕ ಅವಕಾಶ ಮಿಸ್ ಆಗುವುದೂ ಬೇಡ. ಇವತ್ತಿನ ದಿನ ನಿಮ್ಮದಾಗಬೇಕು ವಿನಯ್ ಆಲ್ ದಿ ಬೆಸ್ಟ್..' ಎಂದಿದ್ದರು. ವಿನಯಚಂದ್ರ ಮೈದಾನದ ಸುತ್ತ ಮಧುಮಿತಾಳಿಗಾಗಿ ನೋಡಿದ. ಯಾವುದೋ ಒಂದು ಭಾಗದಲ್ಲಿ ಕುಳಿತು ಚಪ್ಪಾಳೆ ತಟ್ಟುತ್ತಾ ಆಲ್ ದಿ ಬೆಸ್ಟ್ ಎಂದಿದ್ದಳು. ವಿನಯಚಂದ್ರನ ಹುರುಪು ಇಮ್ಮಡಿಸಿತ್ತು.
            ವಿನಯಚಂದ್ರ ಅಂಗಣಕ್ಕಿಳಿದ ನಂತರ ಮೊದಲಿಗೆ ವಿಶೇಷವೇನೂ ನಡೆದಿರಲಿಲ್ಲ. ತಂಡದ ರೈಡರ್ ಗಳು ಯಥಾಪ್ರಕಾರ ಅಂಕಗಳನ್ನು ಗಳಿಸಿಕೊಂಡು ಮರಳುತ್ತಲೇ ಇದ್ದರು. ವಿನಯಚಂದ್ರ ಉತ್ತಮ ಕ್ಯಾಚರ್ ಎಂಬುದು ತಂಡದ ಆಟಗಾರರಿಗೆ ಗೊತ್ತಾಗಿದ್ದ ಕಾರಣ ಆತನಿಗೆ ಅಂಗಣದಲ್ಲಿ ವಿಶೇಷ ಸ್ಥಾನ ಸಿಕ್ಕಿತ್ತು. ಅಪ್ಪಿತಪ್ಪಿ ಯಾವುದೇ ಸಂದರ್ಭದಲ್ಲಿಯೂ ಪ್ರಮಾದವಾಗಿ ವಿನಯಚಂದ್ರ ಔಟಾಗಿ ಆತನ ಅಂಕ ಕಳೆದುಹೋಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರನ ಮೇಲೆ ದಾಳಿ ಮಾಡುವುದನ್ನು ತಪ್ಪಿಸುತ್ತಿದ್ದರು.
           ಒಬ್ಬ ದಕ್ಷಿಣ ಕೋರಿಯನ್ ಆಟಗಾರ ರೈಡ್ ಮಾಡುತ್ತ ಬಂದ. ಭಾರತದ ಪಾಯಿಂಟು ಜಾಸ್ತಿಯಿದ್ದ ಕಾರಣ ಆಗಲೇ ತಂಡ ಟೈಂಪಾಸ್ ಶುರುಮಾಡಿಕೊಂಡಿತ್ತು. ಆ ಆಟಗಾರ ಹೇಗಾದರೂ ಮಾಡಿ ಭಾರತೀಯ ಆಟಗಾರರನ್ನು ಔಟ್ ಮಾಡಬೇಕು ಎಂದುಕೊಂಡು ಪದೇ ಪದೆ ದಾಳಿಗೆ ಯತ್ನಿಸುತ್ತಿದ್ದ. ಭಾರತ ತಂಡ ಈತನ ರೈಡಿಂಗಿನಲ್ಲಿಯೇ ನಾಲ್ಕು ಅಂಕಗಳನ್ನು ಕಳೆದುಕೊಂಡಿತ್ತು. ದೃಢಕಾಯನಾಗಿ, ಕುಳ್ಳಗಿದ್ದ ಈತನನ್ನು ಹಿಡಿಯಲು ಭಾರತೀಯ ಆಟಗಾರರು ಯತ್ನಿಸಿ ಸೋತಿದ್ದರು. ಈತನನ್ನು ಹಿಡಿದರೆ ರಪ್ಪನೆ ಜಿಗಿದೋ ಅಥವಾ ಪುಸಕ್ಕನೆ ಜಾರಿಯೋ ತಪ್ಪಿಸಿಕೊಂಡು ಔಟ್ ಮಾಡುತ್ತಿದ್ದ. ಈ ಸಾರಿ ಹಿಡಿಯಬೇಕೆಂಬ ಜಿದ್ದು ಎಲ್ಲರಲ್ಲಿಯೂ ಮೂಡಿತ್ತು. ವಿನಯಚಂದ್ರ ಮಧ್ಯದಲ್ಲಿದ್ದ. ಎದುರಾಳಿ ತಂಡಕ್ಕೆ ವಿನಯಚಂದ್ರ ಸಾಮಾನ್ಯ ಆಟಗಾರನಿರಬೇಕು, ಅಂತಹ ಕ್ಯಾಚರ್ ಅಲ್ಲ ಎಂದು ಬಿಂಬಿಸುವ ಯತ್ನವನ್ನು ಭಾರತೀಯ ಆಟಗಾರರು ಮಾಡಿ ಯಾಮಾರಿಸುವಲ್ಲಿ ಸಫಲರಾಗಿದ್ದರು.
            ಆಟದಲ್ಲಿ ಮಾನಸಿಕವಾಗಿ ಗೆಲ್ಲುವುದು ಮೊದಲ ತಂತ್ರವಾಗಿರುತ್ತದೆ. ಎದುರಾಳಿಯ ಮನದಲ್ಲಿ ಬೇರೆಯದೇ ಆದ ಅಂಶವನ್ನು ಹುಟ್ಟುಹಾಕಿ ಅಚ್ಚರಿಯನ್ನು ನೀಡಿ ಗಲಿಬಿಲಿಗೊಳಿಸಿ ಎದುರಾಳಿಯ ಸೋಲಿಗೆ ಕಾರಣವಾಗುವುದು ಪ್ರಮುಖ ಅಂಶವಾಗುತ್ತದೆ. ಇಂತದ್ದನ್ನು ಮೂಡಿಸುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದರು. ಮಧ್ಯದಲ್ಲಿದ್ದ ವಿನಯಚಂದ್ರ ರೈಡಿಂಗಿಗೆ ಬಂದಿದ್ದ ದಕ್ಷಿಣ ಕೋರಿಯನ್ ಆಟಗಾರನ ಕಾಲನ್ನು ರಪ್ಪನೆ ಹಿಡಿದಿದ್ದ. ಎಷ್ಟು ವೇಗವಾಗಿ ಕ್ಯಾಚ್ ಮಾಡಿದ್ದನೆಂದರೆ ಕ್ಷಣಾರ್ಧದಲ್ಲಿ ಎದುರಾಳಿ ಆಟಗಾರ ಗಲಿಬಿಲಿಯಾಗಿದ್ದ. ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆಗಾಗಲೇ ವಿನಯಚಂದ್ರ ಆತನ ಕಾಲನ್ನು ತಿರುಪಿ ನೆಲಕ್ಕೆ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಅಷ್ಟರಲ್ಲಿ ಭಾರತೀಯ ಆಟಗಾರರು ಮುಗಿಬಿದ್ದಿದ್ದರು. ಒಂದಂಕ ಸುಲಭವಾಗಿ ಸಿಕ್ಕಿತ್ತಷ್ಟೇ ಅಲ್ಲ, ವಿನಯಚಂದ್ರ ಅದ್ಭುತ ಕ್ಯಾಚರ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು. ಇದು ಆತನ ಎರಡನೇ ಕ್ಯಾಚ್ ಕೂಡ ಆಗಿತ್ತು.
            ಪಂದ್ಯದುದ್ದಕ್ಕೂ ವಿನಯಚಂದ್ರ ಸಂಪೂರ್ಣವಾಗಿ ಮಿಂಚಿದ. ಇನ್ನೂ ಎಂಟು ಕ್ಯಾಚುಗಳನ್ನು ಹಿಡಿದ ವಿನಯಚಂದ್ರ ರೈಡಿಂಗಿನಲ್ಲಿಯೂ ಮೂರು ಅಂಕಗಳನ್ನು ಗಳಿಸಿಕೊಂಡು ಬಂದಿದ್ದ. ಪಂದ್ಯದಲ್ಲಿ ಭಾರತ ತಂಡ 30-8 ಅಂಕಗಳಿಂದ ದಕ್ಷಿಣ ಕೋರಿಯಾವನ್ನು ಸೆದೆಬಡಿದಿತ್ತು. ಪಂದ್ಯ ಸಂಪೂರ್ಣವಾಗಿ ವಿನಯಚಂದ್ರನಿಂದಲೇ ಭಾರತ ಗೆದ್ದಿದೆ ಎನ್ನುವಂತಾಗಿತ್ತು. ಎಲ್ಲ ವಿಭಾಗದಲ್ಲಿಯೂ ಮಿಂಚಿನ ಆಟವನ್ನಾಡಿದ ವಿನಯಚಂದ್ರ ಪಂದ್ಯದ ಅತ್ಯುತ್ತಮ ಕ್ಯಾಚರ್ ಹಾಗೂ ಅತ್ಯುತ್ತಮ ಆಟಗಾರ ಈ ಎರಡೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ. ಮುಂದಿನ ಪಂದ್ಯ ಥೈಲ್ಯಾಂಡಿನ ವಿರುದ್ಧವಿತ್ತು. ಅಲ್ಲಿಯೂ ಭಾರತ ದಿಗ್ವಿಜಯ ಹೊಂದಿತು. 36-5 ಅಂಕಗಳೊಂದಿಗೆ ಥೈಲ್ಯಾಂಡನ್ನು ಸೋಲಿಸಿದ ತಂಡದಲ್ಲಿ ವಿನಯಚಂದ್ರ ಮತ್ತೊಮ್ಮೆ ಅದ್ಭುತ ಕ್ಯಾಚರ್ ಆಗಿ ಹೊರಹೊಮ್ಮಿದ್ದ. ವಿನಯಚಂದ್ರನಿಗೆ ತನ್ನ ಆಟ ಬಹಳ ಖುಷಿ ನೀಡಿತ್ತು. ವಿನಯಚಂದ್ರ ನೀಡಿದ ಪ್ರದರ್ಶನ ಭಾರತದ ಆಟಗಾರರಿಗೆ ಅಚ್ಚರಿ, ಸಂತೋಷವನ್ನು ಒಟ್ಟೊಟ್ಟಿಗೆ ನೀಡಿತ್ತು. ಜಾಧವ್ ಅವರಂತೂ ವಿನಯಚಂದ್ರನನ್ನು ಮೆಚ್ಚುಗೆಯಿಂದ ನೋಡಿದ್ದರು. ವಿನಯಚಂದ್ರ ಮಾತ್ರ ಮಧುಮಿತಾ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿರುವುದೇ ತನ್ನ ಈ ಆಟಕ್ಕೆ ಕಾರಣ ಎಂದುಕೊಂಡಿದ್ದ. ಸೂರ್ಯನ್ ಕೂಡ ಹೀಗೆ ಛೇಡಿಸಿದಾಗ `ಇರಬಹುದೇನೋ..' ಎಂದು ಸುಮ್ಮನಾಗಿದ್ದ..
           ನಿಧಾನವಾಗಿ ವಿಶ್ವಕಪ್ ರಂಗೇರುತ್ತಿತ್ತು. ಎ. ಗುಂಪಿನಿಂದ ಭಾರತ ಮೂರು ಪಂದ್ಯಗಳನ್ನಾಡಿ ಮೂರರಲ್ಲೂ ಗೆದ್ದು ಅಜೇಯವಾಗಿ ಉಳಿದಿತ್ತು. ಅಷ್ಟೇ ಅಲ್ಲದೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಪಾಕಿಸ್ತಾನ ನಂತರದ ಸ್ಥಾನದಲ್ಲಿತ್ತು. ಬಿ. ಗುಂಪಿನಲ್ಲಿ ಬಾಂಗ್ಲಾದೇಶ ಸಹ ಮೂರು ಪಂದ್ಯಗಳನ್ನಾಡಿ ಮೂರರಲ್ಲಿಯೂ ಗೆದ್ದು ಅಗ್ರಸ್ಥಾನಿಯಾಗಿ ಮುನ್ನಡೆದಿತ್ತು. ಮುಂದಿನ ಪಂದ್ಯಗಳು ಕಠಿಣವಾಗಲಿದ್ದವು. ವಿನಯಚಂದ್ರ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನದಿಂದ ಕಬ್ಬಡ್ಡಿ ವಿಶ್ವಕಪ್ ನ ಹೊಸ ಪ್ರತಿಭೆ ಹಾಗೂ ವಿಶೇಷ ಆಟಗಾರ ಎನ್ನುವ ಬಿರುದನ್ನೂ ಗಳಿಸಿಕೊಂಡಿದ್ದ. ಕಬ್ಬಡ್ಡಿ ಆಟಗಾರರು ಈತನ ಆಟವನ್ನು ಗಮನಿಸಲು ಆರಂಭಿಸಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಐದನೇ ಆಟಗಾರನಾಗಿದ್ದ. ಮೊದಲೆರಡು ಸ್ಥಾನಗಳಲ್ಲಿ ಬಾಂಗ್ಲಾದೇಶದ ಆಟಗಾರರಿದ್ದರೆ ಮೂರನೇ ಸ್ಥಾನದಲ್ಲಿ ಭಾರತೀಯ ಆಟಗಾರ, ನಾಲ್ಕನೆಯ ಸ್ಥಾನದಲ್ಲಿ ಪಾಕಿಸ್ತಾನದ ಒಬ್ಬ ಆಟಗಾರ ಹಾಗೂ ಐದನೆಯ ಸ್ಥಾನದಲ್ಲಿ ವಿನಯಚಂದ್ರ ಇದ್ದ. ಜಾಧವ್ ಸರ್ ಅವರು ವಿನಯಚಂದ್ರನ ಆಟದ ಮೇಲೆ ಹೆಚ್ಚಿನ ಒತ್ತನ್ನು ನೀಡಿದ್ದರು. ತಾಲೀಮು ಜೋರಾಗಿತ್ತು. ಬಿಡುವಿಗೆ ಆಸ್ಪದವಿಲ್ಲದಂತೆ ತರಬೇತಿಯನ್ನು ಕೈಗೊಳ್ಳಲಾಗುತ್ತಿತ್ತು. ವಿಶ್ವಕಪ್ ಕಬ್ಬಡ್ಡಿ ರಂಗೇರುತ್ತಿತ್ತು.

(ಮುಂದುವರಿಯುತ್ತದೆ.)