Friday, May 23, 2014

ಮರೆತೆನೆಂದರೆ ನಿನ್ನ

(ಚಿತ್ರ ಕೃಪೆ : ವಿನಾಯಕ ಹೆಗಡೆ)
ಮರೆತೆನೆಂದರೆ ನಿನ್ನ
ಮರೆಯುವುದು ಹ್ಯಾಂಗ..?
ಪ್ರೀತಿ ಬದುಕೆ ನಿನ್ನ
ತೊರೆಯುವುದು ಹ್ಯಾಂಗ..?

ನಿನ್ನ ನೆನಪಲಿ ಮನವು
ಪಡೆಯಿತು ಬಣ್ಣ
ನಿನ್ನ ಮರೆತರೆ ಹೃದಯ
ಭಾರವದು ಚಿನ್ನ ||

ನನ್ನ ಪ್ರೀತಿಯೆ ನೀನು
ಮನದ ದನಿ ಕೊಳಲು
ನಿನ್ನ ಮರೆತರೆ ಮನಕೆ
ಅನುಗಾಲ ಇರುಳು ||

**
(ಈ ಕವಿತೆಯನ್ನು ಬರೆದಿದ್ದು 27.04.2006ರಂದು ದಂಟಕಲ್ಲಿನಲ್ಲಿ)
(ಚಿತ್ರವನ್ನು ದಯಪಾಲಿಸಿದ ವಿನಾಯಕ ಹೆಗಡೆ ಅವರಿಗೆ ಥ್ಯಾಂಕ್ಸು..)

Thursday, May 22, 2014

ಬೆಂಗಾಲಿ ಸುಂದರಿ-12

(ಗಲಭೆಯ ಸಾಂದರ್ಭಿಕ ಚಿತ್ರ)
                            ನಸುಕಿನಲ್ಲೆದ್ದು ವಿನಯಚಂದ್ರ ಜಾಧವರೊಡಗೂಡಿ ಹೊರಡಲು ತಯಾರಾದ. ಮಧುಮಿತಾ ಜೊತೆಯಲ್ಲಿ ಬಂದಳು. ರಾತ್ರಿಯಿಡೀ ನಿದ್ದೆ ಮಾಡಿಲ್ಲವೇನೋ ಅನ್ನುವಂತಿತ್ತು ಅವಳ ಮುಖ. ಅತ್ತಿದ್ದಳಿರಬೇಕು. ಕಣ್ಣು ಕೆಂಪಗಾಗಿತ್ತು. ಮುಖ ಬಾಡಿತ್ತು. ವಿನಯಚಂದ್ರ ಸಮಾಧಾನ ಮಾಡಿದ. ಮಧುಮಿತಾಳೇ ತನ್ನೂರಿಗೆ ಹೋಗಲು ಯಾವುದೋ ಕಾರನ್ನು ಸಿದ್ದ ಮಾಡಿದ್ದಳು. ತಕ್ಷಣ ಅದನ್ನು ಏರಿ ಹೊರಟರು.
ಹೊರಟಲ್ಲಿಂದ ಮಧುಮಿತಾ ಬಿಕ್ಕುತ್ತಳೇ ಇದ್ದಳು. ಪಕ್ಕದಲ್ಲಿ ಕುಳಿತಿದ್ದ ವಿನಯಚಂದ್ರ ಅವಳನ್ನು ಸಮಾಧಾನ ಮಾಡುತ್ತಲೇ ಇದ್ದ. ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಜಾಧವ್ ಅವರು ವಿನಯಚಂದ್ರ ಹಾಗೂ ಮಧುಮಿತಾಳ ನಡುವಿನ ಆಪ್ತತೆಯನ್ನು ನೋಡಿ ಅಚ್ಚರಿಪಟ್ಟಿದ್ದರು. ಬಾಂಗ್ಲಾದೇಶಕ್ಕೆ ಬಂದು ಇನ್ನೂ ಒಂದು ವಾರ ಕಳೆದಿಲ್ಲ. ಇವರು ಬಹಳ ಆಪ್ತರಾಗಿದ್ದಾರೆ ಎಂದುಕೊಂಡರು ಜಾಧವ್ ಸರ್. ಏನಿದು ಹೀಗೆ ಎಂದುಕೊಂಡಿದ್ದರು.
                               ವಿನಯಚಂದ್ರ ಮಧುಮಿತಾಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಂತೆಲ್ಲ ಮಧುಮಿತಾಳ ಬಿಕ್ಕುವಿಕೆ ಹೆಚ್ಚುತ್ತಲೇ ಇತ್ತು. ಜಾಧವ್ ಹಾಗೂ ವಿನಯಚಂದ್ರ ಇಬ್ಬರಿಗೂ ಮೊದಲ ಬಾರಿಗೆ ಬಾಂಗ್ಲಾದೇಶದ ಇನ್ನೊಂದು ಮುಖದ ಪರಿಚಯವಾಗುತ್ತಿದೆಯೇನೋ ಅನ್ನಿಸತೊಡಗಿತ್ತು, ಮೇಲ್ನೋಟಕ್ಕೆ ಎಲ್ಲವೂ ಸಹಜವಾಗಿ, ಸರಿಯಾಗಿತ್ತಾದರೂ ಒಳಗೊಳಗೆ ಬಾಂಗ್ಲಾದೇಶ ಹುಳುಕಾಗಿ ನಾರುತ್ತಿದೆಯೇನೋ ಅನ್ನಿಸಹತ್ತಿತ್ತು. ಬಾಂಗ್ಲಾದೇಶಿ ಹಿಂದುಗಳು ಪದೇ ಪದೆ ಹಿಂಸೆಗೆ ಒಳಗಾಗುತ್ತಿದ್ದಾರೆನ್ನುವುದು ಬಾಂಗ್ಲಾಕ್ಕೆ ಬಂದು ಒಂದು ವಾರ ಕಳೆಯುವುದರೊಳಗಾಗಿ ಅರ್ಥವಾಗತೊಡಗಿತ್ತು.
ಮಧುಮಿತಾಳ ತಂದೆ ತಾಯಿ-ಕುಟುಂಬದವರು ಇದ್ದ ಊರಿಗೆ ಅನಾಮತ್ತು ನಾಲ್ಕೈದು ಗಂಟೆಗಳ ಪಯಣ. ಗೋಮತಿ ಹಾಗೂ ಬ್ರಹ್ಮಪುತ್ರಾ ನದಿಗಳ ಕಿನಾರೆಯಲ್ಲಿ ಹಾದು ಹೋಗಬೇಕು. ಹೋಗುವ ವೇಳೆಗೆ ಊರು ಸ್ಮಶಾನಮೌನದಲ್ಲಿತ್ತು. ದೂರದಲ್ಲೆಲ್ಲೋ ಟೈರುಗಳಿಗೆ ಬೆಂಕಿ ಹಚ್ಚಿದ್ದರಿರಬೇಕು ಹೊಗೆಯ ಕಮರು ಎಲ್ಲೆಡೆ ಪಸರಿಸಿತ್ತು. ಊರಲ್ಲಿ ಯಾರೊಬ್ಬರೂ ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ. ಇವರ ಟ್ಯಾಕ್ಸಿಯೊಂದೆ ಇತ್ತು. ಇವರ ಟ್ಯಾಕ್ಸಿಯನ್ನು ಪ್ರತಿಯೊಬ್ಬರೂ ಅನುಮಾನದಿಂದಲೇ ನೋಡುತ್ತಿದ್ದರು. ರಸ್ತೆ ಹಾಗೂ ಅಲ್ಲಲ್ಲಿ ಬಾಂಗ್ಲಾ ಪೊಲೀಸರು ನಿಂತುಕೊಂಡು ಪಹರೆ ಮಾಡುತ್ತಿದ್ದಂತೆ ಕಾಣಿಸುತ್ತಿತ್ತು. ಕೆಲವೆಡೆಗಳಲ್ಲಿ ಬ್ಯಾರಿಕೇಡ್ ಕೂಡ ಇತ್ತು.
                                ಒಂದೆರಡು ಕಡೆಗಳಲ್ಲಿ ಪೊಲೀಸರು ಟ್ಯಾಕ್ಸಿಯನ್ನು ನಿಲ್ಲಿಸಿದರು. ಮಧುಮಿತಾ ತನ್ನ ಬಳಿಯಿದ್ದ ಬಾಂಗ್ಲಾದೇಶದ ಸರ್ಕಾರ ಕೊಟ್ಟ ಕಾರ್ಡನ್ನು ತೋರಿಸಿದ ನಂತರ ಮುಂದಕ್ಕೆ ಹೋಗಲು ಬಿಟ್ಟರು. ಮೂರ್ನಾಲ್ಕು ಓಣಿಗಳನ್ನು ದಾಟಿ ಹಳೆಯದೊಂದು ಮನೆಯ ಎದುರು ನಿಂತಾಗ ಮತ್ತೆ ಮತ್ತೆ ಕಾಡಿದ ಮೌನ. ವಿನಯಚಂದ್ರ ಹಾಗೂ ಜಾಧವ್ ಅವರು ಕಾರಿನಿಂದ ಕೆಳಗಿಳಿಯಲೋ ಬೇಡವೋ ಎಂದು ಅನುಮಾನಿಸುತ್ತಿದ್ದಾಗಲೇ ಮಧುಮಿತಾ ಇಳಿದು ಮನೆಯ ಬಾಗಿಲಿಗೆ ಹೋಗಿ ಬಡಿದಳು. ಜಾಧವ್ ಹಾಗೂ ವಿನಯಚಂದ್ರ ಮಧುಮಿತಾಳನ್ನು ಹಿಂಬಾಲಿಸಿ ಅವಳ ಜೊತೆ ಹೋಗಿ ನಿಂತರು. ಮನೆಯ ಬಾಗಿಲು ತೆರೆಯದೇ ಒಳಗಿನಿಂದಲೇ `ಯಾರು..?' ಎಂದು ವಿಚಾರಿಸಿದಂತಾಯಿತು. ಮಧುಮಿತಾ ಹೇಳಿದ ನಂತರ ನಿಧಾನವಾಗಿ ಬಾಗಿಲು ತೆಗೆದರು.
                               ವಯಸ್ಸಾಗಿದ್ದ ಬೆಂಗಾಲಿ ಬ್ರಾಹ್ಮಣ ಮಧುಮಿತಾಳ ಅಪ್ಪ. ಅಜಮಾಸು ಅರವತ್ತು-ಅರವತ್ತೈದು ವಸಂತಗಳಾಗಿರಬಹುದು ಅವರಿಗೆ. ವಯೋಸಹಜ ನೆರಿಗೆಗಳು, ಸುಕ್ಕುಗಳು, ತಲೆಯ ಮೇಲೆ, ಗಡ್ಡದ ನಡುವೆ ಅಲ್ಲಲ್ಲಿ ಬಿಳಿಯ ಬಣ್ಣದ ಕೂದಲುಗಳು ಇಣುಕಿ ತಮ್ಮ ಇರುವಿಕೆಯನ್ನು  ಸಾರುತ್ತಿದ್ದವು. ವಯಸ್ಸನ್ನು ಜಗತ್ತಿಗೆ ಸಾರುತ್ತಿದ್ದವು. ಕಣ್ಣಲ್ಲಿ ಭೀತಿ ತುಂಬಿ ತುಳುಕುತ್ತಿತ್ತು. ಮಧುಮಿತಾಳನ್ನು ಒಳಗೆ ಕರೆದ ಅವರು  ಜೊತೆಯಲ್ಲಿದ್ದ ಜಾಧವ್ ಹಾಗೂ ವಿನಯಚಂದ್ರರನ್ನು ಪ್ರಶ್ನಾರ್ಥಕವಾಗಿ ನೋಡಿದರು. ಮಧುಮಿತಾ ಪರಿಚಯಿಸಿದ ನಂತರ ಪರಿಚಿತ ನಗೆ ಬೀರಿದರು. ವಿನಯ ಚಂದ್ರನ ಬಳಿ ಬಂದು `ಓಹೋ.. ಭಾರತದಿಂದ ಬಂದವರು ನೀವೇನಾ..? ಕಬ್ಬಡ್ಡಿ ಆಟಗಾರರು..?' ಎಂದು ಕೇಳಿದಾಗ ವಿನಯಚಂದ್ರ `ನಾನು ಕಬ್ಬಡ್ಡಿ ಆಡುತ್ತೇನೆ.. ಇವರು ನಮ್ಮ ಕೋಚ್' ಎಂದು ಹೇಳಿದ.
                             ಅಷ್ಟರಲ್ಲಿ ಮನೆಯೊಳಗಿನಿಂದ ಮಧುಮಿತಾಳ ತಾಯಿ ಕುತೂಹಲದಿಂದ ನೋಡತೊಡಗಿದರು. ಅವರ ಪರಿಚಯವೂ ಆಯಿತು. ಉಭಯಕುಶಲೋಪರಿ ಸಾಂಪ್ರತ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಮನೆಯೊಳಗೆ ಎಲ್ಲ ಬಂದ ತಕ್ಷಣ ಮಧುಮಿತಾಳ ತಂದೆ ದಡಕ್ಕನೆ ಬಾಗಿಲನ್ನು ಹಾಕಿದರು. ಕೊಂಚ ಸಮಯದ ನಂತರ ಅವರೇ ಮಾತಿಗೆ ಶುರುವಿಟ್ಟುಕೊಂಡರು.
                          `ಬಾಂಗ್ಲಾದಲ್ಲಿ ಎಲ್ಲ ಕಡೆ ಹಿಂದೂ ಮನೆಗಳನ್ನು ಹುಡುಕಿ ಹುಡುಕಿ ಬೆಂಕಿ ಹಚ್ಚಲಾಗಿದೆ. ಕಳೆದೊಂದು ವರ್ಷದ ಈಚೆಗೆ ಈ ಕಾರ್ಯ ಇನ್ನೂ ಮುಂದುವರಿದಿದೆ.  ಎಲ್ಲ ಕಡೆ ಹಿಂದೂಗಳ ಮನೆಯನ್ನು ಸುಟ್ಟು, ದೌರ್ಜನ್ಯ ಮಾಡುತ್ತಿದ್ದರೂ ನಮ್ಮೂರು ಶಾಂತವಾಗಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ನಮ್ಮೂರಲ್ಲೂ ಪುಂಡಾಟಿಕೆ ಶುರುವಾಯಿತು. ಹಲವು ಜನ ನೋಡ ನೋಡುತ್ತಿದ್ದಂತೆ ನಮ್ಮ ಪಕ್ಕದ ಮನೆಗೆ ಬೆಂಕಿ ಹಚ್ಚಿದರು. ಅವರ ಮನೆಯಲ್ಲಿದ್ದ ವ್ಯಕ್ತಿಗಳನ್ನು ಮನೆಯಿಂದ ಹೊರಗೆಳೆದು ತಂದು ಹೊಡೆದರು. ಗಂಡಸರು. ಹೆಂಗಸರು, ಮಕ್ಕಳು ಎಂದು ನೋಡಲಿಲ್ಲ. ಎಲ್ಲರೂ ಹೊಡೆತ ತಿಂದರು. ಈಗ ಪಕ್ಕದ ಮನೆಯಲ್ಲಿ ಯಾರು ಬದುಕಿದ್ದಾರೆ, ಯಾರು ಸತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಿನ್ನೆ ನಡೆದ ಪುಂಡಾಟಿಕೆಯಲ್ಲಿ ಕನಿಷ್ಟ ಒಬ್ಬಿಬ್ಬರಾದರೂ ಸತ್ತುಹೋಗಿರಬೇಕು. ನಮಗೆ ಸಹಾಯಕ್ಕೆ ಹೋಗೋಣ ಎನ್ನಿಸಿತ್ತು. ಆದರೆ ಜೀವಭಯ. ಕಣ್ಣೆದುರು ಮನೆ ಉರಿದು ಹೋಗುತ್ತಿದ್ದರೂ ಜೀವ ಹನನವಾಗುತ್ತಿದ್ದರೂ ಮನೆಯೊಳಗೇ ಕುಳಿತುಬಿಟ್ಟಿದ್ದೆವು. ಆಕ್ರಂದನಗಳು ಕೇಳುತ್ತಿದ್ದರೂ ಏನೂ ಮಾಡಲಾಗದೇ ಅಸಹಾಯಕರಾಗಿ ಇದ್ದುಬಿಟ್ಟೆವು.. ಛೇ' ಎಂದು ನಿಟ್ಟುಸಿರು, ಭಯ ಮಿಶ್ರಿತ ಧ್ವನಿಯಲ್ಲಿ ಮಧುಮಿತಾಳ ತಂದೆ ಹೇಳಿದರು.
                         `ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಕಾರಣ ಏನು..? ಯಾಕ್ ಈ ಥರ ಆಗ್ತಾ ಇದೆ?' ವಿನಯಚಂದ್ರ ಕೇಳಿದ್ದ.
                         `ಇಂತದ್ದೇ ಆಗಬೇಕು ಎಂದಿಲ್ಲ. ಧರ್ಮ ಕಾರಣ ಮುಖ್ಯ. ಇಲ್ಲಿ ಎರಡು ಪ್ರಮುಖ ಪಕ್ಷಗಳಿವೆ. ಎರಡೂ ಪಕ್ಷಗಳ ಮುಖ್ಯಸ್ಥರು ಮಹಿಳೆಯರೇ. ಇಬ್ಬರ ನಡುವೆ ಯಾವಾಗಲೂ ಹೊತ್ತಿ ಉರಿಯುವ ದ್ವೇಷ. ಕೊಚ್ಚಿ ಕೊಲ್ಲುವಷ್ಟು ಸಿಟ್ಟು. ಭಾರತದಲ್ಲಿ ಹೇಗೆ ಮುಸ್ಲಿಂ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಎಂದು ನೀವು ಹೇಳುತ್ತೀರೋ ಹಾಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಗಳು ನಿರ್ಣಾಯಕವಾಗುತ್ತವೆ. ಆದರೆ ಭಾರತದಲ್ಲಿ ಮತಕ್ಕಾಗಿ ಇಲ್ಲ ಸಲ್ಲದ ಆಸೆ, ಆಮಿಷಗಳನ್ನು ನೀಡಲಾಗುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಮಾತ್ರ ಬೆದರಿಕೆ ಹಾಕಲಾಗುತ್ತದೆ. ವಿರೋಧಿಸಿದವರನ್ನು ಕೊಂದು ಹಾಕಲೂ ಹಿಂದೆ ಬರುವಂತವರಲ್ಲ.. ಈ ಸಾರಿ ಚುನಾವಣೆಯಲ್ಲಿ ಹಿಂದುಗಳೆಲ್ಲ ಆಡಳಿತ ಪಕ್ಷವನ್ನು ಬೆಂಬಲಿಸಿದರು. ಇದೇ ಕಾರಣಕ್ಕಾಗಿ ವಿರೋಧ ಪಕ್ಷದ ಪುಡಾರಿಗಳು, ಬೆಂಬಲಿಗರು, ರೌಡಿಗಳು ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಹಲ್ಲೆಯನ್ನೂ ಮಾಡಿ, ಹತ್ಯೆಯನ್ನೂ ಕೈಗೊಳ್ಳುತ್ತಿದ್ದಾರೆ..' ಎಂದು ಅವರು ಹೇಳಿದರು.
                        ` ವಿನಯಚಂದ್ರ.. ಭಾರತದಲ್ಲಿ ಯಾವಾಗಲಾದರೂ ಇಂತಹುದ್ದನ್ನು ನೀನು ಚಿಂತನೆ ಮಾಡಿದ್ದೀಯಾ..? ತಮನೆ ಮತ ಹಾಕಿಲ್ಲ ಎನ್ನುವ ಕಾರಣಕ್ಕಾಗಿ ಹಲ್ಲೆ ಮಾಡುವುದು, ಗಲಾಟೆ ಮಾಡುವ ಮಟ್ಟಕ್ಕೆ ಇನ್ನೂ ನಮ್ಮ ದೇಶ ಇಳಿದಿಲ್ಲವಲ್ಲ.. ಓಹ್.. ಸಾಕು.. ಭಗವಂತಾ ಹಾಗಾಗದಿರಲಿ..' ಎಂದು ಜಾಧವ್ ಹೇಳಿದಾಗ ವಿನಯಚಂದ್ರನ ಮನಸ್ಸಿನಲ್ಲಿ ಮುಂದಿನ ಭವಿಷ್ಯ ನೆನೆದು ತಲೆ ಕೊಡವಿದ.
                        ವಿನಯಚಂದ್ರ ಹಾಗೂ ಜಾಧವ್ ಅವರು ಮಧುಮಿತಾಳ ಕುಟುಂಬವನ್ನು ಸಮಾಧಾನ ಮಾಡಲು ಯತ್ನಿಸಿದರು. ಢಾಕಾಕ್ಕೆ ಬಂದು ಮಧುಮಿತಾ ಉಳಿದುಕೊಂಡಿದ್ದ ಅಪಾರ್ಟ್ ಮೆಂಟಿನಲ್ಲಿಯೇ ಉಳಿಯುವಂತೆ ಸಲಹೆ ನೀಡಿದರು. ಹಲವು ಸಾರಿ ಒತ್ತಾಯ ಮಾಡಿದರ ನಂತರ ಢಾಕಾಕ್ಕೆ ಬರಲು ಒಪ್ಪಿಕೊಂಡರು. ತಕ್ಷಣವೇ ಢಾಕಾಕ್ಕೆ ತೆರಳಲು ಎಲ್ಲ ಏರ್ಪಾಡುಗಳನ್ನೂ ಕೈಗೊಳ್ಳಲಾಯಿತು.
                      ಹೊರಟ ಸಂದರ್ಭದಲ್ಲಿಯೇ ಮನೆಯಿಂದ ಹೊರ ಬಂದ ವಿನಯಚಂದ್ರ ಅಕ್ಕ ಪಕ್ಕ ನೋಡಿದ. ಪಕ್ಕದ ಮನೆ ಸುಟ್ಟು ಕರಕಲಾಗಿ ನಿಂತಿತ್ತು. ಗಲಭೆಯ ಅಟ್ಟಹಾಸಕ್ಕೆ ಮನೆಯ ಮೇಲ್ಛಾವಣಿ ಬಾಯ್ದೆರೆದು ನಿಂತಿತ್ತು. ದೋರದಲ್ಲೆಲ್ಲೋ ಪೊಲೀಸರು ತಪಾಸಣೆಯನ್ನು ನಡೆಸುತ್ತಿದ್ದರು. ಪಕ್ಕದ ಮನೆಯಿಂದ ಸುಟ್ಟ ವಾಸನೆ ಮೂಗಿಗೆ ಬರುತ್ತಲೇ ಇತ್ತು.
                      ಯಾವ ಶತಮಾನದಲ್ಲಿ ಯಾವ ಮಹಾನುಭಾವ ಕಟ್ಟಿದ್ದನೋ ಈ ಮನೆಯನ್ನು. ಅದೆಷ್ಟು ತಲೆಮಾರಿಗೆ ಜೀವ-ಜೀವನ ನೀಡಿತ್ತೋ.  ಇದೀಗ ಜೀವವನ್ನು ಕಳೆಯುತ್ತಿದೆ. ಹಳೆಯ ಮರದಿಂದ ಕಟ್ಟಿದ ಮನೆ ಹಚ್ಚಿದ್ದ ಬೆಂಕಿಗೆ ಬುರ್ರನೆ ಉರಿದುಹೋಗಿರಬೇಕು. ಯಾಕೋ ತಮ್ಮೂರಿನ ಭವಂತಿ ಮನೆ ನೆನಪಾಗುತ್ತಿದೆ ಎಂದುಕೊಂಡ ವಿನಯಚಂದ್ರ.
                    `ಬಟ್ಟೆ, ವಸ್ತುಗಳು.. ಎಲ್ಲವನ್ನೂ ತೆಗೆದುಕೊಳ್ಳಿ.. ಮತ್ತೆ ಇಲ್ಲಿ ಬರುವ ಸಾಧ್ಯತೆಗಳು ಇದೆಯೋ ಇಲ್ಲವೋ ಗೊತ್ತಿಲ್ಲ..' ಎಂದು ಮಧುಮಿತಾಳ ಕುಟುಂಬಕ್ಕೆ ಹೇಳಬೇಕೆನ್ನಿಸಿತು ವಿನಯಚಂದ್ರನಿಗೆ. ಆದರೆ ಹೇಳಲಿಕ್ಕಾಗಲೇ ಇಲ್ಲ. ಸುಮ್ಮನೆ ಉಳಿದುಬಿಟ್ಟ. ಕೆಲ ಹೊತ್ತಿನಲ್ಲಿಯೇ ಅಲ್ಲಿಂದ ಹೊರಟರು.
                 `ದಾರಿಯ ನಡುವೆ ಅನೇಕ ವಾಹನಗಳು ಹೊತ್ತಿ ಉರಿಯುತ್ತಿದ್ದುದು ಕಣ್ಣಿಗೆ ಬಿತ್ತು. ಮನೆ ಮನೆಗಳಿಗೆ ಕಲ್ಲು ತೂರಲಾಗಿತ್ತು. ರಸ್ತೆಗಳ ಮೇಲೆಲ್ಲ ಕಲ್ಲುಗಳು, ಇಟ್ಟಂಗಿಗಳ ರಾಶಿ ರಾಶಿ. ನಡು ನಡುವೆ ಪೊಲೀಸ್ ಸೈರನ್ ಸದ್ದು. ವಿನಯಚಂದ್ರನಿಗೆ ಒಮ್ಮೆ ಬಾಂಬೆ ಸಿನೆಮಾ ನೆನಪಾಯಿತು. ಕಣ್ಣಂಚಿನಲ್ಲಿ ನೀರು ಜಿನುಗಲು ಆರಂಭಿಸಿತ್ತು. ಕಾಲೇಜು ಓದುತ್ತಿದ್ದ ಸಮಯದಲ್ಲಿ ತಮ್ಮೂರಿನಲ್ಲಿ ಕೋಮುಗಲಭೆ ಭುಗಿಲೆದ್ದಿದ್ದು ವಿನಯಚಂದ್ರನಿಗೆ ನೆನಪಾಯಿತು.

**

                      ಮರಳಿ ಢಾಕಾವನ್ನು ತಲುಪುವ ವೇಳೆಗೆ ಬಾನಂಚಿನಲ್ಲಿ ಸೂರ್ಯ ಜಾರುತ್ತಿದ್ದ. ಮಧುಮಿತಾಳ ಕುಟುಂಬವನ್ನು ಅಪಾರ್ಟ್ ಮೆಂಟ್ ಬಳಿ ಇಳಿಸಿ ಜಾಧವ್ ಹಾಗೂ ವಿನಯಚಂದ್ರ ತಮ್ಮ ಹೊಟೆಲಿಗೆ ಮರಳುವ ವೇಳೆಗೆ ಏನೋ ಒಳ್ಳೆಯದ್ದನ್ನು ಸಾಧಿಸಿದ ಸಾರ್ಥಕತೆ ಇಬ್ಬರನ್ನೂ ಕಾಡಿತು. ಮನಸ್ಸು ಖುಷಿಯಾದ ಅನುಭವ. ವಿನಯಚಂದ್ರ ರೂಮಿಗೆ ಬರುವ ವೇಳೆಗೆ ಸೂರ್ಯನ್ ಕಾಯುತ್ತಿದ್ದ.
                  `ಎಲ್ಲಿಗೆ ಹೋಗಿತ್ತು ಸವಾರಿ..?' ಪ್ರಶ್ನೆಗಳೊಂದಿಗೆ ಮಾತು ಶುರುಮಾಡಿದ.
                   ವಿನಯಚಂದ್ರ ಮುಚ್ಚಿಡಲು ಹೋಗಲಿಲ್ಲ. ಎಲ್ಲ ವಿಷಯವನ್ನೂ ತಿಳಿಸಿದ ನಂತರ ಸೂರ್ಯನ್ `ಒಳ್ಳೆಯ ಕೆಲಸ ಮಾಡಿದೆ ವಿನು. ನನಗೆ ನಿನ್ನ ಮೇಲೆ ಬಹಳ ಹೆಮ್ಮೆ ಆಗುತ್ತಿದೆ..' ಎಂದ.
                   `ನನ್ನದೆಂತ ಇಲ್ಲ ಮಾರಾಯಾ.. ಎಲ್ಲ ಜಾಧವ್ ಸರ್ ಕೃಪೆ..' ಎಂದ.
                   `ಅಲ್ಲ ಮಾರಾಯಾ.. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ ಅಂತಾಗಿದೆ. ಮಧುಮಿತಾಳ ಕುಟುಂಬವನ್ನೇನೋ ನೀನು ಢಾಕಾಕ್ಕೆ ಕರೆಸಿ ಮಧುಮಿತಾಳ ರೂಮಿನಲ್ಲಿ ಉಳಿಸಿದ್ದೀಯಾ. ನಾವು ಕಬ್ಬಡ್ಡಿ ವಿಶ್ವಕಪ್ ಟೈಮ್ ನಲ್ಲಿ ಮಾತ್ರ ಇಲ್ಲಿರುತ್ತೇವೆ. ಇನ್ನೊಂದು ಹದಿನೈದು ದಿನ. ನಾವು ಮರಳಿ ಭಾರತಕ್ಕೆ ಹೋಗಲೇಬೇಕು. ಢಾಕಾದಲ್ಲಿ ಮಧುಮಿತಾಳ ಕುಟುಂಬಕ್ಕೆ ಮುಂದೆ ಇಂತದ್ದೇ ಸಮಸ್ಯೆ ಬಂದರೆ ಏನು ಮಾಡುವುದು ಎಂಬುದನ್ನು ಆಲೋಚನೆ ಮಾಡಿದ್ದೀಯಾ..?' ಸೂರ್ಯನ್ ಗಂಭೀರವಾಗಿ ಕೇಳಿದ್ದ.
                   `ನಾನೂ ಅದನ್ನೇ ಆಲೋಚನೆ ಮಾಡುತ್ತಿದ್ದೆ. ನಾವಿರುವಷ್ಟು ದಿನ ಹೇಗೋ ನಡೆಯುತ್ತದೆ. ಬೇರೆ ಬೇರೆ ದೇಶಗಳಿಂದ ಆಟಗಾರರು ಬಂದಿದ್ದಾರೆ ಎನ್ನುವ ಕಾರಣಕ್ಕಾಗಿಯಾದರೂ, ಬಾಂಗ್ಲಾದೇಶ ವಿಶ್ವದ ಎದುರು ತನ್ನ ಮಾನ ಹರಾಜಾಗಬಾರದು ಎಂದಾದರೂ ಸ್ವಲ್ಪ ದಿನಗಳ ಮಟ್ಟಿಗೆ ಸುಮ್ಮನಿರಬಹುದು. ಗ್ರಾಮೀಣ ಅಥವಾ ಬಾಂಗ್ಲಾದೇಶದ ಇತರ ಭಾಗಗಳನ್ನು ಹೊರತು ಪಡಿಸಿ ಢಾಕಾ ದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯದಂತೆ ತಡೆಯಬಹುದು. ಆದರೆ ನಾವು ಹೋದ ನಂತರ ಖಂಡಿತ ಹಲ್ಲೆಗಳು, ಹಿಂದುಗಳ ಮೇಲೆ ದೌರ್ಜನ್ಯ ನಡೆದೇ ನಡೆಯುತ್ತದೆ.. ಆಗ ಮಧುಮಿತಾ ಸೇರಿದಂತೆ ಅವಳ ಕುಟುಂಬ ಸಮಸ್ಯೆಯ ಸುಳಿಯಲ್ಲಿ ಸಿಕ್ಕೇ ಸಿಲುಕುತ್ತದೆ. ನನಗೂ ಏನು ಮಾಡಬೇಕೆಂಬುದು ತೋಚುತ್ತಿಲ್ಲ..' ಎಂದ ವಿನಯಚಂದ್ರ.
                  `ಒಂದು ಕೆಲಸ ಮಾಡಬಹುದು. ಮಧುಮಿತಾ ಹಾಗೂ ಅವಳ ಕುಟುಂಬವನ್ನು ಭಾರತಕ್ಕೆ ಕರೆದೊಯ್ದರೆ ಹೇಗೆ? ಭಾರತದಲ್ಲಿಯೇ ಉಳಿದುಕೊಂಡು ಅಲ್ಲಿಯ ಪೌರತ್ವ ಪಡೆಯುವಂತೆ ಮಾಡಬಹುದಲ್ಲ..' ಎಂದ ಸೂರ್ಯನ್.
                  ವಿನಯಚಂದ್ರನ ಕಣ್ಣಲ್ಲಿ ಒಮ್ಮೆ ಹೊಳಪು. `ಹೌದು.. ಹಾಗೆ ಮಾಡಬಹುದು. ಆದರೆ ಯಾಕೋ ಇದು ಬಹಳ ರಿಸ್ಕಾಗುತ್ತಾ..? ಅನ್ನಿಸುತ್ತಿದೆ..'
                   `ರಿಸ್ಕ್ ಯಾಕೆ ದೋಸ್ತಾ..? ನನ್ನ ಸಂಬಂಧಿಯೊಬ್ಬರು ತಮಿಳುನಾಡು ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಈ ಕೆಲಸಕ್ಕೆ ನಾನು ಅವರ ಬಳಿ ಸಹಾಯ ಕೇಳೋಣ ಎಂದುಕೊಂಡಿದ್ದೇನೆ. ಅವರು ಆಗಾಗ ನನ್ನ ಬಳಿ ಏನಾದ್ರೂ ಸಹಾಯ ಬೇಕಿದ್ದರೆ ಕೇಳು ಎನ್ನುತ್ತಿದ್ದರು. ನಾನೂ ಕೇಳಿರಲಿಲ್ಲ. ರಾಜಕಾರಣಿಗಳ ಸಹವಾಸವೇ ಬೇಡ ಎಂದು ಸುಮ್ಮನಿದ್ದೆ. ಈಗ ನಮ್ಮ ಆಪ್ತರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಯಾಕೆ ಬಿಡಬೇಕು..? ಒಮ್ಮೆ ಕೇಳಿ ನೋಡೋಣ.. ಸಹಾಯ ಸಿಕ್ಕರೆ ಒಳ್ಳೆಯದೇ ಆಗುತ್ತದೆ ಅಲ್ಲವೇ..' ಎಂದ ಸೂರ್ಯನ್.
                     `ಹುಂ.. ಆದರೆ ಇದರಿಂದ ನಿನಗೆ ಎನೂ ತೊಂದರೆ ಆಗೋದಿಲ್ಲ ಅಲ್ಲವಾ..'
                     `ಹೇಯ್ ನನಗೆಂತದ್ದೋ ತೊಂದರೆ.. ನನ್ನ ದೋಸ್ತನಿಗೆ ಒಳ್ಳೆಯದಾಗ್ತದೆ ಅಂತಾದ್ರೆ ಇಷ್ಟೋ ಮಾಡದಿದ್ದರೆ ಹೇಗೆ..? ಮಧುಮಿತಾ ಯಾರು? ನಿನಗೆ ಬೇಕಾದವಳಲ್ಲವಾ.. ಅದೆಲ್ಲ ಬಿಟ್ಹಾಕು.. ಅವರ ಮನೆಯಲ್ಲಿ ಹೇಗೆ..?'
                      `ಯಾರ ಮನೆಯಲ್ಲಿ..?'
                      `ಮಧುಮಿತಾಳ ಮನೆಯಲ್ಲಿ..'
                       `ಹೇಗೆ ಅಂದರೆ..?' ವಿನಯಚಂದ್ರನಿಗೆ ವಿಷಯ ಗೊತ್ತಿದ್ದೂ ಜಗ್ಗಾಡುತ್ತಿದ್ದ.
                       `ಗುಣ.. ವ್ಯಕ್ತಿಗಳು.. ಮಧುಮಿತಾಳ ಅಪ್ಪ-ಅಮ್ಮ'
                       `ಬಹಳ ಒಳ್ಳೆಯವರು. ನಮ್ಮ ಬಗ್ಗೆ ಗೌರವ ಇದೆ. ಗಲಭೆ ಪೀಡಿತ ಪ್ರದೇಶಕ್ಕೆ ಸಹಾಯಕ್ಕಾಗಿ ಬಂದಿದ್ದಾರೆ ಎನ್ನುವ ಕಾರಣಕ್ಕೆ ಬಹಳ ಖುಷಿ ಪಟ್ಟರು. ಅಭಿಮಾನದಿಂದ ನೋಡಿದರು. ನಾಳೆ ಅಥವಾ ನಾಡಿದ್ದು ಅವರನ್ನು ನಿನಗೆ ಪರಿಚಯ ಮಾಡಿಕೊಡ್ತೀನಿ.. ಅಪಾರ್ಟ್ ಮೆಂಟಿಗೆ ಹೋಗಿ ಬರೋಣ..' ಎಂದ ವಿನಯಚಂದ್ರ.
                        ಅಷ್ಟರಲ್ಲಿ ರೂಮ್ ಬಾಗಿಲು ಸದ್ದಾಯಿತು. ಸೂರ್ಯನ್ ಬಾಗಿಲ ಬಳಿ ಹೋದ. ವಿನಯಚಂದ್ರ ಪ್ರೆಶ್ಶಾಗಿ ಬರಲು ಬಾತ್ ರೂಮಿಗೆ ಹೋದ.

**
(ಮುಂದುವರಿಯುತ್ತದೆ)

Monday, May 19, 2014

ದಾರಿ ತಪ್ಪಿದ ಗಾಂಜಾವಾಲ ಮ,ತ್ತೊಮ್ಮೆ ಸಿಕ್ಕಿದ್ದ

ಇದು `ಮನದ ತುಂಬಾ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದ ಪರಿ'ಯ ಮುಂದಿನ ಭಾಗ.  ಆಗ ಹಾಗೆ ಆಗಿದ್ದ ಗೆಳೆಯ ಮತ್ತೊಮ್ಮೆ ಸಿಕ್ಕಿದ್ದ. ಈಗ ಹೇಗಾಗಿದ್ದಾನೆ ಎನ್ನುವುದು ಇಲ್ಲಿ ಅಡಕವಾಗಿದೆ.. ಓದಿ

**
         ಮನದ ತುಂಬಾ ಕನಸು ಕಟ್ಟಿ ನಲಿದ ಗೆಳೆಯ ಗಾಂಜಾವಾಲನಾಗಿ ಹೋದವನು ಸರಿದಾರಿಯೆಡೆಗೆ ಅಂತೂ ಇಂತೂ ಬರತೊಡಗಿದ್ದಾನೆ. ಏಕೋ ಏನೋ ಮನಸ್ಸು ಉಲ್ಲಾಸದಿಂದ ಹೂವಂತಾಗುತ್ತಿದೆ. ಯಾರ್ಯಾರದ್ದೋ ಬೆಂಬಲ-ಕೈವಾಡದಿಂದಾಗಿ ಹಾದಿತಪ್ಪಿ ಗಾಂಜಾವಾಲನಾಗಿ ಹೋಗಿದ್ದ ದೀಪಕ ಮತ್ತೆ ದಡ ಹತ್ತಲು ಯತ್ನಿಸುತ್ತಿದ್ದಾನೆ.
         ಗಾಂಜಾ ಸೇದುವುದು, ಇಸ್ಪೀಟ್ ಆಡುವುದು, ಕುಡಿಯೋದು ಹೊಡೆದಾಟ, ರೌಡಿಸಂಗಳಂತಹ ಕೂಪಕ್ಕೆ ಬಿದ್ದು ಮರ್ಯಾದೆ ಕಳೆದುಕೊಂಡು ಬದುಕನ್ನು ಮೂರಾಬಟ್ಟೆಯಾಗಿಸಿಕೊಮಡಿದ್ದ ಗೆಳೆಯನೀಗ ಹೊಸ ಮನುಷ್ಯನಾಗುವತ್ತ ಹೆಜ್ಜೆ ಇಡುತ್ತಿದ್ದಾನೆ.
          ಹಿಂದೊಮ್ಮೆ ದುಃಖಪಟ್ಟು ಬೇಜಾರದಿಂದ ನಾನೇ ಬರೆದಿದ್ದೆ. ಆದರೆ ಈಗ ಸಮಾಧಾನಪಟ್ಟುಕೊಳ್ಳುವಷ್ಟರ ಮಟ್ಟಿಗೆ ಬದಲಾಗಿದ್ದಾನೆ. ಹಳೆಯ ದೀಪಕ ಇವನೇನಾ ಅನ್ನುವಷ್ಟಾಗಿದ್ದಾನೆ. ಅವನೊಳಗಣ ಬದಲಾವಣೆಯನ್ನು ನಾವು ಕಾಣಬಹುದೆನ್ನುವಷ್ಟರ ಮಟ್ಟಿಗೆ ಹೊಸತನವನ್ನು ಮೈಗೂಡಿಸಿಕೊಂಡಿದ್ದಾರೆ.
           ಪಾ..ಪ.. ಅವನನ್ನು ಸರಿಮಾಡಲು ಅವನ ತಾಯಿ ಅದೆಷ್ಟು ಕಷ್ಟ ಪಟ್ಟಳೋ. ಮಾತೆತ್ತಿದರೆ `ಏಯ್.. ನಿನ್ನಕ್ಕನ್...' ಅಂತನ್ನುತ್ತಿದ್ದ ಅವನನ್ನು ಅವಳು ಅದ್ಹೇಗೆ ಸಹಿಸಿಕೊಂಡಳೋ. ತಿದ್ದಿ ತೀಡಿದ್ದಾಳೆ ಆಕೆ.
           ಹಿಂದೆ ನಾನು ತಿಳಿಸಿದ ಸಂದರ್ಭದಲ್ಲಿಯೇ ಪೊಲೀಸರ ಪುಸ್ತಕದಲ್ಲಿ ಹೆಸರುವಾಸಿಯಾಗಿದ್ದ ದೀಪಕ ಮುಂದೂ ಕೆಲವು ತಿಂಗಳೂ ಅದೇ ವೃತ್ತಿಯಲ್ಲಿ ಮುಂದುವರಿದ.. ಆತನ ಮಾವ ಗಣೇಶ ಭಟ್ಟರಿಗೆ ಹಾಗೂ ಊರಿನ ತುಂಬೆಲ್ಲ ಆತನ ಉಪಟಳ ತಡೆಯಲಾಗದಂತಾಯ್ತು. ಕೋತಿ ತಾನು ಕೆಡೋದಲ್ಲದೇ ಇತರರನ್ನೂ ಕೆಡಿಸಿತ್ತು ಎನ್ನುವಂತೆ ಈತನನ್ನು ನೋಡಿ ಉಳಿದ ಕಿರಿಯ ಹುಡುಗರೆಲ್ಲ ತಾವೂ ಪುಂಡಾಟಕ್ಕೆ ಶುರುಹಚ್ಚಿಕೊಂಡರು. ಒಂದಿಬ್ಬರು ದೀಪಕನ ಜೊತೆಗೆ ಸೇರಿ ಸಿಗರೇಟಿನ ದಮ್ಮೆಳೆದ ಮೇಲಂತೂ ಮಾವನಿಗೆ ಈತನ ಮೇಲೆ ಬರುವ ಕಂಪ್ಲೇಂಟೂ ಹೆಚ್ಚಾಯಿತು. ಇನ್ನು ತಡೆಯುವುದು ಅಸಾಧ್ಯ ಎಂದರಿತ ಆತನ ಮಾವ ದೀಪಕನನ್ನು ಊರು ಬಿಡಿಸುವ ನಿರ್ಧಾರಕ್ಕೆ ಬಂದರು. ಒಂದು ದಿನ ಊರನ್ನೂ ಬಿಡಿಸಿದರು.
            ಮುಂದೆ ಅಂವ ಪಟ್ಟ ಪಡಿಪಾಟಲನ್ನು ಅವನ ಬಾಯಲ್ಲೇ ಕೇಳಿ :- ಮಾವ ಅಂತೂ ನನ್ನ ಊರಿಂದ ಓಡಿಸಿಬಿಟ್ಟ. ಮಾಡೋದೇನು? ನನಗಂತೂ ಚಿಂತೆಯಾಯಿತು. ಅಮ್ಮ ಬೆಂಗಳೂರಿನಲ್ಲಿದ್ದಳು. ತಮ್ಮ ಹೈಸ್ಕೂಲು ಮೆಟ್ಟಿಲು ಹತ್ತಿದ್ದ. ನನಗೆ ಅಲ್ಲಿಗೆ ಹೋಗಲು ಮನಸ್ಸಾಗಲಿಲ್ಲ. ಕೊನೆಗೆ ಉಡುಪಿಗೆ ಹೋದೆ. ಅಲ್ಲಿ ಉಳಿದುಕೊಳ್ಳಲು ಚಿಕ್ಕಪ್ಪ ಜಾಗಕೊಟ್ಟರು. ಮಾಡಲಿಕ್ಕೆಂದು ಎಂತದ್ದೋ ಒಂದು ಚಿಕ್ಕ ಕೆಲಸವನ್ನೂ ಹಿಡಿಸಿಕೊಟ್ಟರು. ಆದರೆ ಕುಡಿತ, ಸಿಗರೇಟು ಬಿಡಲಿಲ್ಲ. ನಾನು ದುಡಿದದ್ದನ್ನೆಲ್ಲ ಅವಕ್ಕೆ ಸುರಿದರೂ ದುಡ್ಡು ಸಾಕಾಗದೇ ಒದ್ದಾಡುವಂತಾಯಿತು. ರೌಡಿಯಿಸಮ್ಮನ್ನೂ ಬಿಡಲಿಕ್ಕಿ ಆಗಲಿಲ್ಲ. ಆದರೆ ಬದಲಾದ ಜಾಗ, ಹೊಸ ಜನರು, ಹಳೆಯ ರೌಡಿ ಗೆಳೆಯರ ಸಹವಾಸ ಬಿಟ್ಟಿತ್ತಲ್ಲಾ.. ನನಗೆ ಗೊತ್ತಿಲ್ಲ.. ಅದ್ಯಾವಾಗಲೋ ನನ್ನೊಳಗೆ ರೌಡಿಸಂ ಮಾಯವಾಯಿತು. ನಾನು ಮೃದುವಾಗಿದ್ದೆ. ನನಗೆ ಈಗಲೂ ಅನ್ನಿಸ್ತಾ ಇದೆ ವಿನೂ.. ಹಾಗೆ ಗಲಾಟೆ ಮಾಡಿ, ಯಾರಿಗೋ ಹೊಡೆದು.. ಬೆದರಿಸಿ.. ಊರು ತುಂಬಾ ಗಲಾಟೆ ಮಾಡಿ.. ಮಾತೆತ್ತಿದರೆ ಸೂ.. ಮಕ್ಕಳಾ.. ಬೋ ಮಕ್ಕಳಾ.. ಅಂತ ಬಯ್ಯುತ್ತಿದ್ದವನು ನಾನೇನಾ ಅಂತ.. ಯಾವ ಮಾಯೆಯೋ ನನ್ನೊಳಗಿನ ರೌಡಿಗುಣ ಮರೆಯಾಗಿತ್ತು.
            ಈ ಮಧ್ಯದಲ್ಲೇ ಪಿಯುಸಿಯನ್ನು ಎಕ್ಸಟರ್ನಲ್ ಆಗಿ ಕಟ್ಟಿ ಪಾಸು ಮಾಡಿದೆ. ಹೀಗೆ ಒಂದು ವರ್ಷ ನಾನು ಅಲ್ಲಿ ಕಳೆದೆ. ಆಗ ನನಗೆ ಅಲ್ಲಿ ಪರಿಚಯವಾದವಳೇ ರಜನಿ. ಚಿಕ್ಕಪ್ಪನ ಎದುರು ಮನೆಯ ಹುಡುಗಿ. ಮಾತಾಯಿತು ಕಥೆಯಾಯಿತು.. ಪರಿಚಯ ಬೆಳೆದು ಸ್ನೇಹವೂ ಆಯಿತು. ನಂತರದ ದಿನಗಳಲ್ಲಿ ಈ ಸ್ನೇಹ ಪ್ರೇಮಕ್ಕೂ ತಿರುಗಿತು. ಅವಳ ಸಹವಾಸದಿಂದಲೇ ಕುಡಿತವೂ ಬಿಟ್ಟು ಹೋಯಿತು. ಬಿಟ್ಟು ಹೋಯಿತು ಅನ್ನುವುದಕ್ಕಿಂತ ಬಿಡಿಸಿದಳು ಎಂದರೆ ಸರಿಯಾಗುತ್ತದೆ ದೋಸ್ತಾ. ಹೀಗೆ.. ನನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನನ್ನ ಬದುಕು ಬದಲಾಗುತ್ತಿತ್ತು. ಅವಳು ಹಾಗೂ ನಾನು ಕೆಲವು ದಿನಗಳ ಕಾಲ ಖುಷಿಯಿಂದ ಕಳೆದೆವು. ಹೀಗಿರುವಾಗಲೇ ನಮ್ಮ ಪ್ರೇಮದ ವಿಷಯ ರಜನಿಯ ಮನೆಯಲ್ಲಿ ತಿಳಿದುಬಿಟ್ಟಿತು..
            ಆಕೆಯ ಮನೆಯಲ್ಲಿ ಸಿಟ್ಟಾದರು. ಹುಡುಗನಿಗೆ ಸರಿಯಾದ ಜಾಬೇ ಇಲ್ಲ. ಹಾಗೆ ಹೀಗೆ ಅಂದ್ರು. ಕೊನೆಗೆ ನಾನು ಜಾಬ್ ಹಿಡೀತಿನಿ ಎಂದು ರಜನಿಯ ಮನೆಯವರಿಗೆ ಹೇಳಿ ಅವರನ್ನು ಒಪ್ಪಿಸಿ ಬೆಂಗಳೂರಿನ ದಾರಿ ಹಿಡಿದೆ. ಬೆಂಗಳೂರಿನಲ್ಲಿ ಒಂದೆರಡು ವಾರ ಕಳೆದರೂ ಯಾವುದೇ ಕೆಲಸ ಸಿಗುವ ಲಕ್ಷಣ ಕಾಣಲಿಲ್ಲ. ನಾನು ಕಲ್ತಿದ್ದ ಓದಿಗೆ ಯಾವ ಘನಾಂದಾರಿ ಕೆಲಸ ಕೊಡ್ತಾರೆ ನಂಗೆ ಹೇಳು. ಮನೆಯಲ್ಲಿ ಸುಮ್ಮನೆ ಕುಳಿತಿರಲೂ ಆಗುತ್ತಿಲ್ಲ. ಅಮ್ಮ ಅದ್ಯಾರದ್ದೋ ಮನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ತಮ್ಮ ಓದುತ್ತಿದ್ದ. ಜೊತೆಯಲ್ಲಿ ಪಾರ್ಟ್ ಟೈಂ ಕೆಲಸ. ನಾನೇ ಯಾಕೋ ವೇಸ್ಟ್ ಫೆಲೋ ಆಗಿಬಿಟ್ಟೆನೇನೋ ಅನ್ನಿಸತೊಡಗಿತು. ಕೊನೆಗೆ ಅಲ್ಲಿ ಇಲ್ಲಿ ಅಂತ ಯಾವುದಾದ್ರೂ ಮನೆಗಳಿಗೆ ಅಡಿಕೆ ಕೆಲಸಕ್ಕೆ ಹೋಗತೊಡಗಿದೆ. ದೊಡ್ಡ ದೊಡ್ಡ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗಳಲ್ಲಿ ನಾನು ಅಡುಗೆ ಮಾಡುವ ಕೆಲಸವನ್ನು ನಿಭಾಯಿಸತೊಡಗಿದೆ. ಆದರೆ ಇತ್ತ ಉಡುಪಿಯಲ್ಲಿ ರಜನಿಗೆ ಬೇರೆ ಹುಡುಗನ ಜೊತೆಗೆ ಮದುವೆ ಮಾಡಿದರು ಎನ್ನುವ ಸುದ್ದಿ ಬಂದಿತು. ಒಂದ್ಸಾರಿ ತುಂಬಾ ಬೇಜಾರಾಯ್ತು ವಿನು.. ಆದರೆ ಮೊದಲು ಹೈಸ್ಕೂಲು ಲೈಫು ಹಾಗೂ ಅದರ ನಂತ್ರ ಆ ಥರಾ ಸಿಟ್ಟು ಬರ್ತಿತ್ತಲ್ಲಾ.. ಈ ಸಾರಿ ನಂಗೆ ಹಾಗೆ ಸಿಟ್ಟೇ ಬರಲಿಲ್ಲ ಕಣೋ.. ಯಾಕೆ ಅಂತ ಗೊತ್ತಿಲ್ಲ..
            ಸಧ್ಯ ಕನ್ನಡ ಕಾಲ್ ಸೆಂಟರ್ ನಲ್ಲಿ ನೈಟ್ ಡ್ಯೂಟಿ, ಬೆಳಿಗ್ಗೆ ನ್ಯೂಸ್ ಪೇಪರ್ ಹಂಚೋದು ಜೊತೆಗೆ ಅಡುಗೆ ಕೆಲಸ ಮಾಡ್ತಿದ್ದೀನಿ ನೋಡು. ಒಂದು ಸೆಕೆಂಡ್ ಹ್ಯಾಂಡ್ ಇಂಡಿಕಾ ಕಾರನ್ನು ತಗೊಳ್ಳಬೇಕು ಎಂದುಕೊಂಡಿದ್ದೇನೆ. ಬಾಡಿಗೆ ಹೊಡೆಯೋಣ ಅಂತ. ಅದಕ್ಕೆ ಓಡಾಡ್ತಾ ಇದ್ದೀನಿ. ಇದು ಬೆಂಗಳೂರು ನೋಡು.. ಹಿಂಗೆ ಜೀವ ಬಿಟ್ಟು ದುಡಿದೇ ಇದ್ರೆ ಆಗೋದೇ ಇಲ್ಲ. ಹೀಗಾಗಿ ದುಡೀತಿದ್ದೀನಿ.. ಮತ್ತೆ ಅಮ್ಮನ್ನ, ತಮ್ಮನ್ನ ನಾನೇ ನೋಡ್ಕೋತಾ ಇದ್ದೀನಿ. ಈಗ ಕುಡಿಯೋದಿಲ್ಲ.. ಗುಟ್ಕಾ ಹಾಕೋದಿಲ್ಲ. ಗಾಂಜಾ ಕೂಡ ಹಾಕೋದಿಲ್ಲ. ಆದ್ರೆ ಸಿಗರೇಟು ಇದೆ. ಭಾಳ ಮೊದಲೇ ಕಲಿತಿದ್ನಲ್ಲಾ. ಯಾಕೋ ಬಿಡೋಕೆ ಆಗ್ತಾ ಇಲ್ಲ. ನಂ ಹೈಸ್ಕೂಲ್ ಲೈಫಲ್ಲಿ ನನಗೆ ಕಾಪಿ ಹೊಡೆಯಲು ಹೆಲ್ಪ್ ಮಾಡಿದ್ದೆ. ಆಮೇಲೆ ಇನ್ನೂ ಎಷ್ಟೋ ಹೆಲ್ಪನ್ನೂ ಮಾಡಿದ್ದೆ.. ಸಾಕಷ್ಟು ಸಾರಿ ಬುದ್ದಿ ಕುಡ ಹೇಳಿದ್ದೆ. ಆದರೆ ನಾನು ತಿಳ್ಕೊಂಡಿರಲಿಲ್ಲ. ಥ್ಯಾಂಕ್ಸ್ ಕಣೋ ದೋಸ್ತಾ.. ಅಂದ ಹಾಗೆ ಇನ್ನೊಂದು ಹೆಲ್ಪ್ ಬೇಕು ನಿನ್ನಿಂದ..' ಎಂದು ಹೇಳಿದ್ದವನ ಬಳಿ ನಾನು ಏನೆಂದು ಕೇಳಿದ್ದೆ.
         ನಾನು ಸೆಕೆಂಡ್ ಹ್ಯಾಂಡ್ ಇಂಡಿಕಾ ಕಾರು ತಗೋತಾ ಇದ್ದೀನಿ ಅಂದಿದ್ನಲ್ಲಾ.. ಅದಕ್ಕೆ ಲೋನ್ ಮಾಡೋಣ ಅಂದ್ಕೊಂಡಿದ್ದೀನಿ. ನಿಂದು ಎಸ್.ಬಿ.ಐ. ಅಕೌಂಟ್ ಇದ್ರೆ ನಂಗೆ ಜಾಮೀನು ಹಾಕ್ತೀಯಾ..?' ಎಂದು ಕೇಳಿದ್ದ. `ನಾನು ಖಂಡಿತ.. ಯಾವತ್ತು ಹೇಳು. ಜಾಮೀನು ಹಾಕ್ತೀನಿ. ಆಗ ಆದ್ರೆ ನಿಂಗೆ ಜಾಮೀನು ಹಾಕೋಕೆ ನಾನು ಖಂಡಿತ ಒಪ್ತಾ ಇರಲಿಲ್ಲ. ಈಗ ಯಾಕೋ ಹಂಗನ್ನಿಸ್ತಾ ಇಲ್ಲ. ಅದೇನ್ ಕಾಗದ ಪತ್ರಗಳು ಬೇಕೋ ಅವನ್ನು ತಂದು ನಂಗೆ ಪೋನ್ ಮಾಡು..' ಎಂದಿದ್ದೆ.
           ಇನ್ನೂ ಇಪ್ಪತ್ನಾಲ್ಕರ ಅರಳು ಜೀವನ ದೀಪಕಂದು. ಅವನ ಬದುಕಲ್ಲಿ ಸಿಕ್ಕಿದ ತಿರುವುಗಳು ಅದೆಷ್ಟೋ ತೆರನಾದವುಗಳು. ನಾನು ಕೂಡ ಇನ್ನೂ ಅವ ತನ್ನ ಬದುಕಿನಲ್ಲಿ ಅನುಭವಿಸಿದ ಅರ್ಧದಷ್ಟನ್ನಾದರೂ ಅನುಭವಿಸಿಲ್ಲ ಎಂದುಕೊಂಡೆ. ಕೆಲವರ ಬದುಕಿನಲ್ಲಿ ಯಾವಾಗಲೂ ಹೀಗೆಯೇ ಆಗುತ್ತದೆಯೇ ಎಂದುಕೊಂಡೆ.
           ಹಿಂದೊಮ್ಮೆ ಬಹಳ ಬೇಜಾರು ಪಟ್ಕೊಂಡಿದ್ದ ಅವನ ಅಮ್ಮ ತೀರಾ ಅಪರೂಪಕ್ಕೆ ಖುಷಿ ಪಟ್ಟಿದ್ದನ್ನು ಆ ದಿನ ಕಂಡಿದ್ದೆ. ಹೇಗಿದ್ದವನು ಹೇಗಾಗಿ ಹೇಗೇಗೋ ಆಗಿ, ಹೇಗಿದ್ದಾನಪ್ಪಾ ಅಂದರೆ ಹೀಗಾಗಿದ್ದಾನಲ್ಲ ಅನ್ನಿಸಿತು. ಈಗಲೂ ಆಗಾಗ ಪೋನ್ ಮಾಡ್ತಾ ಇರ್ತಾನೆ ದೀಪಕ್. ಇನ್ನೊಂದು ವಿಚಿತ್ರ ಅಂದರೆ ಅದೇನಾಯ್ತೋ ಏನೋ `ಇಂಡಿಕಾ ಕಾರಿನ ಲೋನಿಗೆ ಜಾಮೀನುದಾರ ಬೇಕು ಎಂದಿದ್ದ. ಇದುವರೆಗೂ ನನ್ನ ಬಳಿ ಬಂದಿಲ್ಲ. ಯಾಕೋ ಏನಾಯ್ತೋ ಎನ್ನುವ ಆಲೋಚನೆ, ಕುತೂಹಲ ಕಾಡುತ್ತಿರುವುದು ಸುಳ್ಳಲ್ಲ.
           ಸಿಕ್ಕ ಮಿತ್ರರಲ್ಲಿ ಇವನೊಬ್ಬ ದಾರಿ ತಪ್ಪಿದ್ದನಲ್ಲ. ಅಂತೂ ದಾರಿಗೆ ಬರುತ್ತಿದ್ದಾನೆಂಬ ಖುಷಿಯೂ ಆಗ್ತಿದೆ. ಕತ್ತಲೆಯ ನಂತರ ಬೆಳಕು, ರಾತ್ರಿಯ ನಂತರ ಹಗಲು, ನೆರಳಿನ ನಂತರ ಬೆಳಕು, ನೋವಿನ ನಂತರ ನಲಿವು, ಇಂತಹ ಶಬ್ದಗಳು ದೀಪಕನಂತವರಿಗಾಗಿಯೇ ಸರಷ್ಟಿಯಾಗಿದೆಯೇನೋ ಅನ್ನಿಸಿದ್ದಂತೂ ನಿಜ. ಇಂತದ್ದೇ ಕೆಲಸ ಬೇಕು, ಇಂತದ್ದನ್ನೇ ಮಾಡಬೇಕು. ಪ್ರೆಸ್ಟೀಜು, ಹಂಗೆ ಹಿಂಗೆ ಅನ್ನುವವರ ನಡುವೆ ಸಿಕ್ಕಿದ ಕೆಲಸ ಮಾಡುತ್ತ, ತಾನು ಏನು ಮಾಡಬಲ್ಲೆ ಎಂಬ ಅರಿವನ್ನಿಟ್ಟುಕೊಂಡು, ತನ್ನಿಂದ ಸಾಧ್ಯವಾದುದರಲ್ಲೇ ಬದುಕನ್ನು ಕಂಡುಕೊಂಡನಲ್ಲ ದೀಪಕ.. ಅಂತೂ ಛೇಂಜಾಗ್ತಾ ಇದ್ದಾನಲ್ಲ.. ಸಲಾಂ ಎನ್ನಬೇಕೆನ್ನಿಸುತ್ತಿದೆ. ಹ್ಯಾಟ್ಸಾಪ್ ದೀಪು.. ಆಲ್ ದಿ ಬೆಸ್ಟ್..

**
(ಮತ್ತೆ ಸಿಕ್ಕರೆ ಮುಂದಿನದನ್ನು ಬರೆಯಬಲ್ಲೆ)

Friday, May 9, 2014

ಇರುಳ ದೀಪ

ಬೆಳಗುತಿದೆ ಇರುಳ ದೀಪ
ಮಣ್ಣ ಹಣತೆಯಲ್ಲಿ..|
ಮೆರೆಯುತಿದೆ ಬಾಳ ರೂಪ
ಬದುಕ ಕನ್ನಡಿಯಲ್ಲಿ..||

ಜೀವ ರಸವೆ ಎಣ್ಣೆಯಂತೆ
ಹೀರಿ ದೀಪ ಬೆಳಗಿದೆ..|
ಪ್ರತಿಬಿಂಬದ ರೂಪ ಕಂಡು
ಮನವು ಒಮ್ಮೆ ನಕ್ಕಿದೆ..||

ಬೆಳಗು ದೀಪ ಬಾಳಿನಲ್ಲಿ
ತಿಮಿರ ಚುಚ್ಚಿ ಕಳೆದಿದೆ..|
ಬಾಳ ರೂಪ ಹೊಸದು ಅರ್ಥ
ಪಡೆದು ನಲಿದು ನಿಂತಿದೆ..||

ಬೆಳಗುತಿರಲಿ ಸದಾ ಹೀಗೆ
ಇರುಳಿನಲ್ಲಿ ದೀಪ
ಮನಸಿನಲ್ಲಿ ಸದಾ ಇರಲಿ
ನಲಿವ ಹೊನ್ನ ರೂಪ ..||

**
(ಈ ಕವಿತೆಯನ್ನು ಬರೆದಿರುವುದು 24.10.2006ರಂದು ದಂಟಕಲ್ಲಿನಲ್ಲಿ)

Saturday, May 3, 2014

ಪುಣ್ಯಕೋಟಿಯ ಕಥೆ...

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳ್
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನಿಂತು ಪೇಳ್ವೆನು
....ಎಂದು ಅಮ್ಮ ರಾಗವಾಗಿ ಹೇಳುತ್ತಿದ್ದರೆ ನಾವೆಲ್ಲ ತಂಡಾಗಿ ಕೇಳುತ್ತಿದ್ದೆವು.
              ಪುಣ್ಯಕೋಟಿ ಎಂಬ ಗೋವಿನ ಕಥೆಯನ್ನು ಅಮ್ಮ ಅದೆಷ್ಟು ಚನ್ನಾಗಿ ಹಾಡುತ್ತಾಳೆಂದರೆ ಕೇಳುಗರಾದ ನಾವು ಇಂಚಿಂಚೂ ಹಂದ್ಯಾಡುತ್ತಿರಲಿಲ್ಲ. ಮುಂದೇನಾಯ್ತು..? ಎನ್ನುವ ಕುತೂಹಲದೊಂದಿಗೆ ಕೇಳುತ್ತಿದ್ದೆವು. ಬಾಲ್ಯದಲ್ಲಿ ನಮ್ಮ ಪಾಲಿಗೆ ಪುಣ್ಯಕೋಟಿ ಗೋವಿನ ಕಥೆಯೇ ಸರ್ವಸ್ವ. `ಅಮ್ಮಾ ಕಥೆ ಹೇಳು..' ಎಂದು ಅಮ್ಮನನ್ನು ಗೋಗರೆದಾಗಲೆಲ್ಲ ಅಮ್ಮ ಹೇಳುತ್ತಿದ್ದುದು ಇದೇ ಕಥೆ.
               ಅಮ್ಮ ಬಾಲ್ಯದಲ್ಲಿ ನನಗೆ ಹಾಗೂ ನನ್ನ ವಾರಗೆಯ ಹುಡುಗರಿಗೆ ಪುಣ್ಯಕೋಟಿ ಕಥೆಯನ್ನು ಕೇಳುವಂತೆ ಮಾಡಿದವಳು. ನಾನಂತೂ ಆಕೆಯ ಬಾಯಿಂದ ಅದೆಷ್ಟು ಸಹಸ್ರ ಸಾರಿ ಪುಣ್ಯಕೋಟಿಯ ಕಥೆಯನ್ನು ಕೇಳಿದ್ದೇನೋ ಗೊತ್ತಿಲ್ಲ. ಮೊದಲ ಸಾರಿ ನಾನು ಪುಣ್ಯಕೋಟಿ ಕಥೆಯನ್ನು ಎಷ್ಟು ತನ್ಮಯನಾಗಿ ಕೇಳಿದ್ದೆನೋ ಈಗಲೂ ಅಷ್ಟೇ ತನ್ಮಯನಾಗಿ ಕೇಳುತ್ತೇನೆ. ಅದು ಅಮ್ಮ ಹೇಳುವ ರೀತಿಗಾ ಅಥವಾ ಪುಣ್ಯಕೋಟಿ ಕಥೆಯಲ್ಲಿರುವ ಶಕ್ತಿಯಾ ಗೊತ್ತಿಲ್ಲ. ಕೇಳುತ್ತ ಕೇಳುತ್ತ ಮನಸ್ಸು ಹಾಗೇ ಏನೋ ಒಂದು ರೀತಿಯಂತಾಗುತ್ತದೆ.
ಅದರಲ್ಲಿಯೂ ಪುಣ್ಯಕೋಟಿ ಮನೆಗೆ ವಾಪಾಸು ಬಂದು ತನ್ನ ಕರುವಿನ ಬಳಿ ತಾನು ಹುಲಿಯ ಬಾಯಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಕರು ಹೇಳುತ್ತದಲ್ಲ
`ಆರ ಬಳಿಯಲಿ ಮಲಗಲಮ್ಮ
ಆರ ಮೊಲೆಯನು ಕುಡಿಯಲಮ್ಮ
ಆರು ನನಗೆ ಹಿತವರು..
ಎನ್ನುವ ಸಾಲುಗಳು ಬಂದಾಗಲಂತೂ ಅರಿವಿಲ್ಲದಂತೆಯೇ ಕಣ್ಣಲ್ಲಿ ಹನಿಗೂಡುತ್ತದೆ. ಕಥೆ ಹೇಳುವ ಪ್ರಕ್ರಿಯೆಯೇ ಮರೆತು ಹೋಗುತ್ತಿರುವ ಇಂದಿನ ಜಮಾನಾದಲ್ಲಿ ಪುಣ್ಯಕೋಟಿ ಕತೆಯ ಬಗ್ಗೆ ಹೇಳಿದರೆ ಏನೂ ಅನ್ನಿಸುವುದಿಲ್ಲವೇನೋ. ಆದರೆ ಆ ಕಥೆಯನ್ನು ಯಾರೇ ಕೇಳಿದರೂ ಸಾಕು ಅವರ ಬದುಕು ಬಹಳಷ್ಟು ಬದಲಾವಣೆಯಾಗುವುದಂತೂ ಖಂಡಿತ.
                     ಬಹುಶಃ ಯಾರು ಬಾಲ್ಯದಲ್ಲಿ ಪುಣ್ಯಕೋಟಿಯ ಕಥೆಯನ್ನು ಕೇಳುತ್ತಾರೋ ಅವರು ತಮ್ಮ ಬದುಕಿನಲ್ಲಿ ಗೋಹತ್ಯೆಯಂತಹ ಕಾರ್ಯಕ್ಕೆ ಕೈಹಾಕಲಾರರು ಎನ್ನುವುದು ನನ್ನ ಭಾವನೆ. ಪುಣ್ಯಕೋಟಿ ಕಥೆ ಗೋವಿನ ಬಗೆಗೆ ನಮ್ಮಲ್ಲೊಂದು ಆರಾಧನಾ ಭಾವವನ್ನು ಹುಟ್ಟುಹಾಕುತ್ತದೆ. ಸತ್ಯ, ಪ್ರಾಮಾಣಿಕತೆಯಿಂದ `ಅರ್ಬುಧ' ಎಂಬ ವ್ಯಾಘ್ರನ ಮನಸ್ಸನ್ನೇ ಪರಿವರ್ತಿಸುವ ಪುಣ್ಯಕೋಟಿ ನಮ್ಮ ಮನಸ್ಸುಗಳನ್ನೂ ಅರಿವಿಲ್ಲದಂತೆಯೇ ಬದಲಿಸಿಬಿಡುತ್ತದೆ. ಕಥೆಯಲ್ಲಿ ಹುಲಿ ಹೇಗೆ ತನ್ನಪ್ರಾಣವನ್ನು ತಾನು ಬಲಿಗೊಡುತ್ತದೆಯೋ ಹಾಗೆಯೇ ನಮ್ಮೊಳಗಿನ ಕ್ರೂರತನಕ್ಕೆ ಕಥೆಯ ಕೇಳುವಿಕೆಯಿಂದಲೇ ಬಲಿ ಬಿದ್ದುಬಿಡುತ್ತದೆ.
                   ಪುಣ್ಯಕೋಟಿಯ ಕಥೆಯ ಕುರಿತು ಇನ್ನೊಂದು ಪ್ರಮುಖ ಅಂಶವನ್ನು ಹೇಳಲೇಬೇಕು.  ಈ ಕಥೆಯನ್ನು ಕೇಳಿದ ನಂತರ ನಮ್ಮ ಮನಸ್ಸಿನಲ್ಲಿ ಪುಣ್ಯಕೋಟಿಯದ್ದೊಂದು ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ಪುಣ್ಯಕೋಟಿ ಎಂಬ ದನ ಸಾಮಾನ್ಯ ದನದಂತಲ್ಲ. ಇದು ಬೇರೆಯ ರೀತಿಯದ್ದು ಎನ್ನುವ ಭಾವನೆ ಮೂಡುತ್ತದೆ. ನಮ್ಮೆದುರು ಕಾಣುವ ಸೀದಾ ಸಾದಾ ದನವಲ್ಲ ಬದಲಿಗೆ ದನದ ಬಣ್ಣ ವಿಶೇಷವಾದುದು, ಅದರ ನಿಲುವು ಉತ್ಕೃಷ್ಟವಾದುದು ಎಂಬ ಭಾವನೆ ಮೂಡುತ್ತದೆ. ಪುಣ್ಯಕೋಟಿಯೆಂದರೆ ಬಿಳಿ ಬಣ್ಣದ ದನ, ಮೈಮೇಲೆ ಕಪ್ಪು ಬಣ್ಣದ ಚಿಟ್ಟುಗಳು ಇದ್ದೇ ಇರುತ್ತವೆ ಎನ್ನುವ ಕಲ್ಪನೆ ಮೂಡಿ ಗೋವಿನ ಬಗ್ಗೆ ಮತ್ತಷ್ಟು ಗೌರವವೂ ಮೂಡುತ್ತದೆ.
                   ನಮ್ಮ ಜಾನಪದರ ಕಲ್ಪನೆಗಳೇ ವಿಶಿಷ್ಟವಾದುದು. ಪ್ರಾಣಿಗಳು, ಪಕ್ಷಿಗಳು, ಕಲ್ಲು, ಮರಗಳು, ಹಕ್ಕಿಗಳು ಹೀಗೆ ಕಣ್ಣಿಗೆ ಕಂಡದ್ದರ ಮೇಲೆಲ್ಲ ಹಾಡನ್ನು ಹಾಡಿ ಆ ಹಾಡನ್ನು ತಲೆತಲಾಂತರಕ್ಕೆ ಪ್ರಸಾರ ಮಾಡುವಂತೆ ಮಾಡಿದ್ದಾರೆ. ಲಾವಣಿಯ ರೂಪದಲ್ಲೋ, ಜಾನಪದ ಗೀತೆಯ ರೀತಿಯಲ್ಲೋ ಮುಂದಿನ ತಲೆಮಾರಿನವರೂ ಕೇಳುವಂತೆ ಮಾಡಿದ್ದಾರೆ. ಜಾನಪದ ಹಾಡಿನ ಮೂಲಕವೇ ಒಳ್ಳೆಯ ಗುಣಗಳು, ಜ್ಞಾನ, ಮಾನವೀಯತೆ ಮುಂತಾದ ಗುಣಗಳು ತಲೆಮಾರಿಗೆ ಹರಿದುಬರುವಂತೆ ಮಾಡಿದ್ದಾರೆ. ಈ ಮೂಲಕ ಗ್ರೇಟ್ ಎನ್ನಿಸಿಕೊಳ್ಳುತ್ತಾರೆ.
                 ಮಕ್ಕಳು ಕಥೆಯನ್ನು ಕೇಳಬೇಕು ಎಂದು ಹಿರಿಯರೊಬ್ಬರು ಹೇಳುತ್ತಿದ್ದರು. ಮಕ್ಕಳು ಕಥೆಯನ್ನು ಕೇಳುವುದರಿಂದ ಅನೇಕ ಉಪಯೋಗಗಳಿವೆ. ಮೊದಲನೆಯದಾಗಿ ಮಗು ಕಥೆ ಕೇಳುವುದರಿಂದ ಅದರ ಕೀಟಲೆಗೆ ಕಡಿವಾಣ ಹಾಕಬಹುದು, ಉತ್ತಮ ಕೇಳುವ ಮುಂದೆ ಉತ್ತಮ ಹೇಳುಗನಾಗುತ್ತಾನೆ, ಆತನ ಅರಿವಿನ ಶಕ್ತಿ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಯಾರು ಚಿಕ್ಕಂದಿನಲ್ಲಿ ಕಥೆ ಕೇಳಿರುತ್ತಾನೋ ಆತ ಮುಂದೆ ಉತ್ತಮ ಹೇಳುಗನಾಗಿ ಬದಲಾಗುತ್ತಾನೆ. ಅಜ್ಜಿಯೋ, ಅಮ್ಮನೋ.. ಹಿರಿಯರು ಹೇಳುವ ಕಥೆಯನ್ನು ತನ್ಮಯತೆಯಿಂದ ಕೇಳಿದರೆ ಏಕಾಗ್ರತೆ ಬೆಳೆಯಬಲ್ಲದು. ಸಮಾಜದ ಕಡೆಗಿನ ಭಾವನೆಗಳು ಬದಲಾಗಬಲ್ಲದು.
                ಖಾಸಗಿಯೆನ್ನಿಸಬಹುದು. ಹೇಳಲೇಬೇಕೆನ್ನಿಸುವಂತದ್ದು.. ಆದರೆ ಇತ್ತೀಚೆಗೆ ನಡೆದಿದ್ದು.. ನನ್ನ ತಂಗಿಯ ಮಗ ಶ್ರೀವತ್ಸ ಸಂಜೆ ಮಲಗುವ ಸಂದರ್ಭದಲ್ಲಿ ಕಥೆ ಹೇಳು ಎಂದು ಪೀಡಿಸುತ್ತಾನೆ. ಕಥೆ ಕೇಳುತ್ತ ಮಲಗುವುದನ್ನು ರೂಢಿಸಿದವಳು ನನ್ನ ತಂಗಿ. ಆರಂಭದಲ್ಲಿ ಕಾಕಣ್ಣ-ಗುಬ್ಬಣ್ಣನ ಕಥೆಯನ್ನು ಕೇಳುತ್ತ, ತಾನೂ ಆ ಕಥೆಯನ್ನು ಹೇಳುತ್ತ ಮಲಗಿದವನು ನಂತರದ ದಿನಗಳಲ್ಲಿ ಬೇರೆಯ ಕಥೆಯನ್ನು ಹೇಳುವಂತೆ ಪೀಡಿಸಿದ. ಅಮ್ಮ ಆತನಿಗೆ `ಪುಣ್ಯಕೋಟಿ'ಯ ಕಥೆ ಹೇಳಿದಳು.
                 ಧರಣಿಮಂಡಲ ಮಧ್ಯದೊಳಗೆ ಎನ್ನುವ ಸಾಲನ್ನು ರಾಗವಾಗಿ ಹಾಡುತ್ತ, ಅದರ ಅರ್ಥವನ್ನು ಹೇಳುತ್ತ ಶ್ರೀವತ್ಸನಿಗೆ ಕಥೆ ಕೇಳಿಸಿದಳು. ಕೇಳಿದ.. ಕೇಳಿ.. ಕೇಳುತ್ತ ಕೇಳುತ್ತ ನಿದ್ದೆ ಮಾಡಿದ. ಮರುದಿನದಿಂದ ಶ್ರೀವತ್ಸನ ನಡವಳಿಕೆಯಲ್ಲಿ ಅದೇನೋ ಬದಲಾವಣೆ ಕಂಡಿತು. ಮರುದಿನ ಮತ್ತೆ ಪುಣ್ಯಕೋಟಿಯ ಕಥೆ ಹೇಳು ಅಂದ. ಅಮ್ಮ ಹೇಳಿದಳು. ಕೇಳುತ್ತ ನಿದ್ದೆಹೋದ. ನಂತರ ತಾನೂ ಆ ಕಥೆಯ ಸಾಲನ್ನು ಹೇಳಲು ಕಲಿತ. ಕೊಟ್ಟಿಗೆಯಲ್ಲಿ ದನಗಳು ಕಂಡರೆ ಅದಕ್ಕೆ ಬಾಳೆಕುಂಡಿಗೆಯ ಹಾಳೆಯನ್ನು ಹಾಕುವುದು, ಹುಲ್ಲನ್ನು ನೀಡುವುದು, ಪುಟ್ಟ ಆಕಳುಕರು ಕಂಡರೆ ಮುದ್ದಿಸುವುದನ್ನು ಮಾಡಲು ಆರಂಭಿಸಿದ. (ನಾನು ಹಲವು ಬಾರಿ ಆತನ ಈ ಕ್ರಿಯೆಗಳನ್ನು ವಿಸ್ಮಯದಿಂದ ನೋಡಿದ್ದೇನೆ).  ಪಕ್ಕದ ಮನೆಯಲ್ಲಿ ಮೂರು ದನಗಳಿವೆ. ಅವುಗಳಲ್ಲಿ ಎರಡು ಕಪ್ಪು ಬಣ್ಣದ್ದಾದರೆ ಇನ್ನೊಂದು ಬಿಳಿ ಬಣ್ಣದ ದನ. ಆ ಬಿಳಿ ಬಣ್ಣದ ದನವನ್ನು ಆತ ಪುಣ್ಯಕೋಟಿ ಎಂದು ಕರೆದ. ಕಪ್ಪು ದನಗಳಲ್ಲಿ ಒಂದು ದನ ದೈತ್ಯದೇಹಿಯಾಗಿತ್ತು. ಯಾರು ತಿಳಿಸಿದ್ದರೋ ಏನೋ `ಗಾಮಿ'(ಗಮಯ, ಕಾಡೆಮ್ಮೆ) ಎಂದು ಕರೆದ. ಅಷ್ಟೇ ಏಕೆ ಯಾರಾದರೂ ಆತನನ್ನು ಗದರಿಸಿದರೆ, ಆತನ ವಾರಗೆಯ ಹುಡುಗರು ರಗಳೆ ಮಾಡಿದಾಗಲೆಲ್ಲ `ನಿನ್ನನ್ನು ಹುಲಿ ಕಚ್ಚಿಕೊಂಡು ಹೋಗುತ್ತದೆ ತಡೆ..' ಎಂದೂ ಹೇಳಲು ಆರಂಭಿಸಿದ.
                    ಖಂಡಿತ ನಾನು ಹೊಗಳಿಕೊಳ್ಳಬೇಕು ಅಥವಾ ಇನ್ನೇನಕ್ಕೋ ಈ ವಿಷಯವನ್ನು ಹೇಳುತ್ತಿಲ್ಲ. ಒಂದು ಕಥೆ ಮಗುವಿನ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವುದನ್ನು ತಿಳಿಸಲು ಹೇಳಿದ್ದಷ್ಟೇ. ಶ್ರೀವತ್ಸ ಈಗ ಪುಣ್ಯಕೋಟಿಯ ಕತೆಯನ್ನು ಸಂಪೂರ್ಣ ಹೇಳು ಕಲಿತಿದ್ದಾನೆ. ಅಷ್ಟೇ ಅಲ್ಲ ಬೇಸರವಾದಾಗ ಅಥವಾ ಆತನನ್ನು ಮಾತನಾಡಿಸಲಿಲ್ಲ ಎಂದಾದರೆ ಸಾಕು `ಯಾರ ಬಳಿ ನಾನು ಮಲಗಲಿ..? ಯಾರ ಹತ್ತಿರ ಮಾತಾಡಲಿ..? ನನ್ನನ್ನು ಯಾರೂ ಕೇಳ್ತಾ ಇಲ್ಲ...' ಎಂದೂ ಹೇಳಲು ಆರಂಭಿಸಿದ್ದಾನೆ.
**
           ಮಕ್ಕಳಿಗೆ ಕಥೆ ಹೇಳಿ. ಮಕ್ಕಳು ಕಥೆ ಕೇಳಲಿ. ಪ್ರಾಣಿಗಳು, ಪಕ್ಷಿಗಳು, ಮರಗಳು ಮಾತನಾಡುವುದನ್ನು ಬೆರಗಿನಿಂದ ಕೇಳಲಿ. ಪುಣ್ಯಕೋಟಿಯಂತಹ ಸತ್ಯ ನಿಷ್ಟೆಯ ಗೋವುಗಳು ಆದರ್ಶವಾಗಲಿ. ತನ್ಮೂಲಕ ಮಕ್ಕಳ ಮನಸ್ಸು ಸತ್ಯ, ನಿಷ್ಟೆ ಪ್ರಾಮಾಣಿಕತೆಯ ಕಡೆಗೆ ತಿರುಗಲಿ.. ಮಕ್ಕಳ ಮನಸ್ಸು ಅರಳಲು ಕಥೆ ಪೂರಕ. ಅಜ್ಜಿಯ ಬಳಿ ಮಕ್ಕಳನ್ನು ಬಿಡಿ. ಕಥೆ ಹೇಳಲು ಹೇಳಿ.. ಮಕ್ಕಳು ಬದಲಾಗುವುದನ್ನು ನೋಡಿ. ತನ್ಮೂಲಕ ಮಕ್ಕಳ ನಡತೆ ತನ್ನಿಂದ ತಾನೇ ಬದಲಾಗುವುದನ್ನು ಗಮನಿಸಿ. ನಿಮಗೆ ಖುಷಿಯಾಗಬಹುದು.