Thursday, January 30, 2014

ಸವಿ ನೆನಪುಗಳ ನಡುವೆ (ಪ್ರೇಮಪತ್ರ-10)

ಪ್ರೀತಿಯ ಪ್ರೀತಿ..,


ಬಾರ ಬಾರ್ ಆತೀ ಹೈ ಮುಝಕೋ
ಮಧುರ ಯಾದ್ ಬಚಪನ್ ತೇರಿ...|
                 ಓ ಬಾಲ್ಯ ನೀನೆಲ್ಲಿರುವೆ? ಕಳೆದ ನಿನ್ನ ಸಮಯ ಮತ್ತೆ ನನಗ್ಯಾಕೆ ಸಿಗುತ್ತಿಲ್ಲ?  ಈ ಹರೆಯದಲ್ಲಂತೂ ನಿನ್ನ ಸಮಯ ಬಹಳ ನನ್ನ ಕಾಡ್ತಿದೆ. ಓ ಬಾಲ್ಯ.. ನೀನು ಸುಂದರ ಸವಿ ನೆನಪಾಗಿ ಕಾಡ್ತಾ ಇರೋದು ಗ್ರೇಟ್.. ಜೊತೆಗೆ ಅದಕ್ಕೆ thanks..

ಸವಿ ಸವಿ ನೆನಪು
ಸಾವಿರ ನೆನಪು
ಸಾವಿರ ಕಾಲಕು
ಸವೆಯದ ನೆನಪು
               ನಿಂಗೆ ಈ ಬಾಲ್ಯ, ಬಾಲ್ಯದ ಆಟ-ಹುಡುಗಾಟ-ಮೆರೆದಾಟ-ನಲಿದಾಟ-ಕುಣಿದಾಟ ಎಷ್ಟೊಂದು ಗ್ರೇಟ್ ಅನ್ನಿಸೋಲ್ವಾ? ಅದಕ್ಕಾಗಿಯೇ ನಾನು ಈ ಸಲದ ಪತ್ರದ ವಿಷಯವನ್ನು ಬಾಲ್ಯದೆಡೆಗೆ ಹೊರಳಿಸಿದ್ದು.
               ನಿಜವಾಗ್ಲೂ ಈ ಬಾಲ್ಯ ಅನ್ನೋ  great boat ನಂಗೆ  ಎಷ್ಟೆಷ್ಟೋ ಮರೆಯಲಾಗದೇ ಇರುವಂತಹ ಅನುಭವಗಳನ್ನು ನೀಡಿದೆ. ಜೊತೆಗೆ ಅದಕ್ಕಿಂತ ಹೆಚ್ಚಾಗಿ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೆದ್ದಾಗ ಬೀಳಿಸಿ, ಬಿದ್ದಾಗ ಸಂತೈಸಿ, ಕಿಚ್ಚು, ಮೆಚ್ಚು, ಪ್ರೀತಿ, ಕರುಣೆಗಳ ಸೇರಿಸಿದೆ. ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದೆ.
               ಇಂತಹ ಬಾಲ್ಯ ನನ್ನ ಬದುಕಿನಲ್ಲಿ ಅದೊಂದು ಸುಸಮೃದ್ಧೋತ್ತಮ ನೆನಪಿನ ಗಣಿ, ಸುಂದರ ಖಜಾನೆ. ಓ.. ನಿನಗೆ ನನ್ನ ಬಾಲ್ಯದ ಸವಿ ನೆನಪ ಸನ್ನಿವೇಶಗಳನ್ನು ಹೇಳ್ಲೇ ಇಲ್ಲ. ತಾಳು ಹೇಳ್ತೀನಿ. ನನಗೆ ನೆನಪಿದ್ದಂತೆ ಕಂಡಕ್ಟರಿನೆ ಕಾಣದಂತೆ ಬಸ್ಸಿನ ಸೀಟಿ ಸ್ಪಂಜು ಹರಿದಿದ್ದೇ ಬಾಲ್ಯದ ಮೊದಲ ನೆನಪು ಹಾಗೂ ಮೊದಲ ಕಿತಾಪತಿಯೇನೋ..? ಮತ್ತೊಮ್ಮೆ, ಶಾಲೆಗೆ ಹೋಗಿ ಆಟಗಳಲ್ಲಿ ಭಾಗವಹಿಸದೇ ಇದ್ದರೂ ಕೂಡ ಸಮಾಧಾನಕರ ಬಹುಮಾನ ಪಡೆದಿದ್ದು, ಗೆಳತಿಯೊಬ್ಬಳ ಬ್ಯಾಗಿನಿಂದ ಗೆರೆಪಟ್ಟಿ ಕದ್ದಿದ್ದು, ಜಂಬುನೇರಳೆ ಮರದಿಂದ ತಲೆಕೆಳಗಾಗಿ ಬಿದ್ದಿದ್ದು, ತಲೆ ಧಿಮ್ಮೆನ್ನುವಾಗ ವಾಲಾಡುತ್ತ ಓಡಿ ಬಂದಿದ್ದು, ಯಾರೋ ಮಾಡಿದ ಕಾರ್ಯಕ್ಕೆ ನಾನು ಬಲಿಯಾದೆ ಎಂಬಂತೆ ಊರ ಬ್ಯಾಣಕ್ಕೆ ಬೆಂಕಿ ಇಟ್ಟ ಎಂಬ ಅಪವಾದ ಹೊತ್ತಿದ್ದು.. ಓಹ್..! ಇನ್ನೆಷ್ಟೆಷ್ಟೋ ಮಜವಾದ, ವಿಸ್ಮಯವಾದ ಸನ್ನಿವೇಶಗಳು. ಇಂತಹ ಪ್ರತಿಯೊಂದು ಸನ್ನಿವೇಶಗಳೂ ಹೊಸ ಹೊಸ ವಿಷಯವನ್ನೂ, ಪಾಠವನ್ನೂ, ಜ್ಞಾನವನ್ನೂ ಜೊತೆಗೆ ಅನುಭವವನ್ನೂ ನೀಡಿದೆ.
ಚಿಕ್ಕ ಚಿಕ್ಕ ಮನಸು
ಮನದ ತುಂಬಾ ಕನಸು
ಕನಸಿನೊಡನೆ ಆಟ
ಆಟದ ಜೊತೆಗೆ ಪಾಠ
                 ಇದೇ ಆಗಿನ ನಮ್ಮ ದೈನಂದಿನ ಕಾರ್ಯವಾಗಿತ್ತು. ಚಿಕ್ಕ, ಅರಳುತ್ತಿರುವ ಮನಸುಗಳು ಸುಂದರ ಕನಸುಗಳೋಡನೆ ಆಡಿ, ಪಾಡಿ ನಲಿಯುತ್ತಿದ್ದವು. ಮುಂದೊಮ್ಮೆ ಅವು ಸುಂದರವಾಗಿ ಅರಳುತ್ತಿದ್ದವು.
                 ನಿಂಗೆ ಇನ್ನೂ ಮಜಾ ಸುದ್ದಿ ಹೇಳ್ಬೇಕಂದ್ರೆ ಬಾಲ್ಯದಲ್ಲಿ ನಾನು ಬಹಳ ಕಿಲಾಡಿಯ, ತಂಟೆಕೋರ ಹುಡುಗನಾಗಿದ್ದೆ. ಹೀಗಾಗಿ ನಂಗೆ ಶಾಲೆಯಲ್ಲೂ, ಮನೆಯಲ್ಲೂ ಹೊಡೆತಗಳು ಬೀಳದೇ ಇದ್ದ ದಿನವೇ ಇರಲಿಲ್ಲ ಎನ್ನಬಹುದು. ಅಷ್ಟೇ ಅಲ್ಲ ಆಗ ನಮ್ಮ ಕುಟುಂಬ ಅವಿಭಕ್ತ ಕುಟುಂಬ. ಮನೆಯ ಹಿರಿಯ ಮಗನ ಮಗನಾದರೂ ನನ್ನೆಡೆಗೆ ಉಳಿದವರಿಗೆ ಅದೇಕೋ ತಾತ್ಸಾರ, ಸಿಟ್ಟು. ಜೊತೆಗೆ ನಮ್ಮ ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಅವರಲ್ಲಿ ಯಾರೇ ತಪ್ಪು ಮಾಡಿದ್ರೂ ಕೂಡ ಲತ್ತೆ ಮಾತ್ರ ನನಗೆ ಆಗಿತ್ತು. ಇಂಥ ಸನ್ನಿವೇಶಗಳ ನೆನಪು ಮಾಡಿಕೊಂಡ್ರೆ ಕಂಗಳಲ್ಲಿ ನೀರಾಡುತ್ತವೆ.
                ಆಗ ಕಲಿತ ಈಜು, ಕಲಿತ ಪಾಠ, ನಡೆ-ನುಡಿ, ಸಂಸ್ಕಾರ ಇವನ್ನೆಲ್ಲಾ ಎಂದಿಗೂ ಮರೆಯಲಾಗೋಲ್ಲ. ಮಳೆಯ ನೀರಿನಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಟ್ಟಿದ್ದು, ಮಳೆ ನೀರಿನಲ್ಲಿ ಜಾರಿ ಬಿದ್ದಿದ್ದು, ಉಕ್ಕೇರಿ ಹರಿಯುತ್ತಿದ್ದ ತಾಯಿ ಅಘನಾಶಿನಿಯನ್ನು ನೋಡಿ ಭಯಗೊಂಡಿದ್ದು, ಅಮ್ಮನೊಡನೆ ಪ್ರತಿ ಮಳೆಗಾಲದ ಹೊಳೆ ಉಕ್ಕೇರುವಿಕೆಗೆ `ಭಾಗಿನ' ಕೊಡಲು ಹೋಗುತ್ತಿದ್ದುದು, ಶಾಲೆಗೆ ಹೋಗುವಾಗ ಮಳೆಯಿಂದ ಬರುತ್ತಿದ್ದ ಗಾಳಿಗೆ ಹಿಡಿದ ಛತ್ರಿ ಉಲ್ಟಾ ಆಗಿ `ಚಪ್ಪರ' ಆದಾಗ ಖುಷಿ ಪಟ್ಟಿದ್ದು, ಕುಣಿದು ಕೇಕೆ ಹಾಕಿದ್ದು, ಮಳೆಯ ನಡುವೆಯೂ ಶಾಲೆಯ ಕ್ರಿಕೆಟ್ ಪಂದ್ಯದಲ್ಲಿ ಮೊಟ್ಟ ಮೊದಲ ಅರ್ಧಶತಕ (ಕೊಟ್ಟ ಕೊನೆಯದೂ ಕೂಡ) ಗಳಿಸಿದ್ದು ಇಂಥದ್ದನ್ನೆಲ್ಲಾ ಜೀವವಿರೋ ತನಕ ಮರೆಯಲು ಸಾಧ್ಯವಿಲ್ಲ.
ಸಣ್ಣಾಕಿನಾ ನಾ ಸಣ್ಣಾಕಿನಾ
ಪುಟಾಣಿ ಬೆಲ್ಲನಾ ತಿನ್ನಾಕಿನಾ
                  ಓಹ್ ! ನನಗೇನಾದ್ರೂ ಮಾಟ-ಮಂತ್ರ-ವರ-ಶಾಪ ಇತ್ಯಾದಿಗಳ ಶಕ್ತಿ ಇದ್ದಿದ್ರೆ, ನಾನು ಯಾವಾಗಲೂ ಚಿಕ್ಕವನಾಗಿ ಇರಲಿಕ್ಕೆ ಇಷ್ಟಪಡ್ತಿದ್ದೆ. ಕಳೆದ ಬಾಲ್ಯದ ಸಂತಸವನ್ನು ಮತ್ತೆ ಮತ್ತೆ ಸವಿಯುತ್ತಿದ್ದೆ. ಹೀಗೆ ಆಗಲು ಸಾಧ್ಯವಿಲ್ಲವೆಂದು ಗೊತ್ತು. ಆಗೆಲ್ಲಾ ನಾನು ಮಕ್ಕಳ ಕೇಕೆ, ನಗುವನ್ನೂ, ಆಟ-ಪಾಟವನ್ನೂ ನೋಡಿಯಾದರೂ ಕಳೆದು ಹೋದ ಬಾಲ್ಯವನ್ನು ಮೆಲುಕು ಹಾಕಲು ಯತ್ನಿಸುತ್ತೇನೆ. ವ್ಯರ್ಥವೆಂದು ಗೊತ್ತಿದ್ದರೂ ನಾನು ಹಾಗೆ ಮಾಡುತ್ತೇನೆ. ಬಾಲ್ಯದ ಸಂತಸವೇ ನನ್ನನ್ನು ಹೀಗೆ ಮಾಡಲು ಪ್ರೇರೇಪಿಸುತ್ತಿದೆಯಾ? ಗೊತ್ತಿಲ್ಲ.
ಬಾಲ್ಯದ ಆಟ, ಆ ಹುಡುಗಾಟ
ಇನ್ನೂ ಮಾಸಿಲ್ಲ.....

                  ನಿಜ..! ನಾವು ಎಷ್ಟೇ ದೊಡ್ಡವರಾದ್ರೂ ಈ ಬಾಲ್ಯವ ಮರೆಯೋಕೆ ಆಗೋಲ್ವಲ್ಲ. ಹಾಗೆಯೇ ಅಂದಿನ ಅಂದಿನ ಹುಡುಗಾಟವನ್ನೂ ಕೂಡ. ಇಂತಹ ನೆನಪುಗಳೇ ನನಗೆ time and tide wait for none ಅಂದ್ರೆ ಕಳೆದ ಸಮಯ, ಕಡಲ ಅಲೆಯ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿತು. ಇನ್ನೇನಿದ್ದರೂ ನಾವು ಸವಿ ನೆನಪುಗಳ ತಳಹದಿಯ ಮೇಲೆ ಕಾಣದ ಭವಿಷ್ಯವನ್ನು ಕನಸಲ್ಲಿ ಕಟ್ಟುತ್ತಾ ಜೀವನ ನಡೆಸಬೇಕು.
                  ಕೊನೆಯದಾಗಿ, ನನ್ನ ಮೊದಲ ಓಲೆಗೆ ನೀನು ಚನ್ನಾಗಿ ಪ್ರತಿಕ್ರಿಸಿದ್ದೀಯಾ. ನನ್ನಿಂದಾಗಿ ನಿನ್ನ ಮನವೂ ಕೂಡ ಭಾವನೆಯ ಬೆನ್ನೇರಿದ್ದಕ್ಕೆ ಸಂತಸವಾಗುತ್ತಿದೆ. ಮತ್ತೊಮ್ಮೆ ಮುಂದೆ ಹೊಸ ವಿಷಯಗಳೊಂದಿಗೆ, ತಾಜಾತನದೊಂದಿಗೆ ಪತ್ರಿಸುತ್ತೇನೆ. ಅಲ್ಲಿಯತನಕ ಸವಿ ನೆನಪುಗಳ ನಡುವೆ ಒಮ್ಮೆಯಾದರೂ ನುಸುಳಿಬಾ. ಅದರಿಂದುಂಟಾಗುವ ಖುಷಿಯನ್ನು ತಿಳಿಸು.
                   ತಿಳಿಸ್ತೀಯಲ್ಲಾ..?

ಇಂತಿ ನಿನ್ನೊಲವಿನ
ವಿನು

(ಈ ಬರಹ ಬರೆದಿದ್ದು ಜೂನ್ 2006ರಂದು ದಂಟಕಲ್ಲಿನಲ್ಲಿ.)
(ಶಿರಸಿಯ ಕದಂಬವಾಣಿ ಪತ್ರಿಕೆಯಲ್ಲಿ ಈ ಬರಹ ಪ್ರಕಟಗೊಂಡಿತ್ತು.)

Wednesday, January 29, 2014

ನಿನ್ನ ನಗು

(ರೂಪದರ್ಶಿ : ಅನೂಷಾ ಹೆಗಡೆ)
ನಿಂತು ಒಮ್ಮೆ ನನ್ನ ಬಳಿಗೆ
ನಕ್ಕು ಹೋಗು ಹುಡುಗಿ
ಸಿಟ್ಟು ಬೇಡ, ಸೆಡವು ಬೇಡ
ನಲಿದು ಹೋಗು ಬೆಡಗಿ ||

ನಿನ್ನ ನಗುವೆ ನನ್ನ ಬದುಕು
ಮಾತು ಹಸಿರು-ಜೀವನ,
ಒಮ್ಮೆ ನಕ್ಕು ಹಾಗೆ ಸಾಗು
ಬಾಳು ಎಂದೂ ನಂದನ ||

ನಿನ್ನ ನಗುವು ಏಕೋ ಕಾಣೆ
ನನ್ನುಸಿರಿಗೆ ಅಮೃತ
ಅದುವೆ ಜೀವ ನನ್ನೊಳಾಣೆ
ಎದೆ ಬಡಿತಕೆ ಮಾರುತ ||

ನಿನ್ನ ನಗುವು ಮಾಸದಿರಲಿ
ನನ್ನದೆಂದೂ ಪಾಲಿದೆ
ದುಃಖ ದಾಳಿ ಇಡದೆ ಇರಲಿ
ನಗುವು ದೂರ ಓಡದೆ  ||

(ಈ ಕವಿತೆಯನ್ನು ಶಿರಸಿಯಲ್ಲಿ 15.03.2007ರಂದು ಬರೆದಿದ್ದೇನೆ)
(ಮೊಟ್ಟಮೊದಲನೆ ಬಾರಿಗೆ ಮುತ್ಮೂರ್ಡ್ ಮಾದತ್ತೆ ಈ ಕವಿತೆಗೆ ರಾಗ ಹಾಕಿ ಹಾಡಿದ್ದಳು.. ನಂತರ ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರುಗಳು ಇದನ್ನು ಹಾಡಿದ್ದಾರೆ.)
(ಕವಿತೆಗೆ ಚಿತ್ರ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ಅನೂಷಾ ಹೆಗಡೆ ಗೆ ಧನ್ಯವಾದಗಳು)

Tuesday, January 28, 2014

ಬೆಂಗಾಲಿ ಸುಂದರಿ-4

                ವಿನಯಚಂದ್ರ ಹೊರಡುವ ಸಲುವಾಗಿ ತಯಾರಾಗಿ ನಿಂತಿದ್ದ ಹೊತ್ತಿಗೆ ಅವನ ರೂಮಿಗೆ ಏದುಸಿರು ಬಿಡುತ್ತ ಹತ್ತಿಬಂದ ಸುಶೀಲಮ್ಮ `ಇದೇ ಈ ಹಲಸಿನ ಕಾಯಿ ಚಿಪ್ಸ್ ತಗಂಡು ಹೋಗಾ.. ದಾರಿ ಮದ್ಯ ತಿಂಬಲೆ ಆಕ್ತು..' ಎಂದು ಹೇಳುತ್ತಿದ್ದಂತೆ ವಿನಯಚಂದ್ರನಿಗೆ ರೇಗಿಹೋಯಿತು.
                  `ಥೋ ಸುಮ್ಮಂಗಿರೆ ಮಾರಾಯ್ತಿ.. ಹಂಗಿದ್ದೆಲ್ಲಾ ಕೊಟ್ಟು ಕಳಸಡಾ.. ಮೊದಲೇ ಈ ರೀತಿ ಮಣಭಾರ ಲಗೇಜಿದ್ದು.. ಇದರ ಜೊತಿಗೆ ಅಂತವನ್ನೂ ಕೊಡಡಾ...' ಎಂದು ಹೇಳಿದ್ದನ್ನು ಕೇಳಿ ಮನಸ್ಸನ್ನು ಮುದುಡಿದಂತೆ ಮಾಡಿಕೊಂಡು ಸುಶೀಲಮ್ಮ ಹಿಂದಕ್ಕೆ ಮರಳಿದರು.
               ಹೊರಡಲು ಜೀಪಿನ ಬಳಿಗೆ ಬಂದಾಗ ಶಿವರಾಮ ಹೆಗಡೆಯವರು ಬಾಂಗ್ಲಾದೇಶಕ್ಕೆ ಸಂಬಂಧಪಡುವಂತಹ ಒಂದಿಷ್ಟು ಮ್ಯಾಪುಗಳು, ಚಿಕ್ಕ ಪುಟ್ಟ ಪುಸ್ತಕಗಳನ್ನು ವಿನಯಚಂದ್ರನ ಕೈಯಲ್ಲಿ ಇರಿಸಿದರು. ಅಪರೂಪಕ್ಕೆ ತನ್ನ ಅಪ್ಪನ ಮುಂದಾಲೋಚನೆ ನೋಡಿ ವಿನಯಚಂದ್ರ ವಿಸ್ಮಯಗೊಂಡಿದ್ದ. ಅದನ್ನು ಕೈಯಲ್ಲಿ ಹಿಡಿದು ತನ್ನ ಬ್ಯಾಗಿನೊಳಗೆ ತುರುಕಿ ಜೀಪಿನ ಹಿಂಭಾಗದಲ್ಲಿ ಇಟ್ಟ. ತಾನು ಅಪ್ಪನ ಪಕ್ಕದಲ್ಲಿ ಕುಳಿತ. ಶಿವರಾಮ ಹೆಗಡೇರು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರು. ತಂಗಿ ಅಂಜಲಿ ತಾನೂ ಬರುವುದಾಗಿ ಹೇಳಿದ್ದ ಕಾರಣ ಮೊದಲೇ ಜೀಪಿನಲ್ಲಿ ಆಸೀನಳಾಗಿದ್ದಳು.
           ಅಷ್ಟರಲ್ಲಿ ಅಲ್ಲಿಯೇ ಇದ್ದ ಆಳು ರಾಮ `ಹೋಯ್ ಸಣ್ ಹೆಗ್ಡೇರು... ದೊಡ್ ಸುದ್ದಿ ಮಾಡ್ಕಂಡು ಬನ್ನಿ.. ಪೇಪರ್ನಾಗೆ ಪೋಟೋ ಬರ್ತೈತಿ ಅಲ್ಲನ್ರಾ..? ನಾ ಆವಗ ನೋಡ್ತೇನಿ..' ಎಂದ.
             `ಆಗ್ಲೋ ರಾಮಾ.. ಹಂಗೆ ಆಗ್ಲಿ...' ಎಂದು ಜೀಪನ್ನೇರಿದ್ದ ವಿನಯಚಂದ್ರ. ವಿನಯಚಂದ್ರ ಹೊರಡುವುದನ್ನು ಊರಲ್ಲಿದ್ದನ ನಾಲ್ಕೈದು ಮನೆಗಳ ಜನರು ವಿಶೇಷ ಕುತೂಹಲದಿಂದ ನೋಡುತ್ತಿದ್ದರು.
               `ತಮಾ... ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರೋ.. ಅಲ್ಲಿ ಗಲಭೆ ಶುರುವಾಜಡಾ ಮಾರಾಯಾ.. ಅವರವರ ನಡುವೆ ಅದೆಂತದ್ದೋ ಗಲಾಟೆನಡಾ.. ದೇಶದ ತುಂಬಾ ಹಿಂಸಾಚಾರ ತುಂಬಿದ್ದಡಾ.. ಯಾವದಕ್ಕೂ ಸೇಪ್ಟಿ ನೋಡ್ಕ್ಯ..' ಎಂದು ಮತ್ತೆ ಮತ್ತೆ ಹೆಗಡೇರು ಮಗನಿಗೆ ಹೇಳಿದ್ದರು.
                 `ಅಣಾ.. ಬಾಂಗ್ಲಾದೇಶದಲ್ಲಿ ಬೆಂಗಾಲಿ ಸುಂದರಿಯರು ಭಾರಿ ಚೊಲೋ ಇರ್ತ ಹೇಳಿ ಕೇಳಿದ್ದಿ.. ಹುಷಾರೋ..ಯಾರಾದ್ರೂ ನಿನ್ ಪಟಾಯ್ಸಿದ್ರೆ ಹುಷಾರು.. ಅವರನ್ನ ನೋಡ್ಕತ್ತ ಅಲ್ಲೇ ಉಳ್ಕಂಡು ಬಿಡಡಾ.. ' ಎಂದು ಅಂಜಲಿ ಛೇಡಿಸಿದಾಗ ವಿನಯಚಂದ್ರ ಒಮ್ಮೆ ಸಣ್ಣದಾಗಿ ನಕ್ಕ.. `ಅರ್ರೆ .. ಬಾಂಗ್ಲಾದೇಶಕ್ಕೆ ಹೋಗುತ್ತಿರುವವನು ನಾನು.. ಆದರೆ ನನಗಿಂತ ಹೆಚ್ಚು ಇವರು ಹೋಂ ವರ್ಕ್ ಮಾಡಿಕೊಂಡಿದ್ದಾರಲ್ಲ..' ಎನ್ನಿಸಿತ್ತು..
                  ತಮ್ಮೂರಿನ ತಗ್ಗು ದಿಣ್ಣೆಗಳ ರಸ್ತೆಯನ್ನು ಹಾದು ಶಿರಸಿಯನ್ನು ತಲುಪುವ ವೇಳೆಗೆ ಜೀಪಿನಲ್ಲಿ ಕುಳಿತಿದ್ದ ವಿನಯಚಂದ್ರ ಹಣ್ಣಾಗಿದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಂಜಲಿ ಲಟ್ಟು ಜೀಪಿನ ಬಗ್ಗೆ ಸಾಕಷ್ಟು ಸಾರಿ ಮಂತ್ರಾಕ್ಷತೆ ಮಾಡಿದ್ದಳು.. `ಈ ಹಾಳ್ ಜೀಪನ್ ಮಾರಾಟಾ ಮಾಡಿ ಮಾರುತಿ ಕಾರ್ ತಗ ಹೇಳಿ ಅಪ್ಪಯ್ಯಂಗೆ ಆವತ್ತೇ ಹೇಳಿದ್ದಿ.. ಕೇಳಿದ್ನಿಲ್ಲೆ.. ಈ ಹೊಂಡದ ರಸ್ತೆಲ್ಲಿ ಬರತನಕ ಯನ್ ಸ್ವಂಟೆಲ್ಲ ನೊಯಲೆ ಹಿಡದೋತು.. ಮಾರಾಯ್ನೆ.. ಈ ಜೀಪ್ ಕೊಟ್ ಬೇರೆ ಯಾವುದಾದ್ರೂ ತಗಳಾ...' ಎಂದು ಅಂಜಲಿ ಮಾರ್ಗಮಧ್ಯದಲ್ಲಿ ಅದೆಷ್ಟು ಸಾರಿ ಹೇಳಿದ್ದಳೋ.  ಶಿವರಾಮ ಹೆಗಡೆಯವರು ನಕ್ಕು ನಕ್ಕು ಸುಮ್ಮನಾಗಿದ್ದರು. `ಕೂಸಿನ ಸೊಕ್ಕು ಇವತ್ತು ಅರ್ಧಮರ್ಧ ಕಮ್ಮಿ ಆತು ನೋಡು...' ಎಂದು ನಕ್ಕಿದ್ದರು ಹೆಗಡೆಯವರು.
                 ಶಿರಸಿಯಲ್ಲಿ ಊಟ ಮುಗಿಸಿ ಬೆಂಗಳೂರು ಬಸ್ಸನ್ನೇರುವ ವೇಳೆಗೆ ಸರಿಸುಮಾರು ರಾತ್ರಿಯಾಗಿತ್ತು. ಮಗನಿಗೆ ಮತ್ತೆ ಮತ್ತೆ ಸಲಹೆಗಳನ್ನು ಹೇಳಿದ ಶಿವರಾಮ ಹೆಗಡೇರು ಅಂಜಲಿಯ ಜೊತೆಗೆ ಮನೆಗೆ ಮರಳಿದ್ದರು. ಹೀಗೆ ಮರಳುವಾಗ ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ.. ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋದವನು ಸಧ್ಯದಲ್ಲಿ ತಮ್ಮೂರಿಗೆ ಮರಳುವುದಿಲ್ಲ ಎನ್ನುವುದು.. ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರ ಅದೆಷ್ಟು ಬವಣೆಗಳನ್ನು ಅನುಭವಿಸುತ್ತಾನೆ ಎನ್ನುವುದು ಗೊತ್ತಿದ್ದಿದ್ದರೆ ಮೊದಲೇ ತಡೆದುಬಿಡುತ್ತಿದ್ದರೇನೋ. ವಿನಯಚಂದ್ರ ಬಸ್ಸನ್ನೇರಿ, ಮೊದಲೆ ಬುಕ್ಕಿಂಗ್ ಮಾಡಿದ್ದ ಸೀಟಿನಲ್ಲಿ ಕುಳಿತ ತಕ್ಷಣ ಗಾಢ ನಿದ್ದೆ.. ಸಿಹಿ ಕನಸು. ಕನಸಿನ ತುಂಬೆಲ್ಲ ಬಾಂಗ್ಲಾದೇಶ ಹಾಗೂ ಅಲ್ಲಿನ ಕಬ್ಬಡ್ಡಿ ಪಂದ್ಯವೇ ಮತ್ತೆ ಮತ್ತೆ ಕಾಣುತ್ತಿತ್ತು.

**

                   ಬೆಳಗಾಗುವ ವೇಳೆಗೆ ಬೆಂಗಳೂರು ನಗರಿ ಕಣ್ಣೆದುರು ನಿಂತಿತ್ತು. ಬಸ್ಸಿಳಿದ ವಿನಯಚಂದ್ರ ಆಟೋ ಹಿಡಿದು ಸೀದಾ ತನ್ನ ಕಬ್ಬಡ್ಡಿಯ ಅಕಾಡೆಮಿಯತ್ತ ತೆರಳಿದ. ಅಕಾಡೆಮಿಗೆ ಬಂದು ತನ್ನ ಲಗೇಜನ್ನು ತನ್ನ ಎಂದಿನ ಕೊಠಡಿಯಲ್ಲಿ ಇಟ್ಟು ತಿಂಡಿ ತಿಂದು ವಾಪಸಾಗುವುದರೊಳಗಾಗಿ ಅದೇ ಅಕಾಡೆಮಿಯ ಅವನ ಅನೇಕ ಜನ ಜೊತೆಗಾರರು ಅಲ್ಲಿಗೆ ಬಂದಿದ್ದರು. ವಿನಯಚಂದ್ರನನ್ನು ಕಂಡವರೇ ಎಲ್ಲರೂ ಶುಭಾಷಯಗಳನ್ನು ತಿಳಿಸುವವರೇ ಆಗಿದ್ದರು. ತಮ್ಮ ಜೊತೆಗೆ ತರಬೇತಿ ಪಡೆಯುತ್ತಿದ್ದವನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ಪಿಗೆ ತೆರಳುತ್ತಿದ್ದುದರ ಬಗ್ಗೆ ಎಲ್ಲರಿಗೂ ಸಂತೋಷವಾಗಿತ್ತು. ಮನಃಪೂರ್ವಕವಾಗಿ ವಿನಯಚಂದ್ರನನ್ನು ಹಾರೈಸಿದರು.
                 ಮದ್ಯಾಹ್ನದ ವೇಳೆಗೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದ ತಮಿಳುನಾಡಿನ ಇಬ್ಬರು ಆಟಗಾರರು, ಕೇರಳದ ಒಬ್ಬಾತ ಬೆಂಗಳೂರಿನ ಆ ಅಕಾಡೆಮಿಗೆ ಬರುವವರಿದ್ದರು. ಅವರು ಬಂದ ನಂತರ ವಿಮಾನದ ಮೂಲಕ ನವದೆಹಲಿ ತೆರಳುವುದು, ಅಲ್ಲಿ ಉಳಿದ ಆಟಗಾರರ ಜೊತೆಗೆ ಸೇರಿ ಒಂದು ವಾರಗಳ ಕಾಲ ತಾಲೀಮು ನಡೆಸಿ ನಂತರ ಬಾಂಗ್ಲಾದೇಶದತ್ತ ಪ್ರಯಾಣ ಮಾಡುವುದು ಎಂಬ ಯೋಜನೆ ಮಾಡಲಾಗಿತ್ತು. ವಿನಯಚಂದ್ರ ಅವರಿಗಾಗಿ ಕಾಯುತ್ತ ನಿಂತ.
                ಮದ್ಯಾಹ್ನದ ವೇಳೆಗೆ ತಮಿಳುನಾಡಿನ ವೀರಮಣಿ, ಸೂರ್ಯನ್ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಕೇರಳದಿಂದ ರೈಲಿನ ಮೂಲಕ ಕೃಷ್ಣಾ ನಾಯರ್ ಕೂಡ ಬಂದು ತಲುಪಿದ. ಈ ಮೂವರ ಪೈಕಿ ವಿನಯಚಂದ್ರನಿಗೆ ಸೂರ್ಯನ್ ನ ಪರಿಚಯವಿತ್ತು. ಉಳಿದಿಬ್ಬರ ಬಗ್ಗೆ ಕೇವಲ ಕೇಳಿ ತಿಳಿದಿದ್ದ ಅಷ್ಟೇ. ರಾಷ್ಟ್ರೀಯ ತಂಡದಲ್ಲಿ ಆಡಿದ ಇಬ್ಬರೂ ದೇಶದ ಅತ್ಯುತ್ತಮ ಕಬ್ಬಡ್ಡಿ ಆಟಗಾರರು ಎನ್ನುವುದನ್ನು ಕೇಳಿದ್ದ. ಪತ್ರಿಕೆಗಳಲ್ಲೂ ನೋಡಿದ್ದ. ವಿನಯಚಂದ್ರನಿಗೆ ಭಾರತದ ಕಬ್ಬಡ್ಡಿ `ಎ' ತಂಡದಲ್ಲಿ ಆಡುವಾಗ ಸೂರ್ಯನ್ ಪರಿಚಯವಾಗಿತ್ತು. ಉಳಿದಿಬ್ಬರೂ ಸೀನಿಯರ್ ಪ್ಲೇಯರ್ ಆಗಿದ್ದರಿಂದ ಅವರ ಬಗ್ಗೆ ತಿಳಿದಿದ್ದ ಅಷ್ಟೇ. ಮಾತಾಡಿರಲಿಲ್ಲ.
                 ಇವರ ಪೈಕಿ ವಿನಯಚಂದ್ರ ಹಾಗೂ ಸೂರ್ಯನ್ ಗೆ ನಿಧಾನವಾಗಿ ದೋಸ್ತಿ ಬೆಳೆಯಲಾರಂಭವಾಯಿತು. ತಮಿಳುನಾಡಿನ ಮಧುರೈ ಬಳಿಯವನು ಆತ. ತಮಿಳುನಾಡಿನವನು ಎಂಬುದು ಆತನ ಬಣ್ಣ ನೋಡಿದರೇ ಗೊತ್ತಾಗುತ್ತಿತ್ತು. ಕಪ್ಪಗಿದ್ದ. ದೃಢಕಾಯನಾಗಿದ್ದ. ಆದರೆ ಅಸಾಮಾನ್ಯ ವೇಗ ಆತನಲ್ಲಿತ್ತು. ಬೆಂಗಳೂರಿನ ಅಕಾಡೆಮಿಯಲ್ಲಿ ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೇ ಹಲವಾರು ಸಾರಿ ಪ್ರಾಕ್ಟೀಸ್ ಮಾಡಿದರು. ಆಗಲೇ ವಿನಯಚಂದ್ರನಿಗೆ ಸೂರ್ಯನ್ ನಲ್ಲಿದ್ದ ಅಸಾಧಾರಣ ಆಟದ ವೈಖರಿ ಪರಿಚಯವಾಗಿದ್ದು. ಬಲವಾದ ರೈಡಿಂಗ್ ಸೂರ್ಯನ್ನನ ತಾಕತ್ತಾಗಿತ್ತು. ತನ್ನದು ಕ್ಯಾಚಿಂಗ್ ಕೆಲಸವಾಗಿದ್ದ ಕಾರಣ ತರಬೇತಿ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರಿಗೂ ಅನೇಕ ಸಾರಿ ಜಿದ್ದಾ ಜಿದ್ದಿನ ಪೈಪೋಟಿ ಬೀಳುತ್ತಿತ್ತು. ಇಬ್ಬರೂ ಸೋಲೋಪ್ಪಿಕೊಳ್ಳಲು ಇಷ್ಟಪಡದ ಕಾರಣ ಸಾಕಷ್ಟು ರೋಚಕತೆಗೆ ಕಾರಣವಾಗುತ್ತಿದ್ದರು.
                 ವೀರಮಣಿ ಹಾಗೂ ಕೃಷ್ಣ ನಾಯರ್ ಇಬ್ಬರೂ ಪರಸ್ಪರ ಪರಿಚಿತರೇ ಆಗಿದ್ದರು. ಹಲವಾರು ಪಂದ್ಯಗಳಲ್ಲಿ ಒಟ್ಟಾಗಿ ಆಡಿದ್ದರು. ಸೂರ್ಯನ್ ಹಾಗೂ ವಿನಯಚಂದ್ರನಿಗೆ ಇವರಿಬ್ಬರೂ ಸೀನಿಯರ್ ಆದ ಕಾರಣ ತಮ್ಮ ಅನುಭವಗಳನ್ನು ಅವರೆದುರು ತೆರೆದಿಟ್ಟರು. ಈ ಇಬ್ಬರು ಸೀನಿಯರ್ ಆಟಗಾರರ ಜೊತೆಗೆ ಕೆಲ ಪಂದ್ಯಗಳನ್ನೂ ಆಡಿ ಅನುಭವ ಪಡೆದುಕೊಂಡರು.
           ವಿಮಾನ ಹೊರಡಲು ಅರ್ಧಗಂಟೆಯಿದ್ದಾಗ ವಿನಯಚಂದ್ರನ ಕೋಚ್ ಚಿದಂಬರ್ ಅವರಿಂದ ದೂರವಾಣಿ ಕರೆ ಬಂದಿತು. `ಹಲೋ..' ಎಂದ.
              `ಹ್ಯಾಪ್ಪಿ ಜರ್ನಿ.. ಚೊಲೋ ಆಟವಾಡು .. ನಿನ್ನ ಮೇಲೆ ಬಹಳಷ್ಟು ಹೋಪ್ಸ್ ಇದ್ದು.. ನಂಬಿಗೆ ಹುಸಿ ಮಾಡಡಾ.. ನಮ್ಮೆಲ್ಲರ ಕನಸಿನ ಪೊಟ್ಟಣ ನೀನು. ಆ ಪೊಟ್ಟಣ ಹಾಳಾಗದಿರಲಿ. ಅದರಲ್ಲಿ ಸುಂದರ ಫಲ ಸಿಗಲಿ' ಎಂದು ಹೇಳಿದ ಚಿದಂಬರ್ ಅವರು ಮತ್ತಷ್ಟು ಸಲಹೆ ನೀಡಿ `ದೆಹಲಿ ತಲುಪಿದ ನಂತರ ಪೋನ್ ಮಾಡು..'  ಎಂದು ಹೇಳಿ ಪೋನಿಟ್ಟರು.
               ವಿನಯಚಂದ್ರ ನಿರಾಳನಾದ. ಅಷ್ಟರಲ್ಲಿ ವಿಮಾನದ ಬಳಿ ತೆರಳಲು ಸಜ್ಜಾಗುವಂತೆ ಏರ್ ಪೋರ್ಟಿನಲ್ಲಿ ಧ್ವನಿ ಮೊಳಗಿತು. ತನ್ನ ಮೂವರು ಒಡನಾಡಿಗಳೊಂದಿಗೆ ವಿನಯಚಂದ್ರ ಅತ್ತಹೊರಟ.
               ಚೆಕ್ಕಿಂಗು, ಅದೂ ಇದೂ ಕೆಲಸಗಳು ಮುಗಿದು ವಿಮಾನ ಏರಿ ತನ್ನ ಸೀಟಿನಲ್ಲಿ  ಕುಳಿತ ವಿನಯಚಂದ್ರನ ಪಕ್ಕದ ಸೀಟಿನಲ್ಲಿ ಯಾರೋ ಅಪರಿಚಿತರು ಕುಳಿತಿದ್ದರು. ಕೊನೆಗೆ ಸೂರ್ಯನ್ ಬಳಿ ತನ್ನ ಪಕ್ಕದ ಸೀಟಿಗೆ ಬರುವಂತೆ ಹೇಳಿ ತನ್ನ ಪಕ್ಕದ ಅಪರಿಚಿತರನ್ನು ಕನ್ವಿನ್ಸ್ ಮಾಡಿದ. ಅವರು ಒಪ್ಪಿಕೊಂಡರು. ವಿಮಾನ ನಭಕ್ಕೆ ಜಿಗಿಯುವ ವೇಳೆಗೆ ಇವರು ಹಲವಾರು ಸುದ್ದಿಗಳನ್ನು ಹಲುಬಿದ್ದರು. ಬಾಂಗ್ಲಾದೇಶದ ಬಗ್ಗೆಯೂ ಮಾತುಕತೆಗಳು ನಡೆದಿದ್ದವು.
               ಮಧುರೈನ ಗಲ್ಲಿಗಳಲ್ಲಿ ಕಬ್ಬಡ್ಡಿ ಆಡುತ್ತ ಬೆಳೆದ ಸೂರ್ಯನ್ ತಾನು, ತಂದೆ, ತಾಯಿ ಹಾಗೂ ಇಬ್ಬರು ತಂಗಿಯರ ಜೊತೆ ಇರುವ ವಿವರ ಹೇಳಿದ. ತಮಿಳುನಾಡಿನ ಟಿಪಿಕಲ್ ಹಳ್ಳಿಯನ್ನು ತೆರೆದಿಟ್ಟ. ಸುಮ್ಮನೆ ಕೇಳುತ್ತ ಹೋದ ವಿನಯಚಂದ್ರ. ಜೊತೆಗೆ ತನ್ನ ಕುಟುಂಬದ ವಿವರಗಳನ್ನೂ ತಿಳಿಸಿದ. ತಾನು ಬೆಳೆದ ಉತ್ತರ ಕನ್ನಡದ ಹಳ್ಳಿಯ ಬಗ್ಗೆ ಹೇಳುತ್ತ ಹೇಳುತ್ತ ರೋಮಾಂಚನಗೊಂಡ. ಸುಮಾರು ಹೊತ್ತು ಮಾತಾಡಿದ ನಂತರ ಇಬ್ಬರಿಗೂ ಸಾಕೆನ್ನಿಸಿತು. ಮೌನವಾದರು. ವಿನಯಚಂದ್ರ ಕನಸಿನ ಲೋಕಕ್ಕೆ ಜಿಗಿಯಲು ಕಣ್ಣುಮುಚ್ಚಿದ. ಕಣ್ಮುಂದೆ ಚಿದಂಬರ್ ಅವರ ವ್ಯಕ್ತಿಚಿತ್ರಣ ಮೂಡಿಬಂದಿತು.
                 ಕುರುಚಲು ಗಡ್ಡ, ಮಧ್ಯಮ ಗಾತ್ರದ ಚಿದಂಬರ ಮಾಸ್ತರ್ರನ್ನು ತಾನು ಮೊದಲನೇ ಬಾರಿಗೆ ನೋಡಿದ್ದು ಹೈಸ್ಕೂಲಿನಲ್ಲಿ. ಹೈಸ್ಕೂಲಿನ ದೈಹಿಕ ಶಿಕ್ಷಕರ ಬಳಿ ತಾನು ಕಬ್ಬಡ್ಡಿ ಆಡುತ್ತೇನೆ ಎಂದು ಹೇಳಿದಾಗ ಅವರು ವಿಚಿತ್ರವಾಗಿ ನಕ್ಕಿದ್ದರು. ಬ್ರಾಹ್ಮಣ ಹುಡುಗನಾಗಿ ಅಪ್ಪಟ ಸಸ್ಯಾಹಾರಿಯಾಗಿ ಇವನೆಂತ ಕಬ್ಬಡ್ಡಿ ಆಡುತ್ತಾನೆಂದು ವ್ಯಂಗ್ಯವಾಗಿ ನಕ್ಕಿದ್ದು, ಆ ನಂತರದ ದಿನಗಳಲ್ಲಿ ಹೈಸ್ಕೂಲು ಟೀಮಿನಲ್ಲಿ ಕಬ್ಬಡ್ಡಿಯನ್ನು ಆಡಿ ಗೆಲುವನ್ನು ಕಾಣಲು ಹಿಡಿದಾಗಲೇ ದೈಹಿಕ ಶಿಕ್ಷಕರು ತನ್ನ ಕಡೆಗಿದ್ದ ವ್ಯಂಗ್ಯದ ಮನೋಭಾವವನ್ನು ತೊರೆದಿದ್ದು ವಿನಯಚಂದ್ರನಿಗೆ ನನಪಾಯಿತು. ಇಂತಹ ದಿನಗಳಲ್ಲೇ ಅವರು ವಿನಯಚಂದ್ರನಿಗೆ ಚಿದಂಬರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.
                 `ನೋಡ್ರೀ ಚಿದಂಬರ್.. ಇಂವನೂ ನಿಮ್ಮ ಹಾಗೇ.. ಬ್ರಾಮರವನು... ಕಬ್ಬಡ್ಡಿ ಆಡ್ತಾನ್ರೀ.. ಆಟ ಚನ್ನಾಗೈತಿ..ಇವನಿಗೊಂದು ಸ್ವಲ್ಪ ತರಬೇತಿ ಕೊಟ್ಟರೆ ಒಳ್ಳೆ ತಯಾರಾಗಬಲ್ಲ ನೋಡ್ರಿ.. ' ಎಂದು ಹೇಳಿದಾಗ ಚಿದಂಬರ್ ಅವರು ಅಚ್ಚರಿಯಿಂದ ನೋಡಿದ್ದರು. ಕೊನೆಗೆ `ದಿನಾ ಚಿದಂಬರ್ ಅವರ ಬಳಿ ಪ್ರಾಕ್ಟೀಸ್ ಮಾಡು.. ಅವರು ನಿನ್ನಂತೆ ಹಲವು ಜನರಿಗೆ ಕಬ್ಬಡ್ಡಿ ಹೇಳಿಕೊಡ್ತಾರೆ..' ಎಂದಿದ್ದ ನೆನಪು ಆತನ ಮನಸ್ಸಿನಲ್ಲಿನ್ನೂ ಹಸಿಯಾಗಿಯೇ ಇತ್ತು.
                 ಮೊದಲ ದಿನ ಕಬ್ಬಡ್ಡಿ ಆಡಲು ಹೋಗಿದ್ದಾಗ ತುಸು ಅಂಜಿಕೆಯಿಂದ ಆಡಿದ್ದ ವಿನಯಚಂದ್ರ. ನಂತರದ ದಿನಗಳಲ್ಲಿ ಆತ ನಿಧಾನವಾಗಿ ಪಳಗಿದ್ದ. ಕೊನೆಗೆ ಒಂದು ದಿನ ಚಿದಂಬರ್ ಅವರಿಗೆ ಏನನ್ನಿಸಿತೋ ಏನೋ ವಿನಯಚಂದ್ರನಿಗೆ ಆತನ ಅಂಗಿಯನ್ನು ಬಿಚ್ಚಿ ನಂತರ ಕಬ್ಬಡ್ಡಿ ಆಡೆಂದಿದ್ದರು. ಆತ ನಾಚಿಕೊಂಡಿದ್ದ. ಕೊನೆಗೆ ಸಿಕ್ಕಾಪಟ್ಟೆ ಬೈದು ಆತನನ್ನು ಆಟಕ್ಕೆ ಒಪ್ಪಿಸಿದ್ದರು.
                ವಿನಯಚಂದ್ರ ಅಂಜಿಕೆಯಿಂದ ಆಡಿದ. ಮೊದಲನೇ ಸಾರಿ ರೈಡಿಂಗಿಗೆ ಹೋದಾಗಲೇ ಸೋತು ಹೊರ ಬಿದ್ದು ಬಿಟ್ಟಿದ್ದ. ಕೊನೆಗೆ ಚಿದಂಬರ ಅವರು ಪರೀಕ್ಷೆ ಮಾಡಿದಾಗ ವಿನಯಚಂದ್ರನ ಜನಿವಾರ ಆತನ ಆಟಕ್ಕೆ ತೊಡಕನ್ನು ತಂದಿತ್ತು, ಆಡುವ ಭರದಲ್ಲಿ ಅದು ಫಟ್ಟೆಂದು ಹರಿದುಹೋಗಿತ್ತೆಂಬುದು ಗಮನಕ್ಕೆ ಬಂದಿತು. ಇದೇ ಕಾರಣಕ್ಕೆ ಮುಜುಗರಪಟ್ಟಿದ್ದ. ತೀರಾ ಶಾಸ್ತ್ರೀಯವಾಗಿ ಬ್ರಾಹ್ಮಣಿಕೆಯಲ್ಲಿ ತೊಡಗಿಕೊಂಡಿರದಿದ್ದರೂ ಜನಿವಾರ ಹರಿದುಹೋಯಿತು ಎಂದಾಗ ವಿನಯಚಂದ್ರ ನರ್ವಸ್ ಆಗಿದ್ದ. ಅದೇ ಭಾವನೆಯಲ್ಲಿಯೇ ಆಟದಲ್ಲಿ ಸೋತಿದ್ದ.
               ಹಾಗೆಂದ ಮಾತ್ರಕ್ಕೆ ಸಂದ್ಯಾವಂದನೆ ಸೇರಿದಂತೆ ಇತರೆ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಆತ ತೊಡಗಿಕೊಳ್ಳುತ್ತಾನೆಂದುಕೊಳ್ಳಬಾರದು. `ಸರ್.. ಜನೀವಾರ ಹರಿದುಹೋಯ್ತು.. ಎಂತಾ ಆಕ್ತೋ.. ಗೊತ್ತಾಗ್ತಾ ಇಲ್ಲೆ.. ಎಂತಾ ಮಾಡಕಾತು.. ಯಂಗೆ ಬಹಳ ಹೆದರಿಕೆ ಆಕ್ತಾ ಇದ್ದು..' ಎಂದು ತನ್ನ ಮನದಾಳದ ತುಮುಲವನ್ನು ತೋಡಿಕೊಂಡಿದ್ದ.
               `ಓಹೋ ಇದಾ ನಿನ್ ಸಮಸ್ಯೆ.. ಜಕನಿವಾರ ಹರಿದು ಹೋದ್ರೆ ಇನ್ನೊಂದು ಹಾಕ್ಯಂಡ್ರಾತಾ ಮಾರಾಯಾ.. ಆದರೆ ಮುಂದಿನ ಸಾರಿ ಆಡೋವಾಗ ಅಥವಾ ಆಡಲೆ ಬಂದಾಗ ಜನಿವಾರವನ್ನು ಸೊಂಟಕ್ಕೆ ಸಿಕ್ಕಿಸ್ಕ್ಯ..' ಎಂದು ಸಲಹೆ ನೀಡಿದ್ದರು ಚಿದಂಬರ್ ಅವರು.
                 `ಹಂಗೆ ಮಾಡಲೆ ಅಡ್ಡಿಲ್ಯಾ..? ಎಂತಾ ತೊಂದರೆ ಇಲ್ಯಾ?' ಎಂದು ಬೆಪ್ಪನಾಗಿ ಕೇಳಿದ್ದ ವಿನಯಚಂದ್ರ.
                 `ಹುಂ. ನಮ್ಮಲ್ಲಿ ಬಹುತೇಕ ಹಿರಿಯರು ತೋಟಕ್ಕೆ ಇಳಿದು ಕೆಲಸ ಮಾಡ್ತ. ಒಜೆ ಕೆಲಸ ಅಥವಾ ಬೇರೆ ರೀತಿ ಗಟ್ಟಿ ಕೆಲಸ ಮಾಡುವಾಗ ಜನಿವಾರ ಸೊಂಟಕ್ಕೆ ಸುತ್ತಿಕೊಳ್ತ. ಅನಿವಾರ್ಯ ಸಂದರ್ಭದಲ್ಲಿ ಅಡ್ಡಿಲ್ಲೆ.. ಹಿಂಗ್ ಸೊಂಟಕ್ಕೆ ಸುತ್ತಿಕ್ಯಂಡ್ರೆ ಜನಿವಾರ ಹರಿತು ಅನ್ನೋ ಭಯನೂ ಇರ್ತಿಲ್ಲೆ.. ನಿಂಗೆ ಅದರ ಬಗ್ಗೆ ಅಷ್ಟಾಗಿ ಗಮನ ಹರಿಸೋ ಅಗತ್ಯವೂ ಇರ್ತಿಲ್ಲೆ.. ಸೊಂಟಕ್ಕೆ ಜನಿವಾರ ಸುತ್ತಿಕೊಳ್ಳುವುದು ತಪ್ಪಲ್ಲ. ಯಂಗವ್ವೆಲ್ಲಾ ಹಂಗೇ ಮಾಡ್ತಾ ಇದ್ದಿದ್ದು ಮಾರಾಯಾ.. ನಿನ್ ಅಪ್ಪಯ್ಯ ಗದ್ದೆ ಅಥವಾ ತೋಟಕ್ಕೆ ಹೋಗಿ ಕೆಲಸ ಮಾಡ್ತಾ ಹೇಳಾದ್ರೆ ಅವನ ಹತ್ರಾನೇ ಸರಿಯಾಗಿ ಕೇಳ್ಕ್ಯ' ಎಂದು ಹೇಳಿದ್ದರಲ್ಲದೇ ಇಂದಿನ ಜಮಾನಾದಲ್ಲಿ ಹಲವು ಬ್ರಾಹ್ಮಣ ಹುಡುಗರು ಜನಿವಾರ ಕಿತ್ತೆಸೆದಿದ್ದನ್ನೂ ಮಾಡುವ ಆಚಾರ ವಿಚಾರ ಸುಳ್ಳೆಂದು ವಾದ ಮಾಡುವುದನ್ನೂ ಪ್ರತಿದಿನ ನಾನ್ ವೆಜ್ ತಿನ್ನುವುದನ್ನೂ ಹೇಳಿದಾಗಲೇ ವಿನಯಚಂದ್ರ  ಸ್ವಲ್ಪ ಬೇರೆಯ ತರಹ ಆಲೋಚನೆ ಮಾಡಿದ್ದು. ಸುತ್ತಮುತ್ತಲ ಊರುಗಳಿಗೆ ಹೆಗಡೇರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ ಅಪ್ಪ ಶಿವರಾಮ ಹೆಗಡೆಯವರು ಅನೇಕ ಸಾರಿ ತೋಟದ ಕೆಲಸಕ್ಕೋ, ಮರ ಹತ್ತುವ ಕಾರ್ಯದಲ್ಲೋ ತೊಡಗಿಕೊಂಡಿದ್ದಾಗ ಜನಿವಾರವನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದುದನ್ನು ವಿನಯಚಂದ್ರ ಗಮನಿಸಿದ್ದ. ಅದು ಮತ್ತೊಮ್ಮೆ ನೆನಪಿಗೆ ಬಂದಿತು.
                 ಹೈಸ್ಕೂಲು ಮುಗಿದ ನಂತರ ಚಿದಂಬರ್ ಅವರೇ ವಿನಯಚಂದ್ರನನ್ನು ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಪಿಯುಸಿಗೆ ಸೇರಿಸಿದ್ದರು. ಅಲ್ಲಿ ಕಬ್ಬಡ್ಡಿಯ ಬಗ್ಗೆ ತರಬೇತಿಯ ಜೊತೆಗೆ ಬೇರೆ ಬೇರೆ ವಿಭಾಗದ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಬಹುಶಃ ಆಗಲೇ ಇರಬೇಕು ವಿನಯಚಂದ್ರ ತನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಎಗ್ ರೈಸ್ ತಿಂದಿದ್ದು. ಮೊದಲ ಸಾರಿ ತಿನ್ನುವಾಗ ಮನಸ್ಸೊಂಥರಾ ಆಗಿತ್ತು. ಆದರೆ ಚಿದಂಬರ್ ಅವರು ಆತನಿಗೆ ಮತ್ತೆ ಸಲಹೆಗಳ ಸುರಿಮಳೆಯನ್ನು ಸುರಿಸಿದ್ದರು. ಅವರ ಸಲಹೆಯ ಮೇರೆ ಎಗ್ ರೈಸ್ ತಿನ್ನಲು ಆರಂಭಿಸಿದ್ದ.
                  `ಕಬ್ಬಡ್ಡಿ ಆಟಗಾರನಾದವನು ಎಗ್ ರೈಸ್ ಆದರೂ ತಿನ್ನಲೇಬೇಕು.. ಇಲ್ಲವಾದರೆ ಕಷ್ಟವಾಗ್ತು ಮಾರಾಯಾ.. ನಿನ್ನ ಊಟದಲ್ಲಿ ಆಟಕ್ಕೆ ಬೇಕಾದ ತಾಕತ್ತು ಸಿಗಬೇಕು ಅಂದರೆ ಹೇಗೆ ಸಾಧ್ಯ ಹೇಳು. ಎಗ್ ರೈಸ್ ದೇಹಕ್ಕೆ ಸಾಕಷ್ಟು ತಾಕತ್ತನ್ನು ನೀಡ್ತು.. ಅದು ಹಾಲಿನ ಹಂಗೇಯಾ ಮಾರಾಯಾ.. ಹಾಲಿನಷ್ಟೇ ಪೌಷ್ಟಿಕ. ಹಾಲು+ಮೊಟ್ಟೆ ಎರಡೂ ಸೇರಿದರೆ ದೇಹಕ್ಕೆ ಬಹಳ ಶಕ್ತಿದಾಯಕ ' ಎಂದೂ ಹೇಳಿಬಿಟ್ಟಿದ್ದರು. ಈಗ ಸಲೀಸಾಗಿ ತಿನ್ನಲು ತೊಡಗಿದ್ದ. ನಂತರದ ದಿನಗಳಲ್ಲಿ ಎಗ್ ರೈಸ್ ವಿನಯಚಂದ್ರನ ಬದುಕಿನ ಭಾಗವಾಗಿ ಹೋಗಿತ್ತಾದರೂ ಆತನ ಮನೆಯಲ್ಲಿ ಈ ಕುರಿತು ಗೊತ್ತಿರಲಿಲ್ಲ.
                    ಹುಬ್ಬಳ್ಳಿ, ಬೆಳಗಾವಿ ವಲಯ, ರಾಜ್ಯ ತಂಡ, ದಕ್ಷಿಣ ಭಾರತ ವಲಯ ಸೇರಿದಂತೆ ಹಲವಾರು ವಲಯಗಳಲ್ಲಿ ವಿನಯಚಂದ್ರ ಮುಂದಿನ ದಿನಗಳಲ್ಲಿ ಆಡುತ್ತ ಹೋದ. ಚಿದಂಬರ್ ಆತನ ಬೆನ್ನಿಗೆ ನಿಂತಿದ್ದರು. ತಮ್ಮ ಆಟವನ್ನು ವಿನಯಚಂದ್ರನಿಗೆ ಧಾರೆಯೆರೆದು ಕೊಟ್ಟಿದ್ದರು. ತಾನು ಕಬ್ಬಡ್ಡಿ ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನೆಲ್ಲ ವಿನಯಚಂದ್ರ ಮಾಡಬೇಕು ಎನ್ನುವುದು ಚಿದಂಬರ ಸರ್ ಅವರ ಒತ್ತಾಸೆಯಾಗಿತ್ತು. ಆತ ಮೇಲ್ಮೇಲಿನ ಮಟ್ಟಕ್ಕೆ ಹೋದಂತೆಲ್ಲ ಅವರ ತರಬೇತಿ ಕಠಿಣವಾಗುತ್ತಿತ್ತು. ಅವರ ಒತ್ತಾಸೆಯನ್ನು ತಾನು ನಿರಾಸೆ ಮಾಡಿರಲಿಲ್ಲ. ಕಬ್ಬಡ್ಡಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ ಆಡಲು ಹೊರಟಿದ್ದ. ಬಹುಶಃ ತನಗಿಂತಲೂ ಚಿದಂಬರ ಸರ್ ಹೆಚ್ಚು ಸಂತಸ ಪಟ್ಟಿರುತ್ತಾರೆ ಎಂದುಕೊಂಡ ವಿನಯಚಂದ್ರ. ಅವರ ಖುಷಿಗೆ ಪಾರವಿರಲಿಲ್ಲ ಎನ್ನುವುದು ಅವರ ಮಾರಿನಲ್ಲೇ ಸ್ಪಷ್ಟವಾಗುತ್ತಿತ್ತು. ಕಬ್ಬಡ್ಡಿಯನ್ನು ಶಾಸ್ತ್ರೋಕ್ತವಾಗಿ ಕಲಿಸಿದವರಿಗೆ ನಿರಾಸೆ ಮಾಡಲಿಲ್ಲವಲ್ಲ.. ಎಂದು ನಿಟ್ಟುಸಿರು ಬಿಟ್ಟ. ಹೀಗೆ ಚಿದಂಬರ ಸರ್  ನೆನಪುಮಾಡಿಕೊಂಡ ವಿನಯಚಂದ್ರ ಕಣ್ಣು ತೆರೆಯುವ ವೇಳೆಗಾಗಲೇ ವಿಮಾನ ನವದೆಹಲಿಯಲ್ಲಿ ಇಳಿಯಲು ಸಜ್ಜಾಗುತ್ತಿತ್ತು. ಪಕ್ಕದಲ್ಲಿದ್ದ ಸೂರ್ಯನ್ ಹಿತವಾಗಿ ಭುಜವನ್ನು ಅಲುಗಾಡಿಸಿ.. `ಅರೇ.. ಉಠೋ ಭಾಯ್...' ಎನ್ನುತ್ತಿದ್ದ. ನಸುನಕ್ಕು ವಿನಯಚಂದ್ರ ಇಳಿಯಲು ಸಜ್ಜಾಗಿದ್ದ.

(ಮುಂದುವರಿಯುವುದು)

Saturday, January 25, 2014

ಊಂಚಾಯಿ (ಕಥೆ)

ಪ್ರೀತಿಯ ಗೆಳತಿ,
        ಇಲ್ಲೀಗ ಅಲ್ಲಿಯಂತೆಯೇ ಸಂಜೆ ಆರು ಗಂಟೆ.. ಆದರೆ ಅಲ್ಲಿ ಹಿತ-ಮಿತವಾದ ಬೆಚ್ಚಗಿನ ವಾತಾವರಣ. ಇಲ್ಲಿ ಚುಮುಗುಡುವ ಅಲ್ಲಲ್ಲ.. ಕೊರೆ ಕೊರೆಯುವ ಚಳಿ..
         ಹುಡ್ಗೀ.. ನಿನ್ನನ್ನು ಬೀಳ್ಕೊಟ್ಟು ಬಂದು ಹತ್ತಿರ ಹತ್ತಿರ ಒಂದೂವರೆ ತಿಂಗಳಾಗುತ್ತ ಬಂದವು. ಪೋಸ್ಟಿಂಗು, ಅದು ಇದು ಎನ್ನುತ್ತ ಸಮಯವೇ ಸಿಕ್ಕಿರಲಿಲ್ಲ ನೋಡು. ಇದೋ ನಾನೀಗ ತಲೆಯಾನಿಸಿ ನಿನಗೆ ಪತ್ರ ಬರೆಯುತ್ತಿರುವ ಊರು ಪಾಕಿಸ್ತಾನ ಆಕ್ರಮಣ ಮಾಡಿಕೊಂಡಿರುವ ಕಾಶ್ಮೀರ ಸರಹದ್ದಿನಿಂದ ಕೇವಲ 6 ಕಿಲೋಮೀಟರಿನಲ್ಲಿದೆ. ಬಂಡೀಪೋರಾ. ನಾನು ಈಗ ನಿನಗೆ ಪತ್ರ ಬರೆಯುತ್ತಿರುವುದು ಇದೇ ಊರಿನಿಂದ. ಈ ಊರಿನ ಹೆಸರನ್ನು ಕೇಳಿದರೆ ನಿನಗೆ ತಟ್ಟನೆ ಬಂಡಿಪುರದ ನೆನಪಾಗಬಹುದಲ್ವಾ..? ಮೊದಲ ಸಾರಿ ಕೇಳಿದಾಗ ನನಗೂ ಹಾಗೇ ಅನ್ನಿಸಿತ್ತು.
          ನಾನು ಈಲ್ಲಿಗೆ ಬರಲು ಹೊರಟಾಗ ನೀನು ನನ್ನನ್ನು ಕಳಿಸಿಕೊಡ್ಬೇಕಂತ ಆ ದಿನ ಬಸ್ ಸ್ಟಾಂಡಿಗೆ ಬಂದಿದ್ಯಲ್ಲಾ ಆಮೇಲೆ ನಾನು ಸೀದಾ ಹುಬ್ಳಿಗೆ ಬಂದೆ. ಅಲ್ಲಿ ರೈಲು ಹತ್ತಿ ಮೂರು ದಿನ ಹಗಲು-ರಾತ್ರಿ ಪ್ರಯಾಣ ಮಾಡಿ ನಮ್ಮ ಡೆಲ್ಲಿ ಕ್ಯಾಂಪಿಗೆ ಬಂದೆ.  ಏನ್ಮಾಡ್ಲಿ ಹೇಳು? ಡೆಲ್ಲಿಗೆ ಹೋದರೂ, ಮಿಲಿಟರಿ ಪೆರೇಡ್ ನಲ್ಲಿ ಭಾಗವಹಿಸಿದರೂ ನಂಗೆ ನಿನ್ನದೇ ನೆನಪು. ಮನದ ತುಂಬ ನಿಂದೇ ಕಾಲುಗೆಜ್ಜೆಯ ರಿಂಗಣ. ಅಲ್ಲಿ ನಾಲ್ಕು ದಿನ ಇದ್ವಿ. ಆ ನಂತ್ರ ಸುಮಾರು 80 ಜನರ ನಮ್ಮ ತುಕಡಿ ಸಿಮ್ಲಾ, ಉಧಾಂಪುರ ಮಾರ್ಗದ ಮೂಲಕ ಮಿಲಿಟರಿ ಗಾಡಿಯಲ್ಲಿ ಮೂರಿ ದಿನಕ್ಕೆ ಇದೋ ಈ ಬಂಡಿಪೋರಾ ಎಂಬ ಹಿಮಚಾದರದ ನಾಡಿಗೆ ನಮ್ಮನ್ನು ಕರೆದುಕೊಂಡು ಬರಲಾಯಿತು.
            ನಿಂಗೊತ್ತಲ್ಲ.. ನಂಗೆ ಹಿಮ ಅದೆದ್ರೆ ಅದೆಷ್ಟು ಇಷ್ಟ ಅಂತ.. ನಂಗೆ ಇಲ್ಲಿಗೆ ಬಂದಾಗ ಒಂದ್ಸಲ ಮರಗಟ್ಟುವ ಆ ಚಳಿಯಲ್ಲೂ ಬಿಳಿ ಹಿಮ ರಾಶಿಯಲ್ಲಿ ಚಿಕ್ಕ ಮಗುವಿನಂತೆ ಹೊರಳಾಡಬೇಕು, ಬೊಗಸೆಯಲ್ಲಿ ಎತ್ತಿಕೊಂಡು ಪಕ್ಕದಲ್ಲಿದ್ದವರ ಮೈಮೇಲೆ ಎಸೆಯಬೇಕು ಅನ್ನಿಸಿತ್ತು... ಕಷ್ಟಪಟ್ಟು.. ನಾನೊಬ್ಬ ಮಿಲಿಟರಿಯ ಸೈನಿಕ ಅನ್ನೋದನ್ನು ನೆನಪಿಗೆ ತಂದ್ಕೊಂಡು ಅಂಥಾ ಆಸೆನ ಹತ್ತಿಕ್ಕಿಕೊಂಡೆ..
           ಇಲ್ಲಿಗೆ ಬಂದು ಆಗಲೇ ತಿಂಗಳಾಗುತ್ತ ಬಂತು ನೋಡು. ನಿನ್ನನ್ನು ಬಿಟ್ಟು ಬಂದು ಹತ್ತಿರ ಹತ್ತಿರ ನಲವತ್ತು ದಿನಗಳ ಮೇಲೆ ಐದೋ ಆರೋ ಹೆಚ್ಚಾಗಿದೆ. ಇಲ್ಲಿಗೆ ಬಂದು ತಲುಪಿದ ಎರಡೇ ದಿನಕ್ಕೆ ನಂಗೆ ರೌಂಡಿಂಗ್ಸ್ ಇತ್ತು. ಅಂದ್ರೆ ಬಂಡಿಪೋರಾದ ಸುತ್ತೆಲ್ಲ ಸುತ್ಹಾಕೋ ಕೆಲಸ. ಆಗಾಗ ಪಾಕಿಸ್ತಾನದ ಗಡಿಯಲ್ಲಿ ನಿಂತು ಗಡಿಯಾಚೆಗಿಂದ ಯಾರಾದರೂ ಇತ್ತಕಡೆ ನುಸುಳುತ್ತಾರಾ ಎಂದು ಮಂಜುಗಟ್ಟಿದ ವಾತಾವರಣದಲ್ಲಿ ನೋಡುವ ಕಾರ್ಯವೂ ನಮ್ಮಪಾಲಿಗಿತ್ತು. ಹೋಗೋವಾಗ ಏನು ಹುಮ್ಮಸ್ಸು ಅಂತೀಯಾ.. ಇಂತದ್ದೊಂದು ಅದ್ಭುತ ತಾಣದಲ್ಲಿ ಕೆಲಸ ಮಾಡಿದ್ರೆ ಹುಮ್ಮಸ್ಸು ತಂತಾನೆ ಬರ್ತಾ ಹೋಗ್ತದಂತಲ್ಲಾ.. ಏನೆಲ್ಲಾ ಸುಂದರ ಪ್ರದೇಶ ನೋಡಬಹುದು, ಮಂಜಿನ-ಹಿಮದ ಪದರು-ಪದರಿನಲ್ಲಿ ಲಗಾಮು ಕಿತ್ತುಕೊಂಡ ಕುದುರೆಯಂತೆ  ಓಡಿಯಾಡಬಹುದು ಅಂತೆಲ್ಲ ಕನಸು ಕಂಡೆ.. ಆ ದಿನ ನಾವು ಹತ್ತು ಜನರದ್ದೊಂದು ಪುಟ್ಟ ಭಾಗ, ಬಂಡಿಪೋರಾದ ರೌಂಡಿಂಗ್ಸ್ ಗೆ ಹೊಂಟಿತ್ತು.
            ಗೋವಾದ ಮಧು ಮಹಾಲೆ ಹಾಗೂ ಆಂಧ್ರದ ಶ್ರೀನಿವಾಸ ನಾಯ್ಡು ನಂಗೆ ಇಲ್ಲಿ ಮಿತ್ರರಾಗಿ ಸಿಕ್ಕಿದ್ದಾರೆ. ನಾವು ಮೂವರೂ ದಕ್ಷಿಣ ಭಾರತದವರಲ್ವಾ.. ಬೇಗ್ನೇ ಮಿತ್ರರಾದ್ವಿ. ಹಾಂ.. ಗೋವಾದವನಿಗೆ ಮದುವೆಯಾಗಿಲ್ಲ. ಆಂಧ್ರದವನಿಗೆ  ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆಯಂತೆ. ವಿಚಿತ್ರವೋ ಎಂತದ್ದೋ ಗೊತ್ತಿಲ್ಲ. ನಾನು ಆ ದಿನ ರೈಲು ಹತ್ತಿದಾಗ ಅಕ್ಕ ಪಕ್ಕದ ಬರ್ತ್ ನಲ್ಲಿದ್ದ ಇವರು ಹಾಗೆ ಸುಮ್ಮನೆ ಪರಿಚಯವಾದರು. ಪರಿಚಯ ಮಾತುಕತೆಯಾಗಿ ಮುಂದುವರಿದಾಗ ಅವರೂ ಮಿಲಿಟರಿ ಮೇಂಬರ್ಸ್, ಅದರ ಜೊತೆಗೆ ನನ್ನದೇ ರೆಜಿಮೆಂಟಿನವರು ಅಂತ. ಆ ಮಧು ಇದ್ದಾನಲ್ಲ ಅಂವ ಅದ್ಯಾವ ಥರಾ ಮಾತಾಡ್ತಾನೆ ಗೊತ್ತಾ.. ಊಹೂಂ.. ಒಂದು ನಿಮಿಷವೂ ಸುಮ್ನೆ ಕೂರೋನಲ್ಲ. ಸಖತ್ ಕ್ರಿಯೆಟಿವ್ ಮನುಷ್ಯ. ಕೀಟಲೆಯ ಖಯಾಲಿಯಿದೆ.. ಥೇಟು ನಿನ್ನ ಥರಾನೆ..!
              ಆ ಬಂಡಿಪೋರಾ.. ಅದರ ಸ್ನಿಗ್ಧ ಸೌಂದರ್ಯಕ್ಕೆ ಸಾಟಿ ಯಾವುದೂ ಇಲ್ಲ. ಒಂದಕ್ಕಿಂತ ಒಂದು ಎತ್ತರ ಎನ್ನಿಸುವಂತಹ ಪರ್ವತಗಳು ಮನಸ್ಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ `ಊಂಚಾಯಿ' ಕವಿತೆಗಳನ್ನು ನೆನಪಿಗೆ ತರ್ತವೆ. ಪರ್ವತಗಳ ಬುಡದಲ್ಲಿ ಹಸಿರು ಅಲ್ಲಲ್ಲಿ ಕಾಣಸಿಕ್ಕರೂ ಪರ್ವತದ ತುದಿ ಮಾತ್ರ ಬೆಳ್ಳಗೆ ಬೆರಗು ಮೂಡಿಸುತ್ತದೆ. ಬಂಡಿಪೋರಾ ಹೇಳಲಿಕ್ಕೆ ಅಂತಹ ದೊಡ್ಡದೇನೂ ಅಲ್ಲ. ಹತ್ತಿರ ಹತ್ತಿರ ನಮ್ಮ ಕಾನಸೂರಿನ ಎರಡೋ ಮೂರೋ ಪಟ್ಟು ದೊಡ್ಡದಿರಬಹುದು. ಇಡೀ ಊರಿಗೆ ನಮ್ಮ ಮಿಲಿಟರಿ ಕ್ಯಾಂಪೆ ಬಹುದೊಡ್ಡ ಕಟ್ಟಡ ಎಂದರೂ ತಪ್ಪಾಗಲಿಕ್ಕಿಲ್ಲ. ಇಂತಹ ಊರನ್ನು ಸುತ್ಹಾಕೋದು ಏನು ಮಹಾ ಅಂದ್ಕೊಂಡೆ. ಹಾಗೇ ನಾವು ಸುತ್ತಲಾರಂಭ ಮಾಡಿದ್ವಿ ಕೂಡ.
               ಗೀಲ್ಗಿಟ್ಟು ನಮ್ಮ ಭಾರತ ಹಾಗೂ ನೆರೆಯ ಪಾಕಿಸ್ತಾನಕ್ಕೂ ನಡುವಣ ಸೀಮಾರೇಖೆಯಾಗಿರೋ ಎಲ್.ಒ.ಸಿ.ಯ ಹತ್ತಿರದಲ್ಲಿದೆ. ಅಂದರೆ ಕೇವಲ ಆರು ಕಿ.ಮಿ ದೂರದಲ್ಲಿ ಇರುವ ಕಾರಣ ಸದಾ ಒತ್ತಡದ ವಾತಾವರಣ ಇದ್ದೇ ಇರುತ್ತದೆ. ಹತ್ತಿರದಲ್ಲೇ ಪಾಕ್ ಆಕ್ರಮಣ ಮಾಡಿಕೊಂಡ ನೆಲದ ಗಡಿ, ನುಸುಳಿ ಬರುವ ಭಯೋತ್ಪಾದಕರು, ಹಾಗೆ ಅವರು ಬರುವ ನಂತರ ನಡೆಸುವ ದಾಂಧಲೆ, ಇವೆಲ್ಲಕ್ಕೂ ಮೂಲ ತಡೆ ಹಾಕಬೇಕೆಂದೇ ನಮ್ಮನ್ನು ಅಲ್ಲಿಗೆ ನಿಯೋಜನೆ ಮಾಡಿದ್ದರು.
              ಪುಟ್ಟಿ.., ನಿಂಗೆ ಗೊತ್ತಿದೆ.. ನಮ್ಮ ದೇಶಕ್ಕೂ, ನೆರೆಯ ಪಾಕಿಸ್ತಾನಕ್ಕೂ ತೊಂಭತ್ತೊಂಭತ್ತರಲ್ಲಿ ಯುದ್ಧ ಆಗಿತ್ತು. ನಾವು ಗೆದ್ದಿದ್ವಿ ಅಂತ. ಆಮೇಲೆ ಶಾಂತಿ ಒಪ್ಪಂದ ಎಲ್ಲಾ ಆಗಿ ಪರಿಸ್ಥಿತಿ ಶಾಂತವಾಗಿತ್ತು. ಪ್ರಸ್ತುತ ಈಗಲೂ ಆಗೊಮ್ಮೆ-ಈಗೊಮ್ಮೆ  ಭಯೋತ್ಪಾದಕರು ಗಡಿಯ ಒಳಗೆ ನುಸುಳಿ ಬರ್ತಿರ್ತಾರೆ. ಅವರ ಜೊತೆಗೆ ಆಗೀಗ ಅಷ್ಟಿಷ್ಟು ಗುಂಡಿನ ಕಾಳಗ ಆಗ್ತದೆ ಅನ್ನೋದು ಬಿಟ್ಟರೆ ಉಳಿದಂತೆ ಶಾಂತಿಯೇ. ಆದರೆ ಹೀಗೆ ಶಾಂತಿಯಿದೆ ಅಂತ ದೇಶ ಕಾಯದೇ ಹೋದ್ರೆ..? ಸರಿಯಲ್ಲ.. ಆ ಕಾರಣಕ್ಕೆ ನಮ್ಮನ್ನ ರೌಂಡಿಂಗ್ಸ್ ಗೆ ಕಳಿಸ್ತಿದ್ದುದ್ದು.
               ನಮ್ಮ ರೌಂಡಿಂಗ್ಸ್ ನಲ್ಲೂ ಎಂತಾ ಶಿಸ್ತಿದೆ ಗೊತ್ತಾ.. ನಾವು ಬೇಕಾಬಿಟ್ಟಿ, ಎಲ್ಲೆಂದರಲ್ಲಿ ಹೋಗೋ ಹಾಗೇ ಇಲ್ಲ. ನಮ್ಮ ಮೇಲಿನವರು ಹೇಳಿದ ಹಾಗೇ ಮಾಡಬೇಕು-ಹೇಳಿದಲ್ಲೇ ನಡೀಬೇಕು. ಸ್ವಲ್ಪ ತಪ್ಪಿದ್ರೂ ತುಂಬಾ ಶಿಕ್ಷೆ. ಮಿಲಿಟರಿಯ ಕಟ್ಟುನಿಟ್ಟು. ಆದರೆ ಮನಸ್ಸು ಕನಸು ಕಾಣೋದಕ್ಕೆ ಮಿಲಿಟರಿಯಿಂದ ತಡೆ ಹಾಕಲು ಸಾಧ್ಯವಿಲ್ಲವಲ್ಲಾ..
               ನಾನು ರೌಂಡಿಂಗ್ಸ್ ತುಂಬಾ ನಿನ್ನದೇ ನೆನಪಲ್ಲಿ ಇದ್ದೆ. ಒಂದ್ಸಲ ನಿನ್ನ ಈ ಬಂಡಿಪೋರಾಕ್ಕೆ ಕರೆದುಕೊಂಡು ಬರಬೇಕು.. ಇಲ್ಲಿನ ಬೀದಿಯಲ್ಲಿ ನಿನ್ನನ್ನು ಅಡ್ಡಾಡಿಸಬೇಕು. ಇಬ್ಬರೂ ಕೈ-ಕೈ ಹಿಡಿದುಕೊಂಡು ಬೆಳದಿಂಗಳಿನಿರುಳಲ್ಲಿ ನಡೆಯುತ್ತಾ ಹಿಮವತ್ಪರ್ವತದ ತುಂಬೆಲ್ಲಾ ಸುತ್ತಾಡಬೇಕು ಅಂದುಕೊಂಡೆ. ನಿನ್ನ ನೆನಪಿನಲ್ಲೇ ಇದ್ದ ನಾನು ಒಂದೆರಡು ಸಾರಿ ಶಿಸ್ತು ತಪ್ಪಿದ್ದೆ. ಇದನ್ನು ಅರಿತ ಮಧು ನಂಗೆ ಆಗೊಮ್ಮೆ ಗದರಿದ್ದ.. ನಾನು ನಕ್ಕುಬಿಟ್ಟಿದ್ದೆ. ಈಗಲೂ ನಂಗೆ ಅವಕಾಶ ಸಿಕ್ಕರೆ ಈ ಹಿಮವತ್ತಾದ ನಾಡಲ್ಲೇ ಜಮೀನು ಕೊಂಡು ಮನೆ ಮಾಡಿ ಇಲ್ಲೇ ವಾಸಮಾಡಿ ಬದುಕಬೇಕೆಂಬ ಆಸೆ.. ಏನಾಗುತ್ತೋ..?
              ಬಂಡೀಪೋರಾದ ತುತ್ತ ತುದಿಯಲ್ಲಿ ಕೆರೆಯೊಂದಿದೆ. ಕೆರೆಯೆಂದರೆ ಕೆರೆಯಲ್ಲ. ಸಮುದ್ರದಂತೆ ದೊಡ್ಡದು. ವರ್ಷದ ಆರು ತಿಂಗಳುಗಳ ಕಾಲ ಅದು ಐಸಾಗಿರುತ್ತದೆ. ಉಳಿದ ಸಮಯ ನೀರು ಕಾಣಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ಅದೇನೇನೋ ಕರೆಯುತ್ತಾರೆ. ನನಗೆ ಅದನ್ನು ಹೇಳಲಿಕ್ಕೆ ಕಷ್ಟವಾಗುತ್ತಿದೆ. ಇಲ್ಲೇ ಕೆಳಗೆ ಕಣಿವೆಯೊಂದಿದೆ. ಕಣಿವೆಯಲ್ಲೊಂದು ಪುಟ್ಟ ನದಿ. ಅದರ ಹೆಸರೇನೋ ಗೊತ್ತಿಲ್ಲ. ಇಲ್ಲಿನ ಭಾಷೆ ವಿಚಿತ್ರವಾದುದು. ನಾನು ಆ ನದಿಯ ಹೆಸರನ್ನು ಬಿಡಿಸಿ ಬಿಡಿಸಿ ಕೇಳಿದಾಗ ಅದು ಚಂಪಾ ಎಂಬ ಅರ್ಥವನ್ನು ನೀಡುತ್ತದೆ. ನಾನು ಅದನ್ನು ಚಂಪಾ ಎಂದೇ ಕರೆಯುತ್ತಿದ್ದೇನೆ. ಅದೆಂತಾ ಓಘವಿದೆ ಅಂತೀಯಾ ಆ ನದಿಗೆ.. ಒಮ್ಮೆ ಜುಳು ಜುಳು, ಮತ್ತೊಮ್ಮೆ ನಿಧಾನ-ನಿನಾದ. ನೀನು ಇಲ್ಲಿದ್ದರೆ ಇಷ್ಟು ಹೊತ್ತಿಗೆಲ್ಲಾ ಆ ಚಂಪಾ ನದಿಯ ದಡದಲ್ಲಿ ನಡೆಯುತ್ತಾ ಹೋಗಿಬಿಡುತ್ತಿದ್ದೆ.
               ನಾ ನಿಂಗೆ ಆಗ್ಲೇ ಮಧು ಗದರಿದ್ದ ಸುದ್ದಿ ಹೇಳ್ದೆ ಅಲ್ವಾ.. ಆಗ್ಲೇ ಒಂದು ಮಜಾ ಸಂಗತಿ ನಡೀತು. ಆತ ನನ್ನ ಬಳಿ ಕೀಟಲೆ ಮಾಡುತ್ತಾ `ಏನ್ ದೋಸ್ತ್, ಯಾರದ್ದೋ ಕನಸು ಕಾಣ್ತಿದ್ದೀಯಾ..?' ಅಂದ. ನಾನು ಹೇಳಲಿಲ್ಲ. ಕೊನೆಗೆ ತುಂಬಾ ಒತ್ತಾಯ ಮಾಡಿದ ನಂತರ ನಿನ್ನ ಪೋಟೋ ತೋರಿಸಿದೆ. ಅಂದೊಮ್ಮೆ, ನಾನೇ ಬಂದು ಪ್ರೀತಿಸ್ತಿದ್ದೀನಿ ಅಂತಂದ ಎರಡನೇ ದಿನಕ್ಕೆ ನೀನು ಒಪ್ಪಿದ ನಂತರ ಒತ್ತಾಯ ಮಾಡಿ ನಿನ್ನಿಂದ ಇಸ್ಕೊಂಡಿದ್ದ ಪೋಟೋ ಅದು. ನೋಡಿದವನೇ ಆತ `ದೋಸ್ತ್..ತುಂಬಾ ಚನ್ನಾಗಿದ್ದಾಳೆ. ಭಾಳ ಲಕ್ಷಣವಂತೆಯಂತೆ ಕಾಣಿಸ್ತಾಳೆ. ನೀನೇನೂ ಅಂದ್ಕೊಳ್ಳೋದಿಲ್ಲ ಅಂದ್ರೆ ಒಂದ್ಮಾತು. ನಂಗೀ ಇಂಥದ್ದೇ, ಲಕ್ಷಣವಂತೆಯಾದ ಹುಡುಗಿ ಸಿಗಬೇಕು ಅಂದ್ಕೊಂಡಿದ್ದೀನಿ.. ನೀನೇ ಹುಡುಕಿ ಕೊಡಬೇಕು.. ದೋಸ್ತ್.. ಏನಂತೀಯಾ..?' ಅಂದ. `ಸಿಗದೇ ಏನು..ಸಿಕ್ಕೇ ಸಿಕ್ತಾಳೆ ಬಿಡು.. ಕೋತಿ ಹಾಗಿರೋಳು..' ಅಂತ ಛೇಡಿಸಿ ನಕ್ಕಿದ್ದೆ..
                ಹೌದೇ.., ನೀನು ತುಂಬಾ ಲಕ್ಷಣವಂತೆ. ಅದಕ್ಕೇ ಅಲ್ವಾ ನಾನಿನ್ನ ಇಷ್ಟಪಟ್ಟಿದ್ದು.. ಕಾಡಿ ಬೇಡಿ ಬೆನ್ನುಬಿದ್ದು ಪ್ರೀತ್ಸಿದ್ದು. ಯಾರಿಗೂ ಸಿಗದಂತಹ ನಿರ್ಮಲ ಪ್ರೀತಿ ನಂಗೆ ಸಿಕ್ಕಿದೆ ಅಂದ್ಕೊಂಡಿದ್ದು.., ಅಲ್ದೇ ಆ ಪ್ರೀತಿಗೆ ನಿಷ್ಟನಾಗಿ ಬದುಕಿದ್ದು.
                ನಿಂಗೆ ಗೊತ್ತಿಲ್ಲ, ನಾನು ನನ್ನಮ್ಮನ ಬಳಿ ನಿನ್ನ ಸುದ್ಧಿ ಹೇಳಿದಾಗೆಲ್ಲಾ `ಒಂದ್ಸಾರಿ ಆಕೇನ ಮನೆಗೆ ಕರ್ಕೊಂಡು ಬಾರೋ, ನಾನು ಆಕೆಯ ಬಳಿ ಮಾತಾಡಬೇಕು. ಆಕೆ ಹೇಗೆ ಎಂದು ನೋಡಬೇಕು..' ಅಂದಿದ್ದಳು. ಆಗ ನಾನು `ಡೋಂಟ್ ವರಿ ಅಮ್ಮ.. ಒಂದಿನ ಅವಳ್ನ ಮದುವೆಯಾಗಿಯೇ ಕರ್ಕೊಂಡು ಬರ್ತೀನಿ..' ಅಂದುಬಿಟ್ಟಿದ್ದೆ. ಈ ಬಂಡೀಪೋರಾದ ಹಿಮದ ಮೆಟ್ಟಿಲ ಮೇಲೆ ಕುಳಿತು ಇದನ್ನೆಲ್ಲ ನೆನಪು ಮಾಡ್ಕೊಂಡ್ರೆ ಮನಸ್ಸೆಷ್ಟು ರೋಮಾಂಚನ ಹೊಂದುತ್ತೆ ಗೊತ್ತಾ..? ಹುಂ. ನನ್ನ ಬದುಕಿನ ಆಳವನ್ನು ಹುಡುಕಿದ್ರೆ ಅಲ್ಲಿ ಕಾಣೋದು ಮೂರೇ ಮೂರು ನೀನು, ನನ್ನ ಕುಟುಂಬ ಹಾಗೂ ಈ ಹಿಮ.
               `ಲೋ.. ಮಿಲಿಟರಿಗೆ ಸೇರ್ತಿದ್ದೀಯಾ.. ಹುಷಾರು ಕಣೋ.. ಟೇಕ್ ಕೇರ್. ಕತ್ತಿ ಅಲುಗಿನ ಮೇಲಿನ ಬದುಕು ಅದು. ಎಂದಿಗೂ ತೀರಾ ಮೈಮರೀಬೇಡ.. ಮೈಯೆಲ್ಲ ಕಣ್ಣಾಗಿರು ಡಿಯರ್..' ಅಂತ ನಾನು ಹೊರಡೋ ಮುನ್ನ ನೀನು ಹೇಳಿದ ಮಾತುಗಳಿನ್ನೂ ನನ್ನ ಕಿವಿಯಲ್ಲಿನ್ನೂ ಗುಣಗುಣಿಸುತ್ತಾ ಇದೆ.
               ಎಲ್ಲಾ ಹೇಳಿದೆ, ನಿಂಗೆ ಇನ್ನೊಂದು ಮುಖ್ಯ ವಿಷಯ ಹೇಳೋದನ್ನು ಮರೆತೇ ಬಿಟ್ಟಿದ್ದೆ ನೋಡು. ಮನದ ತುಂಬಾ ನಿನ್ನದೇ ಬಿಂಬ ಇಟ್ಗೊಂಡು ಆ ದಿನ ಬಂಡಿಪೋರಾದ ರೌಂಡಿಂಗ್ಸ್ ಗೆ ಹೋದೆ. ಜೊತೆಯಲ್ಲಿ ಮಧು, ನಾಯ್ಡು ಇದ್ದರು. ಹಲವು ದಿನಗಳಿಂದ ಶಾಂತವಾಗಿದ್ದ ಬಂಡಿಪೋರಾ ಆವತ್ತು ಕೊಂಚ ಬದಲಾಯ್ತು. ಆ ದಿನ ಎಂದಿನ ಹಾಗೇ ಇರಲೇ ಇಲ್ಲ. ಅದೆಲ್ಲಿದ್ದರೋ ಏನೋ, ಒಮ್ಮೆಲೆ ಐದಾರು ಜನ ಮುಸುಕುಧಾರೀ ಭಯೋತ್ಪಾದಕರು ಗಡಿಯೊಳಗೆ ನುಸುಳಿ ಬಂದು ಬಿಟ್ಟಿದ್ದರು. ಬಂದವರೇ ದಾಂಧಲೆ ಶುರುಹಚ್ಚಿಕೊಂಡರು.
               ಆ ಹೊತ್ತಿನಲ್ಲಿ ನಾವು ಬಂಡೀಪೋರಾದ ಫಾಸಲೆಯಲ್ಲೇ ಇರುವ ನೋ ಮ್ಯಾನ್ಸ್ ಲ್ಯಾಂಡ್ ಬಳಿ ಇದ್ದೆವು. ತಕ್ಷಣ ನಮಗೆ ಸುದ್ದಿ ತಿಳಿಯಿತು. ನಮ್ಮ ಗ್ರೂಪ್ ಅಲ್ಲಿ ಅವರು ದಾಂಧಲೆ ಮಾಡುತ್ತಿದ್ದೆಡೆಗೆ ತೆರಳಿತು. ನಾವು ಅಲ್ಲಿಗೆ ಹೋಗುವ ವೇಳೆಗಾಗಲೇ ಎರಡು ಜನ ಬಂಡೀಪೋರಾ ನಿವಾಸಿಗಳನ್ನು ಕೊಂದು ಅವರು ಅಲ್ಲೆಲ್ಲೋ ಅಡಗಿ ಕುಳಿತಿದ್ದರು.
              ಬಂಡಿಪೋರಾ ಒಂಥರಾ ವಿಚಿತ್ರ ಊರು. ಊರು ವಿಚಿತ್ರವಾದುದಾದರೂ ಓಣಿ ಓಣಿಯಂತಹ ಮನೆಗಳು ನಮ್ಮನ್ನು ಕಾಡುತ್ತವೆ. ಮಣ್ಣಿನ ಗೂಡಿನಂತಹ ಮನೆಗಳು. ಬಹುತೇಕ ಮನೆಗಳಿಗೆ ಕಿಟಕಿಗಳೇ ಇಲ್ಲ. ತೀರಾ ಓದಿಕೊಂಡ ಕೆಲವೊಂದು ಮನೆಗಳಲ್ಲಿ ಮಾತ್ರ ಕಿಡಕಿಗಳನ್ನು ಇರಿಸಲಾಗಿದೆ. ವರ್ಷದ ಬಹುಕಾಲ ಹಿಮಪಾತವಾಗುವ ಕಾರಣ ಮನೆಯ ಮುಂದೆಲ್ಲ ಬಿಳಿ ಬಿಳಿ ಐಸ್ ಹುಡಿಗಳು. ಮನೆಯೊಳಗೆ ಚಳಿ ಕಾಸಲು ಅಗ್ಗಷ್ಟಿಕೆ. ನಮ್ಮ ಭಾಗದಲ್ಲಿ ಹೊಡ್ಸಲು ಅನ್ನುತ್ತಾರಲ್ಲ ಹಾಗೆ. ಅದರ ಎತ್ತರದ ಚಿಮಣಿ ನಮಗೆ ದೂರದಿಂದಲೇ ಕಾಣಿಸುತ್ತವೆ. ಊರಿನ ತುಂಬೆಲ್ಲ ವಿದ್ಯುತ್ ತಂತಿಗಳು ಹಾದುಹೋಗಿವೆ. ಆದರೆ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದರೂ ಯಾರೂ ಹೆಚ್ಚಿಗೆ ಅದನ್ನು ಬಳಕೆ ಮಾಡುವುದಿಲ್ಲ. ಬಂಡಿಪೋರಾದ ಊರುಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಾಣುವುದು ಅಪರೂಪ. ನಮ್ಮಲ್ಲಿಯಂತೆ ಅಡಿಗೆಗೆ ಮಿಕ್ಸರ್, ಗ್ರೈಂಡರ್, ಮಜ್ಜಿಗೆ ಕಡೆಯುವ ನವನೀತ ಮಿಷನ್, ಮನರಂಜನೆಗೆ ಟೀವಿ, ಟೇಪ್ ರೆಕಾರ್ಡರ್, ಸೌಂಡ್ ಸಿಸ್ಟಮ್, ಕಂಪ್ಯೂಟರ್, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಊಹೂಂ.. ಏನೆಂದರೆ ಏನೂ ಇಲ್ಲ. ಹೆಚ್ಚಿನ ಮನೆಗಳಲ್ಲಿ ಸಂಜೆ 8ಗಂಟೆಯ ನಂತರ ಕರೆಂಟ್ ದೀಪವನ್ನೂ ಹಾಕೋದಿಲ್ಲ. ಭಯೋತ್ಪಾದಕರ ಬಗ್ಗೆ ಭಯವಾ..? ಆಧುನಿಕ ಯಂತ್ರಗಳ ಬಳಕೆಯ ಕುರಿತು ಏನಾದರೂ ಮೂಢನಂಬಿಕೆಯಾ..? ಅಥವಾ ಇನ್ಯಾವುದೇ ಸಮಸ್ಯೆಗಳಿವೆಯಾ.? ಊಹೂಂ. ಏನೋಂದೂ ಗೊತ್ತಿಲ್ಲ. ನಾನೂ ಅದನ್ನು ಕೇಳಲು ಯತ್ನಿಸಿಲ್ಲ.
                ಆ ಬಂಡಿಪೋರಾದ ಬೀದಿಗಳಲ್ಲಿ ಭಯೋತ್ಪಾದಕರನ್ನು ಹುಡುಕೋಕೆ ಅದೆಷ್ಟು ಕಷ್ಟ ಪಟ್ವಿ ಗೊತ್ತಾ. ಕೊನೆಗೆ ಅದೊಂದು ಓಣಿಯಲ್ಲಿ ಎರಡು ಜನ ಕಂಡರು. ಗುಂಡಿನ ಚಕಮಕಿ ಶುರುವಾಗಿಯೇ ಬಿಟ್ಟಿತು. ಆ ಉಗ್ರಗಾಮಿಗಳು ಒಳ್ಳೆಯ ಆಯಕಟ್ಟಿನ ಸ್ಥಳದಲ್ಲಿದ್ದರು. ನಮಗೆ ಅಂತಹ ಸ್ಥಳ ಸಿಕ್ಕಿರಲಿಲ್ಲ. ಅವರು ಸಲೀಸಾಗಿಯೇ ನಮ್ಮ ಮೇಲೆ ಫೈರಿಂಗ್ ಮಾಡುತ್ತಿದ್ದರು. ನಾವು ಹಾಗೆ ಮಾಡಿದರೆ ಅವರು ಮರೆಯಾಗುತ್ತಿದ್ದರು. ಬಂಡಿಪೋರಾದ ಓಣಿ, ಹಾಗೂ ವಿಚಿತ್ರ ಇಕ್ಕಟ್ಟಾದ ಮನೆಗಳು ಮಧ್ಯ ಮಧ್ಯ ಹಿಮದ ಪದರದ ಗುಡ್ಡೆ ಇವೇ ಭಯೋತ್ಪಾದಕರಿಗೆ ಶ್ರೀರಕ್ಷೆಯಾಗಿತ್ತು. ನಾನು, ಮಧು, ನಾಯ್ಡು ಆ ಇಬ್ಬರು ಭಯೋತ್ಪಾದಕರನ್ನು ಕಷ್ಟಪಟ್ಟಾದರೂ ಬೆನ್ನಟ್ಟಿದ್ವಿ. ಆದರೆ ಅದೃಷ್ಟ ನಮ್ಮ ಕಡೆಗಿರಲಿಲ್ಲ. ನಾನು ಹಾಗೂ ಮಧುಗಿಂತ ಸ್ವಲ್ಪ ಮುಂದಿದ್ದ ನಾಯ್ಡುವಿನ ಎದೆಗೆ ಒಂದು ಗುಂಡು ಹೊಕ್ಕಿತು. ಅಲ್ಲೇ ಆತ ಕುಸಿಯತೊಡಗಿದ. ತಕ್ಷಣವೇ ನಾನು ಅಲರ್ಟ್ ಆಗಿ ಗುಂಡು ಹೊಡೆದೆ. ಒಬ್ಬ ಭಯೋತ್ಪಾದಕನಿಗೆ ತಾಗಿರಬೇಕು. ನಾನು ಅದನ್ನು ಗಮನಿಸಲೂ ಇಲ್ಲ. ಸೀದಾ ನಾಯ್ಡುವಿನ ಹತ್ತಿರಕ್ಕೆ ಹೋದೆ.
                ಆತನ ಉಸಿರು ಅಡಗುತ್ತಿತ್ತು. ದೇಹವೆಲ್ಲ ರಕ್ತದಲ್ಲಿ ಅದ್ದು ತೆಗೆದಂತಾಗಿತ್ತು. ಬಿಳಿ ಹಿಮವೆಲ್ಲ ಕೆಂಪು ಕೆಂಪಾಗಿತ್ತು. ಗುಂಡು ತಾಗಿದ ಜಾಗದಿಂದ ರಕ್ತ ಒರತೆಯಂತೆ ಉಕ್ಕುತ್ತಿತ್ತು. ನನ್ನಂತಹ ಸಮಚಿತ್ತದ ವ್ಯಕ್ತಿಗೇ ಆ ದೃಶ್ಯ ಒಮ್ಮೆ ಎದೆ ಹಿಂಡಿದಂತಾಯ್ತು. ನಾ ಚಿಕ್ಕದಾಗಿ ಕಂಪಿಸಿದೆ. `ನನ್ನ ಮನೇವ್ರನ್ನ ಚನ್ನಾಗಿ ನೋಡ್ಕೋ..' ಅಂದವನಿಗೆ ನಾನು ಮಾತುಕೊಡುವ ಹೊತ್ತಿಗೆ ನಾಯ್ಡು ಎಚ್ಚರ ತಪ್ಪಿದ.
               ಆ ನಂತರವೂ ಕಾಳಗ ಮುಂದುವರಿಯಿತು. ನಂಗೆ ತುಂಬಾ ಸಿಟ್ಟು ಬಂದಿತ್ತು. ನಾಯ್ಡುಗೆ ಗುಂಡು ಹೊಡೆದವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಮುನ್ನುಗ್ಗಿ, ಇದ್ದೊಬ್ಬ ಭಯೋತ್ಪಾದಕನೆಡೆಗೆ ಓಡಿದೆ. ಇದೇ ನಾ ಮಾಡಿದ ತಪ್ಪಾಗಿತ್ತು.  ಓಡುತ್ತಿದ್ದ ನನಗೆ ಅದೆಲ್ಲಿಂದಲೋ ಬಂದ ಗುಂಡೊಂದು ನನ್ನ ತೊಡೆಗೆ ನಾಟಿತು. ನಾನು ಎಚ್ಚೆತ್ತುಕೊಳ್ಳುವುಷ್ಟರಲ್ಲಿ ಮತ್ತೊಂದು ಗುಂಡು ಹೊಟ್ಟೆಗೆ ಬಡಿಯಿತು. ನಾನೂ ಕೂಡ ಕುಸಿಯತೊಡಗಿದೆ. ಅಷ್ಟರಲ್ಲಿ ಮಧು ಆ ಭಯೋತ್ಪಾದಕನನ್ನು ಕೊಂದು ಹಾಕಿದ. ಆ ನಂತರ ಅಂವ ನನ್ನ ಬಳಿ ಓಡಿ ಬರತೊಡಗಿದ. ಊಹೂಂ.. ಪೂರ್ತಿ ಹತ್ತಿರ ಬರಲಿಲ್ಲ. ಅಷ್ಟರಲ್ಲೇ ನನಗೆ ಎಚ್ಚರ ತಪ್ಪಿತು. ಮನಸ್ಸು ಕತ್ತಲಾಯಿತು.

***

               ಅಷ್ಟರ ನಂತರ ಎಷ್ಟು ದಿನ ಮಲಗಿದ್ದೆನೋ. ಈಗೊಂದೆರಡು ದಿನಗಳ ಹಿಂದೆ ನನಗೆ ಎಚ್ಚರಾಯಿತು. ನನಗೆ ಗುಂಡು ಬಿದ್ದ ದಿನ ಮಧು ನನ್ನ ಕಾಪಾಡಿದ್ನಂತೆ. ಪಾ..ಪ.. ನಾಯ್ಡು ಮರುದಿನ ಸತ್ತು ಹೋದ್ನಂತೆ. ನಿಂಗೆ ನಾನೀಗ ಒಂದು ಸಂಗತಿ ಹೇಳಬೇಕು.
               ಇತ್ತೀವರೆಗೆ ನೀನು ನನ್ನ ಚಂದಾಗಿ ಪ್ರೀತಿಸಿದೆ. ಕನಸಾದೆ.. ಬದುಕಾಗಿದ್ದೆ.. ಉಸಿರಾಗಿದ್ದೆ.. ಆದರೆ ಇನ್ನು ಮುಂದೆ ನೀನು ನನ್ನನ್ನು ಮರೆತುಬಿಡಬೇಕು. ಯಾಕೆ ಗೊತ್ತಾ, ನಂಗೀಗ ನಡೆಯೋಕೆ ಕಾಲಿಲ್ಲ. ಗುಂಡು ತಾಗಿದ ನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇನ್ನೂ ಒಂದು ಸಂಗತಿ ಹೇಳಲಾ..? ಆ ದಿನ ನನ್ನ ಹೊಟ್ಟೆಗೆ ಗುಂಡು ಬರಿದಿತ್ತಲ್ಲಾ, ಅದು ನನ್ನ ಜಠರಕ್ಕೆ ಹಾಗೂ ಪಿತ್ತಜನಕಾಂಗಕ್ಕೆ ತುಂಬಾ ಪೆಟ್ಟು ಮಾಡಿದೆಯಂತೆ. ಸರಿಪಡಿಸಲು ಸಾಧ್ಯವೇ ಇಲ್ಲದಷ್ಟು. ಮಿಲಿಟರಿ ವೈದ್ಯರು ನಾನು ಇನ್ನೆಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ ಎಂದು ಬಿಟ್ಟಿದ್ದಾರೆ. ಅದಕ್ಕೇ ನಾ ಹೇಳಿದ್ದು ನೀ ನನ್ನ ಮರೆತುಬಿಡು ಅಂತ.
               ಹುಂ... ನಿಂಗಾಗಿ ಒಬ್ಬ ಹುಡುಗನನ್ನು ನಾನು ನೋಡಿಟ್ಟಿದ್ದೀನಿ.. ಅಂವನೇ ಮಧು. ಆತ ನನ್ನ ಕುಟುಂಬವನ್ನೂ, ನಿನ್ನನ್ನೂ ಚನ್ನಾಗಿ ನೋಡ್ಕೋತೀನಿ ಅಂತ ನನಗೆ ಮಾತು ನೀಡಿದ್ದಾನೆ. ನಿಂಗೂ ಬೆಳಕಾಗಿ ಜೊತೆಯಲ್ಲೇ ಇರುತ್ತಾನೆ. ಅವನ ಇಷ್ಟದ ಲಕ್ಷಣವಂತೆ ಹುಡುಗಿ ನೀನಾಗಿರು.. ಒಳ್ಳೆ ಹುಡುಗನನ್ನು ಮಿಸ್ ಮಾಡ್ಕೊಳ್ಳಬೇಡ.
               ನೀನು ನಂಗೆ ಕೆಲ ಕಾಲದಲ್ಲೇ ಒಳ್ಳೆಯ ಅನುಭೂತಿ ಕೊಟ್ಟಿದ್ದೀಯಾ.. ಅದನ್ನು ಮರೆಯೋಲ್ಲ.. ಮುಂದೆ ಬರೋ ಜನ್ಮದಲ್ಲಿ ನಿಂಗೇ ನಾನು ಸಿಗ್ಲಿಕ್ಕೆ ಪ್ರಯತ್ನಿಸ್ತೀನಿ.. ನಂಗೀಗ ಎದ್ದು ನಿಲ್ಲಲೂ ಆಗ್ತಿಲ್ಲ ನಿಜ.. ಈ ಮಿಲಿಟರಿ ಆಸ್ಪತ್ರೆಯಲ್ಲಿ ಮಲಗಿ ನಿಂಗೆ ಪತ್ರವನ್ನು ಬರೆಯುತ್ತಿದ್ದೇನೆ. ಜೊತೆಯಲ್ಲೇ ಮಧು ಇದ್ದಾನೆ. ಅವನ ಬಳಿ ನಿನ್ನನ್ನು ಮದುವೆಯಾಗಬೇಕು ಎಂದು ಹೇಳಿ ಮಾತು ತೆಗೆದುಕೊಂಡಿದ್ದಾನೆ. ನೀನು ಅವನನ್ನು ಮದುವೆ ಆಗಲೇ ಬೇಕು. ನನ್ನನ್ನು ನೀನು ಮರೀಲೇ ಬೇಕು. ಮರೀತಿಯಾ ಅಂದ್ಕೊಂಡಿದ್ದೀನಿ. ನಿಂಗಾಗಿ ಮಧು ಇದ್ದಾನೆ. ಇರ್ತಾನೆ.
               ಅಂದಹಾಗೆ ನನಗೆ ಅಟಲ್ ಜಿಯ ಊಂಚಾಯಿ ಕವಿತೆಗಳು ಮತ್ತೆ ಮತ್ತೆ ಸೆಳೆಯುತ್ತಿವೆ. ನೀ ನನ್ನ ಮರೆತರೆ ಮಾತ್ರ ಯಾಕೋ ನಾನು ಧನ್ಯನಾದಂತೆ ಅನ್ನಿಸುತ್ತಿದೆ. ಇನ್ನು ಹೆಚ್ಚು ಬರೆಯಲು ನನ್ನಲ್ಲಿ ತ್ರಾಣವಿಲ್ಲ. ಇದೋ ನಾನು ಈ ಪತ್ರಕ್ಕೊಂದು ಕೊನೆಯ ಬಿಂದು ಇಡುತ್ತಿದ್ದೇನೆ. ಮತ್ತೊಮ್ಮೆ ನೀನು ನನ್ನನ್ನು ಮರೆಯಲೇ ಬೇಕು. ಮರೀತಿಯಾ ಎನ್ನುವ ಆಶಯದೊಂದಿಗೆ
ಜೈಹಿಂದ್

ಅಂದೊಮ್ಮೆ ನಿನ್ನವನು
ವಿನು


***
(ಈ ಕಥೆ ಬರೆದಿದ್ದು 19-06-2008ರಂದು ದಂಟಕಲ್ಲಿನಲ್ಲಿ)

Friday, January 24, 2014

ಮುತ್ತಿಗೆ

ಮುತ್ತೇ...
ಅಂದೊಮ್ಮೆ ನೀ
ನನ್ನ ಸ್ವತ್ತೆಂದು
ನಾ ತಿಳಿದಿದ್ದೆ |
ನಿನ್ನೆಡೆಯಲ್ಲಿ ನಾ
ಕನಸು ಕಟ್ಟಿದ್ದೆ |
ಪಡೆಯಬಯಸಿದ್ದೆ |

ಆದರೆ ಇಂದು
ಅರಿವಾಗಿದೆ ನೀ
ಪರರ ಸ್ವತ್ತೆಂದು |
ಹಾಗೇ ನನ್ನ ಪಾಲಿಗೆ
ನೀ ಆಪತ್ತೆಂದು, ಹಾಗೇ
ಒಡಲಿಗೆ ಕುತ್ತೆಂದು |

ಇರಲಿ ಬಿಡು ಮುತ್ತೇ...
ಸಾಗರದ ಗರ್ಭದೊಳೆಲ್ಲೋ
ಅಡಗಿ ಮುಳುಗಿದ್ದ ನಿನ್ನ,
ಕಪ್ಪೆ ಚಿಪ್ಪಿನ ಆ
ಬಾಯೊಳಗಿಂದ ಹೆಕ್ಕಿ
ತಂದ ಸವಿಯಷ್ಟೇ
ನನಗೆ ಸಾಕು |

ಮುತ್ತೇ...
ಇಂದಿನಾ ಜನ್ಮದಲ್ಲಿ
ಮುಗಿಯಿತು.
ಮುಂದೆಯಾದರೂ ನೀ
ನನ್ನ ಸ್ವತ್ತಾಗು |
ಕುತ್ತಾಗದೇ ನೀ
ಬಯಕೆಗೆ ತಂಪಾಗು |

ಹೆಕ್ಕಿ ತಂದ ನಾ, ಎಂಬ
ಸಾಹಸಿಗಷ್ಟು ನೀ
ವರವಾಗು-ಸೆರೆಯಾಗು |

ಮುತ್ತೇ..
ವರ್ತಮಾನದ ಈ
ಬದುಕಿನೊಳು ನೀ,
ಬದುಕನ್ನು ನೀಡಿದ
ಇತಿಹಾಸವ ಮರೆಯಬೇಡ |
ನಿನ್ನ ಹೆಕ್ಕಿ ತಂದ
ಸಾಹಸಿಗನ ನೆನಪಿಡು |

ಮುತ್ತು..
ಒಡೆದರೆ-ಕೊಟ್ಟರೆ
ಮುಗಿಯಿತು. ಮೂಲರೂಪ
ಮರಳುವುದು ಹೇಗೆ ?


(ಈ ಕವಿತೆಯನ್ನು ಬರೆದಿದ್ದು 28.01.2007ರಂದು, ದಂಟಕಲ್ಲಿನಲ್ಲಿ)