Friday, December 13, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 9

ಬಾಗೇವಾಡಿಯಿಂದ ಕೂಡಲಕ್ಕೆ
ಬಸವನ ಬಾಗೇವಾಡಿಯಲ್ಲಿ ನಮ್ಮ ತಂಡ : ನಮ್ಮ ತಂಡವನ್ನು ಗುರುತಿಸಿ

ಈ ಮದ್ಯಾಹ್ನವೇ ನಾವು ವಾಪಾಸು ಹೊರಡಬೇಕೆಂದು ಎನ್. ಎಚ್. ಗೌಡರು ಫರ್ಮಾನು ಹೊರಡಿಸಿಬಿಟ್ಟರು. ಇಲ್ಲಿಯವರೆಗೆ ಬಂದದ್ದಾಗಿದೆ ಒಂದೋ ಗುಂಬಜ್ ನಗರ ಬಿಜಾಪುರವನ್ನು ನೋಡಿ ಸಾಗೋಣ ಇಲ್ಲವೇ ಬಸವಣ್ಣ ಲಿಂಗೈಕ್ಯನಾದ ಕೂಡಲಕ್ಕೆ ಸಾಗುವಾ ಎನ್ನುವ ಚರ್ಚೆ ನಮ್ಮಲ್ಲಿ ನಡೆದು ಮೊದಲು ಕೂಡಲಕ್ಕೆ ಹೋಗೋಣ ಎಂಬ ನಿರ್ಣಯಕ್ಕೆ ಬಂದು ಗೌಡರಲ್ಲಿ ಹೇಳಿದಾಗ ಅಪರೂಪಕ್ಕೆಂಬಂತೆ ಅವರು `ಯೆಸ್' ಎಂದರು.
ಈ ಸಹಸ್ರಮಾನದ ಮಹಾನ್ ದಾಸೋಹಿ, ಲಿಂಗತತ್ವದ ಪ್ರತಿಪಾದಕ ಬಸವಣ್ಣನ ಜನುಮ ಸ್ಥಳವಾದ ಬಾಗೇವಾಡಿ ಮೊದಲು ನೋಡಬೇಕಲ್ಲ.. ಅತ್ತ ಸಾಗಿದೆವು.
ದಾರಿಯಲ್ಲಿ ನಮಗೆ ಕಂಡಿದ್ದೇ ನಮ್ಮ ಮೆಚ್ಚಿನ ದುರ್ಗಾ ಕ್ಯಾಂಟೀನು. ಕಿಟ್ಟು ಹಾಗೂ ನನಗೆ ಅವರಲ್ಲಿಗೆ ಹೋಗಿ `ಹೋಗಿ ಬರ್ತೀವಿ..' ಎಂದು ಹೇಳುವ ಮನಸ್ಸಾಯಿತು. ಲೇಡೀಸ್ ಟೀಮು ಹಾಗೂ ಗೌಡರು ಎಲ್ಲರನ್ನೂ ನಾವು ಅಲ್ಲಿಗೆ ಕರೆದೊಯ್ದೆವು. ಹೀಗ್ಹೀಗೆ ಅಂತ್ಹೇಳಿ, ಗೌಡರನ್ನು ಅವರಿಗೆ ಪರಿಚಯಿಸಿ ನಾವು ಊರಿಗೆ ಹೋಗ್ತಿದ್ದೀವಿ ಅಂದೆವು.
ಹೋದ ಒಂದೇ ವಾರದಲ್ಲಿ ನಮ್ಮ ಹಾಗೂ ಆ ಹೊಟೇಲಿನ ನಡುವೆ ಅದೆಷ್ಟು ಬಂಧ ಬೆಳೆದಿತ್ತು..!! ಆ ಹೊಟೇಲಿನ ಸಪ್ಲೈಯರ್ ನಿಂದ ಹಿಡಿದು, ಅಡುಗೆ ಭಟ್ಟರಾದಿಯಾಗಿ, ಓನರ್ ತನಕ ಎಲ್ಲರೂ ಬೇಸರ ಪಟ್ಟುಕೊಂಡರು. ಘಟ್ಟದ ಜನ ಎಷ್ಟು ಮುಗ್ಧರೋ ಅಷ್ಟೇ ಬಂಧವನ್ನು ಬೆಳೆಸಿಕೊಳ್ಳುವಂತವರು ಎಂಬ ಮಾತು ನಿಜವಾಯಿತು.
ಆ ದಿನ ನಮಗೆ ಆ ಹೊಟೇಲಿನಲ್ಲಿ ತಿಂಡಿ, ಕಾಫಿಯನ್ನು ಫ್ರೀಯಾಗಿ ಕೊಟ್ಟು ಕಳಿಸಿದರು. ನಮ್ಮ ಕಿಟ್ಟು ದುಡ್ಡು ಕೊಡಲು ಮುಂದಾದ. ಅದನ್ನು ನೋಡಿದ ಅಡುಗೆ ಭಟ್ಟರು ಹಾಗೂ ಓನರ್ರು ನಮ್ಮ ಕೈಹಿಡಿದು `ಬ್ಯಾಡ್ರೀ.. ನಮಗೆ ಕೊಡೋನು ಕೊಡ್ತಾನೆ ಆ ದ್ಯಾವ್ರು. ಇಷ್ಟು ಪ್ರೀತಿಯಿಂದ, ನಂಬಿಕೆಯಿಂದ ಕೆಲವೇ ದಿನ ತಿಂಡಿ ತಿಂದಿದ್ದಕ್ಕೆ, ನಾವು ಹೋಗಿ ಬರ್ತೀವಿ ಅಂತ ಹೇಳಲಿಕ್ಕೆ ಬಂದಿದ್ದೀರಲ್ಲ.. ಇಂತಹ ಪ್ರೀತಿ ಸಾಕು.. ಊಹೂಂ ನೀವು ದುಡ್ಡು ಕೊಡೋದೇ ಬೇಡ.. ನೀವು ಕೊಟ್ಟಿದ್ದನ್ನು ನಾವು ತೆಗೆದುಕೊಳ್ಳೋದಿಲ್ಲ..' ಎಂದು ಪಟ್ಟಾಗಿ ಕುಳಿತುಬಿಟ್ಟರು. ನಾವು ಎಷ್ಟು ಒತ್ತಾಯಿಸಿದರೂ ದುಡ್ಡು ತೆಗೆದುಕೊಳ್ಳಲೇ ಇಲ್ಲ. ಹೋಗುವ ಮುನ್ನ ತಬ್ಬಿ ಹಾರೈಸಿದರು. ಯಾಕೋ.. ಕಿಟ್ಟುವಿಗೆ ಹಾಗೂ ನನಗೆ ಕಣ್ಣು ಹನಿಗೂಡಿದಂತಾಯಿತು. ಅವರ ಆದರ, ಪ್ರೀತಿ, ನಂಬಿಕೆ ಇವೆಲ್ಲ ಕಂಡು ಹೃದಯ ತುಂಬಿ ಬಂದಿತು..
ಅಲ್ಲಿಂದ ನಾವು ಬಾಗೇವಾಡಿಯ ಸರ್ಕಲ್ ದಾಟಿ ಬಸವೇಶ್ವರನ ಜನ್ಮ ಸ್ಥಳದತ್ತ ಸಾಗಿದೆವು. ಅಲ್ಲೊಂದು ಶಿವ ದೇವಾಲಯ. ಆ ದೇಗುಲ, ನಂದಿ ಇವೆಲ್ಲವುಗಳನ್ನೂ ಮನದಣಿಯೆ ನೋಡಿ ಮನಸಾರೆ ಮಣಿದೆವು. ಆ ಭವ್ಯ ದೇಗುಲ, ಅಲ್ಲಿನ ಸುಂದರ ಕಲೆಯ ಬಲೆ, ಇವೆಲ್ಲ ನಮ್ಮನ್ನು ಬಹಳ ಸೆಳೆಯಿತು. ಅಲ್ಲಿ ಆ ದಿನ ಬಹಳ ಜನರೂ ಇದ್ದರು. ಅಲ್ಲಿಯೇ ನಮ್ಮ ಫೋಟೋ ಪ್ರೋಗ್ರಾಂ ಕೂಡ ಮುಗಿಸಿ ಬಂದೆವು. ಕೊಳ್ಳುವವರೆಲ್ಲ ನೆನಪಿಗೆಂದು ಹಲವು ಹತ್ತು ವಸ್ತುಗಳನ್ನು ಕೊಂಡರು. ನಾನು ಏನನ್ನೂ ಕೊಳ್ಳಲಿಲ್ಲ. ಹೀಗೆ ಹತ್ತು ಹಲವು ಸಂಗತಿಗಳು ಮುಗಿದ ನಂತರ ನಾವು ಕೂಡಲಕ್ಕೆ ಹೋಗಬೇಕು ಎಂದು ಬಸ್ ಹಿಡಿಯಲು ಬಸ್ ನಿಲ್ದಾಣದ ಕಡೆಗೆ ಹೊರಟೆವು.
ಆಗ ಅದೇನಾಯ್ತೋ.. ಅದೆಲ್ಲಿದ್ದರೋ.. ನಮ್ಮ ಕೈಯಲ್ಲಿದ್ದ ದೊಡ್ಡ ದೊಡ್ಡ ಲಗೇಜುಗಳನ್ನು ಕಂಡು ಬಹಳಷ್ಟು ಹುಡುಗರು ನಮ್ಮ ಕೈಯಲ್ಲಿದ್ದ ದೊಡ್ಡ ದೊಡ್ಡ ಬ್ಯಾಗುಗಳನ್ನು ಕಂಡು ನಾವ್ಯಾರೋ tourist ಗಳೆಂದು ನಮ್ಮನ್ನು ಎಳೆದೆಳೆದು ಭಿಕ್ಷೆ ಬೇಡಲಾರಂಭಿಸಿದರು. 4-6-8-10 ವರ್ಷದ ಬಾಲಕ ಬಾಲಕಿಯರು. ಪಾಪ ಎಂದು ಒಂದೆರಡು ರು. ಚಿಲ್ಲರೆಗಳನ್ನು ಹಾಕಿದರೆ ಅವರೆಲ್ಲಿ ಕೇಳ್ತಾರೆ..? ನಮಗೆ ನಿಲ್ಲಲು ಬಿಡಲಿಲ್ಲ.. ಉಸಿರೆಳೆದುಕೊಳ್ಳಲೂ ಬಿಡಲಿಲ್ಲ.. ಕಾಡಿದರು.. ಕಾಡಿದರು.. ಕಾಡಿಯೇ ಕಾಡಿದರು. ದುಡ್ಡಿಗಾಗಿ ಪೀಡಿಸಿ ಪೀಡಿಸಿ ನಮ್ಮಲ್ಲಿ ಸಿಟ್ಟು ಬರಲೂ ಕಾರಣರಾದರು. ನಾನು ಹಾಗೂ ಪೂರ್ಣಿಮಾ ಹೆಗಡೆ ಸಿಟ್ಟಿನಿಂದ ಇನ್ನೇನು ಅವರ ಮೇಲೆ ಕೈ ಮಾಡಬೇಕು ಎನ್ನುವಷ್ಟರಲ್ಲಿ ಬಸ್ ನಿಲ್ದಾಣ ಹತ್ತಿರಕ್ಕೆ ಬಂದಿತು. ಬಸ್ ನಿಲ್ದಾಣ ಸಮೀಪ ಬಂದಂತೆಲ್ಲ ಆ ಭಿಕ್ಷುಕ ಬಾಲಕರು ಮಾಯವಾದರು.
ನಾವು ಬಸ್ ನಿಲ್ದಾಣಕ್ಕೆ ಹೋಗಿ ಕೂಡಲದ ಬಸ್ ಹುಡುಕಿದೆವು. ಕೂಡಲಕ್ಕೆ ಡೈರೆಕ್ಟ್ ಬಸ್ ಯಾವುದೂ ಇರದಿದ್ದ ಕಾರಣ ಕಟ್ ರೂಟ್ ಮಾಡಿ ಎಂದು ಯಾರೋ ಸಲಹೆ ಕೊಟ್ಟರು. ಸರಿಯೆಂದು ಹೊರಟೆವು. `ನಿಡಗುಂದಿ' ಬಸ್ ರೆಡಿ ಇತ್ತು. ಹತ್ತಿದೆವು. 10-12 ಕಿ.ಮಿ ದೂರದಲ್ಲಿ ನಿಡಗುಂದಿ ಸಿಕ್ಕಿತು. ಅಲ್ಲಿ  ಬಸ್ಸು ಬದಲಾಯಿಸಿದೆವು. ಬಸ್ಸು ಬಹು ಜೋರಾಗಿಯೇ ಸಾಗುತ್ತಿತ್ತು. ಕೆಲಹೊತ್ತಿನಲ್ಲಿ ಆಲಮಟ್ಟಿಯೆಂಬ ಊರೂ ಆ ಊರಿನಲ್ಲಿ ನಿರ್ಮಾಣ ಮಾಡಲಾಗಿದ್ದ ಬಹುದೊಡ್ಡ ಅಣೆಕಟ್ಟು ಕಂಡಿತು. ಅಣೆಕಟ್ಟಿನ ಅಗಾಧತೆ ವಿಸ್ಮಯ ಮೂಡಿಸಿದರೂ ಅದೆಷ್ಟು ಮನೆಗಳನ್ನು ಮುಳುಗಿಸಿರಬೇಕು ಎಂಬ ಮನದಾಳದ ನೋವಿನ ದನಿ ಬೇಸರವನ್ನು ಉಂಟು ಮಾಡಿತು. ಅಲ್ಲೊಂದು ಹತ್ತು ನಿಮಿಷ ನಿಂತ ಬಸ್ಸು ಕೂಡಲ ಕ್ರಾಸಿನ ಬಳಿ ನಮ್ಮನ್ನು ಇಳಿಸಿ ಮುಂದಕ್ಕೆ ಸಾಗಿತು.

ನೆರೆಯ ದಾರಿಯಲ್ಲಿ ಕಣ್ಣೀರ ಧಾರೆ
ಕರಿ ಮೋಡದ ಹಿನ್ನೆಲೆಯಲ್ಲಿ ಕೂಡಲ ಸಂಗಮ

ಅಷ್ಟರಲ್ಲಿ ಸೂರ್ಯನೂ ಪಶ್ಚಿಮದತ್ತ ಮುಖ ಮಾಡಿದ್ದ. ಉರಿಕಾರುವ ಆತನ ಮುಖ ಬಾಡಿತ್ತಾದರೂ ಬಿಸಿಲು ಕಡಿಮೆಯಾಗಿರಲಿಲ್ಲ. ಕೂಡಲ ಕ್ರಾಸಿನಲ್ಲಿ ನಮ್ಮನ್ನು ಬಿಟ್ಟರೆ ನಾಲ್ಕೋ-ಐದೋ ಜನ ಮಾತ್ರ ಇದ್ದರು. ಹೆಚ್ಚು ಜನರಿರಲಿಲ್ಲ. ಬಸ್ಸೂ ಇಲ್ಲ ಎನ್ನುವ ಮಾಹಿತಿ ಲಭ್ಯವಾಯಿತು. ಕೊನೆಗೆ ಯಾವುದೋ ಒಂದು ಪ್ಯಾಸೆಂಜರ್ ಆಟೋ ಹಿಡಿದೆವು.
ಅಲ್ಲಿಯ ಆಟೋಗಳು ಶಿರಸಿಯವುಗಳೆದುರು ಭಾರಿ ದೊಣೆಯನಂತವುಗಳು. ಶಿರಸಿಯವು ನನ್ನಂತೆ ಸಣ್ಣವು, ಬಡಕಲು. ಅಲ್ಲಿಯವು ಪಾವಸ್ಕರನಂತೆ ದೊಡ್ಡವು.. ದೈತ್ಯವು. ಶಿರಸಿಯ ಆಟೋಗಳಲ್ಲಿ  ಮ್ಯಾಕ್ಸಿಮಮ್ 6 ಜನರನ್ನು ಹಿಡಿಸಬಹುದಾಗಿದ್ದರೆ ಆ ಭಾಗದಲ್ಲಿದ್ದ ಆಟೋಗಳಲ್ಲಿ ಅನಾಮತ್ತು ಹನ್ನೆರಡು ಜನರನ್ನು ಹಿಡಿಸಬಹುದಿತ್ತು.
`ಇದೇನು.. ಈ ರೀತಿ ನೀರು ತುಂಬ್ಕೋಂಡಿದೆ.. ರಾಡಿ ರಾಡಿ.. ಕೆಂಪು .. ಕೆಂಪು.. ರಸ್ತೆನೇ ಕಾಣೋದಿಲ್ವಲ್ರಿ.. ಯಾಕೆ ಏನಾಗಿದೆ..?' ಎಂದ ಕಿಟ್ಟು. ಕೂಡಲ ಕ್ರಾಸಿನಿಂದ ಕೂಡಲಕ್ಕೆ ಹೋಗುವ ದಾರಿಯ ತುಂಬೆಲ್ಲಾ ಕೆಂಪು ಕೆಂಪು ನೀರು.. ಕಣ್ಣೆವೆಯಿಕ್ಕುವ ವರೆಗೂ ಬರೀ ನೀರೇ ತುಂಬಿತ್ತು. ಅಲ್ಲಲ್ಲಿ ರಸ್ತೆಯೂ ಕಟ್ಟಾಗಿತ್ತು.
`ಅಯ್ಯೋ.. ಏನ್ ಹೇಳ್ರೂದ್ರಿ.. ನಿನ್ನೆ ರಾತ್ರಿಯಿಡೀ ಮಳೆ ಸುರಿದಿದೆ. ಮೊನ್ನೆನೂ ಬಂದಿತ್ತು. ಅದಕ್ಕೆ ಮಲಪ್ರಭೆಗೆ ಪ್ರವಾಹ ಬಂದಿದೆ..' ಎಂದ ಆಟೋ ಡ್ರೈವರ್..
ಆಟೋದಲ್ಲಿ ಹಿಂದಿನ ಎರಡು ಸೀಟುಗಳಲ್ಲಿ ಉಳಿದವರು ಡ್ರೈವರ್ ನ ಎರಡೂ ಪಕ್ಕದಲ್ಲಿ ನಾನು ಹಾಗೂ ಕಿಟ್ಟು ಕುಳಿತಿದ್ದೆವು. ಹರಿಯುತ್ತಿರುವ ನೀರು ಓಡುತ್ತಿರುವ ಆಟೋದ ಗಾಲಿಗೆ ಭರ್ರನೆ ಹಾರಿ ಕಾಲನ್ನು ತೋಯಿಸುತ್ತಿತ್ತು. ಎಲ್ಲಿ ನೋಡಿದರಲ್ಲಿ ಕೆಂಬಣ್ಣದ ನೀರು ತುಂಬಿತ್ತು. ಗೋಧಿ, ಜೋಳ, ರಾಗಿ, ಭತ್ತ, ಸೂರ್ಯಕಾಂತಿ, ನೆಲಗಡಲೆ ಸೇರಿದಂತೆ ನೆಡಲಾಗಿದ್ದ ಎಲ್ಲ ಬೆಳೆಗಳೂ ಮಳೆಯ ನೀರಿನಲ್ಲಿ ನಡುಗುತ್ತ ಕುತ್ತಿಗೆ ಮಟ್ಟ ಮುಳುಗಿ ನಿಂತಿದ್ದವು.
ಒಂದೆರಡು ಕಡೆಗಳಲ್ಲಂತೂ ಸೇತುವೆಯ ತುಂಬೆಲ್ಲ ನೀರು..ಇದರಿಂದಾಗಿ ನಾವು ನಡೆದು ಸೇತುವೆ ದಾಟಬೇಕಾಯಿತು. ನೆಲಕ್ಕೆ ಕಾಲಿಟ್ಟರೆ ಮೊಣಕಾಲ ಮಟ್ಟ ನೀರು.. ರಾಡಿ.. ಓ ದೇವರೆ ಅಂದುಕೊಂಡೆವು.
`ಅಲ್ರಿ.. ಈ ರೀತಿ ನೀರು ತುಂಬಿಕೊಂಡಿದೆ.. ನದಿ ತೀರದಲ್ಲಿ ಹಳ್ಳಿಗಳಿಲ್ಲವೇ..? ಭಾರಿ ಲುಕ್ಸಾನು ಆಗಿರಬೇಕಲ್ಲ.. ' ಅಂದ ಕಿಟ್ಟು ಆಟೋ ಡ್ರೈವರ್ ಬಳಿ.
ಆಗ ಡ್ರೈವರ್ ಹೇಳಿದ ` ಏನಂತಾ ಹೇಳೂದ್ರಿ.. ಸುಮಾರ್ 85 ಹಳ್ಳಿಗಳು ನೀನ್ಯಾಗ ಮುಳಿಗ್ಯಾವ್ರಿ.. ನನ್ ಜಮೀನೂ ನೀರಿನ್ಯಾಗ ಆಗಿ ಎರಡ್ ದಿನಾ ಆತ್ರಿ. ಇವತ್ತೂ ಮಳಿ ಬರಂಗ ಆಗ್ತಾ ಐತಿ.. ಮಳಿ ಬಂದ್ರ ಆಲಮಟ್ಟಿಯಾಗಿಂದ್ ನೀರ್ ಬಿಡ್ತಾರು.. ಆಗ ನಮ್ ಪಾಡು ಇನ್ನ ಖರಾಬ್ ಆಕೈತ್ರಿ.. '
`ಏನು..? ಅಲ್ಲಾ.. ನೀವು ಈಗ ಏನ್ ಮಾಡ್ತಾ ಇದ್ದೀರಿ..? ಹೊಟ್ಟೆಗೆ..? ಬದುಕಿಗೆ..?' ಎಂದು ಕೇಳಿದೆವು ನಾವು.
`ನೋಡ್ರಿ ಹಿಂಗ್ ಮಾಡಾಕ ಹತ್ತೇನಿ.. ಹೆಂಗುಸ್ರು, ಮಕ್ಕಳು ಶಾಲೆತಾವ ಅದಾರ್ರಿ.. ಸಾಲಿಮಟ ಎಲ್ಲರಿಗೂ ಕೂರಾಕ ಹೇಳ್ಯಾರ.. ಅಲ್ಲಿ ಕೂಡ್ರಿಸಿ ಬಂದೀನಿ.. ನಮ್ ಬದುಕು ಹೆಂಗ ಕೇಳ್ತೀರಿ ಬುಡ್ರಿ..' ಎಂದ..
ನಮಗೆ ಪಾಪ ಅನ್ನಿಸಿತು. ಹೀಗೆ ನಮ್ಮ ಮಾತುಕತೆ ಮುಂದುವರಿಯಿತು.. ತನ್ನ ಬದುಕು, ಮಲಪ್ರಭೆ, ಆಕೆ ಉಕ್ಕೇರಿದ್ದು, ಎಲ್ಲಾ ಬಿಟ್ಟು ಓಡಿಬಂದಿದ್ದು ಇವೆಲ್ಲವನ್ನೂ ಹೇಳಿದ. ಮತ್ತೆ ನಮ್ಮ ಕಣ್ಣಂಚು ತೇವ ತೇವ.. ಕೆದರಿದ ಕೂಡಲು, ಮುಖ ದಷ್ಟಪಷ್ಟವಾಗಿದ್ದರೂ ಒಳ ಸೇರಿದ ಕಣ್ಣುಗಳು, ಕಪ್ಪು ಕೂದಲಿನ ನಡುವೆ ಅಲ್ಲಲ್ಲಿ ಇಣುಕುತ್ತಿದ್ದ ಬಿಳಿಯ ರೋಮಗಳು, ಶೇವಿಂಗ್ ಮಾಡದ ಕಪ್ಪು ಹಾಗೂ ಬಿಳಿ ಮಿಶ್ರಿತ ಗಡ್ಡ, ಆಕಸ್ಮಿಕ ಅಘಾತದಿಂದ ಕಪ್ಪಗಿದ್ದ ಮುಖಚಹರೆ ಮತ್ತಷ್ಟು ಕಪ್ಪಗಾಗಿತ್ತು. (ಇದೇ ನೆರೆಯ ಪರಿಣಾಮವನ್ನು ಅಲ್ಲಿಯ ಜನ ಇಂದಿಗೂ ಅನುಭವಿಸುತ್ತಿದ್ದಾರೆ. ಆಗ ಉರುಳಿದ ಮನೆಗಳು, ಕಳೆದು ಹೋದ ಬೆಳೆ ಇಂದಿಗೂ ಅಲ್ಲಿನ ಜನರನ್ನು ಬಾಧಿಸುತ್ತಲೇ ಇದೆ. ಆಳುವ ಸರ್ಕಾರ ಬಸ್ಸು ಹೋಗುವ ಜಾಗದಲ್ಲಿ ರೈಲು ಬಿಡುತ್ತ ಮಾತಿನಲ್ಲೇ ಮನೆ ಕಟ್ಟುತ್ತಿವೆ.. ಬಹುಶಃ ಯಾರಾದರೂ ಈಗಲೂ ಅಲ್ಲಿಗೆ ಹೋದರೆ ನಮಗೆ ಕಥೆ ಹೇಳಿದ ವ್ಯಕ್ತಿ ಆಟೋ ಬಾಡಿಗೆ ಮಾಡುತ್ತ ಸಿಕ್ಕರೂ ಸಿಕ್ಕಾನು. ಈ ಘಟನೆ ನಡೆದು 5 ವರ್ಷಗಳಾಗುತ್ತ ಬಂದಿವೆ. ಆದರೂ ಆತ ಅಚ್ಚಳಿಯದೇ ನೆನಪಿನಲ್ಲಿದ್ದಾನೆ. )
ಹೀಗೆ ಮಾತಾಡುತ್ತ ಬರುತ್ತಿದ್ದಂತೆ ಬಸವಣ್ಣ ಶಿವ ಸಾಯುಜ್ಯ ಹೊಂದಿದ ಸ್ಥಳ ಕೂಡಲ ಬಂದಿತ್ತು.
ಎಂಥ ನಿರ್ಮಲ, ಶಾಂತ ಸ್ಥಳವದು. ಒಂದೆಡೆ ದೈತ್ಯ ಕೃಷ್ಣೆ. ಮತ್ತೊಂದೆಡೆ ಮಲಪ್ರಭೆ ನಿಶ್ಚಲೆ. ಮಂದಗಮನೆ.. ಇವೆರಡರ ಐಕ್ಯ ಸ್ಥಳವೇ ಕೂಡಲ ಸಂಗಮ. ಇಲ್ಲಿನ ಅಧಿದೇವತೆ ಕೂಡಲ ಸಂಗಮೇಶ್ವರ. ಬಸವಣ್ಣನ ಅಂಕಿತವಾದ ಕೂಡಲಸಂಗಮದೇವ. ಇಲ್ಲಿಯೇ ಬಸವಣ್ಣ ಲಿಂಗೈಕ್ಯನಾದುದು. ಭವ್ಯ ದೇಗುಲ. ಅಲ್ಲೊಬ್ಬ, ಇಲ್ಲೊಬ್ಬ ಭಕ್ತ ಯಾತ್ರಿಕರು. ವಾತಾವರಣ ನಿಶ್ಚಲ, ನಿರ್ಮಲ. ಆಕಾಶದ ಒಂದು ಭಾಗ ಮೋಡಕಟ್ಟಿದ ಕಾರಣ ಕರ್ರಗಾಗಿದ್ದು ಅಲ್ಲಿನ ವಾತಾವರಣಕ್ಕೆ ಭೀಖರತೆಯನ್ನು ತಂದಿದ್ದು ಸುಳ್ಳಲ್ಲ. ಯಾಕೋ ಅಲ್ಲಿ ಎಷ್ಟು ಹೊತ್ತು ನಿಂತಿದ್ದರೂ ಬೇಸರವೇ ಬರೋದಿಲ್ಲ ಅನ್ನಿಸಿತು.
ಅದೆಂತಹ ಸುಂದರ ತಾಣ. ಗೌಜಿಯಿಲ್ಲ. ಗಲಾಟೆಯಿಲ್ಲ. ನಗರದ ಕೆಲಸದ ಧಾವಂತವಿಲ್ಲ. ಅಕ್ಕಪಕ್ಕದಲ್ಲಿ ದೈತ್ಯ ನದಿಗಳಿದ್ದರೂ ಸದ್ದು ಮಾಡುವುದಿಲ್ಲ. ನಿಶ್ಚಲ.. ನಿರ್ಮಲ.. ನಾವು ಮೊದಲು ಸಂಗಮೇಶ್ವರನನ್ನು ನೋಡಿದೆವು. ನಮ್ಮ ಅದೃಷ್ಟವೋ ಗೊತ್ತಿಲ್ಲ.. ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ ಆರತಿಯನ್ನು ಸ್ವೀಕರಿಸಿದೆವು. ಆ ನಂತರ ಈ ಸಹಸ್ರಮಾನದ ಸಿದ್ಧಪುರುಷ ಬಸವಣ್ಣ ಲಿಂಗೈಕ್ಯನಾದ ಸ್ಥಳದ ಕಡೆಗೆ ಹೊರಟೆವು.
ಮೊದಲು ಆ ಸ್ಥಳ ನದಿಯ ದಡದ ಮೇಲೆ ಇತ್ತಂತೆ. ಕ್ರಮೇಣ ಮಾನವನ ಪಾಪ ಹೆಚ್ಚಾದಂತೆಲ್ಲ ಅಲ್ಲಿ ನೀರು ಆವರಿಸಿತು. ಕೊನೆಗೆ ವಿಜ್ಞಾನ ಮುಂದುವರಿದಂತೆಲ್ಲ ಆ ನದಿಯೊಳಗೆ ಬಾವಿ ಮಾಡಿ ಕಾಂಕ್ರೀಟಿನ ದೈತ್ಯ ಗೋಡೆಯನ್ನೆಬ್ಬಿಸಿ ಬಸವನ ನಿಶ್ಚಲ ದೇಹ ಸಮಾಧಿಯನ್ನು ನೋಡಲು ಅನುವು ಮಾಡಿಕೊಡಲಾಗಿದೆ. ಸರಿಸುಮಾರು 250 ಮೆಟ್ಟಿಲುಗಳು ಆ ಬಾವಿಗೆ.
ನಿಲ್ಲಿ.. ಒಂದು ಚೂರು ಹಳಿ ತಪ್ಪಿತು ಇಲ್ಲಿ. ಆ ಬಾವಿ ಕೂಡಲ ಸಂಗಮನಾಥನ ನೇರ ಎದುರಿಗೆ ಅಜಮಾಸು 100 ಮೀಟರ್ ದೂರದಲ್ಲಿದೆ. ಅಲ್ಲಿಗೆ ಹೋಗಲು 250 ಅಡಿಯ ಸೇತುವೆಯೂ ಇದೆ.
ಸಂಗಮನಾಥ ದೇವಾಲಯದ ಎದುರು ಸುಮಾರು 50 ಮೆಟ್ಟಿಲುಗಳನ್ನೇರಿ, ಸೇತುವೆಯಲ್ಲಿ ಸಾಗಿ ಆ ನಂತರ ಕೆಳಕ್ಕಿಳಿಯಬೇಕು. ಕೆಳಕ್ಕಿಳಿದಂತೆ ಅದ್ಯಾವುದೋ ಅವ್ಯಕ್ತ ಭಯ ಹಾಗೂ ಭಾವನೆ ನಮ್ಮ ಮನದಲ್ಲಿ ಮೂಡುತ್ತವೆ. ಅಷ್ಟೇ ಭಕ್ತಿಯೂ..
ಕೆಳಕ್ಕೆ ಇಳಿದದ್ದೇ ಬಸವಣ್ಣನವರ ಲಿಂಗೈಕ್ಯ ಗದ್ದುಗೆ ಕಾಣಿಸುತ್ತದೆ. ಎಂತಾ ಸ್ಥಳವದು. ತಂಪು ತಂಪು. ಕೆಳಗೆ ಬಾವಿಯಲ್ಲಿ ಗೋಡೆಯಲ್ಲಿ ನೀರು ಜಿನುಗಿದ ಅನುಭವ.. ಅಲ್ಲಿರುವ ಒಬ್ಬಾತ ಹೇಳಿದ ಪ್ರಕಾರ ನಾವು ನೆಲಮಟ್ಟಕ್ಕಿಂತ ಹೆಚ್ಚೂ ಕಡಿಮೆ 35 ಅಡಿ ಕೆಳಗೊದ್ದೇವೆ. ನೀರಿನ ನಡುವೆ ನಿಂತಿದ್ದೇವೆ. ಎಂದು ಸಲ ಮೈ ಜುಮ್ಮೆಂದಿತು.
ಬಳಿಯಲ್ಲಿದ್ದ ಕಿಟ್ಟು ` ವಿನು.. ಒಂದ್ಸಾರಿ ಎಲ್ಲಾದ್ರೂ ಈ ಬಾವಿಗೆ ಸಣ್ಣ hole ಆತು ಅಂದ್ರೆ ಎಂತಾ ಆಗ್ತಿಕ್ಕು.. image ಮಾಡ್ಕ್ಯ..' ಎಂದ.. ಅದು ನನ್ನ ಕಲ್ಪನೆಗೆ ನಿಲುಕಲಿಲ್ಲ.
ಅಲ್ಲಿಯೂ ನಮ್ಮ photo programme  ನಡೆಯಿತು. ನಾವು ಹುಡುಗರೆಲ್ಲಾ ಸೇರಿ ಪೋಟೋ ಹೊಡೆಸಿಕೊಳ್ಳುತ್ತಿದ್ದರೆ ನಾಗಭೂಷಣ ಗೌಡರು ಕ್ಯಾಮರಾ ಮನ್ ಆಗಿದ್ದರು. ನನ್ನ ಬಳಿಯಿದ್ದ SLR ಕ್ಯಾಮರಾ ಕ್ಲಿಕ್ಕಾಗುತ್ತಿತ್ತು.. ಪವಿತ್ರಾಳದ್ದೂ.. ಆದರೆ ಕೆಲವೇ ಪೋಟೋ ತೆಗೆಯುವ ವೇಳೆಗೆ ನನ್ನ ಬಳಿಯಿದ್ದ SLR ಕೈಕೊಟ್ಟಿತು. ಯಾವುದಕ್ಕೂ ಇರಲಿ ಎಂದು KB10 ಒಯ್ದಿದ್ದೆ.. ಉಪಯೋಗಕ್ಕೆ ಬಂದಿತು. ಬಿಡಿ ಆಗ ಈಗಿನಷ್ಟು ಡಿಜಿಕ್ಯಾಮ್ ಗಳು ಬಂದಿರಲಿಲ್ಲ ನೋಡಿ.. ಬಂದರೂ ನಾವು ಕೊಳ್ಳಬೇಕಲ್ಲ... ಅಷ್ಟು ಶಕ್ತಿಯಿರಲಿಲ್ಲ ಅದನ್ನೂ ಬಿಡಿ..
ಬೇಗನೆ ಮೇಲೇರಿ ಬಂದೆವು. ಮೇಲೇರಿದಾಗ ಕಂಡ ದೃಶ್ಯ ಇನ್ನೂ ಅಮೋಘ. ಸುತ್ತೆಲ್ಲ ನೀರು.. ಒಂದೆಡೆ ಕೃಷ್ಣೆ.. ಮತ್ತೊಂದೆಡೆ ಮಲಪ್ರಭೆ. ಮಲಪ್ರಭೆ ಆದಿನ ಋತುಮತಿಯಾಗಿದ್ದಳೇನೋ ಎಂಬಂತೆ.. ಹುಚ್ಚೆದ್ದು ಕುಣಿದಿದ್ದಳು.. ಉಕ್ಕೇರಿದ್ದಳು.. ಅದಕ್ಕೆ ತಕ್ಕಂತೆ ಆರ್ಭಟ, ಸೊಕ್ಕು... ಕೆನ್ನೀರು.. ತಿಂಗಳ ಸಂಭ್ರಮದಂತೆ ಆವೇಶ.. ಆಕೆಯ ಅಬ್ಬರ ಎಷ್ಟಿತ್ತೆಂದರೆ ಕೃಷ್ಣೆಗೆ ಸಡ್ಡು ಹೊಡೆಯುವಷ್ಟು..
ಆ ತುದಿಯಲ್ಲಿ ನಿಂತಾಗ ತೃಪ್ತಿ ಕಿಟ್ಟುವಿನ ಬಳಿ `ನೋಡಾ ಕಿಟ್ಟಿ.. ಈ ಕೃಷ್ಣಾ ಅದ್ಯಾವ ರೀತಿ ಕಪ್ಪು ಹೇಳಿ.. ಹೊಲಸು ಹೊಸಲು.. ಈ ಕೃಷ್ಣ ಹೇಳೋ ಹೆಸರಿನವರೇ ಹಾಂಗೆ ಕಾಣ್ತು..' ಎಂದು ಛೇಡಿಸಿದಳು..
ಅದಕ್ಕೆ ಕಿಟ್ಟು `ಕೃಷ್ಣ ಹೇಳದು ಕಪ್ಪಿರಲಿ.. ಒಪ್ಪಿರಲಿ..ದಡದವ್ಕೆ, ರೈತರಿಗೆ ಅದು ಯಾವಾಗ್ಲೂ ತನ್ನಿಂತ ತೃಪ್ತಿಯನ್ನೇ ನೀಡ್ತು.. ಸಮಾಜ ಸೇವೆ.. ಉಳಿದವರ ಹಾಂಗೆ ಸ್ವಾರ್ಥಿಯಲ್ಲ.. ನೋಡಲು ಕಪ್ಪಿದ್ರೆಂತು.. ಗುಣ ಚೊಲೋ ಇದ್ರಾತು.. ಪಾ..ಪ ಕೃಷ್ಣ.. ಒಳ್ಳೆಯದು.. ನೋಡಿ ಕಲ್ತಕಳವು..' ಎಂದು ಮಾತಿನ ತಿರುಗುಬಾಣ ಬಿಟ್ಟ...
ಆಕೆ ಮಾತು ಬದಲಿಸಿದಳು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಇಳಕಲ್ಲಿಗೆ ಆಟೋದಲ್ಲಿ... ಇಳಕಲ್ಲಿನಲ್ಲೊಂದು ಹಾಸ್ಯಸಂಜೆ ಹಾಗೂ ಮರಳಿ ಮಣ್ಣಿಗೆ)

Wednesday, December 11, 2013

ಕೇಳದೆ..ಕರೆ


ಕರೆದರೆ ಯಾಕೋ ತಿರುಗುವುದಿಲ್ಲ..
ನನ್ನೆಡೆ ನಿನ್ನಲಿ ಸಿಟ್ಟಿದೆಯಾ..?

ಮಾತೂ ಇಲ್ಲ, ಕಥೆಯೂ ಇಲ್ಲ
ಮೌನವೆ ಬಾಳಲಿ ತಿಂಬಿದೆಯಲ್ಲ
ಮಾತಲಿ ಮೌನದ ಗೂಡಿದೆಯಲ್ಲ
ಸಿಟ್ಟಿನ ಕಾವಲು ಜೊತೆಗಿದೆಯಲ್ಲ ||

ಭಾವದ ಒಡಲು ತುಂಬಿಹುದೇನು?
ದುಃಖದ ಕಟ್ಟೆಯು ಕೂಡಿಹುದೇನು?
ನಿನ್ನೊಳಗಾಗಿಹ ಕುಂದುಗಳೇನು?
ನನ್ನೆಡೆ ಸಿಟ್ಟಿಗೆ ಈ ಪರಿಯೇನು?

ನನ್ನನು ನೀನು ಮರೆತಿಹೆಯಾ
ತನುವಲಿ ಕಾಡುವ ಗುರುತಿದೆಯಾ
ನನ್ನೆಡೆ ನೀನು ಹೊರಳದೆ ಇರಲು
ಕಾರಣವೇನು ಹೇಳುವೆಯಾ..?||

(ಈ ಕವಿತೆಯನ್ನು ಬರೆದಿದ್ದು 08.04.2006ರಂದು)
(ತಂಗಿ ಸುಪರ್ಣಾ ಹೆಗಡೆ ಹಾಗೂ ಪೂರ್ಣಿಮಾ ಹೆಗಡೆ ಇವರುಗಳು 
ಈ ಹಾಡಿಗೆ ರಾಗವನ್ನು ಸಂಯೋಜಿಸಿ ಹಾಡಿದ್ದಾರೆ. ಅವರಿಗೆ ಧನ್ಯವಾದಗಳು)

Tuesday, December 10, 2013

ಹೊಟ್ಟೆ ತುಂಬಾ ಕಾಫಿ ಹಣ್ಣು ತಿಂದಾಗ..

ಪ್ರತಿಯೊಬ್ಬರಿಗೂ ಬಾಲ್ಯವೆಂದರೆ ಜೀವಂತಿಕೆ. ಮರೆಯಲಾಗದ ಮಹಾನ್ ಮಜಲುಗಳ, ಸುಂದರ ಸವಿ ನೆನಪುಗಳ ಆಗರ-ಸಾಗರ. ಹಾಗೆಯೇ ಕಿಲಾಡಿ-ತುಂಟತನಗಳ ಬುತ್ತಿ. ನನ್ನ ಬದುಕಿನಲ್ಲಿ ಬಾಲ್ಯದಲ್ಲಿ ನೂರಾರು ವಿಶಿಷ್ಟ ವಿಚಿತ್ರ ಹಾಗೂ ಖುಷಿ ನಿಡುವ ಘಟನೆಗಳು ಜರುಗಿವೆ. ಅಂತಹ ಘಟನೆಗಳ ಸರಮಾಲೆಯಲ್ಲೊಂದು ಈ ಪ್ರಸಂಗ.
ಮೊದಲೇ ಹೇಳಿ ಬಿಡುತ್ತೇನೆ. ಈ ಕಾಫಿ ಹಣ್ಣು ಇದೆಯಲ್ಲ ಇದರ ರುಚಿಯೇ ರುಚಿ. ಸಿಪ್ಪೆ ಸುಲಿದು ಬಾಯಿಗಿಟ್ಟರೆ ಸಿಹಿಯೋ ಸಿಹಿ. ಶಿರಸಿ, ಸಿದ್ದಾಪುರ ಕಡೆಗಳಲ್ಲಿ ಕಾಫಿ ಹಣ್ಣನ್ನು ತೋಟದ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಹಾಗೆ ಸುಮ್ಮನೆ ನೆಡುತ್ತಾರೆ. ಯಾವುದಾದರೂ ಅಧಿಕಾರಿಗಳು ಬಂದರೆ ನೋಡ್ರಿ ನಮ್ಮಲ್ಲಿ ಕಾಫಿಯೂ ಬೆಳೀತಿವೆ ಎಂದು ಸಾಕ್ಷಿ ಹೇಳುವಂತೆ. ಕೆಂಪ ಕೆಂಪನೆಯ ಹಣ್ಣು ಬಿಡುವ ಕಾಫಿ ಚಾಕಲೇಟು ಕೊಳ್ಳಲು ದುಡ್ಡಿಲ್ಲದ ಸಮಯದಲ್ಲು ಚಾಕಲೇಟಿನಂತೆ .. ಬಾಲ್ಯದಲ್ಲಿ ಇಂತಹ ಕಾಫಿ ಗಿಡಗಳಿಗೆ ದಾಳಿ ಇಟ್ಟರೆ ಕೆಂಬಣ್ಣದ ಹಣ್ಣುಗಳು ಮಾಯವಾಗಬೇಕು.. ಹಾಗೆ ತಿನ್ನುತ್ತಿದ್ದೆವು.
ಅದು ಹಾಗಿರ್ಲಿ ಬಿಡಿ.. ಈಗ ವಿಷಯಕ್ಕೆ ಬರುತ್ತೇನೆ. ಚಿಕ್ಕಂದಿನಲ್ಲಿ ನಮ್ಮೂರಿನ ಓರಗೆಯ ಹುಡುಗರಿಗೆ ನಾನೇ ನಾಯಕ. ಎಲ್ಲರಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದರೂ ಆಕಾರ ಮಾತ್ರ ಕುಳ್ಳ ನೋಡಿ.. ಮಾತು, ಕಿಲಾಡಿ ಜೋರಾಗಿಯೇ ಇತ್ತು. ಇತರರೂ ಕಿಲಾಡಿಯ ವಿಷಯದಲ್ಲಿ ಜೋರಿದ್ದರೂ ನನ್ನಷ್ಟಿರದ ಕಾರಣ ನಾಯಕತ್ವವನ್ನು ನನಗೆ ದಯಪಾಲಿಸಿ ನಾನ್ ಸರಿಯಿಲ್ಲ ಎಂದು ಸುಮ್ಮನಾಗಿ ಸೈಡಿಗೆ ಹೋಗಿದ್ದರು. ನನ್ನ ಸೈನ್ಯ ಸುಮಾರು ದೊಡ್ಡದಿತ್ತು. ಹೆಚ್ಚೂ ಕಡಿಮೆ ಅರ್ಧ ಕ್ರಿಕೆಟ್ ಟೀಮಿನಷ್ಟು. ಉಳಿದವರೆಲ್ಲ ಚಿಕ್ಕವರು. ಚಿಕ್ಕ ಹುಡುಗರಲ್ವಾ.. ಅವರಿಗೆ ನಾನು ಹೇಳಿದ್ದೇ ವೇದವಾಕ್ಯ. ನಾನು ಸತ್ಯ ಹೇಳಿದರೂ, ಸುಳ್ಳು ಹೇಳಿದರೂ ನಂಬುತ್ತಿದ್ದರು. ಇದನ್ನು ನಾನು ಅಡ್ವಾಂಟೇಜ್ ಆಗಿ ತೆಗೆದುಕೊಂಡು ಹಲವು ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿ ಅವರನ್ನೆಲ್ಲ ನಂಬಿಸಿಬಿಡುತ್ತಿದ್ದೆ. ಬಿಡಿ.. ನಾನು ಆ ದಿನಗಳಲ್ಲಿ ಒಂಥರಾ.. ನಮ್ಮೂರಿಗೆ ಡಾನ್ ಇದ್ದಹಾಗೆ...
ಒಂದು ಭಾನುವಾರದ ಶುಭ ಮುಂಜಾವು. ಭಾನುವಾರದ ರಜಾದ ಮಜಾ ನಮ್ಮೆದುರಿಗಿತ್ತು. ಕಂಡಕಂಡಲ್ಲಿ ದಾಳಿ ಇಡುವ ಪರಿಪಾಠ ನಮ್ಮದು. ಇವತ್ತೇನು ಕಡಿದು ದಬ್ಬಾಕಬೇಕು ಎನ್ನುವ ಆಲೋಚನೆಯಲ್ಲಿ ಮುಂಜಾನೆಯೇ ಎದ್ದು ತಿಂಡಿಯನ್ನು ತಿಂದು ಕಣ್ಣಾ ಮುಚ್ಚಾಲೆಯೋ, ಮತ್ತಿನೇನೋ ಆಡುವ ನೆಪದಿಂದ  ನಮ್ಮೂರಿನ ಖ್ಯಾತಿಯೂ ಕುಖ್ಯಾತಿಯೂ ಆಗಿರುವ `ಜೀಡೇಹೋಂಡ' ಎಂಬ ಸ್ಥಳದ ಕಡೆಗೆ ಹೊರಟೆವು. ಆಟ ರಂಗೇರುತ್ತಿತ್ತು. ಸ್ವಲ್ಪ ಹೊತ್ತು ಆಡಿರಬೇಕು. ಅಷ್ಟರಲ್ಲಿ ನಮ್ಮೂರಿನ ಇನ್ನೊಂದು ಭಾಗದಿಂದ ಒಂದು ಬಹುದೊಡ್ಡ ದನ-ಎಮ್ಮೆ-ಕ್ವಾಣಗಳ ಗ್ವಾಲೆ ಕಂಡು ಬಂತು. ನಮ್ಮತ್ತಲೇ ಬರುತ್ತಿದ್ದ ಕಾರಣ ಯಾರೋ ಅದನ್ನು ಬೆನ್ನಟ್ಟುತ್ತಿದ್ದಾರೆ ಎನ್ನುವುದು ಕನ್ ಫರ್ಮ್ ಆಯಿತು. ನೋಡಿದರೆ ನಮ್ಮೂರಿನವರೇ ಆದ ಮೇಲಿನಮನೆಯ ನರಸಿಂಹಣ್ಣ.
ನಮ್ಮೂರಿನ ಬ್ಯಾಣಕ್ಕೆ ಕದ್ದು ಮೇಯಲು ಬರುತ್ತಿದ್ದ ಇನ್ನೊಂದು ಊರಿನ ಗ್ವಾಲೆ ಅದಾಗಿತ್ತು. ನಮ್ಮನ್ನು ಕಂಡವರೇ ನರಸಿಂಹಣ್ಣ ಈ ದನಗಳ ಗ್ವಾಲೆಯನ್ನು ದೂರಕ್ಕೆ ಅಟ್ಟಿ ಬನ್ನಿ. ಕಳ್ಳ ಮೇವು ಮಾಡುತ್ತಿವೆ, ನಮ್ಮ ಜಮೀನು ಹಾಳು ಮಾಡುತ್ತಿವೆ.. ಎಂದರು.
ನಮಗಂತೂ ಸಿಕ್ಕಿದ್ದೇ ಛಾನ್ಸು.. ಎಂತಾ ಕೆಲಸ.. ಆಹಾ... ಓಹೋ... ನನ್ನ ತಂಗಿ ಸುಪರ್ಣ, ಪಕ್ಕದ ಮನೆಯ ನಂದನ, ಗುರುಪ್ರಸಾದ ಮುಂತಾದ ಮಂತ್ರಿ-ಸೇನಾಧಿಪತಿಗಳೊಂದಿಗೆ ನಾನು ಯುದ್ಧಕ್ಕೆ ಜೊರಟಂತೆ ಬೆನ್ನಟ್ಟಿಕೊಂಡು ಹೊರಟೆ.
ದನದ ಗ್ವಾಲೆಯನ್ನು ಹತ್ತಿರದಲ್ಲೇ ಬಿಟ್ಟರೆ ನಮ್ಮ ಮನೆಯ ಗದ್ದೆಗೆ ನುಗ್ಗಿದರೆ ಏನ್ ಮಾಡೋದು ಎನ್ನುವ ಸಾಮಾಜಿಕ ಪ್ರಜ್ಞೆ.
ಆ ಗ್ವಾಲೆಯನ್ನು ಅಟ್ಟಿದೆವು.. ಅಟ್ಟಿದೆವು... ಓಡಿಸಿ ಓಡಿಸಿ ಸುಸ್ತಾಗಿಸಿದೆವು.. ಹಿಂದೆ ಓಡಿ ನಾವೂ ಸುಸ್ತಾದೆವು. ಕೊನೆಗೊಮ್ಮೆ ನಮ್ಮೂರಿನಿಂದ ಒಂದೋ ಎರಡೋ ಕಿಲೋಮೀಟರ್ ದೂರದಲ್ಲಿದ್ದ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿಯನ್ನು ದಾಟಿಸಿ ಬಂದೆವು. ಮನೆಗೆ ಬರುವ ವೇಳೆಗೆ ಶುರುವಾಯ್ತು ನೋಡಿ ಮನೆಯ ಹಿರಿಯರಿಂದ ಮಂತ್ರಾಕ್ಷತೆ.. ಸಂಜೆಯಾದರೂ ಕುಂಭದ್ರೋಣ ಮಳೆಯಂತೆ ಸುರಿಯುತ್ತಲೇ ಇತ್ತು.
**
ಮರುದಿನ ಇನ್ನೂ ಭೀಕರ ಪರಿಸ್ಥಿತಿ. ಆ ದನದ ಗ್ವಾಲೆಯ ಯಜಮಾನ ಬಂದ. ನಮ್ಮ ದುರಾದೃಷ್ಟಕ್ಕೆ ಆ ಗ್ವಾಲೆಯಲ್ಲಿದ್ದ ಮರಿ ಕೋಣವೊಂದು ರಾತ್ರಿ ಹಿತ್ಲಕೈ ಎಂಬ ಊರಿನ ತೋಟಕ್ಕೆ ನುಗ್ಗಲೆತ್ನಿಸಿ, ಆ ಊರಿನವರು ತೋಟವನ್ನು ಹಂದಿ ಕಾಟದಿಂದ ರಕ್ಷಣೆ ಮಾಡಿಕೊಳ್ಳಬೇಕೆಂದು ಹಾಕಿಕೊಂಡಿದ್ದ ಕರೇಂಟ್ ಬೇಲಿಯ ಶಾಕ್ ಗೆ ಸಿಕ್ಕಿ ಸತ್ತು ಹೋಗಿತ್ತಂತೆ.
ಸಿಟ್ಟಿನಿಂದ ಹಾಗೂ ತೀರ್ಥ ಸೇವನೆಯಿಂದ ಕಂಣು ಕೆಂಪಗೆ ಮಾಡಿಕೊಂಡು ದಾರಿಯಡಿ ಬಯ್ಯುತ್ತ ಬರುತ್ತಿದ್ದ ಆತ. ನಮ್ಮೂರಿನ ಕಡೆಗೆ ಮುಖ ಮಾಡಿ ಬರುತ್ತಿದ್ದ ಆತ. ನಾನು ಹಾಗೂ ತಂಗಿ ಅದೇ ದಾರಿಯಲ್ಲಿ ನಮ್ಮ ದುರಾದೃಷ್ಟಕ್ಕೆ ಹೋಗುತ್ತಿದ್ದೆವು. ಹುಲಿ ಬಾಯಿಗೆ ಮಿಕವೇ ತಾನಾಗಿ ಬಂದು ಬಿದ್ದಂತೆ ನಾವು ಎದುರಿಗೆ ಸಿಕ್ಕೆವು. ತಿನ್ನಲು ಬಹಳ ಸಿಹಿ ಎನ್ನಿಸಿದ್ದ ಕಾಫಿ ಹಣ್ಣುಗಳು ನಮ್ಮ ಬೊಗಸೆ ಹಾಗೂ ಕಿಸೆಯ ತುಂಬ ತುಂಬಿಕೊಂಡಿದ್ದನ್ನು ಗಮನಿಸಿದ ಯಾರಾದರೂ ಕೂಡ ನಾವು ತೋಟದ ಕಾಫಿ ಗಿಡಕ್ಕೆ ಲಗ್ಗೆ ಇಟ್ಟು ಬಂದಿದ್ದೆವು ಎನ್ನುವುದನ್ನು ದೂಸರಾ ಮಾತಿಲ್ಲದೇ ಹೇಳಬಹುದಿತ್ತು.
ನಮ್ಮೂರಿನಲ್ಲಿ ಚೌಡಿ ಮಟ್ಟಿ ಎಂಬ ಇನ್ನೊಂದು ಫೇಮಸ್ ಜಾಗವಿದೆ. ಚೌಡಿಯ ಕಟ್ಟೆ ಇರುವ ಬೃಹತ್ ಮಾವಿನ ಮರ ಇರುವ ಸ್ಥಳವೇ ಚೌಡಿ ಮಟ್ಟಿ. ಮಧ್ಯಾಹ್ನದ ವೇಳಗೆ ಅಲ್ಲಿಗೆ ಹೋಗ ಬೇಡಿ ರಣ ತಿರುಗ್ತಿರ್ತದೆ ಎಂದು ಒಂದಾನೊಂದು ಕಾಲದಲ್ಲಿ ನಮ್ಮನ್ನು ಹೆದರಿಸಿದ್ದ ಪರಿಣಾಮ ನಮ್ಮೊಳಗೆ ಭೀತಿಯನ್ನು ಹುಟ್ಟುಹಾಕಿದ್ದ ಜಾಗ ಅದು. ಆತ ಸಮಾ ಅಲ್ಲೇ ನಮಗೆ ಸಿಕ್ಕ. ನಾವು ಸಿಗುವ ವರೆಗೂ ಆತನ ಬಾಯಿಂದ ಕನ್ನಡದ ಬೈಗುಳ ನಿಗಂಟು ಓತಪ್ರೋತವಾಗಿ ಬರುತ್ತಿದ್ದವು.. ಸೆನ್ಸಾರ್ ಪ್ರಾಬ್ಲಮ್ ಸಾರ್.. ಆತನ ಬೈಗುಳಗಳ ಪೈಕಿ `ಸೂ...ಮ..., ಬೋ...ಮ..' ಇತ್ಯಾದಿಗಳೆಲ್ಲ ಇದ್ದವು.. ನಮಗಂತೂ ಧಿಗಿಲ್ ದಬ್ಬಾಕ್ಕಂಡಂಗಾಗಿತ್ತು.
ಆತನ ಕಂಚಿನ ಕಂಠದ ಏರು ಧ್ವನಿಗೆ ನಾವೀ ಹೆದರಿ ಬಾಲವನ್ನು ಕಾಲ ಎಜ್ಜೆಯಲ್ಲಿ ಹಾಕಿ ಮುದುರುವ ಕುನ್ನಿಯಂತೆ.. ಕಮ್-ಕಿಮ್ ಅನ್ನದೇ ನಿಂತಿದ್ದೆವು.
ನಮ್ಮ ಬಳಿಗೆ ಬಂದ. ಅದ್ಯಾರೋ ಪುಣ್ಯಾತ್ಮ  ನಾವು ದನವನ್ನು ಬೆರೆಸಿದವರು ಎಂದು ಹೇಳಿದ್ದರಿಂದ ನಮಗೆ ಸಮಾ ಮಂತ್ರಾಕ್ಷತೆ ನಡೆಯಿತು. ಸುಮಾರು ಹೊತ್ತು ಬೈದ. ನಾವು ಸುಮ್ಮನೆ ನಿಂತಿದ್ದೆವು. ಕೊನೆಗೆ ಬಹಳ ಹೊತ್ತಿನ ನಂತರ ಆತ ಸಿಟ್ಟಿನಿಂದಲೇ `ಅಲ್ಲಾ.. ನೀವು ಹೊಟ್ಟಿಗೆ ಎಂತಾ ತಿಂತೀರಿ..?' ಎಂದು ಕೇಳಿದ.
ಆಗ ನನ್ನ ಜೊತೆಯಲ್ಲೇ ಇದ್ದ ಮಾತಿನ ಮಲ್ಲಿ ತಂಗಿ ಕೈಯಲ್ಲಿದ್ದ ಕೆಂಪು ಬಣ್ಣದ ಕಾಫಿ ಹಣ್ಣನ್ನು ತೋರಿಸುತ್ತಾ `ಅಷ್ಟೂ ಕಾಣೋದಿಲ್ವೇನೋ... ಕಾಫಿ ಹಣ್ಣು..' ಎಂದು ಬಿಡಬೇಕೆ..
ಆತ ಒಮ್ಮೆಲೇ ಬಯ್ಯುವುದನ್ನು ಬಿಟ್ಟು ದೊಡ್ಡದಾಗಿ ನಗಲು ಪ್ರಾರಂಭಿಸಿದಾಗಲೇ ನನಗೆ ಹಾಗೂ ತಂಗಿಗೆ ನಾವು ಏನು ಹೇಳಿದ್ದೆವೆಂದು ಅರ್ಥವಾಗಿದ್ದು.
ಬಹುಶಃ ಹೀಗೆ ಹೇಳಿದ್ದರಿಂದಲೇ ನಮಗೆ ಹೊಡೆತ ಬೀಳುವುದೂ ತಪ್ಪಿ ಹೋಯಿತೇನೋ.. ಆತನ ಸಿಟ್ಟು ಅರ್ಧಕ್ಕರ್ಧ ಇಳಿದಿತ್ತು. ಕೊನೆಗೆ ನಮ್ಮ ಬಳಿ `ನಿಮಗ್ಯರು ಹೇಳಿದ್ದು ದನಾ ಹೊಡಿಯಾಕೆ..?' ಎಂದ. ನಾವು ಬೋಳೆ ಸಂಕರನಂತೆ ಮೇಲಿನಮನೆಯ ನರಸಿಂಹಣ್ಣನ ಹೆರಸನ್ನು ಹೇಳಿಬಿಟ್ಟೆವು.
ಪಾಪ.. ಮನೆಯಲ್ಲಿ ನರಸಿಂಹಣ್ಣ ಇರಲಿಲ್ಲವಂತೆ.. ಅವರ ಮನೆಯಾಕಿ ಇದ್ದಳು.. ಈ ಯಜಮಾನ ಅಲ್ಲಿಗೆ ಹೋಗಿ ತನ್ನ ಸೆನ್ಸಾರ್ ಲೆಸ್ ಬೈಗುಳ ಬೈದು ಆಕೆ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಏನ್ ಮಾಡೋದು..? ಬಾಲ್ಯದಲ್ಲಿ ಹೀಗೆ ಇಲ್ಲದಿದ್ದರೆ ಆಗುತ್ತದೆಯೇ..? ನೆನಪು ಮಾಡಿಕೊಂಡಾಗಲೆಲ್ಲ.. ನಗು ಬರುತ್ತದೆ.. ಹಾಂ.. ನಾವು ಹಾಗೆ ಬೆನ್ನಟ್ಟಿ ದ್ದಕ್ಕೆ ತೀರಾ ಇತ್ತೀಚಿನ ಕೆಲ ವರ್ಷಗಳ ವರೆಗೂ ಆತನ ದನಗಳು ನಮ್ಮೂರಿನ ಬ್ಯಾಣಗಳಲ್ಲಿ ಕದ್ದು ಮೇಯುತ್ತಿರಲಿಲ್ಲ.. ನಮ್ಮೂರಿಗರು ಆ ಸಂದರ್ಭದಲ್ಲಿ ನಮಗೆ ಬೈದರೂ ಕಳ್ಳ ದನಗಳ ಕಾಟ ತಪ್ಪಿಸಿಕೊಂಡಿದ್ದಕ್ಕೆ ಮನಸ್ಸಿನಲ್ಲಿಯೇ ನಮಗೆ ಥ್ಯಾಂಕ್ಸ್ ಹೇಳಿರಲಿಕ್ಕೆ ಸಾಕು ಬಿಡಿ..
ನಮ್ಮೂರಿನ ಹುಡುಗರಿಗೆ ಕಾಡು ಸುತ್ತಿ ಗೊತ್ತಿಲ್ಲ.. ಕಿಲಾಡಿ ಮಾಡಿ ಗೊತ್ತಿಲ್ಲ.. ದಿನಾ ಶಾಲೆ-ಊಟ-ಮನೆ... ಹೋಂ ವರ್ಕುಗಳಲ್ಲಿ ಮುಳುಗಿ ಏಳುತ್ತಿವೆ. ರಜಾ ಸಿಕ್ಕರೆ ಸೈಕಲ್ ಹೊಡೆಯುತ್ತಾರಾದರೂ ಉಳಿದ ಕಿಲಾಡಿಗಳನ್ನು ಕೇಳಲೇ ಬೇಡಿ. ಈಗ ಮತ್ತೆ ಆತನ ದನಗಳು ಕಳ್ಳ ಮೇಯಲು ಬರುತ್ತಿವೆ.ನಮ್ಮೂರಿನ ಹುಡುಗರು ಜೋರಿಲ್ಲ ಬಿಡಿ..
ಆತನ ದನಗಳಿಗೂ ಇದು ಗೊತ್ತಾಗಿರಬೇಕು... ನಾವು ದೊಡ್ಡವರಾಗಿದ್ದೇವೆ... ಆ ಯಜಮಾನನಿಗೆ ವಯಸ್ಸಾಗಿದೆ.. ಸಿಕ್ಕಾಗ ಪ್ಯಾಲೆ ನಗುವನ್ನು ನಗುತ್ತಾನೆ.. ಅವನ ಪಾಲಿಗೆ ನಾವು `ಹೆಗುಡ್ರೇ...' ಆಗಿ ಬಿಟ್ಟಿದ್ದೇವೆ.. ನನ್ನ ತಂಗಿ `ಅಮ್ಮಾವ್ರಾ'ಗಿದ್ದಾಳೆ..

ಮೊನ್ನೆ ಒಮ್ಮೆ ಸಿಕ್ಕಾಗ ಆದನ್ನು ನೆನಪು ಮಾಡಿದ್ದೆ...ಆತನಿಗೆ ನೆನಪಿತ್ತೋ.. ಮರೆತಿತ್ತೋ ಗೊತ್ತಿಲ್ಲ.. ನಮ್ಮೂರಿನತ್ತ ದನವನ್ನು ಅವನೇ ಅಟ್ಟಿಕೊಂಡು ಬರುತ್ತಿದ್ದಾಗ ಈ ಪ್ರಸಂಗವನ್ನು ನೆನಪು ಮಾಡಿಕೊಟ್ಟು ಹುಷಾರು ಎಂದು ಲೈಟಾಗಿ ವಾರ್ನಿಂಗ್ ಮಾಡಿದ್ದೆ... ಅದಕ್ಕಾತ ಹೆಗುಡ್ರೆ.. ಈಗಿನ ಹುಡ್ರ ಹತ್ರ ಹಂಗಿದ್ದೆಲ್ಲಾ ಕೇಳ್ ಬ್ಯಾಡಿ ಎಂದು ದೇಶಾವರಿ ನಗೆ ನಕ್ಕಿದ್ದ..

ಹೌದಲ್ಲ ಅನ್ನಿಸುತ್ತಿದೆ.

Sunday, December 8, 2013

ಚಟ ಬಿಡಿ

ಚಟ ಬಿಡಿ, ಚಟ ಬಿಡಿ, ಚಟ ಬಿಡಿ
ಬದುಕ ಬೇಕೆಂದರೆ ಚಟ ಬಿಡಿ ||

ಸೇಂದಿ ಸಾರಾಯಿ ಬಿಟ್ಟು ಬಿಡಿ,
ಗುಟ್ಕಾ, ಮಟ್ಕಾದ ದೋಸ್ತಿ ಬಿಡಿ ||

ಬೀಡಿ ಸಿಗರೇಟು ದೂರವಿಡಿ
ಬ್ರಾಂದಿ ಚುಟ್ಟಾಗಳ ಮರೆತುಬಿಡಿ ||


ಚಟ ಬಿಡಿ ಚಟ ಬಿಡಿ, ಚಟ ಬಿಡಿ
ನಯಾ ಜಮಾನಾವ ಉಳಿಸಿಕೊಡಿ ||

ಮಚ್ಚು ಲಾಂಗುಗಳ ಸಂಘ ಬಿಡಿ
ದುಷ್ಟ ಚಟಗಳ ದೂರವಿಡಿ ||

ಚಟ ಬಿಡಿ ಚಟ ಬಿಡಿ ಚಟ ಬಿಡಿ
ಸಿಗ್ನಲ್ ನೋಡಿ ಲೈನು ಹೊಡಿ ||

ಹರೆಯದ ಹುಡುಗರೆ ಚಟ ಬಿಡಿ
ಬೆಳೆದ ಹುಡುಗಿಯರ ದೂರವಿಡಿ ||

ಡೀಸೆಂಟ್ ಹುಡುಗರೆ ತಿಳಿದುಬಿಡಿ
ಅರಿತು ನೋಡಿ ಮನಸು ಕೊಡಿ ||


(ಕಾಲೇಜು ದಿನಗಳಲ್ಲಿ ಶಿರಸಿ ತಾಲೂಕಿನ ಬೆಳಲೆಯಲ್ಲಿ ಎಂಇಎಸ್ ಕಲಾ & ವಿಜ್ಞಾನ ಕಾಲೇಜು ಎನ್ನೆಸ್ಸೆಸ್ ಕ್ಯಾಂಪ್ ನಡೆದಿತ್ತು. ಆ ಸಂದರ್ಭದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಜಿ. ಟಿ. ಭಟ್ಟರು ಹಾಗೂ ಆರ್. ವೈ ಖಾನರು ಚಟಗಳನ್ನು ದೂರವಿಡುವ ಕುರಿತು ಒಂದು ಕವಿತೆ ಬರೆದು ಕೊಡಲು ಹೇಳಿದ್ದರು. ಬಹಳ ಹೊತ್ತು ಕಷ್ಟ ಪಟ್ಟ ನಂತರ ಹಾಗೆ ಸುಮ್ಮನೆ ಬರೆದ ಕವಿತೆ ಇದು.. ಟಪ್ಪಾಂಗುಚ್ಚಿಯಾಗಿ ಅನ್ನಿಸಿದರೆ ಥ್ಯಾಂಕ್ಯೂ.. ಅಂದಹಾಗೆ ಈ ಹಾಡನ್ನು ಬರೆದಿದ್ದು 15-02-2008ರಂದು)

Wednesday, December 4, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 8

ಭಯದ ನೆರಳಿನಲ್ಲಿ ತೀರ್ಥಂಕರನೊಂದಿಗೆ
ಇಗೀ ಇಲ್ಲಿದೆ ನೋಡಿ ಬಸವನ ಬಾಗೇವಾಡಿ

ಸಂಜೆಯವರೆಗೆ ನಾನು ಖುಷಿಯಾಗಿದ್ದೆ. ಸಂಜೆಯ ಅನಂತರ ಮುಂದಿನ ದಿನ ಅದ್ಯಾರು ನನ್ನ ವಿರುದ್ಧ ಮ್ಯಾಚಿಗೆ ಬೀಳ್ತಾರೋ ಎಂಬ ಕುತೂಹಲಭರಿತ ಭಯ ಆವರಿಸಿತು. ಅಲ್ಲದೇ ನಂಗೆ ಆಟಕ್ಕೆ ಬೀಳುವವರು ಅನಿಕೇತನ್ ಪಾವಸೆ, ಸಾಗರ್ ಚಿಂಚೋಳಿಮಠ, ಸಮೀರ್ ಘೋಟ್ನೆ ಈ ಮೂವರಲ್ಲಿ ಒಬ್ಬರು ಎಂಬುದು ಖಾತ್ರಿಯಾಗಿತ್ತು. ಈ ಮೂವರು ಮಾತ್ರ ನನಗಿಂತ ಹೆಚ್ಚಿನ ಪಾಯಿಂಟುಗಳನ್ನು ಗೆದ್ದಿದ್ದರು. ಆದ್ದರಿಂದ ಇವರಲ್ಲಿಯೇ ಮ್ಯಾಚು ಬೀಳುತ್ತದೆ ಎಂದುಕೊಂಡೆ. ಈ ಮೂವರ ಪೈಕಿ ಇಬ್ಬರನ್ನು ಸೋಲಿಸುವುದು ಕಷ್ಟವಿತ್ತಾದರೂ ಮೂರನೆಯವನನ್ನು ಸೋಲಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ಆದರೆ ನನಗ್ಯಾಕೋ, ನನ್ನ ವಿರುದ್ಧ ಸಾಗರ್ ಚಿಂಚೋಳಿಮಠನೇ ನನ್ನ ವಿರುದ್ಧ ಬೀಳುತ್ತಾನೆ ಎನ್ನಿಸಿತು. ಏನುಮಾಡಬೇಕೋ ತಿಳಿಯಲಿಲ್ಲ. ಕತ್ತಲೆಯಲ್ಲಿ ಭಯ ಹೆಚ್ಚಂತೆ..ರಾತ್ರಿಯಾದಂತೆ ನನ್ನೊಳಗಿನ ಭೀತಿ, ತಳಮಳ ಹೆಚ್ಚಾಯಿತು.
ಆದರೆ, ನಮ್ಮ ಹುಡುಗರು ಆ ದಿನ ಕೊಂಚ ಹೆಚ್ಚಾಗಿಯೇ ತಿಂಡಿ ತಿಂದಿದ್ದರಿಂದ ರಾತ್ರಿಯ ಊಟಕ್ಕೆ ಸ್ವಲ್ಪ ದುಡ್ಡು ಕಡಿಮೆ ಬಿದ್ದುಬಿಟ್ಟಿತು. ಹಾಗಾಗಿ ಅದನ್ನು ಇಸ್ಕೊಂಡು ಬರೋಣವೆಂದು ನಾನು ಹಾಗೂ ಪಾವಸ್ಕರ ನಮ್ಮ ಮ್ಯಾನೇಜರ್ N H Goudaರು ಉಳಿದುಕೊಂಡಿದ್ದ `ವಿಮೋಚನ' ಬಾರ್ & ಲಾಡ್ಜಿಗೆ ಹೋದೆವು. ಹೇಗೋ, ಏನೋ ಅಂದ್ಕೊಂಡು ಒಳಗೆ ಕಾಲಿಟ್ಟೆವು. ಗೌಡರು 3ನೇ ಮಹಡಿಯಲ್ಲಿದ್ದಾರೆಂದು ತಿಳಿಯಿತು. ಹೋಗುವ ವೇಳೆಗೆ 2ನೇ ಮಹಡಿಯಲ್ಲಿ ಶಿರಸಿಯ ಹುಡುಗ ನಾಗರಾಜ ಹೆಗಡೆ ಸಿಕ್ಕ. ಬ್ಲೂ ಸೆಲೆಕ್ಷನ್ನಿಗೆ ಬಂದಿದ್ದ ಆತನೂ ಅಲ್ಲಿ ಉಳಿದುಕೊಂಡಿದ್ದ. ಅವನೊಂದಿಗೆ ಹರಟೆಗೆ ಕುಳಿತೆವು. ಕೊನೆಗೆ ಮಾತು ಗೌಡರ ಕುರಿತು ಹೊರಳಿದಾಗ ಆತ `ನೀವು ಈಗ ಗೌಡರನ್ನು ಕಾಣದೇ ಇರೋದೇ ಒಳ್ಳೆಯದು' ಅಂದ.
`ಯಾಕೆ..?' ಅಂದ್ವಿ.
`ಇದು ಬಾರ್ & ಲಾಡ್ಜ್..' ಅಂದ..
`ಅಂದ್ರೆ ಕುಡ್ದಿದ್ದಾರೆ ಅಂತ ಅರ್ಥನಾ..?' ಎಂದೆ.
`ನಿ..ನಿಂಗೆ ಅಷ್ಟೂ ಅರ್ಥ ಆಗಲಿಲ್ವಾ..' ಎಂದು ಕೆಣಕಿ ತಿವಿದ ಪಾವಸ್ಕರ.
`ಬಿಡು..ಅರ್ಥ ಆಯ್ತು..'ಅಂದೆ.
ಹಾಗೆಯೇ ಸ್ವಲ್ಪಹೊತ್ತು ಕಳೆದಿದ್ದರಿಂದ ಅನುಮಾನಗೊಂಡು ನಮ್ಮನ್ನು ಹುಡುಕಲು ಕಿಟ್ಟು ಹಾಗೂ ಆನಂದ ಅಲ್ಲಿಗೆ ಬಂದರು. ಕೊನೆಗೆ ಅವರನ್ನು ನಾಗರಾಜ ಹೆಗಡೆ ಬಳಿ ಮಾತನಾಡಲು ಬಿಟ್ಟು ನಾನು ಹಾಗೂ ಪಾವಸ್ಕರ ಗೌಡರಿದ್ದ ರೂಮಿನ ಕಡೆಗೆ ಸಾಗಿದೆವು. ಅವರ ರೂಮು ಹತ್ತಿರಾದಂತೆಲ್ಲ ನಂಗೆ ಒಂಥರಾ ಅನ್ನಿಸಿತು. ಪಾವಸ್ಕರನ ಬಳಿ `ನೀನ್ಹೋಗಿ ಕೇಳೋ..'ಅಂದೆ. ಆತನಿಗೆ ಏನನ್ನಿಸಿತೋ ಏನೋ., ನೀನೂ ಬಾ ಅಂದ. ಅಂತೂ ಇಂತೂ ನಾನು ಅಂವ ಇಬ್ಬರೂ ನಿಧಾನವಾಗಿ ಹೋಗಿ ಬಾಗಿಲಲ್ಲಿ ಇಣುಕಿದೆವು.
ಆಗ ಕಾಣ್ತು.. ಅಲ್ಲಲ್ಲ.. ಕಂಡವು.. ಕಂಡರು.. ಆರೇಳು ಜನ.. ಎಲ್ಲರ ಕೈಯಲ್ಲೂ ಗ್ಲಾಸುಗಳು. ಗೌಡರ ಕೈಯಲ್ಲೂ ಅರ್ಧ ಪೆಗ್ಗು. ಗೋಗಟೆ ಕಾಲೇಜಿನ ಲೆಕ್ಚರ್ ಕೈಯಲ್ಲಿ ಪೂರ್ತಿ ಪೆಗ್ಗು. ಜೊತೆಗೆ ಆಟದ ಲೀಸ್ಟು. ವಿಚಿತ್ರವೆಂದರೆ ಅಲ್ಲಿದ್ದರು ಗೋಗಟೇ ಕಾಲೇಜಿನ ಆ ಆರು ಜನ ಆಟಗಾರರು.
ಅವರ idea ಪ್ರಕಾರವೇ list ತಯಾರಾಗುತ್ತಿತ್ತು..! ಒಮ್ಮೆ ಇಣುಕಿದ ಪಾವಸ್ಕರ `ಸರ್..' ಅಂದ. ಎಲ್ಲರೂ ಒಮ್ಮೆ ಬೆಚ್ಚಿ ಬಿದ್ದರು. ನಂಗೆ ತಕ್ಷಣ ಅಲ್ಲಿ ನಿಲ್ಲಲಾಗಲಿಲ್ಲ. ಪಾವಸ್ಕರನನ್ನು ಹಿಡಿದು ಎಳೆದುಕೊಂಡು ಬಂದೆ. ಅಷ್ಟರಲ್ಲಿ ಆ ರೂಮಿನಿಂದ ಹೊರ ಬಂದಾತ `ಏನು..?' ಅಂದ. ನಾವು ಕಾರಣ ತಿಳಿಸಿದೆವು. `ನಿಲ್ಲಿ ಬರ್ತಾರೆ..' ಅಂದ ಆತ.  ನಮ್ಮ ಕಸಿವಿಸಿ, ಗಲಿಬಿಲಿಯನ್ನು ಗಮನಿಸಿದ ಆತ ಹೋಗುವ ಮುನ್ನ `ಸ್ವಲ್ಪ ಹುಷಾರು.. ಅವರು ದೇವರಾಗಿ ಬಿಟ್ಟಿದ್ದಾರೆ..' ಎಂದ.
ನಾನು ನವೀನನ ಬಳಿ `ಬಗಲ್ ಮೆ ಶತ್ರು.. ಇಲ್ಲೆ ಇದ್ದಾನೋ..' ಅಂದೆ.
ಅದಕ್ಕೆ ಉತ್ತರವಾಗಿ ಪಾವಸ್ಕರ `ನೀನು ಬ್ಲೂ ಆಗೋ ಆಸೆ ಬಿಟ್ಬಿಡು..' ಅಂದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗೌಡರು ಏನೆಂದು ಕೇಳಿದರು. ಹೇಳಿದೆವು. ದುಡ್ಡು ಕೊಟ್ಟರು. ನಾವು ಹೊರಡಲು ಅನುವಾದ ತಕ್ಷಣ `ನಿಲ್ಲಿ' ಅಂದರು. ನನ್ನ ಕರೆದು `ನಾಳೆ ನಿನ್ನ ವಿರುದ್ಧ ಚಿಂಚೋಳಿಮಠನ ವಿರುದ್ಧ ಬಿದ್ದೈತಿ..' ಎಂದರು.
`ಗೊತ್ತು ಸಾರ್.. ಹಿಂಗೆ ಆಗ್ತದೆ ಎಂದು ಗೊತ್ತಿತ್ತು.. ' ಅಂದೆ ಸಿಟ್ಟು ಹಾಗೂ ಅಸಹನೆಯಿಂದ.
ಆಗ ಪಾವಸ್ಕರ `ಸರ.. ಇದನ್ನ ಹ್ಯಾಂಗೂ ಚೇಂಜ್ ಮಾಡ್ಲಿಕ್ಕೆ ಆಗೋದಿಲ್ಲೇನ್ರಿ.. ಸರ ಸಮೀರನನ್ನು ಹ್ಯಾಂಗಾದ್ರೂ ಮಾಡಿ ವಿನಯನ ವಿರುದ್ಧ ಹಾಕಿಸಿ.. ಬಹಳ ದಿನಗಳ ಸೇಡು ಬಾಕಿ ಉಂಟು.. ಅವನ್ನ ಹೊಡೀತಿವಿ.. ಹಾಕಿಸ್ರಿ..' ಅಂದ.
`ಏ.. ಹಂಗೆಲ್ಲಾ ಬರಾಂಗಿಲ್ಲಪ್ಪ.. ರೂಲ್ಸೋ.. ರೂಲ್ಸು.. ಅಂವ.. ಆ ಕುಂಟ ಲೆಕ್ಚರ್ರು ಕೇಳಾಂಗಿಲ್ಲೋ..' ಎಂದರು.
ನಾನು `ಗೊತ್ತಾಯ್ತು ಬಿಡಿ ಸಾರ್.. ನಾಳೆ ತಲೆಯೆತ್ತಿ ಸೋಲ್ತೀನಿ.. ಆದ್ರೂ ನೀವು ಹೀಗ್ಮಾಡ್ಬಾರ್ದಿತ್ತು..ಬಾರಲೇ ಪಾವಸ್ಕರ..ಹೋಗಾಣ..' ಎನ್ನುತ್ತಾ ಹೊರಟು ಬಂದೆ.. ಪಾವಸ್ಕರ ಹಿಂಬಾಲಿಸಿದ.. ಹಿಂಭಾಗದಲ್ಲಿ `ಯೇ.. ವಿನಯ.. ನನ್ ಮಾತ್ ಕೇಳಲೆ..' ಎಂದು ಪದೇ ಪದೆ ಹೇಳುತ್ತಿದ್ದುದು ಕಿವಿಯ ಮೇಲೆ ಬೀಳುತ್ತಿತ್ತು.
ಕೆಳಗೆ ನಾಗರಾಜನ ರೂಮಿಗೆ ಬಂದೆ. ನಾಗರಾಜ ಎಲ್ಲಾ ಗೊತ್ತಿದ್ದವನಂತೆ ನಗುತ್ತಿದ್ದ. ಆನಂದ `ಏನು..?' ಎಂಬಂತೆ ನೋಡಿದ. ನವೀನ ಸಿಟ್ಟಿನಿಂದ `ಲೋಫರ್ಸ್.. ಮ್ಯಾಚ್ ಫಿಕ್ಸಿಂಗ್ ಕಣಲೇ..' ಎಂದ. `ನಂಗೊತ್ತಿತ್ತು.. ಗೌಡರ ಹಕೀಕತ್ತು.. ಮೊದಲನೇ ದಿನವೇ ನನಗೆ ಇದರ ಬಗ್ಗೆ ಪರಿಚಯ ಇತ್ತು..' ಎಂದ ನಾಗರಾಜ.
`ಈಗೇನ್ ಮಾಡೋದು..?' ಎಂದ ಆನಂದ.
`ಒಂದ್ ಸಾರಿ ನಮ್ M K Hegdeರಿಗೆ ಪೋನ್ ಮಾಡಿ ಕೇಳೋಣ.. ಅವರೇನಂತಾರೆ ಅಂತ ತಿಳ್ಕೊಳ್ಳೋಣ. ಅವರು ಹೇಳ್ದಾಂಗೆ ಮಾಡೋಣ..' ಎಂಬ ಸಲಹೆ ಕೊಟ್ಟ ಪಾವಸ್ಕರ.
ಕೊನೆಗೆ ಅಲ್ಲಿಯೇ ಇದ್ದ ಕಾಯಿನ್ ಬೂತಿಗೆ ಹೋಗಿ ಪೋನಾಯಿಸಿ ಹಿಂಗಿಂಗಾಯ್ತು ಅಂದೆವು. ಅದೆಷ್ಟು ಸಿಟ್ಟು ಬಂದಿತ್ತೋ ಎಂ. ಕೆ. ಹೆಗಡೆಯವರಿಗೆ `ಆ ಗೌಡರು ಅಲ್ಲಿ ಅದೇನ್ ಮಾಡ್ತಾ ಇದ್ದಾರೆ..? ಅವರಿಗೆ ಏನೇನ್ ಮಾಡ್ಬೇಕು ಎಲ್ಲಾ ಗೊತ್ತಿದೆ.. ಅದನ್ನು ಬಿಟ್ಟು ಹಿಂಗೆಂತಕ್ಕೆ ಮಾಡ್ತಾ ಇದ್ದಾರೆ..'ಎಂದವರು ಸಡನ್ನಾಗಿ `ಬಹಳ ತಗೊಂಡಿದ್ದಾರಾ..? ದುಡ್ಡು ಸುಮಾರು ಓಡಾಡಿರಬೇಕು..' ಅಂದರು. ಕೊನೆಗೆ ನಾವು ಎಲ್ಲ ಉತ್ತರ ಹೇಳಿದ ಮೇಲೆ ಅವರು ನಮ್ಮ ಬಗ್ಗೆ ಕನಿಕರಿಸಿ `ನಿಮಗೆಲ್ಲಾ ಲಾಡ್ಜಲ್ಲಿ ವ್ಯವಸ್ಥೆ ಮಾಡಿದ್ದಾರಾ..? ವ್ಯವಸ್ಥೆನಾದ್ರೂ ಚನ್ನಾಗಿ ಮಾಡಿರಬಹುದು ಅಲ್ವಾ.. ಲೇಡೀಸ್ ಹೇಗಿದ್ದಾರೆ..?' ಎಂದರು.
ಅದಕ್ಕೆ ಉತ್ತರವಾಗಿ ನಾವು ನಮಗೆ ಕೊಟ್ಟಿದ್ದ ನುಶಿಕೋಟೆಯ ಕೋಣೆಯ ಬಗ್ಗೆ, ನಮ್ಮ ತಿಂಡಿಯ ಪಡಿಪಾಟಲು, ಲೇಡೀಸ್ ಪಡುತ್ತಿರುವ ತೊಂದರೆ ಇವೆಲ್ಲದರ ಬಗ್ಗೆ ಹೇಳಿದಾಗ ಮತ್ತೆ ಸಿಟ್ಟುಮಾಡಿಕೊಂಡ ಹೆಗಡೆಯವರು `ಅಲ್ರೋ.. ಮ್ಯಾನೇಜುಮೆಂಟು ಭಾರಿ ದುಡ್ಡು ಕೊಡ್ತದೆ ಕಣ್ರೋ.. ಅವ್ರು ಕೊಡೋ ದುಡ್ಡು ನೋಡಿದ್ರೆ ನಿಮ್ಮನ್ನು ತಿಂಗಳುಗಳ ಕಾಲ ಬೇಕಾದ್ರೂ ಲಾಡ್ಜಲ್ಲಿ ಇಡಬಹುದಾಗಿತ್ತು. ಹುಂ.. ಅದೆಲ್ಲಾ ಈಗ ಹಾಗೆ ಹಾಳಾಗ್ತಾ ಇದೆ..' ಅಂದರು. ಕೊನೆಯದಾಗಿ ಪಾವಸ್ಕರ `ಸರ್ ನಿಮ್ಮನ್ನು ನಾವು ತುಂಬಾ miss ಮಾಡ್ಕೋತಾ ಇದ್ದೀವಿ.. ನೀವಿರಬೇಕಿತ್ತು ಸಾರ್.. ಗೋಗಟೆಯ ಸೊಕ್ಕು ಮುರಿಯಬಹುದಿತ್ತು..' ಅಂದು ಪೋನ್ ಇಟ್ವಿ. ಸರಿಸುಮಾರು 30 ಕಾಯಿನ್ನುಗಳು ಖಾಲಿಯಾಗಿದ್ದವು.
ಅಷ್ಟರಲ್ಲಿ ಅದೇ ದಾರಿಯಲ್ಲಿ ಗೋಗಟೆ ಹುಡುಗರು ಮರಾಟಿಯಲ್ಲಿ ಅದೇನೇನೋ ದೊಡ್ಡದಾಗಿ ಹೇಳುತ್ತಾ ನಗುತ್ತಾ ಇಳಿದು ಹೋಗುತ್ತಿದ್ದರು. ನನಗೆ ಪಾವಸ್ಕರ ಎಲ್ಲಿ ಅವರ ಜೊತೆಗೆ ಹೊಡೆದಾಟಕ್ಕೆ ಹೊರಡುತ್ತಾನೋ ಎನ್ನುವ ದಿಗಿಲಿತ್ತು.
ನಮ್ಮ ತಂಡ ಗೌಡರಿಗೆ ಬಯ್ಯುತ್ತಾ ಊಟ ಮಾಡಿ ನಾಳೆ ಗೋಗಟೆ ಕಾಲೇಜಿನ ಹುಡುಗರನ್ನು ಸೋಲಿಸಿದಂತೆ ಕನಸು ಕಾಣುತ್ತಾ ನುಶಿಕೋಟೆಗೆ ವಾಪಸ್ಸಾದೆವು.
ದೂರದಲ್ಲಿ ಗುಡುಗುವ ಸದ್ದು ಕೇಳುತ್ತಿತ್ತು.. ಸಿಕ್ಕಾಪಟ್ಟೆ ಮೋಡವಾಗಿದ್ದ ಲಕ್ಷಣಗಳೂ ಇದ್ದವು. ಸೆಖೆ ಹೆಚ್ಚಿದ್ದು ಮೈಮೇಲಿನ ಬಟ್ಟೆ ಕಿತ್ತೊಗೆಯುವಷ್ಟಾಗಿದ್ದವು..  ಮಲಗಿ ನಿದ್ರಿಸಿದೆವು. ನನಗೆ ನಿದ್ದೆ ಹತ್ತಲಿಲ್ಲ. ಮೊದ ಮೊದಲು ಗೌಡರ ಮ್ಯಾಚ್ ಫಿಕ್ಸಿಂಗ್ ನೆನಪಾಯಿತು. ನಂತರ ಆನಂದ, ಕಿಟ್ಟು, ನವೀನ , ನಮ್ಮ ಲೇಡೀಸ್ ಟೀಮಿನ ಸದಸ್ಯೆಯರು ನನ್ನ ಮೇಲಿಟ್ಟ ಭರವಸೆ, ನಾನು ಬ್ಲೂ ಆಗಬೇಕೆಂದು ಅವರೆಲ್ಲ ಪ್ರಯತ್ನ ಪಡುತ್ತಿರುವುದನ್ನು ಅನ್ನಿಸಿ ಕಣ್ಣೀರಾಯಿತು. ಕೊಂಚ ಸಮಯ ಕಳೆದ ನಂತರ ನವೀನ `ವಿನೂ.. ನಿದ್ದೆ ಬರ್ಲಿಲ್ವಾ..' ಎಂದ. `ಹೂಂ..' ಅಂದೆ.. `ಮ್ಯಾಚ್ ಆಡೋಣ್ವಾ..' ಎಂದ.. `ಸತ್ರಿ ನನ್ ಮಕ್ಳಾ.. ಈಗ್ಲೆ 12 ಗಂಟೆಗೂ ಹೆಚ್ಚಾಗಿದೆ.. ಮುಚ್ಕೊಂಡು ಮಲಕ್ಕೋಳ್ರೋ.. ನಿದ್ದೆ ಬರ್ತದಾ ನೋಡ್ತೀನಿ..' ಎಂದು ಕಿಟ್ಟು ಬೈದ..
ಅರೇ... ಯಾರಿಗೂ ನಿದ್ದೆ ಬಂದಿರಲಿಲ್ಲವೇ..


21-09-2007, ಶುಕ್ರವಾರ
`ಏ ಏಳ್ರಲೆ.. ಲೋಫರ್ಸ್.. ಏಳೂವರೆಯಾಯ್ತು.. ಮಕ್ಳಾ.. ಹಂದಿ ಹಂಗೆ ಬಿದ್ಕೊಂಡಿದ್ರೇನ್ರೋ..' ಅನ್ನೋ ಧ್ವನಿಕೇಳಿ ಎಲ್ಲ ದಡಬಡಿಸಿ ಎದ್ದೆವು. ಬಾಗಿಲು ತೆರೆದವರಿಗೆ ಎದುರಿಗೆ ಕಂಡಿದ್ದು ಲೋಫರ್ರುಗಳಿಗಿಂತ ಲೋಫರ್ರಾದ ನಾಗರಾಜ..!!
ಆತ ಬೆಳಿಗ್ಗೆ ಎದ್ದವನೇ ಚೆಸ್ ಪ್ರಾಕ್ಟೀಸಿಗೆ ನಮ್ಮ ನುಶಿಕೋಟೆಗೆ ಬಂದುಬಿಟ್ಟಿದ್ದ. ನಾವಿನ್ನೂ ಎದ್ದೇ ಇರಲಿಲ್ಲ. ಕಾರಣ ಗೊತ್ತಿದ್ದುದ್ದೇ ಆಗಿತ್ತು.
ರೂಮಿಂದ ಹೊರಗೆ ಕಾಲಿಟ್ಟರೆ ನೆಲವೆಲ್ಲ ಒದ್ದೆಮುದ್ದೆ.. ರಾತ್ರಿ ಯಾವಾಗಲೋ ಮಳೆ ಬಂದ ಕುರುಹು.. ಮಣ್ಣಿನ ವಾಸನೆ ಗಮ್ಮೆನ್ನುತ್ತಿತ್ತು.. ಕೊನೆಗೆ ಒಂದಿಷ್ಟು ಚೆಸ್ ಆಡಿ ನಾವು ಸಂಪೂರ್ಣ ತಯಾರಾಗುವ ವೇಳೆಗೆ ಸಮಯ ಒಂಭತ್ತಕ್ಕೆ ಢಣ್ಣೆಂದಿತು. ಮ್ಯಾಚು ಚಿಂಚೋಳಿಮಠನ ಮೇಲೆ ಬಿದ್ದಿದ್ದು ಫಿಸ್ಕಾಗಿಯೇ ಇತ್ತು. ಛೇಂಜಾಗಿರಲಿಲ್ಲ. ಎಲ್ಲರೂ ನನ್ನ ಬಳಿ ಬಂದು ಸಂತಾಪ ಸೂಚಕ ಮಾತುಗಳನ್ನು ಆಡುವವರೇ.. `ಬಸವನ ಬಾಗೇವಾಡಿ ಬಸವಣ್ಣ.. ಕಾಪಾಡೋ ತಂದೆ..' ಎನ್ನುತ್ತಾ ಮ್ಯಾಚಿಗೆ ಕುಳಿತೆ.
ಯಾಕೋ ಕಣ್ಣಿಗೆ ಬೋರ್ಡು ಕಾಣಲೇ ಇಲ್ಲ. ಗೌಡರ ಮೋಸವೇ ಎದ್ದೆದ್ದು ಕಾಣುತ್ತಿತ್ತು. ಸಾಯ್ಲಿ ಬಿಡು ಎಂದು neglect ಮಾಡಿದೆ. ಆ ಚಿಂಚೋಳಿಮಠನೂ ಭಯಂಕರವಾಗಿ ಆಡಿಬಿಟ್ಟ. ಪಾವಸ್ಕರ ಪದೇ ಪದೆ ನನ್ನ ಬಳಿ ಇಣುಕಿ `ಡ್ರಾ ಕೇಳೋ.. ಕೊಟ್ಟರೆ ಕೊಡಲಿ..' ಎಂದ. ನಾನು ಕೇಳಿದೆ.. `ನೋ.. ಅಂದ..' ಟೈಂಪಾಸ್ ಮಾಡಿದೆ.. ವರ್ಕೌಟ್ ಆಗಲಿಲ್ಲ.. ಕೊನೆಗೆ ಮ್ಯಾಚನ್ನು ಹೀನಾಯವಾಗಿ ಸೋತೆ.
ಅಲ್ಲಿಗೆ ನನ್ನ ಬ್ಲೂ ಆಸೆಗೆ ತಿಲಾಂಜಲಿ ನೀಡಿದೆ. ಮುಂದಿನ ಮ್ಯಾಚು ಏನಾದರೇನು ಎಂದುಕೊಂಡೆ. ಅದಕ್ಕೆ ಸರಿಯಾಗಿ ಒಬ್ಬ ಬಕರಾ ಬಿದ್ದ. ಹೀನಾಯವಾಗಿ ಸೋಲಿಸಿದೆ. ಯಾರ ಮೇಲಿನ ಸೇಡನ್ನೋ, ಸಿಟ್ಟನ್ನೋ ಇನ್ಯಾರ ಮೇಲೋ ತೀರಿಸಿಕೊಂಡೆ. ಕೊನೆಗೆ ನನ್ನ ಪಾಯಿಂಟು 4.5 ಆಯಿತು. ಬ್ಲೂ ಆಗಲಿಲ್ಲ. ರಿಸರ್ವ ಬ್ಲೂ ಆದೆ.
ಶತಮಾನದ ದುರಂತವೆಂಬಂತೆ ನಾಗರಾಜ ಹೆಗಡೆ ಬ್ಲೂ ಆಗಿಬಿಟ್ಟ.! ಆತ ಮೊದಲನೇ ಮ್ಯಾಚಿನಲ್ಲೇ ಸೋತು ಪ್ರಭಲ ಎದುರಾಳಿಗಳು ಸಿಗದಂತೆ ಮಾಡಿಕೊಂಡು ಗೆದ್ದಿದ್ದ. ನಮ್ಮ ಕಾಲೇಜಿನ ಲೇಡೀಸ್ ಟೀಮಿನ 2-3 ಆಟಗಾರರು ಆತನಿಗೆ ಸಿಕ್ಕು ಸೋತಿದ್ದರು. ನಾವು ಸೋತು ಆತ ಬ್ಲೂ ಆದಮೇಲೆ ಶುರುವಾಯಿತು ನೋಡಿ ಆತನ ಅಸಲಿ ವರಸೆ..ನಮಗೆ ಆಟವೇ ಬರುವುದಿಲ್ಲ ಎಂಬಂತೆ ಮಾತಾಡತೊಡಗಿದ. ನಾನು ಹಾಗೆ ಮಾಡಿದೆ.. ಹೀಗೆ ಮಾಡಿದೆ.. ಎಂದು ಬಡಾಯಿ ಕೊಚ್ಚಿಕೊಂಡ.
ಅನಿಕೇತನ್ ಪಾವಸೆ, ಸಾಗರ ಚಿಂಚೋಳಿಮಠ, ನಾಗರಾಜ ಹೆಗಡೆ, ಸಮೀರ ಗೋಟ್ನೆ ಹಾಗೂ ಗೋಗಟೆ ಕಾಲೇಜಿನ ಇನ್ನೊಬ್ಬ ಆಟಗಾರ ಬ್ಲೂ ಆದರು. ನಾನು, ರಾಜೇಂದ್ರ ಬಾಬು ಹಾಗೂ ಕುಮಟಾದ ಹುಡುಗನೊಬ್ಬ ಸೇರಿ ಮೂವರು ರಿಸರ್ವ ಬ್ಲೂ ಆದೆವು.
ನನಗೆ ಬಹು ಬೇಜಾರಾಗಿತ್ತು. ಸೋತಿದ್ದಕ್ಕೂ, ಗೌಡರ ಮೇಲೂ.ಕೊನೆಗೊಮ್ಮೆ ನನ್ನೊಳಗಿನ ತಳಮಳವನ್ನು ತಾಳಲಾರದೇ `ಸರ್.. ನೀವು ಹೀಗ್ಮಾಡ್ಬಾರ್ದಿತ್ತು..' ಅಂದಿದ್ದೆ.. ಅದಕ್ಕವರು `ಅಲ್ಲೋ.. ನಾನೇನೂ ಮಾಡಾಕ ಬರ್ತಿಲ್ಲಿಲ್ಲೋ..' ಅಂದರು. ಹಾಗೇ ಮುಂದುವರಿದು `ಖರೆ ಹೇಳ್ಬೇಕು ಅಂದ್ರೆ ನಿನ್ನ ಸೋಲಿಗೆ ನೀನೇ ಕಾರಣ.. ನಂಗೊತ್ತೈತಿ.. ನೀನು ಚನ್ನಾಗಾಡ್ತಿ ಅಂತ.. ಆದರೆ ನಮ್ಮ ಕಾಲೇಜಿನ ಲೇಡೀಸ್ ಟೀಮನ್ನು ಬ್ಲೂ ಸೆಲೆಕ್ಷನ್ನಿಗೆ ಆಡ್ಸಿದ್ದಿ ನೋಡು ಅದೇ ನಿನ್ನ ಸೋಲಿಗೆ ಕಾರಣವಾಯಿತು. ಅದೇ ನಿನ್ನ ದೊಡ್ಡ ತಪ್ಪು. ನಮ್ಮ ಕಾಲೇಜಿನ ಲೇಡೀಸ್ ಟೀಂ ಆಟಗಾರರನ್ನು ಸೋಲಿಸಿಯೇ ಆ ನಾಗರಾಜ ಬ್ಲೂ ಆಗಿದ್ದು..ಹಿಂಗ್ ಮಾಡಬಾರದಿತ್ತು.. ನಿನ್ನ ಸೋಲಿಗೆ ನೀನೆ ಕಾರಣ..' ಎಂದರು.
ನಾನು ವಾದ ಮಾಡಿದೆ. ಆದರೆ ಗೌಡರು ಕೇಳುವ ಹುಮ್ಮಸ್ಸಿನಲ್ಲೇ ಇರಲಿಲ್ಲ.. ಕೊನೆಗೊಮ್ಮೆ ಪಾವಸ್ಕರನ ಜೊತೆಗೆ ಈ ವಿಷಯ ಚರ್ಚೆ ಮಾಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಲೇಡೀಸ್ ಟೀಂ ಕ್ಯಾಪ್ಟನ್ ಪೂರ್ಣಿಮಾ ಟಿ. ಹೆಗಡೆ ನನ್ನ ಜೊತೆ ಮಾತಿಗೆ ನಿಂತರು. `ನಮ್ಮ ಟೀಮನ್ನು ಆಡಿಸದಿದ್ದರೆ ತಲೆಗೆ 100 ರುಪಾಯಿಯಂತೆ 400 ರು. ಉಳಿತಿತ್ತು. ಅದು ಉಳಿಯಲು ನೀ ಕೊಡಲಿಲ್ಲ.. ಅದಕ್ಕೆ ನಮ್ಮನ್ನು ಆಡಿಸಿದ ನೆಪ ಹೇಳಿದರು..' ಎಂದಳು ಆಕೆ. ಹೌದೇನೋ ಅನ್ನಿಸಿತು. ದುಡ್ಡು ಏನನ್ನು ಬೇಕಾದರೂ ಮಾಡಿಸುತ್ತದಾ..? ಅಂದುಕೊಂಡೆವು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಬಾಗೇವಾಡಿಯಿಂದ ಕೂಡಲಕ್ಕೆ..ನೆರೆಯ ದಾರಿಯಲ್ಲಿ ಕಣ್ಣೀರದಾರೆ..)