Friday, November 29, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 7

ಬಾಗೇವಾಡಿಯ ಬಸವೇಶ್ವರ ಕಾಲೇಜು ಮೈದಾನದಿಂದ ಕಂಡಂತೆ
ಮದ್ಯಾಹ್ನದ ವೇಳೆಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಶುರುವಾಯಿತು. ಗೋಗಟೆಯ ಕಾಲೇಜು ಪ್ರಥಮ, ನಮ್ಮ ಕಾಲೇಜು ದ್ವಿತೀಯ ಹಾಗೂ ಆರ್.ಪಿ.ಡಿ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿಕೊಂಡಿತು. ನಮ್ಮ ಕಾಲೇಜಿನ ಹುಡುಗಿಯರ ತಂಡ ಮೊದಲನೇ ಸ್ಥಾನವನ್ನು ತಮ್ಮದಾಗಿಸಿಕೊಂಡು ಬೀಗಿತು.
ನಮ್ಮ ತಂಡದಿಂದ ಒಂದೇ ಒಂದು ಮ್ಯಾಚನ್ನೂ ಸೋಲದ ಕಿಟ್ಟು ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಪಡೆದ. ಕೊನೆಗೆ ನಮ್ಮ ಎನ್. ಎಚ್. ಗೌಡರಿಗೆ ಸ್ವಲ್ಪ ಗಾಳಿ ಹೊಡೆದು ಕುಮಟಾದ ಬಾಳಿಗಾ ಕಾಲೇಜಿನ ನಮ್ಮ ಮಿತ್ರ ಕಿಟ್ಟುವಿಗೂ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಸಿಗುವಂತೆ ಮಾಡಿದೆವು. ಅಫ್ ಕೋರ್ಸ್ ಆತ ಕೂಡ ಒಂದೇ ಒಂದು ಮ್ಯಾಚನ್ನೂ ಸೋತಿರಲಿಲ್ಲ.. ಆದರೆ ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆರ್.ಪಿ.ಡಿ. ಕಾಲೇಜಿನ ಹುಡುಗರು ಬರಲೇ ಇಲ್ಲ..!! ಬಹುಶಃ ಅವಮಾನ ಆಗಿರಬೇಕು ..!!
ಸಂಜೆ ಎಲ್ಲರೂ ಖುಷಿಯಲ್ಲಿದ್ದರು. ನವೀನ ಪಾವಸ್ಕರ ಫುಟಬಾಲ್ ಮ್ಯಾಚ್ ಆಡಲು ಹೋಗಿದ್ದ.. ಸ್ಥಳೀಯ ಕಾಲೇಜಿನ ಹಾಗೂ ನಮ್ಮಂತೆ ಬಾಗೇವಾಡಿಗೆ ಚಸ್ಸಾಡಲು ಬಂದಿದ್ದ ಇತರ ಕಾಲೇಜಿನ ಹುಡುಗರು ಆತನಿಗೆ ಜೊತೆಗಾರರಾಗಿ ಸಿಕ್ಕಿದ್ದರು. ಕಿಟ್ಟುವಂತೂ ಎಂದಿನಂತೆ ಹುಡುಗಿಯರ ಜೊತೆಗೆ ಮಾತಿಗಿಳಿದಿದ್ದ. ನನಗೆ ಹಾಗೂ ಆನಂದನಿಗೆ ಮಾಡಲು ಬೇರೇನೂ ಕೆಲಸ ಕಾಣಲಿಲ್ಲ.. ಕಾಲೇಜಿನ ಕಾರಿಡಾರಿನಲ್ಲಿ ಅಡ್ಡಾಡಿದೆವು.. ನನಗೆ ಮಾತಿನ ಹುಕಿಯಿದ್ದರೂ ಆನಂದ ಮೌನಿ.. ಆನಂದನಂತಹ ಮೂಕ ಹಕ್ಕಿಯ ಜೊತೆಗೆ ಕಾಲೇಜಿನ ಕಾರೀಡಾರಿನಲ್ಲಿ ಅಡ್ಡಾಡಿದರೆ ಮುಗಿದೇ ಹೋಯ್ತು.. ಮಾತಿಲ್ಲ.. ಕಥೆಯಿಲ್ಲ ಬರೀ ರೋಮಾಂಚನ..
ಹೀಗಿರಲು ಕಾರಿಡಾರಿನಲ್ಲಿ ನಮ್ಮ ನಾಗಭೂಷಣ ಗೌಡರು ಸಿಕ್ಕರು. ಅವರ ಜೊತೆಗೆ ಗೋಗಟೆ ಕಾಲೇಜಿನ ಮ್ಯಾನೇಜರ್ ಕಂ ಲೆಕ್ಚರ್ ಕಂ ಕೋಚ್ ಕಂ ಅಂಪಾಯರ್ರಾಗಿದ್ದವರೂ ಇದ್ದರು.. ಅವರವರಲ್ಲೇ ಉಭಯಕುಶಲೋಪರಿ ಸಾಂಪ್ರತವೂ ನಡೆದಿತ್ತು.. ಆ ಲೆಕ್ಚರ್ರೋ ನೋಡಲು ಕುಳ್ಳರು. ಪರವಾಗಿರಲಿಲ್ಲ.. ಒಂದು ಕಾಲು ಬಹಳ ಕುಂಟುತ್ತಿದ್ದರು. ಪರಿಣಾಮವಾಗಿ ಕೈಯಲ್ಲೊಂದು ವಾಕಿಂಗ್ ಸ್ಟಿಕ್ಕಿತ್ತು.. ನಾನು ಹಾಗೂ ಆನಂದ ಅವರ ಬಳಿ ಹೋದೆವು.. ಹಾಗೂ ಹೀಗೂ ಮಾತಿಗೆ ನಿಂತೆವು.. `ನೀವು ಬರೋಬರ್ ಆಡಿದ್ರೀ.. ಭೇಷ್ ಆಟಾನ್ರೀ..' ಎಂದು ನನ್ನನ್ನು ಹೊಗಳಿ ಅಟ್ಟಕ್ಕೇರಿಸಲು ಯತ್ನಿಸಿದರು ಅವರು.. ನಾನೂ ಸ್ವಲ್ಪ ಖುಷಿಗೊಂಡೆ ಅನ್ನಿ.. ಅದೇ ಸಮಯದಲ್ಲಿ ನನಗೇನನ್ನಿಸಿತೋ ಏನೋ ಇದ್ದಕ್ಕಿದ್ದಂತೆ ಅವರ ಬಳಿ `ಸರ್.. ಚಾಲೇಂಜಿಗೆ ಬರ್ತೀರಾ..? ನಿಮ್ಮ ಟೀಮಿನ 3ನೇ ಬೋರ್ಡ್ ಪ್ಲೇಯರನ್ನು ಸೋಲಿಸ್ತೀನಿ.. ಎರಡನೇ ಬೋರ್ಡ್ ಪ್ಲೇಯರ್ ವಿರುದ್ಧ ಮೋಸ ಮಾಡಿದ್ರಿ.. ಆಗ್ಲಿ.. ಮೂರನೇ ಬೋರ್ಡ್ ಪ್ಲೇಯರ್ ನಾ ಸೋಲಿಸ್ತೀನಿ.. ಆತ ರೇಟೆಡ್ ಪ್ಲೇಯರ್ರಂತೆ.. ಓ.ಕೆ.ನಾ..?' ಎಂದು ಬಿಟ್ಟೆ.. ಅವರು ಮಾತನಾಡಲಿಲ್ಲ.. ನಗುತ್ತಾ ನಿಂತರು..
ಬಹುಶಃ ನಾನು ಮಾಡಿದ ಬಹುದೊಡ್ಡ ತಪ್ಪು ಇದಾಗಿತ್ತು. ಹೀಗೆ ಚಾಲೆಂಜ್ ಮಾಡಬಾರದಿತ್ತು ಅಂತ ಈಗ ಅನ್ನಿಸ್ತಿದೆ.. ಹೀಗೆ ಚಾಲೆಂಜ್ ಮಾಡಿದ್ದಕ್ಕೋ ಏನೋ ಕೊನೆಯವರೆಗೂ ಮೂರನೇ ಬೋರ್ಡ್ ಆಟಗಾರ ಸಮೀರ್ ಘೋಟ್ನೆಯನ್ನು ನನ್ನ ವಿರುದ್ಧ ಆಡಲಿಕ್ಕೆ ಬರದಂತೆ ನೋಡಿಕೊಂಡುಬಿಟ್ಟರು ಅವರು! ಕೊನೆಗೆ ಮಾತು ಹೊರಳಿತು.. ನಮ್ಮ ಕಿಟ್ಟುವಿನ ಆಟವನ್ನು ಹೊಗಳುತ್ತ ನಿಂತೆವು..
ಇಳಿ ಸಂಜೆಯ ವೇಳೆಯಲ್ಲಿ ಮಾಡಲಿಕ್ಕೆ ಏನೂ ಕೆಲಸ ಕಾಣಲಿಲ್ಲ.. ನಾನು, ಕಿಟ್ಟು ಕಾಲೇಜಿನ ಆವರಣದಲ್ಲಿ ಅಡ್ಡಾಡಲು ಆರಂಭಿಸಿದ್ದೆವು. ನಮ್ಮ ಜೊತೆಗೆ ತೃಪ್ತಿಯೂ ಸೇರಿಕೊಂಡಳು.. ಮಾತಿನಮಲ್ಲಿ ತೃಪ್ತಿ ಹಾಗೂ ಮಾತಿನಮಲ್ಲ ಕಿಟ್ಟು.. ನಡುವೆ ನಾನು ಸಿಕ್ಕಿ ಮೌನಿಯಾಗಿಬಿಟ್ಟೆ.. ಇಬ್ಬರೂ ಸಿಕ್ಕಾಪಟ್ಟೆ ಮಾತುಗಾರರು.. ಡೈಲಾಗ್ ರಾಜ-ರಾಣಿಯರು. ಮಾತಾಡಿ ನಾನು ಮಳ್ಳಾಗುವುದಕ್ಕಿಂತ ಸುಮ್ಮನಿರುವುದೇ ಲೇಸೆಂದು ತಂಡಾದೆ.. ನಾವು ಅಡ್ಡಾಡುತ್ತ ಅಡ್ಡಾಡುತ್ತ ಕಾಲೇಜು ಹೊರಗೆ ಹಾದುಹೋಗಿದ್ದ ರಸ್ತೆಯಲ್ಲಿ ನಡೆಯತೊಡಗಿದೆವು.. ರಸ್ತೆಯ ಇಕ್ಕೆಲಗಳಲ್ಲಿ ದೈತ್ಯ ಹುಣಸೇ ಮರಗಳು.. ರಸ್ತೆಯನ್ನು ತಂಪು ಮಾಡಿದ್ದವು.. ಮರದ ತುಂಬ ಹುಣಸೆ ಹಣ್ಣುಗಳು, ನಮ್ಮ ಪ್ರೀತಿಯ ಹುಣಸೆ ಬೊಟ್ಟುಗಳು.. ನಾವು ಮೂವರಿಗೂ ಆಸೆಯ ಚೌಳುನೀರು.. ಮರಕ್ಕೆ ಅದೆಷ್ಟು ಅಡ್ಡಬಡ್ತಿಗೆ ಹೊಡೆದೆವೂ.. ನಮ್ಮ ಬಡ್ತಿಗೆ ಹುಸಿಹೋಗಲಿಲ್ಲ.. ಹಲವು ಹುಣಸೆಬೊಟ್ಟುಗಳು ಸಿಕ್ಕವು.. ಬಿದ್ದ ಹುಣಸೆಬೊಟ್ಟನ್ನು ಬಾಯಿಗಿಟ್ಟರೆ ಹುಳಿ ಹುಳಿಯಾಗಿ ಒಂದು ಕಣ್ಣು ನಮ್ಮರಿವಿಗಿಲ್ಲದಂತೆ ಮುಚ್ಚಿ ಹೋಗಿ.. ಆಹಾ.. ಕೆಲವು ಹಣ್ಣುಗಳೂ ಸಿಕ್ಕವು ಅನ್ನಿ..
ರಾತ್ರಿ ನಮ್ಮ ಪಾಳಯದಲ್ಲಿ ಯುದ್ಧ ಗೆದ್ದ ಸಂಭ್ರಮ.. ಖುಷಿಯೋ ಖುಷಿ.. ನಮ್ಮ ಕಾಲೇಜಿಗೆ ಕುಮಟಾದ ಬಾಳಿಗಾ ಕಾಲೇಜಿನ ಹುಡುಗರು ಬಂದಿದ್ದರು. ಮಾತು-ಕಥೆ.. ಹರಟೆ ನಡೆಯಿತು.. ಪಾವಸ್ಕರ ಮತ್ತೆ ಯಥಾ ಪ್ರಕಾರ ಅವರಿಗೆ ದುಡ್ಡುಕೊಡಲು ನೋಡಿದ. ಅದಕ್ಕವರು `ನಾವು ಪ್ರೆಂಡ್ ಷಿಪ್ ಗಾಗಿ ಬಿಟ್ಟುಕೊಟ್ವಿ.. ದುಡ್ಡಿಗಾಗಿ ಅಲ್ಲ.. ಎಲ್ಲಕ್ಕಿಂತ ಹೆಚ್ಚಾಗಿ ನಾವಂತೂ ಯಾವುದೇ ಬಹುಮಾನ ಪಡೆಯಲು ಸಾಧ್ಯವಿರಲಿಲ್ಲ.. ನೀವು ನಮ್ಮ ಉತ್ತರ ಕನ್ನಡದವರು.. ನೀವು 2nd ಬಂದರೆ ನಮಗೆ ಅದೇ ಖುಷಿ.. ಅದಕ್ಕಾಗಿ ಇಷ್ಟೂ ಮಾಡದಿದ್ದರೆ ಹೆಂಗೆ..?' ಎಂದರು. ನಾನು ನವೀನನನ್ನು ಗದರಿಸಿ ಸುಮ್ಮನಿರಿಸಿದೆ.
ಊಟ ಮುಗಿಸಿದ ನಂತರ ಮತ್ತೆ ನಮ್ಮ ಪ್ರಾಕ್ಟೀಸ್ ಮ್ಯಾಚುಗಳು ಆರಂಭವಾದವು.. ಬಹುಶಃ ಇಲ್ಲಿಗೆ ನಮ್ಮ ಬ್ಯಾಟರಿಗಳು ಫುಲ್ಲಾಗಿದ್ದವು.ಅದಕ್ಕಾಗಿಯೇ ಇವತ್ತು ನಾನು ಹಾಗೂ ಕಿಟ್ಟು ನವೀನ ಹಾಗೂ ಆನಂದರ ವಿರುದ್ಧ ಮ್ಯಾಚುಗಳ ಮೇಲೆ ಮ್ಯಾಚುಗಳು ಎಂಬಂತೆ ಗೆಲ್ಲಲಾರಂಭಿಸಿದೆವು.. ಇಷ್ಟುದಿನ ಸೋತಿದ್ದೇ ಸುಳ್ಳು ಎನ್ನುವಂತೆ ಗೆದ್ದೆವು... ಗೆದ್ದ ಅಬ್ಬರ ಹೇಗಿತ್ತೆಂದರೆ ಇಷ್ಟು ದಿನ ಚಾಲೆಂಜಿನಲ್ಲಿ ಕಳೆದುಕೊಂಡಿದ್ದ ಹಣವೆಲ್ಲ ಮರಳಿ ಬಂದಿತ್ತು.. ಯಾವತ್ತೂ ಕಾಮೆಂಟ್ ಮಾಡದ ಆನಂದ `ಅರೇರೇ..ನವೀನ ಇದೆಂತ ಮಾರಾಯ ಇವ್ರು ಹಿಂಗೆ ಗೆಲ್ತಿದ್ದಾರೆ.. ಇವತ್ತಿನ ಮ್ಯಾಚಿನ ಎಫೆಕ್ಟಾ..? ಸಿಕ್ಕಾಪಟ್ಟೆ ಆಯ್ತು ಮಾರಾಯಾ..' ಎಂದ... ನನಗೂ ಹೌದೆನೋ ಅನ್ನಿಸಿತು.. ಈ ದಿನ ಖುಷಿಯಲ್ಲೇ ಎಲ್ಲರೂ ಮಲಗಿದೆವು..

20-09-2007, ಗುರುವಾರ
ನಾವು ಚೆಸ್ ಪಂದ್ಯಾವಳಿಗಳನ್ನು ಆಡಿದ ಸ್ಥಳ
ಇವತ್ತಿನಿಂದ  ಯೂನಿವರ್ಸಿಟಿ ಬ್ಲೂ ಸೆಲೆಕ್ಷನ್ ಮ್ಯಾಚುಗಳು ಆರಂಭ. ಅಂದರೆ ಇಲ್ಲಿಯವರೆಗೆ ಟೀಂ ಮ್ಯಾಚುಗಳಿದ್ದವು.. ಇನ್ನುಮುಂದೆ ನಮಗೆ ನಾವೇ.. ಗೋಡೆಗೆ ಮಣ್ಣೇ.. ಎನ್ನುವಂತಾಗಿದ್ದವು.. ತಲಾ 8 ಮ್ಯಾಚುಗಳ ಸೀರೀಸ್.. ಅತ್ಯಂತ ಹೆಚ್ಚು ಗೆದ್ದ 6 ಜನ ಯೂನಿವರ್ಸಿಟಿ ಬ್ಲೂಗಳಾಗುತ್ತಿದ್ದರು. ಅಂದರೆ ಈ 6 ಜನ ನಮ್ಮ ಕರ್ನಾಟಕ ಯುನಿವರ್ಸಿಟಿಯನ್ನು ಪ್ರತಿನಿಧಿಸಿ ಆಡುತ್ತಿದ್ದರು. ಉಳಿದಂತೆ 3 ಜನರನ್ನು ಕಾಯ್ದಿರಿಸಿದ ಆಟಗಾರನಾಗಿ ಆಯ್ಕೆಮಾಡುತ್ತಿದ್ದರು.. ಉಳಿದ ಯುನಿವರ್ಸಿಟಿಗಳಲ್ಲಿ ಕಾಯ್ದಿರಿಸಿದ ಆಟಗಾರರನ್ನು ಯೂನಿವರ್ಸಿಟಿ ಮ್ಯಾಚಿಗೆ ಕಳಿಸಿದ್ದರೂ ನಮ್ಮ ಯುನಿವರ್ಸಿಟಿಯಲ್ಲಿ ದುಡ್ಡು ಉಳಿಸುವ ಘನ ಕಾರ್ಯ ಇರುವುದರಿಂದ 6 ಜನಕ್ಕಿಂತ ಹೆಚ್ಚಿಗೆ ಜನರನ್ನು ಕಳಿಸುವುದಿಲ್ಲ ಬಿಡಿ.. ಈ ಸಾರಿಯ ನಮ್ಮ ಯೂನಿವರ್ಸಿಟಿ ಪಂಡ್ಯಾವಳಿಗಳು ಕಾನ್ಪುರದಲ್ಲಿ ನಡೆಯಲಿದ್ದವು.. ಅಲ್ಲಿಗೆ ಹೋಗಲು ತಯಾರಾಗಬೇಕು.. ಅದಕ್ಕೆ ತಕ್ಕಂತೆ ಆಡಬೇಕು ಎಂದು ನಾನು ಚಿಂತಿಸಿ ಆಡಲು ಯತ್ನಿಸಿದೆ..
ಏನಾಗುತ್ತೋ ಎಂಬ ಟೆನ್ಶನ್ ನಿಂದಲೇ ಆಟಕ್ಕೆ ಬಂದೆವು. ನನಗೆ ಪ್ರಾರಂಭದಲ್ಲಿಯೇ ದಿಲೀಪ್ ಹೆಗಡೆ ಎಂಬ ಕುಮಟಾ ಕಾಲೇಜಿನ ಹುಡುಗನೊಬ್ಬ ಎದುರಾಳಿಯಾಗಿ ಬಂದ. 10 ನಿಮಿಷದೊಳಗೆ ಅಂದರೆ 15 step (13)ನೊಳಗೆ ಆತನನ್ನು ಸೋಲಿಸಿ ಅತ್ಯಮೂಲ್ಯ ಎನ್ನಿಸಿದ 1 ಪಾಯಿಂಟು ಗಳಿಸಿದೆ. ಇಲ್ಲಿ ನಮ್ಮ ಕಾಲೇಜಿನ ಇತರ ಆಟಗಾರರು ಯಾರ್ಯಾರು ಗೆದ್ದರೋ, ಯಾರ್ಯಾರು ಸೋತರೋ ಒಂದೂ ಗೊತ್ತಾಗಲಿಲ್ಲ. ಹುಡುಗಿಯರೂ ಬ್ಲೂ ಸೆಲೆಕ್ಷನ್ನಿಗೆ ಆಡುತ್ತಿದ್ದರು. ಅವರಲ್ಲಿಯೂ ಒಂದಿಬ್ಬರು ಗೆದ್ದರು.
ನಂತರ ನನ್ನ ವಿರುದ್ಧ ಆಟಕ್ಕೆ ಅದ್ಯಾರೋ ಒಬ್ಬ ಪುಣ್ಯಾತ್ಮ ಬಿದ್ದಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಆಟಕ್ಕೂಮೊದಲು ನನಗೆ ಅದೇನೋ ನಿರಾಸಕ್ತಿ.. ಆಲಸ್ಯ.. ಜಾಢ್ಯ.. ಒಲ್ಲದ ಮನಸ್ಸಿನಿಂದ ಆಡಿದೆ. ಆ ಪುಣ್ಯಾತ್ಮ ಆಡಿದ... ಆಡಿದ.. ಆಡಿದ.. ಆಡಿಯೇ ಆಡಿದ.. ಅಬಾಬಾಬಾಬಾ.. 2 ತಾಸು ಕೂರಿಸಿಬಿಟ್ಟ. ನನ್ನ ಜಾಢ್ಯವೆಲ್ಲ ಕಳಚಿಬೀಳುವಂತೆ ಆಡಿದ.. ಆಡಿದ ಸ್ಟೆಪ್ಪುಗಳನ್ನೇ ಹಿಂದೆ ಮುಂದೆ.. ತಲೆಸಿಡಿದು ಹೋಗುವಂತೆ ಆಡಿದ.. ನನ್ನ ಬಲ ಜಾಸ್ತಿ ಉಳಿಯುವ ಹಂತ ಬಂದರೂ ಆಡುತ್ತಲೇ ಇದ್ದ.. ಕೊನೆಗೆ `ಕ್ಲಾಕ್' ಇಟ್ಟರು. ಕ್ಲಾಕ್ ನಲ್ಲಿ ನಾನು ಗೆದ್ದೆ.. ಮತ್ತೊಂದು ಪಾಯಿಂಟು ನನಗೆ ಸಿಕ್ಕು ನನ್ನ ಗಳಿಕೆ 2ಕ್ಕೆ ಏರಿತು.

ರಾಜೇಂದ್ರ ಬಾಬೂ
ಇದು ನನ್ನ 3ನೇ ಮ್ಯಾಚು. ಈ ರಾಜೇಂದ್ರ ಬಾಬು ಕಳೆದ ವರ್ಷ ಯುನಿವರ್ಸಿಟಿ ಬ್ಲೂ ಆದ ವ್ಯಕ್ತಿ. ಕಳೆದ ವರ್ಷ ರೇಟೆಡ್ ಪ್ಲೇಯರ್ ಎಂಬ ಬಿರುದನ್ನೂ ಪಡೆದುಕೊಂಡು ಬಂದಿದ್ದ. ಹಾಗಾಗಿ ಈ ವರ್ಷವೂ ಅದೇ ಭಯದೊಂದಿಗೆ ಆಡಲು ಕುಳಿತೆ. ಮ್ಯಾಚು ನಿಧಾನವಾಗಿ ರಂಗೇರಿತು. ಇಬ್ಬರೂ ಸಮಾನವಾಗಿ ಆಡಿದೆವು. ಕೊನೆಗೆ ಸುಮಾರು 2 ಗಂಟೆಗಳು ಕಳೆದವು.. ನಾನು ಡ್ರಾ ಮಾಡಿಕೊಳ್ಳೋಣ ಎಂದೆ.. ಆತ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಮತ್ತರ್ಧ ತಾಸಿನ ನಂತರ ಆತನೇ ಡ್ರಾ ಕೇಳಿದ. ನಾನು ಒಪ್ಪಿಕೊಂಡೆ. ನನ್ನ ಪಾಯಿಂಟು ಇಲ್ಲಿಗೆ 2.5 ಆಯಿತು. ಮುಂದೆ ಯಾರು ಬೀಳ್ತಾರಪ್ಪಾ ಎನ್ನುವ ಕುತೂಹಲಭರಿತ ಭಯದೊಂದಿಗೆ ಮುಂದಿನ match ಗೆ ಅನುವಾದೆ.

ಸಚಿನ್ ಸುಲ್ತಾನ್ ಪುರೆ
ಗೋಗಟೇ ಕಾಲೇಜಿನ ಯಾವುದಾದರೂ ಒಬ್ಬಾತ ನನ್ನ ವಿರುದ್ಧ ಬಿದ್ದೇ ಬೀಳುತ್ತಾರೆ ಎನ್ನುವ ನನ್ನ ಊಹೆ ನಿಜವಾಯಿತು. ನನ್ನ ವಿರುದ್ಧ ಬಿದ್ದವರು ಪಾವಸೆ ಅಲ್ಲ. ಚಿಂಚೋಳಿಮಠನೂ ಅಲ್ಲ.. ನಾನು ಚಾಲೇಂಜ್ ಮಾಡಿದ್ದ ಸಮೀರ ಘೋಟ್ನೆಯೂ ಅಲ್ಲ.. ಬದಲಾಗಿ ಬಿದ್ದವನು ಸಚಿನ್ ಸುಲ್ತಾನ್ ಪುರೆ.. ಕಿಟ್ಟುವಿನ ವಿರುದ್ಧ ಸೋತಿದ್ದ 4th board player.. ಕಿಟ್ಟು ಇವನನ್ನು ಸೋಲಿಸಿದ್ದ ಕಾರಣ ನಾನು ಇವನನ್ನು ಸೋಲಿಸಬಹುದೇನೋ ಅಂದುಕೊಂಡೆ. ಚನ್ನಾಗಿಯೇ ಆಡಿದ. ಅವನೊಂದಿಗೆ ನಾನೂ ಅಷ್ಟೇ ಸರಿಸಮನಾಗಿ ಆಡಿದೆ. ಆಟ ಯಥಾಪ್ರಕಾರ ಡ್ರಾ ಕಡೆಗೆ ಸಾಗುತ್ತಿತ್ತು.
ಆದರೆ ಆಟದಲ್ಲಿ ಇದ್ದಕ್ಕಿದ್ದಂತೆ ಒಂದು ತಿರುವು ಬಂದುಬಿಟ್ಟಿತು. ಅಂತಿಂತ ತಿರುವಲ್ಲ ಅದು ಅಬ್ಬರದ ತಿರುವು.. touch and move ಅನ್ನುವ ನಿಯಮವಿರುವ ನಮ್ಮ ಆಟದಲ್ಲಿ ಆತ ಕುದುರೆಯೊಂದನ್ನು move ಮಾಡಿದ. ಥಟ್ಟನೆ ಇಟ್ಟ. ಇಟ್ಟ ತಕ್ಷಣ ಅದನ್ನು ವಾಪಾಸು ಇಟ್ಟ. ನಾನು ಹಳೆಯ ಸಿಟ್ಟನ್ನೆಲ್ಲ ನೆನಪು ಮಾಡಿಕೊಂಡು ಗಲಾಟೆ ತೆಗೆದೆ. ಆಗ ಆಗ ಆಗ ಆತ ` ಇದು ಕೈತಪ್ಪಿ ಬಿದ್ದು ಹೋಯಿತು.. ಹಾಗೆ.. ಹೀಗೆ ' ಎಂದ.. ನಾನು ಪಟ್ಟು ಬಿಡಲಿಲ್ಲ. ಹೀಗೆ ಪಟ್ಟು ಹಿಡಿಯಲು ಕಾರಣವೂ ಇತ್ತೆನ್ನಿ.. ಬೇರೆ ಯಾವುದೇ ಕಾಲೇಜಿನ ಹುಡುಗರು ಹೀಗೆ ತಪ್ಪು move ಮಾಡಿದರೆ ಅವರನ್ನು ಸೋತರು ಎಂದು ಪರಿಗಣಿಸಲಾಗುತ್ತಿತ್ತು. ಗೋಗಟೆ ಕಾಲೇಜಿನವರು ಇದೇ ತಂತ್ರ ಅನುಸರಿಸಿ ಅನೇಕರನ್ನು ಸೋಲಿಸಿಯೂ ಇದ್ದರು. ಅಲ್ಲದೇ ಅವರ ಕಾಲೇಜಿನ ಲೆಕ್ಚರ್ರೇ ನಿರ್ಣಾಯಕರು ನೋಡಿ. ಅದೇ ಕಾರಣಕ್ಕೆ ನಾನು ಪಟ್ಟು ಹಿಡಿದೆ.. ಅವರು ಏನು ತೀರ್ಪು ನೀಡುತ್ತಾರೋ ಅದನ್ನು ನೋಡಬೇಕಿತ್ತು. ಎಲ್ಲದರ ಜೊತೆಗೆ ನನಗೆ ಆ ಗೋಗಟೆ ಕಾಲೇಜಿನ ಹುಡುಗರ ವಿರುದ್ಧ ಸೇಡನ್ನು ತೀರಿಕೊಳ್ಳಬೇಕಿತ್ತು. ಅವಮಾನ ಮಾಡಬೇಕಿತ್ತು. ತಪ್ಪನ್ನು ನೀವೂ ಮಾಡ್ತೀರಿ ಕಣ್ರೋ.. ಎಂದು ಹೇಳಬೇಕಿತ್ತು. ಇದರ ಜೊತೆಗೆ ಉಳಿದ ಎಲ್ಲಾ ಕಾಲೇಜಿನ ಹುಡುಗರ ಒಲವು ನನ್ನ ಕಡೆಗಿತ್ತು. ನಾನೂ ತಿರುಗಿ ಬೀಳುತ್ತೇನೆ. ಅದು ಗೋಗಟೆ ಕಾಲೇಜಾದರೂ ಸೈ ಎಂದು ತೋರಿಸಿಕೊಡಬೇಕಿತ್ತು.
ಪಟ್ಟು ಗಟ್ಟಿ ಮಾಡಿದೆ. ಗೋಗಟೆ ಕಾಲೇಜಿನ ಉಳಿದ ಹುಡುಗರು ಆ ಪಾಪದ ಹುಡುಗನ ಸಪೋರ್ಟಿಗೆ ಬರಲೇ ಇಲ್ಲ..!! ಆದರೆ ನನಗೆ ಉಳಿದ ಎಲ್ಲಾ ಕಾಲೇಜುಗಳ ಹುಡುಗರೂ ಸಪೋರ್ಟಿಗೆ ನಿಂತುಬಿಟ್ಟಿದ್ದರು. ಕೊನೆಗೆ ನಿರ್ಣಾಯಕರಿಗೂ ಇದು ಪೇಚಿಗೆ ತಂದಿತಿರಬೇಕು. ನನಗೇ ಗೆಲುವನ್ನು ಘೋಷಿಸಿದರು. ನಾನು ಗೆದ್ದೆ.. ಆದರೆ ಈ ಗೆಲುವುದು ಖಂಡಿತ ನನಗೆ ಖುಷಿಯನ್ನು ನೀಡಲಿಲ್ಲ. ಇದಕ್ಕೆ ಕಾರಣಗಳು ಹಲವಿದ್ದವು. ಆಟ ಆಡುತ್ತ ಆಡುತ್ತಲೇ ಆ ಸಚಿನ್ ನನಗೆ ದೋಸ್ತನಾಗಿದ್ದ.. ಆತನಿಗೆ  ಸಮೀರ್ ಘೋಟ್ನೆಯಂತೆ, ಸಾಗರ್ ಚಿಂಚೋಳಿಮಠನಂತೆ, ಅನಿಕೇತನ್ ಪಾವಸೆಯಂತೆ ನಾನೇ great ಅನ್ನುವ ಹೆಮ್ಮೆಯಿರಲಿಲ್ಲ. ಆತ ಎಲ್ಲರ ಜೊತೆಗೂ ಬೆರೆಯುತ್ತಿದ್ದ. ಖುಷಿಯಿಂದ ಮಾತನ್ನು ಆಡುತ್ತಿದ್ದ.. ಜೊತೆಯಲ್ಲಿ ಆತ ಪಾಪದ ಪರದೇಶಿಯಾಗಿದ್ದ. ಹೀಗಾಗಿ ನನಗೆ ಖುಷಿಯ ಬದಲು ಬೇಸರವೇ ಆಯ್ತೆನ್ನಿ..
ಈ ಭೀಖರ ಗೆಲುವಿನಿಂದ ನನ್ನ ಪಾಯಿಂಟು 4 ಮ್ಯಾಚಿನಿಂದ 3.5 ಆಯಿತು. ಇದರ ಜೊತೆಗೆ ನಾಳೆ ಹೇಗೋ ಏನೋ ಎನ್ನುವ ಶೂನ್ಯಾಲೋಚನೆಯೂ ನನ್ನನ್ನು ಕಾಡಿತು.

(ಮುಂದುವರಿಯುವುದು..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಭಯದ ನೆರಳಲ್ಲಿ ತೀರ್ಥಂಕರನ ಜೊತೆ, ಹಲ್ಕಟ್ ನಾಗರಾಜ..)

Tuesday, November 26, 2013

ನಾಡು ನುಡಿಯ ಜೊತೆಗೆ ಪ್ರೀತಿ (ಪ್ರೇಮಪತ್ರ-8)

ಇದು ನಮ್ಮ ಕರ್ನಾಟಕದ ನಾಡು ನುಡಿಯ ಕುರಿತು ಗೆಳೆಯನೊಬ್ಬ ತನ್ನ ಗೆಳತಿಗೆ ಬರೆಯುವ ಪತ್ರ. ಬಹುಕಾಲದಿಂದ ಪತ್ರ ಬರೆಯದಿದ್ದ ಆತ ಕೊನೆಗೊಮ್ಮೆ ಆಕೆಗೆ ಪತ್ರ ಬರೆದಾಗ ಅದರಲ್ಲಿ ಯಾವರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ? ಯಾವ ವಿಷಯಗಳನ್ನು ಬಳಕೆ ಮಾಡುತ್ತಾನೆ ಎಂಬುದು ಈ ಪತ್ರದಲ್ಲಿದೆ.

ಆತ್ಮೀಯ ಗೆಳತಿ,
ಪ್ರೀತಿ
ಬಹು ದಿನಗಳಾಗಿದ್ದವಲ್ಲ ಪತ್ರ ಬರೆಯದೇ. ಹಾಳಾದ ಕೆಲಸದ ಒತ್ತಡಗಳ ನಡುವೆ ಪತ್ರವನ್ನು ಬರೆಯುವ ಸಂಸ್ಕೃತಿಯೇ ಮರೆತು ಹೋಗಿದೆ. ಅದರ ಜೊತೆ ಮೊಬೈಲ್ ಮೇನಿಯಾ, ಇಂಟರ್ನೆಟ್ ಹಾವಳಿ ಇವುಗಳಿಂದಲೂ ಪತ್ರ ಬರೆಯುವ ಬಗೆ ಕಾಣದಾಗುತ್ತಿದೆ. ಎಂತಹ ದುರಂತ ಅಲ್ವಾ? ಹೋಗ್ಲಿ ಬಿಡು.. ಎಷ್ಟೇ ಕಾಲ ಮುಂದುವರಿದರೂ, ಯಾವುದೇ ರೀತಿಯ ತಂತ್ರಜ್ಞಾನಗಳು ಬಂದರೂ ನಾವು ಮಾತ್ರ ಪತ್ರಗಳಲ್ಲಿಯೇ ಮಾತಾಡೋಣ. ಆಗಬಹುದಲ್ವಾ?
ನಿನಗೆ ಈ ಸಾರಿ ನಮ್ಮ ಕನ್ನಡ ನಾಡು ಹಾಗೂ ನಿಡುಯ ಬಗ್ಗೆ ಹೇಳಬೇಕು ಅಂದುಕೊಮಡಿದ್ದೇನೆ. ಬಹುದಿನಗಳಿಂದ ನಮ್ಮ ನಾಡು ನುಡಿಗಳ ಕುರಿತು ಅದೆಷ್ಟೋ ಭಾವನೆಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿದೆ. ಎಂತಹ ನಾಡು ನಮ್ಮದು? ಅದೆಷ್ಟು ವರ್ಷಗಳ ಬವ್ಯ ಇತಿಹಾಸ ನಮ್ಮದು? ಒಮ್ಮೆ ಮೆಲುಕು ಹಾಕಿದರೆ ಮೈಮನಸ್ಸು ರೋಮಾಂಚಿತಗೊಳ್ಳುತ್ತದೆ.
ಕರುನಾಡು. ಈ ಶಬ್ದವೇ ಅದೆಷ್ಟು ಆಪ್ತವಲ್ಲವಾ? ಕನ್ನಡ ನಾಡನ್ನು ಆಪ್ತವಾಗಿ ಕರುನಾಡು ಎನ್ನುತ್ತಾರೆ. ಕರು ನಾಡು ಎಂದರೆ ಕರುಣೆಯ ನಾಡು. ಎಲ್ಲರ ಪಾಲಿಗೆ ಪ್ರೀತಿಯ ಬೀಡು. ಇದಕ್ಕಾಗಿಯೇ ಅದೆಷ್ಟೋ ಮಂದಿ ಕನ್ನಡ ನಾಡಿಗೆ ವಲಸೆ ಬಂದು ಇಲ್ಲಿ ಸುಖ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ.
ನಮ್ಮ ಕನ್ನಡ ನಾಡಿಗೆ ಸಹಸ್ರಾರರು ವರ್ಷಗಳ ಇತಿಹಾಸವೇ ಇದೆ. ಎಷ್ಟು ಹಿಂದೆ ಅಂದರೆ ವೇದಗಳ ಕಾಲಕ್ಕೇ ನಾವು ಹೋಗಬೇಕು. ಆಗ ನಮ್ಮ ನಾಡನ್ನು ಕುಂತಲ ನಾಡು ಎಂದು ಕರೆಯುತ್ತಿದ್ದರು. ಕುಂತಲ ಎಂದರೆ ಮೇಲ್ಭಾಗದವನು ಎಂದರ್ಥ. ಅಂದರೆ ಇಡಿಯ ದಕ್ಷಿಣ ಭಾರತದಲ್ಲಿಯೇ ನಮ್ಮ ಕನರ್ಾಟಕ ಅತ್ಯಂತ ಎತ್ತರದ ಪ್ರದೇಶ. ಹಾಗಾಗಿಯೇ ದಕ್ಷಿಣ ಭಾರತದ ಎಲ್ಲ ಜೀವ ದಾಯಿ ನದಿಗಳು ನಮ್ಮಲ್ಲಿಯೇ ಹುಟ್ಟಿ ಇತರ ರಾಜ್ಯಗಳ ಕಡೆಗೆ ಹರಿದುಹೋಗುತ್ತವೆ. ಆಂಧ್ರದ ಜೀವನದಿಗಳಾದ ಕೃಷ್ಣ, ತುಂಗಭದ್ರ, ತಮಿಳುನಾಡಿನ ಜೀವನದಿಯಾದ ಕಾವೇರಿ, ಗೋವಾದ ಜೀವನದಿ ಮಾಂಡೋವಿ ಈ ನದಿಗಳ ತವರು ಭೂಮಿ ನಮ್ಮದು.
ರಾಮಾಯಣ ಕಾಲದಲ್ಲಿ ರಾಮ ವನವಾಸಕ್ಕೆ ಬಂದಾಗ ನಮ್ಮ ಹಂಪಿಯ ಬಳಿಯೇ ಆತ ಸೀತೆಯನ್ನು ಕಳೆದುಕೊಂಡಿದ್ದು. ಕಡೆಗೆ ಇಲ್ಲಿಯೇ ಆತ ಹನುಮನನ್ನು ಭೇಟಿಯಾದದ್ದು. ವಾಲಿಯನ್ನು ಕೊಂದದ್ದು. ಆಗ ಈ ಪ್ರದೇಶಕ್ಕೆ ಕಿಷ್ಕಿಂದೆ ಎನ್ನುತ್ತಿದ್ದರು. ಕಡೆಗೆ ಅದು ಹಂಪೆಯಾಯಿತು. ಭವ್ಯ ಇತಿಹಾಸಕ್ಕೆ ಸಾಕ್ಷಿಯಾಯಿತು.
ಪ್ರೀತಿಯ ಗೆಳತಿ.,
ಕನರ್ಾಟಕದ ಕುರಿತು ಇಷ್ಟನ್ನು ಹೇಳಿದರೆ ಸಾಧ್ಯವಾಗುವುದಿಲ್ಲ. ಈ ಕನ್ನಡ ನಾಡು ಇತಿಹಾಸದ ಪ್ರಕಾರ ಗೋದಾವರಿ ನದಿಯವರೆಗೆ ಹಬ್ಬಿತ್ತು ಎಂಬ ದಾಖಲೆಗಳೂ ಇವೆ. ಈಗ ಆ ಗಾತ್ರವನ್ನು ಕಾಲಕ್ಕೆ ತಕ್ಕಂತೆ ಕಳೆದುಕೊಂಡಿದೆ. ನಮ್ಮಲ್ಲಿ ಆಳಿದ ರಾಜರಾದರೂ ಎಂಥವರು? ಕದಂಬರ ಮಯೂರ, ಹೊಯ್ಸಳರ ವಿಷ್ನುವರ್ಧನ, ವಿಜನಗರದ ಕೃಷ್ಣದೇವರಾಯ, ಟಿಪ್ಪು, ಹೈದರಾಲಿ, ಮೈಸೂರು ಅರಸರು ಒಬ್ಬರೇ ಇಬ್ಬರೇ.. ಇಲ್ಲಿನ ಚಿಕ್ಕಪುಟ್ಟ ರಾಜರುಗಳೂ ಶೌರ್ಯದ ಖನಿಯೇ ಆಗಿದ್ದರು. ಇನ್ನೂ ವಿಶೇಷ ಎಂದರೆ ವಿಜಯನಗರದ ಅರಸರ ಕಾಲದಲ್ಲಿ ಹಂಪಿಯ ಬೀದಿ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಬಹುಷ್ಯ ಇಷ್ಟು ಶ್ರೀಮಂತ ರಾಜ್ಯ ಆ ಕಾಲದಲ್ಲಿ ವಿಶ್ವದ ಇತರ ಯಾವುದೇ ಭಾಗಗಳಲ್ಲಿಯೂ ಇರಲಿಲ್ಲ.
ಇದಕ್ಕಾಗಿಯೇ ಇರಬೇಕು ನಮ್ಮ ಕರುನಾಡನ್ನು ಕವಿ ವರ್ಯರು ಹಾಡಿ ಹೊಗಳಿದ್ದು. ನಮ್ಮ ರಾಷ್ಟ್ರಕವಿ ಕುವೆಂಪು ತಮ್ಮ ನಾಡಗೀತೆಯಲ್ಲಿ ಹೇಳಿತ್ತಾರೆ,.
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ..
ಅಂದರೆ ಭಾರತ ಮಾತೆಯ ಪ್ರೀತಿಯ ಮಗಳಾದ ಕನಾಟಕವೇ ನಿನಗಿದೋ ಕೋಟಿ ನಮಸ್ಕಾರ ಅಂತ.
ಅವರು ಮುಂದುವರಿದು ಹೇಳುತ್ತಾರೆ, ಕನರ್ಾಟಕದಲ್ಲಿ ಇಲ್ಲದ ಜಾತಿಗಳಿಲ್ಲ. ಆಳದ ಅರಸರಿಲ್ಲ. ಇದು ಸರ್ವಜನಾಂಗದ ಶಾಂತಿಯ ತೋಟ. ಬಯಸಿ, ಆಶ್ರಯದಾತರಾಗಿ ಬಂದವರಿಗೆ ಈ ರಾಜ್ಯ ಇಲ್ಲ ಎಂದಿಲ್ಲ.
ನಮ್ಮ ರಾಜ್ಯ ಈ ಹಿಂದೆ ತಮಿಳುನಾಡಿನಿಂದ ಬಂದ ರಾಮಾನುಜಾಚಾರ್ಯರಿಗೆ, ಮರಾಠಾ ಅರಸು ಶಿವಾಜಿಯ ಮಗ ಬಾಜೀರಾಯ ಹೀಗೆ ಹಲವರಿಗೆ ಆಶ್ರಯ ಕೊಟ್ಟಿತ್ತು. ಈಗಲೂ ಅಷ್ಟೇ ಟಿಬೆಟ್ನ ಸಾವಿರಾರು ನಿರಾಶ್ರಿತರಿಗೆ, ಅಸ್ಸಾಂನ, ಗೋಖರ್ಾಲ್ಯಂಡ್ಗಳ ಜನರಿಗೆ ಉದ್ಯೋಗ ಆಶ್ರಯ ಎರಡನ್ನೂ ನೀಡುತ್ತ ಬಂದಿದೆ.
ಕನ್ನಡ ನಾಡಿನ ಇತಿಹಾಸಗಳು ಇನ್ನೂ ಇವೆ ಗೆಳತಿ. ಇದರ ವಿಶೇಷತೆಗಳ ಬಗೆಗೆ ನಿನಗೆ ಕೊಂಚ ಹೇಳಲೇ ಬೇಕು. ಕನ್ನಡ ನಾಡಿನ ಕವಿಗಳಿಗೆ ಇದುವರೆಗೂ 8 ಜ್ಞಾನಪೀಠಗಳು ಬಂದಿವೆ. ಭಾರತದ ಉಳಿದ ಯಾವುದೇ ಭಾಷೆಗೆ ಇಷ್ಟು ಜ್ಞಾನಪಿಠ ಪ್ರಶಸ್ತಿಗಳು ಬಂದಿಲ್ಲ. ಎಂಥ ಹೆಮ್ಮೆಯ ಸಂಗತಿ ಅಲ್ವಾ?
ಸರ್. ಸಿವಿ ರಾಮನ್, ನಿಕೋಲಾಯ್ ರೋರಿಚ್, ದೇವಿಕಾ ರಾಣಿ, ಮನ್ನಾ ಡೇ ಮುಂತಾದ ಮಹಾನ್ ಸಾಧಕರ ಕರ್ಮ ಭೂಮಿ ಇದು. ಬೇರೆ ರಾಜ್ಯಗಳವರು ಇವರು. ಆದರೂ ಕನ್ನಡ ನಾಡಿನಲ್ಲಿ ತಮ್ಮ ಸಾಧನೆಗಳನ್ನು ಮಾಡಿ ಮೆರೆದಿದ್ದಾರೆ.
ಕನ್ನಡ ನಾಡು ಅಂದಕೂಡಲೇ ಮೊಟ್ಟಮೊದಲು ನೆನಪಿಗೆ ಬರುವಂತದ್ದೆಂದರೆ ಜೋಗಜಲಪಾತ. ಕನರ್ಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಜೋಗ ಜಲಪಾತದ ಸೌಂದರ್ಯವನ್ನು ಆಸ್ವಾದಿಸುವುದೇ ಒಂದು ಹೆಮ್ಮೆ. ನಾಲ್ಕು ಕವಲಾಗಿ 960 ಅಡಿಗೊ ಹೆಚ್ಚು ಆಳಕ್ಕೆ ಧುಮುಕುವ ಈ ಜಲಪಾತ ಮಳೆಗಾಲದಲ್ಲಿ ತನ್ನ ಸಂದರ್ಯವನ್ನು ನೂರ್ಮಡಿಗೊಳಿಸಿಕೊಳ್ಳುತ್ತದೆ. ಆಗ ಎಲ್ಲೆಲ್ಲಿಂದ ಜನರು ಬರ್ತಾರೆ ಗೊತ್ತಾ? ವಿದೇಶಗಳ ಜನರೂ ಬಂದು ಹೋಗ್ತಾರೆ. ಇದನ್ನು ಭಾರತದ ನಯಾಗರಾ ಎಂದು ಕರೆಯುತ್ತಾರೆ.
ಇಷ್ಟೇ ಅಲ್ಲ ನಮ್ಮ ರಾಜ್ಯದಲ್ಲಿ 280ಕ್ಕೂ ಹೆಚ್ಚಿನ ಜಲಪಾತಗಳಿವೆ. ಇದೊಂದು ದಾಖಲೆಯೇ ಹೌದು. ರಾಜ್ಯದ ಪಶ್ಚಿಮ ಭಾಗದಲ್ಲಿ ಹಾದುಹೋಗಿರುವ ಸಹ್ಯಾದ್ರಿ ಪರ್ವತ ಶ್ರೇಣಿ ವಿಶ್ವ ಪರಂಪರೆಯ ತಾಣವಾಗಿ ಸೇರ್ಪಡೆಗೊಂಡಿದೆ. ಇಲ್ಲಿ ಕನಿಷ್ಟ 80ಕ್ಕೂ ಹೆಚ್ಚಿನ ಅಭಯಾರಣ್ಯಗಳು ಮತ್ತು ರಕ್ಷಿತಾರಣ್ಯಗಳಿವೆ. ಇದರೊಳಗಿನ ಜೀವಿ ಸಂಕುಲಗಳು ಅದೆಷ್ಟೋ ಲಕ್ಷ, ಅವುಗಳನ್ನು ಲೆಕ್ಕ ಹಾಕುವುದು ಕಷ್ಟ.
ಇದಕ್ಕಾಗಿಯೇ ಕವಿ ನಿಸಾರ ಅಹಮದರು ಹೇಳುತ್ತಾರೆ,
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾಧ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ...!!
ಎಂತಹ ಅರ್ಥಪೂರ್ಣ ಸಾಲುಗಳಲ್ಲವಾ? ಕೆಲವೇ ಶಬ್ದಗಳಲ್ಲಿ ಕನ್ನಡನಾಡನ್ನು ಕಟ್ಟಿಕೊಡುವ ಕವಿವಾಣಿಗೆ ಅದೆಷ್ಟು ನಮನಗಳನ್ನು ಹೆಳಿದರೂ ಸಾಲದು.
ಕರುನಾಡು ಎಂದ ತಕ್ಷಣ ನಾನು ನಿನಗೆ ಕನ್ನಡ ನಾಡಿನ ಪ್ರಮುಖ ಭಾಗವಾದ ಕೊಡಗಿನ ಬಗ್ಗೆ ಹೇಳಲೇಬೇಕು. ವಿಶಿಷ್ಟ ಸಂಸ್ಕೃತಿ, ವಿಭಿನ್ನ ಮನಸ್ಥಿತಿಯ ಕೊಡವರು ಅಪಾರ ದೇಶಪ್ರೇಮಿಗಳು. ಇಲ್ಲಿನ ಪ್ರತಿ ಮನೆಯ, ಪ್ರತಿ ಕುಟುಂಬದ ಒಬ್ಬ ವ್ಯಕ್ತಿ ಭಾರತದ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅದು ಅವರಿಗೆ ಹೆಮ್ಮೆ. ಅಷ್ಟೇ ಅಲ್ಲ ಇವರು ಹಾಕಿ ಆಟದ ಪ್ರಿಯರು. ಈ ಪ್ರದೇಶಕ್ಕೆ ಕನರ್ಾಟಕದ ಕಾಶ್ಮೀರ ಎನ್ನುತ್ತಾರೆ. ಕನ್ನಡನಾಡಿನ ಅತ್ಯಂತ ಹಸಿರು ಹಸಿರಾದ ಜಿಲ್ಲೆ ಇದು ಎಂದು ಖ್ಯಾತಿ ಪಡೆದಿದೆ.
ಇನ್ನು ಇಲ್ಲಿಯ ಉತ್ತರಕನ್ನಡ ಜಿಲ್ಲೆಯ ಬಗ್ಗೆ ಹೇಳಲೇ ಬೆಕು. ಇದೂ ಸಹ ಅತ್ಯಂತ ಹೆಚ್ಚು ಕಾಡನ್ನು ಹೊಂದಿರುವ ದೇಶದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ಭತ್ತ, ಕಬ್ಬು, ಅಡಿಕೆ ಕಾಳುಮೆಣಸು, ಏಲಕ್ಕಿ, ಲವಂಗ, ವೆನಿಲ್ಲಾ, ಹತ್ತಿ ಈ ಮುಂತಾದವುಗಳು ಇಲ್ಲಿನ ಪ್ರಮುಖ ಬೆಳೆಗಳು. ಇದರಿಮದಾಗಿಯೇ ಈ ಪ್ರದೆಶವನ್ನು ಸಂಬಾರ ಪದಾರ್ಥಗಳ ರಾಣಿ ಎಂದು ಕರೆಯುತ್ತಾರೆ.
ಕನರ್ಾಟಕದಲ್ಲಿ ನೋಡುವಂತಹ ಸ್ಥಳಗಳ:ಉ ಸಾಕಷ್ಟಿವೆ. ಪೌರಾಣಿಕವಾಗಿ, ಐತಿಹಾಸಿಕವಾಗಿ, ಪ್ರಾವೋಸೋದ್ಯಮದ ದೃಷ್ಟಿಯಿಂದ, ತಂತ್ರಜ್ಞಾನದ ಕಾರಣದಿಮದ ನೂರಾರು ಪ್ರದೇಶಗಳನ್ನು ಹೆಸರಿಸಬಹುದು. ಪುರಾಣ ಪ್ರಸಿದ್ಧ ಗೋಕರ್ಣ, ನಿತ್ಯ ದಾಸೋಹದ ಧರ್ಮಸ್ಥಳ, ಕುಕ್ಕೆ, ಬಸವನ ಬಾಗೇವಾಡಿ, ಚಾಮುಂಡಿ ಬೆಟ್ಟ, ಕೊಲ್ಲೂರು, ಶಂಕರಾಚಾರ್ಯರ ಜ್ಞಾನವ್ಯಾಪಿ ಸ್ಥಳ ಶೃಂಗೇರಿ ಹೀಗೆ ನೂರಾರು ಸ್ಥಳಗಳಿದ್ದರೆ, ಮೋಹಿನಿ ಭಸ್ಮಾಸುರನ ಸಾವಿ ಕಾರಣವಾಗಿದೆ ಎಂಬ ಪ್ರತೀತಿಯನ್ನು ಸಾರುವ ಯಾಣ, ರೇಣುಕಾ ದೇವಿಯ ಚಂದ್ರಗುತ್ತಿ, ಭೀಮ ನಿದ್ರಿಸಿದ್ದ ಎನ್ನುವ ಭೀಮನವಾರೆ ಗುಡ್ಡ, ಹನುಮ, ವಾಲಿ ಸುಗ್ರೀವರ ನಾಡು ಹಂಪಿ, ಮಹಿಷಾಸುರನ ಸಂಹಾರಸ್ಥಳ ಮೈಸೂರು. ಹೀಗೆ ಲೆಕ್ಕ ಹಾಕಿದರೆ ಒಂದೆರಡಕ್ಕೆ ನಿಲ್ಲುವುದಿಲ್ಲ.
ಜೋಗ ಜಲಪಾತ, ಸಾತೊಡ್ಡಿ ಜಲಪಾತ, ಉಂಚಳ್ಳಿ ಜಲಪಾತ, ಅಬ್ಬಿ ಜಲಪಾತ, ಗಗನ ಚುಕ್ಕಿ, ಭರಚುಕ್ಕಿ, ಕಲ್ಲತ್ತಗಿರಿ ಜಲಪಾತ, ಮಾಗೋಡು ಜಲಪಾತ ಹೀಗೆ ಅದೆಷ್ಟೋ ಬಗೆಯ ಜಲಪಾತಗಳು ಇಲ್ಲಿವೆ. ವಿಶ್ವದಲ್ಲೇ ಹೆಸರಾದ ಸಾಫ್ಟ್ವೇರ್ ತಂತ್ರಜ್ಞಾನದಿಮದ ಜಗತ್ತನ್ನೇ ಕೈಬೀಸಿ ಕರೆಯುವ ಬೆಂಗಳೂರು ಮಹಾನಗರಿ ನಮ್ಮ ರಾಜ್ಯದ ರಾಜಧಾನಿ. ಈ ನಗರಿಯಲ್ಲಿ ಇಲ್ಲ ಎನ್ನುವುದೇ ಇಲ್ಲ. ರಾಷ್ಟ್ರದ, ವಿದೇಶಗಳ ಬಹು ವಿದಧ ಜನರು ಇಲ್ಲಿ ಸಿಗುತ್ತಾರೆ. ಈ ನಗರಿಯ ಅರ್ಧಕ್ಕಿಂತ ಹೆಚ್ಚಿನ ಭಾಗದ ಜನರು ಇತರ ಪ್ರದೇಶಗಳಿಂದ ವಲಸೆ ಬಂದು ಉಳಿದವರೇ ಆಗಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿಗಳಲ್ಲಿ ಒಂದು.
ಅದಕ್ಕೆ ಕವಿ ಹಂಸಲೇಖ ತಮ್ಮ ಗೀತೆಯೊಮದರಲ್ಲಿ ಹೇಳುತ್ತಾರೆ,
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.
ಮೆಟ್ಟಿದರೆ ಕನ್ನಡ ನಾಡಿನಲ್ಲಿ ಮೆಟ್ಟ ಬೇಕು ಎಂದು.
ಡಾ. ರಾಜ್ ಕುಮಾರ್ ಇಲ್ಲಿನ ಚಿತ್ರರಂಗದ ಮೇರು ಶಿಖರ. ಮಹಾನ್ ನಟ. ಜೊತೆಗೆ ಶಂಕರ್ ನಾಗ್ ವಿದೇಶಗಳಲ್ಲಿಯೂ ಹೆಸರು ಮಾಡಿದ ಪ್ರತಿಭಾ ಶಾಲಿ ನಟ. ಇದೀಗ ಅಂತಹ ಪ್ರತಿಭಾವಂತ ನಟರುಗಳ ದಂಡೇ ಕನ್ನಡ ಜಿತ್ರರಂಗದಲ್ಲಿದೆ ಎನ್ನುವುದು ಹೆಮ್ಮೆಯ ಸಂಗತಿ.

ಗೆಳಿತಿ,
ನಮ್ಮ ನಾಡಿನ ಅತಿಥಿಸತ್ಕಾರದ ಬಗ್ಗೆ ನಿನಗೆ ಹೆಳಲೇ ಬೇಕು. ಹಸಿದು ಬಂದವರಿಗೆ ಇಲ್ಲ ಎಂದು ಗೊತ್ತಿಲ್ಲದ ಮುಗ್ಧ ಜನರ ನಾಡು ನಮ್ಮದು. ಎಂತಹ ಬಿಸಿಲಿನಲ್ಲಿ ಬಸವಳಿದು ಬಂದ ಜನರಿರಲಿ, ಆತ ಅದೆಷ್ಟೇ ಅಪರಿಚಿತನಿರಲಿ ಅಥವಾ ಶತ್ರುವೇ ಆಗಿರಲಿ ಆತನಿಗೆ ನಮ್ಮ ನಾಡಿನ ಜನರು ತಂಪಾದ ಮಜ್ಜಿಗೆ ತಂಬುಳಿ, ಬೆಲ್ಲ-ನೀರು, ಯಳ್ಳು ತಂಪುಗಳನ್ನು ಕೊಟ್ಟು ಸತ್ಕರಿಸುತ್ತಾರೆ. ಅಲ್ಲದೆ ಆತನಿಗೆ ಊಟ ಹಾಕಿ ಸಂತೃಪ್ತಿಯಿಂದ ಕಳಿಸುತ್ತಾರೆ. ಹಾಗೆ ಸತ್ಕಾರ ಮಾಡದಿದ್ದರೆ ಅವರ ಮನಸ್ಸಿಗೆ ಏನೋ ಕಸಿವಿಸಿ. ನಿನಗೂ ಸಹ ಹಲವು ಬಾರಿ ಹೀಗೆಯೇ ಆಗಿರಬೇಕು ಅಲ್ಲವಾ?
ಆದರೆ ದುರಂತ ನೋಡು ಗೆಳತಿ, ಕಾಲ ಎಂಬುದು ಎಂತವರನ್ನು ಎಂತಹ ಪ್ರದೇಶ ಬದಿಲಿಸಿ ಬಿಡುತ್ತದಲ್ಲ..
ನಮ್ಮ ನಾಡಿನಲ್ಲಿ ಸಮಸ್ಯೆಗಳೂ ಹಾಗೇಯೇ ತುಂಬಿ ತುಳುಕಲಾರಂಭಿಸಿವೆ.
ಗಣಿಗಾರಿಕೆ, ಪ್ರಾಣಿ ಭೇಟೆ, ಭೃಷ್ಟ ರಾಜಕಾರಣಿಗಳು, ವಲಸಿಗರ ಹಾವಳಿ, ನಕ್ಸಲ್ ಸಮಸ್ಯೆ ಇವುಗಳೆಲ್ಲ ರಾಜ್ಯದಲ್ಲಿ ಅಪಾರ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಇಲ್ಲಿನ ಹಳ್ಳಿಗಳ ಯುವಕರು ನಗರದತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಗೆಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿಗಳಲ್ಲಿನ ವಯಸ್ಸಾದ ತಂದೆ ತಾಯಿಗಳು ಮನೆಯ ಮುಂದೆ ನಿಂತು ಮಕ್ಕಳು ಈಗ ಮನೆಗೆ ಬಂದಾರು ಆಗ ಮನೆಗೆ ಬಂದಾರು ಎಂಬ ನಿರೀಕ್ಷೆಯಲ್ಲಿ ನಿಂತಿರುತ್ತಾರೆ.
ಎಂತಹ ದುರಂತ ಅಲ್ವಾ? ರಾಜ್ಯ ಒಮದಾನೊಂದು ಕಾಲದಲ್ಲಿ ಶ್ರೀಮಂತ ವಾಗಿತ್ತು. ಆದರೆ ಈಗ ಬರ ಬಂದ ಕಾರಣ ರೈತರು ನೆಣು ಹಾಕಿಕೊಳ್ಳುತ್ತಿದ್ದಾರೆ, ಗುಳೆ ಹೋಗುತ್ತಿದ್ದಾರೆ. ಪ್ರತಿದಿನ ಅವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಗೆಳತಿ,.
ಇದು ನಮ್ಮ ರಾಜ್ಯದ ಜ್ವಲಂತ ಸಮಸ್ಯೆಗಳು ಇವುಗಳ ಕುರಿತು ಹೆಳಿದೆ ಅಂತ ಬೇಸರ ಮಾಡಿಕೊಳ್ಳಬೇಡ. ಒಳ್ಲೆಯದು ಇರುವಲ್ಲಿ ಕೆಟ್ಟದ್ದು ಹೇಗೋ ಹಾಗೆಯೇ ಸೌಲಭ್ಯಗಳಿದ್ದಲ್ಲಿ ಸಮಸ್ಯೆಗಳೂ ಇರುತ್ತವೆ. ಆದರೆ ಈ ಸಮಸ್ಯೆಗಳ ನಡುವೆಯೂ ನಮ್ಮ ನಾಡಿನ ರೈತ ಸ್ವರ್ಗ ಸುಖವನ್ನು ಕಾಣುತ್ತಿದ್ದಾನೆ.
ಮುಂದಿನ ದಿನಗಳಲ್ಲಿ ಕೃಷಿ ಪ್ರದಾನ ವ್ಯವಸ್ಥೆ ರಾಜ್ಯದಲ್ಲಿ ಬಂದು ರೈತನಿಗೆ ಬೆಲೆ ಬರುತ್ತದೆ ಎಂಬ ಕನಸಿನೊಮದಿಗೆ ಆತ ಬಾಳುತ್ತಿದ್ದಾನೆ.
ಅಬ್ಬ ತುಂಬ ಬರೆದುಬಿಟ್ಟೆ ಅನಿಸ್ತಾ ಇದೆಯಲ್ಲ.. ಊಹುಂ. ನಮ್ಮ ನಾಡಿನ ವಿಷಯದ ಕುರಿತು ಹೇಳುವುದಾದರೆ ಇದು ಏನ#ಏನೂ ಅಲ್ಲ. ಮುಂದೊಮ್ಮೆ ನಮ್ಮ ನಾಡಿನ ಕುರಿತು ಇನ್ನೂ ವಿವರವಾಗಿ ಹೇಳುತ್ತೇನೆ ಆಗಬಹುದಲ್ಲ. ಕೊನೆಯದಾಗಿ ಯಾಕೋ ಕವಿ ಪ. ಗ. ಭಟ್ಟರ ಕವಿತೆ ನೆನಪಾಗುತ್ತದೆ.
ಭಾರತಮಾತೆಯ ಒಲವಿನ ಬದುಕಿಗೆ
ಕನ್ನಡ ನಾಡೇ ಮುಕುಟ ಮಣಿ.
ಆಕೆಯ ಸೊಂಟದ ಒಡ್ಯಾಣದ ಕವಚಕೆ
ಕರ್ನಾಟಕವೇ ಚಿನ್ನದ ಖನಿ!!
ಉಳಿದ ವಿಷಯ ಮುಂದಿನ ಪತ್ರದಲ್ಲಿ.. ನೆನಪುಗಳ ಸರಮಾಲೆಯೊಂದಿಗೆ

ಇಂತಿ ನಿನ್ನ ಗೆಳೆಯ


ಜೀವನ್ 

(ವಿ.ಸೂ : ಆತ್ಮೀಯರೇ.. ಈ ಪತ್ರವನ್ನು ನನ್ನ ದೋಸ್ತನೊಬ್ಬನಿಗೆ ಪ್ರೆಸೆಂಟೇಶನ್ನಿಗಾಗಿ ಬರೆದುಕೊಟ್ಟಿದ್ದೆ.. ಏನು ಕಾರಣವೋ ಗೊತ್ತಿಲ್ಲ.. ಆ ಪ್ರೆಸೆಂಟೇಷನ್ ಕಾರ್ಯಕ್ರಮ ರದ್ದಾದ್ದರಿಂದ ಈ ಪತ್ರ ಹಾಗೇ ಉಳಿದಿತ್ತು.. ಕರ್ನಾಟಕದ ಕುರಿತು ವಿವರ ಹೇಳುವ ಪತ್ರ.. ಇದೋ ನಿಮ್ಮೆದುರು)

ಸ್ಟೈಲು ಬ್ಯಾಡಾ


ಸ್ಟೈಲು ಬ್ಯಾಡೇ ಹುಡುಗಿ
ಸ್ಟೈಲು ಬ್ಯಾಡಾ ನೋಡು,
ಸ್ಟೈಲು ಬ್ಯಾಡೆ ಹುಡುಗಿ
ಸ್ಟೈಲು ಬ್ಯಾಡಾ ||

ಇಷ್ಟು ಒಳ್ಳೆಯ ಮೊಗಕೆ
ಪೌಡರ್ ಬ್ಯಾಡಾ, ನೋಡು
ಇಷ್ಟು ಒಳ್ಳೆಯ ತುಟಿಗೆ
ಲಿಪಸ್ಟಿಕ್ ಬ್ಯಾಡಾ ||

ಸಿಂಧೂರದಾ ಬದ್ಲು
ಟಿಕ್ಲಿ ಬ್ಯಾಡಾ, ನೋಡು
ಓಲೆ, ಝುಮುಕಿಯ ಬದ್ಲು
ರಿಂಗು ಬ್ಯಾಡಾ ||

ಇಷ್ಟು ಚಂದದ ಕಾಲಿಗೆ
ಹೈಹೀಲ್ಡ್ ಬ್ಯಾಡಾ, ನೋಡು
ಚೆಂದ ಚೆಂದಾದ ಉಗುರಿಗೆ
ಕಿಟೇಕ್ಸ್ ಬ್ಯಾಡಾ ||

ಲಂಗಾ ದಾವಣಿ ಬದ್ಲು
ಟೂ ಪೀಸ್ ಬ್ಯಾಡಾ, ನೋಡು
ಮಾನಾ ಮುಚ್ಚುವ ಸೀರೆ ಧರಿಸಿ ನೋಡಾ ||

**

(ಇದನ್ನು ಬರೆದಿದ್ದು ಶಿರಸಿಯಲ್ಲಿ, ದಿನಾಂಕ 29-01-2008ರಂದು)
(ಶಿರಸಿ ತಾಲೂಕಿನ ಕಾನಳ್ಳಿಯಲ್ಲಿ ನಡೆದ ಎಬಿವಿಪಿಯ ಬೆಳದಿಂಗಳ ಊಟದಲ್ಲಿ ವಾಚನ ಮಾಡಿದ್ದೆ.)
 

Monday, November 25, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 6

ಬಸವೇಶ್ವರ ಕಾಲೇಜು ಬಾಗೇವಾಡಿ
ನಮ್ಮ ಪಂದ್ಯಗಳು ಹೀಗೆ ಸಾಗಿದ್ದಾಗ ಪಾವಸ್ಕರ ದೊಡ್ಡ ಹೊಟ್ಟೆ ಕುಣಿಸುತ್ತಾ ಎದ್ದು ಓಡೋಡಿ ಬಂದ. ಬಂದವನೇ `ವಿನೂ...ಕಿಟ್ಟು ಗೆದ್ದ..' ಎಂದ..
ನಂಗೆ ಸಖತ್ ಖುಷಿಯಾಯಿತು. ನನ್ನ ಮ್ಯಾಚನ್ನು ಮಧ್ಯದಲ್ಲಿಯೇ ಬಿಟ್ಟು ಖುಷಿಯಿಂದ ಎದ್ದೋಡಿ ಕಿಟ್ಟುವನ್ನು ತಬ್ಬಿ ಹಾರೈಸಿ ಬಂದೆ. ಕಿಟ್ಟು ಗೋಗಟೆಯ 4th board ಆಟಗಾರ ಸಚಿನ್ ಸುಲ್ತಾನ್ ಪುರೆಯನ್ನು ಹೀನಾಯವಾಗಿ ಸೋಲಿಸಿ ಗೆದ್ದಿದ್ದ. ಮ್ಯಾಚ್  ಬಹಳ ಟಫ್ ಇತ್ತೆಂದೂ ಕೊನೆಯ ಕ್ಷಣದಲ್ಲಿ ಒಳ್ಳೆಯ ಟರ್ನಿಂಗ್ ಪಾಯಿಂಟ್ ನೀಡಿ ಗೆದ್ದ ಬಗೆಯನ್ನು ಕಿಟ್ಟು ಆ ದಿನ ಸಂಜೆ ತಿಳಿಸಿದ. ಇಲ್ಲಿಗೆ ನಮ್ಮ ಟೀಂ ಪಾಯಿಂಟ್ 7+1=8 ಆಯಿತು. ಆದರೂ ಗೋಗಟೆ ಕಾಲೇಜಿನ ವಿರುದ್ಧ 2-1ರಿಂದ ಹಿಂದಿತ್ತು. ಎಲ್ಲವೂ ನನ್ನ ಮೇಲೆಯೇ ನಿರ್ಧಾರವಾಗಿತ್ತು. ಕಿಟ್ಟುವಿನ ಮ್ಯಾಚ್ ಮುಗಿದಿದ್ದರಿಂದ ಎಲ್ಲರೂ ನನ್ನ ಪಂದ್ಯದ ಸುತ್ತ ನೆರೆಯಲಾರಂಭಿಸಿದ್ದರು.
ಮ್ಯಾಚ್ ಮತ್ತಷ್ಟು ಮುಂದುವರಿಯಿತು. ಆಟ ಹಾಗೆಯೇ ಸಾಗುತ್ತಿತ್ತು. ನನಗೆ ಸೆಕೆಯ ಜೊತೆಗೆ ಟೆನ್ಶನ್ ನಿಂದ ಬೆವರು ಕಿತ್ತುಕೊಂಡು ಬರುತ್ತಿತ್ತು. ಮ್ಯಾಚ್ ಗೆದ್ದು ರಿಲ್ಯಾಕ್ಸ್ ಆಗಿದ್ದ ಕಿಟ್ಟು ಈಗ ಫ್ರೀಯಾಗಿದ್ದ. ಆತನಂತೂ ಆಗಾಗ ನನ್ನ ಬೆನ್ನು ತಟ್ಟಿ `ಟೆನ್ಶನ್' ಮಾಡ್ಕೋಬೇಡ ಎನ್ನುತ್ತಿದ್ದ. ನನ್ನ ಎದುರಾಳಿ ಆಟಗಾರ ಚಿಂಚೋಳಿಮಠ cool ಆಗಿ ಆಡಿದಂತೆ ಕಾಣುತ್ತಿತ್ತು. ನನ್ನಂ ತಹಾಟಗಾರನನ್ನು ಅದೆಷ್ಟು ಜನರನ್ನು ನೋಡಿದ್ದನೋ.. ಬಿಡಿ.. ಆದರೆ ನನಗೆ ಬಹಳ ಟೆನ್ಶನ್ ಆಗುತ್ತಿತ್ತು. ಹೀಗೆಯೇ ಸುಮಾರು ಹೊತ್ತು ಕುಳಿತೆವು. ನಾನು ಬಹು ಬೇಗನೆ move ನಡೆಸುತ್ತಿದ್ದರೂ ಸಾಗರ್ ಚಿಂಚೋಳಿಮಠ ಒಂದು move ಮಾಡಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿದ್ದ. ಅಷ್ಟರಲ್ಲಾಗಲೇ ನಮ್ಮ ಕಾಲೇಜಿನ ಲೇಡೀಸ್ ಟೀಂ ತಮ್ಮ ಎದುರಾಳಿ ಟೀಮುಗಳನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಗಳಿಸಿಯಾಗಿತ್ತು. ಅವರೂ ಬಂದು ನನ್ನ ಆಟ ನೋಡಲಾರಂಭಿಸಿದ್ದರು.
ಕೊನೆಗೆ ಗಂಟೆ 12ನ್ನು ದಾಟಿತು. 8 ಗಂಟೆಗೆ ಆರಂಭವಾದ ಆಟ 12 ಗಂಟೆಯನ್ನು ಕಳೆದರೂ ಮುಗಿಯುವ ಲಕ್ಷಣ ತೋರಲಿಲ್ಲ. ಕೊನೆಗೊಮ್ಮೆ ಆಟ ಮುಕ್ತಾಯದ ಹಂತ ಕಾಣದೇ ಇರುವಾಗ ಕ್ಲಾಕ್ ಇಡುವ ತೀರ್ಮಾನಕ್ಕೆ ಅಂಪಾಯರ್ರುಗಳು ಬಂದರು. ಮೊದಲೊಂದು ಸಾರಿ ಟೆನ್ಶನ್ ಜೊತೆಗೆ ಭಯವಾದರೂ ನಾವು ಬಾಗೇವಾಡಿಗೆ ಹೊರಡುವ 4 ದಿನಗಳ ಮೊದಲು ನಮ್ಮ ಕಾಲೇಜಿನ ಚೆಸ್ ಕೋಚ್ ಎಂ. ಕೆ. ಹೆಗಡೆಯವರ ಜೊತೆಗೆ ಕ್ಲಾಕ್ ಇಟ್ಟು ಚೆಸ್ ಆಡಿದ್ದು ಸಹಾಯಕ್ಕೆ ಬಂದಿತು. ಥ್ಯಾಂಕ್ ಗಾಡ್ ಅಂದುಕೊಂಡೆ. ಕೊನೆಗೊಮ್ಮೆ ಗೋಗಟೆ ಕಾಲೇಜಿನದ್ದೇ ಆದ ಹಳೆಯ ಕ್ಲಾಕನ್ನು ಮ್ಯಾಚ್ ನಿರ್ಧಾರಕ್ಕೆ ಇಟ್ಟರು. ಇಬ್ಬರಿಗೂ ತಲಾ 10 ನಿಮಿಷಗಳನ್ನು ನಿಗದಿಪಡಿಸಲಾಯಿತು.
ಆಟ ಈಗ ಚಕ ಚಕನೆ ಸಾಗಿತು. ವಿಚಿತ್ರವೆಂದರೆ ನಾನು ಚಿಂಚೋಳಿಮಠನಿಗಿಂತ ಸಾಕಷ್ಟು ವೇಗವಾಗಿ ಚಸ್ ಆಡಿದೆ. ಏಕೆಂದರೆ ರಾಪಿಡ್ ಚಸ್ ನನ್ನ ಅತ್ಯಂತ ಪ್ರೀತಿಯ ಆಟವಾಗಿತ್ತು. ನವೀನ್ ಪಾವಸ್ಕರನ ಜೊತೆಗೆ ಚಾಲೆಂಜ್ ರೂಪದಲ್ಲಿ ಆಡುತ್ತಿದ್ದ ನಾನು ಎಡಗಣ್ಣಿನಲ್ಲಿ ಪಾವಸ್ಕರನನ್ನು ನೋಡಿ ನಕ್ಕೆ.. ಆತ ಕೈಸನ್ನೆಯ ಮೂಲಕ ಕೂಲ್ ಎನ್ನುತ್ತಿದ್ದ.. ನನ್ನ ವೇಗದ move ಬಹುಶಃ ಸಾಗರ್ ಚಿಂಚೋಳಿಮಠನನ್ನು ದಂಗುಪಡಿಸಿರಬೇಕು. ನನ್ನ ರಾಪಿಡ್ ಚೆಸ್ ಪರಿಣಾಮ ನನ್ನ ಬಳಿ 8 ನಿಮಿಷ ಬಾಕಿ ಉಳಿಯಿತು. ಚಿಂಚೋಳಿ ಮಠನದ್ದು 7 ನಿಮಿಷ ಕಳೆದು 3 ನಿಮಿಷ ಮಾತ್ರ ಉಳಿಯಿತು. ಅಂದರೆ ಸಾಗರ್ ಚಿಂಚೋಳಿಮಠನಿಗಿಂತ 5 ನಿಮಿಷ ನನಗೆ ಬೋನಸ್ ಸಿಕ್ಕಿತ್ತು. ಅಷ್ಟು ವೇಗವಾಗಿ ಆಟವನ್ನಾಡಿದ್ದೆ. ಇಷ್ಟಾಗಿದ್ದರೂ ಆಟದಲ್ಲಿ ಯಾರಿಗೂ ನಿಶ್ಚಿತ ಗೆಲುವಿನ ಅವಕಾಶವೇ ಇರಲಿಲ್ಲ. ಹೀಗಿದ್ದಾಗ ಯಾರ ಸಮಯ ಬೇಗನೆ ಮುಗಿಯುತ್ತದೆಯೋ ಅವರು ಆಟದಲ್ಲಿ ಸೋತಂತೆ ಎಂದು ನಿರ್ಣಯ ಮಾಡಲಾಗುತ್ತದೆ. ನಾನಂತೂ ಬೆಕ್ಕಿನ ಆಟವನ್ನು ಆರಂಭ ಮಾಡಿದ್ದೆ. ಸಾಗರ್ ಚಿಂಚೋಳಿ ಮಠನ ಬಳಿ ಗುದ್ಯಾಡಿ ಗೆಲ್ಲುವುದು ಸುಲಭವೇ ಆಗಿರದ ಕಾರಣ ನಾನು ಬೆಕ್ಕಿನಂತೆ ಚಲ್ಲಾಟವಾಡಿ ಸಮಯ ತಿಂದು ಆ ಮೂಲಕವಾದರೂ ಆತನನ್ನು ಸೋಲಿಸಬಹುದೆಂಬ ಐಡಿಯಾ ಹಾಕಿ ಆಡುತ್ತಿದ್ದೆ. ಮತ್ತೊಂದು ನಿಮಿಷ ಕಳೆಯಿತು. ಈಗ ಮೊದಲ ಬಾರಿಗೆ ಚಿಂಚೋಳಿಮಠನ ಮುಖದಲ್ಲಿ ಗಾಬರಿಯನ್ನು ಕಂಡಿದ್ದೆ. ಅಷ್ಟಲ್ಲದೇ ಅವನ ತಂಡದ ಅನಿಕೇತನ್ ಪಾವಸೆ ಹಾಗೂ ಸಮೀರ್ ಘೋಟ್ನೆ ಜೊತೆಗೆ ಅವರ ಕೋಚ್ ಕೂಡ ಕಂಗಾಲಾಗುವ ಹಂತ ಬಂದಿದ್ದರು. ನಾನೇ ಗೆದ್ದೇನೇನೋ ಎನ್ನುವ ಹಂತದಲ್ಲಿ ಖುರ್ಚಿಯ ತುದಿಗೆ ಕುಳಿತು ಆಡತೊಡಗಿದ್ದೆ. ಹೀಗಿರುವಾಗ ಆತನಿಗೆ ಏನನ್ನಿಸಿತೋ ಏನೋ ಕ್ಲಾಕ್ ಗೆ ನಿಧಾನವಾಗಿ ಮೊಡಕುವ ಬದಲು ಜೋರಾಗಿ ಗುದ್ದಿದ. ಹಳೆಯ ಕ್ಲಾಕು ಇದ್ದಕ್ಕಿದ್ದಂತೆ ತಟಸ್ಥವಾಯಿತು. ಮುಂದೆ ಏನು ಮಾಡಿದರೂ ಅದು ಸರಿಯಾಗಲೇ ಇಲ್ಲ.
ಇದನ್ನು ನೋಡಿದ ಪಾವಸ್ಕರ ಭರ್ಜರಿ ಸಿಟ್ಟಾದ. ಗಲಾಟೆಗೆ ಇಳಿದುಬಿಟ್ಟ. ಗೋಗಟೆ ಟೀಮಿನ ಮ್ಯಾನೇಜರ್ರಾಗಿದ್ದವರೇ ಅಂಪಾಯರ್ರಾಗಿದ್ದರು. ಅವರು ತಮ್ಮ ಟೀಮಿನ ಬೆಂಬಲಕ್ಕೆ ನಿಂತುಬಿಟ್ಟಿದ್ದರು. ಜೊತೆಗೆ ಆ ಟೀಮಿತ ಹುಡುಗರೂ ಜೋರಾದರು. ಒಂದು ಹಂತದಲ್ಲಿ ಕೈ ಮಿಲಾಯಿಸುತ್ತದೆಯೇನೋ ಎನ್ನುವ ಹಂತಕ್ಕೆ ತಲುಪಿತು. ನವೀನ ಪಾವಸ್ಕರ ಅಷ್ಟು ಸಿಟ್ಟಾಗಿದ್ದ. ನಾನು ಸುಮ್ಮನೆ ನೋಡುತ್ತಿದ್ದೆ. ಕಿಟ್ಟು, ಆನಂದರು ನವೀನನನ್ನು ಸಮಾಧಾನ ಮಾಡುವ ಯತ್ನ ಮಾಡುತ್ತಿದ್ದರು. ನಮ್ಮ ಟೀಮಿನ ಮ್ಯಾನೇಜರ್ ಆಗಿದ್ದ ಎನ್. ಎಚ್. ಗೌಡರು ಅಂಪಾಯರ್ರಾಗಿದ್ದರು. ಆದರೆ ಅವರು ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಅವರು ತಂಡು ಕುಳಿತುಬಿಟ್ಟರು. ಪಾವಸ್ಕರ ಇದರಿಂದಾಗಿ ಇನ್ನಷ್ಟು ಸಿಟ್ಟಾದ. ಗೋಗಟೆ ಕಾಲೇಜಿನ ವಿರುದ್ಧ ಏರಿ ಹೋದ. ಇದೇ ಸಮಯದಲ್ಲಿ ನಾನು ಎರಡು ತಪ್ಪು ಮಾಡಿಬಿಟ್ಟೆ. ಅದರಿಂದ ನಮಗೆ ಸಾಕಷ್ಟು ನಷ್ಟವೇ ಆಯಿತು. ಮೊದಲನೇದಾಗಿ ನಾನು ಪಾವಸ್ಕರನನ್ನು ಸುಮ್ಮನಿರಿಸಿ ತಪ್ಪು ಮಾಡಿದೆ. ಎರಡನೇದಾಗಿ ಕ್ಲಾಕು ಹಾಳಾದ ನಂತರವೂ ಮತ್ತೆ ಚೆಸ್ ಆಡಲು ಕುಳಿತುಬಿಟ್ಟೆ. ನಾಗಭೂಷಣ ಗೌಡರು ಹೀಗೆ ಮಾಡಲು ಹೇಳಿದ್ದರು. ನವೀನ ಪಾವಸ್ಕರ ನನ್ನ ಮಾತನ್ನು ಮಾತ್ರ ಕೇಳುತ್ತಾನೆ ಎಂಬುದು ಅವರಿಗೆ ಗೊತ್ತಿತ್ತು.. ನಾನು ಆತನನ್ನು ಸುಮ್ಮನಿರಿಸುವ ಜೊತೆಗೆ ಆಟಕ್ಕೂ ಕುಳಿತುಬಿಟ್ಟೆ. ನಾನು ಈ ತಪ್ಪುಗಳನ್ನು ಮಾಡಲೇಬಾರದಿತ್ತು. ಇದರ ಪರಿಣಾಮ ನಾನು ಪಂದ್ಯದಲ್ಲಿ ಹೀನಾಯವಾಗಿ ಸೋತೆ. ಸಾಕಷ್ಟು ಸಮಯ ಸಿಕ್ಕ ಚಿಂಚೋಳಿಮಠ ನನ್ನನ್ನು ಸೋಲಿಸಿದ. ತಂಡದ ಸ್ಕೋರು 3-1 ಆಯಿತು. ಇದುವರೆಗಿನ ಒಟ್ಟೂ ಪಾಯಿಂಟು 8 ಆಯಿತು. ಕೊನೆಗೆ ನಾನು ಅಲ್ಲಿ ಆಡಲೇಬಾರದಿತ್ತು ಅಂಬುದರ ಅರಿವಾಯಿತು.
ನಾನು ಸೋತರೂ ಅದು ಸೋಲಲ್ಲ ಎಂದುಕೊಂಡೆ. ಒಬ್ಬ ನ್ಯಾಶನಲ್ ಪ್ಲೇಯರ್ ಹೀಗೆ ಆಡಿ ಗೆದ್ದನಲ್ಲಾ ಛೀ.. ಅಂದುಕೊಂಡೆ.. ಮೋಸ ಮಾಡದಿದ್ದರೆ ಕ್ಲಾಕ್ ನಿಯಮದಂತೆ ಗೆಲ್ಲಬಲ್ಲೆ ಎನ್ನುವ ಸಮಾಧಾನವಿತ್ತು. ಆದರೂ ಆತನ ಮಟ್ಟಕ್ಕೆ ಹೋರಾಡಿದ ಖುಷಿಯಿತ್ತು. ಒಂದು ಹಂತದಲ್ಲಿ ಆತನಿಗೂ ಬೆವರಿಳಿಸಿದ ಸಾರ್ಥಕತೆಯಿತ್ತು. ಇಷ್ಟು ಸಾಕೆಂದುಕೊಂಡೆ.. ಆದರೂ ಮನಸ್ಸು ತಲ್ಲಣಗೊಂಡಿತ್ತು.

ದುರ್ಗಾ ಹೋಟೆಲ್ ಇರುವ ಕಾಂಪ್ಲೆಕ್ಸ್..
ಅದೇ ದಿನ ಮದ್ಯಾಹ್ನ ನಮ್ಮ ಮುಂದಿನ ಪಂದ್ಯ ನಡೆಯಿತು. ಬೆಳಗಾವಿಯದ್ದೇ ಇನ್ನೊಂದು ಕಾಲೇಜು ಆರ್. ಪಿ.ಡಿ. ಅದರ ಜೊತೆಗೆ ನಮ್ಮ ಪಂದ್ಯ. ಅಲ್ಲಿನ ಕ್ಯಾಪ್ಟನ್ ನಮ್ಮ ಮಿತ್ರ ಗಣೇಶ. ಮ್ಯಾಚಿಗೂ ಮುನ್ನ ಬಂದು ಕಾಂಪ್ರೋಮೈಸ್ ಮಾಡಿಕೊಳ್ಳೋಣ 2 ನಮಗೆ 2 ನಿಮಗೆ ಎಂದ. ಟೀಂ ಕರೆದು ಕೇಳಿದೆ. ಅವರೂ ಸರಿಯಾದ ನಿರ್ಧಾರಕ್ಕೆ ಬರಲಿಲ್ಲ. ಏನು ಮಾಡಬೇಕೋ ತಿಳಿಯಲಿಲ್ಲ. ಕೊನೆಗೆ ಸೀದಾ ನಮ್ಮ ಎಂ. ಕೆ. ಹೆಗಡೆಯವರಿಗೆ ಪೋನಾಯಿಸಿದೆ.
ಅವರು `ಕಾಂಪ್ರೋಮೈಸ್ ಬೇಡ.. ಸರಿಯಾಗಿ ಆಡಿ.. ಎಷ್ಟು ಪಾಯಿಂಡ್ ಬರ್ತದೋ ಬರಲಿ..' ಎಂದರು.
ಸರಿಯೆಂದು ಆಡಲು ಕುಳಿತೆವು. ಮ್ಯಾಚಿನಲ್ಲಿ ಆನಂದ ಹಾಗೂ ಕಿಟ್ಟು ಬಹುಬೇಗನೆ ಗೆದ್ದು ನಮ್ಮ ಪಾಯಿಂಟನ್ನು 10ಕ್ಕೇರಿಸಿದರು. ಟೀಮಿಗೆ ಜೋಶ್ ಬಂದಿತ್ತು.
ಹಿಂದಿನ ಮ್ಯಾಚನ್ನು ಆ ರೀತಿ ಆಘಾತಕರವಾಗಿ ಸೋತ ಡಿಪ್ರೆಶನ್ ನಲ್ಲಿದ್ದ ನಾನು ಅನ್ಯಮನಸ್ಕತೆಯಿಂದಲೇ ಮ್ಯಾಚ್ ಆಡುತ್ತಿದ್ದೆ. ಪರಿಣಾಮವಾಗಿ ಅಷ್ಟೇನೂ ಒಳ್ಳೆಯ ಆಟಗಾರನಲ್ಲದ ನನ್ನ ಎದುರಾಳಿಯ ವಿರುದ್ಧ ನಾನು ಸೋತುಬಿಟ್ಟೆ.  ನಮ್ಮ ಟೀಮಿನಲ್ಲಿ ಕೋಲಾಹಲ. ಟೀಮಿನ ಕ್ಯಾಪ್ಟನ್ ಸತತ ಎರಡು ಸೋಲನ್ನು ತಿಂದಿದ್ದೆ. ಕಿಟ್ಟು ಹಾಗೂ ಆನಂದ ಚಿಂತಾಕ್ರಾಂತರಾಗಿದ್ದರು. ನಾನು ಸೋತಿದ್ದು ನವೀನನಿಗೂ ಗೊತ್ತಾಗಿ ಕಣ್ಣು ಸನ್ನೆಯಲ್ಲೇ ಕಿಡಿಕಾರತೊಡಗಿದ್ದ. ನಾನು ಆತನ ಕಣ್ಣು ತಪ್ಪಿಸತೊಡಗಿದ್ದೆ. ಇಲ್ಲಿ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ನಿರ್ಣಾಯಕನಾಗಿದ್ದ. ಆತನ ಆಟ ಸಾಗಿತ್ತು. ಆತನ ಎದುರಾಳಿ ಗಣೇಶ. ಸರಿಯಾಗಿ ಆಡುತ್ತಿದ್ದ ನವೀನ ಪಾವಸ್ಕರನಿಗೆ ಇದ್ದಕ್ಕಿದ್ದಂತೆ ಅದ್ಯಾವ ದೆವ್ವ ಮೆಟ್ಟಿಕೊಂಡಿತೋ, ತನ್ನೆಲ್ಲ ಪಾನುಗಳನ್ನೂ ಕಾಯಿಗಳನ್ನೂ ಕಳೆದುಕೊಳ್ಳತೊಡಗಿದ. ನೋಡ ನೋಡುತ್ತಿದ್ದಂತೆ ನವೀನ ಪಾವಸ್ಕರನ ಬಲಗಳೆಲ್ಲ ಬರಿದಾಯಿತು. ಕೊನೆಗೊಮ್ಮೆ ಆತನ ಪಾಲಿಗೆ ರಾಜನೊಬ್ಬನೇ ಉಳಿದುಕೊಂಡ. ಅದಕ್ಕೆ ಪ್ರತಿಯಾಗಿ ಗಣೇಶ ಸಾಕಷ್ಟು ಬಲದೊಂದಿಗೆ ಅಟ್ಯಾಕ್ ಶುರು ಮಾಡಿಕೊಂಡಿದ್ದ. ಗ್ಯಾರಂಟಿ ಸೋಲುತ್ತಾನೆ ಬಿಡಿ ಎಂದುಕೊಂಡೆ. ಅಷ್ಟರಲ್ಲಿ 5 ತಾಸಿಗೂ ಹೆಚ್ಚಿನ ಕಾಲ ಕಟ್ಟಿಕೊಂಡಿದ್ದ ಜಲಬಾಧೆ ಬಹಳ ಕಾಡಿತು. `ಕಿಟ್ಟು ಬಾರೋ ಹೋಗಿ ಬರೋಣ, ನವೀನ ಪಾವಸ್ಕರ ಹೊಗೆ ಹಾಕಿಸ್ಕೊಂಡ ..'ಎಂದೆ. `ನವೀನಾ.. ಟೈಂ ವೇಸ್ಟ್ ಮಾಡ್ತಿದ್ದೀಯಾ..? ಸುನ್ಮೆ ರಿಸೈನ್ ಮಾಡು..' ಎಂದು ಆನಂದ ಆಗಲೇ ಎರಡು ಮೂರು ಸಾರಿ ಹೇಳಿಯಾಗಿತ್ತು. ಆದರೆ ನವೀನನ ಕಿವಿಗೆ ಅದು ಹೋಗಲಿಲ್ಲ. ಆಡುತ್ತಲೇ ಇದ್ದ. ಹಾಳಾಗ್ಲಿ ಎಂದು ನಾವು ಎದ್ದು ಬಂದೆವು.
ಮರಳಿ ಬರುವಾಗ ಒಂದರ್ಧ ಗಂಟೆಯೇ ಹಿಡಿಯಿತು. ನನ್ನ ಆಟದ ಪೋಸ್ಟ್ ಮಾರ್ಟಮ್ ಅಂದರೆ ಸೋತ ಬಗೆಯ ಬಗ್ಗೆ ಕಿಟ್ಟುವಿನ ಜೊತೆಗೆ ಚರ್ಚಿಸುತ್ತ ಬರುತ್ತಿದ್ದೆ. ನವೀನ ಪಾವಸ್ಕರ ಖುಷಿಯಿಂದ ಓಡಿ ಬರುತ್ತಿರುವುದು ಕಾಣಿಸಿತು. ಏನೋ ಆಗಿದೆ ಎಂದುಕೊಂಡೆ.. ಬಂದವನೇ ಆಟ ಡ್ರಾ ಆಯ್ತು ಕಣೋ ಎಂದ. ಅರೇ.. ಇದ್ಹೇಗೆ ಸಾಧ್ಯವಾಯ್ತು ಅನ್ನೋ ಕುತೂಹಲ..
ರಾಜನೊಬ್ಬನೇ ಇದ್ದ. ಹೇಗಿದ್ರೂ ನೀನು ಚೆಕ್ ಮೀಟ್ ಗ್ಯಾರಂಟಿ ಅಂದ್ಕೊಂಡಿದ್ವಿ... ಎಂದೆ
ಇಲ್ಲ ಮಾರಾಯಾ.. ಅಂವನಿಗೆ ನನ್ನ ರಾಜನನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.. ಪರಿಣಾಮವಾಗಿ ಸ್ಟೈಲ್ ಮೀಟ್ ಆದೆ.. ಸ್ಟೈಲ್ ಮೀಟ್ ಆದರೆ ಡ್ರಾ ಅಂತೆ.. ಸೋ.. ಅರ್ಧ ಪಾಯಿಂಟು ಬೋನಸ್ಸು ಸಿಕ್ಕಿತು.. ಅಂದ.. ಖುಷಿಯಾಯಿತು.
ಈ ಡ್ರಾದಿಂದಾಗಿ ನಮ್ಮ ತಂಡದ ಮೊತ್ತ 10.5 ಆಯಿತು. ಅಂದರೆ ಕಾಂಪ್ರೋಮೈಸ್ ಗಿಂತ ಅರ್ಧ ಪಾಯಿಂಟು ಹೆಚ್ಚು ಸಿಕ್ಕಿತು. ಕೊನೆಯ ಮ್ಯಾಚಿನಲ್ಲಿ 4 ಬೋರ್ಡಿನಲ್ಲಿ 1 ಮ್ಯಾಚನ್ನೂ ಸೋಲದಿದ್ದರೆ ಪ್ರೈಜ್ ಗ್ಯಾರಂಟಿ ಎಂಬ ಹಂತಕ್ಕೆ ಬಂದಿತು.

ದಿ ಹೆಲ್ಪ್ ಪುಲ್ ಮ್ಯಾಚ್.. ಹಾಗೂ ಹೆಲ್ಪರ್ಸ್..
ಈ ಪಂದ್ಯದಲ್ಲಿ ನಾಲ್ಕಕ್ಕೆ ನಾಲ್ಕನ್ನೂ ಗೆದ್ದರೆ ಫಸ್ಟಂತೂ ಸಿಗಲಾರದು. ಏಕೆಂದರೆ ಗೋಗಟೆ ಕಾಲೇಜು 14 ಪಾಯಿಂಟು ಗಳಿಸಿ ಆಗಲೇ ಮೊದಲನೇ ಸ್ಥಾನವನ್ನು ಖಾಯಂ ಮಾಡಿಕೊಂಡಿತ್ತು. ಆದರೆ ನಾಲ್ಕರ ಪೈಕಿ 3.5 ಪಾಯಿಂಟ್ ಗೆದ್ರೂ ಸಾಕಿತ್ತು ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಿದ್ದೆವು. ನಮ್ಮ ವಿರುದ್ಧ ಕಳೆದ ಸಾರಿಯ ಪಂದ್ಯವನ್ನಾಡಿದ್ದ ಆರ್. ಪಿ. ಡಿ. ಕಾಲೇಜಿನ ಪಾಯಿಂಟು 9.5 ಆಗಿತ್ತು.ನಾವು ನಾಲ್ಕಕ್ಕೆ ನಾಲ್ಕನ್ನು ಗೆದ್ದರೂ 14.5 ಆಗುತ್ತಿತ್ತು. ಒಂದು ಮ್ಯಾಚು ಡ್ರಾ ಆದರೂ 14 ಪಾಯಿಂಟಾಗುತ್ತಿತ್ತು. ಅದೇ ನಾವೇನಾದರೂ ಒಂದು ಮ್ಯಾಚನ್ನು ಸೋತು ಆರ್. ಪಿ. ಡಿ. ಕಾಲೇಜು 4ರ ಪೈಕಿ 4ನ್ನೂ ಗೆದ್ದರೆ 2ನೇ ಸ್ಥಾನವನ್ನು share ಮಾಡಿಕೊಳ್ಳಬೇಕಾಗುತ್ತಿತ್ತು. ಹೀಗಾಗುವುದನ್ನು ತಪ್ಪಿಸಲು ಅಷ್ಟಕ್ಕೆ ಅಷ್ಟೂ ಮ್ಯಾಚನ್ನು ಗೆಲ್ಲಲೇಬೇಕು ಎಂದುಕೊಂಡೆವು.  ನಮ್ಮ ನಿರೀಕ್ಷೆಯಂತೆ ಆರ್. ಪಿ. ಡಿ. ಕಾಲೇಜಿನವರು ಅವರ ಎದುರಾಳಿ ತಂಡದ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು ನಾಲ್ಕಕ್ಕೆ ನಾಲ್ಕನ್ನೂ ಗೆದ್ದುಕೊಂಡರು. ಇದರಿಂದ ನನಗೆ ಕೊಂಚ ಟೆನ್ಶನ್ ಆಯಿತು. ನಮ್ಮ ಟೀಮಲ್ಲಿ ಯಾರಾದರೂ ಸೋತುಬಿಟ್ಟರೆ ಎನ್ನುವ ಭೀತಿ ಕಾಡಿತು.
ಆದರೆ...
ನಮ್ಮ ಪುಣ್ಯಕ್ಕೆ ನಮ್ಮ ವಿರುದ್ಧ ಬಿದ್ದವರು ಕುಮಟಾದ ಬಾಳಿಗಾ ಕಾಮರ್ಸ್ ಕಾಲೇಜಿನ ದೋಸ್ತರು. ಮ್ಯಾಚೇನೋ ಶುರುವಾಯಿತು. ಕಳೆದೆರಡು ಮ್ಯಾಚು ಸೋತಿದ್ದೆನಲ್ಲಾ.. ಸಿಟ್ಟೆಲ್ಲಿತ್ತೋ., ಮ್ಯಾಚು ಪ್ರಾರಂಭವಾದ 5 ನಿಮಿಷಗಳಲ್ಲಿಯೇ ಕನಿಷ್ಟ 20 step ಗಳಲ್ಲಿಯೇ ನನ್ನ ಎದುರಾಳಿಯನ್ನು ಸೋಲಿಸಿಬಿಟ್ಟೆ. ಮತ್ತೊಂದು 15-20 ನಿಮಿಷಗಳಲ್ಲಿ ಆನಂದನೂ ಗೆದ್ದುಬಿಟ್ಟ. ಆದರೆ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ಸೋಲತೊಡಗಿದ. ಕಿಟ್ಟುವಿನ ಮ್ಯಾಚು ಕುತೂಹಲಕ್ಕೆ ಕಾರಣವಾಗಿತ್ತು. ನಮ್ಮ ಪಂದ್ಯಗಳನ್ನು ನೋಡಲು ಆರ್. ಪಿ. ಡಿ. ಕಾಲೇಜಿನ ಹುಡುಗರೂ ನೆರೆಯಲು ಆರಂಭಿಸಿಬಿಟ್ಟರು.
ಆಗ ಇದ್ದಕ್ಕಿದ್ದಂತೆ ನವೀನ ಪಾವಸ್ಕರನಿಗೆ ಏನನ್ನಿಸಿತೋ ಏನೋ ನನ್ನ ಕಿವಿಯಲ್ಲಿ `ಮ್ಯಾಚನ್ನು ಹೊಂದಾಣಿಕೆ ಮಾಡಿಕೊಳ್ಳೋಣ .. ' ಎಂದ. ಕಿಟ್ಟುವಿಗೂ ಹೇಳಿದ. ನಾನು ಬೇಡವೆಂದೆ. ಕಿಟ್ಟುವೂ ಹಾಗೆಯೇ ಹೇಳಿದ. ಆದರೆ ನವೀನ ಪಾವಸ್ಕರ ಬಿಡಬೇಕಲ್ಲ. ನಮ್ಮನ್ನು ಒಪ್ಪಿಸಿದ. ನಮ್ಮ ಎದುರಾಳಿ ತಂಡದ ಬಳಿ ಕೊನೆಗೆ ನವೀನನೇ `ಹೊಂದಾಣಿಕೆ ಮಾಡಿಕೊಳ್ಳೋಣ..' ಎಂದ.. ಅವರು ನನ್ನ ಹಾಗೂ ಕಿಟ್ಟುವಿನ ಮುಖವನ್ನು ನೋಡಲಾರಂಭಿಸಿದರು.
ನವೀನ ಪಾವಸ್ಕರ `ನೋಡಿ.. ಮ್ಯಾಚ್ ಹೊಂದಾಣಿಕೆ ಮಾಡಿಕೊಳ್ಳೋಣ.. ನಿಮಗೆ ದುಡ್ಡು ಕೊಡ್ತೀನಿ...' ಅಂದ.. ಕುಮಟಾ ಕಾಲೇಜಿನ 4ನೇ ಬೋರ್ಡ್ ಪ್ಲೇಯರ್ ಹೆಸರೂ ಕೃಷ್ಣ ಮೂರ್ತಿ ದೀಕ್ಷಿತ ಎಂಬುದೇ ಆಗಿತ್ತು. ಹಳೆಯ ಪರಿಚಯ. ಆತ ನವೀನನ ಬಳಿ `ನಾವು ಆಟವನ್ನು ದುಡ್ಡಿನಿಂದ ಅಳೆಯೋದಿಲ್ಲ.. ದುಡ್ಡಿಗಾದರೆ ನಾವು ಮ್ಯಾಚು ಬಿಟ್ಟುಕೊಡುವುದೇ ಇಲ್ಲ.. ' ಎಂದರು. ನನಗೆ ಏನು ಮಾಡಬೇಕೋ ಎಂಬುದು ತೋಚಲಿಲ್ಲ. ಕೊನೆಗೆ ಕಿಟ್ಟು ನಮ್ಮ ದೋಸ್ತ ರಾಘವನಿಗೆ ಪೋನ್ ಮಾಡಿದ. ಯಾಕಂದರೆ ನಮ್ಮ ವಿರುದ್ಧ ಆಡುತ್ತಿದ್ದ ಹುಡುಗರು ರಾಘವನ ಪರಮಾಪ್ತ ಮಿತ್ರರಾಗಿದ್ದರು ಅಷ್ಟೇ ಅಲ್ಲದೇ ರಾಘವನ ಅಜ್ಜನಮನೆಯಾದ ಗೋಕರ್ಣದಲ್ಲಿ ಆಡಿ ಬೆಳೆದಿದ್ದವರಾಗಿದ್ದರು.
ಕೊನೆಗೆ ರಾಘುವಿನ ಮಾತಿಗೆ ಹಾಗೂ ಒಂದು ಷರತ್ತಿಗೆ ಒಪ್ಪಿ ಅವರು ಆಟವನ್ನು ನಮಗೆ ಬಿಟ್ಟುಕೊಟ್ಟರು. ಅದೇನೆಂದರೆ ನಾಲ್ಕನೇ ಬೋರ್ಡಿನ ಆಟಗಾರರಾದ ಕೃಷ್ಣಮೂರ್ತಿ ದೀಕ್ಷಿತ್ ಹಾಗೂ ಕೃಷ್ಣಮೂರ್ತಿ ದೀಕ್ಷಿತ್ ಅವರ ನಡುವಿನ ಆಟವನ್ನು ಡ್ರಾ ಎಂದು ಪರಿಗಣಿಸಬೇಕು. ಬದಲಾಗಿ ಆ ಟೀಮಿನವರು ಸೋಲುತ್ತಿದ್ದ ನವೀನ ಪಾವಸ್ಕರನಿಗೆ ಗೆಲುವನ್ನು ಬಿಟ್ಟುಕೊಡುತ್ತಿದ್ದರು. ಹಾಗೆ ಮಾಡಿದರು ಕೂಡ. ಪರಿಣಾಮವಾಗಿ ಅರ್ಧ ಪಾಯಿಂಟಿನಿಂದ 2ನೇ ಸ್ಥಾನವನ್ನು ಗಳಿಸಿಕೊಂಡೆವು. ನಮ್ಮ ಟೀಮಿನ ಕೃಷ್ಣಮೂರ್ತಿ ದೀಕ್ಷಿತ್ ಇಡೀ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಗೆ ಪಾತ್ರನಾಗಿದ್ದ. ಕಾಕತಾಳೀಯದಂತೆ ನಮ್ಮ ಎದುರಾಳಿ ತಂಡ ಕುಮಟಾದ ಕೃಷ್ಣಮೂರ್ತಿ ದೀಕ್ಷಿತನೂ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಅಜೇಯನಾಗಿ ಉಳಿದಿದ್ದ.
ನನಗೆ ಬೇಜಾರಾಗಿತ್ತು. ಪಂದ್ಯ ಹೊಂದಾಣಿಕೆ ಮಾಡಿಕೊಂಡಿದ್ದು ನನಗೆ ಅಷ್ಟು ಖುಷಿಯನ್ನು ಕೊಟ್ಟಿರಲಿಲ್ಲ. ಆದರೆ ನಮ್ಮ ಟೀಮಿನ ಒಬ್ಬ ಆಟಗಾರನನ್ನು ಸೋಲಿಸಿದರೆ ತಲಾ 500 ರು. ಕೊಡುತ್ತೇನೆ ಎಂದು ಆರ್. ಪಿ. ಡಿ. ಕಾಲೇಜಿನ ಗಣೇಶ್ ಹಾಗೂ ಮಿತ್ರರು ಆಮಿಷ ಒಡ್ಡಿದ್ದರಂತೆ. ಹಣಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.. ನೀವು ನಮ್ಮವರು, ಉತ್ತರ ಕನ್ನಡದವರು ಗೆಲ್ಲಬೇಕು. ಅದಕ್ಕೂ ಹೆಚ್ಚಾಗಿ ನಮ್ಮ ರಾಘುವಿನ ದೋಸ್ತರು.. ನೀವು ಸೋಲಬಾರದು.. ಅದಕ್ಕಾಗಿ ಪಂದ್ಯ ಬಿಟ್ಟುಕೊಟ್ಟೆವು ಎಂದು ಹೇಳಿದರು. ಇದನ್ನು ಕೇಳಿದ ಮೇಲೆ ಅಷ್ಟಾಗಿ ನನಗೆ ಬೇಸರವಾಗಲಿಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ಸಮಾರೋಪ ಸಮಾರಂಭ...ಬ್ಲೂ ಟೀಂ ಸೆಲೆಕ್ಷನ್) 


Saturday, November 23, 2013

ದಿಙ್ಮೂಢ ಕವಿತೆಗಳು


ಟಾರು ರೋಡಿನಲ್ಲಿ
ವೇಗವಾಗಿ ಬೈಕಿನಲ್ಲಿ
ಸಾಗುತ್ತಿದ್ದೆ..
ಕಪ್ಪು ಬೆಕ್ಕು
ಬೈಕಿಗಡ್ಡವಾಗಿ
ಓಡಿ ಬಂದಿತು..
ಅಪಶಕುನ ಮುಂಡೇದು
ಬೈಕಿನ ಚಕ್ರಕ್ಕೆ ಸಿಲುಕಿ 
ಸತ್ತು ಹೋಯಿತು ||

***

ಬೆಳಿಗ್ಗೆ ಮುಂಚೆ
ಹಾಗೆ ಸುಮ್ಮನೆ
ಎಡಗಣ್ಣು 
ಅದುರಿತು
ಕಣ್ಣು ತಿಕ್ಕಿದೆ,
ರೆಪ್ಪೆಗೂದಲು 
ಕಿತ್ತು ಬಂದಿತು ||

**

ಶುಭಕಾರ್ಯಕ್ಕೆ
ಹೊರಟ ವೇಳೆ
ಬೋಳು ಹಣೆಯ ಮುದುಕಿ
ಸಮಾ ಎದುರಿಗೆ ಸಿಕ್ಕಳು
ಮುದಿಕಿಯೀಗ
ಹೊಸ ಮೇಕಪ್ 
ಬಾಕ್ಸು ಕೊಂಡಿದ್ದಾಳಂತೆ ||

***

 ರಸ್ತೆಯಲ್ಲಿ ಪದೇ ಪದೆ
ಎಡಗಾಲು  ಕಲ್ಲಿಗೆ ತಾಗಿ
ಎಡವಿತು.
ಕಲ್ಲು ಕಿತ್ತು ಬಂದಿತು ||

 **


ಕುತೂಹಲದಿಂದ
ಜ್ಯೋತಿಷಿಗಳ ಬಳಿ
ಭವಿಷ್ಯ ಕೇಳಿಸಲು
ಜಾತಕ ಕೊಟ್ಟೆ
ಭವಿಷ್ಯ ಹೇಳುವ ಮುನ್ನ
ಜ್ಯೋತಿಷಿಗಳು
ಇನ್ನಿಲ್ಲವಾದರು ||

***

ದಾರಿಯಲ್ಲಿ ಸಾಗುವಾಗ
ಅಡ್ಡಬಂದಿತು ನರಿ,
ಮುಖ ಸರಿಯಾಗಿ ಕಾಣಲಿಲ್ಲ,
ನೋಡಣವೆಂದು ಬೆನ್ನಟ್ಟಿದೆ
ಅಡ್ಡಗಟ್ಟಿ ಮುಖ ನೋಡಿದೆ
ಶನಿ ಮುಂಡೆಗಂಡನ
ಮುಖ ನೋಡಿದೆ..
ಇನ್ನು ನನ್ನ ಕೆಲಸ ಆದಂತೆ
ಎಂದು ಗೊಣಗಿದ ನರಿ
ವಾಪಾಸು ಮರಳಿತು ||

***
ನಾನು ಎರುದು ಬಂದಾಗ 
ಆತ ಒಂಟಿ ಸೀನು ಸೀನಿದ,
ನನಗೆ ಶೀತವಾಯಿತು ||

**

ಮತ್ತೊಮ್ಮೆ ಖಾಲಿಕೊಡ
ಎದುರು ಬಂದಿತು
ಶಿವ ಶಿವಾ ಎಂದುಕೊಂಡೆ
ಮನಸ್ಸು ಖಾಲಿಯಾಯಿತು ||

***

(ಬರೆದಿದ್ದು : ಶಿರಸಿಯಲ್ಲಿ, ನವೆಂಬರ್ 23, 2013ರಂದು)