Wednesday, September 18, 2013

ಆಶಯ


ಜಾರಿಬಿಡಲಿ ಕಣ್ಣಬಿಂದು
ನೋವ ಮರೆಸುವಲ್ಲಿ
ಚಿಮ್ಮಿ ಬರಲಿ ನಗುವ ಬುಗ್ಗೆ
ನೋವ ನಗಿಸುವಲ್ಲಿ..||

ಕಳೆದಾಗಿದೆ ನೂರು ಕಷ್ಟ
ಮುಂದೆ ಇರಲಿ ನಲಿವ ಬೆಟ್ಟ
ಬಾಳಬುತ್ತಿ ಅರಳೋಮುನ್ನ
ಜಾರಿ ಬಿಡಲಿ ಕಣ್ಣಬಿಂದು..||

ನಲಿವು ಬಾಳ ಸ್ವಪ್ನದಂತೆ
ಮನವ ಮೆರೆಸುತಿರುವುದು
ನೂರು ನೋವು ಎದುರುಬರಲಿ
ನಲಿವು ಹಿಂದೆ ಬರುವುದು..||

(ಇದನ್ನು ಬರೆದಿದ್ದು 23-10-2006ರಂದು ದಂಟಕಲ್ಲಿನಲ್ಲಿ )
(ಈ ಕವಿತೆಯನ್ನು ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರು ರಾಗ ಹಾಕಿ ಹಾಡಿದ್ದಾರೆ.. ಅವರಿಗೆ ಧನ್ಯವಾದಗಳು..)
(ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ. 
ಜೂನ್-ಜುಲೈ 2009ರ ಚೈತ್ರರಶ್ಮಿಯಲ್ಲಿ ಪ್ರಕಟವಾಗಿದೆ)

Saturday, September 14, 2013

ದ್ಯುಮಣಿ ಧಾಮ




ನೀರಿದ್ದರೆ ನಾಡು ಎನ್ನುವ ಮಾತನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಜೀವನದುದ್ದಕ್ಕೂ ಪರಿಸರ ಮಾತೆಯನ್ನು ಪೂಜಿಸಿದವರು ಕಲ್ಕಟ್ಟೆಯ ದ್ಯುಮಣಿ ಶಾಸ್ತ್ರಿ ದಂಪತಿ. ನೀರಿಲ್ಲದೆ ಬದುಕಿಲ್ಲ ಎನ್ನುವುದನ್ನು ಸ್ವತಃ ಅನುಭವದ ಮೂಲಕ ತಿಳಿದುಕೊಂಡು ಅದಕ್ಕಾಗಿ ಜೀವನ ಸವೆಸಿದರು. ನೀರಿಗೆ ಪೂರಕ ಕಾಡು ಎನ್ನುವುದನ್ನರಿತು ಕಾಡು ಬೆಳೆಸಿದರು.ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಗ್ರಾಮದವರಾಗಿದ್ದ ದ್ಯುಮಣಿ ಶಾಸ್ತ್ರಿ 30 ವರ್ಷಗಳ ಹಿಂದೆ ಶಿರಸಿ ನಗರಕ್ಕೆ ಹೊಂದಿಕೊಂಡಿರುವ ಕಲ್ಕಟ್ಟೆ ಎಂಬ ಊರಿನಲ್ಲಿದ್ದ ಜಮೀನಿನ ಉಸ್ತುವಾರಿ ವಹಿಸಿಕೊಂಡರು. ಜಮೀನಿಗೆ ಹೊಂದಿಕೊಂಡಂತೆ ಇದ್ದ ಬೆಟ್ಟ ಪ್ರದೇಶದಲ್ಲಿ ಕಾಡು ಗಿಡ ಮರಗಳಿರಲಿಲ್ಲ. ಬೇಸಿಗೆಯಲ್ಲಿ ಜಮೀನಿಗೆ ನೀರಿನ ಕೊರತೆ ಉಂಟಾಗುತ್ತಿತ್ತು. ಪ್ರಯೋಗಾರ್ಥವಾಗಿ ಕಾಡನ್ನು ಬೆಳೆಸಿದರೆ ನೀರಿಗೆ ಬರ ಬರಲಾರದು ಎನ್ನುವ ಸಾಮಾನ್ಯ ಜ್ಞಾನ ಬಳಸಿ ಕಾಡು ಬೆಳೆಸಲು ಮುಂದಾದರು. ಅಡಕೆ ತೋಟಕ್ಕಾಗಿ ಬಳಸಲ್ಪಡುವ ಹಸಿರೆಲೆ, ಒಣ ಎಲೆಗಳನ್ನು ತರುವುದನ್ನು ನಿಲ್ಲಿಸಿದರು. ಮರಗಿಡಗಳಿಗೆ ರಕ್ಷಣೆ ಒದಗಿಸಿದರು. ಎರಡು ಮೂರು ವರ್ಷಗಳಲ್ಲಿ ಅದರ ಪರಿಣಾಮ ಗೋಚರಿಸತೊಡಗಿತು. ಗಿಡ- ಮರಗಳ ಉದುರಿದ ಎಲೆಗಳು ಭೂಮಿಯ ಮೇಲ್‌ಸ್ತರದ ಮಣ್ಣಿನ ಸವಕಳಿ ತಡೆಯಿತು. ಹಾಗಾಗಿ ಬೆಟ್ಟದಲ್ಲಿ ಬಿದ್ದ ಮಳೆಯ ನೀರು ಅಲ್ಲೇ ಇಂಗಿತು. ಅಂತರ್ಜಲ ಮಟ್ಟವೂ ಏರಿತು.  
ಸಮೃದ್ಧ ಕಾಡು
 ತೋಟಕ್ಕಾಗಿ ಮೀಸಲಾಗಿದ್ದ ಬೆಟ್ಟ ಈಗ ನಳನಳಿಸುವ ಸಮೃದ್ಧ ಕಾಡಾಗಿದೆ. ಈ ಕಾಡಿನಲ್ಲಿ ವನ್ಯಜೀವಿಗಳೂ ಇವೆ. ಆದರೆ ಯಾವುದೇ ಸಂದರ್ಭದಲ್ಲೂ ಅವು ಬೆಳೆಯ ಮೇಲೆ ದಾಳಿ ಮಾಡುವುದಿಲ್ಲ. ಅವುಗಳಿಗೆ ಅದಕ್ಕಾಗಿ ಪುರುಸೊತ್ತೂ ಇಲ್ಲ. ಕಾಡಿನಲ್ಲಿ ವಿವಿಧ ಬಗೆಯ ಹಣ್ಣಿನ ಮರಗಳನ್ನೇ ಸೃಷ್ಟಿಸಿದ್ದಾರೆ. ವರ್ಷಕಾಲವೂ ಒಂದಿಲ್ಲೊಂದು ಜಾತಿಯ ಹಣ್ಣುಗಳು ಯಥೇಚ್ಛವಾಗಿ ವನ್ಯಜೀವಿಗಳಿಗೆ ಸಿಗುತ್ತದೆ. ಹಲಸು, ಮಾವು, ಪೇರಲ, ಮುರುಗಲ, ಉಪ್ಪಾಗೆ ಹೀಗೆ ಹತ್ತು ಹಲವು ಜಾತಿಯ ಹಣ್ಣುಗಳು ಇವರ ಕಾಡಿನಲ್ಲಿವೆ. ಕಾಡು ಜಾತಿಯ ಹಣ್ಣುಗಳೂ ವಿಫುಲವಾಗಿದೆ. ಮಂಗ, ನವಿಲುಗಳಾದಿಯಾಗಿ ಪ್ರತಿಯೊಂದು ವನ್ಯಜೀವಿಗಳು ತಮಗಿಷ್ಟ ಬಂದಂತೆ ಸಂಚರಿಸಿಕೊಂಡು ಕಾಡಿನ ಉತ್ಪನ್ನಗಳನ್ನು ಆಹಾರವನ್ನಾಗಿ ಮಾಡಿಕೊಂಡಿವೆ. ಬೇಟೆಗಾರರಿಂದಲೂ ಅವುಗಳ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. 

ಒಮ್ಮೆ ನೋಡಬೇಕು...
ದ್ಯುಮಣಿ ಶಾಸ್ತ್ರಿಯವರ ಅಡಕೆ ತೋಟವನ್ನು ಪ್ರತಿಯೊಬ್ಬ ಅಡಕೆ ಬೆಳೆಗಾರನೂ ನೋಡಲೇ ಬೇಕು. ತೋಟಕ್ಕೆ ನೀರಾವರಿ ಇಲ್ಲವೇ ಇಲ್ಲ. ತೋಟದಲ್ಲಿ ಜವುಳು ಆಗದಂತೆ ತೋಡುವ ಕಾಲುವೆಗಳಿಲ್ಲ. ಅಡಕೆ ಮರಕ್ಕೆ ಬೇಕಾಗಬಹುದಾದ ಗೊಬ್ಬರ ಹಾಕುವುದಿಲ್ಲ. ತೋಟದಲ್ಲಿ ಬೆಳೆಯುವ ಕಳೆಯನ್ನು ಹಾಗೇ ಬಿಡಲಾಗುತ್ತದೆ. ತೋಟಕ್ಕಾಗಿ ಇವರು ನೀಡುತ್ತಿರುವುದೆಂದರೆ ಸಗಣಿಯ ಸ್ಲರಿಯ ಸಿಂಪಡಣೆ. ಅದು ಅಡಕೆ ಮರಗಳಿಗೆ ಸಾಕಾಗುತ್ತದೆ. ಮರದ ಬುಡದಲ್ಲಿ ನೀರಿಗೇನೂ ಕೊರತೆಯಿಲ್ಲ. ಹಾಗಾಗಿ ಅಡಕೆ ಬೆಳೆಗೆ ಇನ್ನೇನು ಬೇಕು ಎನ್ನುವ ಮನೋಭಾವದಲ್ಲಿ ಕೃಷಿ ಮಾಡಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆಗೂ ಇದು ಉತ್ತರವಾಗುತ್ತದೆ. ತೋಟದ ಬೆಳೆಯಲ್ಲಿ ಉತ್ತಮ ಇಳುವರಿಯನ್ನೇ ಪಡೆಯುತ್ತಾರೆ. ಅಡಕೆ ತೋಟದಲ್ಲಿ ಬಾಳೆ, ಪೇರಲ, ನೇರಳೆ, ಬೆಣ್ಣೆ ಹಣ್ಣುಗಳಿದ್ದರೆ ಅಂಚಿನಲ್ಲಿ ಹುಲುಸಾಗಿ ಬೆಳೆ ನೀಡುತ್ತಿರುವ ತೆಂಗು ಕಂಗೊಳಿಸುತ್ತದೆ. ತೋಟದ ಬುಡದಲ್ಲಿ ನೋಡಿದವರು ಯಜಮಾನನ ನಡೆ ಕುರಿತು ಟೀಕಿಸುತ್ತಾರೆ. ಆದರೆ, ಅಡಕೆ ಮರದ ತುದಿಯಲ್ಲಿರುವ ಕೊನೆ ನೋಡಿ ಕಂಗಾಲಾಗುತ್ತಾರೆ.  
ನಿಸರ್ಗ ಬಳಕೆ 
ದ್ಯುಮಣಿ ಶಾಸ್ತ್ರಿಯವರು ಸೌರಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದಲ್ಲಿ ಒಣಗಿಸಬಹುದಾದ ತೋಟದ ಬೆಳೆಗಳು, ಹಣ್ಣು, ಸಂಗ್ರಹಿಸಿಟ್ಟಿರುವ ಧಾನ್ಯ ಕೆಡದಂತೆ ಸೌರಮನೆಯಲ್ಲಿಡಲಾಗುತ್ತದೆ. ಬೇಸಿಗೆಯಲ್ಲೂ ಮೋಡ ಕವಿದ ವಾತಾವರಣವಿದ್ದರೂ ಅಡಕೆ ಒಣಗಿಸಲು ಯಾವುದೇ ತೊಂದರೆಯಿಲ್ಲ. ವರ್ಷವಿಡೀ ಶಾಖ ಶಕ್ತಿ ಉತ್ಪಾದನೆಯಾಗುತ್ತದೆ. ಇದರಿಂದಾಗಿ ಉರುವಲು ಕಟ್ಟಿಗೆಯ ಅವಲಂಬನೆ ತಪ್ಪಿದೆ. ಬಟ್ಟೆಯನ್ನು ಇಲ್ಲೇ ಒಣಹಾಕಲಾಗುತ್ತದೆ. ಎಲ್ಲ ರೀತಿಯಲ್ಲೂ ಪ್ರಕೃತಿಯ ಮೇಲೆ ಒತ್ತಡ ಹಾಕದೇ, ನೈಸರ್ಗಿಕವಾಗಿ ಸಿಗಬಹುದಾದ ನೀರು, ಶಕ್ತಿ ಇಂಥವುಗಳ ಬಳಕೆ ಮಾಡಿಕೊಂಡಿದ್ದಾರೆ.  
ಕಾಡಿನ ಕೊಡುಗೆ 
ತಿಂದ ಹಣ್ಣಿನ ಬೀಜ, ಒರಟೆಗಳನ್ನು ಕಾಡಿಗೆ ಚೆಲ್ಲಲಾಗುತ್ತದೆ. ತಮ್ಮಷ್ಟಕ್ಕೆ ತಾವು ಚಿಗುರಿ ಸಸಿಯಾಗಿ ಮರವಾಗುತ್ತಿದೆ. ಕಾಡನ್ನು ಅದರ ಪಾಡಿಗೆ ಬಿಟ್ಟಿದ್ದಾರೆ. ಕಾಡಿನ ಪ್ರಾಣಿಗಳು ಇದರ ಹೊರಗೆ ಬರುವ ಅಗತ್ಯವೇ ಇಲ್ಲ. ಕಾಡುಕುರಿ, ಜಿಂಕೆ, ನವಿಲು ಹೀಗೆ ಪ್ರಾಣಿ ಸಂಕುಲಗಳ ತಂಡವೇ ಇವರ ಕಾಡಿನಲ್ಲಿದೆ. ಕಾಡು ಬೆಳೆಯಲು ಅವು ತಮ್ಮದೇ ಆದ ಕೊಡುಗೆಯನ್ನು ಕೊಡುತ್ತಿವೆ. ಕಾಡಿಗೆ ಬೆಂಕಿ ತಗುಲದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಕಾಡುಮಲ್ಲಿಗೆ, ಹೆಗ್ಗರಣಿ, ಮಧುನಾಶಿನಿ, ಗಣಪೆ, ಸೀಗೆ ಮುಂತಾದ ಬಳ್ಳಿಗಳು ಮರಗಳ ಆಶ್ರಯ ಪಡೆದಿವೆ. ಅನೇಕ ಬೆಟ್ಟ ಪ್ರದೆಶಗಳಲ್ಲಿ ಕಣ್ಮರೆಯಾಗುತ್ತಿರುವ ಕುಂಟುನೇರಳೆ, ಚಂದಕಲು, ಬಿಕ್ಕೆ, ಸುರಹೊನ್ನೆ, ಹೆಬ್ಬೇವು, ಸಂಪಿಗೆ, ಹೆಬ್ಬಲಸು, ಅಮಟೆ, ನೆಲ್ಲಿ, ಮದ್ದಾಲೆ, ಬೊಬ್ಬಿ ಮುಂತಾದ ಮರಗಳು ಸೋಂಪಾಗಿ ಬೆಳೆದು ನಿಂತಿವೆ. ಇವೆಲ್ಲ ಕಾಡಿನ ಕಥೆಯನ್ನು ಹೇಳುತ್ತ ನೀರನ್ನು ಕೊಡುತ್ತಿವೆ.

Wednesday, September 11, 2013

ಅಜ್ಜಿ ಗುಂಡಿ


    ಕರ್ನಾಟಕದ ಕಾಶ್ಮೀರ ಎಂಬ ಖ್ಯಾತಿಗೆ ಪಾತ್ರವಾದ ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಜಲಪಾತಗಳಿವೆ. ಹಲವು ಪ್ರಸಿದ್ಧಿಗೆ ಬಂದಿದ್ದರೂ ಮತ್ತೆ ಕೆಲವು ನಿಸರ್ಗದ ಮಡಿಲಿನಲ್ಲಿಯೇ ಉಳಿದುಕೊಂಡಿವೆ. ಅಂತವುಗಳ ಸಾಲಿಗೆ ಸೇರುವುದು ಯಲ್ಲಾಪುರ ತಾಲೂಕಿನ ಅಜ್ಜಿಗುಂಡಿ ಜಲಪಾತ.
    ಸುತ್ತಮುತ್ತಲೂ ಬೆಟ್ಟ, ಗುಡ್ಡ, ಕಾಡುಗಳು. ಜೊತೆ ಜೊತೆಗೆ ಹಸಿರು ಮೆರೆಯುವ ತೋಟಗಳು. ಇದರ ನಡುವೆ ಹರಿಯುವ ಬೆಣ್ಣೆ ಜಡ್ಡಿ ಹಳ್ಳ. ಕಾಳಿ ನದಿಯನ್ನು ಓಡೋಡಿ ಮುಟ್ಟುವ ತವಕದಲ್ಲಿ ಗುಡ್ಡಬೆಟ್ಟಗಳಿಂದ ಕೆಳಗೆ ಧುಮುಕುತ್ತಾಳೆ ಆಕೆ. ಇಂತಹ ಸಂದರ್ಭದಲ್ಲಿಯೇ ಜಲಪಾತವೂ ಸೃಷ್ಟಿಯಾಗಿದೆ.
    ಈ ಜಲಪಾತ ಅಷ್ಟೇನೂ ದೊಡ್ಡದಲ್ಲ. 40-50 ಅಡಿ ಎತ್ತರದಿಂದ ಜಲಲ ಜಲಲ ಜಲಧಾರೆಯಾಗಿ ಕುಣಿಯುತ್ತ ಇಳಿಯುತ್ತಾಳೆ. ಜಲಪಾತದಕ್ಕೆ ಎರಡು ಹಂತಗಳಿವೆ. ಮೆಲಿನ ಹಂತ ಆರು ಅಡಿ ಎತ್ತರದ್ದಾಗಿದ್ದರೆ ಕೆಳಗಿನದ್ದು ದೊಡ್ಡದು. ಆರು ಅಡಿ ಎತ್ತರದಿಂದ ಧುಮುಕುವ ಮೊದಲನೇ ಹಂತದ ಬುಡಕ್ಕೆ ಹೋಗಿ ಬೀಳುವ ನೀರಿಗೆ ತಲೆಕೊಟ್ಟು ಕುಳಿತರೆ ಜಲಪಾತಕ್ಕೆ ಬಂದಿದ್ದೂ ಸಾರ್ಥಕ ಎನ್ನಿಸುತ್ತದೆ. ಗುಡ್ಡಗಳನ್ನು ಇಳಿದು ಶ್ರಮಪಟ್ಟು ಬರುವ ಸುಸ್ತೆಲ್ಲ ಒಂದೇಟಿಗೆ ಮಾಯವಾಗುತ್ತದೆ.
    ಕೆಳಗಿನ ದೊಡ್ಡ ಹಂತ ಹಸಿರು ಹಾವಸೆಗಳ ಜೊತೆಗೆ ಕೂಡಿಕೊಂಡಿದ್ದು ನೀರಿರುವ ಸಂದರ್ಭದಲ್ಲಿ ಬಲು ಸುಂದರವಾಗಿ ಕಾಣುತ್ತದೆ. ವರ್ಷದ 365 ದಿನವೂ ಈ ಜಲಪಾತವನ್ನು ನೋಡಲು ಸಾಧ್ಯ. ಜಲಪಾತದ ಬುಡಕ್ಕೆ ಇಳಿಯುವುದೂ ಸುಲಭ. ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತದೆ. ಆದರೆ ಜಲಪಾತದ ಆಕರ್ಷಣೆ ಹೆಚ್ಚುತ್ತದೆ. ತಟ್ಟನೆ ನೋಡಿದರೆ ಕೊಡಗಿನ ಅಬ್ಬಿ ಜಲಪಾತವನ್ನು ನೆನಪಿಸುವ ಅಜ್ಜಿಗುಂಡಿ ಜಲಪಾತದ ಸೌಂದರ್ಯದಲ್ಲಿ ಶೀಖರಪ್ರಾಯ.
    ಯಲ್ಲಾಪುರದಿಂದ 22 ಕಿ.ಮಿ ದೂರದ ಶಾಂತಿವನ ತಾರಗಾರ್ ಎಂಬಲ್ಲಿ ಈ ಜಲಪಾತವಿದೆ. ಯಲ್ಲಾಪುರದಿಂದ ದಿನಕ್ಕೆರಡು ಬಾರಿ ಬೀಗಾರ್ ಎಂಬಲ್ಲಿಗೆ ಬಸ್ ಸೌಕರ್ಯವಿದೆ. ಶಾಂತಿವನ ಕ್ರಾಸ್ನಲ್ಲಿ ಇಳಿದು ಕೂಗಳತೆ ದೂರದಲ್ಲಿರುವ ಜಲಪಾತಕ್ಕೆ ನಡೆದುಕೊಂಡು ಹೋಗಬಹುದು. ಹಸಿರು ಗುಡ್ಡ, ತೋಟ ಪಟ್ಟಿಗಳ ನಡುವೆ ಸರ್ವ ಋತುವಿನಲ್ಲಿಯೂ ಈ ಜಲಪಾತದ ದರ್ಶನ ಸಾಧ್ಯವಿದೆ.
ಜಲಪಾತದ ಮೇಲ್ಭಾಗದಲ್ಲಿ ತಾರಗಾರ್ ಊರಿಗೆ ನೀರಾವರಿ ವ್ಯವಸ್ಥೆಗಾಗಿ ಒಡ್ಡು ನಿಮರ್ಾಣ ಮಾಡಲಾಗಿದೆ. ಆದ್ದರಿಂದ ಪ್ರವಾಸಿಗರು ಆಗಮಿಸಿದ ಸಂದರ್ಭದಲ್ಲಿ ಜಲಪಾತಕ್ಕಾಗಿ ನೀರನ್ನು ಬಿಡಲಾಗುತ್ತದೆ. ಮಳೆಗಾಲದಲ್ಲಿ ದುದ್ರರಮಣೀಯವಾಗಿ ಕಾಣುವ ಈ ಅಜ್ಜಿಗುಂಡಿ ಜಲಪಾತ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಕಿಲ ಕಿಲ ಕಲರವವನ್ನು ಮಾಡುತ್ತದೆ. ವಾರಾಂತ್ಯದಲ್ಲಿ ಆಗಮಿಸಿ ದಿನವಹಿ ಉಳಿದು ಸವಿಯನ್ನು ಸವಿಯಲು ಇದೊಂದು ಉತ್ತಮ ಪಿಕ್ನಿಕ್ ತಾಣ.
    ಜಲಪಾತದ ತಲೆಯ ಭಾಗದಲ್ಲಿಯೇ ಮನೆಯೊಂದಿದ್ದು ಜಲಪಾತದ ಸೌಂದರ್ಯಕ್ಕೆ ಕೀರೀಟದಂತೆ ಕಾಣಿಸುತ್ತದೆ. ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಈ ಪ್ರದೇಶದಲ್ಲಿ ಎಸೆಯುವುದು ನಿಷೇಧ. ಪ್ಲಾಸ್ಟಿಕ್ ಎಸೆದಿದ್ದು ಕಣ್ಣಿಗೆ ಬಿದ್ದರೆ ಸ್ಥಳೀಯರು ದಂಡವನ್ನು ಹಾಕುತ್ತಾರೆ. ತಾರಗಾರ್ನಲ್ಲಿ ಉಳಿದುಕೊಳ್ಳಲು ಸೌಕರ್ಯವಿದೆ. ಈ ಜಲಪಾತಕ್ಕಾಗಿ ಆಗಮಿಸಿದವರು ಸುತ್ತಮುತ್ತಲ ಸೌಂದರ್ಯವನ್ನು ಆಸ್ವಾದಿಸಬಹುದು. ಜೊತೆಗೆ ಸನೀಹದಲ್ಲೇ ಇರುವ ಬಾವಲಿಗುಹೆ, ಸಾತೊಡ್ಡಿ ಜಲಪಾತ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.
ಹೀಗೆ ಬನ್ನಿ
    ಈ ಜಲಪಾತಕ್ಕೆ ಆಗಮಿಸುವವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಆಗಮಿಸಿ, ಅಲ್ಲಿಂದ 22 ಕಿ.ಮಿ ದೂರದ ವಜ್ರಳ್ಳಿ ಬಳಿ ಬಂದು ಭಾಗಿನಕಟ್ಟಾ-ಬೀಗಾರ್ ಮಾರ್ಗದಲ್ಲಿ 5-6 ಕಿ.ಮಿ ಸಾಗಿದರೆ ತಾರಗಾರ್ ಊರು ಸಿಗುತ್ತದೆ. ಇಲ್ಲೇ ಈ ಜಲಪಾತವಿದೆ. ಇಲ್ಲಿಗೆ ಬರುವವರು ಗಣೇಶ ಹೆಗಡೆ ತಾರಗಾರ 8762951448 ಅಥವಾ ಗಣೇಶ ಕಿರಿಗಾರಿ 08419-238070, 944112440 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಅಗತ್ಯ ಮಾರ್ಗದರ್ಶನ ನೀಡುತ್ತಾರಲ್ಲದೇ ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಾರೆ.
(ಕನ್ನಡಪ್ರಭದ ಬೈ2ಕಾಫಿಯಲ್ಲಿ ಪ್ರಕಟಗೊಂಡಿದೆ)

Friday, September 6, 2013

ದೀಪವಾಗುವಾ



ದೀಪವಾಗುವಾ ಬನ್ನಿ
ತಿಮಿರ ಕಳೆಯುವಾ..||

ಒಡಲಿನಲ್ಲಿ ಕತ್ತಲಿಟ್ಟು
ಸುತ್ತ ಬೆಳಕ ಪ್ರಭೆಯ ಬಿಟ್ಟು
ಜೀವರಸವ ಒತ್ತೆಯಿತ್ತು
ಬಾಳು ಬೆಳಗುವಾ..||

ಕರಿಯ ಮುಸುಕು ಓಡಿಸಿ
ಬೆಳ್ಳಿ ಬೆಳಕು ಮೂಡಿಸಿ
ಹೊಸತು ಆಸೆ ಹುಟ್ಟಿಸಿ
ಮಿನುಗಿ ಮೆರೆಯುವಾ..||

ಒಡಲ ಬತ್ತಿ ಉರಿಯುವಾಗ
ಜೀವ ತೈಲ ಆರುವಾಗ
ವ್ಯರ್ಥ ಬಾಳು ಬೆಳಗುವಾಗ
ಉರಿದು ಅರಿಯುವಾ..|


ಇದನ್ನು ಬರೆದಿದ್ದು 5-10-2006ರಂದು ದಂಟಕಲ್ಲಿನಲ್ಲಿ
(ಈ ಕವಿತೆಯು ಜೂನ್ 2007ರ ಚೈತ್ರರಶ್ಮಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.. ಕಾರವಾರದ ಆಕಾಶವಾಣಿಯಲ್ಲಿ 23-01-2008ರಂದು ವಾಚಿಸಲಾಗಿದೆ..)

Tuesday, September 3, 2013

ಭಾವಗೀತೆ



ಭಾವಗೀತೆ ನಾನು ಬರೆದೆ
ಭಾವಜೀವಿಯಾಗಿ
ಜೀವ ಜೀವದ ಜೊತೆಗೆ ಬೆರೆತೆ
ಭಾವ ಭಾಷಿಯಾಗಿ..||

ಭಾವದಲ್ಲಿ ಜೀವ ಬೆರೆತು
ಜೀವದಲ್ಲಿ ಭಾವ ಬೆರೆತು
ಹೃದಯಂಗಮವಾಯಿತು
ಜಗದಿ ಚೆಲುವ ಮೆರೆಸಿತು..||

ಜೀವದಲ್ಲಿ ಭಾವ ಅರಿಯೆ
ಏನು ಅಂದ ಚೆಂದವೋ,
ಜೀವ ಒಂದು ಭಾವ ಅರಿಯೆ
ಹೃದಯ ಭಾವ ಬಂಧವೋ..!

ಬರೆದಿದ್ದು : ದಂಟಕಲ್ಲಿನಲ್ಲಿ 16-05-2004ರಂದು
ಈ ಕವಿತೆಗೆ ರಾಗ ಹಾಕಿ ಹಾಡಿದ ಗಿರೀಶ್ ಕಲ್ಲಾರೆ ಹಾಗೂ ಪೂರ್ಣಿಮಾ ಅವರಿಗೆ ಧನ್ಯವಾದಗಳು