Sunday, August 18, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 7

ಏಳನೇ ಭಾಗ..


ಗುಡಲೂರಿನಲ್ಲಿ ಮಲಗುವ ಮುನ್ನ ಮನಸ್ಸಿನಲ್ಲಿದ್ದುದು ವಯನಾಡಿನ ಟೀ ತೋಟಗಳು..
ಕುತೂಹಲ ಬೀರುವ ಗುಡ್ಡ ಬೆಟ್ಟಗಳು..
ಟಿ.ವಿ ಇರುವ ರೂಮು ಬೇಕೆಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿತ್ತಲ್ಲ.. ಅದ್ಯಾವುದೋ ಚಾನಲ್ಲಿನಲ್ಲಿ ಸಿನೆಮಾ ನೋಡುವ ವ್ಯರ್ಥ ಪ್ರಯತ್ನ ಮಾಡಿದೆವು.. ತಮಿಳು, ಮಲೆಯಾಳಮ್, ಹಿಂದು ಚಾನಲ್ಲುಗಳ ಸಾಲು ಸಾಲಿತ್ತು..
ಉದಯ ಟಿವಿಯೋ ಮತ್ಯಾವುದೋ ಒದೆರಡು ಕನ್ನಡ ಚಾನಲ್ಲುಗಳಿದ್ದವು..
ತೆಲಗು ಸಿನೆಮಾ ಅರ್ಧ ನೋಡಿ ಮುಗಿಸುವುದರೊಳಗೆ ನಿದ್ರಾದೇವಿ ನಮ್ಮನ್ನು ಅಪ್ಪಿಕೊಂಡಿದ್ದಳು..

ಮುಂಜಾನೆ ಎದ್ದು `ದರ್ಶನ ಲಾಡ್ಜಿನ' ಟೆರೆಸ್ ಮೇಲಿನಿಂದ ನೋಡಿದರೆ ಇಬ್ಬನಿಯ ಮಾಲೆ ಗುಡಲೂರನ್ನು ಮುತ್ತಿತ್ತು..
ಯಾವುದೋ ಯೂರಪ್ ರಾಷ್ಟ್ರದಲ್ಲಿ ವಿಹಾರ ಮಾಡಿದ ಅನುಭವ,.
ರಸ್ತೆಯಲ್ಲಿ ವಾಹನಗಳು ಲೈಟ್ ಹಾಕಿ ನಿಧಾನವಾಗಿ ಚಲಿಸುತ್ತಿದ್ದುದನ್ನು ನೋಡುವುದೇ ಚೆಂದ ಮಾರಾಯ್ರೆ..
ರಸ್ತೆಯಲ್ಲ ಬೆಳ್ಳಗೆ.. ವಾಹನಗಳು ಮೆಲ್ಲಗೆ...
ಅದ್ಯಾಕೋ ಗುಡಲೂರು ಬಹಳ ಸೆಳೆಯಿತು..
ತುಂಬ ಇಷ್ಟವಾಯಿತು.. ಪದೆ ಪದೆ ನೆನಪಾಗುವಂತಾಯಿತು..
ಕೊನೆಗೊಮ್ಮೆ ಚೆಕ್ ಔಟ್ ಆಗಿ ಹೊರ ಬಂದು ಅಲ್ಲೇ ಹತ್ತಿರದಲ್ಲಿ `ಸಾಪಡ್' ಖ್ಯಾತಿಯ ಹೊಟೆಲಿಗೆ ಲಗ್ಗೆ ಇಟ್ಟು ಮಸ್ಸಾಲೆ ದೋಸೆಗೆ ಆರ್ಡರ್ ಮಾಡಿದೆವು..
ದೋಸೆ ಬಿಸಿ ಬಿಸ್ಸಿ ಬಂತು.. ತಿಂದು.. ಮಸ್ಸಾಲೆ ಟೀ ಕುಡಿದು ಬೈಕೇರಿದೆವು..

ಊಟಿ ಮೈಸೂರು ದಾರಿಯಲ್ಲಿ ಗುಡಲೂರು ಪಟ್ಟಣದಲ್ಲಿಯೇ ಕೊಂಚ ದೂರ ಸಾಗಿ ನಂತರ ಎಡಕ್ಕೆ ಹೊರಳಿದರೆ ವಯನಾಡಿನ ರಸ್ತೆ ಸಿಗುತ್ತದೆ.. ಇಲ್ಲಿ ಎರಡು ರಸ್ತೆಗಳಿವೆ.. ಒಂದು ರಸ್ತೆ ನೀರ ಕೋಜಿಕ್ಕೋಡ್ ಗೆ ತೆರಳಿದರೆ ಇನ್ನೊಂದು ರಸ್ತೆ ಸುಲ್ತಾನ್ ಬತ್ತೇರಿ ಮೂಲಕ ಸಾಗುತ್ತದೆ.. ಗುಡಲೂರಿನಿಂದ ಸುಲ್ತಾನ್ ಬತ್ತೇರಿಗೆ 50-60 ಕಿಮಿ ದೂರ. ನಾವು ಆರಿಸಿಕೊಂಡಿದ್ದು ಇದೇ ಮಾರ್ಗ. ಸಿನೆಮಾದಲ್ಲಿ ಕಾಡಿದ್ದ ಎಡಕಲ್ಲು ಗುಡ್ಡ ನೋಡುವುದು, ಟೀ ತೋಟಗಳಲ್ಲಿ ಓಡಿ.. ಆಡುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು.. ಇಲ್ಲಿ ನಾನು ರಾಘುವಿನ ಬೈಕೇರಿದೆ.. ಕಿಟ್ಟು ಮೋಹನನ ಬೈಕೇರಿದ..
ಮುಂದೆ ಮುಂದೆ ಸಾಗಿದಂತೆಲ್ಲ ನಮ್ಮ ಕಣ್ಣ ಮುಂದೆ ಟೀ ತೋಟಗಳದ್ದೇ ದೃಶ್ಯ ವೈಭವ.. ಏನೋ ಥ್ರಿಲ್ಲು...

ಈ ರಸ್ತೆ ಥೇಟು ನಮ್ಮ ಶಿರಸಿ-ಹುಲೇಕಲ್ ರಸ್ತೆಯ ಹಾಗೆಯೇ ಇದೆ.. ಇನ್ನೂ ಕಾಡು.. ತಿರುವು, ಮುರುವು.. ಅಪ್ ಎಂಡ್ ಡೌನ್.. ಅದೆಂತದೋ ತರಹೇವಾರಿ ಊರುಗಳು.. ಹೆಸರುಗಳು ನೆನಪಿನಲ್ಲಿ ಉಳಿಯುವಂತದ್ದಲ್ಲ.. ಅಲ್ಲೊಂದು ಕಡೆ ದಟ್ಟ ಕಾಡು.. ಬಹುಶಃ ಬಂಡಿಪುರ-ನಾಗರಹೊಳೆ-ಮಧುಮಲೈ ಅರಣ್ಯಗಳೆಲ್ಲ ಸೇರಿದ ಕಾಡಿನ ಭಾಗವಿರಬೇಕು.. ಅದು ಕಳೆಯುವಷ್ಟರಲ್ಲಿ ತಮಿಳುನಾಡು-ಕೇರಳ ಗಡಿ ಭಾಗದ ಚೆಕ್ ಪೋಸ್ಟ್ ಸಿಕ್ಕಿತು.. ದಾಟಿ ಮುನ್ನಡೆದೆವು.. ಆ ನಂತರದ ವಾತಾವರಣ ವಿಚಿತ್ರ ವೆನ್ನಿಸತೊಡಗಿತು..
ಆ ಕಾಡು ಕಳೆಯುತ್ತಿದ್ದಂತೆಯೇ ಒಂದು ಊರು.. ಊರ ತುಂಬ ಮಸೀದಿಗಳು.. ಗುಮ್ಮಟಗಳು.. ಅದೆಂತದ್ದೋ ವಿಚಿತ್ರ ವಾಸನೆ.. ದೌರ್ಭಾಗ್ಯ ನೋಡಿ ಮನೆಗಳ ಮುಂದೆ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿದ್ದವು.. ಯಾ ಅಲ್ಲಾಹ್... ಇದೆಲ್ಲಿಗೆ ಬಂದೆವು..? ನಮಗೆ ಗೊತ್ತಿಲ್ಲದಂತೆಯೇ ಅದ್ಯಾವುದೋ ಪಾಕಿಸ್ತಾನದ ನಾಡನ್ನು ಹೊಕ್ಕೆವಾ..? ಜೊತೆಯಲ್ಲಿದ್ದ ಮೋಹನ ಕುದ್ದು ಹೋದ.. ಇವ ಎಲ್ಲಿ ಬೈಯಲು ಶುರು ಹಚ್ಚಿಕೊಳ್ಳುತ್ತಾನೋ ಎನ್ನುವ ಭಯ ನಮ್ಮದು.. ಕೇರಳದಲ್ಲಿ ಮುಸ್ಲೀಮರು ಬಹುಸಂಖ್ಯಾತರು ಎಂದು ಕೇಳಿದ್ದ ನಮಗೆ ಪ್ರತ್ಯಕ್ಷವಾಗಿ ಅರಿವಿಗೆ ಬಂದಿತು..

ಆ ಊರು ಕಳೆಯುವಷ್ಟರಲ್ಲಿ ಒಂದಷ್ಟು ಟೀ ತೋಟಗಳು ನಮಗೆ ಕಂಡು ಮನಸ್ಸು ತಿಳಿಯಾಯಿತು..
ಅಲ್ಲಿ ಒಂದು ಕಡೆ ರಸ್ತೆಗೆ ಚಾಚಿಕೊಂಡಿದ್ದ ಟೀ ತೋಟ ಕಂಡೊಡನೆ ನಮ್ಮ ವಾಹನಕ್ಕೆ ಬ್ರೇಕ್ ಬಿದ್ದಿತು..
ಇಳಿದು ಸೀದಾ ತೋಟಕ್ಕೆ ನುಗ್ಗಿದ್ದೇ.. ಆ ಸಂದರ್ಭದಲ್ಲಿ ಅದ್ಯಾರಾದರೂ ತೋಟದ ಮಾಲಿಕ ನಮ್ಮನ್ನು ಕಂಡಿದ್ದರೆ ಯಾರೋ ಕಳ್ಳರು ನಿಗ್ಗಿದ್ದಾರೆ ಎಂದು ಗುಂಡು ಹಚ್ಚಿ ಬಿಡುತ್ತಿದ್ದನೇನೋ..
ಒಂದಷ್ಟು ಪೋಟೋ ಸೆಷನ್ನುಗಳು ಮುಗಿದವು..
ಅಲ್ಲೊಂದು ಅನಾಥ ಗೇಟಿನ ತರಹದ ಆಕೃತಿಯಿತ್ತು.. ಅದಕ್ಕೊಂದು ಕುಣಿಕೆ.. ಅದೆಂತದ್ದು ಎನ್ನುವುಚು ಅರ್ಥವಾಗಲಿಲ್ಲ..
ರಾಘವ ಹೋದವನೇ ನೇಣು ಹಾಕಿದವರ ರೀತಿ ಪೋಸು ಕೊಟ್ಟ.. ಪೋಟೋ ಕ್ಲಿಕ್ಕಿಸಿ ಮುಗಿಯಿತು..
ಕಿಟ್ಟುವಂತೂ ` ಹ್ವಾ.. ಇಲ್ಲೇ ಇಷ್ಟು ಸೊಲಿಡ್ಡಿದ್ದು.. ಇನ್ನು ವಯನಾಡಲ್ಲಿ ಎಷ್ಟು ಮೊಸ್ತಿದ್ದಿಕ್ಕಲೇ..' ಎಂದ..
ಮೋಹನ.. ಮಾರಾಯಾ ಯಾರಿಗೆ ಗೊತ್ತು.. ವಯನಾಡು ಖರಾಬಾಗಿ ಇದ್ದಿರಲಿಕ್ಕೂ ಸಾಕು ಎಂದು ಹೇಳಿದ..
ನಾವು ಮುನ್ನಡೆದೆವು..
ಮಂಜು ಸುರಿಯುವ ದಾರಿಯಲ್ಲಿ ಸೂರ್ಯ ನೆತ್ತಿಗೆ ಬರುವ ಮೊದಲು ನಾವು ಸುಲ್ತಾನ್ ಬತ್ತೇರಿಯನ್ನು ತಲುಪಿದೆವು..
ಇಲ್ಲಿಗೇನೋ ಬಂದೆವು.. ಮುಂದೆಲ್ಲಿ ಹೋಗುವುದು/..?
ಕಾಡಿತು ಗೊಂದಲ.. ವಯನಾಡಿನ ಐಡಿಯಾ ಕೊಟ್ಟ ಮೋಹನನಿಗೂ ವಯನಾಡಿನಲ್ಲಿ ನೋಡುವುದು ಏನನ್ನು ಎನ್ನುವುದು ಗೊತ್ತಿರಲಿಲ್ಲ.. ಕೇಳಬೇಕಲ್ಲ... ಯಾರನ್ನು ಕೇಳುವುದು..?
ಯಾರನ್ನು ನೋಡಿದರೂ ಲುಂಗಿ..ಗಳು.. ಗಡ್ಡಗಳು.. ಹಣೆಯ ಮೇಲೆ ಶ್ರೀಗಂಧದ ಅಡ್ಡ ಗೆರೆಗಳು..
ಸ್ವಾಮಿಯೇ ಅಯ್ಯಪ್ಪಗಳು.. ಅಲ್ಲಾ ಹೋ ಅಕ್ಬರ್ ಗಳು..

ಅದ್ಯಾರೋ ಪುಣ್ಯಾತ್ಮನಿಗೆ ನಮ್ಮ ಪಾಡು ಅರ್ಥವಾಯಿತಿರಬೇಕು..
ಮಲೆಯಾಳಮ್ಮಿನಲ್ಲಿ ಅದೇನೋ ಕೇಳಿದ..
ನಾವು ಕಣ್ಣು ಕಣ್ಣು ಬಿಟ್ಟೆವು.. ಹಿಂದಿಯಲ್ಲಿ ಮೋಹನ, ಕಿಟ್ಟು ಮಾತಾಡಿದೆವು..
ನಾನು ರಾಘು ಸುಮ್ಮನೆ ಪೋಸು ಕೊಟ್ಟೆವು..
ಕೊನೆಗೆ ಆತ ಕೋಜಿಕ್ಕೋಡ್ ರಸ್ತೆಯನ್ನು ತೋರಿಸಿ ಗೋ ಸ್ಟ್ರೇಟ್.. ಟೇಕ್ ಲೆಪ್ಟ್ ಎಂದ.. ವೋಕೆ ವೋಕೆ.. ಥ್ಯಾಂಕ್ಸುಗಳು ಎಂದು ಮುಂದೆ ಹೊರಟೆವು..
ಅಲ್ಲೆಲ್ಲೊ ಕೆಂದಾಳಿ ಮುಮಡಿಗೆ ತರದ ಎಳನೀರು ನಮ್ಮನ್ನು ಬಾ ಕುಡಿ.. ಬಾಕುಡಿ ಎಂದು ಕರೆದವು..
ಕುಡಿಯೋಣ ಎಂದು ಕತ್ತರಿಸಿ ಬಾಯಿಗೆ ಹಾಕಿದರೆ ಅದು ಸೀಯಾಳವಲ್ಲ ಮಾರಾಯ್ರೆ...
ಪುಲ್ ಬೆಳೆದು ಹೋಗಿ ಕಾಯಾಗಿಬಿಟ್ಟಿದೆ.. ಕೊನೆಗೆ 20 ರು. ಕೊಟ್ಟು ಕುಡಿದು ಬಂದೆವು..


ವಯನಾಡು ಕೇರಳದ ಕೊಟ್ಟ ಕೊನೆಯಲ್ಲಿರುವ ಜಿಲ್ಲೆ.. ಒಂದು ಕಡೆ ಕರ್ನಾಟಕ ಇನ್ನೊಂದು ಕಡೆಗೆ ತಮಿಳುನಾಡು.. ನಡುವೆ ಇರುವ ವಯನಾಡಿನಲ್ಲಿ ಸುಲ್ತಾನ್ ಬತ್ತೇರಿ ಪ್ರಮುಖ ಪಟ್ಟಣ.. ಕಲ್ಪೆಟ್ಟಾ ಜಿಲ್ಲಾ ಕೇಂದ್ರ..
ಪ್ರವಾಸೋದ್ಯಮವನ್ನೇ ಮೂಲವಾಗಿಟ್ಟುಕೊಂಡ ಜಿಲ್ಲೆ.. ಕೊಜಿಕ್ಕೋಡ್-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ..
ಎಡಕಲ್ಲು ಗುಡ್ಡ, ಕಲ್ಪೆಟ್ಟಾ,  ಸುಲ್ತಾನ್ ಬತ್ತೇರಿ, ಬ್ರಹ್ಮಗಿರಿ ಬೆಟ್ಟ, ವೈತಿರಿ, ಮಾನಂತವಾಡಿ, ಮೀನಮುಟ್ಟಿ ಜಲಪಾತ ಹೀಗೆ ಹೇರಳವಾದ ಪ್ರವಾಸಿ ತಾಣಗಳು ಇಲ್ಲಿವೆ.. ಗೊತ್ತಿದ್ದವರಿಗೆ ಮಾತ್ರ ವಯನಾಡು ಸುಲಭವಾಗಿ ಅರ್ಥವಾಗುತ್ತದೆ.. ಇಲ್ಲವಾದರೆ ಮ್ಮೆ ಮ್ಮೆ ಮ್ಮೆ ಅಥವಾ.. ಬ್ಬೆ ಬ್ಬೆ ಬ್ಬೆ.. ಯೇ ಗತಿ..

ನಮ್ಮ ಪಾಡು ಅದೇ ರೀತಿಯಾಗಿತ್ತು.. ಸುಲ್ತಾನ್ ಬತ್ತೇರಿಯೆಂಬ ಊರನ್ನು ಕಟ್ಟಿದ ಮೈಸೂರಿಗ ಹೈದರಾಲಿ, ಟಿಪ್ಪು ಸುಲ್ತಾನ್  ಕಟ್ಟಿಸಿದ ಕೋಟೆಯನ್ನು ನೋಡಲಿಲ್ಲ.. ಮಾನಂತವಾಡಿ ಬಳಿ ಇದ್ದ ಕಬಿನಿ ಹಿನ್ನೀರನ್ನೂ ನೋಡಲಿಲ್ಲ.. ಯಾರೊ ಹೇಳಿದರು ಎಡಕಲ್ಲು ಗುಡ್ಡ.. ಚಂದ್ರಶೇಖರ್.. ಜಯಂತಿ ನೆನಪಾದರು.. ಸಂತೋಷಾ.. ಸಂಗೀತಾ.. ರಸಮಯ.. ಎಂದು ಕೊಂಡು ಅತ್ತ ತಿರುಗಿದೆವು...
ಎಡಕಲ್ಲು ಗುಡ್ಡಕ್ಕೆ ಖ್ಯಾತಿ ತಂದಿದ್ದು ಕನ್ನಡಿಗರಾದ ಕಣಗಾಲ್ ಪುಟ್ಟಣ್ಣನವರು.. ಅವರು ಅಲ್ಲಿ ಸಿನೆಮಾ ಶೂಟಿಂಗ್ ಮಾಡುವ ಮುನ್ನ ಆ ಕುರಿತು ಅಷ್ಟು ಪರಿಚಯ ಇರಲಿಲ್ಲವಂತೆ.. ಅವರು ಸಿನೆ ಮಾಡಿದರು.. ಕನ್ನಡಿಗರು ಅದೇನೇನನ್ನೋ ನೆನೆದು ಅಲ್ಲಿಗೆ ಹೋದರು.. ಪ್ರವಾಸೋದ್ಯಮ ಬೆಳೆಯಿತು... ಆದಾಯದ ಮೂಲವಾಯಿತು..
ನಾವು ಹೊರಟೆವು...
15-20 ಕಿ.ಮಿ ದೂರವಿರಬಹುದು.. ಕಿರಿದಾದ ಹಾದಿ.. ಎದುರು ಕಡೆಯಿಂದ ರೊಂಯ್ಯನೆ ಬರುವ ಪ್ರವಾಸಿಗರ ವಾಹನಗಳು..
ಸರ್ಕಸ್ಸಿನ ರೀತಿ ಹೋದೆವು... ಕಾಡು.. ಖುಷಿ ಕೊಟ್ಟಿತು.. ದೂರದಲ್ಲೆಲ್ಲೋ ಮುಗಿಲೆತ್ತರದಲ್ಲಿ ಎಡಕಲ್ಲು ಗುಡ್ಡವನ್ನು ಕಂಡಂತಾಯಿತು.. ಹೋ ಎಂದೆವು.. ಮದಲ್ಲಿ ರೋಮಾಂಚನಾ..
ಬಿಡಿ ನಾವು ದುರದೃಷ್ಟವಂತರು.. ಹುಡುಗರೇ ಬಂದಿದ್ದೇವೆ.. ಜೊತೆಯಲ್ಲಿ ಹುಡುಗಿಯರು ಬರಬೇಕಿತ್ತು ಎನ್ನುವ  ಭಾವನೆ ಮನದಲ್ಲಿ ಮೂಡಿ ತೊಡೆ ಬೆಚ್ಚಗಾಯಿತು.. ನಮ್ಮನ್ನು ನಾವು ಹಳಿದುಕೊಂಡು ಮುನ್ನಡೆದೆವು..
ಅಲ್ಲೊಂದು ಕಡೆ ಅಪ್ ಹತ್ತಿ ಚಿಕ್ಕೊಂದು ಟರ್ನ್ ತೆಗೆದುಕೊಂಡರೆ ಅಲ್ಲಿ ನಮ್ಮ ವಾಹನ ನಿಲ್ಲಿಸುವ ಸ್ಥಳ ಬಂದಿತು.. ನಾವು ಕೊಡೋದಿಲ್ಲ ಎಂದರೂ ಅವರು ಬಿಡೋದಿಲ್ಲ ಎಂಬಂತೆ 30 ರು. ಪಾರ್ಕಿಂಗ್ ಶುಲ್ಕವನ್ನು ನೀಡಿದೆವು.,..
ಅಲ್ಲೊಂದಷ್ಟು ಹೊಟೆಲುಗಳಿವೆ.. ಗಾಡಿ ನಿಲ್ಲಿಸಲು ಸ್ಥಳವಿದೆ.. ವಿಶಾಲವಾಗಿ.. 50-60 ಗಾಡಿಗಳು ಇದ್ದವು..
ಅಲ್ಲಿಂದ 1 ಕಿ.ಮಿ ಜೀಪು ಹೋಗುತ್ತದೆ.. ಗುಡ್ಡವನ್ನು ಹತ್ತಿ.. ಥೇಟು ಕೊಡಚಾದ್ರಿಯಲ್ಲಿ ಕರೆದೊಯ್ಯುತ್ತಾರಲ್ಲ ಹಾಗೇ.. ತಲೆಗೆ 150, 200 ರು.. ಸಿಕ್ಕವರಿಗೆ ಸೀರುಂಡೆ ಎನ್ನುವಂತೆ.. ಕೆತ್ತಲು ಕಾಯುತ್ತಿರುತ್ತಾರೆ...

ನಮ್ಮನ್ನು ಕಂಡು ಬನ್ನಿ ಬನ್ನಿ ಎಂದರು.. ನಾವೊಮ್ಮೆ ನಮ್ಮ ವಿಟಮಿನ್ ಪ್ರಮಾಣವನ್ನು ನೋಡಿಕೊಂಡೆವು..
ಬೇಡ.. ನಟರಾಜ ಸರ್ವೀಸಿಗೆ ಜೈ ಎನ್ನುತ್ತೇವೆ.. ಎಂದು ಹೆಜ್ಜೆ ಹಾಕಿದರೆ.. ನಮ್ಮಂತೆ ಇನ್ನೂ ಹವು ಜನ ಅಲ್ಲಿದ್ದಾರೆ..
ಗುಡ್ಡ ಹತ್ತೋಣ ಬನ್ನಿ.. ಎಂದು ಕರೆ ನೀಡಿದ ನಮಗೆ ಅನೇಕರು ಸಾಥ್ ನೀಡಿದರು.. ಗುಡ್ಡ ಬೆಟ್ಟ ತಿರುಗಿ ರೂಢಿಯಿದ್ದ ನಮ್ಮ ವೇಗಕ್ಕೆ ಉಳಿದವರು ಸಾಥ್ ನೀಡಲು ಸಾಧ್ಯವಾಗಲಿಲ್ಲ. ಾದರೆ ಹತ್ತುತ್ತಿದ್ದ ಹಲವರಲ್ಲಿ ಬಹಳಷ್ಟು ಜನ ಚೆಂದ ಚೆಂದದ ಹುಡುಗಿಯರಿದ್ದರು..
ನಮ್ಮ ವೇಗ ತನ್ನಿಂದ ತಾನೇ ಸ್ಲೋ ಆಯಿತು..
ಎಲ್ಲಿಲ್ಲದ ನಾಟಕೀಯತೆ ನಮ್ಮ ನಡಿಗೆಗೆ ಬಂದಿತು.. ಇದೇ ಮೊದಲ ಬಾರಿಗೆ ಗುಡ್ಡ ಹತ್ತುತ್ತಿದ್ದೇವೇನೋ ಎನ್ನುವ ರೀತಿ ನಟನೆ ಮಾಡತೊಡಗಿದೆವು..
ಎಡಕಲ್ಲು ಗುಡ್ಡ ಬಾ ಎನ್ನುತ್ತಲೇ ಇತ್ತು.. ದಾರಿ ಮಧ್ಯದಲ್ಲಿ ಇದ್ದ ದೊಡ್ಡ ದೊಡ್ಡ ಬಂಡೆಗಳ ಪೋಟೋ ತೆಗೆಯುವ ನೆಪದಲ್ಲಿ ಹುಡುಗಿಯರ ಪೋಟೋ ತೆಗೆಯುವ ಯತ್ನ ಮಾಡಿ ಸಫಲರಾದೆವು..
ಹೀಗಿರುವಾಗ ಎಡಕಲ್ಲು ಗುಡ್ಡದ ಬುಡ ಬಂದಿತು.. ರಸ್ತೆ ಇಲ್ಲಿಗೆ ಮುಕ್ತಾಯವಾಗುತ್ತದೆ.. ಇನ್ನು ಮುಂದೆ ಒರಟು ದಾರಿಯಲ್ಲಿ ಗುಡ್ಡ ಹತ್ತಬೇಕು.. ಹತ್ತಲು ಅಣಿಯಾದರೆ ಬಾಯಾರಿಕೆ..
ಅಲ್ಲೊಂದು ಕಡೆ ಬಾಯಿಗಷ್ಟು ದ್ರವಾಹಾರವನ್ನು ಹಾಕಿ ಮುಂದಕ್ಕೆ ಹೆಜ್ಜೆ ಹಾಕಿದೆವು.. ನೆತ್ತಿಯ ಮೇಲೆ ಬಂದಿದ್ ಸೂರ್ಯ ಸುಡಲು ಪ್ರಾರಂಭಿಸಿದ್ದ..
(ಮುಂದುವರಿಯುತ್ತದೆ..)

Tuesday, August 13, 2013

ಉಂಚಳ್ಳಿ ಜಲಪಾತದ ಕಥೆ ಹಾಗೂ ವ್ಯಥೆ..

ಉಂಚಳ್ಳಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಮಲೆನಾಡಿನಲ್ಲಿ ಚನ್ನಾಗಿ ಮಳೆಯಾಗುತ್ತಿರುವ ಕಾರಣ  ಉಂಚಳ್ಳಿ ಜಲಪಾತ ಸೌಂದರ್ಯವೃದ್ಧಿಸಿಕೊಂಡು ಧುಮ್ಮಿಕ್ಕುತ್ತಿದೆ.
ಈ ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಈ ಜಲಪಾತ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಈ ವರ್ಷದ ಉತ್ತಮ ಮಳೆಯಿಂದಾಗಿ ಜಲಪಾತ ಚೈತನ್ಯವನ್ನು ತುಂಬಿ ಉಕ್ಕುತ್ತಿದೆ.
ಉಕ್ಕೇರಿ ಹರಿಯುವ ಕೆಂಪು ನೀರು ಜಲಪಾತದ ರೂಪದಲ್ಲಿ ಕಣಿವೆಗೆ ಧುಮ್ಮಿಕ್ಕುವುದನ್ನು ನೋಡುವುದೇ ಚಂದ. ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತಿವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಜಲಪಾತವೂ ಚಂಚಲೆಯೇ. ಮಳೆಯ ಬಿಡುವಿನ ನಡುವೆ ಜಲಪಾತ ವೀಕ್ಷಣೆಗೆ ಬರುವವರಿಗೆ ಜಲಪಾತ ಸುಲಭಕ್ಕೆ ತನ್ನ ದರ್ಶನ ಕೊಡುವುದಿಲ್ಲ. ಕಣಿವೆಯಾಳಕ್ಕೆ ಧುಮ್ಮಿಕ್ಕುವ ಜಲಪಾತ ಸೃಷ್ಟಿಸುವ ಮಂಜು ಮುಸುಕಿದ ವಾತಾವರಣಕ್ಕೆ ಜಲಪಾತದ ದರ್ಶನವಾಗುವುದೇ ಇಲ್ಲ. ಆಗೊಮ್ಮೆ ಈಗೊಮ್ಮೆ ಗಾಳಿ ಉಂಟಾದಾಗ ಜಲಪಾತ ಕಾಣಿಸಿಕೊಂಡಾಗ ಸ್ವರ್ಗ ಕೈಗೆ ಸಿಕ್ಕಷ್ಟು ಧನ್ಯತೆ. ಆದರೆ ಈಗ ಜಲಪಾತದ ದರ್ಶನ ಮಂಜಿನ ನಡುವೆ ದಿನಕ್ಕೆ ನಾಲ್ಕೈದು ಬಾರಿ ಮಾತ್ರ ಕಾಣುವಂತಾಗಿದೆ. ಜಲಪಾತ ದರ್ಶನಕ್ಕಾಗಿ 2 ಕಾವಲು ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಜಲಪಾತದ ಸನಿಹದ ವೀಕ್ಷಣೆಗಾಗಿ 200ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ಮಾಡಲಾಗಿದೆ. ಈ ಮೆಟ್ಟಿಲುಗಳ ಮೂಲಕ ಜಲಪಾತದ ಬುಡಕ್ಕೆ ಇಳಿದು ನೋಡಬಹುದಾಗಿದೆ. ಮಂಜಿನ ಧಾರೆ ಉಂಟುಮಾಡುವ ಹನಿಗಳು ಮೈ ಒದ್ದೆ ಮಾಡುತ್ತದೆಯಾದರೂ ಅದರಿಂದ ಸಿಗುವ ಸಂತಸ ಆಪ್ಯಾಯಮಾನವಾದುದು.
 ಇದೇ ಜಲಪಾತದ ಪಕ್ಕದಲ್ಲಿ ಇನ್ನೊಂದು ಮರಿ ಜಲಪಾತವಿದ್ದು ಇದೂ ಕೂಡ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿ ಮಾರ್ಪಾಡಾಗಿದೆ. ಉಂಚಳ್ಳಿ ಜಲಪಾತದಷ್ಟು ಎತ್ತರ, ರೌದ್ರ, ಬೀಖರತೆ ಇದಕ್ಕಿಲ್ಲ. ಸ್ಥಳೀಯ ಹಳ್ಳವೊಂದರಿಂದ ಸೃಷ್ಟಿಯಾಗಿರುವ ಈ ಮರಿ ಜಲಪಾತ ಪ್ರವಾಸಿಗರಿಗೆ ಸಕಲ ರೀತಿಯ ಖುಷಿಯನ್ನು ಕೊಡುತ್ತಿದೆ. ಉಂಚಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಎರಡನೇ ಗೋಪುರದ ಬಳಿ ನಿರ್ಮಾಣ ಮಾಡಲಾದ ಮೆಟ್ಟಿಲುಗಳ ಪಕ್ಕದಲ್ಲಿ ಗುಡ್ಡವನ್ನು ಏರಿದರೆ ಈ ಮರಿ ಜಲಪಾತದ ದರ್ಶನ ಲಭ್ಯವಾಗುತ್ತದೆ. ಕಲ್ಲು ಬಂಡೆಗಳ ಮೇಲೆ ಜುಳು ಜುಳು ಸದ್ದಿನೊಂದಿಗೆ ನರ್ತನ ಮಾಡುತ್ತ, ಆಗಮಿಸುವ ಪ್ರವಾಸಿಗರ ಕಾಲು ತೊಳೆಯುತ್ತ, ನೀರೊಳಗೆ ಇಳಿದರೆ ಸ್ನಾನದ ಸುಖವನ್ನು ನೀಡುವ ಈ ಜಲಪಾತ ಉಂಚಳ್ಳಿಗೆ ಮತ್ತಷ್ಟು ಮೆರಗು ನೀಡುತ್ತಿದೆ.
 ಉಂಚಳ್ಳಿ ಜಲಪಾತ ಇಷ್ಟೆಲ್ಲ ಸೌಂದರ್ಯವನ್ನು ಹೊಂದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದರೂ ಇಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವೀಕ್ಷಣಾ ಗೋಪುರಗಳು ಹಾಗೂ ವೀಕ್ಷಣಾ ಸ್ಥಳಕ್ಕೆ ತೆರಳಲು ಮೆಟ್ಟಿಲುಗಳನ್ನು ಮಾಡಿರುವುದನ್ನು ಬಿಟ್ಟರೆ ಮತ್ಯಾವುದೇ ಸೌಲಭ್ಯ ಇಲ್ಲಿಲ್ಲ. ಕುಳಿತುಕೊಳ್ಳಲು ಎರಡು ಸಿಮೆಂಟಿನ ಆಸನಗಳಿವೆ. ಆದರೆ ಅವು ಈಗಾಗಲೇ ಕಿತ್ತುಹೋಗಿದೆ. ಜಲಪಾತದ ಬಳಿ ಅನೇಕ ಸ್ತಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳನ್ನು ಎಸೆದಿರುವುದು ಜಲಪಾತದ ಸೌಂದರ್ಯಕ್ಕಿಟ್ಟ ಕಪ್ಪುಚುಕ್ಕೆಯಾಗಿದೆ. ಜಲಪಾತದ ಪ್ರದೇಶದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಿದಾಗಿನಿಂದ ಅದರ ಬಳಕೆಯನ್ನೇ ಮಾಡಿಲ್ಲವೇನೋ ಎನ್ನುವಂತಾಗಿದೆ. ಶೌಚಾಲಯದ ಬಾಗಿಲುಗಳು ಮುರಿದುಹೋಗಿದೆ. ಶೌಚಾಲಯದ ಒಳಗೆಲ್ಲ ಗಬ್ಬು ನಾರುತ್ತಿದೆ. ಸುತ್ತಮುತ್ತಲ ಮರಗಳ ಎಲೆಗಳು, ಪ್ರವಾಸಿಗರು ಎಸೆದ ತರಹೇವಾರಿ ವಸ್ತುಗಳು ಈ ಶೌಚಾಲಯದಲ್ಲಿವೆ. ಶೌಚಾಲಯದ ಗೋಡೆಗಳಂತೂ ಪ್ರವಾಸಿಗರ ಬರಹಗಳಿಗೆ ಬಲಿಯಾಗಿ ವಿಕಾರ ರೂಪವನ್ನು ಪಡೆದುಕೊಂಡಿವೆ.
ಸ್ಥಳೀಯ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ಆಗಮಿಸುವ ಯಾತ್ರಾರ್ಥಿಗಳ ಬಳಿ ವಾಹನ ಶುಲ್ಕವನ್ನು ಪಡೆಯುತ್ತದೆ. ಉಂಚಳ್ಳಿ ಊರಿನ ಶಾಲಾ ಮಕ್ಕಳು ಇದೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪಡೆದ ಶುಲ್ಕಕ್ಕೆ ತಕ್ಕ ನಿರ್ವಹಣಾ ಕಾರ್ಯ ನಡೆಯುತ್ತಿಲ್ಲ. ನಿರ್ವಹಣಾ ಶುಲ್ಕ ಪಡೆಯುವುದು ಹಣ ಮಾಡಲು ಎನ್ನುವಂತಾಗಿದೆ. ಜಲಪಾತದ ಪ್ರದೇಶವನ್ನು ಕಾಲ ಕಾಲಕ್ಕೆ ಚೊಕ್ಕಟ ಮಾಡುವ ಕಾರ್ಯ ನಡೆಯುತ್ತಿಲ್ಲ. ಇದರಿಂದಾಗಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ರಾರಾಜಿಸಿ ಜಲಪಾತದ ದುಸ್ಥಿತಿಗೆ ಕನ್ನಡಿಯಂತೆ ಭಾಸವಾಗುತ್ತಿದೆ. ಪ್ರವಾಸಿಗರು ಈ ಸ್ಥಳದಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಎಸೆಯುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಎಲ್ಲೆಂದರಲ್ಲೆ ಬೇಕಾಬಿಟ್ಟಿ ವಸ್ತುಗಳನ್ನು ಎಸೆಯುವುದನ್ನು ತಡೆಗಟ್ಟಿ ಅಂತವರ ವಿರುದ್ಧ ದಂಡ ಹಾಕುವ ಕೆಲಸ ನಡೆಯಬೇಕಾಗಿದೆ. ಜಲಪಾತದ ಕುರಿತು ಮಾಹಿತಿ ನೀಡುವವರ ಕೊರತೆಯೂ ಇಲ್ಲಿದೆ. ಬಂದ ಪ್ರವಾಸಿಗರಿಗೆ ಜಲಪಾತ ನೋಡಿದ ತಕ್ಷಣ ಮುಂದೇನು ಎನ್ನುವ ಗೊಂದಲ ಕಾಡುತ್ತದೆ. ಆಗ ಅವರಿಗೆ ತಿಳಿಹೇಳುವ ಮಾರ್ಗದರ್ಶಕರ ಅಗತ್ಯವಿದೆ.
 ಶಿರಸಿಯಿಂದ ಹೆಗ್ಗರಣಿ ಮಾರ್ಗವಾಗಿ 35 ಕಿ.ಮಿ ದೂರದಲ್ಲಿ ಉಂಚಳ್ಳಿ ಜಲಪಾತವಿದೆ. ಈ ಜಲಪಾತಕ್ಕೆ ಸಿದ್ದಾಪುರದಿಂದಲೂ ಇಷ್ಟೇ ದೂರ. ಜಲಪಾತದ ವರೆಗೆ ಡಾಂಬರ್ ರಸ್ತೆಯಿರುವುದನ್ನು ಬಿಟ್ಟರೆ ಇನ್ಯಾವುದೇ ಸೌಕರ್ಯವನ್ನು ಕೇಳುವಂತಿಲ್ಲ. ಶಿರಸಿಯಿಂದ ಉಂಚಳ್ಳಿಯ ವರೆಗೆ ದಿನಕ್ಕೆರಡು ಬಸ್ ಬರುತ್ತದೆ. ಆದರೆ ಈ ಬಸ್ ನಿಲ್ಲುವ ಸ್ಥಳದಿಂದ 3 ಕಿ.ಮಿ ದೂರ ನಡೆದು ಜಲಪಾತ ನೋಡಬೇಕು. ಜಲಪಾತಕ್ಕೆ ಕನಿಷ್ಟ 4 ಬಸ್ ಗಳನ್ನು ಓಡಿಸಬೇಕು. ಸಿದ್ದಾಪುರದಿಂದಲೂ ಬಸ್ ಸಂಚಾರ ವ್ಯವಸ್ಥೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಆಗಮಿಸುವ ಬಸ್ಸುಗಳನ್ನು ಉಂಚಳ್ಳಿಯಿಂದ ಮುಂದೆ ಬೆಳ್ಕೋಡ್ ವರೆಗೆ ಬಿಡಬೇಕಿದೆ. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಜಲಪಾತದ ಬಳಿ ಮಾರಾಟ ಮಳಿಗೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಬಹುದಿನಗಳ ಬೇಡಿಕೆ. ಯಾತ್ರಿ ನಿವಾಸ ನಿರ್ಮಾಣದ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಡುತ್ತಲೇ ಇದೆ. ಆದರೆ ಯಾತ್ರಿ ನಿವಾಸ ನಿರ್ಮಿಸುವ ಮುಹೂರ್ತ ಇನ್ನೂ ಕೂಡಿಬಂದಂತಿಲ್ಲ. ತ್ವರಿತವಾಗಿ ಯಾತ್ರಿ ನಿವಾಸ ನಿರ್ಮಾಣವಾಗಬೇಕು. ಸ್ಥಳೀಯ ವಸ್ತುಗಳನ್ನು ಮಾರಾಟ ಮಾಡಲು ಮಾರಾಟ ಮಳಿಗೆಯ ನಿರ್ಮಾಣವೂ ನಡೆಯಬೇಕಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಈ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿದಲ್ಲಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಮ್ಮಡಿ ಸ್ಥಳೀಯರಿಗೆ ಉದ್ಯೋಗದ ಮೂಲವೂ ಆಗಬಲ್ಲದು. ಈ ಕುರಿತು ಪ್ರವಾಸೋದ್ಯಮ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆ ಕೂಡಲೇ ಸ್ಪಂದಿಸುವ ಅಗತ್ಯವಿದೆ.
ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ರುದ್ರರಮಣೀಯ ರೂಪ ತಾಳಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಆದರೆ ಜಲಪಾತದ ಪ್ರದೇಶದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಪ್ರವಾಸಿಗರನ್ನು ಹೈರಾಣಾಗಿಸಿದೆ.

Wednesday, August 7, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 6

ದಾರಿಯಂತೂ ಅಂಕುಡೊಂಕು.. ಒಂದೆಡೆ ಕಡಿದಾದ ಗುಡ್ಡಗಳ ಸಾಲು ಸಾಲು.. ಇನ್ನೊಂದು ಕಡೆ ಆಳದ ಕಣಿವೆ..
ಪ್ರಪಾತ.. ನಡು ನಡುವೆ ಇಣುಕುವ ಚಹಾ ತೋಟಗಳು..
ನಮ್ಮ ಮೂಗಿನ ಒಳಗೆ ಹೊಕ್ಕುವ ತಂಪು ಗಾಳಿ ಶ್ವಾಸಕೋಶದಿಂದ ಸಂಪೂರ್ಣ ದೇಹವನ್ನೂ ಪತರಗುಡಿಸುತ್ತಿತ್ತು..
ತಂಪು ಗಾಳಿ ಸೇವನೆ ಮಾಡಿದಂತೆಲ್ಲ ಮೂಗಿನೊಳಗೆ ಅದೇನೋ ಅನಿರ್ವಚನೀಯ ಉರಿ..
ತಲೆಯ ಮೇಲೆ ಮಂಜಿನ ಹನಿಗಳು ಬಿದ್ದು ಕೂದಲುಗಳು ಬೆಳ್ಳಗಾಗಿದ್ದವು..
ಮುತ್ತಿನ ಹನಿಗಳು ಮುಖದ ಮೇಲೆಲ್ಲ ನೀರ ಧಾರೆಯಾಗಿತ್ತು...

ಅಲ್ಲೆಲ್ಲೋ ದಾರಿ ಮಧ್ಯದಲ್ಲಿ ಗಾಡಿ ನಿಲ್ಲಿಸಿದೆವು..
ಮಸಾಲಾ ಟೀ ಕೊಳ್ಳಬೇಕು..
ಅಂಗಡಿಗೆ ಹೋದರೆ 60 ರು.ಗೆ ಕಾಲು ಕೆಜಿ ಪ್ಯಾಕೇಟ್ ಎಂದ..
ಕೊಂಡೆವು..
ನಾಲ್ಕಾರಕ್ಕಿಂತ ಜಾಸ್ತಿ ಇರಬೇಕು ಕೊಂಡಿದ್ದು..
ಅಲ್ಲೇ ಪಕ್ಕದಲ್ಲಿ ಹಸಿರ ಚಾದರ ಹೊದ್ದಿದ್ದ ಚಹಾ ಪ್ಲಾಂಟೇಷನ್ನಿನಲ್ಲಿ ಅಡ್ಡಾಡಬೇಕೆಂಬುದು ನಮ್ಮ ಮನದ ಬಯಕೆ..
ಲಗ್ಗೆ ಇಟ್ಟೆವು..  ಅಂಗಡಿ ಉರುಫ್ ಪ್ಲಾಂಟೇಶನ್ನಿನ ಮಾಲಿಕ ಅರ್ಧಮರ್ಧ ತಮಿಳ್ಗನ್ನಢದಲ್ಲಿ ಒಪ್ಪಿಗೆ ಸೂಚಿಸಿದ್ದು ನಮಗೆ ಲೈಸೆನ್ಸ್ ಸಿಕ್ಕಂತೆ ಆಗಿತ್ತು..
ಪೋಟೋಗಳ ಸರಮಾಲೆ ಕ್ಲಿಕ್ಕಾಯಿತು..
ಮನಸ್ಸು ಹಸಿರಿನಿಂದ ಪಕ್ಕಾಯಿತು..

ಈ ನಡುವೆ ಅಲ್ಲೆಲ್ಲೋ ನಮ್ಮ ಶಿರಸಿಯ ಕೆಎ 31 ರಿಜಿಸ್ಟ್ರೇಶನ್ನಿನ ಟೆಂಪೋ ಒಂದನ್ನು ಕಂಡೆವು..
ನಮಗೋ ಶಿರಸಿಯವರ್ಯಾರೋ ಬಂದಿದ್ದಾರೆ.. ಟೆಂಪೋ ಬೇರೆ..
ಚೆಂದದ ಹುಡುಗಿಯರಿದ್ದರೆ ಕಣ್ಣು ತಂಪು ಮಾಡಿಕೊಳ್ಳಬಹುದು ಎನ್ನುವ ಕಾಮನೆ..
ಮೋಹನ, ಕಿಟ್ಟು ಉತ್ಸಾಹ ತೋರಿಸಲಿಲ್ಲ..
ನಾನು, ರಾಘು ಬೈಕೇರಿದೆವು..
ರಾಘವ ಅಂಕುಡೊಂಕಿನ ಹಾದಿಯಲ್ಲಿ ಟೆಂಪೂವನ್ನು ಹಿಂಬಾಲಿಸಿ, ನಿಲ್ಲಿಸಿ ಉಭಯಕುಶಲೋಪರಿ ಕೇಳುವ ತವಕದಿಂದ ಗಾಡಿ ಓಡಿಸಿದ..
ನಮಗೆ ಎದುರಾದ ಅದೆಷ್ಟೋ ಗಾಡಿಗಳು ತಾವಾಗಿಯೇ ಪಕ್ಕಕ್ಕೆ ಸರಿದು ಬದುಕಿದೆಯಾ ಬಡ ಜೀವವೆ ಎಂದು ಕೊಂಡವು..
ಆದರೂ ಅದೊಂದು ದೊಡ್ಡ ಯು ಟರ್ನಿನಲ್ಲಿ ವೇಗದಿಂದ ಕೂಡಿದ್ದ ನಮ್ಮ ಬೈಕು ಕಟ್ ಆಗಲೇ ಇಲ್ಲ.
ಲಾಂಗ್ ಟರ್ನ್ ತೆಗೆದುಕೊಳ್ಳುವ ಭರದಲ್ಲಿ ಎದುರಿನಿಂದ ಬಸ್ಸಿಗನೊಬ್ಬ ನಮ್ಮಷ್ಟೇ ವೇಗದಿಂದ ಬರುತ್ತಿದ್ದ..
ಮುಗೀತು ಕಥೆ..
ಅಪಘಾತ ಎರಡು ಸಾವು ಸುದ್ದಿಗೆ ನಾವೇ ಹೀರೋಗಳು.. ಆಗುತ್ತೇವೆ ಎಂದು ಕೊಂಡೆವು...
ಸೇಮ್ ಕನ್ನಡ ಸಿನೆಮಾಗಳ ಟ್ವಿಸ್ಟುಗಳಂತೆ..
ಅಲ್ಪಸ್ವಲ್ಪದರಲ್ಲಿ ತಪ್ಪಿತು..
ಅಲ್ಲದೇ ಅದರ ಪಾಡಿಗೆ ಅದು ಹೋಯಿತು.. ನಮ್ಮ ಪಾಡಿಗೆ ನಾವು ಬಂದೆವು...
`ಸಾಯ್ಲಲೆ... ಎಂತಾ ಮಳ್ಳಾಗಿತ್ತು ಮಾರಾಯಾ..' ರಾಘವ ಮುಖದಲ್ಲಿ ಬೆವರು ತುಂಬಿಕೊಂಡು ಹೇಳಿದ್ದ..
ನನಗೂ ಮುಖದಲ್ಲಿ ಬೆವರಿತ್ತು.. ಸಾವರಿಸಿಕೊಂಡ ಬಿಸಿಯುಸಿರು.. ಎದೆಯೊಳಗೆ...

 ಮತ್ತೆ ಶುರು ವೇಗ..
ಮತ್ತೊಂದು ಆರೇಳು ಕಿ.ಮಿ ಆದ ನಂತರ ಆ ಟೆಂಪೋ ಸಿಕ್ಕಿತು..
ಟೆಂಪೋದಲ್ಲಿದ್ದವರು ಶಾಲಾ ಮಕ್ಕಳು.. ತಮ್ಮ ವಾಂತಿ ಪ್ರೋಗ್ರಾಮನ್ನು ಶುರು ಹಚ್ಚಿಕೊಂಡಿದ್ದರು..
ಡ್ರೈವರ್ ಗಾಡಿಯನ್ನು ಪಕ್ಕಕ್ಕೆ ಹಾಕಿದ್ದ..
ನಾವು ಅವರ ಬಳಿ `ಹೇಯ್ ಇದು ಶಿರಸಿ ರಿಜಿಸ್ಟ್ರೇಷನ್ನಿನ ಗಾಡಿಯಲ್ಲವಾ..' ಎಂದರೆ `ಅಲ್ಲರಿ ಇದು ಮಂಡ್ಯದ್ದು ಎಂದ.. ಮತ್ತೆ ನಂಬರ್ ಪ್ಲೇಟ್ ಎಂದಾಗ ಈ ಟೆಂಪೋವನ್ನು ಶಿರಸಿಯ ಒಬ್ಬರ ಬಳಿಯಿಂದ ತಂದೆ ಎಂದ..
ನಾವು ನಮಸ್ಕಾರ ತಂದೆ ಎಂದೆವು...
ಮುಂದೆ ಮತ್ತೊಂದೆರಡು ಕಿ.ಮಿ ಅರಾಮಾಗಿ ಸಾಗಿ ಗುಡ್ಡದ ನೆತ್ತಿಯೊಂದರ ವ್ಯೂ ಪಾಯಿಂಟಿನಲ್ಲಿ ಕಿಟ್ಟು, ಮೋಹನರ ಸವಾರಿಗಾಗಿ ಕಾಯುತ್ತ ಕುಳಿತೆವು..
ಸುಮಾರು 5-6 ನಿಮಿಷದ ನಂತರ ಬಂದರು..
ಬಂದವರೇ ಎತ್ಲಾಗ್ ಹಾಳಾಗ್ ಹೋಗಿದ್ರಲೆ... ಎಂದು ಬೈಗುಳ, ಹಿಡಿಶಾಪದ ಮಂತ್ರಾಕ್ಷತೆಯನ್ನು ಪ್ರೋಕ್ಷಣ್ಯ ಮಾಡಿದರು..
ನಮ್ಮ ಚೇಸಿಂಗ್ ಸೀನಿನ ಸಾರಾಂಶವನ್ನು ಥೇಟು ನಮ್ಮ ಇಂಗ್ಲೀಷ್ ಎಕ್ಸಾಂ ಸಮ್ಮರಿ ಬರೆದಂತೆ ಹೇಳಿದೆವು..

ಒಟ್ಟಾಗು ಮುಂದಡಿ ಇಡುತ್ತಿರಲು ಮದ್ಯಾಹ್ನ ದಾಟಿ ಕತ್ತಲಿನ ಕುರುಹು ಸುಳಿ ಸುಳಿದು ಬರುತ್ತಿತ್ತು,,,
ಕಳಗೆಲ್ಲೋ ಗುಡಲೂರಿನ ದೀಪಗಳು ಮಿಣುಕುತ್ತಿದ್ದವು..
ಸುತ್ತಿ ಬಳಸಿ ಇಳಿಯುತ್ತಿರಲು ಅಲ್ಲೊಂದು ಬೋಳು ಗುಡ್ಡ ಕಣ್ಣಿಗೆ ಬಿತ್ತು..
ಇದನ್ನೆಲ್ಲೋ ನೋಡಿದ್ದೀವಲ್ಲಾ ಎನ್ನುವ ಕ್ವಶ್ಚನ್ ಮಾರ್ಕ್ ತಲೆಯೊಳಗೆ..
ನೋಡಿದರೆ ಅದು ಶೂಟಿಂಗ್ ಸ್ಪಾಟ್ ಅಂತೆ..
ಕನ್ನಡದ ಸೇರಿದಂತೆ ಹಲವಾರು ಭಾಷೆಯ ಸಿನೆಮಾಗಳು ಅಲ್ಲಿ ಶೂಟಿಂಗ್ ಆಗಿವೆ ಎನ್ನುವ ವರದಿಗಳು ಸ್ಥಳೀಯರಿಂದ ಸಿಕ್ಕವು..
ಓಹೋ.. `ಹಂ ಆಪ್ ಕೆ ಹೈ ಕೌನ್...' ನೆನಪಾಯಿತು.. ಅಲ್ಲಿ ನೋಡಿದ್ದು ಕೂಡ ಜ್ಞಾಪಕಕ್ಕೆ ಬಂದಿತು..
ಅಲ್ಲೊಂದು ಗೂಡಂಗಡಿ..
ಕಪ್ಪು ಸುಂದರಿಯೊಬ್ಬಳು ಚಹಾ ತಯಾರಿಸುವಲ್ಲಿ ನಿರತಳಾಗಿದ್ದಳು..
ನಾವು  ಹೇಳುವುದು ಆಕೆಗೆ ಅರ್ಥವಾಗಿಲ್ಲವೇನೋ..
ಚಹಾ ಕೊಡಲು ಹಿಂದು ಮುಂದು ನೋಡಿದಳು..
ಕೊನೆಗೂ ಕೊಟ್ಟಳು ಎನ್ನಿ...

ಅಮತೂ ಇಂತೂ ನಮ್ಮ ಪಯಣ ಗುಡಲೂರನ್ನು ತಲುಪಿತು..
ಇದೊಂತರಾ ವಿಚಿತ್ರ ಊರು..
ಊಟಿಯ ಗುಡ್ಡಗಳು ಆರಂಭಗೊಳ್ಳುವ ಮೊದಲ ಮೆಟ್ಟಿಲ ಮೇಲೇ ಇದೆ.. ಒಂದು ದಿಕ್ಕೆಗೆ ಅಗಾಧ ಗುಡ್ಡ.. ಇನ್ನುಳಿದ ಕಡೆಗಳಲ್ಲಿ ಬಯಲೋ ಬಯಲು..
ಮೂರು ಕಡೆಗಳಲ್ಲಿ ಕರ್ನಾಟಕ, ಕೇರಳ ಸುತ್ತುವರಿದಿದೆ..
ಇನ್ನೊಂದು ಕಡೆ ತಮಿಳುನಾಡಿಗೆ ಜೋತಾಡುತ್ತಿರುವ ಗುಡಲೂರು ತಮುಳುನಾಡಿನ ರಾಜ್ಯದ್ದು..
ಮೈಸೂರಿಗರು, ವಯನಾಡಿಗರ ಬಳಕೆ ಜಾಸ್ತಿ..
ಅಪರೂಪಕ್ಕೆ ಕನ್ನಡ ಮಾತಾಡುವವರೂ ಸಿಗುತ್ತಾರೆ...
ನಮ್ಮ ಸಿರಸಿಯಷ್ಟೇ ದೊಡ್ಡದಿರಬೇಕು..
ಸುಖೋಷ್ಣ ವಾತಾವರಣ..
ಊಟಿಯಂತೆ ಐಸ್ ಪೈಸ್ ಅಲ್ಲ...ಬೆಚ್ಚಗೆ..

ರೂಮು ಹುಡುಕಬೇಕಲ್ಲ...
ಒಂದೆರಡು ಕಡೆಗಳಲ್ಲಿ ಕೇಳಿದೆವು..
ಡಬ್ಬಾ ಆಗಿತ್ತು..
ರೂಮ್ ನೋಡಿದವರೇ ಓಡಿ ಬಂದೆವು..
ಕೊನೆಗೊಂದು ಉತ್ತಮ ಲಾಡ್ಜಿನಲ್ಲಿ ರೂಮು ಹಿಡಿದೆವು..
ನಾಲ್ವರಿಗೆ ಒಂದೇ ಕೋಣೆ..
ರೂಮು ದೊಡ್ಡದಿತ್ತು.. ಚನ್ನಾಗಿತ್ತು..
ಟಿವಿ ಇರಬೇಕೆಂಬ ನಮ್ಮ ಬೇಡಿಕೆಗೆ ಓಕೆ ಸಿಕ್ಕಿತ್ತು..
ಬಂದವರು ಫ್ರೆಷ್ ಆದೆವು..
ಹೊಟ್ಟೆ ತಾಳ ಹಾಕುತ್ತಿತ್ತು...
ಅದ್ಯಾವುದೋ ಹೊಟೆಲಿಗೆ ಹೋಗಿ ಮಸಾಲಾ ದೋಸಾ ಆರ್ಡರ್ ಮಾಡಿ ತಿಂದೆವು..
ನಂತರ ಗುಡಲೂರು ಸುತ್ತಲು ಹೊರಟೆವು..
ಕೊಳ್ಳುವ ಕ್ರಿಯಾ, ಕರ್ಮಗಳು ಮುಗಿದಿತ್ತು..
ಇಲ್ಲಿ ಕೊಳ್ಳಲು ಹೋಗಲಿಲ್ಲ..
ಊರು ಚನ್ನಾಗಿದೆ..ಹುಡುಗಿಯರು ಚಂದ  ಇಲ್ಲ.. ವಾತಾವರಣ ದೂಳು ಧೂಳು..
ಆದರೂ ಒಂಥರಾ ಓಕೆ.. ಎನ್ನುವುದು ಗುಡಲೂರಿನ ಕುರಿತು ನಮ್ಮ ವಿವರಣೆ..
ಇಲ್ಲಿ ವಯನಾಡಿಗೆಷ್ಟು ದೂರ, ಹೋಗುವುದು ಹೇಗೆ ಎನ್ನುವ ಕುರಿತು ಕೇಳಿ ತಿಳಿದುಕೊಂಡೆವು..
ಮುಂಜಾನೆದ್ದು ವಯನಾಡಿಗೆ ಹೋಗಬೇಕು .. ಮಂಝಿನ ಹನಿಯಲ್ಲಿ ಇಬ್ಬನಿಯ ಧಾರೆಯ ನಡುವೆ ಖುಷಿ ಪಡಬೇಕು ಎನ್ನುವ ಕನಸುಗಳ ಸರಮಾಲೆ ನಮ್ಮದು.
ರೂಮಿಗೆ ಮರಳಿದೆವು..
ಊಟಕ್ಕೆ ಹೋಗಬೇಕು..
ಹುಡುಕಿ ಹುಡುಕಿ ಯಾವುದೋ ಒಂದು ಹೊಟೆಲಿಗೆ ಹೋದೆವು..
ಆದರೆ ಆ ಹೋಟೆಲಿನಲ್ಲಿ 10-15 ನಿಮಿಷ ಕಳೆದರೂ ಯಾವೊಬ್ಬ ಸಪ್ಲಾಯರ್ ಆಸಾಮಿಯೂ ನಮ್ಮತ್ತ ಸುಳಿಯುತ್ತಿಲ್ಲ..
ಬೇಸರ, ಹಸಿವೆ.. ಸಿಟ್ಟು ಬರುತ್ತಿತ್ತು..
ದೂರದಿಂದ ಮ್ಯಾನೇಜರ್ ನಮ್ಮನ್ನು ನೋಡುತ್ತಿದ್ದನಾದರೂ ಏನ್ ಬೇಕು ಎಂದು ಕೇಳುತ್ತಿರಲಿಲ್ಲ..
ಹಾಳಾದ ತಮಿಳಿನಲ್ಲಿ ಊಟಕ್ಕೇನೆನ್ನುತ್ತಾರೆ ಎನ್ನುವುದು ಪ್ರಶ್ನೆಯಾಗಿತ್ತು..

ಊಟಿಯ ಬೋಟಾನಿಕಲ್ ಗಾರ್ಡನ್
ನಮ್ಮೂರಿಗೆ ಬಿದಿರಿನ ಚಾಪೆ ಮಾಡಿಕೊಡಲು ಬರುತ್ತಿದ್ದ ಸುಬ್ರಮಣಿ ತರಿಕೆರೆ ಎಂಬಾತ ನನಗೆ ಯಾವಾಗಲೂ ತಮಿಳಿನಲ್ಲಿ ಊಟಕ್ಕೆ ಸಾಪಡ ಎಂದು ಹೇಳಿದ್ದು ನೆನಪಾಗೆ ಮಿತ್ರರ ಬಳಿ ಹೇಳಿದೆ..
ಅವರು ಸಾಪಡ ಕೇಳಿ ನೋಡು.. ಎಂದರು..
ನಾನು ಮ್ಯಾನೇಜರ್ ಬಳಿ ಕುಳಿತಲ್ಲಿಂದಲೇ ಸಾಪಡ ಅಂದೆ..
ಆತ ತಲೆಯಲ್ಲಾಡಿಸಿ ಸಾಪಡ ಅಂದ..
ನಾನು ಮತ್ತೆ ಸಾಪಡ ಅಂದೆ.. ಆತನೂ ಸಾಪಡ ಸಾಪಡ ಅಂದ..
ಅರೇ ಇದೇನಿದು..? ಅಂದುಕೊಂಡೆ...
ಮತ್ತೆರಡು ಬಾರಿ ಸಾಪಡ ಅಂದಾಗಲೂ ಮ್ಯಾನೇಜರ್ ಅದನ್ನು ರಿಪೀಟ್ ಮಾಡಿದ..
ದೋಸ್ತರು ನಗಲು ಆರಂಭಿಸಿದರು..
ಎಲ್ಲಾದರೂ ಬೇರೆ ಶಬ್ದ ಹೇಳಿದೆನೆ..? ಸಾಪಡ್ ಎಂದರೆ ಊಟವೇ ಅಲ್ಲವೇ ಎನ್ನುವ ಅನುಮಾನದ ಕಿಡಿ ಮನದೊಳಗೆ..
ಕೊನೆಗೆ ಮತ್ತೈದು ನಿಮಿಷದ ನಂತರ ಸಪ್ಲಾಯರ್ ಬಂದ ..
ಆತನ ಬಳಿ ನಮ್ಮ ಹರುಕು ಮುರುಕು ಭಾಷೆಯಲ್ಲಿ  ಊಟದ ಕುರಿತು ಹೇಳಿದೆವು..
ಆತ ತಂದ.. ಸಿಕ್ಕಿದ ಖುಷಿಯಲ್ಲಿ ಉಂಡೆವೋ ಉಂಡೆವು..
ರೂಮಿಗೆ ಬಂದವರೇ ಗಡದ್ದು ನಿದ್ದೆ...
ಮರುದಿನದ ವಯನಾಡಿನ ಕನಸು ಬೆಚ್ಚಗೆ ಮೊಳೆಯುತ್ತಿತ್ತು...

(ಮುಂದುವರಿಯುತ್ತದೆ)

Wednesday, July 24, 2013

ಮರೆಯಾದ ರಾಯ್ಕರ್ ಮಾಸ್ತರ್

ರಾಯ್ಕರ್ ಮಾಸ್ತರ್ ಎಂದು ಖ್ಯಾತಿಗಳಿಸಿದ್ದ ರಾಮಚಂದ್ರ ಗುರುರಾವ್ ರಾಯಕರ್ ಅವರು ಕಲಾವಿದರಾಗಿ, ಶಿಕ್ಷಕರಾಗಿ, ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಸಂಗ್ರಹಗಾರರಾಗಿ ಗಳಿಸಿದ ಹೆಸರು ಅಪಾರವಾದುದು. ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ. ವಾಟರ್ ಕಲರ್, ಆಯಿಲ್ ಪೇಂಟಿಂಗ್, ರೇಖಾಚಿತ್ರ ಈ ಮುಂತಾದ ಚಿತ್ರಕಲಾ ಬಗೆಗಳಲ್ಲಿ ರಾಯ್ಕರ್ ಮಾಸ್ತರರದ್ದು ಎತ್ತಿದ ಕೈಯಾಗಿತ್ತು. ಈ ಪ್ರಕಾರಗಳಲ್ಲಿ ಅವರು ಬಿಡಿಸಿದ ಚಿತ್ರಗಳು ಖ್ಯಾತಿಯನ್ನು ಗಳಿಸಿಕೊಂಡಿವೆ.
    ರಾಯ್ಕರ್ ಮಾಸ್ತರರು ಜನಿಸಿದ್ದು 1924ರ ಅಗಸ್ಟ್ 30ರಂದು. ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಸುವರ್ಣ ಕಿರೀಟವನ್ನು ರಚಿಸಿದ ಖ್ಯಾತಿಯನ್ನು ಗಳಿಸಿರುವ ನಟ, ಸಾಹಿತಿ ದಿ. ಗುರುರಾವ್ ರಾಮಚಂದ್ರ ರಾಯಕರ್ ಹಾಗೂ ನಾಗಮ್ಮ ದಂಪತಿಗಳಿಗೆ ಜನಿಸಿದ ರಾಯ್ಕರ್ ಮಾಸ್ತರ್ ಅವರು ಮುಂಬಯಿಯ ಸರ್. ಜೆ. ಜೆ. ಕಲಾ ಶಾಲೆ, ಹುಬ್ಬಳ್ಳಿಯ ಡಾ. ಎಂ. ವಿ. ಮಿಣಜಗಿ ಕಲಾಶಾಲೆ, ಧಾರವಾಡದ ಡಿ. ವಿ. ಹಾಲಭಾವಿ ಕಲಾಶಾಲೆ, ಶಿರಸಿಯ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಮುಂಬಯಿಯ ರಾಜ್ಯಾಧ್ಯಕ್ಷ ಕುಶಲ ಕೈಗಾರಿಕಾ ಶಾಲೆಗಳಲ್ಲಿ ಅಧ್ಯಯನ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು.
    ನಗರದ ಮಾರಿಕಾಂಬಾ ಹೈಸ್ಕೂಲಿನಲ್ಲಿ 1947ರಿಂದ 1980ರ ವರೆಗೆ 33 ವರ್ಷ ಚಿತ್ರಕಲಾ ಶಿಕ್ಷಕರಾಗಿ ವಿದ್ಯಾದಾನ ಮಾಡಿದ ರಾಯ್ಕರ್ ಮಾಸ್ತರರ ಶಿಷ್ಯವೃಂದ ಬಹುದೊಡ್ಡದು. ಅವರ ಶಿಷ್ಯರಲ್ಲಿ ಬಹಳಷ್ಟು ಜನರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ನಾಡಿನ ಹೆಸರಾಂತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಕೂಡ ರಾಯ್ಕರ ಮಾಸ್ತರರ ಶಿಷ್ಯರಾಗಿದ್ದರು. ಕಾರ್ನಾಡರು ಶಿರಸಿಗೆ ಭೇಟಿ ನೀಡಿದಾಗಲೆಲ್ಲ ರಾಯ್ಕರ ಮಾಸ್ತರರನ್ನು ಭೇಟಿಯಾಗದೇ ಮರಳುವುದೇ ಇಲ್ಲ. ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಗಿರೀಶ ಕಾರ್ನಾಡರು ರಾಯಕರ್ ಮಾಸ್ತರರ ಪ್ರಭಾವ ನನ್ನ ಮೇಲೆ ಉಂಟಾಗಿದೆ ಎಂದು ಆಗಾಗ ಹೇಳಿದ್ದೂ ಇದೆ.
    ಜಿಲ್ಲೆಯಲ್ಲಿ ರಾಯ್ಕರ್ ಮಾಸ್ತರ್ ಎಂದರೆ ಅವರಿಗೊಂದು ಘನತೆಯಿದೆ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ರಾಯ್ಕರ್ ಮಾಸ್ತರ್ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಅತ್ಯಂತ ಸಮೀಪವರ್ತಿಗಳಾಗಿದ್ದರು. ರಾಮಕೃಷ್ಣ ಹೆಗಡೆಯವರು ಆಗಾಗ ರಾಯ್ಕರ್ ಮಾಸ್ತರರ ಮನೆಗೆ ಆಗಮಿಸಿ ಅವರ ದೊಡ್ಡ ಮನೆಯ ಮಹಡಿಯ ಮೇಲೆ ಹರಟೆ ಹೊಡೆಯುತ್ತಿದ್ದರು ಎಂಬುದು ರಾಯ್ಕರ್ ಮಾಸ್ತರ್ ಹಾಗೂ ರಾಮಕೃಷ್ಣ ಹೆಗಡೆಯವರ ನಡುವಿನ ಆತ್ಮೀಯತೆಯನ್ನು ವಿವರಿಸುತ್ತದೆ. ಇವರಲ್ಲದೇ ಗೋಪಾಲಕೇಷ್ಣ ಹೆಗಡೆ ಕೆರೆಮನೆ ಮುಂತಾದ ಅನೇಕ ಹಿರಿಯ ಚೇತನಗಳು ರಾಯ್ಕರ್ ಮಾಸ್ತರರ ಒಡನಾಡಿಗಳಾಗಿದ್ದರು. ಮಿತ್ರರ ಬಳಗ ಜೊತೆ ಸೇರಿದಾಗಲೆಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದರು.
    ರಾಯ್ಕರ್ ಮಾಸ್ತರರು ಕಲಾವಿದರಾಗಿ ಮಾಡಿದ ಸಾಧನೆ ಅಪಾರ. ಅಂದಿನ ದಿನಮಾನದಲ್ಲಿ ರಾಜ್ಯದಲ್ಲಿ 15 ಕಡೆಗಳಲ್ಲಿ, ದಿಲ್ಲಿಯಲ್ಲಿ 2 ಸಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. 1957ರಲ್ಲಿ ಶಿರಸಿಯಲ್ಲಿ ಜರುಗಿದ ಅಖಿಲಭಾರತ ಮಲೆನಾಡ ಸಮ್ಮೇಳನ, ಅಖಿಲ ಭಾರತ ಅಡಿಕೆ ಸಮ್ಮೇಳನದ ಬೃಹತ್ ಮಹಾದ್ವಾರಗಳನ್ನು ಶಿಲ್ಪದ ಮಾದರಿಯಲ್ಲಿ ತಯಾರಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅನೇಕ ಪುಸ್ತಕಗಳ, ಸ್ಮರಣ ಸಂಚಿಕೆಗಳ ಮುಖಚಿತ್ರ ರಚಿಸಿದ್ದಾರೆ. ನಾಡಿನ ಹೆಸರಾಂತ ವ್ಯಕ್ತಿಗಳ ಭಾವಚಿತ್ರವನ್ನು ಚಿತ್ರಿಸಿದ ಕೀರ್ತಿ ಇವರದ್ದಾಗಿದೆ. ಇವರು ಚಿತ್ರಿಸಿದ್ದ ಬಾದಾಮಿ, ಕಾರವಾರ, ಯಾಣ ಹಾಗೂ ಹಂಪೆಯ ಜಲವರ್ಣ ಚಿತ್ರಗಳು ಸುಪ್ರಸಿದ್ಧವಾಗಿದೆ. 1959ರಲ್ಲಿ ಕುಮಟಾದ ಗಿಬ್ ಹೈಸ್ಕೂಲಿನ ಚಿನ್ನದ ಹಬ್ಬದ ಸಂದರ್ಭದಲ್ಲಿ ನೀಡಿದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನೋಡಿದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದು ರಾಯ್ಕರರ ಗರಿಮೆಯಾಗಿದೆ.
    ರಾಯ್ಕರ್ ಮಾಸ್ತರರು 12 ವರ್ಷ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ರಾಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರಾಗಿ, ರಾಜ್ಯ ಚಿತ್ರಕಲಾ ಪರೀಕ್ಷಾ ಮಂಡಳಿ ಸದಸ್ಯರಾಗಿ, ಮೈಸೂರು ದಸರಾ ಉತ್ಸವ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ 1991ರಲ್ಲಿ ರಾಜ್ಯದ ಅಕಾಡೆಮಿಗಳ ಸುಧಾರಣಾ ಸಮಿತಿ ಸದಸ್ಯರಾಗಿ, ರಾಜ್ಯ ನಿವೃತ್ತ ಶಿಕ್ಷಕರ ಒಕ್ಕೂಟದ ಸದಸ್ಯರಾಗಿ, ರಾಜ್ಯ ಕಲಾ ಶಿಕ್ಷಣ ಪರಿಶೀಲನಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಉತ್ಸವಗಳಾದ ಕದಂಬೋತ್ಸವ ಹಾಗೂ ಕರಾವಳಿ ಉತ್ಸವ, ಉತ್ತರ ಕನ್ನಡ ಜಿಲ್ಲಾ ಸಂಗೀತ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಯ್ಕರ್ ಮಾಸ್ತರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸೇವೆಯನ್ನು ಮಾಡಿದ್ದು 15 ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕದ ಜಲಪಾತಗಳು, ಕರ್ನಾಟಕದ ಗಿರಿಧಾಮಗಳು, ಕರ್ನಾಟಕದಲ್ಲಿ ಚಿನ್ನ, ಬೆಳ್ಳಿಯ ಕುಶಲ ಕೈಗಾರಿಕೆ ಈ ಮುಂತಾದವುಗಳು ಅವರ ಕೆಲವು ಪ್ರಸಿದ್ಧ ಪುಸ್ತಕಗಳಾಗಿದ್ದವು.
    ಹಲವಾರಿ ಪ್ರಶಸ್ತಿಗಳು, ಗೌರವಗಳು, ಸಂಮಾನಗಳು ದಿ. ಆರ್. ಜಿ. ರಾಯ್ಕರ್ ಅವರನ್ನು ಅರಸಿಕೊಂಡು ಬಂದಿವೆ. 1982ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ, 1989ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ದೆಹಲಿಯ ಅಖಿಲ ಭಾರತ ಕಲೆ ಮತ್ತು ಕೈಗಾರಿಕಾ ಸೊಸೈಟಿಯ ಸುವರ್ಣ ಮಹೋತ್ಸವದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳು ಅವರ ಮುಡಿಗೇರಿವೆ. 1980-85ರ ವರೆಗೆ ಶಿರಸಿಯ ಮಾರಿಕಾಂಬಾ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ, 1986ರಿಂದ 1989ರ ವರೆಗೆ ಶಿರಸಿಯ ಸುವರ್ಣ ಕೋ-ಆಪ್-ಸೊಸೈಟಿ ಲಿ.ಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿಯಾಗಿ, ಉತ್ತರಕನ್ನಡ ಜಿಲ್ಲಾ ಪ್ರವಾಸೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
    ಪುಸ್ತಕ ಸಂಗ್ರಹಗಾರರಾಗಿ ಹೆಸರು ಮಾಡಿದವರು ರಾಯ್ಕರ್ ಮಾಸ್ತರರು. ಇವರ ಬಳಿ ಸ್ವಂತ ಗ್ರಂಥ ಬಂಢಾರವಿತ್ತು. ಕಲೆ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಪ್ರವಾಸ ಸಾಹಿತ್ಯ, ಶಿಕ್ಷಣ, ಚಿಂತನೆ, ಯೋಗ, ಧಾರ್ಮಿಕ, ಜೀವನಚರಿತ್ರೆ, ಗೆಝೆಟಿಯರ್, ವೈದ್ಯಕೀಯ, ಜಾನಪದ, ಕ್ಷೇತ್ರದರ್ಶನ, ಸ್ಮರಣ ಸಂಚಿಕೆ ಸೇರಿದಂತೆ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಅವರ ಸಂಗ್ರಹದಲ್ಲಿದ್ದವು. ತಮ್ಮ ಜೀವನದಲ್ಲಿ 60 ವರ್ಷಗಳ ಕಾಲ ಪುಸ್ತಕ ಸಂಗ್ರಹದ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ಉತ್ತರಕನ್ನಡದ ಮೊಟ್ಟ ಮೊದಲ ಪತ್ರಿಕೆ ಎನ್ನುವ ಖ್ಯಾತಿಗಳಿಸಿರುವ ಹವ್ಯಕ ಸುಬೋಧ ಪತ್ರಿಕೆ ಕೂಡ ಇವರ ಸಂಗ್ರಹದಲ್ಲಿದೆ. ಇಷ್ಟೇ ಅಲ್ಲದೇ ಪ್ರಾಚೀನ ನಾಣ್ಯಗಳು, ವಿವಿಧ ಭಂಗಿಯ ಗಣೇಶನ ಮೂರ್ತಿಗಳು, ಮೆಡಲುಗಳು, ಸ್ಟಾಂಪುಗಳು, ಪ್ರಪ್ರಥಮ ಪೋಸ್ಟ್ ಕವರುಗಳು, ಕೀ ಚೈನುಗಳು, ಅತ್ತರ್ ಬಾಟಲಿಗಳು, ಪ್ರಾಚೀನ ಮೂರ್ತಿಗಳು, ನಿಶಾನೆಗಳು, ಮಾನಪತ್ರಗಳು, ನೆನಪಿನ ಕಾಣಿಕೆಗಳು ಹೀಗೆ ಇನ್ನೂ ಹಲವಾರು ಅಪರೂಪದ ತಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ರಾಯ್ಕರ್ ಮಾಸ್ತರರು ಬೆಳೆಸಿಕೊಂಡಿದ್ದರು.
    ತಮ್ಮ ಇಳಿ ವಯಸ್ಸಿನಲ್ಲಿ ಅಮೇರಿಕಾ ಹಾಗೂ ಸಿಂಗಾಪುರ ಯಾತ್ರೆಗಳನ್ನೂ ರಾಯ್ಕರ್ ಮಾಸ್ತರರು ಕೈಗೊಂಡಿದ್ದರು. ಬಿಡುವಾದಾಗ ಭಾರತ ಸುತ್ತುವ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ರಾಯಕರ್ ಮಾಸ್ತರರು ತಾವು ಪ್ರವಾಸ ಮಾಡಿದ ಕುರಿತು ಸುಂದರವಾಗಿ ಬರಹದ ರೂಪದಲ್ಲಿ ಮೂಡಿಸುತ್ತಿದ್ದರು. ವಯೋಸಹಜ ಕಾರಣದಿಂದಾಗಿ ತಮ್ಮ ಕೊನೆಗಾಲದಲ್ಲಿ ಚಿತ್ರಕಲೆಯನ್ನು ನಿಲ್ಲಿಸಿದರೂ ಬರವಣಿಗೆ, ಸಂಗ್ರಹಕಾರನ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದರು. ಇಷ್ಟೆಲ್ಲ ಸಾಧನೆಗಳನ್ನು ಕೈಗೊಂಡಿದ್ದರೂ ರಾಯ್ಕರ್ ಮಾಸ್ತರರು ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದರು. ಇಂತಹ ಮಹಾನ್ ಚೇತನ ಇನ್ನಿಲ್ಲವಾಗಿದೆ. ಇಂದಿನ ಪೀಳಿಗೆಗೆ, ಸಮಾಜಕ್ಕೆ ಆದರ್ಶಪ್ರಾಯವಾಗಿದ್ದ ಕಲಾವಿದ, ಸಾಧಕ, ಅಪರೂಪದ ವ್ಯಕ್ತಿ, ಹಿರಿಯ ಕೊಂಡಿಯೊಂದು ಕಳಚಿದೆ.
ರಾಜ್ಯದ ಹೆಸರಾಂತ ಕಲಾವಿದಕೊಂಡಿಯೊಂದು ಕಳಚಿದೆ. ಸರಳ, ಸಜ್ಜನಿಕೆಯ ಮೂರ್ತರೂಪದಂತಿದ್ದ ಆರ್. ಜಿ. ರಾಯ್ಕರ್ ಅವರ ನಿಧನದಿಂದಾಗಿ ಕಲಾಲೋಕ ಬಡವಾಗಿದೆ. ಬಹುರಂಗಗಳಲ್ಲಿ ಕೆಲಸ ಮಾಡಿದ್ದ ಅವರ ಸಾಧನೆ ಇಂದಿನವರಿಗೆ ಸ್ಪೂರ್ತಿದಾಯಕವಾದುದು.

Friday, July 19, 2013

ಪ್ರೇಮಪತ್ರ-5, ಕಂಡು ಕಾಡುವ ಗೆಳತಿಯಲ್ಲಿ ಪ್ರೇಮ ನಿವೇದನೆ

ಪ್ರೀತಿಯ ಗೆಳತಿ,
 ಮತ್ತೆ ಮತ್ತೆ ಮಧುರ ಅನುಭವ ನೀಡಲೆಂಬಂತೆ ವರ್ಷಕ್ಕೊಮ್ಮೆ ಅವತರಿಸಿ ಬರುವ ಪ್ರೇಮಿಗಳ ದಿನದ ಮೆಲುಕು ಹಾಕುತ್ತಾ, ನನ್ನೆದೆಯ ಅಂತರಾಳದೊಳಗೆ ಹಲ ದಿನಗಳಿಂದ ಗೂಡು ಕಟ್ಟಿ ಹೊರಬರಲು ತವಕಿಸುತ್ತಿರುವ ಪ್ರೀತಿಯೆಂಬ ರೆಕ್ಕೆ ಬಲಿತ ಹಕ್ಕಿಯ ಬಗ್ಗೆ ತಿಳಿಸುತ್ತೇನೆ.
    ಗೆಳತಿ.., ಸ್ಪಷ್ಟವಾಗಿ ಹೇಳುತ್ತಿದ್ದೇನೆ.. ನಾ ನಿನ್ನ ಮನಸಾರೆ ಇಷ್ಟಪಟ್ಟಿದ್ದೇನೆ. ನನ್ನ ಜೀವಕ್ಕಿಂತ ಹೆಚ್ಚು ನಿನ್ನನ್ನು ನನ್ನ ಮನದೊಳಗೆ ಆದರಿಸಿಕೊಂಡಿದ್ದೇನೆ. ಕಣ್ಣ ರೆಪ್ಪೆಯ ಪರದೆಯ ಮೇಲೆ ನಿನ್ನದೇ ಹೊನ್ನ ಬಿಂಬವನ್ನು ಚಿತ್ರಿಸಿಕೊಂಡಿದ್ದೇನೆ.
ನಿಂಗೊತ್ತಲ್ಲ ಗೆಳತಿ..,
    ಲವ್ ಎಟ್ ಫಸ್ಟ್ ಸೈಟ್ ಅಂತ ಹೇಳ್ತಾರೆ.. ಆವೊತ್ತು ಕಾಲೇಜಿನ ಅಡ್ಮಿಷನ್ನಿಗೆಂದು ನಾ ಬಂದ ದಿನವೇ ನೀನೂ ಬಂದಿದ್ದೆ. ಆಗ ಎದುರಿಗೆ ಸಿಕ್ಕ ನನ್ನ ಗುರುತು ಪರಿಚಯ ಇಲ್ಲದಿದ್ದರೂ ಕೂಡ ಚಿಕ್ಕದೊಂದು ಮುಗುಳು ನಗೆಯನ್ನು ಇರಲಿ ತಗೋ ಎಂದು ಎಸೆದು ಹೋಗಿದ್ದೆ. ಆ ದಿನವೇ ನಿನ್ನದೊಂದು ಬಿಂಬ ನನ್ನ ಮನದೊಳಗೆ ಚಿತ್ರಣಗೊಂಡೆಬಿಟ್ಟಿತ್ತು.
    ಆಮೇಲೆ ಕಾಲೇಜು ಪ್ರಾರಂಭವಾದ ನಂತರ ನಿಧಾನವಾಗಿಯಾದರೂ ನಿನ್ನ ಪರಿಚಯವಾಗಿಬಿಡ್ತು.ಪರಿಚಯವಾದ ನಂತರ ಗೊತ್ತೇ ಇದೆಯಲ್ಲಾ ಮಾತು-ಕಥೆ, ಹರಟೆ, ಇತ್ಯಾದಿ ಇತ್ಯಾ.. ಮೆರೆದು ಬಿಟ್ಟಿತು. ಬಂದ ಕೆಲವೇ ದಿನದಲ್ಲಿಯೇ ನೀನು ನಂಗೆ ಅದೆಷ್ಟು ಆತ್ಮೀಯವಾಗಿಬಿಟ್ಟೆ ಮಾರಾಯ್ತಿ.. ಅಂತಹ ಮಧುರ ಮನದ ಹಲ ಕೆಲ ಮಾತುಗಳ ನಡುವೆಯೇ ನನ್ನ ಎದೆಯೊಳಗೆ ನಿನ್ನ ಎಡೆಗೊಂದು ಪ್ರೀತಿಯ ಬೀಚ ಮೊಳಕೆಯೊಡೆದದ್ದು. ಆ ನಂತರದ ದಿನಗಳಲ್ಲಿ ಆ ಪ್ರೀತಿಯ ಬೀಜಕ್ಕೆ ನಾನು ಮಾತು-ಕತೆ, ಕನಸು-ಕವನಗಳ ಇವುಗಳ ಮೂಲಕವೇ ನೀರೆರೆದೆ. ಕೊನೆಗೆ ಆ ಗಿಡ ದೊಡ್ಡದಾಗಿ ಮನದ ತುಂಬಾ ಬಳುಕಿ ನಿಂತಿತು. ಈಗಲೋ ಸುಂದರವಾದ ಹೂ ಬಿಡಲು ಕಾತರಗೊಂಡಿದೆ.
    ನಿಂಗೊತ್ತಿಲ್ಲ ಗೆಳತಿ, ನೀನು ಅದೆಷ್ಟೋ ಸಾರಿ ನನ್ನ ಹತ್ತಿರ ಮಾತನಾಡಿದಾಗಲೆಲ್ಲಾ, ನಾನು ಹಾಗೆ ಮಾತನಾಡಲು ಹೆದರುತ್ತಿದ್ದೆ. ಮಾತುಗಳು ನನಗೆ ಗೊತ್ತಿಲ್ಲದಂತೆಯೇ ತೊದಲುತ್ತಿದ್ದವು. ಪ್ರೀತಿಯ ಮೊದಲ ಮಜಲೇ ಭಯವಂತೆ.. ಅದಕ್ಕೆ ನನಗೆ ಹಾಗೆ ಆಯ್ತೇನೋ.. ಅಲ್ವೇನೆ..?
    ಆ ನಂತರದ ದಿನಗಳಲ್ಲಿ ಅದೆಷ್ಟೋ ಸಾರಿ ನಾನು ನಿಂಗೆ ನನ್ನ ಮನದಾಳದ ಭಾವನೆಗಳನ್ನು, ನನ್ನೊಳಗೆ ಅಂಕುರಿಸಿದ್ದ ಈ ಪ್ರೀತಿಯ ಕದಿರನ್ನು ತಿಳಿಸಲು ಪ್ರಯತ್ನ ಪಟ್ಟಿದ್ದೆ ಗೊತ್ತಾ.. ಅದೇಕೋ ಆಗೆಲ್ಲಾ ಕಾಲ ಪಕ್ಷವಗೊಂಡಿರಲಿಲ್ಲವೋ ಅಥವಾ ಮುಹೂರ್ತ ಕೂಡಿಬಂದಿರಲಿಲ್ಲೋ ಏನೋ.. ನನ್ನಿಂದ ನನ್ನ ಪ್ರೇಮವನ್ನು ನಿನ್ನೆದುರು ನಿವೇದಿಸಲು ಆಗಿರಲೇ ಇಲ್ಲ.
    ಗೆಳತಿ.., ನಮ್ಮ ಕಾಲೇಜಿನ ಪುಂಡರ ಗುಂಪು ಅದೆಷ್ಟೋ ಸಾರಿ ನೀನು ನಡೆದು ಹೋಗುತ್ತಿದ್ದಾಗ ನಿನ್ನ ಹಿಂದೆ ನಿಂತುಕೊಂಡು ಏರುದನಿಯಲ್ಲಿ ನಿನ್ನ ಕುರಿತು ಕಾಮೆಂಟುಗಳನ್ನು ಮಾಡುತ್ತಿತ್ತಲ್ಲ ಆಗೆಲ್ಲಾ ನಾನು ಒಳಗೊಳಗೆ ಅದ್ಯಾವಪರಿ ಉರಿದುಬಿದ್ದಿದ್ದೇನೆ., ಸಿಟ್ಟು ಮಾಡಿಕೊಂಡಿದ್ದೇನೆ ಗೊತ್ತಾ.. ಆಗೆಲ್ಲಾ ನಾನು ಈ ಪ್ರೇಮದ ಮೋಡಿಯೇ ಹೀಗಾ ಅಂತ ಯೋಚಿಸಿದ್ದಿದೆ.
    ಸತ್ಯವಾಗ್ಲೂ ಹೇಳ್ತೀನಿ ಗೆಳತಿ, ನಿನ್ನ ಬಗ್ಗೆ ಯಾರಾದ್ರೂ ಏನನ್ನಾದ್ರೂ ಹೇಳಿದ್ರು ಅಂತಂದ್ರೆ ನಾನು ಅದೆಷ್ಟು ದುಃಖವನ್ನು-ಸಿಟ್ಟನ್ನು, ಯಾತನೆಯನ್ನು ಅನುಭವಿಸುತ್ತೀನಿ ಗೊತ್ತಾ..? ಪ್ರೇಮ ಅಂದರೆ ಹಸಿರು, ಮಳೆ, ಬದುಕು ಅಂತೆಲ್ಲ ಹೇಳ್ತಾರೆ. ನನ್ನ ಪಾಲಿಗೆ ಅದು ಸತ್ಯವಾಗಿಬಿಟ್ಟಿದೆ. ಆ ಅಡ್ಮಿಷನ್ನಿನ ದಿನದಂದು ನಿನ್ನನ್ನು ಕಾಣುವ ವರೆಗೂ ನಾನು ಒಂದು ರೀತಿ ಒರಟನಾಗಿದ್ದೆ. ಒರಟುತನಕ್ಕಿಂತ ಹೆಚ್ಚು ಸಿಡುಕುತ್ತಿದ್ದೆ. ತಟ್ಟನೆ ರೇಗುತ್ತಿದ್ದೆ. ಕಾರಣವೇ ಇಲ್ಲದೆ ಜಗಳಕ್ಕೆ ನಿಲ್ಲುತ್ತಿದ್ದೆ. ಸಿಟ್ಟಾಗುತ್ತಿದ್ದೆ. ಸಹನೆಯೇ ಇರುತ್ತಿರಲಿಲ್ಲ. ಆದರೆ ಯಾವಾಗ ನನ್ನೊಳಗೆ ನಿನ್ನ ರೂಪ ಆಹ್ವಾನಗೊಂಡು ಬೇರು ಬಿಟ್ಟು ಕುಳಿತುಕೊಂಡಿತೋ ಆ ಕ್ಷಣದಿಂದಲೇ ನಾನು ಮೃದುವಾಗುತ್ತಾ ಹೋದೆ.. ಕ್ರಮೇಣ ನನ್ನ ಸಿಟ್ಟು, ಒರಟುತನ, ರೇಗುವಿಕೆಗೆ ಬ್ರೇಕ್ ಬೀಳಲಾರಂಭವಾಯಿತು. ಜಗಳಗಂಟತನವಂತೂ ನಾಗರಹಾವು ಪೊರೆ ಬಿಟ್ಟುಹೋಗುವಂತೆ ನನ್ನನ್ನು ಬಿಟ್ಟು ಹೋಯಿತು. ಎಲ್ಲೋ ಅಡಗಿದ್ದ, ನನಗೆ ಗೊತ್ತೇ ಇಲ್ಲದಂತಿದ್ದ ಸಾಪ್ಟ್ ನೆಸ್ ನನ್ನಲ್ಲಿ ತುಂಬಿತು. ಅರ್ಧಮರ್ಧ ಮಾತಿಗೆ ಮುಗಿಯಿತು ಎನ್ನುವಂತಿದ್ದ ನಾನು ತಾಳ್ಮೆಯನ್ನು ಪಡೆದುಕೊಮಡೆ. ನೇರವಾಗುತ್ತ ಹೋದೆ. ಮೌನಿಯಾದೆ. ಈಗ ಯೋಚಿಸು ಗೆಳತಿ.., ನಾನು ಅದ್ಯಾವ ಪರಿ ನಿನ್ನನ್ನು ಪ್ರೀತಿಸುತ್ತಿರಬಹುದು ಅಂತ..!!
    ಇಷ್ಟರ ಜೊತೆಗೆ ಇನ್ನೊಂದು ಮಾತನ್ನೂ ನಾನು ನಿನ್ನೆದುರು ಅರುಹಿ ಬಿಡುತ್ತೇನೆ. .. ನನ್ನಲ್ಲಿ ಮೊಳೆತ ಈ ಪ್ರೀತಿ ನಿಸ್ಸಂದೇಹವಾಗಿಯೂ ನಿಷ್ಕಲ್ಮಷವಾದುದು. ಈ ಪ್ರೀತಿಯಲ್ಲಿ ಕಾಮವಿಲ್ಲ. ಲೋಭವಿಲ್ಲ. ಹುಚ್ಚು ಹುಂಭತನವಿಲ್ಲ. ಬರಿ ಆಕರ್ಷಣೆಯೂ ಅಲ್ಲ. ಇದರಲ್ಲಿ ಸಂದೇಹವೂ ಇಲ್ಲ. ಹಾಗೆಯೇ ಸಂಶಯವೂ ಇಲ್ಲ. ಇದು ಕೇವಲ ಶುದ್ಧ-ಸ್ವಚ್ಛ-ಶುಭ್ರ ಪ್ರೇಮವಷ್ಟೆ. ಇದರಲ್ಲಿ ಅನುಮಾನದ ಚಿಕ್ಕ ಹಸ್ತರೇಖೆಯನ್ನೂ ಕಾಣುವಂತಿಲ್ಲ. ನೀನು ಅದೆಷ್ಟು ಸಾರಿ ಪರೀಕ್ಷಿಸದರೂ ಕೂಡ ಇದರೊಳಗೆ ಭಿನ್ನವಿಲ್ಲ-ಬೇಧವಿಲ್ಲ.
    ಗೆಳತಿ..,
    ಇಷ್ಟು ಹೊತ್ತು ನನ್ನ ಮನದಲ್ಲಿ ನಿನ್ನೆಡೆಗಿನ ಪ್ರೇಮಕ್ಕೊಂದು ಅಕ್ಷರ ರೂಪ ಕೊಟ್ಟಿದ್ದೇನೆ. ಎಲ್ಲೋ.. ಎಂದೋ ಕಣ್ಣಿಗೆ ಕಾಣದಂತೆ ವ್ಯರ್ಥವಾಗಿ ಬಸಿದು ಹೋಗುತ್ತಿದ್ದ ಮನಸ್ಸಿನ ಭಾವನೆಗಳಿಗೆ ಅಷ್ಟೋ ಇಷ್ಟೋ ಎಂಬಂತೆ ಬರಹದ ರೂಪ ಕೊಟ್ಟು ಬಿಟ್ಟಿದ್ದೇನೆ...
    ಇಷ್ಟರ ಮೇಲೆ ಆಯ್ಕೆ ನಿನ್ನದು ಗೆಳತಿ., ನನ್ನ ಪ್ರೀತಿಸ್ತೀಯಾ..? ನಿನ್ನದೊಂದು ಅತ್ಯಂತ ಸ್ಪಷ್ಟವಾದ ನಿಲುವೊಂದನ್ನು ನಗೆ ತಿಳಿಸುತ್ತೀಯಾ, ನೀನು ನನ್ನನ್ನು ಇಷ್ಟಪಡ್ತೀಯಾ ಅಂದ್ಕೊಂಡು ಕನಸಿನ ಆಶಾಗೋಪುರದ ಮೇಲೆ ಹನುಮನಂತೆ ಕುಳಿತಿದ್ದೇನೆ. ಆ ಆಶಾಗೋಪುರವನ್ನು ಗಾಳಿಗೋಪುರ ಮಾಡುವುದಿಲ್ಲ ತಾನೆ..?
    ಕೊನೆಯದಾಗಿ ನೀನು ನನ್ನು ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಎಂದು ನಂಬಿ ನಿನ್ನ ನಿರ್ಧಾರಕ್ಕಾ ಕಾದಿದ್ದೇನೆ.. ನಿನ್ನ ನಿರ್ಧಾರ ನನ್ನ ಪಾಲಿಗೆ ನಲಿವಾಗಿರಲಿ, ಹಸಿರಾಗಿರಲಿ, ಹಸಿಯಾಗಿರಲಿ ಎಂದು ಬಯಸುತ್ತಿದ್ದೇನೆ..

ಇಂತಿ ನಿನ್ನ ನಿರ್ಧಾರಕ್ಕಾಗಿ
ಕಾದು ಕುಳಿತಿರುವ
ಜೀವನ್