Saturday, May 22, 2010

ಕ್ಲಾಸಿಕ್ ಸಿನೆಮಾ

ನಗಿಸುತ್ತಲೇ ಅಳಿಸುವ
ಮೇರಾ ನಾಮ್ ಜೋಕರ್

ನಿರದೆಶಕ : ರಾಜ್ ಕಪೂರ್
ನಿರಮಾಪಕ : ರಾಜ್ ಕಪೂರ್
ಕಥೆ : ಕೆ. ಏ. ಅಬ್ಬಾಸ್
ಸಂಗೀತ : ಶಂಕರ್ ಜೈಕಿಷನ್
ಸಂಕಲನ : ರಾಜ್ ಕಪೂರ್
ಚಿತ್ರ ಬಿಡುಗಡೆ : 18 ಡಿಸೆಂಬರ್ 1970

ಮೇರಾ ನಾಮ್ ಜೋಕರ್ ಹಿಂದಿ ಚಿತ್ರರಂಗದ ಪ್ರಸಿದ್ದ ಚಲನಚಿತ್ರಗಳಲ್ಲೊಂದು. ರಾಜ್ ಕಪೂರ್ ಎಂಬ ವಿಶಿಷ್ಟ, ವಿಚಿತ್ರ ಹಾಗೂ ವಿಲಕ್ಷಣ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಚಿತ್ರ ಮೇರಾ ನಾಮ್ ಜೋಕರ್. 
ಮೂರು ಭಾಗಗಳಲ್ಲಿರುವ ಈ ಚಿತ್ರ ರಾಜು ಎಂಬ ಜೋಕರ್ ಬದುಕಿನ ಮೂರು ಕಾಲಘಟ್ಟಗಳನ್ನು ವಿವರಿಸುತ್ತದೆ. ಮೊದಲ ಭಾಗದಲ್ಲಿ ಯುವ ರಾಜೂ (ರಿಷಿ ಕಪೂರ್) ತನ್ನ ಶಿಕ್ಷಕಿ ಮೇರಿ (ಸಿಮಿ ಅಗರವಾಲ್)ಯ ಆಕರ್ಷಣೆಗೆ ಒಳಗಾದರೆ ಎರಡನೇ ಭಾಗದಲ್ಲಿ ರಾಜೂ (ರಾಜ್ ಕಪೂರ್) ಜೆಮಿನಿ ಸರ್ಕಸ್ನ ಪಾತ್ರಧಾರಿ ರಷ್ಯಾದ ಮರೀನಾ (ಕ್ಷೇನಿಯಾ ರ್ಯಾರಬೆಂಕಿನಾ)ಳನ್ನು ಪ್ರೀತಿಸುತ್ತಾನೆ. ಈ ಭಾಗ ಹೆಚ್ಚು ತಮಾಷೆಯಿಂದ ಕೂಡಿದ್ದು ನೋಡುಗರ ಹೊಟ್ಟೆ ಹುಣ್ಣಾಗಿಸುತ್ತದೆ. ಮೂರನೇ ಭಾಗದಲ್ಲಿ ರಾಜೂ, ಮೀನಾ(ಪದ್ಮಿನಿ)ಳ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ಚಿತ್ರನಟಿಯಾಗುವ ಕನಸನ್ನು ಹೊಂದಿದ ಆಕೆ ತನ್ನ ಆಸೆ ಈಡೇರಿಸಿಕೊಳ್ಳಲು ರಾಜುವನ್ನು ಬಳಸಿಕೊಂಡು ನಂತರ ಆತನನ್ನು ಮರೆತು ಬಿಡುತ್ತಾಳೆ. ಕೊನೆಯಲ್ಲಿ ರಾಜು ಏನಾಗುತ್ತಾನೆ ಎಂಬುದು ಚಿತ್ರದ ಕಥೆ. ರಿಷಿ ಕಪೂರ್ಗೆ ಇದು ಪಾದಾರ್ಪಣೆಯ ಚಿತ್ರ. ಚಿತ್ರದಲ್ಲಿ ಹಲವು ಅಂಶಗಳು ನೋಡುಗರನ್ನು ಸೆಳೆಯುತ್ತವೆ.
ಜೊಕರ್ ರೀತಿಯ ಗೊಂಬೆ, ಅದರ ಜೊತೆ ರಾಜೂ ಮಾತನಾಡುವುದು, ಸರ್ಕಸ್ ನೋಡುತ್ತಿದ್ದಾಗಲೇ ರಾಜೂನ ತಾಯಿ ಸಾಯುವುದು, ಆಕೆ ಸತ್ತಾಗ ರಾಜೂ ಕಪ್ಪು ಕನ್ನಡಕ ಧರಿಸಿ ಅಳುವುದು, ನಂತರ ದುಃಖದ ನಡುವೆಯೂ ಎಲ್ಲರನ್ನೂ ನಗಿಸುವುದು, ಹಿಂದಿ ಭಾಷೆ ಬರದ ಮರೀನಾಗೆ ತನ್ನ ಪ್ರೇಮ ನಿವೇದನೆ ಮಾಡುವುದು, ಆಕೆ ಹರುಕು ಮುರುಕು ಹಿಂದಿಯಲ್ಲಿ ರಾಜೂನ ತಾಯಿಯ ಜೊತೆ ಮಾತನಾಡುವುದು ಈ ಮುಂತಾದ ದೃಷ್ಯಗಳು ಅತ್ಯಂತ ಸುಂದರವಾಗಿ ಮೂಡಿಬಂದಿದೆ.
ಹಾಡುಗಳು ಈ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಒಂದಕ್ಕಿಂತ ಇನ್ನೊಂದು ಉತ್ತಮವಾಗಿ ಮೂಡಿ ಬಂದಿವೆ. ಮುಖೇಶ್ ಸಿರಿಕಂಠದಲ್ಲಿ ಒಡಮೂಡಿದ `ಜಾನೇ ಕಹಾಂ ಗಯೇ ವೋ ದಿನ್', `ಜೀನಾ ಯಹಾಂ ಮರ್ನಾ ಯಹಾಂ', `ಕಾಟೇ ನಾ ಕಾಟೆ ರೈನಾ', `ಕೆಹ್ತಾ ಹೈ ಜೋಕರ್', ಲತಾ ಮಂಗೇಶ್ಕರ್ ಹಾಡಿದ `ಅಂಗ್ ಲಗ್ ಜಾ ಬಲ್ಮಾ', ಮನ್ನಾ ಡೇ ಹಾಡಿದ ಕಾಮಿಡಿ ಗೀತೆ `ಏ ಭಾಯ್ ಜರಾ ದೇಖೆ ಚಲೋ' ಈ ಮುಂತಾದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ.
ಚಿತ್ರದಲ್ಲಿ ಧರಮೇಂದ್ರ, ಮನೋಜ್ ಕುಮಾರ್, ಧಾರಾ ಸಿಂಗ್, ಅಚಲಾ ಸಚ್ದೇವ್ ಮುಂತಾದವರೂ ನಟಿಸಿದ್ದಾರೆ. 255 ನಿಮಿಷದ ಜಿತ್ರ ನೀಡುಗರಿಗೆ ಬಹಳ ಖುಷಿ ಕೊಡುವ ಚಿತ್ರ. ಸುಮಾರು ನಾಲ್ಕು ತಾಸು ಅರಾಮವಾಗಿ ನೋಡಬಹುದಾದ ಚಿತ್ರ. ಹಿಂದಿ ಚಿತ್ರರಂಗದ ಕ್ಲಾಸಿಕ್ ಸಿನೆಮಾಗಳಲ್ಲಿ ಒಂದೆಂದು ಹೆಸರಾಗಿದೆ.

ವಿನಯ್ ದಂಟಕಲ್

Tuesday, May 18, 2010

ಮರೆತರೂ ಮರೆಯದ ಮೊಘಲ್-ಇ-ಆಝಂ

ಎವರ್ ಗ್ರೀನ್ ಲವ್ ಸ್ಟೋರಿ...

ಮರೆತರೂ ಮರೆಯದ
ಮೊಘಲ್-ಇ-ಆಝಂ

ಚಿತ್ರ ನಿರದೆಶಕ : ಕೆ. ಆಸಿಫ್
ಕಥೆ : ಅಮನ್, ಕೆ. ಆಸಿಫ್, ಕಮಲ್ ಅಮ್ರೋಹಿ, ವಜಾಹತ್ ಮಿರಜಾ, ಎಹಸಾನ್ ರಿಜ್ವಿ
ಸಂಗೀತ : ನೌಶಾದ್
ಚಿತ್ರಬಿಡುಗಡೆ : 5 ಆಗಸ್ಟ್ 1960
ತಾರಾಗಣ : ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ, ದುರ್ಗ ಕೋಟೆ ಮುಂತಾದವರು.

ಹಿಂದಿ ಚಿತ್ರರಂಗದಲ್ಲಿ ಎವರ್ಗ್ರೀನ್ ಲವ್ಸ್ಟೋರಿ ಎಂಬ ಖ್ಯಾತಿ ಪಡೆದುಕೊಂಡಿದ್ದು ಕೆ. ಆಸಿಫ್ ನಿದರ್ೇಶನದ ಮೊಘಲ್-ಇ-ಆಝಂ. 1960ರ ದಶಕದ ಹಿಂದಿ ಚಿತ್ರರಂಗದ ಹಣೆಬರಹವನ್ನು ಬದಲಿಸಿದ ಈ ಚಿತ್ರ ಈಗಲೂ ಪ್ರೇಮಿಗಳ ಪಾಲಿನ ಬೈಬಲ್.
ಹಿಂದಿ ಹಾಗೂ ಉದರ್ು ಭಾಷೆಗಳಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ ಮೊಘಲ್ ಆಳ್ವಿಕೆಯ ಕಾಲದಲ್ಲಿ ನಡೆದ ಅಮರ ಪ್ರೇಮಕಥೆಯನ್ನು ಹೊಂದಿದೆ. ಆಸ್ಥಾನದ ನೃತ್ಯಗಾತಿ ಅನಾರ್ಕಲಿ (ಮಧುಬಾಲಾ)ಯನ್ನು ಮೊಘಲ್ ರಾಜಕುವರ ಸಲೀಂ (ದಿಲೀಪ್ ಕುಮಾರ್) ಪ್ರೇಮಿಸಿ ಮದುವೆಯಾಗಲು ಬಯಸುತ್ತಾನೆ. ಆದರೆ ಸಲೀಂ ಹಾಗೂ ಅನಾರ್ಕಲಿ ಇವರ ಪ್ರೇಮವನ್ನು ಮಹಾರಾಜ ಅಕ್ಬರ್ (ಪೃಥ್ವಿರಾಜ್ ಕಪೂರ್) ವಿರೋಧಿಸುತ್ತಾನೆ. ಸುಖದ ಸುಪ್ಪತ್ತಿಗೆಯಲ್ಲಿ ವಾಸಿಸುವ ದೇಶವನ್ನು ಆಳುವ ಮಹಾರಾಜನ ಮಗನೊಬ್ಬ ಸಾಮಾನ್ಯ ನೃತ್ಯಗಾತಿಯನ್ನು ಮದುವೆಯಾಗುವುದನ್ನು ಅಕ್ಬರ್ ತಡೆಯುತ್ತಾನೆ. ಅಲ್ಲದೆ ಅಕ್ಬರ್ ಅನಾರ್ಕಲಿಯನ್ನು ಜೈಲಿಗೆ ತಳ್ಳುತ್ತಾನೆ. ಸಲೀಂನನ್ನು ಪ್ರೀತಿಸಿದ ಆಕೆಗೆ ಚಿತ್ರಹಿಂಸೆ ನೀಡುತ್ತಾನೆ. ಆದರೂ ಆಕೆ ಸಲೀಂನ ಮೇಲಿನ ಪ್ರೀತಿಯನ್ನು ಮರೆಯುವುದಿಲ್ಲ.
ಕೊನೆಗೊಮ್ಮೆ ಸಲೀಂ ಪಕ್ಕದ ರಾಜ್ಯದ ಜೊತೆಗೆ ನಡೆದ ಯುದ್ಧದಲ್ಲಿ ಸೋಲುತ್ತಾನೆ. ಅಲ್ಲದೆ ಆತನನ್ನು ಗಲ್ಲಿಗೇರಿಸಲು ಮುಂದಾಗುತ್ತಾರೆ. ಆಗ ಅದನ್ನು ತಪ್ಪಿಸುವ ಅನಾರ್ಕಲಿ ಸಲೀಂನ ಬದಲು ತಾನು ಸಾಯಲು ಸಿದ್ಧಳಾಗುತ್ತಾಳೆ. ಕೊನೆಗೆ ಅನಾರ್ಕಲಿ ಬದುಕಿದ್ದಂತೆಯೇ ಆಕೆಯನ್ನು ಗೋರಿಯೊಳಕ್ಕೆ ತಳ್ಳಿ ಗೋಡೆಕಟ್ಟಲಾಗುತ್ತದೆ. ರಾಜಕುವರ ಸಲೀಂನ ಮೇಲಿನ ಪ್ರೀತಿಗಾಗಿ ಸಾಮಾನ್ಯ ನೃತ್ಯಗಾತಿ ತನ್ನ ಜೀವವನ್ನೇ ಬಲಿಕೊಡುತ್ತಾಳೆ.
ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮಧುಬಾಲಾ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಈ ಮೂವರೂ ನೀಡಿರುವ ಭಾವಪೂರ್ಣ ಅಭಿನಯ ನೋಡುಗರನ್ನು ಸೆಳೆಯುತ್ತದೆ. ಅನಾರ್ಕಲಿ ಹಾಗೂ ಸಲೀಂರ ನಡುವಿನ ಪ್ರೇಮಮಯ ಸನ್ನಿವೇಶಗಳು, ಇಬ್ಬರೂ ಒಬ್ಬರನ್ನೊಬ್ಬರು ಅಗಲಿರುವಾಗಿನ ದೃಶ್ಯಗಳು ಹಾಗೂ ಕ್ಲೈಮ್ಯಾಕ್ಸ್ ಚಿತ್ರದ ವಿಶೇಷತೆಗಳಲ್ಲಿ ಒಂದೆನಿಸಿವೆ. ಚಿತ್ರದಲ್ಲಿನ ಹಾಡುಗಳೂ ಅಷ್ಟೆ. ಒಂದಕ್ಕಿಂತ ಇನ್ನೊಂದು ಚೆನ್ನಾಗಿ ಮೂಡಿಬಂದಿವೆ. ಮೊಹಮ್ಮದ್ ರಫಿ ಹಾಗೂ ಇತರರು ಹಾಡಿದ ಲತಾ ಮಂಗೇಶ್ಕರ್ ಹಾಡಿದ `ಏ ಮೊಹಬ್ಬತ್ ಜಿಂದಾಬಾದ್' ಹಾಗೂ `ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಎಂಬ ಹಾಡುಗಳು ಈಗಲೂ ಜನರನ್ನು ಸೆಳೆಯುತ್ತಿವೆ.
1960ರಲ್ಲಿಯೇ 1 ಕೋಟಿ ಹಣವನ್ನು ಖಚರ್ುಮಾಡಿ ಈ ಚಿತ್ರವನ್ನು ನಿರಮಾಣ ಮಾಡಿದ ಖ್ಯಾತಿ ಆಸಿಫ್ಗೆ ಸಲ್ಲುತ್ತದೆ. ಅತ್ಯಂತ ವೈಭವೋಪೇತವಾಗಿ ಚಿತ್ರೀಕರಣವಾಗಿರುವ ಈ ಚಿತ್ರ ಹಿಂದಿಚಿತ್ರರಂಗದಲ್ಲೊಂದು ಮೈಲಿಗಲ್ಲು ಎಂದೇ ಖ್ಯಾತಿ ಪಡೆದಿದೆ.

Sunday, May 16, 2010

ನೋವು-ನೆರವು ದಾಖಲಾದಾಗ....

ಕಳೆದ ವರ್ಷ ಉತ್ತರ ಕರ್ನಾಟಕ ಹಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ-ನೆರೆಯ ಭೀಕರತೆ ಈಗ ಇತಿಹಾಸ. ಆದರೆ ಸಂಕಷ್ಟಕ್ಕೀಡಾಗಿ ಜೀವನದ ಹಳಿ ತಪ್ಪಿದವರ ಬದಕು-ಬವಣೆ, ಸಮಯದಲ್ಲಿ ಸ್ಪಂದಿಸಿದವರ ಕಾರ್ಯವನ್ನು ದಾಖಲು ಮಾಡುವ ಅಪರೂಪದ ಕೆಲಸ  ರಾಜಧಾನಿಯ ಚ್ರೈತ್ರ ರಶ್ಮಿ ಪ್ರಕಾಶನದಿಂದ ನಡೆದಿದೆ.
ಈ ಪ್ರಕಾಶನ ಸಂಸ್ಥೆ ಹೊರತಂದ `ನೆರೆಯ ನೋವಿಗೆ ಸ್ಪಂದನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ಪುಳಿಯೋಗರೆ ಪಾಯಿಂಟ್ ಕಟ್ಟಡದಲ್ಲಿ ನಡೆದಾಗ, ನೋವಿನ ನೆನಪು ಸಭಿಕರ ಹೃದಯವನ್ನು ಆವರಿಸಿಕೊಂಡಿತೆಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಈ ಮೂರು ಘಟನಾವಳಿಗಳೇ ತುಣುಕುಗಳೇ ಸಹೃದಯರ ಎದೆತುಂಬಿಬರಲು ಸಾಕಾಗಿತ್ತು.


`ನಮ್ಮ ಹಣಿಬಾರ ಛಂದ ಇಲ್ಲ ಬಿಡ್ರಿ. ತುಸು ಕಾಳು ಪಾಳ ನಿತ್ಯದ ಗಂಜಿಗೆ ಇಟಕೊಂಡಿದ್ವಿ. ಅದೂ ಹೋತು. ಜೀವ ಇದ್ದೂ ಇಲ್ಲದಂಗಾಗೇದ. ನಾವೂ ಹೊಳೆ ನೀರಿನಾಗ ಕೊಚ್ಚಿಕೊಂಡು ಹೋಗಿದ್ರ ಭೇಷಿತ್ತು'.
-----
`ಕುಡಿಯಾಕ ಬೇರೆ ನೀರೇ ಇಲ್ರಿ. ಈ ಪ್ರವಾಹದ ರಾಡಿ ನೀರಲ್ಲೇ ಅನ್ನ-ಸಾರು ಮಾಡ್ತಾರ್ರಿ. ಎಷ್ಟು ದಿನ ಬದುಕ್ತೀವಿ ಅನ್ನಾದು ಆ ದೇವ್ರಿಗೆ ಗೊತ್ತದ...'
----
`ಮಳೀ ಸಂಜೀಕ ಅಥವಾ ರಾತ್ರೀಗ ನಿಲ್ಲಬಹ್ದು ಅಂತಾ ಅಂದ್ಕೊಂಡಿದ್ವಿ. ರಾತ್ರಿ ಮಲಗಿದ ಮ್ಯಾಗ ಮಳಿ ಆರ್ಭಟ ಮತ್ತೂ ಜೋರಾತು. ಡೋಣಿ ಊರೊಳಗ ನುಗ್ತಾ ಐತಿ ಅಂತ ಗೊತ್ತಾತು. ಮನಿಗಳೆಲ್ಲಾ ಕುಸಿಯಾಕ ಹತ್ತಿದ್ವು. ತುಂಬಿದ ಮನಿ ಬಿಟ್ಟು ಹೋಗೋದು ಹ್ಯಾಂಗ ಅಂತ ಚಿಂತಿ ಆತು. ಆದ್ರ ಮೊದಲು ಜೀಂವಾ ಉಳೀಲಿ. ನಂತ್ರ ಮನೀ ಅಂತ ಇದ್ದ ಬದ್ದ ಆಹಾರ, ಅಕ್ಕಿ-ಬ್ಯಾಳಿ ಎಲ್ಲ ಗಂಟು ಕಟಗೊಂಡ ಮನಿಯಿಂದ ಹೊರಗ ಓಡಿದ್ವಿ. ಹತ್ತೇ ನಿಮಿಷಕ್ಕ ಮನೀ ಕೊಚಿಗಂಡು ಹೋತು...'
-------
ಎಸ್. ಎಂ. ಜಾಮದಾರ ಹಾಗೂ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆ. ಶ್ರೀ. ಆನಂದ್ ನೆರೆಯ ಸಮಯದಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಭೆಗೆ ತಿಳಿಸಿದರು. ನೊಂದವರಿಗೆ ಸಹಾಯ ಮಾಡಿದ ಸಾವಯವ ಕೃಷಿ ಮಿಷನ್ನಿನ ಕಾರ್ಯಗಳನ್ನು ವಿವರಿಸಲಾಯಿತು.
ಉತ್ತರ ಕರ್ನಾಟಕದ ಮಂದಿಯ ಆಹಾರ, ಉತ್ಪಾದನೆ, ಬೇಳೆ ಕಾಳು ಬೆಳೆಯುವಿಕೆ, ರೈತಾಪಿ ಕೆಲಸಗಳ ಬಗ್ಗೆ ಆನಂದ್ ಸಾಕಷ್ಟು ಮಾಹಿತಿ ನೀಡಿದರು.
ನೆರೆ ಹಾವಳಿಯಲ್ಲಿ ಸಿಲುಕಿ ಹಲವು ಜನರನ್ನು ರಕ್ಷಿಸಿದ ಬಯಲು ನಾಡಿನ ತಿಮ್ಮಣ್ಣ ಹುಳಸದ್ ಉಪಸ್ಥಿತರಿದ್ದರು. ಪ್ರವಾಹ ಬಂದಾಗ ತಮ್ಮ ಹೊಲ ಹಾಳಾಗುವುದನ್ನೂ ಲೆಕ್ಕಿಸದೇ ಕೆರೆಯ ಕೋಡಿ ಒಡೆದು ಊರನ್ನು ಉಳಿಸಿದ ನೆರೆ ಸಂತ್ರಸ್ಥ ಭೀಮನಗೌಡ ಪಾಟೀಲರು ದೂರದ ಬಾಗಲಕೋಟೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ನೆರೆಯ ಸಂದರ್ಭದಲ್ಲಿ ತಾವು ಹಾಗೂ ಉತ್ತರ ಕರ್ನಾಟಕದ ಜನರು ಅನುಭವಿಸಿದ ನೋವನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ `ನೆರೆಯ ನೋವಿಗೆ ಸ್ಪಂದನ' ಪುಸ್ತಕದ ಸಂಪಾದಕ ರಾಮಚಂದ್ರ ಹೆಗಡೆ ಸಿ ಎಸ್ ತಾವು ಉತ್ತರ ಕರ್ನಾಟಕಕ್ಕೆ ನೆರೆ ಸಂತ್ರಸ್ಥರ ಜೊತೆ ಮಾತನಾಡಲು ಹೋದಾಗ ಆದ ಅನುಭವವನ್ನು ಸಭೆಯ ಮುಂದಿಟ್ಟರು.

ಪುಸ್ತಕದ ಬಗ್ಗೆ
`ನೆರೆ ನೋವಿಗೆ ಸ್ಪಂದನ' ಪುಸ್ತಕ ಸಂಪೂರ್ಣವಾಗಿ ನೆರೆ ಸಂತ್ರಸ್ತರ ಜೀವನ ಹಾಗೂ ನೆರೆ ಹಾವಳಿಯ ಭೀಕರತೆಯನ್ನು ತೆರೆದಿಡುತ್ತದೆ. ನೆರೆ ಪೀಡಿತ ಪ್ರದೇಶಗಳಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಅನುಭವಗಳನ್ನು ದಾಖಲಿಸಿದ ರಾಮಚಂದ್ರ ಹೆಗಡೆ ಹಾಗೂ ಅವರ ಬಳಗದ ಕಾರ್ಯ ಮಚ್ಚುವಂತಹದ್ದು. ದಾಖಲಾಗದ ಹಲವು ನೆರೆ ಸಂಗತಿಗಳನ್ನು, ನೆರೆಯ ನೋವಿಗೆ ತಕ್ಷಣವೇ ಸ್ಪಂದಿಸಿದವರ ಮತ್ತು ನೆರೆಯಲ್ಲಿ ಸಿಲುಕಿದ ಜನರನ್ನು ಉಳಿಸಿದ ವ್ಯಕ್ತಿಗಳ ಕಾರ್ಯವನ್ನು ಈ ಪುಸ್ತಕ ವಿವರಿಸುತ್ತದೆ.
ರಾಮಚಂದ್ರ ಹೆಗಡೆ, ಎನ್ವೀ ವೈದ್ಯ ಹೆಗ್ಗಾರ ಅವರ ಲೇಖನ, ಸಂಜಯ ಭಟ್ಟ ಬೆಣ್ಣೆಗದ್ದೆ, ಅರ್ಪಿತಾ ಭಟ್ಟ, ನವೀನ ಗಂಗೋತ್ರಿ, ಪ್ರಿಯಾ ಕಲ್ಲಬ್ಬೆ ಅವರ ಕವನಗಳು ಓದುಗರ ಮನಸ್ಸಿಗೆ ನಾಟುವ ಈ ಪುಸ್ತಕದ ಬೆಲೆ 20ರೂ. ಮಾನವೀಯ ಉದ್ದೇಶವೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗಿರುವ ಪುಸ್ತಕ ಇದಾಗಿದೆ ಎನ್ನುವುದು ಪ್ರಕಾಶಕರ ನುಡಿ.

 -----------------------------------------------
ವಿ.ಸೂ ..
ಇದು ನೆರೆ ನೋವಿನಲ್ಲಿ ನೊಂದವರ ಕಥೆ..
ನೆರೆಯಲ್ಲಿ ಬಸವಳಿದವರಿಗೆ ಸಮಾಧಾನ ಹೇಳಿದವರ ಕಥೆ..
ಇಂತಹ ಹಲವು ಸಂಗತಿಗಳನ್ನು ಸಂಗ್ರಹಿಸಿದ್ದಾರೆ ರಾಚಮ್ ಅಣ್ಣ..
ಅವರಿಗೆ ಧನ್ಯವಾದ.. 
ಪುಸ್ತಕ ನೆರೆ ನೋವಿಗೆ ಸಿಕ್ಕ ಜನರಿಗೆ ಸಮಾಧಾನ ಹೇಳುತ್ತದೆ..
ಈ ಪುಸ್ತಕದ ಬೆಲೆ ಕೇವಲ ೨೦ ರೂಪಾಯಿಗಳು..
ಇದನ್ನು ಕೊಂಡು ಓದಿರಿ...

-ವಿನಯ ದಂಟಕಲ್

Monday, April 26, 2010

ಸಾನಿಯಾ ಕಾಲಿಟ್ಟೊಡನೆ ಪವರ್ ಕಟ್.., ಗುಟ್ಕಾ ಔಟ್..

ಅಯ್ಯೋ ಪಾಪಾ. ಮೂಗುತಿ ಸುಂದರಿಗೆ ಇಂತಹ ಪಾಡು ಬರಬಾರದಿತ್ತು. ಮೊನ್ನೆಯಷ್ಟೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ನನ್ನು ಮದುವೆಯಾಗಿ ಭಾರತಕ್ಕೆ ಬಾಯ್ ಬಾಯ್ ಹೇಳಿದ ಈಕೆಗೆ ಪಾಕಿಸ್ತಾನದಲ್ಲಿ ದೊರಕಿದ್ದು ಭವ್ಯ ಸ್ವಾಗತ. ಆದರೆ ಅದಾದ ಕೆಲವೇ ದಿನಗಳಲ್ಲಿ ಆಕೆಗೆ ಪಾಕಿಸ್ತಾನದ ಜನರ ಅಸಲಿ ಮುಖದ ಪರಿಚಯವಾಗತೊಡಗಿದೆ.
ಮದುವೆಯ ಔತಣಕೂಟ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನದಲ್ಲಿ ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದ ಶೋಯೆಬ್ ಕುಟುಂಬಕ್ಕೆ ಮೊದಲನೆಯದಾಗಿ ಶಾಕ್ ನೀಡಿದ್ದು ಅಲ್ಲಿನ ವಿದ್ಯುತ್ ಇಲಾಖೆ. ಈ ಕಾರ್ಯಕ್ರಮದಲ್ಲಿ ಅತಿಯಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದರ ಬಗ್ಗೆ ನೋಟಿಸ್ ನೀಡಿದ ಪಾಕ್ ವಿದ್ಯುತ್ ಮಂಡಳಿ ಶೋಯೆಬ್ ಮನೆಯ `ಪವರ್ ಕಟ್' ಮಾಡಿಬಿಟ್ಟಿತು. ಇದರಿಂದ ಪಾಪಾ ಸಾನಿಯಾಗೆ ಅದೆಷ್ಟು ನೋವಾಗಿರಬೇಡ..?
ಪಾಕಿಸ್ತಾನಿಯನನ್ನು ಮನಮೆಚ್ಚಿ ಮದುವೆಯಾಗಿದ್ದಾಗಿದೆ. ಇನ್ನು ಆತನ ಜೊತೆ ಪಾಕಿಸ್ತಾನದಲ್ಲಿ ಆರಾಮವಾಗಿ ಬದುಕಿ ಜೀವಿಸಬಹುದು ಎಂದು ಕನಸು ಕಂಡಿದ್ದ ಆಕೆಗೆ ಈ ಪವರ್ ಕಟ್ ಅಲ್ಲಿನ ವಾಸ್ತವತೆಯ ಪರಿಚಯ ಮಾಡಿಕೊಟ್ಟಿರಬೇಕು.
ಪಾಪ ಇಷ್ಟೇ ಆಗಿದ್ದರೆ ಚೆನ್ನಾಗಿತ್ತು. ಈಗ ಪಾಕ್ನಲ್ಲಿ ಅವಳ ಹೆಸರಿನಲ್ಲಿ ಗುಟ್ಕಾವೊಂದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಆ ಗುಟ್ಕಾದ ಹೆಸರು `ಸಾನಿಯಾ ಭಾಭಿ '. ಅದರ ಜೊತೆಗೆ `72% ಎಕ್ಸ್ಟ್ರಾ ಸ್ಟ್ರಾಂಗ್' ಎಂಬ ಅಡಿಬರಹ ಬೇರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಆ ಗುಟ್ಕಾ ಕಂಪನಿ ಆ ಗುಟ್ಕಾ ಪ್ಯಾಕ್ ಮೇಲೆ `ತಾಜಗೀ ಬರ್ ಹೋ ಅಂಗ್ ಅಂಗ್.... ಜಬ್ ಹೋ ಸಾನಿಯಾ ಭಾಬಿ ಗುಟ್ಕಾ ಸಂಗ್' ಎಂಬ ಬರಹವನ್ನೂ ಮುದ್ರಿಸಿಬಿಟ್ಟಿದೆ.
ಇದರಿಂದ ಬಹಳ ಪರಿಶಾನ್ ಆಗಿರುವ ಸಾನಿಯಾ ಯಾಕಾದರೂ ಭಾರತ ಬಿಟ್ಟೆನೋ ಎಂದು ಕನವರಿಸುತ್ತಿರಬಹುದು...

Thursday, April 22, 2010

ಮಧ್ಯಮ ಶೂರರು...

ಟೆಸ್ಟ್ ಕ್ರಿಕೆಟ್ಗೆ ಅದರದೇ ಆದ ಖದರಿದೆ. ಎಷ್ಟೇ ಹೊಸ ನಮೂನೆಯ ಕ್ರಿಕೆಟ್ ಆಟಗಳು ಬಂದರೂ ಟೆಸ್ಟ್ನ ವೈಭವ ಎಲ್ಲೂ ಸಿಗಲಾರದು. ಟೆಸ್ಟ್ ಆಡುವ ಆಟಗಾರರೂ ಅಷ್ಟೇ. ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲ ರೀತಿಯ ಆಟದ ಶಾಟ್ಗಳನ್ನೂ ಪ್ರದರ್ಶಿಸಿ  ನೋಡುಗರಿಗೆ ಹಬ್ಬದೂಟವನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಟೆಸ್ಟ್ ಕ್ರಿಕೆಟ್ ಹೊಸತನವನ್ನೂ ಹೊಸ ಆಟಗಾರರನ್ನೂ ಹೊಂದಿ ಉತ್ತಮ ರೀತಿಯಲ್ಲಿ ಬದಲಾಗುತ್ತಾ ಬಂದಿದೆ. ಬ್ರಾಡಮನ್, ಗೂಚ್, ಹ್ಯಾಡ್ಲಿ, ಕಪಿಲ್ ದೇವ್, ಸೋಬರ್ರ್ಸ್ ತಹ ಆಟಗಾರರನ್ನು ಕಂಡ ಟೆಸ್ಟ್ ಲಾರಾ, ಸಚಿನ್, ಹೇಡನ್ರಂತಹ ಆಟಗಾರರನ್ನೂ ಕಂಡಿದೆ.
ಇಂದಿನ ದಿನಮಾನದಲ್ಲಿ ಟೆಸ್ಟ್ ಸಹ ಹೊಡೆಬಡೆಯ ಆಟಕ್ಕೆ ಮಾರುಹೋಗುತ್ತಿದೆ. ಸೆಹವಾಗ್, ಯುವರಾಜ್ರಂತಹ ಆಟಗಾರರು ಒಂದು ದಿನದ ಪಂದ್ಯದಂತೆ ಟೆಸ್ಟನಲ್ಲೂ ಹೊಡೆ ಬಡಿ ಆಟ ಆಡಲು ಪ್ರಾರಂಭಿಸಿದ್ದಾರೆ. ಕ್ಲಾಸಿಕ್ ಹಾಗೂ ಸುಂದರ ಆಟದ ಗೂಡು ಎಂದು ಹೆಸರಾಗಿದ್ದ ಟೆಸ್ಟ್ ಈಗ ಅಬ್ಬರದ ಆಟವಾಗಿ ಬದಲಾಗುತ್ತಿದೆ. ಇಂತಹ ಬದಲಾಗುತ್ತಿರುವ ಟೆಸ್ಟ್ ಆಟದಲ್ಲಿ ಕೆಲವರು ಆ ಆಟಗಾರರಿದ್ದಾರೆ. ಹಳೆಯ ಶೈಲಿ, ಬ್ಯಾಟ್ ಬೀಸುವಿಕೆಯನ್ನು ಹೊಂದಿರುವಂತಹ ಆಟಗಾರರು. ದ್ರಾವಿಡ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಚಂದ್ರಪಾಲ್, ಕಾಲಿಂಗ್ವುಡ್ ಮುಂತಾದವರೇ ಈ ಆಟಗಾರರು.
ಇವರ ಶೈಲಿ ಅದೇ ಹಳೆಯ ರೀತಿಯದು. ಬ್ಯಾಟಿಂಗಿಗೆ ಬಂದರಂತೂ ಮಿನಿಮಂ 100 ಗ್ಯಾರಂಟಿ. ಇವರ ಆಟವನ್ನು ನೋಡುವುದೆಂದರೆ ಸುಂದರ ಸಿನೆಮಾ ವೀಕ್ಷಿಸಿದಂತೆ. ಆಟವೂ ಅಷ್ಟೆ ಗಂಭೀರ ಹಾಗೂ ವೈಭವೋಪೇತ. ಈ ಆಟಗಾರರು ಸಾಮಾನ್ಯವಾಗಿ ಕ್ರೀಸಿಗೆ ಬರುವ ವೇಳೆಗೆ ತಂಡದಲ್ಲಿ 3-4 ವಿಕೆಟ್ಗಳು ಬಿದ್ದಿರುತ್ತವೆ. ತಂಡದ ಪಾಲಿಗೆ ಆಪದ್ಭಾಂದವರಂತೆ ಬರುವ ಇವರು ಸೋಲಿನತ್ತ ಸಾಗುವ ತಂಡವನ್ನು ಗೆಲುವಿನೆಡೆಗೆ ತಂದು ನಿಲ್ಲಿಸುತ್ತಾರೆ.
ಈ ಆಟಗಾರರು ಸೆಹವಾಗ್, ಅಫ್ರೀದಿಯಂತೆ ಗುಡುಗುವುದಿಲ್ಲ. ಬದಲಾಗಿ ಕ್ರೀಸಿಗೆ ಕಚ್ಚಿಕೊಂಡು ನಿಂತುಬಿಡುತ್ತಾರೆ. ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾರೆ. ಬೌಲರ್ಗಳ ಬೆವರಿಳಿಸುತ್ತಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ನಿಂದ ತಂಡದ ಭವಿಷ್ಯವನ್ನೇ ಬದಲಾಯಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಆಡುವ ತಂಡಗಳಲ್ಲೆಲ್ಲ ಇಂತಹ ಒಬ್ಬಿಬ್ಬರು ಆಟಗರರು ಇದ್ದೇ ಇರುತ್ತಾರೆ. ದಕ್ಷಿಣ ಆಫ್ರಿಕಾದ ಪಾಲಿಗೆ ಕಾಲಿಸ್, ಆಮ್ಲಾ, ಶ್ರೀಲಂಕಾ ಪಾಲಿಗೆ ಜಯವರ್ಧನೆ, ಆಸ್ಟ್ರೇಲಿಯಾದಲ್ಲಿ ಪಾಂಟಿಂಗ್, ಮೈಕ್ ಹಸ್ಸಿ, ಕ್ಲಾರ್ಕ, ಇಂಗ್ಲೆಂಡ್ನಲ್ಲಿ ಕಾಲಿಂಗ್ವುಡ್, ಪಾಕಿಸ್ತಾನದಲ್ಲಿ ಮೊಹಮ್ಮದ್ ಯುಸುಫ್ ಹಾಗೂ ಮಿಸ್ಬಾ ಉಲ್ ಹಕ್, ವೆಸ್ಟ್ ಇಂಡಿಸ್ ಪಾಲಿಗೆ ಚಂದ್ರಪಾಲ್ ಹಾಗೂ ಭಾರತದ ಪಾಲಿಗೆ ದಿ ವಾಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇಂತಹ ಆಟವನ್ನು ಆಡುತ್ತಾರೆ. ತಂಡದ ಹಾಗೂ ದೇಶದ ಪಾಲಿಗೆ ಇವರು ಬಹಳ ನಂಬಿಕಸ್ತ ಬ್ಯಾಟ್ಸ್ಮನ್ನುಗಳು. ಯಾರೇ ಔಟಾಗಲಿ, ಎಸ್ಟೇ ವಿಕೆಟ್ ಬೀಳಲಿ. ಇವರಿದ್ದಾರಲ್ಲ ಎಂಬ ಭಾವನೆ ಎಲ್ಲರ ಮನದಲ್ಲಿಯೂ ಅಚ್ಚೊತ್ತಿರುತ್ತದೆ. ಇವರು ಎಷ್ಟೇ ಬಾಲ್ಗಳನ್ನು ಹಾಳು ಮಾಡಲಿ, ಎಷ್ಟೇ ಕುಟುಕಲಿ ಅದರ ಹಿಂದೆ ಗೆಲುವಿನ ಉದ್ದೇಶ ಇದ್ದೇ ಇರುತ್ತದೆ.
ಈ ಬ್ಯಾಟ್ಸ್ಮನ್ಗಳ ಎದುರು ಬಾಲ್ ಮಾಡುವುದು ಎಂತಹ ಯಶಸ್ವಿ ಬೌಲರ್ಗೇ ಆದರೂ ಅದು ಬಹಳ ಕಷ್ಟ. ಯಾವುದೇ ರೀತಿಯ ಬೌಲ್ ಹಾಕಲಿ ಇವರದ್ದು ಒಂದೇ ಧ್ಯಾನ ಅದನ್ನು ಕಟ್ ಮಾಡುವುದು ಹಾಗೂ ಅದೇ ರೀತಿ ಬೌಂಡರಿ ಗಳಿಸುವುದು. ದಿನಗಟ್ಟಲೇ ಕ್ರೀಸಿನಲ್ಲಿ ನಿಂತುಬಿಡುವ ಇವರು ಬೌಲರ್ಗಳ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಬೌಲರ್ ಎಷ್ಟೇ ಒದ್ದಾಡಿದರೂ ಇವರ ವಿಕೆಟ್ ಪಡೆಯುವುದು ಮಾತ್ರ ಬಹಳ ಕಷ್ಟ.
ಭಾರತದ ಟೆಸ್ಟ್ ತಂಡವನ್ನೇ ತೆಗೆದುಕೊಂಡರೆ ಇಲ್ಲಿ ಸೆಹವಾಗ್ರನ್ನು ಬೇಗನೆ ಔಟ್ ಮಾಡಬಹುದು, ಸಚಿನ್ನ್ನು ಬೇಗನೆ ಔಟ್ ಮಾಡಬಹುದು, ಇನ್ನುಳಿದಂತೆ ಗಂಭೀರ್ ಯುವರಾಜ್, ಧೋನಿ ಅಂತವರನ್ನೂ ಔಟ್ ಮಾಡಬಹುದು ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಒಮ್ಮೆ ಕ್ರೀಸಿನಲ್ಲಿ ಝಾಂಡಾ ಊರಿದರೆಂದರೆ ಊಹು ಯಾರೆಂದರೆ ಯಾರಬಳಿಯೂ ಅವರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ. ಶತಕಗಳನ್ನು ಹೊಡೆದ ನಂತರವೇ ಅವರು ವಿಕೆಟ್ ಒಪ್ಪಿಸುವುದು. ಅಂತಹ ಆಟದ ವೈಖರಿ ಅವರದ್ದು. ತೀರಾ ಇತ್ತೀಚೆಗೆ ಈ ಇಬ್ಬರೂ ಆಟಗಾರರೂ ತಂಡದಲ್ಲಿ ಆಡದಿದ್ದರಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತಿದ್ದು ನೆನಪಿನಲ್ಲಿ ಇರಬಹುದು. ಕೊನೆಗೆ ಮರು ಪಂದ್ಯದಲ್ಲಿ ಲಕ್ಷ್ಮಣ್ ಶತಕ ಹೊಡೆದು ಮ್ಯಾಚ್ ಗೆದ್ದಿದ್ದು ಯಾವಾಗಲೂ ನೆನಪಿರುತ್ತದೆ.
ಟೆಸ್ಟ್ ಇತಿಹಾಸವನ್ನು ಕೆದಕಿದಾಗ ಇಂತಹ ಆಟಗಾರರು ಬಹಳಷ್ಟು ಜನರಿದ್ದರು. ತಮ್ಮ ಮನಮೋಹಕ ಆಟದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದ ಇವರು ಮ್ಯಾಚುಗಳನ್ನೂ ಸಲೀಸಾಗಿ ಗೆದ್ದುಬಿಡುತ್ತಿದ್ದರು. ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಬ್ರಾಡಮನ್ ಹಾಗೆಯೇ ಬ್ರಿಯಾನ್ ಲಾರಾ, ಇಂಜಮಾಮ್-ಉಲ್-ಹಕ್, ಅಜರ್ುನ ರಣತುಂಗಾ, ಸ್ಟೀವ್ ವಾ ಇಂತವರೆಲ್ಲ ಹೊಡೆ ಬಡಿ ಆಟಕ್ಕಿಂತ ಭಿನ್ನವಾದ ಕ್ರಿಕೆಟ್ ಆಡಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಎಷ್ಟೇ ಸೆಹವಾಗ್, ಅಫ್ರೀದಿ, ಪೀಟರ್ಸನ್, ಸ್ಮಿತ್ರಂತಹ ಆಟಗಾರರು ಬಂದರೂ ಟೆಸ್ಟ್ ಅಂದಕೂಡಲೇ ಇವರು ಪದೆ ಪದೆ ನೆನಪಾಗುತ್ತಾರೆ. ಬಹುಶಃ ಇಂತಹ ಆಟಗಾರರಿಲ್ಲದ ಟೆಸ್ಟ್ ಕ್ರಿಕೆಟ್ನ್ನು ನೋಡಿದರೆ ಮೊದಲಿನ ಖುಷಿ ದಕ್ಕಲಾರದು.