Thursday, April 22, 2010

ಮಧ್ಯಮ ಶೂರರು...

ಟೆಸ್ಟ್ ಕ್ರಿಕೆಟ್ಗೆ ಅದರದೇ ಆದ ಖದರಿದೆ. ಎಷ್ಟೇ ಹೊಸ ನಮೂನೆಯ ಕ್ರಿಕೆಟ್ ಆಟಗಳು ಬಂದರೂ ಟೆಸ್ಟ್ನ ವೈಭವ ಎಲ್ಲೂ ಸಿಗಲಾರದು. ಟೆಸ್ಟ್ ಆಡುವ ಆಟಗಾರರೂ ಅಷ್ಟೇ. ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲ ರೀತಿಯ ಆಟದ ಶಾಟ್ಗಳನ್ನೂ ಪ್ರದರ್ಶಿಸಿ  ನೋಡುಗರಿಗೆ ಹಬ್ಬದೂಟವನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಟೆಸ್ಟ್ ಕ್ರಿಕೆಟ್ ಹೊಸತನವನ್ನೂ ಹೊಸ ಆಟಗಾರರನ್ನೂ ಹೊಂದಿ ಉತ್ತಮ ರೀತಿಯಲ್ಲಿ ಬದಲಾಗುತ್ತಾ ಬಂದಿದೆ. ಬ್ರಾಡಮನ್, ಗೂಚ್, ಹ್ಯಾಡ್ಲಿ, ಕಪಿಲ್ ದೇವ್, ಸೋಬರ್ರ್ಸ್ ತಹ ಆಟಗಾರರನ್ನು ಕಂಡ ಟೆಸ್ಟ್ ಲಾರಾ, ಸಚಿನ್, ಹೇಡನ್ರಂತಹ ಆಟಗಾರರನ್ನೂ ಕಂಡಿದೆ.
ಇಂದಿನ ದಿನಮಾನದಲ್ಲಿ ಟೆಸ್ಟ್ ಸಹ ಹೊಡೆಬಡೆಯ ಆಟಕ್ಕೆ ಮಾರುಹೋಗುತ್ತಿದೆ. ಸೆಹವಾಗ್, ಯುವರಾಜ್ರಂತಹ ಆಟಗಾರರು ಒಂದು ದಿನದ ಪಂದ್ಯದಂತೆ ಟೆಸ್ಟನಲ್ಲೂ ಹೊಡೆ ಬಡಿ ಆಟ ಆಡಲು ಪ್ರಾರಂಭಿಸಿದ್ದಾರೆ. ಕ್ಲಾಸಿಕ್ ಹಾಗೂ ಸುಂದರ ಆಟದ ಗೂಡು ಎಂದು ಹೆಸರಾಗಿದ್ದ ಟೆಸ್ಟ್ ಈಗ ಅಬ್ಬರದ ಆಟವಾಗಿ ಬದಲಾಗುತ್ತಿದೆ. ಇಂತಹ ಬದಲಾಗುತ್ತಿರುವ ಟೆಸ್ಟ್ ಆಟದಲ್ಲಿ ಕೆಲವರು ಆ ಆಟಗಾರರಿದ್ದಾರೆ. ಹಳೆಯ ಶೈಲಿ, ಬ್ಯಾಟ್ ಬೀಸುವಿಕೆಯನ್ನು ಹೊಂದಿರುವಂತಹ ಆಟಗಾರರು. ದ್ರಾವಿಡ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಚಂದ್ರಪಾಲ್, ಕಾಲಿಂಗ್ವುಡ್ ಮುಂತಾದವರೇ ಈ ಆಟಗಾರರು.
ಇವರ ಶೈಲಿ ಅದೇ ಹಳೆಯ ರೀತಿಯದು. ಬ್ಯಾಟಿಂಗಿಗೆ ಬಂದರಂತೂ ಮಿನಿಮಂ 100 ಗ್ಯಾರಂಟಿ. ಇವರ ಆಟವನ್ನು ನೋಡುವುದೆಂದರೆ ಸುಂದರ ಸಿನೆಮಾ ವೀಕ್ಷಿಸಿದಂತೆ. ಆಟವೂ ಅಷ್ಟೆ ಗಂಭೀರ ಹಾಗೂ ವೈಭವೋಪೇತ. ಈ ಆಟಗಾರರು ಸಾಮಾನ್ಯವಾಗಿ ಕ್ರೀಸಿಗೆ ಬರುವ ವೇಳೆಗೆ ತಂಡದಲ್ಲಿ 3-4 ವಿಕೆಟ್ಗಳು ಬಿದ್ದಿರುತ್ತವೆ. ತಂಡದ ಪಾಲಿಗೆ ಆಪದ್ಭಾಂದವರಂತೆ ಬರುವ ಇವರು ಸೋಲಿನತ್ತ ಸಾಗುವ ತಂಡವನ್ನು ಗೆಲುವಿನೆಡೆಗೆ ತಂದು ನಿಲ್ಲಿಸುತ್ತಾರೆ.
ಈ ಆಟಗಾರರು ಸೆಹವಾಗ್, ಅಫ್ರೀದಿಯಂತೆ ಗುಡುಗುವುದಿಲ್ಲ. ಬದಲಾಗಿ ಕ್ರೀಸಿಗೆ ಕಚ್ಚಿಕೊಂಡು ನಿಂತುಬಿಡುತ್ತಾರೆ. ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾರೆ. ಬೌಲರ್ಗಳ ಬೆವರಿಳಿಸುತ್ತಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ನಿಂದ ತಂಡದ ಭವಿಷ್ಯವನ್ನೇ ಬದಲಾಯಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಆಡುವ ತಂಡಗಳಲ್ಲೆಲ್ಲ ಇಂತಹ ಒಬ್ಬಿಬ್ಬರು ಆಟಗರರು ಇದ್ದೇ ಇರುತ್ತಾರೆ. ದಕ್ಷಿಣ ಆಫ್ರಿಕಾದ ಪಾಲಿಗೆ ಕಾಲಿಸ್, ಆಮ್ಲಾ, ಶ್ರೀಲಂಕಾ ಪಾಲಿಗೆ ಜಯವರ್ಧನೆ, ಆಸ್ಟ್ರೇಲಿಯಾದಲ್ಲಿ ಪಾಂಟಿಂಗ್, ಮೈಕ್ ಹಸ್ಸಿ, ಕ್ಲಾರ್ಕ, ಇಂಗ್ಲೆಂಡ್ನಲ್ಲಿ ಕಾಲಿಂಗ್ವುಡ್, ಪಾಕಿಸ್ತಾನದಲ್ಲಿ ಮೊಹಮ್ಮದ್ ಯುಸುಫ್ ಹಾಗೂ ಮಿಸ್ಬಾ ಉಲ್ ಹಕ್, ವೆಸ್ಟ್ ಇಂಡಿಸ್ ಪಾಲಿಗೆ ಚಂದ್ರಪಾಲ್ ಹಾಗೂ ಭಾರತದ ಪಾಲಿಗೆ ದಿ ವಾಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇಂತಹ ಆಟವನ್ನು ಆಡುತ್ತಾರೆ. ತಂಡದ ಹಾಗೂ ದೇಶದ ಪಾಲಿಗೆ ಇವರು ಬಹಳ ನಂಬಿಕಸ್ತ ಬ್ಯಾಟ್ಸ್ಮನ್ನುಗಳು. ಯಾರೇ ಔಟಾಗಲಿ, ಎಸ್ಟೇ ವಿಕೆಟ್ ಬೀಳಲಿ. ಇವರಿದ್ದಾರಲ್ಲ ಎಂಬ ಭಾವನೆ ಎಲ್ಲರ ಮನದಲ್ಲಿಯೂ ಅಚ್ಚೊತ್ತಿರುತ್ತದೆ. ಇವರು ಎಷ್ಟೇ ಬಾಲ್ಗಳನ್ನು ಹಾಳು ಮಾಡಲಿ, ಎಷ್ಟೇ ಕುಟುಕಲಿ ಅದರ ಹಿಂದೆ ಗೆಲುವಿನ ಉದ್ದೇಶ ಇದ್ದೇ ಇರುತ್ತದೆ.
ಈ ಬ್ಯಾಟ್ಸ್ಮನ್ಗಳ ಎದುರು ಬಾಲ್ ಮಾಡುವುದು ಎಂತಹ ಯಶಸ್ವಿ ಬೌಲರ್ಗೇ ಆದರೂ ಅದು ಬಹಳ ಕಷ್ಟ. ಯಾವುದೇ ರೀತಿಯ ಬೌಲ್ ಹಾಕಲಿ ಇವರದ್ದು ಒಂದೇ ಧ್ಯಾನ ಅದನ್ನು ಕಟ್ ಮಾಡುವುದು ಹಾಗೂ ಅದೇ ರೀತಿ ಬೌಂಡರಿ ಗಳಿಸುವುದು. ದಿನಗಟ್ಟಲೇ ಕ್ರೀಸಿನಲ್ಲಿ ನಿಂತುಬಿಡುವ ಇವರು ಬೌಲರ್ಗಳ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಬೌಲರ್ ಎಷ್ಟೇ ಒದ್ದಾಡಿದರೂ ಇವರ ವಿಕೆಟ್ ಪಡೆಯುವುದು ಮಾತ್ರ ಬಹಳ ಕಷ್ಟ.
ಭಾರತದ ಟೆಸ್ಟ್ ತಂಡವನ್ನೇ ತೆಗೆದುಕೊಂಡರೆ ಇಲ್ಲಿ ಸೆಹವಾಗ್ರನ್ನು ಬೇಗನೆ ಔಟ್ ಮಾಡಬಹುದು, ಸಚಿನ್ನ್ನು ಬೇಗನೆ ಔಟ್ ಮಾಡಬಹುದು, ಇನ್ನುಳಿದಂತೆ ಗಂಭೀರ್ ಯುವರಾಜ್, ಧೋನಿ ಅಂತವರನ್ನೂ ಔಟ್ ಮಾಡಬಹುದು ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಒಮ್ಮೆ ಕ್ರೀಸಿನಲ್ಲಿ ಝಾಂಡಾ ಊರಿದರೆಂದರೆ ಊಹು ಯಾರೆಂದರೆ ಯಾರಬಳಿಯೂ ಅವರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ. ಶತಕಗಳನ್ನು ಹೊಡೆದ ನಂತರವೇ ಅವರು ವಿಕೆಟ್ ಒಪ್ಪಿಸುವುದು. ಅಂತಹ ಆಟದ ವೈಖರಿ ಅವರದ್ದು. ತೀರಾ ಇತ್ತೀಚೆಗೆ ಈ ಇಬ್ಬರೂ ಆಟಗಾರರೂ ತಂಡದಲ್ಲಿ ಆಡದಿದ್ದರಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತಿದ್ದು ನೆನಪಿನಲ್ಲಿ ಇರಬಹುದು. ಕೊನೆಗೆ ಮರು ಪಂದ್ಯದಲ್ಲಿ ಲಕ್ಷ್ಮಣ್ ಶತಕ ಹೊಡೆದು ಮ್ಯಾಚ್ ಗೆದ್ದಿದ್ದು ಯಾವಾಗಲೂ ನೆನಪಿರುತ್ತದೆ.
ಟೆಸ್ಟ್ ಇತಿಹಾಸವನ್ನು ಕೆದಕಿದಾಗ ಇಂತಹ ಆಟಗಾರರು ಬಹಳಷ್ಟು ಜನರಿದ್ದರು. ತಮ್ಮ ಮನಮೋಹಕ ಆಟದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದ ಇವರು ಮ್ಯಾಚುಗಳನ್ನೂ ಸಲೀಸಾಗಿ ಗೆದ್ದುಬಿಡುತ್ತಿದ್ದರು. ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಬ್ರಾಡಮನ್ ಹಾಗೆಯೇ ಬ್ರಿಯಾನ್ ಲಾರಾ, ಇಂಜಮಾಮ್-ಉಲ್-ಹಕ್, ಅಜರ್ುನ ರಣತುಂಗಾ, ಸ್ಟೀವ್ ವಾ ಇಂತವರೆಲ್ಲ ಹೊಡೆ ಬಡಿ ಆಟಕ್ಕಿಂತ ಭಿನ್ನವಾದ ಕ್ರಿಕೆಟ್ ಆಡಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಎಷ್ಟೇ ಸೆಹವಾಗ್, ಅಫ್ರೀದಿ, ಪೀಟರ್ಸನ್, ಸ್ಮಿತ್ರಂತಹ ಆಟಗಾರರು ಬಂದರೂ ಟೆಸ್ಟ್ ಅಂದಕೂಡಲೇ ಇವರು ಪದೆ ಪದೆ ನೆನಪಾಗುತ್ತಾರೆ. ಬಹುಶಃ ಇಂತಹ ಆಟಗಾರರಿಲ್ಲದ ಟೆಸ್ಟ್ ಕ್ರಿಕೆಟ್ನ್ನು ನೋಡಿದರೆ ಮೊದಲಿನ ಖುಷಿ ದಕ್ಕಲಾರದು.


1 comment:

  1. ಚನ್ನಾಗಿದೆ... ಬರೆಯುತ್ತಿರಿ..

    ReplyDelete