Wednesday, August 20, 2025

ದವಾಯಿ, ಮಜ್ಯಾರ್ (ನಿನ್ನ ನಡೆ, ಹಂಗೇರಿಯನ್, Davai Magyar )




1946ರ ಸೆಪ್ಟೆಂಬರ್‌ನ ಆ ಬೆಳಿಗ್ಗೆ, ಹಂಗೇರಿಯ ಬುಡಾಪೆಸ್ಟ್‌ನ ಜನನಿಬಿಡ ಕೆಲೆಟಿ ರೈಲು ನಿಲ್ದಾಣದಲ್ಲಿ ನಿಂತುಕೊಂಡಂತೆ, ನಾನು ನನ್ನ ಆತಂಕವನ್ನು ಬಲವಂತವಾಗಿ ಹತೋಟಿಯಲ್ಲಿ ಇರಿಸಲು ಪ್ರಯತ್ನಿಸುತ್ತಿದ್ದೆ. 
ಅವಸರ ಅಥವಾ ಗಾಬರಿಯಿಂದ ನನ್ನ ಎಲ್ಲ ನಿರೀಕ್ಷೆಗಳು ಹಾಳಾಗಬಹುದು ಎಂಬುದನ್ನು ನನಗೆ ತಿಳಿದಿತ್ತು. 

ನಾನು ಪ್ರಾರ್ಥನೆಯ ಮನಸ್ಸಿನಿಂದ ಒಂದು ಹೆಸರಿನ ಕರೆಯುವಿಕೆಗೆ ಕಾಯುತ್ತಿದ್ದೆ — ಆಸ್ಕರ್ ಝಿನ್ನರ್. 
ಆದರೆ ಅದೇ ಹೆಸರಿನ ಕರೆಯುವಿಕೆ ನನ್ನ ನಾಶವನ್ನೂ ಸೂಚಿಸಬಹುದೆಂದು ನಾನು ಅರಿತಿದ್ದೆ. 

ಹತ್ತು ದಿನಗಳ ಹಿಂದಿನವರೆಗೂ ನಾನು ಆಸ್ಕರ್ ಝಿನ್ನರ್ ಎಂಬ ಹೆಸರನ್ನೇ ಕೇಳಿರಲಿಲ್ಲ. ಆಗ ನನ್ನೊಬ್ಬ ಹಳೆಯ ಸ್ನೇಹಿತನು, ಬುಡಾಪೆಸ್ಟ್ ನಲ್ಲಿ ವಾಸಿಸುತ್ತಿದ್ದ ಆಸ್ಟ್ರಿಯನ್ ನಾಗರಿಕರ ಸ್ಥಳಾಂತರದ ಬಗ್ಗೆ ರಹಸ್ಯ ಮಾಹಿತಿಯೊಂದಿಗೆ ನನ್ನನ್ನು ಭೇಟಿಯಾದ. 
ಅವನು ಗುಟ್ಟಾಗಿ ಹೇಳಿದ: 
"ಸ್ಥಳಾಂತರ ಪಟ್ಟಿಯಲ್ಲಿ ಒಬ್ಬನ ಹೆಸರಿದೆ. ಅವನಿಗೆ ಆಸ್ಟ್ರಿಯನ್ ಶರಣಾರ್ಥಿಗಳನ್ನು ವಿಯನ್ನಾಕ್ಕೆ ತೆಗೆದುಕೊಂಡು ಹೋಗುವ ಕೊನೆಯ ರೈಲು ಬಗ್ಗೆ ಹಲವು ಪತ್ರಗಳು ಕಳುಹಿಸಲಾಗಿತ್ತು. ಆದರೆ ಅವನು ಯಾವುದೇ ಉತ್ತರ ನೀಡಿಲ್ಲ. ಅವನು ಸತ್ತುಹೋಗಿದ್ದರೂ ಇರಬಹುದು. ಆ ವ್ಯಕ್ತಿ ಒಂದು ಪೋಟ್ರೇಟ್ ಚಿತ್ರಕಾರ — ಅವನ ಹೆಸರು ಆಸ್ಕರ್ ಝಿನ್ನರ್. ಅವನ ಹೆಸರಿನಲ್ಲಿ ಸ್ವಾತಂತ್ರ್ಯದ ದಾರಿ ಹಿಡಿಯುವ ಧೈರ್ಯ ಮಾಡುತ್ತೀಯೇ?” 

ನಾನು ಮಾಡಬಹುದೇ? ನನ್ನಿಂದ ಇದು ಸಾಧ್ಯವೇ? — ಮಾಡಲೇಬೇಕಿತ್ತು. ಏಕೆಂದರೆ ನಾನು ಶೀಘ್ರದಲ್ಲೇ ನನ್ನ ದೇಶದಿಂದ ತಪ್ಪಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. 

ನಾಜಿಗಳ ಆಳ್ವಿಕೆಯ ಸಮಯದಲ್ಲಿ, ಹಾಗೂ ನಂತರ ಹಂಗೇರಿಯ ಕಮ್ಯುನಿಸ್ಟ್ ಆಡಳಿತದಲ್ಲಿ ಬಲವಂತವಾಗಿ ಬದುಕಬೇಕಾದ ದಿನಗಳಲ್ಲೂ, ನಾನು ಬುಡಾಪೆಸ್ಟ್ನಲ್ಲಿದ್ದ ಒಬ್ಬ ಮೈತ್ರಿಕೂಟ (Allied) ಗುಪ್ತಚರನಾಗಿದ್ದೆ. ಆದರೆ ಇತ್ತೀಚೆಗೆ, ನನ್ನ ಹತ್ತಿರದ ಸಹೋದ್ಯೋಗಿಗಳು ಸೋವಿಯೆಟ್ ಬಲೆಗೆ ಸಿಕ್ಕಿಬಿದ್ದಿದ್ದರು. ಅದರಿಂದ ನಾನು ತಲೆಮರೆಸಿಕೊಂಡಿದ್ದೆ. 

ಈಗ ನಾನು ನನ್ನ ನಿಜವಾದ ಹೆಸರು ಫರೆನ್ಸ ಲಾಸ್ಲೋ. ಅದನ್ನು ಬಿಟ್ಟು ಆಸ್ಕರ್ ಝಿನ್ನರ್ ಆಗಿ ಬದಲಾಗುತ್ತಿದ್ದೆ. ಯಾವುದೇ ಪಾಸ್ಪೋರ್ಟ್ ವಿಷಯವೇ ಇರಲಿಲ್ಲ, ಏಕೆಂದರೆ ರಷ್ಯನ್ನರು ಬುಡಾಪೆಸ್ಟ್ನ ಬಹುತೇಕ ಮನೆಯಿಂದ ಎಲ್ಲಾ ದಾಖಲೆಗಳನ್ನು ದರೋಡೆ ಮಾಡಿ ಸುಟ್ಟುಬಿಟ್ಟಿದ್ದರು. 

ನನ್ನ ಸ್ನೇಹಿತನು ಝಿನ್ನರ್ ಜೀವನದ ವಿವರಗಳನ್ನು ಟೈಪ್ ಮಾಡಿದ ಪುಟಗಳನ್ನು ನನ್ನ ಮುಂದೆ ಹರಡಿದ. 
ಅವನು ಹೇಳಿದ: 
"ಇನ್ನು ನೀನೇ ಚಿತ್ರಕಾರ ಆಸ್ಕರ್ ಝಿನ್ನರ್. ಕುಳಿತುಕೊಂಡು ಕಲಿತುಕೋ. ಪ್ರತಿಯೊಂದು ಆಲೋಚನೆ, ಪ್ರತಿಯೊಂದು ನಡೆ-ನುಡಿಗಳಲ್ಲೂ ನೀನು ಝಿನ್ನರ್ ಆಗಬೇಕು." 

ಅವನು ಆ ಕಾಗದಗಳ ಮೇಲೆ ಬೆರಳಿನಿಂದ ಟೈಪಿಸಿಕೊಂಡ. 
"ಕಮ್ಯುನಿಸ್ಟ್ ಗಡಿ ಕಾವಲುಗಾರರ ಬಳಿ ಈ ಪ್ರತಿಯೊಂದು ವಿವರವು ಇರುತ್ತದೆ. ಅವರು ಎಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಾರೋ ನಾನು ಹೇಳಬೇಕಾಗಿಲ್ಲ. ಮತ್ತೊಂದು ನಕಲಿ ಪ್ರತಿಯನ್ನು ನಿನ್ನ ಗುಂಪಿನ ಮೇಲ್ವಿಚಾರಕನೂ ಹೊಂದಿರುವನು. 

ಅವನಿಗೆ ನಿಜವಾದ ಝಿನ್ನರ್ ಪರಿಚಯವಿಲ್ಲ. ಆದರೆ ನಿಲ್ದಾಣದಲ್ಲಿ ಆ ಹೆಸರನ್ನು ಕೂಗಿದಾಗ, ನೀನು ಉತ್ತರಿಸುವ ಮೊದಲು ಸ್ವಲ್ಪ ತಾಳ್ಮೆಯಿಂದ ಕಾದು ನೋಡು." 

"‘ಕಾದು ನೋಡೋದಾ?’ ನಾನು ಕೇಳಿದೆ. 
‘ಕೊನೆಯ ಕ್ಷಣದಲ್ಲಿ ಝಿನ್ನರ್ ಬಂದುಬಿಡುವ ಸಾಧ್ಯತೆಯಿದೆ,’ ಎಂದ ಸ್ನೇಹಿತ. ‘ಒಂದು ವೇಳೆ ನಿಜವಾದವನು ಅಲ್ಲಿಗೆ ಬಂದ ಸಮಯದಲ್ಲಿ ಇಬ್ಬರೂ ಉತ್ತರಿಸಿದರೆ, ನಕಲಿ ವ್ಯಕ್ತಿಗೇ ಅದು ಅಪಾಯವಾಗುತ್ತದೆ.’ 

ನಂತರದ ಕೆಲವು ದಿನಗಳು ನಾನು ಆಸ್ಕರ್ ಝಿನ್ನರ್ ಅವರ ಜೀವನದ ಕುರಿತು ಅಧ್ಯಯನ ಮಾಡಿದೆ. 
ಅವರ ಹಳ್ಳಿಯಾದ ಆಸ್ಟ್ರಿಯಾದ ಗ್ರಾಟ್ಸ್ ಎಂಬ ಊರಿನಲ್ಲಿ ಅವರು ಹುಟ್ಟಿದ ಮನೆಯನ್ನು ನಾನು ವಿವರಿಸುವಷ್ಟು ಪರಿಣಿತನಾದೆ. 
ಆತನ ವಿದ್ಯಾಭ್ಯಾಸ, ಚಟಗಳು, ಇಷ್ಟ–ಅನಿಷ್ಟಗಳು, ಚಿತ್ರಣ ಶೈಲಿ — ಇದನ್ನೆಲ್ಲಾ ನನ್ನದೇ ಇರಬಹುದೇನೋ ಎನ್ನುವಷ್ಟು ರೂಢಿಯಾದವು.
ವಿಮರ್ಶಕರು ಅವರ ಚಿತ್ರಗಳ ಬಗ್ಗೆ ಏನು ಬರೆದರು, ಅವು ಎಷ್ಟು ಬೆಲೆಗೆ ಮಾರಾಟವಾದವು, ಯಾರು ಖರೀದಿಸಿದರು — ಯಾವುದು ನನಗೆ ಮರೆಯದಿರುವಷ್ಟು ಅಚ್ಚಾಗಿ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು.

ಮರುದಿನವೇ ಹೊರಡಬೇಕು! ನಿರ್ಗಮನದ ಹಿಂದಿನ ರಾತ್ರಿ ಮನಸ್ಸು ಚಡಪಡಿಕೆಯಿಂದ ಕೂಡಿತ್ತು. ಆದರೆ ಮನಸ್ಸು ತಡೆಯಲಾಗದೇ ನಾನು ಬುಡಾಪೆಸ್ಟ್‌ನ ಫ್ರಾಂಜ್ ಜೋಸೆಫ್ ಸೇತುವೆ ದಾಟಿ, ಅಗತ್ಯಕ್ಕೂ ಹೆಚ್ಚು ಸಾಕ್ಷ್ಯವಾಗಬಹುದಾದ ಅವನ ಪರಿಚಯ ವಿವರಗಳನ್ನು ಹಾಗೂ ಇತರ ಕಾಗದ ಪತ್ರಗಳನ್ನು ಸಣ್ಣ ತುಂಡುಗಳನ್ನಾಗಿ ಹರಿದು ಡ್ಯಾನ್ಯೂಬ್ ನದಿಗೆ ಎಸೆದೆ. 


****

ಹಠಾತ್ತನೆ ರೈಲು ನಿಲ್ದಾಣದ ಲೌಡ್‌ ಸ್ಪೀಕರ್‌ನಿಂದ ಬಂತು ಸಣ್ಣದಾದ ಕಿರಿಕ್ ಶಬ್ದ. ಹೆಸರುಗಳನ್ನು ಸಾಲು ಸಾಲಾಗಿ ಜೋರಾಗಿ ಓದುವ ಸದ್ದಿನಿಂದ ನಾನು ವಾಸ್ತವಕ್ಕೆ ಬಂದು ಎಚ್ಚರಗೊಂಡೆ. 
ನನ್ನ ಹೊಟ್ಟೆಯಲ್ಲಿ ಅದೇನೋ ತಳಮಳ. ಏಕೆಂದರೆ ನನ್ನ ಹೆಸರು ಇಂಗ್ಲೀಷ್‌ ವರ್ಣಮಾಲೆಯ ಆಲ್ಫಾಬೆಟ್‌ ಪ್ರಕಾರ ಕೊನೆಯ ಅಕ್ಷರದಿಂದ ಆರಂಭವಾಗಿತ್ತು. 

ಕೊನೆಗೂ ಆ ಕರ್ಕಶ ಧ್ವನಿಯು ಕೂಗಿತು: 
"ಝಿನ್ನರ್ — ಆಸ್ಕರ್ ಝಿನ್ನರ್!" 
ನಾನು ಸ್ವಲ್ಪ ಸಮಯ ಕಾದು ನೋಡಲು ಮುಂದಾದೆ. ಅಂದರೆ ಬೇಕಂತಲೆ ಕಾಯುತ್ತಿದ್ದೆ. ಹೃದಯ ಬಡಿತ ಹೆಚ್ಚಿತ್ತು, ಕಿವಿಗಳು ಎಚ್ಚರವಾಗಿ, "ಯಾರೂ ಉತ್ತರ ಕೊಡದೇ ಇರಲಪ್ಪಾ ದೇವರೇ."  ಎಂದು ಮನಸ್ಸು ಮೌನ ಪ್ರಾರ್ಥನೆ ಮಾಡುತ್ತಿತ್ತು.

ಮತ್ತೊಮ್ಮೆ ಹೆಸರಿನ ಕರೆ ಬಂತು, ಈ ಸಾರಿ ಸ್ಪಲ್ಪ ಕೋಪದಿಂದ ಕರ್ಕಶವಾಗಿತ್ತು ಧ್ವನಿ 
"ಝಿನ್ನರ್!" 

ನಾನು ಮುಂದೆ ಬಂದು ನಿಧಾನವಾಗಿ ಹೇಳಿದೆ: 
"ಇಲ್ಲಿ!" 

ನಿಜವಾದ ಝಿನ್ನರ್ ನಿಂದ ನನಗೆ ಸವಾಲೇ ಬರಲಿಲ್ಲ. 

ನಮ್ಮನ್ನು ಹತ್ತುಜನರ ಗುಂಪುಗಳನ್ನಾಗಿ ಮಾಡಿದರು. ನಂತರ ರೈಲು ಡಬ್ಬಿಗಳಲ್ಲಿ ತಳ್ಳಿದರು. 
ನಾನು ಮತ್ತೆ ಮತ್ತೆ ನನ್ನೊಳಗೇ ಕಥೆಯನ್ನು ಪುನರುಚ್ಚರಿಸುತ್ತಿದ್ದೆ: 
"ನಾನು ಪೋಟ್ರೇಟ್ ಚಿತ್ರಕಾರ. ನಾನು ಗ್ರಾಟ್ಸ್ ನಲ್ಲಿ ಹುಟ್ಟಿದವನು. ನನ್ನ ತಂದೆ ವಾಸ್ತುಶಿಲ್ಪಿ…" 

ರೈಲು ಫ್ಲಾಟ್‌ ಫಾರ್ಮಿನಿಂದ ಹೊರಡುವ ಮೊದಲು ಒಮ್ಮೆ ಶಿಳ್ಳೆ ಕೂಗಿತು. ರೈಲು ಹೊರಡುವ ಸೂಚನೆ ಅದು. ಅದೇ ಸಮಯದಲ್ಲಿ ಕಡೆಯ ಬೋಗಿಯಿಂದ ರಷ್ಯನ್ ಸೈನಿಕರ ಭಾರೀ ಧ್ವನಿಗಳು ಕೇಳಿಬಂದವು. 
ನಾಲ್ವರು ಸೋವಿಯತ್ ಅಧಿಕಾರಿಗಳು ನಮ್ಮ ಡಬ್ಬಿಯ ಬಾಗಿಲನ್ನು ದಾಟಿ ಮುಂದಿನ ಬೋಗಿಯೊಳಗೆ ಹೋದರು. ಒಳಗಿದ್ದವರನ್ನು ಪಕ್ಕಕ್ಕೆ ಎಳೆದು ಹಾಕಿ, ಅಲ್ಲಿನ ಸೀಟುಗಳಲ್ಲಿ ತಾವು ಕುಳಿತುಕೊಂಡರು. 
ಸ್ವಲ್ಪ ಸಮಯದ ನಂತರ ಹಾಸ್ಯ–ನಗೆಯೊಂದಿಗೆ ಗಾಜುಗಳ ಜರ್ಜರ ಸದ್ದು ಕೇಳಿತು. ಮತ್ತೊಮ್ಮೆ ಶಿಳ್ಳೆ ಕೂಗಿ, ರೈಲು ಅಲುಗಾಡಿ ಪ್ರಯಾಣ ಆರಂಭಿಸಿತು.. 

ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆಯೇ ನಾನು ಮನಸ್ಸಲ್ಲಿ ಹಿಂತಿರುಗಿ ಯೋಚಿಸಿದೆ — ಮತ್ತೆ ನನ್ನ ದೇಶವನ್ನು ನಾನು ಯಾವಾಗ ನೋಡಬಲ್ಲೆ? 
ಆದರೆ ಆ ದುಃಖದ ಭಾವನೆಗೆ ಇಲ್ಲಿ ಅವಕಾಶವಿರಲಿಲ್ಲ. ನಾನು ಈಗ ಫರೆನ್ಸ ಲಾಸ್ಲೋ ಅಲ್ಲ. ನಾನು ಆಸ್ಕರ್ ಝಿನ್ನರ್. 

ರೈಲು ಕೆಲೆನ್ಫೋಲ್ಡ್ ನಿಲ್ದಾಣದಲ್ಲಿ ನಿಂತಿತು. ಇದು ಮೊದಲ ತಪಾಸಣೆ ನಡೆಯುವ ಜಾಗ.
ಅಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಓರ್ವ ಸೋವಿಯತ್ ಅಧಿಕಾರಿ ಹಾಗೂ ಅವನ ಜರ್ಮನ್ ಅನುವಾದಕ ಬಂದು ಸೇರುವಾಗ, ದಾರಿಗಳಲ್ಲಿ ಶಸ್ತ್ರಾಸ್ತ್ರಧಾರಿಗಳಾದ ಸೈನಿಕರು ನಿಂತಿದ್ದರು. 

ಆ ಅಧಿಕಾರಿ, ಕಲ್ಲಿನಂತವನು. ಒರಟು ಮುಖವಿರುವ ದೃಢಕಾಯ ವ್ಯಕ್ತಿ, ಎದುರಿಗೆ ಕುಳಿತಿದ್ದ ಮಹಿಳೆಯಿಂದ ಪ್ರಶ್ನೆ ಆರಂಭಿಸಿದ. 
ಅವನ ಕೈಯಲ್ಲಿ ಬಲಹೀನ ಕಾಗದದ ಜೀವಚರಿತ್ರೆಯ ಪುಟಗಳು ಇದ್ದವು. ಅವನು ರಷ್ಯನ್ನಲ್ಲಿ ಪ್ರಶ್ನೆ ಮಾಡುತ್ತಿದ್ದ, ಅನುವಾದಕ ಅದನ್ನು ಜರ್ಮನ್ ಗೆ ಭಾಷಾಂತರಿಸುತ್ತಿದ್ದ. 

ಅವನು ನನ್ನ ಪಕ್ಕದ ಕಿಟಿಕಿ ಜೊತೆ ಕುಳಿತಿದ್ದವನ ಕಡೆಗೆ ಬಂದಾಗ, ನಾನು ಮತ್ತೆ ಮತ್ತೆ ಮನಸ್ಸಿನಲ್ಲಿ ತಯಾರಾಗುತ್ತಿದ್ದೆ: 
"ನಾನು ಚಿತ್ರಕಾರ. ನಾನು ಆಸ್ಟ್ರಿಯಾದ ಗ್ರಾಟ್ಸ್ ನಲ್ಲಿ ಹುಟ್ಟಿದ್ದೇನೆ. ನನ್ನ ಹೆಸರು … ನನ್ನ ಹೆಸರು…" 

ಅಯ್ಯಯ್ಯೋ… ಇದೇನಿದು.. ತಕ್ಷಣವೇ ಮುಖದಲ್ಲಿ ಬೆವರು ಹರಿಯಿತು. ಹೃದಯ ಗಂಟಲೊಳಗೆ ಬಿದ್ದುಕೊಂಡಂತೆ ಚಡಪಡಿಕೆ ಶುರುವಾಯಿತು. 
ಮರೆಮಾಡಿದ ಆತಂಕದಿಂದ ಉಂಟಾದ ವಿಶಿಷ್ಟವಾದ ಮಾನಸಿಕ ಅಡ್ಡಿಯೊಂದು ಬಂತು — ಹೊಸ ಹೆಸರು ಪಡೆದುಕೊಂಡು ಚಹರೆ ಬದಲಿಸಿಕೊಂಡಿದ್ದ ನಾನು  ಝಿನ್ನರ್ ಕುರಿತು ಎಲ್ಲವನ್ನೂ ನೆನಪಿಸಿಕೊಳ್ಳುತ್ತಿದ್ದೆ, ಆದರೆ ಅವನ ಹೆಸರು ಮಾತ್ರ ನನಗೆ ನೆನಪಾಗುತ್ತಿರಲಿಲ್ಲ. 

ಅಷ್ಟರಲ್ಲಿ ಅಧಿಕಾರಿ ಮುಂದಿನ ಮಹಿಳೆಯನ್ನು ಪ್ರಶ್ನಿಸುತ್ತಿದ್ದಾನೆಂಬುದನ್ನು ನಾನು ದೂರದಿಂದ ಕೇಳಿ ಬರುತ್ತಿದ್ದ ತಣ್ಣನೆಯ ಧ್ವನಿಯನ್ನು ಕೇಳಿ ಅರಿತುಕೊಳ್ಳುತ್ತಿದ್ದೆ,  
ನಾನು ಪ್ರಾರ್ಥಿಸಿದೆ: 
"ದೇವರೆ, ನನ್ನ ಹೆಸರು ಏನು? ನಾನು ಚಿತ್ರಕಾರ. ನನ್ನ ಹೆಸರು …" 
ಉಹೂ.. ಪ್ರಯೋಜನವಿಲ್ಲ. ಹೆಸರು ನೆನಪಾಗುತ್ತಲೇ ಇಲ್ಲ. 

ಆ ಕ್ಷಣದಲ್ಲೇ ಹತ್ತಿರದ ಬೋಗಿಯ ಬಾಗಿಲು ತೆಗೆದ ಶಬ್ದ 
ಸ್ವಲ್ಪ ಮಾತುಕತೆ ನಡೆದು, ಕೆಂಪು ಸೇನೆಯ ಒಬ್ಬ ಕರ್ನಲ್ ನಮ್ಮ ಡಬ್ಬಿಯೊಳಗೆ ತಲೆ‌ ಹಾಕಿ ಕೇಳಿದ: 

"ವೇರ್ ಶ್ಪಿಲ್ಟ್ ಷಾಕ್? ( ಯಾರಿಗೆ ಚೆಸ್‌ ಆಡೋಕೆ ಬರುತ್ತೆ?)" 

ನಮ್ಮ ತಪಾಸಣಾಧಿಕಾರಿ ಆ ಅಡ್ಡಿಪಡಿಸಿದ ಧ್ವನಿಯ ಕಡೆಗೆ ತಿರುಗಿ ಕಟುವಾಗಿ ನೋಡಿದ, ಆದರೆ ಅವನ ಸೈನಿಕ ಮೇಲಾಧಿಕಾರಿಯ ದೃಷ್ಟಿಯಡಿಯಲ್ಲಿ ಗೌರವದಿಂದ ಹಿಂದೆ ಸರಿದ. ಬಾಗಿಲಿಗೆ ಸಮೀಪ ಕುಳಿತಿದ್ದು ನಾನು ಆಗಿದ್ದರಿಂದ, ಕರ್ನಲ್‌ ನ ಮುಂದಿನ ಪ್ರಶ್ನೆ ನನಗೇ ಇರಬಹುದೆಂದು ತೋರ್ಪಟ್ಟಿತು.
“ಶ್ಪೀಲನ್ ಸೀ ಷಾಖ್?” (ಚೆಸ್‌ ಆಡ್ತೀರಾ) ಎಂದು ಆತ ಕೇಳಿದ.
ನಾನು ಹತ್ತು ವರ್ಷಗಳಿಂದ ಚದುರಂಗ ಆಡಿರಲಿಲ್ಲ, ಆದರೆ ಇದರಿಂದ ಯಾವತ್ತೂ ಪ್ರಯೋಜನವಾಗಿರಲಿಲ್ಲ. ಆದರೆ ಈ ಪ್ರಶ್ನೆಯೇ ನನಗೆ ಬೇಕಿದ್ದ ಉಸಿರಾಟದ ಅವಕಾಶ ನೀಡಿತ್ತು. ಬೋಗಿಯಲ್ಲಿ ಯಾರೂ ಉತ್ತರಿಸಲಿಲ್ಲ.
“ಯಾ. ಇಶ್ ಶ್ಪೀಲೆ ಷಾಖ್,” (ನಾನು ಆಡಬಲ್ಲೆ) ಎಂದು ನಾನು ಹೇಳಿದೆ.
ಕರ್ನಲ್ ಕೈ ಬೀಸಿ ನನ್ನನ್ನು ತನ್ನೊಂದಿಗೆ ಬರಲು ಸೂಚಿಸಿದ. ನಾನು ಹಿಂಬಾಲಿಸಿದೆ

ರಷ್ಯನ್ನರ ಬೋಗಿಯಲ್ಲಿ ಇನ್ನಿಬ್ಬರು ಕರ್ನಲ್ಲುಗಳು ಮತ್ತು ಮೆಡಲ್ ಗಳಿಂದ ಕಂಗೊಳಿಸುತ್ತಿದ್ದ ಒಬ್ಬ ಜನರಲ್ ಇದ್ದ — ಐವತ್ತರ ವಯಸ್ಸಿನ ಆತ ಗಾತ್ರದಲ್ಲಿ ದೈತ್ಯನಾಗಿದ್ದರೂ ಇನ್ನೂ ಬಲಿಷ್ಠನಾಗಿ ಕಾಣುತ್ತಿದ್ದ. ಚೆಸ್ ಆಡಲು ಉತ್ಸುಕನಾಗಿದ್ದವನು ಇವನೇ ಇರಬೇಕು, ಏಕೆಂದರೆ ನನಗೆ ಎದುರು ಕುಳಿತುಕೊಳ್ಳಲು ಅವನೇ ಸೂಚಿಸಿದ.
ನನ್ನ ಪಕ್ಕದಲ್ಲಿ ಡಜನ್ ಗಟ್ಟಲೆ ಸ್ಯಾಂಡ್ವಿಚ್ ಹಾಗೂ ಒಂದು ಸಿಹಿತಿಂಡಿಗಳ ಪೆಟ್ಟಿಗೆ ಇತ್ತು. ಕಿಟಕಿಯ ಕೆಳಗೆ ಇರುವ ಚಿಕ್ಕ ಟೇಬಲ್ ಮೇಲೆ ಗ್ಲಾಸ್ಗಳು, ವೋಡ್ಕಾ, ಹಂಗೇರಿಯನ್ ಬ್ರಾಂಡಿ ಮತ್ತು ವೈನ್ ಇದ್ದವು.
ಜನರಲ್ ನನ್ನನ್ನು ಕ್ಷಣಕಾಲ ಅವಲೋಕಿಸಿ ನೋಡುವುದರೊಂದಿಗೆ ಆಹಾರ ಮತ್ತು ವೋಡ್ಕಾವಿನ ಕಡೆ ತೋರಿಸಿದ.
 “ದವೈ,” (ತಗೋ, ತಿನ್ನು) ಎಂದು ಅವನು ರಷ್ಯನ್‌ ಭಾಷೆಯಲ್ಲಿ ಘರ್ಜಿಸಿದ.
ಯಾವ ಕ್ಷಣದಲ್ಲಾದರೂ ಒಬ್ಬ ರಷ್ಯನ್ ನನ್ನ ಹೆಸರನ್ನು ಕೇಳಬಹುದು ಅಥವಾ ಅದಕ್ಕಿಂತಲೂ ಭಯಾನಕವಾಗಿ — ತಪಾಸಣಾಧಿಕಾರಿ ಒಳನುಗ್ಗಬಹುದು ಎಂಬ ಭಯಂಕರ ಭಯದಲ್ಲಿ, ನಾನು ಕೂತು ತಿಂದೆ. 
ರೈಲು ಮತ್ತೆ ಚಲಿಸಲು ಆರಂಭಿಸಿದಾಗ, ಜನರಲ್ ಚೆಸ್‌ ಬೋರ್ಡ್‌ ತೆಗೆದು ಕಾಯಿಗಳನ್ನೆಲ್ಲ ಒಪ್ಪವಾಗಿ ಇಡಲು ಪ್ರಾರಂಭಿಸಿದ.
“ದೇವರೆ, ಕಾಪಾಡು,” ಎಂದು ನಾನು ಮನಸ್ಸಿನಲ್ಲಿ ಹೇಳಿಕೊಂಡೆ. “ಇದು ನನ್ನ ಜೀವನದ ಆಟ. ಇದನ್ನು ನಿಜವಾಗಿಯೂ ಉತ್ತಮವಾಗಿ ಆಡಬೇಕು. ಆದರೆ ಗೆಲ್ಲುವುದೂ ಸಹ ನನಗೆ ಸಾಧ್ಯವಿಲ್ಲ.”
ನನ್ನ ಜೀವಮಾನದಲ್ಲಿ ಯಾವುದೇ ರಷ್ಯನ್‌, ಅಥವಾ ರಷ್ಯನ್‌ ಆಟಗಾರ ಯಾವತ್ತಿಗೂ ಸೋಲುವುದನ್ನು ಇಷ್ಟಪಡದೇ ಹೋರಾಡುವುದನ್ನು ಕಂಡಿದ್ದೆ. ಚೆಸ್‌ ನಲ್ಲಂತೂ ಅದು ಸಾಧ್ಯವೇ ಇರಲಿಲ್ಲ. ಸುದೀರ್ಘವಾಗಿ ಕುಳಿತುಕೊಂಡಷ್ಟೂ ನನ್ನ ಬದುಕಿನ ಕ್ಷಣಗಳು ಕೊಂಚವಾದರೂ ದೀರ್ಘವಾಗಬಹುದು ಎಂದು ಆಲೋಚಿಸಿದೆ. ಸಾಧ್ಯವಾದಷ್ಟೂ ಪಂದ್ಯಗಳನ್ನು ದೀರ್ಘ ಅವಧಿ ತನಕ ಮುಂದುವರಿಸುವ ಆಲೋಚನೆ ಮಾಡಿದೆ.
ಆಟ ಮುಂದುವರಿದಂತೆ, ನನ್ನ ಹಳೆಯ ತಂತ್ರಗಳು ನಿಧಾನವಾಗಿ ನೆನಪಿಗೆ ಬಂದವು. ಇತರ ಅಧಿಕಾರಿಗಳು ಗಾಢ ಮೌನದಲ್ಲಿ ಆಟವನ್ನು ನೋಡುತ್ತಿದ್ದರು, ಬಹುಶಃ ಜನರಲ್ ಚದುರಂಗದ ಮಾಂತ್ರಿಕನೆಂದು ನಂಬಿಕೊಂಡಿದ್ದರು. ವಾಸ್ತವದಲ್ಲಿ ಅವನು ಒಳ್ಳೆಯ ಆಟಗಾರನಾಗಿದ್ದ, ಆದರೆ ಪ್ರತಿಯೊಂದು ಲಾಭವನ್ನು ಪಡೆಯಲು ನಾನು ಆತನಿಗೆ ಅವಕಾಶ ಕೊಡದಂತೆ ತಿಣುಕಾಡಿಸುತ್ತಿದ್ದೆ.
ಸಮಯ ಸರಿಯುತ್ತಿರುವುದರ ಅನುಭವ ನನಗಾಯಿತು. ಹಠಾತ್ ಗಮನಿಸಿದಾಗ ರೈಲು ನಿಧಾನವಾಗಿ ಗ್ಯೋರ್ (Györ) ತಲುಪುತ್ತಿತ್ತು — ಇದು ನಮ್ಮ ಎರಡನೇ‌ ಸಾರಿ ತಪಾಸಣಾ ನಡೆಸುವ ಕೇಂದ್ರ ಇತ್ತು. ನನ್ನ ಮನಸ್ಸು ವೇಗವಾಗಿ ಓಡುತ್ತಿತ್ತು.
ಇದೇ ಸಮಯದಲ್ಲಿ ಬಾಗಿಲು ಸರ್ರನೆ ತೆರೆದುಕೊಂಡಿತು. ಆಸ್ಟ್ರಿಯನ್ ಗುಂಪಿನ ಮೇಲ್ವಿಚಾರಕ ಒಳಬಂದು ಬಿಗಿಯಾಗಿ ಹೇಳಿದ:
 “ಈ ವ್ಯಕ್ತಿಯನ್ನು ಇನ್ನೂ ತಪಾಸಣೆ ಮಾಡಿಲ್ಲ.”
ಆದರೆ ನಾನು ವ್ಯರ್ಥವಾಗಿ ಚಿಂತೆ ಮಾಡಿದ್ದೆ. ಜನರಲ್ ಎದ್ದು ತನ್ನ ದೊಡ್ಡ ಕರಡಿಯಂತೆ ಕೂದಲನ್ನು ಹೊಂದಿದ್ದ ಕೈಯನ್ನು ಆ ಅಧಿಕಾರಿಯ ಎದೆಯ ಮೇಲೆ ಇಟ್ಟು ಅವನನ್ನು ಹಿಂದಕ್ಕೆ ತಳ್ಳಿಬಿಟ್ಟ. ನಂತರ ಬಾಗಿಲು ಒಡೆಯುವಂತೆ ಮುಚ್ಚಿ, ಚೆಸ್‌ ಬೋರ್ಡ್‌ ಕಡೆಗೆ ತೋರಿಸಿದ.
“ದವೈ ಮಾಗ್ಯಾರ್ ಹಂಗೇರಿಯನ್?,” (‘ನಿನ್ನ ನಡೆ‌, ನೀನು ಹಂಗೇರಿಯನ್ನಾ?ʼ’) ಎಂದು ಅವನು ಘರ್ಜಿಸಿದ.
ಹಂಗೇರಿಯನ್ನ? ನಿಜ, ನಾನು ಹಂಗೇರಿಯಿಂದ ಬರುತ್ತಿದ್ದೆ. ಆದರೆ ಅದು ಅವನ ನಾಲಿಗೆಯ ತಪ್ಪೋ ಅಥವಾ ಅರ್ಥಪೂರ್ಣ ಮಾತೋ ಎನ್ನುವುದರಿಂದ ನನ್ನ ತಲೆಯ ಕೂದಲು ನಟ್ಟಿಗೇರಿದಂತಾಯಿತು. ಅವನು ನನ್ನನ್ನು ಗುರುತಿಸಿದನಾ? ಅಥವಾ ಸಹಜವಾಗಿ ಕೇಳಿದನಾ ಎನ್ನುವುದು ನನಗೆ ಗೊತ್ತಾಗಲಿಲ್ಲ. ಆದರೆ ಮೈಯೆಲ್ಲ ಛಳುಕೆದ್ದು, ಸಣ್ಣದಾಗಿ ಬೆವರಲು ಆರಂಭಿಸಿದ್ದೆ.
ಮೊದಲ ಆಟ ಮುಗಿದಾಗ, ಜನರಲ್ ಗೆದ್ದ. ನಂತರ ಜರ್ಮನ್ ತಿಳಿದಿದ್ದ ಅಧಿಕಾರಿಗೆ ಏನೋ ಮಾತು ಹೇಳಿದರು.
 ಅವನು ಅನುವಾದಿಸಿದ:
 “ಜನರಲ್ ಗೆ ನಿನ್ನ ಆಟದ ಶೈಲಿ ಇಷ್ಟವಾಗಿದೆ. ಅವನು ನಿನ್ನೊಂದಿಗೆ ಮತ್ತೊಂದು ಆಟ ಆಡಲು ಬಯಸುತ್ತಿದ್ದಾರೆ.”
ಆದರೆ ಮತ್ತೆ ಆಟ ಪ್ರಾರಂಭಿಸುವ ಮೊದಲು, ಜನರಲ್ ಮದ್ಯಪಾನ ಮಾಡುವಂತೆ ಒತ್ತಾಯಿಸಿದ.
ವೋಡ್ಕಾದಿಂದ ಬಂದ ಧೈರ್ಯದ ಬಿಸಿ ಶಕ್ತಿಯಿಂದ ನನ್ನ ಮನಸ್ಸಿನ ಕಡಿವಾಣ ತಪ್ಪಿಹೋಯಿತು. ಅನಾಯಾಸವಾಗಿ ಈ ಸಾರಿ ನಾನು ಆಟದಲ್ಲಿ ಸಂಪೂರ್ಣ ತೊಡಗಿಕೊಂಡೆ. ಆಟ ಸಾಗಿದ ನಂತರ ಹಠಾತ್ ನಾನು ಗೆಲ್ಲುವ ಸನಿಹದಲ್ಲಿದ್ದೇನೆ ಎನ್ನುವುದರ ಅರಿವು ಬಂತು.
ನಾವು ಕೊನೆಯ ನಿರ್ಣಾಯಕ ಹೆಜ್ಜೆಗಳಲ್ಲಿ ಇರುವಾಗ ರೈಲು ನಿಧಾನವಾಗಿ ಹೆಗ್ಯೇಶಾಲೊಮ್ ತಲುಪಿತು — ಇಲ್ಲಿ ನಮ್ಮ ಕೊನೆಯ ತಪಾಸಣಾ ಕೇಂದ್ರ ಇತ್ತು.
ಇಲ್ಲಿ ನಾನು ಗೆಲ್ಲುವುದೋ ಸೋಲುವುದೋ ನಿರ್ಧಾರವಾಗುತ್ತಿತ್ತು — ಕೇವಲ ಒಂದು ಆಟವಲ್ಲ, ನನ್ನ ಸಂಪೂರ್ಣ ಜೀವನವನ್ನೂ ಕೂಡ

ಈ ಬಾರಿ ಡಜನ್ಗಟ್ಟಲೆ ಕೆಂಪು ಸೇನೆಯ ಸೈನಿಕರು — ಅವರ ಭುಜದ ಮೇಲೆ ರೈಫಲ್ಗಳು, ಸೊಂಟದ ಬೆಲ್ಟ್‌ನಲ್ಲಿ ಗ್ರನೆಡ್ಗಳು — ರಷ್ಯನ್‌, ಜರ್ಮನ್‌ ಸೇರಿದಂತೆ ಹಲವು ಭಾಷೆಗಳನ್ನು ಬಲ್ಲ ದುಬಾಷಿಗಳು ಹಾಗೂ ಭದ್ರತಾ ಅಧಿಕಾರಿಗಳ ದಂಡನ್ನು ಮುನ್ನಡೆಸುತ್ತ ಹಾದುಹೋದರು.
ಅವರು ನಮ್ಮ ಬೋಗಿಯೊಳಗೆ ಒಮ್ಮೆ ಇಣುಕಿದ ಶಾಸ್ತ್ರವನ್ನು ಮಾಡಿ ಮುಂದೆ ಹೋದರು.
ಮುಂದಿನ ಡಬ್ಬಿಯಲ್ಲಿದ್ದ ಕಿಡಿಗೇಡಿಯಾದ ಗುಂಪಿನ ಮೇಲ್ವಿಚಾರಕನು ಅಧಿಕಾರಿಗಳ ಜೊತೆಗೆ ಕುಳಿತಿದ್ದ ಆಸ್ಟ್ರಿಯನ್ನ ಬಗ್ಗೆ ಅಧಿಕಾರಿಗಳಿಗೆ ಹೇಳಿಬಿಟ್ಟದ್ದನೇನೋ. ಗಾರ್ಡುಗಳಲ್ಲಿ ಒಬ್ಬನು ಬಂದು ಪರಿಶೀಲನೆ ನಡೆಸಲು ಪ್ರಯತ್ನಿಸಿದ.
ಅವನು ಬಾಗಿಲಿನ ಬಳಿಗೆ ಬಂದು ತಕ್ಷಣ ಸಲ್ಯೂಟ್ ಹೊಡೆದು, ವೇಗವಾಗಿ ರಷ್ಯನ್ ಭಾಷೆಯಲ್ಲಿ ಮಾತನಾಡಲಾರಂಭಿಸಿದ. ಜೊತೆಗೆ ಬೆರಳು ನನ್ನತ್ತ ತೋರಿಸುತ್ತಿದ್ದ.
ಮತ್ತೆ ನನ್ನ ಮೆದುಳು-ಮನಸ್ಸು ಭೀತಿಯಿಂದ ತುಂಬಿಕೊಂಡಿತು. ಈ ಬಾರಿ ಜನರಲ್ ಖಂಡಿತವಾಗಿಯೂ ಅವರಿಗೆ ನನ್ನನ್ನು ವಿಚಾರಿಸಲು ಬಿಡುತ್ತಾನೆ ಎಂಬ ಭಯ ನನ್ನೊಳಗಿತ್ತು — ಹೀಗೆ ಮತ್ತೊಮ್ಮೆ ಅಡ್ಡಿಪಡಿಸುವುದನ್ನು ತಡೆಯಲು.
“ನಾನು ಪೋಟ್ರೇಟ್ ಚಿತ್ರಕಾರ… ನನ್ನ ಹೆಸರು…” — ನನ್ನೊಳಗೆ ಮತ್ತೊಮ್ಮೆ ಪ್ರಯತ್ನ ಪ್ರಾರಂಭವಾಯ್ತು. ಆದರೆ ಹೆಸರು ಮಾತ್ರ ಇನ್ನೂ ನೆನಪಿಗೆ ಬರಲಿಲ್ಲ.
ಗಾರ್ಡ್ ಮಾತನಾಡುತ್ತಿದ್ದಂತೆ, ಜನರಲ್ ಮುಖ ನಿಧಾನವಾಗಿ ನೇರಳೆ ಬಣ್ಣಕ್ಕೆ ತಿರುಗುತ್ತಿತ್ತು. ಅವನು ಏನು ಹೇಳುತ್ತಿದ್ದಾನೆ ಎಂಬುದು ನನಗೆ ತಿಳಿಯಲಿಲ್ಲ, ಆದರೆ ಇದು ಜನರಲ್ ಕೋಪವನ್ನು ಉಕ್ಕಿಸುವಂತೆಯೇ ಇತ್ತು. ಅವನ ಕಣ್ಣುಗಳು ಬೆಂಕಿಯಾಗಿದ್ದು ನನ್ನತ್ತ ತಿರುಗುತ್ತಿತ್ತು. ನಂತರ, ಅವನು ಎಚ್ಚರಿಕೆಯಿಂದ ಚದುರಂಗದ ಫಲಕವನ್ನು ಕಿಟಕಿಯ ಕೆಳಗಿನ ಮೇಜಿನ ಮೇಲೆ ಇಟ್ಟು, ಎದ್ದು ನಿಂತನು.
“ಇದೆ ನನ್ನ ಕೊನೆ.. ಆಯ್ತು.. ಮುಗೀತು… ಇಲ್ಲಿಯವರೆಗೆ.. ಇಷ್ಟು ಹತ್ತಿರ ಬಂದು ಇಷ್ಟೇ ದೂರ ಹೋಗುತ್ತೇನೆ…” ಎಂದು ನಾನು ನಿಶ್ಶಬ್ದವಾಗಿ ಯೋಚಿಸಿದೆ.
ಜನರಲ್ ತನ್ನ ಕೈಯನ್ನು ದೀರ್ಘವಾಗಿ ಎಳೆದು, ಗಾಳಯಲ್ಲಿ ಬೀಸಿ ಜೋರಾಗಿ ಗುದ್ದಿದ ಅದು ಗಾರ್ಡ್ನ ಬಾಯಿಗೆ ನೇರವಾಗಿ ಬಡಿದು, ಅವನು ಹಿಂಬದಿಗೆ ಜಾರಿಕೊಂಡು ಹಿಂಭಾಗದ ರೈಲ್ವೆ ಬೋಗಿಯ ಆಚೆಗಿನ ಗೋಡೆಗೆ ಅಪ್ಪಳಿಸಿದ.
ಜನರಲ್ ಬಾಗಿಲನ್ನು ಅಷ್ಟು ಬಲದಿಂದ ರಪ್ಪನೆ ಮುಚ್ಚಿದ. ಆದನ ಆರ್ಭಟಕ್ಕೆ ಒಮ್ಮೆ ನಮ್ಮ ಬೋಗಿಯ ಕಿಟಕಿಗಳೆಲ್ಲ ಕಟಕಟಿಸಿದವು.
 ನಂತರ ಅವನು ತನ್ನ ಆಸನಕ್ಕೆ ಹಿಂತಿರುಗಿ, ತನ್ನೊಳಗೇ ಏನೋ ರಷ್ಯನ್‌ ಭಾಷೆಯಲ್ಲಿ ಮಣಮಣಿಸುತ್ತ ಬೈದುಕೊಳ್ಳುವಂತೆ ಮಾತನಾಡುತ್ತ ಕುಳಿತ.
ಮತ್ತೆ ಚದುರಂಗದ ಫಲಕವನ್ನು ಎತ್ತಿಕೊಂಡು ಕಾಯಿಗಳನ್ನು ನಿಲ್ಲಿಸಿ, ಗಮನಿಸಿ, ನಡೆಗಳನ್ನೆಲ್ಲ ಆಲೋಚಿಸತೊಡಗಿದ.

ನಾನು ಒಮ್ಮೆ ನಿಟ್ಟುಸಿರುಬಿಟ್ಟೆ. ವೇಗವಾಗಿದ್ದ ನನ್ನ ಎದೆಬಡಿತ ಸಹಜ ಸ್ಥಿತಿಗೆ ಮರಳುತ್ತಿತ್ತು. ಆಯ್ತು, ಇನ್ನು ಯಾರೂ ನಮ್ಮ ಬೋಗಿಯ ಒಳಕ್ಕೆ ಬರುವುದಿಲ್ಲ, ನನ್ನನ್ನು ತಪಾಸಣೆ ಮಾಡುವುದಿಲ್ಲ. ನಾನು ಬಯಸಿದ್ದ ಸ್ವಾತಂತ್ರ್ಯ, ಬೇರೆ ದೇಶಕ್ಕೆ ಹೋಗುವ ನನ್ನ ಬಯಕೆಗೆ ಇನ್ನು ತಡೆಯೇ ಇಲ್ಲ ಎನ್ನುವ ಭಾವನೆ ಬಂದು ಹೆಮ್ಮೆಯೆನ್ನಿಸಿತು. ರೈಲು ವೇಗ ಪಡೆದಂತೆ, ಇಷ್ಟು ಹೊತ್ತಿನ ಭೀಕರ ಒತ್ತಡದಿಂದ ನನಗೆ ಮುಕ್ತಿ ದೊರೆತಿತು. ಮೊದಲ ಬಾರಿಗೆ ನಾನು ನಕ್ಕೆ..
ಜನರಲ್ ಚೆಸ್‌ ಬೋರ್ಡಿನಿಂದ ತಲೆ ಎತ್ತಿ, ನನ್ನ ನಗುವಿಗೆ ಪ್ರತಿಯಾಗಿ ನಕ್ಕ ಬಳಿಕ ಅವನು ಪಕ್ಕದಲ್ಲಿದ್ದ ಯುವ ಅಧಿಕಾರಿಗೆ ಏನೋ ಹೇಳಿದ.
ಅವನು ನನ್ನತ್ತ ತಿರುಗಿ ಹೇಳಿದ:
 “ಜನರಲ್ ಕೇಳ್ತಾ ಇದ್ದಾರೆ- ವಿಯೆನ್ನಾದಲ್ಲಿ ಯಾವಾಗಲಾದರೂ ಅವರೊಂದಿಗೆ ಮತ್ತೊಮ್ಮೆ ಆಟ ಆಡುವ ಆಸಕ್ತಿ ನಿಮಗಿದೆಯಾ? ಅವರು ನಿಮ್ಮನ್ನು ಎಲ್ಲಿ ಸಂಪರ್ಕಿಸಬಹುದು?”
ಈ ಸಾರಿ ನನಗೆ ಭಯ ಆಗಲಿಲ್ಲ. ಪ್ರಸಿದ್ಧವಾದ ವಿಯೆನ್ನಾದ ಒಂದು ಹೋಟೆಲ್ ಹೆಸರನ್ನು ನುಡಿದೆ.
“ಮತ್ತೆ… ನಿಮ್ಮ ಹೆಸರು?” ಎಂದು ಯುವ ಅಧಿಕಾರಿ ಥಟ್ಟನೆ ಕೇಳಿದ.
ಈಗ ತಿಳಿಯಾಗಿತ್ತು. ಯಾವುದೆ ಭಯ, ಭೀತಿ, ದುಗುಡ, ದುಮ್ಮಾನ ಏನೂ ಇರಲಿಲ್ಲ. ಬರೀ ಎರಡೇ ಎರಡು ಶಬ್ದ..! ಈ ಹೆಸರನ್ನು ನಾನು ಮರೆತಿದ್ದೆನಲ್ಲ, ಇಷ್ಟು ಸರಳ ಹೆಸರು.. ಎಂದುಕೊಂಡು ತಕ್ಷಣವೇ ಹೇಳಿದೆ.
“ನನ್ನ ಹೆಸರು,” “ಆಸ್ಕರ್ ಝಿನ್ನರ್.”


(ಪ್ರಸಿದ್ಧ ಕಥೆಯೊಂದರ ಕನ್ನಡ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಹೇಗಿದೆ ಓದಿ ಹೇಳಿ)

Tuesday, February 25, 2025

ಬೆಂಕಿ

ಈಗಿನಂತೆಯೇ ಅದೂ ಕೂಡ ಬೆಟ್ಟಗಳಿಗೆ ಬೆಂಕಿ ಬೀಳುವ ಸಮಯ. ಅಲ್ಲೆಲ್ಲೋ ಬೆಟ್ಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಯ್ತಂತೆ, ಇಲ್ಲೆಲ್ಲೋ ಬೆಂಕಿ ಅವಘಡ ಆಯ್ತಂತೆ ಎಂಬ ಸುದ್ದಿಗಳು ಕಿವಿಗೆ ಬೀಳುತ್ತಿದ್ದ ಸಮಯವದು. ಆಗತಾನೆ ಹುಲ್ಲು ಒಣಗಿ ನಿಂತಿತ್ತು. ಬೆಟ್ಟ-ಗುಡ್ಡಗಳಲ್ಲೆಲ್ಲ ಒಣಗಿದ ಹುಲ್ಲುಗಳು ತಮ್ಮ ನೈಸರ್ಗಿಕ ಹಸಿರು ಬಣ್ಣವನ್ನು ಕಳೆದುಕೊಂಡು ಗಾಳಿಗೆ ತೂಗಾಡುತ್ತ-ತೊನೆದಾಡುತ್ತ ನಿಂತಿದ್ದವು. ಹೀಗಾಗಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದವು. ಇಂತಹ ಸುದ್ದಿಗಳನ್ನೆಲ್ಲ ಕೇಳುತ್ತಲೇ ನಾಗರಾಜ ತನ್ನ ಕಪ್ಪನೆಯ ಪಲ್ಸರ್‌ ಬೈಕ್ ತೆಗೆದುಕೊಂಡು ಶಿರಸಿಗೆ ಹೋಗಿದ್ದ. ಶಿರಸಿಯಲ್ಲಿ ಕೆಲಸ ಮುಗಿಸುವ ವೇಳೆಗಾಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಕತ್ತಲು ಆವರಿಸುತ್ತಿತ್ತು.

ರಾತ್ರಿಯ ಊಟಕ್ಕೆ ಸರಿಯಾಗಿ ಮನೆಯನ್ನು ತಲುಪಿಕೊಳ್ಳಬೇಕು ಎಂದುಕೊಳ್ಳುತ್ತಲೇ ಬೈಕ್‌ ಹತ್ತಿದ್ದ. ಗಿಡಮಾವಿನಕಟ್ಟೆಯನ್ನು ದಾಟಿ ಯಡಳ್ಳಿ ತಲುಪಬೇಕು ಎನ್ನುವಷ್ಟರ ವೇಳೆಗೆ ಆಗಲೇ ಎಲ್ಲಿಂದಲೋ ತೀವ್ರ ಸ್ವರೂಪದ ಗಾಳಿ ಬೀಸಿತ್ತು. ಗಾಳಿ ಬೀಸಿದಂತೆಲ್ಲ ದಟ್ಟ ಕಪ್ಪನೆಯ ಮೋಡ ಬಾನನ್ನು ತುಂಬಿಕೊಂಡಿತು. ʻಅರೆ ಮಳೆ ಬರಬಹುದಾ?ʼ ಎಂದುಕೊಂಡವನು ಮಳೆ ಬರುವ ಮೊದಲು ಮನೆ ತಲುಪಬೇಕು ಎಂದುಕೊಂಡು ಗಾಡಿಯ ಎಕ್ಸಲರೇಟರ್‌ ತಿರುಪಿದ. ಕಾನಗೋಡು ದಾಟಿ ಕಬ್ನಳ್ಳಿ ಕತ್ರಿ ಬರುತ್ತಿದ್ದಂತೆ ಜಿಟಿ ಜಿಟಿಯಾಗಿ ಶುರು ಹಚ್ಚಿಕೊಂಡ ಮಳೆ ಧೋ ಎನ್ನಲು ಶುರುವಾಯ್ತು. ಗಾಡಿ ಓಡಿಸುತ್ತಿದ್ದ ನಾಗರಾಜ ಗಾಡಿ ನಿಲ್ಲಿಸಿ ಬಸ್‌ ನಿಲ್ದಾಣದ ಒಳಕ್ಕೆ ಹೋಗಬೇಕು ಎಂದುಕೊಳ್ಳುತ್ತಿದ್ದಂತೆಯೇ ʻಓಹೋ ಇದು ಕಬ್ನಳ್ಳಿ ಕತ್ರಿ.. ಕಬ್ನಳ್ಳಿ ಕತ್ರಿಯಲ್ಲಿ ಬಸ್‌ ಸ್ಟಾಪ್‌ ಇಲ್ಲ..ʼ ಎನ್ನುವುದು ನೆನಪಾಯ್ತು.. ʻತಥ್..‌ʼ ಎಂದು ತಲೆಕೊಡವಿ, ಮಳೆಯಲ್ಲಿಯೇ ಗಾಡಿ ಓಡಿಸಿದ.
ಅಡ್ಕಳ್ಳಿ ಕತ್ರಿ ತಲುಪುವ ವೇಳೆಗೆ ಮಳೆ ತನ್ನ ಅಬ್ಬರವನ್ನು ನಿಲ್ಲಿಸಿ ಶಾಂತವಾಗುವ ಲಕ್ಷಣ ತೋರಿಸಿತ್ತು. ಕಲ್ಮಟ್ಟಿ ಹಳ್ಳ ಹತ್ತಿರಬಂದಂತೆಲ್ಲ ಮಳೆ ಸಂಪೂರ್ಣ ನಿಂತಿತ್ತು. ಮರಗಳಿಂದ ಬೀಳುವ ಹನಿಯ ಚಿಟ ಪಟ ಮಾತ್ರ ಇತ್ತು. ಅಡ್ಕಳ್ಳಿ ತಲುಪಿದಾಗಲಂತೂ ಮಳೆಯ ಸುಳಿವೇ ಇಲ್ಲ. ಮಳೆಯೇ ಬಂದಿಲ್ಲ ಎಂಬಂತೆ ನೆಲ ಒಣಗಿಕೊಂಡಿತ್ತು. ʻಹಾಳಾದ ಮಳೆ.. ನನಗೆ ತೊಂದ್ರೆ ಕೊಡುವ ಸಲುವಾಗಿಯೇ ಬಂತು..ʼ ಎಂದು ಬೈದುಕೊಂಡು ಬೈಕ್‌ ವೇಗ ಹೆಚ್ಚಿಸಿದ. ನೋಡನೋಡುತ್ತಿದ್ದಂತೆಯೇ ಮಾರಿಗದ್ದೆ ಬ್ರಿಜ್‌ ಕಾಣಿಸಿತು. ಅಘನಾಶಿನಿ ತೀರದ ಮಾರಿಗದ್ದೆ ಹೇಳಿ-ಕೇಳಿ ತಂಪಿನ ಜಾಗ. ಮಳೆಯಲ್ಲಿ ಒದ್ದೆಯಾಗಿದ್ದ ನಾಗರಾಜನಿಗೆ ಮಾರೀಗದ್ದೆ ಬ್ರಿಜ್‌ ಬಳಿ ಬಂದಂತೆಲ್ಲ ಚಳಿ ಶುರುವಾಯಿತು. ನಿಧಾನವಾಗಿ ಹಲ್ಲು ಕಟಕಟಿಸಲು ಶುರುವಾಯಿತು. ಮೊದಲು ಮನೆ ತಲುಪಿಕೊಂಡರೆ ಸಾಕು ಎಂದುಕೊಂಡ. ಹಿತ್ಲಕೈ ದಾಟಿ, ಗುಡ್ಡೇತೋಟ ಕ್ರಾಸ್‌ ದಾಟಿ ಇನ್ನೇನು ಗೋಳಿಕಟ್ಟಾ ಶಾಲೆಯ ಬಳಿ ಬರಬೇಕು, ರಸ್ತೆ ಪಕ್ಕದಲ್ಲಿ ಬೆಂಕಿ ಕಾಣಿಸಿತು. ಯಡಳ್ಳಿಯಲ್ಲಿ ಧೋ ಮಳೆ.. ಇಲ್ಲಿ ನೋಡಿದರೆ ಮಳೆಯ ಸುಳಿವೇ ಇಲ್ಲ. ಜೊತೆಗೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ ಎಂದುಕೊಳ್ಳುತ್ತಲೇ ಮುಂದಕ್ಕೆ ಸಾಗುತ್ತಿದ್ದವನಿಗೆ ಚಳಿ ಇನ್ನಷ್ಟು ಜಾಸ್ತಿಯಾದಂತೆನಿಸಿತು.
ಯಾವುದಕ್ಕೂ ಇಲ್ಲಿ ಬೈಕ್‌ ನಿಲ್ಲಿಸಿ ಸ್ವಲ್ಪ ಹೊತ್ತು ಬೆಂಕಿಗೆ ಮೈ ಒಡ್ಡಿ, ಒದ್ದೆ ಮೈಯನ್ನು ಒಣಗಿಸಿಕೊಂಡು ಹೋಗೋಣ ಎಂದು ಬೆಂಕಿಯ ಹತ್ತಿರಕ್ಕೆ ಹೋದ. ಅಂಗಿ, ಪ್ಯಾಂಟ್‌ ಎಲ್ಲ ಒದ್ದೆಯಾಗಿತ್ತು. ತೊಟ್ಟಿದ್ದ ಅಂಗಿಯನ್ನು ತೆಗೆದು ಸರಿಯಾಗಿ ಹಿಂಡಿದ್ದಲ್ಲದೇ ಕೊಡವಿ ಬೆಂಕಿಗೆ ಒಡ್ಡಿದ. ಒದ್ದೆ ಮೈಗೆ ಬೆಂಕಿಯ ಧಗೆ ತಾಗಿ ಹಿತವೆನ್ನಿಸಿತು. ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ತನ್ನ ಪಾಲಿಗೆ ಒಳ್ಳೆಯದೇ ಆಯಿತು ಎಂದು ಖುಷಿಯಾದ. ಹಾಗೆಯೇ ನೋಡುತ್ತಿದ್ದವನಿಗೆ ಅಲ್ಲಿಯೇ ಕಟ್ಟಿಗೆ ರಾಶಿ ಕಾಣಿಸಿತು.. ಪಾಪ ಯಾರೋ ಕಟ್ಟಿಗೆ ಸಂಗ್ರಹ ಮಾಡಿಟ್ಟಿದ್ದರು. ಸಂಪೂರ್ಣ ಕಟ್ಟಿಗೆಯ ರಾಶಿಗೆ ಬೆಂಕಿ ಬಿದ್ದೋಗಿದೆ, ಕಟ್ಟಿಗೆ-ಕುಂಟೆ ಎಲ್ಲ ಧಗಧಗನೆ ಉರಿಯುತ್ತಿದೆ ಎಂದುಕೊಂಡ. ಕೈಗೊಂದು ಬಡಿಗೆ ಸಿಕ್ಕಿತು, ಆ ಕಟ್ಟಿಗೆಯ ರಾಶಿಯ ಮೇಲೆ ರಪ್ಪನೆ ಬಡಿದ. ಕಿಡಿ ಹಾರಿತು. ಕಟ್ಟಿಗೆಯ ರಾಶಿಯನ್ನು ಬಡಿಗೆಯಿಂದ ಆಕಡೆಗೊಮ್ಮೆ-ಈ ಕಡೆಗೊಮ್ಮೆ ತಿರುವಿ ಹಾಕಿದೆ. ಬಿಂಕಿಯ ಜ್ವಾಲೆ ಇನ್ನಷ್ಟು ಹೆಚ್ಚಿದಂತಾಗಿ ನಾಗರಾಜನಿಗೆ ಮತ್ತಷ್ಟು ಹಿತವೆನ್ನಿಸಿತು.
ಮೈ, ಬಟ್ಟೆ ಎಲ್ಲ ಸರಿಯಾಗಿ ಒಣಗಿದೆ ಎಂಬ ತೃಪ್ತಿ ಸಿಕ್ಕಂತೆಯೇ ಮನೆಗೆ ಹೊರಟ ನಾಗರಾಜ. ಮನೆಯನ್ನು ತಲುಪುತ್ತಿದ್ದಂತೆಯೇ ನಾಗರಾಜನಿಗೆ ಅಪ್ಪಯ್ಯ ಎದುರಾದ. ʻಎಂತದ ತಮಾ, ಮಳೆಲ್ಲಿ ನೆನಕಂಡು ಬಂದಾಂಗೆ ಕಾಣಿಸ್ತಲ..ʼ ಎಂದ. ʻಹೌದಾ.. ಸಾಯ್ಲಿ.. ಶಿರಸಿಂದ ಹೊರಡಕಿದ್ರೆ ಎಲ್ಲ ಸರಿ ಇತ್ತಾ.. ಯಡಳ್ಳಿ ಹತ್ರ ಬರಕಿದ್ರೆ ಮಳೆ ಬಂತು.. ಅಡ್ಕಳ್ಳಿ ಕತ್ರಿ ತನಕ ಮಳೆಲಿ ನೆನಕಂಡು ಬಂದೆ..ʼ ಎಂದ.
ʻಓಹೋ ಹೌದನಾ...ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ʻಗೋಳಿಕಟ್ಟಾ ಶಾಲೆ ಹತ್ರ ಬ್ಯಾಣಕ್ಕೆ ಬೆಂಕಿ ಬಿದ್ದಾಂಗ್‌ ಕಾಣಸ್ತು.. ಅಲ್ಲಿ ನಿಂತಕಂಡು ಮೈ ಒಣಗಿಸಿಕೊಂಡು ಬಂದೆ..ʼ ಎಂದ ನಾಗರಾಜ..
ʻಆಂ? ಎಲ್ಲಿ? ಗೋಳಿಕಟ್ಟಾ ಶಾಲೆ ಹತ್ರ?ʼ ಅಪ್ಪಯ್ಯ ಕೇಳಿದ್ದ..
ʻಹೌದಾ.. ಯಾರದ್ದೋ ಮನೆ ಕಟ್ಟಿಗೆ ರಾಶಿಗೆ ಬೆಂಕಿ ಬಿದ್ದೋಜು..ʼ ಎಂದ
ಹೌಹಾರಿದ ಅಪ್ಪಯ್ಯ ʻಯೇ.. ಏನಂದೆ? ಮಾರಾಯ್ನೇ.. ಆ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಬಂದ್ಯಾ? ಥೋ... ಮೊದಲು ಸ್ನಾನ ಮಾಡು...ʼ ಎಂದ
ʻಎಂತಕ್ಕ? ಎಂತ ಆತಾ?ʼ
ʻಮಾರಾಯ್ನೇ ಆ ಊರಲ್ಲಿ ಒಬ್ಬವ ಸತ್ತೋಜ.. ಅವ್ನ ಸುಟ್ಟಿದ್ದಾಗಿತ್ತು ಆ ಬೆಂಕಿ. ಇವತ್ತು ಮದ್ಯಾಹ್ನ ಅಷ್ಟೇ ಸುಟ್ಟಿಕ್‌ ಬಂದಿದ್ದು ಅದು. ನಾನೂ ಹೋಗಿದ್ದಿ.. ನೀನು ಆ ಚಿತೆಯ ಬೆಂಕಿನ ಕಾಯ್ಸಿಕೊಂಡು ಬಂದೆಯಾ?..ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ನಾಗರಾಜನ ಬೆನ್ನಲ್ಲಿ ಛಳಕ್‌ ಅಂದಂತಾಯ್ತು.. ಬೆನ್ನ ಹುರಿಯ ಆಳದಲ್ಲಿ ಹುಟ್ಟಿಕೊಂಡ ಚಳಿ ನಿಧಾನವಾಗಿ ಮಯ್ಯನ್ನೆಲ್ಲ ಆವರಿಸಿತು. ಚಿತೆಯ ಬೆಂಕಿಯ ಬಿಸಿಯಂತೆ ಮೈ ಕೂಡ ಕಾವೇರತೊಡಗಿತು. ಕಣ್ಣು ಕತ್ತಲಿಟ್ಟುಕೊಂಡಂತಾಯಿತು. ನಾಗರಾಜನಿಗೆ ಮುಂದೇನಾಯಿತು ಎನ್ನುವುದೇ ಗೊತ್ತಾಗಲಿಲ್ಲ..!
(ಸತ್ಯ ಘಟನೆ ಆಧಾರಿತ)

Thursday, February 6, 2025

Ghost Writer ಭಾಗ -1


Chase the hunter


-----

A ghostwriter is a professional writer hired to create content on behalf of someone else, without receiving public credit for their work. Ghostwriters are commonly used for **books, articles, speeches, blog posts, and even music lyrics**. They help clients—such as celebrities, politicians, business executives, and experts—articulate their ideas in a polished and engaging manner.

Ghostwriting involves **deep research, adapting to the client’s voice, and maintaining confidentiality**. While the original author gets the credit, the ghostwriter is compensated for their work, often through a flat fee or royalties.

This profession is crucial in publishing, journalism, and content marketing, allowing busy individuals to share their insights without dedicating time to writing.

****

ಎರಡು ದಿನಗಳ ಹಿಂದೆ ಕೊರಿಯರ್‌ ಮೂಲಕ ಬಂದಿದ್ದ ಆ ಪತ್ರವನ್ನು ತೆರೆದು ಯೋಚಿಸುತ್ತ ಕುಳಿತಿದ್ದ ಡಿಟೆಕ್ಟಿವ್‌ ವಿಕ್ರಮ್ ಕುಮಾರ್!
ಎರಡು ದಿನಗಳ ಹಿಂದೆ ಕೊರಿಯರ್‌ ಒಂದು ಆತನಿಗೆ ಬಂದಿತ್ತು. ಅದರಲ್ಲಿ ಒಂದು ಪತ್ರವಿತ್ತು, ಜೊತೆಗೆ ೫೦ ಸಾವಿರ ರೂಪಾಯಿಗಳ ಹಣ ಕೂಡ ಇತ್ತು.
ಪತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರಿತ್ತು. ಆತನನ್ನು ಹುಡುಕಿಕೊಂಡು ಬರುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪತ್ರದ ಕೊನೆಯಲ್ಲಿ ಹುಡುಕಿಕೊಂಡು ಬರಬೇಕಿರುವ ವ್ಯಕ್ತಿ ಒಬ್ಬ ಘೋಸ್ಟ್‌ ರೈಟರ್!‌ ಈತನನ್ನು ಬಹಳಷ್ಟು ಜನರು ಹುಡುಕುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ, ಸಿನಿಮಾ ಜಗತ್ತು ಸೇರಿದಂತೆ ಹಲವು ವಿಭಾಗಗಳ ಪ್ರಮುಖರು ಈತನ ಬೆನ್ನು ಹತ್ತಿದ್ದಾರೆ. ಯಾರ ಕೈಗೂ ಸಿಗುತ್ತಿಲ್ಲ! ಆತನ ಬರಹಗಳು ಮಾತ್ರ ವೆಬ್‌ ಜಗತ್ತಿನಲ್ಲಿ ಪಬ್ಲಿಷ್‌ ಆಗುತ್ತಿದೆ. ಪಬ್ಲಿಷ್‌ ಆದ ನಂತರ ಸಾಕಷ್ಟು ವೈರಲ್‌ ಕೂಡ ಆಗುತ್ತಿದೆ. ಹಲವು ಸಾರಿ ಸಮಾಜದಲ್ಲಿ ಅಲ್ಲೋಲ-ಕಲ್ಲೋಲವನ್ನೂ ಸೃಷ್ಟಿ ಮಾಡಿದ ನಿದರ್ಶನ ಇದೆ.
ಆತನನ್ನು ಹುಡುಕಿಕೊಂಡು ಬರುವ ಮಹತ್ತರ ಜವಾಬ್ದಾರಿ ನಿನಗೆ ವಹಿಸಲಾಗುತ್ತಿದೆ. ಆತನನ್ನು ಹುಡುಕುತ್ತಿರುವವರೆಲ್ಲರ ಕಣ್ಣುತಪ್ಪಿಸಿ, ಅತ್ಯಂತ ಗೌಪ್ಯವಾಗಿ ಕಾರ್ಯ ನಿರ್ವಹಿಸಬೇಕು! ಈ ಪತ್ರದ ಜೊತೆ ಇರುವ ೫೦ ಸಾವಿರ ರೂಪಾಯಿ ಅಡ್ವಾನ್ಸ್!‌ ಕಾಲಕಾಲಕ್ಕೆ ಕೊರಿಯರ್‌ ಬರುತ್ತಿರುತ್ತದೆ ಹಾಗೂ ಹಣ ಸಂದಾಯ ಆಗುತ್ತಿರುತ್ತದೆ! ಪೂರ್ತಿ ಕೆಲಸ ಮುಗಿದ ನಂತರ ೧ ಕೋಟಿ ರೂಪಾಯಿ ಮೊತ್ತ ನೀಡಲಾಗುತ್ತದೆ! ಆತನ ಹೆಸರಿನಲ್ಲಿ ಪಬ್ಲಿಷ್‌ ಆದ ಬರಹಗಳ ಪೋಟೋ ಕಾಪಿ ಹಾಗೂ ಪ್ರಿಂಟೆಡ್‌ ಕಾಪಿಗಳು ಇಲ್ಲಿವೆ. ಕೂಡಲೇ ಕಾರ್ಯಪ್ರವೃತ್ತ ಆಗಬೇಕು! ಈ ಕೆಲಸ ಮಾಡೋದಿಲ್ಲ ಎನ್ನುವ ಆಯ್ಕೆ ನಿಮ್ಮೆದುರು ಇಲ್ಲವೇ ಇಲ್ಲ! ಒಪ್ಪಿಕೊಳ್ಳಲೇಬೇಕು ಇಲ್ಲವಾದಲ್ಲಿ ಮುಂದಿನ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಎಂದು ಪತ್ರದಲ್ಲಿ ಬರೆಯಲಾಗಿತ್ತು!

ಕೆಲಸವನ್ನು ನನಗೆ ವಹಿಸಿದ್ದಾರೋ ಅಥವಾ ಆರ್ಡರ್‌ ಮಾಡಿದ್ದಾರೋ? ಎಂದುಕೊಳ್ಳುತ್ತಲೇ ಘೋಸ್ಟ್‌ ರೈಟರ್‌ ಕುರಿತು ಮಾಹಿತಿ ಕಲೆ ಹಾಕುವತ್ತ ವಿಕ್ರಮ್‌ ಕುಮಾರ್‌ ಕಾರ್ಯಪ್ರವೃತ್ತನಾಗಿದ್ದ. ಘೋಸ್ಟ್‌ ರೈಟರ್‌ ಪಬ್ಲಿಷ್‌ ಮಾಡುತ್ತಿದ್ದ ವೆಬ್‌ ತಾಣಗಳನ್ನು ಸರ್ಚ್‌ ಮಾಡಲು ಮುಂದಾಗಿದ್ದ.

ಅನಾಮಧೇಯ ಕೊರಿಯರ್‌ ಬಂದು ತಲುಪಿದ ಎರಡು ದಿನಗಳ ವೇಳೆಗೆ ʻಘೋಸ್ಟ್‌ ರೈಟರ್‌ ಕುರಿತು ಹಲವು ಸಂಗತಿಗಳ ವಿಕ್ರಮ್‌ ಕುಮಾರ್‌ ಗೆ ಗೊತ್ತಾಗಿದ್ದವು. ಆತನನ್ನು ಹುಡುಕಲು ಹೊರಡುವುದೊಂದೇ ಬಾಕಿ ಇತ್ತು.

ತಲೆಯ ತುಂಬೆಲ್ಲ ಘೋಸ್ಟ್‌ ರೈಟರ್‌ನನ್ನು ತುಂಬಿಕೊಂಡು, ಯಾವ ಕಡೆಯಿಂದ ತನ್ನ ಪತ್ತೆದಾರಿಕೆ ಕಾರ್ಯ ಶುರುಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತನ್ನ ಮನೆ ಕಂ ಕಚೇರಿಯ ಕಾಲಿಂಗ್‌ ಬೆಲ್‌ ಸದ್ದು ಮಾಡಿತ್ತು.

ಬಾಗಿಲು ತೆರೆದು ನೋಡಿದರೆ ಬಾಗಿಲಲ್ಲಿ ಕೊರಿಯರ್‌ ಬಾಯ್‌ ನಿಂತಿದ್ದ! ಇನ್ನೊಂದು ಕೊರಿಯರ್‌ ಬಂದಿತ್ತು!
ಕೊರಿಯರ್‌ ಪಡೆದು ಫ್ರಂ ಅಡ್ರೆಸ್‌ ನೋಡಿದರೆ ʻಬೆಂಗಳೂರುʻ ಎಂದು ಬರೆದಿತ್ತು. ಕೊರಿಯರ್‌ ಬಾಅಯ್‌ ವಾಪಾಸ್‌ ತೆರಳಿದ ನಂತರ ಮನೆಯೊಳಗೆ ಬಂದು ವಿಕ್ರಮ್‌ ಕುಮಾರ್‌ ಆ ಕೊರಿಯರ್‌ ತೆರೆದ.
ಅದರೊಳಕ್ಕೆ ಇನ್ನಷ್ಟು ದುಡ್ಡು, ಒಂದಷ್ಟು ಮಾಹಿತಿ ಹಾಗೂ ಮತ್ತೊಂದು ಪತ್ರ ಇತ್ತು!

ಯಾರೋ ದೊಡ್ಡ ವ್ಯಕ್ತಿ, ಬಹಳ ಪ್ರಭಾವಿ, ಸಾಕಷ್ಟು ಕನೆಕ್ಷನ್‌ ಇರುವಾತನೇ ಈ ಕೆಲಸವನ್ನು ತನಗೆ ವಹಿಸುತ್ತಿದ್ದಾನೆ. ಘೋಸ್ಟ್‌ ರೈಟರ್‌ ಹುಡುಕುವ ಕಾರ್ಯದಲ್ಲಿ ತಾನು ಇನ್ನಷ್ಟು ಸೀರಿಯಸ್‌ ಆಗಬೇಕು ಎಂದುಕೊಳ್ಳುತ್ತಲೇ ವಿಕ್ರಮ್‌ ಕುಮಾರ್‌ ಪತ್ರವನ್ನು ಓದತೊಡಗಿದ!

ಓದುತ್ತಿದ್ದಂತೆಯೇ ನಿಧಾನವಾಗಿ ಬೆವರತೊಡಗಿದ

(ಮುಂದುವರಿಯುತ್ತದೆ)

Tuesday, January 14, 2025

ಮಾಳ ಹಾಗೂ ಹುಲಿ


ಬರಬಳ್ಳಿಯ ಗುಡ್ಡೆಮನೆ ಹೆಸರಿಗೆ ತಕ್ಕಂತೆ ಗುಡ್ಡದ ಮೇಲ್ಭಾಗದಲ್ಲಿರುವ ಮನೆ. ಅಲ್ಲಿಂದ ಕೂಗಳತೆ ದೂರದಲ್ಲಿ ವಾಸಂತಿ ಕೆರೆ. ಅದರ ಸುತ್ತಮುತ್ತಲೆಲ್ಲ ದಟ್ಟ ಕಾನನ. ಗುಡ್ಡೆಮನೆಯ ಜಮೀನು ವಾಸಂತಿ ಕೆರೆಯ ಕೆಳಭಾಗದಲ್ಲೇ ಇತ್ತು.


ವಾಸಂತಿ ಕೆರೆಯಿಂದ ಇನ್ನೊಂದು ದಿಕ್ಕಿನಲ್ಲಿ ಕೊಂಚ ದೂರದಲ್ಲಿಯೇ ಕಬ್ಬಿನ ಗದ್ದೆ ಮಾಡಲು ವಿಶ್ವೇಶ್ವರ ಮಾವ ಮುಂದಾಗಿದ್ದ. ಕಬ್ಬಿನ ಗದ್ದೆಗಾಗಿ ಬೀಜ ಹಾಕಿ, ಸರಿಯಾಗಿ ಮಣ್ಣು ಹಾಕಿ ಬಹುತೇಕ ಕೆಲಸ ಮುಗಿಸಿದ್ದ.

ಕಬ್ಬಿನಗದ್ದೆಗೆ ಹಂದಿಗಳ ಕಾಟ ವಿಪರೀತ. ಹಂದಿಗಳ ಗ್ವಾಲೆ ಕಬ್ಬಿನ ಗದ್ದೆಗೆ ದಾಳಿ ಕೊಟ್ಟರೆ ಮುಗಿದೇ ಹೋಯ್ತು ಸಂಪೂರ್ಣ ತಿಂದು ಹಾಳು ಮಾಡಿಬಿಡುತ್ತವೆ. ಹಂದಿಗಳಿಂದ ಕಬ್ಬಿನಗದ್ದೆ ರಕ್ಷಣೆಯೇ ದೊಡ್ಡ ಕೆಲಸ. ಕಬ್ಬಿನಗದ್ದೆಯನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕಾಗಿಯೇ ವಿಶ್ವೇಶ್ವರ ಮಾವ ಮಾಳವೊಂದನ್ನು ಕಟ್ಟಿ ಅದರ ಮೇಲೆ ರಾತ್ರಿ ಉಳಿದು ಕಬ್ಬಿನಗದ್ದೆಯನ್ನು ಕಾಯುವ ಕೆಲಸ ಮಾಡುತ್ತಿದ್ದ. ಹಂದಿಗಳು ಬಂದರೆ ಛೂ ಹಾಕಿ ಕೂಗಿ ಅವುಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದ.

ಆ ಮಳೆಗಾಲಕ್ಕೂ ಪೂರ್ವದಲ್ಲಿ ಅಮ್ಮ ತನ್ನ ಮೊದಲ ಹೆರಿಗೆಗೆ ತವರಿಗೆ ಬಂದಿದ್ದಳು. ಮಳೆಗಾಲ ಅದಾಗ ತಾನೇ ಕಳೆದಿತ್ತು. ಇನ್ನೇನು ಚಳಿಯೊಡೆಯುವ ಸಮಯ. ಅಕ್ಟೋಬರ್‌ ಮೊದಲ ವಾರವಿರಬೇಕು. ಎಂದಿನಂತೆ ಲಾಟೀನು ಹಿಡಿದು ವಿಶ್ವೇಶ್ವರ ಮಾವ ಮಾಳಕ್ಕೆ ಹೋಗಿದ್ದ. ಮನೆಯಲ್ಲಿ ಅಜ್ಜಿ ಹಾಗೂ ಅಮ್ಮ ಇಬ್ಬರೇ ಉಳಿದಿದ್ದರು. ಮಾಳಕ್ಕೆ ಹೋಗುವಾಗ ಲಾಟೀನನ್ನು ಹಿಡಿದು ಹೋಗಿದ್ದ ಮಾವ ಮಾಳದ ಕೆಳಗೆ ಸಣ್ಣದಾಗಿ ಬೆಂಕಿಯನ್ನು ಹಾಕಿ, ಮಾಳವನ್ನು ಏರಿ, ಮಾಳಕ್ಕೆ ಲಾಟೀನನ್ನು ನೇತುಹಾಕಿ ಮಲಗಿದ್ದ. ಚಳಿ ತೀವ್ರವಾಗಿಯೇ ಬೀಳತೊಡಗಿತ್ತು.

ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮಾವನಿಗೆ ಎಚ್ಚರವಾಯಿತು. ಇಡಿಯ ಮಾಳವೇ ಅಲ್ಲಾಡುತ್ತಿದ್ದ ಅನುಭವ. ಅರೇ ಭೂಮಿ ಕಂಪಿಸುತ್ತಿದೆಯೇ? ಇದೇನಾಗುತ್ತಿದೆ? ಮಾಳವೇಕೆ ಅಲ್ಲಾಡುತ್ತಿದೆ ಎಂಬ ಭಾವನೆ ಮನದಲ್ಲಿ ಮೂಡಿತ್ತು. ನಿಧಾನವಾಗಿ ಮಾಳದ ಮೇಲಿನಿಂದ ಕೆಳಕ್ಕೆ ಹಣಕಿದ. ಕೆಳಗೆ ನೋಡಿದವನೇ ಒಮ್ಮೆಲೆ ಹೌಹಾರಿದ. ಮಾಳದ ಮೇಲೆ ಕುಳಿತವನು ಒಮ್ಮೆಲೆ ಬೆವರಲಾರಂಭಿಸಿದ್ದ. ಆತನ ಜೀವ ಭಾಯಿಗೆ ಬಂದಂತಾಗಿತ್ತು. ಕೆಳಗಡೆ ಎಂಟಡಿ ಉದ್ದದ ದೈತ್ಯ ಪಟ್ಟೆಹುಲಿ ಮಾಳದ ಕಂಬಕ್ಕೆ ಶೇಡಿ ನಿಂತಿತ್ತು. ಕೆಳಗಡೆ ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಯನ್ನೇ ನೋಡುತ್ತಿತ್ತು.

ಉದ್ದದ ಪಟ್ಟೆಹುಲಿ ನೋಡಿದ ತಕ್ಷಣ ಮಾವನ ಮಾತು ಬಂದಾಗಿತ್ತು. ಕೂಗಿಕೊಳ್ಳಲು ಯತ್ನಿಸಿದರೂ ಬಾಯಿಂದ ಧ್ವನಿಯೇ ಹೊರಬರುತ್ತಿಲ್ಲ. ಎಂಟಡಿ ಎತ್ತರದ ಹುಲಿ ಜಿಗಿದರೆ ಸಾಕು ತಾನು ಅದರ ಬಾಯಿಗೆ ಆಹಾರವಾಗಬಹುದು, ಅಥವಾ ಮಾಳದ ಕಂಬಕ್ಕೆ ಸ್ವಲ್ಪವೇ ಗಟ್ಟಿಯಾಗಿ ಶೇಡಿದರೆ ಸಾಕು ಮಾಳವೇ ಉದುರಿ ಬೀಳಬಹುದು ʻಬರಬಳ್ಳಿ ಗಣಪ ಕಾಪಾಡಪ್ಪಾ..ʼ ಎಂದು ಮನಸ್ಸಿನಲ್ಲಿ ಬೇಡಿಕೊಂಡ. ಕೊರೆಯುವ ಚಳಿಯಿದ್ದರೂ ಯಾವಾಗಲೋ ಅದು ಹಾರಿಹೋದಂತಾಗಿತ್ತು. ಮೈ-ಮನಸ್ಸುಗಳಲ್ಲೆಲ್ಲ ಭಯದ ಬೆವರು ಕಿತ್ತು ಬರುತ್ತಿತ್ತು. ಒಂದು ಸಾರಿ ಜೀವ ಉಳಿದರೆ ಸಾಕು, ಮತ್ತೆ ಕಬ್ಬಿನ ಗದ್ದೆಯೂ ಬೇಡ, ಮಾಳದ ಸಹವಾಸವೂ ಬೇಡ ಎಂದುಕೊಂಡ.

ಮನೆಯ ದಿಕ್ಕಿಗೆ ಮುಖ ಮಾಡಿ ಮಾಳದಿಂದಲೇ ನೋಡಿದವನಿಗೆ ಮಿಣುಕು ಬೆಳಕು ಕಾಣಿಸಿದಂತಾಯಿತು. ಒಮ್ಮೆ ಗಟ್ಟಿಯಾಗಿ ಕೂಗಿಬಿಡಲೇ? ಕೂಗಿದರೆ ಅಬ್ಬೆಯಾದರೂ, ತಂಗಿ ಗಂಗುವಾದರೂ ಬರಬಹುದೇ? ಎಂದುಕೊಂಡ. ತಾನು ಕೂಗಿ, ಅವರ ಇರವನ್ನು ಅರಿತ ಹುಲಿ ಅತ್ತ ಕಡೆ ಧಾವಿಸಿದರೆ? ಅಬ್ಬೆಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ, ತಂಗಿ ತುಂಬಿದ ಗರ್ಭಿಣಿ. ಹುಲಿ ದಾಳಿ ಮಾಡುವುದು ಹಾಗಿರಲಿ, ಒಮ್ಮೆ ಗಟ್ಟಿಯಾಗಿ ಘರ್ಜಿಸಿ ಏನಾದರೂ ಅನಾಹುತ ಆದರೆ ಏನು ಮಾಡುವುದು ಭಗವಂತಾ? ಎಂದುಕೊಂಡ.

ಆದರೂ ಧೈರ್ಯ ಮಾಡಿ ಅಬ್ಬೆಯನ್ನೂ- ಗಂಗುವನ್ನೂ ಕರೆದ. ಮನೆಯ ಕಡೆಯಿಂದ ಮಾರುತ್ತರ ಬರಲಿಲ್ಲ. ಆದರೆ ಮಾಳದ ಕೆಳಗಿದ್ದ ಹುಲಿ ಮಾವನ ಕೂಗಿಗೆ ಗಮನ ನೀಡಿಲ್ಲದಿರುವುದು ಸಮಾಧಾನ ತಂದಿತ್ತು. ಮತ್ತೆ ಕರೆದ ಆಗಲೂ ನಿಶ್ಯಬ್ಧ. ಹುಲಿಯೂ ಆರಾಮಾಗಿ ನಿಂತಿತ್ತು. ಅದಾದ ನಂತರ ಧೈರ್ಯದಿಂದ ಕೂಗಿದ. ಆರೆಂಟು ಸಾರಿ ಕೂಗಿ ಕೂಗಿ ಕರೆದರೂ ಮನೆಯ ಕಡೆಯಿಂದ ಉತ್ತರ ಬರದೇ ಇದ್ದಾಗ ನಿಟ್ಟುಸಿರು ಬಿಟ್ಟ ವಿಶ್ವೇಶ್ವರ ಮಾವ ಹುಲಿಯಿಂದ ಪಾರಾಗುವುದು ಹೇಗೆ ಎಂದು ಆಲೋಚಿಸಲು ಶುರುಮಾಡಿದ.

ಕೈಯಲ್ಲಿ ಕುಡಗೋಲು ಇತ್ತಾದರೂ ದೈತ್ಯ ವ್ಯಾಘ್ರನ ಮೇಲೆ ದಾಳಿ ಮಾಡಿ, ಹುಲಿಯನ್ನು ಕೊಲ್ಲುವುದು ಹಾಗೂ ತಾನು ಬದುಕುವುದು ಸಾಧ್ಯವೇ? ಹುಲಿಯ ಆಯದ ಜಾಗಕ್ಕೆ ಪೆಟ್ಟು ಬೀಳಬೇಕು, ಒಂದೇ ಹೊಡೆತಕ್ಕೆ ಹುಲಿ ಸತ್ತು ಬೀಳಬೇಕು, ಅಷ್ಟಾದಾಗ ಮಾತ್ರ ತಾನು ಜೀವ ಸಹಿತ ಇರಲು ಸಾಧ್ಯ. ಹೊಡೆತ ತಪ್ಪಿದರೆ? ಹುಲಿಗೆ ಗಾಯವಾಗಿಬಿಟ್ಟರೆ? ಮುಗಿಯಿತಲ್ಲ ಕಥೆ ಎಂದುಕೊಂಡ. ಕುಡಗೋಲಿನಿಂದ ದಾಳಿ ಮಾಡುವ ಯೋಜನೆ ಕೈಬಿಟ್ಟ.

ಅಷ್ಟರಲ್ಲಿ ಆರಾಧ್ಯದೈವ ಬಲಮುರಿ ಗಣಪತಿಯೇ ದಾರಿ ತೋರಿಸಿದರೆ ಮಾಳದ ಮಾಡಿಗೆ ನೇತು ಹಾಕಿದ್ದ ಕಂದೀಲು ನೆನಪಾಯಿತು. ಮಾಳ ಅಲ್ಲಾಡಿದಂತೆಲ್ಲ ಕಂದೀಲು ಕೂಡ ಹೊಯ್ದಾಡುತ್ತಿತ್ತಾದರೂ, ಅದರಲ್ಲಿ ಸಣ್ಣದಾಗಿ ಉರಿಯುತ್ತಿದ್ದ ಬೆಳಕು ಆರಿರಲಿಲ್ಲ. ಕೂಡಲೇ ಲಾಟೀನನ್ನು ಹಿಡಿದ. ಅತ್ತ ಇತ್ತ ನೋಡಿದವನಿಗೆ ಮಾಳದ ಮಾಡಿಗೆ ಹಾಕಿದ್ದ ಮಡ್ಲು ಹೆಡ (ತೆಂಗಿನ ಟೊಂಗೆ) ಕಾಣಿಸಿತು. ಅದನ್ನು ಎಳೆದು ಬೆಂಕಿ ಕೊಟ್ಟೇ ಬಿಟ್ಟ. ಒಮ್ಮೆಲೆ ದೊಡ್ಡ ಸೂಡಿಯಷ್ಟು ದೊಡ್ಡದಾದ ಬೆಂಕಿ ಕಾಣಿಸಿಕೊಂಡಿತು. ಅದನ್ನು ಸೀದಾ ಮಾಳದ ಮೇಲೆ ಇಟ್ಟ. ಬೆಂಕಿ ಹೊತ್ತಿಕೊಂಡಂತೆಯೇ ಮತ್ತಷ್ಟು ಮಡ್ಲನ್ನು ತೆಗೆದು ಉರಿ ಜ್ವಾಲೆಯನ್ನು ದೊಡ್ಡದು ಮಾಡಿದ. ಬೆಂಕಿ ದೊಡ್ಡದಾದಂತೆಲ್ಲ ಮಾಳದ ಅಡಿಯಲ್ಲಿದ್ದ ಹುಲಿ ಬಿತ್ತು. ಎಲ್ಲೋ ಅದರ ಮೈಮೇಲೆ ಕೂಡ ಕಿಡಿ ಬಿದ್ದಿರಬೇಕು. ಸಣ್ಣದಾಗಿ ಮುಲುಕಿ ಅಲ್ಲಿಂದ ಕಾಲ್ಕಿತ್ತಿತು. ಮಾವ ನಿರಾಳನಾಗಿದ್ದ. ಆದರೆ ಬೆಂಕಿಯನ್ನು ನಂದಿಸುವ ಧೈರ್ಯ ಆತನಿಗೆ ಆಗಿರಲಿಲ್ಲ. ಮಾಳಕ್ಕೆ ಹಾಕಿದ್ದ ತೆಂಗಿನ ಗರಿ ಖಾಲಿಯಾಗುವವರೆಗೂ ಉರಿ ಒಟ್ಟುತ್ತಲೇ ಇದ್ದ.

ಮೂಡಣದಲ್ಲಿ ನೇಸರ ಮೂಡುವ ಹೊತ್ತಾಗುವ ವರೆಗೂ ಬೆಂಕಿಯನ್ನು ಹಾಕುತ್ತಲೇ ಇದ್ದ ಮಾವ. ಕಣ್ಣು ಕೆಂಪಗಾಗಿತ್ತು. ಕೂದಲು ಕೆದರಿ ಹೋಗಿತ್ತು. ಮಾಳದ ಮಾಡಿನ ತೆಂಗಿನ ಗರಿಗಳೆಲ್ಲ ಸಂಪೂರ್ಣ ಖಾಲಿಯಾಗಿತ್ತು. ಇನ್ನು ಮಾಳದ ಕಡೆಗೆ ಬರಲಾರೆ ಎಂದು ದೃಢ ನಿರ್ಧಾರ ಮಾಡಿ ಮಾಳ ಇಳಿದು ಮನೆಗೆ ಹೋಗಿ ಅಮ್ಮಕ್ಕಜ್ಜಿಗೂ ಗಂಗುವಿಗೂ ನಡೆದ ವಿಷಯವನ್ನು ಹೇಳಿದ. ಅವರಿಬ್ಬರೂ ನಡೆದಿದ್ದನ್ನು ಕೇಳಿ ನಡುಗಿ ಹೋಗಿದ್ದರು. ಸಧ್ಯ ಜೀವ ಉಳಿಯಿತಲ್ಲ ಎಂಬ ಸಮಾಧಾನ ಅವರದ್ದಾಗಿತ್ತು. ʻಮೊದ್ಲು ಮೊಠಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡಿ ಬಾ..ʼ ಅಮ್ಮಕ್ಕಜ್ಜಿ ಹೇಳಿದ್ದರು. ಮಾವ ಸ್ನಾನ ಮುಗಿಸಿ ಗಣಪನ ದೇಗುಲದ ಕಡೆಗೆ ಮುಖ ಮಾಡಿದ್ದ.

Tuesday, November 26, 2024

ಬರಬಳ್ಳಿ ಬಸ್ಸಿನ ಪ್ರಯಾಣದಲ್ಲಿ ಅನಾವರಣಗೊಳ್ಳುತ್ತಿದ್ದ ಅಚ್ಚರಿಯ ಲೋಕ

ನಮ್ಮ ಬಾಲ್ಯವನ್ನು ಹಸಿರಾಗಿ ಇರಿಸಿರುವುದರಲ್ಲಿ ಬರಬಳ್ಳಿಯ ಪಾತ್ರ ಬಹಳ ದೊಡ್ಡದು. ಬರಬಳ್ಳಿಯ ನೆನಪುಗಳು ಈಗಲೂ ಮನಸ್ಸಿನಲ್ಲಿ ನೆನಪಿನ ತರಂಗಗಳನ್ನು ಏಳಿಸುತ್ತಿರುತ್ತವೆ. ರಜಾ ಬಂತೆಂದರೆ ಸಾಕು ನಾನು, ಕಾನಲೆಯಿಂದ ಗಿರೀಶಣ್ಣ, ಗುರಣ್ಣ, ತಂಗಿ ಸುಪರ್ಣರೆಲ್ಲ ಬರಬಳ್ಳಿಗೆ ಓಡುತ್ತಿದ್ದೆವು. ಬೇಸಿಗೆಯ ರಜಾದಲ್ಲಿ ಬರಬಳ್ಳಿಯಲ್ಲಿ ನಮ್ಮ ಪಾರುಪತ್ಯ ನಡೆಯುತ್ತಿತ್ತು. ಇಂತಹ ಬರಬಳ್ಳಿಗೆ ದಿನಕ್ಕೆ ಒಂದೋ ಎರಡೋ ಬಸ್ಸುಗಳು ಹೋಗುತ್ತಿದ್ದವು. ಆ ಬಸ್ಸುಗಳೇ ನಮ್ಮನ್ನು ಬರಬಳ್ಳಿಗೆ ತಲುಪಿಸುತ್ತಿತ್ತು. ಹೀಗೆ
ಬರಬಳ್ಳಿಗೆ ತೆರಳುವ ಬಸ್ಸಿನ ಕಥೆಯನ್ನೇ ನಾನು ನಿಮಗೆ ಹೇಳಲು ಹೊರಟಿದ್ದು.
ಬರಬಳ್ಳಿಗೆ ನನಗೆ ನೆನಪಿರುವ ಹಾಗೆ ಮದ್ಯಾಹ್ನ ೧ ಗಂಟೆಗೆ ಯಲ್ಲಾಪುರದಿಂದ ಒಂದು ಬಸ್ಸು ಹಾಗೂ ಸಂಜೆ ೫ ಗಂಟೆಗೆ ಒಂದು ಬಸ್ಸು ಇತ್ತು. ವಾಪಾಸ್‌ ಬರಬಳ್ಳಿಯಿಂದ ಮುಂಜಾನೆ ೯ ರ ವೇಳೆಗೆ ಬರುವ ಬಸ್ಸು ಹಾಗೂ ಸಂಜೆ ೪ ಗಂಟೆಗೆ ಯಲ್ಲಾಪುರಕ್ಕೆ ತೆರಳುವ ಬಸ್ಸುಗಳಿರುತ್ತಿದ್ದವು. ಕಾಳಿ ನದಿಯ ಕೊಡಸಳ್ಳಿ ಅಣೆಕಟ್ಟು ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳುವ ವೇಳೆಗೆ ಮೂರು ಬಸ್ಸುಗಳು ಆಗಿದ್ದಿರಬಹುದೇನೋ ಎಂಬ ನೆನಪು. ಈ ಬಸ್ಸುಗಳ ಸಮಯವನ್ನೇ ಹುಡುಕಿ ನಾವು ಬರಬಳ್ಳಿಗೆ ಹೋಗುತ್ತಿದ್ದೆವು.
೧೯೯೦ರ ದಶಕದ ಕಥೆಯನ್ನು ನಾನು ಹೇಳಲು ಹೊರಟಿರುವುದು. ಆಗ ಯಲ್ಲಾಪುರದಲ್ಲಿ ಬಸ್‌ ಡಿಪೋ ಇರಲಿಲ್ಲ. ಬರಬಳ್ಳಿ ಇರಲಿ ಅಥವಾ ಯಲ್ಲಾಪುರದ ಗ್ರಾಮೀಣ ಬಸ್ಸುಗಳು ಇರಲಿ ಅವೆಲ್ಲ ಶಿರಸಿಯಿಂದಲೇ ಬರಬೇಕಿತ್ತು. ಶಿರಸಿಯಿಂದ ಬಸ್‌ ಬಂದರಷ್ಟೇ ಯಲ್ಲಾಪುರದ ಗ್ರಾಮೀಣ ಭಾಗಗಳಿಗೆ ಬಸ್‌ ಬಿಡುತ್ತಿದ್ದರು. ಶಿರಸಿಯಿಂದ ಬಸ್‌ ಬಂದಿಲ್ಲ ಎಂದಾದರೆ ಯಲ್ಲಾಪುರದ ಗ್ರಾಮೀಣ ಭಾಗಗಳಿಗೆ ಬಸ್‌ ಕ್ಯಾನ್ಸಲ್‌ ಆಗುತ್ತಿತ್ತು. ಮದ್ಯಾಹ್ನ ೧ ಗಂಟೆಗೆ ಯಲ್ಲಾಪುರದಿಂದ ಬಿಡುವ ಬಸ್ಸೂ ಕೂಡ ಶಿರಸಿಯಿಂದಲೇ ಬರಬೇಕಿತ್ತು. ಇನ್ನೂ ಮಜವಾದ ಸಂಗತಿ ಎಂದಾದರೆ ಶಿರಸಿಯಿಂದ ಯಲ್ಲಾಪುರಕ್ಕೆ ಹಾಗೂ ಅಲ್ಲಿಂದ ಬರಬಳ್ಳಿಗೆ ಬರುವ ಬಸ್‌ ಸಾಗರದಿಂದ ಹೊರಡುತ್ತಿತ್ತು. ಮುಂಚಿನ ದಿನ ರಾತ್ರಿ ವೇಳೆಗೆ ಸಾಗರ ತೆರಳುವ ಬಸ್‌ ಸಾಗರದಲ್ಲಿ ಹಾಲ್ಟ್‌ ಮಾಡಿ, ಮರುದಿನ ಸಾಗರದಿಂದ ಹೊರಟು ನಂತರ ಶಿರಸಿಗೆ ಬಂದು ಅಲ್ಲಿಂದ ಯಲ್ಲಾಪುರಕ್ಕೆ ಬಂದು ಆ ನಂತರ ಬರಬಳ್ಳಿಗೆ ಬರುತ್ತಿತ್ತು.
ಬರಬಳ್ಳಿಗೆ ಹೋಗುವ ಬಸ್‌ ಸಾಗರದಿಂದ ಬರುತ್ತದೆ ಎಂಬ ವಿಷಯವನ್ನು ಹೇಗೋ ತಿಳಿದುಕೊಂಡಿದ್ದ ಅಪ್ಪ, ನನ್ನನ್ನೂ, ನನ್ನ ತಂಗಿಯನ್ನೂ, ಅಮ್ಮನನ್ನೂ ಕಾನಸೂರಿನ ತನಕ ಕರೆದುಕೊಂಡು ಬಂದು ಆ ಬಸ್ಸನ್ನು ಹತ್ತಿಸುತ್ತಿದ್ದರು. ಕೆಲವೊಮ್ಮೆ ಕಾಕತಾಳೀಯವೋ ಎನ್ನುವಂತೆ ಅದೇ ಬಸ್ಸಿನಲ್ಲಿ ಕಾನಲೆಯಿಂದ ಬಂದ ಗಿರೀಶಣ್ಣ, ಗುರಣ್ಣರೂ, ಕಾನಲೆ ದೊಡ್ಡಮ್ಮರೂ ಇರುತ್ತಿದ್ದರು. ಅವರಿಗೆ ಅಮ್ಮ ಮೊದಲೆ ಪತ್ರ ಬರೆದು ಇಂತ ದಿನ ಹೋಗುತ್ತಿದ್ದೇವೆ ಎಂಬ ವಿಷಯ ತಿಳಿಸುತ್ತಿದ್ದಳೋ ಏನೋ? ಗೊತ್ತಿಲ್ಲ. ಆದರೆ ಕಾನಸೂರಿನಲ್ಲಿ ಬಸ್‌ ಹತ್ತುವ ವೇಳೆಗೆ ಗೀರೀಶಣ್ಣ ಬಸ್ಸಿನಲ್ಲಿ ಇದ್ದು ನಮ್ಮನ್ನು ಮಾತನಾಡಿಸುತ್ತಿದ್ದ ಕ್ಷಣಗಳು ಇನ್ನೂ ನೆನಪಿದೆ.
ಕಾನಸೂರಿನಲ್ಲೆಲ್ಲ ರಶ್‌ ಆಗಿರುತ್ತಿದ್ದ ಬಸ್‌ ಶಿರಸಿಯಲ್ಲಿ ಒಮ್ಮೆಗೇ ಖಾಲಿಯಾಗುತ್ತಿತ್ತು. ಶಿರಸಿ ಬಸ್‌ ನಿಲ್ದಾಣದಲ್ಲಿ ಜನವೋ ಜನ. ಅವರೆಲ್ಲ ಕಿಡಕಿಯಿಂದ ಟವೇಲ್‌, ಬ್ಯಾಗ್‌ ಇತ್ಯಾದಿಗಳನ್ನು ತೂರಿಸಿ ಸೀಟ್‌ ಬುಕ್‌ ಮಾಡುವುದರೊಳಗೆ ನಾನು, ಗಿರೀಶಣ್ಣರಾದಿಯಾಗಿ ನಮ್ಮ ಪಟಾಲಂ ಡ್ರೈವರ್‌ ಸೀಟಿನ ಪಕ್ಕದ ಉದ್ದನೆಯ ಸೀಟಿನಲ್ಲಿ ಆಸೀನರಾಗುತ್ತಿದ್ದೆವು.
ಕೆಲವು ಸಂದರ್ಭದಲ್ಲಿ ಬಸ್ಸಿಗೆ ಕ್ಯಾಬಿನ್‌ ಇರುತ್ತಿತ್ತು. ಅಂದರೆ ಈಗಿನಂತೆ ಡ್ರೈವರ್‌ ಪಕ್ಕದಲ್ಲಿ ಉದ್ದನೆಯ ಸೀಟ್‌ (ಈಗಿನ ಬಸ್ಸುಗಳಲ್ಲಿ ಸೀಟ್‌ ನಂಬರ್‌ ೪೬, ೪೭,೪೮) ಇರುತ್ತಿರಲಿಲ್ಲ. ಡ್ರೈವರ್‌ಗಳಿಗೆ ಪ್ರಯಾಣಿಕರು ತೊಂದರೆ ಕೊಡಬಾರದೆಂದು ದೊಡ್ಡ ಕ್ಯಾಬಿನ್‌ ಮಾಡಿ ಜಾಲರಿಯನ್ನು ಹೊಡೆದು ಖಾಲಿ ಬಿಡುತ್ತಿದ್ದರು. ಆ ಕ್ಯಾಬಿನ್‌ ಒಳಗೆ ಒಂದು ಸೀಟ್‌ ಡ್ರೈವರ್‌ ಮಲಗಲು ಅನುಕೂಲವಾಗುವಂತೆ ಇರುತ್ತಿತ್ತು. ಹಳೆಯ ಕಾಲದ ಉದ್ದನೆಯ ಗೇರ್‌ ಬಹುತೇಕ ಕ್ಯಾಬಿನ್‌ ತುಂಬಿಸುತ್ತದೆಯೇನೋ ಎನ್ನಿಸುವಂತಿತ್ತು. ಈ ಗೇರುಗಳನ್ನು ಹಾಕುವಾಗ ಕಿರ್ರೋ ಎನ್ನುವ ಶಬ್ದ ಕಿವಿಗೆ ಬೀಳುತ್ತಿತ್ತು. ಶಿರಸಿಯಲ್ಲಿ ಬಸ್‌ ಖಾಲಿಯಾಗುತ್ತಿದ್ದಂತೆಯೇ ಕ್ಯಾಬಿನ್‌ ಇರುವ ಬಸ್ಸಿನಲ್ಲಿ ನಾವು ಡ್ರೈವರ್‌ ಹಿಂಭಾಗದ ಮೂರು ಜನ ಕೂರುವ ಸೀಟಿನಲ್ಲಿ ವಿರಾಜಮಾನರಾಗುತ್ತಿದ್ದೆವು. ಕ್ಷಣಮಾತ್ರದಲ್ಲಿ ಬಸ್‌ ಭರ್ತಿಯಾದ ಬಸ್‌ ಶಿರಸಿಯಿಂದ ೧೦ ಗಂಟೆಯೋ, ೧೦.೩೦ಕ್ಕೋ ಯಲ್ಲಾಪುರ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು.
ಬಸ್‌ ಡ್ರೈವರ್‌ ಪಕ್ಕದ ಸೀಟಿನಲ್ಲಿ, ಡ್ರೈವರ್‌ ಹಿಂಭಾಗದಲ್ಲಿ ಕುಳಿತಿರುತ್ತಿದ್ದ ನಮಗಂತೂ ಕಾಣಿಸುವ ದೃಶ್ಯ ವೈಭವಗಳು ಆಹಾ. ಅಂಕುಡೊಂಕಿನ ರಸ್ತೆ, ಡ್ರೈವರ್‌ ಬಸ್‌ ಚಲಾಯಿಸುತ್ತಿದ್ದ ವೈಖರಿಗೆ ತಲೆದೂಗುತ್ತ ಆಗೀಗ ನಮ್ಮ ನಮ್ಮಲ್ಲೆ ಮಾತಾಡಿಕೊಳ್ಳುತ್ತ, ಜಗಳ ಕಾಯುತ್ತ ಸಾಗುತ್ತಿದ್ದೆವು. ತಾರಗೋಡ, ಭೈರುಂಭೆ, ಉಮ್ಮಚಗಿ ದಾಟಿ ಮಂಚೀಕೇರಿ ಬರುವ ತನಕ ನಮ್ಮ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗುತ್ತಿತ್ತು. ಎಷ್ಟು ಸಾಗಿದರೂ ಯಲ್ಲಾಪುರವೇ ಬರುವುದಿಲ್ಲವಲ್ಲ ಎಂದು ಆಗೀಗ ಗೊಣಗುತ್ತ, ಮಧ್ಯ ಮಧ್ಯದಲ್ಲಿ ತೂಕಡಿಸುತ್ತ, ಕಿರು ನಿದ್ದೆ ಮಾಡುತ್ತ ಏಳುತ್ತಿದ್ದೆವು. ಅಮ್ಮ-ದೊಡ್ಡಮ್ಮ ನಿರಾತಂಕವಾಗಿ, ಬಿಡುವಿಲ್ಲದಂತೆ ಮಾತಾಡುತ್ತ ಬರುತ್ತಿದ್ದರು. ʼಇನ್ನೇನು ಮಂಚೀಕೇರಿ ದಾಟಿ ಬೇಡ್ತಿ ಸೇತುವೆ ಬಂತೆಂದರೆ ಧಿಗ್ಗನೆ ಎದ್ದು ಕುಳಿತುಕೊಳ್ಳುತ್ತಿದ್ದೆವು.
ಬೇಡ್ತಿ ನದಿ ಸೇತುವೆ ಅಂದಿನಿಂದ ಇಂದಿನವರೆಗೂ ನಮಗೊಂದು ವಿಸ್ಮಯವೇ. ಅಂಕುಡೊಂಕಿನ ಇಳುಕಲನ್ನು ಹಾದು ಬಂದು ಉದ್ದನೆಯ ಆದರೆ ಅಗಲದಲ್ಲಿ ಸಣ್ಣದಾಗಿರುವ ಈ ಸೇತುವೆಯ ಮೇಲೆ ಬಸ್‌ ಸಾಗುತ್ತಿದ್ದಾಗ ಬೇಡ್ತಿನದಿಯಲ್ಲಿ ನೀರಿದೆಯೇ ಎಂದು ನೋಡುವ ತವಕ ನಮಗೆಲ್ಲ. ಅಘನಾಶಿನಿಯಲ್ಲಿ ಎಂತಹ ಸಮಯದಲ್ಲೂ ನೀರು ಬತ್ತುವುದಿಲ್ಲ ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಪಕ್ಕದಲ್ಲಿದ್ದ ಗಿರೀಶಣ್ಣ ಶರಾವತಿ ನದಿ ಎಷ್ಟು ದೊಡ್ಡ ಗೊತ್ತಾ.. ಅದರಲ್ಲಿ ಅಷ್ಟು ನೀರಿದೆ, ಇಷ್ಟು ನೀರಿದೆ ಎನ್ನುತ್ತಿದ್ದ. ಬೇಡ್ತಿ ಸೇತುವೆಯ ಕೆಳಗೆ ಬತ್ತಿದ ನದಿ, ಖಾಲಿ ಖಾಲಿ ಕಲ್ಲು ಹಾಸು ನಮ್ಮನ್ನು ಎಷ್ಟು ನಿರಾಸೆಗೊಳಿಸುತ್ತಿತ್ತೆಂದರೆ ಛೇ.. ಇದನ್ನು ಯಾರಾದರೂ ನದಿ ಎನ್ನುತ್ತಾರಾ? ನೀರಿಲ್ಲದ ಈ ನದಿಗೆ ಯಾಕಾದರೂ ಸೇತುವೆ ಕಟ್ಟುತ್ತಾರೋ ಎನ್ನಿಸುತ್ತಿತ್ತು. ಮಳೆಗಾಲದಲ್ಲಿ ಬೇಡ್ತಿಯ ಅಬ್ಬರ ನಮಗೇನು ಗೊತ್ತಿತ್ತು ಹೇಳಿ..
ಬೇಡ್ತಿ ನದಿ ದಾಟಿದ್ದೇ ತಡ ನಮಗೆ ಉತ್ಸಾಹ ಬರುತ್ತಿತ್ತು. ಯಾವಾಗ ಉಪಳೇಶ್ವರ ದಾಟಿದೆವೋ ನಾವು ಕೂತಲ್ಲಿ ಕೂರುತ್ತಿರಲಿಲ್ಲ.. ನಿಂತಲ್ಲಿ ನೀಲ್ಲುತ್ತಿರಲಿಲ್ಲ. ಇನ್ನೇನು ಯಲ್ಲಾಪುರ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ದೊಡ್ಡ ಎಪಿಎಂಸಿ ನಮ್ಮನ್ನು ಚಕಿತಗೊಳಿಸುತ್ತಿತ್ತು. ಬೆಳಿಗ್ಗೆ ತಿಂಡಿ ತಿಂದ ನಂತರ ನಾವೇನೂ ತಿಂದಿಲ್ಲ ಎನ್ನುವುದು ನೆನಪಾಗುತ್ತಿದ್ದಂತೆ ಹಸಿವೂ ಕಾಡುತ್ತಿತ್ತು. ಇನ್ನೇನು ಯಲ್ಲಾಪುರ ಬಂದೇ ಬಿಡ್ತಲ್ಲ.. ಅಜಮಾಸು ೧೨ ಗಂಟೆಯೋ ಹನ್ನೆರಡೂ ಕಾಲೋ ಆಗಿರುತ್ತಿತ್ತು. ಮತ್ತೊಮ್ಮೆ ಯಲ್ಲಾಪುರದಲ್ಲಿ ಬಸ್‌ ಖಾಲಿ ಖಾಲಿ.. ಆದರೆ ಬಸ್‌ನಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನರು ಯಲ್ಲಾಪುರದಲ್ಲಿ ಕಾಯುತ್ತಿರುತ್ತಾರೆ ಎನ್ನುವುದು ನಮಗೆ ಅಲ್ಲಿಗೆ ಹೋದ ನಂತರವೇ ಗೊತ್ತಾಗುತ್ತಿದ್ದುದು.
ರಶ್ಶಿನ ನಡುವೆ ಸೀಟಿನಲ್ಲಿ ಬ್ಯಾಗ್..‌ ಕರ್ಚೀಫ್‌ ಟವೇಲ್‌ ಎಲ್ಲ ಇಟ್ಟು ನಾವು ಬಸ್ಸಿನಿಂದ ಇಳಿಯುತ್ತಿದ್ದೆವು. ಅಲ್ಲಿರುವ ಬಸ್‌ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಇಡ್ಲಿಯೋ, ಬನ್‌ ತಿಂದು ಕಷಾಯ ಕುಡಿದರೆ ನಮ್ಮ ಹೊಟ್ಟೆ ತಂಪಾಗುತ್ತಿತ್ತು. ಮತ್ತೆ ರಶ್‌ ಇರುವ ಬಸ್ಸಿನಲ್ಲಿ ಒದ್ದಾಡಿ ಗುದ್ದಾಡಿ ನಮ್ಮ ಸೀಟ್‌ ಇರುವ ಜಾಗಕ್ಕೆ ಬರುವ ವೇಳೆಗೆ ಉಸ್ಸಪ್ಪಾ ಎನ್ನಿಸುತ್ತಿತ್ತು.
ಅಪ್ಪನ ಜತೆ ಬರಬಳ್ಳಿಗೆ ಹೋಗುವಾಗ ಹೀಗೆ ಆಗುತ್ತಿರಲಿಲ್ಲ. ಯಾವು ಯಾವುದೋ ಬಸ್‌, ಟೆಂಪೋಗಳ ಮೂಲಕ ಯಲ್ಲಾಪುರಕ್ಕೆ ಅಪ್ಪ ನಮ್ಮನ್ನು ಕರೆದುಕೊಂಡು ಬರುತ್ತಿದ್ದ. ಯಲ್ಲಾಪುರದಲ್ಲಿ ಬರಬಳ್ಳಿ ಬಸ್‌ ಈಗ ಬರುತ್ತೆ, ಆಗ ಬರುತ್ತೆ ಎಂದು ನಾವು ಕಾಯುತ್ತ ಹೈರಾಣಾಗುತ್ತಿದ್ದೆವು. ಒಂದು ವೇಳೆ ಬರಬಳ್ಳಿಗೆ ಹೋಗುವ ಬಸ್‌ ಯಲ್ಲಾಪುರ ನಿಲ್ದಾಣಕ್ಕೆ ಬಂದೇ ಬಿಟ್ಟಿತು ಅಂದ್ಕೊಳ್ಳಿ ಮೊದಲು ಸೀಟ್‌ ಹಿಡಿಯುವುದಕ್ಕೆ ಓಡುತ್ತಿದ್ದೆವು. ಆಗ ನನ್ನ ತಂಗಿ ಪುಟ್ಟ (ಐದು ವರ್ಷ) ಇದ್ದಳೇನೋ. ಅಪ್ಪ ಆಕೆಯನ್ನು ಬಸ್ಸಿನ ಗ್ಲಾಸ್‌ ತೆಗೆದು ಕಿಟಕಿ ಮೂಲಕ ಒಳಕ್ಕೆ ಕಳಿಸುತ್ತಿದ್ದ. ಆಕೆ ಸೀಟ್‌ ಹಿಡಿದುಕೊಳ್ಳುತ್ತಿದ್ದಳು.
******
ನಲವತ್ತು ಜನ ಹಿಡಿಯುವ ಯಲ್ಲಾಪುರ-ದೇಹಳ್ಳಿ-ಬರಬಳ್ಳಿ ಬಸ್ಸಿನಲ್ಲಿ ಕನಿಷ್ಟವೆಂದರೂ ಅರವತ್ತು ಜನರು ತುಂಬಿರುತ್ತಿದ್ದರು. ಉಸಿರಾಡಲೂ ಜಾಗವಿಲ್ಲವೇನೋ ಎಂಬಂತಾಗುತ್ತಿತ್ತು. ಇನ್ನೂ ಎಷ್ಟು ಹೊತ್ತಿಗೆ ಬಸ್‌ ಹೊರಡುತ್ತೆ? ಎಂಬ ಕಾತುರ, ರೇಜಿಗೆ ಎಲ್ಲ ಓಟ್ಟೊಟ್ಟಿಗೆ ಆಗುತ್ತಿತ್ತು. ಅಮ್ಮ-ದೊಡ್ಡಮ್ಮನಿಗಂತೂ ಬರಬಳ್ಳಿಯ ನೆಂಟರು, ಸಂಬಂಧಿಕರ ಬಳಗವೇ ಬಸ್ಸಿನಲ್ಲಿ ಸಿಕ್ಕು ಉಭಯಕುಶಲೋಪರಿಗಳು ಬಿಡುವಿಲ್ಲದಂತೆ ನಡೆಯುತ್ತಿದ್ದವು. ಬಸ್ಸಿನಲ್ಲಿ ಸಿಗುವ ಗುಡ್ಡೆ ನರಸಿಂಹಣ್ಣ, ಬಾರೆ ಶಿವರಾಮ ಭಾವ, ಗುಡ್ಡೆಮನೆಯ ವಿಶ್ವೇಶ್ವರ (ಮಾವ), ಜಪದಮನೆ ಡಾಕ್ಟರು, ಡಿ ಎನ್.‌ ಗಾಂವ್ಕಾರ್‌, ಪಾಟೀಲ ರಾಮಣ್ಣ ಹೀಗೆ ಇನ್ನೂ ಹಲವರು ಬಸ್ಸಿನಲ್ಲಿ ಸಿಕ್ಕಿ ʻಅರೇ ಗಂಗೂ.. ಯಾವಾಗ ಬೈಂದೆ.. ಉದಿಯಪ್ಪಾಗ ಮನಿಂದ ಹೊರಟಿದ್ಯ..ʼ ಎಂದು ಕೇಳುವಾಗ ನಮಗಂತೂ ಬಸ್ಸಿನ ತುಂಬೆಲ್ಲ ನಮ್ಮವರೇ ಇದ್ದಾರಲ್ಲ ಎನ್ನಿಸುತ್ತಿತ್ತು. ಯಲ್ಲಾಪುರದಿಂದ ಬಿಸಗೋಡ, ದೇಹಳ್ಳಿ, ಕಟ್ಟಿಗೆ, ಸಾತೊಡ್ಡಿ ಮಾರ್ಗವಾಗಿ ಬರಬಳ್ಳಿಗೆ ತೆರಳುವ ಬಸ್‌ ಸಂಖ್ಯೆ. **** ಎಂದರೆ ಮೈಕಿನಲ್ಲಿ ಹೇಳುತ್ತಿದ್ದಂತೆ ಇನ್ನೇನು ಬಸ್‌ ಹೊರಡುತ್ತದೆ ಎನ್ನುವ ಸಮಾಧಾನ ನಮಗೆ. ಅಷ್ಟೆರಲ್ಲಿ ಒಬ್ಬ ಕುಳ್ಳನೆಯ ಆದರೆ ಸದೃಢ ಗಾತ್ರದ ವ್ಯಕ್ತಿ ಐಸ್‌ ಕ್ಯಾಂಡಿ ಗಾಡಿಯನ್ನು ತಳ್ಳಿಕೊಂಡು ಬರುತ್ತಿದ್ದ. ಅದನ್ನು ಕೊಡಿಸೆಂದು ನಾವು ಹರಪೆ ಮಾಡುತ್ತಿದ್ದೆವು. ನಮ್ಮ ಹಟಕ್ಕೆ ಮಣಿದು ಕೊನೆಗೂ ಐಸ್ಕ್ರೀಂ ಕೊಡಿಸುತ್ತಿದ್ದರು.
ಸುಡುಬಿಸಿಲಿನ ಮದ್ಯಾಹ್ನದ ಒಂದು ಗಂಟೆ ಸಮಯವನ್ನು ಮೀರುವ ವೇಳೆಗೆ ಬಸ್‌ ಡ್ರೈವರ್‌ ಬಸ್ಸಿಗೆ ಹತ್ತಿಕೊಂಡು ಎರಡು ಸಾರಿ ಹಾರನ್‌ ಭಾರಿಸಿ ನಾವು ಹೊರಡುತ್ತಿದ್ದೇವೆ, ಎಲ್ಲರೂ ಹತ್ತಿಕೊಳ್ಳಿ ಎಂದು ಸಾರುತ್ತಿದ್ದಂತೆಯೇ ಎಲ್ಲರೂ ಓಡಿ ಬಂದು ಬಸ್‌ ಏರುತ್ತಿದ್ದರು. ಬಸ್ಸಿನ ತುಂಬೆಲ್ಲ ನಮ್ಮ ನೆಂಟರ ಬಲಗವೇ ಇರುತ್ತಿದ್ದುದರಿಂದ ನಮ್ಮ ಟಿಕೆಟನ್ನು ಯಾರು ತೆಗೆಸಿದರೋ.. ಕಂಡಕ್ಟರ್‌ ಬಳಿ ಅಮ್ಮ-ದೊಡ್ಡಮ್ಮ ಹಣ ಕೊಡಲು ಹೋದಾಗ ನಿಮ್ಮ ಟಿಕೆಟ್‌ ಮಾಡಿ ಆಗಿದೆ ಎನ್ನುತ್ತಿದ್ದರು. ಅಮ್ಮ-ದೊಡ್ಡಮ್ಮ ಬಸ್ಸಿನಲ್ಲಿ ಹಿಂದೆ ತಿರುಗಿ ನೋಡಿದರೆ ಯಾವುದೋ ನೆಂಟರು ತಲೆಯಾಡಿಸಿ, ಸನ್ನೆ ಮಾಡುತ್ತಿದ್ದರು.
ಯಲ್ಲಾಪುರದಲ್ಲಿ ಇನ್ನೂ ಹೈವೆ ಆಗಿರದ ಸಮಯ ಅದು. ವಾಹನಗಳೆಲ್ಲ ಈಗಿನ ಸಂತೆ ಜಅದ ಮೂಲ ಬಸ್‌ ನಿಲ್ದಾಣದ ಬಳಿ ಬಂದೇ ಸಾಗುತ್ತಿತ್ತು. ಯಲ್ಲಾಪುರ ನಿಲ್ದಾಣದಿಂದ ನಿಧಾನವಾಗಿ ಹೊರಡುವ ಬಸ್‌ ಕಿರು ರಸ್ತೆಯಲ್ಲಿ ಸಾಗಿ ಮುಂದಡಿ ಇಡುತ್ತಿದ್ದಂತೆಯೆ ಅಗೋ ಜೋಡುಕೆರೆ, ಅಲ್ಲಿ ನೋಡು ಹೋಲಿ ರೋಜರಿ ಹೈಸ್ಕೂಲು.. ಆ ಹೈಸ್ಕೂಲಿಗೆ ಕಟ್ಟಿಕೊಂಡ ಜೇನು ನೋಡು.. ಅರೆರೆ ಸಾತೊಡ್ಡಿ ಜೋಗಕ್ಕೆ ಎಷ್ಟು ದೊಡ್ಡ ಬೋರ್ಡ್‌ ಹಾಕಿದ್ದಾರಲ್ಲ.. ಎಂಬ ಮಾತುಗಳೊಡನೆ ಬಸ್ಸಿನೊಳಗಿದ್ದ ನಾವು ಮುಂದಕ್ಕೆ ಸಾಗುತ್ತಿದ್ದೆವು. ಬಸ್‌ ಹುಬ್ಬಳ್ಳಿ ರಸ್ತೆಯಿಂದ ತಿರುಗಿ ಬಿಸಗೋಡ್‌ ರಸ್ತೆ ಹಿಡಿಯುವ ವೇಳೆಗಾಗಲೇ ಪಕ್ಕದಲ್ಲಿದ್ದ ಗಿರೀಶಣ್ಣ ʻಸಾತೋಡ್ಡಿಗೆ ಯಾಕೆ ಸಾತೊಡ್ಡಿ ಜೋಗ ಅಂತ ಹಾಕಿದ್ದಾರೆ. ಅದು ಸಾತೊಡ್ಡಿ ಜಲಪಾತ ಅಲ್ಲವಾ? ಜೋಗ ಅಂದ್ರೆ ಜೋಗ ಜಲಪಾತ ಮಾತ್ರ.. ಯಲ್ಲಾಪುರದವರು ಎಲ್ಲ ಜಲಪಾತಗಳಿಗೂ ಜೋಗ ಎನ್ನುತ್ತಾರೆ.. ಆದರೆ ಜಲಪಾತ ಅಂತ ಕರೀಬೇಕಲ್ಲವಾ..ʼ ಎಂಬ ತರ್ಕವನ್ನು ನಮ್ಮೆದುರು ಹೂಡುತ್ತಿದ್ದ. ಹೌದಿರಬಹುದು ಎಂದುಕೊಂಡು ನಾವು ಸುಮ್ಮನಾಗುತ್ತಿದ್ದೆವು. ಆದರೆ ಈಗ ಗೊತ್ತಾಗಿದ್ದೆಂದರೆ ಸಾತೊಡ್ಡಿ ಜಲಪಾತಕ್ಕೆ ಮಿನಿ ಜೋಗಜಲಪಾತ ಎಂಬ ಹೆಸರಿದೆ ಎನ್ನುವುದು. ಬಿಡಿ ಆಗ ಗೊತ್ತಿದ್ದಿದ್ದರೆ ಗಿರೀಶಣ್ಣನ ಎದುರು ವಾದ ಮಾಡಬಹುದಿತ್ತು!
ಫುಲ್‌ ಪ್ಯಾಕ್‌ ಆಗಿದ್ದ ಬಸ್‌ ಅದ್ಯಾವುದೋ ದೇವಸ್ಥಾನವನ್ನು ದಾಟಿ ಕಾರೆಮನೆ ಕ್ರಾಸ್‌ ದಾಟಿ ಮುಂದಕ್ಕೆ ಹೊರಟಿತು. ಅಲ್ಲೆಲ್ಲೋ ಬಸ್‌ ಬರಬಳ್ಳಿಗೆ ಹೋಗುವ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿಕೊಂಡಾಗ ನಮ್ಮ ಮನದಲ್ಲೇನೋ ಗಾಬರಿ. ಅರೆ ಇದೆಲ್ಲೋ ಬೇರೆ ಕಡೆ ಹೊರಟಿತಲ್ಲ! ಆ ಬಸ್‌ ಸೀದಾ ಬಿಸಗೋಡ್‌ಗೆ ಹೋಗುತ್ತಿತ್ತು. ಅಲ್ಲಿ ಆಗ ದೊಡ್ಡ ಮ್ಯಾಂಗನಿಸ್‌ ಗಣಿ ಇತ್ತು. ಅಲ್ಲಿ ರಾಜ್ಯದ, ಹೊರ ರಾಜ್ಯದ ಕಾರ್ಮಿಕರೆಲ್ಲ ಕೆಲಸ ಮಾಡುತ್ತಿದ್ದರು. ಅಲ್ಲಿ ತೆಗೆದ ಮ್ಯಾಂಗನಿಸ್‌ ಅದಿರನ್ನು ಬೇರೆ ದೇಶಕ್ಕೆಲ್ಲ ರಫ್ತು ಮಾಡುತ್ತಿದ್ದರಂತೆ. ಬೀಸಗೋಡಿಗೆ ಹೋಗಿ ಅಲ್ಲೊಂದು ಸರ್ಕಲ್‌ನಲ್ಲಿ ಸುತ್ತು ಹಾಕಿ ನಿಲ್ಲುತ್ತಿತ್ತು. ಅರ್ಧಕ್ಕರ್ಧ ಬಸ್‌ ಖಾಲಿಯಾಗುತ್ತಿದ್ದಂತೆ ಮರಳಿ ನಾಲ್ಕೈದು ಕಿಲೋಮೀಟರ್‌ ಸಾಗಿ ಬರಬಳ್ಳಿಗೆ ತೆರಳುವ ಮಾರ್ಗ ಹಿಡಿಯುತ್ತಿತ್ತು. ನಮ್ಮ ಜಿವಾದ ಪ್ರಯಾಣ ಈಗ ಶುರುವಾಗುತ್ತಿತ್ತು.
ಬೀಸಗೋಡ್‌ ಕ್ರಾಸಿನಿಂದ ಬರಬಳ್ಳಿಗೆ ೧೮ ಕಿಲೋಮೀಟರ್.‌ ರಸ್ತೆಯಂತೂ ಅಬ್ಬಬ್ಬಾ ದೇವರೆ.. ಎನ್ನುವಂತಿತ್ತು. ಎರಡು ಗಂಟೆಯಿರಬೇಕು ಆನಗೋಡ್‌ ದಾಟಿ ಬಸ್‌ ದೇಹಳ್ಳಿ ತಲುಪಿದ ತಕ್ಷಣ ಡ್ರೈವರ್‌ ಬಸ್‌ ಇಳಿದು ನಾಪತ್ತೆಯಾಗುತ್ತಿದ್ದ. ಕಂಡಕ್ಟರ್‌ ʻಹತ್‌ ನಿಮಿಷ ಟೈಮಿದೆ.. ಹೊಟ್ಟೆಗೆ ಹಾಕೋರು ಹಾಕ್ಕೋಳ್ಳಿ..ʼ ಎನ್ನುತ್ತಿದ್ದ. ಮದ್ಯಾಹ್ನದ ಬಸ್‌ ಅಲ್ವಾ.. ಡ್ರೈವರ್‌ ದೇಹಳ್ಳಿಯಲ್ಲಿ ಊಟಕ್ಕೆ ಹೋಗುತ್ತಿದ್ದ. ದೇಹಳ್ಳಿಯಲ್ಲಿ ಕೆಲವರು ಹೊಟೆಲ್‌ಗೆ ಹೋದರೂ ನಾವು ಬಸ್ಸಿನಲ್ಲೇ ಕುಳಿತಿರುತ್ತಿದ್ದೆವು. ಅದೇ ವೇಳೆಗೆ ಬಳಗಾರದಿಂದ ಬರುವ ಇನ್ನೊಂದು ಬಸ್‌ ನಮಗೆ ಸಿಕ್ಕು, ಆ ಬಸ್ಸಿನ ಡ್ರೈವರ್‌ ಕೂಡ ಊಟಕ್ಕೆ ಇಳಿದು ಹೋಗುವ ಕಾರ್ಯವೂ ನಡೆಯುತ್ತಿತ್ತು.
ಹದಿನೈದೋ-ಇಪ್ಪತ್ತೋ ನಿಮಿಷದಲ್ಲಿ ಊಟ ಮುಗಿಸುತ್ತಿದ್ದ ಡ್ರೈವರ್‌ ಬಸ್ಸನ್ನು ಏರಿ ಮತ್ತೆ ಹಾರನ್‌ ಭಾರಿಸುತ್ತಿದ್ದ. ಎಲ್ಲರೂ ಬಸ್‌ ಏರಿ ಬಸ್‌ ಹೊರಡುತ್ತಿತ್ತು. ಅಲ್ಲಿಂದ ಶುರು ನೋಡಿ ದೊಡ್ಡ ಈಳಿಜಾರು ರಸ್ತೆ. ಕೆಲವು ಕಿಲೋಮೀಟರ್‌ ಅಂತರದಲ್ಲಿ ಗಣೇಶಗುಡಿ ಎಂಬ ಊರು ಸಿಗುತ್ತಿತ್ತು. ಇಲ್ಲೊಂದು ಗಣೇಶನ ದೇವಸ್ಥಾನ ಇರುವ ಕಾರಣ ಗಣೇಶಗುಡಿ ಎಂದೇ ಹೆಸರಾದ ಊರು ಅದು. ಆಗ ಗಣೇಶಗುಡಿಯ ತನಕ ಟಾರು ರಸ್ತೆ ಇತ್ತು. ಅಲ್ಲಿಂದ ಮುಂದೆ ಸಂಪೂರ್ಣ ಖಡಿ ರಸ್ತೆ. ಗಣೇಶಗುಡಿಯ ತನಕ ಮಳೆಗಾಲದಲ್ಲೂ ಬಸ್‌ ಬರುತ್ತಿತ್ತು. ಆ ನಂತರ ಏನಿದ್ದರೂ ಡ್ರೈವರ್‌ ಮರ್ಜಿ. ಡ್ರೈವರ್‌ ಗೆ ಮನಸ್ಸಿರದಿದ್ದರೆ ಗಣೇಶಗುಡಿಯಲ್ಲಿಯೇ ಬಸ್‌ ವಾಪಾಸದರೂ ಆಗಬಹುದಿತ್ತು. ಕೆಲವೊಮ್ಮೆ ಪ್ರಯಾಣಿಕರೆಲ್ಲ ಡ್ರೈವರ್‌ ಬಳಿ ಕಾಡಿ ಬೇಡಿ ದಮ್ಮಯ್ಯ ದಾತಾರ ಹಾಕಿ ಬಸ್ಸನ್ನು ಮುಂದೆ ಬಿಡಿಸಿಕೊಂಡು ಹೋಗಿರುವ ಸಂದರ್ಭಗಳೂ ಇತ್ತು. ನಮ್ಮ ಪುಣ್ಯಕ್ಕೆ ಬಸ್‌ ಗಣೇಶಗುಡಿಯಲ್ಲಿ ವಾಪಾಸ್‌ ಯಾವತ್ತೂ ಆಗಿರಲಿಲ್ಲ.
ಮೊದಲೇ ನಿಧಾನಗತಿಯಲ್ಲಿದ್ದ ಬಸ್‌ ಕಚ್ಚಾ ರಸ್ತೆ ಶುರುವಾದ ಕೂಡಲೇ ಇನ್ನಷ್ಟು ನಿಧಾನವಾಗುತ್ತಿತ್ತು. ಕಟ್ಟಿಗೆ ಊರಿಗೆ ಬರುವ ವೇಳೆಗೆ ಅದೆಷ್ಟು ಸ್ಲೋ ಎಂದರೆ ಗಂಟೆಗೆ ಕನಿಷ್ಟ ಎಂಟು ಕಿಲೋಮೀಟರ್‌ ಇರಬಹುದೇನೋ ಅನ್ನಿಸುತ್ತಿತ್ತು. ಅದೆಷ್ಟು ಕರ್ವಿಂಗುಗಳು.. ಅದೆಷ್ಟು ಭಯಾನಕ ಇಳಿಜಾರು.. ರಸ್ತೆ ಪಕ್ಕದಲ್ಲಿ ಅಲ್ಲೆಲ್ಲೋ ಕಾಣುತ್ತಿದ್ದ ದೈತ್ಯ ಬಂಡೆಗಲ್ಲು.. ಈ ಕಲ್ಲು ಈಗ ಬಿದ್ದರೆ ಏನ್‌ ಮಾಡೋದು,, ಈ ಮರ ಈಗ ಬಿದ್ದರೆ ಏನಾಗಬಹುದು... ಹೀಗೆ ನಾನಾ ಆಲೋಚನೆಗಳು.. ಉರಿಬಿಸಿಲಾದರೂ ದಟ್ಟ ಮರಗಳ ಕಾರಣ ಸೂರ್ಯನ ಕಿರಣಗಳು ಭೂಮಿಗೆ ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದವು. ಅಲ್ಲೆಲ್ಲೋ ಶಿವಪುರ ಎಂಬ ಬೋರ್ಡನ್ನು ಕಂಡೆವು. ಅರೇ ಶಿವಪುರ ಬೋರ್ಡಿನ ಮೇಲೊಂದು ಶಿವಲಿಂಗದ ಚಿತ್ರ ಬಿಡಿಸಿದ್ದಾರಲ್ಲ! ಎಂಬ ಅಚ್ಚರಿ.. ʻಅಮ್ಮ ಶಿವಪುರ ಎಲ್ಲಿ..ʼ ಎಂದು ಕೇಳಿದರೆ ʻಮಗಾ ಅದು ಕಾಳಿ ನದಿಯ ಆಚೆ ದಡದಲ್ಲಿದೆ.. ಅಲ್ಲಿಗೆ ಹೋಗೋದು ಕಷ್ಟ.. ದೋಣಿ ದಾಟಿ ಹೋಗಬೇಕು..ʼ ಎಂಬ ಉತ್ತರ ಅಮ್ಮನಿಂದ ಬರುತ್ತಿತ್ತು.
ಘಟ್ಟವನ್ನು ಇಳಿದಂತೆಲ್ಲ ಬಸ್‌ ಡ್ರೈವರ್‌ ಅಕ್ಕಪಕ್ಕದ ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದುದನ್ನು ನೋಡಿ ʻಎಂತ ನಾಟಾ ಬಿದ್ದಿದೆ ಮಾರಾಯಾ.. ವಾಪಾಸ್‌ ಬರುವಾಗ ಬಸ್ಸಲ್ಲಿ ಹಾಕ್ಕೊಂಡು ಹೋಗ್ವಾ..?ʼ ಎಂದು ಕಂಡಕ್ಟರ್‌ ಬಳಿ ತಮಾಷೆಯಿಂದ ಹೇಳುತ್ತಿದ್ದ. ಕೆಲವು ಸಾರಿ ಅತಿಯಾದ ಸೆಖೆಯ ಕಾರಣ ಬಸ್‌ ಡ್ರೈವರ್‌ ತನ್ನ ಮೇಲಂಗಿ ಕಳಚಿ ಬನಿಯನ್‌ ಹಾಕಿಕೊಂಡೇ ವಾಹನ ಚಾಲನೆ ಮಾಡಿದ್ದೂ ಇದೆ.
ಅಂತೂ ಇಂತೂ ಸಾತೊಡ್ಡಿಗೆ ಬಸ್‌ ಬರುವ ವೇಳೆಗೆ ಮೂರೂವರೆ-ಮೂರು ಮುಕ್ಕಾಲು ದಾಟುತ್ತಿತ್ತು. ಬೇಸಿಗೆಯ ಕೆಲವು ತಿಂಗಳುಗಳನ್ನು ಬಿಟ್ಟರೆ ಉಳಿದ ಹೆಚ್ಚಿನ ತಿಂಗಳುಗಳು ಸಾತೊಡ್ಡಿಯ ತನಕ ಮಾತ್ರ ಬಸ್‌ ಬರುತ್ತಿತ್ತು. ಆ ಸಂಮಯದಲ್ಲೆಲ್ಲ ಯಲ್ಲಾಪುರ-ಸಾತೊಡ್ಡಿ-ಯಲ್ಲಾಪುರ ಎಂಬ ಹೆಸರಿನೊಂದಿಗೆ ಬಸ್‌ ಓಡಾಟ ಮಾಡುತ್ತಿತ್ತು. ಸಾತೊಡ್ಡಿಯ ತನಕ ಬಸ್‌ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಂದ ಬರಬಳ್ಳೀಯ ತನಕ ನಮಗೆಲ್ಲ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಬಿಸಿಲಿನಿಂದ ಕಾದು ಬಿಸಿಯಾದ ಉಸುಕು ಮಣ್ಣಿನಿಂದ ಒಡಗೂಡಿದ ರಸ್ತೆಯಲ್ಲಿ ಕನಿಷ್ಟ ೨-೩ ಕಿಲೋಮೀಟರ್‌ ನಡೆದು ಬರಬಳ್ಳಿಗೆ ತಲುಪಬೇಕಿತ್ತು. ಹೆಜ್ಜೆ ಇಟ್ಟರೆ ಪಾದ ಮುಚ್ಚುವಷ್ಟು ಧೂಳಿನ ರಸ್ತೆ. ಸಾತೊಡ್ಡಿಯಿಂದ ಕೆಲವೆ ಮಾರು ದೂರದಲ್ಲಿ ಸಾತೊಡ್ಡಿ ಜಲಪಾತದ ಹಳ್ಳಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಈ ಸೇತುವೆ ನಿರ್ಮಾಣವಾದಾಗ ಬಸ್‌ ಬರಬಳ್ಳಿ ತಲುಪುತ್ತಿತ್ತು. ಇಲ್ಲವಾದಲ್ಲಿ ಸಾತೊಡ್ಡಿಯಲ್ಲೇ ಬಸ್‌ ವಾಪಾಸಾಗುತ್ತಿತ್ತು. ಈ ಹಳ್ಳಬನ್ನು ದಾಟಿ ರಸ್ತೆ ಪಕ್ಕ ಕೊಂಚ ದೂರದಲ್ಲಿ ಹರಿಯುತ್ತಿದ್ದ ಕಪ್ಪು ಬಣ್ಣದ ಕಾಳಿ ನದಿಯನ್ನು ನೋಡುತ್ತ, ಇನ್ನೊಂದು ಕಡೆ ದೈತ್ಯ ಬಂಡೆಗಲ್ಲುಗಳ ಬೆಟ್ಟವನ್ನು ಕಣ್ತುಂಬಿಕೊಳ್ಳುತ್ತ ನಾವು ಹೋಗುತ್ತಿದ್ದೆವು. ಅಲ್ಲೆಲ್ಲೋ ಒಂದು ಕಡೆ ಬಾರೆ ಶಿವರಾಮ ಭಾವನ ಮನೆ ಇತ್ತು. ಅಲ್ಲೊಂದು ಕಡೆ ರಸ್ತೆ ಕೊಡಸಳ್ಳಿ ಕಡೆಗೆ ಕವಲಾಗುತ್ತಿತ್ತು. ದಟ್ಟ ಬೇಸಿಗೆಯಲ್ಲಿ ಬರಬಳ್ಳಿ ಬಸ್‌ ಮುಂದಕ್ಕೆ ಕೊಡಸಳ್ಳಿ ತನಕವೂ ಹೋಗಿ ಬರುತ್ತಿತ್ತೆನ್ನಿ.
ಬಾರೆ ಶಿವರಾಮ ಭಾವನ ಮನೆ ನಂತರ ಒಂದು ಕಿರುಹಳ್ಳ ಇದ್ದು ಅದನ್ನು ದಾಟುವ ಬಸ್‌ ತೋಟದ ಪಕ್ಕದಲ್ಲಿನ ಕಚ್ಚಾ ರಸ್ತೆಯಲ್ಲಿ ಏದುಸಿರು ಬಿಡುತ್ತ ಬರಬಳ್ಳಿ ಬಲಮುರಿ ಗಣಪತಿ ದೇವಸ್ಥಾನದ ಅಂಗಳಕ್ಕೆ ಬಂದು ನಿಲ್ಲುವ ಹೊತ್ತಿಗೆ ನಮಗಂತೂ ಸ್ವರ್ಗ ಕೈಗೆ ಸಿಕ್ಕ ಅನುಭವ. ಸ್ಥಳೀಯರ ಪಾಲಿಗೆ ಮೊಠ ಎಂದು ಕರೆಸಿಕೊಂಡ ದೇವಸ್ಥಾನದ ಬಳಿ ಡ್ರೈವರ್‌ ಇಳಿದು ಕೆಲಕಾಲ ವಿಶ್ರಮಿಸಿ, ಸ್ಥಳೀಯರೊಂದಿಗೆ ಹರಟೆ ಹೊಡೆದು ನಂತರ ಗಣಪತಿ ದೇವಸ್ಥಾನಕ್ಕೆ ತೆರಳಿ ಗಂಟೆ ಹೊಡೆದು ನಮಿಸಿ ವಾಪಾಸ್‌ ಯಲ್ಲಾಪುರ ಕಡೆಗೆ ತೆರಳುತ್ತಿದ್ದ.
ಯಲ್ಲಾಪುರ ಪಟ್ಟಣದಿಂದ ೩೧-೩೩ ಕಿಲೋಮೀಟರ್‌ ದೂರದ ಬರಬಳ್ಳಿಗೆ ಬಂದು ಹೋಗುತ್ತಿದ್ದ ಈ ಬಸ್‌ ಬಹಳಷ್ಟು ಜನರ ಪಾಲಿಗೆ ಅನಿವಾರ್ಯ ಸಂಪರ್ಕ ಸೇತು ಆಗಿತ್ತು. ಹೊರ ಜಗತ್ತಿನ ಜೊತೆಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಸಾಧನ ಎನ್ನಿಸಿಕೊಂಡಿತ್ತು. ಒಮ್ಮೆಯಂತೂ ಬರಬಳ್ಳಿಯಲ್ಲಿನ ಮಹಿಳೆಯೊಬ್ಬರಿಗೆ ಹೆರಿಗೆ ಅವಧಿ ಮೀರಿ, ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭದಲ್ಲಿ ಆ ಮನೆಯ ನಿವಾಸಿಗಳು ಮಧ್ಯರಾತ್ರಿ ಡ್ರೈವರನ್ನು ಎಬ್ಬಿಸಿ ಬಸ್ಸಿನಲಿ ಕೂರುವಷ್ಟು ಜನರ ದುಡ್ಡನ್ನು ಕಟ್ಟಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕುರಿತು ಹಿರಿಯರಿಂದ ನಾನು ಕೇಳಿದ್ದೇನೆ.
ಒಮ್ಮೊಮ್ಮೆ ಮುರಲಿ, ಇನ್ನೊಮ್ಮೆ ರಾಘವೇಂದ್ರ ಮುಂತಾದ ಹೆಸರಿನ ಡ್ರೈವರುಗಳು ಬರಬಳ್ಳಿಗೆ ಬರುತ್ತಿದ್ದರು. ಹೆಚ್ಚಿನವರು ಬಯಲು ಸೀಮೆಯವರು. ಕಾಡನ್ನೇ ನೋಡಿರದ ಅವರು ದಾರಿಯಲ್ಲಿ ನಮಗಿಂತ ಹೆಚ್ಚು ಬೆರಗು, ಅಚ್ಚರಿಯೊಂದಿಗೆ ಬಸ್‌ ಚಾಲನೆ ಮಾಡುತ್ತಿದ್ದುದು ಇನ್ನೂ ನೆನಪಿದೆ. ಇದೆಂತಹ ಕಾಡಿಗೆ ಬಂದೆನಪ್ಪಾ ಎಂದು ಅಲವತ್ತುಕೊಂಡ ಒಂದೆರಡು ಡ್ರೈವರುಗಳು ನಂತರದ ಸಂದರ್ಭದಲ್ಲಿ ಬರಬಳ್ಳಿ ಟ್ರಿಪ್‌ ತಪ್ಪಿಸಿಕೊಂಡಿದ್ದರ ಬಗ್ಗೆಯೂ ಕೇಳಿದ್ದೆ.
ಬರಬಳ್ಳಿ ದೇವಸ್ಥಾನದ ಬಳಿ ನಾವು ಇಳಿದಿದ್ದೇ ತಡ, ಅಲ್ಲಿಂದ ಅರ್ಧ ಕಿಲೋಮೀಟರ್‌ ದೂರದಲ್ಲಿದ್ದ ಗುಡ್ಡೆಮನೆ ಎಂಬ ಅಜ್ಜನ ಮನೆಗೆ ಪೇರಿ ಕೀಳುತ್ತಿದ್ದೆವು. ಅದೂ ಕೂಡ ಹೇಗೇ ಅಂತೀರಾ, ಬರಬಳ್ಳಿ ಬಸು ಬರುತ್ತಲ್ಲ.. ಥೇಟು ಅದನ್ನು ಅನುಕರಿಸುತ್ತ ಸಾಗುತ್ತಿದ್ದೆವು. ಡ್ರೈವರ್‌ ಬಸ್‌ ಚಾಲನೆ ಮಾಡುತ್ತಿದ್ದ ಬಗೆಯನ್ನು ನಾವೂ ಅನುಕರಿಸಿ, ನಾವೂ ಅಂಗಿಯನ್ನು ಕಳಚಿ ಬಾಯಲ್ಲಿ ʻಬುರ್...‌ ಎನ್ನುತ್ತ... ಆಗಾಗ ಪಾಂವ್..‌ ಪಾಂವ್‌ ಎಂಬ ಹಾರನ್ನು ಹಾಕುತ್ತ ಸಾಗುತ್ತಿದ್ದುದು ಇನ್ನೂ ನೆನಪಿನಲ್ಲಿದೆ. ಅಜ್ಜನಮನೆ ತಲುಪುವ ವೇಳೆಗೆ ಬಸ್ಸಿಗಾದಷ್ಟೇ ಸುಸ್ತು ನಮಗೂ ಆಗಿರುತ್ತಿತ್ತು. ಬೆಳಿಗ್ಗೆ ಹೊರಟ ನಾವು ಹಗಲು ಪೂರ್ತಿ ಪ್ರಯಾಣ ಮಾಡಿ ಬಹುತೇಕ ಸಾಯಂಕಾಲದ ವೇಏಗೆ ಅಜ್ಜನಮನೆ ತಲುಪುತ್ತಿದ್ದೆವು.
ಇದು ನಮ್ಮ ಪಾಲಿನ ಬರಬಳ್ಳಿ ಬಸ್ಸಿನ ಪ್ರಯಾಣದ ನೆನಪು. ಈ ಬರಬಳ್ಳಿ ಬಸ್ಸು ಕೊಡಸಳ್ಳಿ ಡ್ಯಾಂ ಪೂರ್ಣಗೊಂಡು ಬರಬಳ್ಳಿ ಎಂಬ ಸ್ವರ್ಗದ ನಡುವೆ ಇದ್ದ ಊರು ಮುಳುಗುವ ತನಕವೂ ಬರುತ್ತಿತ್ತು. ಈಗ ಊರು ನೀರಿನಡಿಯಲ್ಲಿದೆ. ಬಸ್ಸು ನಮ್ಮ ನೆನಪಿನಲ್ಲಿ ಆಗೀಗ ಸುಳಿಯುತ್ತಿರುತ್ತದೆ.

Monday, November 18, 2024

ಯಕ್ಷಗಾನ-ತಾಳಮದ್ದಲೆಯ ಸ್ವಾರಸ್ಯಕರ ಘಟನೆಗಳು

1960ರ ದಶಕದ ಚಳಿಗಾಲದ ಒಂದು ಸಂಜೆ. ಆಗತಾನೆ ಕರ್ಕಿ ಮೇಳದವರು ಆಟ ಮುಗಿಸಿ ಊರ ಕಡೆ ಹೊರಟಿತ್ತು. ಆಗೆಲ್ಲ ನಡೆದುಕೊಂಡೇ ಊರು ತಲುಪುವುದು ವಾಡಿಕೆ. ಮುಂದಿನ ಆಟ ಎಲ್ಲೋ, ಯಾವಾಗಲೋ ಎಂದು ಮೇಳದ ಮೇಲ್ವಿಚಾರಕರು ಮಾತಾಡಿಕೊಳ್ಳುತ್ತ ಸಾಗಿದ್ದರು. ನಿಧಾನವಾಗಿ ಸೂರ್ಯ ಕಂತಿದ್ದ.
ಬಹಳ ದೂರ ನಡೆದುಕೊಂಡು ಹೋಗುತ್ತಿದ್ದ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ಇನ್ನೂ ತಮ್ಮ ತಮ್ಮ ಊರು ತಲುಪುವುದು ತುಂಬಾ ದೂರ ಉಳಿದಿತ್ತು. ಹೀಗಿದ್ದಾಗ ಅದ್ಯಾವುದೋ ಒಂದು ಊರಿನ ಹೊರವಲಯ, ಅಲ್ಲೊಬ್ಬರು ಮಹನೀಯರು ಈ ಮೇಳದವರನ್ನು ಎದುರಾದರು. ಊಭಯಕುಶಲೋಪರಿಯೆಲ್ಲ ನಡೆಯಿತು.
ಎದುರಾದ ಆಗಂತುಕರು ಮೇಳದ ಬಳಿ ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ಅದಕ್ಕೆ ಮೇಳದವರು ತಮ್ಮ ಕಥೆಯನ್ನೆಲ್ಲ ಹೇಳಿದರು. ಕೊನೆಗೆ ಅಲ್ಲಿ ಸಿಕ್ಕ ಆಗಂತುಕರು, ʻತಮ್ಮೂರಿನಲ್ಲೂ ಒಂದು ಆಟ ಆಡಿʼ ಎಂದರು.
ಮೇಳದವರು ʻಆಟಕ್ಕೆ ಸ್ಥಳ ಬೇಕು.. ಜನ ಎಲ್ಲ ಬರಬೇಕಲ್ಲʼ ಎಂದರು.
ʻಜಾಗ ಎಲ್ಲ ತಯಾರಿದೆ.. ಜನರೂ ಬರುತ್ತಾರೆ. ನೀವು ವೇಷ ಕಟ್ಟಿಕೊಳ್ಳುವ ವೇಳೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ..ʼ ಎಂದರು ಆ ವ್ಯಕ್ತಿ.
ಎಲ್ಲರೂ ಒಪ್ಪಿಕೊಂಡು, ಆ ಆಗಂತುಕನ ಹಿಂಬಾಲಿಸಿ ಮುನ್ನಡೆದರು. ಅರ್ಧ ಫರ್ಲಾಂಗಿನಷ್ಟು ದೂರ ಸಾಗಿದ ನಂತರ ಅಲ್ಲೊಂದು ಕಡೆ ಯಕ್ಷಗಾನದ ಆಟ ನಡೆಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೇಳದ ಮಹನೀಯರು ಮೆಚ್ಚುಗೆ ಸೂಚಿಸಿ, ವೇಷ ಕಟ್ಟಲು ಹೊರಟರು.
ಕೆಲ ಸಮಯದಲ್ಲಿ ವೇಷ ಕಟ್ಟಿ ಮುಗಿಯಿತು. ಭಾಗವತರು ಹಾಡಲು ಶುರುಮಾಡಿದರು.
ಕೆಲ ಸಮಯದ ತನಕ ಆಟ ಸಾಂಗವಾಗಿ ನೆರವೇರಿತು. ಅಷ್ಟರಲ್ಲಿ ಮುಖ್ಯ ಪಾತ್ರಧಾರಿಯ ಪ್ರವೇಶವೂ ನಡೆಯಿತು. ಚಂಡೆಯ ಸದ್ದು ಮುಗಿಲು ತಲುಪುವಂತಿತ್ತು. ಆರ್ಭಟದೊಂದಿಗೆ ಮುಕ್ಯ ಪಾತ್ರಧಾರಿ ರಂಗವನ್ನು ಪ್ರವೇಶಿಸಿದ್ದಲ್ಲದೇ ಮಂಡಿಕುಣಿತವನ್ನೂ ಶುರು ಹಚ್ಚಿಕೊಂಡರು.
ಪಾತ್ರಧಾರಿಯ ಆರ್ಭಟ ಹೇಗಿತ್ತೆಂದರೆ ವೇದಿಯ ಮುಂದೆ ಕುಳಿತು ಆಟವನ್ನು ನೋಡುತ್ತಿದ್ದವರೆಲ್ಲ ಒಮ್ಮೆಲೆ ಆವೇಶ ಬಂದವರಂತೆ ಕುಣಿಯಲು ಶುರು ಮಾಡಿದರು. ಕ್ಷಣಕ್ಷಣಕ್ಕೂ ಪಾತ್ರಧಾರಿಯ ಕುಣಿತ ಹೆಚ್ಚಾಯಿತು. ಭಾಗವತರ ಭಾಗವತಿಕೆ, ಚಂಡೆಯ ಸದ್ದು ಹೆಚ್ಚಿದಂತೆಲ್ಲ ನೋಡುತ್ತಿದ್ದ ಜನಸಮೂಹ ಕೂಡ ಜೋರು ಜೋರಾಗಿ ಕುಣಿಯ ಹತ್ತಿದರು.
ಭಾಗವತಿಕೆ ಮಾಡುತ್ತಿದ್ದ ಭಾಗವತರು ಈ ಜನಸಮೂಹದ ನರ್ತನವನ್ನು ನೋಡಿದವರೇ ದಂಗಾಗಿ ಹೋದರು.
ʻಇದೇನಿದು ಈ ರೀತಿ ಜನರು ಕುಣಿಯುತ್ತಿದ್ದಾರಲ್ಲʼ ಎಂದು ಒಮ್ಮೆ ವಿಸ್ಮಯವಾದರೂ ನಿಜವಾದ ಕಾರಣ ತಿಳಿದು ದಂಗಾಗಿ ಹೋದರು.
ತಕ್ಷಣವೇ ʻಗಂಟು ಮೂಟೆಯ ಕಟ್ಟಿರೋ..ʼ ಎಂದು ಜೋರಾಗಿ ಪದ ಹಾಡಲು ಶುರು ಮಾಡಿದರು.
ಇದುವರೆಗೂ ಸರಿಯಾಗಿ ಹಾಡುತ್ತಿದ್ದ ಭಾಗವತರು ಇದೇನು ಹೊಸದಾಗಿ ಗಂಟು ಮೂಟೆಯ ಕಟ್ಟಿರೋ ಎನ್ನುವ ಪದ ಹಾಡುತ್ತಿದ್ದಾರಲ್ಲ ಎನ್ನುವ ಅನುಮಾನದಲ್ಲಿ ಪಾತ್ರಧಾರಿಗಳು ಭಾಗವತರನ್ನು ನೋಡಲು ಆರಂಭಿಸಿದರು.
ಆಗ ಭಾಗವತರು
ʻಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..ʼ ಎಂದು ಇನ್ನೊಮ್ಮೆ ರಾಗವಾಗಿ ಹಾಡಿದರು. ಆಗಲೂ ಪಾತ್ರಧಾರಿಗಳಿಗೆ ಅರ್ಥವಾಗಿರಲಿಲ್ಲ.
ಭಾಗವತರು ಮತ್ಯೊಮ್ಮೆ
'ಗಮನಿಸಿ ಕೇಳೊರೋ
ಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..' ಎಂದು ಹಾಡಿದರು.
ತಕ್ಷಣವೇ ಎಚ್ಚೆತ್ತ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಕಟ್ಟಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಓಡಲು ಆರಂಭಿಸಿದರು.
ಭಾಗವತರ ಪದಕ್ಕೆ ಕುಣಿಯುತ್ತಿದ್ದ ಭೂತಗಳ ಗುಂಪು ಊರ ಹೊರಗಿನ ಸ್ಮಷಾನದಲ್ಲಿ ಬಹಳ ಹೊತ್ತಿನ ತನಕ ಕುಣಿಯುತ್ತಲೇ ಇತ್ತು.

(ಹಿರಿಯರು ಅನೇಕ ಸಾರಿ ಹೇಳಿದ್ದ ಈ ಕಥೆ.. ಯಲ್ಲಾಪುರ ಭಾಗದಲ್ಲಿ ಪ್ರಚಲಿತದಲ್ಲಿದೆ. ಪ್ರತಿಯೊಬ್ಬರೂ ಈ ಕಥೆ ನಿಜವೆಂದೇ ಹೇಳುತ್ತಾರೆ. ಹೀಗಾಗಿ ನಾನು ಕೇಳಿದ ಕಥೆಯನ್ನು ಯಥಾವತ್ತಾಗಿ ಇಲ್ಲಿಟ್ಟಿದ್ದೇನೆ. ಯಾರಿಗಾದರೂ ಈ ಬಗ್ಗೆ ಗೊತ್ತಿದ್ದರೆ ಸವಿಸ್ತಾರವಾಗಿ ತಿಳಿಸಿ)



********************

ತೊಂಭತ್ತರ ದಶಕದಲ್ಲಿ ನಡೆದ ಕತೆ ಇದು

ಆಗಿನ ದಿನಗಳಲ್ಲಿ ಕನ್ನಡ ಶಬ್ದಗಳ ಮದ್ಯ ಚಿಕ್ಕ ಚಿಕ್ಕ ಇಂಗ್ಲೀಷ್‌ ಶಬ್ದಗಳ ಬಳಕೆ ದಣಿ ದಣೀ ಶುರುವಾಗುತ್ತಿದ್ದ ಸಮಯ.
ಯಲ್ಲಾಪುರದ ಯಾವುದೋ ಒಂದು ಊರಿನಲ್ಲಿ ತಾಳಮದ್ದಲೆ ಸಂಭ್ರಮ. ರಾತ್ರಿ ಇಡೀ ತಾಳಮದ್ದಲೆ ನಡೆಯುವ ಸಂಭ್ರಮ. ತಾಳಮದ್ದಲೆಯನ್ನು ಸವಿಯುವ ಸಲುವಾಗಿ ಇಡಿಯ ಊರಿಗೆ ಊರೆ ನಲಿದಿತ್ತು. ಶ್ರೀಕೃಷ್ಣ ಸಂಧಾನದ ಪ್ರಸಂಗ.
ಶ್ರೀಕೃಷ್ಣ ಸಂಧಾನಕ್ಕಾಗಿ ವಿಧುರನ ಮನೆಗೆ ಬಂದು, ನಂತರ ದುರ್ಯೋಧನನ ಸಭೆಯಲ್ಲಿ ಸಂಧಾನದ ಮಾತುಕತೆಯನ್ನೆಲ್ಲ ಆಡಿ ಮುಗಿದಿತ್ತು. ಕೃಷ್ಣ-ದುರ್ಯೋಧನನ ಪಾತ್ರಧಾರಿಗಳೆಲ್ಲ ಭಾರಿ ಭಾರಿಯಾಗಿ ತಮ್ಮ ವಾಗ್ಝರಿಯನ್ನು ಹರಿಸಿದ್ದರು.
ಶ್ರೀಕೃಷ್ಣ ದುರ್ಯೋಧನನ ಜತೆ ಸಂಧಾನ ವಿಫಲವಾಗಿ ತೆರಳಿದ ನಂತರ ದುರ್ಯೋಧನ ವಿಧುರನನ್ನು ಜರಿಯುವ ಸಂದರ್ಭ ಬಂದಿತ್ತು. ಶ್ರೀಕೃಷ್ಣ ದುರ್ಯೋಧನನ ಸಭೆಗೆ ಮೊದಲು ಬರದೇ ವಿಧುರನ ಮನೆಗೆ ಹೋಗಿದ್ಯಾಕೆ ಎಂದೆಲ್ಲ ಪ್ರಶ್ನಿಸಿ ನಾನಾ ರೂಪದಿಂದ ವಿಧುರನನ್ನು ಬೈದು ಆಗಿತ್ತು.
ಇದರಿಂದ ಮನನೊಂದ ವಿಧುರ ಆಪತ್ಕಾಲದಲ್ಲಿ ಕೌರವರ ರಕ್ಷಣೆಗಾಗಿ ಇರಿಸಿದ್ದ ಬಿಲ್ಲು-ಬಾಣಗಳನ್ನು ಮುರಿದು ಹಾಕುವ ಸಂದರ್ಭವೂ ಬಂದಿತ್ತು. ಸಭಾಸದರೆಲ್ಲ ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ಸವಿಯುತ್ತಿದ್ದರು.
ಭಾಗವತರ ಹಾಡುಗಾರಿಕೆ, ಪಾತ್ರಧಾರಿಗಳ ವಾದ-ಪ್ರತಿವಾದಗಳೆಲ್ಲ ಉತ್ತಮವಾಗಿ ನಡೆಯುತ್ತಿದ್ದವು. ನೋಡುಗರು ವಾಹ್‌ ವಾಹ್‌ ಎನ್ನುವಂತೆ ತಾಳಮದ್ದಲೆ ಸಾಗುತ್ತಿತ್ತು.
ಹೀಗಿದ್ದಾಗಲೇ ದುರ್ಯೋಧನನ ಮಾತುಗಳಿಗೆ ವಿಧುರ ಉತ್ತರ ನೀಡಬೇಕು. ಆದರೆ ಆ ಸಂದರ್ಭದಲ್ಲಿ ವಿಧುರನಿಗೆ ಮಾತನಾಡಲು ಆಗುತ್ತಲೇ ಇಲ್ಲ. ಆತನಿಗೆ ತಾನು ಏನು ಮಾತನಾಡಬೇಕು ಎನ್ನುವುದು ಮರೆತು ಹೋಗಿದೆ. ವಾಸ್ತವದಲ್ಲಿ ವಿಧುರನ ಪಾತ್ರಧಾರಿ ʻಹೌದು.. ಹೌದು..ʼ ಎನ್ನಬೇಕಿತ್ತು. ಆದರೆ ಆ ಮಾತು ಮರೆತು ಹೋಗಿದೆ.
ದುರ್ಯೋಧನ ಎರಡು ಸಾರಿ ತನ್ನ ಮಾತನ್ನಾಡಿದರೂ ವಿಧುರನಿಂದ ಉತ್ತರ ಬರಲೇ ಇಲ್ಲ. ಕೊನೆಗೆ ದುರ್ಯೋಧನ ಪಾತ್ರಧಾರಿ ಭಾಗವತರಿಗೆ ಸನ್ನೆ ಮಾಡಿದ್ದಾಯ್ತು. ಭಾಗವತರು ವಿಧುರನ ಪಾತ್ರಧಾರಿ ಕಡೆ ನೋಡಿ ಹಾಡಿನ ರೂಪದಲ್ಲಿ ಎಚ್ಚರಿಸಿದರು.
ಕೊನೆಗೆ ಎಚ್ಚೆತ್ತುಕೊಂಡ ವಿಧುರನ ಪಾತ್ರಧಾರಿ ʻYes Yes..' ಎಂದ. ಕನ್ನಡದ ತಾಳಮದ್ದಲೆಯಲ್ಲಿ ಇಂಗ್ಲೀಷ್‌ ಶಬ್ದ ಬಂದಿದ್ದು ಪ್ರೇಕ್ಷಕರಾದಿಯಾಗಿ ಎಲ್ಲರಿಗೂ ಒಮ್ಮೆ ಅಚ್ಚರಿಯಾಗಿತ್ತು. ಇದೇನಿದು ಎಂದು ಆಲೋಚನೆ ಶುರು ಮಾಡಲು ಆರಂಭಿಸಿದ್ದರು.
ತಕ್ಷಣವೇ ಭಾಗವತರು ʻ ವಿಧುರ ಯೆಸ್‌ ಎಂದ....ʼ ಎಂದು ರಾಗವಾಗಿ ಹಾಡಲು ಶುರು ಮಾಡಿದರು.
ಈ ಪ್ರಸಂಗ ಮುಗಿದ ಕೆಲವು ದಿನಗಳವರೆಗೂ ವಿಧುರ ಯೆಸ್‌ ಎಂದ ಎನ್ನುವ ಸಂಗತಿ ಜನರ ಬಾಯಲ್ಲಿ ಚರ್ಚೆಯಾಗುತ್ತಲೇ ಇತ್ತು. ತಾಳಮದ್ದಲೆಯ ಸವಿಯನ್ನುಂಡವರು ಆಗೀಗ ಈ ಸನ್ನಿವೇಶದ ಕುರಿತು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದುದೂ ಜಾರಿಯಲ್ಲಿತ್ತು. ಯಲ್ಲಾಪುರದ ಕೆಲವರಿಗೆ ಈಗಲೂ ವಿಧುರ ಯೆಸ್‌ ಎಂದ ಎನ್ನುವ ತಾಳಮದ್ದಲೆಯ ಸನ್ನಿವೇಶ ನೆನಪಾಗಬಹುದು. ಯಲ್ಲಾಪುರದ ಭಾಗದ ಜನರಿಗೆ ಈ ಬಗ್ಗೆ ಜಾಸ್ತಿ ಗೊತ್ತಿದ್ದರೆ ತಿಳಿಸಿ.
ಇಂತಹ ಯಕ್ಷಗಾನ ಹಾಗೂ ತಾಳಮದ್ದಲೆಯ ತಮಾಷೆಯ ಸನ್ನಿವೇಶಗಳಿದ್ದರೆ ನೀವೂ ತಿಳಿಸಿ

Sunday, July 2, 2023

ಪಾರು (ಕಥೆ ಭಾಗ-2 )

ಬರಬಳ್ಳಿ ಗುಡ್ಡ ಬೆಟ್ಟಗಳ ನಡುವೆ ಅರಳಿನಿಂತ ಊರು ಎನ್ನುವುದನ್ನು ಆಗಲೇ ಹೇಳಿದೆನಲ್ಲ. ವಿಶಾಲ ಜಾಗದಲ್ಲಿ 400 ರಷ್ಟು ಕುಟುಂಬಗಳು ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಡಿಕೆ ಇವರ ಜೀವನದ ಆಧಾರವಾಗಿದ್ದರೆ, ಜಮೀನಿನಲ್ಲಿ ಬೆಳೆಯುವ ಬೃಹತ್ ಗಾತ್ರದ ತೆಂಗು ಇವರ ಬದುಕಿನ ಆಹಾರವನ್ನು ಪೂರೈಸುತ್ತಿತ್ತು.

ದೂರದಲ್ಲಿ ಕರಿಬಣ್ಣದ ಕಾಳಿ ಹರಿದು ಹೋಗುತ್ತಿತ್ತು. ಊರಿಗೂ ಕಾಳಿ ನದಿಗೂ ನಡುವೆ ವಿಶಾಲವಾದ ಗದ್ದೆ ಬಯಲಿತ್ತು. ಬೈಲುಗದ್ದೆ ಎಂದೇ ಕರೆಸಿಕೊಂಡ ಈ ಗದ್ದೆಯ ಬಯಲು ಸಾತೊಡ್ಡಿ ಹಳ್ಳದಿಂದ ಕಳಚೆಯ ತನಕವೂ ಇತ್ತು. ಇಲ್ಲಿ ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಿದ್ದರು.

ಗಣಪತಿ ಭಟ್ಟರು, ಚಿದಂಬರ, ನಾರಾಯಣ, ಶಂಕರ ಮುಂತಾದ ತನ್ನ ಜತೆಗಾರರ ಜೊತೆಗೆ ಈ ವಿಸ್ತಾರವಾದ ಬಯಲುಗಡ್ಡೆಯನ್ನು ದಾಟಿದರು. ಸೀದಾ ಕಾಳಿ ನದಿಯ ತೀರಕ್ಕೆ ಬಂದರು.

ಚಿಕ್ಕ ಚಿಕ್ಕ ನದಿಗಳನ್ನು ಸುಲಭವಾಗಿ ದಾಟಬಹುದು. ಆದರೆ ದೊಡ್ಡ ದೊಡ್ಡ ನದಿಗಳನ್ನು ದಾಟುವುದು ಸುಲಭವಲ್ಲ. ಆಳವಾಗಿ ಹಾಗೂ ವೇಗವಾಗಿ ಹರಿಯುವ ಈ ನದಿಯನ್ನು ದಾಟಲು ದೋಣಿಯ ಅವಲಂಬನೆ ಅತ್ಯಗತ್ಯ. ಆದರೆ ಕೆಲವು ನದಿಗಳಲ್ಲಿ ಕೆಲವು ಕಡೆ ನದಿಯ ಹರಿವು ಬೇರೆ ರೀತಿಯಲ್ಲಿರುತ್ತವೆ. ಎಲ್ಲ ಕಡೆಗಳಲ್ಲಿ ಆಳವಾಗಿ ಹರಿಯುವ ನದಿಯು ಭೌಗೋಲಿಕ ರಚನೆಗೆ ಅನುಗುಣವಾಗಿ ತನ್ನ ಅಳವನ್ನು ಕಳೆದುಕೊಂಡು ವಿಸ್ತಾರವಾಗಿ ಹರಿಯುತ್ತವೆ. ಇಂತಹ ಸ್ಥಳಗಳಲ್ಲಿ ಸೆಳವು ಕೂಡ ಕಡಿಮೆ ಇರುತ್ತದೆ. ಇಂತಹ ಜಾಗವನ್ನು ಪಾರು ಎಂದು ಕರೆಯುತ್ತಾರೆ.

ಕಾಳಿ ನದಿಯಲ್ಲಿಯೂ ಹಲವು ಕಡೆಗಳಲ್ಲಿ ನದಿಯನ್ನು ದಾಟಲು ಅನುಕೂಲವಾಗುವಂತೆ ಪಾರುಗಳಿದ್ದವು. ಶಾಟ ಶತಮಾನಗಳಿಂದ ಸ್ಥಳೀಯರು ಇಂತಹ ಪಾರುಗಳನ್ನು ದಾಟಿ ನದಿಯ ಇನ್ನೊಂದು ತೀರಕ್ಕೆ ಹೋಗುತ್ತಿದ್ದರು. ಗಣಪತಿ ಭಟ್ಟರು ಅವರ ಜತೆಗಾರರ ಜೊತೆಗೆ ನಸುಕಿನಲ್ಲಿ ಈ ಪಾರಿನ ಜಾಗಕ್ಕೆ ಬಂದರು.

ಕರಿ ಕಾಳಿಯಲ್ಲಿನ ಪಾರನ್ನು ಕೆಲವು ನಿಮಿಷಗಳ ಅಂತರದಲ್ಲಿ ದಾಟಿ ನದಿಯಾಚೆಗಿನ ಪ್ರದೇಶಕ್ಕೆ ತೆರಳಿದ್ದರು. ಭಟ್ಟರ ಬಳಗ ಇನ್ನೂ ಹೋಗುವ ದೂರ ಬಹಳಷ್ಟಿತ್ತು. ಮುಂದಿನ ಒಂದು ತಾಸುಗಳ ನಡಿಗೆಯ ಮೂಲಕ ಕೊಡಸಳ್ಳಿಯನ್ನು ಹಾದು ಹೋಗಿದ್ದರು.

ಸೂರ್ಯ ಬಾನಂಚಿನಲ್ಲಿ ಮೂಡಿ ಮೊದಲ ಕಿರಣಗಳು ಭೂಮಿಗೆ ಬೀಳುವ ವೇಳೆಗಾಗಲೇ ಗಣಪತಿ ಭಟ್ಟರ ಬಳಗ ಬೀರ್ಕೋಲ್ ತಲುಪಿಯಾಗಿತ್ತು.

``ಇಲ್ಲಿಂದಾಚೆಗೆ ಹೆಬ್ಬಗುಳಿ, ದೇವಕಾರು, ಬಾಳೆಮನೆ.. ಆಮೇಲೆ ಸೋಮವಾರ ಸಂತೆ ಬಯಲು.. ಅಲ್ಲಿಂದ ಸ್ವಲ್ಪದೂರ ಹೋದರೆ ಬಸ್ಸು ಸಿಕ್ತು.. ಆಮೇಲೆ ನೇಸರ ನೆತ್ತಿಗೇರುವ ಹೊತ್ತಿಗೆಲ್ಲ ಕಾರವಾರ ಹೋಗುಲಾಗ್ತು..'' ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತ ಹೊರಟವರು ತಮ್ಮೂರಿನಿಂದ ಆಗಲೇ ಹತ್ತಾರು ಕಿಲೋಮೀಟರ್ ದೂರವನ್ನು ಸವೆಸಿದ್ದರು.

ಸೋಮವಾರ ಸಂತೆಯನ್ನು ತಲುಪುವ ವೇಳೆಗಾಗಲೇ ಅಲ್ಲಿ ನಿಂತಿದ್ದ ಕೆಂಪುಬಸ್ಸು ಎರಡು ಸಾರಿ ಪೊಂ ಪೊಂ ಎಂದು ಸದ್ದು ಮಾಡಿ ಹೋರಾಡಲು ಅನುವಾಗಿತ್ತು. ತುಸು ಓಡುತ್ತಲೇ ಬಸ್ಸನ್ನೇರಿದರು.

``ವಾಪಾಸ್ ಬರಕಿದ್ರೆ ದೇವಕಾರು ಗೌಡಂದಿಕ್ಕಳ ಮನೆಗೆ ಹೋಗಿ ಬರುವ. ನಮ್ಮನೆ ಬೆಳ್ಳಿ, ಕೆಂಪಿ, ಕೆಂಚಿ, ಸರಸು ಎಲ್ಲ ಎಂತ ಮಾಡ್ತಿದ್ದು ನೋಡ್ಕಂಡು ಬರುವ'' ಎಂದು ಭಟ್ಟರು ಶಂಕರನ ಬಳಿ ಹೇಳಿದ್ದರು.

``ಗಣಪಣ್ಣ, ಗೌಡಂದಿಕ್ಕಳ ಬಳಿ ಎಷ್ಟು ದನ ಹೊಡೆದುಹಾಕಿದ್ಯೋ..'' ಶಂಕರ ಕೇಳಿದ್ದ.

``ನಿತ್ಯ ಪೂಜೆಗೆ ಎರಡು ಕಾಲ್ನಡೆ ಇಟಕಂಡು, ಬಾಕಿ ಎಲ್ಲ ದೇವಕಾರು ಬಯಲಿಗೆ ಹೊಡೆದಿಕ್ಕಿದೆ ನೋಡು'' ಭಟ್ಟರು ಉತ್ತರ ನೀಡಿದ್ದರು.

ಜಾನುವಾರುಗಳನ್ನು ಸಾಕಿ ಸಲಹುವ ನಿಟ್ಟಿನಲ್ಲಿ ಬರಬಳ್ಳಿಗೂ, ದೇವಕಾರು, ಹೆಬ್ಬಗುಳಿ ಹಾಗೂ ಕೈಗಾಕ್ಕೂ ವಿಶೇಷ ಸಂಬಂಧವಿತ್ತು. ಪ್ರತಿ ಬೇಸಿಗೆಯ ವೇಳೆಗೆ ಕೈಗಾ, ಹೆಬ್ಬಗುಳಿ ಹಾಗೂ ದೇವಕಾರಿನ ಗೌಡರು ಭುಜದ ಮೇಲೆ ದೊಡ್ಡ ಬಡಿಗೆಯನ್ನು ಕಟ್ಟಿಕೊಂಡು ಅದರ ಊದ್ದಕ್ಕೆ ವಿವಿಧ ಗಾತ್ರಗಳ ಮಡಿಕೆಯನ್ನು ತ್ತೋಗುಬಿಟ್ಟುಕೊಂಡು ಬರುತ್ತಿದ್ದರು. ಬರಬಳ್ಳಿ ಹಾಗೂ ಸುತ್ತಲಿನ ಊರುಗಳಲ್ಲಿ ಈ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಅದರ ಜೊತೆಗೆ ವಿವಿಧ ಬಗೆಯ ತರಕಾರಿ, ಮೆಣಸು, ಮದ್ದುಗಳನ್ನು ಕೂಡ ತಂದು ಮಾರಾಟ ಮಾಡಿ ಕೊಂಚ ಕಾಸು ಮಾಡಿಕೊಳ್ಳುತ್ತಿದ್ದರು. 

ವಾಪಸು ಹೋಗುವಾಗ ಬರಬಳ್ಳಿಗರ ಮಲೆನಾಡು ಗಿಡ್ಡ ತಳಿಯ ರಾಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಈ ದನಗಳು ಮುಂದಿನ ಆರು-ಎಂಟು ತಿಂಗಳುಗಳ ಕಾಲ ದೇವಕಾರು, ಹೆಬ್ಬಗುಳಿ, ಕೈಗಾ ಗೌಡರುಗಳ ಕೊಟ್ಟಿಗೆಯಲ್ಲಿ ಜೀವನ ಸವೆಸಬೇಕಿತ್ತು. ಅವುಗಳನ್ನು ನೋಡಿಕೊಳ್ಳುವ ಜೊತೆಗೆ ಈ ದನಗಳ ಸಂತಾನೋತ್ಪತ್ತಿ ಕಾರ್ಯ ಮಾಡಿಸಿ, ಅವುಗಳು ಕರು ಹಾಕುವ ತನಕದ ಕಾರ್ಯ ಈ ಗೌಡರದ್ದಾಗಿತ್ತು. ಇದಕ್ಕೆ ಪ್ರತಿಯಾಗಿ ಬರಬಳ್ಳಿಗರು ದುಡ್ಡು ಕೊಡುತ್ತಿದ್ದರು. ಅಲ್ಲದೆ ಗಂಡುಗರು ಹುಟ್ಟಿದರೆ ಅದನ್ನು ಉಚಿತವಾಗಿ ಗೌಡರಿಗೆ ನೀಡುತ್ತಿದ್ದರು. ಹೆಣ್ಣು ಕರು ಹಾಕಿದರೆ ವಿಶೇಷ ಬಳುವಳಿ ಕೂಡ ಸಿಗುತ್ತಿತ್ತು. ಇದರ ಜೊತೆಗೆ ಈ ಜಾನುವಾರುಗಳ ಸಗಣಿ, ಗೊಬ್ಬರಗಳು ಗೌಡರ ಪಾಲಿಗೆ ವಿಶೇಷ ಆದಾಯ ತರುತ್ತಿದ್ದವು. ತಮ್ಮ ತೋಟಕ್ಕೆ ಇವುಗಳನ್ನು ಬಳಸುವ ಜೊತೆಗೆ ಗೊಬ್ಬರ ಮಾರಾಟ ಮಾಡಿ ಆದಾಯವನ್ನು ಮಾಡಿಕೊಳ್ಳುತ್ತಿದ್ದರು.

ಇಷ್ಟಲ್ಲದೆ ಬರಬಳ್ಳಿಗರ ಎತ್ತುಗಳು, ಹೋರಿಗಳನ್ನೂ ಈ ಗೌಡರು ಸಾಕುತ್ತಿದ್ದರು. ಬೇಸಿಗೆ ವೇಳೆಗೆ ಬರಬಳ್ಳಿಗೆ ಎಡತಾಕುವ ಗೌಡರುಗಳು ಬಯಲುಗದ್ದೆಯನ್ನು ಹೂಡುವ ಕಾರ್ಯವನ್ನೂ ಕೈಗೊಳ್ಳುತ್ತಿದ್ದರು. ಹೀಗೆ ಬರಬಳ್ಳಿಗರ ಪಾಲಿಗೆ ಕೈಗಾ, ಹೆಬ್ಬಗುಳಿ, ದೇವಕಾರು ಗ್ರಾಮದ ನಿವಾಸಿಗಳು ಅನಿವಾರ್ಯವಾಗಿದ್ದರು. ಆ ಗ್ರಾಮಗಳವರಿಗೆ ಬರಬಳ್ಳಿಯವರೂ ಕೂಡ ಅಷ್ಟೇ ಅಗತ್ಯವಾಗಿದ್ದರು. ಪರಸ್ಪರ ಸಹಕಾರ ಶತ ಶತಮಾನಗಳಿಂದ ಬೆಳೆದುಬಂದಿತ್ತು.

ಗುಡ್ಡೆ ಗಣಪತಿ ಭಟ್ಟರ ಹತ್ತಾರು ಕಾಲ್ನಡೆಗಳನ್ನು ದೇವಕಾರಿನ ಗೌಡನೊಬ್ಬ ಹೊಡೆದುಕೊಂಡು ಹೋಗಿದ್ದ. ಹೀಗಾಗಿ ಭಟ್ಟರ ಮನೆಯಲ್ಲಿ ನಿತ್ಯ ಪೂಜೆಗೆ ಹಾಲು, ಹೈನಿಗಾಗಿ ಒಂದೆರಡು ಆಕಳುಗಳು ಮಾತ್ರ ಇದ್ದವು. ಭಟ್ಟರದ್ದೇ ಎಡಿಎ ಒಂದು ಎತ್ತಿನ ಜೋಡಿಯೂ ದೇವಕಾರಿನ ಬಯಲು ಸೇರಿತ್ತು. ಕಾರವಾರದಿಂದ ವಾಪಸು ಬರುವಾಗ ದೇವಕರಿಗೆ ತೆರಳಿ ತಮ್ಮ ಮನೆಯ ರಾಸುಗಳನ್ನು ನೋಡಿ ಬರಬೇಕು ಎಂದು ಭಟ್ಟರು ಅಂದುಕೊಂಡಿದ್ದರು. ಆದರೆ ಹೀಗೆ ಭಟ್ಟರು ದೇವಕರಿಗೆ ಹೋಗಿ ಬರಬೇಕು ಎಂದು ನಿಶ್ಚಯಿಸಿದ್ದೆ ಅವರ ಬದುಕಿನಲ್ಲಿ ಎಂದೂ ಮರೆಯಲಾಗದ ಅಪರೂಪದ ಘಟನೆಗೆ ಸಾಕ್ಷಿಯಾಗಲಿತ್ತು..


(ಮುಂದುವರಿಯುತ್ತದೆ..)

Thursday, June 1, 2023

ಪಾರು (ಕಥೆ)

``ಸಾವಿತ್ರಿ, ನಾಳೆ ಆನು ಕಾರವಾರಕ್ಕೆ ಹೋಗಿ ಬರ್ತಿ. ಮಠದಗಡ್ಡೆದು ಕಾಗದಪತ್ರದ ಕೆಲಸ ಇದ್ದು ಬಿಲ್ಯ. ಉದಿಯಪ್ಪಾಗ ಹೋಗಿ ಕಾರವಾರದ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮುಗ್ಸಿ ಬರ್ತೆ. ನಾಳೆ ಕಾರವರದಲ್ಲೇ ಉಳ್ಕಂಬುದು ಬಂದ್ರು ಬಂತು ಬಿಲ್ಯ. ನಾಡಿದ್ದು ಸಂಜೇಗೆಲ್ಲ ಮನಿಗೆ ಬರ್ತಿ'' ಎಂದು ಮಡದಿ ಅಮ್ಮಕ್ಕಳ ಬಳಿ ಗಣಪತಿ ಭಟ್ಟರು ಹೇಳುವ ವೇಳೆಗಾಗಲೇ ಬಾನಿನಲ್ಲಿ ಕತ್ತಲಾಗಿತ್ತು.

ಮರುದಿನ ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ಕಾರವಾರದ ಕಡೆಗೆ ಹೊರಡುವ ಪತಿಯ ಬೆಳಗಿನ ಆಸ್ರಿಗೆಗಾಗಿ ತಯಾರಿ ಮಾಡುವಲ್ಲಿ ಅಮ್ಮಕ್ಕ ತೊಡಗಿಕೊಂಡಳು. ಭಟ್ಟರು ಸಾಯಿಂಕಾಲದ ಅನುಷ್ಠಾನಕ್ಕೆ ತೆರಳಿದರು.

ಮರುದಿನದ ಕಾರವಾರದ ಕಡೆಗಿನ ಭಟ್ಟರ ಪ್ರಯಾಣ, ಅವರ ಬದುಕಿನ ಅನೂಹ್ಯವಾದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ ಎನ್ನುವುದರ ಸಣ್ಣ ಕುರುಹೂ ಕೂಡ ಅವರಿಗಿರಲಿಲ್ಲ. ಬದುಕಿನಲ್ಲಿ ಹಲವು ತಿರುವುಗಳನ್ನು ಕಂಡಿದ್ದ ಭಟ್ಟರು ಇನ್ನೊಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದರು. 


******


ಭರತಖಂಡ ಭಾರತವರ್ಷಕ್ಕೆ ಹಸಿರ ಸೀರೆಯನ್ನು ಉಟ್ಟಂತೆ ಹಾದುಹೋಗಿದೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿಯ ಸಾಲು. ಈ ಸಹ್ಯಾದ್ರಿಯ ಮಡಿಲಿನಲ್ಲಿ ಕರಿಬಣ್ಣವನ್ನು ಹೊಂದಿ ಮೈಮನಗಳಲ್ಲಿ ಭಯವನ್ನು ಹುಟ್ಟಿಸುತ್ತ ಹರಿದುಹೋಗುತ್ತಿದೆ ಕಾಳಿನದಿ. 

ಜೋಯಿಡಾದ ಕಾಡಿನ ನಡುವೆಯೆಲ್ಲೋ ಹುಟ್ಟಿ ಕಡವಾಡದ ಬಳಿ ಸಮುದ್ರ ಸೇರುವ ಮೊದಲು ಅದೆಷ್ಟೋ ಪ್ರದೇಶಗಳನ್ನು ಬಳಸಿ, ಹಾದು ಹೋಗುವ ಕಾಳಿನದಿ ಸಾವಿರಾರು ಕುಟುಂಬಗಳ ಪಾಲಿಗೆ ಜೀವ ನದಿಯೂ ಹೌದು. ಮಳೆಗಾಲದಲ್ಲಿ ಅದೆಷ್ಟೋ ಜನರ ಬದುಕುಗಳನ್ನು ದುರ್ಭರ ಮಾಡಿದ ಕಣ್ಣೀರ ನದಿಯೂ ಹೌದು. ಇಂತಹ ಕರಿ ಕಾಳಿ ನದಿಯ ಆಗ್ನೇಯ ದಿಕ್ಕಿನ ದಡದಲ್ಲಿ ಇರುವ ಊರು ಬರಬಳ್ಳಿ. ಮೂರು ದಿಕ್ಕುಗಳಲ್ಲಿ ಎತ್ತರದ ಘಟ್ಟ, ದಟ್ಟ ಕಾಡು. ಇನ್ನೊಂದು ಕಡೆಯಲ್ಲಿ ಕಾಳಿ ನದಿ. ಅಡಿಕೆ, ತೆಂಗು ಮುಖ್ಯ ಬೆಳೆಗಳಾದರೂ, ಕೆಲವರು ಭತ್ತ ಬೆಳೆಯುತ್ತಾರೆ. ಮಾವು ಹಲಸುಗಳು ಹುಲುಸಾಗಿ ಬೆಳೆಯುತ್ತವೆ. ಹಣ್ಣು ಹಂಪಲುಗಳಿಂದ ತುಂಬಿಕೊಂಡು, ಎಂದೂ ಬರಿದಾಗದಂತಹ ಹಳ್ಳಿ. ಸಾತೊಡ್ಡಿಯಿಂದ ಹಿಡಿದು ಕೊಡಸಳ್ಳಿಯ ತನಕ ಬೆಳೆದು ನಿಂತಿದ್ದ ಊರು ಅದು.

ದಟ್ಟ ಕಾಡಿನ ನಡುವೆ ನಾಲ್ಕೈದು ಕಿಲೋಮೀಟರುಗಳಷ್ಟು ಅಗಲವಾಗಿ ಹಬ್ಬಿ 400 ಕುಟುಂಬಗಳನ್ನು ಹೊಂದಿರುವ ಈ ಬರಬಳ್ಳಿಯ ಆರಾಧ್ಯದೈವ ಬಲಮುರಿ ಗಣಪತಿ. ಭಕ್ತಿಯಿಂದ ಬೇಡಿಕೊಂಡವರನ್ನು ಸದಾಕಾಲ ಹರಸುವ, ಕಾಪಾಡುವ ದೇವರು.

ಈ ಬಲಮುರಿ ಗಣಪತಿಗೆ ನಿತ್ಯಪೂಜೆ ಗಣಪತಿ ಭಟ್ಟರ ಕೈಯಿಂದಲೇ ನಡೆಯಬೇಕಿತ್ತು. ದೇವಸ್ಥಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಗುಡ್ಡೇಮನೆಯಿಂದ ಆಗಮಿಸುವ ಗಣಪತಿ ಭಟ್ಟರು ದಿನನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುತ್ತಿದ್ದರು.

ಜೀವನದ ಮಧ್ಯಘಟ್ಟವನ್ನು ತಲುಪಿದ್ದ ಗಣಪತಿ ಭಟ್ಟರ ಮಡದಿಯೇ ಅಮ್ಮಕ್ಕ. ಭಟ್ಟರು ತಮ್ಮ ಮಡದಿಯನ್ನು ಪ್ರೀತಿಯಿಂದ ಸಾವಿತ್ರಿ ಎಂದೇ ಸಂಬೋಧಿಸುತ್ತಿದ್ದರು. ಈ ದಂಪತಿಗಳಿಗೆ ಪರಮೇಶ್ವರ, ಶಂಕರ ಹಾಗೂ ಮೂಕಾಂಬಿಕಾ ಎನ್ನುವ ಮೂವರು ಮಕ್ಕಳು. ಇವರಲ್ಲಿ ಪರಮೇಶ್ವರನಿಗೆ ನಾಲ್ಕೈದು ವರ್ಷ ವಯಸ್ಸಾಗಿದ್ದರೆ, ಪರಮೇಶ್ವರನಿಗಿಂತ ಶಂಕರ ಒಂದೂವರೆ ವರ್ಷ ಚಿಕ್ಕವನು. ಶಂಕರನಿಗಿಂತ ಎರಡು ವರ್ಷ ಚಿಕ್ಕವಳಾದ ಮೂಕಾಂಬಿಕೆ ಆಗಿನ್ನೂ ಅಂಬೆಗಾಲಿಡುತ್ತಿದ್ದ ಕೂಸು. ಗಣಪನ ಪೂಜೆ, ಮಠದಗದ್ದೆಯಲ್ಲಿ ದುಡಿತ, ಗುಡ್ಡೇಮನೆಯಲ್ಲಿ ಸಂಸಾರ ಹೀಗೆ ಸಾಗುತ್ತಿದ್ದಾಗಲೇ ತುರ್ತು ಕಾಗದಪತ್ರದ ಜರೂರತ್ತು ಗಣಪತಿ ಭಟ್ಟರಿಗೆ ಒದಗಿಬಂದಿತ್ತು. ಅದಕ್ಕಾಗಿ ಕಾರವಾರಕ್ಕೆ ಹೊರಟಿದ್ದರು.


****


ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಆಸ್ರಿಗೆ ಕುಡಿದು, ಮಡದಿ ಕಟ್ಟಿಕೊಟ್ಟ ತುತ್ತಿನ ಚೀಲವನ್ನು ಗಂಟಿನಲ್ಲಿ ಹಾಕಿ ಭುಜಕ್ಕೇರಿಸಿ ಬರಿಗಾಲಿನಲ್ಲಿ ಮನೆಯಿಂದ ಹೋರಾಟ ಗಣಪತಿ ಭಟ್ಟರು ಕಾರವಾರವನ್ನು ತಲುಪಲು ಹರಸಾಹಸ ಪಡಬೇಕಿತ್ತು.

ಕಾರವಾರಕ್ಕೆ ತಾವೂ ಬರುತ್ತೇವೆ, ತುರ್ತಿನ ಕೆಲಸವಿದೆ ಎಂದು ಹೇಳಿದ್ದರಿಂದ ತಮ್ಮದೇ ಊರಿನ ಚಿದಂಬರ, ನಾರಾಯಣ ಹಾಗೂ ಇನ್ನಿತರರ ಮನೆಯ ಕಡೆ ಭಟ್ಟರು ಎಡತಾಕಿದರು. ದಟ್ಟಕಾಡಿನ ನಡುವೆ, ಕಾಡುಪ್ರಾಣಿಗಳ ಹಾವಳಿಯ ನಡುವೆ ಒಬ್ಬರೇ ಸಾಗುವುದಕ್ಕಿಂತ ಗುಂಪಾಗಿ ತೆರಳುವುದು ಲೇಸು ಎನ್ನುವ ಕಾರಣಕ್ಕಾಗಿ ಭಟ್ಟರು ತಮ್ಮ ಸಹವರ್ತಿಗಳ ಜತೆ ಸೇರಿದ್ದರು.


(ಮುಂದುವರಿಯುವುದು)

Thursday, August 18, 2022

ಗಾಳಿಪಟ-2 ಮೂಲಕ ಮತ್ತೆ ಮೋಡಿ ಮಾಡಿದ ಯೋಗರಾಜ್ ಭಟ್-ಗಣೇಶ್(ನಾನು ನೋಡಿದ ಚಿತ್ರಗಳು -7)

ಇತ್ತೀಚಿನ ದಿನಗಳಲ್ಲಿ ನೋಡಲೇಬೇಕು ಅನ್ನಿಸಿ ಕಾದು ಕಾದು ನೋಡಿದ ಸಿನಿಮಾ ಅಂದರೆ ಅದು ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ ಚಿತ್ರ ಎನ್ನುವುದು ಈ ಚಿತ್ರದ ಕಡೆಗೆ ಇದ್ದ ಮೊದಲ ಕಾರಣವಾಗಿದ್ದರೆ, ಗಾಳಿಪಟ ಸಿನಿಮಾದ ಮೊದಲ ಭಾಗಕ್ಕೆ ಸಿಇಕ್ವೆಲ್ ಬರುತ್ತಿದೆ ಎನ್ನುವುದು ಇನ್ನೊಂದು ಕಾರಣ.

ಸಿನಿಮಾದಲ್ಲಿ ಬಹಳಷ್ಟು ಇಷ್ಟವಾದವು. ಕೆಲವಷ್ಟು ಕಷ್ಟವಾದವು. ಸಿನಿಮಾದಲ್ಲಿ ನಮಗೆ ಇಷ್ಟವಾಗಲು ಹಲವು ಸಂಗತಿಗಳಿವೆ. ಅದರಲ್ಲಿ ಮೊದಲನೆಯದು ಯೋಗರಾಜ್ ಭಟ್ ಅವರ ನವಿರಾದ ಚಿತ್ರಕಥೆ. ಸರಳ ಕಥಾ ಹಂದರ. 

ಮೊದಲ ಭಾಗದಲ್ಲಿ ಮುಗಿಲು ಪೇಟೆಯನ್ನು ನೋಡಿದ್ದ ನಾವು ಇಲ್ಲಿ ನೀರು ಕೋಟೆಯನ್ನು ನೋಡುತ್ತೇವೆ, ಅದೇ ರೀತಿ ಟರ್ಕಿ ದೇಶದ ಹಿಮದ ಸಾಲಿನ ಮೇಲೆ ಓಡಾಡುತ್ತೇವೆ. ನೀರು, ಐಸು, ಆಗೊಮ್ಮೆ ಈಗೊಮ್ಮೆ ಬರುವ ಬೆಂಗಾಡಿನ ಪ್ರದೇಶ ಇವೆಲ್ಲವೂ ಸೆಳೆಯುತ್ತವೆ. ಆದರೆ ಸಿನಿಮಾದ ಮೊದಲರ್ಧ ಸ್ವಲ್ಪ ಸುದೀರ್ಘವಾಯಿತು ಎನ್ನಿಸುತ್ತದೆ. ಅಲ್ಲದೆ ಮೊದಲಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಬರುವ ಹಾಡುಗಳು ಕಥೆಯ ಓಟಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ.

ಗಣೇಶ್ ಹಾಗೂ ದಿಗಂತ್ ಕಾಲೇಜಿಗೆ ಮರಳಿ ಬರಲು ಕಾರಣಗಳಿದ್ದವು. ಆದರೆ ಪವನ್ ಯಾಕೆ ಬಂದರು ಎನ್ನುವುದು ಗೊತ್ತಾಗಲಿಲ್ಲ. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಾದ ಮೇಲೆ ಗಣೇಶ್ ನಾಯಕಿಯನ್ನು ಪಟಾಯಿಸಲು ನದಿಯಲ್ಲಿ ಈಜು ಬರದಂತೆ ನಟಿಸುವ ಸನ್ನಿವೇಶವೊಂದಿದೆ. ಪಕ್ಕದಲ್ಲೇ ಸೇತುವೆ ಇದ್ದರೂ ನಾಯಕ, ನಾಯಕಿ ನದಿಯೊಳಕ್ಕೆ ಇಳಿದು ದಾಟಲು ಹೊರಟಿದ್ದು ಸ್ವಲ್ಪ ವಿಚಿತ್ರ ಅನ್ನಿಸಿತು. 

ಇನ್ನು ಹಾಡುಗಳಂತೂ ಆಹಾ. ಜಯಂತ್ ಕಾಯ್ಕಿಣಿ ಬರೆದ ನೀನು ಬಗೆಹರಿಯದ ಹಾಡು, ನಾನಾಡದ ಮತ್ತೆಲ್ಲವ ಕದ್ದಾಲಿಸು ಹಾಗೂ ಯೋಗರಾಜ್ ಭಟ್ಟರು ಬರೆದ ನಾವು ಬದುಕಿರಬಹುದು ಪ್ರಾಯಶಃ ಈ ಹಾಡುಗಳಂತೂ ಪದೇ ಪದೇ ಗುನುಗುವಂತೆ ಮಾಡುತ್ತವೆ. ಭಟ್ಟರು ಬರೆದ ದೇವ್ಲೇ ದೇವ್ಲೇ ಹಾಡಂತೂ ಪಡ್ಡೆ ಹುಡುಗರ ಪಾಲಿಗೆ ಒಳ್ಳೆಯ ಕಿಕ್ ನೀಡುತ್ತದೆ. ಹಾಗೆಯೆ ಎಕ್ಸಾಂ ಕುರಿತಾದ ಹಾಡು ಸಹ ಇಷ್ಟವಾಗುತ್ತವೆ. ಗಣೇಶ್ ಮಗ ವಿಹಾನ್ ದು ಇಲ್ಲಿ ಚಿಕ್ಕ ಪಾತ್ರ. ಒಳ್ಳೆಯ ಎಂಟ್ರಿ. ಇನ್ನು ವಿಜಯ್ ಸೂರ್ಯ ಮಾತ್ರ ಸರ್ಪ್ರೈಸ್ ಎಂಟ್ರಿ.

ಸಿನಿಮಾ ಲೊಕೇಷನ್ನುಗಳು ಬಹಳ ಚನ್ನಾಗಿದೆ. ಕುದುರೆಮುಖ, ಟರ್ಕಿ ಇತ್ಯಾದಿ ಸ್ಥಳಗಳು ಕಣ್ಣಿಗೆ ಮುದ ನೀಡುತ್ತವೆ. ಆದರೆ ಚಿತ್ರದಲ್ಲಿ ಜೋಗ ಜಲಪಾತವನ್ನು ಸುಮ್ಮನೆ ಮೂರು ಸೆಕೆಂಡ್ ಕಾಲ ತೋರಿಸಿದರು ಅಷ್ಟೇ. ಜೋಗ ಜಲಪಾತವಲ್ಲದೆ ಬೇರೆ ಯಾವುದೇ ಜಲಪಾತ ತೋರಿಸಿದ್ದರೂ ಯಾವೂದೇ ನಷ್ಟವಿರಲಿಲ್ಲ. 

ಕಾರಣಾಂತರಗಳಿಂದ ಕಾಲೇಜಿಗೆ ಬಂದು ಕನ್ನಡ ಕಲಿಯಲು ಮುಂದಾಗುವ ಮೂವರು ಯುವಕರು, ಅವರಿಗೊಬ್ಬ ಕನ್ನಡ ಲೆಕ್ಚರು, ಆ ಲೆಕ್ಚರ್ ಗೆ ಒಬ್ಬ ಕಾಣೆಯಾದ ಮಗ.. ಇಂತಹ ಕಥಾ ಹಂದರದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ನಗೆಯ ಚಿಲುಮೆಯೇ ಇದೆ. ಭಾವನಾತ್ಮಕ ಸನ್ನಿವೇಶಗಳಿವೆ, ತಾಯಿಯ ಪ್ರೀತಿ ಇದೆ. ಗುರು - ಶಿಷ್ಯರ ಅವಿನಾಭಾವ ಸಂಬಂಧವೂ ಇದೆ. ಎರಡು ಮೂರು ಸಾಧಾರಣ ಚಿತ್ರಗಳನ್ನು ಮಾಡಿದ್ದ ಯೋಗರಾಜ ಭಟ್ಟರು ಇನ್ನೊಮ್ಮೆ ಒಳ್ಳೆಯ ಕಥೆಯ ಮೂಲಕ ಮರಳಿ ಬಂದಿದ್ದಾರೆ. 

ಇನ್ನು ನಟನೆ ವಿಷಯಕ್ಕೆ ಬಂದರೆ ಹಲವಾರು ಫುಲ್ ಮಾರ್ಕ್ಸ್ ಪಡೆಯುತ್ತಾರೆ. ಕನ್ನಡ ಲೆಕ್ಚರ್ ಪಾತ್ರಧಾರಿ ಅನಂತ್ ನಾಗ್ ಅಂತೂ ವಾಹ್.. ಅವರ ಅಭಿನಕ್ಕೆ ಸಾಟಿಯೇ ಇಲ್ಲ. ಇನ್ನು ಗಣೇಶ್. ಇಂದಿನ ತಮ್ಮ ನಗಿಸುವ, ನಗಿಸುತ್ತಲೇ ಅಳಿಸುವ ಪಾತ್ರದಲ್ಲಿ ಮತ್ತೊಮ್ಮೆ ಮೋದಿ ಮಾಡಿದ್ದಾರೆ. ಗಂಭೀರ ಪಾತ್ರದಲ್ಲಿ ಪವನ್ ಇಷ್ಟವಾಗುತ್ತಾರೆ. ಗಣೇಶ್ ಅಂತಹ ಕಚಗುಳಿ ನಟರು ಇದ್ದರೂ ಸಿನಿಮಾದಲ್ಲಿ ಅತ್ಯಂತ ಹೆಚ್ಚು ನಗಿಸುವವರು ದಿಗಂತ್. ದಿಗಂತ್ ಅವರನ್ನು ಅಘೋರಿ ರೂಪದಲ್ಲಿ ನೋಡುವುದೇ ಮಜಾ. ದಿಗಂತ್ ತೆರೆಯ  ಮೇಲೆ ಇದ್ದಷ್ಟು ಹೊತ್ತು ನಗುವಿಗೆ ನಗುವಿಗೆ ಕೊರತೆಯೇ ಇಲ್ಲ. ರಂಗಾಯಣ  ರಘು, ಸುಧಾ ಬೆಳವಾಡಿ, ಪದ್ಮಜಾ, ಶ್ರೀನಾಥ್ ಅವರುಗಳು ಬಹಳ ಇಷ್ಟವಾಗುತ್ತಾರೆ. ಬುಲೆಟ್ ಪ್ರಕಾಶ್ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ವೈಭವೀ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 

ಪ್ಯಾನ್ ಇಂಡಿಯಾ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಇತ್ಯಾದಿ ಸಿನಿಮಾಗಳಗಳ ಅಬ್ಬರಗಳ ನಡುವೆ ಅಚ್ಚ ಕನ್ನಡದ ಸಿನಿಮಾ ಬಹಳ ಇಷ್ಟವಾಗುತ್ತದೆ. ಈ ನೋಡುಗರಿಗಂತೂ ಪೈಸೆ ವಸೂಲ್ ಪಕ್ಕಾ. ಸಾಧ್ಯವಾದರೆ ಸಿನಿಮಾ ಮಂದಿರಗಳಿಗೆ ತೆರಳಿ ಈ ಚಿತ್ರ ವೀಕ್ಷಿಸಿ.

Sunday, August 7, 2022

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (ನಾನು ನೋಡಿದ ಚಿತ್ರಗಳು -6)

 ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳನ್ನು ನಾನು ನೋಡಿದ್ದರೂ, ಕನ್ನಡ ಭಾಹೆಯ ಸಿನಿಮಾ ನೋಡಿದ್ದು ಒಂದೇ ಒಂದು. ಅದೇ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ. ಈ ಸಿನಿಮಾ ಬಿಡುಗಡೆಯಾದ ವೇಳೆ ನಾನು ಶಿರಸಿಯ ನಟರಾಜ ಟಾಕೀಸಿನಲ್ಲಿ ಇದನ್ನು ನೋಡಬೇಕು ಎಂದುಕೊಂಡಿದ್ದೆ. ಕೊನೆಗೂ ಆ ಟಾಕೀಸಿಗೆ ಈ ಸಿನಿಮಾ ಬರಲೇ ಇಲ್ಲ. ಕೊನೆಗೆ OTT ಯಲ್ಲಿ ನೋಡಿದ್ದಾಯ್ತು.

ವಿನಾಯಕ ಕೋಡ್ಸರ ಅವರ ಹಲವು ಪ್ರಯತ್ನಗಳಲ್ಲಿ ಇದೂ ಒಂದು. ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಸಿನಿಮಾ ಹಲವು ವಿಷಯಗಳಲ್ಲಿ ಆಪ್ತ ಎನ್ನಿಸಿತು.
2300 ಈಗಿನ ದಿನಮಾನದಲ್ಲಿ ತೀರಾ ದೊಡ್ಡ ಮೊತ್ತವೇನಲ್ಲ. ಕೇವಲ 2300 ರೂಪಾಯಿಗೆ ನಾಯಕ ಅಷ್ಟೆಲ್ಲ ಒದ್ದಾಡುತ್ತಾನಾ ಎನ್ನುವ ಭಾವನೆ ನನ್ನ ಮನಸ್ಸಿನಲ್ಲಿ ಕಾದಿದ್ದು ಸುಳ್ಳಲ್ಲ. ಕೇವಲ 2300 ರೂಪಾಯಿಗಾಗಿ ನಾಯಕ ಹೋರಾಟ ನಡೆಸುವ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ, ಲಕ್ಷ, ಕೋಟಿಗಳಲ್ಲಿ ಹಣ ಲೆಖ್ಖ ಮಾಡುವ ದಿನಮಾನದಲ್ಲಿ ನಿರ್ದೇಶಕರು ಸಾವಿರ ರೂಪಾಯಿಗಾಗಿ ಹೋರಾಡುವ ಕಥೆ ಮಾಡಿದ್ದೂ ಸರಿಯಲ್ಲ ಎನ್ನುವ ಭಾವನೆ ಸಿನಿಮಾ ನೋಡುವಾಗ ನನಗೆ ಅನ್ನಿಸಿದ್ದು ಸುಳ್ಳಲ್ಲ. ಆದರೆ ಸಿನಿಮಾ ಮುಂದುವರಿದಂತೆಲ್ಲ ಈ ಭಾವನೆಗಳು ಬದಲಾದವು.
ನನ್ನ ಪರಿಚಯದ ಗೆಳೆಯನೊಬ್ಬ ಸೈಬರ್ ಜಾಲಕ್ಕೆ ಸಿಲುಕಿ ಅಪಾರ ಹಣ ಕಳೆದುಕೊಂಡಿದ್ದ. ಆ ವೇಳೆ ಅನೇಕರು ಸೈಬರ್ ಜಾಲದಲ್ಲಿ ಸಿಲುಕಿ ಕಳೆದುಕೊಂಡ ಹಣ ಯಾವತ್ತೂ ಮರಳಿ ಬರುವುದಿಲ್ಲ ಎಂದಿದ್ದರಂತೆ. ಆದರೆ ಆ ಗೆಳೆಯ ಪೊಲೀಸ್ ಕಂಪ್ಲೇಂಟ್ ಕೊಟ್ಟು, ನ್ಯಾಯಾಲಯದ ಮೆಟ್ಟಿಲು ಏರಿ, ಹಲವು ತಿಂಗಳುಗಳ ಕಾಲ ಪೊಲೀಸ್ ಸ್ಟೇಷನ್ ಹಾಗೂ ಬ್ಯಾಂಕ್ ಮೆಟ್ಟಿಲು ಸವೆಸಿ ಕೊನೆಗೂ ಆ ಹಣವನ್ನು ಖದೀಮರಿಂದ ವಾಪಾಸ್ ಕಕ್ಕಿಸುವಲ್ಲಿ ಯಶಸ್ವಿಯಾಗಿದ್ದ. ಈ ಸಿನಿಮಾ ನೋಡಿದ ತಕ್ಷಣ ಆ ಗೆಳೆಯನ ಬಳಿ, `ಇದು ನಿನ್ನದೇ ಕಥೆ' ಎಂದಿದ್ದೆ.
ಮಲೆನಾಡು, ಶರಾವತಿ ನದಿ, ಅಡಿಕೆ ಕೊಯ್ಲು, ಹವ್ಯಕ ಸಂಸ್ಕೃತಿ ಹೀಗೆ ಹಲವು ವಿಷಯಗಳಲ್ಲಿ ಸಿನಿಮಾ ಬಹಳ ಆಪ್ತವಾಯಿತು. ನನ್ನ ಇಷ್ಟದ ನಟರಲ್ಲಿ ಒಬ್ಬನಾದ ದಿಗಂತ್ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾನೆ. ಐಂದ್ರಿತಾ ಕೂಡ ಸೊಗಸಾಗಿ ನಟಿಸಿದ್ದಾಳೆ. ನಮ್ಮ ನಡುವೆಯೇ ಇದ್ದು, ಆಗಾಗ ಭೇಟಿಯಾಗುವ ಗೋಕರ್ಣ ಪುರಾಣದ ರೂವಾರಿ ಎಂ. ಎ. ಹೆಗ್ದೆಯವರದ್ದು ಅಚ್ಚರಿಯ ನಟನೆ. ಹಿತ್ಲಕೈ ಗಣಪತಿ ಭಟ್ಟರು, ವಿದ್ಯಾಮೂರ್ತಿ, ರಂಜಿನಿ ರಾಘವನ್, ಬಾಳೇಸರ ವಿನಾಯಕ ಹೀಗೆ ಎಲ್ಲರೂ ಲೀಲಾಜಾಲವಾಗಿ ನಟಿಸಿ ನೋಡುಗರನ್ನು ಖುಷಿ ಪಡಿಸುತ್ತಾರೆ.
ವಿನಾಯಕ ಕೋಡ್ಸರ ಅವರ ಮೊದಲ ಸಿನಿಮಾ ಇದಾಗಿರುವ ಕಾರಣ ಸಿನಿಮಾದಲ್ಲಿ ಇರುವ ಕೆಲವು ಚಿಕ್ಕಪುಟ್ಟ ಲೋಪ ದೋಷಗಳಿಗೆ ಮಾಫಿ. ಬೇರೆ ರೀತಿಯ ಮಾತು, ಸಂಸ್ಕೃತಿ, ಆಚರಣೆ, ನಡೆ ನುಡಿಯನ್ನು ಹೊಂದಿರುವ ಹವ್ಯಕರ ಬದುಕನ್ನು ಬಹಳ ಚನ್ನಾಗಿ ಚಿತ್ರಿಸಿದ್ದಾರೆ. ಮಲೆನಾಡಿಗೆ ಬಹಳಷ್ಟು ಬಣ್ಣ ತುಂಬಿದ್ದಾರೆ. ಇವರ ಮುಂದಿನ ಚಿತ್ರ ಯಾವುದಿರಬಹುದು? ಮಲೆನಾಡಿನ ಆಚೆಗಿನ ಚಿತ್ರವನ್ನು ಮಾಡಬಹುದೇ ಎನ್ನುವ ಕುತೂಹಲ ಇದೆ.
ನಮ್ಮೂರ ಮಂದಾರ ಹೂವೆ ಸಿನಿಮಾದ ನಂತರ ಮತ್ತೊಮ್ಮೆ ಈ ಚಿತ್ರ ಹವ್ಯಕರ ಸಂಸ್ಕೃತಿ ಅನಾವರಣ ಮಾಡಿದೆ ಅನ್ನುವುದನ್ನು ಹೆಮ್ಮೆಯಿಂದ ಹೇಳಬಹುದು. ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದೆ. ಇನ್ನೂ ನೋಡಿಲ್ಲ ಅಂದ್ರೆ ತಪ್ಪದೆ ನೋಡಿ.

Friday, July 16, 2021

ಇರುವುದೆಲ್ಲವ ಬಿಟ್ಟು... (ಕಥಾ ಸರಣಿ ಭಾಗ-5)

(2014 ರಲ್ಲಿ ಬರೆದಿದ್ದ, ವಾಣಿ-ವಿನಾಯಕರ ಪ್ರೇಮ ಕಥೆಯ ಮುಂದುವರಿದ ಭಾಗ.. )


 `ವಾಣಿ..ತಮ್ಮಂಗೆ ಉಪನಯನ ಮಾಡನ..' ಎಂದು ಸುಧೀಂದ್ರ ಹೇಳಿದ್ದಕ್ಕೆ ಸುಮ್ಮನೆ ತಲೆ ಅಲ್ಲಾಡಿಸಿ ಹೂಂ ಅಂದಿದ್ದಳು ವಾಣಿ.

ಅದಾಗಿ ಕೆಲವೇ ದಿನಗಳಲ್ಲಿ ಸುಧೀಂದ್ರ ಎಲ್ಲ ತಯಾರಿಗಳನ್ನೂ ಆರಂಭಿಸಿದ್ದ. ಉಪನಯನದ ದಿನಾಂಕವನ್ನೂ ತನ್ನ ಪುರೋಹಿತ ಭಟ್ಟರ ಬಳಿ ಕೇಳಿಸಿಕೊಂಡು ಬಂದಿದ್ದಲ್ಲದೇ ಉಪನಯನದ ಕಾರ್ಡನ್ನೂ ಮುದ್ರಿಸಿಯಾಗಿತ್ತು.

`ನಿನ್ನ ಬಳಗದವರನ್ನೂ ಉಪನಯನಕ್ಕೆ ಕರೆಯಲೆ ಶುರು ಮಾಡಿದ್ಯಾ..?' ಎಂದು ಸುಧೀಂದ್ರ ಕೇಳಿಯೂ ಆಗಿತ್ತು. ಆಗ ವಾಣಿಗೆ ಮೊದಲು ನೆನಪಾಗಿದ್ದೇ ವಿನಾಯಕ.

ಸುಧೀಂದ್ರನ ಜೊತೆಗೆ ಮದುವೆಯಾಗಿ ಮಗನೂ ಹುಟ್ಟಿ ಇದೀಗ ಉಪನಯನದ ಸಮಯ ಬರುವ ವೇಳೆಗೆ ಜಗತ್ತು ಅದೆಷ್ಟೋ ಬದಲಾವಣೆಯನ್ನು ಹೊಂದಿತ್ತು. ಜಗತ್ತಿನ ಓಟಕ್ಕೆ ತಕ್ಕಂತೆ ಶಿರಸಿಯೂ ಕೂಡ ಆಧುನಿಕತೆಯ ಜಾಲದೊಳಕ್ಕೆ ಸಿಲುಕಿಯಾಗಿತ್ತು. ಹಳೆಯ ಹಂಚಿನ ಮನೆಗಳೆಲ್ಲ ಸಿಮೆಂಟಿನ ಕಟ್ಟಡಗಳಾಗಿ ಬದಲಾಗಿದ್ದವು. ಎಲ್ಲ ಕಟ್ಟಡಗಳಿಗೂ ಕಪ್ಪು ಬಣ್ಣದ, ಬಿಸಿಲು ನಿರೋಧಕ ಗಾಜುಗಳ ಅಳವಡಿಕೆಯಾಗಿತ್ತು. ಎರಡು ಮಹಡಿಯ ಮನೆಗಳ ಬದಲಾಗಿ ನಾಲ್ಕು-ಐದು ಮಹಡಿಗಳ ಕಟ್ಟಡಗಳು ತಲೆ ಎತ್ತಿ, ಗಗನದ ಕಡೆಗೆ ಮುಖ ಮಾಡಿದ್ದವು.

ತಾಸಿಗೆ ಒಂದು ಬಸ್ಸು ಓಡಾಡುತ್ತಿದ್ದ ಕಡೆಗಳಲ್ಲೆಲ್ಲ ಐದು-ಆರು ಬಸ್ಸುಗಳು ಓಡಾಡತೊಡಗಿತ್ತು. ಅಷ್ಟೇ ಅಲ್ಲದೇ ಮನೆ ಮನೆಗೊಂದು ಬೈಕು-ಕಾರು ಸವರ್ೇಸಾಮಾನ್ಯ ಎನ್ನುವಂತಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಮಲೆನಾಡು ಇನ್ನೊಂದು ಬಹುದೊಡ್ಡ ಬದಲಾವಣೆಗೆ ಸಾಕ್ಷಿಯಾಗಿತ್ತು.

ಮಲೆನಾಡಿನ ಮನೆ-ಮನಗಳನ್ನು ಬೆಸೆದಿದ್ದ ಅಂಚೆ ಇದೀಗ ಬಹುಜನರ ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು. ಪತ್ರ ಸಂಸ್ಕೃತಿಯನ್ನು ಹುಟ್ಟಹಾಕಿದ್ದ ಅಂಚೆಯ ಮೂಲಕ ಇದೀಗ ಯಾವುದೇ ಪತ್ರಗಳ ವಿನಿಮಯ ಇಲ್ಲ ಎನ್ನುವಂತಾಗಿತ್ತು. ವಾರಕ್ಕೊಮ್ಮೆಯೋ, ಹತ್ತು ದಿನಗಳಿಗೆ ಒಮ್ಮೆಯೋ ಮನೆ ಅಂಗಳಕ್ಕೆ ಬಂದು ಪತ್ರ ಬಂದಿದೆ ಎನ್ನುವ ಅಂಚೆಯ ಅಣ್ಣ ನಾಪತ್ತೆಯಾಗಿದ್ದ. ಎಲ್ಲೋ ಅಪರೂಪಕ್ಕೊಮ್ಮೆ ಸೊಸೈಟಿಯ ಅಢಾವೆ ಪತ್ರಿಕೆಯೋ, ಇನ್ಯಾವುದೋ ನೋಟಿಸು ಸರಬರಾಜಿಗೆ ಮಾತ್ರ ಅಂಚೆಯ ಅಣ್ಣ ಸೀಮಿತವಾಗಿದ್ದ. ಪತ್ರ ವಿನಿಮಯದ ಜಾಗದಲ್ಲೀಗ ಮೊಬೈಲ್ ಎಂಬ ಮಾಯಾ ರಾಕ್ಷಸ ಫೆವಿಕಾಲ್ ಅಂಟಿಸಿಕೊಂಡು ಕುಳಿತಿದ್ದ.

ಮಾಯಾವಿ ಮೊಬೈಲ್ ಕೂಡ ಮಲೆನಾಡಿನಲ್ಲಿ ಸುಮ್ಮನೆ ಬರಲಿಲ್ಲ. ಮೊದ ಮೊದಲ ದಿನಗಳಲ್ಲಿ ಬಿಸ್ಸೆನ್ನೆಲ್ ಮೂಲಕ ಬಂದವನು ಸಿಮ್ ಕಾಡರ್ಿಗಾಗಿ ಉದ್ದುದ್ದದ ಸರತಿ ಸಾಲಿನಲ್ಲಿ ಜನರನ್ನು ನಿಲ್ಲಿಸಿದ್ದ. ಶಿರಸಿ ನಗರದಲ್ಲಿ ಒಂದೋ ಎರಡೋ ಟವರ್ ಮೂಲಕ ಜನರನ್ನು ಬೆಸೆಯಲು ಆರಂಭಿಸಿದ ಮೊಬೈಲ್ ಮಾಯಾವು ನಂತರದ ದಿನಗಳಲ್ಲಿ ಹಳ್ಳಿ ಹಳ್ಳಿಗಳ ಕಡೆಗೂ ಮುಖ ಮಾಡಿದ್ದ. ಬಿಸ್ಸೆನ್ನೆಲ್ ಜೊತೆ ಜೊತೆಯಲ್ಲಿಯೇ ಖಾಸಗಿ ಮೊಬೈಲ್ ಕಂಪನಿಗಳೂ ಬಂದವು. ಅಗ್ಗದ ದೂರವಾಣಿ ಕರೆಗಳ ಜೊತೆಗೆ ಅಗ್ಗದ ಇಂಟರ್ನೆಟ್ ಕೂಡ ನೀಡಲು ಆರಂಭಿಸಿದ್ದವು. ಮೊಬೈಲ್ ಎನ್ನುವ ಮಾಯಾವುಯನ್ನು ಅಂಗೈನಲ್ಲಿ ಹಿಡಿದಿದ್ದ ಮಲೆನಾಡಿನ ಮಂದಿ ತಮ್ಮನ್ನು ತಾವು ಬದಲಾವಣೆಗೆ ಒಗ್ಗಿಸಿಕೊಂಡಿದ್ದರು. ಸದ್ದಿಲ್ಲದೆ ಪತ್ರ ಬರೆಯುವ ಸಂಸ್ಕೃತಿ ಮಾಯವಾಗಿತ್ತು.

ಪತ್ರವನ್ನು ಬರೆದು ಪೋಸ್ಟ್ ಮಾಡುತ್ತಿದ್ದ ದಿನಗಳೇ ಚನ್ನಾಗಿತ್ತಲ್ಲವಾ ಎಂದುಕೊಂಡಳು ವಾಣಿ. ಆ ದಿನಗಳಲ್ಲಿ ಪತ್ರ ಬರೆದು ಪೋಸ್ಟ್ ಮಾಡಿ, ಅದಕ್ಕೆ ತಿಂಗಳುಗಳ ವರೆಗೆ ಉತ್ತರ ಬರುವುದನ್ನೇ ನಿರೀಕ್ಷೆ ಮಾಡುತ್ತಿದ್ದ ದಿನಗಳು ಎಷ್ಟು ಹಸುರಾಗಿದ್ದವಲ್ಲವಾ ಎಂದುಕೊಂಡಳು ಅವಳು. ಪತ್ರ ಅದೆಷ್ಟೋ ಮನಸ್ಸುಗಳನ್ನು ಬೆಸೆದಿತ್ತು ಅಲ್ಲವೇ. ಪತ್ರ ಬರೆಯುತ್ತಿದ್ದ ದಿನಗಳ ಪ್ರೀತಿಗೆ ಅದಷ್ಟು ಪಾವಿತ್ರ್ಯತೆ ಇತ್ತು ಅಲ್ಲವೇ ಎಂದುಕೊಂಡಳು ವಾಣಿ. ಈಗಿನ ಪ್ರೀತಿ ಹಾಗೆ ಅಲ್ಲವೇ ಅಲ್ಲ. ಮೊಬೈಲ್ ನಲ್ಲಿ ಹುಟ್ಟಿ, ಚಾಟಿಂಗ್ ನಲ್ಲಿ ಬೆಳೆದು ಡೇಟಿಂಗ್ ನಲ್ಲಿ ಅಂತ್ಯವಾಗಿಬಿಡುತ್ತವೆ ಎಂದು ನಿಟ್ಟುಸಿರು ಬಿಟ್ಟಳು. ಈಗೆಲ್ಲ ಪ್ರೀತಿ ಹುಟ್ಟಿದ ತಾಸು ಘಳಿಗೆಯಲ್ಲಿಯೇ ಅದನ್ನು ನಿವೇದನೆ ಮಾಡಿಕೊಂಡು ಬಿಡುತ್ತಾರೆ. ಆದರೆ ಆಗ ಹಾಗಿರಲಿಲ್ಲ. ಒನ್ ವೇ ಲವ್ ಆಗಿದ್ದರೂ ಅದನ್ನು ಹೇಳಿಕೊಳ್ಳಲು ವರ್ಷಗಟ್ಟಲೆ ಕಾದಿದ್ದು, ಪರಿತಪಿಸಿದ್ದು ಇರುತ್ತದಲ್ಲ. ಹೇಳಿಕೊಳ್ಳಲಾಗದೆಯೇ ಪ್ರೀತಿ ಸತ್ತು ಹೋಗಿರುವ ನಿದರ್ಶನ ಇದೆಯಲ್ಲ ಎಂದುಕೊಂಡಳು. ತನ್ನದೂ ಹಾಗೆಯೇ ಆಗಿತ್ತಲ್ಲವಾ ಎಂದು ನಿಟ್ಟುಸಿರು ಬಿಟ್ಟಳು.

ಗಂಡ ಸುಧೀಂದ್ರ ತನಗಾಗಿಯೇ ಒಂದು ಮೊಬೈಲ್ ತಂದುಕೊಟ್ಟಿದ್ದ. ನಂತರ ತನ್ನನ್ನು ಕಾಲೇಜು ದಿನಗಳ ಗೆಳೆಯರ ವಾಟ್ಸಾಪ್ ಬಳಗಕ್ಕೆ ಗೆಳತಿಯರು ಸೇರಿಸಿದ್ದರು. ಅಲ್ಲೆಲ್ಲ ಆಕೆ ವಿನಾಯಕನನ್ನು ಹುಡುಕಿದ್ದಳು. ಆ ಗುಂಪಿನಲ್ಲಿ ವಿನಾಯಕ ಕಂಡಿದ್ದನಾದರೂ, ಒಂದೇ ಒಂದು ಮೆಸೆಜ್ ಮಾಡಿರಲಿಲ್ಲ. ವಿನಾಯಕ ಸಂಪೂರ್ಣವಾಗಿ ಬದಲಾಗಿರಬಹುದೇನೋ ಎಂದುಕೊಂಡಿದ್ದಳು ವಾಣಿ. ಮದುವೆಯಾಗಿ ಮಕ್ಕಳ ಜೊತೆ ಖುಷಿಯಾಗಿರುವ ವಿನಾಯಕನಿಗೆ ತನ್ನ ನೆನಪೂ ಇರಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದಳು.

   ಸುದೀರ್ಘ ಬಂಧ ಬೆಳೆಯುವುದಕ್ಕೆ ಸಣ್ಣ ನೆಪ ಸಾಕಾಗುತ್ತದೆ. ವಾಣಿಗೂ ಕೂಡ ಆಗಾಗ ವಿನಾಯಕನನ್ನು ಮಾತನಾಡಿಸಬೇಕು ಎನ್ನುವ ಆಸೆ ಆಗುತ್ತಲೇ ಇತ್ತು. ಆದರೆ ತಾನಾಗಿಯೇ ಮಾತನಾಡಿಸಿದರೆ ವಿನಾಯಕ ಮಾತನಾಡಬಹುದೇ? ಗೊತ್ತಿಲ್ಲದವರಂತೆ ನಡೆದುಕೊಳ್ಳಬಹುದೇ? ತಾನಾಗಿ ಮಾತನಾಡಿಸಿ ಅವಮಾನ ಮಾಡಿಸಿಕೊಳ್ಳಬೇಕೇ? ಸುಮ್ಮನೆ ಇದ್ದು ಬಿಡಲೇ? ಹೀಗೆ ಹಲವು ತಳಮಳ ತೊಳಲಾಟಗಳಲ್ಲಿ ಒದ್ದಾಡಿದ್ದಳು. ವಿನಾಯಕನನ್ನು ಮಾತನಾಡಿಸಲು ಇದೀಗ ನೆಪ ಒಂದು ಸಿಕ್ಕಂತಾಗಿತ್ತು.

   `ಹಾಯ್ ವಿನಾಯಕ, ಹೇಂಗಿದ್ದೆ? ನಾನು ವಾಣಿ..' ವಾಟ್ಸಾಪ್ ನಲ್ಲಿ ಹೀಗೆ ಮೆಸೇಜ್ ಮಾಡಿದ್ದ ವಾಣಿ, ತನ್ನ ಮೆಸೇಜಿಗೆ ಪ್ರತ್ಯುತ್ತರ ಬರುವ ವರೆಗೂ ಪಟ್ಟ ತಳಮಳ ಅಷ್ಟಿಷ್ಟಲ್ಲ. ನಿಮಿಷ ನಿಮಿಷಕ್ಕೂ ಮೊಬೈಲ್ ನೋಡುತ್ತಾ, ವಾಟ್ಸಾಪ್ ತೆರೆಯುತ್ತಾ, ಕುಂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ ಒದ್ದಾಡಿದ್ದಳು. ಚಡಪಡಿಸಿದ್ದಳು. ಕೊನೆಗೂ ಒಮ್ಮೆ ಉತ್ತರ ಬಂದಿತ್ತು. `ಹಾಯ್ ವಾಣಿ? ಎಂತ ಆಶ್ಚರ್ಯ. ನಾನು ಚನ್ನಾಗಿದ್ದಿ. ನೀ ಹೇಂಗಿದ್ದೆ?' ವಿನಾಯಕ ಉತ್ತರಿಸಿದ್ದ. ವಾಣಿಗೆ ಆಗ ಒಮ್ಮೆ ಸ್ವರ್ಗವೇ ಅಂಗೈಗೆ ಸಿಕ್ಕಿದೆಯೋ ಅನ್ನಿಸಿತ್ತು. ವಿನಾಯಕ ನನ್ನ ಮರೆತಿಲ್ಲ ಎಂದು ಖುಷಿ ಪಟ್ಟಳು ವಾಣಿ.

ಉಭಯ ಕುಶಲೋಪರಿ ಸಾಂಪ್ರತ ನಡೆದ ಬಳಿಕ ವಾಣಿ ತನ್ನ ಮಗನ ಉಪನಯನಕ್ಕಾಗಿ ವಿನಾಯಕನ್ನು ಕರೆದಳು. ಅದಕ್ಕೆ ವಿನಾಯಕ ಬರುತ್ತೇನೆ ಎಂದೂ ಹೇಳಿದ. ಈ ಎಲ್ಲ ಮಾತುಗಳ ನಂತರ ನಡೆದ ಕ್ಷಣಕಾಲದ ನಿಶ್ಯಬ್ಧ ಅದೆಷ್ಟೋ ಪ್ರಶ್ನೆಗಳನ್ನು ಕೇಳಿತು. ಅದೆಷ್ಟೋ ಉತ್ತರಗಳನ್ನೂ ಹೇಳಿತು.

      ಕಾಲೇಜು ಮುಗಿದ ನಂತರ ನಾನು ಒಮ್ಮೆ ಧೈರ್ಯ ಮಾಡಿ ವಿನಾಯಕನ ಬಳಿ ಹೇಳಿ ಬಿಡಬೇಕಿತ್ತು ಎಂದುಕೊಂಡಳು ವಾಣಿ. ಛೆ ತಾನೇ ಚೂರೇ ಚೂರು ಧೈರ್ಯ ಮಾಡಿದ್ದರೆ ವಿನಾಯಕ ನನ್ನವನಾಗುತ್ತಿದ್ದನಲ್ಲ ಎಂದುಕೊಂಡಳು. ಮರೆತ ವಿನಾಯಕನನ್ನು, ವಿನಾಯಕನ ಜೊತೆಗಿನ ಸಾಂಗತ್ಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಳು ವಾಣಿ.

ಇತ್ತ ವಿನಾಯಕನ ಮನಸ್ಸಿನಲ್ಲಿ ಕೂಡ ತರಂಗಗಳೆದ್ದಿತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವ ಹಾಗೆ ಆಗಿತ್ತು.


(ಮುಂದುವರಿಯುತ್ತದೆ)

Sunday, May 3, 2020

ಅಂ-ಕಣ - 12

ಇಲ್ಲೊಬ್ಬಳು
ರಾತ್ರಿ ನನಗೆ
ಭಯವೇ ಆಗೋಲ್ಲ
ಎನ್ನುತ್ತಿದ್ದಾಳೆ!
ಹಗಲಲ್ಲಿ
ಬೆಚ್ಚಿ ಬೀಳುತ್ತಾಳೆ!


-------------


(2013 ರಲ್ಲಿ ಬರೆದಿದ್ದು)

ನಿನ್ನೆಯಿಂದ ಮನಸ್ಸು ಕಲ್ಲವಿಲವಾಗಿದೆ...
ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿವೇಚನೆ...

ಎಲೆಕ್ಷನ್ ಬಿಸಿಯ ನಡುವೆಯೂ ಮನಸ್ಸು ಮರುಗುತ್ತಿದೆ....
ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಸರಬ್ ಜಿತ್ ಸಿಂಗ್
ಸಾವನ್ನಪ್ಪಿರುವ ಕುರಿತು.. ಮನಸ್ಸು ಕುದಿಯುತ್ತಿದೆ...

ಅದೆಷ್ಟು ಜನ ಹೀಗೆ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ...
ಇನ್ನೆಷ್ಟು ಜನ ಸಾಯಬೇಕೋ...
ಸರಬ್ ಜಿತ್ ಅಂತಿಮವಾಗಿ ಹೀಗೆ ಸಾಯಲಿಕ್ಕಾಗಿಯೇ 22 ವರ್ಷ ಜೈಲಿನಲ್ಲಿ ಕಳೆದು ಬಿಟ್ಟನಲ್ಲ..?
ನಮ್ಮ ಸರ್ಕಾರ ಆನತನ್ನು ಬಿಡುಗಡೆ ಗೊಳಿಸುವ ಬಗ್ಗೆ 22 ವರ್ಷಗಳಿಂದ ಬಾಯಿ ಮಾತಿನಲ್ಲಿಯೇ ಕಾಲ ಕಳೆಯಿತೆ..?
ಒಬ್ಬ ಸೈನಿಕ ತನ್ನ ನಾಡಿನವನು ಸತ್ತ, ಆತನನ್ನು ನೆರೆಯ ಪ್ಯಾಲಿಸ್ಟೈನ್ ದವರು ಕೊಂದರೆಂದರೆ ಸಾಕು.. ಪುಟ್ಟ ಇಸ್ರೇಲಿಗರು ಅಪ್ಪಟ ಸ್ವಾಭಿಮಾನಿಗಳು... ಅದಕ್ಕೆ ಪ್ರತಿಯಾಗಿ ಬಾಂಬು ದಾಳಿ ಮಾಡಿಯೋ., ರಾಕೆಟ್ಟು ಹಾರಿಸಿಯೋ 8-10 ಜನರನ್ನು ಕೊಂದು ಸೇಡಿ ತೀರಿಸಿಕೊಳ್ಳುತ್ತಾರೆ...
ಆದರೆ ನಾವ್ಯಾಕೆ ಹೀಗೆ..?

ಅಮಾಯಕನೋ.. ಅಲ್ಲವೋ... ಭಾರತೀಯ ಜನಸಾಮಾನ್ಯ.. ಸರಬ್ ಜೀತ್...
ನಿಜವಾಗಿಯೂ ಖೈದಿಗಳಿಂದ ಹಲ್ಲೆಗೊಳಗಾಗಿ ಸತ್ತ ಎನ್ನುವುದು ಖಂಡಿತ ಸುಳ್ಳು...
ಯಾವುದೋ ಅಧಿಕಾರಿ ಹಲ್ಲೆ ಮಾಡಿಯೇ ಕೊಂದಿರಬೇಕು... ಎಂದು ಮನಸ್ಸು ಶಂಕಿಸುತ್ತದೆ...
ಕಸಬ್, ಅಪ್ಝಲ್ ಗುರು ಹೀಗೆ ಉಗ್ರರನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಸೇಡನ್ನು ತೀರಿಸಿಕೊಂಡಿರಲೂ ಬಹುದು..
ಆದರೆ ನಾವೇಕೆ ಸುಮ್ಮನಿದ್ದೇವೆ..?
ಪಾಕಿಸ್ತಾನದ ವಿರುದ್ಧ ಒಮ್ಮೆ ಗುಡುಗಿದರೆ ಸಾಕಿತ್ತು... ನಾಯಿ ಬುದ್ಧಿಯ ಪಾಕಿಸ್ತಾನ ಕುಂಯ್ ಗುಟ್ಟುತ್ತಿತ್ತು...
ನಮ್ಮ `ಮೌನ'ಮೋಹನ ಯಾಕೆ ಇನ್ನೂ ಮುರುಳಿ ಗಾನ ನುಡಿಸ್ತಾ ಇದ್ದಾರೆ ಅರ್ಥವಾಗುತ್ತಿಲ್ಲ...

`ಪಾಕಿಸ್ತಾನದ ಜೈಲಿನಲ್ಲಿ ಸರಬ್ ಜಿತ್ ಸಾವು.. ತಿಹಾರ್ ಜೈಲಿನಲ್ಲಿ ಪಾಕ್ ಖೈದಿಗಳಿಗೆ ಬಂದೋಬಸ್ತ್ ಎನ್ನುವ ಸುದ್ದಿಗಳು ಬರುತ್ತಿವೆ... ಮತ್ತೆ ಮನಸ್ಸು ಬೆಂಕಿಯ ಆಗರ...
ಇನ್ನೆಷ್ಟು ಹತ್ಯೆಯಾಗಬೇಕು ನಾವು ಎಚ್ಚೆತ್ತುಕೊಳ್ಳಲು..?
ಪಾಕಿಸ್ತಾನ ಕೊಲ್ಲುತ್ತಲೇ ಇರಬೇಕೇ..?
ನಾವು ಸಾಯುತ್ತಲೇ ಇರಬೇಕೆ..?

ಈ ನಡುವೆ `ನಮೋ' ಎಂದರೂ ನಾಯಕ ಬದಲಾಗುವ ಸೂಚನೆ ಸಿಗುತ್ತಿಲ್ಲ....
ಈಗಿರುವವರೆಲ್ಲ ಸತ್ತು ಮಲಗಿದ್ದಾರೆ...
ಉತ್ತರದ ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಿ ಡ್ರಾಗನ್ ಗಳು ನಮ್ಮ ನೆಲವನ್ನು ಚುನ್ ಚುನ್ ಕರ್ ಎನ್ನುವಂತೆ... ಕಿತ್ತು ಕೊಳ್ಳುತ್ತಿವೆ...
ಆದರೂ ನಾವು ಸುಮ್ಮನಿದ್ದೇವೆ...

ಇದು ಸಹನೆಯಾ..?
ಅಸಹಾಯಕತೆಯಾ..?
ಸೋಗಲಾಡಿತನವಾ..?
ಯಾರನ್ನೋ ಮೆಚ್ಚಿಸುವಂತಹ ಮಹಾನುಭಾವತನವಾ..?

ಏನನ್ನಬೇಕು..?
ಸತ್ತಮೇಲೆ ಭಾರತಕ್ಕೆ ಬಂದು ಮಣ್ಆಗುತ್ತಿರುವ ಸರ್ಬಜಿತ್ ಸಿಂಗ್ ಗೆ ಅಶ್ರುತರ್ಪಣ..
ಸೌಂಡು ಮಾಡದ ನಾಯಕರಿಗೆ ಧಿಕ್ಕಾರ...

---------------

ಎಲ್ಲ ಕೂಲಿ ಕಾರ್ಮಿಕರು ಅವರವರ ಊರುಗಳಿಗೆ ವಾಪಾಸಾಗುತ್ತಿದ್ದಾರೆ..!
ಬಾಂಗ್ಲಾದವರು....?


--------

ಸಂಭವಾಮಿ
ಯುಗೇ ಯುಗೇ...

ರಾಮಾಯಣ ಧಾರವಾಹಿಗೂ ಅನ್ವಯ ಆಗುತ್ತದೆ!

----------

ಅವಳ ಬಳಿ
ಕವಿಯಾಗು ಎಂದೇ
ಕವಿತೆಯಾಗುವ
ಕಷ್ಟ ನಂಗೆ ಬೇಡ,
ನನ್ನ ಆತ್ಮಕಥೆಯನ್ನು
ನೀನೆ ಬರೆದುಬಿಡು ಎಂದಳು!

Saturday, March 28, 2020

ಕತ್ತಲೆಕಾನು (ಕಥೆ ಭಾಗ- 3)

ನನಗೆ ಈಗ ನಿಜಕ್ಕೂ ಗಾಬರಿಯಾಯಿತು. ` ತಮಾಷೆ ಮಾಡಬೇಡಿ, ಹೇಳಿ, ಒಂದು ಲಾರಿ ಹೋಗಿರಬೇಕಲ್ಲ ಇದೆ ದಾರಿಯಾಗಿ..' ಎಂದೇ.
`ರೀ ನನಗೇನು ತಲೆ ಹಾಳಾಗಿದೆಯಾ. ಯಾವ ಲಾರಿನೂ ಇಲ್ಲ ಏನೂ ಇಲ್ಲ. ಹೋಗ್ರಿ ಸುಮ್ನೆ' ಎಂದ ಗಾರ್ಡ್. ನಾನು ನಿಧಾನವಾಗಿ ಮುಂದೆ ಹೋದೆ. ನನ್ನ ತಲೆಯಲ್ಲಿ ನೂರಾರು ಪ್ರಶ್ನೆಗಳು ತರಂಗಗಳಂತೆ ಎದ್ದು ಬಂದಿದ್ದವು.
ಮಾವಿನಗುಂಡಿಯಲ್ಲಿ ಒಂದು ಚಹಾ ಅಂಗಡಿ ಬಾಗಿಲು ಹಾಕುತ್ತಿತ್ತು. ಸೀದಾ ಅತ್ತ ಹೋಗಿ `ಒಂದು ಟಿ ಕೊಡಿ' ಎಂದೇ. ಆತ ನನ್ನನ್ನು ಒಮ್ಮೆ ದುರುಗುಟ್ಟಿಕೊಂಡು ನೋಡಿ, ಹ್ಮ್ ಎಂದು ಚಹಾ ತರಲು ಹೋದ.
ಅರೆ ನಾನು ಗೇರುಸೊಪ್ಪದಿಂದ ಆ ಲಾರಿಯ ಜೊತೆ ಬಂದಿದ್ದೇನಲ್ಲ. ಎಲ್ಲಿ ಹೋಗಲು ಸಾಧ್ಯ. ದಾರಿ ಮಧ್ಯದಲ್ಲಿ ಎಲ್ಲಾದರೂ ಕಳ್ಳ ನಟ ಹೊಡೆಯಲು ಅದು ಹೋಯಿತೇ? ಅಥವಾ ಬೇರೆ ಮಧ್ಯದಲ್ಲಿ ಯಾವುದಾದರು ಊರಿಗೆ ಹೋಯಿತೇ ಎಂಬ ಆಲೋಚನೆಗಳು ಬಂದವು. ಆದರೆ ಯಾರೇ ಆಗಿದ್ದರೂ ಕೂಡ ಅಂಕುಡೊಂಕಿನ ಹಾದಿಯಲ್ಲಿ ಅಷ್ಟೆಲ್ಲ ವೇಗವಾಗಿ ಗಡಿ ಓಡಿಸಲು ಸಾಧ್ಯವೇ ಇಲ್ಲ. ಇದರಲ್ಲಿ ಏನೋ ಇದೆ ಎಂದುಕೊಂಡೆ.
ನೋಡೋಣ ಈ ಚಹಾ ಅಂಗಡಿಯವನಿಗಾದರು ಗೊತ್ತಿರಬಹುದು, ಬರಲಿ ಅವ ಎಂದು ಸುಮ್ಮನಾದೆ. ಕೆಲ ಹೊತ್ತಿನ ನಂತರ ಹಬೆಯಾಡುತ್ತಿದ್ದ ಬಿಸಿ ಬಿಸಿ ಚಹಾ ಜೊತೆಗೆ ಬಂದ ಅವ. ಅವನ ಬಳಿ `ಹೊಯ್, ಈ ದಾರಿಯಲ್ಲಿ ಈಗಷ್ಟೇ ಯಾವುದಾದ್ರೂ ಲಾರಿ ಹೋಗಿದ್ದು ನೋಡಿದ್ರಾ' ಎಂದು ಕೇಳಿದೆ.
`ಲಾರಿಯಾ? ಯಾವ ಲಾರಿ? ಹೇಗಿದೆ ಬಣ್ಣ?' ಎಂದು ನನ್ನ ಬಳಿಯೇ ಮರು ಪ್ರಶ್ನೆ ಹಾಕಿದ. ಅದಕ್ಕೆ ನಾನು ಮೊದಲಿಂದ ನಡೆದ ಎಲ್ಲ ವಿಷಯ ಹೇಳಿದೆ.
ಅದಕ್ಕೆ ಕೊನೆಗೆ ಅವನು ಹೇಳಿದ ` ಹೊಯ್ ಮಾರಾಯ್ರೆ, ನಿಮ್ಮ ಅದೃಷ್ಟ ಚೊಲೋ ಇದೆ ಬಿಡಿ'ಎಂದ
ನಾನು ಗಾಬರಿಯಾಗಿ `ಯಾಕೆ ಎಂತ ಆಯಿತು?' ಎಂದೇ.
`ಅದು ಲಾರಿಯಲ್ಲ. ನೀವು ಬಂದಿದ್ದು ಲಾರಿಯ ಜೊತೆಗೂ ಅಲ್ಲ'
`ಮತ್ತೆ.. ಎಂತದ್ದು ಅದು?'
`ಅದು ಈ ಭಾಗದ ಭೂತ'
`ತಮಾಷೆ ಮಾಡಬೇಡಿ ಮಾರಾಯ್ರೆ.. ನಾನು ಆ ಲಾರಿಯ ಜೊತೆಗೆ ಬಂದಿದ್ದೆ, ಅದರ ಬೆಳಕು ಕಂಡಿದ್ದೇನೆ. ಆ ಲಾರಿ ಸೂಸುತ್ತಿದ್ದ ಹೊಗೆಗೆ ಮುಖ ಕೊಟ್ಟಿದ್ದೇನೆ. ಆ ಹೊಗೆಯ ಬಿಸಿ ಅನುಭವ ನನಗಾಗಿದೆ..' ಎಂದೇ.
`ಹ್ಮ್ಮ್,. ಈ ಥರ ಅನುಭವ ಹಲವರಿಗಾಗಿದೆ. ಬಹಳ ಜನರು ಇದೆ ರೀತಿ ಹೇಳಿದ್ದಾರೆ. ಆದರೆ ನಿಜಕ್ಕೂ ಅಂತಹ ಲಾರಿ ಇಲ್ಲವೇ ಇಲ್ಲ..' ಎಂದ.
ನಾನು ಬೆಪ್ಪಾಗಿ ನೋಡಲು ಆರಂಭಿಸಿದೆ.
`ಸುಮಾರು ವರ್ಷಗಳ ಹಿಂದೆ ಕತ್ತಲೆಕನು ಘಟ್ಟದಲ್ಲಿ ತಮಿಳುನಾಡಿನ ಲಾರಿಯೊಂದು ಉರುಳಿ ಶರಾವತಿ ಕಣಿಗೆಗೆ ಬಿದ್ದಿತ್ತು. ಆ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಇಬ್ಬರೂ ಸಾವನ್ನಪ್ಪಿದ್ದರು. ಅವರ ಹೆಣ ಕೂಡ ಸಿಕ್ಕಿರಲಿಲ್ಲ. ಅಂದಿನಿಂದ ಈ ಲಾರಿ ಭೂತ ಹಲವರನ್ನು ಕಾಡುತ್ತಿದೆ ನೋಡಿ.' ಎಂದ.
` ಈ ಲಾರಿ ಹಲವರಿಗೆ ಸಿಕ್ಕಿದೆ. ಹಲವರನ್ನು ಹೆದರಿಸಿದೆ,. ಕಾಡಿದೆ. ಬೀಳಿಸಿದೆ. ಹಲವಾರು ಗಾಯಗೊಂಡಿದ್ದಾರೆ. ಹಲವಾರು ತೀವ್ರ ಜ್ವರದಿಂದ ಬಳಲಿದ್ದಾರೆ. ಹಲವಾರು ಮತಿಭ್ರಮಣೆಗೆ ಒಳಗಾಗಿದ್ದಾರೆ. ಅದರಲ್ಲಿ ಇಷ್ಟುಹೊತ್ತು ಸರಿಯಾಗಿ ಇದ್ದಿದ್ದು ಎಂದರೆ ನೀವೊಬ್ಬರೇ ಇರಬೇಕು ನೋಡಿ' ಎಂದ.
ತಕ್ಷಣ ನನಗೆ ಆ ಲಾರಿ, ಅದರ ಹೊಗೆಯ ಅನುಭವ, ಅದರಿಂದ ಕೇಳಿ ಬರುತ್ತಿದ್ದ ತಮಿಳು ಹಾಡು ಎಲ್ಲ ನೆನಪಾಯಿತು. ಅದು ಭೂತವಾಗಿತ್ತು ಎಂದು ಕೇಳಿದಾಗಿನಿಂದ ಬರಲು ಶುರುವಾಗಿದ್ದ ಬೆವರು ಇನ್ನಷ್ಟು ಧಾರಾಕಾರವಾಗಿತ್ತು.
ನಾನು ಚಹಾದ ಬಿಲ್ಲು ಕೊಡುವಂತೆ ನನ್ನ ಮುಂದೆ ನಿಂತಿದ್ದ ಹೋಟೆಲಿನವನ ಕಾಲಿನ ಕಡೆಗೆ ದೃಷ್ಟಿ ಹೋಯಿತು. ಏನೋ ಸರಿ ಇಲ್ಲ ಎನ್ನುವಂತೆ ಅನ್ನಿಸಿತು. ದಿಟ್ಟಿಸಿ ನೋಡಿದೆ. ಆತನ ಕಾಲು ನೋಡಿ ಒಮ್ಮೆ ಎದೆಯಲ್ಲಿ ಚಳುಕು ಶುರುವಾಯಿತು. ಆತನ ಕಾಲು ತಿರುಗಾಮುರುಗ ಇತ್ತು. ಅಂದರೆ ಈತನೂ ಭೂತನೇ? ಅಯ್ಯೋ ದೇವರೇ.. ಎಲ್ಲಿಗೆ ಬಂದೇನಪ್ಪಾ ನಾನು ಎಂದುಕೊಳ್ಳುತ್ತಿರುವಂತೆ ಮೈಯಲ್ಲಿ ನಡುಕ ಶುರುವಾಗಿತ್ತು. ಎದೆಯಲ್ಲಿ ಅದೇನೋ ನೋವು. `ಅಹ್...' ಎಂದೇ. ಅದೇ ನನ್ನ ಕೊನೆಯ ಶಬ್ಧವಾಗಿತ್ತು.

(ಮುಗಿಯಿತು)

Monday, December 30, 2019

ಕತ್ತಲೆಕಾನು (ಕಥೆ ಭಾಗ- 2)


'ಮತ್ತೆ.. ಇನ್ನೇನು..?' ನಾನು ಕುತೂಹಲದಿಂದ ಕೇಳಿದೆ.
'ಇದು ಕತ್ತಲೆಕಾನು.. ಈ ಪ್ರದೇಶದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕತ್ತಲೆಕಾನು ಘಟ್ಟ ಹೆದರಿಸ್ತದೆ.. ಪ್ರಯಾಣಿಕರನ್ನ ಭೀತಿಗೆ ಒಡ್ಡುತ್ತವೆ. ಒಬ್ಬೊಬ್ಬರೇ ಹೋಗುವವರನ್ನ ಕತ್ತಲೆಕಾನಿನ ದೆವ್ವಗಳು ಅಡ್ಡಗಟ್ಟುತ್ತವೆ, ಕೈಹಿಡಿದು ಕಾಡಿನೊಳಕ್ಕೆ ಕರೆದೊಯ್ದುಬಿಡುತ್ತವೆ.. ಎಂಬ ಮಾತುಗಳಿವೆ..' ಎಂದರು..
'ಹ.. ಹ.. ನಾನು‌ ಇಂತದ್ದನ್ನ ನಂಬೋದಿಲ್ಲ ಬಿಡಿ..' ಎಂದೆ.
'ನಿಮಗೆ ಗೊತ್ತಿಲ್ಲ ಕತ್ತಲೆಕಾನಿನ ಕರಾಮತ್ತು. ಇಲ್ಲಿ ಬಹಳಷ್ಟು ವಿಚಿತ್ರ ಘಟನೆಗಳು ನಡೆದಿವೆ. ಯಾವುದೋ ಗಾಡಿಯವರು ಈ ಕಾರಣದಿಂದಲೇ ಬಿದ್ದು ಸತ್ತಿದ್ದೂ ಇದೆ. ಇನ್ನೂ ಹಲವರು ದೆವ್ವದ ಕಾಟದಿಂದ ಹೆದರಿ ವಾರಗಟ್ಟಲೆ ಕಾಲ ಚಳಿ ಜ್ವರದಿಂದ ಮಲಗಿದ್ದೂ ಇದೆ.. ಮತಿಭ್ರಮಣೆಗೆ ಒಳಗಾದವರೂ ಇದ್ದಾರೆ.. ಹೀಗಾಗಿ ಹೇಳ್ತಿದ್ದೇನೆ. ನಿಮ್ಮ ಒಳ್ಳೇದಕ್ಕೆ. ಸಾಧ್ಯವಾದಷ್ಟೂ ಈ ರಾತ್ರಿಯ ಪ್ರಯಾಣವನ್ನ ನಿಲ್ಲಿಸಿ.. ' ಎಂದರು.
'ನನಗೆ ಹೋಗಲೇಕು.. ಬಹಳ ಅನಿವಾರ್ಯತೆ ಇದೆ..' ಎಂದು ಅಲವತ್ತುಕೊಂಡೆ. ಕೊನೆಗೆ ಅವರೇ ಸಲಹೆ ನೀಡಿದರು, ' ಇವರೇ.., ನೀವು ಒಂದು ಕೆಲಸ ಮಾಡಿ ಈಗ ಹೋಗುವಾಗ ಒಬ್ಬರೇ ಹೋಗಬೇಡಿ. ಯಾರಾದರೂ ಸಿಗುತ್ತಾರೋ ನೋಡಿ. ಅದಿಲ್ಲವಾದರೆ ಯಾವುದಾದರೂ ಗಾಡಿ, ಬಸ್ಸು, ಲಾರಿ ಬಂದರೆ ಅದರ ಜತೆಗೇ ಹೋಗಿ. ಆವಾಗ ನೀವು ಒಬ್ಬಂಟಿಯಾಗಿ ಇರುವುದಿಲ್ಲ. ನಿಮ್ಮ ಜತೆ ಆ ವಾಹನ ಇರುವ ಕಾರಣ ಯಾವುದೇ ಆತಂಕವೂ ಇರುವುದಿಲ್ಲ.. ಸುರಳೀತವಾಗಿ ನೀವು ಸಾಗರ ತಲುಪಬಹುದು..' ಎಂದರು. ಅವರ ಸಲಹೆ ನನಗೆ ಒಪ್ಪಿಗೆಯಾಯಿತು. ಅವರಿಗೆ ಬಿಲ್ ಕೊಟ್ಟು, ರಸ್ತೆಗೆ ಬಂದು ಯಾವುದಾದರೂ ವಾಹನ ಬರಬಹುದು ಎಂದು ಕಾಯುತ್ತ ನಿಂತೆ. ಕೆಲ ಕಾಲ ಕಳೆದರೂ ಯಾವುದೇ ಗಾಡಿ ಬರಲಿಲ್ಲ.
ಕೊನೆಗೆ ಅದೆ ಹೊಟೆಲ್ ನ ಯಜಮಾನರು ಬಳಿ ಬಂದು ' ಒಂದು ಕೆಲಸ ಮಾಡಿ, ಇಲ್ಲಿಂದ ಸ್ವಲ್ಪ ದೂರ ಹೋದ ಮೇಲೆ ಗೇರುಸೊಪ್ಪಾ ಅಣೆಕಟ್ಟೆ ಕಾಣಿಸ್ತದೆ. ಅಲ್ಲಿಂದ ಸಾಗರ ಕಡೆಗೆ ವಾಹನಗಳು ಓಡಾಡುತ್ತಿರುತ್ತವೆ. ಅಲ್ಲಿಗೆ ಹೋದರೆ ನಿಮಗೆ ಅನುಕೂಲ ಆಗಬಹುದು ನೋಡಿ..' ಎಂದರು. ಅವರ ಸಲಹೆಯಂತೆ ನಾನು ಹೆದ್ದಾರಿಯಿಂದ ಗೇರುಸೊಪ್ಪಾ ಅಣೆಕಟ್ಟು ಕಾಣುವ ಸ್ಥಳದ ಕಡೆಗೆ ತೆರಳಿದೆ.
ಗೇರುಸೊಪ್ಪಾದಿಂದ ಅಣೆಕಟ್ಟೆಗೆ ಒಂದೆರಡು ಕಿಲೋಮೀಟರ್ ದೂರ. ನಾನು ಬಾಹುಬಲಿಯನ್ನೇರಿ ಅಲ್ಲಿಗೆ ತೆರಳಿದರೂ ಯಾವುದೇ ವಾಹನ ಬರಲಿಲ್ಲ. ಕೊನೆಗೆ ಗೇರುಸೊಪ್ಪೆ ಅಣೆಕಟ್ಟೆ ಎದುರು ಕೆಲ ಕಾಲ ನಿಂತೆ. ಆಗಲೂ ಯಾವುದೇ ವಾಹನ ಆ ರಸ್ತೆಗುಂಟ ಬರಲಿಲ್ಲ. ನನಗೋ ಸಮಯ ಸುಮ್ಮನೇ ಕಳೆದು ಹೋಗುತ್ತಿದೆಯಲ್ಲ ಎನ್ನಿಸಿದರೂ, ಆ ಹೊಟೆಲ್ ನ ಯಜಮಾನರು ಹೇಳಿದ ಮಾತುಗಳು ಕಿವಿಯಲ್ಲಿ ಗುಂಯೆನ್ನುತ್ತಿದ್ದವು.
ಕೊನೆಗೂ ಯಾವುದೇ ವಾಹನ ಬರಲಿಲ್ಲ. ನಾನು ಆದದ್ದಾಗಲಿ ಎಂದುಕೊಂಡು ಬಾಹುಬಲಿಯ ಕಿವಿ ಹಿಂಡಿ ನಿಧಾನವಾಗಿ ಮುಂದಕ್ಕೆ ಹೊರಟೆ.. ಕೆಲ ಹೊತ್ತಿನಲ್ಲಿಯೇ ಕತ್ತಲೆಕಾನು ಘಟ್ಟ ನನ್ನನ್ನು ಸ್ವಾಗತಿಸಿತು.
ಕಡುಗತ್ತಲೆಯ ನಡುವೆ ಏರು ಹಾದಿಯಲ್ಲಿ ನಾನು ನನ್ನ ಬಾಹುಬಲಿಯನ್ನೇರಿ ನಿಧಾನವಾಗಿ ಸಾಗುತ್ತಲೇ ಇದ್ದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಇದ್ದ ದಟ್ಟ ಕಾಡು, ನೀರವ ಮೌನ ನನ್ನ ಮನದಾಳದಲ್ಲಿ ಭೀತಿಯ ಕಿರು ತೆರೆಯನ್ನು ಎಬ್ಬಿಸಿತು. ಆ ಮೂಲೆಯಲ್ಲಿ ಯಾವುದಾದರೂ ದೆವ್ವ ನನ್ನನ್ನ ಅಡ್ಡಗಟ್ಟಬಹುದಾ?, ಅದೋ ಆ ದೊಡ್ಡ ಮರದ ಪಕ್ಕದಿಂದ ಯಾವುದಾದರೂ ಕಾಳಿಂಗ ಸರ್ಪ ಧುತ್ತೆಂದು‌ ನನ್ನನ್ನು ತಡೆದು ನಿಲ್ಲಿಸಬಹುದಾ? ಅಗೋ ಅಲ್ಲಿ ಏನೋ ಬೆಳಕು ಕಂಡಂತಾಗುತ್ತದೆಯಲ್ಲ.. ಎಂದುಕೊಳ್ಳುತ್ತಲೇ ನಿಧಾನಕ್ಕೆ ಹೋಗುತ್ತಿದ್ದೆ. ರಸ್ತೆಯ ಪಕ್ಕದ ಮರಗಳ ಮೇಲೆ, ಬಳ್ಳಿಗಳ ಮೇಲೆ ಬಾಹುಬಲಿಯಿಂದ ಚಿಮ್ಮಿದ ಬೆಳಕು‌ ಬಿದ್ದು ತರಹೇವಾರಿ ಆಕೃತಿಯನ್ನು ಮೂಡಿಸುತ್ತಿತ್ತು. ಕಿರುಗಣ್ಣಿನಲ್ಲಿ, ವಾರೆಗಣ್ಣಿನಲ್ಲಿ ಅವನ್ನ ನೋಡುತ್ತ, ನೋಡಿಯೂ ನೋಡದಿದ್ದವನಂತೆ ನಟಿಸುತ್ತ ಮುಂದಕ್ಕೆ ಹೋದೆ.
ಕೆಲ ಹೊತ್ತಿನ ನಂತರ ನನ್ನ ಹಿಂಭಾಗದಲ್ಲಿ ದೊಡ್ಡ ಬೆಳಕು ಮೂಡಿದಂತಾಯಿತು. ಥಟ್ಟನೆ ಗಾಡಿಯ ಕನ್ನಡಿಯಲ್ಲಿ ಗಮನಿಸಿದಾಗ ಎರಡು ಬೃಹತ್ ಲೈಟುಗಳು ದೂರದಲ್ಲಿ ಬರುತ್ತಿದ್ದವು. ಯಾವುದೋ ವಾಹನ ಬಂತಿರಬೇಕು ಎಂದುಕೊಂಡು ನಾನು ಮತ್ತಷ್ಟು ನಿಧಾನವಾಗಿ ಸಾಗಿದೆ. ಭರ್ರನೆ ಬಂದ ಬೆಳಕು‌ ನನ್ನನ್ನು ದಾಟಿ ಮುಂದಕ್ಕೆ ಹೋಗುವ ವೇಳೆಗೆ ಅದೊಂದು ಮಿನಿ ಲಾರಿ ಎನ್ನುವುದು ನನ್ನ ಅರಿವಿಗೆ ಬಂದಿತು.
ಅಬ್ಬ ಅಂತೂ ನನಗೆ ಈ ಲಾರಿಯ ಜತೆಗೆ ಸಾಗುವ ಯೋಗ ಬಂತಲ್ಲ ಎಂದುಕೊಂಡೆ. ಲಾರಿಯ ಹಿಂಭಾಗದಲ್ಲಿಯೇ ಬೈಕನ್ನು ಓಡಿಸಿದೆ. ಕತ್ತಲೆಕಾನಿನ ಘಟ್ಟವನ್ನ ಏರಿದಂತೆಲ್ಲ ಚಳಿ ದಟ್ಟವಾಗತೊಡಗಿತು. ಅಲ್ಲಲ್ಲಿ ಮಂಜಿನ ತೆರೆಯೂ ಆವರಿಸತೊಡಗಿತು. ಚಳಿ ಹೆಚ್ಚಿದಂತೆಲ್ಲ ನಾನು ಲಾರಿಯ ಹತ್ತಿರ ಹತ್ತಿರಕ್ಕೆ ಹೋದೆ. ಲಾರಿಯಿಂದ ಬರುತ್ತಿದ್ದ ಹೊಗೆ ನನ್ನ‌ಮುಖಕ್ಕೆ ತಾಗುತ್ತಿತ್ತು. ತನ್ಮೂಲಕ ನನಗೆ ಚಳಿಯನ್ನು‌ ಕಡಿಮೆ ಮಾಡುತ್ತಿತ್ತು. ಲಾರಿಯ ಹಿಂಭಾಗದಲ್ಲಿಯೇ ಹೋದರೆ ಚಳಿ‌ ಕಡಿಮೆ ಎಂಬ ಸ್ವ ಅನುಭವ ಮತ್ತೊಮ್ಮೆ ದಟ್ಟವಾಯಿತು.
ಲಾರಿಯ ಹಿಂದು ಹಿಂದೆಯೇ ಹೋಗುತ್ತಿದ್ದರೂ ನನ್ನ ಕಣ್ಣು ಅಕ್ಕಪಕ್ಕದ ದಟ್ಟ ಕಾಡಿನ ಕಡೆಗೆ, ಶರಾವತಿಯ ಮೌನ ಕಣಿವೆಯ ಕಡೆಗೇ ಇತ್ತು. ಯಾವುದೋ ಕ್ಷಣದಲ್ಲಿ ರಸ್ತೆಗೆ ಅಡ್ಡ ಬರಬಹುದಾದ ದೊಡ್ಡ ಹೆಬ್ಬಾವನ್ನು ಎದುರಿಸಲು, ಎಂಟು, ಹತ್ತು ಅಡಿ ಉದ್ದದ‌ ಅಷ್ಟೇ ಎತ್ತರಕ್ಕೆ ನೆಟ್ಟಗೆ ನಿಲ್ಲಬಹುದಾದ ಕಾಳಿಂಗ ಸರ್ಪವನ್ನ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಆಲೋಚನೆಯೇ ಆವರಿಸಿತ್ತು. ಇಂತಹ ಎಷ್ಟು ಕಾಡಲ್ಲಿ ನಾನು ಓಡಾಡಿಲ್ಲ ಎಂಬ ಹುಂಭ ಧೈರ್ಯ ಮನದಲ್ಲಿ ಮೂಡಿದ ಕೆಲವೇ ಕ್ಷಣ ದಲ್ಲಿಯೇ ನನಗರಿವಿಲ್ಲದಂತೆಯೇ ಬಾಯಲ್ಲಿ ಓಂ ಭೂರ್ಭುವ ಸ್ವಃ.. ಎಂದು ಗಾಯತ್ರಿ ಮಂತ್ರದ ಪಠಣವೂ ನಡೆಯಿತು. ಗಾಯತ್ರಿ ಮಂತ್ರ ಪಠಣ ನನ್ನೊಳಗೆ ಅದೇನೋ ಶಕ್ತಿ ತುಂಬುತ್ತಿದೆ ಎಂಬ ಅರೆಘಳಿಗೆಯಲ್ಲಿಯೇ ಲಾರಿಯೊಳಗಿಂದ ಅದ್ಯಾವುದೋ ತಮಿಳು ಸಿನಿಮಾದ ಹಾಡು ಅಲೆ ಅಲೆಯಾಗಿ ಕೇಳಿ ಬಂತು. ನಾನು ದೆವ್ವ-ಭೂತ, ಕಾಳಿಂಗಗಳ ಭ್ರಮೆಯಿಂದ ಅರೆಘಳಿಗೆ ಹೊರಬಂದೆ.
ನಾನೇ ನಿಧಾನವಾಗಿ ಹೋಗುತ್ತಿದ್ದೇನೆಯೇ? ಅಥವಾ ಈ ದಾರಿಯೇ ದೀರ್ಘವಾಗುತ್ತಿದೆಯಾ ಎನ್ನುವ ಭಾವನೆ ನನ್ನಲ್ಲಿ ಮೂಡಿತು. ಕಡುಗತ್ತಲ ರಾತ್ರಿಯಲ್ಲಿ ದಟ್ಟ ಮಂಜಿನ ನಡುವೆ ದೊಡ್ಡದೊಂದು ಲಾರಿ, ಹಿಂದೊಂದು ಬೈಕ್ ಸಾಗುತ್ತಲೇ ಇತ್ತು. ಕೆಲವೇ ಕ್ಷಣದ ನಂತರ ಕತ್ತಲೆಕಾನಿನ ತಿರುವುಗಳೆಲ್ಲ ಮುಗಿದು ಮಲೆಮನೆಯ ಫಾಸಲೆ ಆರಂಭವಾಯಿತು. ಅಲ್ಲೊಂದು ಕಡೆ ಒಂದಷ್ಟು ಕಟ್ಟೆಗಳೂ, ಯಾವಾಗಲೋ ಪೂಜೆ ಮಾಡಿದ್ದರೋ ಎಂಬಂತಹ ಕುರುಹುಗಳೂ ಕಂಡವು. ಪೂಜೆ ಮಾಡಿದ್ದರೋ ಅಥವಾ ಕೋಳಿ, ಕುರಿಯನ್ನು ಬಲಿಕೊಟ್ಟಿದ್ದರೋ.. ಅದು ದೇವರೋ ಅಥವಾ ಚೌಡಿ, ಮಾಸ್ತಿಯಂತಹ ಗಣಗಳೋ ಗೊತ್ತಾಗಲಿಲ್ಲ. ನನ್ನ ದೃಷ್ಟಿ ಲಾರಿಯ ಕಡೆಗೇ ಇತ್ತು. ಒಮ್ಮೆ ಈ ಘಟ್ಟವನ್ನು ಏರಿ ಮುಗಿದರೆ ಸಾಕು ಎಂದುಕೊಂಡು ನೆಟ್ಟ ನೋಟದಿಂದ ಲಾರಿಯನ್ನು ಹಿಂಬಾಲಿಸುತ್ತಿದ್ದೆ.
ಇನ್ನೇನು ಘಟ್ಟ ಮುಗಿಯಬೇಕಷ್ಟೇ, ನೋಡ ನೋಡುತ್ತಿದ್ದಂತೆ ಲಾರಿ ವೇಗವನ್ನು ಪಡೆದುಕೊಂಡಿತು. ನನ್ನ ಬಾಹುಬಲಿಗೂ ಹಾಗೂ ಆ ಲಾರಿಗೂ ನಡುವೆ ಇದ್ದ ಅಂತರ ಹತ್ತು ಮೀಟರ್ ಆಯಿತು.. ಹತ್ತು ಇಪ್ಪತ್ತಾಯಿತು.. ಇಪ್ಪತ್ತು ಐವತ್ತಾಯಿತು.. ನಾನು ಬಾಹುಬಲಿಯ ವೇಗ ಹೆಚ್ಚಿಸಲು ಆಲೋಚಿಸುತ್ತಿದ್ದಂತೆಯೇ ಮತ್ತಷ್ಟು ವೇಗ ಪಡೆದುಕೊಂಡ ಲಾರಿ ರಸ್ತೆಯಲ್ಲಿ ಕಾಣದಂತಾಗಿ
ಮಂಜಿನ ತೆರೆಯಲ್ಲಿ ಕಳೆದು ಹೋಯಿತು. ನಾನು ತಬ್ಬಿಬ್ಬಾದೆನಾದರೂ ಸಾವರಿಸಿಕೊಂಡು ಬಾಹುಬಲಿಯ ವೇಗ ಹೆಚ್ಚಿಸಿದೆ. ನನ್ನ ಬೈಕ್ ಎಂಭತ್ತರ ಗಡಿ ದಾಟಿ ನೂರು ಕಿಲೋಮೀಟರ್ ವೇಗ ಪಡೆದುಕೊಂಡಿತು. ಆದರೂ ಆ ಲಾರಿ ನನಗೆ ಸಿಗದಂತಾಯಿತು.
ಲಾರಿಯ ಡ್ರೈವರನ್ಯಾರೋ ಪಳಗಿದವನೇ ಇರಬೇಕು. ಅಥವಾ ಈ ರಸ್ತೆಯಲ್ಲಿ ಪದೇ ಪದೆ ಓಡಾಡಿ ಗೊತ್ತಿರುವವನೇ ಇರಬೇಕು. ಇಂತಹ ಕತ್ತಲೆಯಲ್ಲಿ, ಮಂಜಿನ ಪರದೆಯ ನಡುವೆಯೂ ವೇಗವಾಗಿ, ನನಗೆ ಸಿಗದಂತೆ ಹೋಗಿರಬೇಕೆಂದರೆ ಆತನ ಡ್ರೈವಿಂಗ್ ಕೈಚಳಕ ಇನ್ನೆಷ್ಟು ಚನ್ನಾಗಿರಬೇಡ? ಎಂದುಕೊಂಡೆ.
ಐದಾರು ಕಿಲೋಮೀಟರ್ ಹಾದು ಬಂದರೂ ಲಾರಿ ಕಾಣಿಸಲಿಲ್ಲ. ಇನ್ನಷ್ಟು ಮುಂದೆ ಸಾಗಿದೆ. ಹತ್ತು-ಹದಿನೈದು ನಿಮಿಷದ ಪ್ರಯಾಣದ ನಂತರ ಇದ್ದಕ್ಕಿದ್ದಂತೆ ಒಂದು ಚೆಕ್ ಪೋಸ್ಟ್ ಕಾಣಿಸಿತು. ಬೈಕ್ ವೇಗ ತಗ್ಗಿಸಿದೆ. ನಾಕಾ ಬಂದಿ ಹಾಕಲಾಗಿತ್ತು. ಅಲ್ಲಲ್ಲಿ ಬೆಳಕುಗಳು, ಅಂಗಡಿಗಳ ದೀಪಗಳೂ ಕಾಣಿಸಿದವು. ಅಲ್ಲೇ ಇದ್ದ ಅರಣ್ಯ ಇಲಾಖೆ ಗಾರ್ಡ್ ಒಬ್ಬ ನನ್ನ ಗಾಡಿಯನ್ನು ನೋಡಿ ಅನುಮಾನ ಪಟ್ಟುಕೊಂಡನಾದರೂ ನಿಧಾನವಾಗಿ ಬಂದು ಚೆಕ್ ಪೋಸ್ಟ್ ಬಾಗಿಲು ತೆರೆಯಲು ಮುಂದಾದ.
ನಾನು ಸೀದಾ ಹೋಗಿ ಅವನ ಬಳಿ ನಿಂತು, 'ಹೋಯ್, ಈಗ ಇದೇ ದಾರಿಯಲ್ಲಿ ಒಂದು ಲಾರಿ ಹೋಯ್ತಾ?' ಎಂದು ಕೇಳಿದೆ.
ಆತ ಮತ್ತೊಮ್ಮೆ ನನ್ನನ್ನು ವಿಚಿತ್ರವಾಗಿ ನೋಡಿ, 'ಲಾರಿ? ಎಂತ ಲಾರಿ?' ಎಂದ

(ಮುಂದುವರಿಯುವುದು)

Wednesday, October 30, 2019

ಕತ್ತಲೆಕಾನು (ಕಥೆ ಭಾಗ 1)


'ಅರ್ಜೆಂಟ್ ಸಾಗರಕ್ಕೆ ಬಾ..' ಎಂದು ಸಹೋದರ‌ ಗುರುಪ್ರಸಾದನಿಂದ‌ ದೂರವಾಣಿ ಕರೆ. ಏನು? ಯಾಕೆ? ಎಂಬ ಯಾವುದೇ ಪ್ರಶ್ನೆಗೆ ಉತ್ತರವಿರಲಿಲ್ಲ.
ಆಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಪಶ್ಚಿಮದಲ್ಲಿ ಅರಬ್ಬಿ ಜಲಧಿಯಲ್ಲಿ ಅಸ್ತಮಿಸುತ್ತಿದ್ದ. ಬಾನು-ಸಮುದ್ರದ ಗಡಿಯಾದ್ಯಂತ ಹೊಂಬಣ್ಣದ ಕಲಾಕೃತಿಯನ್ನು ಮೂಡಿಸಿದ್ದ.
'ನಾನು ಹೊನ್ನಾವರದಲ್ಲಿ ಇದ್ದೇನಲ್ಲ ಮಾರಾಯಾ. ಈಗ ಬೇರೆ ಸಂಜೆಯಾಗುತ್ತಿದೆ.. ಈಗ ಬರಬೇಕಾ?' ಕೊಂಚ ಆಲಸ್ಯದಿಂದ ಆತನಿಗೆ ಹೇಳಿದ್ದೆ.
'ಇವತ್ ಎಷ್ಟೇ ಹೊತ್ತಾದರೂ ನೀನು ಸಾಗರಕ್ಕೆ ಬರಲೇಬೇಕು.. ನೀನು ಬರಲಿಲ್ಲ ಅಂದರೆ ಬಹುಮುಖ್ಯ ಸಂಗತಿಯೊಂದನ್ನ ನೀನು ಕಳೆದುಕೊಳ್ಳಬಹುದು.. ರಾತ್ರಿ ಎಷ್ಟು ಹೊತ್ತಾದರೂ ತೊಂದರೆ ಇಲ್ಲ.. ನಾನು ಕಾಯುತ್ತಿರುತ್ತೇನೆ.. ಬಾ' ಎಂದು ಪೋನ್ ಇರಿಸಿದ್ದ.
ಇದೊಳ್ಳೆ ಕಥೆಯಾಯ್ತಲ್ಲ.. ಎಂದುಕೊಂಡೆ. ಒಲ್ಲದ ಮನಸ್ಸಿನಿಂದ ನಿಧಾನವಾಗಿ ಎದ್ದೆ. ನನ್ನ ಜತೆ ಒಯ್ದಿದ್ದ ಬಟ್ಟೆಯನ್ನು ಬ್ಯಾಗಿಗೆ ತುಂಬಿಕೊಂಡೆ. ನನ್ನ ಪಲ್ಸರಿನ ಕಿವಿಯನ್ನ ಹಿಂಡಿದೆ. ಗುರ್ರೆಂದು ಸದ್ದು ಮಾಡಿದ ಪಲ್ಸರ್ ನಿಧಾನವಾಗಿ ವೇಗ ಪಡೆದುಕೊಂಡಿತು. 
ಶರಾವತಿ ತೀರದಿಂದ ಹಾದು ಬಿಎಚ್ ರೋಡ್ ಆರಂಭವಾಗುವ ಸರ್ಕಲ್ಲಿಗೆ ಬರುವ ವೇಳೆಗೆ ಚಹಾ ಕುಡಿಯುವ ಮನಸ್ಸಾಗಿ ಪಕ್ಕದಲ್ಲೇ ಇದ್ದ ಪೆಟ್ಟಿಗೆ ಅಂಗಡಿಗೆ ಹೋದೆ. ನನ್ನ ಹೊಟ್ಟೆಗೆ ಚಹಾವನ್ನೂ, ಬಾಹುಬಲಿ ಎಂದು ನಾನು ಆಪ್ತವಾಗಿ ಕರೆಯುವ ಪಲ್ಸರಿನ ಹೊಟ್ಟೆಗೆ ಪೆಟ್ರೂಲನ್ನೂ ಹತ್ತಿರದ ಬಂಕ್‌ ನಲ್ಲಿ ಸುರುವಿ ಸಾಗರದ ಕಡೆಗೆ ಪಯಣ ಬೆಳೆಸುವ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ದೂರದ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಸಾಲು ಕರ್ರಗೆ, ಮಬ್ಬಾಗಿ ಕಾಣುತ್ತಿತ್ತು. 
'ಹುಟ್ಟೆಟ್ಟೆಟ್ಟೆಟ್ರೋ...' ಎಂಬ ಟಿಟ್ಟಿಭ ಹಕ್ಕಿಯ ದೊಡ್ಡ ಸದ್ದಿನ ಆಲಾಪ ನನ್ನ ಬಾಹುಬಲಿಯ ಗುರ್ರೆಂಬ ಸದ್ದಿನ‌ ನಡುವೆಯೂ ಕಿವಿಗಪ್ಪಳಿಸಿ ಒಮ್ಮೆ ಮನಸ್ಸಿನಲ್ಲಿ ಅಲೆಯನ್ನೆಬ್ಬಿಸಿತ್ತು. 
ಅದಾಗಲೇ ಚಳಿಗಾಲ ಆರಂಭವಾಗಿದ್ದ ಕಾರಣ ತಿಳಿಯಾಗಿ ಇಬ್ಬನಿ ಧರೆಯನ್ನು ಚುಂಬಿಸಲು ಆರಂಭಿಸಿತ್ತು. ಎದುರಿನಿಂದ ಬರುತ್ತಿದ್ದ ವಾಹನಗಳ ದಟ್ಟ ಬೆಳಕು ಕಣ್ಣನ್ನ ಮಂಜಾಗಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ನಿಧಾನವಾಗಿ ಬಾಹುಬಲಿಯನ್ನ ಓಡಿಸಲು ಆರಂಭಿಸಿದ್ದೆ.
ಕೆಲ‌ ಸಮಯದ ನಂತರ ಕವಲಕ್ಕಿಯೂ ತದನಂತರ ಉಪ್ಪೋಣಿಯೂ ಸಿಕ್ಕಿತು. ಇಲ್ಲೇ ಅಲ್ಲವಾ ಹೈಗುಂದ ಇರುವುದು ಎಂದುಕೊಂಡು ಮುಂದಕ್ಕೆ ತೆರಳಿದೆ. ರಸ್ತೆಯ ಪಕ್ಕದಲ್ಲೆಲ್ಲೋ ಶರಾವತಿ ನಿಶ್ಶಬ್ಧವಾಗಿ ಹರಿಯುತ್ತಿದ್ದಳು. ಅಂಕು ಡೊಂಕಾದ ರಸ್ತೆಯಲ್ಲಿ ಬಾಹುಬಲಿ ನಿಯಮಿತ ವೇಗದಲ್ಲಿ ಓಡುತ್ತಿದ್ದ. ಹಾಗೂ ಹೀಗೂ ಗೇರುಸೊಪ್ಪೆಗೆ ಬರುವ ವೇಳೆಗಾಗಲೇ ದಟ್ಟ ರಾತ್ರಿ.
ಕಾಳುಮೆಣಸಿನ ರಾಣಿ ಚನ್ನಭೈರಾದೇವಿಯ ರಾಜಧಾನಿ ಗೇರುಸೊಪ್ಪೆ. ಚಿಕ್ಕದೊಂದು ಊರು. ಸಾಕಷ್ಟು ಅಂಗಡಿ, ಮಳಿಗೆಗಳಿವೆ. ಗೇರುಸೊಪ್ಪಾ ಅಣೆಕಟ್ಟೆಯ ಕೆಲಸಗಾರರಿಗಾಗಿ ನಿರ್ಮಿಸಿದ ಕಾಲೋನಿ, ಒಂದಷ್ಟು ಸರ್ಕಾರಿ ಕಚೇರಿಗಳು ಇಲ್ಲಿವೆ. ನದಿಯ ಇನ್ನೊಂದು ದಡದಲ್ಲಿ ಚನ್ನಭೈರಾದೇವಿ ಅರಮನೆಯ ಕುರುಹುಗಳೂ, ಜೈನ ಬಸದಿಯ ಅವಶೇಷಗಳೂ ಇವೆ. ಹೊನ್ನಾವರದ ಕಡೆಯಿಂದ ಬರುವ ರಾತ್ರಿ ವೇಳೆಯ ಬಸ್ಸುಗಳು, ಪ್ರವಾಸಿ ವಾಹನಗಳು ಗೇರುಸೊಪ್ಪೆಯ ಸಣ್ಣ ಸಣ್ಣ ಹೊಟೆಲ್ ಗಳ ಬಳಿ ನಿಲ್ಲುತ್ತವೆ. ಚಾಲಕರು ತಿಂಡಿಯನ್ನೋ, ಊಟವನ್ನೋ ಮಾಡಿ ಮುನ್ನಡೆಯುತ್ತಾರೆ. ಗೇರುಸೊಪ್ಪೆಯಿಂದ ಘಟ್ಟದ ರಸ್ತೆ ಆರಂಭವಾಗುವ ಕಾರಣ, ಅದೆಷ್ಟೋ ದೂರದ ವರೆಗೆ ಮನೆಗಳು, ಅಂಗಡಿಗಳು ಸಿಗದ ಕಾರಣ ಇಲ್ಲಿ ನಿಲ್ಲುವುದು ವಾಡಿಕೆಯಾಗಿಬಿಟ್ಟಿದೆ.
ಪಶ್ಚಿಮ ಘಟ್ಟದ ಸಾಲಿನ ಕೊನೆಯ ಅಂಚಿನ ತುಣುಕಾಗಿ ಗೇರುಸೊಪ್ಪೆ ಇದ್ದು ಕರಾವಳಿಗೂ-ಘಟ್ಟದ ನಾಡಿಗೂ ಬೆಸುಗೆಯಾಗಿ ನಿಂತಿದೆ. ನಾನು ಗೇರುಸೊಪ್ಪೆಯ ಬಳಿ ಬರುವ ವೇಳೆಗಾಗಲೇ ಸಮಯ ಒಂಭತ್ತು ಗಂಟೆಯನ್ನ ಮೀರಿಯಾಗಿತ್ತು. ಗೇರುಸೊಪ್ಪೆ ಬಹುತೇಕ ಬಾಗಿಲು ಹಾಕುವ ಸಮಯ ಅದು. ಒಂದೋ ಎರಡೋ ಅಂಗಡಿಗಳು, ಹೊಟೆಲುಗಳು ಬೆಳಕು ಬೀರುತ್ತಿದ್ದುದು ಬಿಟ್ಟರೆ ಬಹುತೇಕ ಊರಿಗೆ ನಿದ್ರಾಸುರನ ಛಾಯೆ ಆವರಿಸಿತ್ತು. ಬಿಎಚ್ ರಸ್ತೆಯಲ್ಲಿ ಆಗಲೇ ವಾಹನಗಳ ಸಂಖ್ಯೆ ಬಹಳ ಕಡಿಮೆಯಾಗಿತ್ತು.
ನಾನು ಎಷ್ಟೇ ವೇಗವಾಗಿ ಸಾಗಿದರೂ ಸಾಗರವನ್ನು ತಲುಪಲು ಹನ್ನೆರಡು ಗಂಟೆಯಾಗುತ್ತದೆ. ಆ ಹೊತ್ತಿನಲ್ಲಿ‌ ಸಾಗರದಲ್ಲಿ ಯಾವುದೇ ಹೊಟೆಲ್ ತೆರೆದಿರುವುದಿಲ್ಲ. ಇನ್ನು ಘಟ್ಟದ ಮೇಲಿನ‌ ಮಾವಿನಗುಂಡಿಯನ್ನು ತಲುಪಿದರೂ ಅಲ್ಲಿಯೂ ಹೊಟೆಲ್ ತೆರೆದಿರುವ‌ ಅನುಮಾನ ಮನದಲ್ಲಿ ಮೂಡಿತು. ಯಾವುದಕ್ಕೂ ಗೇರುಸೊಪ್ಪೆಯಲ್ಲಿ ಊಟ ಮಾಡುವುದು ಒಳಿತು, ಎಂದುಕೊಂಡು ಅಲ್ಲಿ‌ನ ಹೊಟೆಲನ್ನು ಹೊಕ್ಕೆ.
ಹೊಟೆಲ್ ಒಳಕ್ಕೆ ಒಬ್ಬರೋ, ಇಬ್ಬರೋ ಜನರಿದ್ದರಷ್ಟೇ. ಅವರಾಗಲೇ ತಮ್ಮ ಊಟ ಮುಗಿಸಿ ಇನ್ನೇನು ಹೊರಡುವ ಹವಣಿಕೆಯಲ್ಲಿದ್ದರು. ರಾತ್ರಿ ಒಂಭತ್ತೂವರೆಯ ಮೇಲೆ ಬಂದ ಒಬ್ಬಂಟಿ ಪಯಣಿಗನಾದ ನನ್ನನ್ನು ಕೊಂಚ ಅನುಮಾನದಿಂದಲೇ ನೋಡಿ, ತಮ್ಮ ಕೆಲಸದಲ್ಲಿ ನಿರತರಾದರು. ನಾನೋ ವೃತ್ತಿಪರ ಬೈಕರ್ ಗಳ ಹಾಗೇ ಕೈಗೆ  ದಪ್ಪನೆಯ ಗ್ಲೌಸ್, ಮೊಣಕಾಲಿಗೆ ಪಟ್ಟಿಯನ್ನೆಲ್ಲ ಕಟ್ಟಿಕೊಂಡಿದ್ದೆ. ಹೆಲ್ಮೆಟ್ಟನ್ನೂ ಸರಿಯಾಗಿ ಹಾಕಿ ಗಾಡಿ ಓಡಿಸದ ಅವರಿಗೆ ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸಿತಿರಬೇಕು.
'ಏನು ಬೇಕು?' ಹೊಟೆಲಿನ ಓನರ್ ಹಾಗೂ ಸಪ್ಲಾಯರ್ ಆಗಿದ್ದ ವ್ಯಕ್ತಿ ಕೇಳಿದಾಗ ' ಊಟ..' ಅಂದೆ.
'ಕಾರವಾರ- ಬೆಂಗಳೂರು ಬಸ್ ಇವತ್ ಬಹಳ ಲೇಟಂತೆ.. ಈ ಸಾರಿ‌ ಮಳೆಗಾಲ ಅಂತೂ ನಿಂತಿತಲ್ಲ.. 
ಇವತ್ತಿಂದ ಚಳಿ ಸ್ವಲ್ಪ ಶುರುವಾಗಿದೆ ಅಲಾ.. 
ಯಾವ್ ಥರ ಇಬ್ಬನಿ ಬೀಳ್ತಾ ಉಂಟು.. ಹೀಗೆ ಹಲವು ಮಾತುಗಳು ನನ್ನ ಕಿವಿಗೆ ಬಿದ್ದವು. ಕೆಲ ಕ್ಷಣದಲ್ಲಿ ಊಟ ಬಂದು, ನಾನು ಊಟವನ್ನು ಮುಗಿಸುವ ವೇಳೆಗಾಗಲೇ ಹೊಟೆಲ್ ಬಹುತೇಕ ಖಾಲಿ ಖಾಲಿಯಾಗಿತ್ತು.
ಬಿಲ್ ಕೊಡಲು ಹೋದಾಗ ನನಗೆ ಊಟವನ್ನು ಕೊಟ್ಟ ಯಜಮಾನರು ಸುಮ್ಮನೆ ಮಾತಿಗೆ ನಿಂತರು. 
' ಎಲ್ಲಿಂದ ಬಂದದ್ದು..' ಎಂದರು..
'ಹೊನ್ನಾವರದಿಂದ..' ಎಂದೆ.
'ಯಾವ ಕಡೆ ಹೊರಟದ್ದು?'
'ಸಾಗರಕ್ಕೆ ಹೋಗಬೇಕು..'

'ಸಾಗರಕ್ಕಾ? ಈ ಹೊತ್ತಿನಲ್ಲಿ ಹೊರಟ್ರಾ? ನಿಮ್ಮದೆಂತ ಬೈಕಲ್ಲಿ ಸವಾರಿಯಾ?' ಎಂದು ತುಸು ಅಚ್ಚರಿ ಹಾಗೂ ಗಾಬರಿಯಿಂದ ಕೇಳಿದರು.
'ಹೌದು.. ಯಾಕೆ?' ನಾನು ಕೇಳಿದೆ.
'ಈ ಹೊತ್ತಿನಲ್ಲಿ ಒಬ್ಬಂಟಿಯಾಗಿ ಹೋಗೋದು ಬೇಡವಾಗಿತ್ತು..' ಸಣ್ಣದಾಗಿ ಹೇಳಿದರು.
'ಅಯ್ಯೋ ನನಗೇನು ತೊಂದರೆ ಇಲ್ಲ ಬಿಡಿ.. ಇದೇ ರಸ್ತೆಯಲ್ಲಿ ಅದೆಷ್ಟೋ ಸಾರಿ ಓಡಾಡಿದ್ದೇನೆ. ಅದೂ ಅಲ್ಲದೇ ಕರ್ನಾಟಕದ ಅದೆಷ್ಟೋ ಊರುಗಳನ್ನ ಬೈಕಿನಲ್ಲಿಯೇ ಸುತ್ತಿದ್ದೇನೆ. ಹಗಲು, ರಾತ್ರಿ ಎನ್ನದೇ ಓಡಾಡಿದ್ದೇನೆ...' ಎಂದೆ
'ಹೌದ? ಘಟ್ಟದ ರಸ್ತೆಯಲ್ಲಿ ಓಡಾಡಿದ್ದೀರಾ? ಕತ್ತಲೆಕಾನು ಘಟ್ಟದಲ್ಲಿ ಹೋಗಿದ್ದಿರಾ?' ಎಂದು ಕೇಳಿದರು.
' ಹು.. ಅರಬೈಲು, ದೇವಿಮನೆ, ಬಡಾಳ, ಅಂಬೋಲಿ, ಚಾರ್ಮಾಡಿ, ಬಿಸಿಲೆ ಹೀಗೆ ಅದೆಷ್ಟೋ ಘಟ್ಟದಲ್ಲಿ‌ನಾನು ಹಾಗೂ ನನ್ನ ಬಾಹುಬಲಿ ಏಕಾಂಗಿಯಾಗಿ ಓಡಾಡಿದ್ದೇವೆ. ಈ ಕತ್ತಲೆಕಾನು ಘಟ್ಟದಲ್ಲಿಯೂ ಮೂರ್ನಾಲ್ಕು ಸಾರಿ ಓಡಾಡಿದ್ದೇನೆ...' ಎಂದೆ.
'ಕತ್ತಲೆಕಾನು ಘಟ್ಟದಲ್ಲಿ ರಾತ್ರಿ ಹೋಗಿದ್ದೀರಾ?' ಮತ್ತೊಮ್ಮೆ ಕೇಳಿದರು ಅವರು.
'ರಾತ್ರಿ ಹೋಗಿಲ್ಲ.. ಆದರೆ ಹಗಲಿನಲ್ಲಿ ಓಡಾಡಿದ್ದೇನೆ..' ಎಂದೆ.
'ಅದನ್ನೇ ನಾನು ಕೇಳಿದ್ದು. ಕತ್ತಲೆಕಾನು ಘಟ್ಟ ಇದೆಯಲ್ಲ ಇದು ಎಲ್ಲದರಂತಲ್ಲ. ಶರಾವತಿ ನದಿಯ ಪಕ್ಕದಲ್ಲಿ ಹಾದು ಹೋಗುವ ಇದು ದಟ್ಟ ಕಾಡಿನ ಪ್ರದೇಶ.. ಇಲ್ಲಿ ಹಗಲಿನಲ್ಲಿಯೇ ಒಬ್ಬಂಟಿಯಾಗಿ ಓಡಾಡುವುದು ಅಪಾಯಕರ. ಇನ್ನು ರಾತ್ರಿ ಕೇಳಬೇಕೆ? ನಮ್ಮ ಜಿಲ್ಲೆಯಲ್ಲಿ ಎಲ್ಲೇ ಕಾಳಿಂಗ ಸರ್ಪದಂತಹ ವಿಷ ಜಂತುಗಳು, ಅದೆಷ್ಟೋ ಕಾಡುಮೃಗಗಳು ಸಿಕ್ಕರೂ ಅವನ್ನು ಕತ್ತಲೆಕಾನಿಗೆ ತಂದು ಬಿಡುತ್ತಾರೆ. ಕತ್ತಲೆಕಾನು ಕಾಳಿಂಗ ಸರ್ಪಗಳ ತವರು ಎಂದೇ ಖ್ಯಾತಿ. ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸ್ಥಳವಂತೆ ಅದು..' ಎಂದರು ಅವರು.
ನಾನು‌ ಮಧ್ಯದಲ್ಲಿಯೇ ಬಾಯಿ ಹಾಕಿ ' ಹಾ.. ಹಾ.. ಹೌದು ಹೌದು.. ನನಗೆ ಗೊತ್ತು ಅದು.. ಕತ್ತಲೆಕಾನಿನ ಕಾಳಿಂಗ ಸರ್ಪಗಳ ಬಗ್ಗೆ ಡಿಸ್ಕವರಿ ಚಾನಲ್ಲಿನವರು ದೊಡ್ಡ ಕಾರ್ಯಕ್ರಮವನ್ನೇ ಮಾಡಿದ್ದಾರೆ. ಕಾಡಿನಲ್ಲಿಯೇ ಓಡಾಡುತ್ತ ಇರುವ ನನಗೆ ಇವುಗಳ ಕುರಿತು ಅಷ್ಟೇನೂ ಭಯ ಇಲ್ಲ ಬಿಡಿ..' ಎಂದೆ.

'ವಿಷಯ ಅದಲ್ಲ... ' ಎಂದು ಮಾತು ನಿಲ್ಲಿಸಿದರು ಯಜಮಾನರು.

(ಮುಂದುವರಿಯುತ್ತದೆ)