Wednesday, October 30, 2019

ಕತ್ತಲೆಕಾನು (ಕಥೆ ಭಾಗ 1)


'ಅರ್ಜೆಂಟ್ ಸಾಗರಕ್ಕೆ ಬಾ..' ಎಂದು ಸಹೋದರ‌ ಗುರುಪ್ರಸಾದನಿಂದ‌ ದೂರವಾಣಿ ಕರೆ. ಏನು? ಯಾಕೆ? ಎಂಬ ಯಾವುದೇ ಪ್ರಶ್ನೆಗೆ ಉತ್ತರವಿರಲಿಲ್ಲ.
ಆಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಪಶ್ಚಿಮದಲ್ಲಿ ಅರಬ್ಬಿ ಜಲಧಿಯಲ್ಲಿ ಅಸ್ತಮಿಸುತ್ತಿದ್ದ. ಬಾನು-ಸಮುದ್ರದ ಗಡಿಯಾದ್ಯಂತ ಹೊಂಬಣ್ಣದ ಕಲಾಕೃತಿಯನ್ನು ಮೂಡಿಸಿದ್ದ.
'ನಾನು ಹೊನ್ನಾವರದಲ್ಲಿ ಇದ್ದೇನಲ್ಲ ಮಾರಾಯಾ. ಈಗ ಬೇರೆ ಸಂಜೆಯಾಗುತ್ತಿದೆ.. ಈಗ ಬರಬೇಕಾ?' ಕೊಂಚ ಆಲಸ್ಯದಿಂದ ಆತನಿಗೆ ಹೇಳಿದ್ದೆ.
'ಇವತ್ ಎಷ್ಟೇ ಹೊತ್ತಾದರೂ ನೀನು ಸಾಗರಕ್ಕೆ ಬರಲೇಬೇಕು.. ನೀನು ಬರಲಿಲ್ಲ ಅಂದರೆ ಬಹುಮುಖ್ಯ ಸಂಗತಿಯೊಂದನ್ನ ನೀನು ಕಳೆದುಕೊಳ್ಳಬಹುದು.. ರಾತ್ರಿ ಎಷ್ಟು ಹೊತ್ತಾದರೂ ತೊಂದರೆ ಇಲ್ಲ.. ನಾನು ಕಾಯುತ್ತಿರುತ್ತೇನೆ.. ಬಾ' ಎಂದು ಪೋನ್ ಇರಿಸಿದ್ದ.
ಇದೊಳ್ಳೆ ಕಥೆಯಾಯ್ತಲ್ಲ.. ಎಂದುಕೊಂಡೆ. ಒಲ್ಲದ ಮನಸ್ಸಿನಿಂದ ನಿಧಾನವಾಗಿ ಎದ್ದೆ. ನನ್ನ ಜತೆ ಒಯ್ದಿದ್ದ ಬಟ್ಟೆಯನ್ನು ಬ್ಯಾಗಿಗೆ ತುಂಬಿಕೊಂಡೆ. ನನ್ನ ಪಲ್ಸರಿನ ಕಿವಿಯನ್ನ ಹಿಂಡಿದೆ. ಗುರ್ರೆಂದು ಸದ್ದು ಮಾಡಿದ ಪಲ್ಸರ್ ನಿಧಾನವಾಗಿ ವೇಗ ಪಡೆದುಕೊಂಡಿತು. 
ಶರಾವತಿ ತೀರದಿಂದ ಹಾದು ಬಿಎಚ್ ರೋಡ್ ಆರಂಭವಾಗುವ ಸರ್ಕಲ್ಲಿಗೆ ಬರುವ ವೇಳೆಗೆ ಚಹಾ ಕುಡಿಯುವ ಮನಸ್ಸಾಗಿ ಪಕ್ಕದಲ್ಲೇ ಇದ್ದ ಪೆಟ್ಟಿಗೆ ಅಂಗಡಿಗೆ ಹೋದೆ. ನನ್ನ ಹೊಟ್ಟೆಗೆ ಚಹಾವನ್ನೂ, ಬಾಹುಬಲಿ ಎಂದು ನಾನು ಆಪ್ತವಾಗಿ ಕರೆಯುವ ಪಲ್ಸರಿನ ಹೊಟ್ಟೆಗೆ ಪೆಟ್ರೂಲನ್ನೂ ಹತ್ತಿರದ ಬಂಕ್‌ ನಲ್ಲಿ ಸುರುವಿ ಸಾಗರದ ಕಡೆಗೆ ಪಯಣ ಬೆಳೆಸುವ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ದೂರದ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಸಾಲು ಕರ್ರಗೆ, ಮಬ್ಬಾಗಿ ಕಾಣುತ್ತಿತ್ತು. 
'ಹುಟ್ಟೆಟ್ಟೆಟ್ಟೆಟ್ರೋ...' ಎಂಬ ಟಿಟ್ಟಿಭ ಹಕ್ಕಿಯ ದೊಡ್ಡ ಸದ್ದಿನ ಆಲಾಪ ನನ್ನ ಬಾಹುಬಲಿಯ ಗುರ್ರೆಂಬ ಸದ್ದಿನ‌ ನಡುವೆಯೂ ಕಿವಿಗಪ್ಪಳಿಸಿ ಒಮ್ಮೆ ಮನಸ್ಸಿನಲ್ಲಿ ಅಲೆಯನ್ನೆಬ್ಬಿಸಿತ್ತು. 
ಅದಾಗಲೇ ಚಳಿಗಾಲ ಆರಂಭವಾಗಿದ್ದ ಕಾರಣ ತಿಳಿಯಾಗಿ ಇಬ್ಬನಿ ಧರೆಯನ್ನು ಚುಂಬಿಸಲು ಆರಂಭಿಸಿತ್ತು. ಎದುರಿನಿಂದ ಬರುತ್ತಿದ್ದ ವಾಹನಗಳ ದಟ್ಟ ಬೆಳಕು ಕಣ್ಣನ್ನ ಮಂಜಾಗಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ನಿಧಾನವಾಗಿ ಬಾಹುಬಲಿಯನ್ನ ಓಡಿಸಲು ಆರಂಭಿಸಿದ್ದೆ.
ಕೆಲ‌ ಸಮಯದ ನಂತರ ಕವಲಕ್ಕಿಯೂ ತದನಂತರ ಉಪ್ಪೋಣಿಯೂ ಸಿಕ್ಕಿತು. ಇಲ್ಲೇ ಅಲ್ಲವಾ ಹೈಗುಂದ ಇರುವುದು ಎಂದುಕೊಂಡು ಮುಂದಕ್ಕೆ ತೆರಳಿದೆ. ರಸ್ತೆಯ ಪಕ್ಕದಲ್ಲೆಲ್ಲೋ ಶರಾವತಿ ನಿಶ್ಶಬ್ಧವಾಗಿ ಹರಿಯುತ್ತಿದ್ದಳು. ಅಂಕು ಡೊಂಕಾದ ರಸ್ತೆಯಲ್ಲಿ ಬಾಹುಬಲಿ ನಿಯಮಿತ ವೇಗದಲ್ಲಿ ಓಡುತ್ತಿದ್ದ. ಹಾಗೂ ಹೀಗೂ ಗೇರುಸೊಪ್ಪೆಗೆ ಬರುವ ವೇಳೆಗಾಗಲೇ ದಟ್ಟ ರಾತ್ರಿ.
ಕಾಳುಮೆಣಸಿನ ರಾಣಿ ಚನ್ನಭೈರಾದೇವಿಯ ರಾಜಧಾನಿ ಗೇರುಸೊಪ್ಪೆ. ಚಿಕ್ಕದೊಂದು ಊರು. ಸಾಕಷ್ಟು ಅಂಗಡಿ, ಮಳಿಗೆಗಳಿವೆ. ಗೇರುಸೊಪ್ಪಾ ಅಣೆಕಟ್ಟೆಯ ಕೆಲಸಗಾರರಿಗಾಗಿ ನಿರ್ಮಿಸಿದ ಕಾಲೋನಿ, ಒಂದಷ್ಟು ಸರ್ಕಾರಿ ಕಚೇರಿಗಳು ಇಲ್ಲಿವೆ. ನದಿಯ ಇನ್ನೊಂದು ದಡದಲ್ಲಿ ಚನ್ನಭೈರಾದೇವಿ ಅರಮನೆಯ ಕುರುಹುಗಳೂ, ಜೈನ ಬಸದಿಯ ಅವಶೇಷಗಳೂ ಇವೆ. ಹೊನ್ನಾವರದ ಕಡೆಯಿಂದ ಬರುವ ರಾತ್ರಿ ವೇಳೆಯ ಬಸ್ಸುಗಳು, ಪ್ರವಾಸಿ ವಾಹನಗಳು ಗೇರುಸೊಪ್ಪೆಯ ಸಣ್ಣ ಸಣ್ಣ ಹೊಟೆಲ್ ಗಳ ಬಳಿ ನಿಲ್ಲುತ್ತವೆ. ಚಾಲಕರು ತಿಂಡಿಯನ್ನೋ, ಊಟವನ್ನೋ ಮಾಡಿ ಮುನ್ನಡೆಯುತ್ತಾರೆ. ಗೇರುಸೊಪ್ಪೆಯಿಂದ ಘಟ್ಟದ ರಸ್ತೆ ಆರಂಭವಾಗುವ ಕಾರಣ, ಅದೆಷ್ಟೋ ದೂರದ ವರೆಗೆ ಮನೆಗಳು, ಅಂಗಡಿಗಳು ಸಿಗದ ಕಾರಣ ಇಲ್ಲಿ ನಿಲ್ಲುವುದು ವಾಡಿಕೆಯಾಗಿಬಿಟ್ಟಿದೆ.
ಪಶ್ಚಿಮ ಘಟ್ಟದ ಸಾಲಿನ ಕೊನೆಯ ಅಂಚಿನ ತುಣುಕಾಗಿ ಗೇರುಸೊಪ್ಪೆ ಇದ್ದು ಕರಾವಳಿಗೂ-ಘಟ್ಟದ ನಾಡಿಗೂ ಬೆಸುಗೆಯಾಗಿ ನಿಂತಿದೆ. ನಾನು ಗೇರುಸೊಪ್ಪೆಯ ಬಳಿ ಬರುವ ವೇಳೆಗಾಗಲೇ ಸಮಯ ಒಂಭತ್ತು ಗಂಟೆಯನ್ನ ಮೀರಿಯಾಗಿತ್ತು. ಗೇರುಸೊಪ್ಪೆ ಬಹುತೇಕ ಬಾಗಿಲು ಹಾಕುವ ಸಮಯ ಅದು. ಒಂದೋ ಎರಡೋ ಅಂಗಡಿಗಳು, ಹೊಟೆಲುಗಳು ಬೆಳಕು ಬೀರುತ್ತಿದ್ದುದು ಬಿಟ್ಟರೆ ಬಹುತೇಕ ಊರಿಗೆ ನಿದ್ರಾಸುರನ ಛಾಯೆ ಆವರಿಸಿತ್ತು. ಬಿಎಚ್ ರಸ್ತೆಯಲ್ಲಿ ಆಗಲೇ ವಾಹನಗಳ ಸಂಖ್ಯೆ ಬಹಳ ಕಡಿಮೆಯಾಗಿತ್ತು.
ನಾನು ಎಷ್ಟೇ ವೇಗವಾಗಿ ಸಾಗಿದರೂ ಸಾಗರವನ್ನು ತಲುಪಲು ಹನ್ನೆರಡು ಗಂಟೆಯಾಗುತ್ತದೆ. ಆ ಹೊತ್ತಿನಲ್ಲಿ‌ ಸಾಗರದಲ್ಲಿ ಯಾವುದೇ ಹೊಟೆಲ್ ತೆರೆದಿರುವುದಿಲ್ಲ. ಇನ್ನು ಘಟ್ಟದ ಮೇಲಿನ‌ ಮಾವಿನಗುಂಡಿಯನ್ನು ತಲುಪಿದರೂ ಅಲ್ಲಿಯೂ ಹೊಟೆಲ್ ತೆರೆದಿರುವ‌ ಅನುಮಾನ ಮನದಲ್ಲಿ ಮೂಡಿತು. ಯಾವುದಕ್ಕೂ ಗೇರುಸೊಪ್ಪೆಯಲ್ಲಿ ಊಟ ಮಾಡುವುದು ಒಳಿತು, ಎಂದುಕೊಂಡು ಅಲ್ಲಿ‌ನ ಹೊಟೆಲನ್ನು ಹೊಕ್ಕೆ.
ಹೊಟೆಲ್ ಒಳಕ್ಕೆ ಒಬ್ಬರೋ, ಇಬ್ಬರೋ ಜನರಿದ್ದರಷ್ಟೇ. ಅವರಾಗಲೇ ತಮ್ಮ ಊಟ ಮುಗಿಸಿ ಇನ್ನೇನು ಹೊರಡುವ ಹವಣಿಕೆಯಲ್ಲಿದ್ದರು. ರಾತ್ರಿ ಒಂಭತ್ತೂವರೆಯ ಮೇಲೆ ಬಂದ ಒಬ್ಬಂಟಿ ಪಯಣಿಗನಾದ ನನ್ನನ್ನು ಕೊಂಚ ಅನುಮಾನದಿಂದಲೇ ನೋಡಿ, ತಮ್ಮ ಕೆಲಸದಲ್ಲಿ ನಿರತರಾದರು. ನಾನೋ ವೃತ್ತಿಪರ ಬೈಕರ್ ಗಳ ಹಾಗೇ ಕೈಗೆ  ದಪ್ಪನೆಯ ಗ್ಲೌಸ್, ಮೊಣಕಾಲಿಗೆ ಪಟ್ಟಿಯನ್ನೆಲ್ಲ ಕಟ್ಟಿಕೊಂಡಿದ್ದೆ. ಹೆಲ್ಮೆಟ್ಟನ್ನೂ ಸರಿಯಾಗಿ ಹಾಕಿ ಗಾಡಿ ಓಡಿಸದ ಅವರಿಗೆ ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸಿತಿರಬೇಕು.
'ಏನು ಬೇಕು?' ಹೊಟೆಲಿನ ಓನರ್ ಹಾಗೂ ಸಪ್ಲಾಯರ್ ಆಗಿದ್ದ ವ್ಯಕ್ತಿ ಕೇಳಿದಾಗ ' ಊಟ..' ಅಂದೆ.
'ಕಾರವಾರ- ಬೆಂಗಳೂರು ಬಸ್ ಇವತ್ ಬಹಳ ಲೇಟಂತೆ.. ಈ ಸಾರಿ‌ ಮಳೆಗಾಲ ಅಂತೂ ನಿಂತಿತಲ್ಲ.. 
ಇವತ್ತಿಂದ ಚಳಿ ಸ್ವಲ್ಪ ಶುರುವಾಗಿದೆ ಅಲಾ.. 
ಯಾವ್ ಥರ ಇಬ್ಬನಿ ಬೀಳ್ತಾ ಉಂಟು.. ಹೀಗೆ ಹಲವು ಮಾತುಗಳು ನನ್ನ ಕಿವಿಗೆ ಬಿದ್ದವು. ಕೆಲ ಕ್ಷಣದಲ್ಲಿ ಊಟ ಬಂದು, ನಾನು ಊಟವನ್ನು ಮುಗಿಸುವ ವೇಳೆಗಾಗಲೇ ಹೊಟೆಲ್ ಬಹುತೇಕ ಖಾಲಿ ಖಾಲಿಯಾಗಿತ್ತು.
ಬಿಲ್ ಕೊಡಲು ಹೋದಾಗ ನನಗೆ ಊಟವನ್ನು ಕೊಟ್ಟ ಯಜಮಾನರು ಸುಮ್ಮನೆ ಮಾತಿಗೆ ನಿಂತರು. 
' ಎಲ್ಲಿಂದ ಬಂದದ್ದು..' ಎಂದರು..
'ಹೊನ್ನಾವರದಿಂದ..' ಎಂದೆ.
'ಯಾವ ಕಡೆ ಹೊರಟದ್ದು?'
'ಸಾಗರಕ್ಕೆ ಹೋಗಬೇಕು..'

'ಸಾಗರಕ್ಕಾ? ಈ ಹೊತ್ತಿನಲ್ಲಿ ಹೊರಟ್ರಾ? ನಿಮ್ಮದೆಂತ ಬೈಕಲ್ಲಿ ಸವಾರಿಯಾ?' ಎಂದು ತುಸು ಅಚ್ಚರಿ ಹಾಗೂ ಗಾಬರಿಯಿಂದ ಕೇಳಿದರು.
'ಹೌದು.. ಯಾಕೆ?' ನಾನು ಕೇಳಿದೆ.
'ಈ ಹೊತ್ತಿನಲ್ಲಿ ಒಬ್ಬಂಟಿಯಾಗಿ ಹೋಗೋದು ಬೇಡವಾಗಿತ್ತು..' ಸಣ್ಣದಾಗಿ ಹೇಳಿದರು.
'ಅಯ್ಯೋ ನನಗೇನು ತೊಂದರೆ ಇಲ್ಲ ಬಿಡಿ.. ಇದೇ ರಸ್ತೆಯಲ್ಲಿ ಅದೆಷ್ಟೋ ಸಾರಿ ಓಡಾಡಿದ್ದೇನೆ. ಅದೂ ಅಲ್ಲದೇ ಕರ್ನಾಟಕದ ಅದೆಷ್ಟೋ ಊರುಗಳನ್ನ ಬೈಕಿನಲ್ಲಿಯೇ ಸುತ್ತಿದ್ದೇನೆ. ಹಗಲು, ರಾತ್ರಿ ಎನ್ನದೇ ಓಡಾಡಿದ್ದೇನೆ...' ಎಂದೆ
'ಹೌದ? ಘಟ್ಟದ ರಸ್ತೆಯಲ್ಲಿ ಓಡಾಡಿದ್ದೀರಾ? ಕತ್ತಲೆಕಾನು ಘಟ್ಟದಲ್ಲಿ ಹೋಗಿದ್ದಿರಾ?' ಎಂದು ಕೇಳಿದರು.
' ಹು.. ಅರಬೈಲು, ದೇವಿಮನೆ, ಬಡಾಳ, ಅಂಬೋಲಿ, ಚಾರ್ಮಾಡಿ, ಬಿಸಿಲೆ ಹೀಗೆ ಅದೆಷ್ಟೋ ಘಟ್ಟದಲ್ಲಿ‌ನಾನು ಹಾಗೂ ನನ್ನ ಬಾಹುಬಲಿ ಏಕಾಂಗಿಯಾಗಿ ಓಡಾಡಿದ್ದೇವೆ. ಈ ಕತ್ತಲೆಕಾನು ಘಟ್ಟದಲ್ಲಿಯೂ ಮೂರ್ನಾಲ್ಕು ಸಾರಿ ಓಡಾಡಿದ್ದೇನೆ...' ಎಂದೆ.
'ಕತ್ತಲೆಕಾನು ಘಟ್ಟದಲ್ಲಿ ರಾತ್ರಿ ಹೋಗಿದ್ದೀರಾ?' ಮತ್ತೊಮ್ಮೆ ಕೇಳಿದರು ಅವರು.
'ರಾತ್ರಿ ಹೋಗಿಲ್ಲ.. ಆದರೆ ಹಗಲಿನಲ್ಲಿ ಓಡಾಡಿದ್ದೇನೆ..' ಎಂದೆ.
'ಅದನ್ನೇ ನಾನು ಕೇಳಿದ್ದು. ಕತ್ತಲೆಕಾನು ಘಟ್ಟ ಇದೆಯಲ್ಲ ಇದು ಎಲ್ಲದರಂತಲ್ಲ. ಶರಾವತಿ ನದಿಯ ಪಕ್ಕದಲ್ಲಿ ಹಾದು ಹೋಗುವ ಇದು ದಟ್ಟ ಕಾಡಿನ ಪ್ರದೇಶ.. ಇಲ್ಲಿ ಹಗಲಿನಲ್ಲಿಯೇ ಒಬ್ಬಂಟಿಯಾಗಿ ಓಡಾಡುವುದು ಅಪಾಯಕರ. ಇನ್ನು ರಾತ್ರಿ ಕೇಳಬೇಕೆ? ನಮ್ಮ ಜಿಲ್ಲೆಯಲ್ಲಿ ಎಲ್ಲೇ ಕಾಳಿಂಗ ಸರ್ಪದಂತಹ ವಿಷ ಜಂತುಗಳು, ಅದೆಷ್ಟೋ ಕಾಡುಮೃಗಗಳು ಸಿಕ್ಕರೂ ಅವನ್ನು ಕತ್ತಲೆಕಾನಿಗೆ ತಂದು ಬಿಡುತ್ತಾರೆ. ಕತ್ತಲೆಕಾನು ಕಾಳಿಂಗ ಸರ್ಪಗಳ ತವರು ಎಂದೇ ಖ್ಯಾತಿ. ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸ್ಥಳವಂತೆ ಅದು..' ಎಂದರು ಅವರು.
ನಾನು‌ ಮಧ್ಯದಲ್ಲಿಯೇ ಬಾಯಿ ಹಾಕಿ ' ಹಾ.. ಹಾ.. ಹೌದು ಹೌದು.. ನನಗೆ ಗೊತ್ತು ಅದು.. ಕತ್ತಲೆಕಾನಿನ ಕಾಳಿಂಗ ಸರ್ಪಗಳ ಬಗ್ಗೆ ಡಿಸ್ಕವರಿ ಚಾನಲ್ಲಿನವರು ದೊಡ್ಡ ಕಾರ್ಯಕ್ರಮವನ್ನೇ ಮಾಡಿದ್ದಾರೆ. ಕಾಡಿನಲ್ಲಿಯೇ ಓಡಾಡುತ್ತ ಇರುವ ನನಗೆ ಇವುಗಳ ಕುರಿತು ಅಷ್ಟೇನೂ ಭಯ ಇಲ್ಲ ಬಿಡಿ..' ಎಂದೆ.

'ವಿಷಯ ಅದಲ್ಲ... ' ಎಂದು ಮಾತು ನಿಲ್ಲಿಸಿದರು ಯಜಮಾನರು.

(ಮುಂದುವರಿಯುತ್ತದೆ)

No comments:

Post a Comment