ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟ ಪ್ರಯತ್ನ
/ ಆಯಾಯಾ ರಾಜ್ಯಗಳಿಗೆ ಅಲ್ಲಿನದೇ ಭಾಷೆ ಬಳಕೆ
ದೇವರ ನಾಡು ಕೇರಳದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ
ಹೇಳಿ. ಅಸಂಖ್ಯಾತ ಪ್ರವಾಸಿ ತಾಣಗಳ ತವರು. ಕೇರಳದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ಸೆಳೆಯಲು
ಸಾಕಷ್ಟು ಆಕರ್ಷಕ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ ಕರ್ನಾಟಕ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿಂದುಳಿದಿದೆ.
ಕೇರಳದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ದೇವರ
ನಾಡಿನತ್ತ ಕರೆಸಿಕೊಳ್ಳಲು ಸಾಕಷ್ಟು ಮಾರ್ಗಗಳನ್ನು ಹಾಕಿಕೊಂಡಿದೆ. ಇಲಾಖಾ ವೆಬ್‌ಸೈಟ್‌ಗಳು, ಸಾಮಾಜಿಕ
ಜಾಲತಾಣಗಳಲ್ಲಿ ಪ್ರೊಮೋಷನ್ ಮಾಡುವ ಮೂಲಕ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುವ ಯತ್ನ ಮಾಡುತ್ತಿದೆ.
ಅಷ್ಟೇ ಏಕೆ, ದೇಶದ ಹಾಗೂ ಬೇರೆ ಬೇರೆ ದೇಶಗಳ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ಸಲುವಾಗಿ
ಆಯಾಯಾ ಪ್ರದೇಶದ ಭಾಷೆಗಳನ್ನು ಬಳಸಿಕೊಂಡು, ಆಕರ್ಷಕ ಪ್ರೋಮೋ ಕೈಗೊಳ್ಳುತ್ತಿದೆ. ತನ್ಮೂಲಕ ಪ್ರಾದೇಶಿಕ
ಪ್ರವಾಸಿಗರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ.
ಕರ್ನಾಟಕದ ಪ್ರವಾಸಿಗರನ್ನು ಸೆಳೆಯಲು ಕನ್ನಡ, ಮಹಾರಾಷ್ಟ್ರದ
ಪ್ರವಾಸಿಗರನ್ನು ಸೆಳೆಯಲು ಮರಾಠಿ, ತಮಿಳುನಾಡು ಪ್ರವಾಸಿಗರನ್ನು ಸೆಳೆಯಲು ತಮಿಳು, ಆಂಧ್ರ ಹಾಗೂ ತೆಲಂಗಾಣದ
ಪ್ರವಾಸಿಗರನ್ನು ಸೆಳೆಯಲು ತೆಲುಗು ಭಾಷೆಯಲ್ಲಿಯೇ ಪ್ರಚಾರ ಮಾಡಲಾಗುತ್ತಿದೆ. ಆಯಾಯಾ ರಾಜ್ಯಗಳ ವ್ಯಾಪ್ತಿಯಲ್ಲಿ
ಆಯಾಯಾ ಭಾಷೆಯಲ್ಲಿಯೇ ಪೋಸ್ಟ್‌ಗಳನ್ನು ಹಾಕುವ ಮೂಲಕ ಜನರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಿದೆ.
ಹೆಚ್ಚು ಭಾಷೆ ಬಳಸಿಕೊಳ್ಳದ ಕರ್ನಾಟಕ ಟೂರಿಸಂ
ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಪ್ರವಾಸೋದ್ಯಮ
ಇಲಾಖೆ ಸಾಕಷ್ಟು ಹಿಂದುಳಿದಿದೆ. ಸಹಸ್ರಾರು ಪ್ರವಾಸಿ ತಾಣಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರನ್ನು
ಸೆಳೆಯುವ ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಎಡವುತ್ತಿದೆ. ಕೇವಲ ಕನ್ನಡ ಹಾಗೂ ಇಂಗ್ಲೀಷ್
ಭಾಷೆಯಲ್ಲಿ ಮಾತ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪೋಸ್ಟ್ ಗಳನ್ನು ಹಾಕುವ ಮೂಲಕ ಪ್ರವಾಸಿಗರನ್ನು
ಸೆಳೆಯುತ್ತಿದೆ. ಭಾರತದ ಇತರ ಭಾಷೆಗಳಲ್ಲಿ ಪೋಸ್ಟ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ
ಇಲಾಖೆ ಇನ್ನೂ ಚಿಂತನೆ ನಡೆಸದೇ ಇರುವುದು ಇಲಾಖೆಯ ಕಾರ್ಯವೈಖರಿಯ ಜಡತ್ವಕ್ಕೊಂದು ಉದಾಹರಣೆ.
ಮಲೆಯಾಳಂ, ತೆಲುಗು, ತಮಿಳು, ಮರಾಠಿ, ಒಡಿಸ್ಸಿಘಿ,
ಅಸ್ಸಾಮಿ, ಹಿಂದಿ ಹೀಗೆ ಭಾರತೀಯ ಭಾಷೆಗಳಲ್ಲಿ ಕರ್ನಾಟಕದ ಪ್ರವಾಸಿ ತಾಣಗಳ ಕುರಿತು ಕಿರು ಮಾಹಿತಿ
ನೀಡಿ ಅವುಗಳನ್ನು ತನ್ನ ವೆಬ್ ಸೈಟ್‌ನಲ್ಲೋ ಅಥವಾ ಇನ್ಯಾವುದೇ ಜಾಲತಾಣಗಳಲ್ಲಿಯೋ ಪ್ರಕಟಿಸಿದರೆ ಆಗ
ಅದನ್ನು ಗಮನಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಪ್ರವಾಸಿಗರೂ ಕರ್ನಾಟಕದ ಕಡೆಗೆ ಮುಖ ಮಾಡುತ್ತಾರೆ.
ಆದರೆ ಈ ನಿಟ್ಟಿನಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸದೇ ಇರುವುದು ಬೇಸರದ ಸಂಗತಿ.
ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ತನ್ನ ಕಡೆಗೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳಲಿ, ತನ್ಮೂಲಕ
ದೇಶದ ಹಾಗೂ ವಿದೇಶಗಳ ಪ್ರವಾಸಿಗರನ್ನು ಸೆಳೆಯಲಿ. ರಾಜ್ಯದ ಆದಾಯಕ್ಕೆ ಹೆಚ್ಚಿನ ಕಾಣಿಕೆ ನೀಡುವಂತಾಗಲಿ
ಎನ್ನುವುದು ಪ್ರವಾಸ ಪ್ರಿಯರ ಆಶಯವಾಗಿದೆ.
---
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇರಳ
ಪ್ರವಾಸೋದ್ಯಮ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ. ಆಯಾಯಾ ರಾಜ್ಯಗಳ ಮಟ್ಟದಲ್ಲಿ ಅಲ್ಲಿನ
ಭಾಷೆಗಳನ್ನೇ ಬಳಸಿಕೊಂಡು ತನ್ನ ನಾಡಿನ ಪ್ರವಾಸಿ ತಾಣಗಳ ಕುರಿತು ವಿವರ ನೀಡುವ ಕೇರಳ ಪ್ರವಾಸೋದ್ಯಮದ
ತಂತ್ರಗಳನ್ನು ಕರ್ನಾಟಕವೂ ಅಳವಡಿಸಿಕೊಂಡರೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗಳ ಸಂಖ್ಯೆ ಹೆಚ್ಚಳವಾಗುವುದರಲ್ಲಿ
ಸಂಶಯವಿಲ್ಲ.
-ರಾಘವ ಹೆಗಡೆ,
ಪ್ರವಾಸೋದ್ಯಮಿ
No comments:
Post a Comment