ಇತ್ತೀಚಿನ ದಿನಗಳಲ್ಲಿ ನೋಡಲೇಬೇಕು ಅನ್ನಿಸಿ ಕಾದು ಕಾದು ನೋಡಿದ ಸಿನಿಮಾ ಅಂದರೆ ಅದು ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ ಚಿತ್ರ ಎನ್ನುವುದು ಈ ಚಿತ್ರದ ಕಡೆಗೆ ಇದ್ದ ಮೊದಲ ಕಾರಣವಾಗಿದ್ದರೆ, ಗಾಳಿಪಟ ಸಿನಿಮಾದ ಮೊದಲ ಭಾಗಕ್ಕೆ ಸಿಇಕ್ವೆಲ್ ಬರುತ್ತಿದೆ ಎನ್ನುವುದು ಇನ್ನೊಂದು ಕಾರಣ.
ಸಿನಿಮಾದಲ್ಲಿ ಬಹಳಷ್ಟು ಇಷ್ಟವಾದವು. ಕೆಲವಷ್ಟು ಕಷ್ಟವಾದವು. ಸಿನಿಮಾದಲ್ಲಿ ನಮಗೆ ಇಷ್ಟವಾಗಲು ಹಲವು ಸಂಗತಿಗಳಿವೆ. ಅದರಲ್ಲಿ ಮೊದಲನೆಯದು ಯೋಗರಾಜ್ ಭಟ್ ಅವರ ನವಿರಾದ ಚಿತ್ರಕಥೆ. ಸರಳ ಕಥಾ ಹಂದರ.
ಮೊದಲ ಭಾಗದಲ್ಲಿ ಮುಗಿಲು ಪೇಟೆಯನ್ನು ನೋಡಿದ್ದ ನಾವು ಇಲ್ಲಿ ನೀರು ಕೋಟೆಯನ್ನು ನೋಡುತ್ತೇವೆ, ಅದೇ ರೀತಿ ಟರ್ಕಿ ದೇಶದ ಹಿಮದ ಸಾಲಿನ ಮೇಲೆ ಓಡಾಡುತ್ತೇವೆ. ನೀರು, ಐಸು, ಆಗೊಮ್ಮೆ ಈಗೊಮ್ಮೆ ಬರುವ ಬೆಂಗಾಡಿನ ಪ್ರದೇಶ ಇವೆಲ್ಲವೂ ಸೆಳೆಯುತ್ತವೆ. ಆದರೆ ಸಿನಿಮಾದ ಮೊದಲರ್ಧ ಸ್ವಲ್ಪ ಸುದೀರ್ಘವಾಯಿತು ಎನ್ನಿಸುತ್ತದೆ. ಅಲ್ಲದೆ ಮೊದಲಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಬರುವ ಹಾಡುಗಳು ಕಥೆಯ ಓಟಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ.
ಗಣೇಶ್ ಹಾಗೂ ದಿಗಂತ್ ಕಾಲೇಜಿಗೆ ಮರಳಿ ಬರಲು ಕಾರಣಗಳಿದ್ದವು. ಆದರೆ ಪವನ್ ಯಾಕೆ ಬಂದರು ಎನ್ನುವುದು ಗೊತ್ತಾಗಲಿಲ್ಲ. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಾದ ಮೇಲೆ ಗಣೇಶ್ ನಾಯಕಿಯನ್ನು ಪಟಾಯಿಸಲು ನದಿಯಲ್ಲಿ ಈಜು ಬರದಂತೆ ನಟಿಸುವ ಸನ್ನಿವೇಶವೊಂದಿದೆ. ಪಕ್ಕದಲ್ಲೇ ಸೇತುವೆ ಇದ್ದರೂ ನಾಯಕ, ನಾಯಕಿ ನದಿಯೊಳಕ್ಕೆ ಇಳಿದು ದಾಟಲು ಹೊರಟಿದ್ದು ಸ್ವಲ್ಪ ವಿಚಿತ್ರ ಅನ್ನಿಸಿತು.
ಇನ್ನು ಹಾಡುಗಳಂತೂ ಆಹಾ. ಜಯಂತ್ ಕಾಯ್ಕಿಣಿ ಬರೆದ ನೀನು ಬಗೆಹರಿಯದ ಹಾಡು, ನಾನಾಡದ ಮತ್ತೆಲ್ಲವ ಕದ್ದಾಲಿಸು ಹಾಗೂ ಯೋಗರಾಜ್ ಭಟ್ಟರು ಬರೆದ ನಾವು ಬದುಕಿರಬಹುದು ಪ್ರಾಯಶಃ ಈ ಹಾಡುಗಳಂತೂ ಪದೇ ಪದೇ ಗುನುಗುವಂತೆ ಮಾಡುತ್ತವೆ. ಭಟ್ಟರು ಬರೆದ ದೇವ್ಲೇ ದೇವ್ಲೇ ಹಾಡಂತೂ ಪಡ್ಡೆ ಹುಡುಗರ ಪಾಲಿಗೆ ಒಳ್ಳೆಯ ಕಿಕ್ ನೀಡುತ್ತದೆ. ಹಾಗೆಯೆ ಎಕ್ಸಾಂ ಕುರಿತಾದ ಹಾಡು ಸಹ ಇಷ್ಟವಾಗುತ್ತವೆ. ಗಣೇಶ್ ಮಗ ವಿಹಾನ್ ದು ಇಲ್ಲಿ ಚಿಕ್ಕ ಪಾತ್ರ. ಒಳ್ಳೆಯ ಎಂಟ್ರಿ. ಇನ್ನು ವಿಜಯ್ ಸೂರ್ಯ ಮಾತ್ರ ಸರ್ಪ್ರೈಸ್ ಎಂಟ್ರಿ.
ಸಿನಿಮಾ ಲೊಕೇಷನ್ನುಗಳು ಬಹಳ ಚನ್ನಾಗಿದೆ. ಕುದುರೆಮುಖ, ಟರ್ಕಿ ಇತ್ಯಾದಿ ಸ್ಥಳಗಳು ಕಣ್ಣಿಗೆ ಮುದ ನೀಡುತ್ತವೆ. ಆದರೆ ಚಿತ್ರದಲ್ಲಿ ಜೋಗ ಜಲಪಾತವನ್ನು ಸುಮ್ಮನೆ ಮೂರು ಸೆಕೆಂಡ್ ಕಾಲ ತೋರಿಸಿದರು ಅಷ್ಟೇ. ಜೋಗ ಜಲಪಾತವಲ್ಲದೆ ಬೇರೆ ಯಾವುದೇ ಜಲಪಾತ ತೋರಿಸಿದ್ದರೂ ಯಾವೂದೇ ನಷ್ಟವಿರಲಿಲ್ಲ.
ಕಾರಣಾಂತರಗಳಿಂದ ಕಾಲೇಜಿಗೆ ಬಂದು ಕನ್ನಡ ಕಲಿಯಲು ಮುಂದಾಗುವ ಮೂವರು ಯುವಕರು, ಅವರಿಗೊಬ್ಬ ಕನ್ನಡ ಲೆಕ್ಚರು, ಆ ಲೆಕ್ಚರ್ ಗೆ ಒಬ್ಬ ಕಾಣೆಯಾದ ಮಗ.. ಇಂತಹ ಕಥಾ ಹಂದರದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ನಗೆಯ ಚಿಲುಮೆಯೇ ಇದೆ. ಭಾವನಾತ್ಮಕ ಸನ್ನಿವೇಶಗಳಿವೆ, ತಾಯಿಯ ಪ್ರೀತಿ ಇದೆ. ಗುರು - ಶಿಷ್ಯರ ಅವಿನಾಭಾವ ಸಂಬಂಧವೂ ಇದೆ. ಎರಡು ಮೂರು ಸಾಧಾರಣ ಚಿತ್ರಗಳನ್ನು ಮಾಡಿದ್ದ ಯೋಗರಾಜ ಭಟ್ಟರು ಇನ್ನೊಮ್ಮೆ ಒಳ್ಳೆಯ ಕಥೆಯ ಮೂಲಕ ಮರಳಿ ಬಂದಿದ್ದಾರೆ.
ಇನ್ನು ನಟನೆ ವಿಷಯಕ್ಕೆ ಬಂದರೆ ಹಲವಾರು ಫುಲ್ ಮಾರ್ಕ್ಸ್ ಪಡೆಯುತ್ತಾರೆ. ಕನ್ನಡ ಲೆಕ್ಚರ್ ಪಾತ್ರಧಾರಿ ಅನಂತ್ ನಾಗ್ ಅಂತೂ ವಾಹ್.. ಅವರ ಅಭಿನಕ್ಕೆ ಸಾಟಿಯೇ ಇಲ್ಲ. ಇನ್ನು ಗಣೇಶ್. ಇಂದಿನ ತಮ್ಮ ನಗಿಸುವ, ನಗಿಸುತ್ತಲೇ ಅಳಿಸುವ ಪಾತ್ರದಲ್ಲಿ ಮತ್ತೊಮ್ಮೆ ಮೋದಿ ಮಾಡಿದ್ದಾರೆ. ಗಂಭೀರ ಪಾತ್ರದಲ್ಲಿ ಪವನ್ ಇಷ್ಟವಾಗುತ್ತಾರೆ. ಗಣೇಶ್ ಅಂತಹ ಕಚಗುಳಿ ನಟರು ಇದ್ದರೂ ಸಿನಿಮಾದಲ್ಲಿ ಅತ್ಯಂತ ಹೆಚ್ಚು ನಗಿಸುವವರು ದಿಗಂತ್. ದಿಗಂತ್ ಅವರನ್ನು ಅಘೋರಿ ರೂಪದಲ್ಲಿ ನೋಡುವುದೇ ಮಜಾ. ದಿಗಂತ್ ತೆರೆಯ ಮೇಲೆ ಇದ್ದಷ್ಟು ಹೊತ್ತು ನಗುವಿಗೆ ನಗುವಿಗೆ ಕೊರತೆಯೇ ಇಲ್ಲ. ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾ, ಶ್ರೀನಾಥ್ ಅವರುಗಳು ಬಹಳ ಇಷ್ಟವಾಗುತ್ತಾರೆ. ಬುಲೆಟ್ ಪ್ರಕಾಶ್ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ವೈಭವೀ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಪ್ಯಾನ್ ಇಂಡಿಯಾ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಇತ್ಯಾದಿ ಸಿನಿಮಾಗಳಗಳ ಅಬ್ಬರಗಳ ನಡುವೆ ಅಚ್ಚ ಕನ್ನಡದ ಸಿನಿಮಾ ಬಹಳ ಇಷ್ಟವಾಗುತ್ತದೆ. ಈ ನೋಡುಗರಿಗಂತೂ ಪೈಸೆ ವಸೂಲ್ ಪಕ್ಕಾ. ಸಾಧ್ಯವಾದರೆ ಸಿನಿಮಾ ಮಂದಿರಗಳಿಗೆ ತೆರಳಿ ಈ ಚಿತ್ರ ವೀಕ್ಷಿಸಿ.
No comments:
Post a Comment