Thursday, June 1, 2023

ಪಾರು (ಕಥೆ)

``ಸಾವಿತ್ರಿ, ನಾಳೆ ಆನು ಕಾರವಾರಕ್ಕೆ ಹೋಗಿ ಬರ್ತಿ. ಮಠದಗಡ್ಡೆದು ಕಾಗದಪತ್ರದ ಕೆಲಸ ಇದ್ದು ಬಿಲ್ಯ. ಉದಿಯಪ್ಪಾಗ ಹೋಗಿ ಕಾರವಾರದ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮುಗ್ಸಿ ಬರ್ತೆ. ನಾಳೆ ಕಾರವರದಲ್ಲೇ ಉಳ್ಕಂಬುದು ಬಂದ್ರು ಬಂತು ಬಿಲ್ಯ. ನಾಡಿದ್ದು ಸಂಜೇಗೆಲ್ಲ ಮನಿಗೆ ಬರ್ತಿ'' ಎಂದು ಮಡದಿ ಅಮ್ಮಕ್ಕಳ ಬಳಿ ಗಣಪತಿ ಭಟ್ಟರು ಹೇಳುವ ವೇಳೆಗಾಗಲೇ ಬಾನಿನಲ್ಲಿ ಕತ್ತಲಾಗಿತ್ತು.

ಮರುದಿನ ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ಕಾರವಾರದ ಕಡೆಗೆ ಹೊರಡುವ ಪತಿಯ ಬೆಳಗಿನ ಆಸ್ರಿಗೆಗಾಗಿ ತಯಾರಿ ಮಾಡುವಲ್ಲಿ ಅಮ್ಮಕ್ಕ ತೊಡಗಿಕೊಂಡಳು. ಭಟ್ಟರು ಸಾಯಿಂಕಾಲದ ಅನುಷ್ಠಾನಕ್ಕೆ ತೆರಳಿದರು.

ಮರುದಿನದ ಕಾರವಾರದ ಕಡೆಗಿನ ಭಟ್ಟರ ಪ್ರಯಾಣ, ಅವರ ಬದುಕಿನ ಅನೂಹ್ಯವಾದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ ಎನ್ನುವುದರ ಸಣ್ಣ ಕುರುಹೂ ಕೂಡ ಅವರಿಗಿರಲಿಲ್ಲ. ಬದುಕಿನಲ್ಲಿ ಹಲವು ತಿರುವುಗಳನ್ನು ಕಂಡಿದ್ದ ಭಟ್ಟರು ಇನ್ನೊಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದರು. 


******


ಭರತಖಂಡ ಭಾರತವರ್ಷಕ್ಕೆ ಹಸಿರ ಸೀರೆಯನ್ನು ಉಟ್ಟಂತೆ ಹಾದುಹೋಗಿದೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿಯ ಸಾಲು. ಈ ಸಹ್ಯಾದ್ರಿಯ ಮಡಿಲಿನಲ್ಲಿ ಕರಿಬಣ್ಣವನ್ನು ಹೊಂದಿ ಮೈಮನಗಳಲ್ಲಿ ಭಯವನ್ನು ಹುಟ್ಟಿಸುತ್ತ ಹರಿದುಹೋಗುತ್ತಿದೆ ಕಾಳಿನದಿ. 

ಜೋಯಿಡಾದ ಕಾಡಿನ ನಡುವೆಯೆಲ್ಲೋ ಹುಟ್ಟಿ ಕಡವಾಡದ ಬಳಿ ಸಮುದ್ರ ಸೇರುವ ಮೊದಲು ಅದೆಷ್ಟೋ ಪ್ರದೇಶಗಳನ್ನು ಬಳಸಿ, ಹಾದು ಹೋಗುವ ಕಾಳಿನದಿ ಸಾವಿರಾರು ಕುಟುಂಬಗಳ ಪಾಲಿಗೆ ಜೀವ ನದಿಯೂ ಹೌದು. ಮಳೆಗಾಲದಲ್ಲಿ ಅದೆಷ್ಟೋ ಜನರ ಬದುಕುಗಳನ್ನು ದುರ್ಭರ ಮಾಡಿದ ಕಣ್ಣೀರ ನದಿಯೂ ಹೌದು. ಇಂತಹ ಕರಿ ಕಾಳಿ ನದಿಯ ಆಗ್ನೇಯ ದಿಕ್ಕಿನ ದಡದಲ್ಲಿ ಇರುವ ಊರು ಬರಬಳ್ಳಿ. ಮೂರು ದಿಕ್ಕುಗಳಲ್ಲಿ ಎತ್ತರದ ಘಟ್ಟ, ದಟ್ಟ ಕಾಡು. ಇನ್ನೊಂದು ಕಡೆಯಲ್ಲಿ ಕಾಳಿ ನದಿ. ಅಡಿಕೆ, ತೆಂಗು ಮುಖ್ಯ ಬೆಳೆಗಳಾದರೂ, ಕೆಲವರು ಭತ್ತ ಬೆಳೆಯುತ್ತಾರೆ. ಮಾವು ಹಲಸುಗಳು ಹುಲುಸಾಗಿ ಬೆಳೆಯುತ್ತವೆ. ಹಣ್ಣು ಹಂಪಲುಗಳಿಂದ ತುಂಬಿಕೊಂಡು, ಎಂದೂ ಬರಿದಾಗದಂತಹ ಹಳ್ಳಿ. ಸಾತೊಡ್ಡಿಯಿಂದ ಹಿಡಿದು ಕೊಡಸಳ್ಳಿಯ ತನಕ ಬೆಳೆದು ನಿಂತಿದ್ದ ಊರು ಅದು.

ದಟ್ಟ ಕಾಡಿನ ನಡುವೆ ನಾಲ್ಕೈದು ಕಿಲೋಮೀಟರುಗಳಷ್ಟು ಅಗಲವಾಗಿ ಹಬ್ಬಿ 400 ಕುಟುಂಬಗಳನ್ನು ಹೊಂದಿರುವ ಈ ಬರಬಳ್ಳಿಯ ಆರಾಧ್ಯದೈವ ಬಲಮುರಿ ಗಣಪತಿ. ಭಕ್ತಿಯಿಂದ ಬೇಡಿಕೊಂಡವರನ್ನು ಸದಾಕಾಲ ಹರಸುವ, ಕಾಪಾಡುವ ದೇವರು.

ಈ ಬಲಮುರಿ ಗಣಪತಿಗೆ ನಿತ್ಯಪೂಜೆ ಗಣಪತಿ ಭಟ್ಟರ ಕೈಯಿಂದಲೇ ನಡೆಯಬೇಕಿತ್ತು. ದೇವಸ್ಥಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಗುಡ್ಡೇಮನೆಯಿಂದ ಆಗಮಿಸುವ ಗಣಪತಿ ಭಟ್ಟರು ದಿನನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುತ್ತಿದ್ದರು.

ಜೀವನದ ಮಧ್ಯಘಟ್ಟವನ್ನು ತಲುಪಿದ್ದ ಗಣಪತಿ ಭಟ್ಟರ ಮಡದಿಯೇ ಅಮ್ಮಕ್ಕ. ಭಟ್ಟರು ತಮ್ಮ ಮಡದಿಯನ್ನು ಪ್ರೀತಿಯಿಂದ ಸಾವಿತ್ರಿ ಎಂದೇ ಸಂಬೋಧಿಸುತ್ತಿದ್ದರು. ಈ ದಂಪತಿಗಳಿಗೆ ಪರಮೇಶ್ವರ, ಶಂಕರ ಹಾಗೂ ಮೂಕಾಂಬಿಕಾ ಎನ್ನುವ ಮೂವರು ಮಕ್ಕಳು. ಇವರಲ್ಲಿ ಪರಮೇಶ್ವರನಿಗೆ ನಾಲ್ಕೈದು ವರ್ಷ ವಯಸ್ಸಾಗಿದ್ದರೆ, ಪರಮೇಶ್ವರನಿಗಿಂತ ಶಂಕರ ಒಂದೂವರೆ ವರ್ಷ ಚಿಕ್ಕವನು. ಶಂಕರನಿಗಿಂತ ಎರಡು ವರ್ಷ ಚಿಕ್ಕವಳಾದ ಮೂಕಾಂಬಿಕೆ ಆಗಿನ್ನೂ ಅಂಬೆಗಾಲಿಡುತ್ತಿದ್ದ ಕೂಸು. ಗಣಪನ ಪೂಜೆ, ಮಠದಗದ್ದೆಯಲ್ಲಿ ದುಡಿತ, ಗುಡ್ಡೇಮನೆಯಲ್ಲಿ ಸಂಸಾರ ಹೀಗೆ ಸಾಗುತ್ತಿದ್ದಾಗಲೇ ತುರ್ತು ಕಾಗದಪತ್ರದ ಜರೂರತ್ತು ಗಣಪತಿ ಭಟ್ಟರಿಗೆ ಒದಗಿಬಂದಿತ್ತು. ಅದಕ್ಕಾಗಿ ಕಾರವಾರಕ್ಕೆ ಹೊರಟಿದ್ದರು.


****


ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಆಸ್ರಿಗೆ ಕುಡಿದು, ಮಡದಿ ಕಟ್ಟಿಕೊಟ್ಟ ತುತ್ತಿನ ಚೀಲವನ್ನು ಗಂಟಿನಲ್ಲಿ ಹಾಕಿ ಭುಜಕ್ಕೇರಿಸಿ ಬರಿಗಾಲಿನಲ್ಲಿ ಮನೆಯಿಂದ ಹೋರಾಟ ಗಣಪತಿ ಭಟ್ಟರು ಕಾರವಾರವನ್ನು ತಲುಪಲು ಹರಸಾಹಸ ಪಡಬೇಕಿತ್ತು.

ಕಾರವಾರಕ್ಕೆ ತಾವೂ ಬರುತ್ತೇವೆ, ತುರ್ತಿನ ಕೆಲಸವಿದೆ ಎಂದು ಹೇಳಿದ್ದರಿಂದ ತಮ್ಮದೇ ಊರಿನ ಚಿದಂಬರ, ನಾರಾಯಣ ಹಾಗೂ ಇನ್ನಿತರರ ಮನೆಯ ಕಡೆ ಭಟ್ಟರು ಎಡತಾಕಿದರು. ದಟ್ಟಕಾಡಿನ ನಡುವೆ, ಕಾಡುಪ್ರಾಣಿಗಳ ಹಾವಳಿಯ ನಡುವೆ ಒಬ್ಬರೇ ಸಾಗುವುದಕ್ಕಿಂತ ಗುಂಪಾಗಿ ತೆರಳುವುದು ಲೇಸು ಎನ್ನುವ ಕಾರಣಕ್ಕಾಗಿ ಭಟ್ಟರು ತಮ್ಮ ಸಹವರ್ತಿಗಳ ಜತೆ ಸೇರಿದ್ದರು.


(ಮುಂದುವರಿಯುವುದು)

No comments:

Post a Comment