Saturday, July 21, 2018

ಕಾಲೇಜ್ ಲೈಫ್ ಗೋಲ್ಡನ್ ಲೈಫ್

ಮತ್ತೊಮ್ಮೆ ಕಾಲೇಜ್ ದಿನಗಳ ಆರಂಭವಾಗುತ್ತಿದೆ. ಈಗ ತಾನೇ ಅರಳುತ್ತಿರುವ ಮನಸ್ಸುಗಳು ನೂರೆಂಟು ಕನಸುಗಳನ್ನು ಕಟ್ಟಕೊಂಡು, ಹೊಸ ಹುಮ್ಮಸ್ಸಿನಿಂದ ಕಾಲೇಜು ಕಡೆಗೆ ಮುಖ ಮಾಡುತ್ತಿವೆ.
ಜುಲೈ.. ತಂಪೆರೆವ ಮಳೆಯಲ್ಲಿ ಅದೆಷ್ಟೋ ಜನರ ಇನ್ನೊದು ಸುಂದರ ಬದುಕು ಆರಂಭಗೊಳ್ಳುತ್ತದೆ. ಈಗ ತಾನೇ ಪ್ರೌಢಶಾಲೆಗಳಲ್ಲಿ ಓದಿ, ಉತ್ತಮ ಅಂಕ ಗಳಿಸಿದ ಹದಿ ಹರೆಯದವರೆಲ್ಲ ಕಾಲೇಜಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಪಿಯು ಮುಗಿಸಿದವರೋ, ಉನ್ನತ ಶಿಕ್ಷಣದ ಕಡೆಗೆ ಹೊರಳುತ್ತಿದ್ದಾರೆ. ಅದೇ ರೀತಿ ಕಾಲೇಜು ಜೀವನ ಮುಗಿಸಿದವರು, ಅತ್ತ ಕಾಲೇಜಿನ ನೆನಪುಗಳನ್ನು ಮರೆಯಲೂ ಆಗದೆ, ಇತ್ತ ತೆರೆದುಕೊಂಡ ಹೊಸ ಬದುಕಿಗೆ ಸುಲಭವಾಗಿ ಒಗ್ಗಿಕೊಳ್ಳಲೂ ಆಗದೇ ಒದ್ದಾಡುತ್ತಿದ್ದಾರೆ.
ಕಾಲೇಜ್ ಇಂತಹದ್ದೊದು ಶಬ್ದವೇ ಸಾಕು ಅದೆಷ್ಟೋ ಜನರಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. ಪ್ರೌಢಶಾಲೆ ತನಕ ತಡೆದಿಟ್ಟ ಭಾವನೆಗಳೆಲ್ಲ ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಟ ಮಾಡುವ ಸಮಯ ಅದು. ನೂರಾರು ಕನಸುಗಳು ಅರಳುವ, ಮನಸುಗಳು ಮಿಡಿಯುವ ದಿನಗಳು ಅವು.
ಕಾಲೇಜು ದಿನಗಳ ಬಗ್ಗೆ ಆಗ ತಾನೆ ಕಾಲೇಜಿಗೆ ಕಾಲಿರಿಸಿದವರ ಮನಸ್ಸಿನಲ್ಲಿ ಅದೆಷ್ಟು ಕನಸುಗಳಿರುತ್ತವೆಯೋ ಅದಕ್ಕಿತ ಹೆಚ್ಚಿನ ನೆನಪುಗಳು ಕಾಲೇಜು ಮುಗಿಸಿ ಮುನ್ನಡೆದವರಲ್ಲಿ ಇರುತ್ತದೆ. ಛೇ.. ಇನ್ನಷ್ಟು ದಿನ ಇರಬೇಕಾಗಿತ್ತು ಎಂದ ಹಪಾಹಪಿ ಪಟ್ಟವರು ಹಲವರು. ಕಾಲೇಜು ದಿನಗಳ ಮಧುರ ನೆನಪುಗಳನ್ನು ಸದಾ ಮನಸ್ಸಿನಲ್ಲಿ ಮೆಲುಕು ಹಾಕಿ ಕೊರಗಿದವರು ಇನ್ನೂ ಕೆಲವರು. ಕಾಲೇಜು ಮುಗಿಸಿ ಉದ್ಯೋಗ ಅರಸಿ, ಬದುಕಿನಲ್ಲಿ ನಿಧಾನವಾಗಿ ಹೆಜ್ಜೆ ಊರುತ್ತಿರುವವರೂ ಕೂಡ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
ಕಾಲೇಜು ದಿನಗಳಲ್ಲಿ ನಡೆಸಿದ ಪುಂಡರಪೂಟುಗಳು ಯಾವಾಗಲೂ ಮಧುರವಾಗಿಯೇ ಇರುತ್ತವೆ. ಮೊಟ್ಟ ಮೊದಲ ದಿನ ಭಯದಿಂದಲೇ ಕಾಲೇಜು ಮೆಟ್ಟಿಲು ಹತ್ತಿದ್ದು, ಕಾಲೇಜಿನಲ್ಲಿ ಯಾವ ಕ್ಲಾಸು ಎಲ್ಲೆಲ್ಲಿದೆ, ಯಾರು ಯಾವ ವಿಷಯಗಳನ್ನು ಕಲಿಸುತ್ತಾರೆ ಎನ್ನುವುದು ಅರ್ಥವಾಗದೇ ಗೊಂದಲ ಪಟ್ಟುಕೊಂಡಿದ್ದು, ನೀವ್ ಫ್ರೆಷರ್ಸಾ... ಎಂದು ಗದರಿ ಕೇಳುವ ಸೀನಿಯರ್ಸ್ ಎದುರು ಭಯದಿಂದಲೇ ಉತ್ತರ ಹೇಳಿ, ಅವರು ಕೊಡುವ ಕೀಟಲೆಗೆ ಪಡಿಪಾಟಲು ಪಟ್ಟಿದ್ದು, ಕಾರಿಡಾರ್ನಲ್ಲಿ ಓಡಾಟ, ಯಾವುದೋ ಹುಡುಗಿಯ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂದಿದ್ದು, ಗೆಳೆಯರ ಬಳಗವನ್ನು ಕಟ್ಟಿದ್ದು ಹೀಗೆ ಹತ್ತು ಹಲವು ರಸ ನಿಮಿಷಗಳು ನೆನಪಾಗಿ ಮನಸ್ಸಿನ ಸಂಭ್ರಮಕ್ಕೆ ಕಾರಣವಾಗುತ್ತವೆ.
 
ಮೊದಲ ದಿನ
ಕಾಲೇಜು ಮೊದಲ ದಿನ ಪ್ರತಿಯೊಬ್ಬರಲ್ಲೂ ನೆನಪಿನಲ್ಲಿ ಸದಾ ಉಳಿಯುತ್ತದೆ. ಕಾಲೇಜು ಹೇಗೋ, ಉಪನ್ಯಾಾಸಕರು ಹೇಗೋ ಏನೋ, ಯಾವ ಯಾವ ಕ್ಲಾಸುಗಳು ಎಲ್ಲೆಲ್ಲಿದೆಯೋ ಇಂತಹ ಹಲವು ಗೊಂದಲ, ಭಯ, ದುಗುಡದ ನಡುವೆ ಮೊದಲ ದಿನ ಚಿರಸ್ಥಾಯಿಯಾಗಿ ಉಳಿದುಬಿಡುತ್ತದೆ. ಯಾರ ಬಳಿ ಏನಾದರೂ ಕೇಳಿದರೆ ಎಲ್ಲಿ ನಾವು ಕಳಪೆಯಾಗಿಬಿಡುತ್ತೇವೆಯೋ ಎನ್ನುವ ಕೀಳರಿಮೆ ಕೂಡ ಕಾಡುತ್ತದೆ. ಕಾಲೇಜು ನೋಟಿಸ್ ಬೋರ್ಡಿನಲ್ಲಿ ಹಾಕಿದ ಟೈಂ ಟೇಬಲ್ ಅರ್ಥವಾಗದೇ ಪೇಚಾಡುವಂತಾಗುತ್ತದೆ. ಪ್ರತಿ ತರಗತಿಗಳ ನಡುವಿನ ಸೈಕಲ್ ಗ್ಯಾಪಲ್ಲಿ, ಕ್ಲಾಸ್ ರೂಮುಗಳನ್ನು ಹುಡುಕಿ ಹೋಗುವಾಗಿನ ಗಲಿಬಿಲಿ ಇವೆಲ್ಲ ಸದಾ ನೆನಪಿನಲ್ಲಿ ಉಳಿದುಬಿಡುತ್ತವೆ. ಇದರ ನಡುವೆಯೇ ಯಾರೋ ಚೆಂದದ ಹುಡುಗಿ ಕಣ್ಣಿಗೆ ಬಿದ್ದರೆ, ದೇವ್ರೇ.. ಈಕೆ ನಮ್ಮದೇ ಕ್ಲಾಸು.. ನಮ್ಮದೇ ಸೆಕ್ಷನ್ ಆಗಿರ್ಲಪ್ಪಾ ಎಂದು ಬೇಡಿಕೊಂಡಿದ್ದು.. ಅಪ್ಪಿತಪ್ಪಿ, ಯಾವುದಾದರೂ ಹುಡುಗಿ, ಈ ಕ್ಲಾಸ್ ಎಲ್ಲಿ ಬರುತ್ತೆ ಅಂತ ಕೇಳಿದರೆ, ಸ್ವರ್ಗವೇ ಕೈಗೆ ಸಿಕ್ಕಂತೆ ಮನಸ್ಸು ಹಸಿರಾದದ್ದೆಲ್ಲ ಕಾಲೇಜು ದಿನಗಳು ಮುಗಿದ ಎಷ್ಟೋ ವರ್ಷಗಳ ವರೆಗೂ ನೆನಪಿನಲ್ಲಿಯೇ ಇರುತ್ತವೆ ಬಿಡಿ.
 
ರ್ಯಾಗಿಂಗ್
ಕಾನೂನಿನ ಅನ್ವಯ ರ್ಯಾಗಿಂಗ್ ಎನ್ನುವುದು ಅಧಿಕೃತವಾಗಿ ನಿಷೇಧಕ್ಕೊಳಗಾಗಿ, ಶಿಕ್ಷಾರ್ಹ ಅಪರಾಧ ಎಂಬ ಪಟ್ಟ ಕಟ್ಟಿಕೊಂಡಿದ್ದರೂ, ಕಾಲೇಜಿನ ಮೊದ ಮೊದಲ ದಿನಗಳಲ್ಲಿ ಸೀನಿಯರ್ಸ್ ಕೊಡುವ ಪಡಿಪಾಟಲನ್ನು ಮರೆಯುವಂತೆಯೇ ಇಲ್ಲ. ಕೇಳಿದರೆ ಇದು ರ್ಯಾಗಿಂಗ್ ಅಲ್ಲ ಎನ್ನುವ ಸೀನಿಯರ್ ಮಂದಿ ಆಗ ತಾನೇ ಕಾಲೇಜಿಗೆ ಕಾಲಿಗೇ ಕಾಲಿರಿಸಿದವರಿಗೆ ನೀಡುವ ಕೀಟಲೆಗಳು ಒಂದೆರಡಲ್ಲ ಬಿಡಿ. ಸೀನಿಯರ್ಸ್ ಕಾಟಕ್ಕೆ ಹೊಸ ಹೈದರಿಗೆ ಕಾಲೇಜು ಸಾಕೋ ಸಾಕು ಅನ್ನಿಸಿ ಬಿಡುತ್ತವೆ. ಆದರೆ ಹೀಗೆ ಕೀಟಲೆ ಮಾಡಿ ಕಾಟ ಕೊಟ್ಟ ಸೀನಿಯರ್ಸ್ ಕೊನೆಗೆ ಜ್ಯೂನಿಯರ್ಸ್‌ಗಳಿಗೆ ಮಿತ್ರರಾಗುತ್ತಾರೆ. ಏನಾದರೂ ತೊಂದರೆಗಳು ಬಂದಾಗ ಜತೆಗೆ ನಿಲ್ಲುತ್ತಾರೆ.

ಮೊದಲ ಪ್ರೇಮ
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಮೊಟ್ಟ ಮೊದಲ ಪೀತಿ ಅರಳುವುದು ಕಾಲೇಜು ದಿನಗಳಲ್ಲಿಯೇ. ಒನ್ ಸೈಡ್ ಇರಲಿ, ಎರಡೂ ಸೈಡ್ ಇರಲಿ, ಆ ದಿನಗಳಲ್ಲಿ ಪ್ರೀತಿ ಅರಳಿ ಹಸಿರಾದ ನೆನಪುಗಳನ್ನು ಕಟ್ಟಿಕೊಡುತ್ತವೆ. ಕಾಲೇಜು ದಿನಗಳ ಪ್ರೀತಿ ಹಲವು ಸಂದರ್ಭಗಳಲ್ಲಿ ಕಾಲೇಜಿನಲ್ಲಿಯೇ ಅಂತ್ಯವಾದ ನಿದರ್ಶನಗಳಿವೆ. ಇನ್ನೂ ಹತ್ತು-ಹಲವು ಪ್ರೇಮ ಕಥಾನಕಗಳು ಬದುಕಿನ ಜತೆಗೂಡುತ್ತವೆ. ಇನ್ನು ಪ್ರೇಮ ವೈಲ್ಯವಾದರಂತೂ ಅದರ ಗಾಯ ಸದಾ ಶಾಶ್ವತ ಎಂಬಂತಾಗುತ್ತದೆ.
 
ಕಾಲೇಜು ಚುನಾವಣೆ
ಬಹುತೇಕ ಕಾಲೇಜುಗಳಲ್ಲಿ ಚುನಾವಣೆಗಳು ನಡೆದೇ ಇರುತ್ತವೆ. ಹಲವರು ಗೆದ್ದಿದ್ದೂ, ಮತ್ತೆ ಹಲವರು ಸೋತಿದ್ದೂ, ಸೋತಿದ್ದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದೂ, ಗೆದ್ದಿದ್ದನ್ನು ಬದುಕಿನ ಯಾವುದೋ ಗೆಲುವು ಎಂಬಂತೆ ಸಂಭ್ರಮಿಸಿದ್ದೂ ಇದೆ. ಚುನಾವಣೆಯ ಗೆಲುವಿಗಾಗಿಯೇ ಮಾಡಿದ ಗಿಮಿಕ್ಕುಗಳು, ರಾಜಕಾರಣಿಗಳನ್ನೂ ಮೀರಿಸಿದಂತೆ ಮಾಡಿದ ಭಾಷಣಗಳನ್ನು ಮರೆಯಲಾದೀತೆ?
 
ಹೀರೋ ಆಗೋಕೆ ಹೋಗಿ ಸ್ಟ್ರೈಕ್
ಕಾಲೇಜು ದಿನಗಳಲ್ಲಿ ಪ್ರತಿಯೊಬ್ಬರಿಗೂ ಹೀರೋ ಆಗಿ ಮೆರೆಯಬೇಕು, ತಾನು ಎಲ್ಲರಿಗೂ ನಾಯಕ ಎನ್ನಿಸಿಕೊಳ್ಳಬೇಕು ಎಂಬ ಕನಸು ಇದ್ದೇ ಇರುತ್ತದೆ. ಇದಕ್ಕಾಗಿ ಏನೇನೋ ಕಸರತ್ತುಗಳನ್ನು ಮಾಡಿಯೇ ಇರುತ್ತಾರೆ. ಇದರಲ್ಲಿ ಪ್ರಮುಖವಾಗಿ ಕಾಲೇಜ್ ಸ್ಟ್ರೈಕ್ ಎಂಬುದು ಹೀರೋಗಿರಿ ತೋರಿಸಿಕೊಳ್ಳುವ ಮುಖ್ಯ ಮಾರ್ಗವಾಗುತ್ತದೆ. ಹೀಗಾಗಿ ಸೆಮಿಸ್ಟರೋ, ಕಾಲೇಜು ಫೀಸೋ, ಸಬ್ಜೆಕಟ್ಗಳೋ, ಇನ್ಯಾವುದೋ ಸಮಸ್ಯೆಗಳನ್ನೋ ಎದುರಿಟ್ಟುಕೊಂಡು ಸ್ಟ್ರೈಕ್ ಮಾಡಿ ಪ್ರಸಿದ್ಧಿಗೆ ಬರಲು ಯತ್ನಿಸುತ್ತಾರೆ. ಇಂತಹ ಸ್ಟ್ರೈಕುಗಳು ವಿದ್ಯಾರ್ಥಿ ಬದುಕಿನಲ್ಲಿ ಮುಂದೆ ಪ್ಲಸ್ ಕೂಡ ಆಗಬಹುದು, ಮೈನಸ್ ಕೂಡ ಆಗಬಹುದು.
 
ಗಲಾಟೆ
ಕಾಲೇಜ್ ಎಂದ ಮೇಲೆ ಗಲಾಟೆ ಸರ್ವೇ ಸಾಮಾನ್ಯ. ಯಾವ್ಯಾವುದೋ ಕಾರಣಗಳಿಗಾಗಿ ಗಲಾಟೆ ಜಗಳ, ಹೊಡೆದಾಟಗಳು ನಡೆದೇ ಇರುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಾಗಿ ಹುಟ್ಟಿಕೊಳ್ಳುವ ಜಗಳಗಳು ಹೊಡೆದಾಟದಲ್ಲಿ ಅಂತ್ಯಗೊಂಡಿದ್ದೂ ಇದೆ. ಕಾಲೇಜು ಜೀವನದ ಹಸಿ ಹಸಿ ನೆನಪುಗಳಲ್ಲಿ ಈ ಹೊಡೆದಾಟಗಳೂ ಪ್ರಮುಖವಾಗುತ್ತವೆ. ಕೆಲವೊಮ್ಮೆ ಈ ಹೊಡೆದಾಟಗಳಿಂದಲೇ ಬದುಕು ಅಂತ್ಯಗೊಳ್ಳುವುದು ಅಥವಾ ಯಾವುದೋ ತಿರುವು ಪಡೆದಿದ್ದೂ ಇದೆ. ಆದರೆ ಕಾಲೇಜು ದಿನಗಳಲ್ಲಿ ನಡೆಸಿದ ಗಲಾಟೆ, ಹೊಡೆದಾಟಗಳು ಸದಾ ನೆನಪಿನಲ್ಲಿ ಉಳಿದು ಬಿಡುತ್ತವೆ.
 
ಕ್ಲಾಸ್ ಬಂಕ್
ಕಾಲೇಜು ಅಂದ ಮೇಲೆ ಕ್ಲಾಸ್ ಬಂಕ್ ಮಾಡದಿದ್ದರೆ ಹೇಗೆ? ಮೊದಲ ಕ್ಲಾಸ್, ಮಧ್ಯದಲ್ಲಿ ಗ್ಯಾಪಲ್ಲಿ ಇನ್ಯಾವುದೋ ಕ್ಲಾಸ್, ಕೊನೆಯ ತರಗತಿ ಇರಬಹುದು ಹೀಗೆ ಕ್ಲಾಸ್ ಬಂಕ್ ಸಹಜ ಎಂಬಂತಾಗಿದೆ. ತರಗತಿ ತಪ್ಪಿಸಿ ಸಿನೆಮಾಕ್ಕೆ ಹೋಗುವುದೋ, ಇನ್ನೆಲ್ಲೋ ಅಡ್ಡಾಡುವುದೋ ಸಹಜ ಎಂಬಂತಾಗಿದೆ. ಎಂತಹ ವಿದ್ಯಾರ್ಥಿಯಾದರೂ ಕನಿಷ್ಟ ಒಂದಾದರೂ ಕ್ಲಾಸು ತಪ್ಪಿಸಿಯೇ ಇರುತ್ತಾನೆ. ವಿನಾಕಾರಣ ಕ್ಲಾಸಿಗೆ ಚಕ್ಕರ್ ಹೊಡೆಯುವದೂ ಕಾಲೇಜಿನ ರಸಘಳಿಗೆಗಳಲ್ಲಿ ಒಂದು.
 
ಗೆಳೆಯರ ಬಳಗ
ಕಾಲೇಜೆಂದ ಮೇಲೆ ಗೆಳೆಯರ ಬಳಗ ಇದ್ದೇ ಇರುತ್ತದೆ. ಕಾಲೇಜಿಗೆ ಕಾಲಿಟ್ಟ ದಿನಗಳಲ್ಲಿ ಹೊಸ ಹೊಸ ಗೆಳೆಯರನ್ನು ಮಾಡಿಕೊಳ್ಳುವುದು ಸಹಜ. ಇಬ್ಬರೋ, ಮೂವರೋ ಅಥವಾ ಹಲವಾರು ಜನರೋ ಜತೆ ಸೇರಿ ಬಳಗ ಕಟ್ಟಿಕೊಳ್ಳುತ್ತಾರೆ. ಒಟ್ಟಿಗೆ ಕ್ಲಾಸಿಗೆ ಹೋಗುತ್ತಾರೆ. ಜತೆಯಾಗಿ ಸಿನಿಮಾ, ಹಾಡು, ಹರಟೆ, ಕೀಟಲೆ, ಕಾರಿಡಾರ್ ಸುತ್ತಾಟ ಹೀಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಜೀವಮಾನದ ಜತೆಗಾರರಂತೆ ಕಲೆಯುತ್ತಾರೆ. ನಲಿಯುತ್ತಾರೆ. ಈ ಗೆಳೆಯರ ಬಳಕ ಅನೇಕ ಸಂದರ್ಭಗಳಲ್ಲಿ ಕಾಲೇಜು ಮುಗಿದ ನಂತರವೂ ಪದೇ ಪದೆ ಸೇರಿಯೂ ಸೇರುತ್ತಾರೆ.
 
ಅಟೆಂಡೆನ್ಸ್ ಶಾರ್ಟೇಜ್
ಮಾಸ್ ಬಂಕು, ಕ್ಲಾಸ್ ಬಂಕಿನಿಂದಾಗಿ ಅಟೆಂಡೆನ್ಸ್ ಶಾರ್ಟೇಜ್ ಸದಾ ಕಾಲ ಕಾಡುತ್ತದೆ. ಬೋರಾಗುವ ವಿಷಯದ ತರಗತಿಗೋ, ಅಥವಾ ಇನ್ಯಾವುದೋ ಕಾರಣದಿಂದ ತರಗತಿಗೆ ಹೋಗದೇ ತಪ್ಪಿಸಿಕೊಂಡ ಪರಿಣಾಮ ಅಟೆಂಡೆನ್ಸ್ ಶಾರ್ಟೇಜ್ ಬಂದೇ ಬರುತ್ತದೆ. ಪರೀಕ್ಷೆ ಸಂದರ್ಭದಲ್ಲಿ ಅಟೆಂಡೆನ್ಸ್ ಕಡಿಮೆ ಇರುವ ಕಾರಣದಿಂದಲೇ ಹಾಲ್ ಟಿಕೆಟ್ ನೀಡಲಾರೆ ಎನ್ನುವ ಪ್ರಿನ್ಸಿಪಾಲರ ಮುನಿಸು, ಸರ್ ಪ್ಲೀಸ್ ಅಟೆಂಡೆನ್ಸ್ ಕೊಡಿ ಎಂದು ಉಪನ್ಯಾಸಕರ ಬಳಿ ದುಂಬಾಲು ಬೀಳುವ ವಿದ್ಯಾರ್ಥಿ ಬಳಗ ಇವೆಲ್ಲ ಕಾಲೇಜು ದಿನಗಳ ಹಸಿ ಹಸಿ ನೆನಪುಗಳು.
 
ಸಾಂಸ್ಕೃತಿಕ ಕಾರ್ಯಕ್ರಮ
ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆದೇ ಇರುತ್ತದೆ. ಅದರಲ್ಲಿ ಹಾಡೋ, ನೃತ್ಯವೋ, ನಾಟಕವೋ ಹೀಗೆ ಯಾವುದೋ ಒಂದು ವಿಶಿಷ್ಟ ಕಾರ್ಯಕ್ರಮ ನೀಡುವುದು ವಿದ್ಯಾರ್ಥಿ ಬದುಕಿನ ವಿಶಿಷ್ಟ ಘಳಿಗೆಗಳಲ್ಲಿ ಒಂದು. ಇಷ್ಟೇ ಅಲ್ಲ, ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳು, ದೈಹಿಕ ಕ್ರೀಡಾಕೂಟದಲ್ಲಿ ಪಾಲ್ಗೊಡು ಬಹುಮಾನಗಳನ್ನು ಗಳಿಸುವುದು ಕಾಲೇಜು ದಿನಗಳ ಮಹತ್ತರ ಘಟನೆಗಳಲ್ಲಿ ಒಂದು.
 

No comments:

Post a Comment