ಮಳೆ ಹಬ್ಬ : ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಮುನ್ನುಡಿ
ಜಿಟಿ
ಜಿಟಿ ಮಳೆಯಲ್ಲಿ ನೆನೆಯುವ ಸಂಭ್ರಮ, ಅರಲು
ಗದ್ದೆಯಲ್ಲಿ ಕುಣಿಯುತ್ತ, ಆಟವಾಡುತ್ತ
ಎಲ್ಲರೊಳಗೊಂದಾಗಿ ಸಂತೋಷವನ್ನು ಅನುಭವಿಸುತ್ತ, ಕಾಡು, ಹಸಿರು, ಉಂಬಳಗಳ
ರಾಶಿಯ ನಡುವೆ ಕಳೆದು ಹೋಗುತ್ತ, ದೂರದ
ಬೆಟ್ಟದ ಮೇಲೆಬಂದು ಚುಂಬಿಸುವ ಮೋಡಗಳಿಗೆ ಹಾಯ್ ಹೇಳುತ್ತ, ಹತ್ತಿರದ ಜಲಧಾರೆ, ತೊರೆಯಲ್ಲಿ ಆಡುತ್ತ ದಿನ ಕಳೆದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ
ಭಾವನೆ. ಇಂತಹ ಎಲ್ಲ ಅನುಭವಗಳ ಬುತ್ತಿಯನ್ನು ನಗರವಾಸಿಗಳಿಗೆ ಕಟ್ಟಿಕೊಟ್ಟಿದ್ದೇ ಮಳೆ ಹಬ್ಬ.
ಮಳೆ
ಹಬ್ಬ ಎನ್ನುವ ವಿನೂತನ ಕಲ್ಪನೆಯ, ಪರಿಸರ
ಸ್ನೇಹಿ ಪ್ರವಾಸ ಅಭಿಯಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವಾನಳ್ಳಿಯಲ್ಲಿ
ಆರಂಭಗೊಂಡಿತು. ಈ ಮಳೆ ಹಬ್ಬದಲ್ಲಿ ಎಲ್ಲವೂ ಇತ್ತು. ಹಸಿರು, ಸ್ನೇಹ, ಸಮ್ಮಿಲನ, ಬೆಟ್ಟ, ಕಾಡು, ಮಳೆ, ಜೀವಂತಿಕೆ, ಜಲಪಾತ, ಕ್ರಿಯಾಶೀಲತೆ, ಚಾರಣ
ಹೀಗೆ ಹತ್ತು ಹಲವು ಅಅಂಶಗಳನ್ನು ಒಳಗೊಂಡಿದ್ದವು.
ದಿನವಿಡೀ
ಎಡಬಿಡದೆ ಸುರಿಯುವ ಮುಂಗಾರು ಮಳೆ.
ಹಸಿರು ಹೊತ್ತು, ಮೋಡಗಳನ್ನು
ಮುತ್ತಿಕ್ಕಿ ನಗು ನಗುತ್ತಾ ಕಯ ಬೀಸಿ ಕರೆಯುವ ವೃಕ್ಷ ಸಂಕುಲಗಳು, ಜೀವೋತ್ಸಾಹವನ್ನು
ಉದ್ದೀಪನಗೊಳಿಸುವ ಪುಟ್ಟ ಜಲಪಾತ, ಪುಟ್ಟ ಪುಟ್ಟದಾಗಿ ಇಣುಕುವ, ಪಾದ ತೊಳೆಯುವ ತೊರೆಗಳು. ಆಗಾಗ ಇಣುಕುವ ಸೂರ್ಯ, ಜತೆಗೆ
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮೂವತ್ತಕ್ಕೂ ಹೆಚ್ಚಿನ ಅತಿಥಿಗಳು.. ಮೊದಲ ಆವೃತ್ತಿಯ ಮಳೆ
ಹಬ್ಬದ ಸಂಭ್ರಮವನ್ನು ನೂರ್ಮಡಿಸಿದ್ದು ಇಂತಹ ಹಲವು ಸಂಗತಿಗಳು.
ಪತ್ರಕರ್ತ ನಾಗರಾಜ ವೈದ್ಯ ಆಯೋಜಿಸಿದ್ದ ಈ ಮಳೆಹಬ್ಬ ಹಲವು ಹೊಸ ಸಾಧ್ಯತೆಗಳನ್ನು
ತೆರೆದಿಡುವುದರ ಜತೆಗೆ ಅಭೂತಪೂರ್ವ ಯಶಸ್ಸು ಪಡೆಯಿತು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ೩೫ಕ್ಕೂ ಹೆಚ್ಚಿನ
ಅತಿಥಿ ಅಭ್ಯಾಗತರು ಮಳೆ-ನಾಡಿನಲ್ಲಿ ಒಮದಾದರು. ಪ್ರಕೃತಿಯೊಳಗೆ ಮೈಮರೆತರು. ನಗರದ, ಧಾವಂತದ
ಬದುಕನ್ನು ಎರಡು ದಿನಗಳ ಮಟ್ಟಿಗೆ ಮರೆತು ರಿಫ್ರೆಶ್ ಆದರು. ಮಲೆನಾಡಿನ
ಆಹಾರ ಸಂಸ್ಕೃತಿ, ಜೀವನ
ಕ್ರಮ ಹಾಗೂ ಪರಿಶುದ್ಧ ಪ್ರವಾಸೋದ್ಯಮದ
ಸವಿಯನ್ನು ಮೈ-ಮನ ತುಂಬಿಕೊಂಡರು.
ಜಲಪಾತದಲ್ಲಿ ಸಾಹಸ:
ಜಲಪಾತ ವೀಕ್ಷಣೆಯ ಬಳಿಕ ದಾಂಡೇಲಿಯ ತಜ್ಞರ ಸಮ್ಮುಖದಲ್ಲಿ ರ್ಯಾಪ್ಟಿಂಗ್ ಕೂಡಾ
ನಡೆಸಲಾಯಿತು. 25 ಕ್ಕೂ
ಹೆಚ್ಚು ಜನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 200 ಅಡಿ ಎತ್ತರದ ಜಲಪಾತದಲ್ಲಿ ಜಾರಿಕೆ ಕಲ್ಲುಗಳ ಮೇಲಿಂದ ಇಳಿದು
ಖುಷಿ ಪಟ್ಟರು. ಕಿರುತೆರೆ ನಿರ್ದೇಶಕ ರಾಮಚಂದ್ರ ವೈದ್ಯ ಇದರ ನೇತೃತ್ವ ವಹಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡಿದರು.
ರೈತಾಪಿ ಕೆಲಸದ ಕಷ್ಟ ಸುಖದ ಅರಿವು:
ಕಾಯ್ರಕ್ರಮದ ಎರಡನೇ ದಿನ ಧೂಳಳ್ಳಿಯ
ನಾರಾಯಣ ನಾಯ್ಕ ಅವರ ಹೊಲದಲ್ಲಿ ಕಂಬಳಿಕೊಪ್ಪೆ ಹೊದ್ದು ಗದ್ದೆ ಹೂಟಿ ಮಾಡುವ
ಮೂಲಕ ಎಲ್ಲರೂ ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ನಗರದಲ್ಲಿ ಕಂಪ್ಯೂಟರ್ ಕೀಲಿಮಣೆಯನ್ನು ಕುಟ್ಟುತ್ತಿದ್ದ ಕೈಗಳು
ಗದ್ದೆಯಲ್ಲಿ ನೊಗವನ್ನು ಹಿಡಿದಿದ್ದವು, ಎತ್ತುಗಳ
ಹಿಮದೆ ಹೈ ಹೈ ಎಂದರು. ಸ್ಥಳೀಯ ರೈತರ ಕಷ್ಟ ಸುಖಗಳನ್ನು ಆಲಿಸಿದರು. ಕೆಸರು ಗದ್ದೆಯಲ್ಲಿ ಕಬಡ್ಡಿ ಆಡಿ ನಲಿದರು.
ಪರಸ್ಪರ ಕೆಸರೆರಚಿಕೊಂಡು ಸಂಭ್ರಮಿಸಿದ್ದಲ್ಲದೇ, ಅನೇಕರು ಐಟಿ ಕೆಲಸ ತೊರೆದು ಮತ್ತೆ ಕೃಷಿ ಜೀವನಕ್ಕೆ ಮರಳು
ಬಗ್ಗೆ ತಮಗಿರುವ ಆಸಕ್ತಿಯನ್ನು ಹೇಳಿಕೊಂಡರು. ಈ ಎಲ್ಲ ಸಂಭ್ರಮದ ನಂತರ ಹಿರಿಯ ಕೃಷಿಕ ನಾರಾಯಣ ನಾಯ್ಕರಿಗೆ ಮಳೆಹಬ್ಬ ತಂಡದ ಪರವಾಗಿ
ಗೌರವ ಸಮರ್ಪಿಸುವುದನ್ನು
ಮರೆಯಲಿಲ್ಲ.
ಉಪಚಾರಕ್ಕೆ ಮನಸೋತ ಅತಿಥಿಗಳು:
ಮಲೆನಾಡಿನ ವಿಶೇಷ ಬೆಳಗಿನ ತಿಂಡಿ ನೀರ್ದೋಸೆ, ಜೇನು ತುಪ್ಪ, ರವೆರವೆ ತುಪ್ಪ, ಮಾವಿನ ಶೀಕರಣೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿತು.
ಮಲೆನಾಡಿನ ಸ್ಪೆಷಲ್ ಎಂದೇ ಕರೆಸಿಕೊಳ್ಳುವ ಹಲಸಿನ ಹಣ್ಣಿನ ಕಡುಬು, ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ, ಉಪ್ಪಾಗೆ
ಎಣ್ಣೆಯಲ್ಲಿ ಬೇಯಿಸಿದ ಅತ್ರಾಸ, ಗೆಣಸಲಕಿಳೆಯಲ್ಲಿ
ಬೇಯಿಸಿದ ಕಾಯಿಕಡುಬು, ವಿವಿಧ
ರೀತಿಯ ಕಟ್ನೆಗಳು, ತಂಬುಳಿ, ಭೂತ್ಗೊಜ್ಜು ಹೀಗೆ ಮಲೆನಾಡಿನದ್ದೇ ರಸಪಾಕಗಳು
ಆಗಮಿಸಿದ ನಗರವಾಸಿಗಳನ್ನು ಖುಷಿಪಡಿಸಲು ಯಶಸ್ವಿಯಾಯಿತು. ವಾನಳ್ಳಿಯ ತವರುಮನೆಯ
ಪಿಜಿ ಹೆಗಡೆ, ನಾಗವೇಣಿ
ಹೆಗಡೆಯವರ ಕೈರುಚಿಗೆ ಪ್ರತಿಯೊಬ್ಬರೂ ಮೆಚ್ಚಿ ತಲೆದೂಗಿದರು.
ಆಟದ ಅಷ್ಟೇ
ಅಲ್ಲ.. ಪಾಠವೂ..:
ಈ ಇಡೀ ಕಾರ್ಯಕ್ರಮದ ಗೆಲುವು ಇದ್ದಿದ್ದೇ ಆಟದ ಜತೆಗೆ ಪಾಟ ಎಂಬ ಪರಿಕಲ್ಪನೆಯಲ್ಲಿ. ಆಟ ಆಡಿಸುತ್ತಲೇ ಪರಿಸರದ ಪಾಠವನ್ನು, ಪ್ರಕೃತಿ
ಪ್ರೇಮವನ್ನು ಮನವರಿಕೆ
ಕಾಡಿಸುವಂತೆ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲಾಗಿತ್ತು ಎನ್ನುತ್ತಾರೆ ಆಯೋಜಕ ನಾಗರಾಜ
ವೈದ್ಯ. ನಮ್ಮದೇ
ನಾಡಿನ, ಈಗ
ಗತಕಾಲವನ್ನು ಸೇರುತ್ತಿರುವ ಬುಗುರಿ, ಗಿಲ್ಲಿ-ದಾಂಡು ಆಟ, ಕಾಗದದ ದೋಣಿ ಮಾಡಿದ್ದು, ಹೊಡಸಲಿನಲ್ಲಿ ಚಳಿ ಕಾಯಿಸುತ್ತಾ ಗೇರುಬೀಜ ಸುಟ್ಟು ತಿಂದಿದ್ದು
ಎಲ್ಲವೂ ಅತಿಥಿಗಳಿಗೆ ಹೊಸ ಅನುಭವ ನೀಡುವ ಜತೆಗೆ ಮಲೆನಾಡು ಹಳೆಯ ನೆನಪುಗಳನ್ನು ಮತ್ತೊಮ್ಮೆ
ಕಣ್ಣೆಎದುರಿಗೆ ಕಟ್ಟಿಕೊಟ್ಟಿತು. ಇಷ್ಟೇ ಅಲ್ಲದೇ ಭೀಮತಾರಿಯಲ್ಲಿ ನೂರಾರು ಸೀಡ್ ಬಾಲ್ ಗಳ ಪ್ರಸರಣ ಮಾಡಿದ್ದು ವಿಶೇಷವಾಗಿತ್ತು.
ಮುಂದಿನ ದಿನಗಳಲ್ಲಿ ಬೆಂಗಳೂರು, ಬಯಲು
ಸೀಮೆ ಹಾಗೂ ಇನ್ನೂ ಅನೇಕ ಪ್ರದೇಶಗಳಲ್ಲಿ ಸಸಿ ನೆಡುವುದು, ಸೀಡ್ ಬಾಲ್ ಪ್ರಸರಣ ಮಾಡುವ
ಮೂಲಕ ಪ್ರಕೃತಿಗೆ ತಮ್ಮಿಂದಾಗಬಹುದಾದ ಕಿರು ಸಹಾಯ ಮಾಡಲು ಮಳೆಹಬ್ಬದ ತಂಡ ನಿರ್ಧರಿಸಿತು.
ಮನರಂಜನೆ:
ಇದೇ
ಸಂದರ್ಭದಲ್ಲಿ ರಂಗಾಯಣದ
ಕಲಾವಿದ ಧನರಾಜ್ ಎಸ್ ಆರ್ ಅವರ ಮಿಮಿಕ್ರಿ, ಡಾನ್ಸ್ ಹಾಗೂ ಪ್ರಸನ್ನ ಜಾಜಿಗುಡ್ಡೆ, ಕಿರುತೆರೆ
ಬರಹಗಾರ್ತಿ ಚೈತ್ರಿಕಾ ವೈದ್ಯ ಅವರ ಗಾಯನ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಯಿತು. ಪರಿಸರಸ್ನೇಹಿ, ಪರಿಸರ
ಪೂರಕ ಎಲ್ಲ ಅಂಶಗಳನ್ನು ಹೊಂದಿದ್ದ ಮಳೆ ಹಬ್ಬ ಎಲ್ಲರ ಚಿತ್ತ ಭಿತ್ತಿಯಲ್ಲಿ ಅಚ್ಚಳಿಯದೇ
ನಿಲ್ಲುವಲ್ಲಿ ಯಶಸ್ವಿಯಾಯಿತು. ಮತ್ತೊಮ್ಮೆ, ಮಗದೊಮ್ಮೆ ಮಳೆಹಬ್ಬದಲ್ಲಿ ಒಂದಾಗುವ ಭಾವನೆಯನ್ನು
ಪ್ರತಿಯೊಬ್ಬರಲ್ಲಿಯೂ ಹುಟ್ಟು ಹಾಕುವಲ್ಲಿ ಯಶಸ್ಸನ್ನು ಕಂಡಿತು.
-------
ಪ್ಲಾಸ್ಟಿಕ್
ಮುಕ್ತ ಮಳೆಎಹಬ್ಬ
ಮಳೆ
ಎಂಬ ಕಲ್ಪನೆಯೇ ಅಷ್ಟು ಸೊಗಸು. ಮಳೆಯ ಹೆಸರ ಪ್ರವಾಸಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಜತೆಗೆ
ಪ್ಲಾಸ್ಟಿಕ್ ಮುಕ್ತ ಪರಿಶುದ್ಧ ಪ್ರವಾಸೋದ್ಯಮದ ಆಶಯದೊಂದಿಗೆ ಹಮ್ಮಿಕೊಂಡಿದ್ದ ಮಳೆಹಬ್ಬ
ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಊರು ಮರೆತು ವರ್ಷವಿಡಿ ಕೆಲಸದಲ್ಲಿ ನಿರತರಾದವರಿಗೆ ನಿರುಮ್ಮಳತೆ
ನೀಡುವ ಜತೆಗೆ ಜಾಗೃತಿ ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ.
- ನಾಗರಾಜ ವೈದ್ಯ,
ಪತ್ರಕರ್ತ, ಮಳೆಹಬ್ಬ ಆಯೋಜಕ
No comments:
Post a Comment