Monday, July 30, 2018

ಸಾಲು ಸಾಲು ಅವಮಾನಗಳನ್ನೆದುರಿಸಲು ಆಕೆ ಮಾಡಿದ ಮಹಾಪಾಪವಾದರೂ ಏನು?

ಇತ್ತೀಚಿನ ದಿನಗಳಲ್ಲಿ ಕಾಂಗಿ ಹಿಂಬಾಲಕರಿಂದ ಸತತ ಅವಮಾನಕ್ಕೊಳಗಾಗುತ್ತಿರುವ ಮಹಿಳೆಯರಲ್ಲಿ ಜಶೋದಾ ಬೆನ್ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಕಾರಣವಿಲ್ಲದೇ, ಟೀಕಿಸಲೇಬೇಕು ಎನ್ನುವ ಕಾರಣಕ್ಕೆ ದೋಷಾರೋಪಣೆಯನ್ನು ಮಾಡುತ್ತಿರುವ ಕಾಂಗಿಗಳು ಸುಖಾಸುಮ್ಮನೆ ಜಶೋದಾ ಬೆನ್ ಹೆಸರನ್ನು ಅಲ್ಲಿ-ಇಲ್ಲಿ ಎಳೆದು ತರುವ ಮೂಲಕ ಅವರ ಮನಸ್ಸಿಗೆ ಘಾಸಿಯನ್ನು ಎಸಗುವ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಬಾಲ್ಯದಲ್ಲಿ ಅಂದರೆ ಕೇವಲ ಮೂರೋ ಅಥವಾ ನಾಲ್ಕೋ ವರ್ಷಗಳ ಪ್ರಾಯದಲ್ಲಿದ್ದಾಾಗ ಜಶೋದಾ ಬೆನ್‌ರನ್ನು ನರೇಂದ್ರ ಮೋದಿ ವರಿಸಿದ್ದರು. ಆ ಸಂದರ್ಭದಲ್ಲಿ  ನರೇಂದ್ರ ಮೋದಿ ಅವರಿಗಾದ ವಯಸ್ಸಾದರೂ ಎಷ್ಟು ಅಂತೀರಿ? ಕೇವಲ 13. ಮದುವೆ, ಹೆಂಡತಿ, ಸಂಸಾರ ಇತ್ಯಾದಿಗಳ ಕುರಿತಂತೆ ಚಿಕ್ಕ ಭಾವನೆಯೂ ಮೊಳೆತಿರದಂತಹ ವಯಸ್ಸು ಅದು. ಬುದ್ಧಿ ಬಲಿತ ನಂತರ ಮೋದಿ ತೆಗೆದುಕೊಂಡ ನಿರ್ಧಾರವಾದರೂ ಎಂತಹುದು? ನವ ಭಾರತ ನಿರ್ಮಾಣ. ಭವ್ಯ ಭಾರತಕ್ಕಾಗಿ ರಾಷ್ಟ್ರ ಜಾಗೃತಿ ಮೂಡಿಸುವ ಮಹತ್ಕಾರ್ಯ. ರಾಷ್ಟ್ರ ನಿರ್ಮಾಣದ ಧ್ಯೇಯೋದ್ದೇಶದಿಂದ ಪತ್ನಿಯಿಂದ ದೂರ ಬಂದ ಮೋದಿ ನಡೆ ಪ್ರಜ್ಞಾವಂತರಲ್ಲಿ ವಿಶೇಷ ಆದರಣೆಗೆ ಒಳಗಾಗುತ್ತಿದೆ. ರಾಷ್ಟ್ರ ನಿರ್ಮಾಣದ ಸಂಕಲ್ಪಕ್ಕಾಗಿ ಸಾಂಸಾರಿಕ ಜಂಜಡಗಳನ್ನು ಬಿಟ್ಟು ದೇಶಕ್ಕಾಗಿ ಜೀವ- ಜೀವನವನ್ನೇ ಮುಡಿಪಾಗಿಟ್ಟ ನರೇಂದ್ರರ ಈ ನಡೆಯನ್ನೇ ಕಾಂಗಿಗಳು ಕಾರಣವಿಲ್ಲದೆಯೇ ಟೀಕಿಸುತ್ತಿದ್ದಾಾರೆ. ಅದೂ ಯಾವ ರೀತಿ? ದೇಶಕ್ಕಾಾಗಿ ಅಭಿವೃದ್ಧಿ ಮಂತ್ರವನ್ನು ಜಪಿಸುವ ಮೋದಿ  ಪತ್ನಿಯನ್ನು ತ್ಯಜಿಸಿಲ್ಲವೇ, ಹೆಂಡತಿಯನ್ನು ಬೀದಿಗೆ ತಂದಿಲ್ಲವೇ? ಎಂದು ಹೀನವಾಗಿ ಚಿತ್ರಿಸುವ ಕಾಂಗಿ ಮನಸ್ಥಿತಿ, ರೋಗಗ್ರಸ್ಥ ಮನಸ್ಸುಗಳ ಪ್ರತೀಕವಲ್ಲದೇ ಬೇರೇನೂ ಅಲ್ಲ. ಬಹುಶಃ ಈ ಮನಸ್ಥಿತಿಯನ್ನು ಗ್ಯಾಾಂಗ್ರಿನ್ ಹುಣ್ಣಿಗೆ ಹೋಲಿಕೆ ಮಾಡಬಹುದು.

ಕಾಂಗಿಗಳಿಗೆ ತಮ್ಮ ಅಧಿನಾಯಕಿಯ ಮೂಲದ ಕುರಿತು ಯಾರಾದರೂ ಪ್ರಶ್ನಿಸಿದಾಗ, ಯುವರಾಜನ ಮದುವೆಯ ಕುರಿತು ಸಂದೇಹಗಳನ್ನು ವ್ಯಕ್ತಪಡಿಸಿದಾಗಲೆಲ್ಲ ಜಶೋದಾ ಬೇನ್ ಹೆಸರು ನೆನಪಾಗುತ್ತದೆ. ಇಟಲಿಯ ರಾಣಿ ತಮ್ಮ ಯವ್ವನದಲ್ಲಿ ಮಾಡಿದ್ದು ಸರಿ ಎನ್ನುವಂತೆ ಮಾತನಾಡುತ್ತಾರೆ. ಯುವರಾಜನಿಗೆ ಮದುವೆಯಾಗಿಲ್ಲ, ಏನಿವಾಗ ಎಂಬ ಧೋರಣೆಯಲ್ಲಿ ಮಾತನಾಡುತ್ತಾರೆ. ಅಷ್ಟೆಲ್ಲ ಹೇಳಿದ ನಂತರ ಇವ್ಯಾವುದಕ್ಕೂ ಸಂಬಂಧವೇ ಇಲ್ಲದಂತಹ ಮಹಾಸಾಧ್ವಿ  ಜಶೋದಾ ಬೆನ್‌ರನ್ನು ಎಳೆದು ತರುತ್ತಾರೆ. ಆಕೆಗೆ ಅನ್ಯಾಯವಾಗಿ ಹೋಗಿದೆ ಎಂದೂ ಹುಯ್ಯಲಿಡುತ್ತಾರೆ.

ಹಾಗೆ ನೋಡಿದರೆ ಕಾಂಗಿಗಳಿಗೆ ಜಶೋದಾ ಬೇನ್‌ರ ಹೆಸರನ್ನು ಸುಮ್ಮನೆ ಎತ್ತಲೂ ನೈತಿಕತೆ ಬೇಕಾಗುತ್ತದೆ. ಕಳೆದ 66 ವರ್ಷಗಳಿಂದಲೂ ಜಶೋದಾ ಬೇನ್ ಗೌರವಯುತವಾಗಿ, ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ. ನೋಡಿದ ತಕ್ಷಣ ಕಾಲಿಗೆರಗಿ ನಮಸ್ಕರಿಸಬೇಕು ಎನ್ನುವಷ್ಟು ಭಕ್ತಿ ಉಕ್ಕುತ್ತದೆ. ಸಮಾಜಕ್ಕೆ ಪಾಠ ಮಾಡುವ, ನಾಳೆಯ ಪ್ರಜೆಗಳನ್ನು ಹುಟ್ಟು ಹಾಕುವ ಶಿಕ್ಷಕ ವೃತ್ತಿಯನ್ನು ಮೂರು ದಶಕಗಳ ಕಾಲ ತಪಸ್ಸಿನಂತೆ ಕೈಗೊಂಡು ಬದುಕಿದವರು ಜಶೋದಾ ಬೆನ್. ತಮ್ಮ ಬದುಕಿನ ಅವಯಲ್ಲಿ ಜಶೋದಾ ಬೇನ್ ಯಾವತ್ತಿಗೂ ಮೋದಿಯವರ ಬಳಿ ಕೈ ಚಾಚಿಲ್ಲ. ರಾಷ್ಟ್ರ ನಾಯಕ ತನ್ನ ಸಹಾಯಕ್ಕೆ ಬರಲಿ ಎಂದು ಕನಸಿನಲ್ಲೂ ಕನವರಿಸಿಲ್ಲ. ತನ್ನ ಪತಿ ರಾಷ್ಟ್ರದ ಪ್ರಧಾನಿ ಎಂಬ ಚಿಕ್ಕ ಗರ್ವದ ಲವಲೇಶವೂ ಅವರ ನಡೆ-ನುಡಿಯಲ್ಲಿ ಇಣುಕಿಲ್ಲ.

ಯಾವಾಗ ನರೇಂದ್ರ ಮೋದಿ 1992ರ ವೇಳೆಗೆ ಗುಜರಾತಿನಲ್ಲಿ ಪಕ್ಷ ಸಂಘಟನೆಗಾಗಿ ದೊಡ್ಡ ಮಟ್ಟದ ಅಭಿಯಾನಕ್ಕೆ ಮುಂದಾದರೋ, ಆವಾಗಿಲಿಂದಲೇ ಜಶೋದಾ ಬೇನ್‌ಗೆ ಅವಮಾನಗಳ ಸರಮಾಲೆ ಆರಂಭವಾಯಿತು ಎನ್ನಬಹುದು. ನರೇಂದ್ರ ಮೋದಿ ಬಿಜೆಪಿ ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡಂತೆಲ್ಲ, ರಾಷ್ಟ್ರ ನಾಯಕ ಎಂದು ಬಿಂಬಿತವಾದಂತೆಲ್ಲ, ಮಾಧ್ಯಮಗಳು , ಕಾಂಗಿ ಬಾಲಗಳು ಜಶೋದಾ ಬೇನ್‌ರ ಹೆಸರಿಗೆ ಕೆಸರು ಎರಚುವ ಕಾರ್ಯದಲ್ಲಿ ಅವ್ಯಾಹತವಾಗಿ ತಮ್ಮನ್ನು ತೊಡಗಿಸಿಕೊಂಡರು. ಗುಜರಾತಿನ ಮುಖ್ಯಮಂತ್ರಿಯಾಗಿ ಮೋದಿ ಚುನಾಯಿತರಾದ ಮೇಲಂತೂ ಕಾಂಗಿಗಳ ಒರಲಾಟ ಇನ್ನಷ್ಟು ಹೆಚ್ಚಿತು. ಅದಕ್ಕೆೆ ಪೂರಕವಾಗಿ ಮಾಧ್ಯಮಗಳೂ ಸಾಕಷ್ಟು ಒಗ್ಗರಣೆ, ಮಸಾಲೆಗಳನ್ನು ತುರುಕಿದವು. ಕಾಂಗಿಗಳ ಇಂತಹ ಹೀನ ಕಾರ್ಯ ತುತ್ತ ತುದಿಯನ್ನು ತಲುಪಿದ್ದು 2014ರ ವೇಳೆಗೆ. ಯಾವಾಗ ಕಾಂಗಿಗಳು 2014 ಚುನಾವಣೆಯಲ್ಲಿ ಮಕಾಡೆ ಮಲಗಿ, ಮೋದಿ ಪ್ರಧಾನಿಯಾಗುತ್ತಾಾರೆ ಎನ್ನುವುದು ಪ್ರಖರವಾಗತೊಡಗಿತೋ, ಕಾಂಗಿ ಬಾಲಬಡುಕರು, ಯಾವುದಕ್ಕೂ ಸಂಬಂಧವೇ ಇರದಿದ್ದ ಜಶೋದಾ ಬೇನ್‌ರ ಹೆಸರನ್ನು ಇನ್ನಷ್ಟು ಎಳೆದು ತಂದರು. ತಾವು ಹೇಳಿದಂತೆ ಯಾವುದೂ ನಡೆದಿರದೇ ಇದ್ದರೂ ಕಾಂಗಿ ಗುಲಾಮರ ಮನಸ್ಥಿತಿ ಸ್ವಲ್ಪವೂ ಬದಲಾಗಲಿಲ್ಲ.

ಜಶೋದಾ ಬೇನ್‌ರೇ ಸ್ವತಃ ತಾವು ಚನ್ನಾಗಿದ್ದೇನೆ ಎಂದೂ, ಮೋದಿಯವರು ದೂರವಾದ ನಂತರ ಯಾವುದೇ ಸಮಸ್ಯೆ ಆಗಲಿಲ್ಲ ಎಂದೂ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಹೇಳುತ್ತಲೇ ಇದ್ದಾರೆ. ಆದರೆ ಕಾಂಗಿಗಳಿಗೆ ಇದ್ಯಾವುದೂ ಬೇಕಾಗಿಲ್ಲ. ಕಾಂಗ್ರೆಸ್ ಬೆನ್ನಿಗೆ ನಿಂತಿರುವ ಆಂಗ್ಲ ಮಾಧ್ಯಮಗಳಿಗೂ ಕೂಡ ಇದು ಗೌಣವಾಗಿ ಕಾಣುತ್ತಿದೆ. ಬಹುಶಃ ಜಶೋದಾ ಬೇನ್ ಹೆಸರಿಗೆ ಕೆಸರು ಎರಚಿದರೆ ಆಂಗ್ಲ ಮಾಧ್ಯಮಗಳ ಆತ್ಮಕ್ಕೆ ಯಾವಾಗಲೋ ಆಗಿರುವ ಅತೃಪ್ತಿಗೆ ಶಾಂತಿ ಸಿಗುತ್ತಿದೆಯೇನೋ ಬಲ್ಲವರಾರು?

ಕಾಂಗಿಗಳಿಗೆ ಯಾವುದೋ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವರ, ಅರೆನಗ್ನವಾಗಿ ನೃತ್ಯ ಮಾಡುತ್ತ, ಗ್ರಾಹಕರ ಮನಸ್ಸನ್ನು ತೃಪ್ತಿ ಪಡಿಸುತ್ತಿದ್ದವರ ತಪ್ಪನ್ನು ಮುಚ್ಚಿ ಹಾಕಲು ಅಸ್ತ್ರ ಬೇಕಾಗಿದೆ. ಮೋದಿಯವರನ್ನು ಇನ್ಯಾವುದೇ ಅಸ್ತ್ರದಿಂದಲೂ ಹಣಿಯಲು ಸಾದ್ಯವಿಲ್ಲ. ಈ ಕಾರಣದಿಂದ ಜಶೋದಾ ಬೇನ್‌ಗೆ ಅನ್ಯಾಯವಾಗಿದೆ ಎಂಬ ಹುಯಿಲನ್ನು ಎಬ್ಬಿಸಿ ಸಂಚಲನ ಉಂಟು ಮಾಡಿ, ಸುಳ್ಳನ್ನೇ ಸತ್ಯ ಮಾಡೋಣ ಎನ್ನುವುದೇ ಮುಖ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯಂತೂ ವಾರ್ತಾವಾಹಿನಿಗಳಲ್ಲೋ ಅಥವಾ ಇನ್ಯಾವುದೋ ಮಾಧ್ಯಮಗಳಲ್ಲೂ ಜಶೋದಾ ಬೇನ್‌ರ ಭಾವಚಿತ್ರವನ್ನೂ ಸರಿಯಾಗಿ ನೋಡಿರದ ಕಾಂಗಿ ಕಮಂಗಿಗಳು ತಾವೇ ಜಶೋದಾ ಬೇನ್‌ರನ್ನು ಕಣ್ಣಾರೆ ಕಂಡಿದ್ದೇವೇನೋ ಎಂಬಂತೆ ಪೋಸ್ಟುಗಳ ಮೂಲಕ ತೇಜೋವಧೆಗೆ ಮುಂದಾಗುವಂತಹ ನೀಚ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಹಿಳಾ ರಕ್ಷಣೆಯೇ ನಮ್ಮ ಆದ್ಯತೆ, ಮಹಿಳೆಯರ ತೇಜೋವಧೆಗೆ ಸ್ವಲ್ಪವೂ ಅವಕಾಶ ಕೊಡುವುದಿಲ್ಲ ಎನ್ನುವುದು ಕಾಂಗಿ ಮಹಾನಾಯಕರ ಬಾಯಲ್ಲಿ ಬರುವ ದೊಡ್ಡ ದೊಡ್ಡ ಮಾತುಗಳು. ಆದರೆ ಅವರ ಕಾಲ ಕೆಳಗೆಯೇ ಅವರದೇ ಬಾಲಬಡುಕರು, ಭಟ್ಟಂಗಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಹಿಳೆಯೊರ್ವರ ತೇಜೋವಧೆಗೆ ಯತ್ನಿಸುತ್ತಿರುವುದು ವೈರುಧ್ಯವೇ ಹೌದು. ಈ ಮೂಲಕ ತಾನು ಹೇಳುವುದು ಒಂದು, ಮಾಡುವುದು ಇನ್ನೊದು, ಹೇಳಿದಂತೆ ಮಾಡಬೇಕೆಂಬ ನಿಯಮ ನನಗಿಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತಿಿದೆ.

ವಿವಾಹ, ಸಂಸಾರ, ಮಕ್ಕಳು ಇತ್ಯಾಾದಿ ಸಂಬಂಧಗಳ ಕುರಿತು ಕಾಂಗಿಗಳನ್ನು ನಿಲುವು ಅವರ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತಿರುವುದು ವಿಪರ್ಯಾಸ. ಜಶೋದಾ ಬೆನ್ ಬಗ್ಗೆ ಮಾತನಾಡುವ ಕಾಂಗಿ ಬಾಲಬಡುಕರು, ಮೊದಲ ಪ್ರಧಾನಿ ನೆಹರೂಗಿದ್ದ ಎಡ್ವಿನಾಳ ಜತೆಗಿನ ಸಂಗವನ್ನೋ, ಮಹಿಳಾ ಪ್ರಧಾನಿಗಳ ಕುರಿತು ಅವರ ಆಪ್ತನೇ ಹೊರ ತಂದ ಅಕ್ರಮ ಸಂಬಂಧ ದ ಪುಸ್ತಕಗಳಲ್ಲಿನ ಅಂಶಗಳ ಬಗ್ಗೆಯೋ, ದಿಗ್ವಿಜಯರ ಮೂರನೇ ಮದುವೆಯೋ, ತರೂರರ ಪತ್ನಿಯ ಸಾವೋ, ಎನ್. ಡಿ. ತಿವಾರಿ ಎಂಬ ಹಣ್ಣು ಹಣ್ಣು ಮುದಿಜೀವದ ಮಕ್ಕಳ ಕುರಿತೋ ಮಾತನಾಡುವುದೇ ಇಲ್ಲ.

ಕಾಂಗಿಗಳ ಕುರಿತಾಗಿ ಹೇಳ ಹೊರಟರೆ ಇನ್ನೂ ಹಲವಾರು ವಿಷಯಗಳು ತೆರೆದುಕೊಳ್ಳಬಹುದು. ತಮ್ಮಲ್ಲೇ ತಪ್ಪನ್ನು ಇಟ್ಟುಕೊಂಡು ಯಾವುದಕ್ಕೂ ಸಂಬಂಧ ಇಲ್ಲದೇ ತಮ್ಮ ಪಾಡಿಗೆ ತಾವಿರುವವರ ಕುರಿತು ಅಪಪ್ರಚಾರ ಮಾಡುವ ಕಾಂಗಿ ಕಮಂಗಿಗಳ ಕಿವಿಯನ್ನು ಎಷ್ಟು ಹಿಂಡಿದರೂ ಅವರಿಗೆ ಬುದ್ಧಿ ಬರುವುದಿಲ್ಲ.

ಮುಂದಿನ ದಿನಗಳಲ್ಲಾದರೂ ಕಾಂಗಿಗಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದಿದ್ದಲ್ಲಿ ಅವರವರ ಮನೆಯವರೂ ಕೂಡ ಅವರನ್ನು ತಿರಸ್ಕರಿಯಾರು. ಅದರ ಜತೆಗೆ ಜಶೋದಾಬೆನ್ ಎಂಬ ವೌನ ತಪಸ್ವಿಯ ಮೂಕರೋದನದ ಕುದಿಬಿಂದುಗಳು ಅಪಪ್ರಚಾರ ಮಾಡುವವರನ್ನು ಸುಟ್ಟೀತು. 

Sunday, July 29, 2018

ಸಂಗಮ್.. ಹಾಗೂ ಕನ್ನಡ ಹೀರೋಗಳು (ನಾನು ನೋಡಿದ ಚಿತ್ರಗಳು-೪ )


ಮೆ ಕ್ಯಾ ಕರೂ ರಾಂ ಮುಝೆ ಬುಡ್ಡಾ ಮಿಲ್ ಗಯಾ ಎನ್ನುವ ಮೂಲಕ 1964ರಲ್ಲಿ ತೆರೆಕಂಡ ಸಂಗಮ್ ಸಿನೆಮಾವನ್ನು ಮತ್ತೊಮ್ಮೆ ನೋಡಿದೆ. ಸರಳ ಪ್ರೇಮಕಥೆ. ವಿವಾಹದ ನಂತರದ ಅನುಮಾನ ಎಂಬ ಅಂಶಗಳನ್ನಿಟ್ಟುಕೊಂಡು ರಾಜ್ ಕಪೂರ್ ಈ ಸಿನೆಮಾವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಕಥಾನಾಯಕ ರಾಜ್ ಕಪೂರ್.. ನಾಯಕಿ ವೈಜಯಂತಿಮಾಲಾ .. ಜೊತೆಯಲ್ಲಿ ರಾಜೇಂದ್ರಕುಮಾರ್ ಮುಖ್ಯ ಭೂಮಿಕೆಯ ಸಿನೆಮಾದಲ್ಲಿ ಬಹು ಅಂಶಗಳಲ್ಲಿ ಈ ಮೂವರೇ ಇರುತ್ತಾರೆ. ತ್ರಿಕೋನ ಪ್ರೇಮ ಕಥೆ.
ವೈಜಯಂತಿ ಮಾಲಾಳನ್ನು ಪ್ರೀತಿಸುವ ರಾಜ್ ಕಪೂರ್, ರಾಜೇಂದ್ರ ಕುಮಾರ್ ಇಬ್ಬರದ್ದೂ ಸೂಪರ್ ಅಭಿನಯ.
ತನ್ನ ಪ್ರೀತಿಯನ್ನು ರಾಜ್ ಕಪೂರ್ ಡಂಗುರ ಸಾರಿದಂತೆ ಗೆಳೆಯನ ಬಳಿ ಹೇಳಿಕೊಂಡರೆ ತನ್ನೊಳಗೆ ಪ್ರೀತಿಯ ಮಹಲನ್ನು ಕಟ್ಟಿ `ಯೇ ಮೇರಾ ಪ್ರೇಮ ಪತ್ರ ಪಡಕರ್..' ಎಂದು ಹಾಡಿ ವೈಜಯಂತಿಯನ್ನು ಸೆಳೆಯುವ ರಾಜೇಂದ್ರಕುಮಾರ್. ವೈಜಯಂತಿ ಮಾಲಾಳಿಗೂ ರಾಜೇಂದ್ರಕುಮಾರನ ಮೇಲೆ ಪ್ರೇಮದ ಭಾವವಿದೆ. ಆದರೆ ಮೂವರೂ ಗೆಳೆಯರು. ರಾಜೇಂದ್ರಕುಮಾರ್ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ರಾಜ್ ಕಪೂರನಿಗೆ ವೈಜಯಂತಿಯನ್ನು ಮದುವೆ ಮಾಡಿಸುವಲ್ಲಿಗೆ ಸಿನೆಮಾ ಅರ್ಧ ಮುಗಿಯುತ್ತದೆ.
ಇನ್ನು ಮುಂದಿರುವುದೇ ನಿಜವಾದ ಕಥೆ. 

ಮದುವೆಗೆ ಮುನ್ನ ತನ್ನ ಹೆಂಡತಿ ಯಾರನ್ನೋ ಪ್ರೀತಿಸುತ್ತಿದ್ದಳು ಎನ್ನುವ ಅಂಶವನ್ನು ತಿಳಿದುಕೊಂಡ ರಾಜ್ ಕಪೂರ್ ಕೂತಲ್ಲಿ ನಿಂತಲ್ಲಿ `ಯಾರವನು..' ಎಂದು ಪ್ರಶ್ನೆ ಮಾಡುತ್ತಾನೆ. ರಾಜೇಂದ್ರಕುಮಾರನಿಗೂ ಗೊತ್ತಿರಬಹುದು ಎಂದು ಆತನಲ್ಲೂ ಕೇಳುತ್ತಾನೆ. ಕೊನೆಗೊಮ್ಮೆ `ದೋಸ್ತ್ ದೋಸ್ತ್ ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ..' ಎಂದೂ ಹಾಡುತ್ತಾನೆ.. ಅಂತ್ಯದಲ್ಲಿ ರಾಜೇಂದ್ರಕುಮಾರ ಹಾಗೂ ವೈಜಯಂತಿಮಾಲಾ ಪ್ರೀತಿಸಿದ್ದರು. ಅವರ ನಡುವೆ ತಾನು ಬಂದು ಬದುಕನ್ನು ಹಾಳು ಮಾಡಿದೆ ಎನ್ನುವ ದುಃಖ ರಾಜ್ ಕಪೂರನನ್ನು ಕಾಡಿದರೆ ರಾಜೇಮದ್ರಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಿನೆಮಾ ಮುಕ್ತಾಯವಾದರೂ ನೋಡುಗನ ಮನದಲ್ಲಿ ಏನೆಲ್ಲ ಭಾವನೆಗಳನ್ನು ಉಳಿಸಿಬಿಡುತ್ತದೆ..
ಸಿನೆಮಾದಲ್ಲಿ ಇಷ್ಟೇ ಅಂಶಗಳಲ್ಲದೇ ನೋಡಲೇ ಬೇಕು ಎನ್ನಿಸುವಂತಹದ್ದು ಸಾಕಷ್ಟಿವೆ. ಬೋಲ್ ರಾಧಾ ಬೋಲ್ ಸಂಗಂ ಹೋಗಾ ಕೆ ನಹಿ ಎನ್ನುವಂತಹ ಸುಮಧುರ ಹಾಡುಗಳು ಇಲ್ಲಿವೆ. ಯುದ್ಧ ವಿಮಾನದ ಪೈಲಟ್ ಆಗುವ ರಾಜ್ ಕಪೂರ್.. ಯುದ್ಧದಲ್ಲಿ ಪಾಲ್ಗೊಳ್ಳುವ ದೃಶ್ಯ.
ಕ್ಲೈಮ್ಯಾಕ್ಸಿನಲ್ಲಿ ತ್ರಿಕೋನದಂತೆ ನಿಲ್ಲುವ ರಾಜ್ಕಪೂರ್, ರಾಜೇಂದ್ರಕುಮಾರ್, ವೈಜಯಂತಿ ಮಾಲಾ...
ರಾಜ್ ಕಪೂರ್ ನಡೆದುಕೊಂಡು ವೈಜಯಂತಿ ಮಾಲಾ ಬಳಿ ಬಂದರೆ ಆಕೆ ನಿಧಾನವಾಗಿ ನಡೆದುಕೊಂಡು ರಾಜೇಂದ್ರಕುಮಾರ್ ಬಳಿ ಹೋಗುವುದು, ರಾಜೇಂದ್ರ ಕುಮಾರ್ ಆಕೆಯಿಂದ ದೂರ ಹೋಗಿ ನಿಲ್ಲುವುದು.. ಇಂತಹ ಮನಮುಟ್ಟುವ ಪಾತ್ರಗಳು ಬಹಳಷ್ಟಿವೆ. ತುಂಟಾಟದ ಮನೋಭಾವದವರಿಗೆ ಮೇ ಕ್ಯಾ ಕರೂ ರಾಂ ಇಷ್ಟವಾಗಬಹುದು.. ಸ್ವಿಡ್ಜರ್ಲೆಂಡಿನಲ್ಲಿ ಮೊಟ್ಟ ಮೊದಲು ಚಿತ್ರೀಕರಣಗೊಂಡ ಭಾರತದ ಚಿತ್ರ ಇದು ಎನ್ನುವ ಹೆಗ್ಗಳಿಕೆ ಇದೆ. ಕನ್ನಡದಲ್ಲಿಯೂ ಸ್ವಪ್ನ ಎನ್ನುವ ಹೆಸರಿನಲ್ಲಿ ಈ ಚಿತ್ರ ರಿಮೇಕ್ ಆಗಿ ಬಂದಿದೆಯಂತೆ.


**
ಇನ್ನೊಂದು ಸಂಗತಿ ಹೇಳಲೇ ಬೇಕು. ಇದೇ ಚಿತ್ರವನ್ನು ಈಗ ಕನ್ನಡದಲ್ಲಿ ರಿಮೇಕ್ ಮಾಡಿದರೆ ಹೇಗಿರುತ್ತದೆ ಎನ್ನುವುದು ನನ್ನ ಆಲೋಚನೆ. ಹಳೆಯ ಕಥೆಯ ಅಂಶವನ್ನು ಇಟ್ಟುಕೊಂಡು ಇಂದಿನ ತಲೆಮಾರಿಗೆ ಹೊಂದಿಕೆಯಾಗುವಂತೆ ಚಿತ್ರ ಮಾಡುವುದು. ನನ್ನ ಪ್ರಕಾರ ಚಿತ್ರದಲ್ಲಿ ರಾಜ್ ಕಪೂರ್ ಪಾತ್ರಕ್ಕೆ ದರ್ಶನ್ ಹೊಂದಿಕೆಯಾಗುತ್ತಾರೆ. ರಾಜೇಂದ್ರಕುಮಾರ್ ಪಾತ್ರಕ್ಕೆ ಸುದೀಪ್ ಹೊಂದಿಕೆಯಾಗುತ್ತಾರೆ. ನೋಡುಗರಿಗೆ ಸುದೀಪ್ ಪಾತ್ರ ಸೆಕೆಂಡ್ ಹೀರೋ ಅಂತವನಿಗೆ ಸೆಕೆಂಡ್ ಹೀರೋ ಪಾತ್ರ ಕೊಟ್ಟರಲ್ಲ ಎನ್ನಿಸಬಹುದು. ಆದರೆ ಚಿತ್ರದಲ್ಲಿ ಸೆಕೆಂಡ್ ಹೀರೋ ಅನ್ನೋದೇ ಇಲ್ಲ. ಮೂರು ಪಾತ್ರಗಳೂ ಜೀವಾಳ. ದರ್ಶನ್ ತನ್ನ ತುಂಟಾಟದ ಮ್ಯಾನರಿಸಂ ಹೈಟು, ಫೈಲಟ್ಟು ಇತ್ಯಾದಿಗಳ ಮೂಲಕ ಪಾತ್ರಕ್ಕೆ ಒಗ್ಗಬಹುದು. ಅದೇ ರೀತಿ ಸೈಲಂಟಾಗಿ ಮನದೊಳಗೆ ರೋಧಿಸುವ ತನ್ನ ಪ್ರೇಮವನ್ನು ಸ್ನೇಹಕ್ಕಾಗಿ ತ್ಯಾಗ ಮಾಡಿ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ನಾಯಕನಾಗಿ, ನಾಯಕನಿಗಿಂತ ಹೆಚ್ಚಿನ ಅಂಕ ಪಡೆಯುವ ಮೂಲಕ ರಾಜೇಂದ್ರಕುಮಾರ್ ಪಾತ್ರವನ್ನು ಸುದೀಪ್ ಮಾಡಬಹುದು ಎನ್ನಿಸುತ್ತದೆ. ವೈಜಯಂತಿ ಮಾಲಾ ನ ಪಾತ್ರಕ್ಕೆ ರಾಧಿಕಾ ಪಂಡಿತ್ ಸೂಕ್ತ ಎನ್ನಿಸುತ್ತದೆ.
ಈ ಇಬ್ಬರೂ ನಾಯಕರು ಒಂದು ಚಿತ್ರದಲ್ಲಿ ಒಂದಾಗಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಹಾರಯಿಕೆ. ಇಬ್ಬರ ಇಮೇಜಿಗೂ ಧಕ್ಕೆ ಬರಬಾರದು. ಚಿತ್ರದಲ್ಲಿ ಏನಾದರೂ ಈ ಇಬ್ಬರೂ ಫೈಟ್ ಮಾಡಿಕೊಂಡೆ ಅವರ ಅಭಿಮಾನಿಗಳಲ್ಲಿ ಅದು ಮರುಧ್ವನಿಸುತ್ತದೆ. ಫೈಟ್ ಸಿನೆಮಾದ ಬದಲು ಈ ಫೈಟಿಲ್ಲದ ಸಿನೆಮಾ ಮಾಡಿದರೆ ಇಬ್ಬರ ಇಮೇಜು ಉಳಿಯುತ್ತದೆ. ಅಭಿಮಾನಿಗಳೂ ಒಟ್ಟಾಗಿ ಇರುತ್ತಾರೆ. ದಿಗ್ಗಜರ ಸಿನೆಮಾ ಆದ ಕಾರಣ ಬಾಕ್ಸಾಫಿಸಿನಲ್ಲಿ ನಿರೀಕ್ಷೆ ಹುಟ್ಟಿಸಿ ಹಣಗಳಿಕೆಗೆ ದಾರಿಯಾಗಬಹುದು. ನೋಡೋಣ ಯಾವ ಪುಣ್ಯಾತ್ಮನಾದರೂ ಈ ಕೆಲಸಕ್ಕೆ ಮುಂದಾಗುತ್ತಾನೋ ಎಂದು.
ಒಂದೊಳ್ಳೆ ಚಿತ್ರ.. ಸಂಗಂ ಚಿತ್ರ ನೋಡುವಾಗ ಕನ್ನಡದ ಈ ಇಬ್ಬರು ನಟರನ್ನು ಮನಸ್ಸಿನಲ್ಲಿಯೇ ಕಲ್ಪನೆ ಮಾಡಿಕೊಂಡು ನೋಡಿ.. ಖುಷಿ ಕೊಡಬಲ್ಲದು.

Saturday, July 28, 2018

ಕ್ರಿಕೆಟ್ ಜನಕರ ನಾಡಿನಲ್ಲಿ ವಲಸಿಗರದ್ದೇ ದರ್ಬಾರ್


ಕ್ರಿಕೆಟ್ ಆಡುವ ಎಲ್ಲ ದೇಶಗಳಲ್ಲಿಯೂ ಒಬ್ಬಿಬ್ಬರಾದರೂ ಆಟಗಾರರು ಬೇರೆ ದೇಶಗಳಲ್ಲಿ ಜನಿಸಿದವರಾಗಿದ್ದಾಾರೆ. ಕ್ರಿಕೆಟ್ ಜನಕ ದೇಶ ಇಂಗ್ಲೆೆಂಡ್‌ನಲ್ಲಿ ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಆಟಗಾರರಲ್ಲಿ ಹೆಚ್ಚಿನವರು ವಲಸೆ ಬಂದವರು ಎನ್ನುವುದು ವಿಶೇಷ. ಈ ಕಾರಣದಿಂದಲೇ ಇಂಗ್ಲೆೆಂಡ್ ಕ್ರಿಕೆಟ್ ತಂಡವನ್ನು ವಲಸೆ ಕ್ರಿಕೆಟಿಗರ ತಂಡ ಎಂದು ಕರೆಯಲಾಗುತ್ತಿದೆ.
ಪ್ರಸ್ತುತ ಇಂಗ್ಲೆೆಂಡ್ ಕ್ರಿಕೆಟ್ ತಂಡದ ಆಟಗಾರರನ್ನೇ ಗಮನಿಸಿ, ತಂಡದಲ್ಲಿ ಶೆ.80ರಷ್ಟು ವಲಸಿಗರು. ಯಾವುದೋ ದೇಶದಲ್ಲಿ ಜನಿಸಿ ಇಂಗ್ಲೆೆಂಡಿಗೆ ವಲಸೆ ಬಂದು, ಅಲ್ಲಿನ ಪೌರತ್ವವನ್ನು ಪಡೆದುಕೊಂಡು ಕ್ರಿಕೆಟ್ ಆಡಿ ಹೆಸರುವಾಸಿಯಾದವರು. ಇಂಗ್ಲೆೆಂಡಿನ ಕ್ರಿಕೆಟ್ ಇತಿಹಾಸವನ್ನು ಗಮನಿಸಿದಾಗ ಅದೆಷ್ಟೋ ಖ್ಯಾಾತನಾಮ ಕ್ರಿಕೆಟಿಗರು ಬೇರೆ ದೇಶದಲ್ಲಿ ಜನಿಸಿದವರು.
ಅನೇಕ ಸಾರಿ ಇಂಗ್ಲೆೆಂಡ್ ಕ್ರಿಕೆಟ್ ಜಗತ್ತಿನ ಚಿಕ್ಕಪುಟ್ಟಘ ರಾಷ್ಟ್ರಗಳಿಂದ ಆಟಗಾರರನ್ನು ಕರೆಸಿಕೊಂಡಿದ್ದರೂ ಇದೆ. ಜಿಂಬಾಬ್ವೆ, ದಕ್ಷಿಣ ಆಫ್ರಿಕಾ, ಭಾರತ, ಆಫ್ರಿಕಾದ ಇತರ ಕ್ರಿಕೆಟ್ ಶಿಶುಗಳು, ಐರ್ಲೆಂಡ್, ಡೆನ್ಮಾರ್ಕ್ ಹೀಗೆ ವಿವಿಧ  ರಾಷ್ಟ್ರಗಳ ಆಟಗಾರರಿಗೆ ತನ್ನ ದೇಶದ ಪೌರತ್ವವನ್ನು ಒದಗಿಸಿ, ಕ್ರಿಕೆಟ್ ಆಡಲು ಅವಕಾಶ ನೀಡಿದೆ. ದಕ್ಷಿಣ ಆಫ್ರಿಕಾದ ಅತ್ಯಂತ ಹೆಚ್ಚಿನ ಕ್ರಿಕೆಟ್ ಪ್ರತಿಭೆಗಳು ಇಂಗ್ಲೆೆಂಡಿನಲ್ಲಿ ಬದುಕು ಕಟ್ಟಿಕೊಂಡಿವೆ.

ಇಂಗ್ಲೆೆಂಡಿನ ಲೆಜೆಂಡ್ಸ್  ಕೂಡ ಬೇರೆ ದೇಶದವರು
ಇಂಗ್ಲೆೆಂಡಿನ ಪರ ಆಡಿ ವಿಶ್ವ ಕ್ರಿಕೆಟ್‌ನಲ್ಲಿ ಖಾಯಂ ಹೆಸರು ಪಡೆದಿರುವ ಅದೆಷ್ಟೋ ಆಟಗಾರರು ಇಂಗ್ಲೆೆಂಡಿಗೆ ವಲಸೆ ಬಂದವರೇ. ಆಂಡ್ರ್ಯೂ ಸ್ಟ್ರಾಸ್ ಮೂಲ ದಕ್ಷಿಣ ಆಫ್ರಿಕಾದ ಜೊಹಾನ್‌ಸ್‌‌ಬರ್ಗ್, ಅಷ್ಟೇ ಏಕೆ ಕೆವಿನ್ ಪೀಟರ್ಸನ್ ಮೂಲ ದ. ಆಫ್ರಿಕಾದ ಪೀಟರ್‌ಮಾರಿಟ್‌ಸ್‌‌ಬರ್ಗ್. ಒಂದಾನೊಂದು ಕಾಲದ ಡ್ಯಾಷಿಂಗ್ ಬ್ಯಾಟ್‌ಸ್‌‌ಮನ್ ಟೆಡ್ ಡೆಕ್‌ಸ್‌‌ಟರ್ ಜನಿಸಿದ್ದು ಇಟಲಿಯ ಮಿಲಾನ್‌ನಲ್ಲಿ. ಹೆಸರಾಂತ ವೀಕ್ಷಕವಿವರಣೆಗಾರ, ಕಲಾತ್ಮಕ ಆಟಗಾರ ಟೋನಿ ಗ್ರೇಗ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಟೋನಿ ಗ್ರೇಗ್ ಮೂಲತಃ ದಕ್ಷಿಣ ಆಫ್ರಿಕಾದ ಕ್ವೀನ್‌ಸ್‌‌ಟೌನಿನವರು. ಡೊಮೆನಿಕಾದ ಸ್ಕಾಟ್‌ಹೆಡ್‌ನಲ್ಲಿ ಜನಿಸಿದ ಫಿಲ್‌ ಡಿ ಕ್ರೈಟಸ್  ಕ್ರಿಕೆಟ್‌ಗಾಗಿ ಕೆರೆಬಿಯನ್ ದ್ವೀಪದಿಂದ ವಲಸೆ ಬಂದವರು. ಸಚಿನ್ ತೆಂಡೂಲ್ಕರ್ ಕೈಲಿ 2003ರ ವಿಶ್ವಕಪ್‌ನಲ್ಲಿ ಯದ್ವಾತದ್ವಾ ರನ್ ಹೊಡೆಸಿಕೊಂಡು ನಗೆಪಾಟಲಿಗೀಡಾಗಿದ್ದ, ಇನ್ನೋರ್ವ ಬೌಲರ್ ಆಂಡಿ ಕ್ಯಾಡಿಕ್ ಜನಿಸಿದ್ದು ನ್ಯೂಜಿಲೆಂಡ್‌ನ ಕ್ರೈಸ್‌ಟ್‌ ಚರ್ಚ್‌ನಲ್ಲಿ. ಜಮೈಕಾದ ಕಿಂಗ್‌ಸ್‌‌ಟನ್‌ನಲ್ಲಿ ಜನಿಸಿದ ಡೆವಿಡ್ ಮಾಲ್ಕಮ್, ಜಿಂಬಾಬ್ವೆಯ ಹರಾರೆಯಲ್ಲಿ ಜನಿಸಿದ ಗ್ರೈಮ್ ಹಿಕ್ ಇವರೆಲ್ಲ ಒಂದಾನೊಂದು ಕಾಲದಲ್ಲಿ ಇಂಗ್ಲೆೆಂಡ್ ತಂಡದ ಆಧಾರ ಸ್ಥಂಭವೇ ಆಗಿದ್ದರು.
ಬಸೀಲ್ ಡಿ ಒಲಿವೆರಾ, ಕ್ರಿಸ್ ಸ್ಮಿತ್, ರಾಬಿನ್ ಸ್ಮಿತ್, ಹೆರಾಲ್‌ಡ್‌ ಬೌಮ್‌ಗಾರ್ಟನರ್, ರಿಚರ್ಡ್ ಡಮ್‌ಬ್ರಿಲ್, ಕ್ರಿಸ್ ಫಿನ್ಲಾಸನ್ ಮತ್ತಿತರರು ಇವರು ದಕ್ಷಿಣ ಆಫ್ರಿಕಾ ಮೂಲದವರಾದರೆ, ಡೆರೆಕ್ ಪ್ರಿಿಂಗ್‌ಲ್‌ ಕೀನ್ಯಾ, ಓವೈಸ್ ಶಾ ಪಾಕಿಸ್ತಾನ, ಕ್ರೇಗ್ ಕೀಸ್ವೆಟರ್ ದ. ಆಫ್ರಿಕಾ, ಕ್ರಿಸ್ ಲೆವಿಸ್ ವೆಸ್‌ಟ್‌ ಇಂಡೀಸ್, ಡೆರ್ಮೋಟ್ ರೀವಿ ಹಾಂಗ್ ಕಾಂಗ್, ಫಿಲ್ ಎಡ್ಮಂಡ್‌ಸ್‌ ಹಾಗೂ ನೀಲ್ ರುದರ್ ಫೋರ್ಡ್ ಝಾಂಬಿಯಾ ಕೂಡ ವಲಸಿಗರು.

ಭಾರತೀಯರೂ ವಲಸಿಗರು
ಭಾರತದಲ್ಲಿ ಜನಿಸಿದ ಕೆ. ಎಸ್. ರಣಜಿತ್ ಸಿಂಹಜಿ, ಕೆ. ಎಸ್. ದುಲೀಪ್‌ಸಿಂಗ್‌ಜಿ, ಬಾಬ್ ವೋಲ್ಮರ್ (ಕಾನ್ಪುರ), ರಾಬಿನ್ ಜಾಕ್‌ಮನ್, ಹನೀಫ್  ಮೊಹಮ್ಮದ್, ಆಸಿಫ್  ಇಕ್ಬಾಲ್, ಮಾಜಿದ್ ಖಾನ್, ರವಿ ಬೋಪಾರಾ ಇಂಗ್ಲೆೆಂಡ್‌ಗೆ ತೆರಳಿ, ಇಂಗ್ಲೆೆಂಡ್ ತಂಡದಲ್ಲಿ ಖಾಯಂ ಸ್ಥಾನ ಗಳಿಸಿಕೊಂಡಿದ್ದರು. ಇಂಗ್ಲೆೆಂಡ್‌ನ ಹೆಸರಾಂತ ನಾಯಕ ನಾಸೀರ್ ಹುಸೇನ್ ಜನಿಸಿದ್ದು ಭಾರತದ ಚೆನ್ನೈನಲ್ಲಿ. ಕಾಲಿನ್ ಕೌಡ್ರೆ ಜನಿಸಿದ್ದು ಭಾರತದ ಬೆಂಗಳೂರಿನಲ್ಲಿ.

ಇಂಗ್ಲೆೆಂಡ್ ನಾಯಕರಾದ ವಲಸಿಗರು
ಇಂಗ್ಲೆೆಂಡ್ ತಂಡದ ಇತಿಹಾಸದಲ್ಲಿ ಹಲವು ನಾಯಕರು ಬೇರೆ ದೇಶದಿಂದ ವಲಸೆ ಬಂದವರು. ಲಾರ್ಡ್ ಹ್ಯಾರಿಸ್ (ಟ್ರಿನಿಡಾಡ್), ಟಿಮ್ ಓ ಬ್ರಿಯಾನ್ (ಐರ್ಲೆಂಡ್), ಪ್ಲಮ್ ವಾರ್ನರ್ (ಟ್ರನಿಡಾಡ್), ಡಗ್ಲಾಸ್ ಜಾರ್ಡಿನ್ (ಭಾರತ), ಸಿರಿಲ್ ವಾಲ್ಟರ್ಸ್ (ಸ್ಕಾಟ್ಲೆೆಂಡ್), ಗಬ್ಬಿ ಅಲೆನ್ (ಆಸ್ಟ್ರೇಲಿಯಾ), ಫ್ರೆಡ್ಡಿ  ಬ್ರೌನ್ (ಪೆರು), ಡಾನ್ ಕ್ಯಾರ್ (ಜರ್ಮನಿ), ಟೋನಿ ಲೆವಿಸ್ (ವೇಲ್‌ಸ್‌), ಮೈಕ್ ಡೆನ್ನಿಸ್ (ಸ್ಕಾಟ್ಲೆೆಂಡ್), ಅಲ್ಲನ್ ಲ್ಯಾಾಂಬ್ (ದಕ್ಷಿಣ ಆಫ್ರಿಕಾ) ಇವರುಗಳು ಬೇರೆ ದೇಶಗಳಿಂದ ಆಂಗ್ಲರ ನಾಡಿಗೆ ಬಂದು ಕ್ರಿಕೆಟ್ ತಂಡದ ಮುಂದಾಳತ್ವ ವಹಿಸಿಕೊಂಡವರು.

ವಲಸಿಗರ ದರ್ಬಾರ್
ಪ್ರಸ್ತುತ ಇಂಗ್ಲೆೆಂಡ್ ಕ್ರಿಕೆಟ್ ತಂಡದಲ್ಲಿ ಶೇ.80ರಷ್ಟು ವಲಸಿಗರು. ಹೆಸರಾಂತ ಆಲ್‌ರೌಂಡರ್ ಬೆನ್ ಸ್ಟೋಕ್ಸ್  ಮೂಲತಃ ನ್ಯೂಜಿಲೆಂಡ್‌ಗೆ ಸೇರಿದವರು. ನ್ಯೂಝಿಲೆಂಡ್‌ನ ಕ್ರೈಸ್ಟ್ ಚರ್ಚ್  ರಗ್ಬಿ ಆಟಗಾರನ ಮಗ ಸ್ಟೋಕ್ಸ್. ಇಂಗ್ಲೆೆಂಡ್ ಟೆಸ್ಟ್ ತಂಡದ ಖಾಯಂ ಆಟಗಾರ ಮ್ಯಾಟ್ ಪ್ರಯರ್ ಮೂಲತಃ ದಕ್ಷಿಣ ಆಫ್ರಿಕಾದ ಜೋಹಾನ್‌ಸ್‌‌ಬರ್ಗ್‌ನವನು. ಜೋನಾಥನ್ ಟ್ರಾಟ್ ದಕ್ಷಿಣ ಆಫ್ರಿಕಾದವನು. ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ ಐರ್ಲೆಂಡಿನವನು. ಟಾಮ್ ಕ್ಯೂರನ್ (ದಕ್ಷಿಣ ಆಫ್ರಿಕಾ), ಗ್ಯಾರಿ ಬ್ಯಾಲೆನ್‌ಸ್‌ (ಜಿಂಬಾಬ್ವೆ), ಜೇಸನ್ ರಾಯ್ (ದಕ್ಷಿಣ ಆಫ್ರಿಕಾ), ನಿಕ್ ಕಾಂಪ್ಟನ್ (ದ. ಆಫ್ರಿಕಾ), ಕ್ರಿಸ್ ಜೋರ್ಡನ್ (ವೆಸ್ಟ್  ಇಂಡೀಸ್), ಮೊಯಿನ್ ಅಲಿ (ಪಾಕಿಸ್ತಾನ)

Thursday, July 26, 2018

ಆಂಗ್ಲರ ನಾಡಿನಲ್ಲಿ ಕನ್ನಡಿಗರು, ಭಾರತೀಯರಿಗೆ ಟೆಸ್ಟ್


ಭಾರತದ ಕ್ರಿಕೆಟ್ ತಂಡ ಇದುವರೆಗೂ ತನ್ನ ತವರು ನೆಲದಲ್ಲಿ ಸರಣಿಗಳ ಮೇಲೆ ಸರಣಿಗಳನ್ನು ಗೆದ್ದು, ನಂಬರ್ 1 ಪಟ್ಟಕ್ಕೆ ಏರಿದೆ. ಸೋಲರಿಯದ ಸರದಾರ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ಆದರೆ ಆಗಸ್ಟ್  1ರಿಂದ ಆಂಗ್ಲರ ನೆಲದಲ್ಲಿ ಇಂಗ್ಲೆೆಂಡ್ ವಿರುದ್ಧವೇ ಟೆಸ್‌ಟ್‌ ಸರಣಿ ನಡೆಯುತ್ತಿದ್ದು, ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದೆ.
ಭಾರತದ ಬಹುತೇಕ ಪಿಚ್‌ಗಳು ಬ್ಯಾಟಿಂಗ್ ಸ್ನೇಹಿ. ಸ್ಪಿನ್ ಪಿಚ್. ಇಲ್ಲಿ ಭಾರತದ ಬ್ಯಾಟ್‌ಸ್‌‌ಮನ್‌ಗಳು ಎದುರಾಳಿಗಳನ್ನು ಹೈರಾಣು ಮಾಡುವುದು ಸುಲಭ. ಅಲ್ಲದೇ ಭಾರತದ ಸ್ಪಿನ್ನರ್‌ಗಳ ಎದುರು ವಿದೇಶಿ ಬ್ಯಾಟ್‌ಸ್‌‌ಮನ್‌ಗಳು ತಿಣುಕಾಡುವುದು ಸಹಜ. ಆದರೆ ಇಂಗ್ಲೆೆಂಡಿನ ಪಿಚ್‌ಗಳು ಹಾಗಲ್ಲ. ವೇಗಿಗಳ ಸ್ನೇಹಿ, ಬೌನ್ಸಿ ಪಿಚ್‌ಗಳು. ಸ್ವಿಿಂಗ್ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಹ ಅಂಗಣಗಳು ಇಲ್ಲಿರುತ್ತವೆ. ಭಾರತ ತವರಿನಲ್ಲಿ ಭಲಾಢ್ಯ ಬ್ಯಾಟಿಂಗ್ ಕ್ರಮಾಂಕದ ಮೂಲಕ ಖ್ಯಾತಿ ಗಳಿಸಿದೆ. ಆದರೆ ನಿಜವಾದ ಸತ್ವ ಪರೀಕ್ಷೆ ಇಂಗ್ಲೆೆಂಡಿನ ಬೌನ್ಸಿ ಅಂಕಣಗಳಲ್ಲಿ ಆಗಲಿದೆ.
ಯಾರಾಗುವರು ಪ್ರಭಾವಿ?
ಭಾರತ ಹಿಂದೆ ಇಂಗ್ಲೆೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭಗಳಲ್ಲಿ ಸಾಕಷ್ಟು ಸೋಲುಗಳನ್ನು ಅನುಭವಿಸಿದ್ದರೂ, ಖ್ಯಾತ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಈ ಮುಂತಾದ ಆಟಗಾರರು ಭಾರತದ ಸಹಾಯಕ್ಕೆ ನಿಲ್ಲುತ್ತಿದ್ದರು. ಆದರೆ ಈಗ ಇರುವ ತಂಡದಲ್ಲಿ ಇಂಗ್ಲೆೆಂಡ್ ನೆಲದಲ್ಲಿ ಸಮರ್ಪಕವಾಗಿ ಬ್ಯಾಟಿಂಗ್ ಮಾಡುವವರ ಕೊರತೆ ಎದ್ದು ಕಾಣುತ್ತಿದೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಉತ್ತಮ ಪಾರ್ಮಿನಲ್ಲಿದ್ದರೂ ಟೆಸ್‌ಟ್‌ ಸರಣಿಯಲ್ಲಿ ಅವರ ಪ್ರದರ್ಶನ ಹೇಗೆ ಎನ್ನುವ ಕುತೂಹಲ ಕಾಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಇಂಗ್ಲೆೆಂಡಿನ ಸ್ಪಿನ್ನರ್ ಎದುರು ಕೊಹ್ಲಿ ತಿಣುಕಾಡುತ್ತಿದ್ದಾರೆ. ಮುಂಬರುವ ಟೆಸ್‌ಟ್‌ ಸರಣಿ ಅವರ ಬ್ಯಾಾಟಿಂಗ್ ಸಾಮರ್ಥ್ಯಕ್ಕೆ ನಿಜವಾದ ಸವಾಲೇ ಸರಿ.
ನಂಬಿಕೆ ಉಳಿಸುವರೇ ರಹಾನೆ, ಪೂಜಾರ?
ಉಳಿದಂತೆ ಟೆಸ್‌ಟ್‌ ತಂಡದ ನಂಬಿಕಸ್ಥ ಬ್ಯಾಟ್‌ಸ್‌‌ಮನ್ ಎಂದರೆ ಅಜಿಂಕ್ಯಾ ರಹಾನೆ ಹಾಗೂ ಚೆತೇಶ್ವರ ಪೂಜಾರ. ಈ ಇಬ್ಬರೂ ಭಾರತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾಾರೆ. ಆದರೆ ಆಂಗ್ಲರ ನೆಲದಲ್ಲಿ ಅವರ ಬ್ಯಾಟಿಂಗ್ ಅಷ್ಟಕ್ಕಷ್ಟೇ. 2014-15ರಲ್ಲಿ ನಡೆದಿದ್ದ ಟೆಸ್‌ಟ್‌ ಸರಣಿಯ, ಪೂಜಾರ ಮೊದ ಮೊದಲ ಅಭಿನವ ದ್ರಾವಿಡ್ ಎಂದೇ ಕರೆಸಿಕೊಂಡರೂ, ತವರಿನಲ್ಲಿ ಮಾತ್ರ ಬ್ಯಾಟಿಂಗ್‌ಗೆ ಸೀಮಿತ ಎಂಬಂತಾಗಿದ್ದಾರೆ. ಹೀಗಿದ್ದಾಗ ಇವರಿಂದ ಯಾವ ರೀತಿಯ ಪ್ರದರ್ಶನ ಬರಬಹುದು ಎನ್ನುವ ನಿರೀಕ್ಷೆ ಹೆಚ್ಚಿದೆ.
ರಾಹುಲ್ ಮೇಲೆ ಜವಾಬ್ದಾರಿ:
ಕನ್ನಡಿಗ ಕೆ. ಎಲ್. ರಾಹುಲ್ ಮೇಲೆ ಈ ಸಾರಿ ಜವಾಬ್ದಾರಿ ಹೆಚ್ಚಿದೆ. ಆಷ್ಟ್ರೇಲಿಯಾದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ರಾಹುಲ್, ಇಂಗ್ಲೆೆಂಡ್ ವಿರುದ್ಧದ ಟಿ20ಯಲ್ಲಿ ಶತಕ ಸಿಡಿಸಿದ್ದರು. ಆದರೆ ಏಕದಿನದಲ್ಲಿ ವಿಲರಾಗಿದ್ದರು. ಬೌನ್ಸಿ ಪಿಚ್‌ಗಳಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಅನುಭವ ರಾಹುಲ್‌ಗಿದೆ. ಬದಲಾಗುತ್ತಿರುವ ಬ್ಯಾಟಿಂಗ್ ಕ್ರಮಾಂಕ ರಾಹುಲ್ ಆಟದ ಮೇಲೆ ಪ್ರದರ್ಶನ ಬೀರಬಹುದು. ಇಂಗ್ಲೆೆಂಡಿನಲ್ಲಿ ಅವರ ಬ್ಯಾಾಟ್‌ನಿಂದ ರನ್ ಮಳೆಯಾಗಲಿ ಎನ್ನುವ ಹಾರಯಿಕೆ ಅಭಿಮಾನಿಗಳದ್ದು.

ಬ್ಯಾಟಿಂಗ್ ನಿರೀಕ್ಷೆ:
ಆರಂಭಿಕ ಆಟಗಾರ ಶಿಖರ್ ಧವನ್, ಇದೇ ಮೊದಲ ಬಾರಿ ಟೆಸ್‌ಟ್‌ ತಂಡಕ್ಕೆ ಆಯ್ಕೆಯಾಗಿರುವ ರಿಷಬ್ ಪಂಥ್, ಇನ್ನೋರ್ವ ವಿಕೆಟ್ ಕೀಪರ್ ದಿನೇಶ್ ಕಾರ್ತೀಕ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ತ್ರಿಶತಕ ವೀರ ಕರುಣ್ ನಾಯರ್ ಹೇಗೆ ಬ್ಯಾಟ್ ಬೀಸಬಹುದು ಎನ್ನುವ ಕುತೂಹಲವಿದೆ. ಭಾರತದ ಬ್ಯಾಾಟಿಂಗ್ ಬಲ ಇಂಗ್ಲೆೆಂಡಿನ ವೇಗಿಗಳನ್ನು ಸಮರ್ಥವಾಗಿ ಎದುರಿಸಿದಲ್ಲಿ ಗೆಲುವು ಕಟ್ಟಿಿಟ್ಟ ಬುತ್ತಿಿಘಿ.

ಬೆಳಗುವರೇ ಕುಲದೀಪ
ಟೆಸ್‌ಟ್‌ ತಂಡಕ್ಕೆೆ ಆಯ್ಕೆೆಯಾಗಿರುವ ಇನ್ನೋರ್ವ ಹೊಸ ಮುಖ, ಇತ್ತೀಚಿನ ದಿನಗಳಲ್ಲಿ ಭಾರತದ ಸ್ಪಿನ್ ಮುಂದಾಳು ಎಂಬಂತೆ ಬಿಂಬಿತವಾಗಿರುವ ಚೈನಾಮನ್ ಕುಲದೀಪ್ ಯಾದವ್ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆೆಗಳಿವೆ. ಭಾರತದ ಸ್ಪಿನ್ ಪಿಚ್‌ಗಳಿಗಿಂತ ಭಿನ್ನವಾದ ಇಂಗ್ಲೆೆಂಡಿನ ಪಿಚ್‌ಗಳು ಕುಲದೀಪರ ಪಾಲಿಗೆ ವರದಾನವಾಗಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಅನುಭವಿಗಳಾದ ಅಶ್ವಿನ್ ಹಾಗೂ ಜಡೇಜಾರ ಪರಿಣಾಮಕಾರಿ ಬೌಲಿಂಗ್ ಭಾರತದ ಬೆನ್ನಿಗೆ ನಿಲ್ಲಬಹುದು. ಉಳಿದಂತೆ ವೇಗಿಗಳಾದ ಭುವನೇಶ್ವರ ಕುಮಾರ್ ಹಾಗೂ ಜಸ್‌ಪ್ರೀತ್ ಬೂಮ್ರಾಾರ ಪ್ರದರ್ಶನ ಟೆಸ್‌ಟ್‌ ಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ಇವರೀರ್ವರೂ ಸ್ವಿಿಂಗ್ ಮೂಲಕ ಆಂಗ್ಲರನ್ನು ಕಟ್ಟಿ ಹಾಕಿದರೆ ಮಾತ್ರ ಭಾರತಕ್ಕೆ ಗೆಲುವು ಸಾಧ್ಘಿ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನ ಕೂಡ ಉಲ್ಲೇಖನೀಯ.

ಹಿಂದೆ ಏನಾಗಿತ್ತು :
ಈ ಹಿಂದಿನ ಇಂಗ್ಲೆೆಂಡ್ ಪ್ರವಾಸಗಳಲ್ಲಿ ಭಾರತದ ಲಿತಾಂಶ ಗಮನಾರ್ಹವೇನೂ ಆಗಿಲ್ಲಘಿ. 1971 ಹಾಗೂ 2007ರಲ್ಲಿ ಭಾರತ ತಂಡ ಇಂಗ್ಲೆೆಂಡ್ ವಿರುದ್ಧದ 4 ಟೆಸ್‌ಟ್‌‌ಗಳ ಸರಣಿಯಲ್ಲಿ 1-0 ದಿಂದ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಅದನ್ನು ಹೊರತುಪಡಿಸಿದರೆ ಭಾರತ ತಂಡ ಟೆಸ್‌ಟ್‌ ಸರಣಿ ಗೆದ್ದೇ ಇಲ್ಲ.


-----
1932- ಭಾರತ ತಂಡದಿಂದ ಮೊಟ್ಟಮೊದಲ ಇಂಗ್ಲೆೆಂಡ್ ಪ್ರವಾಸ, ಮೊದಲ ಸರಣಿಯಲ್ಲಿ ಭಾರತಕ್ಕೆ 1-0 ಸೋಲು
1936, 1946, 1952, 1959, 1967, 1971, 1974, 1979, 1982, 1986, 1990, 1996, 2002, 2007, 2011, 2014ರಲ್ಲಿ ಭಾರತ ಇಂಗ್ಲೆೆಂಡ್ ಪ್ರವಾಸ ಕೈಗೊಂಡಿದೆ.


Saturday, July 21, 2018

ಕಾಲೇಜ್ ಲೈಫ್ ಗೋಲ್ಡನ್ ಲೈಫ್

ಮತ್ತೊಮ್ಮೆ ಕಾಲೇಜ್ ದಿನಗಳ ಆರಂಭವಾಗುತ್ತಿದೆ. ಈಗ ತಾನೇ ಅರಳುತ್ತಿರುವ ಮನಸ್ಸುಗಳು ನೂರೆಂಟು ಕನಸುಗಳನ್ನು ಕಟ್ಟಕೊಂಡು, ಹೊಸ ಹುಮ್ಮಸ್ಸಿನಿಂದ ಕಾಲೇಜು ಕಡೆಗೆ ಮುಖ ಮಾಡುತ್ತಿವೆ.
ಜುಲೈ.. ತಂಪೆರೆವ ಮಳೆಯಲ್ಲಿ ಅದೆಷ್ಟೋ ಜನರ ಇನ್ನೊದು ಸುಂದರ ಬದುಕು ಆರಂಭಗೊಳ್ಳುತ್ತದೆ. ಈಗ ತಾನೇ ಪ್ರೌಢಶಾಲೆಗಳಲ್ಲಿ ಓದಿ, ಉತ್ತಮ ಅಂಕ ಗಳಿಸಿದ ಹದಿ ಹರೆಯದವರೆಲ್ಲ ಕಾಲೇಜಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಪಿಯು ಮುಗಿಸಿದವರೋ, ಉನ್ನತ ಶಿಕ್ಷಣದ ಕಡೆಗೆ ಹೊರಳುತ್ತಿದ್ದಾರೆ. ಅದೇ ರೀತಿ ಕಾಲೇಜು ಜೀವನ ಮುಗಿಸಿದವರು, ಅತ್ತ ಕಾಲೇಜಿನ ನೆನಪುಗಳನ್ನು ಮರೆಯಲೂ ಆಗದೆ, ಇತ್ತ ತೆರೆದುಕೊಂಡ ಹೊಸ ಬದುಕಿಗೆ ಸುಲಭವಾಗಿ ಒಗ್ಗಿಕೊಳ್ಳಲೂ ಆಗದೇ ಒದ್ದಾಡುತ್ತಿದ್ದಾರೆ.
ಕಾಲೇಜ್ ಇಂತಹದ್ದೊದು ಶಬ್ದವೇ ಸಾಕು ಅದೆಷ್ಟೋ ಜನರಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. ಪ್ರೌಢಶಾಲೆ ತನಕ ತಡೆದಿಟ್ಟ ಭಾವನೆಗಳೆಲ್ಲ ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಟ ಮಾಡುವ ಸಮಯ ಅದು. ನೂರಾರು ಕನಸುಗಳು ಅರಳುವ, ಮನಸುಗಳು ಮಿಡಿಯುವ ದಿನಗಳು ಅವು.
ಕಾಲೇಜು ದಿನಗಳ ಬಗ್ಗೆ ಆಗ ತಾನೆ ಕಾಲೇಜಿಗೆ ಕಾಲಿರಿಸಿದವರ ಮನಸ್ಸಿನಲ್ಲಿ ಅದೆಷ್ಟು ಕನಸುಗಳಿರುತ್ತವೆಯೋ ಅದಕ್ಕಿತ ಹೆಚ್ಚಿನ ನೆನಪುಗಳು ಕಾಲೇಜು ಮುಗಿಸಿ ಮುನ್ನಡೆದವರಲ್ಲಿ ಇರುತ್ತದೆ. ಛೇ.. ಇನ್ನಷ್ಟು ದಿನ ಇರಬೇಕಾಗಿತ್ತು ಎಂದ ಹಪಾಹಪಿ ಪಟ್ಟವರು ಹಲವರು. ಕಾಲೇಜು ದಿನಗಳ ಮಧುರ ನೆನಪುಗಳನ್ನು ಸದಾ ಮನಸ್ಸಿನಲ್ಲಿ ಮೆಲುಕು ಹಾಕಿ ಕೊರಗಿದವರು ಇನ್ನೂ ಕೆಲವರು. ಕಾಲೇಜು ಮುಗಿಸಿ ಉದ್ಯೋಗ ಅರಸಿ, ಬದುಕಿನಲ್ಲಿ ನಿಧಾನವಾಗಿ ಹೆಜ್ಜೆ ಊರುತ್ತಿರುವವರೂ ಕೂಡ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
ಕಾಲೇಜು ದಿನಗಳಲ್ಲಿ ನಡೆಸಿದ ಪುಂಡರಪೂಟುಗಳು ಯಾವಾಗಲೂ ಮಧುರವಾಗಿಯೇ ಇರುತ್ತವೆ. ಮೊಟ್ಟ ಮೊದಲ ದಿನ ಭಯದಿಂದಲೇ ಕಾಲೇಜು ಮೆಟ್ಟಿಲು ಹತ್ತಿದ್ದು, ಕಾಲೇಜಿನಲ್ಲಿ ಯಾವ ಕ್ಲಾಸು ಎಲ್ಲೆಲ್ಲಿದೆ, ಯಾರು ಯಾವ ವಿಷಯಗಳನ್ನು ಕಲಿಸುತ್ತಾರೆ ಎನ್ನುವುದು ಅರ್ಥವಾಗದೇ ಗೊಂದಲ ಪಟ್ಟುಕೊಂಡಿದ್ದು, ನೀವ್ ಫ್ರೆಷರ್ಸಾ... ಎಂದು ಗದರಿ ಕೇಳುವ ಸೀನಿಯರ್ಸ್ ಎದುರು ಭಯದಿಂದಲೇ ಉತ್ತರ ಹೇಳಿ, ಅವರು ಕೊಡುವ ಕೀಟಲೆಗೆ ಪಡಿಪಾಟಲು ಪಟ್ಟಿದ್ದು, ಕಾರಿಡಾರ್ನಲ್ಲಿ ಓಡಾಟ, ಯಾವುದೋ ಹುಡುಗಿಯ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂದಿದ್ದು, ಗೆಳೆಯರ ಬಳಗವನ್ನು ಕಟ್ಟಿದ್ದು ಹೀಗೆ ಹತ್ತು ಹಲವು ರಸ ನಿಮಿಷಗಳು ನೆನಪಾಗಿ ಮನಸ್ಸಿನ ಸಂಭ್ರಮಕ್ಕೆ ಕಾರಣವಾಗುತ್ತವೆ.
 
ಮೊದಲ ದಿನ
ಕಾಲೇಜು ಮೊದಲ ದಿನ ಪ್ರತಿಯೊಬ್ಬರಲ್ಲೂ ನೆನಪಿನಲ್ಲಿ ಸದಾ ಉಳಿಯುತ್ತದೆ. ಕಾಲೇಜು ಹೇಗೋ, ಉಪನ್ಯಾಾಸಕರು ಹೇಗೋ ಏನೋ, ಯಾವ ಯಾವ ಕ್ಲಾಸುಗಳು ಎಲ್ಲೆಲ್ಲಿದೆಯೋ ಇಂತಹ ಹಲವು ಗೊಂದಲ, ಭಯ, ದುಗುಡದ ನಡುವೆ ಮೊದಲ ದಿನ ಚಿರಸ್ಥಾಯಿಯಾಗಿ ಉಳಿದುಬಿಡುತ್ತದೆ. ಯಾರ ಬಳಿ ಏನಾದರೂ ಕೇಳಿದರೆ ಎಲ್ಲಿ ನಾವು ಕಳಪೆಯಾಗಿಬಿಡುತ್ತೇವೆಯೋ ಎನ್ನುವ ಕೀಳರಿಮೆ ಕೂಡ ಕಾಡುತ್ತದೆ. ಕಾಲೇಜು ನೋಟಿಸ್ ಬೋರ್ಡಿನಲ್ಲಿ ಹಾಕಿದ ಟೈಂ ಟೇಬಲ್ ಅರ್ಥವಾಗದೇ ಪೇಚಾಡುವಂತಾಗುತ್ತದೆ. ಪ್ರತಿ ತರಗತಿಗಳ ನಡುವಿನ ಸೈಕಲ್ ಗ್ಯಾಪಲ್ಲಿ, ಕ್ಲಾಸ್ ರೂಮುಗಳನ್ನು ಹುಡುಕಿ ಹೋಗುವಾಗಿನ ಗಲಿಬಿಲಿ ಇವೆಲ್ಲ ಸದಾ ನೆನಪಿನಲ್ಲಿ ಉಳಿದುಬಿಡುತ್ತವೆ. ಇದರ ನಡುವೆಯೇ ಯಾರೋ ಚೆಂದದ ಹುಡುಗಿ ಕಣ್ಣಿಗೆ ಬಿದ್ದರೆ, ದೇವ್ರೇ.. ಈಕೆ ನಮ್ಮದೇ ಕ್ಲಾಸು.. ನಮ್ಮದೇ ಸೆಕ್ಷನ್ ಆಗಿರ್ಲಪ್ಪಾ ಎಂದು ಬೇಡಿಕೊಂಡಿದ್ದು.. ಅಪ್ಪಿತಪ್ಪಿ, ಯಾವುದಾದರೂ ಹುಡುಗಿ, ಈ ಕ್ಲಾಸ್ ಎಲ್ಲಿ ಬರುತ್ತೆ ಅಂತ ಕೇಳಿದರೆ, ಸ್ವರ್ಗವೇ ಕೈಗೆ ಸಿಕ್ಕಂತೆ ಮನಸ್ಸು ಹಸಿರಾದದ್ದೆಲ್ಲ ಕಾಲೇಜು ದಿನಗಳು ಮುಗಿದ ಎಷ್ಟೋ ವರ್ಷಗಳ ವರೆಗೂ ನೆನಪಿನಲ್ಲಿಯೇ ಇರುತ್ತವೆ ಬಿಡಿ.
 
ರ್ಯಾಗಿಂಗ್
ಕಾನೂನಿನ ಅನ್ವಯ ರ್ಯಾಗಿಂಗ್ ಎನ್ನುವುದು ಅಧಿಕೃತವಾಗಿ ನಿಷೇಧಕ್ಕೊಳಗಾಗಿ, ಶಿಕ್ಷಾರ್ಹ ಅಪರಾಧ ಎಂಬ ಪಟ್ಟ ಕಟ್ಟಿಕೊಂಡಿದ್ದರೂ, ಕಾಲೇಜಿನ ಮೊದ ಮೊದಲ ದಿನಗಳಲ್ಲಿ ಸೀನಿಯರ್ಸ್ ಕೊಡುವ ಪಡಿಪಾಟಲನ್ನು ಮರೆಯುವಂತೆಯೇ ಇಲ್ಲ. ಕೇಳಿದರೆ ಇದು ರ್ಯಾಗಿಂಗ್ ಅಲ್ಲ ಎನ್ನುವ ಸೀನಿಯರ್ ಮಂದಿ ಆಗ ತಾನೇ ಕಾಲೇಜಿಗೆ ಕಾಲಿಗೇ ಕಾಲಿರಿಸಿದವರಿಗೆ ನೀಡುವ ಕೀಟಲೆಗಳು ಒಂದೆರಡಲ್ಲ ಬಿಡಿ. ಸೀನಿಯರ್ಸ್ ಕಾಟಕ್ಕೆ ಹೊಸ ಹೈದರಿಗೆ ಕಾಲೇಜು ಸಾಕೋ ಸಾಕು ಅನ್ನಿಸಿ ಬಿಡುತ್ತವೆ. ಆದರೆ ಹೀಗೆ ಕೀಟಲೆ ಮಾಡಿ ಕಾಟ ಕೊಟ್ಟ ಸೀನಿಯರ್ಸ್ ಕೊನೆಗೆ ಜ್ಯೂನಿಯರ್ಸ್‌ಗಳಿಗೆ ಮಿತ್ರರಾಗುತ್ತಾರೆ. ಏನಾದರೂ ತೊಂದರೆಗಳು ಬಂದಾಗ ಜತೆಗೆ ನಿಲ್ಲುತ್ತಾರೆ.

ಮೊದಲ ಪ್ರೇಮ
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಮೊಟ್ಟ ಮೊದಲ ಪೀತಿ ಅರಳುವುದು ಕಾಲೇಜು ದಿನಗಳಲ್ಲಿಯೇ. ಒನ್ ಸೈಡ್ ಇರಲಿ, ಎರಡೂ ಸೈಡ್ ಇರಲಿ, ಆ ದಿನಗಳಲ್ಲಿ ಪ್ರೀತಿ ಅರಳಿ ಹಸಿರಾದ ನೆನಪುಗಳನ್ನು ಕಟ್ಟಿಕೊಡುತ್ತವೆ. ಕಾಲೇಜು ದಿನಗಳ ಪ್ರೀತಿ ಹಲವು ಸಂದರ್ಭಗಳಲ್ಲಿ ಕಾಲೇಜಿನಲ್ಲಿಯೇ ಅಂತ್ಯವಾದ ನಿದರ್ಶನಗಳಿವೆ. ಇನ್ನೂ ಹತ್ತು-ಹಲವು ಪ್ರೇಮ ಕಥಾನಕಗಳು ಬದುಕಿನ ಜತೆಗೂಡುತ್ತವೆ. ಇನ್ನು ಪ್ರೇಮ ವೈಲ್ಯವಾದರಂತೂ ಅದರ ಗಾಯ ಸದಾ ಶಾಶ್ವತ ಎಂಬಂತಾಗುತ್ತದೆ.
 
ಕಾಲೇಜು ಚುನಾವಣೆ
ಬಹುತೇಕ ಕಾಲೇಜುಗಳಲ್ಲಿ ಚುನಾವಣೆಗಳು ನಡೆದೇ ಇರುತ್ತವೆ. ಹಲವರು ಗೆದ್ದಿದ್ದೂ, ಮತ್ತೆ ಹಲವರು ಸೋತಿದ್ದೂ, ಸೋತಿದ್ದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದೂ, ಗೆದ್ದಿದ್ದನ್ನು ಬದುಕಿನ ಯಾವುದೋ ಗೆಲುವು ಎಂಬಂತೆ ಸಂಭ್ರಮಿಸಿದ್ದೂ ಇದೆ. ಚುನಾವಣೆಯ ಗೆಲುವಿಗಾಗಿಯೇ ಮಾಡಿದ ಗಿಮಿಕ್ಕುಗಳು, ರಾಜಕಾರಣಿಗಳನ್ನೂ ಮೀರಿಸಿದಂತೆ ಮಾಡಿದ ಭಾಷಣಗಳನ್ನು ಮರೆಯಲಾದೀತೆ?
 
ಹೀರೋ ಆಗೋಕೆ ಹೋಗಿ ಸ್ಟ್ರೈಕ್
ಕಾಲೇಜು ದಿನಗಳಲ್ಲಿ ಪ್ರತಿಯೊಬ್ಬರಿಗೂ ಹೀರೋ ಆಗಿ ಮೆರೆಯಬೇಕು, ತಾನು ಎಲ್ಲರಿಗೂ ನಾಯಕ ಎನ್ನಿಸಿಕೊಳ್ಳಬೇಕು ಎಂಬ ಕನಸು ಇದ್ದೇ ಇರುತ್ತದೆ. ಇದಕ್ಕಾಗಿ ಏನೇನೋ ಕಸರತ್ತುಗಳನ್ನು ಮಾಡಿಯೇ ಇರುತ್ತಾರೆ. ಇದರಲ್ಲಿ ಪ್ರಮುಖವಾಗಿ ಕಾಲೇಜ್ ಸ್ಟ್ರೈಕ್ ಎಂಬುದು ಹೀರೋಗಿರಿ ತೋರಿಸಿಕೊಳ್ಳುವ ಮುಖ್ಯ ಮಾರ್ಗವಾಗುತ್ತದೆ. ಹೀಗಾಗಿ ಸೆಮಿಸ್ಟರೋ, ಕಾಲೇಜು ಫೀಸೋ, ಸಬ್ಜೆಕಟ್ಗಳೋ, ಇನ್ಯಾವುದೋ ಸಮಸ್ಯೆಗಳನ್ನೋ ಎದುರಿಟ್ಟುಕೊಂಡು ಸ್ಟ್ರೈಕ್ ಮಾಡಿ ಪ್ರಸಿದ್ಧಿಗೆ ಬರಲು ಯತ್ನಿಸುತ್ತಾರೆ. ಇಂತಹ ಸ್ಟ್ರೈಕುಗಳು ವಿದ್ಯಾರ್ಥಿ ಬದುಕಿನಲ್ಲಿ ಮುಂದೆ ಪ್ಲಸ್ ಕೂಡ ಆಗಬಹುದು, ಮೈನಸ್ ಕೂಡ ಆಗಬಹುದು.
 
ಗಲಾಟೆ
ಕಾಲೇಜ್ ಎಂದ ಮೇಲೆ ಗಲಾಟೆ ಸರ್ವೇ ಸಾಮಾನ್ಯ. ಯಾವ್ಯಾವುದೋ ಕಾರಣಗಳಿಗಾಗಿ ಗಲಾಟೆ ಜಗಳ, ಹೊಡೆದಾಟಗಳು ನಡೆದೇ ಇರುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಾಗಿ ಹುಟ್ಟಿಕೊಳ್ಳುವ ಜಗಳಗಳು ಹೊಡೆದಾಟದಲ್ಲಿ ಅಂತ್ಯಗೊಂಡಿದ್ದೂ ಇದೆ. ಕಾಲೇಜು ಜೀವನದ ಹಸಿ ಹಸಿ ನೆನಪುಗಳಲ್ಲಿ ಈ ಹೊಡೆದಾಟಗಳೂ ಪ್ರಮುಖವಾಗುತ್ತವೆ. ಕೆಲವೊಮ್ಮೆ ಈ ಹೊಡೆದಾಟಗಳಿಂದಲೇ ಬದುಕು ಅಂತ್ಯಗೊಳ್ಳುವುದು ಅಥವಾ ಯಾವುದೋ ತಿರುವು ಪಡೆದಿದ್ದೂ ಇದೆ. ಆದರೆ ಕಾಲೇಜು ದಿನಗಳಲ್ಲಿ ನಡೆಸಿದ ಗಲಾಟೆ, ಹೊಡೆದಾಟಗಳು ಸದಾ ನೆನಪಿನಲ್ಲಿ ಉಳಿದು ಬಿಡುತ್ತವೆ.
 
ಕ್ಲಾಸ್ ಬಂಕ್
ಕಾಲೇಜು ಅಂದ ಮೇಲೆ ಕ್ಲಾಸ್ ಬಂಕ್ ಮಾಡದಿದ್ದರೆ ಹೇಗೆ? ಮೊದಲ ಕ್ಲಾಸ್, ಮಧ್ಯದಲ್ಲಿ ಗ್ಯಾಪಲ್ಲಿ ಇನ್ಯಾವುದೋ ಕ್ಲಾಸ್, ಕೊನೆಯ ತರಗತಿ ಇರಬಹುದು ಹೀಗೆ ಕ್ಲಾಸ್ ಬಂಕ್ ಸಹಜ ಎಂಬಂತಾಗಿದೆ. ತರಗತಿ ತಪ್ಪಿಸಿ ಸಿನೆಮಾಕ್ಕೆ ಹೋಗುವುದೋ, ಇನ್ನೆಲ್ಲೋ ಅಡ್ಡಾಡುವುದೋ ಸಹಜ ಎಂಬಂತಾಗಿದೆ. ಎಂತಹ ವಿದ್ಯಾರ್ಥಿಯಾದರೂ ಕನಿಷ್ಟ ಒಂದಾದರೂ ಕ್ಲಾಸು ತಪ್ಪಿಸಿಯೇ ಇರುತ್ತಾನೆ. ವಿನಾಕಾರಣ ಕ್ಲಾಸಿಗೆ ಚಕ್ಕರ್ ಹೊಡೆಯುವದೂ ಕಾಲೇಜಿನ ರಸಘಳಿಗೆಗಳಲ್ಲಿ ಒಂದು.
 
ಗೆಳೆಯರ ಬಳಗ
ಕಾಲೇಜೆಂದ ಮೇಲೆ ಗೆಳೆಯರ ಬಳಗ ಇದ್ದೇ ಇರುತ್ತದೆ. ಕಾಲೇಜಿಗೆ ಕಾಲಿಟ್ಟ ದಿನಗಳಲ್ಲಿ ಹೊಸ ಹೊಸ ಗೆಳೆಯರನ್ನು ಮಾಡಿಕೊಳ್ಳುವುದು ಸಹಜ. ಇಬ್ಬರೋ, ಮೂವರೋ ಅಥವಾ ಹಲವಾರು ಜನರೋ ಜತೆ ಸೇರಿ ಬಳಗ ಕಟ್ಟಿಕೊಳ್ಳುತ್ತಾರೆ. ಒಟ್ಟಿಗೆ ಕ್ಲಾಸಿಗೆ ಹೋಗುತ್ತಾರೆ. ಜತೆಯಾಗಿ ಸಿನಿಮಾ, ಹಾಡು, ಹರಟೆ, ಕೀಟಲೆ, ಕಾರಿಡಾರ್ ಸುತ್ತಾಟ ಹೀಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಜೀವಮಾನದ ಜತೆಗಾರರಂತೆ ಕಲೆಯುತ್ತಾರೆ. ನಲಿಯುತ್ತಾರೆ. ಈ ಗೆಳೆಯರ ಬಳಕ ಅನೇಕ ಸಂದರ್ಭಗಳಲ್ಲಿ ಕಾಲೇಜು ಮುಗಿದ ನಂತರವೂ ಪದೇ ಪದೆ ಸೇರಿಯೂ ಸೇರುತ್ತಾರೆ.
 
ಅಟೆಂಡೆನ್ಸ್ ಶಾರ್ಟೇಜ್
ಮಾಸ್ ಬಂಕು, ಕ್ಲಾಸ್ ಬಂಕಿನಿಂದಾಗಿ ಅಟೆಂಡೆನ್ಸ್ ಶಾರ್ಟೇಜ್ ಸದಾ ಕಾಲ ಕಾಡುತ್ತದೆ. ಬೋರಾಗುವ ವಿಷಯದ ತರಗತಿಗೋ, ಅಥವಾ ಇನ್ಯಾವುದೋ ಕಾರಣದಿಂದ ತರಗತಿಗೆ ಹೋಗದೇ ತಪ್ಪಿಸಿಕೊಂಡ ಪರಿಣಾಮ ಅಟೆಂಡೆನ್ಸ್ ಶಾರ್ಟೇಜ್ ಬಂದೇ ಬರುತ್ತದೆ. ಪರೀಕ್ಷೆ ಸಂದರ್ಭದಲ್ಲಿ ಅಟೆಂಡೆನ್ಸ್ ಕಡಿಮೆ ಇರುವ ಕಾರಣದಿಂದಲೇ ಹಾಲ್ ಟಿಕೆಟ್ ನೀಡಲಾರೆ ಎನ್ನುವ ಪ್ರಿನ್ಸಿಪಾಲರ ಮುನಿಸು, ಸರ್ ಪ್ಲೀಸ್ ಅಟೆಂಡೆನ್ಸ್ ಕೊಡಿ ಎಂದು ಉಪನ್ಯಾಸಕರ ಬಳಿ ದುಂಬಾಲು ಬೀಳುವ ವಿದ್ಯಾರ್ಥಿ ಬಳಗ ಇವೆಲ್ಲ ಕಾಲೇಜು ದಿನಗಳ ಹಸಿ ಹಸಿ ನೆನಪುಗಳು.
 
ಸಾಂಸ್ಕೃತಿಕ ಕಾರ್ಯಕ್ರಮ
ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆದೇ ಇರುತ್ತದೆ. ಅದರಲ್ಲಿ ಹಾಡೋ, ನೃತ್ಯವೋ, ನಾಟಕವೋ ಹೀಗೆ ಯಾವುದೋ ಒಂದು ವಿಶಿಷ್ಟ ಕಾರ್ಯಕ್ರಮ ನೀಡುವುದು ವಿದ್ಯಾರ್ಥಿ ಬದುಕಿನ ವಿಶಿಷ್ಟ ಘಳಿಗೆಗಳಲ್ಲಿ ಒಂದು. ಇಷ್ಟೇ ಅಲ್ಲ, ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳು, ದೈಹಿಕ ಕ್ರೀಡಾಕೂಟದಲ್ಲಿ ಪಾಲ್ಗೊಡು ಬಹುಮಾನಗಳನ್ನು ಗಳಿಸುವುದು ಕಾಲೇಜು ದಿನಗಳ ಮಹತ್ತರ ಘಟನೆಗಳಲ್ಲಿ ಒಂದು.
 

Thursday, July 19, 2018

ಮಳೆಯ ನಡುವೆ ಮನಸ್ಸಿಗೆ ಹಬ್ಬ

ಮಳೆ ಹಬ್ಬ : ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಮುನ್ನುಡಿ

ಜಿಟಿ ಜಿಟಿ ಮಳೆಯಲ್ಲಿ ನೆನೆಯುವ ಸಂಭ್ರಮ, ಅರಲು ಗದ್ದೆಯಲ್ಲಿ ಕುಣಿಯುತ್ತ, ಆಟವಾಡುತ್ತ ಎಲ್ಲರೊಳಗೊಂದಾಗಿ ಸಂತೋಷವನ್ನು ಅನುಭವಿಸುತ್ತ, ಕಾಡು, ಹಸಿರು, ಉಂಬಳಗಳ ರಾಶಿಯ ನಡುವೆ ಕಳೆದು ಹೋಗುತ್ತ, ದೂರದ ಬೆಟ್ಟದ ಮೇಲೆಬಂದು ಚುಂಬಿಸುವ ಮೋಡಗಳಿಗೆ ಹಾಯ್ ಹೇಳುತ್ತ, ಹತ್ತಿರದ ಜಲಧಾರೆ, ತೊರೆಯಲ್ಲಿ ಆಡುತ್ತ ದಿನ ಕಳೆದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ. ಇಂತಹ ಎಲ್ಲ ಅನುಭವಗಳ ಬುತ್ತಿಯನ್ನು ನಗರವಾಸಿಗಳಿಗೆ ಕಟ್ಟಿಕೊಟ್ಟಿದ್ದೇ ಮಳೆ ಹಬ್ಬ.
ಮಳೆ ಹಬ್ಬ ಎನ್ನುವ ವಿನೂತನ ಕಲ್ಪನೆಯ, ಪರಿಸರ ಸ್ನೇಹಿ ಪ್ರವಾಸ ಅಭಿಯಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವಾನಳ್ಳಿಯಲ್ಲಿ ಆರಂಭಗೊಂಡಿತು. ಈ ಮಳೆ ಹಬ್ಬದಲ್ಲಿ ಎಲ್ಲವೂ ಇತ್ತು. ಹಸಿರು, ಸ್ನೇಹ, ಸಮ್ಮಿಲನ, ಬೆಟ್ಟ, ಕಾಡು, ಮಳೆ, ಜೀವಂತಿಕೆ, ಜಲಪಾತ, ಕ್ರಿಯಾಶೀಲತೆ, ಚಾರಣ ಹೀಗೆ ಹತ್ತು ಹಲವು ಅಅಂಶಗಳನ್ನು ಒಳಗೊಂಡಿದ್ದವು.
ದಿನವಿಡೀ ಎಡಬಿಡದೆ ಸುರಿಯುವ ಮುಂಗಾರು ಮಳೆ. ಹಸಿರು ಹೊತ್ತು, ಮೋಡಗಳನ್ನು ಮುತ್ತಿಕ್ಕಿ ನಗು ನಗುತ್ತಾ ಕಯ ಬೀಸಿ ಕರೆಯುವ ವೃಕ್ಷ ಸಂಕುಲಗಳು, ಜೀವೋತ್ಸಾಹವನ್ನು ಉದ್ದೀಪನಗೊಳಿಸುವ ಪುಟ್ಟ ಜಲಪಾತ, ಪುಟ್ಟ ಪುಟ್ಟದಾಗಿ ಇಣುಕುವ, ಪಾದ ತೊಳೆಯುವ ತೊರೆಗಳು. ಆಗಾಗ ಇಣುಕುವ ಸೂರ್ಯ, ಜತೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮೂವತ್ತಕ್ಕೂ ಹೆಚ್ಚಿನ ಅತಿಥಿಗಳು.. ಮೊದಲ ಆವೃತ್ತಿಯ ಮಳೆ ಹಬ್ಬದ ಸಂಭ್ರಮವನ್ನು ನೂರ್ಮಡಿಸಿದ್ದು ಇಂತಹ ಹಲವು ಸಂಗತಿಗಳು.
ಪತ್ರಕರ್ತ ನಾಗರಾಜ ವೈದ್ಯ ಆಯೋಜಿಸಿದ್ದ ಈ ಮಳೆಹಬ್ಬ ಹಲವು ಹೊಸ ಸಾಧ್ಯತೆಗಳನ್ನು ತೆರೆದಿಡುವುದರ ಜತೆಗೆ ಅಭೂತಪೂರ್ವ ಯಶಸ್ಸು ಪಡೆಯಿತು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ೩೫ಕ್ಕೂ ಹೆಚ್ಚಿನ ಅತಿಥಿ ಅಭ್ಯಾಗತರು ಮಳೆ-ನಾಡಿನಲ್ಲಿ ಒಮದಾದರು. ಪ್ರಕೃತಿಯೊಳಗೆ ಮೈಮರೆತರು. ನಗರದ, ಧಾವಂತದ ಬದುಕನ್ನು ಎರಡು ದಿನಗಳ ಮಟ್ಟಿಗೆ ಮರೆತು ರಿಫ್ರೆಶ್ ಆದರು. ಮಲೆನಾಡಿನ ಆಹಾರ ಸಂಸ್ಕೃತಿ, ಜೀವನ ಕ್ರಮ ಹಾಗೂ ಪರಿಶುದ್ಧ ಪ್ರವಾಸೋದ್ಯಮದ ಸವಿಯನ್ನು ಮೈ-ಮನ ತುಂಬಿಕೊಂಡರು.

ಜಲಪಾತದಲ್ಲಿ ಸಾಹಸ:
ಜಲಪಾತ ವೀಕ್ಷಣೆಯ ಬಳಿಕ ದಾಂಡೇಲಿಯ ತಜ್ಞರ ಸಮ್ಮುಖದಲ್ಲಿ ರ್ಯಾಪ್ಟಿಂಗ್ ಕೂಡಾ ನಡೆಸಲಾಯಿತು. 25 ಕ್ಕೂ ಹೆಚ್ಚು ಜನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 200 ಅಡಿ ಎತ್ತರದ ಜಲಪಾತದಲ್ಲಿ ಜಾರಿಕೆ ಕಲ್ಲುಗಳ ಮೇಲಿಂದ ಇಳಿದು ಖುಷಿ ಪಟ್ಟರು. ಕಿರುತೆರೆ ನಿರ್ದೇಶಕ ರಾಮಚಂದ್ರ ವೈದ್ಯ ಇದರ ನೇತೃತ್ವ ವಹಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡಿದರು.
ರೈತಾಪಿ ಕೆಲಸದ ಕಷ್ಟ ಸುಖದ ಅರಿವು:
ಕಾಯ್ರಕ್ರಮದ ಎರಡನೇ ದಿನ ಧೂಳಳ್ಳಿಯ ನಾರಾಯಣ ನಾಯ್ಕ ಅವರ ಹೊಲದಲ್ಲಿ ಕಂಬಳಿಕೊಪ್ಪೆ ಹೊದ್ದು ಗದ್ದೆ ಹೂಟಿ ಮಾಡುವ ಮೂಲಕ ಎಲ್ಲರೂ ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ನಗರದಲ್ಲಿ ಕಂಪ್ಯೂಟರ್ ಕೀಲಿಮಣೆಯನ್ನು ಕುಟ್ಟುತ್ತಿದ್ದ ಕೈಗಳು ಗದ್ದೆಯಲ್ಲಿ ನೊಗವನ್ನು ಹಿಡಿದಿದ್ದವು, ಎತ್ತುಗಳ ಹಿಮದೆ ಹೈ ಹೈ ಎಂದರು. ಸ್ಥಳೀಯ ರೈತರ ಕಷ್ಟ ಸುಖಗಳನ್ನು ಆಲಿಸಿದರು. ಕೆಸರು ಗದ್ದೆಯಲ್ಲಿ ಕಬಡ್ಡಿ ಆಡಿ ನಲಿದರು. ಪರಸ್ಪರ ಕೆಸರೆರಚಿಕೊಂಡು ಸಂಭ್ರಮಿಸಿದ್ದಲ್ಲದೇ, ಅನೇಕರು ಐಟಿ ಕೆಲಸ ತೊರೆದು ಮತ್ತೆ ಕೃಷಿ ಜೀವನಕ್ಕೆ ಮರಳು ಬಗ್ಗೆ ತಮಗಿರುವ ಆಸಕ್ತಿಯನ್ನು ಹೇಳಿಕೊಂಡರು. ಈ ಎಲ್ಲ ಸಂಭ್ರಮದ ನಂತರ ಹಿರಿಯ ಕೃಷಿಕ ನಾರಾಯಣ ನಾಯ್ಕರಿಗೆ ಮಳೆಹಬ್ಬ ತಂಡದ ಪರವಾಗಿ ಗೌರವ ಸಮರ್ಪಿಸುವುದನ್ನು ಮರೆಯಲಿಲ್ಲ.
ಉಪಚಾರಕ್ಕೆ ಮನಸೋತ ಅತಿಥಿಗಳು:
ಮಲೆನಾಡಿನ ವಿಶೇಷ ಬೆಳಗಿನ ತಿಂಡಿ ನೀರ್ದೋಸೆ, ಜೇನು ತುಪ್ಪ, ರವೆರವೆ ತುಪ್ಪ, ಮಾವಿನ ಶೀಕರಣೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿತು. ಮಲೆನಾಡಿನ ಸ್ಪೆಷಲ್ ಎಂದೇ ಕರೆಸಿಕೊಳ್ಳುವ ಹಲಸಿನ ಹಣ್ಣಿನ ಕಡುಬು, ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ, ಉಪ್ಪಾಗೆ ಎಣ್ಣೆಯಲ್ಲಿ ಬೇಯಿಸಿದ ಅತ್ರಾಸ, ಗೆಣಸಲಕಿಳೆಯಲ್ಲಿ ಬೇಯಿಸಿದ ಕಾಯಿಕಡುಬು, ವಿವಿಧ ರೀತಿಯ ಕಟ್ನೆಗಳು, ತಂಬುಳಿ, ಭೂತ್ಗೊಜ್ಜು ಹೀಗೆ ಮಲೆನಾಡಿನದ್ದೇ ರಸಪಾಕಗಳು ಆಗಮಿಸಿದ ನಗರವಾಸಿಗಳನ್ನು ಖುಷಿಪಡಿಸಲು ಯಶಸ್ವಿಯಾಯಿತು. ವಾನಳ್ಳಿಯ ತವರುಮನೆಯ ಪಿಜಿ ಹೆಗಡೆ, ನಾಗವೇಣಿ ಹೆಗಡೆಯವರ ಕೈರುಚಿಗೆ ಪ್ರತಿಯೊಬ್ಬರೂ ಮೆಚ್ಚಿ ತಲೆದೂಗಿದರು.
ಆಟದ ಅಷ್ಟೇ ಅಲ್ಲ.. ಪಾಠವೂ..:
ಈ ಇಡೀ ಕಾರ್ಯಕ್ರಮದ ಗೆಲುವು ಇದ್ದಿದ್ದೇ ಆಟದ ಜತೆಗೆ ಪಾಟ ಎಂಬ ಪರಿಕಲ್ಪನೆಯಲ್ಲಿ. ಆಟ ಆಡಿಸುತ್ತಲೇ ಪರಿಸರದ ಪಾಠವನ್ನು, ಪ್ರಕೃತಿ ಪ್ರೇಮವನ್ನು ಮನವರಿಕೆ ಕಾಡಿಸುವಂತೆ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲಾಗಿತ್ತು ಎನ್ನುತ್ತಾರೆ ಆಯೋಜಕ ನಾಗರಾಜ ವೈದ್ಯ. ನಮ್ಮದೇ ನಾಡಿನ, ಈಗ ಗತಕಾಲವನ್ನು ಸೇರುತ್ತಿರುವ ಬುಗುರಿ, ಗಿಲ್ಲಿ-ದಾಂಡು ಆಟ, ಕಾಗದದ ದೋಣಿ ಮಾಡಿದ್ದು, ಹೊಡಸಲಿನಲ್ಲಿ ಚಳಿ ಕಾಯಿಸುತ್ತಾ ಗೇರುಬೀಜ ಸುಟ್ಟು ತಿಂದಿದ್ದು ಎಲ್ಲವೂ ಅತಿಥಿಗಳಿಗೆ ಹೊಸ ಅನುಭವ ನೀಡುವ ಜತೆಗೆ ಮಲೆನಾಡು ಹಳೆಯ ನೆನಪುಗಳನ್ನು ಮತ್ತೊಮ್ಮೆ ಕಣ್ಣೆಎದುರಿಗೆ ಕಟ್ಟಿಕೊಟ್ಟಿತು. ಇಷ್ಟೇ ಅಲ್ಲದೇ ಭೀಮತಾರಿಯಲ್ಲಿ ನೂರಾರು ಸೀಡ್ ಬಾಲ್ ಗಳ ಪ್ರಸರಣ ಮಾಡಿದ್ದು ವಿಶೇಷವಾಗಿತ್ತು. ಮುಂದಿನ ದಿನಗಳಲ್ಲಿ ಬೆಂಗಳೂರು, ಬಯಲು ಸೀಮೆ ಹಾಗೂ ಇನ್ನೂ ಅನೇಕ ಪ್ರದೇಶಗಳಲ್ಲಿ ಸಸಿ ನೆಡುವುದು, ಸೀಡ್ ಬಾಲ್ ಪ್ರಸರಣ ಮಾಡುವ ಮೂಲಕ ಪ್ರಕೃತಿಗೆ ತಮ್ಮಿಂದಾಗಬಹುದಾದ ಕಿರು ಸಹಾಯ ಮಾಡಲು ಮಳೆಹಬ್ಬದ ತಂಡ ನಿರ್ಧರಿಸಿತು.
ಮನರಂಜನೆ:
ಇದೇ ಸಂದರ್ಭದಲ್ಲಿ ರಂಗಾಯಣದ ಕಲಾವಿದ ಧನರಾಜ್ ಎಸ್ ಆರ್ ಅವರ ಮಿಮಿಕ್ರಿ, ಡಾನ್ಸ್ ಹಾಗೂ ಪ್ರಸನ್ನ ಜಾಜಿಗುಡ್ಡೆ, ಕಿರುತೆರೆ ಬರಹಗಾರ್ತಿ ಚೈತ್ರಿಕಾ ವೈದ್ಯ ಅವರ ಗಾಯನ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಯಿತು. ಪರಿಸರಸ್ನೇಹಿ, ಪರಿಸರ ಪೂರಕ ಎಲ್ಲ ಅಂಶಗಳನ್ನು ಹೊಂದಿದ್ದ ಮಳೆ ಹಬ್ಬ ಎಲ್ಲರ ಚಿತ್ತ ಭಿತ್ತಿಯಲ್ಲಿ ಅಚ್ಚಳಿಯದೇ ನಿಲ್ಲುವಲ್ಲಿ ಯಶಸ್ವಿಯಾಯಿತು. ಮತ್ತೊಮ್ಮೆ, ಮಗದೊಮ್ಮೆ ಮಳೆಹಬ್ಬದಲ್ಲಿ ಒಂದಾಗುವ ಭಾವನೆಯನ್ನು ಪ್ರತಿಯೊಬ್ಬರಲ್ಲಿಯೂ ಹುಟ್ಟು ಹಾಕುವಲ್ಲಿ ಯಶಸ್ಸನ್ನು ಕಂಡಿತು.
 -------
ಪ್ಲಾಸ್ಟಿಕ್ ಮುಕ್ತ ಮಳೆಎಹಬ್ಬ
ಮಳೆ ಎಂಬ ಕಲ್ಪನೆಯೇ ಅಷ್ಟು ಸೊಗಸು. ಮಳೆಯ ಹೆಸರ ಪ್ರವಾಸಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಜತೆಗೆ ಪ್ಲಾಸ್ಟಿಕ್ ಮುಕ್ತ ಪರಿಶುದ್ಧ ಪ್ರವಾಸೋದ್ಯಮದ ಆಶಯದೊಂದಿಗೆ ಹಮ್ಮಿಕೊಂಡಿದ್ದ ಮಳೆಹಬ್ಬ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಊರು ಮರೆತು ವರ್ಷವಿಡಿ ಕೆಲಸದಲ್ಲಿ ನಿರತರಾದವರಿಗೆ ನಿರುಮ್ಮಳತೆ ನೀಡುವ ಜತೆಗೆ ಜಾಗೃತಿ ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ.
- ನಾಗರಾಜ ವೈದ್ಯ,
ಪತ್ರಕರ್ತ, ಮಳೆಹಬ್ಬ ಆಯೋಜಕ
 


Wednesday, July 11, 2018

ಕಣ್ಣ ಮಿಂಚು



ನಿನ್ನ ಕಣ್ಣಲೇನೋ ಮಿಂಚು
ನೋಡಿದಾಮನ ಬೆಳಗಲೇ?
ಹೊಳೆವ ಕಂಗಳ ಆಳದಾಳಕೆ
ನಾನು ಕೊಂಚ ಇಣುಕಲೇ?

ಕಪ್ಪು ಕಂಗಳು ಅರಳಿ ನಗುತಿವೆ
ನಲಿವ ನೆಚ್ಚನು ಹಚ್ಚಿವೆ
ಸ್ವಚ್ಛ ಮನಸಿನ ಮೆಚ್ಚು ನೋಟವು
ಒಲವ ಹಣತೆಯ ಹಚ್ಚಿವೆ |

ನಿನ್ನ ಕಂಗಳು ನಗುತಲಿರಲಿ
ಜಗವು ಎಂದಿಗು ಮೆಚ್ಚಲಿ
ನೀರು ಆರಲಿ, ನಲಿವು ಮೆರೆಯಲಿ
ನೋವು ದೂರದಿ ಉಳಿಯಲಿ |

Wednesday, July 4, 2018

ನಾನು ಓದಿದ ಪುಸ್ತಕಗಳು -3 (ಕೇಪಿನ ಡಬ್ಬಿ)

ಕೇಪಿನ ಡಬ್ಬಿ

ಮತ್ತೊಮ್ಮೆ ಕೇಪಿನ ಡಬ್ಬಿ ಪುಸ್ತಕವನ್ನು ಓದಿದೆ.
ಹಿಂದೆ ಓದಿದಾಗ ಅನ್ನಿಸಿದ್ದ ಭಾವನೆಗಳೇ ಬೇರೆ. ಈ ಅನ್ನಿಸುತ್ತಿದ್ದ ಭಾವನೆಗಳೇ ಬೇರೆ.
ಹಿಂದೆ ಪದ್ಮನಾಭನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪದ್ಮನಾಭನ ಅಮ್ಮ ನನಗೆ ಕೇಪಿನ ಡಬ್ಬಿ ಪುಸ್ತಕದ ಕೇಪಿನ ಡಬ್ಬಿ ಕಥೆ ಸೇರಿದಂತೆ ಇನ್ನೊಂದೆರಡು ಕಥೆಗಳನ್ನು ಆರಿಸಿ ತಕ್ಷಣದಲ್ಲಿ ಓದಿ ಅಭಿಪ್ರಾಯ ಹೇಳು ಅಂದಿದ್ದರು. ನಾನು ಓದಿ ಏನೋ ಹೇಳಿದ್ದೆ. ನಂತರ ನನ್ನ ಅಮ್ಮ(ಅಮ್ಮ ಹಾಗೂ ಪದ್ಮನಾಭನ ಅಮ್ಮ ನೆಂಟರು ಹಾಗೂ ಬಾಲ್ಯದ ಗೆಳತಿಯರು) ಆ ಕಥೆಗಳನ್ನು ಓದಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ತಮ್ಮದೂ ಬಾಲ್ಯ ನೆನಪಾಯಿತು ಎಂದಿದ್ದರು.

ಬಾಲ್ಯದಿಂದ ನೆಂಟನಾಗಿ, ದೋಸ್ತನಾಗಿ, ಜತೆ ಜತೆಗೆ ಬಳೆದವರು ನಾನು ಹಾಗೂ ಪದ್ಮನಾಭ ಭಟ್ಟ ಶೇವ್ಕಾರ್. ಆತ್ಮೀಯತೆಯ ಪದ್ದು. ನಾನು, ಪದ್ಮನಾಭ, ಪ್ರತಿಭಾ ಹಾಗೂ ನನ್ನ ತಂಗಿ ಸುಪರ್ಣ ಸೇರಿಕೊಂಡು ಮಾಡಿದ ಪುಂಡರಪೂಟು ಸಾಕಷ್ಟಿದೆ ಬಿಡಿ. ಹೊನ್ನೆಬೇಣ, ಕಪ್ಪು ಬಣ್ಣದ ಡಾಬರ್ ಮನ್ ನಾಯಿ (ಅದಕ್ಕೆ ಪದ್ಮನಾಭ ಇಟ್ಟ ಹೆಸರು ಡಾಬರ್ ಕುನ್ನಿ) ಹೊಟ್ಟೆಬಿರಿಯುವಂತೆ ತಿಂದ ಹಲಸಿನ ಹಣ್ಣು, ಕೊಂಕಿಕೋಟೆಗೆ ಹೋಗಬೇಕೆಂಬ ಅಂದಿನಿಂದ ಇಂದಿನವರೆಗೂ ಪೂರ್ಣಗೊಳ್ಳದ ನಮ್ಮ ಯೋಜನೆ, ಹೊನ್ನೆಬೇಣಕ್ಕೆ ಹೋದಾಗಲೆಲ್ಲ ಹತ್ತಿಳಿಯುವ ಜೋಗಿಕಲ್ಲು, ಪದ್ದುನ ಮನೆಯ ಬಳಿಯೇ ಅಗಲವಾಗಿ ಹರಿಯುವ ಆದರೆ ನೀರಿನ ಹರಿವು ಕಡಿಮೆ ಇರುವ ಗಂಗಾವಳಿ ನದಿ, ಪ್ರಭಾವತಿ ಅತ್ತೆ ಹಾಗೂ ನಾರಾಯಣ ಮಾವರ ಅಕ್ಕರೆ, ವಿನಯ ಇದ್ದಲ್ಲಿ ಕಿಲಾಡಿ ಜೋರು, ಎಂತಾರೂ ಭಾನಗಡಿ ಮಾಡಡಿ ಎನ್ನುವ ನಾರಾಯಣ ಮಾವನ ಎಚ್ಚರಿಕೆ.. ಆಹಾ... ಇವೆಲ್ಲ ನಮ್ಮ ಬಾಲ್ಯದ ನೆನಪುಗಳು. ನಾರಾಯಣ ಮಾವನ ಸೈಕಲ್ಲಿನಲ್ಲಿ ಒಳಪೆಡ್ಲು ಕಲ್ತಿದ್ದು, ಗುಳ್ಳಾಪುರದಲ್ಲಿ ನಡೆದಿದ್ದ ಯಲ್ಲಾಪುರ ಡಿಗ್ರಿ ಕಾಲೇಜಿನ ಎನ್ನೆಸ್ಸೆಸ್ ಕ್ಯಾಂಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಟ್ಟ ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡುತ್ತ ಹೊನ್ನೆಬೇಣದ ದಾರಿಯಲ್ಲಿ ನಡೆದು ಬಂದಿದ್ದು, ಪಿಯು ದಿನಗಳ ನಮ್ಮ ಒನ್ ಸೈಡ್ ಲವ್ ಹೆಸರನ್ನು ಜೋಗಿಕಲ್ಲಿನ ಯಾವುದೋ ಮರದ ಮೇಲೆ ಕೆತ್ತಿದ್ದು ಇತ್ಯಾದಿಗಳೆಲ್ಲ ನೆನಪಾಗುತ್ತಿರುವಂತಹ ಸಂಗತಿಗಳು. ಪುಸ್ತಕದ ಬಗ್ಗೆ ಬರೆಯಹೊರಟವನು ಬಾಲ್ಯದ ಬಗ್ಗೆ ಯಾಕೆ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡಿ. ಕೇಪಿನ ಡಬ್ಬಿ ನಮ್ಮ ಹಲವಾರು ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟಿದೆ.
ಕೇಪಿನ ಡಬ್ಬಿ ಕಥಾ ಸಂಕಲನವನ್ನು ಓದಿದಂತೆಲ್ಲ ನಮ್ಮ ಅನೇಕ ನೆನಪುಗಳು ಮರುಕಳಿಸುತ್ತವೆ. ಯಾವುದೋ ಪಾತ್ರಗಳ, ಯಾವುದೋ ಸನ್ನಿವೇಶಗಳಲ್ಲಿ ನಾವಿದ್ದೇವಾ ಅನ್ನಿಸುತ್ತದೆ. ಕೆಲವು ಸಾರಿ ಬಾಲ್ಯದಲ್ಲಿ ನಾವೇ ಆಡಿದ ಮಾತುಗಳನ್ನು ಪದ್ಮನಾಭ ಇನ್ಯಾವುದೋ ಪಾತ್ರಗಳ ಮೂಲಕ ಆಡಿಸಿದ್ದಾರಾ ಎನ್ನಿಸುತ್ತದೆ. ಇಂತಹ ಕಾರಣಗಳಿಂದಲೇ ನನಗೆ ಕೇಪಿನ ಡಬ್ಬಿ ಮತ್ತಷ್ಟು ಆಪ್ತವಾಗಿದ್ದು.
ಪದ್ಮನಾಭ ಬರವಣಿಗೆ ಮೂಲಕ ನನಗೆ ಪರಿಚಯವಾಗಿದ್ದೂ ಬಾಲ್ಯದಲ್ಲೇ. ನಾನು ಪಿಯು ಓದುತ್ತಿದ್ದ ಸಂದರ್ಭದಲ್ಲಿ ಪದ್ಮನಾಭ ಹೈಸ್ಕೂಲು. ಆತ ಪತ್ರಗಳಲ್ಲಿ ನನಗೆ ಕಥೆಗಳನ್ನು ಕಳಿಸುತ್ತಿದ್ದ. ಪತ್ರಗಳಲ್ಲಿಯೇ ಒಂದು ಪೇಪರ್ ಹೊರತರುತ್ತಿದ್ದೆವು. ನಾನು ಬರೆಯುವ ಪತ್ರ ಯಾವುದೋ ಹೆಸರಿನಲ್ಲಿ ಅವನಿಗೆ ತಲುಪಿದರೆ, `ಸಿಡಿಲು` ಎನ್ನುವ ಹೆಸರಿನಲ್ಲಿ ಆತನಿಂದ ಬರುತ್ತಿದ್ದ ಪತ್ರ ಪುಸ್ತಕದ ಮುನ್ನುಡಿಯಲ್ಲಿ ಉಲ್ಲೇಖವಾಗಿರುವ `ಕೊಂಕಿ ದುರ್ಗದ ರಹಸ್ಯ' ಎಂಬ ಕಾದಂಬರಿಯನ್ನು ಒಳಗೊಂಡಿತ್ತು. ಆದರೆ ಇದ್ದಕ್ಕಿದ್ದಂತೆ ನಮ್ಮ ದಾರಿಗಳು ಬದಲಾದವು. ನಾವು ಪತ್ರಗಳನ್ನು ಬರೆದುಕೊಳ್ಳುವುದನ್ನು ನಿಲ್ಲಿಸಿದೆವು. ಪದ್ಮನಾಭ ಒಂದಷ್ಟು ವರ್ಷಗಳ ಕಾಲ ನಾಪತ್ತೆಯಾದ. ನಾನು ಅವನನ್ನು ಮರೆತೆ.
ನಾನು ಬಾಲ್ಯದಿಂದಲೂ ಕಂಡ, ಪರಮ ವಾಚಾಳಿ ಪದ್ಮನಾಭ ಈಗ ಬದಲಾಗಿದ್ದಾನೆ. ದಿನದಿಂದ ದಿನಕ್ಕೆ ಬೆರಗು ಮೂಡಿಸುತ್ತಿದ್ದಾನೆ. ಈಗ ನಮ್ಮಿಬ್ಬರ ಮಾತುಗಳೂ ಅಪರೂಪಕ್ಕೆ ಎನ್ನುವಷ್ಟು ಕಡಿಮೆಯಾಗಿದೆ. ಹೀಗಿದ್ದ ನಂತರ ಆತ ಮತ್ತೆ ಹತ್ತಿರಕ್ಕೆ ಬಂದಿದ್ದು ಕೇಪಿನ ಡಬ್ಬಿ ಕಥೆಯಿಂದಲೇ. ಆತನ ಪುಸ್ತಕ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬಾಲ್ಯದ ಮಿತ್ರ, ನೆಂಟ ಇತ್ಯಾದಿಗಳನ್ನು ನನ್ನ ತಲೆಯಿಂದ ತೆಗೆದುಹಾಕಿ ಪುಸ್ತಕವನ್ನು ಓದುವ ಯತ್ನ ಮಾಡಿದ್ದೇನೆ. ಆದರೆ ನಡು ನಡುವೆ ಕಥೆಯ ಪಾತ್ರಗಳು ನಮ್ಮ ಆ ದಿನಗಳನ್ನು ನೆನಪು ಮಾಡಿವೆ.

೧೧ ಕಥೆಗಳಿರುವ ಪುಸ್ತಕದಲ್ಲಿನ ಮೊದಲ ಕಥೆ ಚೇಳು ಕಚ್ಚಿದ ಗಾಯ. ಕೆಳ ಮಧ್ಯಮವರ್ಗದ ಕುಟುಂಬದ ಕಥೆ. ಒಂದೇ ಸಂಜೆಯಲ್ಲಿ ಕಥೆಯ ಪಾತ್ರಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ. ರಾತ್ರಿಯಾದಂತೆಲ್ಲ ಪಾತ್ರಗಳು ಇನ್ನಷ್ಟು ವಿಸ್ತಾರಗೊಳ್ಳುತ್ತವೆ. ರಾಮಣ್ಣ, ಸುಮಿತ್ರಮ್ಮ, ರೇಣುಕಾ, ಪ್ರಶಾಂತರ ನಡುವಿನ ಸಂಭಾಷಣೆ ನಮ್ಮ ನಡುವೆ ನಿತ್ಯವೂ ನಡೆಯುತ್ತಿರುವ ಕಠು ವಾಸ್ತವವನ್ನು ಬಿಚ್ಚಿಡುತ್ತವೆ. ರೇಣುಕಾ ಹಾಗೂ ಸುಮಿತ್ರಳ ವರ್ಣನೆ ಸ್ವಲ್ಪ ಜಾಸ್ತಿಯೇ ಇದೆ. ರಾಮಣ್ಣನ ಹತಾಶೆ, ರೇಣುಕಾಳ ಸಿಟ್ಟು, ಚುಚ್ಚುನುಡಿ, ಸುಮಿತ್ರಮ್ಮನ ಅಸಹಾಯಕತೆ ಇತ್ಯಾದಿಗಳೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಓದುತ್ತ ಓದುತ್ತ ಇಂತಹ ಹಲವಾರು ಘಟನೆಗಳನ್ನು ನಾನು ಕಂಡಿದ್ದು ನೆನಪಿಗೆ ಬಂದಿತು. ಕಥೆ ಓದಿ ಮುಗಿದ ಮೇಲೂ ಪ್ರಶಾಂತನಿಗೆ ಬಂದಿದ್ದು ಯಾರ ಪೋನ್? ಯಾವ ಕಾರಣಕ್ಕೆ ಅನಾಮಧೇಯ ಕರೆ ಪ್ರಶಾಂತನ ಕೊಲ್ಲುವ ಬೆದರಿಕೆಯನ್ನು ಹಾಕಿತು? ರೇಣುಕಾಳ ಗಂಡ ರೇಣುಕಾಳನ್ನೂ, ಆಕೆಯ ಮಗಳನ್ನೂ ನೋಡಲು ಬರುತ್ತಾನಯೇ?, ರಾಮಣ್ಣ ಚಿನ್ನದ ಉಡದಾರ ಕೊಂಡು ತಂದನೇ? ಮುಂದೇನಾಯ್ತು ಎನ್ನುವ ಕುತೂಹಲವನ್ನು ಹುಟ್ಟುಹಾಕಿಸುತ್ತದೆ.

ಬೆಳಕು ಬಿಡಿಸಿದ ಚಿತ್ರ, ಅಪ್ಪ-ಮಗನ ಕಥೆ. ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಮಗ. ಮಡದಿಯನ್ನು ಕಳೆದುಕೊಂಡ ಅಪ್ಪ. ಮಾಸ್ತರು. ಶಿಸ್ತಿನ ಸಿಪಾಯಿ. ಅಪ್ಪನ ವಿರುದ್ಧ ದ್ವೇಷದ ಭಾವನೆ ಬೆಳೆಸಿಕೊಂಡ ಮಗ. ಅಪ್ಪ-ಅವಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಾನೆ ಎನ್ನುವ ಮಾತು ಕೇಳಿ, ಅಪ್ಪನ ಬಳಿ ಸಿಟ್ಟುಕಾರಿಕೊಳ್ಳಲು ಬಂದವನು, ಅಪ್ಪನ ಜಾಗದಲ್ಲಿಯೇ ನಿಂತು ಆಲೋಚಿಸುತ್ತಾನೆ. ಅವಳ ಮನೆಯಲ್ಲಿ ಅಪ್ಪ ಅವಳ ಮಗನೊಂದಿಗೆ ಆಡುತ್ತಿದ್ದುದನ್ನು ನೋಡಿದ ನಂತರ ಬದಲಾಗುವ ಮಗನ ಮನಸ್ಸಿನಲ್ಲಿನ ದ್ವೇಷ ಬದಲಾಗುತ್ತದೆ. ಕಾರ್ಮೋಡ ಸರಿದಂತಾಗುತ್ತದೆ. ಅಪ್ಪ ಮಗನ ನಡುವಿನ ವಿಶಿಷ್ಟ ಭಾವನೆಯೊಂದನ್ನು ಅಷ್ಟೇ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಪದ್ಮನಾಭ. ಪದ್ದುನ ಸೂಕ್ಷ್ಮ ನೋಟಗಳಿಗೆ ನಿಜಕ್ಕೂ ಸಲಾಂ. ರಾತ್ರಿ ಮಳೆಗಾಲದಲ್ಲಿ ಡ್ರೋಂಕ್ ಎನ್ನುವ ಕಪ್ಪೆಗಳ ವರ್ಣನೆ, ಅಪರಿಚಿತರು ಬಂದಾಗ ಜೊರ್ ಜೊರ್ ಜೊರಕ್ ಎಂದು ಉಚ್ಚೆ ಹೊಯ್ಯುವ ದನಗಳು, ಕಾಯು ತುರಿಯುವ ಕೆರಮಣೆಯ ಮೇಲೆ ಕೂತು ಕೂತು ಸವೆದ ಚಿತ್ರ, ಆಹಾ ಇವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಪದ್ದುವಿನ ವೈಶಿಷ್ಟ್ಯಕ್ಕೊಂದು ಸಲಾಂ.

ಛದ್ಮವೇಶ, ಈ ನಡುವೆ, ಹೆಣದ ವಾಸನೆ... ಈ ಮೂರೂ ಕಥೆಗಳನ್ನು ಓದಿ ಬೆರಗು ಪಡುತ್ತಿದ್ದೇನೆ. ಅಬ್ಬಾ ಕಲ್ಪನೆಯೇ? ಆಗೊಮ್ಮೆ ಈಗೊಮ್ಮೆ ಇದು ನಿಜವೇ ಅನ್ನಿಸಿದ್ದೂ ಸುಳ್ಳಲ್ಲ. ಯಕ್ಷಗಾನ ವೇಶ ಹಾಕಿ ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸಿನ ಮಧು ಹುಚ್ಚನ ವೇಷಧಾರಿಯಾಗುವುದು, ಇದರ ನಡುವೆ ವಿಶ್ವಣ್ಣ... ಅವಳ ಜತೆ ಎಲ್ಲವನ್ನೂ ಮಾಡುವ ಅವನು ಈಜು ಬಾರದೇ ನದಿಯಲ್ಲಿ ಕೊಚ್ಚಿಹೋಗಿ, ಮತ್ತೆ ದಡ ಸೇರುವುದು ಇಷ್ಟರ ಜತೆ ಸತ್ತ ಇಲಿಯ ವಾಸನೆಯ ಜಾಡಿನಲ್ಲಿ ಹುಚ್ಚು ಮನಸ್ಸು, ಕಪ್ಪು ಆಕೃತಿ... ಅಬಾಬಾಬಾ... ಪದ್ಮನಾಭನ ಅಭಿಮಾನಿ ಸಂಘ ಕಟ್ಟಿ ಅದರ ಅಧ್ಯಕ್ಷನಾಗೋಣ ಅನ್ನಿಸುತ್ತಿದೆ. ಅಮ್ಮಾ ಮುಂದೇನಾಯ್ತು... ನೀ ಯಕ್ಷಗಾನ ಆಡಿದ್ಯಾ? ಎಂದು ಮುಗ್ಧ ಮಧು ಕೇಳಿದ ಸಂದರ್ಭದಲ್ಲಿ ಆಗೋದೆಂಥದ್ದು, ಮದುವೆಯಾಯ್ತು ಎಂದು ನಿಟ್ಟುಸಿರುವ ಬಿಡುವ ಅಮ್ಮ. ಭಾಷೆ ಭಾರದ ಅವಳ ಬಳಿ 'ಸಂಗೀ.. ಹಾಳು ರಂಡೆ..ಇಷ್ಟುದಿನ ನನ್ನಿಂದ ಸರಿ ಜಡಿಸಿಕೊಂಡಿದ್ದಿ.. ನಿನ್ನ ಜತೆ ಮಜಾ ಮಾಡಿದ್ದೇನೆ ಮಜಾ... ಎಂದು ಆತ ಕೂಗಿ ಹೇಳುತ್ತಿದ್ದರೂ ನಗುತ್ತಲೇ ಇದ್ದ ಸಂಗಿ... ವಿವೇಕನ ಪರಿತಾಪ.. ಇವೆಲ್ಲವನ್ನೂ ಎಷ್ಟು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಯಾವುದೋ ಘಳಿಗೆಯಲ್ಲಿ ಆ ಪಾತ್ರದೊಳಕ್ಕೆ ನಾವೂ ಹೊಕ್ಕಿಬಿಡುತ್ತೇವೆ.

ಅಮ್ಮಾ... ನನ್ನ ಮುಂದೆ ಚಾಚಿದ ಅವಳ ಪುಟ್ಟಪುಟ್ಟ ಮುದ್ದು ಕೈಗಳಲ್ಲಿ ಎಷ್ಟೊಂದು ಗೆರೆಗಳಿದ್ದವು ಗೊತ್ತೇನಮ್ಮಾ? ಆ ಕ್ಷಣದಲ್ಲಿ ನನ್ನ ಹಸ್ತಗಳಲ್ಲಿ ಸೆವೆದು ಹೋದ ಅದೃಷ್ಟದ ರೇಖೆಗಳನ್ನೂಅವಳೇ ತಂದಿದ್ದಾಳೇನೋ ಅನ್ನಿಸಿಬಿಟ್ಟಿತು ಎನ್ನುವ ಸಾಲುಗಳನ್ನು ಹೊಸೆಯುವ ಪದ್ಮನಾಭ ಅದೇ ಇನ್ನರ್ಧ ಕಥೆಯಲ್ಲಿ ಅಮ್ಮ ಮಗನ ನಡುವಿನ ಅದ್ಯಾವುದೋ ಅವ್ಯಕ್ತ ಭಾವಗಳನ್ನು ತೆರೆದಿಡುತ್ತಾರೆ. ಇನ್ನರ್ಧ, ಬಾಂದಳದ ಮಿಂಚು ಹಾಗೂ ಕಥೆ ಈ ಮೂರೂ ಕೂಡ ಆಪ್ತವಾಗುತ್ತದೆ.

ಕಥಾ ಸಂಕಲನದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಆಪ್ತವಾದದ್ದು, ಕಣ್ಣು ಹಾಗೂ ಮನಸ್ಸು ತೇವಗೊಳ್ಳುವಂತೆ ಮಾಡಿದ್ದು ಕೇಪಿನ ಡಬ್ಬಿ ಕಥೆ. ಪುಸ್ತಕದ ತಲೆಬರಹವಾಗಿರುವ ಕೇಪಿನ ಡಬ್ಬಿ ಕಥೆಯನ್ನು ಹಿಂದೊಮ್ಮೆ ನಾನು ಹೊನ್ನೆಬೇಣಕ್ಕೆ ಹೋದಾಗ ಪ್ರಭಾವತಿ ಅತ್ತೆ, ಪುಸ್ತಕವನ್ನು ಕೊಟ್ಟು ಓದಲು ಹೇಳಿದ್ದಳು. ಓದಿದ ನಂತರ ನನ್ನ ಮನಸ್ಸಿನಲ್ಲಿನ ತೆರೆಗಳನ್ನು ಸುಮ್ಮನೇ ಗಮನಿಸಿದ್ದಳು. ನನ್ನ ಜತೆಯಲ್ಲಿದ್ದ ಅಮ್ಮ ಕೂಡ ಅದನ್ನು ಓದಿ ನಿಟ್ಟುಸಿರು ಬಿಟ್ಟಿದ್ದಳು. ಪದ್ಮನಾಭ ಈ ಕಥೆಯ ಮೂಲಕ ಹಲವರನ್ನು ಅಳಿಸಿರಬಹುದು. ಕೇಪಿನ ಡಬ್ಬಿಯನ್ನು ಓದಿದ ನಂತರ ಅನ್ನಿಸುವ ಅಂಶಗಳಿಗೆ ಶಬ್ದಗಳು ಸಾಲುವುದಿಲ್ಲ. ನನಗಂತೂ ಹಳೆಯ ಯಾವುದೋ ನೆನಪಿನ ತರೆ ಸುಮ್ಮನೇ ಮನಸ್ಸಲ್ಲಿ ಜೀಕಿತು. ಎಷ್ಟೆಲ್ಲ ಕಥೆಗಳಿದ್ದೂ ಪುಸ್ತಕಕ್ಕೆ ಕೇಪಿನ ಡಬ್ಬಿ ಅಂತಲೆ ಯಾಕೆ ಹೆಸರಿಟ್ಟ ಎಂಬುದನ್ನು ನಾನು ಒಂದೆರಡು ಸಾರಿ ಆಲೋಚಿಸಿದ್ದಿದೆ. ಕಥೆ ಓದಿದಾಗ ಆ ಹೆಸರಿಟ್ಟಿದ್ದು ಸರಿಯೇ ಇದೆ ಅನ್ನಿಸಿತ್ತು.

ಇದೇ ಪುಸ್ತಕದಲ್ಲಿರುವ ಇನ್ನೆರಡು ಕಥೆಗಳು ಮಾತು ಮುಗಿಯುವ ಮೊದಲು ಹಾಗೂ ಇಲ್ಲದ ತೀರದ ಕಡೆಗೆ ಎನ್ನುವ ಹೆಸರಿನವು. ರಿಯಾಲಿಟಿ ಶೋ ಒಂದರಲ್ಲಿ ಹೇಗೆ ಮುಗ್ಧ ಮನಸ್ಸುಗಳನ್ನು ಹಾಳು ಮಾಡಲಾಗುತ್ತದೆ ಎನ್ನುವ ಅಂಶವನ್ನು ಹೊಂದಿರುವ ಇಲ್ಲದ ತೀರದ ಕಡೆಗೆ ಬಹಳ ಆಪ್ತವಾಗುತ್ತದೆ. ಕಥಾ ನಾಯಕನ ಪ್ರೀತಿ, ಜೋಗಿಕಲ್ಲು, ಜೋಗಿಕಲ್ಲಿನ ನೆತ್ತಿಯಲ್ಲಿ ಮರದ ಮೇಲೆ ಕೆತ್ತಿದ ಹೆಸರು.. ಇವು ಕೂಡ ಅಷ್ಟೇ ಇಷ್ಟವಾಗುತ್ತವೆ.

ಪುಸ್ತಕ ಓದಿ ಇಟ್ಟ ಎಷ್ಟೋ ಹೊತ್ತಿನ ವರೆಗೆ ಕಥೆಗಳು ನೆನಪಾಗುತ್ತಲೇ ಇರುತ್ತವೆ. ಹಾಂಗಾಗಕಾಗಿತ್ತಿಲ್ಲೆ, ಇದು ಹಿಂಗಾಗಿದ್ದರೆ ಚನ್ನಾಗಿತ್ತು ಎಂದು ಹಲವು ಬಾರಿ ಆಲೋಚಿಸುವಂತಾಗುತ್ತದೆ. ಆದರೂ ಒಂದು ಮಾತು ಹೇಳಲೇಬೇಕು. ಪದ್ಮನಾಭರ ಈ ಎಲ್ಲ ಕಥೆಗಳಲ್ಲಿ ವಿಷಾದದ ಭಾವನೆ ಸ್ವಲ್ಪ ಜಾಸ್ತಿಯೇ ಇದೆ.

ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಛಂದದ ಪುಸ್ತಕವನ್ನು ಎಲ್ಲರೂ ಒಂದಲೇಬೇಕು. ೧೧೦ ರೂಪಾಯಿಯ ೧೫೦ ಪುಟಗಳ ಈ ಕಥಾ ಸಂಕಲನ ಓದುಗರ ಮನಸ್ಸನ್ನು ಸೆಳೆಯುತ್ತದೆ. ಅಂದಹಾಗೇ ಇಂತಹ ಪುಸ್ತಕ ಕೊಟ್ಟ ಪದ್ಮನಾಭನಿಗೆ ಇನ್ನೊಮ್ಮೆ ಸಲಾಂ. ಶೀಘ್ರದಲ್ಲಿಯೇ ಇನ್ನೊಂದು ಪುಸ್ತಕ ಬರಲಿ ಎನ್ನುವುದು ನನ್ನ ಹಾರೈಕೆ.