Sunday, December 4, 2016

ಮಿಲನ

ನಿಷೆಯ ಆಳಕಿಳಿದು ನಾವು
ಒಂದಾಗಬೇಕು |
ನಮ್ಮ ನಾವು ಅರಿತುಕೊಳಲು
ಮುಂದಾಗಬೇಕು |

ಮುತ್ತುಗಳಿಗೆ ಲೆಕ್ಖವಿಲ್ಲ
ಕೂಟ್ಟು ಪಡೆಯಬೇಕು
ಓಲವಿನ ಸತ್ವ ಹೀರಿ
ಉನ್ಮತ್ತನಾಗಬೇಕು |

ಆಸೆ ಇನ್ನೂ ಹೆಚ್ಚು ಹೆಚ್ಚು
ಮನದಿ ಮರಳಬೇಕು
ಮುಚ್ಚಿಟ್ಟಷ್ಟೂ ಮತ್ತೆ ಮತ್ತೆ
ಕಾಮ ಕೆರಳಬೇಕು |

ಹುಚ್ಚು ಆಸೆ ಕುದುರೆ ಏರಿ
ರಥವ ಕಟ್ಟಬೇಕು
ಮದನ ಮೋಹ ಆಸೆಯಿಂದ
ಶರವ ಹೂಡಬೇಕು |

ನೀನು ಹೂವು ನಾನು ದುಂಬಿ
ಮಧುವ ಹೀರಬೇಕು
ಆಹಾಹಾ ಸುಖದ ಸ್ವರವು
ಮಧುರವಾಗಬೇಕು |

ಹಸಿವು ಹೆಚ್ಚಬೇಕು ಮತ್ತೆ
ಬೆವರ ಸುರಿಸಬೇಕು
ಕಾಮದ ಕಿಚ್ಚನ್ನು ಹಾಗೇ
ಉರಿಸಿಹಾಕಬೇಕು |

ಬರಬಿದ್ದ ಗದ್ದೆಗಳಲಿ
ನೀರುಕ್ಕಿಸಬೇಕು
ಹಸಿರು ಸದಾ ನಲಿಯುತಿರಲು
ಒಲವ ರಸ ಚಿಮ್ಮಬೇಕು |

ನಿರ್ನಿದ್ದೆಯ ರಾತ್ರಿಗಳಲಿ
ನಿನ್ನೊಡನೆ ಹೊರಳಬೇಕು
ಮತ್ತೆ ಮತ್ತೆ ಕನಸ ಜೊತೆಗೆ
ಸುಖದ ತೇರು ಎಳೆಯಬೇಕು |

ಮೇಲೆ ಕೆಳಗೆ ಹತ್ತಿ ಇಳಿದು
ಚರಮ ಸುಖದಿ ನರಳಬೇಕು
ನಿತ್ಯ ನಿತ್ಯ ಹೊಸದು ಹೊಸದು
ಪ್ರೀತಿ ಪುಷ್ಪ ಅರಳಬೇಕು |

ನನಗೆ ನೀನು ನಿನಗೆ ನಾನು
ಬಟ್ಟೆಯಾಗಬೇಕು
ಮಿಲನ ಸವಿಘಳಿಗೆಯಿಂದ
ಬದುಕು ಗಟ್ಟಿಯಾಗಬೇಕು |

ಇಂದಿನಲ್ಲಿ ನಾವು ಅಳಿದು
ನಾಳೆ ಮತ್ತೆ ಹುಟ್ಟಬೇಕು
ನಮ್ಮಿಬ್ಬರ ನಡುವೆ ಎಂದೂ
ಪ್ರೀತಿ ಉಳಿಯಬೇಕು |

ಮಿಲನದ ಪರಿಭಾಷೆ ಎಂದೂ
ಅರ್ಥವಾಗಬೇಕು
ಮಿಲನವೆಂದರೆ ಪ್ರೀತಿ
ಎಂದು ಅರಿತುಕೊಳ್ಳಬೇಕು |

-------------------


(ಈ ಕವಿತೆಯನ್ನು ಶಿರಸಿಯಲ್ಲಿ ಬರೆದಿದ್ದು ಡಿ.4 2016ರಂದು)

(ಕವಿತೆಯ ಕುರಿತು : 
ಖಂಡಿತವಾಗಿಯೂ ಕ್ಲಾಸ್ ಜನರು ಈ ಕವಿತೆಯನ್ನು ನೋಡಿ ಮುಖ ಕಿವುಚಬಹುದು. ಹಲವರಿಗೆ ಇದು ಇಷ್ಟವಾಗಲೂ ಬಹುದು. ಆದರೆ ಮಿಲನ ಹೇಳುವ ಪ್ರೇಮದ ಪರಿಭಾಷೆ ಖಂಡಿತವಾಗಿಯೂ ನಿಜ, ಸತ್ಯ. ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಸಹಕಾರಿ. ಬಹಳಷ್ಟು ಜನರಿಗೆ ಅಶ್ಲೀಲ ಎನ್ನಿಸಬಹುದೇನೋ. ಖಂಡಿತವಾಗಿಯೂ ಇದಕ್ಕೂ ಒಂದು ಗೌರವವಿದೆ. ಗೌರವದಿಂದ ಕಂಡರೆ ಅಶ್ಲೀಲ ಎನ್ನಿಸುವುದಿಲ್ಲ. ಓದುಗರ ಮನಸ್ಸಿನ ಭಾವನೆಗೆ ತಕ್ಕಂತೆ ಕವಿತೆಯ ಅರ್ಥ ಬದಲಾಗುತ್ತದೆ. ಕವಿತೆಯನ್ನು ಅರ್ಥ ಮಾಡಿಕೊಳ್ಳುವವನು ಭಾವಾರ್ಥವನ್ನು ಸವಿಯಬಲ್ಲ. ಆ ತಾಕತ್ತು ಇಲ್ಲದವನು ಅವನ ಮನಸ್ಸಿಗೆ ತೋಚಿದಂತೆ ಅಂದುಕೊಳ್ಳಬಲ್ಲ. ಸುಮ್ಮನೆ ಓದಿ ನೋಡಿ. ಖಂಡಿತವಾಗಿಯೂ ಕವಿತೆಯನ್ನು ಓದಿ ಆ ಮೂಲಕ ಕವಿಯನ್ನು ಜಡ್ಜ್ ಮಾಡಲು ಹೋಗಬೇಡಿ)

Friday, December 2, 2016

ನಯನದಾನದ ಮೂಲಕ ನೂರಾರು ಜನರ ಬಾಳಿಗೆ ಬೆಳಕಾದ ಗ್ರಾಮಸ್ಥರು

ದೇಶದ ಪ್ರಪ್ರಥಮ ಸಂಪೂರ್ಣ ನೇತ್ರದಾನಿ ಗ್ರಾಮ ಮುಂಡಿಗೆಸರ


-------------

ನೇತ್ರದಾನ ಶ್ರೇಷ್ಟ ದಾನಗಳಲ್ಲೊಂದು. ಸತ್ತ ನಂತರವೂ ತಮ್ಮ ನಯನಗಳು ಜಗತ್ತನ್ನು ನೋಡಲಿ ಎನ್ನುವ ಕಾರಣಕ್ಕಾಗಿ ನೇತ್ರಗಳನ್ನು ದಾನ ಮಾಡಿದವರು ಅನೇಕರು. ಮತ್ತೆ ಕೆಲವರು ನೇತ್ರದಾನದ ಬಗ್ಗೆ ಭಯವನ್ನೂ ಹೊಂದಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗ್ರಾಮವೊಂದರ ಸಂಪೂರ್ಣ ಗ್ರಾಮಸ್ಥರು ನೇತ್ರದಾನ ಮಾಡುವ ಮೂಲಕ ಜಗತ್ತಿಗೆ ನೇತ್ರದಾನದ ಪಾಠವನ್ನು ಹೇಳುತ್ತಿದ್ದಾರೆ.
ನಮ್ಮದು ಗ್ರಾಮಗಳ ದೇಶ. ಗ್ರಾಮವೇ ನಮ್ಮ ಜೀವಾಳ. ಇಲ್ಲಿನ ಆಚರಣೆಗಳು, ಸಂಪ್ರದಾಯಗಳು, ವಿಶೇಷತೆಗಳಿಂದ ಆಗಾಗ ಬಹಳಷ್ಟು ಗ್ರಾಮಗಳು, ಬೇರೆಬೇರೆ ಕಾರಣಗಳಿಂದ ನಗರವಾಸಿಗಳ ಗಮನ ಸೆಳೆಯುತ್ತಾ ಇರುತ್ವೆ. ಕೆಲವು ಹುಬ್ಬೇರಿಸುವಂತಿದ್ರೆ ಇನ್ನು ಕೆಲವು ಅನುಕರಣೀಯವಾಗಿರ್ತವೆ. ನೇತ್ರದಾನದ ಪಾಠವನ್ನು ಜಗತ್ತಿಗೆ ಸಾರಿದ ಈ ಗ್ರಾಮವೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರ. ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಸರ ಗ್ರಾಮದಲ್ಲಿ ಬೆಳ್ಳೇಕೇರಿ, ಅಬ್ರಿಮನೆ ಹಾಗೂ ಮುಂಡಿಗೆಸರ ಎಂಬ ಮೂರು ಮಜರೆಗಳಿವೆ. ಈ ಮಜರೆಗಳಲ್ಲಿ ಒಟ್ಟೂ 70ಕ್ಕೂ ಅಧಿಕ ಮನೆಗಳಿವೆ. ಅಜಮಾಸು 300ಕ್ಕೂ ಅಧಿಕ ಜನಸಂಖ್ಯೆಯನ್ನು ಈ ಊರುಗಳು ಹೊಂದಿದ್ದು ಇವರೆಲ್ಲರೂ ಕೂಡ ನೇತ್ರದಾನ ಮಾಡಿರುವುದು ವಿಶೇಷ.
ಶತಮಾನೋತ್ಸವ ಸಮಿತಿಯ ಶ್ಲಾಘನೀಯ ಕಾರ್ಯ :
1992ರಲ್ಲಿ ಮುಂಡಿಗೆಸರ ಗ್ರಾಮದವರೇ ಆದ ಸರಸ್ವತಿ ಎಂ. ಹೆಗಡೆಯವರು ಅನಾರೋಗ್ಯದ ನಿಮಿತ್ತ ನಿಧನರಾದರು. ಅವರು ಆ ಸಂದರ್ಭದಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡಿದರು. ಸರಸ್ವತಿಯವರು ನೇತ್ರದಾನ ಮಾಡಿರುವುದು ಆಗಿನ ಕಾಲದಲ್ಲಿ ಇಡಿಯ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ನೇತ್ರದಾನ ಎಂಬ ವಿಶೇಷತೆಗೂ ಕಾರಣವಾಗಿತ್ತು. ತದನಂತರದಲ್ಲಿ ಬೆಳ್ಳೇಕೇರಿಯ ಕಮಲಾಕ್ಷಿ ಹೆಗಡೆ ಎಂಬ ಬಡತನದಲ್ಲಿ ಬೆಳೆದ ಮಹಿಳೆಯೋರ್ವಳು ನೇತ್ರದಾನ ಮಾಡಿದರು. ಇವರೇ ಇಡಡಿಯ ಗ್ರಾಮದಲ್ಲಿ ನೇತ್ರದಾನ ನಡೆಯಲು ಸ್ಪೂತರ್ಿ. ಇಡಿಯ ಗ್ರಾಮಸ್ಥರ ನೇತ್ರದಾನಕ್ಕೆ ಬೆನ್ನೆಲುಬಾಗಿ ನಿಂತಿದ್ದು ಮುಂಡಿಗೆಸರದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ.
1907ರಲ್ಲಿ ಮುಂಡಿಗೆಸರದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದಯ, 2007ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಶಾಲೆಯ ಶತಮಾನೋತ್ಸವ ವಿಭಿನ್ನವಾಗಿರಬೇಕು ಎಂದುಕೊಂಡು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ನೇತ್ರದಾನ ಅಭಿಯಾನಕ್ಕೆ ಮುಂದಾದರು. ಮೊದಲ ದಿನವೇ 200ಕ್ಕೂ ಹೆಚ್ಚಿನ ಜನರು ತಮ್ಮ ನಯನಗಳನ್ನು ದಾನ ಮಾಡಲು ಹೆಸರು ನೊಂದಾಯಿಸಿದರು. ತದನಂತರದಲ್ಲಿ ದಿನಕಳೆದಂತೆ ಕಣ್ಣುಗಳನ್ನು ದಾನ ಮಾಡಲು ನೊಂದಾಯಿಸಿದವರ ಸಂಕ್ಯೆ 300ನ್ನೂ ಮೀರಿದೆ. ಪ್ರತಿ ಮನೆಯ ಪ್ರತಿ ಸದಸ್ಯರೂ ಕೂಡ ನೇತ್ರದಾನಕ್ಕೆ ಹೆಸರು ನೊಂದಾಯಿಸಿದ್ದಾರೆ ಎಂದು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಹೆಗಡೆ.
ಮುಂಡಿಗೆಸರ ಗ್ರಾಮದಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿರುವುದರಿಂದ ಸ್ಪೂತರ್ಿಯಾಗಿರುವ ಸುತ್ತಮುತ್ತಲ ಯಡಳ್ಳಿ, ಕರಸುಳ್ಳಿ, ಶಿರಸಿಮಕ್ಕಿ, ಕಲ್ಕುಣಿ ಗ್ರಾಮಗಳ ಗ್ರಾಮಸ್ಥರೂ ಕೂಡ ನೇತ್ರದಾನಕ್ಕೆ ಹೆಸರು ನೊಂದಾಯಿಸಿದ್ದಾರೆ. ಉತ್ತರ ಕನ್ನಡದ ಹಳ್ಳಿಗಳಲ್ಲಿ ನೇತ್ರದಾನ ಅಥವಾ ಅಂಗದಾನ ಮಾಡಬಾರದು. ಅಂಗ ಊನವಾಗಬಾರದು ಎಂಬ ನಂಬಿಕೆಯಿದೆ. ಆದರೆ ಈ ನಂಬಿಕೆಯನ್ನೂ ಪಕ್ಕಕ್ಕಿಟ್ಟು ಇಡಿಯ ಗ್ರಾಮವೇ ನೇತ್ರದಾನಕ್ಕೆ ಮುಂದಾಗಿದ್ದು ವಿಶೇಷ. ಹುಬ್ಬಳ್ಳಿಯ ಎಂ. ಎಂ. ಜೋಶಿಯವರ ನೇತ್ರಾಲಯ ಹೆಸರು ನೊಂದಾವಣಿ ಪ್ರಕ್ರಿಯೆಯಲ್ಲಿ ಜೊತೆಗೂಡಿದೆ. ಸಂಪೂರ್ಣ ಗ್ರಾಮದ ಜನರು ನೇತ್ರದಾನ ಮಾಡಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇಂತಹ ಇನ್ನೊಂದು ಗ್ರಾಮವಿಲ್ಲ ಎನ್ನುವುದು ವಿಶೇಷ. ಮುಂಡಿಗೆಸರದ ನೇತ್ರದಾನದ ವಿಶೇಷತೆ ಇದೀಗ ಗೂಗಲ್ ವೀಕಿಪಿಡಿಯಾದಲ್ಲಿಯೂ ಸ್ಥಾನ ಪಡೆದಿದೆ.
ಮುಂಡಿಗೆಸರ ಹಲವು ವಿಶೇಷತೆಗಳ ಆಗರ :
ಸಂಪೂಣ್ ನೇತ್ರಗ್ರಾಮವಾದ ಮುಂಡಿಗೆಸರ ಇನ್ನೂ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಈ ಗ್ರಾಮ ಸಂಪೂಣ್ ವಿಮಾಗ್ರಾಮವೂ ಹೌದು. ಅಲ್ಲದೇ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಖ್ಯಾತಿಯನ್ನೂ ಪಡೆದಿದೆ. 1930ರ ಆಸುಪಾಸಿನಲ್ಲಿಯೇ ವಿಧವಾ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟ ಗ್ರಾಮ ಇದು. ಅಲ್ಲದೇ ಈ ಗ್ರಾಮದಲ್ಲಿ ಸಾಕಷ್ಟು ಸಂಕ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಇದ್ದರು. ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಹರಿಜನರೊಂದಿಗೆ ಮೇಲ್ವರ್ಗದ ಜನರು ಸಹಪಂಕ್ತಿ ಭೋಜನ ಮಾಡಿದ ಖ್ಯಾತಿಯೂ ಈ ಗ್ರಾಮಕ್ಕಿದೆ. ಇದೀಗ ಮುಂಡಿಗೆಸರ ಗ್ರಾಮದಲ್ಲಿ ಹಲವರು ದೇಹದಾನದ ಕಡೆಗೂ ಆಲೋಚನೆ ನಡೆಸುತ್ತಿದ್ದಾರೆ. ಆದರೆ ದೇಹದಾನ ಮಾಡುವುದಕ್ಕೆ ಸಂಬಂಧಪಟ್ಟಂತೆ ಅಗತ್ಯದ ಕ್ರಮ ಕೈಗೊಳ್ಳುವುದು ಹೇಗೆ ಎನ್ನುವುದು ತಿಳಿಯದೇ ಸುಮ್ಮನಿದ್ದಾರೆ. ಇದೀಗ ಸಂಪೂರ್ಣ ನೇತ್ರದಾನ ಮಾಡುವ ಮೂಲಕ ಪ್ರತಿಯೊಬ್ಬರಲ್ಲಿಯೂ ನೇತ್ರದಾನದ ಅರಿವನ್ನು ಮೂಡಿಸುತ್ತಿದೆ. ಪ್ರಚಾರಕ್ಕಾಗಿ ಈ ಕೆಲಸವನ್ನು ಮಾಡದ ಮುಂಡಿಗೆಸರ ಗ್ರಾಮಸ್ಥರು ತಮ್ಮ ಊರು ದೇಶಮಟ್ಟದಲ್ಲಿ ಹೆಸರಾಗಿರುವುದರ ಕುರಿತಂತೆ ಹುಬ್ಬೇರಿಸುತ್ತಾರೆ. ತಮ್ಮ ವಿಶಿಷ್ಟ ಕಾರ್ಯದಿಂದ ಎಲ್ಲರ ಮನಸ್ಸನ್ನು ಈ ಗ್ರಾಮಸ್ಥರು ಸೆಳೆದಿದ್ದಾರೆ.

----------------

ಮುಂಡಿಗೆಸರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿದ್ದಾರೆ. ತಾವು ಮಡಿದ ನಂತರವೂ ತಮ್ಮ ನಯನಗಳು ಜಗತ್ತನ್ನು ನೋಡಲಿ ಎನ್ನುವ ದೃಷ್ಟಿಯಿಂದ ತಮ್ಮ ದೃಷ್ಟಿದಾನ ಮಾಡಿದ್ದಾರೆ. ಇದುವರೆಗೂ ಅದೆಷ್ಟೋ ಜನರ ಕಣ್ಣಿಗೆ ನಮ್ಮೂರಿಗರ ನೇತ್ರಗಳು ಬೆಳಕನ್ನು ನೀಡಿವೆ. ಲಿಮ್ಕಾ ಅಥವಾ ಇನ್ಯಾವುದೇ ದಾಖಲೆ ಆಗಿರಬಹುದು. ಆದರೆ ನಾವಾಗಿಯೇ ಪ್ರಚಾರಕ್ಕೆ ಮುಂದಾಗಿಲ್ಲ. ನಮ್ಮೂರಿನ ಈ ಸಂಗತಿಯನ್ನು ದಾಖಲಿಸಲು ಮುಂದಾದರೆ ಅವರಿಗೆ ಎಲ್ಲ ಮಾಹಿತಿ ನೀಡುತ್ತೇವೆ.
ರವೀಂದ್ರ ಹೆಗಡೆ ಬಳಗಂಡಿ
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ
ಹಾಗೂ ಮುಂಡಿಗೆಸರ ಗ್ರಾಮಸ್ಥರು

Sunday, November 20, 2016

ಕನ್ನಡ ಚಳುವಳಿಗೆ ಮೋಹನ ಭಟ್ಟರ ಪೆನ್ ಬಳುವಳಿ

ಪುಸ್ತಕಗಳನ್ನು, ಸಾಹಿತ್ಯ ಮಾಲಿಕೆಯನ್ನು, ಕಾದಂಬರಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರನ್ನು ನಾವು ಪದೇ ಪದೆ ಕಾಣುತ್ತೇವೆ. ಆದರೆ ಸಾಹಿತ್ಯ ಹೆಚ್ಚು ಹೆಚ್ಚು ಬರೆಯಲ್ಪಡಬೇಕು ಎನ್ನುವ ಕಾರಣಕ್ಕಾಗಿ ಪೆನ್ನುಗಳನ್ನು ಕೊಡುಗೆಯಾಗಿ ನೀಡುವವರು ವಿರಳ. ಅಂತವರಲ್ಲೊಬ್ಬರು ಶಿರಸಿಯ ಮೋಹನ ಭಟ್ಟರು.
ಶಿರಸಿ ನಗರದ ಅಂಬಿಕಾ ಕಾಲೋನಿಯ ನಿವಾಸಿಯಾಗಿರುವ ಮೋಹನ ಭಟ್ಟರು ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಪ್ರೌಢಶಾಲೆಯಲ್ಲಿಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಮೋಹನ ಭಟ್ಟರು ಕನ್ನಡ, ಸಾಹಿತ್ಯದ ಅಭಿವೃದ್ಧಿಗಾಗಿ ಮಾಡುತ್ತಿರುವ ಕಾರ್ಯ ಮಾತ್ರ ಅಮೋಘವಾದುದು. ಕಳೆದ 10 ವರ್ಷಗಳ ಅವಧಿಯಲ್ಲಿ ಮೋಹನ ಭಟ್ಟರು ಸಹಸ್ರಾರು ಪೆನ್ನುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರಣದಿಂದಲೇ ಶಿರಸಿ ಭಾಗದಲ್ಲಿ ಮೋಹನ ಭಟ್ಟರನ್ನು ಪೆನ್ ಮೋಹನ ಭಟ್ ಎಂದೇ ಕರೆಯಲಾಗುತ್ತಿದೆ.
ಶಿರಸಿಯಲ್ಲಿ ಯಾವುದೇ ಸಾಹಿತ್ಯ ಕಾರ್ಯಕ್ರಮಗಳಿರಲಿ, ಆ ಕಾರ್ಯಕ್ರಮದ ನಡುವೆ ವೇದಿಕೆಗೆ ಆಗಮಿಸುವ ಮೋಹನ ಭಟ್ಟರು ವೇದಿಕೆಯ ಮೇಲೆ ಇರುವ ಪ್ರತಿಯೊಬ್ಬ ಗಣ್ಯರಿಗೂ ಕೂಡ ಪೆನ್ ಕಾಣಿಕೆಯಾಗಿ ನೀಡುತ್ತಾರೆ. ಅವರು ಕೊಡುವ ಪೆನ್ನುಗಳೂ ಕೂಡ ಸೀದಾ-ಸಾದಾ ಅಲ್ಲ. ವಿಶಿಷ್ಟ ವಿನ್ಯಾಸವನ್ನು ಹೊಂದಿರುತ್ತದೆ. ಮಾತ್ರೆಯ ಆಕಾರದ ಪೆನ್, ಕತ್ತರಿಯ ಆಕಾರದ ಪೆನ್, ಹೂವಿನ ವಿನ್ಯಾಸದ ಪೆನ್, ಕಿರು ಗಾತ್ರದ ಪೆನ್ ಹೀಗೆ ಅದೆಷ್ಟೋ ಬಗೆ ಬಗೆಯ ಪೆನ್ನುಗಳನ್ನು ಸಂಗ್ರಹಿಸಿ ಅವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
39 ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಮೋಹನ ಭಟ್ಟರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ನೂರಾರು ಮುಸ್ಲಿಂ ಹುಡುಗರಲ್ಲಿ ಕನ್ನಡ ಪ್ರೇಮ ಬೆಳೆಯಲೂ ಕಾರಣರಾಗಿದ್ದಾರೆ. ಇವರು ನೀಡಿದ ಪೆನ್ನಿನಿಂದ ಹಲವು ಪುಸ್ತಕಗಳನ್ನು ಬರೆದವರಿದ್ದಾರೆ. ಮೋಹನ ಭಟ್ಟರು ನೀಡಿದ ಪೆನ್ನಿನಿಂದಲೇ ಸ್ಪೂತರ್ಿ ಪಡೆದುಕೊಂಡಿದ್ದೇನೆ ಎಂದು ಪುಸ್ತಕಗಳ ಮುನ್ನುಡಿಯಲ್ಲಿ ಬರೆದುಕೊಂಡವರೂ ಇದ್ದಾರೆ. ಹದಿ ಹರೆಯದ ಬರಹಗಾರರಿಂದ ಹಿಡಿದು ಹಿರಿಯರ ವರೆಗೆ ಪೆನ್ನುಗಳನ್ನು ಕೊಡುಗೆಯಾಗಿ ನೀಡಿ ಸಾಹಿತ್ಯಕ್ಕೆ ಪೂರಕ ಚಟುವಟಿಕೆಗಳನ್ನು ಮೋಹನ್ ಭಟ್ಟರು ಮಾಡುತ್ತಿದ್ದಾರೆ.
ಮೋಹನ ಭಟ್ಟರು ಕವಿಯೂ ಕೂಡ ಹೌದು. ಅದೆಷ್ಟೋ ಕವಿತೆಗಳನ್ನು ಮೋಹನ ಭಟ್ಟರು ಬರೆದಿದ್ದಾರೆ. ಆದರೆ ಈ ಕವಿತೆಗಳಿನ್ನೂ ಪ್ರಕಟಣೆಯಾಗಿಲ್ಲ. ಪೆನ್ ಕೊಡುಗೆಯಾಗಿ ನೀಡುವ ಭಟ್ಟರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಅಲ್ಲಿ ಪುಸ್ತಕಗಳನ್ನು ಕೊಳ್ಳುತ್ತಾರೆ. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇದ್ದರೆ ಬಿಡುಗಡೆಯಾಗುವ ಪುಸ್ತಕವನ್ನು ಹಣಕೊಟ್ಟು ಖರೀದಿಸಿ ಅದಕ್ಕೆ ಲೇಖಕ ಹಸ್ತಾಕ್ಷರವನ್ನು ಹಾಕಿಸಿಕೊಳ್ಳುತ್ತಾರೆ. ಇಂತಹ ಹಸ್ತಾಕ್ಷರಗಳನ್ನು ಒಳಗೊಂಡ ಸಹಸ್ರ ಸಹಸ್ರ ಪುಸ್ತಕಗಳು ಮೋಹನ ಭಟ್ಟರ ಮನೆಯಲ್ಲಿದೆ.
ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಪರಮೇಶ್ವರ ಭಟ್ಟರಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಅದನ್ನೇ ನಾನೂ ಮೈಗೂಡಿಸಿಕೊಂಡಿದ್ದೇನೆ. ಮನೆಯಲ್ಲಿ ಕನಿಷ್ಟ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ ಎನ್ನುತ್ತಾರೆ ಮೋಹನ್ ಭಟ್. ಕಲಿಕೆಗೆ ಮೂಲ ಪೆನ್. ಸಂಸ್ಕಾರಕ್ಕೆ, ಬರವಣಿಗೆಗೆ ಎಲ್ಲವುಗಳಿಗೂ ಲೇಖನಿ ಬೇಕೆ ಬೇಕು. ನಾನು ಪೆನ್ ಕೊಡುಗೆಯಾಗಿ ನೀಡಿದ್ದು ಕೆಲವರಿಗಾದರೂ ಸ್ಪೂತರ್ಿ ತಂದು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಕೊಂಡರೆ ಅಷ್ಟೇ ಸಾಕು ಎನ್ನುವ ಮೋಹನ ಭಟ್ಟರು ಮುಂದಿನ ದಿನಗಳಲ್ಲಿ ಇನ್ನಷ್ಟು ಪೆನ್ ನೀಡುವುದಾಗಿಯೂ ಹೇಳುತ್ತಾರೆ.
ಸಾಹಿತ್ಯಿಕ ಕುಟುಂಬ :
ಪೆನ್ ಮೋಹನ ಭಟ್ಟರದ್ದು ಸಾಹಿತ್ಯಿಕ ಕುಟುಂಬ. ತಂದೆ ನಾರಾಯಣ ಭಟ್ಟರು ಸ್ವಾತಂತ್ರ್ಯ ಹೋರಾಟಗಾರರು. ಮಹಾತ್ಮಾಗಾಂಧೀಜಿಯವರ ಒಡನಾಡಿಗಳು. ಹಿರಿಯರಾದ ಪ. ಸು. ಭಟ್ ಇವರ ದೊಡ್ಡಪ್ಪನ ಮಗ, ಪ. ಸು. ಭಟ್ಟರ ತಮ್ಮ ಜಿ. ಎಸ್. ಭಟ್ ಹಿರಿಯ ಪತ್ರಕರ್ತರು ಹಾಗೂ ಬರಹಗಾರರು. ಅದೇ ರೀತಿ ಮೋಹನ ಭಟ್ಟರ ಪುತ್ರಿ ಲೀನಾ ಭಟ್ ಇದೀಗ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾತರ್ಿಯಾಗಿ ಹೆಸರು ಮಾಡುತ್ತಿದ್ದಾರೆ. ಇದರ ಜೊತೆಗೆ ಮೋಹನ ಭಟ್ಟರದು ಪತ್ನಿ, ಆಡಿಯೋ ಇಂಜಿ8ನಿಯರ್ ಆಗಿರುವ ಮಗ ವಿವವೇಕ ಅವರೊಂದಿಗಿನ ಸುಖಿ ಕುಟುಂಬ.
ಇಂಗ್ಲೀಷ್ ಮಾಧ್ಯಮಕ್ಕೆ ಜನ ಮರುಳಾಗುತ್ತಿರುವ ಈ ಸಂದರ್ಭದಲ್ಲಿ ಮೋಹನ ಭಟ್ಟರಂತಹ ಕೆಲವು ಅಪರೂಪದ ವ್ಯಕ್ತಿಗಳು ಕನ್ನಡಾಭಿಮಾನ ಬೆಳೆಸುವಲ್ಲಿ ತಮ್ಮ ಕಿರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪೆನ್ ಕೊಡುಗೆಯಾಗಿ ನೀಡುವ ಮೂಲಕ ಲೇಖಕನಲ್ಲಿನ ಸಾಹಿತ್ಯಕ್ಕೆ ಇನ್ನಷ್ಟು ಸ್ಪೂತರ್ಿ ನೀಡುತ್ತಿದ್ದಾರೆ. ತಮ್ಮದೇ ಆದ ಮಾರ್ಗದ ಮೂಲಕ ಕನ್ನಡಾಭಿಮಾನ ಬೆಳೆಸಲು ಕಾರಣಕರ್ತರಾಗುತ್ತಿದ್ದಾರೆ.

-------------------

ತಂದೆಯವರ ಪೆನ್ ಕೊಡುಗೆ ನೀಡುವ ಹವ್ಯಾಸ ಖುಷಿಯಿದೆ. ಅವರು ಪೆನ್ ನೀಡುವುದು ನಮಗೆ ಯಾವಾಗಲೂ ತೊಂದರೆ ಎನ್ನಿಸಿಯೇ ಇಲ್ಲ. ಮನೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪುಸ್ತಕಗಳನ್ನು ಇಟ್ಟಿದ್ದಾರೆ ಎನ್ನುವುದೂ ಕೂಡ ನಮಗೆ ತೊಂದರೆ ತಂದಿಲ್ಲ. ಬದಲಾಘಿ ನಮಗೆ ಬೇಕಾದಂತಹ ಪುಸ್ತಕಗಳು ಸುಲಭವಾಗಿ ಸಿಗುತ್ತದೆ ಎನ್ನುವ ಖುಷಿ ಇದೆ.

ಲೀನಾ ಭಟ್
ಮೋಹನ ಭಟ್ಟರ ಪುತ್ರಿ


Saturday, November 19, 2016

ಅಳಿವಿನಂಚಿನಲ್ಲಿರುವ ಅಳಿಲು ತಂದ ಸಂಕಷ್ಟ / ತೆಂಗು ಬೆಳೆಗಾರರಿಗೆ ಕೆಂಪಳಿಲಿನಿಂದ ನಷ್ಟ

ವಿನಾಶದ ಅಂಚಿನಲ್ಲಿರುವ ಕೆಂಪಳಿಲುಗಳಿಂದ ತೆಂಗು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕೆಂಪು ಅಳಿಲುಗಳ ಕಾಟವನ್ನು ತಡೆಯಲಾರದೇ ತೆಂಗು ಬೆಳೆಗಾರರು ದಿನದಿಂದ ದಿನಕ್ಕೆ ಹೈರಾಣಾಗುತ್ತಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಕೆಂಪು ಅಳಿಲುಗಳನ್ನು ಸ್ಥಳೀಯವಾಗಿ ಕೆಂಜಳಿಲು, ಕೆಂಪು ಬಾಲದ ಅಳಿಲು, ಕೇಶ ಅಳಿಲು ಎಂದೆಲ್ಲ ಕರೆಯುತ್ತಾರೆ. ಮಲಬಾರ್ ಗ್ರೇಟ್ ಸ್ಕ್ವೀರಲ್ ಎಂದು ಕರೆಸಿಕೊಳ್ಳುವ ಇವು ದಶಕಗಳ ಹಿಂದೆ ಹೇರಳವಾಗಿದ್ದವು. ಆದರೆ ಬೇಟೆಗಾರರರ ದುರಾಸೆಗೆ ಬಲಿಯಾಗಿ ಅಳಿವಿನ ಅಂಚನ್ನು ತಲುಪಿದೆ. ಇದೀಗ ಕೇಂದ್ರ ಸರಕಾರವು ಕೆಂಪು ಅಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಈ ಪ್ರಾಣಿ ನಡೆಸುತ್ತಿರುವ ಉಪಟಳವನ್ನು ಸಹಿಸಲಾರದೇ ತೆಂಗು ಬೆಳೆಗಾರ ಕೈಚೆಲ್ಲಿದ್ದಾನೆ.
35 ರಿಂದ 40 ಸೆಂ.ಮಿ ಉದ್ದ ಬೆಳೆಯುವ ಕೆಂಪು ಅಳಿಲುಗಳು ಕಾಡು ಹಣ್ಣುಗಳನ್ನು, ಎಲೆಗಳನ್ನು ಆಹಾರಕ್ಕಾಗಿ ಉಪಯೋಗಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಡುಗಳಲ್ಲಿ ಆಹಾರದ ಅಭಾವ ಎದುರಾಗಿರುವ ಕಾರಣ ನಾಡಿನತ್ತ ಲಗ್ಗೆ ಇಡುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ತೆಂಗಿನ ತೋಟಗಳಿಗೆ ಇವುಗಳು ಲಗ್ಗೆ ಇಡಲು ಆರಂಭಿಸಿವೆ. ಮರದಿಂದ ಮರಕ್ಕೆ ಕುಪ್ಪಳಿಸುತ್ತ, ಜಿಗಿಯುತ್ತ ಸಾಗಿವ ಇವುಗಳು ದಿನವೊಂದಕ್ಕೆ 4-5 ತೆಂಗಿನಕಾಯಿಗಳನ್ನು ಕೊರೆದು, ನೀರನ್ನು ಕುಡಿದು ತೆಂಗಿನ ಕಾಯಿಯ ತಿರುಳನ್ನು ತಿನ್ನುತ್ತಿವೆ. ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟದ ಸಾಲುಗಳ ಜಿಲ್ಲೆಗಳ ಹಲವಾರು ತೆಂಗಿನ ಬೆಳೆಗಾರರು ಕೆಂಪು ಅಳಿಲುಗಳ ಕಾಟದಿಂದ ಬೇಸತ್ತಿದ್ದಾರೆ.
ಸಾಮಾನ್ಯವಾಗಿ ಒಂದು ತೆಂಗಿನ ಮರದಲ್ಲಿ ಒಂದು ವರ್ಷಕ್ಕೆ 100 ತೆಂಗಿನಕಾಯಿಗಳು ಇಳುವರಿಯ ರೂಪದಲ್ಲಿ ಬಂದರೆ ಅದರಲ್ಲಿ ಅರ್ಧಕ್ಕರ್ಧ ಕೆಂಪಳಿಲುಗಳಿಗೆ ಆಹಾರವಾಗುತ್ತಿದೆ. ಕೆಲವು ತೆಂಗಿನ ಮರಗಳಲ್ಲಂತೂ ಕೆಂಪಳಿಲುಗಳು ಕೊರೆದು ತೂತು ಮಾಡಿ ತಿಂದ ತೆಂಗಿನಕಾಯಿಯ ಗೊಂಚಲುಗಳೇ ಕಾಣಸಿಗುತ್ತಿವೆ. ಈಗಾಗಲೇ ನುಸಿಪೀಡೆಯಂತಹ ಹಲವು ಸಮಸ್ಯೆಗಳಿಂದ ತೆಂಗಿನ ಬೆಳೆಯ ಲಾಭವನ್ನು ಬಹುತೇಕ ಕಳೆದುಕೊಂಡಿರುವ ಬೆಳೆಗಾರ ಕೆಂಪು ಅಳೀಲುಗಳ ಕಾಟದಿಂದ ಇದ್ದ ಚಿಕ್ಕ ಲಾಭಾಂಶವನ್ನೂ ಕಳೆದುಕೊಳ್ಳುವ ಹಂತ ತಲುಪಿದ್ದಾನೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳ ಬೇಟೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುತ್ತಿದೆ. ಆದರೆ ನಾಡಿಗೆ ಲಗ್ಗೆ ಇಟ್ಟು ತೆಂಗಿನ ಬೆಳೆಯನ್ನು ನಾಶ ಮಾಡುವ ಅಳಿಲುಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ. ಬೆಳಗಾರರು ಇವುಗಳ ಹಾವಳಿಯನ್ನು ತಡೆಗಟ್ಟಲಾಗದೇ ಕೈಚೆಲ್ಲಿದ್ದಾರೆ. ಕೆಂಪು ಅಳಿಲುಗಳ ಹಾವಳಿ ಇನ್ನಷ್ಟು ಜಾಸ್ತಿಯಾದಲ್ಲಿ ಅವನ್ನು ಬೇಟೆಯಾಡುವುದು ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಕೆಂಪು ಅಳಿಲು ಮುಂತಾದ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಬೇಟೆ ಕಡ್ಡಾಯವಾಗಿ ನಿಷಿದ್ಧ. ಅಲ್ಲದೇ ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ. ಹೀಗಾಗಿ ಅಳಿಲುಗಳನ್ನು ತಡೆಗಟ್ಟುವುದು ಸಾಧ್ಯವಾಗದೇ, ಬೆಳೆ ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿರುವ ಬೆಳೆಗಾರರು ಕಂಗಾಲಾಗಿದ್ದಾರೆ.
ಅರಣ್ಯ ಇಲಾಖೆ ಕೆಂಪು ಅಳಿಲುಗಳು ತೆಂಗಿನ ತೋಟದ ಕಡೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಅಪರೂಪದ ಪ್ರಾಣಿಗಳಿಗೆ ಅಗತ್ಯವಾಗಿರುವ ಹಣ್ಣಿನ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ತೆಂಗಿಗೆ ದಾಳಿ ಇಡುವ ಅಳಿಲುಗಳನ್ನು ಬೆಳೆಗಾರರು ಕೊಲ್ಲುವುದರ ಮೊದಲೇ ಅಧಿಕಾರಿಗಳು ಅವುಗಳ ಸಂರಕ್ಷಣೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ.


----------------

ಕೆಂಪು ಅಳಿಲುಗಳ ಹಾವಳಿ ತೀವ್ರವಾಗಿದೆ. ಇದರಿಂದಾಗಿ ದಿನಂಪ್ರತಿ ಕನಿಷ್ಟ 4-5 ತೆಂಗಿನ ಕಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವರ್ಷವೊಂದರಲ್ಲಿ ಏನಿಲ್ಲ ಎಂದರೂ 500ಕ್ಕೂ ಹೆಚ್ಚು ತೆಂಗಿನಕಾಯಿಗಳು ಅಳಿಲುಗಳ ಬಾಯಿಗೆ ಬೀಳುತ್ತಿವೆ. ಅರಣ್ಯ ಇಲಾಖೆಗೆ ಈ ಕುರಿತು ಹೇಳಿ ಹೇಳಿ ಸಾಕಾಗಿದೆ. ಕೆಂಪು ಅಳಿಲುಗಳು ತೆಂಗಿನ ಬೆಳೆಗೆ ದಾಳಿ ಇಡದಂತೆ ಕ್ರಮ ಕೈಗೊಳ್ಳುವ ಜರೂರತ್ತು ಅರಣ್ಯ ಇಲಾಖೆಯ ಮೇಲಿದೆ.
ನಂದನ ಹೆಗಡೆ
ತೆಂಗು ಬೆಳೆಗಾರ


Monday, November 14, 2016

ಅಸಲಿ ನೋಟುಗಳನ್ನೇ ನಾಚಿಸುವಂತಹ ವಿನ್ಯಾಸ : ಮಾರುಕಟ್ಟೆಗೆ ಬಂದಿದೆ ನೋಟ್ ಪರ್ಸ್

ಹೋದೆಯಾ ನೋಟು ಅಂದರೆ ಬಂದೆ ಪರ್ಸಾಗಿ ಅಂದ್ಲಂತೆ

ನರೇಂದ್ರ ಮೋದಿಯವರೇನೋ 500 ರು ಹಾಗೂ 100 ರು. ನೋಟುಗಳನ್ನು ನಿಷೇಧಿಸಿದ್ದಾರೆ. ಹಳೆಯ ನೋಟುಗಳು ಗತ ವೈಭವವನ್ನು ಸೇರುತ್ತಿವೆ. ಆದರೆ ಜನರ ಮನಸ್ಸಿನಲ್ಲಿ ಮಾತ್ರ ಆ ನೋಟುಗಳು ಇನ್ನೂ ಅಚ್ಚಳಿಯದೇ ಉಳಿದಿವೆ. ಆ ನೋಟುಗಳ ನೆನಪಿನಲ್ಲಿ ಬಗೆ ಬಗೆಯ ವಿನ್ಯಾಸವನ್ನು ರೂಪಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. 500, ರು ಹಾಗೂ 1000 ರು. ನೋಟುಗಳ ಆಕಾರದ ಪರ್ಸ್ ಗಳು ಮಾರುಕಟ್ಟೆಗೆ ಬಂದಿದ್ದು ಎಲ್ಲರ ಮನಸ್ಸನ್ನು ಸೆಳೆಯುತ್ತಿದೆ.
ಕಪ್ಪು ಹಣ ನಿಷೇಧಿಸುವ ಸಲುವಾಗಿ ನರೇಂದ್ರ ಮೋದಿಯವರು ದೇಶದಾದ್ಯಂತ ನೋಟು ನಿಷೇಧವನ್ನು ಕೈಗೊಂಡಿದ್ದಾರೆ. ಆದರೆ ಮಧ್ಯಮ ವರ್ಗದ ಜನರು ಮಾತ್ರ 500 ಹಾಗೂ 1000 ರು. ನೋಟುಗಳ ಜೊತೆಗಿನ ಅವಿನಾಭಾವ ಸಂಬಂಧವನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಕಿರು ಉದ್ದಿಮೆದಾರರು ಈ ನೋಟುಗಳ ನೆನಪಿನಲ್ಲಿ ಪರ್ಸ್ ವಿನ್ಯಾಸ ಮಾಡಿ ಮಾರುಕಟ್ಟೆಗೆ ತಂದಿದ್ದಾರೆ. ನೋಡಲು ಥೇಟ್ ಅಸಲಿ ನೋಟುಗಳಂತೆ ಕಾಣುವ ಈ ಪರ್ಸ್ ಗಳು ಸಾಮಾನ್ಯ ಜನರನ್ನು ಒಂದು ಕ್ಷಣ ಯಾಮಾರಿಸುವಲ್ಲಿ ಸಫಲವಾಗುತ್ತವೆ.
ಈಗಾಗಲೇ ರದ್ದು ಪಡಿಸಿರುವ 500 ರು ಹಾಗೂ 1000 ರು.ಗಳನ್ನು ಬಳಸಿಕೊಂಡು ಪರ್ಸ್ ರೂಪಿಸಲಾಗಿದೆಯೇನೋ ಎನ್ನುವಂತೆ ಕಾಣುವ ಈ ಪರ್ಸ್ ಗಳ ಮುಂಭಾಗ ಹಾಗೂ ಹಿಂಭಾಗದಲ್ಲಿ ನಿಷೇಧಿಸಿರುವ ನೋಟುಗಳಂತೆಯೇ ಇದೆ. ನೋಟುಗಳ ಮೇಲೆ ಇರುವಂತೆ 14 ಭಾಷೆಗಳು, ಮಹಾತ್ಮಾ ಗಾಂಧೀಜಿಯವರ ಪೋಟೋ, ಅಶೋಕ ಸ್ಥಂಭದ ಲಾಂಛನ ಹೀಗೆ ಎಲ್ಲವನ್ನೂ ಹೊಂದಿದೆ. ಆರ್ಬಿಐ ಗವರ್ನರ್ ಅವರ ಸಹಿ, ಜೊತೆಯಲ್ಲಿ ನೋಟಿನ ಮೇಲೆ ಆರ್ಬಿಐ ಮುದ್ರಿಸುವ ರೀತಿಯಲ್ಲಿ ಸಂಖ್ಯೆಗಳೂ ಇದೆ. ಮೇಲ್ನೋಟಕ್ಕೆ ಅಸಲಿಯೆಂಬಂತೆ ಕಾಣುತ್ತದೆಯಾದರೂ ಸೂಕ್ಷ್ಮವಾಗಿ ಗಮನಿಸಿದಾಗ ಈ ನೋಟ್ ಪರ್ಸನ್ನು ತೆಳುವಾದ ಬಟ್ಟೆಯ ಪದರದಿಂದ ಮಾಡಿರುವುದು ಗಮನಕ್ಕೆ ಬರುತ್ತದೆ.
ಶಿರಸಿ ಹಾಗೂ ಹುಬ್ಬಳ್ಳಿಯೆ ಕೆಲವು ಮಳಿಗೆಗಳಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ನೋಟ್ ಪರ್ಸ್ ಗಳು ಮಾರಾಟಕ್ಕೆ ಲಭ್ಯವಿದೆ. ಈಗಾಗಲೇ ನಿಷೇಧವಾಗಿರುವ ನೋಟುಗಳ ಬಗೆಗೆ ಅವಿನಾಭಾವ ಸಂಬಂಧ ಹೊಂದಿರುವವರು, ಚಿಕ್ಕಮಕ್ಕಳು ಈ ಪರ್ಸ್ ಗಳನ್ನು ವಿಶೇಷ ಆಸಕ್ತಿಯಿಂದ ಗಮನಿಸುತ್ತಿದ್ದು, ಅವನ್ನು ಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ 30 ರುಪಾಯಿಗೆ ಒಂದು ನೋಟ್ ಪರ್ಸ್ ಮಾರಾಟವಾಗುತ್ತಿದೆ. ಕಪ್ಪು ಹಣವನ್ನು ಉತ್ತರ ಭಾರತದಲ್ಲಿ ಸುಟ್ಟ ವಿಷಯಗಳು ಬೆಳಕಿಗೆ ಬರುತ್ತಿದೆ. ಅಲ್ಲದೇ ಗಂಗಾನದಿಯಲ್ಲಿ 500 ರು. ಹಾಗೂ 1000 ರು. ನೋಟುಗಳನ್ನು ತೇಲಿ ಬಿಟ್ಟಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಹೀಗಿದ್ದಾಗಲೇ ಈ ರೀತಿಯ ನೋಟ್ ಪರ್ಸ್ ಮಾರುಕಟ್ಟೆಗೆ ಬಂದಿರುವುದು ಜನಸಾಮಾನ್ಯರಲ್ಲಿ ಒಮ್ಮೆ ಅನುಮಾನವನ್ನೂ ಹುಟ್ಟಿಸಿದೆ. ಆದರೆ ಅಂಗಡಿ ಮಾಲೀಕರುಗಳು ನೋಟ್ ಪರ್ಸ್ ನ ಅಸಲಿ ವಿಷಯವನ್ನು ತಿಳಿಸಿದಾಗಲೇ ಸಮಾಧಾನವನ್ನು ಹೊಂದಿದ್ದಾರೆ.
ಒಟ್ಟಿನಲ್ಲಿ ನೋಟುಗಳು ಹೋದೆಯಾ ಎಂದರೆ ಪರ್ಸ್ ನ ರೂಪದಲ್ಲಿ ಮರಳಿ ಬಂದೆ ಎಂಬಂತಾಗಿದೆ. ವಿಶಿಷ್ಟ ವಿನ್ಯಾಸದ ನೋಟ್  ಪರ್ಸ್ ಕೊಳ್ಳಲು ಕೆಲವರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ 500 ರು. ಹಾಗೂ 1000 ರು. ನೋಟುಗಳು ಹೀಗಿದ್ದವು ಎಂಬುದನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲಿ ಎಂದು ನೋಟ್ ಪರ್ಸ್ ಕೊಳ್ಳುವವರು ಅಭಿಪ್ರಾಯಿಸುತ್ತಿದ್ದಾರೆ. ಅಲ್ಲದೇ ಈ ನೋಟು ಪರ್ಸನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ ಎಂದೂ ಹೇಳುತ್ತಾರೆ.
ವಿಶಿಷ್ಟ ನೋಟ್ ಪರ್ಸ್ ಆಕರ್ಷಣೆಗೆ ಕಾರಣವಾಗಿದೆ. ನಿಷೇಧದ ನಡುವೆಯೂ ಹೊಸ ವಿನ್ಯಾಸದ ಮೂಲಕ ಜನರ ಮನಸ್ಸನ್ನು ಇವು ತಲುಪುತ್ತಿವೆ. ತನ್ಮೂಲಕ ನೋಟು ನಿಷೇಧವಾದರೂ ಮಾರುಕಟ್ಟೆಯಲ್ಲಿ ಜೀವಂತವಾಗಿ ಉಳಿದಿದೆ. ಅಚ್ಚರಿಗೆ ಕಾರಣವಾಗಿದೆ.

---------------

ನಾನು ಮಳಿಗೆಯೊಂದರಲ್ಲಿ ಈ ಪರ್ಸನ್ನು ಕಂಡಾಗ ಅಚ್ಚರಿ ಪಟ್ಟಿದ್ದೆ. ಅಸಲಿ ನೋಟಿನಂತೆ ಭಾಸವಾಗಿತ್ತು. ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯಿತು. ಕೂಡಲೇ ನಾನು ಇವನ್ನು ಕೊಂಡಿದ್ದೇನೆ. ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ.
ಮೋಹನ್ ಭಟ್
ಶಿರಸಿ

==============

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

500, 1000 ರು. ನೋಟು ನಿಷೇಧ : ಗುತ್ತಿಗೆದಾರರಿಗೆ ಸಂಕಷ್ಟ, ಗುತ್ತಿಗೆ ಕೆಲಸಕ್ಕೆ ಬಾರದ ಕೆಲಸಗಾರರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 500 ರು ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿ ನಾಲ್ಕು ದಿನಗಳು ಕಳೆದಿದೆ. ಕಳೆದ ನಾಲ್ಕು ದಿನಗಳಿಂದ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಡೆಸುವ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ನೋಟು ನಿಷೇಧದ ಪರಿಣಾಮ ಗುತ್ತಿಗೆದಾರರು ಹಾಗೂ ಕೆಲಸಗಾರರ ಮೇಲೆ ಪರಿಣಾಮವನ್ನು ಉಂಟುಮಾಡಿದೆ.
ರಾಜ್ಯ ಸರಕಾರ ವಿವಿಧ ಇಲಾಖೆಗಳ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲು ಇತ್ತೀಚೆಗೆ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ಕಳೆದ 15 ದಿನಗಳ ಅವಧಿಯಲ್ಲಿ ರಸ್ತೆ ಕಾಮಗಾರಿ, ಹೊಂಡ ತುಂಬುವಿಕೆ, ಕಾಲು ಸಂಕ ನಿಮರ್ಾಣ ಸೇರಿದಂತೆ ಸರಕಾರದ ವಿವಿಧ ಇಲಾಖೆಯ ಅಡಿಯ ಕಾಮಗಾರಿಗಳು ಪ್ರಗತಿಯನ್ನು ಕಂಡಿದ್ದವು. ಟೆಂಡರ್ ಮೂಲಕ ಕಾಮಗಾರಿಗಳ ಗುತ್ತಿಗೆ ಹಿಡಿದ ಗುತ್ತಿಗೆದಾರರು ಕೆಲಸವನ್ನು ಆರಂಭಿಸಿದ್ದರು. ಆದರೆ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟು ನಿಷೇಧಿಸಿದ ಕೂಡಲೇ ಈ ಕಾಮಗಾರಿಗಳೆಲ್ಲ ಅರ್ಧಕ್ಕೆ ನಿಂತುಬಿಟ್ಟಿವೆ.
ಕಾಮಗಾರಿ ನಿಲುಗಡೆಗೆ ಗುತ್ತಿಗೆದಾರರು ಕೊಡುತ್ತಿರುವ ಕಾರಣ ಮಾತ್ರ ಸ್ಪಷ್ಟ. ಗುತ್ತಗೆದಾರರು ಯಾವುದೇ ಕಾಮಗಾರಿಗಳಿದ್ದರೂ ದಿನಗೂಲಿಯ ಲೆಕ್ಕದಲ್ಲಿ ಕೆಲಸಗಾರರನ್ನು ಕರೆಸಿ ಕಾಮಗಾರಿ ಕೈಗೊಳ್ಳುತ್ತಾರೆ. ಮರು ಡಾಂಬರೀಕರಣ ಅಥವಾ ಇನ್ಯಾವುದೇ ಸರಕಾರಿ ಕಾಮಗಾರಿಗಳನ್ನು ಕೈಗೊಳ್ಳುವುದಾದಲ್ಲಿ ಕೃಷಿ ಕೂಲಿಗಿಂತ ಜಾಸ್ತಿ ದಿನಗೂಲಿಯನ್ನು ಈ ಕೆಲಸಗಾರರು ಬಯಸುತ್ತಾರೆ. ಬಹುತೇಕ ಕೆಲಸಗಾರರಿಗೆ 400 ರಿಂದ 500 ರು. ಕೊಡಲೇಬೇಕು. ಇದೀಗ ಕೇಮದ್ರ ಸರಕಾರ 500 ರು. ನೋಟನ್ನು ನಿಷೇಧಿಸಿದೆ. ಈ ಮಾಹಿತಿಯನ್ನು ತಿಳಿದ ದಿನಗೂಲಿ ನೌಕರರು ಗುತ್ತಿಗೆದಾರರು ನೀಡುವ 500 ರು. ನೋಟನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ದಿನಗೂಲಿ ಕೆಲಸಗಾರರಿಗೆ 100 ರುಪಾಯಿಯ ನೋಟುಗಳ ಮೂಲಕ ದಿನಗಲೂಯನ್ನು ನೀಡೋಣವೆಂದರೆ ಗುತ್ತಿಗೆದಾರರ ಬಳಿ ನಿಗದಿತ ಮೊತ್ತದ ಚಿಲ್ಲರೆ ಹಣವಿಲ್ಲ. ಇರುವ ನೋಟನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
ಗುತ್ತಿಗೆದಾರರು ಬ್ಯಾಂಕ್ಗಳಿಗೆ ತೆರಳಿ 500 ರು. ನೋಟಿಗೆ ಬದಲಾಗಿ 100 ರು. ನೋಟನ್ನು ಪಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಬ್ಯಾಂಕುಗಳಲ್ಲಿ ಹೆಚ್ಚಿದ ಜನಜಂಗುಳಿಯಿಂದಾಗಿ ನಿಗದಿತ ಹಣ ಪಡೆಯುವುದೂ ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಪ್ರತಿಯೊಂದು ಕಾಮಗಾರಿ ಕೈಗೊಳ್ಳು ಕನಿಷ್ಟ 25 ದಿನಗೂಲಿ ನೌಕರರ ಅಗತ್ಯವಿದ್ದು ಅವರೆಲ್ಲರಿಗೂ 500 ರು. ನಂತೆ ಕೊಡಬೇಕು. ಈ ಮೊತ್ತವನ್ನು ಬ್ಯಾಂಕಿನಿಂದ ಪಡೆದರೆ, ಬ್ಯಾಂಕಿಗೆ ನಿಗದಿತ ದಾಖಲೆ ಹಾಗೂ ಆದಾಯದ ಮೂಲವನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಹಣದ ಕುರಿತು ಅಧಿಕಾರಿಗಳು ಪ್ರಶ್ನಿಸಿದರೆ ಅವರಿಗೆ ಮಾಹಿತಿಯನ್ನು ಒದಗಿಸುವುದು ಕಷ್ಟವಾಗಬಹುದು. ಹೀಗಾಗಿ ನೋಟಿನ ಸಮಸ್ಯೆ ಮುಗಿಯುವ ವರೆಗೂ ಕಾಮಗಾರಿಗಳನ್ನು ನಿಲ್ಲಿಸಲಾಗುತ್ತದೆ ಎಂಬುದು ಗುತ್ತಿಗೆದಾರರ ಅಭಿಪ್ರಾಯವಾಗಿದೆ.
ಇದಕ್ಕೆ ಪ್ರತಿಯಾಗಿ ದಿನಗೂಲಿ ನೌಕರರು ಹೇಳುವುದೇ ಬೇರೆ. ದಿನಂಪ್ರತಿ 400-500 ರು. ದಿನಗೂಲಿ ನೀಡುತ್ತಿದ್ದರು. ಆದರೆ ನೋಟು ರದ್ದು ಮಾಡಲಾಗಿದೆ. ನಾವು ನೋಟನ್ನು ಪಡೆದರೂ ಅದನ್ನು ಚಲಾವಣೆ ಮಾಡುವುದು ಕಷ್ಟ. ಅಲ್ಲದೇ ದಿನಗೂಲಯ ಮೂಲಕ ಜೀವನ ನಡೆಸುವವರಿಗೆ ಪ್ರತಿದಿನ ಬ್ಯಾಂಕಿಗೆ ಹೋಗಿ ಹಣ ಬದಲಾವಣೆ ಮಾಡುವುದು ಅಸಾಧ್ಯದ ಮಾತು. ಹೀಗಾಗಿ ಗುತ್ತಿಗೆದಾರರ ಬಳಿ 500ರ ನೋಟಿನ ಬದಲಾಗಿ 100ರ ನೋಟುಗಳನ್ನೇ ನೀಡಬೇಕು ಎಂದು ಹೇಳಲಾಗುತ್ತಿದೆ. ಆದರೆ ಗುತ್ತಗೆದಾರರ ಬಳಿಯೂ 100 ನೋಟುಗಳಿಲ್ಲ. ಕಾಮಗಾರಿಗಳು ನಿಲುಗಡೆಯಾಗುವ ಹಂತಕ್ಕೆ ಬಂದಿದೆ. ದಿನಗೂಲಿ ನೌಕರರಿಗೂ ಹಾಗೂ ಗುತ್ತಗೆದಾರರಿಗೂ ಸಮಸ್ಯೆಯಾಗುತ್ತಿದೆ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ವಿವಿಧ ಇಲಾಖೆಗಳ ಇಂಜಿನಿಯರುಗಳು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಿದ್ದಾರೆ. ಆದರೆ ನೋಟುಗಳ ಅಭಾವದಿಂದ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಕೈಗೊಳ್ಳಲಾಗದೇ ಗುತ್ತಿಗೆದಾರರು ಹೈರಾಣಾಗುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಕಾಮಗಾರಿಗಳು ಅರ್ಧಕ್ಕೆ ನಿಂತರೆ ಅವುಗಳ ಗುಣಮಟ್ಟ ಕಾಪಾಡುವುದೂ ಕೂಡ ಸಮಸ್ಯೆಯಾಗುತ್ತದೆ. ನೋಟು ನಿಷೇಧವನ್ನು ಗಮನದಲ್ಲಿ ಇರಿಸಿಕೊಂಡು ಈಗಾಗಲೇ ನಿಗದಿ ಮಾಡಿಸುವ ಸಮಯದಲ್ಲಿ ಸಡಿಲ ನೀತಿಯನ್ನು ಅನುಸರಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ಮೋದಿಯವರು ತೆಗೆದುಕೊಂಡಿರುವ ನಿಧರ್ಾರ ಕೆಲವು ಕಡೆಗಳಲ್ಲಿ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಈ ಸಮಸ್ಯೆಗಳು ಬೇಗನೆ ಪರಿಹಾರವಾಗಲಿ ಎನ್ನುವ ಆಶಯವೂ ಗುತ್ತಿಗೆದಾರರು ಹಾಗೂ ದಿನಗೂಲಿ ನೌಕರರದ್ದಾಗಿದೆ.

-----------------

500 ರು. ನೋಟು ನಿಷೇಧ ಸಾಕಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ದಿನಗೂಲಿ ನೌಕರರಿಗೆ 500 ರು. ನೀಡಿ ಕೆಲಸ ಮಾಡಿಸಿಕೊಲ್ಳಬೇಕಿತ್ತು. ಆದರೆ ಈ ನೌಕರರು 500 ರು. ನೋಟನ್ನು ತೆಗೆದುಕೊಳ್ಳುತ್ತಲೇ ಇಲ್ಲ. ನಮ್ಮ ಬಳಿ ಚಿಲ್ಲರೆ ಇಲ್ಲ. ಹೀಗಾಗಿ ಕೆಲಸಗಾರರಿಗೆ ಹಣ ನೀಡುವುದು ಕಷ್ಟವಾಗುತ್ತಿದೆ. ಕಾಮಗಾರಿಗಳೆಲ್ಲ ನಿಲುಗಡೆಯ ಹಂತ ಬಂದು ತಲುಪಿದೆ. ನರೇಂದ್ರ ಮೋದಿಯವರ ಕೆಲಸದ ಬಗ್ಗೆ ಮೆಚ್ಚುಗೆಯಿದೆ. ಆದರೆ ನಮ್ಮ ಮಟ್ಟಿಗೆ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆ ಶೀಘ್ರ ಪರಿಹಾರವಾಗುವ ನಿರೀಕ್ಷೆಯಲ್ಲಿದ್ದೇವೆ.
ನವೀನಕುಮಾರ
ಗುತ್ತಿಗೆದಾರ

--------------------

(ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Saturday, November 12, 2016

ಸಿಕ್ಕಿತು ಸ್ವಾತಂತ್ರ್ಯ

ಸಿಕ್ಕಿತು ಸ್ವಾತಂತ್ರ್ಯ
ಕೊನೆಗೂ ಸಿಕ್ಕಿತು ಸ್ವಾತಂತ್ರ್ಯ |

ಬಸಿದ ಬೆವರು
ಹರಿದ ನೆತ್ತು
ಕಳೆದ ಜೀವಗಳು, ಸಿಕ್ಕಿತು ಸ್ವಾತಂತ್ರ್ಯ|

ಭಾರತೀಯರ ಛಲ
ಹೋರಾಟದ ಫಲ
ಆಂಗ್ಲನಾಡು ದುರ್ಬಲ, ಸಿಕ್ಕಿತು ಸ್ವಾತಂತ್ರ್ಯ |

ಕಳೆದ ದಾಸ್ಯ
ಸ್ವಾಭಿಮಾನಿಯ ಭಾಷ್ಯ
ರಾಷ್ಟ್ರೀಯತೆಯ ದೃಶ್ಯ, ಸಿಕ್ಕಿತು ಸ್ವಾತಂತ್ರ್ಯ |

ಮೆರೆದ ದೇಶಭಕ್ತಿ
ಮುರಿದ ಕುಟಿಲಯುಕ್ತಿ
ಗೆದ್ದ ಜನರ ಪ್ರೀತಿ, ಸಿಕ್ಕಿತು ಸ್ವಾತಂತ್ರ್ಯ |

ಗಾಂಧೀಜಿಯ ಶಾಂತಿ
ಸುಭಾಷರ ಕ್ರಾಂತಿ
ಸಿಕ್ಕಿತು ಹೊಸ ನೀತಿ, ಸಿಕ್ಕಿತು ಸ್ವಾತಂತ್ರ್ಯ ||

----------------

(ಈ ಕವಿತೆಯನ್ನು ಬರೆದಿರುವುದು 9-08-2006ರಂದು, ದಂಟಕಲ್ಲಿನಲ್ಲಿ, ಅಜಮಾಸು 10 ವರ್ಷಗಳ ಹಿಂದಿನ ಕವಿತೆ ಇದು. ಸ್ವಾತಂತ್ರ್ಯ ಹೋರಾಟದ ಕುರಿತಂತೆ ಆ ದಿನಗಳಲ್ಲಿ ಸುಮ್ಮನೆ ಬರೆದಿದ್ದು. ಓದಿ ಹೇಳಿ )

Thursday, November 10, 2016

500, 1000 ರು. ನೋಟು ನಿಷೇಧ : ದೇವಸ್ಥಾನಗಳ ಹುಂಡಿ ಒಡೆಯಲು ನಿರ್ಧಾರ

ಅರ್ಚಕರು ದೇವಸ್ಥಾನಗಳ ಹುಂಡಿ ಒಡೆಯಲು ಮುಂದಾಗಿದ್ದಾರೆಯೇ? ಹೌದು. ಅಚ್ಚರಿ ಪಡಬೇಡಿ. ಇದು ಮಂಗಳವಾರ ಪ್ರಧಾನಿ ನರೇಂದ್ರ ಮೋಡಿಯವರು ದೇಶದಾದ್ಯಂತ 500 ಹಾಗೂ 100 ರು. ನೋಟು ನಿಷೇಧಿಸಿದ ಪರಿಣಾಮ.
ಎಲ್ಲ ದೇವಸ್ಥಾನಗಳಲ್ಲಿಯೂ ಕಾಣಿಕೆ ಹುಂಡಿಗಳಿರುತ್ತವೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಾಣಿಕೆ ಹುಂಡಿಯಲ್ಲಿ ಹಣವನ್ನು ಹಾಕುತ್ತಾರೆ. ದಿನವಹಿ ಸಾವಿರಾರು ರು.ಗಳವರೆಗೆ ಇಂತಹ ಕಾಣಿಕೆ ಹುಂಡಿಗಳಲ್ಲಿ ಹಣ ಸಂಗ್ರಹವಾಗುತ್ತದೆ. ಇದೀಗ ದೇಶದಾದ್ಯಂತ 500 ರು. ಹಾಗೂ 1000 ರು. ನೋಟುಗಳನ್ನು ರದ್ದುಪಡಿಸಿರುವುದರಿಂದ ಈ ಕಾಣಿಕೆ ಹುಂಡಿಗಳನ್ನು ತೆರೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವವರು ಇಂತಹ ಹುಂಡಿಗಳನ್ನು ತೆರೆಯಲು ಮುಂದಾಗಿದ್ದಾರೆ.
ಪ್ರತಿ ಕಾಣಿಕೆ ಹುಂಡಿಗಳಲ್ಲಿಯೂ ಬಹುಪಾಲು ಚಿಲ್ಲರೆ ಮೊತ್ತ ಸಂಗ್ರಹವಾಗುತ್ತದೆ. ಆಗೊಮ್ಮೆ ಈಗೊಮ್ಮೆ 10, 50 ಹಾಗೂ 100 ರು. ನೋಟುಗಳನ್ನೂ ಕಾಣಿಕೆಯ ಮೊತ್ತದಲ್ಲಿ ಹಾಕಲಾಗುತ್ತದೆ. ಸ್ವಲ್ಪ ಹೆಸರು ಮಾತಿನ ದೇವಸ್ಥಾನಗಳಾದರೆ ಅಂತಹ ದೇವಸ್ಥಾನಗಳ ಕಾಣಿಕೆ ಹುಂಡಿಗೆ ಹಾಕುವ ಮೊತ್ತವೂ ಜಾಸ್ತಿಯಾಗುತ್ತದೆ. ಪ್ರಸಿದ್ಧ ಸ್ಥಳಗಳಲ್ಲಿ 100ಕ್ಕಿಂತ ಹೆಚ್ಚಿನ ಅಂದರೆ 500 ಹಾಗೂ 1000 ರು. ನೋಟುಗಳನ್ನೂ ಕಾಣಿಕೆ ಹಾಕುವುದುಂಟು. ಇದೀಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವುದರಿಂದ ಕಾಣಿಕೆ ಹುಂಡಿಗಳಲ್ಲಿ ಸಂಗ್ರಹವಾಗಿರುವ ಇಂತಹ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಅನಿವಾರ್ಯತೆ ಉಂಟಾಗಿದೆ
           ಡಿಸೆಂಬರ್ 31ರ ಒಳಗೆ ಈ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿಸದೇ ಇದ್ದಲ್ಲಿ ಈ ನೋಟುಗಳು ಬೆಲೆ ಕಳೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಈಗಾಗಲೇ ಕಾಣಿಕೆ ಹುಂಡಿಯನ್ನು ತೆರೆದು ಅದರಲ್ಲಿ ಸಂಗ್ರಹವಾಗಿರುವ 500 ಹಾಗೂ 1000 ರು. ನೋಟುಗಳನ್ನು ವಿಂಗಡಿಸಲು ಮುಂದಾಗಿದೆ. ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ಕಾಣಿಕೆ ಹುಂಡಿಗಳನ್ನು ಒಡೆದು, ನೋಟುಗಳ ವಿಂಗಡಣೆ ಮಾಡಲು ಮುಂದಾಗಿದ್ದಾರೆ.
ಕಾಣಿಕೆ ಹುಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ 500 ಹಾಗೂ 100 ನೋಟುಗಳು ಸಿಗುವುದಿಲ್ಲ. ಚಿಲ್ಲರೆಗಳು ಹಾಗೂ 10, 20ರು ನೋಟುಗಳೇ ಅಧಿಕವಾಗಿರುತ್ತವೆ. ಹುಂಡಿಯನ್ನು ತೆರೆದು ಹುಡುಕಿದರೆ ಒಂದೊಂದು ಹುಂಡಿಗಳಲ್ಲಿ 5-10ರಷ್ಟು ಮಾತ್ರ ದೊಡ್ಡ ಮೊತ್ತದ ನೋಟುಗಳು ಸಿಗಬಹುದು. ಯಾರಾದರೂ ಹರಕೆಯನ್ನು ಹೊತ್ತುಕೊಂಡಿದ್ದರೆ ಅಂತವರು ಮಾತ್ರ ದೊಡ್ಡ ಮೊತ್ತವನ್ನು ಕಾಣಿಕೆ ಹಾಕುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಾತ್ರ ಕಾಣಿಕೆ ಹುಂಡಿಗಳಲ್ಲಿ 500 ರಿಂದ 1000 ರು. ನೋಟುಗಳು ಸಿಗಬಹುದಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿರುವುದು ದೇವಸ್ಥಾನಗಳ ಕಾಣಿಕೆ ಹುಂಡಿಗಳ ಮೇಲೂ ಪರಿಣಾಮವನ್ನು ಬೀರಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಭರ್ತಿಯಾದಾಗ ಮಾತ್ರ ತೆರೆಯಲಾಗುತ್ತದೆ. ಆದರೆ ಮೋದಿಯವರ ಅದೇಶದಿಂದ ಕಾಣಿಕೆ ಹುಂಡಿ ಭರ್ತಿಯಾಗುವ ಮೊದಲೇ ತೆರೆದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಂಡಿ ತೆರೆಯುವ ಆಡಳಿತ ಮಂಡಳಿ ನಿರ್ಧಾರ ಜನಸಾಮಾನ್ಯರಲ್ಲಿ ವಿಸ್ಮಯಕ್ಕೂ ಕಾರಣವಾಗಿದೆ.

-------------

ಚಿಕ್ಕ ದೇವಸ್ಥಾನದ ಹುಂಡಿಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಒಂದು ಸಾರಿಯೋ ಅಥವಾ ಎರಡು ಸಾರಿಯೋ ತೆರೆಯಲಾಗುತ್ತದೆ. ಅಥವಾ ಹುಂಡಿಗಳು ಭರ್ತಿಯಾದಾಗ ತೆರೆಯಲಾಗುತ್ತದೆ. ಆದರೆ ಈಗ 500 ಹಾಗೂ 1000 ರು. ನೋಟುಗಳನ್ನು ರದ್ದು ಪಡಿಸಿರುವ ಕಾರಣ ಹುಂಡಿಗಳನ್ನು ತೆರೆಯಲೇಬೇಖಾದ ಅನಿವಾರ್ಯತೆ ಉಂಟಾಗಿದೆ. ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ಸೇರಿಕೊಂಡಿದ್ದರೆ ಅವುಗಳನ್ನು ಬ್ಯಾಂಕಿಗೆ ನೀಡುವ ಕಾರಣಕ್ಕಾಗಿ ತಪಾಸಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಹುಂಡಿಗಳಲ್ಲಿನ ನೋಟುಗಳು ಯಾರ ಗಮನಕ್ಕೂ ಬಾರದಂತೇ ಬೆಲೆ ಕಳೆದುಕೊಳ್ಳುವ ಸಂದರ್ಭ ಬರಬಹುದಾಗಿದೆ. ಈ ನಿಟ್ಟಿನಲ್ಲಿ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳವರು ಕಾಣಿಕೆ ಹುಂಡಿ ತೆರೆಯುವ ನಿರ್ಕೈಧಾರಗೊಂಡಿದ್ದಾರೆ.
ಶ್ರೀಹರಿ ಭಟ್
ಅರ್ಚಕರು
ಬಾಣಸವಾಡಿ
ಬೆಂಗಳೂರು


(ನ.10ರ ವಿಶ್ವವಾಣಿಯಲ್ಲಿ ಪ್ರಕಟವಾಗಿದೆ)

Thursday, November 3, 2016

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -6

(ಸಮರ್ಥ ರಾಮದಾಸರ ಸಮಾಧಿಯಿರುವ ಮಂದಿರ)
            ಸಂಜಯ ಧ್ಯಾನಸ್ಥನಾದಂತಿದ್ದ. ನಾನು ಅವನ ವೀಡಿಯೋ ಮಾಡುತ್ತಲೇ ಇದ್ದೆ. ಈ ನಡುವೆ ಮೊಬೈಲ್ ಮೆಮೋರಿ ಸಾಕಷ್ಟು ಭರ್ತಿಯಾಗಿ ಮೊಬೈಲ್ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಲು ಆರಂಭಿಸಿತ್ತು. ನಾನು ಸಂಜಯನನ್ನು ಕೂಗಿ ಕರೆದೆ. ಕೆಲ ಕಾಲದ ನಂತರ ಆತ ಹತ್ತಿ ಬಂದ. ನನ್ನ ಮೂಬೈಲನ್ನು ಅವನ ಬಳಿ ಕೊಟ್ಟು ನಾನು ಸಜ್ಜನ ಘಡ ಒಂದು ಮೂಲೆಯ ತುತ್ತ ತುದಿಯಲದಲಿ ಹೋಗಿ ನಿಂತೆ. ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಯಾಯಿತು. ಅಷ್ಟರಲ್ಲಿ ಮೂರ್ನಾಲ್ಕು ಸಾರಿ ತುಂತುರು ಮಳೆ ನಮ್ಮನ್ನು ಸಾಕಷ್ಟು ಒದ್ದೆಯನ್ನು ಮಾಡಿತ್ತು. ಭೋರ್ರೆನ್ನುವ ಗಾಳಿ ಕಿವಿಯ ಮೂಲಕ ನಮ್ಮ ಬೆನ್ನುಮೂಳೆಯ ಆಳವನ್ನು ತಲುಪಿ ನಡುಕ ಹುಟ್ಟಿಸಿತ್ತು.
          ವಾಪಾಸಾದೆವು. ವಾಪಾಸಾದರೆ ಪ್ರಶಾಂತ ಭಾವ ಕಾಣಲೊಲ್ಲ. ಎಲ್ಲೋ ಹೋಗಿರಬೇಕು ಎಂದುಕೊಂಡು ಹುಡುಕಾಡಿದೆವು. ಕಾಣಲಿಲ್ಲ. ಸುತ್ತಮುತ್ತ ಹುಡುಕಿದೆವು. ಊಹೂ ಆತನ ಸುಳಿವಿರಲಿಲ್ಲ. `ಇಂವ ಎತ್ಲಾಗ್ ನಾಪತ್ತೆಯಾದ್ನೋ ಮಾರಾಯಾ..' ಎಂದುಕೊಂಡು ಹುಡಕಾಡುತ್ತಿದ್ದಾಗಲೇ ನನ್ನ ಪೋನ್ ರಿಂಗಣಿಸುತ್ತಿತ್ತು. ನಾನು ಅದನ್ನೆತ್ತಿ ಮಾತನಾಡಿದಾಗ ಪ್ರಶಾಂತ ಭಾವ ತಾನು ರೂಮ್ ತಲುಪಿದ್ದೇನೆಂದೂ, ಅಲ್ಲಿಗೆ ಬರಬೇಕೆಂದೂ ಹೇಳಿದ್ದ.
           ರೂಮಿಗೆ ತೆರಳಿ ಮಧ್ಯಾಹ್ನ ಎಷ್ಟು ಹೊತ್ತಿಗೆ ಹೊರಡುವುದು ಎಂಬುದನ್ನೆಲ್ಲ ಲೆಕ್ಕ ಹಾಕಲು ಆರಂಭಿಸಿದ್ದೆವು. ಸಜ್ಜನಗಡದಲ್ಲಿ ಮದ್ಯಾಹ್ನ ಊಟ ಹಾಕುತ್ತಾರೆ. ಪ್ರಸಾದ ಸ್ವೀಕರಿಸಿದ ಹಾಗೂ ಆಗುತ್ತದೆ. ಅದನ್ನು ಮಾಡಿಯೇ ಸಾಗೋಣ ಎಂದುಕೊಂಡೆವು. ಮದ್ಯಾಹ್ನವಾಗಿತ್ತು. ಯಾರೋ ಒಬ್ಬರು ಊಟಕ್ಕೆ ಕರೆದರು. ನಾವು ಅತ್ತ ತೆರಳಿದೆವು. ನಮ್ಮ ಮನಸ್ಸಿನಲ್ಲಿ ವರದಳ್ಳಿಯಿತ್ತು. ಅಲ್ಲಿಯಂತೆ ಇಲ್ಲಿಯೂ ಊಟ ನೀಡಬಹುದೇನೋ ಎಂದುಕೊಂಡೆವು. ಊಟಕ್ಕೆ ತಟ್ಟೆಯ ಮುಂದೆ ಕುಳಿತಿದ್ದರು. ಯಾರೋ ಒಬ್ಬರು ರಾಮನಾಮವನ್ನು ದೊಡ್ಡದಾಗಿ ಹೇಳಲು ಆರಂಭಿಸಿದರು. ನಾವೂ ದನಿಗೂಡಿಸಿದೆವು.
            ಅನ್ನ ಬಡಿಸುತ್ತಿದ್ದಾರೆಂದುಕೊಂಡು ನಾವು ಕಾದೆವು. ಆದರೆ ಬಡಿಸುತ್ತಿದ್ದವರು ಅನ್ನವನ್ನು ಹಾಕುತ್ತಿರಲಿಲ್ಲ. ಬದಲಾಗಿ ಬೇರೆ ಇನ್ನೇನೋ ಹಾಕಿದಂತೆ ಕಾಣಿಸಿತು. ಅದೇನಿರಬಹುದು ಎನ್ನುವ ಕುತೂಹಲ ನಮ್ಮದಾಗಿತ್ತು. ಹತ್ತಿರ ಬಂದಂತೆಲ್ಲ ಅವರು ಬಡಿಸುತ್ತಿದ್ದುದು ಅನ್ನವಲ್ಲ ಎನ್ನುವುದು ಸ್ಪಷ್ಟವಾಯಿತು. ರವೆ ರವೆಯಾಗಿತ್ತು. ರವೆಯಿಂದ ಮಾಡಿದ ಗಂಜಿಯಿರಬೇಕು ಎಂದುಕೊಂಡೆವು. ನಮಗೂ ಹಾಕಿದರು. ಅದನ್ನು ಕೈಗೆತ್ತಿಕೊಂಡು ಬಾಯಿಗಿಟ್ಟಾಗಲೇ ನಮಗೆ ಸ್ಪಷ್ಟವಾಗಿತ್ತು. ಅದು ರವೆಯಿಂದಲೇ ಮಾಡಿದ್ದರು. ಅನ್ನದಂತೆ ಬೇಯಿಸಿ, ಉಪ್ಪನ್ನು ಹಾಕಿ ನೀಡಿದ್ದರು. ಗಂಜಿಯಷ್ಟು ತೆಳ್ಳಗಿರಲಿಲ್ಲ. ಮೊಟ್ಟಮೊದಲ ಬಾರಿಗೆ ತಿನ್ನುತ್ತಿದ್ದೆವು. ಅದಕ್ಕೆ ಶೇಂಗಾ ಬೆರೆಸಿದ ಮಜ್ಜಿಗೆಯನ್ನು ಸುರುವಿದರು. ನಾವು ಮೆಲ್ಲಿದೆವು. ಮಹಾರಾಷ್ಟ್ರದ ಆಹಾರವಿರಬೇಕು ಎಂದುಕೊಂಡೆವು.
          ಪ್ರಶಾಂತ ಭಾವ ನನ್ನ ಬಳಿ `ವಿನಯಾ.. ನೋಡಾ.. ಮಹಾರಾಷ್ಟ್ರದವರು ಅವರ ಸಂಸ್ಕೃತಿಯನ್ನು ಬಿಟ್ಟುಕೊಡ್ತ್ವಿಲ್ಲೆ. ಆದರೆ ನಾವೇಯಾ ನಮ್ಮ ಸಂಸ್ಕೃತಿ ಬಿಡ್ತಾ ಇದ್ದಿದ್ದು. ವದ್ದಳ್ಳಿಯಲ್ಲಿಯೂ ನಮ್ಮ ಸಂಸ್ಕೃತಿಯ ಆಹಾರ ಮಾಡಿ ಬಡಿಸವು. ಆವಾಗ ಬೆಲೆ ಬರ್ತು ನೋಡು..' ಎಂದು ಉದ್ದನೆಯ ಉಪನ್ಯಾಸವನ್ನು ನೀಡಿದ್ದ. ಸಂಜಯ ಅದಕ್ಕೆ ಅಹುದಹುದೆನ್ನುತ್ತ ತಲೆಯನ್ನಾಡಿಸಿದ್ದ. ಬಾಯಿಗಿಡುವ ಮೊದಲು ಈ ಆಹಾರವ್ಯಾಕೋ ನಮ್ಮ ಹೊಟ್ಟೆಯೊಳಗೆ ಇಳಿಯುವುದಿಲ್ಲ ಎಂದುಕೊಂಡಿದ್ದೆವು. ಆದರೆ ನಂತರ ಅದನ್ನು ಮೆಲ್ಲಿದೆವು. ಸರಾಗವಾಗಿ ಇಳಿಯಿತು. ಇಷ್ಟವಾಯಿತು. ಬೆಲ್ಲದಿಂದ ಮಾಡಿದ ಕಡ್ಲೆಬೇಳೆ ಪಾಯಸವನ್ನೂ ಬಡಿಸಲಾಗಿ ಅದನ್ನೂ ತಿಂದೆವು.
            ಊಟದ ನಂತರ ನಮ್ಮ ನಮ್ಮ ರೂಮಿಗೆ ವಾಪಸಾದೆವು. ಸಜ್ಜನಗಡವನ್ನು ನೋಡಿ ಧನ್ಯರಾಗಿದ್ದೆವು. ಊರಿಗೆ ಮರಳಬೇಕಲ್ಲ ಎಂದುಕೊಂಡೆವು. ನನಗೋ ಹತ್ತಿರದಲ್ಲಿಯೇ ಇದ್ದ ಮಹಾಭಲೇಶ್ವರವನ್ನೋ ಅಥವಾ ಸತಾರಾ ಬಳಿ ಇರುವ ಅಜಿಂಕ್ಯತಾರಾ ಕೋಟೆಯನ್ನೋ ನೋಡುವ ಆಸೆಯಿತ್ತು. ಪ್ರಶಾಂತ ಭಾವ ಪ್ರಯತ್ನಿಸೋಣ ಎಂದಿದ್ದ. ಸಜ್ಜನಗಡದಲ್ಲಿ ನಮಗೆ ಬೇಕಾಗಿದ್ದನ್ನೆಲ್ಲ ಕೊಂಡೆವು. ನಂತರ ಮರಳುವ ಮನಸ್ಸಾಯಿತು. ವಾಪಾಸು ಎಲ್ಲಿಗೆ ಬಂದರೆ ವಾಹನ ಸಿಗುತ್ತದೆ ಎಂದುಕೊಂಡೆವು.
         ಸಜ್ಜನಗಡ ಕ್ರಾಸಿಗೆ ಮದ್ಯಾಹ್ನ ಬಸ್ ಬರುತ್ತದೆ ಎಂದು ಯಾರೋ ಹೇಳಿದ ನೆನಪಿತ್ತು. ಸಜ್ಜನಗಡದಿಂದ ಸೀದಾ ಇಳಿಯಲಾರಂಭಿಸಿದೆವು. ಒಂದು, ಎರಡು ಕಿಲೋಮೀಟರ್ ಇಳಿದ ನಂತರ ಸಜ್ಜನಗಡ ಕ್ರಾಸ್ ಸಿಕ್ಕಿತು. ಅಲ್ಲಿ ಎಷ್ಟೋ ಹೊತ್ತು ಕಾದೆವು. ಊಹೂ ಬಸ್ಸಿನ ಸುಳಿವಿರಲಿಲ್ಲ. ಮಾರ್ಗದಲ್ಲಿ ಬರುತ್ತಿದ್ದ ಕಾರು, ಆಟೋ ರಿಕ್ಷಾಗಳಿಗೆಲ್ಲ ಕೈ ಮಾಡಿದೆವು. ಯಾರೊಬ್ಬರೂ ನಿಲ್ಲಿಸಲಿಲ್ಲ. ಬಹುತೇಕ ಗಾಡಿಗಳು ಭರ್ತಿಯಾಗಿ ಬರುತ್ತಿದ್ದವೆನ್ನಿ. ಬಸ್ ಬರದೇ ಇದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಮೂಡಿತ್ತು. `ವಿನಯಾ... ನಡ್ಕೊಂಡು ಹೋಗೋಣ್ವಾ? ' ಎಂದು ಪ್ರಶಾಂತ ಭಾವ ಮೂರ್ನಾಲ್ಕು ಸಾರಿ ಕೇಳಿದ್ದ. ಸಂಜಯ ಓಕೆ ಅಂದಿದ್ದ. ನಾನೂ ಹೂಂ ಅಂದಿದ್ದೆನಾದರೂ 17 ಕಿ.ಮಿ ನಡೆಯಬೇಕಲ್ಲ ಎಂದು ಹಿಂದೇಟು ಹಾಕಿದ್ದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕಳೆದ ರಾತ್ರಿ ನಿದ್ದೆಗೆಟ್ಟಿದ್ದೆವಲ್ಲ ಹಾಗಾಗಿ ನನಗಂತೂ ಕಣ್ಣು ಕವಿದು ಕವಿದು ಬರಲು ಆರಂಭವಾಗಿತ್ತು. ಅಲ್ಲೊಂದು ಕಡೆ ಕಲ್ಲಿನ ಮೇಲೆ ಕುಳಿತು ತೂಕಡಿಸಹತ್ತಿದ್ದೆ. ಸಂಜಯ ಹಾಗೂ ಪ್ರಶಾಂತ ಭಾವನ ಪಾಡೂ ಇದಕ್ಕಿಂತ ಹೊರತಾಗಿರಲಿಲ್ಲ. ಪ್ರಶಾಂತ ಭಾವ ನಡ್ಕೊಂಡು ಹೋಗೋಣ ಎಂದು ಬಾಯಲ್ಲಿ ಹೇಳುತ್ತಿದ್ದನಾದರೂ ಒಂದೇ ಒಂದು ಹೆಜ್ಜೆ ಹಾಕದೇ ಇರಲು ಇದೇ ಪ್ರಮುಖ ಕಾರಣವಾಗಿತ್ತೆನ್ನಿ.
          ಅರ್ಧ ಗಂಟೆಗೂ ಅಧಿಕ ಕಾಲ ಕಾಯ್ದ ನಂತರ ಬಸ್ ಬಂದಿತ್ತು. ನಮ್ಮ ಕೆಎಸ್ಆರ್ಟಿಸಿಯು 20-25 ವರ್ಷಗಳ ಹಿಂದೆ ಓಡಿಸುತ್ತಿತ್ತಲ್ಲ ಅಂತಹದೇ ಲಟೂರಿ ಬಸ್. 30-35 ಸೀಟಿನ ಬಸ್ಸುಗಳು. ನಾವು 50ಕ್ಕೂ ಹೆಚ್ಚಿನ ಜನ ಕಾಯುತ್ತಿದ್ದೆವು. ಬಸ್ ಖಂಡಿತವಾಗಿಯೂ ಸತಾರಾ ಮುಟ್ಟುವುದಿಲ್ಲ ಎನ್ನುವುದು ಮೇಲ್ನೋಟಕ್ಕೆ ನಮ್ಮ ಭಾವನೆ. ಪ್ರಶಾಂತ ಹಾಗೂ ಸಂಜಯರು ನನ್ನನ್ನು ಮುಂದು ಮಾಡಿ ಬಿಟ್ಟಿದ್ದರು. ಸೀಟು ಹಿಡ್ಕೋ ಎಂದಿದ್ದರು. ನಾನು ಜನಜಂಗುಳಿಯ ಮಧ್ಯ ತಳ್ಳಾಡಿ, ದೂಡ್ಯಾಡಿ ಬಸ್ ಹತ್ತಿ ಮೂರು ಸೀಟು ಹಿಡಿದಿದ್ದೆ. ಕುಳಿತು ನಿದ್ರಿಸಿದ್ದೆ. ಬಸ್ ಹೊರಟ ನೆನಪು/ ಎಚ್ಚರಾಗುವ ವೇಳೆಗೆ ಬಸ್ ಸತಾರಾ ನಗರಿಯನ್ನು ತಲುಪಿತ್ತು. ಬಸ್ ನಿಲ್ದಾಣದ ಕಡೆಗೆ ಮುಖ ಮಾಡಿತ್ತು. ಅಲ್ಲೊಂದು ಕಡೆ ದಢಾರ್ ಎನ್ನುವ ಶಬ್ದ. ಬಾಂಬ್ ಸ್ಪೋಟವಾಯಿತೆ ಎಂದುಕೊಂಡು ನೋಡಿದೆ ನಾನು. ಬಸ್ ಸೀದಾ ರಸ್ತೆ ಪಕ್ಕದ ಕಬ್ಬಿಣದ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಹೊಡೆದ ರಬಸಕ್ಕೆ ಕಂಬ ಡೊಂಕಾಗಿ ಚಾಚಿಕೊಂಡಿತ್ತು. ವಿದ್ಯುತ್ ತಂತಿ ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿಕೊಂಡಿತ್ತು. ನನ್ನ ಆಲೋಚನೆ ಏನೆಂದರೆ ಈಗ ಬಸ್ಸಿಗೆ ಬೆಂಕಿ ಬೀಳುತ್ತದೆ. ಬಸ್ಸಿನಲ್ಲಿ ಕುಳಿತಂತೆಯೇ ನಾವೆಲ್ಲ ಭಸ್ಮವಾಗುತ್ತೇವೆ ಎಂಬುದಾಗಿತ್ತು. ಆದರೆ ಅದ್ಯಾವ ಪವಾಡವೋ. ಹಾಗಾಗಲಿಲ್ಲ. ಬಸ್ಸು ಸುರಳೀತ ಸತಾರಾ ಬಸ್ ನಿಲ್ದಾಣ ತಲುಪಿತು. ಅಲ್ಲಿ ಬಸ್ ಇಳಿದ ತಕ್ಷಣ ಪ್ರಶಾಂತ ಭಾವ ಹಾಗೂ ಸಂಜಯನ ಬಳಿ ನಡೆದ ಘಟನೆಯನ್ನು ಹೇಳಿದೆ. ಆದರೆ ಅವರ್ಯಾರಿಗೂ ನಡೆದಿದ್ದು ಗೊತ್ತೇ ಇರಲಿಲ್ಲ. ಅಷ್ಟು ಗಾಢವಾಗಿ ನಿದ್ದೆ ಹೋಗಿದ್ದರು. ವಿಷಯ ಕೇಳಿ ಅಚ್ಚರಿಪಟ್ಟರು.
          ಸತಾರಾದಿಂದ ಸೀದಾ ಕೊಲ್ಲಾಪುರ ಬಸ್ ಹತ್ತಿದೆವು. ಬಸ್ಸಿನಲ್ಲಿ ಯಥಾ ಪ್ರಕಾರ ನಿದ್ದೆ. ಕೊಲ್ಲಾಪುರದಲ್ಲಿ ವಡಾ ಪಾವ್ ತಿಂದು ಮತ್ತೆ ಬಸ್ ಹತ್ತಿದ ನಮಗೆ ಯಥಾ ಪ್ರಕಾರ ನಿದ್ರಾರಾಣಿ ತಬ್ಬಿಕೊಂಡಿದ್ದಳು. ಬೆಳಗಾವಿಗೆ ಬರುವ ವೇಳೆಗೆ ರಾತ್ರಿಯ 9 ಗಂಟೆ. ಅಲ್ಲೊಂದು ಕಡೆ ಮೂವರೂ ಊಟ ಮುಗಿಸಿದೆವು. ಶಿರಸಿಗೆ ಬರಲು ನಮಗೆ ಡೈರೆಕ್ಟ್ ಬಸ್ ಇದೆಯಾ ಎಂಬ ಕುತೂಹಲ. ಬಸ್ ಇರಲಿಲ್ಲ. ಹುಬ್ಬಳ್ಳಿಯ ಕಡೆಗೆ ಮುಖ ಮಾಡಿದೆವು. ಮತ್ತೆ ನಿದ್ದೆ ಮಾಡಿ ಹುಬ್ಬಳ್ಳಿ ತಲುಪುವ ವೇಳೆಗೆ ರಾತ್ರಿ 1 ಗಂಟೆಯಾಗಿತ್ತು. ಅಲ್ಲಿಂದ ನಾನು ಹಾಗೂ ಸಂಜಯ ಶಿರಸಿಗೂ, ಪ್ರಶಾಂತ ಭಾವ ಗುಳ್ಳಾಪುರಕ್ಕೂ ತೆರಳಬೇಕಿತ್ತು. ನಮಗೆ ಬಸ್ ಇದ್ದರೂ ಪ್ರಶಾಂತ ಭಾವನಿಗೆ ಬಸ್ ಕಾಣಿಸಲಿಲ್ಲ. ಕೊನೆಗೆ ಕಾರವಾರಕ್ಕೆ ತೆರಳುವ ಯಾವುದೋ ಪೇಪರ್ ಗಾಡಿ ಕಾಣಿಸಿತು. ಪ್ರಶಾಂತ ಭಾವ ಅದರಲ್ಲಿ ಹೊರಟ. ಅವನನ್ನು ಕಳಿಸಿದ ನಾವು ಯಾವುದೋ ಬಸ್ ಹತ್ತಿದೆವು. ಕಣ್ಣಿನಲ್ಲಿ ಸಜ್ಜನಗಡದ ನೆನಪು. ಸುಳಿದು ಬರುತ್ತಿದ್ದ ನಿದ್ದೆ. ಕನಸೊಂದು ಮನದಲ್ಲಿ ಅರಳುತ್ತಿತ್ತು.
           ಶಿರಸಿಗೆ ಬಂದು ರೂಮಿಗೆ ಹೋಗಿ ಮಲಗುವ ವೇಳೆಗೆ ಬೆಳಗಿನ ಜಾವ 4 ಗಂಟೆ. ಮುಂದಿನ ವರ್ಷ, ಅಷ್ಟೇ ಏಕೆ ಪ್ರತಿ ವರ್ಷ ಸಜ್ಜನಗಡಕ್ಕೆ ಸಾಧ್ಯವಾದರೆ ಬರುತ್ತೇವೆ ಎಂದುಕೊಂಡು ನಾವು ನಿಶ್ಚಯಿಸಿದೆವು. ಈ ಪ್ರಯಾಣದ ನಂತರ ಇನ್ನೊಮ್ಮೆ ನಾವು ಸಜ್ಜನಗಡಕ್ಕೆ ಹೋಗಿ ಬಂದೆವು. ಆ ಸಾರಿ ನಾನು ಪ್ರಶಾಂತ, ಗುರುಪ್ರಸಾದ (ಭಾಮಿಷಿ ಷಟ್ಪದಿಯಲ್ಲಿ ಶ್ರೀಧರ ಸ್ವಾಮಿಗಳ ಚರಿತ್ರೆ ಬರೆಯುತ್ತಿರುವ ಕಲ್ಲಾರೆ ಗುರು) ಹಾಗೂ ನಮ್ಮೂರಿನ ನಾಗರಾಜ ಹೋಗಿ ಬಂದೆವು. ಸಂಜಯ ತಪ್ಪಿಸಿಕೊಂಡಿದ್ದ. ಒಟ್ಟಿನಲ್ಲಿ ಮೊಟ್ಟ ಮೊದಲ ಸಾರಿ ಹೋಗಿದ್ದ ಸಜ್ಜನ ಗಡ ಪ್ರವಾಸದ ನೆನಪು ಮನಸ್ಸಿನಲ್ಲಿ ಹಸಿಯಾಗಿಯೇ ಉಳಿದಿದೆ.

(ಮುಗಿಯಿತು)      

Friday, October 7, 2016

ಮಾಸ್ತರ ಮಂದಿ -11

ಪಿಬಿಎನ್ :

          ಪರಶುರಾಮಪ್ಪ  ಎಂಬ ಹೆಸರಿನ ಪಿಬಿಎನ್ ನಮ್ಮ ಹೈಸ್ಕೂಲು ದಿನಗಳಲ್ಲಿ ಭಯಾನಂಕ ಮಾಸ್ತರ್ ಎಂದೇ ಖ್ಯಾತಿಯಾಗಿದ್ದರು. ಪರಶುರಾಮಪ್ಪ ಅವರ ನೆನಪಾದರೆ ಸಾಕು ಅವರ ಬೆತ್ತದ ಏಟು ನೆನಪಾಗುತ್ತಿತ್ತು. ನನಗಂತೂ ಅವರ ಬಗ್ಗೆ ಮತ್ತಷ್ಟು ಭಯವೇ ಬಿಡಿ.
           ನಾನು ಕಾನಲೆಯ ಸರಕಾರಿ ಪ್ರೌಢಶಾಲೆಗೆ ಸೇರುತ್ತೇನೆ ಎಂದು ನಿಶ್ಚಯಸಿದ ಸಂದರ್ಭದಲ್ಲಿ ದೊಡ್ಡಪ್ಪ ಕಲ್ಲಾರೆ ಕೃಷ್ಣಪ್ಪ, ಗುರಣ್ಣ ಹಾಗೂ ಗಿರೀಶಣ್ಣರು ಪಿಬಿಎನ್ ಅವರ ಬಗ್ಗೆ ಹಾಗೂ ಅವರ ಸಿಟ್ಟಿನ ಬಗ್ಗೆ, ಅವರು ಹೊಡೆಯುವ ಹೊಡೆತಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಭೀತಿಯನ್ನು ಹುಟ್ಟಿಸಿದ್ದರು. ಪಿಬಿಎನ್ ಅವರು ವಿಜ್ಞಾನ ವಿಷಯದ ಶಿಕ್ಷಕರೆಂದೂ ಸರಿಯಾಗಿ ಕಲಿಯದೇ ಇದ್ದರೆ ಮೊದ ಮೊದಲು ಬೆನ್ನಮೇಲೆ ಗುದ್ದುವರೆಂದೂ ನಂತರ ಶೆಳಕೆಯನ್ನು ಹುಡಿಗರೆಯುವರೆಂದೂ ಹೇಳಿದ್ದರು. ತಾನೂ ಸಾಕಷ್ಟು ಹೊಡೆತ ತಿಂದು ಕೈ ಕೆಂಪಗೆ ಮಾಡಿಕೊಂಡಿದ್ದೇನೆ ಎಂದು ಗಿರೀಶಣ್ಣ ಹೇಳಿದ್ದ. ಕಾಲ ಮೇಲೆಲ್ಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ ಎಂದೂ ಹೇಳಿದ್ದ. ನಾನು ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ನನಗೆ ಅವರಿಂದ ಸಾಕಷ್ಟು ಹೊಡೆತಗಳು ಬೀಳಲಿಲ್ಲ ಬಿಡಿ. ಆದರೆ ನನ್ನ ಜೊತೆಯ ಹುಡುಗರಿಗೆಲ್ಲ ಸಿಕ್ಕಾಪಟ್ಟೆ ಹೊಡೆತಗಳು ಬಿದ್ದಿದ್ದವು. ಆಗಲೇ ನನಗೆ ಅವರ ಬಗ್ಗೆ ಭಯವಿತ್ತು.
          ಪರಶುರಾಮಪ್ಪ ಮಾಸ್ತರ್ ಅವರಿಂದ ನಾನು ಮೊಟ್ಟ ಮೊದಲ ಸಾರಿ ಹೊಡೆತ ತಿಂದಿದ್ದು ಸದಾ ಕಾಲ ಜ್ಞಾಪಕದಲ್ಲಿ ಇರುತ್ತದೆ. ನನ್ನ ಕ್ಲಾಸಿನಲ್ಲಿ ಒಬ್ಬ ಹುಡುಗ  ಇದ್ದ. ಅವನ ಹೆಸರೂ ಪರಶುರಾಮ ಎಂದೇ. ಹತ್ತಿರದ ಪಡವಗೋಡು ಎಂಬ ಊರಿನವನು. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಅವನ ಅಪ್ಪನ ಹೆಸರು ಹೇಳಿದರೆ ಅವನಿಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಗಾಮ ಎಂಬುದು ಆತನ ತಂದೆಯ ಹೆಸರಾಗಿತ್ತು. ನನ್ನದೇ ಕ್ಲಾಸಿನಲ್ಲಿ ಅನೇಕ ಗೆಳೆಯರು ಆತನಿಗೆ ಗಾಮ ಎಂದು ಕರೆದು ಛೇಡಿಸುತ್ತಿದ್ದರು. ಆತ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅದೇ ಸಂದರ್ಭದಲ್ಲಿ ಚಿತ್ರನಟ ಉಪೇಂದ್ರ ನಟನೆಯ ಉಪೇಂದ್ರ ಸಿನೆಮಾ ಸಿಕ್ಕಾಫಟ್ಟೆ ಹಿಟ್ ಆಗಿತ್ತು. ಅದರಲ್ಲೂ ಆ ಸಿನೆಮಾದ ಗಾಮ ಗಾಮ ಗಾ.. ಎಂಬ ಹಾಡೂ ಕೂಡ ಅಷ್ಟೇ ಹಿಟ್ ಆಗಿತ್ತು. ಆದಿನ ನಾನು ಹೈಸ್ಕೂಲಿನ ವಿಶ್ರಾಂತಿ ಸಮಯದಲ್ಲಿ ದೊಡ್ಡದಾಗಿ ಗಾಮ ಗಾಮ ಗಾ ಎಂದು ಹಾಡುತ್ತ ಬರುತ್ತಿದ್ದೆ. ನಿಜಕ್ಕೂ ನನಗೆ ಪರಶುರಾಮನನ್ನು ಕಾಲೆಳೆಯುವ ಉದ್ದೇಶವಿರಲಿಲ್ಲ. ಆದರೆ ನಾನು ಹಾಡುತ್ತಿದ್ದ ಹಾಡು ಆತನಿಗೆ ಕೇಳಿಸಿರಬೇಕು. `ತಡೀ ಲೇ.. ನಿನ್ನಾ..'ಎಂದವನೇ ನನ್ನನ್ನು ಬೆನ್ನಟ್ಟಿಕೊಂಡು ಬಂದ. ನಾನು ಓಡುವುದರಲ್ಲಿ ಶೂರ. ಅವನು ಬೆನ್ನಟ್ಟಿದಂತೆಲ್ಲ  ಇಡಿಯ ಮೈದಾನವನ್ನು ಸುತ್ತಾಡಿಸಿದೆ. ಆತನೂ ಬೆನ್ನತ್ತಿದ್ದ. ಕೊನೆಗೆ ನಾನು ಸೀದಾ ಹೈಸ್ಕೂಲ್ ಆವರಣದ ಒಳ ಹೊಕ್ಕಿದ್ದೆ. ದುರದೃಷ್ಟವಶಾತ್ ಸ್ಟಾಪ್ ರೂಮನ್ನು ದಾಟಿ ಮುಂದಕ್ಕೆ ಓಡಬೇಕು ಎನ್ನುವಷ್ಟರಲ್ಲಿ ಸ್ಟಾಪ್ ರೂಮಿನ ಬಾಗಿಲಿನ ಅಂಚಿಗೆ ನನ್ನ ಕಾಲು ಬಡಿದಿತ್ತು. ದಬಾರನೆ ಬಿದ್ದೆ. ಪರಶುರಾಮ ನಾನು ಬಿದ್ದಿದ್ದನ್ನು ನೋಡಿ ಹೆದರಿ ಓಡಿ ಹೋದ. ನಾನು ಎದ್ದು ನೋಡುತ್ತೇನೆ ಅಲ್ಲೆಲ್ಲ ರಕ್ತಮಯ. ಕಾಲು ಒಂದೆಡೆ ದೊಡ್ಡದಾಗಿ ಗಾಯವಾಗಿತ್ತು. ರಕ್ತ ಸುರಿಯುತ್ತಿತ್ತು. ನಾನು ಬಿದ್ದಿದ್ದನ್ನು ನೋಡಿ ಒಂದಿಬ್ಬರು ಶಿಕ್ಷಕರು ಬಂದು ನನ್ನನ್ನು ಎತ್ತಿದರು. ನಂತರ ನನಗಾಗಿದ್ದ ಗಾಯಕ್ಕೆ ಔಷಧಿಯನ್ನು ಸವರಿದರು. ನಂತರ ವಿಚಾರಿಸಲಾಗಿ ನಾನು ನಡೆದಿದ್ದನ್ನು ಹೇಳಿದ್ದೆ.
           ಅದಾಗಿ ಒಂದು ತಾಸಿನ ನಂತರ ನಮಗೆ ಪರಶುರಾಮಪ್ಪ ಮಾಸ್ತರರ ತರಗತಿಯಿತ್ತು. ಕ್ಲಾಸಿಗೆ ಬಂದವರೇ ಪರಶುರಾಮನನ್ನು ನಿಲ್ಲಿಸದರು. `ವಿನಯ ಹೆಗಡೆ ಯಾರಲೇ..' ಎಂದರು. ನಾನು ಎದ್ದು ನಿಂತೆ. ದೋಸ್ತ ಪ್ರದೀಪನನ್ನು ಕರೆದು `ಲೇ ಬಟಾ.. ಎರಡು ದೊಡ್ಡ ಕೋಲನ್ನ ತಗಂಡು ಬಾರಲೇ..' ಎಂದರು. ನನಗೆ ಎದೆ ಹೊಡೆದುಕೊಳ್ಳಲು ಆರಂಭವಾಗಿತ್ತು. ಪ್ರದೀಪ ಕೋಲನ್ನು ತಂದ. `ಲೇ ಬಟಾ ಕೈ ಉದ್ದ ಮಾಡಲೇ..' ಎಂದರು. ಪ್ರದೀಪ ಕೈ ಉದ್ದ ಮಾಡಿದ್ದ. ರಪ್ಪೆಂದು ಬಡಿದಿದ್ದರು. `ಅಯ್ಯಮ್ಮಾ..' ಎಂದು ಪ್ರದೀಪ ಹೊಯ್ಕಂಡಿದ್ದ. ಕೋಲು ಮುರಿದಿತ್ತು. ಏನೂ ತಪ್ಪು ಮಾಡದಿದ್ದ ಹುಡುಗರಿಗೆ ಹೊಡೆಯುವ ಗುಣವೂ ಅವರಲ್ಲಿ ಇತ್ತು. ನಂತರ ಪರಶುರಾಮನ ಕರೆದು ಕೈ ಉದ್ದ ಮಾಡೆಂದು ಹೇಳಿ ಸಮಾ ನಾಲ್ಕೈದು ಏಟು ಹೊಡೆದರು. ನಂತರ ನನ್ನ ಬಳಿ ಬಂದರು. `ಏನಲೇ ಗಾಂಡ್ ಮಸ್ತಿ ಮಾಡ್ತೀಯೇನಲೇ..' ಎಂದರು. ರಪ್ಪಂತ ಕೈ ಮೇಲೆ ಹೊಡೆದರು. ನನಗೂ ಒಂದು ಸಾರಿ ಏನಾಗುತ್ತಿದೆ ಎಂಬುದು ಅರಿವಾಗಲೇ ಇಲ್ಲ. ಕಣ್ಣಲ್ಲಿ ನೀರು ಬಂದಿತ್ತು. `ಇನ್ನೊಂದು ಸಾರಿ ಈ ಥರ ಆದರೆ ನೋಡಿ..' ಎಂದರು. ನಂತರ ಯಥಾ ಪ್ರಕಾರ ಅವರ ತರಗತಿ ಶುರು ಹಚ್ಚಿಕೊಂಡಿದ್ದರು. ನನಗೆ ಗಾಯದ ಉರಿ ಬೇರೆ. ಅವರು ಹೊಡೆದ ನೋವು ಬೇರೆ.
             ಇದಾದ ನಂತರ ಬೆಳಿಗ್ಗೆ ಮುಂಜಾನೆ ಹೈಸ್ಕೂಲಿನಲ್ಲಿ ಪ್ರಾರ್ಥನೆಗೆ ನಿಂತ ಸಮಯದಲ್ಲೆಲ್ಲ ನಾನು `ದೇವರೆ ಇವತ್ತು ಏನಾದರೂ ಮಾಡಿ ಪಿಬಿಎನ್ ಹೈಸ್ಕೂಲಿಗೆ ಬರದೇ ಇರುವ ಹಾಗೆ ಮಾಡಪ್ಪಾ.. ಅವರ ಬೈಕ್ ಪಂಚರ್ ಆದರೂ ಆಗಲಿ..' ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡಿದ್ದೂ ಉಂಟು. ಇದರ ನಡುವೆಯೇ ಮತ್ತೊಂದು ಸಮಸ್ಯೆಯೂ ನಮಗೆ ಕಾಡುತ್ತಿತ್ತು. ಆವರ ಬಹುತೇಕ ತರಗತಿಗಳೂ ಮಧ್ಯಾಹ್ನ 2 ಗಂಟೆಗೆ ಇರುತ್ತಿದ್ದವು. ನಾವು ಊಟ ಮಾಡಿ ಹೈಸ್ಕೂಲಿಗೆ ಬಂದ ತಕ್ಷಣ ಶುರುವಾಗುತ್ತಿದ್ದುದೇ ಅವರ ಕ್ಲಾಸ್. ತರಗತಿಯ ನಡುವೆ ನಮಗೆಲ್ಲ ವಿಪರೀತ ತೂಕಡಿಕೆ ಕಾಡುತ್ತಿತ್ತು. ಒಂದಿಬ್ಬರು ಕುಳಿತಲ್ಲಿಯೇ ನಿದ್ರೆಯನ್ನೂ ಮಾಡಿದ್ದುಂಟು. ಆದರೆ ಇದು ಕಣ್ಣಿಗೆ ಬಿದ್ದರೆ ಸಾಕು ಪರಶುರಾಮಪ್ಪ ಮಾಸ್ತರ್ ನಮ್ಮ ಕೈಯನ್ನು ಉರಿ ಉರಿಗೊಳಿಸುತ್ತಿದ್ದರು.
           ನಂತರದ ದಿನಗಳಲ್ಲಿ ನಾವು ಸಾಕಷ್ಟು ಹೊಡೆತಗಳನ್ನು ತಿಂದದ್ದು ಉಂಟು ಬಿಡಿ. ವಿಜ್ಞಾನವನ್ನು ಅಷ್ಟೇ ಚನ್ನಾಗಿ ಅವರು ಬೋಧಿಸುತ್ತಿದ್ದರು. ಇದಕ್ಕಿಂತ ಹೊರತಾಗಿ ಇನ್ನೂ ಹಲವು ವಿಶೇಷ ಗುಣಗಳಿದ್ದವು. ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿ ಅವರದ್ದು ಎತ್ತಿದ ಕೈ ಆಗಿತ್ತು. ಶಾರದಾ ಪೂಜೆ ಮಾಡಿಸುವುದು, ಗಣೇಶೋತ್ಸವ ಮಾಡಿಸುವುದು, ಪ್ರವಾಸ ಹೊರಡಿಸುವುದು ಇತ್ಯಾದಿಗಳು.
            `ಲ್ಯೇ.. ಹೆಗಡೆ..' ಎಂದೇ ನನ್ನನ್ನು ಕರೆಯುತ್ತಿದ್ದ ಪರಶುರಾಮಪ್ಪರಿಗೆ ಒಂಭತ್ತು ಹಾಗೂ ಹತ್ತನೆ ತರಗತಿಯ ವೇಳೆಗೆಲ್ಲ ನಾನು ಆಪ್ತನೇ ಆಗಿದ್ದೆ. ವಿಜ್ಞಾನದ ಚಿತ್ರಗಳನ್ನು ಬಹಳ ಸುಂದರವಾಗಿ ಬಿಡಿಸಿ ಬಣ್ಣ ತುಂಬುತ್ತಿದ್ದ ಕಾರಣ ನಾನು ಅವರ ಆಪ್ತನಾಗಿದ್ದೆ ಎಂದರೆ ತಪ್ಪಿಲ್ಲ ಬಿಡಿ. ಒಂಭತ್ತನೇ ತರಗತಿಯಲ್ಲಿ ಇದ್ದಾಗಲೇನೋ ಒಮ್ಮೆ ಹೈಸ್ಕೂಲಿಗೆ ಇನ್ಸ್ಫೆಕ್ಷನ್ನಿಗೆ ಮೇಲಧಿಕಾರಿಗಳು ಬಂದಿದ್ದರು. ಅದೇ ಸಂದರ್ಭದಲ್ಲಿ ಪರಶುರಾಮಪ್ಪನವರು ಮೊದಲೇ ನನಗೆ ಕರೆದು ಕೆಲವು ಪ್ರಶ್ನೆ ಕೇಳುತ್ತೇನೆ. ಸರಿ ಉತ್ತರ ಕೊಡಬೇಕು. ಇಲ್ಲವಾದರೆ ಐತಲೇ ನಿನಗೆ ಎಂದು ಬೆದರಿಸಿದ್ದರು. ನಾನು ಬೆವೆತು ಹೋಗಿದ್ದೆ. ಮೇಲಧಿಕಾರಿಗಳು ಬಂದರು. ಪಿಬಿಎನ್ ತರಗತಿ ಶುರುಮಾಡಿದರು. `ಮೂತ್ರಪಿಂಡ' ವಿಷಯದ ಕುರಿತು ತರಗತಿ. ಚಿತ್ರ ಬಿಡಿಸಿ ಪಾಠ ಮಾಡಿದರು. ಪಿಬಿಎನ್ ಅವರೇ ಆಯ್ದ ವಿದ್ಯಾರ್ಥಿಗಳ ಬಳಿ ಪ್ರಶ್ನೆಗಳನ್ನೂ ಕೇಳಿದರು. ಹಲವರು ಉತ್ತರ ಹೇಳಿದರು. ನಂತರ ಮೇಲಧಿಕಾರಿ ಯಾರಾದರೂ ಒಬ್ಬರು ಬೋರ್ಡಿನ ಮೇಲೆ ಮೂತ್ರಪಿಂಡದ ಚಿತ್ರ ಬಿಡಿಸಿ ಎಂದರು. ಎಲ್ಲರೂ ಸುಮ್ಮನೆ ಕುಳಿತರು. ಕೊನೆಗೆ ಪಿಬಿಎನ್ ನನ್ನನ್ನು `ಲೇ ಹೆಗಡೆ. ಬಾರಲೇ.. ಚಿತ್ರ ಬಿಡಿಸು..' ಎಂದರು. ನಾನು ಅಳುಕುತ್ತಲೇ ಹೋಗಿ ಚಿತ್ರ ಬಿಡಿಸಿದೆ. ಚನ್ನಾಗಿ ಬಂದಿತ್ತು. ನನಗೂ ಖುಷಿಯಾಗಿತ್ತು. ಪಿಬಿಎನ್ ಅವರೂ ಖುಷಿಯಾಗಿದ್ದರು. ಮೇಲಧಿಕಾರಿ ಗುಡ್ ಎಂದೂ ಹೇಳಿ ಹೋದರು. ಅವರು ಅತ್ತ ಹೋದ ನಂತರ `ಮಗನೆ ಉಳಕಂಡೀಯಲೆ ಇವತ್ತು..' ಎಂದರು. ನಾನು ನಿರಾಳನಾಗಿದ್ದೆ.
             ಇಂತಹ ಪಿಬಿಎನ್ ಅವರ ಇನ್ನೊಂದು ಗುಣವೆಂದರೆ ಪರೀಕ್ಷೆಗಳಲ್ಲಿ ಮೊದಲಿನದ್ದಕ್ಕಿಂತ ಕಡಿಮೆ ಅಂಕಗಳು ಬಿದ್ದರೆ ಹೊಡೆಯುತ್ತಿದ್ದರು. ಪ್ರತೀ ಪರೀಕ್ಷೆಗಳಲ್ಲಿ ಹಿಂದಿನದ್ದಕ್ಕಿಂತ ಕಡಿಮೆ ಅಂಕ ಬಿದ್ದರೆ ಹೊಡೆತ ಬೀಳುತ್ತಿತ್ತು. ಬಹುಶಃ ಅವರ ಕೈಯಿಂದ ಅಂಕಗಳ ವಿಷಯದಲ್ಲಿ ಕಡಿಮೆ ಹೊಡೆತಗಳನ್ನು ತಿಂದವರ ಪೈಕಿ ನಾನು, ಆಶಾ, ರವಿ, ರಾಘವೇಂದ್ರ, ಕಿರಣ ಹಾಗೂ ಇನ್ನೊಂದೆರಡು ಮೂರು ಮಂದಿ ಇರಬೇಕು ಅಷ್ಟೇ.
             ಕೆಲವು ವಿಷಯಗಳ ಬಗ್ಗೆ ಪಿಬಿಎನ್ ಅವರ ಮೇಲೆ ನನಗೆ ಬೇಜಾರೂ ಇದೆ ಬಿಡಿ. ಎಸ್ಎಸ್ಎಲ್ಸಿಯಲ್ಲಿ ನಾನು ಒಂದು ಟೀಮ್ ಗೆ ಲೀಡರ್ ಆಗುವವನಿದ್ದೆ. ಬಹುತೇಕ ಆಯ್ಕೆಯಾಗಿ ನನ್ನ ಹೆಸರನ್ನು ಕೂಗಿಯೂ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ಹೆಸರನ್ನು ತೆಗೆದು ಹಾಕಿದ್ದರು. ಇದಲ್ಲದೇ ಹೈಸ್ಕೂಲ್ ಕೊನೆಯ ದಿನಗಳಲ್ಲಿ ಆದರ್ಶ ವಿದ್ಯಾರ್ಥಿ ಆಯ್ಕೆಗೂ ನನ್ನ ಹೆಸರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಂತೆ. ಇನ್ನೊಬ್ಬ ಸರ್ ಹೇಳಿದ ನಂತರವೇ ನನ್ನ ಗಮನಕ್ಕೆ ಇದು ಬಂದಿದ್ದು. ಯಾಕೆ ಹೀಗೆ ಮಾಡಿದರು ಎನ್ನುವುದು ನನಗೆ ಈಗಲೂ ಅರಿವಿನಲ್ಲಿ ಇಲ್ಲ ಬಿಡಿ.
            ಎಸ್ಎಸ್ಎಲ್ಸಿಯಲ್ಲಿ ಇದ್ದಾಗ ನಾನು ಲಕ್ಷಪ್ಪ ಸರ್ ನೆರವಿನಿಂದ ಆನಂದಪುರದಲ್ಲಿರುವ ಮುರುಘಾ ಮಠಕ್ಕೆ ಹೋಗಿ ಅಲ್ಲಿ ನಡೆದಿದ್ದ ಕ್ವಿಜ್ ಕಾಂಪಿಟೇಶನ್ನಿನಲ್ಲಿ ತೃತೀಯ ಬಹುಮಾನ ಗಳಿಸಿಕೊಂಡು ಬಂದಿದ್ದೆ. ಇದರಿಂದ ಖುಷಿಯಾಗಿದ್ದ ಪಿಬಿಎನ್ ಕಾನಲೆಯ ಪ್ರೌಢಶಾಲೆಯಲ್ಲಿಯೂ ಕೂಡ ಸಾಗರ ತಾಲೂಕಾ ಮಟ್ಟದ ಕ್ವಿಜ್ ಕಾಂಪಿಟೇಶನ್ ನಡೆಸಿದ್ದರು. ಈ ಕಾಂಪಿಟೇಶನ್ ಸಂದರ್ಭದಲ್ಲಿ ನನ್ನ ನೇತೃತ್ವದ ಕಾನ್ಲೆ ತಂಡವು ವಿಜ್ಞಾನದ ಫಿಸಿಕ್ಟ್ ವಿಭಾಗದ ಸ್ಪರ್ಧೆ ಬರುವ ವೇಳೆಗೆ 5ನೇ ಸ್ಥಾನದಲ್ಲಿತ್ತು. ಆದರೆ ಪಿಬಿಎನ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದರು. ರಾಪಿಡ್ ರೌಂಡ್ ಪ್ರಶ್ನೆಗೆ ಅಷ್ಟೇ ವೇಗದಲ್ಲಿ ನಾವು ಉತ್ತರ ಹೇಳಿದ್ದೆವು. ಪರಿಣಾಮವಾಗಿ ಈ ವಿಭಾಗದ ಸ್ಪರ್ಧೆ ಮುಗಿಯುವ ವೇಳೆಗೆ ನಮ್ಮ ತಂದ ಎರಡನೇ ಸ್ಥಾನ ತಲುಪಿಬಿಟ್ಟಿತ್ತು. ಸ್ಪರ್ಧೆ ಮುಗಿದ ನಂತರದ ದಿನಗಳಲ್ಲಿ ಪಿಬಿಎನ್ ಹೇಳೀಕೊಂಡಿದ್ದರಂತೆ `ಬಡ್ಡೀಮಗ ಹೆಗಡೆ.. ಫಿಸಿಕ್ಸಿನಲ್ಲಿ ಭಯಂಕರ ಚುರುಕು.. ಮುಂದೆ ಸೈನ್ಸೇ ಮಾಡ್ತಾನೆ..' ಆದರೆ ನಾನು ಸೈನ್ಸ್ ಮಾಡಲಿಲ್ಲ ಬಿಡಿ.
          ಇವರ ಬಗ್ಗೆ ಇನ್ನೊಂದು ವಿಷಯ ಹೇಳಲೇಬೇಕು. ಸ್ವಲ್ಪ ಪೋಲಿಯೆನ್ನಿಸಬಹುದು. ಆದರೂ ಪ್ರಮುಖ ವಿಷಯವಾದ್ದರಿಂದ ಹೇಳಲೇಬೇಕು ಬಿಡಿ. ಪಿಬಿಎನ್ ಕ್ಲಾಸ್ ಮಾಡುತ್ತಿದ್ದಾಗ ಯಾರೂ ಕೂಡ ನಗಬಾರದಿತ್ತು. ಅಪ್ಪಿ ತಪ್ಪಿ ನಕ್ಕರೂ ಅವರ ಕೆಲಸ ಕೆಟ್ಟಿತು ಎಂದೇ ಅರ್ಥ. ಅದರಲ್ಲೂ ಜೀವಶಾಸ್ತ್ರ ಕಲಿಸುವಾಗಲಂತೂ ನಗಲೇ ಬಾರದಿತ್ತು. ಇದಕ್ಕೂ ಒಂದು ಪ್ರಮುಖ ಕಾರಣವಿದೆ. ಎಸ್ಎಸ್ಎಲ್ಸಿಯಲ್ಲಿ ನಮಗೆ ಮನುಷ್ಯನ ಭಾಗಗಳ ಕುರಿತು ಪಾಠಗಳಿವೆ. ಅದರಲ್ಲೂ ಸಂತಾನ, ಲೈಂಗಿಕ ಕ್ರಿಯೆಗಳ ಕುರಿತು ಪಾಠಗಳಿವೆ. ಯುವ ಮನಸ್ಸುಗಳು ಇವುಗಳನ್ನು ಅರಿತುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಈ ಪಾಠಗಳನ್ನು ಇಟ್ಟಿದ್ದರು. ಈ ಸಂದರ್ಭದಲ್ಲಿ ಶಿಶ್ನ, ಯೋನಿ, ಸಂಭೋಗ ಮುಂತಾದ ವಿಷಯಗಳ ಬಗ್ಗೆ ತುಸು ಹೆಚ್ಚಿಗೆ ಗಂಭೀರವಾಗಿ ಪಠ ಮಾಡುತ್ತಿದ್ದರು ಪಿಬಿಎನ್. ಸ್ವಲ್ಪವೂ ಶಬ್ದ ತಪ್ಪದಂತೆ ಕಲಿಸುತ್ತಿದ್ದರು. ಈ ಸಂದರ್ಭದಲ್ಲಿ ಯಾರಾದರೂ ನಕ್ಕರೆ ಮುಗಿದೇ ಹೋಗುತ್ತಿತ್ತು ಅವರ ಕಥೆ. ನಮ್ಮ ಕ್ಲಾಸಿನಲ್ಲಿ ಕೆಲವು ಹುಡುಗಿಯರು ಈ ವಿಷಯ ಬಂದಾಗ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದರು. ಒಮ್ಮೆಯಂತೂ ಒಬ್ಬಾಕೆ ಕಿಸಕ್ಕನೆ ನಕ್ಕಿದ್ದಳು. ತಕ್ಷಣವೇ ಆಕೆಯನ್ನು ಎದ್ದು ನಿಲ್ಲಿಸಿದ ಪಿಬಿಎನ್ `ಶಿಶ್ನ ಎಂದರೇನೋ..' ವಿವರಿಸುವ ಎಂದರು. ಆ ಹುಡುಗಿಗಿಂತ ಹೆಚ್ಚಾಗಿ ನಾವೆಲ್ಲರೂ ಕಕ್ಕಾಬಿಕ್ಕಿಯಾಗಿದ್ದೆವು. ಹುಡುಗರ ಬಳಿಯೂ ಕೂಡ ಇಂತದ್ದೇ ತಪ್ಪು ನಡೆದರೆ ಅವರನ್ನೂ ಇದೇ ರೀತಿ ಪ್ರಶ್ನೆಗಳನ್ನು ಕೇಳಿ ಅವರಲ್ಲಿನ ಹುಡುಗಾಟಿಕೆ ಬುದ್ಧಿಯನ್ನು ದೂರ ಮಾಡುತ್ತಿದ್ದರು. ಮೊದ ಮೊದಲಿಗೆ ನಾವು ಇದನ್ನು ತಪ್ಪು ಎಂದುಕೊಂಡಿದ್ದೆವು. ಆದರೆ ನಂತರದ ದಿನಗಳಲ್ಲಿ ನಮಗೆ ಅರಿವಾಯಿತು ಬಿಡಿ. ಆಗ ತಾನೆ ಯುವ ಭಾವನೆಗಳು ಮೂಡುತ್ತಿದ್ದ ನಮ್ಮಲ್ಲಿ ಪ್ರೌಢರಾದ ಶಿಕ್ಷಕರೊಬ್ಬರು ಅಪಸವ್ಯವಾಗದಂತೆ ವಿವರಗಳನ್ನು ಹೇಳುವುದು ಸುಲಭದ ಕೆಲಸವಲ್ಲ. ಗಂಭೀರವಾಗಿ ಇಂತಹ ವಿಷಯಗಳನ್ನು ಮಾತಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾರ್ಥವಾಗುತ್ತದೆ. ಇಂತಹ ಸಮಯದಲ್ಲಿ ಯಾರಾದರೂ ನಕ್ಕರೆ ಕಲಿಸುತ್ತಿದ್ದವರ ಪಾಡು ಏನಾಗಬೇಡ ಹೇಳಿ. ಪಿಬಿಎನ್ ಅವರೂ ಅದಕ್ಕೆ ನಮಗೆಲ್ಲ ಗಂಭೀರವಾಗಿ ಕ್ರಮಕೈಗೊಂಡಿದ್ದರು. ಪರಿಣಾಮವಾಗಿ ಅವರ ತರಗತಿಗಳಲ್ಲಿ ನಗುವುದು ಕಡಿಮೆಯಾಗಿತ್ತು. ಗಂಭೀರತೆ ಬಂದಿತ್ತು.
          ಇಂತಿಪ್ಪ ಪಿಬಿಎನ್ ಈಗಲೂ ಕಾನಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಹೆಡ್ ಮಾಸ್ತರರಾಗಿದ್ದಾರೆ ಎನ್ನುವ ಸುದ್ದಿಯಿದೆ. ಮುಂದಿನ ಸಾರಿಯಾದರೂ ಕಾನ್ಲೆಗೆ ಹೋದಾಗ ಅವರನ್ನು ಮಾತನಾಡಿಸಿಕೊಂಡು ಬರಬೇಕೆಂದುಕೊಂಡಿದ್ದೇನೆ.



(ಮುಂದಿನ ಭಾಗದಲ್ಲಿ ಭಾರತಿ ಹೆಗಡೆ ಹಾಗೂ ಕೆಬಿಎನ್ ಅವರ ಬಗ್ಗೆ ಬರೆಯಲಿದ್ದೇನೆ )

Wednesday, October 5, 2016

ಅಂ-ಕಣ - 9

ಹೌದಪ್ಪ

ನಿಮ್ಮದು
ಎಷ್ಟು ದಪ್ಪ
ಎಂದು ಕೇಳಿದರೆ
ಹೇಳಬಹುದಾದ ಉತ್ತರ
ಹೌದಪ್ಪ

ದೋಸೆ

ತೆಳ್ಳಗಿನ ಹನಿಯಲ್ಲಿ
ನೀರು ದೋಸೆ
ಮಾಡಬಹುದು...
ದಪ್ಪನೆಯ ಹನಿಯಲ್ಲಿ
ಸಾಧ್ಯವಿಲ್ಲ


ಕಾಲೆಷ್ಟು

ಮಳ್ಳಿ ಮಳ್ಳಿ..
ಮಂಚದ ಮೇಲಿನ
ಮಾವನಿಗೆಡ
ಕಾಲೆಷ್ಟು ಅಂದರೆ
ಎರಡರ ಮಧ್ಯ ಎರಡು
ಅಂದ್ಲಂತೆ


ಲಾಭ

ಕನಸುಗಳನ್ನು
ಕದ್ದು ತಂದಿದ್ದೇನೆ
ಗೆಳತಿ
ಮಾರಾಟ ಮಾಡಿ
ಲಾಭ
ಮಾಡಿಕೊಳ್ಳಬೇಕು!


ಪೋಲಿ ಗೋಲ

ಜಗತ್ತು
ಗೋಲವಾದಷ್ಟೂ
ಮನಸ್ಸು
ಪೋಲಿಯಾಗುತ್ತದೆ


ಕಣ್ಣು

ಅವಳು ಕಣ್ಣು ಮುಚ್ಚಿ
ತುಟಿಗೆ ತುಟಿಯೊತ್ತಿದಳು
ನನ್ನ ಬದುಕಿನ ಬೀದಿ
ಕಣ್ಮುಚ್ಚಿತು

ಅಷ್ಟಕ್ಕಷ್ಟೇ

ಅವಳಿಗೆ
ಒಂದು ಮುತ್ತು ಕೊಟ್ಟೆ.
ಅವಳೆಂದಳು
ಅಷ್ಟೇನಾ?
ನಾನು ಇನ್ನೊಂದು
ಮುತ್ತು ಕೊಟ್ಟು ಹೇಳಿದೆ
ಅಷ್ಟಕ್ಕಷ್ಟೇ!

ಪೋಲಿ ಶಬ್ದಗಳ ಗುರು

ಎಲ್ಲ ಪೋಲಿ ಶಬ್ದಗಳೂ
ತ.. ಅಕ್ಷರದಿಂದ ಆರಂಭ ಆಗ್ತವೆ
ಹೀಗಾಗಿ...
ತ ಅಕ್ಷರವನ್ನು ಪೋಲಿ ಶಬ್ದಗಳ
ಗುರು ಅನ್ನಬಹುದಾ?


'ಪೋಲಿ'ಟಿಕಲ್ ವ್ಯೂ

ರಾಜಕಾರಣಿಗಳ
'ಪೋಲಿ'ಟಿಕಲ್ ವ್ಯೂ
ಮೀರಿಸುವುದು
ಯಾರಿಂದಲೂ
ಸಾಧ್ಯವಿಲ್ಲ |


ಛೇ...

ಪ್ರೇಮಕವಿತೆಗಳನ್ನು
ಮದುವೆಯಾದ
ಹುಢುಗಿಯರು ಲೈಕ್
ಮಾಡಿದರೆ
ಛೇ... ಮನಸಲ್ಲಿ ಬೇಸರ
ಮಾರಾಯ್ಲೇ

Tuesday, October 4, 2016

ಅಂ-ಕಣ - 8

ಬಣ

ನಿನ್ನದು ಯಾವ ಬಣ

ಎನ್ನುವವರಿಗೆಲ್ಲ
ನನ್ನದು ಒಂದೇ ಉತ್ತರ
ದಿಬ್ಬಣ !!


ತೂ....ಕ


ತೂಕವಿಲ್ಲದ 

ಮಾತು 
ತೂಕಡಿಸುತ್ತದೆ!


ಬೆಲೆ


ಮಾತಾಡದ

ಮೌನ 
ಮಾತಾಡುವ 
ಮಾತಿಗಿಂತ 
ನೂರುಪಟ್ಟು
ಮಾತಾಡುತ್ತದೆ..

ಗುರು


ಲಘುವಾಗದ

ಗುರು...
'ಗುರು'ವಾದ |

ಮಾಯದ ಗಾಯ 



ಕೆನ್ನೆ ಕಚ್ಚಿದಳು
ನೋವಾಯಿತೆಂದೆ
ಮುನಿದು ದೂರವಾದಳು
ಕಚ್ಚಿದ ಕಲೆ
ಮಾಯವಾಯಿತು

ತುಟಿಯ ರಂಗು
ಕೆನ್ನೆ ಮೇಲಿನ ನೋವು
ಇನ್ನೂ ಇದೆ !


ರೋಮಾಂಚನ
ರೋಮದಲ್ಲಿ ಅಂಚನವಿದೆ
ರೋಮದ ಅಂಚಲ್ಲಿ
ನೋವಿದೆ ||


ಭಗ್ನ ಸತ್ಯ

ಬೆವರಿದ ಕೆನ್ನೆ
ಉಪ್ಪುಪ್ಪು
ನಾಚಿದ ಕೆನ್ನೆ
ಸಿಹಿ ಸಿಹಿ |



---------------



( ಈ ಎಲ್ಲ ಹನಿಗಳು, ಸಾಲುಗಳನ್ನು ಬರೆದಿದ್ದು ಅಕ್ಟೋಬರ್ 3 ಹಾಗೂ 4ರ ನಡುವಿನ ರಾತ್ರಿ, 2016)

Monday, September 26, 2016

ಪರಿಸರ ಮಿತ್ರರು

ಇವರೆಲ್ಲ ನಮ್ಮ ಗೆಳೆಯರು
ಕಾನನದ ಜೊತೆಗಾರರು |
ಮಿತ್ರರು, ಭ್ರಾತ್ರರು,
ಸದಸ್ಯರು ಸೋದರರು |

ತೇಗ ಚೆಲುವು ಬಿದಿರು ಕೊಳಲು
ಪ್ರಾಣಿ ನೂರು, ತುಂಟ ಅಳಿಲು |
ಬಹಳ ಗಟ್ಟಿ ಜಟ್ಟಿ ಬೀಟೆ
ಇರುವರೇನು ನಿನಗೆ ಸಾಟಿ |

ಆನೆ ಹುಲಿ ಸಿಂಹ ಕರಡಿ
ಕಾನನದ ಸಿರಿಯ ಕಣ್ಗಳು |
ಹಕ್ಕಿ ಪಕ್ಷಿ ನದ ನದಿಗಳು
ನೂರು ಇಂಪು ಸವಿಯ ನುಡಿಗಳು |

ದೇವದಾರು ಬಲು ಜೋರು
ನಯನ ಸೆಳೆವುದು |
ಜಿಂಕೆ ಕಡವೆ ಮೃಗ ಸಮೂಹ
ನಮ್ಮ ಕರೆವವು ||

ಲವಂಗವಾದಿ ವನ ಸಿರಿಗಳು
ಜೀವ ಜ್ಯೋತಿಯು
ರೋಗ ರುಜಿನ ಬಂದರೀಗ
ಜೀವ ಕೊಡುವವು |

ನವಿಲು ಹಕ್ಕಿ, ನೂರು ಪಕ್ಷಿ
ಕಾನನದ ಸಿರಿಗಳು |
ಮಿಂಚುಳ್ಳಿ ಚುಕ್ಕಿ, ಹಕ್ಕಿ
ಮನವ ಬೆಸೆವ ಖಗಗಳು |

ನದಿಯಲಾಡೋ ಮೀನು ಮರಿ
ಖುಷಿಯ ಕೊಡುವವು |
ಹಂಸ ಗಿಳಿ ಪಾರಿವಾಳ
ಮನದಿ ಮೆರೆವವು |

ಬಾನು ಕಾನು ನೆಲ ಜಲವು
ನಮ್ಮ ಜೀವವು |
ಉಸಿರ್ಗಾಳಿ ಜೀವ ಜಲವ
ಇವು ಕೊಡುವವು |

ನಮ್ಮ ಈ ಸೋದರರನು
ನೀವು ಉಳಿಸಿರಿ |
ಮುಂದಿನ ಕೆಲ ಜೀವನವ
ಹಸಿ ಹಸಿರಾಗಿಸಿರಿ ||


+++++++++++++++++++++++

( ಈ ಕವಿತೆಯನ್ನು ಬರೆದಿರುವುದು 20-12-2005ರಂದು ದಂಟಕಲ್ಲಿನಲ್ಲಿ)

(ಯಾವುದೇ ಕವಿಯ ಕಾವ್ಯಲೋಕದ ಪಯಣ ಇಂತಹ ಕವಿತೆಗಳಿಂದಲೇ ಆರಂಭವಾಗುತ್ತದೆ. ಇದೊಂದು ಮಕ್ಕಳ ಕವಿತೆ ಎನ್ನಬಹುದೇನೋ. ನನ್ನ ಬರವಣಿಗೆಯ ಪ್ರಾರಂಭದ ದಿನಗಳ ಕವಿತೆ ಇದು. 49ನೇ ಕವಿತೆ ಇದು ಎನ್ನುವುದನ್ನು ನನ್ನ ಪಟ್ಟಿ ಉಲ್ಲೇಖಿಸಿದೆ. ಕಲಿಕೆ ನಿರಂತರ. ಬದಲಾವಣೆ ಕೂಡ ನಿರಂತರ. ಅಂದಿಗೂ ಇಂದಿಗೂ ಅದೆಷ್ಟೋ ಬದಲಾವಣೆಗಳಾಗಿವೆ. ಆಗ ಹೀಗೆಲ್ಲಾ ಬರೆದಿದ್ದೆನಾ ಎಂದು ನನಗೇ ಆಶ್ಚರ್ಯವಾಗುವಂತಿದೆ. ಅಲ್ಲದೇ ಸ್ವಲ್ಪ ನಾಚಿಕೆಯೂ ಆಗುತ್ತಿದೆ. ಏನೇ ಆಗಲಿ. ನೀವೂ ಓದಿಬಿಡಿ. 11 ವರ್ಷಗಳ ಹಿಂದಿನ ಕವಿತೆ ನಿಮ್ಮ ಮುಂದೆ )

Saturday, September 17, 2016

ಅಘನಾಶಿನಿ ಕಣಿವೆಯಲ್ಲಿ-33

 
           `ನಾ ಎಂತಾ ಹೇಳೂದು..' ಎಂದು ಶುರುಮಾಡಿದ ಬಾಬು. ಪ್ರದೀಪ ಕೆಕ್ಕರಿಸಿ ನೋಡಿದ. `ನಾ ಒಬ್ನೆ ಅಲ್ಲ. ನೀವ್ ನೋಡಿದ್ರೆ ನನ್ನ ಮಾತ್ರ ಹಿಡಕಂಡ್ರಿ. ಬಹಳಷ್ಟ್ ಜನ ಇದ್ದಾರೆ. ಅವ್ರು ಮಾಡದೇ ಇರುವಂತದ್ದೇನೂ ನಾ ಮಾಡನಿಲ್ಲ.' ಎಂದು ಅಲವತ್ತುಕೊಂಡ. ಪ್ರದೀಪನ ಸಹನೆಯ ಕಟ್ಟೆ ಮೀರಿತ್ತು. ರಪ್ಪನೆ ಬಾಬುವಿನ ಮುಸಡಿಗೆ ಒಂದು ಬಡಿದ. ಹೊಡೆದ ಹೊಡೆತಕ್ಕೆ ಬಾಬುವಿನ ಮುಖದಿಂದ ಬಳ್ಳನೆ ರಕ್ತ ಬಂದಿತು. ಕೈ ಮುಗಿದ ಬಾಬು.
              `ನಾನು ಮೊದ ಮೊದಲು ಇಂತದ್ದೆಲ್ಲ ಮಾಡಿರ್ನಿಲ್ಲ. ಆದರೆ ಹೊಟೆಲ್ ಮಾಡಬೇಕು ಅಂದಕಂಡು ಮುಂಬೈಗೆ ಹೋದೆ. ಅಲ್ಲಿ ಗಂಧವನ್ನು ಕಳ್ಳತನ ಮಾಡುವ ಗ್ಯಾಂಗ್ ಪರಿಚಯವಾಯಿತು. ಒಂದೆರಡು ವರ್ಷ ಮುಂಬೈನಲ್ಲಿ ಹೊಟೆಲ್ ಕೆಲಸ ಮಾಡಿದಂತೆ ಮಾಡಿದೆ. ಆದರೆ ನಂತರ ನನಗೆ ಗಂಧದ ತುಂಡುಗಳನ್ನು ಮಾರಾಟ ಮಾಡುವ ಜಾಲದ ಉದ್ದಗಲಗಳು ನನಗೆ ಗೊತ್ತಾದವು. ಮುಂಬೈನಲ್ಲಿ ಯಾವುದನ್ನು ಹೇಗೆ ಮಾರಾಟ ಮಾಡಬೇಕು? ಯಾವುದಕ್ಕೆ ಎಷ್ಟು ರೇಟಿದೆ ಎನ್ನುವುದನ್ನೆಲ್ಲ ತಿಳಿದುಕೊಂಡೆ. ಗಂಧದ ತುಂಡುಗಳ ಮಾರಾಟದ ನೆಪದಲ್ಲಿ ನಾನು ಆ ಜಾಲದ ಭಾಗವಾಗಿದ್ದೆ. ಆದರೆ ನಂತರದ ದಿನಗಳಲ್ಲಿ ಕೇವಲ ಗಂಧದ ತುಂಡುಗಳಿಗೆ ಮಾತ್ರ ನಮ್ಮ ದಂಧೆ ಸೀಮಿತವಾಗಿಲ್ಲ ಎನ್ನುವುದು ಅರಿವಾಯಿತು. ಕ್ರಮೇಣ ಗಾಂಜಾ ಮಾರಾಟವೂ ಗೊತ್ತಾಯಿತು. ಯಾರೋ ತಂದುಕೊಡುತ್ತಿದ್ದರು. ಅದನ್ನು ಇನ್ಯಾರಿಗೋ ದಾಟಿಸುವ ಕೆಲಸ ಮಾಡುತ್ತಿದೆ. ಹೀಗೆ ಮಾಡುತ್ತಿದ್ದಾಗಲೇ ಒಂದೆರಡು ಮಧ್ಯವರ್ತಿಗಳ ಪರಿಚಯವೂ ಆಯಿತು. ಇದಲ್ಲದೇ ಮುಂಬೈನಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಬಂದರುಗಳಲ್ಲಿ ಲಂಗರು ಹಾಕಿರುತ್ತಿದ್ದ ಹಡಗುಗಳಿಗೆ ಮಾದಕ ವಸ್ತುಗಳನ್ನು ದಾಟಿಸುವುದನ್ನೂ ತಿಳಿದುಕೊಂಡಿದ್ದೆ. ಹೀಗಿದ್ದಾಗಲೇ ನನಗೆ ನಮ್ಮೂರ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಗಂಧದ ತುಂಡುಗಳ ವಿಷಯ ನೆನಪಾದವು. ಅದನ್ನು ಇಲ್ಲಿ ತಂದು ಮಾರಾಟ ಮಾಡಿದರೆ ಹೇಗೆ ಎನ್ನುವುದೂ ಅರಿವಾಯಿತು. ತಲೆಯಲ್ಲಿ ಬಂದ ತಕ್ಷಣವೇ ನಾನು ಮುಂಬೈಯನ್ನು ಬಿಟ್ಟು ನಮ್ಮೂರಿಗೆ ವಾಪಾಸಾಗಿದ್ದೆ..' ಬಾಬು ಒಂದೇ ಉಸುರಿಗೆ ಹೇಳಿದ್ದ.
           `ಮುಂಬೈನಿಂದ ಬರುವಾಗ ನನ್ನಲ್ಲಿ ಅಷ್ಟೋ ಇಷ್ಟೋ ದುಡ್ಡಾಗಿತ್ತು. ಊರಿಗೆ ವಾಪಾಸು ಬಮದವನೇ ದೊಡ್ಡದೊಂದು ಕಾರನ್ನು ಕೊಂಡುಕೊಂಡೆ. ನೋಡುಗರಿಗೆ ನಾನು ಮುಂಬೈನಲ್ಲಿ ಹೊಟೆಲ್ ಬ್ಯುಸಿನೆಸ್ ನಲ್ಲಿ ಭಾರೀ ಲಾಭ ಮಾಡಿಕೊಂಡೆ ಎನ್ನುವ ಭಾವನೆ ಮೂಡುವಂತೆ ಮಾಡಿದೆ. ಆದರೆ ವಾಸ್ತವದಲ್ಲಿ ನಾನು ಕಾರು ಕೊಂಡಿದ್ದೇ ಬೇರೆ ಕಾರಣಕ್ಕಾಗಿತ್ತು. ನಮ್ಮೂರ ಭಾಗದಲ್ಲಿ ಸಿಗುವ ಗಂಧದ ಮಾಲನ್ನು ಕದ್ದು ಕಾರಿನಲ್ಲಿ ಹಾಕಿಕೊಂಡು ಮಧ್ಯವರ್ತಿಗಳಿಗೆ ಸಾಗಿಸುವ ಕೆಲಸವನ್ನು ನಾನು ಮಾಡುತ್ತಿದ್ದೆ. ಹೇರಳವಾಗಿ ದುಡ್ಡು ಬರುತ್ತಲೇ ಇತ್ತು. ಆದರೆ ಮೊದ ಮೊದಲಿಗೆ ಗಂಧದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದ ನಾನು ನಂತರದ ದಿನಗಳಲ್ಲಿ ಬೇರೆ ಬೇರೆ ದಂಧೆಯನ್ನೂ ಶುರು ಹಚ್ಚಿಕೊಂಡೆ. ಕಳ್ಳ ನಾಟಾ ಮಾಡುವುದು, ಅದರ ಮಾರಾಟ, ಗಾಂಜಾ ಬೆಳೆಯುವುದು, ಅದನ್ನು ಮಾರಾಟ ಮಾಡುವುದು ಹೀಗೆ ಹಲವಾರು ದಂಧೆ ಶುರು ಮಾಡಿದೆ. ಮೊದ ಮೊದಲು ಎಲ್ಲವೂ ಸರಾಗವಾಗಿಯೇ ಇತ್ತು. ಯಾವಾಗಲೂ ಅಷ್ಟೆ ಪ್ರತಿಸ್ಪರ್ಧಿಗಳಿಲ್ಲ ಅಂದರೆ ದಂಧೆ ನಿರಾತಂಕವಾಗಿ ಸಾಗುತ್ತದೆ. ನನಗೂ ಹಾಗೆಯೇ ಆಗಿತ್ತು. ಆದರೆ ಪ್ರತಿಸ್ಪರ್ಧಿ ಹುಟ್ಟಿಕೊಂಡ ನಂತರ ಮಾತ್ರ ನಮ್ಮ ದಂಧೆಯಲ್ಲಿ ಏರಿಳಿತ ಕಾಣಬಹುದು. ನನಗೂ ಹಾಗೆಯೇ ಆಯಿತು...'
             `ನಾನೇನೋ ಹಾಯಾಗಿದ್ದೆ. ತಿಂಗಳು ತಿಂಗಳೂ ಲಕ್ಷ ಲಕ್ಷ ದುಡ್ಡು ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ದಂಧೆಯಲ್ಲಿ ಲುಕ್ಸಾನು ಆರಂಭವಾಯಿತು. ನಾನು ಗಂಧದ ತುಂಡುಗಳನ್ನು ಮಾರಾಟ ಮಾಡಲು ಹೋದರೆ ಅರ್ಧ ಬೆಲೆಗೆ ಕೇಳುತ್ತಿದ್ದರು. ನಾನು ಬೆಳೆಸುತ್ತಿದ್ದ ಗಾಂಜಾ ಬೆಳೆಗೆ ಬೆಲೆಯೇ ಇರಲಿಲ್ಲ. ಯಾಕೆ ಹೀಗಾಯಿತು ಅಂದುಕೊಳ್ಳುತ್ತಿದ್ದಂತೆಯೇ ನನ್ನ ದಂಧೆಗೆ ಪ್ರತಿಯಾಗಿ ಇನ್ನೊಂದು ತಂಡ ಇದೇ ದಂಧೆಯನ್ನು ಶುರು ಮಾಡಿಕೊಂಡಿರುವುದು ತಿಳಿದು ಬಂದಿತು. ಯಾರಿರಬಹುದು ಎಂದುಕೊಂಡು ತಂಡವನ್ನು ಹುಡುಕಾಡಿದೆ. ಊಹೂ ಗೊತ್ತಾಗಲಿಲ್ಲ. ಆದರೆ ನಮ್ಮ ಭಾಗದಲ್ಲಿ ಈ ತಂಡ ಸಕ್ರಿಯಾಗಿದೆ ಎಂದೂ ಗೊತ್ತಾಯಿತು. ಕೊನೆಗೊಮ್ಮೆ ನಾನು ಆ ತಂಡವನ್ನು ಹದ್ದು ಬಸ್ತಿನಲ್ಲಿ ಇಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದೆ. ಏನೇನೋ ಮಾರ್ಗಗಳನ್ನು ಅನುಸಿರಿಸಿದೆ. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಬದಲಾಗಿ ಆ ತಂಡದಿಂದ ಒಂದಷ್ಟು ಬೆದರಿಕೆ ಕರೆಗಳು ಬಂದವು. ನಾನು ಅವನ್ನು ನಿರ್ಲಕ್ಷಿಸಿದೆ. ಆದರೆ ಕೊನೆಗೆ ನನ್ನ ಮೂಲೆ ಎರಡು ಸಾರಿ ಹಲ್ಲೆಯೂ ಆಯಿತು. ನನಗೆ ಆಗಲೇ ಜೀವ ಭಯ ಕಾಡಿದ್ದು. ನಾನು ಪೂರ್ತಿ ಹೆದರಿ ಹೋಗಿದ್ದೆ. ಕೊನೆಗೆ ಇವರ ಸಹವಾಸ ಸಾಕು. ಬದುಕಿ ಉಳಿದರೆ ಏನಾದರೂ ಮಾಡಿಯೇನು ಎಂದುಕೊಂಡು ನಾನು ಆ ವೃತ್ತಿಯನ್ನು ಬಿಟ್ಟು ಬಿಟ್ಟೆ. ಇದೀಗ ಮನೆಯಲ್ಲಿ ಎರಡು ಜೀಪುಗಳನ್ನು ಇಟ್ಟುಕೊಂಡು ಬಾಡಿಗೆ ಹೊಡೆಯುತ್ತಿದ್ದೇನೆ..' ಎಂದ ಬಾಬು.
            `ನೀ ಹೇಳಿದ್ದನ್ನು ನಂಬ ಬಹುದಾ?..' ಪ್ರದೀಪ ಗಡುಸಾಗಿಯೇ ಕೇಳಿದ್ದ.
             `ನಂಬಬಹುದು. ಯಾಕಂದ್ರೆ ಇದೇ ನಿಜ. ನನಗೆ ಸುಳ್ಳು ಹೇಳಿ ಆಗಬೇಕಾಗಿದ್ದು ಏನೂ ಇಲ್ಲ. ಬದಲಾಗಿ ನನ್ನ ಜೀವ ುಳಿದರೆ ಸಾಕಾಗಿದೆ..' ಎಂದ ಬಾಬು.
            `ನಿನ್ನ ದಂಧೆಗೆ ಪ್ರತಿಯಾಗಿ ದಂಧೆ ಶುರು ಮಾಡಿದ್ದು ಯಾರು? ನಿನ್ನ ಮೇಲೆ ಧಾಳಿ ಮಾಡಿದವರು ಯಾರು? ಹೇಳು..'
            `ಗೊತ್ತಿಲ್ಲ. ದಂಧೆ ಶುರುವಾಗಿಗೆ ಅಂತ ಅಷ್ಟೇ ಮಾಹಿತಿ ಕಿವಿಗೆ ಬೀಳುತ್ತಿತ್ತು. ಯಾರು ಮಾಡುತ್ತಿದ್ದಾರೆ? ಈ ಜಾಲದ ಮುಖ್ಯಸ್ಥರ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಹಲವು ಸಾರಿ ತಿಳಿದುಕೊಳ್ಳಲು ನೋಡಿದೆ ಆಗಲೇ ಇಲ್ಲ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದವರೆಲ್ಲ ನನ್ನನ್ನು ಬಿಟ್ಟು ಹೋದರು. ನಾನು ಕೊಡುತ್ತಿದ್ದ ಹಣಕ್ಕಿಂತ ಎರಡು ಪಟ್ಟು ಜಾಸ್ತಿ ಅವರು ಕೊಡುತ್ತಿದ್ದರಂತೆ. ಅವರನ್ನು ನನ್ನ ಬಳಿಯೇ ಉಳಿಸಿಕೊಳ್ಳಬೇಕು ಅಂತ ಸಾಕಷ್ಟು ಪ್ರಯತ್ನ ಮಾಡಿದೆ. ಆಗಲಿಲ್ಲ. ಈಗಲೂ ಒಂದಿಬ್ಬರು ಅವರ ಬಳಿ ನಿಯತ್ತಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಿಕ್ಕಾಪಟ್ಟೆ ಲಾಸ್ ಆಗಿ ಇದೀಗ ಆ ದಂಧೆ ಬಿಟ್ಟು ಬಿಟ್ಟಿದ್ದೇನೆ. ನನಗೆ ಈಗಲೂ ಕುತೂಹಲ ಇದೆ. ಇದ್ದಕ್ಕಿದ್ದಂತೆ ನನ್ನ ದಂಧೆಯನ್ನೇ ಬುಡಮೇಲು ಮಾಡಿ, ನನಗಿಂತ ಹೆಚ್ಚು ಲಾಭ ಮಾಡುತ್ತಿರುವವರು ಯಾರು ಅಂತ. ಖಂಡಿತವಾಗಿಯೂ ಒಬ್ಬಿಬ್ಬರಿಂದ ಇದು ಸಾಧ್ಯವಿಲ್ಲ. ದೊಡ್ಡದೊಂದು ತಂಡವೇ ಇರಬೇಕು. ವ್ಯವಸ್ಥಿತ ಜಾಲವೇ ಇರಬೇಕು ಅನ್ನಿಸುತ್ತಿದೆ. ನಾನು ಈ ಜಾಲದ ಮುಖ್ಯಸ್ಥನನ್ನು ನೋಡುವ ಆಸೆಯನ್ನೂ ಇಟ್ಟುಕೊಂಡಿದ್ದೇನೆ..' ಎಂದು ಬಾಬು ಮನದಾಳದ ಬಯಕೆಯನ್ನು ತೋಡಿಕೊಂಡಿದ್ದ.
           `ಆಗಲಿ.. ನೀನು ಹೇಳಿದ್ದನ್ನು ನಾವು ನಂಬುತ್ತೇವೆ. ಆದರೆ ಒಂದು ಕೆಲಸ ಮಾಡಬೇಕು ನೀನು. ನಮಗೆ ನಿನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ತೋರಿಸಬೇಕು. ಅವರು ಈಗ ಆ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಅಂದೆಯಲ್ಲ. ಅವರನ್ನು ತೋರಿಸು. ನಮಗೆ ಈ ಕಾರ್ಯದಲ್ಲಿ ಸಹಾಯ ಮಾಡಿದರೆ ನಿನ್ನನ್ನು ಬಿಟ್ಟು ಬಿಡುತ್ತೇವೆ. ಇಲ್ಲವಾದಲ್ಲಿ ನಿನಗೆ ಬದುಕಿದ್ದಂತೆಯೇ ನರಕ ದರ್ಶನ ಮಾಡುತ್ತೇವೆ..' ಪ್ರದೀಪ ಗುಡುಗಿದ್ದ.
             `ನಾಳೆಯೇ ತೋರಿಸುತ್ತೇನೆ...' ಎಂದಿದ್ದ. ಬಾಬುವನ್ನು ಅವನ ಮನೆಯ ಬಳಿಯೇ ಬಿಟ್ಟು ಪ್ರದೀಪ ಹಾಗೂ ಇತರರು ಮರಳಿದ್ದರು. ಬಾಬು ಖಂಡಿತವಾಗಿಯೂ ತಪ್ಪಿಸಿಕೊಂಡು ಹೋಗಲಾರ. ಆತನಿಗೆ ಭಯವಿದೆ. ಆ ಕಾರಣದಿಂದ ಎಲ್ಲೂ ಹೋಗದೇ, ತಮಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯ ಮೇಲೆ ಆತನನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಹೀಗೆ ಬಿಟ್ಟು ಬಂದಿದ್ದೇ ಸಾಕಷ್ಟು ತೊಂದರೆಗೂ ಕಾರಣವಾಯಿತು.
             ಇತ್ತ ಬಾಬುವಿನ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ಒಂದೆಡೆ ಈಗಾಗಲೇ ಎರಡು, ಮೂರು ಸಾರಿ ದಾಳಿ ಂಆಡಿ ಜೀವಭಯ ಹುಟ್ಟಿಸಿರುವ ತಂಡ, ಇನ್ನೊಂದು ಕಡೆಗೆ ಪ್ರದೀಪನ ಭಯ. ಏನು ಮಾಡಲಿ ಎಂಬುದನ್ನು ತಿಳಿಯದೇ ಚಿಂತಾಕ್ರಾಂತನಾಗಿದ್ದ. ಮರುದಿನ ಇನ್ನೇನಾಗುತ್ತದೆಯೋ ಎಂದುಕೊಂಡು ಮನೆಯೊಳಕ್ಕೆ ಹೋಗಿದ್ದ. ಆದರೆ ಮರುದಿನ ಬಾಬುವಿನ ಮನೆಯ ಬಾಗಿಲು ತೆರೆಯಲೇ ಇಲ್ಲ. ಬಾಬು ಹಾಗೂ ಆತನ ಮಡದಿ ಇಬ್ಬರೂ ಮನೆಯೊಳಕ್ಕೆ ಹೆಣವಾಗಿದ್ದರು. !!


(ಮುಂದುವರಿಯುತ್ತದೆ)

Tuesday, September 13, 2016

ಅಪ್ಪ (ಕಥೆ) - ಭಾಗ-2

              ಅಪ್ಪನೇನೋ ಸೈಕಲ್ ರಿಪೇರಿಗಾಗಿ ಹೋಗಿಬಿಟ್ಟಿದ್ದ. ನಾನು, ಅಮ್ಮ ಇಬ್ಬರೇ ಉಳಿದಿದ್ದೆವು. `ತಮಾ.. ಹೋಪನ ನೆಡಿ..' ಎಂದ ಅಮ್ಮ ನಿಧಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದಳು. ಅಮ್ಮನ ಒಂದು ಕಾಲಿಗೆ ಕಬ್ಬಿಣದ ಮೊಳೆ ಚುಚ್ಚಿತ್ತು. ಇನ್ನೊಂದು ಕಾಲು ಸೈಕಲ್ ಚಕ್ರಕ್ಕೆ ಸಿಲುಕಿ ಜಜ್ಜಿದಂತಾಗಿತ್ತು. ನೋವಿನಲ್ಲಿಯೂ ನಡೆಯಲು ಆರಂಭಿಸಿದ್ದಳು. ನಾನು ಆಕೆಯ ಸರಿಸಮಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದೆ.
                ನಿಮಿಷಗಳು ಉರುಳಿದವು. ನಾವು ಸಾಗುತ್ಲೇ ಇದ್ದೆವು. `ಅಮಾ.. ಅಪ್ಪ ಬಂದನನೆ..?' ನಾನು ಆಗಾಗ ಕೇಳುತ್ತಿದ್ದೆ. ಅದಕ್ಕೆ ಅಮ್ಮ ನಿಟ್ಟುಸಿರುವ ಬಿಟ್ಟು `ಇಲ್ಯಾ ತಮಾ.. ಸೈಕಲ್ ರಿಪೇರಿ ಆಜಿಲ್ಲೆ ಕಾಣಿಸ್ತಾ.. ನಾವು ನೆಡಕಂಡು ಹೋಗ್ತಾ ಇಪ್ಪನ. ಕಲ್ಮಟ್ಟಿ ಹಳ್ಳದ ಹತ್ರ ಹೋಪಕಿದ್ರೆ ಅಪ್ಪ ಬಂದು ಮುಟ್ಟತಾ..' ಅಮ್ಮ ನನ್ನನ್ನು ಸಾಗ ಹಾಕಿದ್ದಳು. ಅಮ್ಮನಿಗೆ ಅಪ್ಪ ಇಷ್ಟು ಬೇಗನೆ ಬರುವುದಿಲ್ಲ ಎಂಬುದು ಗೊತ್ತಿತ್ತೇನೋ. ನನ್ನನ್ನು ಏನೋ ಹೇಳಿ ಸಾಗ ಹಾಕುತ್ತಿದ್ದಳು. ಆ ದಿನ ಮಾತ್ರ ನಾವು ಎಷ್ಟು ನಡೆದರೂ ಕೂಡ ದಾರಿ ಸಾಗುತ್ತಲೇ ಇರಲಿಲ್ಲ. ಅರ್ಧ ಗಂಟೆಯ ಅಂತರದಲ್ಲಿ ನಮ್ಮನ್ನು ಕೈಬೀಸಿ ಕರೆಯಬೇಕಿದ್ದ ಕಲ್ಮಟ್ಟಿ ಹಳ್ಳ ಆ ದಿನ ತಾಸಾದರೂ ಕೂಡ ಬರಲಿಲ್ಲ. ನಾವು ಅಷ್ಟು ನಿಧಾನವಾಗಿ ನಡೆಯುತ್ತಿದ್ದೆವೆನ್ನಿ.
             ಕಲ್ಮಟ್ಟಿಹಳ್ಳ ಬರುವ ವೇಳೆಗೆ ನಾವು ಎರಡು ಸಾರಿ ಕುಳಿತಿದ್ದೆವು. ಸೈಕಲ್ ಚಕ್ರಕ್ಕೆ ಸಿಲುಕಿದ್ದ ಅಮ್ಮನ ಕಾಲು ಆಗಲೇ ಆನೇಕಾಲು ರೋಗ ಬಂದವರಂತೆ ಊದಿಕೊಂಡಿತ್ತು. ಕಾಲಿಗೆ ಹಾಕಿದ್ದ ಹವಾಯಿ ಚಪ್ಪಲ್ ಬಿಗಿಯಾಗಿತ್ತು. ಹವಾಯಿ ಚಪ್ಪಲಿನ ಬಾರು ಹಾಲಿಗೆ ಅಂಟಿಕೊಂಡಿತ್ತು. ಕಲ್ಮಟ್ಟಿ ಹಳ್ಳ ಬಂದಿತ್ತು. ಕಲ್ಮಟ್ಟಿ ಹಳ್ಳದಲ್ಲಿ ಮಂಜು ನಾಯ್ಕ ಸಿಕ್ಕಿದ್ದ. `ನಮ್ಮನೆ ಹೆಗುಡ್ರು ಹೋದ್ರನೋ..' ಅಮ್ಮ ಮಂಜುನಾಥ ನಾಯ್ಕನ ಬಳಿ ಕೇಳಿದ್ದಳು. `ಇಲ್ರಲಾ ಅಮ್ಮಾ.. ನಾನು ನೋಡನಿಲ್ಲ. ಅವರು ಈ ದಾರಿಯಲ್ಲಿ ಹೋಗಿದ್ದನ್ನ ನಾನು ಕಾಣನಿಲ್ಲ..' ಎಂದು ಉತ್ತರ ನೀಡಿದಾಗ ಅಮ್ಮ ನಿಟ್ಟುಸಿರು ಬಿಟ್ಟು ನನ್ನನ್ನು ಹೊರಡಿಸಿದ್ದಳು. ನನಗೊಂದು ನಿಂಬೂ ಚಾಕಲೇಟು ತಿನ್ನುವ ಆಸೆಯಾಗಿ ಅಮ್ಮನ ಬಳಿ ನಾಲ್ಕಾಣೆ ಪಡಕೊಂಡಿದ್ದೆ. ಅಮ್ಮ ಎಂಟಾಣೆ ಕೊಟ್ಟಾಗ ಎರಡು ನಿಂಬೂ ಚಾಕಲೇಟು ತೆಗದುಕೊಂಡು ಒಂದನ್ನು ಸಿಪ್ಪೆ ಸುಲಿದು ಬಾಯಿಗಿಟ್ಟು ಇನ್ನೊಂದು ಚಡ್ಡಿ ಕಿಶಗೆ ಗೆ ಹಾಕಿದ್ದೆ.
            ಇನ್ನೊಂದು ಕಿಲೋಮೀಟರ್ ದೂರದ ಅಡಕಳ್ಳಿ ಶಾಲೆಗೆ ಹತ್ತಿರ ನಾವು ಬರುವ ಹೊತ್ತಿಗೆ ನೇಸರನಾಗಲೇ ಬಾನಂಚಿನ ಕಡೆಗೆ ತನ್ನ ರಥವನ್ನು ಹೂಡಿಯಾಗಿತ್ತು. `ತಮಾ.. ಕತ್ಲೆ ಆಗ್ತಾ ಇದ್ದೋ...' ಎಂದ ಅಮ್ಮ ನನ್ನನ್ನು ಮುನ್ನಡೆಸಿದ್ದಳು. `ಇನ್ನೂ ಅಪ್ಪ ಬಂಜ್ನೇ ಇಲ್ಯಲೆ...' ಆಗಲೇ ಅದೆಷ್ಟನೆಯ ಸಾರಿಯೋ ಹೇಳಿದ್ದೆ. `ಬತ್ರು ಅವು..' ಮತ್ತೊಮ್ಮೆ ಅಮ್ಮ ಹೇಳಿದ್ದಳು.
           ನಾವು ನಡೆಯುತ್ತಲೇ ಇದ್ದೆವು. ನಮ್ಮೂರ ದಾರಿಯಲ್ಲಿ ಸಿಗುವಂತಹ ಹೆಣಸುಡುವ ಮುರ್ಕಿಯೂ ದಾಟಿತ್ತು. ಅದನ್ನು ಹಾದು ಮುಂದೆ ಬರುವ ವೇಳೆಗಾಗಲೇ ನನ್ನೊಳಗೆ ಅದೇನೋ ಅಳುಕು. ಏಕೆಂದರೆ ಮುಮದಿನ ದಾರಿ ಕತ್ತಲು ಕವಿದಂತಹ ಕಾಡು. ನಾನು ನಿಧಾನವಾಗಿ ಅಮ್ಮನ ಬಳಿ ಸರಿದು ನಡೆಯಲಾರಂಭಿಸಿದೆ. `ಎಂತಾ ಆತಾ ತಮಾ..' ಅಮ್ಮ ಕೇಳಿದ್ದಳು.
             `ಅಮ್ಮಾ.. ಕಾನಬೈಕಲು ಬಂತು. ಇಲ್ಲಿ ಕಾಡು ಪ್ರಾಣಿ ಎಲ್ಲಾ ಇರ್ತಡಾ..' ಎಂದೆ. `ಶೀ ಮಳ್ ಮಾಣಿ.. ಎಂತದ್ದೂ ಬರ್ತಿಲ್ಲೆ.. ಸುಮ್ನೆ ಹೋಪನ ಬಾ.. ಕತ್ಲೆ ಆಗೋದ್ರೊಳಗೆ ಮನೆ ಸೇರೋಣ..' ಎನ್ನವ ವೇಳೆಗೆ `ಆಯ್...' ಎಂದಳು. `ಎಂತಾ ಆತೆ ಅಮಾ..' ಎಂದೆ. ಅಮ್ಮನ ಕಾಲಿಗೊಂದು ಕಲ್ಲು ಚುಚ್ಚಿತ್ತು. ನೋವಿನಿಂದ ನರಳಿದ್ದಳು. `ಹಾಳಾದ್ದು.. ಕಲ್ಲು..' ಎಂದು ಬೈದು ಮುನ್ನಡೆದೆವು.
            `ಅಮ್ಮಾ... ಅಲ್ನೋಡೆ.. ಎಂತದ್ದೋ ಇದ್ದು.. ಸರಬರ ಹೇಳಿ ಶಬ್ದ ಆಗ್ತು..' ಭಯದಿಂದಲೇ ನಾನು ಕೇಳಿದ್ದೆ. ರಸ್ತೆ ಪಕ್ಕದ ಕಾಡಿನಲ್ಲಿ ಏನೋ ಶಬ್ದವಾಗಿತ್ತು. ನನಗೆ ಕಾಡೆಮ್ಮೆಯಿರಬೇಕು ಎನ್ನುವ ಅನುಮಾನ. ಅನುಮಾನದಿಂದಲೇ ಕೇಳಿದ್ದೆ. ಅಮ್ಮನಿಗೂ ಭಯವಾಗಿತ್ತಿರಬೇಕು.. `ಸುಮ್ನಿರಾ..' ಎಂದಳು. ನಾನು ಸುಮ್ಮನಾದೆ. ಮತ್ತೊಂದು ಮಾರು ದೂರ ಹೋಗಿದ್ದೆವು. ಅಮ್ಮ ಇದ್ದಕ್ಕಿದ್ದಂತೆ `ಇಡಾ ಪಿಂಗಳಾ ತ್ವ ಸುಸುಷ್ಮ್ನಾಚನಾಡಿ.. ತ್ವಮೇಕಾ ಗತಿರ್ದೇವಿ ಸದಾನಂದ ರೂಪೆ...' ಎಂದಳು.. ನಾನು ಅಮ್ಮನ ಮುಖ ನೋಡಿದೆ. ಅಮ್ಮನಿಗೂ ಭಯವಾಗಿತ್ತಿರಬೇಕು. ಭಯದಿಂದ ಅಮ್ಮ ಲಲಿತಾ ಸಹಸ್ರನಾಮವನ್ನು ಪಠಿಸಲು ಆರಂಭಿಸಿದ್ದಳು.
            ನಮ್ಮೂರ ಗುಡ್ಡದ ನೆತ್ತಿಯನ್ನು ತಲುಪುವ ವೇಳೆಗಾಗಲೇ ಸೂರ್ಯ ಬಾನಂಚಲ್ಲಿ ನಾಪತ್ತೆಯಾಗಿದ್ದ. ರಸ್ತೆ ಅಸಕು-ಮಸುಕಾಗಿ ಕಾಣುವಷ್ಟು ಕತ್ತಲಾಗಿತ್ತು. ರಸ್ತೆಯಲ್ಲಿ ನಡೆದು ಹೋದರೆ ಕನಿಷ್ಟ ಇನ್ನೊಂದು ತಾಸಾದರೂ ಬೇಕು ಎಂದುಕೊಂಡು ನಾವು ಅಡ್ಡದಾರಿಯನ್ನು ಹಿಡಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಗುಡ್ಡದ ಅಂಕುಡೊಂಕಿನ ಕಾಲು ದಾರಿಯಲ್ಲಿ ನಾನು-ಅಮ್ಮ ಇಳಿಯುತ್ತಿದ್ದಾಗಲೇ ಗಡ ಗಡ ಸದ್ದಾಯಿತು. `ಅಮ್ಮಾ.. ಅಪ್ಪ ಬಂದ ಕಾಣಿಸ್ತು..' ಎಂದೆ. `ಇಲ್ಯಾ.. ತಮಾ.. ಅವ್ರು ಬಂಜಿರಿಲ್ಲೆ..' ಎಂದಳು. ನಿಧಾನವಾಗಿ ಗುಡ್ಡ ಇಳಿದೆವು. ಅಷ್ಟರಲ್ಲಿ ಸಂಪೂರ್ಣವಾಗಿ ಕತ್ತಲಾಗಿಬಿಟ್ಟಿತ್ತು. ನಮಗೆ ದಾರಿಯೇ ಕಾಣುತ್ತಿರಲಿಲ್ಲ. ಇನ್ನೇನು ಮಾಡುವುದು ದೇವರೇ.. ಎಂದುಕೊಂಡು ಹೆಜ್ಜೆ ಹಾಕಿದೆವು. ಮಾರ್ಗ ಮಧ್ಯದಲ್ಲಿ ಒಂದು ಬೆಳಕು ಕಾಣಿಸಿತು. ಅದೊಂದು ಮನೆ. ಸೀದಾ ಮನೆಯೊಳಕ್ಕೆ ಹೋದ ನಾವು ಬ್ಯಾಟರಿ ಸಿಗಬಹುದಾ ಎಂದೆವು. ಮನೆಯ ಯಜಮಾನರು ಬ್ಯಾಟರಿ ಕೊಟ್ಟರು. ಬ್ಯಾಟರಿಯ ಮಿಣುಕು ಬೆಳಕಿನಲ್ಲಿ ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಮನೆ ಹತ್ತಿರವಾದಂತೆಲ್ಲ ನನಗೆ ಅಪ್ಪನ ಮೇಲೆ ಕಡುಕೋಪ ಬರಲು ಆರಂಭಿಸಿತು. ಅಪ್ಪ ಬರದೇ ಇರುವ ಕಾರಣ ಭಯವೂ ಆಯಿತೆನ್ನಿ. `ಅಮ್ಮಾ.. ಅಪ್ಪನನ್ನು ಗಮಿಯ (ಕಾಡೆಮ್ಮೆ) ಅಡ್ಡ ಹಾಕಿಕ್ಕನೇ.. ಅದಕ್ಕೆ ಬಂಜನಿಲ್ಯಾ ಹೆಂಗೆ..' ಎಂದೆ. `ಥೋ ಸುಮ್ನಿರಾ.. ಹಂಗೆಲ್ಲಾ ಎಂತದ್ದೂ ಆಜಿಲ್ಲೆ..' ಎಂದಳು ಅಮ್ಮ. ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ ದೂರದಲ್ಲಿ ಮನೆಯ ಬೆಳಕು ಕಾಣಿಸತೊಡಗಿತು.
            ಇನ್ನೇನು ಮನೆಗೆ 100 ಮೀಟರ್ ದೂರವಿದೆ ಎನ್ನುವಾಗ ಯಾರೋ ಕೆಮ್ಮಿದ ಸದ್ದಾಯಿತು. ನಾನೊಮ್ಮೆ ಬೆಚ್ಚಿದ್ದೆ. ಕೆಮ್ಮಿನ ಶಬ್ದ ಕೇಳಿದ ಜಾಗದಲ್ಲಿ ಯಾವುದೋ ಬೆಳಕು ಇತ್ತು. ಅದು ನಮ್ಮತ್ತಲೇ ಬರುತ್ತಿತ್ತು. `ತಮಾ..' ಎಂದಿತು ಶಬ್ದ. ನಾನು ಆಲಿಸಿದೆ. ಅಪ್ಪ ಕರೆದಿದ್ದ. ನನಗೆ ಒಮ್ಮೆಲೆ ಧೈರ್ಯ ಬಂದಿತ್ತು. ನಡುವೆಯೇ ಆಶ್ಚರ್ಯ. ಸೈಕಲ್ ಸರಿ ಮಾಡಿಸಿಕೊಂಡು ಬರುತ್ತೇನೆ ಎಂದು ಕಾನಸೂರು ಕಡೆಗೆ ಹೋಗಿದ್ದ ಅಪ್ಪ ಈಗ ಮನೆಯ ಕಡೆಯಿಂದ ನಮ್ಮೆಡೆಗೆ ನಡೆದುಕೊಂಡು ಬರುತ್ತಿದ್ದಾನಲ್ಲ ಇದು ಹೇಗೆ ಸಾಧ್ಯ ಎನ್ನಿಸಿತು. `ನೀ ಹೆಂಗೆ ಬಂದ್ಯೋ..' ಅಪ್ಪನ ಬಳಿ ಕೇಳಿದ್ದೆ. `ಆನು ಬಂದು ಹತ್ತು ನಿಮಿಷ ಆತಾ ತಮಾ.. ಬಂದು ಊಟ ಮುಗಿಸ್ಕಂಡು ಬಂದಿ. ನಿಂಗವ್ ಇನ್ನೂ ಬಂದು ಮುಟ್ಟಿದ್ರಿಲ್ಲೆ ಅಂತ ಮನೆಯಲ್ಲಿ ಹೇಳಿದ್ದ. ಅದಕ್ಕೆ ಕರಕಂಡು ಹೋಪನ ಅಂತ ಬಂದಿ..' ಎಂದ.
              ವಾಸ್ತವದಲ್ಲಿ ನಾವು ಅಡ್ಡದಾರಿಯಲ್ಲಿ ಗುಡ್ಡವನ್ನು ಇಳಿಯುತ್ತಿದ್ದಾಗಲೇ ಅಪ್ಪ ಸೈಕಲ್ ಮೂಲಕ ಮನೆಗೆ ಬಂದಿದ್ದ. ನನಗೆ ಗಡ ಗಡ ಸದ್ದು ಕೇಳಿಸಿದ್ದು ಸೈಕಲ್ಲಿನದ್ದೇ ಆಗಿತ್ತು.  ಕೈ ಹಿಡಿದುಕೊಂಡು ನನ್ನನ್ನು ಕರೆದುಕೊಂಡು ಬರುತ್ತಿದ್ದಳು ಅಮ್ಮ. ಅಪ್ಪ ಬಂದು ಬೆಳಕು ತೋರಿಸಿ, ಮನೆಗೆ ಬಂದು ತಲುಪಿದ್ದೇನೆ. ನನ್ನದು ಊಟವಾಯಿತು ಎಂಬ ಮಾತು ಕೇಳುತ್ತಿದ್ದಂತೆ ನನ್ನ ಕೈ ಮೇಲೇ ನೀರ ಹನಿ ಬಿದ್ದಂತಾಯಿತು. ನಾನು ಮಳೆ ಬಂತೇ ಎಂದು ನೋಡಿದೆ. ಮಳೆ ಬಂದಿರಲಿಲ್ಲ. ಅಮ್ಮ ಬಿಕ್ಕುತ್ತಿದ್ದಳು. ಅಪ್ಪ `ಬನ್ನಿ ಹೋಪನ ಮನಿಗೆ..' ಎಂದ. ಮನೆಯ ಅಂಗಳದತ್ತ ಹೆಜ್ಜೆ ಹಾಕಿದ್ದೆವು.

(ಮುಗಿಯಿತು)

Sunday, September 11, 2016

ಮುಂಗಾರು ಮಳೆ ಭಾಗ 2ರಿಂದ ನನಗೆ ವಯಕ್ತಿಕ ಶಾಪ ವಿಮೋಚನೆ : ಜಯಂತ ಕಾಯ್ಕಿಣಿ (ಸಂದರ್ಶನ)

ಕನ್ನಡ ಸಾಹಿತ್ಯ ಲೋಕದಲ್ಲಿ ಜಯಂತ ಕಾಯ್ಕಿಣಿಯವರು ತಮ್ಮದೇ ಆದ ಛಾಪನ್ನು ಮೂಡಿಸಿದವರು. ಕಥೆಗಾರರಾಗಿ ಓದುಗರನ್ನು ಸೆಳೆದ ಜಯಂತ ಕಾಯ್ಕಿಣಿಯವರು ಕಳೆದೊಂದು ದಶಕದಿಂದೀಚೆಗೆ ಚಿತ್ರ ಸಾಹಿತಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಮುಂಗಾರು ಮಳೆ ಚಲನಚಿತ್ರದ ಹಿಟ್ ಗೀತೆಗಳನ್ನು ನೀಡಿದ ಜಯಂತ ಕಾಯ್ಕಿಣಿಯವರು ಮುಂಗಾರು ಮಳೆ ಕವಿ, ಮಳೆ ಕವಿ, ಪ್ರೇಮಕವಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದಾರೆ. ಯುವ ಜನರ ಕನಸುಗಳಿಗೆ ಅಕ್ಷರ ರೂಪವನ್ನು ನೀಡಿದವರು ಜಯಂತ ಕಾಯ್ಕಿಣಿ. ಕನ್ನಡ ಚಿತ್ರರಂಗದಲ್ಲಿ ಮಧುರ ಹಾಡುಗಳ ಟ್ರೆಂಡ್ ಸೃಷ್ಟಿಸಿದವರು ಇವರು. ಮತ್ತೆ ಮತ್ತೆ ಕೇಳುವಂತಹ, ಏಕಾಂತದಲ್ಲಿ ಗುನುಗುವಂತಹ ಹಾಡುಗಳನ್ನು ನೀಡಿದವರು ಕಾಯ್ಕಿಣಿ. ಅನಿಸುತಿದೆ ಯಾಕೋ ಇಂದು.., ನಿನ್ನಿಂದಲೇ, ಮಿಂಚಾಗಿ ನೀನು ಬರಲು ಹೀಗೆ ಸಾಲು ಸಾಲು ಹಿಟ್ ಗೀತೆಗಳನ್ನು ಕೊಟ್ಟವರು ಜಯಂತರು. ಅವರು ಮುಂಗಾರು ಮಳೆಗೆ ಗೀತೆಯನ್ನು ಬರೆದು 10 ವರ್ಷಗಳೇ ಕಳೆದಿವೆ. ಈ ಹತ್ತು ವರ್ಷದ ನಂತರ ಮುಂಗಾರು ಮಳೆ ಚಿತ್ರದ ಮುಂದುವರಿದ ಭಾಗ ಬಿಡುಗಡೆಯಾಗಿದೆ. ಮುಂಗಾರು ಮಳೆ ಭಾಗ-2ರಲ್ಲಿ 2 ಗೀತೆಗಳನ್ನು ಜಯಂತ ಕಾಯ್ಕಿಣಿ ಅವರು ಬರೆದಿದ್ದು ಈ ಎರಡೂ ಗೀತೆಗಳು ಈಗಾಗಲೇ ಜನಮನ ಸೂರೆಗೊಂಡಿದ್ದು ವೈರಲ್ ಆಗಿದೆ. ಮುಂಗಾರುಮಳೆ ಭಾಗ-2 ಬಿಡುಗಡೆಯಾದ ಸಂದರ್ಭದಲ್ಲಿಯೇ ಮಾತಿಗೆ ಸಿಕ್ಕಿದ್ದ ಪ್ರೇಮಕವಿ ಜಯಂತ ಕಾಯ್ಕಿಣಿಯವರು ಚಿತ್ರರಂಗ, ಚಿತ್ರಗೀತೆಗಳು, ಚಿತ್ರ ಸಾಹಿತ್ಯದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ..

ಪ್ರಶ್ನೆ : ಮುಂಗಾರು ಮಳೆ ಭಾಗ-2 ಬರುತ್ತಿದೆ. ಏನನ್ನಿಸುತ್ತಿದೆ?
ಮುಂಗಾರು ಮಳೆ ಭಾಗ ಎರಡು ಸಿನೆಮಾವನ್ನು ನಾನಿನ್ನೂ ನೋಡಿಲ್ಲ. ಆದರೆ ಕೆಲವು ಭಾಗಗಳನ್ನು ಮಾತ್ರ ನಾನು ನೋಡಿದ್ದೇನೆ. ಸಂತೋಷದ ಸಂಗತಿ ಎಂದರೆ ಮುಂಗಾರು ಮಲೆ ಭಾಗ ಎರಡಕ್ಕೆ ನಾನು ಬರೆದ ಎರಡೂ ಹಾಡುಗಳನ್ನು ಜನರು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಸರಿಯಾಗಿ ನೆನಪಿದೆ ನನಗೆ ಹಾಗೂ ಗಮನಿಸು ನೀ ಒಮ್ಮೆ ಎಂಬ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ನಾನು ಹೋದ ಕಡೆಯಲ್ಲೆಲ್ಲ ಈ ಹಾಡುಗಳ ಬಗ್ಗೆ ನನಗೆ ಖುಷಿಯಿಂದ ಮಾತನಾಡುತ್ತಿದ್ದಾರೆ. ಇದು ನನಗೆ ವಯಕ್ತಿಕವಾಗಿ ಒಂದು ಶಾಪ ವಿಮೋಚನೆ.
ಸರಿಯಾಗಿ ಹತ್ತು ವರ್ಷಗಳ ಹಿಂದೆ ಮುಂಗಾರುಮಳೆ ಭಾಗ ಒಂದು ಬಿಡುಗಡೆಯಾಗಿತ್ತು. ಆ ಸಿನೆಮಾಕ್ಕೆ ಹಾಡನ್ನು ಬರೆದ ನಂತರದಲ್ಲಿ ನಾನು 300 ಹಾಡುಗಳನ್ನು ಬರೆದಿದ್ದೇನೆ. ಆದರೆ ಸಿಕ್ಕಿದವರೆಲ್ಲ ಮುಂಗಾರು ಮಳೆಯನ್ನೇ ಮಾತನಾಡುತ್ತಿದ್ದರು. ನೀವು ಏನೆ ಬರೆಯಿರಿ ಮುಂಗಾರು ಮಳೆ ಸಿನೆಮಾ ಹಾಡೇ ಬೆಸ್ಟ್ ಎಂದು ಹೇಳುತ್ತಿದ್ದರು. ಯಾವುದೇ ಒಂದು ದೊಡ್ಡ ಹಿಟ್ ಸಿನೆಮಾ ಬಂದರೆ ಅದರ ಮುಂದಿನ ಭಾಗದ ಸಿನೆಮಾ ಬಂದಾಗಲೂ ಕೂಡ ಮೊದಲನೇ ಭಾಗ ನೆನಪಿನಲ್ಲಿ ಉಳಿಯುತ್ತದೆ. ಇದೊಂಥರಾ ಮೊದಲನೇ ಪ್ರೇಮ ಇದ್ದಂತೆ. ಅದು ತಾಜಾ ಇರುತ್ತದೆ. ತಾಜಾ ಇದ್ದಾಗ ಎಲ್ಲರೂ ಇಷ್ಟ ಪಡುತ್ತಾರೆ. ಉದಾಹರಣೆಗೆ ನಿಮಗೆ ಯಾವುದಾದರೂ ಒಂದು ಹೊಟೆಲ್ಗೆ ಹೋಗಿ ಬನ್ಸ್ ಬಾಜಿ ತಿಂದಿರಿ, ಇಷ್ಟವಾಯಿತು ಎಂದುಕೊಳ್ಳಿ. ಅದನ್ನು ನಿಮ್ಮ ಗೆಳೆಯನಿಗೆ ಹೇಳಿ ಆತನನ್ನೂ ಕರೆದುಕೊಂಡು ಹೋಗುತ್ತೀರಿ. ಆಗ ಮೊದಲಿನ ರುಚಿಯಂತೆ ನಿಮಗೆ ಅನ್ನಿಸುವುದಿಲ್ಲ. ಆತನಿಗೆ ಅದು ರುಚಿಸುತ್ತದೆ. ಜನರು ಮೊದಲ ಭಾಗಕ್ಕೂ ಎರಡನೆ ಭಾಗಕ್ಕೂ ಹೋಲಿಕೆ ಮಾಡಿ ನೋಡುತ್ತಾರೆ. ಹೀಗಾಗಿ ಮುಂಗಾರು ಮಳೆ ಎನ್ನುವುದು ನನಗೆ ಒಂದು ರೀತಿಯಲ್ಲಿ ಶಾಪದ ಹಾಗೆ ಆಗಿತ್ತು. ಇದು ಒಳ್ಳೆಯ ಅರ್ಥದ ಶಾಪ. ಮುಂಗಾರು ಮಳೆಯ ಎರಡನೇ ಭಾಗದ ಚಿತ್ರದಲ್ಲಿನ ಹಾಡುಗಳು ಅದನ್ನು ಮರೆಸಿ ಹಿಟ್ ಆಗಿದೆ. ನನಗೆ ವಯಕ್ತಿಕವಾಗಿ ಇದೊಂದು ಖುಷಿಯ ಸಂಗತಿ. ಹತ್ತು ವರ್ಷಗಳಿಂದ ಬರೆಯುತ್ತಿದ್ದರೂ ಕೂಡ ಇದುವರೆಗೂ ಜನರಿಗೆ ಇಷ್ಟವಾಗುತ್ತಿದೆ. ಜನರಿಗೆ ಇಷ್ಟವಾಗುತ್ತಿದ್ದರೆ ಇನ್ನೂ ಕೆಲವು ದಿವಸಗಳ ಕಾಲ ಬರೆಯಬಹುದು ಎನ್ನುವ ಆತ್ಮವಿಶ್ವಾಸ.

ಪ್ರಶ್ನೆ : ಮುಂಗಾರು ಮಳೆ ಸಿನೆಮಾ ಬಂದ ನಂತರ ನೀವು ಪ್ರೇಮಕವಿ, ಮಳೆ ಕವಿ ಎಂದೇ ಖ್ಯಾತಿಯನ್ನು ಪಡೆದಿರಿ. ಈ ಸಿನೆಮಾಕ್ಕೂ ಮೊದಲಿನ ನಿಮ್ಮ ಬರಹಗಳು, ಪ್ರೇಮಕವಿತೆಗಳ ಬಗ್ಗೆ ಹೇಳಿ
ಮುಂಗಾರು ಮಳೆ ಸಿನೆಮಾಕ್ಕೂ ಮೊದಲು ನಾನು ಪ್ರೇಮ ಕವಿತೆಗಳನ್ನು ಬರೆದೇ ಇರಲಿಲ್ಲ. ನನ್ನದು ಬದುಕಿನ ಕುರಿತಾದ ಪ್ರೇಮ. ಬದುಕಿಗೆ ಬರೆದ ಪ್ರೇಮಪತ್ರಗಳು ಕವಿತೆಯಾಗುತ್ತವೆ. ಬದುಕಿ ಬರೆದ ಪ್ರೇಮಪತ್ರಗಳು ಕಥೆಯಾಗುತ್ತವೆ. ನನ್ನ ಮುಖ್ಯ ಸಾಹಿತ್ಯದಲ್ಲಿ ಪ್ರೇಮ ಸಣ್ಣ ವಿಷಯ. ಆದರೆ ಸಿನೆಮಾದಲ್ಲಿ ಪ್ರೇಮವೇ ಪ್ರಮುಖ ವಿಷಯ. ಹೀಗಾಗಿ ಸಿನೆಮಾ ಎನ್ನುವುದು ನನ್ನ ಜೀವನ ದರ್ಶನದ ಅಭಿವ್ಯಕ್ತಿ ಅಲ್ಲ. ಸಿನೆಮಾ ಹಾಡುಗಳು ಎಂದರೆ ಯಾವುದೋ ಸಂದರ್ಭಕ್ಕೆ, ಯಾವುದೋ ಪಾತ್ರಕ್ಕೆ ಹೊಸೆಯುವ ಹಾಡುಗಳಷ್ಟೆ. ಅದು ನನ್ನ ಜೀವನದ ದರ್ಶನ ಅಲ್ಲ. ಆ ಪಾತ್ರಕ್ಕೆ ಏನು ಬೇಕೋ ಅದನ್ನು ನೀಡುವುದು ಅಷ್ಟೆ.

ಪ್ರಶ್ನೆ : ನೀವು ಮುಂಗಾರು ಮಳೆ ಸಿನೆಮಾಕ್ಕೆ ಕವಿತೆಗಳನ್ನು ಬರೆದ ನಂತರ ನಿಮ್ಮನ್ನು ಅನುಕರಣೆ ಮಾಡುವವರು ಬಹಳ ಜನರಾದರು. ಬೇರೆಯವರು ಬರೆದರೂ ಇದು ಜಯಂತ ಕಾಯ್ಕಿಣಿಯವರು ಬರೆದ ಗೀತೆ ಎನ್ನುವ ಹಂತವನ್ನು ತಲುಪಿತು. ಈ ಬಗ್ಗೆ ಏನು ಹೇಳುತ್ತೀರಿ ?
ಭಾರತ ದೇಶದಲ್ಲಿ ಕೋಟಿಗಟ್ಟಲೆ ಹಾಡುಗಳು ಪ್ರೀತಿಯ ಮೇಲೆ ಬಂದು ಹೋಗಿದೆ. ಪ್ರೀತಿಯ ಕುರಿತು ಎಷ್ಟಾದರೂ ಹಾಡುಗಳನ್ನು ಬರೆಯಬಹುದು. ಅದೇ ಪ್ರೀತಿ, ಮೊದಲ ಪ್ರೀತಿ, ಏಕಮುಖ ಪ್ರೀತಿ, ಎರಡನೇ ಪ್ರೀತಿ, ಅದೇ ವಿರಹ, ಸರಸ, ಹೀಗೆ ಎಲ್ಲೆಲ್ಲೂ ಪ್ರೀತಿಯೇ. ಅದರ ಬಗ್ಗೆಯೇ ಮತ್ತೆ ಹೇಗೆ ಹೊಸದನ್ನು ಹೇಳಲು ಸಾಧ್ಯ? ಅದದೇ ಪ್ರೀತಿ ಮತ್ತೆ ಮತ್ತೆ ಮರುಕಳಿಸುತ್ತದೆ. ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಕಷ್ಟವೇ. ನಾನು ಚಿತ್ರಗೀತೆ ರಚನೆಕಾರನಾಗುವ ಮೊದಲು ಚಿತ್ರಗೀತೆ ರಚನೆಕಾರರನ್ನು ಬಹಳ ಉಢಾಫೆಯಾಗಿ ಕಾಣುತ್ತಿದ್ದೆ. ಇದನ್ನು ಯಾರು ಬೇಕಾದರೂ ಬರೆಯಬಹುದು ಎಂಬಂತೆ ಲೇವಡಿ ಮಾಡುತ್ತಿದ್ದೆ. ಬಾನಲ್ಲೂ ನೀನೆ, ಬಯಲಲ್ಲೂ ನೀನೆ, ಮನೆಯಲ್ಲೂ ನೀನೆ, ಹೊರಗೂ ನೀನೆ ಹೀಗೆ ಬರೆದುಕೊಂಡು ಹೋಗಬಹುದಲ್ಲ ಎಂದುಕೊಂಡಿದ್ದೆ. ಯಾವಾಗ ನಾನು ಚಿತ್ರಗೀತೆಗಳನ್ನು ಬರೆಯಲು ಆರಂಭಿಸಿದೆನೋ ಈಗ ಅದರ ಕಷ್ಟ ಸುಖಗಳೆಲ್ಲ ಗೊತ್ತಾಗಲು ಆರಂಭವಾಗಿದೆ. ಇದರ ಜೊತೆಗೆ ಸೆಟ್ ಆಗಿರುವ ಟ್ಯೂನಿಗೆ ಬರೆಯುವುದು ಸುಲಭವಲ್ಲ. ಅದಕ್ಕೆ ಅದರದೇ ಆದ ಕೌಶಲವಿದೆ. ಅದನ್ನು ಬಳಸಿಕೊಳ್ಳಬೇಕು. ಅದೇ ಪ್ರೀತಿಯ ಬಗ್ಗೆ ಹೊಸ ಮಾತನ್ನು ಹೇಗೆ ಹೇಳುವುದು? ಈ ಬಗ್ಗೆ ಬಹಳಷ್ಟು ಸಾರಿ ನನಗೆ ಕಾಡಿದ್ದಿದೆ. ಇದನ್ನೇ ನಾನು `ಏನೆಂದು ಹೆಸರಿಡಲಿ, ಅದೇ ಪ್ರೀತಿ, ಅದೇ ರೀತಿ, ಹೇಗಂತ ಹೇಳುವುದು..' ಅಂತ ಬರೆದಿದ್ದೆ. ಏಕೆಂದರೆ ನನಗೆ ಯಾವುದೇ ಸಾಲುಗಳು ಆಗ ಹೊಳೆಯುತ್ತಿರಲಿಲ್ಲ. ಇದು ಪ್ರತಿಯೊಬ್ಬ ಗೀತರ ರಚನೆಕಾರನ ಕಷ್ಟ.
ನನಗೆ ತುಂಬಾ ಹಿಂದಿ ಹಾಡುಗಳ ಪ್ರೇಮವಿದೆ. ಕೆಲವರಿಗೆ ಹಾಗಾಗಿ ನನ್ನ ಹಾಡುಗಳಲ್ಲಿ ಹಿಂದಿ ಹಾಡುಗಳ ಛಾಯೆ ಕಾಣಬಹುದು. `ಕೇದಿಗೆ ಗರಿಯಂತ ನಿನ್ನ ನೋಟ..' ಎಂಬ ಸಾಲು ನಿನ್ನಿಂದಲೇ... ಹಾಡಿನಲ್ಲಿದೆ. ಕೇದಿಗೆ ಗರಿ ಎಂದಕೂಡಲೇ ಬೇಂದ್ರೆ ನೆನಪಾಗುತ್ತಾರೆ. ಏಕೆಂದರೆ ಕೇದಿಗೆ ಗರಿ ಸಿಕ್ಕಿದ್ದೇ ಬೇಂದ್ರೆ ಅವರಿಂದ. ಕವಿತೆ ಬರೆಯುವುದು ಸಂಯುಕ್ತ ಕಲಾಪ. ಇದು ನನ್ನದು, ಅದು ನಿನ್ನದು ಎಂದು ಹೇಳಲು ಸಾಧ್ಯವಿಲ್ಲ. ಅದು ಬೆಳದಿಂಗಳಿನಂತೆ ಎಲ್ಲರಿಗೂ ಸೇರಿದ್ದು.

ಪ್ರಶ್ನೆ : ಸಾಮಾನ್ಯ ಸಾಹಿತ್ಯವನ್ನು ಇಷ್ಟಪಡುವವರು ಚಿತ್ರ ಸಾಹಿತ್ಯದ ಬಗ್ಗೆ ಮೂಗು ಮುರಿಯುತ್ತಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?
ಯಾವ ಸಾಹಿತ್ಯ ಯಾರಿಗೆ ಇಷ್ಟ ಎನ್ನುವುದು ಅವರವರ ಅಭಿವ್ಯಕ್ತಿಗೆ ಸೇರಿದ್ದು. ಅವರವರಲ್ಲಿ ಯಾವ ರೀತಿ ಅಭಿವ್ಯಕ್ತಿ ಇರುತ್ತದೆಯೋ ಅದಕ್ಕೆ ತಕ್ಕಂತೆ ಅವರು ಸಾಹಿತ್ಯವನ್ನು ಇಷ್ಟ ಪಡುತ್ತಾರೆ. ನಾನು ಎರಡೂ ಕವಿತೆಗಳನ್ನು ಬರೆಯುತ್ತಿರುತ್ತೇನೆ. ನನ್ನ ಕವನ ಸಂಕಲನಗಳೂ ಬರುತ್ತಿರುತ್ತವೆ. ಕಥಾ ಸಂಕಲನಗಳೂ ಬರುತ್ತಿರುತ್ತವೆ. ಸಿನೆಮಾ ಹಾಡುಗಳೂ ಬರುತ್ತಿರುತ್ತವೆ. ನನ್ನ ಹಾಡುಗಳನ್ನು ಇಷ್ಟಪಡುವವರು ಅಂಗಡಿಗಳಿಗೆ ಹೋದಾಗ `ಇವರು ಕಥೆಗಳನ್ನೂ ಬರೆಯುತ್ತಾರಾ..? ನೋಡ್ವಾ' ಎಂದು ಪುಸ್ತಕಗಳನ್ನು ಕೊಂಡ ಉದಾಹರಣೆಗಳಿವೆ. ಅದೇ ರೀತಿ ನನ್ನ ಸಾಹಿತ್ಯದ ಅಭಿಮಾನಿಗಳು `ಜಯಂತ ಏನೋ ಹಾಡು ಬರೆದಿದ್ದಾನಂತಲ್ಲ.. ಕೇಳ್ವಾ..' ಎಂದು ಹಾಡನ್ನು ಕೇಳಲು ಆರಂಭಿಸುತ್ತಾರೆ. ಹೀಗೆ ಒಂದನ್ನು ಇಷ್ಟ ಪಡುವವರು ಇನ್ನೊಂದರತ್ತ ಹೊರಳುತ್ತಲೇ ಇರುತ್ತಾರೆ. ಆದರೆ ಇದು ಶ್ರೇಷ್ಟ ಸಾಹಿತ್ಯ, ಇದು ಕನಿಷ್ಟ ಸಾಹಿತ್ಯ ಎಂಬಂತಹ ಮಡಿವಂತಿಕೆ ಸಲ್ಲ. ಇದು ಮುಖ್ಯ ಧಾರೆಯ ಸಾಹಿತ್ಯ, ಇದು ಬೇರೆಯದು ಎನ್ನುವ ಭಾವನೆಯೂ ಸಲ್ಲದು. ಎಲ್ಲವುಗಳಿಗೂ ಅದರದೇ ಆದ ಇತಿಮಿತಿಯಿದೆ. ಆದರೆ ಸಿನೆಮಾ ಸಾಹಿತ್ಯ ಎಂಬುದು ಪೂರಕ ಸಾಹಿತ್ಯ. ಇದೊಂಥರಾ ನಾಟಕಕ್ಕೆ ಹಾಡು ಬರೆದಂತೆ. ಯಾವುದೋ ಕಾರ್ಯಕ್ರಮಕ್ಕೆ ಸ್ವಾಗತಗೀತೆಯನ್ನು ಬರೆದಂತೆ. ಅದರ ಉದ್ದೇಶ ಅಷ್ಟಕ್ಕೇ ಸೀಮಿತವಾದದ್ದು. ನಾವು ಬರೆಯುವ ಸಾಹಿತ್ಯ ಸ್ವಂತದ ಸಾಹಿತ್ಯ. ಅಂದರೆ ಬದುಕಿನಕುರಿತಾದ ಸಾಹಿತ್ಯ.


ಪ್ರಶ್ನೆ : ಹೊಸ ಚಿತ್ರ ಸಾಹಿತಿಗಳ ಬಗ್ಗೆ ನಿಮ್ಮ ಅಭಿಪ್ರಾಯ. ಇತ್ತೀಚಿನ ಚಿತ್ರಗಳಲ್ಲಿ ಹೆಚ್ಚಿತ್ತಿರುವ ಅಶ್ಲೀಲ ಚಿತ್ರಗೀತೆಗಳ ಕುರಿತು ನೀವು ಏನು ಹೇಳಲು ಬಯಸುತ್ತೀರಿ?
ಎಲ್ಲ ಕಾಲದಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿಯೂ ಶೆ.20ರಷ್ಟು ಜೊಳ್ಳು ಇದ್ದೇ ಇರುತ್ತದೆ. ಅದೇ ರೀತಿ ಸಿನಿಮಾ ಲೋಕದಲ್ಲಿಯೂ ಕೂಡ ಶೆ.20ರಷ್ಟು ಜೊಳ್ಳು ಇದ್ದೇ ಇರುತ್ತವೆ. ಸಿನೆಮಾ ಸಾಹಿತ್ಯವನ್ನು ಹೊರತುಪಡಿಸಿ ಇತರ ಸಾಹಿತ್ಯಕ್ಕೆ ಬಂದರೆ ಅದರಲ್ಲಿಯೂ ನೂರಕ್ಕೆ ನೂರರಷ್ಟು ಉತ್ತಮ ಸಾಹಿತ್ಯ ಎಲ್ಲಿದೆ. ಕ್ರಿಕೆಟ್ ಆಟದಲ್ಲಿಯೂ ಶೇ.100ರಷ್ಟು ಶ್ರೇಷ್ಟವಾದುದು ಎಲ್ಲಿದೆ? ಪತ್ರಿಕೋದ್ಯಮದಲ್ಲಿ ಎಲ್ಲ ಶ್ರೇಷ್ಟ ಎಲ್ಲಿದೆ? ಅಂಗಡಿಯಲ್ಲಿ ಸಿಗುವ ಮಸಾಲೆದೋಸೆಯಲ್ಲಿಯೂ ಎಲ್ಲಾ ಶ್ರೇಷ್ಟವಾಗಿರುವುದಿಲ್ಲ. ಇವೆಲ್ಲದರಲ್ಲಿಯೂ ಶೆ.20ರಷ್ಟು ಕಳಪೆಯಾದದ್ದು ಹಾಗೂ ತೆಗೆದುಹಾಕಬಹುದಾದಂತಹವುಗಳು ಇದ್ದೇ ಇರುತ್ತವೆ. ಸಿನೆಮಾ ರಂಗ ಎನ್ನುವುದು ದೊಡ್ಡ ಉದ್ದಿಮೆ. ಹೀಗಾಗಿ ಇಲ್ಲಿಯೂ ಕೂಡ ಇಂತಹ ಜೊಳ್ಳುಗಳು ಇದ್ದೇ ಇರುತ್ತವೆ. ಕನ್ನಡ ಸಾಹಿತ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಯಾರೂ ಮಾಡುತ್ತಿಲ್ಲ. ದುಡ್ಡು ಮಾಡಬೇಕೆಂಬ ಕಾರಣಕ್ಕಾಗಿಯೇ ಎಲ್ಲರೂ ಮಾಡುತ್ತಿರುವುದು ಇದು. ಇದೊಂದು ಬ್ಯುಸಿನೆಸ್. ಅದರ ಉಪ ಉತ್ಪನ್ನಗಳಾಗಿ ಇಂಗತವುಗಳೆಲ್ಲ ಬರುತ್ತಿರುತ್ತವೆ. ಆದರೆ ಇಂತವುಗಳು ಬೇಗನೆ ಹೋಗುತ್ತವೆ. ಮನೆಯಲ್ಲಿ ಮಾಡಿದ ಗಂಜಿ ಅಥವಾ ಉಪ್ಪಿನಕಾಯಿಗಳು ಬಹಳ ಕಾಲ ಉಳಿಯುತ್ತವೆ. ಆದರೆ ರಸ್ತೆಯಲ್ಲಿ ಮಾಡಿದ ಭೇಲ್ಪುರಿಗಳನ್ನು ಪಾರ್ಸಲ್ ಮಾಡಿ ಮನೆಗೆ ತಂದು ಸ್ವಲ್ಪ ಲೇಟಾಗಿ ತಿಂದರೂ ಅದು ಸ್ವಾದ ಕಳೆದುಕೊಳ್ಳುತ್ತವೆ. ಇವೆಲ್ಲ ಭೇಲ್ಪುರಿ ತರಹದ ರಚನೆಗಳು. ಬೇಗನೆ ಉಳಿಯುವುದಿಲ್ಲ.


ಪ್ರಶ್ನೆ : ಹಿರಿಯ ಸಾಹಿತಿಗಳ ನಂತರ, ಇಂದಿನ ತಲೆಮಾರಿನ ಕವಿಗಳು ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವ ಮಾತುಗಳಿದೆ. ಯಾವುದೇ ಜಿಲ್ಲೆಗಳಿಗೆ ಹೋಲಿಸಿದರೆ ಅಲ್ಲಿನ ಕವಿಗಳು ಅಲ್ಲಿಗಷ್ಟೇ ಸೀಮಿತರಾಗುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ.
ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಇಂತಹದ್ದೆಲ್ಲ ಇಲ್ಲ. ಈ ಮಟ್ಟಗಳನ್ನೆಲ್ಲ ಮನುಷ್ಯರು ಮಾಡಿಕೊಂಡಿರುವುದು. ಒಮ್ಮೆ ವಿಷ್ಣು ನಾಯ್ಕ ಅವರು ನಮ್ಮ ಮನೆಗೆ ಬಂದಿದ್ದರು. ಅವರು ನಮ್ಮ ಗೋಕರ್ಣದ ಮನೆಗೆ ಬಂದಿದ್ದ ಸಂದರ್ಭದಲ್ಲಿ ತಂದೆಯವರ ಬಳಿ ನಾನೊಂದು ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮ ಮಾಡುತ್ತೇನೆ ಎಂದರು. ಆಗನ ನನ್ನ ತಂದೆ ಗೌರೀಶ ಕಾಯ್ಕಿಣಿಯವರು ಅಲ್ಲಿ ಇದ್ದ ನಿತ್ಯಪುಷ್ಪದ ಗಿಡವನ್ನು ತೋರಿಸಿ `ವಿಷ್ಣು ಇದು ಯಾವ ಮಟ್ಟದ್ದು..' ಎಂದು ಕೇಳಿದರು. ಏಕೆಂದರೆ ಆ ಗಿಡ ಇದ್ದಲ್ಲೇ ಇದ್ದು ವಿಶ್ವದ ಜೊತೆಗೆ ಸಂವಾದ ಮಾಡುತ್ತದೆ. ಹೋಬಳಿ ಮಟ್ಟ, ಆ ಮಟ್ಟ ಈ ಮಟ್ಟ ಎಲ್ಲ ರಾಜಕೀಯ ರಂಗಕ್ಕೆ ಸೇರಿದ್ದಷ್ಟೇ. ಸಾಹಿತ್ಯ ಇರುವುದು ಲೆಟರ್ಹೆಡ್ಡಿಗೆ, ವಿಸಿಟಿಂಗ್ ಕಾಡರ್ಿಗೆ, ಬಯೋಡೆಟಾಕ್ಕೆ ಇರುವ ವಿಷಯವಲ್ಲ. ಅದು ಜೀವನವನ್ನು ಅರ್ಥ ಮಾಡಿಕೊಳ್ಳಲು ಖಾಸಗಿಯಾಗಿ ನಡೆಯುವಂತದ್ದು. ಎಲ್ಲರ ಜೊತೆ ಸಂಬಂಧದಲ್ಲಿ ನಡೆಯುವಂತದ್ದು. ಅದರಲ್ಲಿ ಈ ರೀತಿಯ ಪಂಗಡಗಳೆಲ್ಲ ಇಲ್ಲ. ಒಳ್ಳೆಯ ಕವಿ ಒಳ್ಳೆಯ ಕವಿಯಷ್ಟೇ. ಅವನನ್ನು ರಾಜ್ಯದವರು ಗುರುತಿಸಬಹುದು ಅಥವಾ ದೇಶ ಮಟ್ಟದಲ್ಲಿ ಗುರುತಿಸಬಹುದು. ಅಥವಾ ಅವನ ಊರಿನವರು ಮಾತ್ರ ಗುರುತಿಸಬಹುದು. ನನಗೆ ಆ ಥರದ ಮಟ್ಟಗಳಲ್ಲಿ ನಂಬಿಕೆಯಿಲ್ಲ.

--------------

(ವಿಶ್ವವಾಣಿಗಾಗಿ ಮಾಡಿದ ಸಂದರ್ಶನ ಇದು. ಈ ಸಂದರ್ಶನವು ಸೆ.11ರ ಭಾನುವಾರದ ವಿಶ್ವವಾಣಿಯ ಸಂ-ಗಮ ಪುಟದಲ್ಲಿ ಪ್ರಕಟವಾಗಿದೆ)

Saturday, September 10, 2016

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ-5

 
           ಸ್ವರ್ಗದಲ್ಲಿ ಇಂತಹ ಆಹಾರ ಇರಬಹುದೇನೋ ಎಂದುಕೊಂಡು ಸವಿದ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದೆವು. ಶ್ರೀಧರ ಕುಟಿಯಿಂದ ನಾವು ಹೊರಟಿದ್ದು ಸಮರ್ಥ ರಾಮದಾಸರು ದೇವರಲ್ಲಿ ಐಕ್ಯರಾದ ಸ್ಥಳಕ್ಕೆ. ಅಲ್ಲೊಂದು ಸುಂದರ ದೇಗುಲ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲಿಯೇ ಆಂಜನೇಯ ಸಮರ್ಥ ರಾಮದಾಸರ ಭಕ್ತಿಗೆ ಮೆಚ್ಚಿ ಬಾಣವನ್ನು ಹೂಡಿ ಗಂಗೆಯನ್ನು ಹರಿಸಿದ ಎಂಬ ಪ್ರತೀತಿಯನ್ನು ಹೊಂದಿರುವ ಚಿಲುಮೆ. ಅದನ್ನೆಲ್ಲ ನೋಡಿದೆವು.
            ಅದೇ ಸಮಯದಲ್ಲಿ ಪೂಜೆ ಆರಂಭವಾಗಿತ್ತು. ಪೂಜೆಯನ್ನು ವೀಕ್ಷಣೆ ಮಾಡಲು ಕುಳಿತೆವು. ಉಸಿರು ಕಟ್ಟುವಂತಹ ಕಿರಿದಾದ ಕೊಠಡಿ. ನೂರಾರು ಜನ ಸೇರಿದ್ದರು. ನಾವೂ ಹೋಗಿ ಕುಳಿತೆವು. ಬಗ್ಗಿ ಒಳಹೋದರೆ ಕಲ್ಲಿನ ಕುಟಿ. ಶಿವಾಜಿ ಮಹಾರಾಜರೇ ಕಟ್ಟಿಸಿದ್ದ ಗುಹೆ ಅದು. ಸಮರ್ಥ ರಾಮದಾಸರ ಸಮಾಧಿಗೆ ಅಲ್ಲಿ ಪೂಜೆ ನಡೆಯುತ್ತಿತ್ತು. ಚಿಕ್ಕ ಚಿಕ್ಕ ವಟುಗಳು ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಹೇಳುತ್ತಿದ್ದರೆ ಅಲ್ಲಿ ಹಾಕಿದ್ದ ಸಿಸಿಟಿವಿ ಅದನ್ನೆಲ್ಲ ಹೊರಗೆ ಬಿತ್ತರಿಸುತ್ತಿತ್ತು. ಜೊತೆಯಲ್ಲಿಯೇ ಜೈ ಜೈ ಸಮರ್ಥ ರಘುವೀರ ಎನ್ನುವ ಜಯಘೋಷ ಮೊಳಗುತ್ತಿತ್ತು. ನಾನು, ಪ್ರಶಾಂತ ಭಾವ ಹಾಗೂ ಸಂಜಯ ಅದೆಷ್ಟೋ ಅಮಯ ಕಣ್ಮುಚ್ಚಿ ಪ್ರಾರ್ಥನೆ ಮಾಡಿದೆವು. ಒಂದೋ, ಒಂದೂವರೆ ತಾಸೋ ಕಳೆದ ನಂತರ ಮಹಾ ಮಂಗಳಾರತಿ ಆರಂಭವಾಯಿತು. ಎಲ್ಲರೂ ಧನ್ಯರಾಗಿ ಅದನ್ನು ವೀಕ್ಷಣೆ ಮಾಡಿದೆವು. ಅದೇ ಸಂದರ್ಭದಲ್ಲಿ ಸದ್ಗುರು ಶ್ರೀಧರ ಸ್ವಾಮಿಗಳು ರಚಿಸಿದ ಕನ್ನಡ ಹಾಗೂ ಮರಾಠಿಯ ಭಜನೆ ವಾಚನವೂ ಆಯಿತು. ಪ್ರಸಾದ ಸ್ವೀಕರಿಸಿ ಹೊರ ಬಂದೆವು.
          ಸಮಾಧಿ ಮಂದಿರದ ಹೊರ ಬಂದರೆ ಸಣ್ಣಗೆ ಜಿಟಿ ಜಿಟಿ ಮಳೆ. ಮಳೆಯಲ್ಲಿಯೇ ಸಜ್ಜನಘಡದ ಗುಡ್ಡವನ್ನು ಸುತ್ತಲು ಹೊರಟೆವು. ಸಜ್ಜನಗಡದಲ್ಲೇ ಸಮರ್ಥ ರಾಮದಾಸರ ಸಮಾಧಿ ದೇಗುಲದ ಪಕ್ಕದಲ್ಲಿ ಮ್ಯೂಸಿಯಂ ಒಂದಿದೆ. ಅದರ ಒಳಹೊಕ್ಕೆವು. ಮ್ಯೂಸಿಯಮ್ಮಿನಲ್ಲಿ ಸಮರ್ಥ ರಾಮದಾಸರಿಗೆ ಮಾರುತಿ ಪ್ರತ್ಯಕ್ಷನಾಗಿ ನೀಡಿದ ಶ್ರೀರಾಮ ಧರಿಸುತ್ತಿದ್ದ ವಲ್ಕಲ ನೀಡಿದ್ದ ಎನ್ನುವ ಕುರುಹಾಗಿ ಸಂರಕ್ಷಿಸಿ ಇಡಲಾಗಿದ್ದ ನಾರು ಬಟ್ಟೆಯನ್ನು ನೋಡಿದೆವು.
            ಸಮರ್ಥ ರಾಮದಾಸರು ಆಧ್ಯಾತ್ಮಿಕ ಸಾಧನೆಗೆ ಬಳಸುತ್ತಿದ್ದ ವಸ್ತುಗಳು, ಶಿವಾಜಿ ಮಹಾರಾಜರು ಸಮರ್ಥ ರಾಮದಾಸರಿಗೆಂದೇ ನೀಡಿದ್ದ ಹಲವು ವಸ್ತುಗಳನ್ನೆಲ್ಲ ಅಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದನ್ನೆಲ್ಲ ನೋಡಿದವು. ಹಳೆಯ ಭಾವಚಿತ್ರಗಳನ್ನು ಕಣ್ತುಂಬಿಕೊಂಡೆವು. ಸಮರ್ಥ ರಾಮದಾಸರ ಜೊತೆ ಮಾತನಾಡುತ್ತಿದ್ದ ಶಿವಾಜಿ ಮಹಾರಾಜರ ಚಿತ್ರವನ್ನು ಯಾವುದೋ ಕಲಾವಿದ ಬಿಡಿಸಿದ್ದ. ಅದನ್ನೂ ನೋಡಿದೆವು. ನಂತರ ಹೊರ ಬಂದವರೇ ಸೀದಾ ನಮ್ಮ ವಸತಿಗೃಹವನ್ನು ಹೊಕ್ಕು ಕೆಲಕಾಲ ವಿಶ್ರಾಂತಿ ಮಾಡಿದೆವು.
            ಪ್ರಶಾಂತ ಭಾವ ಒತ್ತಾಯಿಸಿದ. ನಾನು ಸಂಜಯ ಎದ್ದೆವು. ವಸತಿ ಗೃಹದ ಹಿಂಭಾಗದಲ್ಲಿ ಕಣ್ಣುಹಾಯಿಸಿದವರಿಗೆ ಉರ್ಮುಡಿ ನದಿಗೆ ಕಟ್ಟಿದ್ದ ಅಣೆಕಟ್ಟಿನ ವಿಹಂಗಮ ದೃಶ್ಯ ಕಣ್ಣಿಗೆ ಕಾಣುತ್ತಿತ್ತು. ಪಡುವಣ ಮೋಡದ ಸಾಲು ಗುಂಪು ಗುಂಪಾಗಿ ಬಂದು ಮಾಲೆ ಮಾಲೆಯಾಗಿ ಹನಿಮಳೆಯನ್ನು ಸುರಿಸುತ್ತಿತ್ತು. ಇದರಿಂದಾಗಿ ಮಂಜಿನ ಪರದೆ ಸರಿದಂತೆ ಕಾಣಿಸುತ್ತಿತ್ತು. ಅಲ್ಲೊಂದಷ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡೆವು.
             ನಂತರ ಅಲ್ಲಿಂದ ಹೊರಟು ಸೀದಾ ಸಜ್ಜನಘಡದ ಇನ್ನೊಂದು ತುದಿಯತ್ತ ತೆರಳಿದೆವು. ಯಾರೋ ಖಡ್ಗದಿಂದ ಕಡಿದು ತುಂಡರಿಸಿದ್ದಾರೇನೋ ಎಂಬಂತೆ ಸಜ್ಜನ ಗಡ ಅಲ್ಲಿ ಕೊನೆಯಾಗಿತ್ತು. ಕೆಳಗೆ ಆಳದ ಪ್ರಪಾತದಂತಹ ಪ್ರದೇಶ. ಆ ಆಳದಿಂದ ಬೀಸಿ ಬರುವ ರಭಸದ ಗಾಳಿ. ನಾವು ಆ ತುದಿಗೆ ಹೋಗಿ ನಿಂತಾಗ ಬೀಸಿ ಬಂದ ಗಾಳಿ ನಮ್ಮನ್ನು ನಾಲ್ಕು ಹೆಜ್ಜೆ ಹಿಂದಕ್ಕೆ ತಳ್ಳಿತು. ಅಲ್ಲೊಂದಿಷ್ಟು ಪೋಟೋಗಳನ್ನು ಕ್ಲಿಕ್ಕಿಸಿದೆವು. ಸಂಜಯ ಒಂದಿಷ್ಟು ವೀಡಿಯೋಗಳನ್ನು ಮಾಡಿಕೊಂಡ. ಸಜ್ಜನಘಡ ಧಾರ್ಮಿಕ ಕ್ಷೇತ್ರವಾಗಿದ್ದರೂ ಅಲ್ಲಿನ ನಿಸರ್ಗ ಸೌಂದರ್ಯದಿಂದಾಗಿ ಅದೆಷ್ಟೋ ಪ್ರೇಮಿಗಳು ಸಜ್ಜನಘಡಕ್ಕೆ ಆಗಮಿಸಿದ್ದವು. ಅದೆಷ್ಟೋ ಜೋಡಿ ಹಕ್ಕಿಗಳೂ ಕೂಡ ಪೋಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದವು. ನಾನು, ಸಂಜಯ ಹಾಗೂ ಪ್ರಶಾಂತ ಭಾವ ಲುಂಗಿಧಾರಿಗಳಾಗಿದ್ದೆವು. ನಮ್ಮನ್ನು ಬೇರೆ ಯಾವುದೋ ಗ್ರಹದಿಂದ ಬಂದಿದ್ದಾರೆ ಎಂಬಂತೆ ನೋಡುತ್ತಿದ್ದರು. ಒಂದಿಷ್ಟು ಜನರು ನಮ್ಮನ್ನು ನೋಡಿ `ಮಲೆಯಾಳಿಗಳು' ಎಂದೂ ಹೇಳುತ್ತಿದ್ದು ಕಿವಿಗೆ ಕೇಳುತ್ತಿತ್ತು.
             ಸೀದಾ ಮುಂದಕ್ಕೆ ಸಾಗಿದೆವು. ಅಲ್ಲೊಂದಷ್ಟು ಕಡೆ ಘಡದ ತುದಿಗೆ ಕಲ್ಲಿನ ಗೋಡೆ ಕಟ್ಟಲಾಗಿತ್ತು. ಶಿವಾಜಿ ಮಹಾರಾಜರು ಕಟ್ಟಿಸಿದ್ದೇ ಇರಬೇಕು. ಗೋಡೆ ಶಿಥಿಲವಾಗಿತ್ತು. ಅದೆಷ್ಟು ಜನ ಆ ಕಲ್ಲಿನ ಮೇಲೆ ಹತ್ತಿಳಿದಿದ್ದರೋ. ಥೇಟು ನಮ್ಮೂರಿನಲ್ಲಿ ಇದ್ದಂತೆ ಆ ಕಲ್ಲುಗಳ ಮೇಲೂ ಅಕ್ಷರಸ್ಥರ ಕೈಚಳಕ ಸಾಗಿತ್ತು. ........ ವೆಡ್ಸ್......... ಎಂದೋ.. ......ಲವ್ಸ್.. ಎಂದೋ ಬರೆದಿದ್ದವು. ಎಲ್ಲೋದ್ರೂ ಇವರ ಬುದ್ದಿ ಹಿಂಗೇ... ಎಂದುಕೊಂಡೆ.
         ಕೊನೆಯಲ್ಲೊಂದು ಆಂಜನೇಯನ ದೇವಸ್ಥಾನ. ಆ ದೇವಸ್ಥಾನಕ್ಕೆ ತೆರಳಿ ಹನುಮನಿಗೆ ಶಿರಬಾಗಿದೆವು. ಹೊರಬಂದ ಕೂಡಲೇ ನಮ್ಮ ಕಣ್ಣ ಸೆಳೆದ ದೃಶ್ಯ ಆಹ್ ವರ್ಣಿಸಲಸದಳ. ಒಂದೆಡೆ ಉರ್ಮುಡಿ ನದಿಯ ಅಣೆಕಟ್ಟೆ. ಇನ್ನೊಂದು ಕಡೆಯಲ್ಲಿ ದೂರದಲ್ಲಿ ಕಾಅಣುತ್ತಿದ್ದ ಗಾಳಿಯ ಪಂಖಗಳು. ಹೆಬ್ಬಾವು ಹರಿದು ಹೋದಂತೆ ಕಾಣುತ್ತಿದ್ದ ರಸ್ತೆ. ಅದರಲ್ಲಿ ಸಾಗುತ್ತಿದ್ದ ವಾಹನಗಳು. ಇರುವೆಯಂತೆ ಕಾಣುತ್ತಿದ್ದವು. ಸಂಜಯ ಸಜ್ಜನ ಗಡದ ತುತ್ತ ತುದಿಗೆ ಹೋದ. ಅಲ್ಲಿ ಕೆಲ ಜಾಗ ಮುಂಚಾಚಿಕೊಂಡಿತ್ತು. ಅಲ್ಲಿ ನಿಂತವನು ತನ್ನೆರಡೂ ಕೈಗಳನ್ನು ಪಕ್ಷಿಯಂತೆ ಚಾಚಿದ. ದೂರದಿಂದ ನೋಡಿದರೆ ರಿಯೋಡಿ ಜನೈರೋದ ಗುಡ್ಡದ ಮೇಲೆ ನಿಲ್ಲಿಸಿದ್ದ ಏಸು ಕ್ರಿಸ್ತನ ಪ್ರತಿಮೆಯಂತೆ ಭಾಸವಾಗುತ್ತಿತ್ತು. ನಿಂತವನೇ ದೊಡ್ಡದಾಗಿ ಸಜ್ಜನಘಡವನ್ನೂ, ಶಿವಾಜಿ ಮಹಾರಾಜರನ್ನೂ ನೆನಪುಮಾಡಿಕೊಳ್ಳತೊಡಗಿದ. ನಾನು ವೀಡಿಯೋ ಮಾಡಿಕೊಂಡೆ. ನನ್ನ ಹಿಂದೆ ನಿಂತಿದ್ದ ಅದೆಷ್ಟೋ ಪ್ರವಾಸಿಗರು ಬೆಪ್ಪಾಗಿ ನಮ್ಮಿಬ್ಬರನ್ನು ನೋಡಲು ಆರಂಭಿಸಿದ್ದರು.

(ಮುಂದುವರಿಯುತ್ತದೆ)
              

Thursday, September 8, 2016

ಮಾರ್ಗಸೂಚಿ-2

         ಈ ಹಿಂದೊಮ್ಮೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಬಹುದು ಎನ್ನುವ ಬಗ್ಗೆ ಬರೆದಿದ್ದೆ. ಅದೇ ವರದಿಯನ್ನು ಮುಂದುವರೆಸಿ ಇನ್ನಷ್ಟು ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವ ಕುರಿತು ಈ ಲೇಖನ. ಇನ್ನಷ್ಟು ಹೊಸ ಮಾರ್ಗಗಳಲ್ಲಿ ಬಸ್ ಬಿಡುವ ಕುರಿತು ಇಲಾಖೆಗೊಂದು ಸಲಹೆ.


* ಶಿರಸಿ-ಜೋಯಿಡಾ-ಉಳವಿ
             ಶಿರಸಿಯಿಂದ ಉಳುವಿಗೆ ಬಸ್ ಸಂಚಾರವಿದೆ. ಆದರೆ ಅದು ಜೋಯಿಡಾಕ್ಕೆ ಹೋಗುವುದಿಲ್ಲ. ಬದಲಾಗಿ ದಾಂಡೇಲಿ-ಬಾಪೇಲಿ ಕ್ರಾಸ್ ಮೂಲಕ ಉಳುವಿಯನ್ನು ತಲುಪುತ್ತದೆ. ಗುಂದದ ಮೂಲಕ ತೆರಳುವ ಈ ಬಸ್ ಈ ಭಾಗದ ಜನಸಾಮಾನ್ಯರಿಗೆ ಅನುಕೂಲಕರ. ದಿನಕ್ಕೆ ಎರಡು ಬಾರಿ ಸಂಚಾರ ಮಾಡುವ ಈ ಬಸ್ಸಿನಿಂದ ಸಾಕಷ್ಟು ಅನುಕೂಲತೆಯಿದೆ. ಈ ಬಸ್ಸಿನ ಜೊತೆಗೆ ಶಿರಸಿ-ಭಾಗವತಿ-ಅಂಬಿಕಾನಗರ-ಬಾಪೇಲಿಕ್ರಾಸ್-ಜೋಯಿಡಾ ಕ್ಕೆ ನೇರ ಬಸ್ ಸೌಕರ್ಯ ಕಲ್ಪಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗಬಹುದಾಗಿದೆ. ಅದೆಷ್ಟೋ ಜನರು ಶಿರಸಿಗೂ ಜೋಯಿಡಾಕ್ಕೂ ನೆರವಾಗಿ ಹೋಗಲು ಬಯಸುತ್ತಾರೆ. ಅಂತವರಿಗೆ ದಾಂಡೇಲಿಯನ್ನು ಸುತ್ತುಬಳಸಿ ಹೋಗುವುದು ತಪ್ಪುತ್ತದೆ. ಜೊತೆಯಲ್ಲಿ ಕುಳಗಿ ಮಾರ್ಗದಲ್ಲಿ ಸಿಗುವ ಅದೆಷ್ಟೋ ಹಳ್ಳಿಗರಿಗೆ ಬಸ್ ಸೌಕರ್ಯ ಸಿಕ್ಕಂತಾಗುತ್ತದೆ.

* ಶಿರಸಿ-ಜೋಯಿಡಾ-ಕಾರವಾರ
           ಶಿರಸಿಯಿಂದ ಜೋಯಿಡಾ ಮೂಲಕ ದಿನಕ್ಕೆ ಕನಿಷ್ಟ ಎರಡು ಬಸ್ ಸೌಕರ್ಯ ಒದಗಿಸುವುದು ಜೋಯಿಡಾ ಭಾಗದವರಿಗೆ ಸಾಕಷ್ಟು ಅನುಕೂಲ ಕಲ್ಪಿಸುತ್ತದೆ. ಬೆಳಿಗ್ಗೆ ಒಂದು ಹಾಗೂ ಮದ್ಯಾಹ್ನ ಒಂದು ಬಸ್ ಓಡಿಸುವುದರಿಂದ ಜೋಯಿಡಾ ಭಾಗದ ಜನರು ಕಾರವಾರಕ್ಕೆ ಹಾಗೂ ದಾಂಡೇಲಿಗೆ ತಲುಪಲು ಅನುಕೂಲಕರ. ನೇರವಾಗಿ ಶಿರಸಿ ಹಾಗೂ ಕಾರವಾರ ನಡುವೆ 120 ಕಿಮಿ ಅಂತರವಾದರೆ ಜೋಯಿಡಾ ಮೂಲಕ ತೆರಳಿದರೆ 220 ಕಿ.ಮಿ ದೂರವಾಗುತ್ತದೆ. ಶಿರಸಿಯಿಂದ ದಿನಕ್ಕೆ 2 ಬಸ್ ಹಾಗೂ ಕಾರವಾರದಿಂದ 2 ಬಸ್ ಓಡಿಸುವುದು ಸಾಕಷ್ಟು ಅನುಕೂಲಕರ. ಜೋಯಿಡಾದಿಂದ ಕಾರವಾರಕ್ಕೆ ಬಸ್ ಸೌಕರ್ಯ ಕಡಿಮೆಯಿದೆ. ಈ ಕಾರಣದಿಂದಾಗಿ ಈ ಮಾರ್ಗದಲ್ಲಿ ಬಸ್ ಓಡಿಸುವುದು ಇಲಾಖೆಗೂ ಆದಾಯ ತರುವುದರ ಜೊತೆಗೆ ಜನಸಾಮಾನ್ಯರಿಗೆ ಸಹಕಾರಿಯಾಗಬಲ್ಲದು.

* ಯಲ್ಲಾಪುರ-ಕೈಗಾ-ಕಾರವಾರ
          ಯಲ್ಲಾಪುರದಿಂದ ಕೈಗಾ ಮಾರ್ಗದ ಮೂಲಕ ಕಾರವಾರಕ್ಕೆ ಬಸ್ ಓಡಿಸುವುದು ಸಾಕಷ್ಟು ಉತ್ತಮ. ಈ ಮಾರ್ಗದಲ್ಲಿ ಅನೇಕ ಊರುಗಳು ಸಿಗುತ್ತವೆ. ಈ ಊರುಗಳಿಗೆ ಈ ಬಸ್ ಸೌಕರ್ಯ ಸಹಕಾರಿಯಾಗಬಲ್ಲದು. ವಿಶೇಷವಾಗಿ ವಜ್ರಳ್ಳಿ, ಬಾರೆ, ಬಾಸಲ, ಕಳಚೆ, ಮಲವಳ್ಳಿ ಈ ಮುಂತಾದ ಗ್ರಾಮಗಳ ಜನರು ಕಾರವಾರವನ್ನು ತಲುಪುವುದಕ್ಕಾಗಿ ಈ ಮಾರ್ಗದಲ್ಲಿ ಬಸ್ ಸೌಕರ್ಯ ಒದಗಿಸುವುದು ಅನುಕೂಲಕರವಾಗಿದೆ. ಕೈಗಾ-ಬಾರೆ ನಡುವೆ ಇರುವ ರಸ್ತೆಯನ್ನು ಇನ್ನಷ್ಟು ಸುಧಾರಣೆ ಮಾಡಿದರೆ ಸರ್ವಋತು ಬಸ್ ಸಂಪರ್ಕ ಕಲ್ಪಿಸಬಹುದು. 100 ಕಿಲೋಮೀಟರ್ ಅಂತರದಲ್ಲಿ ಯಲ್ಲಾಪುರ ಹಾಗೂ ಕಾರವಾರ ನಡುವೆ ಸಂ[ರ್ಕ ಸಾಧ್ಯವಾಗಬಹುದಾಗಿದೆ. ಈ ಕುರಿತಂತೆ ಇಲಾಖೆ ಆಲೋಚಿಸುವುದು ಉತ್ತಮ.

*ಮುಂಡಗೋಡ-ಕಲಘಟಗಿ-ಹಳಿಯಾಳ
           ಇಲಾಖೆಗೆ ಹೆಚ್ಚಿನ ಆದಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಮಾರ್ಗ ಅನುಕೂಲಕರ. ಮುಂಡಗೋಡ-ಕಲಘಟಗಿ ಹಾಗೂ ಕಲಘಟಗಿ-ಹಳಿಯಾಳ ಮಾರ್ಗ ಮಧ್ಯದಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಸಾಕಷ್ಟು ಅನುಕೂಲ ದೊರಕಬಹುದಾಗಿದೆ. ಮುಂಡಗೋಡ ಹಾಗೂ ಕಲಘಟಿಗಿ ನಡುವೆ ಮತ್ತು ಹಳಿಯಾಳ-ಕಲಘಟಗಿ ನಡುವೆ ಬಸ್ ಸಂಚರಿಸುತ್ತಿದೆ. ಆದರೆ ಮುಂಡಗೋಡದಿಂದ ಕಲಘಟಗಿ ಮೂಲಕ ಹಳಿಯಾಳ ತಲುಪಲು ನೇರವಾದ ಬಸ್ ಇಲ್ಲ. ಈ ಊರುಗಳ ನಡುವೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ ಓಡಿಸುವುದು ಉತ್ತಮ. ಬೆಳಿಗ್ಗೆ ಹಾಗೂ ಸಂಜೆ ಹಳಿಯಾಳದಿಂದ ಅದೇ ರೀತಿ ಬೆಳಿಗ್ಗೆ ಹಾಗೂ ಸಂಜೆ ಮುಂಡಗೋಡದಿಂದ ತಲಾ ಒಂದೊಂದು ಬಸ್ ಓಡಿಸುವುದು ಜನಸಾಮಾನ್ಯರಿಗೆ ಹಾಗೂ ಇಲಾಖೆಗೆ ಉಪಕಾರಿ.

ಅಪ್ಪ (ಕಥೆ) ಭಾಗ-1

               `ತಮಾ... ಇವತ್ತು ಮೂರನೇದು... ಇವತ್ತೇ ಕೊನೇದು.. ಇನ್ನು ಇಂಜೆಕ್ಷನ್ ಇಲ್ಲೆ..' ಬೆಳ್ಳೆಕೇರಿ ಡಾಕ್ಟರ್ ಹೇಳುವವರೆಗಾಗಲೇ ನಾನು ಚೀರಾಡಿ, ರಂಪಾಟ ಮಾಡಿ ಹುಯ್ಯಲೆಬ್ಬಿಸಿದ್ದೆ.
                 ಸಾಮಾನ್ಯ ಜ್ವರ. ಜ್ವರಕ್ಕೆ ಸತತ ಮೂರು ದಿನ ಇಂಜೆಕ್ಷನ್ ತೆಗೆದುಕೊಂಡರೆ ಸರಿಯಾಗುತ್ತದೆ ಎಂದಿದ್ದರು ಬೆಳ್ಳೆಕೇರಿ ಡಾಕ್ಟರ್. ಅಪ್ಪ ಸೈಕಲ್ ಮೇಲೆ ಕೂರಿಸಿಕೊಂಡು ಮೂರು ದಿನವೂ ಕಾನಸೂರಿಗೆ ಕರೆದೊಯ್ದಿದ್ದ. ಮೊದಲ ಎರಡು ದಿನಗಳೇ ಇಂಜೆಕ್ಷನ್ನಿನಿಂದ ಹೈರಾಣಾಗಿದ್ದೆ. ಮೂರನೇ ದಿನ ಮಾತ್ರ ಮತ್ತಷ್ಟು ಬಸವಳಿದಿದ್ದೆ.
                  ನಾಲ್ಕಾಣೆಯ ಲಿಂಬೆ ಚಾಕಲೇಟಿನ ಆಮಿಷವನ್ನು ತೋರಿಸಿ ಮೊದಲ ಎರಡು ದಿನ ಅಪ್ಪ ಹೇಗೋ ನನಗೆ ಬೆಳ್ಳೆಕೇರಿ ಡಾಕ್ಟರರಿಂದ ಇಂಜೆಕ್ಷನ್ ಕೊಡಿಸಲು ಸಫಲನಾಗಿದ್ದ. ಆದರೆ ಮೂರನೇ ದಿನ ಮಾತ್ರ ನಾನು ಕಾನಸೂರಿಗೆ ಬರಲು ಬಿಲ್ ಕುಲ್ ಒಪ್ಪಿರಲಿಲ್ಲ. ಮನೆಯಲ್ಲಿ ದೊಡ್ಡದಾಗಿ ಕೂಗಿ ಕಬ್ಬರಿದಿದ್ದೆ. `ಬೆಳ್ಳೇಕೇರಿ ಡಾಕ್ಟರು ದಬ್ಬಣ ತಗಂಡು ಮುಕಳಿಗೆ ಸುಚ್ಚತ್ರು.. ಬ್ಯಾಡ.. ಆ ಬತ್ನಿಲ್ಲೆ..' ಎಂದು ಗಲಾಟೆ ಮಾಡಿದ್ದೆ. ಗಲಾಟೆ ಯಾವ ಹಂತಕ್ಕೆ ತಲುಪಿತ್ತು ಎಂದರೆ ನನ್ನ ಹಟಕ್ಕೆ ಅಪ್ಪ ಸಿಟ್ಟಿನಿಂದ ಬೆನ್ನ ಮೇಲೆ ನಾಲ್ಕು ಏಟು ಭಾರಿಸಿಯೂ ಬಿಟ್ಟಿದ್ದ. ಆದರೂ ನಾನು ಮಾತ್ರ ಸುತಾರಾಂ ಕಾನಸೂರಿಗೆ ಬರೋದಿಲ್ಲ ಎಂದು ರಚ್ಚೆ ಹಿಡಿದಿದ್ದೆ.
                ಆ ದಿನ ಅಮ್ಮನಿಗೆ ಮೊಟ್ಟ ಮೊದಲ ಬಾರಿಗೆ ಹಲ್ಲು ನೋವು ಬಂದಿತ್ತು. ಯಾವ ರೀತಿಯ ಹಲ್ಲು ನೋವು ಎಂದರೆ ನೋವಿನ ಅಬ್ಬರಕ್ಕೆ ವಸಡುಗಳು ಬಾತುಕೊಂಡಿದ್ದವು. ಸಾಮಾನ್ಯವಾಗಿ ಚಿಕ್ಕಪುಟ್ಟ ಕಾಯಿಲೆ ಕಸಾಲೆಗಳಿಗೆಲ್ಲ ಮನೆಮದ್ದಿನ ಮೊರೆಹೋಗುತ್ತಾಳೆ ಅಮ್ಮ. ಆ ದಿನವೂ ಕೂಡ ಅದೇನೋ ಮನೆಮದ್ದು ಮಾಡಿದ್ದಳು. ಹಲ್ಲಿಗೆ ಕರ್ಪೂರ ಹಾಕಿದ್ದಳು, ತಂಬಾಕಿನ ಎಸಳನ್ನು ಹಲ್ಲಿನ ಎಜ್ಜೆಯಲ್ಲಿ ಗಿಡಿದುಕೊಂಡಿದ್ದಳು. ಊಹೂಂ.. ಏನೇ ಆದರೂ ಹಲ್ಲು ನೋವು ಕಡಿಮೆಯಾಗಿರಲಿಲ್ಲ. ಬದಲಾಗಿ ಜಾಸ್ತಿಯಾಗುತ್ತಲೇ ಇತ್ತು. ಅಮ್ಮ ಬಸವಳಿದಿದ್ದಳು. ಸರಿ ಹೇಗೆಂದರೂ ನನಗೆ ಆಸ್ಪತ್ರೆಗೆ ಹೋಗಬೇಕಿತ್ತಲ್ಲ. ಅಮ್ಮನನ್ನೂ ಕರೆದುಕೊಂಡು ಹೋಗಿ ಬಿಡೋಣ ಎಂದು ಅಪ್ಪ ಅಂದುಕೊಂಡ. ಅಮ್ಮನೂ ಹೂಂ ಎಂದು ತಲೆಯಲ್ಲಾಡಿಸಿದವಳೇ ಹೊರಡಲು ಅನುವಾಗಿದ್ದಳು.
         ಬರಗಾಲಕ್ಕೆ ಅಧಿಕ ಮಾಸ ಎಂಬಂತೆ  ಆ ದಿನ ನಮ್ಮ ಮನೆಯಲ್ಲಿ ನಾಲ್ಕಾರು ಆಳುಗಳು ಇದ್ದರು. ಅವರೆಲ್ಲ ಸೇರಿ ಮನೆಯ ಜಂತಿಯ ರಿಪೇರಿಗೆ ಮುಂದಾಗಿದ್ದರು. ಅಮ್ಮನಿಗೋ ಆಸ್ಪತ್ರೆಗೆ ಹೋಗುವ ತರಾತುರಿ. ಅಪ್ಪ ಅಮ್ಮನ ಬಳಿ ಆಸ್ಪತ್ರೆಗೆ ಹೋಗೋಣ ಎನ್ನುವುದೇ ಅಪರೂಪ. ಆತ ಹಾಗೆ ಹೇಳಲು ಬೆರೆ ಕಾರಣವೇ ಇತ್ತೆನ್ನಿ. ಹೇಳಿ ಕೇಳಿ ನಮ್ಮ ಮನೆ ಆ ದಿನಗಳಲ್ಲಿ ಅವಿಭಕ್ತ ಕುಟುಂಬ. ಅಜ್ಜ, ಅಜ್ಜಿ. ಅಜ್ಜ ಸೌಮ್ಯ ಸ್ವಭಾವದವನು. ಅಜ್ಜಿ ಭದ್ರಕಾಳಿ. ಅಪ್ಪನಿಗೆ 5 ಜನ ತಮ್ಮಂದಿರು. ಅಮ್ಮ ಹಿರಿಸೊಸೆ. ಹಿರಿಸೊಸೆಯಾದ ಕಾರಣಕ್ಕೆ ಮನೆಯ ಬಹುತೇಕ ಚಾಕರಿ ಅಮ್ಮನಿಗೆ ಕಟ್ಟಿಟ್ಟಿತ್ತು. ಮನೆಯ ಕೆಲಸಕ್ಕೆ ಬಂದ ಆಳುಗಳ ಮೇಲೆ ಅಜ್ಜಿಗೆ ದರ್ಪ. ಹೊಗೆಯುಗುಳುವ ಒಲೆಯ ಮುಂದೆ ಕುಳಿತು ಕಣ್ಣೀರಿಕ್ಕುತ್ತ ಅಡುಗೆ ಮಾಡುತ್ತಿದ್ದ ಅಮ್ಮನೆಂದರೆ ಆಳುಗಳಿಗೆ ಸಹಾನುಭೂತಿ.
           ಅಮ್ಮ ಹಲ್ಲುನೋವಿನಿಂದ ಬಳಲುತ್ತಿದ್ದುದು ಮನೆಯ ಸದಸ್ಯರಿಗೆ ಯಾರಿಗೂ ಗೊತ್ತಾಗಿರಲಿಲ್ಲ. ಗೊತ್ತಾಗಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು ಹೇಳಿ. ಕೆಲಸಕ್ಕೆ ಬಂದ ಹೆಣ್ಣಾಳುಗಳಿಗೆ ಮಾತ್ರ ಅಮ್ಮನ ಬವಣೆ ಅರ್ಥವಾಗಿತ್ತು. ಮನೆಯ ಜಂತಿಯ ರೀಪಿನ ಕೆಲಸ ಮಾಡುತ್ತಿದ್ದ ಗಂಡಾಳುಗಳ ಬಳಿ ಹೋದ ಹೆಣ್ಣಾಳುಗಳು ಹಲ್ಲುನೋವಿನ ವಿಷಯ ಹೇಳಿದ್ದರು. ಒಬ್ಬ ಆಳು ಸೀದಾ ಅಪ್ಪನ ಬಳಿ ಬಂದು `ಅಮ್ಮನಿಗೆ ಹಲ್ಲುನೋವು ಬಂದದೆ. ಆಸ್ಪತ್ರೆಗಾದ್ರೂ ಕರಕೊಂಡು ಹೋಗಬಾರದೇ ಎಂದಿದ್ದರು. ಕೊನೆಗೆ ಅಪ್ಪ ಮದ್ಯಾಹ್ನ 3 ಗಂಟೆಯ ವೇಳೆಗೆಲ್ಲ ಅಮ್ಮನ ಬಳಿ ಹೊರಡೋಣ ಎಂದಿದ್ದ.
          ಅಮ್ಮ ಕೈಗೆ ಸಿಕ್ಕ ಸೀರೆ ಉಟ್ಟುಕೊಂಡು ಹೊರಟಿದ್ದಳು. ಮನೆಯ ಹೊರಗೆ ಬರುತ್ತಿದ್ದವಳು ಒಮ್ಮೆ `ಆಯ್..' ಎಂದಳು. ಹಿಂದೆ ಅಮ್ಮನ ಜೊತೆಗೆ ಬರುತ್ತಿದ್ದ ನಾನು ನಿಂತು ನೋಡಿದೆ. ಅಮ್ಮ ನಿಂತವಳೇ ಬಗ್ಗಿದಳು. ರೀಪಿನ ಕೆಲಸಕ್ಕೆ ತಂದಿಟ್ಟಿದ್ದ ಮೊಳೆಯೊಂದು ಅಮ್ಮನ ಕಾಲಿಗೆ ಕಪ್ಪಿತ್ತು. ನಾನು ನಿಂತವನೇ ಅಮ್ಮ ಮೊಳೆ ಕಪ್ಪಿಚನೆ ಎಂದೆ. ಹೌದೋ ತಮಾ ಎಂದವಳೇ ಮೊಳೆಯನ್ನು ಕಿತ್ತು ಒಗೆದಳು. ಕಾಲಿನಿಂದ ರಕ್ತ ಒಸರಲು ಆರಂಭವಾಗಿತ್ತು. ಅದಕ್ಕೆ ಹತ್ತಿಸೊಳೆಯನ್ನು ಹಾಕಿ ಕಟ್ಟಿ ಅಪ್ಪನ ಜೊತೆ ಹೊರಟಳು.
           ಒಂದು ಕಾಲು ಕುಂಟುತ್ತ ನಿಧಾನ ನಡೆಯುತ್ತಿದ್ದರೆ ಅಪ್ಪ ಸೈಕಲ್ ತೆಗೆದುಕೊಂಡಿದ್ದ. ನಮ್ಮೂರಿನಿಂದ ಘಟ್ಟದ ರಸ್ತೆಯನ್ನು ಹತ್ತಿ ಕಾನಸೂರಿಗೆ ಹೋಗಿ ಆಸ್ಪತ್ರೆ ದರ್ಶನ ಮಾಡಬೇಕು. ನಮ್ಮೂರಿಗೂ ಕಾನಸೂರಿನ ಆಸ್ಪತ್ರೆಗೂ ನಡುವೆ ಆರೂ ಮುಕ್ಕಾಲು ಕಿಲೋಮೀಟರ್ ಅಂತರ. ಅಪ್ಪ ನನ್ನನ್ನೂ ಅಮ್ಮನನ್ನೂ ಕೂರಿಸಿಕೊಂಡು ಹೋಗಬೇಕಿತ್ತು. ಅರ್ಧಗಂಟೆ ನಡಿಗೆಯ ನಂತರ ಗುಡ್ಡವನ್ನು ಏರಿದ್ದೆವು. ಅಲ್ಲಿಂದ ಅಪ್ಪ ನಮ್ಮನ್ನು ಸೈಕಲ್ ಮೇಲೆ ಕರೆದೊಯ್ಯಲು ಮುಂದಾದ. ಅಮ್ಮ ಹಿಂದಿನ ಕ್ಯಾರಿಯರ್ ಮೇಲೆ ಕುಳಿತಳು. ನಾನು ಚಿಕ್ಕವನು. ನನ್ನನ್ನು ಸೈಕಲ್ಲಿನ ಮುಂದಿನ ಬಾರಿನ ಮೇಲೆ ಕೂರಿಸಿದ. ಕೂರಿಸಿ ಎರಡು ನಿಮಿಷವಾಗಿರಲಿಲ್ಲ. ನನ್ನ ಅಂಡು ನೋಯಲು ಆರಂಭವಾಗಿತ್ತು. ನಾನು ಅಪ್ಪನ ಬಳಿ ಕೂರಲು ಸಾಧ್ಯವಿಲ್ಲ ಎಂದು ರಗಳೆ ಮಾಡಿದೆ. ಅದಕ್ಕವನು ತಕ್ಷಣ ಟವೆಲ್ ಒಂದನ್ನು ತೆಗೆದು ಸೈಕಲ್ ಬಾರಿಗೆ ಕಟ್ಟಿದ. ಅದರ ಮೇಲೆ ಕೂರುವಂತೆ ಹೇಳಿದ. ನಾನು ಕುಳಿತಿದ್ದೆ. ಮೊದಲಿನಷ್ಟು ಅಂಡು ನೋಯುತ್ತಿರಲಿಲ್ಲ. ಆದರೂ ಏಬೋ ಒಂದು ರೀತಿಯ ಕಸ್ಲೆ ಆಗುತ್ತಿತ್ತು. ಹಾಗೂ ಹೀಗೂ ಕುಳಿತೆ. ಅರ್ಧಗಂಟೆಯ ಸವಾರಿಯ ನಂತರ ಕಾನಸೂರು ಬಂದಿತ್ತು.
          ಕಾನಸೂರಿಗೆ ಬಂದವನೇ ಅಪ್ಪ ಮಾಡಿದ ಮೊದಲ ಕೆಲಸವೆಂದರೆ ಸೀದಾ ಸರಕಾರಿ ಆಸ್ಪತ್ರೆಯ ಕಡೆಗೆ ಸೈಕಲ್ ಹೊಡೆದ. ಸರಕಾರಿ ಆಸ್ಪತ್ರೆಗೆ ಹೋಗಿ ಕಬ್ಬಿಣದ ಮೊಳೆ ಕಪ್ಪಿದ್ದ ಅಮ್ಮನಿಗೆ ಟಿಟಿ ಇಂಜೆಕ್ಷನ್ ಕೊಡಿಸುವುದು ಅಪ್ಪನ ಆಲೋಚನೆಯಾಗಿತ್ತು. ಹೀಗೆ ಮಾಡಿದರೆ ಟಿಟಿ ಇಂಜೆಕ್ಷನ್ನಿನ ದುಡ್ಡು ಕೊಡುವುದು ಉಳಿಯುತ್ತದೆ ಎನ್ನುವುದು ಅಪ್ಪನ ಆಲೋಚನೆ. ಸೀದಾ ಸರಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಡಾಕ್ಟರೇ ಇಲ್ಲ. ಅಪ್ಪ ಡಾಕ್ಟರಿಗಷ್ಟು ಹಿಡಿಶಾಪ ಹಾಕಿದ. ಅಮ್ಮನಿಗೆ ಕಾಲು ನೋವು ಇನ್ನಷ್ಟು ಜಾಸ್ತಿಯಾಗಿತ್ತು. ಕಬ್ಬಿಣದ ಮೊಳೆ ಕಪ್ಪಿದ್ದ ಬಲಗಾಲು ಆಗಲೇ ಊದಿಕೊಂಡಿತ್ತು.
             ಹಳೆಯ ಗಂಡನ ಪಾದವೇ ಗತಿ ಎಂಬಂತೆ ಅಪ್ಪ ಬೆಳ್ಳೆಕೇರಿ ಡಾಕ್ಟರ ಮನೆಯ ಕಡೆಗೆ ಮುಖ ಮಾಡಿದ್ದ. ಮೊದಲಿನಿಂದಲೂ ಅಪ್ಪನಿಗೆ ಸ್ಪಲ್ಪ ಜಾಸ್ತಿ ಖರ್ಚಾಗುತ್ತದೆ ಎಂದಾದರೆ ಅತ್ತ ಮುಖ ಮಾಡುವುದಿಲ್ಲ. ಕಾನಸೂರಿನಲ್ಲಿ ಬೆಳ್ಳೇಕೇರಿ ಡಾಕ್ಟರು ದುಬಾರಿ ಎಂಬ ಮಾತುಗಳು ಆಗಾಗ ಚಾಲ್ತಿಗೆ ಬರುತ್ತಿದ್ದ ಕಾಲ. ಗುಳಿಯಲ್ಲಿ ವಾಸಿಯಾಗುವ ಖಾಯಿಲೆಗಳಿಗೂ ಇಂಜೆಕ್ಷನ್ ಕೊಡುತ್ತಾರೆ ಎನ್ನುವ ದೊಡ್ಡ ಆರೋಪ ಹೊಂದಿದ್ದ ಡಾಕ್ಟರ್ ಅವರು. ಆದರೆ ನನ್ನ ಅಜ್ಜನಿಗೆ ಮಾತ್ರ ಬೆಳ್ಳೆಕೇರಿ ಡಾಕ್ಟರರೇ ಆಗಬೇಕು. ಅವರ ಕೈಗುಣವನ್ನು ನಂಬುವ ಅಜ್ಜ ಬೆಳ್ಳೇಕೇರಿ ಡಾಕ್ಟರರನ್ನು ಫ್ಯಾಮಿಲಿ ಡಾಕ್ಟರರನ್ನಾಗಿ ದತ್ತು ತೆಗೆದುಕೊಂಡಿದ್ದ.
             ಅಜ್ಜನ ಕಣ್ಣು ತಪ್ಪಿಸಿ ಅಪ್ಪ ಬೇರೆ ಕಡೆಗೆ ಡಾಕ್ಟರರ ಮನೆಗೆ ನಮ್ಮನ್ನೆಲ್ಲ ಕರೆದೊಯ್ಯಲು ನೋಡುತ್ತಿದ್ದರೆ ಅಪ್ಪನ ಯೋಜನೆ, ಯೋಚನೆ ಅದ್ಹೇಗೋ ತಣ್ಣಗಾಗಿಬಿಡುತ್ತಿತ್ತು. ಕೊನೆಗೆ ವಿಧಿಯಿಲ್ಲದೇ ಕಂಡ ಕಂಡವರನ್ನೋ ಅಥವಾ ಜೊತೆಗೆ ಇರುತ್ತಿದ್ದ ನನ್ನನ್ನೋ ಬಯ್ಯುತ್ತ ಅಪ್ಪ ಬೆಳ್ಳೇಕೇರಿ ಡಾಕ್ಟರರ ಮನೆಗೆ ಕರೆದೊಯ್ಯುತ್ತಿದ್ದ. ಆವತ್ತು ಕೂಡ ಹಾಗೆಯೇ ಆಯಿತು. ನನಗೆ ಮೂರನೇ ಇಂಜೆಕ್ಷನ್. ಅಮ್ಮನಿಗೆ ಔಷಧಿ ನೀಡುವ ಸಲುವಾಗಿ ಬೆಳ್ಳೇಕೇರಿ ಡಾಕ್ಟರರ ಮನೆಯ ಕಡೆಗೆ ಹೋದೆವು. ಅಷ್ಟಾದ ಮೇಲೆಯೇ ಬೆಳ್ಳೇಕೇರಿ ಡಾಕ್ಟರು ನನಗೆ ಮೂರನೇ ಇಂಜೆಕ್ಷನ್ನನ್ನು ಕೊಟ್ಟು `ಇವತ್ತು ಕೊನೇದು..' ಎಂದಿದ್ದು.
            ಆಮೇಲೆ ಅಮ್ಮನಿಗೂ ಹಲ್ಲುನೋವಿಗಾಗಿ ಮಾತ್ರೆ ಕೊಟ್ಟರು. ಕಬ್ಬಿಣದ ಮೊಳೆ ಕಪ್ಪಿದ್ದಕ್ಕಾಗಿ ಟಿಟಿ ಇಂಜೆಕ್ಸನ್ನನ್ನೂ ಕೊಟ್ಟರು. ಎಲ್ಲಾ ಆದ ಮೇಲೆ `ಸುಬ್ರಾಯಾ.. 400 ರುಪಾಯಿ ಆತು...' ಎಂದಾಗ ಅಪ್ಪ ಒಮ್ಮೆ ಕುಮುಟಿ ಬಿದ್ದಿದ್ದ. ಸರಕಾರಿ ಆಸ್ಪತ್ರೆಗೆ ಹೋಗಿದ್ದರೆ ನೂರು ರೂಪಾಯಿಯಲ್ಲಿ ಮುಗಿಯುತ್ತಿತ್ತು ಎಂದು ಅಲವತ್ತುಕೊಂಡ. ಹೋದ ತಪ್ಪಿಗೆ ಡಾಕ್ಟರ್ ಬಿಲ್ಲನ್ನು ಕೊಟ್ಟು ಹೊರ ಬಂದ.
         ಆಗಲೇ ಸಂಜೆ ಐದನ್ನು ದಾಟಿ ಸೂರ್ಯ ಪಶ್ಚಿಮದಲ್ಲಿ ಕಂತಲು ಆರಂಭಿಸಿದ್ದ. ಅಮ್ಮ ಕುಂಟುತ್ತಲೇ ಇದ್ದಳು. ಅಪ್ಪ ಸೈಕಲ್ಲಿನ ಮೇಲೆ ವಾಪಾಸ್ ಮನೆಗೆ ಕರೆದೊಯ್ಯಲು ಹವಣಿಸಿದ. ನಮ್ಮೂರಿಗೂ ಕಾನಸೂರಿಗೂ ನಡುವೆ ಕಾಲುದಾರಿಯಿದೆ. ರಸ್ತೆ ಮಾರ್ಗಕ್ಕಿಂತ 2 ಕಿಲೋಮೀಟರ್ ದೂರವನ್ನು ಈ ಕಾಲುದಾರಿ ಕಡಿಮೆ ಮಾಡುತ್ತದೆ. ಕಾಲುದಾರಿಯ ನಡುವೆ ಅನೇಕ ಕೊಡ್ಲುಗಳೂ, ಕಾಲು ಸಂಕಗಳೂ ಇರುವ ಕಾರಣ ಕಾಲ್ನಡಿಗೆಯಲ್ಲಿ ಹೋಗುವವರು ಮಾತ್ರ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಪರೂಪಕ್ಕೆ ಕೆಲವರು ಸೈಕಲ್ ಮೂಲಕ ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ. ಅಪ್ಪ ಆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ. ಕೊಡ್ಲು ಹಾಗೂ ಸಂಕಗಳ ಜಾಗದಲ್ಲಿ ನಮ್ಮನ್ನು ಸೈಕಲ್ಲಿನಿಂದ ಇಳಿಸಿ, ದಾಟಿಸಿ ನಂತರ ಸೈಕಲ್ ಮೇಲೆ ಕರೆದೊಯ್ಯುವುದು ಆತನ ಉದ್ದೇಶವಾಗಿತ್ತು.
           ಕಾನಸೂರಿನಿಂದ ಹೊರಟು ಅರ್ಧ ಕಿಲೋಮೀಟರ್ ಬಂದಿದ್ದೆವು. ಇಳುಕಲು ಇದ್ದ ಕಾರಣ ಅಪ್ಪ ಸಾಕಷ್ಟು ಜೋರಾಗಿಯೇ ಸೈಕಲ್ ತುಳಿಯುತ್ತ ಬರುತ್ತಿದ್ದ. ಅಮ್ಮ ಎಂದಿನಂತೆ ಒಂದು ಬದಿಯಾಗಿ ಕುಳಿತಿದ್ದರೆ ನಾನು ಸೈಕಲ್ಲಿನ ಮುಂದಿನ ಬಾರ್ ಮೇಲೆ ಅಂಡು ನೋಯಿಸಿಕೊಳ್ಳುತ್ತ ಕುಳಿತಿದ್ದೆ. ಅಲ್ಲೊಂದು ಕಡೆ ಕಾಲುದಾರಿಯ ಪಕ್ಕದಲ್ಲಿಯೇ ಮರಗಳಿವೆ. ಅಪ್ಪ ಹೋಗುತ್ತಿದ್ದ ವೇಗಕ್ಕೆ ದಡಾರ್ ಎನ್ನುವ ಶಬ್ದವಾಯಿತು. ಅಮ್ಮ ಇದ್ದಕ್ಕಿಂದ್ದಂತೆ `ಅಯ್ಯಯ್ಯೋ.. ' ಎಂದಳು. ಅಪ್ಪ ಗಾಬರಿ ಬಿದ್ದು ಸೈಕಲ್ ನಿಲ್ಲಿಸುವ ವೇಳೆಗಾಗಲೇ ಮೂರು ಸಾರಿ ಲಡ್ ಲಡ್ ಎನ್ನುವ ಸದ್ದು ಕೇಳಿಸಿತ್ತು.
           ಏನೋ ಭಾನಗಡಿ ಆಯಿತು ಎಂದುಕೊಂಡ ಅಪ್ಪ ಸೈಕಲ್ ನಿಲ್ಲಿಸಿದ. ಅಮ್ಮ ಸೈಕಲ್ಲಿನಿಂದ ಮುಕ್ಕರಿಸಿ ಬಿದ್ದಿದ್ದಳು. ಆಕೆಯ ಒಂದು ಕಾಲು ಸೈಕಲ್ ಚಕ್ರದೊಳಕ್ಕೆ ಸಿಕ್ಕಿಬಿದ್ದಿತ್ತು. ಕಾಲು ಸಿಕ್ಕಿಬಿದ್ದ ಹೊಡತಕ್ಕೆ ಸೈಕಲ್ಲಿನ ಚಕ್ರದ ಮೂರು ಕಡ್ಡಿಗಳು ಮುರಿದು ಹೋಗಿದ್ದವು. ಅಪ್ಪ ಅಸಹನೆಯಿಂದ `ತಥ್..' ಎಂದ. `ಎಂತಾ ಆತೆ..?' ಎಂದು ಅಮ್ಮನ ಬಳಿ ಕೇಳಿದ್ದ. ಅದಕ್ಕವಳು `ಅದೋ ಆ ಮರಕ್ಕೆ ಕಾಲು ತಾಗಿತು. ಮರಕ್ಕೆ ಬಡಿಯುವದನ್ನು ತಪ್ಪಿಸುವ ಸಲುವಾಗಿ ಕಾಲು ಮಡಚಿದೆ. ಆದರೆ ಅಷ್ಟರಲ್ಲಿ ಸೈಕಲ್ ಚಕ್ರದೊಳಕ್ಕೆ ಕಾಳು ಸಿಕ್ಕಿಬಿದ್ದಿತು..' ಎಂದಳು. ಅವಳ ಕಣ್ಣಲ್ಲಿ ಅಪ್ರಯತ್ನವಾಗಿ ನೀರು ಬರಲು ಆರಂಭಿಸಿತ್ತು. ಕಾಲನ್ನು ನಿಧಾನವಾಗಿ ಚಕ್ರದೊಳಗಿನಿಂದ ಬಿಡಿಸಿಕೊಂಡಳು. ಚಕ್ರದ ಕಡ್ಡಿ ತಾಗಿದ ರಭಸಕ್ಕೆ ಕಾಲು ಕೆಂಪಗಾಗಿ ಹೋಗಿತ್ತು. ಆದರೆ ರಕ್ತವೇನೂ ಬಂದಿರಲಿಲ್ಲ. ರಭಸವಾಗಿ ತೀಡಿದ್ದ ಕಾರಣ ಸೇಬು ಹಣ್ಣಿನ ಸಿಪ್ಪೆ ಸುಲಿದಂತೆ ಆಗಿತ್ತು.
              `ಥೋ... ಸೈಕಲ್ಲಿನ ಚಕ್ರದ ಕಡ್ಡಿ ಮುರಿದೋತು...' ಅಪ್ಪ ಎರಡನೇ ಸಾರಿ ನಿಡುಸುಯ್ದಿದ್ದ. ಅಮ್ಮ ನೋವಿನಲ್ಲಿಯೂ ಒಮ್ಮೆ ಅಪ್ಪನನ್ನು ದುರುಗುಟ್ಟಿ ನೋಡಿದಳು. `ನಿಂಗವ್ ಒಂದ್ ಕೆಲ್ಸ ಮಾಡಿ... ಸಾವಕಾಶವಾಗಿ ಮನೆಯ ಕಡೆ ಹೋಗ್ತಾ ಇರಿ. ಆನು ಸೈಕಲ್ ಚಕ್ರದ ಕಡ್ಡಿ ರಿಪೇರಿ ಮಾಡಿಶ್ಕ್ಯಂಡ್ ಬತ್ರಿ. ಮೂರು ಕಡ್ಡಿ ಮುರಿದು ಹೋಜು. ಹತ್, ಹದಿನೈದು ನಿಮಿಷದಲ್ಲಿ ರಿಪೇರಿ ಮಾಡ್ತಾ ಕಾನಸೂರು ಸಾಬಾ.. ಅವನ ಹತ್ರ ಮಾಡಿಶ್ಕ್ಯಂಡ್ ಬತ್ತಿ..' ಅಪ್ಪ ಹೇಳಿದ್ದ. ಅಮ್ಮನಿಗೆ ಅದೆಷ್ಟು ಬೇಜಾರಾಗಿತ್ತೋ.. `ಹೂಂ' ಎಂದಿದ್ದಳು. ಅಪ್ಪ ವಾಪಾಸು ಕಾನಸೂರು ಕಡೆ ಮುಖ ಮಾಡಿದ್ದ.

(ಮುಂದುವರಿಯುತ್ತದೆ..)