ಸ್ವರ್ಗದಲ್ಲಿ ಇಂತಹ ಆಹಾರ ಇರಬಹುದೇನೋ ಎಂದುಕೊಂಡು ಸವಿದ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದೆವು. ಶ್ರೀಧರ ಕುಟಿಯಿಂದ ನಾವು ಹೊರಟಿದ್ದು ಸಮರ್ಥ ರಾಮದಾಸರು ದೇವರಲ್ಲಿ ಐಕ್ಯರಾದ ಸ್ಥಳಕ್ಕೆ. ಅಲ್ಲೊಂದು ಸುಂದರ ದೇಗುಲ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲಿಯೇ ಆಂಜನೇಯ ಸಮರ್ಥ ರಾಮದಾಸರ ಭಕ್ತಿಗೆ ಮೆಚ್ಚಿ ಬಾಣವನ್ನು ಹೂಡಿ ಗಂಗೆಯನ್ನು ಹರಿಸಿದ ಎಂಬ ಪ್ರತೀತಿಯನ್ನು ಹೊಂದಿರುವ ಚಿಲುಮೆ. ಅದನ್ನೆಲ್ಲ ನೋಡಿದೆವು.
ಅದೇ ಸಮಯದಲ್ಲಿ ಪೂಜೆ ಆರಂಭವಾಗಿತ್ತು. ಪೂಜೆಯನ್ನು ವೀಕ್ಷಣೆ ಮಾಡಲು ಕುಳಿತೆವು. ಉಸಿರು ಕಟ್ಟುವಂತಹ ಕಿರಿದಾದ ಕೊಠಡಿ. ನೂರಾರು ಜನ ಸೇರಿದ್ದರು. ನಾವೂ ಹೋಗಿ ಕುಳಿತೆವು. ಬಗ್ಗಿ ಒಳಹೋದರೆ ಕಲ್ಲಿನ ಕುಟಿ. ಶಿವಾಜಿ ಮಹಾರಾಜರೇ ಕಟ್ಟಿಸಿದ್ದ ಗುಹೆ ಅದು. ಸಮರ್ಥ ರಾಮದಾಸರ ಸಮಾಧಿಗೆ ಅಲ್ಲಿ ಪೂಜೆ ನಡೆಯುತ್ತಿತ್ತು. ಚಿಕ್ಕ ಚಿಕ್ಕ ವಟುಗಳು ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಹೇಳುತ್ತಿದ್ದರೆ ಅಲ್ಲಿ ಹಾಕಿದ್ದ ಸಿಸಿಟಿವಿ ಅದನ್ನೆಲ್ಲ ಹೊರಗೆ ಬಿತ್ತರಿಸುತ್ತಿತ್ತು. ಜೊತೆಯಲ್ಲಿಯೇ ಜೈ ಜೈ ಸಮರ್ಥ ರಘುವೀರ ಎನ್ನುವ ಜಯಘೋಷ ಮೊಳಗುತ್ತಿತ್ತು. ನಾನು, ಪ್ರಶಾಂತ ಭಾವ ಹಾಗೂ ಸಂಜಯ ಅದೆಷ್ಟೋ ಅಮಯ ಕಣ್ಮುಚ್ಚಿ ಪ್ರಾರ್ಥನೆ ಮಾಡಿದೆವು. ಒಂದೋ, ಒಂದೂವರೆ ತಾಸೋ ಕಳೆದ ನಂತರ ಮಹಾ ಮಂಗಳಾರತಿ ಆರಂಭವಾಯಿತು. ಎಲ್ಲರೂ ಧನ್ಯರಾಗಿ ಅದನ್ನು ವೀಕ್ಷಣೆ ಮಾಡಿದೆವು. ಅದೇ ಸಂದರ್ಭದಲ್ಲಿ ಸದ್ಗುರು ಶ್ರೀಧರ ಸ್ವಾಮಿಗಳು ರಚಿಸಿದ ಕನ್ನಡ ಹಾಗೂ ಮರಾಠಿಯ ಭಜನೆ ವಾಚನವೂ ಆಯಿತು. ಪ್ರಸಾದ ಸ್ವೀಕರಿಸಿ ಹೊರ ಬಂದೆವು.
ಸಮಾಧಿ ಮಂದಿರದ ಹೊರ ಬಂದರೆ ಸಣ್ಣಗೆ ಜಿಟಿ ಜಿಟಿ ಮಳೆ. ಮಳೆಯಲ್ಲಿಯೇ ಸಜ್ಜನಘಡದ ಗುಡ್ಡವನ್ನು ಸುತ್ತಲು ಹೊರಟೆವು. ಸಜ್ಜನಗಡದಲ್ಲೇ ಸಮರ್ಥ ರಾಮದಾಸರ ಸಮಾಧಿ ದೇಗುಲದ ಪಕ್ಕದಲ್ಲಿ ಮ್ಯೂಸಿಯಂ ಒಂದಿದೆ. ಅದರ ಒಳಹೊಕ್ಕೆವು. ಮ್ಯೂಸಿಯಮ್ಮಿನಲ್ಲಿ ಸಮರ್ಥ ರಾಮದಾಸರಿಗೆ ಮಾರುತಿ ಪ್ರತ್ಯಕ್ಷನಾಗಿ ನೀಡಿದ ಶ್ರೀರಾಮ ಧರಿಸುತ್ತಿದ್ದ ವಲ್ಕಲ ನೀಡಿದ್ದ ಎನ್ನುವ ಕುರುಹಾಗಿ ಸಂರಕ್ಷಿಸಿ ಇಡಲಾಗಿದ್ದ ನಾರು ಬಟ್ಟೆಯನ್ನು ನೋಡಿದೆವು.
ಸಮರ್ಥ ರಾಮದಾಸರು ಆಧ್ಯಾತ್ಮಿಕ ಸಾಧನೆಗೆ ಬಳಸುತ್ತಿದ್ದ ವಸ್ತುಗಳು, ಶಿವಾಜಿ ಮಹಾರಾಜರು ಸಮರ್ಥ ರಾಮದಾಸರಿಗೆಂದೇ ನೀಡಿದ್ದ ಹಲವು ವಸ್ತುಗಳನ್ನೆಲ್ಲ ಅಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದನ್ನೆಲ್ಲ ನೋಡಿದವು. ಹಳೆಯ ಭಾವಚಿತ್ರಗಳನ್ನು ಕಣ್ತುಂಬಿಕೊಂಡೆವು. ಸಮರ್ಥ ರಾಮದಾಸರ ಜೊತೆ ಮಾತನಾಡುತ್ತಿದ್ದ ಶಿವಾಜಿ ಮಹಾರಾಜರ ಚಿತ್ರವನ್ನು ಯಾವುದೋ ಕಲಾವಿದ ಬಿಡಿಸಿದ್ದ. ಅದನ್ನೂ ನೋಡಿದೆವು. ನಂತರ ಹೊರ ಬಂದವರೇ ಸೀದಾ ನಮ್ಮ ವಸತಿಗೃಹವನ್ನು ಹೊಕ್ಕು ಕೆಲಕಾಲ ವಿಶ್ರಾಂತಿ ಮಾಡಿದೆವು.
ಪ್ರಶಾಂತ ಭಾವ ಒತ್ತಾಯಿಸಿದ. ನಾನು ಸಂಜಯ ಎದ್ದೆವು. ವಸತಿ ಗೃಹದ ಹಿಂಭಾಗದಲ್ಲಿ ಕಣ್ಣುಹಾಯಿಸಿದವರಿಗೆ ಉರ್ಮುಡಿ ನದಿಗೆ ಕಟ್ಟಿದ್ದ ಅಣೆಕಟ್ಟಿನ ವಿಹಂಗಮ ದೃಶ್ಯ ಕಣ್ಣಿಗೆ ಕಾಣುತ್ತಿತ್ತು. ಪಡುವಣ ಮೋಡದ ಸಾಲು ಗುಂಪು ಗುಂಪಾಗಿ ಬಂದು ಮಾಲೆ ಮಾಲೆಯಾಗಿ ಹನಿಮಳೆಯನ್ನು ಸುರಿಸುತ್ತಿತ್ತು. ಇದರಿಂದಾಗಿ ಮಂಜಿನ ಪರದೆ ಸರಿದಂತೆ ಕಾಣಿಸುತ್ತಿತ್ತು. ಅಲ್ಲೊಂದಷ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡೆವು.
ನಂತರ ಅಲ್ಲಿಂದ ಹೊರಟು ಸೀದಾ ಸಜ್ಜನಘಡದ ಇನ್ನೊಂದು ತುದಿಯತ್ತ ತೆರಳಿದೆವು. ಯಾರೋ ಖಡ್ಗದಿಂದ ಕಡಿದು ತುಂಡರಿಸಿದ್ದಾರೇನೋ ಎಂಬಂತೆ ಸಜ್ಜನ ಗಡ ಅಲ್ಲಿ ಕೊನೆಯಾಗಿತ್ತು. ಕೆಳಗೆ ಆಳದ ಪ್ರಪಾತದಂತಹ ಪ್ರದೇಶ. ಆ ಆಳದಿಂದ ಬೀಸಿ ಬರುವ ರಭಸದ ಗಾಳಿ. ನಾವು ಆ ತುದಿಗೆ ಹೋಗಿ ನಿಂತಾಗ ಬೀಸಿ ಬಂದ ಗಾಳಿ ನಮ್ಮನ್ನು ನಾಲ್ಕು ಹೆಜ್ಜೆ ಹಿಂದಕ್ಕೆ ತಳ್ಳಿತು. ಅಲ್ಲೊಂದಿಷ್ಟು ಪೋಟೋಗಳನ್ನು ಕ್ಲಿಕ್ಕಿಸಿದೆವು. ಸಂಜಯ ಒಂದಿಷ್ಟು ವೀಡಿಯೋಗಳನ್ನು ಮಾಡಿಕೊಂಡ. ಸಜ್ಜನಘಡ ಧಾರ್ಮಿಕ ಕ್ಷೇತ್ರವಾಗಿದ್ದರೂ ಅಲ್ಲಿನ ನಿಸರ್ಗ ಸೌಂದರ್ಯದಿಂದಾಗಿ ಅದೆಷ್ಟೋ ಪ್ರೇಮಿಗಳು ಸಜ್ಜನಘಡಕ್ಕೆ ಆಗಮಿಸಿದ್ದವು. ಅದೆಷ್ಟೋ ಜೋಡಿ ಹಕ್ಕಿಗಳೂ ಕೂಡ ಪೋಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದವು. ನಾನು, ಸಂಜಯ ಹಾಗೂ ಪ್ರಶಾಂತ ಭಾವ ಲುಂಗಿಧಾರಿಗಳಾಗಿದ್ದೆವು. ನಮ್ಮನ್ನು ಬೇರೆ ಯಾವುದೋ ಗ್ರಹದಿಂದ ಬಂದಿದ್ದಾರೆ ಎಂಬಂತೆ ನೋಡುತ್ತಿದ್ದರು. ಒಂದಿಷ್ಟು ಜನರು ನಮ್ಮನ್ನು ನೋಡಿ `ಮಲೆಯಾಳಿಗಳು' ಎಂದೂ ಹೇಳುತ್ತಿದ್ದು ಕಿವಿಗೆ ಕೇಳುತ್ತಿತ್ತು.
ಸೀದಾ ಮುಂದಕ್ಕೆ ಸಾಗಿದೆವು. ಅಲ್ಲೊಂದಷ್ಟು ಕಡೆ ಘಡದ ತುದಿಗೆ ಕಲ್ಲಿನ ಗೋಡೆ ಕಟ್ಟಲಾಗಿತ್ತು. ಶಿವಾಜಿ ಮಹಾರಾಜರು ಕಟ್ಟಿಸಿದ್ದೇ ಇರಬೇಕು. ಗೋಡೆ ಶಿಥಿಲವಾಗಿತ್ತು. ಅದೆಷ್ಟು ಜನ ಆ ಕಲ್ಲಿನ ಮೇಲೆ ಹತ್ತಿಳಿದಿದ್ದರೋ. ಥೇಟು ನಮ್ಮೂರಿನಲ್ಲಿ ಇದ್ದಂತೆ ಆ ಕಲ್ಲುಗಳ ಮೇಲೂ ಅಕ್ಷರಸ್ಥರ ಕೈಚಳಕ ಸಾಗಿತ್ತು. ........ ವೆಡ್ಸ್......... ಎಂದೋ.. ......ಲವ್ಸ್.. ಎಂದೋ ಬರೆದಿದ್ದವು. ಎಲ್ಲೋದ್ರೂ ಇವರ ಬುದ್ದಿ ಹಿಂಗೇ... ಎಂದುಕೊಂಡೆ.
ಕೊನೆಯಲ್ಲೊಂದು ಆಂಜನೇಯನ ದೇವಸ್ಥಾನ. ಆ ದೇವಸ್ಥಾನಕ್ಕೆ ತೆರಳಿ ಹನುಮನಿಗೆ ಶಿರಬಾಗಿದೆವು. ಹೊರಬಂದ ಕೂಡಲೇ ನಮ್ಮ ಕಣ್ಣ ಸೆಳೆದ ದೃಶ್ಯ ಆಹ್ ವರ್ಣಿಸಲಸದಳ. ಒಂದೆಡೆ ಉರ್ಮುಡಿ ನದಿಯ ಅಣೆಕಟ್ಟೆ. ಇನ್ನೊಂದು ಕಡೆಯಲ್ಲಿ ದೂರದಲ್ಲಿ ಕಾಅಣುತ್ತಿದ್ದ ಗಾಳಿಯ ಪಂಖಗಳು. ಹೆಬ್ಬಾವು ಹರಿದು ಹೋದಂತೆ ಕಾಣುತ್ತಿದ್ದ ರಸ್ತೆ. ಅದರಲ್ಲಿ ಸಾಗುತ್ತಿದ್ದ ವಾಹನಗಳು. ಇರುವೆಯಂತೆ ಕಾಣುತ್ತಿದ್ದವು. ಸಂಜಯ ಸಜ್ಜನ ಗಡದ ತುತ್ತ ತುದಿಗೆ ಹೋದ. ಅಲ್ಲಿ ಕೆಲ ಜಾಗ ಮುಂಚಾಚಿಕೊಂಡಿತ್ತು. ಅಲ್ಲಿ ನಿಂತವನು ತನ್ನೆರಡೂ ಕೈಗಳನ್ನು ಪಕ್ಷಿಯಂತೆ ಚಾಚಿದ. ದೂರದಿಂದ ನೋಡಿದರೆ ರಿಯೋಡಿ ಜನೈರೋದ ಗುಡ್ಡದ ಮೇಲೆ ನಿಲ್ಲಿಸಿದ್ದ ಏಸು ಕ್ರಿಸ್ತನ ಪ್ರತಿಮೆಯಂತೆ ಭಾಸವಾಗುತ್ತಿತ್ತು. ನಿಂತವನೇ ದೊಡ್ಡದಾಗಿ ಸಜ್ಜನಘಡವನ್ನೂ, ಶಿವಾಜಿ ಮಹಾರಾಜರನ್ನೂ ನೆನಪುಮಾಡಿಕೊಳ್ಳತೊಡಗಿದ. ನಾನು ವೀಡಿಯೋ ಮಾಡಿಕೊಂಡೆ. ನನ್ನ ಹಿಂದೆ ನಿಂತಿದ್ದ ಅದೆಷ್ಟೋ ಪ್ರವಾಸಿಗರು ಬೆಪ್ಪಾಗಿ ನಮ್ಮಿಬ್ಬರನ್ನು ನೋಡಲು ಆರಂಭಿಸಿದ್ದರು.
(ಮುಂದುವರಿಯುತ್ತದೆ)
ವಸತಿ ಗೃಹದ ಹಿಂಭಾಗದಲ್ಲಿ ಕಣ್ಣುಹಾಯಿಸಿದವರಿಗೆ ಉರ್ಮುಡಿ ನದಿಗೆ ಕಟ್ಟಿದ್ದ ಅಣೆಕಟ್ಟಿನ ವಿಹಂಗಮ ದೃಶ್ಯ ಕಣ್ಣಿಗೆ ಕಾಣುತ್ತಿತ್ತು. ಪಡುವಣ ಮೋಡದ ಸಾಲು ಗುಂಪು ಗುಂಪಾಗಿ ಬಂದು ಮಾಲೆ ಮಾಲೆಯಾಗಿ ಹನಿಮಳೆಯನ್ನು ಸುರಿಸುತ್ತಿತ್ತು. ಇದರಿಂದಾಗಿ ಮಂಜಿನ ಪರದೆ ಸರಿದಂತೆ ಕಾಣಿಸುತ್ತಿತ್ತು. ಅಲ್ಲೊಂದಷ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡೆವು.
ReplyDeleteನಂತರ ಅಲ್ಲಿಂದ ಹೊರಟು ಸೀದಾ ಸಜ್ಜನಘಡದ ಇನ್ನೊಂದು ತುದಿಯತ್ತ ತೆರಳಿದೆವು. ಯಾರೋ ಖಡ್ಗದಿಂದ ಕಡಿದು ತುಂಡರಿಸಿದ್ದಾರೇನೋ ಎಂಬಂತೆ ಸಜ್ಜನ ಗಡ ಅಲ್ಲಿ ಕೊನೆಯಾಗಿತ್ತು. ಕೆಳಗೆ ಆಳದ ಪ್ರಪಾತದಂತಹ ಪ್ರದೇಶ. ಆ ಆಳದಿಂದ ಬೀಸಿ ಬರುವ ರಭಸದ ಗಾಳಿ. ನಾವು ಆ ತುದಿಗೆ ಹೋಗಿ ನಿಂತಾಗ ಬೀಸಿ ಬಂದ ಗಾಳಿ ನಮ್ಮನ್ನು ನಾಲ್ಕು ಹೆಜ್ಜೆ ಹಿಂದಕ್ಕೆ ತಳ್ಳಿತು. ಅಲ್ಲೊಂದಿಷ್ಟು ಪೋಟೋಗಳನ್ನು ಕ್ಲಿಕ್ಕಿಸಿದೆವು. ಸಂಜಯ ಒಂದಿಷ್ಟು ವೀಡಿಯೋಗಳನ್ನು ಮಾಡಿಕೊಂಡ. ಸಜ್ಜನಘಡ ಧಾರ್ಮಿಕ ಕ್ಷೇತ್ರವಾಗಿದ್ದರೂ ಅಲ್ಲಿನ ನಿಸರ್ಗ ಸೌಂದರ್ಯದಿಂದಾಗಿ ಅದೆಷ್ಟೋ ಪ್ರೇಮಿಗಳು ಸಜ್ಜನಘಡಕ್ಕೆ ಆಗಮಿಸಿದ್ದವು. ಅದೆಷ್ಟೋ ಜೋಡಿ ಹಕ್ಕಿಗಳೂ ಕೂಡ ಪೋಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದವು. ನಾನು, ಸಂಜಯ ಹಾಗೂ ಪ್ರಶಾಂತ ಭಾವ ಲುಂಗಿಧಾರಿಗಳಾಗಿದ್ದೆವು. ನಮ್ಮನ್ನು ಬೇರೆ ಯಾವುದೋ ಗ್ರಹದಿಂದ ಬಂದಿದ್ದಾರೆ ಎಂಬಂತೆ ನೋಡುತ್ತಿದ್ದರು. ಒಂದಿಷ್ಟು ಜನರು ನಮ್ಮನ್ನು ನೋಡಿ `ಮಲೆಯಾಳಿಗಳು' ಎಂದೂ ಹೇಳುತ್ತಿದ್ದು ಕಿವಿಗೆ ಕೇಳುತ್ತಿತ್ತು.
ಸೀದಾ ಮುಂದಕ್ಕೆ ಸಾಗಿದೆವು. ಅಲ್ಲೊಂದಷ್ಟು ಕಡೆ ಘಡದ ತುದಿಗೆ ಕಲ್ಲಿನ ಗೋಡೆ ಕಟ್ಟಲಾಗಿತ್ತು. ಶಿವಾಜಿ ಮಹಾರಾಜರು ಕಟ್ಟಿಸಿದ್ದೇ ಇರಬೇಕು. ಗೋಡೆ ಶಿಥಿಲವಾಗಿತ್ತು. ಅದೆಷ್ಟು ಜನ ಆ ಕಲ್ಲಿನ ಮೇಲೆ ಹತ್ತಿಳಿದಿದ್ದರೋ. ಥೇಟು ನಮ್ಮೂರಿನಲ್ಲಿ ಇದ್ದಂತೆ ಆ ಕಲ್ಲುಗಳ ಮೇಲೂ ಅಕ್ಷರಸ್ಥರ ಕೈಚಳಕ ಸಾಗಿತ್ತು. ........