Tuesday, December 16, 2014

ಅಘನಾಶಿನಿ ಕಣಿವೆಯಲ್ಲಿ-2

(ಮಳೆಗಾಲದಲ್ಲಿ ಕಣ್ಣೀರುಮನೆಗೆ ಹೋಗುವ ರಸ್ತೆ ಪರಿಸ್ಥಿತಿ)
           ವಿಕ್ರಮ ಮೂಲತಃ ಒಬ್ಬ ಮಲೆನಾಡಿನ ಯುವಕ. ಇವನ ಊರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹತ್ತಿರದ `ಕಣ್ಣೀರು ಮನೆ' ಎಂಬ ಒಂದು ಚಿಕ್ಕ ಹಳ್ಳಿ. ಇವನ ಮನೆಯವರು ಭಾರಿ ಶ್ರೀಮಂತರು. 8-10 ಎಕರೆಯಷ್ಟು ಜಮೀನಿರುವ ಮನೆ ಇವರದ್ದು. ಊರಿನಲ್ಲಿದ್ದುದು ಆರೇಳು ಮನೆಗಳಾದರೂ ದೊಡ್ಡ ಹಾಗೂ ಊರಿನ ಕೊಟ್ಟಕೊನೆಯಲ್ಲಿದ್ದ ಮನೆ ವಿಕ್ರಮನದ್ದಾಗಿತ್ತು. ವಿಕ್ರಮ ಪಿಯುಸಿ ವರೆಗೆ ಕಾಲೇಜು ಕಲಿತಿದ್ದ. ನಂತರ ಬಿಎಯನ್ನು ಹೊರಗಿನಿಂದಲೇ ಕಲಿತು ಪಾಸು ಮಾಡಿದ್ದ. ಪಿಯುಸಿಗೆ ಹೋಗುವಾಗಲೇ ಯಲ್ಲಾಪುರದಲ್ಲಿ ಮಾರ್ಷಲ್ ಆರ್ಟ್ ಕಲಿತ ಗುರುಗಳೊಬ್ಬರು ಸಿಕ್ಕಿದ್ದರಿಂ ಶ್ರದ್ಧೆಯಿಂದ ಕಲಿತಿದ್ದ. ಕುಂಗ್ ಫೂ, ಕರಾಟೆಯನ್ನು ಭಕ್ತಿಯಿಂದ ಕಲಿತಿದ್ದ. ನಂತರದ ದಿನಗಳಲ್ಲಿ ಈ ಕರಾಟೆ, ಕುಂಗ್ ಫೂ ಗಳೇ ಆತನ ಕೈ ಹಿಡಿದಿದ್ದವು.
            ವಿಕ್ರಮನ ತಂದೆ ರಾಜಾರಾಮ ಭಟ್ಟರಿಗೆ ಮಗ ಪಿಯುಸಿಯ ನಂತರ ಓದಲು ಇಷ್ಟವಿರಲಿಲ್ಲ. ಮನೆಯಲ್ಲಿ ಸಾಕಷ್ಟು ಜಮೀನಿದ್ದರೂ ಪಾರಂಪರಿಕವಾಗಿ ಬಂದ ವೈದಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಿದ್ದರು. ರಾಜಾರಾಮ ಭಟ್ಟರ ಪೌರೋಹಿತ್ಯಕ್ಕೆ ನೂರಾರು ಜನ ಶಿಷ್ಯರೂ ಇದ್ದರು. ತನ್ನಂತೆ ಮಗನೂ ವೈದಿಕ ವೃತ್ತಿಯಲ್ಲಿ ಮುಂದುವರಿಯಲಿ, ಮಂತ್ರವನ್ನು ಕಲಿಯಲಿ, ಭಟ್ಟತನಿಕೆ ಮುಂದುವರಿಸಲಿ ಎನ್ನುವ ಆಸೆ ರಾಜಾರಾಮ ಭಟ್ಟರದ್ದಾಗಿತ್ತು.
          ಅದಕ್ಕೆ ಇಂಬು ಎಂಬಂತೆ ಕಣ್ಣೀರು ಮನೆ ಎಂಬ ಯಾರೂ ಕೇಳಿರದ ಹೆಸರಿನ ಕುಗ್ರಾಮಕ್ಕೆ ಹೋಗಿ-ಬಂದು ಮಾಡಬೇಕೆಂದರೆ ಹರಸಾಹಸ ಪಡಬೇಕಿತ್ತು. ವಿನಾಯಕ ಓದುತ್ತೇನೆ ಎಂದರೂ ಅದಕ್ಕೆ ಎದುರಾಗಿ ನೂರಾರು ಸವಾಲುಗಳಿದ್ದವು. ದಟ್ಟ ಕಾಡು, ಮಳೆಗಾಲದಲ್ಲಿ ದಿನದ 24 ತಾಸುಗಳೂ ಜೊರಗುಡುವ ಮಳೆ, ಉಕ್ಕೇರಿ ಹರಿಯುವ ಹಳ್ಳ-ಕೊಳ್ಳಗಳು, ಸೇತುವೆಯೇ ಇಲ್ಲದ ರಸ್ತೆಗಳು ಈ ಎಲ್ಲ ಕಾರಣಗಳು ವಿಕ್ರಮನ ಓದಿನ ಶತ್ರುಗಳಾಗಿದ್ದವು. ಮಳೆಗಾಲದಲ್ಲಿ ದ್ವೀಪದಂತಾಗುತ್ತಿದ್ದ ಈ ಊರು ಒಮ್ಮೊಮ್ಮೆ ತಿಂಗಳಾನುಗಟ್ಟಲೆ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡುಬಿಡುತ್ತಿತ್ತು. ಪಿಯುಸಿ ಓದಲು ವಿಕ್ರಮ ಯಲ್ಲಾಪುರಕ್ಕೆ ಬರಲು ಅದೆಷ್ಟು ಕಷ್ಟಪಟ್ಟಿದ್ದ ಎನ್ನುವುದು ಅವನಿಗಷ್ಟೇ ಗೊತ್ತು. ರಾಜಾರಾಮ ಭಟ್ಟರೂ ಮಗನನ್ನು ಮುಂದಕ್ಕೆ ಓದಿಸಲು ತಯಾರಿರಲಿಲ್ಲ. `ಓದಿ ಕಡಿದು ಗುಡ್ಡೇ ಹಾಕುವುದೆಂತದ್ದಿದ್ದು.. ಮಂತ್ರ ಕಲ್ತಕಂಡು ಭಟ್ಟತನಿಕೆ ಮಾಡು. ಮಠಕ್ಕೆ ಕಳಿಸ್ತೆ. ಆರ್ ತಿಂಗ್ಳು ಇದ್ಕಂಡು ಬಾ..' ಎಂದು ಖಂಡತುಂಡವಾಗಿ ಹೇಳಿಬಿಟ್ಟಿದ್ದರು. ತಂದೆಯೊಡನೆ ಜಗಳವಾಡಿಕೊಂಡು ವಿಕ್ರಂ ಮನೆ ಬಿಟ್ಟು ಬಂದಿದ್ದ. ಮಂಗಳೂರನ್ನು ತಲುಪಿದ್ದ.
            ಮಂಗಳೂರಿಗೆ ಬಂದ ಹೊಸತರಲ್ಲಿ ವಿಕ್ರಮನಿಗೆ ಯಲ್ಲಾಪುರದಲ್ಲಿ ಕುಂಗ್ ಫೂ-ಕರಾಟೆಯನ್ನು ಕಲಿಸಿದ್ದ ಗುರುಗಳು ಬೆನ್ನಿಗೆ ನಿಂತಿದ್ದರು. ಅವರ ಸಹಾಯದಿಂದಲೇ ಕುಂಗ್ ಫೂ-ಕರಾಟೆಯ ಶಾಲೆಯೊಂದನ್ನು ತೆರೆದಿದ್ದ. ಆ ಶಾಲೆಯ ಮೂಲಕವೇ ಅನ್ನವನ್ನು ಸಂಪಾದಿಸಲಾರಂಭಿಸಿದ್ದ. ಇನ್ನು ಅವನ ವಯಸ್ಸಿನ ವಿಚಾರಕ್ಕೆ ಬಂದರೆ ಅವನಿನ್ನೂ ಇಪ್ಪತ್ತೈದರ ತರುಣ. ಉತ್ಸಾಹಿ ಯುವಕ.  ಸ್ಫುರದ್ರೂಪಿ. ಗುಡ್ಡ-ಬೆಟ್ಟಗಳಲ್ಲಿ, ಕಾಡು-ಕಣಿವೆಗಳಲ್ಲಿ ಓಡಾಡಿದ ಆತ ಸಹಜವಾಗಿಯೇ ಕಟ್ಟುಮಸ್ತಾಗಿದ್ದ.  ಮಾರ್ಷಲ್ ಆರ್ಟ್ ಕಲಿಯುವ ಸಂದರ್ಭದಲ್ಲಿ ಕಟ್ಟುಮಸ್ತಿನ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿದ ಕಾರಣ ಮತ್ತಷ್ಟು ಆಕರ್ಷಕವಾಗಿದ್ದ. ನಾಲ್ಕು ಜನ ಒಟ್ಟಾಗಿ ಅವನ ಮೇಲೆ ಬಿದ್ದರೂ ಅವರನ್ನು ಮಣಿಸಬಲ್ಲ ತಾಕತ್ತನ್ನು ಹೊಂದಿದ್ದ ವಿಕ್ರಂ. ಜೊತೆಗೆ ಚಾಕಚಕ್ಯತೆ ಕೂಡ ಇತ್ತು.  ವಿಕ್ರಮನ ತಾಯಿ ಮನೆಯಲ್ಲಿ ವಿಕ್ರಮಾರ್ಜುನ ವಿಜಯವನ್ನು ಓದುವಾಗ ಹೆಸರು ಇಷ್ಟವಾಗಿ ವಿಕ್ರಮ ಎಂದು ಹೆಸರಿಟ್ಟಿದ್ದರಂತೆ. ಇಂತಹ ವಿಕ್ರಮನ ರೂಪಕ್ಕೆ, ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗದ ಜನರೇ ಇಲ್ಲ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ.
(ಕಣ್ಣೀರು ಮನೆ ತಲುಪಲು ಇಷ್ಟು ಕಷ್ಟ ಪಡಲೇಬೇಕು)
             ವಿಕ್ರಮನ ತಾಯಿ ಲಕ್ಷ್ಮಿ. ಊರಿನವರ ಪಾಲಿಗೆ ಲಕ್ಷ್ಮಿಬಾಯಿ. ವಿಕ್ರಮನ ಪಾಲಿಗೆ `ಲಕ್ ಬಾಯಿ..' ತಮಾಷೆಯಿಂದ ತಾಯಿಯನ್ನು ಕರೆಯುತ್ತಿದ್ದಿದ್ದೇ ಹೀಗೆ. ಸಾತ್ವಿಕ ಗುಣದ ಲಕ್ಷ್ಮೀಬಾಯಿ ಎಂದೂ ಸಿಟ್ಟಾಗಿದ್ದನ್ನು ಯಾರೂ ಕಂಡಿಲ್ಲ.ಸದ್ಗುಣಿ, ಕರುಣಾಮಯಿ, ಸಹನಾಶೀಲೆ ಇತ್ಯಾದಿಗುಣಗಳನ್ನೂ ಪೋಣಿಸಿ ಬಿಡಬಹುದು. ಮಗ ಮಂಗಳೂರಿಗೆ ಹೊರಟಾಗ ಗಂಡ ರಾಜಾರಾಮ ಭಟ್ಟರಿಗೆ ಗೊತ್ತಾಗದಂತೆ ಸಹಾಯ ಮಾಡಿದ ಖ್ಯಾತಿ, ಪ್ರೀತಿ ಇವರದ್ದು.
             ಮನೆಯಲ್ಲಿದ್ದ ಇನ್ನೊಬ್ಬರು ಸದಸ್ಯರೆಂದರೆ ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಅವರ ವಯಸ್ಸಿನ ಬಗ್ಗೆ ಸ್ಪಷ್ಟವಾಗಿ ಕೇಳಿದರೆ ಹೇಳುವುದು ಕಷ್ಟ. ಕೆವರು 80 ಎಂದರೆ ಮತ್ತೆ ಕೆಲವರು 85 ಎನ್ನುತ್ತಾರೆ. 90-95 ಎಂದು ಹೇಳುವವರೂ ಇದ್ದಾರೆ. ಅಜ್ಜಿಯನ್ನೇ ಕೆಳಿದರೆ ಶತಮಾನಗಳ ಕಥೆ ಹೇಳಿಬಿಟ್ಟಾರು. ಮುಪ್ಪಾದರೂ ಅಜ್ಜಿ ಗಟ್ಟಾಗಿದ್ದಳು. ಇವರನ್ನು ನೋಡಿ ವಿಕ್ರಮ ಯಾವಾಗಲೂ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಿದ್ದ. ವಿಕ್ರಮನಿಗೆ ಅಜ್ಜಿಯೆಷ್ಟು ಪ್ರೀತಿ ಪಾತ್ರಳೋ ಅಜ್ಜಿಗೂ ವಿಕ್ರಮನೆಂದರೆ ಪ್ರಾಣ. ಪಂಚ ಪ್ರಾಣ. ಈಕೆಯ ಗುಣವರ್ಣನೆ ಮಾಡುವಾಗ ಹಲವಾರು ವಿಶೇಷಣಗಳನ್ನು ಸೇರಿಸಬಹುದು. ಇದು ವಯಸ್ಸಾದವರ ವಿಷಯವಾದ್ದರಿಂದ ಜಾಸ್ತಿ ಹೇಳದೆ ಮುಂದಕ್ಕೆ ಸಾಗುವುದು ಒಳಿತು. ಮಹಾಲಕ್ಷ್ಮಿ, ಮಹಾಲಕ್ಷ್ಮಮ್ಮ ಅವರು ತಮ್ಮ ಮೊಮ್ಮಗ ವಿಕ್ರಮನನ್ನು ಪ್ರೀತಿಯಿಂದ ಕರೆಯುವುದು `ವೀಕೂ...' ಎಂದು. ಇದಕ್ಕೆ ಪ್ರತಿಯಾಗಿ ವಿಕ್ರಮ ಅಜ್ಜಿಯ ಬಳಿ `ಯಾವ ದಿಕ್ಕಿನಿಂದ ನೋಡಿರೂ ನಾನು ವೀಕಾಗಿ ಕಾಣಿಸ್ತ್ನಿಲ್ಲೆ.. ಅದೆಂತಕ್ಕೆ ವೀಕೂ ಹೇಳ್ತೆ...' ಎಂದು ಕೇಳಿದರೆ ಅಜ್ಜಿ `ಚಿಕ್ಕಂದಿನಲ್ಲಿ ನೀನು ಬಹಳ ಸಣ್ಣ ಇದ್ದೆ.. ಅದ್ಕೆ ಹಂಗೆ ಕರೆಯೋದು..' ಎನ್ನುತ್ತಿದ್ದರು.
            ವಿಕ್ರಮನ ಕುಟುಂಬದ ಸದಸ್ಯರು ಇಷ್ಟೇ ಅಲ್ಲ. ಇನ್ನೂ ಒಬ್ಬರಿದ್ದಾರೆ. ಕುಟುಂಬದ ಕೊಟ್ಟ ಕೊನೆಯ ಸದಸ್ಯೆ. ವಿಕ್ರಮನ ತಂಗಿ ರಮ್ಯ. ವಿಕ್ರಮನಿಗಿಂತ ನಾಲ್ಕೈದು ವಸಂತಗಳಷ್ಟು ಚಿಕ್ಕವಳು. ಅವಳು ಯಲ್ಲಾಪುರದಲ್ಲಿ ಬಿ.ಎ ಮೊದಲ ವರ್ಷದಲ್ಲಿ ಓದುತ್ತಿದ್ದಳು. ವಿಕ್ರಮನ ಒತ್ತಾಯದಿಂದಲೇ ರಾಜಾರಾಮ ಭಟ್ಟರು ಮಗಳನ್ನು ಯಲ್ಲಾಪುರದಲ್ಲಿ ಕಾಲೇಜು ಕಲಿಕೆಗೆ ಹಾಕಿದ್ದರು. ವಾಚಾಳಿ ಗುಣದ ರಮ್ಯ ಸುಮ್ಮನಿದ್ದಳೆಂದರೆ ಏನೋ ಆಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದಿತ್ತು.
**********
           ವಿಕ್ರಮ ಸ್ಥಾಪಿಸಿದ್ದ `ಅದ್ವೈತ ಆತ್ಮರಕ್ಷಣೆ ..' ಕೇಂದ್ರಕ್ಕೆ ಮಂಗಳೂರಷ್ಟೇ ಅಲ್ಲ ಅಕ್ಕಪಕ್ಕದ ಬಜಪೆ, ಉಲ್ಲಾಳ, ಕಾಸರಕೋಡ, ಸುರತ್ಕಲ್ ಈ ಮುಂತಾದ ಕಡೆಗಳಿಂದಲೂ ಯುವಕರು ಕಲಿಯಲು ಬರುತ್ತಿದ್ದರು. ಇವನ ಗರಡಿಯಲ್ಲಿ ಪಳಗಿದವರು ಸಾಕಷ್ಟು ಹೆಸರನ್ನೂ ಗಳಿಸುತ್ತಿದ್ದರು.
           ಹೀಗಿದ್ದಾಗ ಒಂದು ದಿನ ವಿಕ್ರಮ ಸ್ಥಾಪಿಸಿದ್ದ ಮಾರ್ಷಲ್ ಆರ್ಟ್ ಕಲಿಕಾ ಕೇಂದ್ರದ ಬಳಿಯಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ ಕೇಂದ್ರ ಪ್ರಾರಂಭವಾಗಿತ್ತು. ಆರಂಭದಲ್ಲೇ ಸಾಕಷ್ಟು ಗಿಮಿಕ್ಕುಗಳನ್ನು ಮಾಡಿದ್ದ ಆ ಕೇಂದ್ರ `ಹೊಸ ನೀರು ಬಂದು ಹಳೇ ನೀರನ್ನು ಕೊಚ್ಚಿಕೊಂಡು ಹೋಯಿತು' ಎಂಬಂತೆ ತನ್ನತ್ತ ಎಲ್ಲರನ್ನೂ ಸೆಳೆಯಲಾರಂಭಿಸಿತ್ತು. ಸಾಕಷ್ಟು ಹಣವನ್ನು ಹೊಂದಿದ್ದ ಅದರ ಮಾಲೀಕರು ತರಹೇವಾರಿ ಜಾಹೀರಾತಿನ ಮೂಲಕ ಯಶಸ್ವಿಯಾಗಿದ್ದರು. 50ಕ್ಕೂ ಅಧಿಕ ಜನರಿದ್ದ ವಿಕ್ರಮನ ಕಲಿಕಾ ಕೇಂದ್ರದ ಪರಿಸ್ಥಿತಿ ಇದರಿಂದ ಯಾವ ಪರಿಣಾಮ ಎದುರಿಸಿತೆಂದರೆ ಕೊನೆ ಕೊನೆಗೆ ಕೇವಲ 15-20 ಜನರಷ್ಟೇ ಉಳಿಯುವಂತಾಯಿತು. ವಿಕ್ರಮನ ವೃತ್ತಿಗೆ ಬಲವಾದ ಹೊಡೆತ ಬೀಳಲಾರಂಭವಾಗಿತ್ತು, ಇದರಿಂದ ಚಿಂತಾಕ್ರಾಂತನಾದ ವಿಕ್ರಮ ಖಿನ್ನತೆಗೆ ಒಳಗಾಗಿ ಸದಾಕಾಲ ಇದರ ಬಗ್ಗೆಯೇ ಆಲೋಚನೆ ಮಾಡಲು ಆರಂಭಿಸಿದ್ದ.
(ಕಣ್ಣೀರು ಮನೆ ರಸ್ತೆಯ ಕಣ್ಣೀರು ತರಿಸುವ ದಾರಿ)
            ಅದೊಂದು ದಿನ ಇದೇ ಆಲೋಚನೆಯಲ್ಲಿ ಮುಂಜಾನೆ ಬೇಗನೇ ಎದ್ದು ತನ್ನ ಕಲಿಕಾ ಕೇಂದ್ರಕ್ಕೆ ಬಂದ ವಿಕ್ರಮ. ಅಷ್ಟರಲ್ಲಾಗಲೇ ಅಲ್ಲಿಗೆ ಬಂದು ನಿಂತಿದ್ದ ವಿಕ್ರಮನ ಆಪ್ತರಲ್ಲಿ ಆಪ್ತನಾದ ಗೆಳೆಯ ಪ್ರದೀಪ. ತಾನೂ ನಗುವುದು, ಇತರರನ್ನೂ ನಗಿಸುವುದು ಪ್ರದೀಪನ ಕಾರ್ಯ. ಧ್ವನಿ ಅಷ್ಟೇನೂ ಚನ್ನಾಗಿರಲಿಲ್ಲ. ಆದರೆ ಹಾಡುವ ಹುಚ್ಚು ಮಾತ್ರ ವಿಪರೀತವಿತ್ತು. ಹಾಡನ್ನು ಆತ ಹಾಡುತ್ತಾನೆ ಎನ್ನುವುದಕ್ಕಿಂತ ಅರಚುತ್ತಾನೆ ಎಂದರೆ ಸರಿಯಾಗುತ್ತಿತ್ತು. ಆದರೆ ಆತ ಜೀವನದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ನೋವುಗಳನ್ನು ಎದುರಿಸಿದ್ದಾನೆ ಎನ್ನುವುದನ್ನು ಆತನ ಕಣ್ಣನ್ನು ನೋಡಿದರೆ ಅರ್ಥವಾಗಿ ಬಿಡುತ್ತಿತ್ತು.
             ಆತ ಚಿಕ್ಕವಯಸ್ಸಿನವನಾಗಿದ್ದರೂ ಬಹಳಷ್ಟು ಜೀವನಾನುಭವವನ್ನು ಕಂಡಿದ್ದ. ಪದೇ ಪದೆ ಅನುಭವಿಸುತ್ತಲೂ ಇದ್ದ. ಈತ ಮೂಲತಃ ಸಾಗರ ಕಡೆಯ ಹಳ್ಳಿಯೊಂದರ ಹುಡುಗ. ಪ್ರದೀಪ ಹುಟ್ಟಿದ ಕೆಲವೇ ವರ್ಷಗಳಲ್ಲಿ  ಕುಡುಕ ತಂದೆ ಪ್ರದೀಪನನ್ನೂ ಆತನ ತಾಯಿಯನ್ನೂ ಬಿಟ್ಟು ಮತ್ತೊಬ್ಬಳ ಜೊತೆಗೆ ಓಡಿಹೋದ. ತಾಯಿ ಕಷ್ಟಪಟ್ಟು ಸಾಕಿದ್ದಳು. ಹಾಗೂ ಹೀಗೂ ಪಿಯುಸಿ ಓದಿದ. ಪಿಯುಸಿ ಓದುತ್ತಿದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ. ಆಕೆ ಆತನನ್ನು ತಿರಸ್ಕಾರ ಮಾಡಿದಳು. ಆಗ ಛಲಕ್ಕೆ ಬಿದ್ದ ಪ್ರದೀಪ ಅವಳ ಬಳಿ `ನೋಡು.. ಇನ್ನು ಆರೇಳು ವರ್ಷಗಳಲ್ಲಿ ಕರ್ನಾಟಕವೇ ನನ್ನನ್ನು ಹೊಗಳುವಂತೆ ಆಗುತ್ತೇನೆ...' ಎಂದು ಹೇಳಿ ಅವಳ ಕಡೆಗೆ ಸಿಟ್ಟಿನಿಂದ ಬಂದಿದ್ದ. ಅಲ್ಲಿಂದ ಊರು ಬಿಟ್ಟು ಬಂದವನಿಗೆ ಜೊತೆಯಾಗಿದ್ದು ಪ್ರದೀಪನಂತೆ ಮನೆಯಿಂದ ಬಂದಿದ್ದ ವಿಕ್ರಂ. ಇಬ್ಬರ ಭೆಟಿಯೂ ಮಂಗಳೂರಿನಲ್ಲೇ ಆಗಿತ್ತು. ಅಲ್ಲಿ, ಇಲ್ಲಿ ಏನೇನೋ ಕೆಲಸ ಮಾಡಿ ಕಾಲೇಜು ಮುಗಿಸಿದ ಆತನಿಗೆ ಇತ್ತೀಚೆಗೆ ದೊಡ್ಡದೊಂದು ಕೆಲಸವೂ ಸಿಕ್ಕಿತ್ತು. ಆದರೆ ಆತನಿಗೆ ಸಿಕ್ಕ ಕೆಲಸ ಏನು ಎನ್ನುವುದನ್ನು ಮಾತ್ರ ಯಾರಿಗೂ ಹೇಳಿರಲಿಲ್ಲ. ಗೆಳೆಯ ವಿಕ್ರಮನ ಬಳಿಯೂ ಹೇಳದೇ ಉಳಿದಿದ್ದ. ವಿಚಿತ್ರವೆಂದರೆ ಇಂತಹ ಪ್ರದೀಪ ಪದೇ ಪದೆ ಕಾಣೆಯಾಘಿಬಿಡುತ್ತಿದ್ದ. ಹೇಳದೇ ಕೇಳದೇ ಎಲ್ಲೋ ಹೋಗಿಬಿಡುತ್ತಿದ್ದ. ವಿಕ್ರಮ ಸಾಕಷ್ಟು ಬಾರಿ ಈ ಕುರಿತು ವಿಚಾಸಿದಿದ್ದನಾದರೂ ಉತ್ತರ ಬರದಿದ್ದಾಗ ಕೇಳುವುದನ್ನೇ ಬಿಟ್ಟಿದ್ದ. ಇಂತಹ ನಿಘೂಡತೆಯೇ ಮುಂದೊಂದು ದಿನ ಪ್ರದೀಪ ಹಾಗೂ ವಿಕ್ರಮನ ಬಾಳಲ್ಲಿ ಬಹುದೊಡ್ಡ ತಿರುವನ್ನು ನೀಡಲಿತ್ತು.

(ಮುಂದುವರಿಯುತ್ತದೆ)             

No comments:

Post a Comment