Monday, August 4, 2014

ಕಂಡದ್ದು ಕಂಡಾಂಗೆ

(ದಿಲ್ ಸೇ...)
ವಿಕ್ಟರಿ...

ಒಂದು ಮಜಾ ಸಿನಿಮಾ ನೋಡಿದೆ.
ಹಿಂದಿ ಭಾಷೆಯ ವಿಕ್ಟರಿ.. ಹರ್ಮನ್ ಬವೇಜಾ ಸಿನಿಮಾ.
ಒಂದೊಂದು ಸೀನು ಎಷ್ಟು ಮಜಾ ಅಂತೀರಾ.. ಆಹಾ.. ನೋಡೋಕೆ ಎರಡು ಕಣ್ಣು ಸಾಲದು.. ಛೇ..
ಸಿನೆಮಾದಲ್ಲಿ ಬವೇಜಾ ಕ್ರಿಕೆಟ್ ಆಟಗಾರ.
ಡೈರೆಕ್ಟ್ ಆಗಿ ಇಮಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್ ಕೋಚಿಗೆ ಚಾಲೆಂಜ್ ಮಾಡೋದು, ಒಂದೇ ಒಂದು ರಣಜಿ ಮ್ಯಾಚ್ ಆಡಿ ಭಾರತ ತಂಡಕ್ಕೆ ಸೆಲೆಕ್ಟ್ ಆಗೋದು.. ಎಷ್ಟೆಲ್ಲ ಮ್ಯಾಜಿಕ್ ಇದೆ ಸಿನೆಮಾದಲ್ಲಿ ಅಂದ್ರೆ... ಬಣ್ಣಿಸಲಸದಳ.
ಸಿನೆಮಾದಲ್ಲಿ ಒಂದು ಸನ್ನಿವೇಶ. ನಾಯಕ ಎಲ್ಲ ದಾಖಲೆಗಳನ್ನು ಚಿಂದಿ ಉಡಾಯಿಸುತ್ತ ಬರುತ್ತಾನೆ. ಅಲ್ಲೊಂದು ಸನ್ನಿವೇಶದಲ್ಲಿ ಸಿಕ್ಸರ್ ಗಳ ಸುರಿಮಳೆ ಸುರಿಸುತ್ತಿರುತ್ತಾನೆ. ಸಿಕ್ಸರ್ ಹೊರೆಯುವ ಭರದಲ್ಲಿ ಮೊದಲ ಎಸೆತ ನೋಬಾಲ್ ಸಿಕ್ಸ್, ಆಮೇಲಿನ ಐದು ಎಸೆತಗಳು ಸಿಕ್ಸ್. ನೋಬಾಲ್ ಸಿಕ್ಸ್ ಸೇರಿ ಆರು ಸಿಕ್ಸರ್ ಹೊಡೆಯುತ್ತಾನೆ ನಾಯಕ. ಅಲ್ಲಿಗೆ ಅಂಪಾಯರ್ ಓವರ್ ಆಯ್ತು ಎಂದು ಹೇಳಿದರೆ ಕಾಮೆಂಟರಿ ಹೇಳುವವರು ಹೀರೋನನ್ನು ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್ ಗೆ ಹೋಲಿಸುತ್ತಾರೆ. ನನ್ನನ್ನು ಕಾಡಿದ್ದು ನೋಬಾಲ್ ಆದ ಬಾಲನ್ನು ಬಿಟ್ಟರೆ ಉಳಿದಂತೆ ಒಂದು ಓವರ್ ಗೆ ಆರು ಬಾಲ್ ಹಾಕಬೇಕು. ಐದೇ ಬಾಲ್ ಹಾಕಿದ ಎನ್ನುವುದು ಒಂದು ಕಡೆ. ಐದು ಬಾಲ್ ಗೆ ಓವರ್ ಮಾಡಿದ ನಿರ್ದೇಶಕನಿಗೆ ಸಲಾಂ ಎಂದೆನಾದರೂ ಇನ್ನೊಂದು ಬಾಲನ್ನು ಹೆಚ್ಚುವರಿ ಹಾಕಿದ್ದರೆ ನಾಯಕನಿಂದ ಇನ್ನೊಂದು ಸಿಕ್ಸರ್ ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು. ಜೊತೆಗೆ ಅದೊಂದು ವಿಶ್ವದಾಖಲೆಯಾಗಿ ಏಳು ಸತತ ಸಿಕ್ಸರ್ ಹೊಡೆದು ಹರ್ಮನ್ ಬವೇಜಾ ಎಲ್ಲರನ್ನೂ ಮೀರಿಸಿಬಿಡುತ್ತಿದ್ದ.. ಇರಲಿ..ಅಂದ ಹಾಗೆ ಆತ ಸಿಕ್ಸರ್ ಹೊಡೆದಿದ್ದು ಯಾರಿಗೆ ಗೊತ್ತಾ ಆಸ್ಟ್ರೇಲಿಯಾದ ಕ್ರಿಕೆಟ್ ಪ್ಲೇಯರ್ ಗೆ..

ಇನ್ನೊಂದು ವಿಷಯ.. ಮಜವಾಗಿದೆ... ಸಿನೆಮಾಕ್ಕೂ ನಿಜವಾದ ಕ್ರಿಕೆಟ್ ಗೂ ತಾಳೆಯಾಗುವಂತದ್ದು.. ಸಿನೆಮಾದಲ್ಲಿ 20ಕ್ಕೂ ಅಧಿಕ ಕ್ರಿಕೆಟ್ ಆಟಗಾರರು ನಟಿಸಿದ್ದಾರೆ. ಆಸಿಸ್ ನ ಬ್ರೆಟ್ ಲಿ, ಹಾಡ್ಜ್, ಹಾಗ್ , ಸೌಥಾಪ್ರಕಾದ ಸ್ಮಿತ್, ಪಾಕಿಸ್ತಾನದ ಶೊಯೆಬ್ ಮಲಿಕ್, ಅಕ್ಮಲ್, ಗುಲ್, ವೆಸ್ಟಿಂಡೀಸಿನ ಸ್ಮಿತ್, ಬ್ರಾವೋ, ಶ್ರೀಲಂಕಾದ ಜಯಸೂರ್ಯ, ಮೆಂಡಿಸ್, ಅರ್ನಾಲ್ಡ್, ಭಾರತದ ದಿನೇಶ್ ಕಾರ್ತೀಕ್, ಹರ್ಭಜನ್, ನೆಹ್ರಾ, ರಮೇಶ್ ಪವಾರ್, ರೈನಾ, ಪಂಕಜ ಸಿಂಗ್, ಯುಸುಫ್ ಪಠಾಣ್, ಉತ್ತಪ್ಪ, ಇಶಾಂಥ ಶರ್ಮಾ ಇತ್ಯಾದಿ..
ಸಿನೆಮಾದ ಮಜಾ ಸಂಗತಿಗಳೆಂದರೆ
ಇದೀಗ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ಕಾಯುತ್ತಿರುವ ಪಂಕಜ್ ಸಿಂಗ್ ಅಲ್ಲಿ ಆಗಲೇ ಭಾರತ ತಂಡದ ಖಾಯಂ ಆಟಗಾರ.
ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಹೇಗೆ ಯುಸುಫ್ ಪಠಾಣ್ ಆರಂಭ ಶೂರನೋ ಆ ಸಿನೆಮಾದಲ್ಲೂ ಹಾಗೇ..
ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ 389 ರನ್ ಚೇಸ್ ಮಾಡಿ ಗೆಲ್ಲುತ್ತದೆ. ಹೀರೋ 15 ಬಾಲ್ ನಲ್ಲಿ 50 ಹೊಡೆಯುವುದು ಸಾಮಾನ್ಯವಲ್ಲ ಬಿಡಿ..

ಅಂದಹಾಗೆ ಆಸ್ಟ್ರೇಲಿಯನ್ನರ ಸ್ಲೆಡ್ಜಿಂಗನ್ನು ಇಲ್ಲಿ ಯಥಾವತ್ ಚಿತ್ರಿಸಲಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಶತಕ ಬಾರಿಸುವುದು ಅತಿಶಯ ಎನ್ನಿಸುತ್ತದೆ. ಆಸಿಸ್ ಆಟಗಾರ ಬ್ರೆಟ್ ಲಿಗೆ ಕ್ರಿಕೆಟ್ ಹೊರತಾಗಿ ಒಂದೆರಡು ಇತರೆ ಮಾತುಗಳಿವೆ... ಹೀರೋಯಿನ್ನ ಚನ್ನಾಗಿದ್ದರೂ ಇಂತ ಸಿನೆಮಾದಲ್ಲಿ ಅವಳ ಪಾತ್ರ ಅಷ್ಟಕ್ಕಷ್ಟೆ...

ಎಲ್ಲಕ್ಕಿಂತ ಇಂಟರೆಸ್ಟಿಂಗ್ ಹಾಗೂ ರಿಯಲ್ ಆಗಿ ಮೂಡಿಬಂದಿದ್ದು ಅಂದರೆ...
ಹರ್ಭಜನ್, ಇಶಾಂತ ಶರ್ಮಾ ಸಿನೆಮಾದಲ್ಲಿ ಸಿಕ್ಕಾಪಟ್ಟೆ ರನ್ ಹೊಡೆಸಿಕೊಳ್ಳುತ್ತಾರೆ. ರಿಯಲ್ ಮ್ಯಾಚಿನಲ್ಲಿ ರನ್ ಹೊಡೆಸಿಕೊಳ್ಳುವಂತೆ...
ಇನ್ನೂ ಅಬ್ಬಾ ಎನ್ನಿಸುವುದು ಆಶಿಶ್ ನೆಹ್ರಾ..
ಆತ ಇಂಟರ್ನ್ಯಾಶನಲ್ ಪಂದ್ಯಗಳಲ್ಲಿ ರನ್ ಹೊಡೆಸಿಕೊಳ್ಳುವುದು ಕಾಮನ್ನು ಬಿಡಿ..
ಚಿತ್ರದಲ್ಲಿ ಹರ್ಮನ್ ಬವೇಜಾನಿಂದ ಯಾವ್ ರೀತಿ ರನ್ ಹೊಡೆಸಿಕೊಳ್ಳತಾನೆ ಗೊತ್ತಾ..
ಆಹಾ.. ಆಗಲೇ ನನಗೆ ಅನ್ನಿಸಿದ್ದು ಆವತ್ತಿಗೂ, ಈವತ್ತಿಗೂ ಯಾವತ್ತಿಗೂ ಆಶಿಶ್ ನೆಹ್ರಾ.. ಆಶಿಶ್ ನೆಹ್ರಾನೇ.. ಯಾವತ್ತೂ ಬದಲಾಗೋದಿಲ್ಲ.. ಎದುರಾಳಿ ಯಾರೇ ಇರಲಿ.. ಬದಲಾಗಿ ಹರ್ಮನ್ ಬವೇಜಾ ನೇ ಇರಲಿ..
ಆಶಿಶ್ ನೆಹ್ರಾ ಕೊಡೋದೊಂದೆ ರನ್ನು..!!

ನಿರ್ದೇಶಕನ ಕ್ರಿಯೇಟಿವಿಟಿಗೆ ಅಡ್ಡಬಿದ್ದೆ...



**2**

ಸಂಗಮ್.. ಹಾಗೂ ಕನ್ನಡ ಹೀರೋಗಳು

ಮೆ ಕ್ಯಾ ಕರೂ ರಾಂ ಮುಝೆ ಬುಡ್ಡಾ ಮಿಲ್ ಗಯಾ ಎನ್ನುವ ಮೂಲಕ 1964ರಲ್ಲಿ ತೆರೆಕಂಡ ಸಂಗಮ್ ಸಿನೆಮಾವನ್ನು ಮತ್ತೊಮ್ಮೆ ನೋಡಿದೆ. ಸರಳ ಪ್ರೇಮಕಥೆ. ವಿವಾಹದ ನಂತರದ ಅನುಮಾನ ಎಂಬ ಅಂಶಗಳನ್ನಿಟ್ಟುಕೊಂಡು ರಾಜ್ ಕಪೂರ್ ಈ ಸಿನೆಮಾವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಕಥಾನಾಯಕ ರಾಜ್ ಕಪೂರ್.. ನಾಯಕಿ ವೈಜಯಂತಿಮಾಲಾ .. ಜೊತೆಯಲ್ಲಿ ರಾಜೇಂದ್ರಕುಮಾರ್ ಮುಖ್ಯ ಭೂಮಿಕೆಯ ಸಿನೆಮಾದಲ್ಲಿ ಬಹು ಅಂಶಗಳಲ್ಲಿ ಈ ಮೂವರೇ ಇರುತ್ತಾರೆ. ತ್ರಿಕೋನ ಪ್ರೇಮ ಕಥೆ.
ವೈಜಯಂತಿ ಮಾಲಾಳನ್ನು ಪ್ರೀತಿಸುವ ರಾಜ್ ಕಪೂರ್, ರಾಜೇಂದ್ರ ಕುಮಾರ್ ಇಬ್ಬರದ್ದೂ ಸೂಪರ್ ಅಭಿನಯ.
ತನ್ನ ಪ್ರೀತಿಯನ್ನು ರಾಜ್ ಕಪೂರ್ ಡಂಗುರ ಸಾರಿದಂತೆ ಗೆಳೆಯನ ಬಳಿ ಹೇಳಿಕೊಂಡರೆ ತನ್ನೊಳಗೆ ಪ್ರೀತಿಯ ಮಹಲನ್ನು ಕಟ್ಟಿ `ಯೇ ಮೇರಾ ಪ್ರೇಮ ಪತ್ರ ಪಡಕರ್..' ಎಂದು ಹಾಡಿ ವೈಜಯಂತಿಯನ್ನು ಸೆಳೆಯುವ ರಾಜೇಂದ್ರಕುಮಾರ್. ವೈಜಯಂತಿ ಮಾಲಾಳಿಗೂ ರಾಜೇಂದ್ರಕುಮಾರನ ಮೇಲೆ ಪ್ರೇಮದ ಭಾವವಿದೆ. ಆದರೆ ಮೂವರೂ ಗೆಳೆಯರು. ರಾಜೇಂದ್ರಕುಮಾರ್ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ರಾಜ್ ಕಪೂರನಿಗೆ ವೈಜಯಂತಿಯನ್ನು ಮದುವೆ ಮಾಡಿಸುವಲ್ಲಿಗೆ ಸಿನೆಮಾ ಅರ್ಧ ಮುಗಿಯುತ್ತದೆ. 
ಇನ್ನು ಮುಂದಿರುವುದೇ ನಿಜವಾದ ಕಥೆ. ಮದುವೆಗೆ ಮುನ್ನ ತನ್ನ ಹೆಂಡತಿ ಯಾರನ್ನೋ ಪ್ರೀತಿಸುತ್ತಿದ್ದಳು ಎನ್ನುವ ಅಂಶವನ್ನು ತಿಳಿದುಕೊಂಡ ರಾಜ್ ಕಪೂರ್ ಕೂತಲ್ಲಿ ನಿಂತಲ್ಲಿ `ಯಾರವನು..' ಎಂದು ಪ್ರಶ್ನೆ ಮಾಡುತ್ತಾನೆ. ರಾಜೇಂದ್ರಕುಮಾರನಿಗೂ ಗೊತ್ತಿರಬಹುದು ಎಂದು ಆತನಲ್ಲೂ ಕೇಳುತ್ತಾನೆ. ಕೊನೆಗೊಮ್ಮೆ `ದೋಸ್ತ್ ದೋಸ್ತ್ ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ..' ಎಂದೂ ಹಾಡುತ್ತಾನೆ.. ಅಂತ್ಯದಲ್ಲಿ ರಾಜೇಂದ್ರಕುಮಾರ ಹಾಗೂ ವೈಜಯಂತಿಮಾಲಾ ಪ್ರೀತಿಸಿದ್ದರು. ಅವರ ನಡುವೆ ತಾನು ಬಂದು ಬದುಕನ್ನು ಹಾಳು ಮಾಡಿದೆ ಎನ್ನುವ ದುಃಖ ರಾಜ್ ಕಪೂರನನ್ನು ಕಾಡಿದರೆ ರಾಜೇಮದ್ರಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಿನೆಮಾ ಮುಕ್ತಾಯವಾದರೂ ನೋಡುಗನ ಮನದಲ್ಲಿ ಏನೆಲ್ಲ ಭಾವನೆಗಳನ್ನು ಉಳಿಸಿಬಿಡುತ್ತದೆ..
ಸಿನೆಮಾದಲ್ಲಿ ಇಷ್ಟೇ ಅಂಶಗಳಲ್ಲದೇ ನೋಡಲೇ ಬೇಕು ಎನ್ನಿಸುವಂತಹದ್ದು ಸಾಕಷ್ಟಿವೆ. ಬೋಲ್ ರಾಧಾ ಬೋಲ್ ಸಂಗಂ ಹೋಗಾ ಕೆ ನಹಿ ಎನ್ನುವಂತಹ ಸುಮಧುರ ಹಾಡುಗಳು ಇಲ್ಲಿವೆ. ಯುದ್ಧ ವಿಮಾನದ ಪೈಲಟ್ ಆಗುವ ರಾಜ್ ಕಪೂರ್.. ಯುದ್ಧದಲ್ಲಿ ಪಾಲ್ಗೊಳ್ಳುವ ದೃಶ್ಯ. 
ಕ್ಲೈಮ್ಯಾಕ್ಸಿನಲ್ಲಿ ತ್ರಿಕೋನದಂತೆ ನಿಲ್ಲುವ ರಾಜ್ಕಪೂರ್, ರಾಜೇಂದ್ರಕುಮಾರ್, ವೈಜಯಂತಿ ಮಾಲಾ...
ರಾಜ್ ಕಪೂರ್ ನಡೆದುಕೊಂಡು ವೈಜಯಂತಿ ಮಾಲಾ ಬಳಿ ಬಂದರೆ ಆಕೆ ನಿಧಾನವಾಗಿ ನಡೆದುಕೊಂಡು ರಾಜೇಂದ್ರಕುಮಾರ್ ಬಳಿ ಹೋಗುವುದು, ರಾಜೇಂದ್ರ ಕುಮಾರ್ ಆಕೆಯಿಂದ ದೂರ ಹೋಗಿ ನಿಲ್ಲುವುದು.. ಇಂತಹ ಮನಮುಟ್ಟುವ ಪಾತ್ರಗಳು ಬಹಳಷ್ಟಿವೆ. ತುಂಟಾಟದ ಮನೋಭಾವದವರಿಗೆ ಮೇ ಕ್ಯಾ ಕರೂ ರಾಂ ಇಷ್ಟವಾಗಬಹುದು.. ಸ್ವಿಡ್ಜರ್ಲೆಂಡಿನಲ್ಲಿ ಮೊಟ್ಟ ಮೊದಲು ಚಿತ್ರೀಕರಣಗೊಂಡ ಭಾರತದ ಚಿತ್ರ ಇದು ಎನ್ನುವ ಹೆಗ್ಗಳಿಕೆ ಇದೆ. ಕನ್ನಡದಲ್ಲಿಯೂ ಸ್ವಪ್ನ ಎನ್ನುವ ಹೆಸರಿನಲ್ಲಿ ಈ ಚಿತ್ರ ರಿಮೇಕ್ ಆಗಿ ಬಂದಿದೆಯಂತೆ.
**
ಇನ್ನೊಂದು ಸಂಗತಿ ಹೇಳಲೇ ಬೇಕು. ಇದೇ ಚಿತ್ರವನ್ನು ಈಗ ಕನ್ನಡದಲ್ಲಿ ರಿಮೇಕ್ ಮಾಡಿದರೆ ಹೇಗಿರುತ್ತದೆ ಎನ್ನುವುದು ನನ್ನ ಆಲೋಚನೆ. ಹಳೆಯ ಕಥೆಯ ಅಂಶವನ್ನು ಇಟ್ಟುಕೊಂಡು ಇಂದಿನ ತಲೆಮಾರಿಗೆ ಹೊಂದಿಕೆಯಾಗುವಂತೆ ಚಿತ್ರ ಮಾಡುವುದು. ನನ್ನ ಪ್ರಕಾರ ಚಿತ್ರದಲ್ಲಿ ರಾಜ್ ಕಪೂರ್ ಪಾತ್ರಕ್ಕೆ ದರ್ಶನ್ ಹೊಂದಿಕೆಯಾಗುತ್ತಾರೆ. ರಾಜೇಂದ್ರಕುಮಾರ್ ಪಾತ್ರಕ್ಕೆ ಸುದೀಪ್ ಹೊಂದಿಕೆಯಾಗುತ್ತಾರೆ. ನೋಡುಗರಿಗೆ ಸುದೀಪ್ ಪಾತ್ರ ಸೆಕೆಂಡ್ ಹೀರೋ ಅಂತವನಿಗೆ ಸೆಕೆಂಡ್ ಹೀರೋ ಪಾತ್ರ ಕೊಟ್ಟರಲ್ಲ ಎನ್ನಿಸಬಹುದು. ಆದರೆ ಚಿತ್ರದಲ್ಲಿ ಸೆಕೆಂಡ್ ಹೀರೋ ಅನ್ನೋದೇ ಇಲ್ಲ. ಮೂರು ಪಾತ್ರಗಳೂ ಜೀವಾಳ. ದರ್ಶನ್ ತನ್ನ ತುಂಟಾಟದ ಮ್ಯಾನರಿಸಂ ಹೈಟು, ಫೈಲಟ್ಟು ಇತ್ಯಾದಿಗಳ ಮೂಲಕ ಪಾತ್ರಕ್ಕೆ ಒಗ್ಗಬಹುದು. ಅದೇ ರೀತಿ ಸೈಲಂಟಾಗಿ ಮನದೊಳಗೆ ರೋಧಿಸುವ ತನ್ನ ಪ್ರೇಮವನ್ನು ಸ್ನೇಹಕ್ಕಾಗಿ ತ್ಯಾಗ ಮಾಡಿ ಕೊನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ನಾಯಕನಾಗಿ, ನಾಯಕನಿಗಿಂತ ಹೆಚ್ಚಿನ ಅಂಕ ಪಡೆಯುವ ಮೂಲಕ ರಾಜೇಂದ್ರಕುಮಾರ್ ಪಾತ್ರವನ್ನು ಸುದೀಪ್ ಮಾಡಬಹುದು ಎನ್ನಿಸುತ್ತದೆ. ವೈಜಯಂತಿ ಮಾಲಾ ನ ಪಾತ್ರಕ್ಕೆ ರಾಧಿಕಾ ಪಂಡಿತ್ ಸೂಕ್ತ ಎನ್ನಿಸುತ್ತದೆ.
ಈ ಇಬ್ಬರೂ ನಾಯಕರು ಒಂದು ಚಿತ್ರದಲ್ಲಿ ಒಂದಾಗಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಹಾರಯಿಕೆ. ಇಬ್ಬರ ಇಮೇಜಿಗೂ ಧಕ್ಕೆ ಬರಬಾರದು. ಚಿತ್ರದಲ್ಲಿ ಏನಾದರೂ ಈ ಇಬ್ಬರೂ ಫೈಟ್ ಮಾಡಿಕೊಂಡೆ ಅವರ ಅಭಿಮಾನಿಗಳಲ್ಲಿ ಅದು ಮರುಧ್ವನಿಸುತ್ತದೆ. ಫೈಟ್ ಸಿನೆಮಾದ ಬದಲು ಈ ಫೈಟಿಲ್ಲದ ಸಿನೆಮಾ ಮಾಡಿದರೆ ಇಬ್ಬರ ಇಮೇಜು ಉಳಿಯುತ್ತದೆ. ಅಭಿಮಾನಿಗಳೂ ಒಟ್ಟಾಗಿ ಇರುತ್ತಾರೆ. ದಿಗ್ಗಜರ ಸಿನೆಮಾ ಆದ ಕಾರಣ ಬಾಕ್ಸಾಫಿಸಿನಲ್ಲಿ ನಿರೀಕ್ಷೆ ಹುಟ್ಟಿಸಿ ಹಣಗಳಿಕೆಗೆ ದಾರಿಯಾಗಬಹುದು. ನೋಡೋಣ ಯಾವ ಪುಣ್ಯಾತ್ಮನಾದರೂ ಈ ಕೆಲಸಕ್ಕೆ ಮುಂದಾಗುತ್ತಾನೋ ಎಂದು. 

ಒಂದೊಳ್ಳೆ ಚಿತ್ರ.. ಸಂಗಂ ಚಿತ್ರ ನೋಡುವಾಗ ಕನ್ನಡದ ಈ ಇಬ್ಬರು ನಟರನ್ನು ಮನಸ್ಸಿನಲ್ಲಿಯೇ ಕಲ್ಪನೆ ಮಾಡಿಕೊಂಡು ನೋಡಿ.. ಖುಷಿ ಕೊಡಬಲ್ಲದು.


**3**
ಕಡ್ಡಿಪುಡಿ... ಪುಡಿ ಪುಡಿ

ಶಿವಣ್ಣ-ಸೂರಿ ಕಾಂಬಿನೇಶನ್ನಿನ ಕಡ್ಡಿಪುಡಿ ನೋಡಿದೆ. ಬಹಳ ಇಷ್ಟವಾಯಿತು ಚಿತ್ರ. ಬದುಕು ಚಿಕ್ಕ ಚಿಕ್ಕ ಅಚ್ಚರಿಗಳ ಸಂತೆ ಎನ್ನುವುದಕ್ಕೆ ಈ ಸಿನಿಮಾವೊಂದು ಸಾಕ್ಷಿ. ಚಿತ್ರ ದುದ್ದಕ್ಕೂ ಚಿಕ್ಕ ಚಿಕ್ಕ ಅಚ್ಚರಿಗಳಿವೆ. ಅಬ್ಬಾ ಎಂದು ಎಂದು ಉದ್ಘಾರ ಮಾಡಿಸುತ್ತವೆ. ರೌಡಿಯಿಸಂ ಬಿಟ್ಟ ಮಧ್ಯವಯಸ್ಕನ ಪಾತ್ರದಲ್ಲಿ ಶಿವಣ್ಣ ಬಹಳ ಚನ್ನಾಗಿ ನಟಿಸಿದ್ದಾರೆ. ಶಿವಣ್ಣನ ಚಿತ್ರವೊಂದು ನೋಡಿಸಿಕೊಂಡು ಹೋಗುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಅದಕ್ಕೆ ತಕ್ಕಂತೆ ಶಿವಣ್ಣ ಸಾಕಷ್ಟು ಕಷ್ಟಪಟ್ಟಿದ್ದೂ ಎದ್ದು ಕಾಣುತ್ತದೆ. ಚಪ್ಪಲಿಗೆ ಪಿನ್ ಹಾಕಿಕೊಂಡು, ಆಗಾಗ ಪಿನ್ ಕಿತ್ತೋದಾಗ ಸರಿಪಡಿಸಿಕೊಳ್ಳುವ ರಾಧಿಕಾ ಪಂಡಿತ್ ನಟನೆ ಬಹಳ ಸೆಳೆಯುತ್ತದೆ. ಒಂದು ಹಂತದಲ್ಲಿ ಈಕೆ ಹೀರೋನನ್ನೂ ಮಿರಿಸಬಿಡುತ್ತಾಳೆ. ಆದರೆ ನಿರ್ದೇಶಕರು ಆಕೆಯ ಅಭಿನಯಕ್ಕೆ ಅಲ್ಲಲ್ಲಿ ತಡೆ ಹಾಕಿದ್ದಾರೆ. ಬಹುಶಃ ಶಿವಣ್ಣನ ಕ್ರೆಡಿಟ್ಟನ್ನು ಈಕೆ ಎಲ್ಲಿ ನುಂಗಿ ಬಿಡುತ್ತಾಳೋ ಎನ್ನುವ ಭಯ ಇದಕ್ಕೆ ಕಾರಣವಿರಬಹುದು. ರಂಗಾಯಣ ರಘು ಚಿತ್ರದಲ್ಲಿ ಓವರ್ ಆಕ್ಟಿಂಗ್ ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜೇಶ್ ನಟರಂಗ ಸೆಳಯುತ್ತಾರೆ. ಆಂದ್ರಿತಾ ರೈ ದೇಹದ ಸೊಬಹನ್ನು ನೋಡಲು ಮತ್ತೊಮ್ಮೆ ಸಿನೆಮಾ ನೋಡಬೇಕೆನ್ನಿಸುತ್ತದೆ. ಆಕೆಯ ಬೆತ್ತಲೆ ಬೆನ್ನೂ ಸಹ ಸೆಳೆಯುತ್ತದೆ.
ಮೊದಲ ರಾತ್ರಿಯ ಸಮಯದಲ್ಲಿ ಶಿವಣ್ಣ-ರಾಧಿಕಾ ಪಂಡಿತರ ರೊಮ್ಯಾನ್ಸನ್ನು ಯಾಕೋ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ತಲೆ ಕೊಡವುವಂತೆ ಮಾಡುತ್ತದೆ. ಆದರೆ ಅದೇ ಸಂದರ್ಭದಲ್ಲಿ ಮಂಚದ ಅಡಿಯಲ್ಲಿ ಸದ್ದು ಮಾಡುವ ರೌಡಿಸಂ ಬಿಟ್ಟವನ ಮಚ್ಚು, ಮದುವೆಯಾದವನ ಮನೆಗೆ ಬಂದು ಗಂಡನ ಎದುರಲ್ಲೇ ಶಿವಣ್ಣನನ್ನು ತಬ್ಬಿಕೊಳ್ಳುವ ವೇಶ್ಯೆ ಆಂದ್ರಿತಾ, ದೊಡ್ಡಪ್ಪ, ಚಿಕ್ಕಪ್ಪನನ್ನು ಕಳೆದುಕೊಂಡು ಸೇಡು ಕಟ್ಟಿಕೊಳ್ಳುವ ಹುಡುಗ. ಅನಂತನಾಗ್ ಅವರ ಪೊಲೀಸ್ ಅಧಿಕಾರಿ ಪಾತ್ರ.. ಇನ್ನುಳಿದಂತೆ ರಂಗಾಯಣ ರಘು ಅವರ ಹಸಿ ಹಸಿಯಾಗಿ ಬಿಸಿಯೇರಿಸುವ ಶಬ್ದಪುಂಜಗಳು ಚಿತ್ರದಲ್ಲಿ ಸಾಕಷ್ಟಿವೆ. ಶಿವಣ್ಣ ಬೆವರು ಸುರಿಸಿರುವುದು ಸಾಕಷ್ಟು ಕಣ್ಣಿಗೆ ರಾಚುತ್ತದೆ. ಆದರೆ ಯಾಕೋ ಶಿವಣ್ಣ-ರಾಧಿಕಾ ಪಂಡಿತರ ಕಾಂಬಿನೇಶನ್ನು ತಾಳೆಯಾಗುವುದೇ ಇಲ್ಲ. ಇವರಿಬ್ಬರೂ ಗಂಡ ಹೆಂಡತಿಯರಾ? ಎನ್ನುವ ಭಾವನೆಗಳೂ ಮೂಡುತ್ತವೆ. ನೋಡಲು ಅಣ್ಣ-ತಂಗಿ ಹಾಗೆ ಕಾಣುತ್ತಾರೆ. ಇರಲಿ. ಚಿತ್ರದಲ್ಲಿ ಮೊದಲ ಬಾರಿಗೆ ರಾಧಿಕಾ ಪಂಡಿತ್ ದೇಹ ಪ್ರದರ್ಶನವಾಗುತ್ತದೆ. 
ಹಾಡುಗಳು ಏನು ಮಾಡಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಮಧುರವಾಗಿದೆ. ಶಿವಣ್ಣನ ಪಾತ್ರಕ್ಕೆ ಶಿವಣ್ಣನನ್ನು ಹೊರತು ಪಡಿಸಿದರೆ ಸುದೀಪ್, ದರ್ಶನ್, ವಿಜಯ್ ಇತ್ಯಾದಿ ನಟರನ್ನು ಹೋಲಿಕೆ ಮಾಡಿ ನೋಡಿದೆ. ಆದರೆ ಮಚ್ಚಿನ ಮೆಚ್ಚಿನ ಪಾತ್ರಕ್ಕೆ ಅವರೇ ಸರಿ ಎಂದು ಕೊನೆಯಲ್ಲಿ ಸಮಾಧಾನ ಮಾಡಿಕೊಂಡಿದ್ದೇನೆ. ತಮಿಳಿನಲ್ಲಿ ವಿಜಯ್, ತೆಲುಗಿನಲ್ಲಿ ರವಿತೇಜ ಅಥವಾ ಗೋಪಿಚಂದ್ ಅಥವಾ ನಾಗಾರ್ಜುನ ಈ ಪಾತ್ರ ಮಾಡಿದರೆ ಚೆನ್ನ. ಹಿಂದಿಯಲ್ಲಿ ರೌಡಿಯಿಸಂ ಮಚ್ಚನ್ನು ಬಿಟ್ಟು ಬಂದೂಕಿನ ನಳಿಕೆಗೆ ಬಂದಿದೆ. ಸೋ.. ಅಲ್ಲಿನ ನೇಟಿವಿಟಿಗೆ ಕತೆ ಬದಲು ಮಾಡಬೇಕು. ಕಥೆ ಬದಲಾಯಿಸಿದರೆ ಸಂಜಯ್ ದತ್ತ, ಸಲ್ಮಾನ್ ಅಥವಾ ಅಕ್ಕಿ ಹೊಂದಿಕೆಯಾಗಬಹುದು.
ಇದೆಲ್ಲ ಬಿಟ್ಹಾಕಿ.. ಚಿತ್ರ ಮಾತ್ರ ನೋಡಿದ ನಂತರವೂ ಬಹಳಷ್ಟು ಕಾಡುತ್ತದೆ.. ಮನಸ್ಸಿನಲ್ಲಿ ಅಚ್ಚಳಿಯದೇ ನಿಲ್ಲುತ್ತದೆ..

**4**
ದಿಲ್ ಸೇ..

ಛೇ... ಶಾರುಕ್ .. ಮನೀಶಾ.. ಸಾಯಬಾರದಿತ್ತು ಕಣ್ರೀ..
ಯಾಕೋ ಅವರು ಸತ್ತು ಕಣ್ಣಂಚಿನ ನೀರಾಗಿಬಿಟ್ಟರು. ಶಾಕ್ ಆಗಿಬಿಟ್ಟರು ಅನ್ನಿಸುತ್ತಿದೆ.
ಆರಂಭದಿಂದ ಕೊನೆಯವರೆಗೂ ಸಿಗ್ತಾಳೋ-ಇಲ್ಲವೋ ಎಂದುಕೊಂಡು ನೋಡಿದವರಿಗೆ ಕೊನೆಯ ಎರಡು ನಿಮಿಷ ಕೊಡುವ ಶಾಕ್ ಇದೆಯಲ್ಲ.. ಆಹಾ ದಿಲ್ ಸೇ.... ಎಂದೂ ಮರೆಯದಂತಾಗುತ್ತದೆ.. 
ಹಾಡುಗಳು, ದೃಶ್ಯಗಳು, ಶಾರುಕ್, ಮನೀಶಾ, ಪ್ರೀತಿ ಝಿಂಟಾ ಅಭಿನಯ ಎಲ್ಲಾ ಚನ್ನಾಗಿದೆ. ಕಥೆ ಮತ್ತಷ್ಟು ಸೂಪರ್.. ಎಲ್ಲವನ್ನೂ ಸವಿಯುತ್ತ ಛಂಯಾ ಛಂಯಾ ಎನ್ನುತ್ತ, ದಿಲ್ ಸೆ ರಹೆ ಎಂದೂ ಗುನುಗುತ್ತ, ಮಲೆಯಾಳಿ ಹಾಡನ್ನು ಸವಿಯುತ್ತ ಸಿನೆಮಾ ಆಸ್ವಾದಿಸುತ್ತಿರುವವರು ಕೊನೆಯಲ್ಲಿ ಮಾತ್ರ ಬೆಚ್ಚಿ ಬೀಳುತ್ತಾರೆ. ಬಹುಶಃ ಈ ಅಂತ್ಯವನ್ನು ಇಟ್ಟ ಕಾರಣಕ್ಕೆ ಮಣಿರತ್ನಂ ಗೆ ಹಲವರು ಶಾಪ ಹಾಕಿರಬಹುದು. ಆದರೆ ಚಿತ್ರ ಹಿಂಗಾಗಿದ್ದಕ್ಕೇ ಗೆದ್ದಿತು. ಅಚ್ಚಳಿಯದೇ ಉಳಿಯುವಂತಾಯಿತು. ಮತ್ತೊಮ್ಮೆ ಹ್ಯಾಟ್ಸಾಫ್ ಮಣಿ.. ಎನ್ನುವಂತಾಗುತ್ತದೆ. ಜೊತೆಯಲ್ಲಿ ರೆಹಮಾನ್ ಗೂ ಸಲಾಂ ಎನ್ನುವಂತೆ...
ಚಿತ್ರದಲ್ಲಿ ತಪ್ಪುಗಳಿಲ್ಲ ಅಂತಿಲ್ಲ.. ಇರುವ ತಪ್ಪುಗಳು ಬಹಳ ಚಿಕ್ಕವು. ಒಳ್ಳೆಯ ಕಥೆಗೆ, ಒಳ್ಳೊಳ್ಳೆಯ ಜಾಗವನ್ನು ಆಯ್ಕೆ ಮಾಡಿ ದೃಶ್ಯಕಾವ್ಯ ಕಟ್ಟಿಕೊಟ್ಟ ನಿರ್ದೇಶಕ ಬಹಳ ಸೆಳೆಯುತ್ತಾರೆ. ಸಂಭಾಷಣೆ ಕೂಡ ಬಹಳ ಅತ್ಯಾಪ್ತ.
ದಿಲ್ ಸೇ ನೋಡಿಲ್ಲದಿದ್ದರೆ ಬಿಡುವು ಮಾಡಿಕೊಂಡು ನೋಡಿ..
ಮಿಸ್ ಮಾಡಿಕೊಂಡ ಅಪರೂಪದ ಸಿನೆಮಾವನ್ನು ಕಣ್ತುಂಬಿಕೊಳ್ಳಿ..

No comments:

Post a Comment