Monday, May 20, 2013

ಒಂದು ರಿಸರ್ಚಿನ ಜೊತೆಗೆ

`ಹಲೋ.. ನಾನು ಅಪರಾಜಿತಾ.., ಐ ಆಮ್ ಫ್ರಾಂ ಬ್ಯಾಂಗಲೂರ್..', `ನಾನು ರಮೇಶ, ಅಂವ ನನ್ನ ಮಿತ್ರ ಹರೀಶ.. ನಾವಿಬ್ರೂ ಮುಧೋಳದವರ್ರಿ.., ಈಗ ಶಿರಸಿಯ ಅರಣ್ಯ ಕಾಲೇಜಿನಲ್ಲಿ ಓದಾಕ್ ಹತ್ತೀದಿವಿ..' `ನಾನು ಶೇಖರ ಭಟ್ಟ.. ನನ್ನೂರು ಯಲ್ಲಾಪುರದ ಹತ್ತಿರ ತಟಗಾರು.. ಆನು ಜೋಯ್ಡಾದಲ್ಲಿ ಎಸ್ಸೆಲ್ಸಿ ಓದ್ತಾ ಇದ್ದಿ..' ಹೀಗೆಂದು ನನ್ನ ಬಳಿ ಪರಿಚಯ ಮಾಡಿಕೊಂಡಿದ್ದು ಒಂದು ತಂಡ. ಐದಾರು ವರ್ಷಗಳ ಹಿಂದೆ ಒಂದು ಕ್ರಿಸ್ಮಸ್ ದಿನ ನಮ್ಮ ಸುತ್ತಮುತ್ತಲ ಕಾಡಿನ ಪ್ರಾಣಿಗಳ ರಿಸರ್ಚಿಗೆಂದು ಬಂದಿದ್ದ ಗುಂಪನ್ನು ಕಂಡು ನನ್ನ ಅಪ್ಪ ನನ್ನ ಬಳಿ ಅವರ ಜೊತೆಗೆ ಹೋಗಿ ನಮ್ಮೂರ ಕಾಡು ತೋರಿಸಿಕೊಂಡು ಬಾ ಎಂದಿದ್ದ. ಆ ಗುಂಪಿನ ಜೊತೆಗೆ ನಮ್ಮೂರಿನ ಅರಣ್ಯ ಇಲಾಖೆಯ ಅಧಿಕಾರಿ ದಿನಕರ್ ಅವರಿದ್ದರು. ಅವರಿಗೆ ಸರಿಸಮನಾಗಿ ನಾನೂ ನನ್ನ ಪರಿಚಯ ಮಾಡಿಕೊಂಡೆ.
        ನನ್ನ ಅಪ್ಪ ನನ್ನನ್ನು ಕರೆಯುವ ಮುನ್ನ ಅವರ ಬಳಿ ನನ್ನ ಕುರಿತು ಅದೆಷ್ಟು ಕೊಚ್ಚಿಕೊಂಡಿದ್ದರೋ... ನೀವು ದಿನದಲ್ಲಿ ಎಷ್ಟು ಹೊತ್ತು ಕಾಡಲ್ಲಿರ್ತೀರಿ..? ಕಾಡೆಮ್ಮೆ ಎಲ್ಲಾ ಇಲ್ಲಿ ನಿಮ್ಮ ಕೊಟ್ಟಿಗೆ ಬಳಿ ಬರ್ತದಂತೆ ಹೌದಾ,..,? ನಿಮ್ಮ ಬೈಕಿಗೆ ಹಂದಿ ಅಡ್ಡಬಂದು ನೀವು ಬಿದ್ದಿದ್ದರಂತೆ..? ಈ ಕಾಡಲ್ಲಿ ಹುಲಿ ಇದೆಯಾ..? ನೀವು ಶಿಖಾರಿ ಮಾಡ್ತೀರಾ..? ಎನ್ನುವ ಪ್ರಶ್ನೆಗಳ ಸರಮಾಲೆಯನ್ನು ನನ್ನ ಬಳಿ ಕೇಳಿದ್ದರು. ಅಪ್ಪನ ಹೊಗಳುವಿಕೆಯಿಂದ ನನ್ನನ್ನು ಅವರು ಕಾಡು ಮನುಷ್ಯ, ಕಾಡಿನ ಒಡನಾಡಿ ಎಂದುಕೊಂಡಿರಲೂ ಸಾಕು. ವಾರಕ್ಕೊಮ್ಮೆಯ ವೀಕೆಂಡಿನಲ್ಲಿ ಕಾನು, ಬೆಟ್ಟ ಗುಡ್ಡ ತಿರುವುದು ನನ್ನ ಹವ್ಯಾಸ. ನಮ್ಮೂರಿನ ಹುಡುಗರ ದಂಡು ನನ್ನ ಜೊತೆಗೆ ಇದ್ದು ಬಾಯಿಪಟಾಕಿ ಬಾರಿಸುತ್ತ ಮುನ್ನಡೆದಾಗಲೆಲ್ಲ ನಾನು ಘನ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಿದೆ. ಆದರೆ ಇಷ್ಟು ಕಾಡನ್ನು ನೋಡದ ಬೆಂಗಳೂರಿಗರು, ಬಯಲುಸೀಮೆಯವರು ನನ್ನನ್ನು ಅವರ ಪ್ರಶ್ನೆಗಳ ಮೂಲಕ ಕಾನುವಾಸಿ ಮಾಡಿಬಿಟ್ಟಿದ್ದರು. 
ಚಿಕ್ಕಂದಿನಿಂದ ಟ್ರೆಕ್ ಮಾಡುವ ಹುಚ್ಚು ಹಂಬಲವಿತ್ತಲ್ಲ, ಅವರು ಕರೆದಾಗ ಸರ್ರನೆ ಹೊರಟೆ. ಸ್ಟೈಲ್ ಮಾಡಲು ಬೇಕೆಂದು ಒಮದು ಬ್ಯಾಗು. ಬ್ಯಾಗಲಿ ಎಂತ ಮಣ್ಣು ಮಸಿಯೂ ಇರಲಿಲ್ಲ. ನೋಟ್ಸ್ ಮಾಡಿಕೊಳ್ಳಲು ಒಂದು ಪುಸ್ತಕ, ಜೊತೆಗೊಂದು ಹರಿತವಾದ ಕತ್ತಿ. ರಿಸರ್ಚಿಗೆ ಬಂದಿದ್ದವರು ಹೋಗಬೇಕಿದ್ದುದು ನಮ್ಮೂರಿನಿಂದ ಸೀದಾ ಹಸರಗೋಡಿಗೆ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅದೆಲ್ಲಿದ್ದನೋ ಎನ್ನುವಂತೆ ನಮ್ಮೆದುರು ಪ್ರತ್ಯಕ್ಷನಾಗಿದ್ದು ನಮ್ಮ ಪಕ್ಕದ ಮನೆಯ ದತ್ತಣ್ಣ. ಬಂದವನು ಕವಳದ ಬಾಯಿಯ ಕೆಂಪುದಂತಪಂಕ್ತಿಗಳನ್ನು ತೋರಿಸಿ ಅದೂ ಇದೂ ಬಹಳಷ್ಟು ಹಲುಬಿ., `ಹಿಂಗೆ ಬನ್ನಿ.. ನಮ್ಮ ಮನೆಯಲ್ಲೂ ನೋಡುವಂತದ್ದು ಭಾಳಷ್ಟಿದೆ....' ಎಂದು ತಮ್ಮ ಮನೆಗೆ ಬರುವಂತೆ ದುಂಬಾಲುಬಿದ್ದ. ಇವರು ಬೇಡ ಎಂದಷ್ಟೂ ಅವನ ಒತ್ತಾಯ ಹೆಚ್ಚಾಗತೊಡಗಿತು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿ ದಿನಕರ್ ಅವರು ಹಳೆಯ ಪರಿಚಯವನ್ನು ನೆನಪು ಮಾಡಿಕೊಂಡು ರಿಸರ್ಚಿನ ತಂಡವನ್ನು ಕರೆದೊಯ್ದರು. ದತ್ತಣ್ಣ ಇವರಿಗೆ ಅವರ ಅಪ್ಪ ಕಾಶ್ಮೀರದ ಕಾನಿನಿಂದ ತಂದು ನೆಟ್ಟಿದ್ದ ಚಹಾ ಗಿಡವನ್ನೂ, ಲೀಚಿ ಹಣ್ಣಿನ ಗಿಡವನ್ನೂ ತೋರಿಸಿದ. ಕೊನೆಯಲ್ಲಿ ರಾಜನೆಲ್ಲಿ ಗಿಡಗಳನ್ನು ತೋರಿಸಿ ಮನೆಗೆ ಕರೆದೊಯ್ದ.
ಆ ಟೀಮ್ ಬಂದಿದ್ದು ಆಲೇಮನೆಯ ಸೀಸನ್ನಿನಲ್ಲಿ. ದತ್ತಣ್ಣನ ಮನೆಯಲ್ಲಿ ಆಲೆಮನೆಯ ಸಡಗರ. ಆಲೆಮನೆಯಲ್ಲಿ ಉತ್ತರಕನ್ನಡದ ಸ್ಪೆಷಲ್ ತೊಡದೇವು ರೆಡಿಯಾಗುತ್ತಿತ್ತು. ಬೆಂಗಳೂರು, ಮುಧೋಳದ ಮಂದಿಗೆ ಇದು ಹೊಸದು. ದಿನಕರ್ ಅವರಿಗೂ ಅಷ್ಟೇ. ಮಾಡುವ ವಿಧಾನ ತಿಳಿದುಕೊಮಡರು. ಕ್ಯಾಮರಾ ಕಣ್ಣಿನಲ್ಲಿ ತುಂಬಿಕೊಂಡರು. ಸತ್ಕಾರಪ್ರಿಯರಿಂದ ತೊಡದೇವು ಸಮರ್ಪಯಾಮಿ ಆಯಿತು. ಪ್ರಾರಂಬದಲ್ಲಿಯೇ ಅಡ್ಡದಾರಿ ಹಿಡಿದರೂ ಬಾಯಿ ಸಿಹಿಯಾಗಿದ್ದಕ್ಕೆ ರಿಸರ್ಚಿನ ತಂಡ ಖುಷಿಯಾಗಿ ರಸ್ತೆಯೆಡೆಗೆ ಹೆಜ್ಜೆ ಹಾಕುವ ಹೊತ್ತಿಗೆ ಸೂರ್ಯ ನೆತ್ತಿಗೆ ಬಂದಿದ್ದ. ಇಲ್ಲಿಂದ ನಮ್ಮೂರಿನಲ್ಲಿ ಅಳಿದುಳಿದ ಕಾಡನ್ನು ತೋರಿಸುವ ಹೊಣೆಗಾರಿಕೆ ನನ್ನದಾಯಿತು. ಮೊದಲು ನಮ್ಮೂರಿನ ಅಘನಾಶಿನಿ ನದಿಗೆ ಕರೆದೊಯ್ದು ನದಿ ನೀರಿನ ವಿಶೇಷತೆಯನ್ನು ವಿವರಿಸಿದೆ. ನದಿಯ ಎರಡೂ ಬದಿಗಳಲ್ಲಿ ಬಾನೆತ್ತರಕ್ಕೆ ಚಾಚಿ ನಿಂತಿದ್ದ ನಮ್ಮೂರಿನ ಸ್ಪೆಷಲ್ ಅನಂತ ಭಟ್ಟನ ಅಪ್ಪೆಮರಗಳನ್ನು ತೋರಿಸಿ ವಿವರಣೆಯನ್ನು ನೀಡಿದೆ. ಅದರ ಜೊತೆ ಜೊತೆಯಲ್ಲಿ ತೋಟದ ಬದುಗಳನ್ನು ಹೊಳೆಯ ಕೊರೆತದಿಂದ ತಪ್ಪಿಸುವ ವಾಟೆಮಟ್ಟಿಯ ದೈತ್ಯತೆಯನ್ನು ವಿವರಿಸಿದೆ. ಆ ಟೀಮು ಅವನ್ನು ಕ್ಯಾಮರಾದಲ್ಲಿ ಕಟ್ಟಿಕೊಂಡು ಅಗತ್ಯ ವಿವರಗಳನ್ನು ಬರೆದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿತು.
ಆ ನಂತರ ಅವರ ಕೋರಿಕೆಯಂತೆ ನಾನು ಅವರನ್ನು `ಕುಚಗುಂಡಿ' ಊರಿನ ಕಡೆಗೆ ಕರೆದೊಯ್ದೆ. ಸನೀಹದ ಬೇಣದಮನೆ ಎಂಬಲ್ಲಿ ಮತ್ತೊಮ್ಮೆ ಅಡ್ಡದಾರಿಯನ್ನು ಹಿಡಿದು ನಮ್ಮ ಟೀಮು ಸಾಗಿತು. ಬೇಟಣದ ಮನೆಯ ಅಂಚಿನಲ್ಲೇ ನಮ್ಮೂರಿನ ಆಲೆಮನೆ ರಂಗೇರಿತ್ತು. ಆ ದಿನ ನಮ್ಮೂರಿನ ಸುಬ್ಬಣ್ಣ ಎನ್ನುವವರಿಗೆ ಸೇರಿದ ಕಬ್ಬಿನ ಆಟವಿತ್ತು. ಸುಬ್ಬಣ್ಣನ ಕೋರಿಕೆಯ ಮೇರೆಗೆ ಆಲೇಮನೆಯಲ್ಲಿ ಹಾಲನ್ನೂ, ನೊರೆಬೆಲ್ಲವನ್ನೂ ತಿಂದು ಮುಂದಕ್ಕೆ ಹೆಜ್ಜೆ ಹಾಕಿದೆವು. ಬೇಣದ ಮನೆಯನ್ನು ಸುತ್ತಿಬಳಸಿ ಅಲ್ಲಿನ ಕಾಡನ್ನು ಹೊಕ್ಕೆವು. ಕಾಡು ಹೊಕ್ಕವರಿಗೆ ಸಿಕ್ಕಿದ್ದು ಕಾಡೆಮ್ಮೆಯ ಹೆಜ್ಜೆ ಗುರುತು. ಬರ್ಕ ಹಾಗೂ ಕಾನುಕುರಿಗಳ ಸೆಗಣಿ. ರಿಸರ್ಚಿನ ತಂಡ ಕಾಡೆಮ್ಮೆ ಹೆಜ್ಜೆ ಗುರುತಿನ ಪೋಟೋ ಕ್ಲಿಕ್ಕಿಸಿ ಬರ್ಕಗಳ ಸಗಣಿಯನ್ನು ಸಂಗ್ರಹಿಸಿ ಮುನ್ನಡೆಯಿತು.
`ನೀವು ಹುಲಿ ನೋಡಿದ್ದೀರಾ..? ಹೆಂಗಿದೆ..? ಕಾಡೆಮ್ಮೆ ಹೇಗಿದೆ..? ಕಾಡೆಮ್ಮೆ ಮೈಮೇಲೆ ಎರಗಿ ಬರುವುದಿಲ್ಲವಾ..?'ಇಂತಹ ನಾಲ್ಕೆಂಟು ತರಲೆ ಪ್ರಶ್ನೆಗಳು ಹರೀಶ ಹಾಗೂ ರಮೇಶರಿಂದ ನನ್ನ ಕಡೆ ತೂರಿ ಬಂದವು. ಅದಕ್ಕೆ ನಾನು `ನಮ್ಮೂರಿನಲ್ಲಿ ಅಡ್ಡಾಡುವ ಕಾಡೆಮ್ಮೆಗಳನ್ನು ನಾನು ಆಗಾಗ ಕಾಣುತ್ತಿರುತ್ತೇನೆ. ಅವಾಗಿಯೇ ಅವೇನೂ ತೊಂದರೆ ಕೊಡುವುದಿಲ್ಲ. ಬಹಳ ಸಾಧು ಪ್ರಾಣಿ. ಆದರೆ ಇತ್ತಿತ್ತಲಾಗಿ ಅವುಗಳ ಬೇಟೆ ಬಹಳ ಹೆಚ್ಚಿದೆ. ಮೊದ ಮೊದಲೆಲ್ಲ ನಮ್ಮೂರಿನ ಕಡೆಗೆ ಮುಖ ಮಾಡುವ ಕಾಡೆಮ್ಮೆಗಳ ಗುಂಪಿನಲ್ಲಿ 20-22 ಇರುತ್ತಿದ್ದವು. ಈಗ ಅವುಗಳ ಸಂಖ್ಯೆ 10-12ಕ್ಕೆ ಇಳಿದಿದೆ. ಆದರೆ ನಮ್ಮೂರಿನ ಕಾಡಿನಲ್ಲಿ ಹುಲಿಯಿಲ್ಲ. ಕಪ್ಪು ಚಿರತೆಯನ್ನು ಕಂಡವರಿದ್ದಾರೆ..' ಎಂದೆ. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಪರಾಜಿತಾ `ಅದ್ಯಾಗ್ರೀ ಹೇಳ್ತೀರಾ ಹುಲಿ ಇಲ್ಲ ಅಂತ ನೀವು ಅಷ್ಟು ಫರ್ಫೆಕ್ಟಾಗಿ..? ಕಪ್ಪು ಚಿರತೆಯೇ ಕಂಡಿದೆ ಎನ್ನುವುದಕ್ಕೆ ಸಾಕ್ಷಿ ಇದೆಯಾ..? ಕಾಡೆಮ್ಮೆ ಬೇಟೆ ನಿಷೇಧ ಇದ್ದರೂ ಅದನ್ನು ಯಾರು ಯಾಕ್ರೀ ಬೇಟೆ ಆಡ್ತಾರೆ.." ಎಂದು ರೇಗುವ ರೀತಿಯಲ್ಲಿ ಕೇಳಿದಳು. ನಾನು ಅದಕ್ಕೆ ಚುಟುಕಾಗಿ ಉತ್ತರಿಸಿ ಸುಮ್ಮನಾದೆ. ಅರಣ್ಯಾಧಿಕಾರಿ ದಿನಕರ್ ನನ್ನನ್ನು ನೋಡಿ ನಕ್ಕರು.
ಕೊನೆಗೊಮ್ಮೆ ಅವರು ಹೇಳಿದಂತೆ ಹಸರಗೋಡಿಗೆ ತೆರಳುವ ಮಾರ್ಗಕ್ಕೆ ಕರೆದೊಯ್ದು ಅವರನ್ನು ನಿಲ್ಲಿಸಿದೆ. ಹೋಗುವ ಮುನ್ನ `ಅಘನಾಶಿನಿ ನದಿ ದಾಟಿ ಹೋಗಬೇಕು..' ಅಂದೆ. ಆಗ ಅಪರಾಜಿತಾ ತನ್ನ ಬ್ಯಾಗಿನೊಳಗಿದ್ದ ನಕಾಶೆ ಹಾಗೂ ಚಿಕ್ಕ ಮೊಬೈಲಿನಾಕಾರದ ಯಂತ್ರವೊಂದನ್ನು ತೆಗೆದು ಅದೇನೋ ಲೆಕ್ಖಾಚಾರದಲ್ಲಿ ತೊಡಗಿದಳು. ಹತ್ತು ನಿಮಿಷ ಅಂದಾಜು ಮಾಡಿ, ಅಳೆದು ತೂಗಿ `ನಾವು ನಕಾಶೆಯಿಂದ ಹೊರಗಿದ್ದೇವೆ..' ಎಂದಾಗ ಅರಣ್ಯ ಅಧಿಕಾರಿ ದಿನಕರ್ರಾದಿಯಾಗಿ ನಮಗೆಲ್ಲ ಗೊಂದಲ. ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ತೋಚಿದ್ದನ್ನು ಹೇಳತೊಡಗಿದರು. ಸಿಡುಕಿ ಅಪರಾಜಿತಾ ದಾರಿತಪ್ಪಿಸಿ ಕರೆದುಕೊಂಡುಬಂದಿದ್ದೀರಿ ಎಂದು ನನ್ನನ್ನು ರೇಗುವ ಮೊದಲು ನಾವು ಬರಬೇಕಿದ್ದುದು ಹಸರಗೋಡೇ ಹೌದಾ ಕನ್ ಫರ್ಮ್ ಮಾಡಿಕೊಳ್ಳಿ ಅಂದೆ. ಕೊನೆಗೆ ಕ್ರಾಸ್ ಚೆಕ್ ಮಾಡಿದಾಗ ಹೆಸರು ತಪ್ಪಾಗಿತ್ತು, ನಾವು ಬರಬೇಕಿದ್ದುದು ಹಸರಗೋಡಿಗಲ್ಲವಾಗಿತ್ತು. ಅರಶಿಣಗೋಡು ಎನ್ನುವ ಊರಿಗೆ ಹೋಗಬೇಕಿತ್ತು. ನಕಾಶೆಯಲ್ಲಿ ಬೃಹಸ್ಪತಿಗಳು ಬರೆದ ಪ್ರಕಾರ ಅರಶಿಣಗೋಡು ಎನ್ನುವ ಹೆಸರು ಹಸರಗೋಡು ಆಗಿತ್ತು(ಅ ಕ್ಕೆ ಹ ಎಂದು ಬಳಕೆ ಮಾಡುವ ಹಾಗೂ ಹ ಕ್ಕೆ ಅ ಎಂದು ಬಳಕೆ ಮಾಡುವ ಸಂಪ್ರದಾಯ ಬೆಂಗಳೂರು ಕಡೆಯಲ್ಲಿ ಇರುವುದರಿಂದ ಇಂತಹ ಪ್ರಮಾದ ಉಂಟಾಗಿತ್ತು.. ಬಹಳಷ್ಟು ಕಡೆಗಳಲ್ಲಿ ಇನ್ನೂ ಹಲವು ಇಂತಹ ಸಮಸ್ಯೆಗಳು ಇವೆ.). ಈ ಹೆಸರು ಕೆಳಿದವನೇ ನಾನು `ಅಯ್ಯೋ ಅರಶಿಣಗೋಡ ಇಲ್ಲಿಂದ 10 ಕಿ.ಮಿ ಆಗುತ್ತದೆ. ನಾವು ಈಗ ಇರುವ ಸ್ಥಳದಿಂದ ಸರಿಯಾಗಿ ವಿರುದ್ಧ ದಿಕ್ಕಿನಲ್ಲಿದೆ. ಬಂದ ದಾರಿಯಲ್ಲೇ ಮರಳಿ ಹೋಗಬೇಕು. ಕಾನಸೂರಿನ ಆಚೆಗೆ ಆ ಊರಿದೆ..'ಎಂದೆ.
ಇಷ್ಟು ಹೇಳಿದ್ದೇ ತಡ ರಿಸರ್ಚಿನ ತಂಡದಲ್ಲಿ ಅಪಸ್ವರದ ತರಂಗಗಳ ಹೊರ ಬಿದ್ದವು. 2 ಜನ ಹೋಗುವ ಎಂದರೆ ಮತ್ತೆರಡು ಜನ ಬೇಡ ಎನ್ನುವ ವಾದ. ನಾನು ದಿನಕರ್ ಇಬ್ಬರು ಸುಮ್ಮನಿದ್ದೆವು. 10-15 ನಿಮಿಷ ಕಳೆದರೂ ಅವರ ಚರ್ಚೆಗೆ ಕೊನೆ ಬೀಳಲಿಲ್ಲ. ಕೊನೆಗೆ ನಾನು `ಇಲ್ಲಿಂದ 1-2 ಕಿ.ಮಿ ನಡೆದರೆ ಕಾನಸೂರು -ಬಾಳೇಸರ ಬಸ್ಸಿನ ಮಾರ್ಗ ಸಿಗುತ್ತದೆ. ಈಗ ಹೇಗೂ ಬಸ್ಸು ಬರುವ ಟೈಮಾಗಿದೆ. ಕಾನಸೂರಿಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಅರಶಿಣಗೋಡಿಗೆ ನಡೆದು ಹೋಗುವಾ. ಅದೇ ಅತ್ಯಂತ ಪ್ರಸ್ತುತ, ಸಮಯ ಉಳಿಸುವ ಹಾಗೂ ಸರಿಯಾದ ದಾರಿ..' ಎಂದೆ. ಶೇಖರ, ರಮೆಶ, ದಿನಕರ್ ಅದಕ್ಕೆ ಸಮ್ಮತಿ ಸೂಚಿಸಿದರು. ಆದರೆ ಅಪರಾಜಿತಾ ಮಾತ್ರ `ರಿಸರ್ಚ್ ಅಂದರೆ ಏನೆಂದುಕೊಂಡಿದ್ದೀರಿ..? ಕಾಡಿನಲ್ಲೇ ಹೋಗಬೇಕು ಕಾಡಿನಲ್ಲೇ ಬರಬೇಕು.. ರಿಸರ್ಚೆಂದರೆ ಬಸ್ಸಿನಲ್ಲಿ ಹೋಗೋದಲ್ಲ.. ನಿಮಗೆ ರಿಸರ್ಚಿನ ಬಗ್ಗೆ ಎಂತ ಗೊತ್ತುಂಟ್ರೀ..?'ಎಂದು ಮತ್ತೊಮ್ಮೆ ರೇಗಿದಳು. 
ನನಗಂತೂ ಒಮ್ಮೆ ಸಿಟ್ಟು ಬಂದು ಬಿಟ್ಟಿತು. `ರಿಸರ್ಚೆಂದರೆ ಏನೆಂದು ನಿಮಗಿಂತ ನನಗೆ ಚನ್ನಾಗಿ ಗೊತ್ತು. ನಿಮ್ಮಂತೆ ಫಾರ್ಮಾಲಿಟಿಯ ರಿಸರ್ಚನ್ನು ನಾನು ಮಾಡದಿದ್ದರೂ ರಿಸರ್ಚೆಂದರೆ ಹೇಗಿರುತ್ತದೆ ಎನ್ನುವುದನ್ನು ಅನುಭವದ ಆಧಾರದ ಮೇಲೆ ಅರಿತುಕೊಂಡಿದ್ದೇನೆ ಎನ್ನೋಣ..' ಎಂದುಕೊಂಡೆ.. ಆದರೂ ಯಾಕೋ ಹೇಳಲೇ ಇಲ್ಲ. ಸುಮ್ಮನಾಗಿಬಿಟ್ಟೆ.. ಹುಡುಗು ಬುದ್ದೀ ನೋಡಿ... ಅಪರಾಜಿತಾ ಎಂಬ ಹುಡುಗಿ ತೆಳ್ಳಗೆ, ಬೆಳ್ಳಗೆ ಚನ್ನಾಗಿದ್ದಳು.. ಸಿಟ್ಟಿನಲ್ಲೂ ಚನ್ನಾಗಿ ಕಾಣುತ್ತಿದ್ದಳು. ಈ ಕಾರಣದಿಂದಲೇ ಏನೋ ನನ್ನಲ್ಲಿನ ಮಾತು ಹೊರಬೀಳಲೇ ಇಲ್ಲ. ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಾದೆ. ದಿನಕರ್ ಅವರೂ ತೆಪ್ಪಗಿದ್ದರು.
        ಆಗಲೇ ಸಮಯ 2 ಗಂಟೆಯನ್ನು ಮೀರಿತ್ತು. ಆ ದಿನದ ಕಾರ್ಯವನ್ನು 5 ಗಂಟೆಯೊಳಗೆ ಮುಗಿಸಬೇಕು ಎನ್ನುವ ಕರಾರಿತ್ತಂತೆ. ಈ ಕಾರಣದಿಂದ ಅಪರಾಜಿತಾ ನನ್ನ ಸಲಹೆಯನ್ನು ಒಪ್ಪಿಕೊಂಡಳು. ಈಗ ಬಂದಳು ನನ್ನ ದಾರಿಗೆ ಎಂದುಕೊಂಡೆ. ಬಾಳೇಸರ ಬಸ್ಸಿನ ಮಾರ್ಗದ ಕಡೆಗೆ ಆ ಟೀಮನ್ನು ಕರೆದೊಯ್ದೆ. ಮತ್ತೆ ಒಮದೆರಡು ಕಿ.ಮಿ ಮೌನವೇ ಆಭರಣ ಎನ್ನುವಂತೆ ಸುಮ್ಮನೆ ನಡೆದುಕೊಂಡು ಹೊರಟೆವು. ದಾರಿಮಧ್ಯ ನಮ್ಮ ಜೊತೆಗಿದ್ದ ಶೇಖರ ಭಟ್ಟನಿಗೆ ಹೊತ್ತುಹೋಗಲಿಲ್ಲವೇನೋ ಎನ್ನಿಸುತ್ತದೆ. ನನ್ನ ಜೊತೆ ಮಾತಿಗಿಳಿದ. ಮಾತಿಗಿಳಿದವನು ಕಾಡಿನ ಬಗ್ಗೆ ಕೇಳುತ್ತಾನೇನೋ ಅಮದುಕೊಂಡೆ. ಅವ ಗ್ರಾಫಾಲಜಿ, ಟೆಲಿಪತಿ, ಎಂದೆಲ್ಲಾ ಹೇಳುವ ಮೂಲಕ ನನ್ನ ತಲೆಯನ್ನು ತಿನ್ನಲಾರಂಭಿಸಿದ್ದ. ನಾನಂತೂ ನನಗೆ ಗೊತ್ತಿದ್ದ ಅಲ್ಪಸ್ವಲ್ಪ ಸತ್ಯವನ್ನೂ ಅದಕ್ಕಿಂತ ಉದ್ದದ ಒಂದಷ್ಟು ಸುಳ್ಳನ್ನೂ ಸತ್ಯವೆನ್ನುವಂತೆ ಹೇಳಿದೆ. ನಂಬಿದನೋ, ಬಿಟ್ಟನೋ ಗೊತ್ತಾಗಲಿಲ್ಲ. ನಮ್ಮ ಮಾತು ಹೆಚ್ಚಿದಂತೆಲ್ಲ ಒಮ್ಮೆ ನಮಗಿಂತ ಮುಂದೆ ನಡೆದುಹೋಗುತ್ತಿದ್ದ ಅಪರಾಜಿತಾ ಒಮ್ಮೆ ತಿರುಗಿ ನನ್ನನ್ನು ನೋಡಿ ಶೇಖರ ಭಟ್ಟನ ಬಳಿ ರೇಗಿ ಸುಮ್ಮನಿರುವಂತೆ ಬೈದಳು. ಹೀಗೆ ಕಾಡಿನಲ್ಲಿ ಮಾತನಾಡುತ್ತಾ ಹೋದರೆ ಪ್ರಾಣಿಗಳು ಕಾಣ ಸಿಗುವುದಿಲ್ಲ. ಕೆಲವೊಮ್ಮೆ ಅವು ನಮ್ಮ ಮೇಲೆ ದಾಳಿ ಮಾಡಬಹುದು ಎಂದೆಲ್ಲಾ ಹೇಳಿದಳು. ಈ ಸಾರಿ ನನಗೆ ನಗು ತಡೆಯಲು ಸಾಧ್ಯವೇ ಆಗಲಿಲ್ಲ. ದಿನಕರ್ ಅವರೂ ನಕ್ಕರು. ಪೆಚ್ಚೆನ್ನಿಸಿರಬೇಕು. ಅಪರಾಜಿತಾ ಸುಮ್ಮನೆ ಮುನ್ನಡೆದಳು.
ನಮ್ಮೂರಿನ ಕಾಡಿನಲ್ಲಿ ಪ್ರಾಣಿಗಳು ಮಾನವನ ಧ್ವನಿಗೆ ಅಷ್ಟಾಗಿ ಹೆದರಿಕೊಳ್ಳುವುದಿಲ್ಲ. ಮನುಷ್ನ ಮಾತಿಗೆ ಹೆದರಿ ದಾಳಿ ಮಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಗಲು ವೇಳೆಯಲ್ಲಿ ಪ್ರಾಣಿಗಳು ಕಾಣುವುದು ಕಡಿಮೆ ಎಂದು ಹೇಳಬೇಕು ಎನ್ನಿಸಿತು. ಸುಮ್ಮನಾದೆ. ದಿನಕರ್ ಅವರಿಗೂ ಹಾಗೆಯೇ ಅನ್ನಿಸಿರಬೇಕು. ಆದರೆ ಯಾಕೆ ಸಲ್ಲದ ರಗಳೆ ಎಂದು ಸುಮ್ಮನೆ ತೆರಳಿದೆವು. ಬಸ್ಸಿಗಾಗಿ ನಾವು ಕೊನೆಗೆ ಸ್ಥಲೀಯ ಲಕ್ಕೀಸವಲಿನ ಬಸ್ ನಿಲ್ದಾಣಕ್ಕೆ ಬಂದು ತಲುಪಿದೆವು. ಈ ನಡುವೆ ಒಂದು ತಮಾಷೆಯ ಘಟನೆಯೂ ಜರುಗಿತು. ಅದೇನೆಂದರೆ ನಾವು ಸಾಗಿಬರುತ್ತಿದ್ದ ಮಾರ್ಗದಲ್ಲಿ ಕುರಿಯ ಸಗಣಿಯಾಕಾರದಲ್ಲಿ ಕೆಲವು ಕಡೆ ಸೆಗಣಿಗಳು ಬಿದ್ದಿದ್ದವು. ರಮೆಶ ಹಾಗೂ ಹರೀಶ ಅದು ಕಾಡುಕುರಿಯ ಸೆಗಣಿ ಎಂದೆ ವಾದ ಶುರು ಹಚ್ಚಿಕೊಂಡರು. ಕೊನೆಗೆ ದಿನಕರ್ ಅವರೂ ಪರೀಕ್ಷೆ ಮಾಡಿದರು. ಆದರೆ ಅದು ಇಂತಹ ಪ್ರಾಣಿಯ ಸೆಗಣಿ ಎಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಅವರಿಗೆ ಆಗಲೇ ಇಲ್ಲ. ಕಾಡುಕುರಿಯ ಸೆಗಣಿ ಎಂದು ಸಂಗ್ರಹಿಸಿ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ತುಂಬಿಕೊಂಡು ಹೋದವರಿಗೆ ಮತ್ತೆ ಕೆಲವು ಸಮಯದ ನಂತರ ಮೇಯುತ್ತಿದ್ದ ದನ ಹಾಗೂ ಕುರಿಗಳ ಹಿಂಡನ್ನು ಕಂಡಾಗ ಮಾತ್ರ ಮುಖ ಇಂಗು ತಿಂದ ಮಂಗನಂತಾಗಿತ್ತು..
ಬಸ್ ಸ್ಟಾಪಿನಲ್ಲಿ ಮಾತ್ರ ನಾವು ಬಹಳ ಹೊತ್ತು ಕಾದೆವು. ಬಸ್ಸು ಬೇಗನೆ ಬರಲು ನಿರಾಕರಿಸಿತು. ಎಲ್ಲರಿಗೂ ಸುಸ್ತಾಗಿತ್ತು. ಆದರೆ ಶೇಖರನ ಬಾಯಿಗೆ ಸುಸ್ತಾಗಿರಲಿಲ್ಲ. ವಟಗುಡುತ್ತಲೇ ಇದ್ದ. ನನಗೆ ಹರೀಶ ಹಾಗೂ ರಮೆಶ ಅವರ ಬಳಿಯಲಿದ್ದ ಪುಸ್ತಕವೊಮದು ಸಿಕ್ಕಿತ್ತು. ಕುತೂಹಲದಿಂದ ಅದನ್ನು ಓದತೊಡಗಿದ್ದೆ. `ದಿ ವ್ಹೋಲ್ ಡಿಟೇಲ್ ಆಫ್ ಇಂಡಿಯನ್ ಸ್ನೇಕ್ಸ್..' ಎನ್ನುವ ತಲೆಬರಹ ಹೊಂದಿದ್ದ ಭಾರತದ ಹಾವುಗಳ ಕುರಿತಾದ ಬಹುತೇಕ 800 ಪುಟಗಳ ಶಿರಸಿ ಅರಣ್ಯ ಮಹಾವಿದ್ಯಾಲಯದ ಗ್ರಂಥಾಲಯದ ಪುಸ್ತಕ ಅದು. ಭಾರತದಲ್ಲಿ ಕಾಣಸಿಗುವ ಅದೆಷ್ಟೋ ಸಹಸ್ರ ಬಗೆಯ, ಪ್ರಬೇಧದ ಎಲ್ಲ ಹಾವುಗಳ ಚಿತ್ರ ಸಹಿತ ವಿವರಣೆ ಅದರೊಳಗಿತ್ತು. ಕೆಲವು ಹಾವುಗಳ ಕುರಿತು ನನ್ನಲ್ಲಿ ಹಾಗೂ ಮಹೇಶನಲ್ಲಿ ಚರ್ಚೆಗಳೂ ನಡೆದವು. ಮೇಲ್ನೋಟಕ್ಕೆ ಸಂಪೂರ್ಣವಾಗಿ ಆ ಪುಸ್ತಕವನ್ನು ನಾನು ತಿರುವಿ ಹಾಕಿದೆ. ಆದರೆ ನನಗೆ ಬೇಕಾದ ಒಂದು ಹಾವಿನ ಕುರಿತು ಅದರಲ್ಲಿ ವಿವರಗಳೇ ಸಿಗಲಿಲ್ಲ. ಅದೇ `ದಾಟುಬಳ್ಳಿ'ಹಾವು. ನನಗೆ ತಿಳಿದಂತೆ ಮಲೆನಾಡಿನ ಕೆಲವೇ ಕೆಲವು ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರಕನ್ನಡದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಹಾವು. ಕೂದಲಿಗಿಂತ ತೆಳ್ಳಗೆ ಇರುವ ಈ ಹಾವನ್ನು ಭೂತಗನ್ನಡಿಯಲ್ಲಿ ನೋಡಿದಾಗ ಸ್ಪಷ್ಟವಾಗಿ ಕಾಣಸಿಗುತ್ತವೆ. ಈ ಕುರಿತು ಎಷ್ಟು ಹುಡುಕಿದರೂ ವಿವರಣೆ ಸಿಗಲಿಲ್ಲ. ಈ ಸಂದರ್ಭದಲ್ಲಿ ಮತ್ತೊಮ್ಮೆ ಅಪರಾಜಿತಾ ರೇಗಿದಳು. ಸುಮ್ಮನಿರಿ ಎಂದಳು. ಬಸ್ ಸ್ಟಾಪಿನಲ್ಲಿ ಮಾತನಾಡುತ್ತಿದ್ದರೆ ಇವಳಿಗ್ಯಾಕೆ ಸಿಟ್ಟುಬರಬೇಕು ಎಂಬುದು ನನಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಬಸ್ಸು ಬಂದ ಪರಿಣಾಮ ನಾವು ಕಾನಸೂರನ್ನು ತಲುಪಿದೆವು. 
ಕಾನಸೂರಿನಲ್ಲಿ ಹೊಟ್ಟೆಗೆ ಉಪ್ಪಿಟ್ಟು ಬಿದ್ದ ತಕ್ಷಣ ನಮ್ಮ ಯೋಜನೆ ಅಡ್ಡದಾರಿ ಹಿಡಿಯಿತು. ಅರಶಿಣಗೋಡ ಕ್ಕೆ ಹೋಗಬೇಕಾದ ನಮ್ಮ ರಿಸರ್ಚ್ ತಂಡ ಅಡ್ಡದಾರಿ ಹಿಡಿದು ಹಳದೋಟಕ್ಕೆ ಹೋಗುವ ಎನ್ನುವ ನಿರ್ಣಯ ಕೈಗೊಳ್ಳಲಾಯಿತು. ಸಮಯ 4 ಗಂಟೆ ಮೀರಿದ್ದರೂ ಸರಿಯೆನ್ನುವಂತೆ ಹೊರಟೆವು. ಏಕೆಂದರೆ ಈ ಪ್ಲಾನ್ ಹಾಕಿದ್ದು ಅಪರಾಜಿತಾ. ಅವಳು ಹೇಳಿದರೆ ಬೇಡ ಎನ್ನಲಾಗುತ್ತದೆಯೇ.. ಬೈದರೂ, ರೇಗಿದರೂ ಪರವಾಗಿಲ್ಲ ಎಂದುಕೊಂಡು ಹೊರಟೆವು. ಸುಮಾರು ಅರ್ಧದಾರಿ ಕ್ರಮಿಸಿರಬಹುದಷ್ಟೇ. ಅಲ್ಲೊಂದು ಕಡೆಗೆ ಯಾವುದೋ ಪ್ರಾಣಿಯ ಮಲ ಕಾಣಿಸಿತು. ಕೊನೆಗೆ ಪರೀಕ್ಷೆಯನ್ನು ಮಾಡಿದ ರಿಸರ್ಚಿನ ತಂಡ ಇದು ಚಿರತೆಯ ಮಲ ಎನ್ನುವ ತೀರ್ಮಾನಕ್ಕೆ ಬಂದಿತು. ನನ್ನಲ್ಲಿ ಇದು ನಾಯಿಯ ಮಲವಿರಬಹುದಾ ಎನ್ನುವ ಅನುಮಾನ ಮೂಡಿದರೂ ಸುಮ್ಮನಾದೆ. ಅರಣ್ಯಾಧಿಕಾರಿ ದಿನಕರ್ಗೆ ಅಚ್ಚರಿಯೋ ಅಚ್ಚರಿ. ಏಕೆಂದರೆ ಅವರು ಮಲ ಸಂಗ್ರಹಿಸಿದ ಜಾಗ ಕಾನಸೂರಿನಿಂದ ಕೇವಲ 200 ಮೀಟರ್ ದೂರದಲ್ಲಿತ್ತು. ಅಲ್ಲದೇ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರದಿಂದ 100 ಮೀಟರ್ ಒಳಭಾಗದಲ್ಲಿತ್ತು. `ಅರೇ ಇಲ್ಲಿ ಚಿರತೆ ಬರಲು ಹೇಗೆ ಸಾಧ್ಯ..? ಇಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ಕಾಡಿಲ್ಲ. ಆದರೂ ಚಿರತೆಯ ಮಲವಾ..?'ಎನ್ನುವ ಅನುಮಾನ ವ್ಯಕ್ತಪಡಿಸಿದರು. ಶೇಖರ ನನ್ನ ಬಳಿ ಬಂದು `ಅರಣ್ಯ ಅಧಿಕಾರಿಗಳು ಕಾಡಿನ ಕಡೆ ಹೋದರೆ ಗೊತ್ತಾಗ್ತಿತ್ತು..'ಎಂದು ಗೊಣಗಿದ. ಅದನ್ನು ಸಂಗ್ರಹಿಸಿ ತಂಡ ಮರಳಿತು. ಈಗಲೂ ನನ್ನ ಪ್ರಕಾರ ಅದು ನಾಯಿಯ ಮಲವೇ. ಚಿರತೆಯದ್ದಲ್ಲವೇ ಅಲ್ಲ. ಆ ಭಾಗದಲ್ಲಿ ಚಿರತೆ ಇಲ್ಲವೇ ಇಲ್ಲ. ದಿನಕರ್ ಅವರ ಅಭಿಪ್ರಾಯ ಸರಿಯಿದ್ದರೂ ಆಗ ಸುಮ್ಮನಿದ್ದೆ. ಅಪರಾಜಿತಾ ಹಾಗೂ ತಂಡದ ಹುಮ್ಮಸ್ಸನ್ನು ಯಾಕೆ ಭಂಗ ಮಾಡುವುದು ಹೇಳಿ..? ಆಕೆಯ ಬೇಜಾರಿನ ಮುಖವನ್ನು ನೋಡ್ಲಿಕ್ಕಾಗ್ತಾ ಇರ್ಲಿಲ್ಲ.
ಹಳದೋಟದ ಕಾಡಿನಲ್ಲಿ ಹುಲಿಯಿರುವ ಕುರುಹು ಸಿಕ್ಕಿದ ನಂತರ ನಾನಿದ್ದ ಆ ರಿಸರ್ಚಿನ ತಂಡ ಮರಳಿತು. ಬೆಂಗಳೂರಿನಿಂದ ಯಾವುದೋ ಎನ್ಜಿಓ ದಿಂದ ನಿಯೋಜನೆಗೊಂಡು ಉತ್ತರಕನ್ನಡದ ಕಾಡನ್ನು ತಿಳಿಯಲು ಕಾಡೇ ಗೊತ್ತಿಲ್ಲದವರನ್ನು ರಿಸರ್ಚಿಗೆ ಕಳಿಸಲಾಗಿತ್ತು. ಕಾಡೆಂದರೆ ಹಾಗೆ ಹೀಗೆ ಎನ್ನುವುದನ್ನು ತಲೆಯಲ್ಲಿ ತುಂಬಿ ಕಳಿಸಿದ್ದವರಿಗೆ ಈ ರಿಸರ್ಚಿನಿಂದ ಏನು ಉಪಯೋಗವಾಯಿತೋ ಗೊತ್ತಿಲ್ಲ. ಆದರೆ ನಾನಂತೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಅಪರಾಜಿತಾಳನ್ನು ರಿಸರ್ಚ್ ಮಾಡಿದ್ದಂತೂ ಸತ್ಯ. ಹುಡುಗುಬುದ್ಧಿ ನೋಡಿ.. ಅಷ್ಟೂ ಮಾಡದಿದ್ರೆ ಹೇಗೆ..? ಒಟ್ಟಿನಲ್ಲಿ ಈ ರಿಸರ್ಚಿನ ತಂಡದ ಜೊತೆಗೆ ಹೋಗಿದ್ದರಿಂದ ಕೆಲವು ವಿಷಯಗಳನ್ನು ನಾನು ತಿಳಿದುಕೊಳ್ಳುವಂತಾದರೆ ಇನ್ನೂ ಹಲವಾರು ಪ್ರಶ್ನೆಗಳನ್ನು, ನಿಗೂಢತೆಗಳನ್ನು ಹುಟ್ಟುಹಾಕಿತು. 

2 comments:

  1. ಅಘನಾಶಿನಿ ಅಂತ ಇನ್ನೊಂದು ಬ್ಲಾಗ್ ನೋಡಿದ್ದಿ. ನಿಮ್ಮ ಬ್ಲಾಗಿಗೆ ಬಂದಿದ್ದು ಇವತ್ತೆ :-)
    ಚೆನ್ನಾಗಿದ್ದು ರಿಸರ್ಚ್ ಕತೆ..
    ಚಿರತೆ ಅಂದ್ಕೊಂಡು ನಾಯಿ.. ತೋ :-).. ಸಖತ್ತಿತ್ರಿ :-)

    ReplyDelete