Sunday, August 17, 2014

ಹಿರಿಯರಿಗೆ ಜೈ ಎನ್ನಿ

          ಹಿರಿಯರು ನಮ್ಮ ಎದುರು ಓಡಾಡುವಂತ ವಿಶ್ವಕೋಶಗಳು. ಅವರ ಅನುಭವಗಳು ನಮಗೆ ದಾರಿದೀಪಗಳು. ಹಿರಿಯರಿಂದ ನಾವು ಕಲಿತಷ್ಟು ಮತ್ಯಾರಿಂದಲೂ ಕಲಿಯಲು ಸಾಧ್ಯವಿಲ್ಲ. ನಮ್ಮ ಬದುಕಿನ ದೀವಿಗೆ ಅವರು ಎಂದರೂ ತಪ್ಪಾಗಲಿಕ್ಕಿಲ್ಲ. ಅತ್ಯಂತ ವಯಸ್ಸಾದವರು ಅಪರೂಪದ ಕೆಲವು ಅಂಶಗಳನ್ನು ನನಗೆ ತಿಳಿಸಿದ್ದರು. ಅದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ. ತೀರಾ ಇತ್ತೀಚಿನವರೆಗೂ ನಾನು ರಾತ್ರಿಯ ಊಟಕ್ಕೆ ಮೊಸರು ಹಾಕಿಕೊಳ್ಳುವವನು ಅದಕ್ಕೆ ಹಾಲನ್ನು ಹಾಕಿಕೊಳ್ಳುತ್ತಿರಲಿಲ್ಲ. ಒಂದು ದಿನ ಗಣಪಜ್ಜಿ ಮನೆಗೆ ಹೋಗಿದ್ದೆ. (ಗಣಪಜ್ಜಿಯ ಹಾಡುಗಳಲ್ಲಿ ಬಂದಿರುವ ಗಣಪಜ್ಜಿ ಕೋಡ್ಸರ) ಆಕೆಯ ಬಳಿಯಲ್ಲಿ ಮಾತನಾಡುತ್ತ ರಾತ್ರಿಯಾಯಿತು. ಅಜ್ಜಿಯ ಮನೆಯಲ್ಲಿ ಊಟಕ್ಕೆ ಒತ್ತಾಯಿಸಿದರು. ನಾನು ಹಾಗೂ ದೋಸ್ತ ಸಂಜಯ ಇದ್ದೆವಲ್ಲ. ಬೇಡ ಬೇಡ ಎನ್ನುತ್ತಲೇ ಊಟಕ್ಕೆ ಕುಳಿತೆವು. ಊಟದ ಕೊನೆಯಲ್ಲಿ ನನಗೆ ಮನೆಯವರು ಮೊಸರು ಬಡಿಸಿದರು. ಹಾಲು ಬೇಕಾ ಕೇಳಿದರು. ನಾನು ಬೇಡ ಎಂದೆ. ತಕ್ಷಣ ಅಜ್ಜಿ `ತಮಾ ಹಾಲು ಹಾಕ್ಯಳ..' ಎಂದು ಒತ್ತಾಯಿಸಿದರು. ನಾನು `ಬೇಡ.. ನನಗೆ ರೂಢಿಯಿಲ್ಲ..' ಎಂದೆ.. ಕೊನೆಗೆ ಅಜ್ಜಿ ಹೇಳಿದ್ದೆಂದರೆ `ತಮಾ.. ರಾತ್ರಿ ಊಟಕ್ಕೆ ಮೊಸರಿಗೆ ಯಾವಾಗಲೂ ಹಾಲು ಹಾಕಿಕೊಳ್ಳವು. ಇದರಿಂದಾಗಿ ಆಹಾರ ಬೇಗ್ನೆ ಜೀರ್ಣ ಆಗ್ತು. ಆಮೇಲೆ ಹುಳಿತೇಗು ಬರ್ತಿಲ್ಲೆ. ತಿನ್ನುವ ಆಹಾರ ದೇಹಕ್ಕೆ ಒಗ್ತು..' ಎಂದಳು. ನನ್ನ ಮನೆಯಲ್ಲಿಯೂ ರಾತ್ರಿ ಊಟಕ್ಕೆ ಮಜ್ಜಿಗೆಗೆ ಹಾಲು ಹಾಕಿಕೊಳ್ಳು ಎನ್ನುತ್ತಿದ್ದರು. ಆದರೆ ನಾನು ಕಾರಣ ಕೇಳಿದರೆ ಗೊತ್ತಿಲ್ಲವೆಂದೋ, ಹಾರಿಕೆಯದ್ದೋ ಉತ್ತರ ನೀಡಿದ್ದರು. ಆದರೆ ಈ ಅಜ್ಜಿ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗಾಗಿಸಿತು. ಅಂದಿನಿಂದ ರಾತ್ರಿ ಮೊಸರನ್ನಕ್ಕೆ ಹಾಲು ಬೆರೆಸಿ ಊಟ ಮಾಡುತ್ತಿದ್ದನೆ. ನಮ್ಮ ಹಿರಿಯರು ಯಾವುದಾದರೂ ಸಂಪ್ರದಾಯ ಹೇಳಿದರೆ ಖಂಡಿತ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇರುತ್ತದೆ ಎನ್ನುವುದು ಅರ್ಥವಾಯಿತು.
***
           ಇಂತಹ ಹಲವಾರು ಅನುಭವಗಳು ಆಗಿವೆ. ಇತ್ತೀಚೆಗೆ ಒಬ್ಬರನ್ನು ಭೇಟಿಯಾಗಿದ್ದೆ. ಅವರ ಬಳಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಸಿಡಿಟಿ ಕುರಿತು ಚರ್ಚೆ ಆರಂಭವಾಯಿತು. ಕೊನೆಗೆ ಅವರು ಹೇಳಿದ್ದು `ತಮಾ.. ನಮ್ಮಲ್ಲಿ ಹಿರಿಯರು ಊಟದ ಸಂದರ್ಭದಲ್ಲಿ ಸಾರು ಅಥವಾ ಸಾಂಬರ್ ಹಾಕ್ಯತ್ವಲಾ.. ಅದಕ್ಕೆಂತಕ್ಕೆ ತುಪ್ಪ ಎಣ್ಣೆ ಹಾಕ್ತ ಹೇಳು..' ಎಂದು ಕೇಳಿದರು. ನಾನು ಸುಮ್ಮನುಳಿದೆ. ಕೊನೆಗೆ ಅವರೇ ಮುಂದುವರಿದು `ಸಾಂಬಾರು ಅಥವಾ ಸಾರಿಗೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡರೆ ಎಸಿಡಿಟಿ ಆಗುವುದಿಲ್ಲ. ಅದೇ ಕಾರಣಕ್ಕೆ ಹಲಸಿನ ಹಣ್ಣಿನ ಕಡುಬು, ಉದ್ದಿನ ಇಡ್ಲಿಗಳಿಗೆಲ್ಲ ಎಣ್ಣೆ, ತುಪ್ಪ ಹಾಕುತ್ತಾರೆ.. ನೀ ಹಾಕ್ಯತ್ಯನಾ..?' ಎಂದು ಕೇಳಿದರು. ಇಲ್ಲವಲ್ಲ ಎಂದು ಉತ್ತರಿಸಿದೆ. ನಾಳಿಂದ ಹಾಂಗೆ ಮಾಡು.. ನಿಂಗೆ ಎಸಿಡಿಟಿ ಆಗ್ತಿಲ್ಲೆ.. ಎಸಿಡಿಟಿ ಸಮಸ್ಯೆಗಳಿದ್ದರೂ ಬಾಧಿಸ್ತಿಲ್ಲೆ.. ಎಂದರು. ನಾನು ಅಬ್ಬಾ ಹಿರಿಯರೆ ಎಂದುಕೊಂಡೆ. ಅವರ ಜ್ಞಾನಕ್ಕೆ ತಲೆದೋಗಿದೆ. ಈಗ ಸಾಂಬಾರು ಊಟದ ಸಂದರ್ಭದಲ್ಲಿ ಸಾಂಬಾರಿಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿಸಿಕೊಳ್ಳುತ್ತಿದ್ದೇನೆ.
***
         ಸಿಕ್ಕಾಪಟ್ಟೆ ತಲೆನೋವು. ಶೀತವಾಗಿರಲಿಲ್ಲ. ಆದರೆ ತಲೆ ಸಿಡಿತ ಮಾತ್ರ ಬಿಡುತ್ತಲೇ ಇರಲಿಲ್ಲ. ಬಿದ್ದು ಹೊಳ್ಳಾಡುವಷ್ಟು ತಲೆನೋವು. ಅಮ್ಮ ನೋಡಿದವಳೇ ಅದೇನೋ ಕಷಾಯ ಕೊಟ್ಟಳು, ಕೈಯಲ್ಲಿ ಆರ್ಕ್ಯೂಪ್ರೆಶರ್ ಮಾಡಿದಳು. ಅಷ್ಟೇ ಅಲ್ಲದೇ ತನಗೆ ಗೊತ್ತಿದ್ದ ಹಲವು ಔಷಧಿಗಳನ್ನು ಮಾಡಿದರೂ ತಲೆನೋವು ಕಡಿಮೆಯೇ ಆಗುತ್ತಿರಲಿಲ್ಲ. ತಲೆಯೇ ಸಿಡಿದುಹೋಗುತ್ತದೆಯೇನೋ ಎನ್ನುವಂತಾಗಿತ್ತು ನನಗೆ. ಗಂಟೆಗಳ ಕಾಲ ನಾನು ನೋವಿನಿಂದ ನರಳಾಡಿದೆ. ಕೊನೆಗೆ ಅದೆಲ್ಲಿ ಓದಿದ್ದಳೋ ಅಮ್ಮ, ದೊಡ್ಡದೊಂದು ನಿಂಬೆ ಕಾಯಿಯನ್ನು ಕೊಯ್ದು ಕಟ್ ಮಾಡಿ ಅದರ ರಸವನ್ನು ತೆಗೆದು ಕೊಬ್ಬರಿ ಎಣ್ಣೆಯ ಜೊತೆಗೆ ಸೇರಿಸಿ ತಲೆಗೆ ಹಾಕಿದಳು. ಅರೇ ಎರಡೇ ನಿಮಿಷದಲ್ಲಿ ತಲೆನೋವು ಮಾಯ..! ಏನಾಶ್ಚರ್ಯ. ಇದೆಂತಹ ಔಷಧಿ ಎಂದುಕೊಂಡು ಕೇಳಿದೆ. ತಲೆನೋವು ಅತಿಯಾಗಿ ಬಂದರೆ ಹೀಗೆ ಮಾಡಬೇಕು ಎಂದು ಹಿರಿಯರಿಂದ ಕೇಳಿದ್ದೆ. ಆದರೆ ನಾನು ಮಾಡಿರಲಿಲ್ಲ. ಈಗ ನಿನ್ನ ಮೇಲೆ ಪ್ರಯೋಗಿಸಿದೆ. ನೋಡು ತಕ್ಷಣಕ್ಕೆ ಕಡಿಮೆಯಾಯಿತು. ಎಂದಳು ಅಮ್ಮ. ಮತ್ತೊಮ್ಮೆ ಹಿರಿಯರಿಗೆ ಜಯವೆಂದೆ.
***
        ದೊಡ್ಡ ಹಬ್ಬ ದೀಪಾವಳಿಯಲ್ಲಿ ನಮ್ಮ ಕಡೆಯಲ್ಲಿ ಕೊನೆಯ ದಿನ ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯ ಆಚರಣೆ ಮಾಡುತ್ತಾರೆ. ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯದ ಜೊತೆಗೆ ಉದ್ದನೆಯ ದಿಪ್ಪಳಿಗೆ ಕೋಲನ್ನು ಕಡಿದು ಅದಕ್ಕೆ ದೊಂದಿ ಮಾಡಿ ಬೆಂಕಿ ಕತ್ತಿಸಿ ನಮ್ಮ ನಮ್ಮ ಜಮೀನಿನ ಬಳಿ ಅದನ್ನು ಹುಗಿದು ದೊಡ್ಡದಾಗಿ ಜಾಗಟೆ ಬಡಿದು ಕೂಗಾಡಲಾಗುತ್ತದೆ. ತೀರಾ ಇತ್ತೀಚಿನ ದಿನಗಳ ವರೆಗೂ ನಾನು ಹಬ್ಬ ಕಳಿಸುವುದರ ಮಹತ್ವ ಅಥವಾ ಯಾಕೆ ಹೀಗೆ ಮಾಡುತ್ತಾರೆ ಎನ್ನುವುದನ್ನು ಅರಿತಿರಲಿಲ್ಲ. ಒಬ್ಬರು ಹೇಳಿದ್ದೆಂದರೆ ಹೀಗೆ ಮಾಡುವುದರಿಂದ ಬೆಂಕಿಯನ್ನು ಕಂಡು ನಮ್ಮ ಗದ್ದೆ, ತೋಟಗಳಿಗೆ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಹೆದರಿಸುತ್ತದೆ. ಬೆಳೆ ರಕ್ಷಣೆಯಾಗುತ್ತದೆ ಅಂತ. ಆಹಾ ಹಿರಿಯರೇ ನಿಮ್ಮ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಬಿಡಿ.

(ಮುಂದುವರಿಯುತ್ತದೆ)

No comments:

Post a Comment