Sunday, July 19, 2015

ಅಘನಾಶಿನಿ ಕಣಿವೆಯಲ್ಲಿ-23

            ಉಂಚಳ್ಳಿ ಜಲಪಾತದ ಬಳಿ ಅರಣ್ಯಗಳ್ಳರು ಹಾಗೂ ಫಾರೆಸ್ಟ್ ಆಪೀಸರ್ ಜೊತೆ ಅರಣ್ಯಗಳ್ಳತನ ಕುರಿತಂತೆ ನಡೆದ ಮೇಲಾಟದ ವಿಷಯ ಸಂಜೆಯ ವೇಳೆಗೆ ಎಲ್ಲ ಕಡೆ ಹರಡಿಹೋಗಿತ್ತು. ಪಾತರಗಿತ್ತಿಯನ್ನು ಹಿಡಿಯುವ ನೆಪದಲ್ಲಿ ಅಘನಾಶಿನಿ ಕಣಿವೆಗೆ ಬಂದ ಯುವ ಪಡೆಗೂ ಕೂಡ ಸಂಜೆಯ ಸಮಯದಲ್ಲಿಯೇ ವಿಷಯ ತಿಳಿದಿತ್ತು. ಮರುದಿನ ಏನಾದರಾಗಲಿ ಅರಣ್ಯಗಳ್ಳರು ಹಾಗೂ ಪಾರೆಸ್ಟ್ ಆಫೀಸರ್ ನಡುವೆ ನಡೆದ ಛೇಸಿಂಗ್ ಜಾಗಕ್ಕೆ ಹೋಗುವುದು ಒಳಿತು ಎಂದುಕೊಂಡರು ಎಲ್ಲರೂ. ಸುಮ್ಮನೇ ಹೋಗುವುದೇಕೆ, ಉಂಚಳ್ಳಿ ಜಲಪಾತವನ್ನು ನೋಡುವ ನೆಪವನ್ನು ಇಟ್ಟುಕೊಳ್ಳೋಣ ಎಂದುಕೊಂಡು ನಿರ್ಧಾರ ಮಾಡಿದವರು ವಿಕ್ರಮ ಹಾಗೂ ವಿಜೇತಾ. ವಿನಾಯಕನ ಬಳಿ ಈ ಸಂಗತಿಯನ್ನು ಅರುಹಿದಾಗ ಅವನೂ ಒಪ್ಪಿಗೆ ಸೂಚಿಸಿದ್ದ.
            ಸಂಜೆಯ ವೇಳೆ ಊಟ ಮುಗಿಸಿ ಹಾಸಿಗೆಯತ್ತ ಮುಖ ಮಾಡಿದ್ದರು ಎಲ್ಲರೂ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪೊಲೀಸ್ ಸ್ಟೇಶನ್, ಗುಡ್ಡೇ ತೋಟದ ಗಣಪತಿ ದೇವಾಲಯದಲ್ಲಿ ನಡೆದ ಘಟನೆಗಳೇ ಮನಸ್ಸಿನಲ್ಲಿ ಇಣುಕುತ್ತಿದ್ದವು. ಪೊಲೀಸರಿಗೇನೋ ಸಬೂಬನ್ನು ಹೇಳಿ ತಪ್ಪಿಸಿಕೊಂಡು ಬಂದದ್ದಾಗಿದೆ. ಆದರೆ ದೇವಸ್ಥಾನದ ಆವರಣದಲ್ಲಿ ವಿಷ್ಣು ಎಡವಿ ಬಿದ್ದಿದ್ದು ಮಾತ್ರ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿಷ್ಣುವೇನೋ ಇಂತದ್ದನ್ನೆಲ್ಲ ತಲೆಗೆ ಹಾಕಿಕೊಳ್ಳುವವನಲ್ಲ. ಆದರೆ ಉಳಿದವರ ಮನಸ್ಸು ಮಾತ್ರ ಏನೋ ಆಗುತ್ತಿದೆ, ಆಗುತ್ತದೆ ಎನ್ನುವ ಚಿಂತನೆ ನಡೆಸಿದ್ದರು. ಅಪಾಯ ಕಾದಿರಬಹುದಾ? ಯಾವ ರೀತಿಯ ಅಪಾಯ ಆಗಬಹುದು? ವಿಷ್ಣುವಿನ ಜೀವಕ್ಕೆ ಏನಾದರೂ ತೊಂದರೆ ಆಗುತ್ತದೆಯೇ? ಮತ್ತಿನ್ನೇನಾದರೂ ಕಂಟಕ ಇದೆಯೇ ಹೀಗೆಲ್ಲ ಆಲೋಚನೆ ಮಾಡಿದರು. ಆಲೋಚನೆಯಲ್ಲಿ ಮುಳುಗಿದ್ದವರಿಗೆ ಅದ್ಯಾವಾಗ ನಿದ್ದೆ ಬಂದಿತ್ತೋ ಗೊತ್ತಾಗಲಿಲ್ಲ.
           ವಿಜೇತಾಳಿಗೆ ನಡುರಾತ್ರಿ ಮತ್ತೆ ಎಚ್ಚರಾಯಿತು. ದಂಟಕಲ್ಲಿಗೆ ಬಂದ ಹೊಸತರಲ್ಲಿ ನಡುರಾತ್ರಿ ಎಚ್ಚರಾಗಿತ್ತು. ಈಗ ಮತ್ತೊಮ್ಮೆ ಎಚ್ಚರಾಗಿತ್ತು. ದಂಟಕಲ್ಲಿನ ಮೇಲ್ಭಾಗದಲ್ಲಿಯೇ ದಟ್ಟವಾಗಿ ಹಬ್ಬಿರುವ ಕಾಡಿನಲ್ಲಿ ಮತ್ತೆ ಯಥಾ ಪ್ರಕಾರ ಮರಕಡಿಯುವ ಸದ್ದು. ಒಮ್ಮೊಮ್ಮೆ ಗರಗಸ ಸದ್ದು ಮಾಡಿದರೆ ಮತ್ತೊಮ್ಮೆ ಕೊಡಲಿಯ ಸದ್ದು ಕೇಳುತ್ತಿತ್ತು. ಗಾಳಿಯ ಚಲನೆಯ ಆಧರಿಸಿ ದಟ್ಟವಾಗಿ ಹಾಗೂ ಕ್ಷೀಣವಾಗಿ ಕಿವಿಗೆ ಬಡಿಯುತ್ತಿತ್ತು. ವಿಜೇತಾ ಬಹಳ ಕಾಲ ಇದನ್ನು ಆಲಿಸಿದಳು. ಕೊನೆ ಕೊನೆಗೆ ಅಸಹನೀಯ ಎನ್ನಿಸಿ ಹೊರಗೆ ಎದ್ದು ಬಂದಳು. ಮಹಡಿಯ ಇನ್ನೊಂದು ಕಡೆಯಲ್ಲಿ ವಿಕ್ರಮ, ವಿಷ್ಣು, ವಿನಾಯಕ ಹಾಗೂ ಪ್ರದೀಪರು ಮಲಗಿದ್ದರು. ನಿಧಾನವಾಗಿ ವಿಕ್ರಮನ ಕಡೆ ಸರಿದು ಹೋದ ವಿಜೇತಾ ಅವನನ್ನು ಎಬ್ಬಿಸಲು ಪ್ರಯತ್ನಿಸಿದಳು.
              ವಿಕ್ರಮನಿಗೂ ನಿದ್ದೆ ಬಂದಿರಲಿಲ್ಲ. ವಿನಯಚಂದ್ರನಿಗೆ ಅಷ್ಟೇ ಅಲ್ಲ ಪಕ್ಕದಲ್ಲಿ ಮಲಗಿದ್ದವರಿಗೆ ಯಾರಿಗೂ ಕೂಡ ನಿದ್ದೆ ಬಂದಿರಲಿಲ್ಲ. ವಿಜೇತಾ ಎದ್ದು ಬಂದಿದ್ದನ್ನು ಕಂಡು `ಏನಾಯ್ತು?' ಎಂದ ವಿಕ್ರಮ. ಅದಕ್ಕೆ ಪ್ರತಿಯಾಗಿ ವಿಜೇತಾ ಕತ್ತಲಿನಲ್ಲಿ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ಹೇಳಿದಳು. ಯಾರೋ ಮರ ಕಡಿಯುತ್ತಿದ್ದಾರೆ ಎಂದೂ ತಿಳಿಸಿದಳು.
             ವಿಕ್ರಮ ಹಾಗೂ ಉಳಿದವರಿಗೂ ಈ ವಿಷಯ ತಿಳಿದಿತ್ತು. ಕಾಡಿಗೆ ಹೋಗಿ ಬರೋಣವಾ ಎಂದುಕೊಂಡರು. ಪ್ರದೀಪ ಹೂ ಅಂದ. ವಿಷ್ಣುವೂ ಹೂ ಅಂದುಬಿಟ್ಟಿದ್ದ. ಕೊನೆಗೆ ನಡು ರಾತ್ರಿಯಾದರೂ ಸರಿ ಹೋಗಿ ಬರೋಣ. ಐದಾರು ಜನರಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಮರ ಕಡಿಯುತ್ತಿರುವ ಪೋಟೋಗಳು ಸಿಕ್ಕರೆ ಅಷ್ಟೇ ಸಾಕು ಎಂದುಕೊಂಡರು ಎಲ್ಲರೂ. ವಿನಾಯಕನ ಬಳಿ ಹೇಳಿದಾಗ ಮೊದಲಿಗೆ ವಿರೋಧಿಸಿದನಾದರೂ ಕೊನೆಗೆ ಒಪ್ಪಿಕೊಂಡ. ಮನೆಯಲ್ಲಿ ಇದ್ದ ಮೂರಡಿಯ ಬ್ಯಾಟರಿಯನ್ನು ಎತ್ತಿಕೊಂಡ. ಒಂದು ಕಿ.ಮಿ ದೂರದ ವರೆಗೂ ಆ ಬ್ಯಾಟರಿ ಬೆಳಕನ್ನು ಬೀರುತ್ತಿತ್ತು. ವಿನಾಯಕ ಸೀದಾ ಹೊರಕ್ಕೆ ಬಂದವನೇ ಪಂಜರದಲ್ಲಿ ಕೂಡಿ ಹಾಕಲಾಗಿದ್ದ ಮುದ್ದಿನ ನಾಯಿ ರಾಮುವನ್ನು ಹೊರಗೆ ಬಿಟ್ಟ. ಅದೇನು ಸೂಟು ಸಿಕ್ಕಿತ್ತೋ ರಾಮುವಿಗೆ. ಛಂಗನೆ ನೆಗೆಯಿತು. ತನ್ನ ಮನಯ ಯಜಮಾನ ಕಾಡಿನ ಕಡೆಗೆ ತೆರಳುತ್ತಿದ್ದಾನೆ ಎಂಬುದು ನಾಗಿಗೆ ಅದ್ಹೇಗೋ ತಿಳಿದುಬಿಟ್ಟಿತ್ತು. ಬಾಲ ಹಾಗೂ ಮೈಯನ್ನು ವಿಚಿತ್ರವಾಗಿ ಕುಳಿಸುತ್ತ ನೆಗೆಯತೊಡಗಿತ್ತು.
            ಕಾಡನ್ನು ಅರಿತಿದ್ದ ವಿನಾಯಕ ಎಲ್ಲರನ್ನೂ ಹಿತ್ಲಾಕಡೆಗೆ ಕರೆದುಕೊಂಡು ಗುಡ್ಡ ಹತ್ತಿಸಿದ. ಎಲ್ಲರೂ ಸುಮ್ಮನೆ ಬನ್ನಿ ಎಂದು ಹೇಳಲು ಮರೆಯಲಿಲ್ಲ. ಪ್ರತಿಯೊಬ್ಬರ ಬಳಿಯೂ ಚಿಕ್ಕ ಬೆಳಕು ಇದ್ದೇ ಇದ್ದು. ಮೊಬೈಲ್ ಟಾರ್ಚುಗಳೂ ಇದ್ದವು. ಸದ್ದಿಲ್ಲದೇ ಗುದ್ದವನ್ನು ಏರ ತೊಡಗಿದರು. ಹತ್ತಿರದಲ್ಲೇ ಇದ್ದ ರಸ್ತೆಯನ್ನು ದಾಟಿ ಕಾನನದಲ್ಲಿ ಸದ್ದು ಕೇಳಿ ಬಂದ ಕಡೆಗೆ ಮುಖ ಮಾಡಿದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಬಳಿ ಇದ್ದ ನೈಟ್ ವಿಷನ್ ಕ್ಯಾಮರಾವನ್ನು ಸಜ್ಜಾಗಿ ಇರಿಸಿಕೊಂಡಿದ್ದರು. ಯಾವ ಕ್ಷಣದಲ್ಲಿ ಬೇಕಾದರೂ ಪೋಟೋ ತೆಗೆಯುವ ಸಂದರ್ಭ ಎದುರಾಗಬಹುದಿತ್ತು. ಅದಕ್ಕಾಗಿ ಇಬ್ಬರೂ ಚುರುಕಾಗಿ ಸಾಗುತ್ತಿದ್ದರು. ಇಬ್ಬರ ಕೈಗಳೂ ಕ್ಯಾಮರಾ ಮೇಲಿದ್ದವು.
           ರಾಜು ಮುಂದಕ್ಕೆ ಸಾಗುತ್ತಿತ್ತು. ರಾಜುವಿನ ಹಿಂದೆ ರಾಜುವಿನ ಜಾಡಿನಲ್ಲಿ ವಿನಾಯಕ ಮೌನವಾಗಿ ಸಾಗುತ್ತಿದ್ದ. ಅವನ ಹಿಂದೆ ಪ್ರದೀಪ, ವಿಕ್ರಮ, ವಿಜೇತಾ ಹಾಗೂ ಕೊನೆಯಲ್ಲಿ ವಿಷ್ಣು. ಒಬ್ಬರಿಗೊಬ್ಬರ ನಡುವೆ ಮಾರು ದೂರ ಅಂತರ. ಪ್ರದೀಪ ಮಾತ್ರ ದೊಡ್ಡದೊಂದು ಕಬ್ಬಿಣದ ರಾಡನ್ನು ಹಿಡಿದು ಸಾಗುತ್ತಿದ್ದ. ವಿನಾಯಕನ ಹಿಂದೆ ಜಾಡು ಹಿಡಿದು ಸಾಗುತ್ತಿದ್ದರೂ ಕೂಡ ಹಿಂಬಾಲಿಸುತ್ತಿದ್ದವರು ಆಗೊಮ್ಮೆ ಈಗೊಮ್ಮೆ ದಾರಿ ತಪ್ಪುತ್ತಿದ್ದರು. ಕಾಡಿನಲ್ಲಿ ಮುಂದೆ ಮುಂದೆ ಸಾಗಿದಂತೆಲ್ಲ ಕತ್ತಲೆಯ ನೀರವತೆಯನ್ನು ಸೀಳಿ ಬರುವಂತಹ ಕಾಡು ಹಕ್ಕಿಗಳ ಕೂಗು ಕಿರ್ರೆಂದು ಕೇಳಿಸುತ್ತಿದ್ದವು. ಮರ ಕಡಿಯುವ ಸದ್ದು ಕೂಡ ನಿಧಾನವಾಗಿ ದೊಡ್ಡದಾಗತೊಡಗಿತ್ತು. ಎಲ್ಲರೂ ಮುಂದೆ ಮುಂದೆ ಹೆಜ್ಜೆ ಹಾಕಿದರು.
             ಕೊನೆಗೊಮ್ಮೆ ವಿನಾಯಕ ಗಕ್ಕನೆ ನಿಂತ. ನಿಂತವನೇ ಮುಂದೆ ಹೋಗುತ್ತಿದ್ದ ರಾಜುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡ. ರಾಜು ಕೊಸರಾಡತೊಡಗಿತು. ಹಿಂಬಾಲಿಸುತ್ತಿದ್ದವರೆಲ್ಲ ಒಮ್ಮೆ ಢಿಕ್ಕಿ ಹೊಡೆದರೋ ಎನ್ನುವಂತೆ ನಿಂತರು. ಪಿಸುಮಾತಿನಲ್ಲಿ ಹಿಂದಿದ್ದವರ ಬಳಿ `ಅದೋ ಅಲ್ಲಿ ನೋಡಿ.. ಮರ ಕೊಯ್ಯುತ್ತಿದ್ದಾರೆ..' ಎಂದ.
             ಕಾಡಿನ ಮೌನದಲ್ಲಿ ಕೊಂಚ ದೂರದಲ್ಲಿ ಲಾಟೀನು ಬೆಳಕಿನಲ್ಲಿ ಒಂದಿಷ್ಟು ಜನ ಮರ ಕಡಿಯುತ್ತಿದ್ದರು. ಅಲ್ಲಿಯೆ ದಡೆಯನ್ನೂ ಮಾಡಿಕೊಂಡು ನಿರಾತಂಕವಾಗಿ ತಮ್ಮ ಕೆಲಸವನ್ನು ಮುಂದುವರಿಸಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೂ ತಮ್ಮ ಕ್ಯಾಮರಾಕ್ಕೆ ಕೆಲಸಕೊಟ್ಟರು. ಅನುಮಾನ ಬಾರದಿರಲಿ ಎನ್ನುವ ಕಾರಣಕ್ಕಾಗಿ ಇಬ್ಬರೂ ಕ್ಯಾಮರಾದ ಫ್ಲಾಷ್ ಲೈಟನ್ನು ಆರಿಸಿದ್ದ ಕಾರಣ ಅದೆಷ್ಟು ಪೋಟೋ ತೆಗೆದರೂ ಮರಗಳ್ಳರಿಗೆ ಗೊತ್ತಾಗಲಿಲ್ಲ. ಪ್ರದೀಪ ಮಾತ್ರ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಸಜ್ಜಾಗಿ ಇರಿಸಿಕೊಂಡಿದ್ದ.
            ಅಷ್ಟರಲ್ಲಿಯೇ ಅಚಾತುರ್ಯವೊಂದು ಘಟಿಸಿಬಿಟ್ಟಿತು. ರಾಮುವಿನ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡಿದ್ದ ವಿನಾಯಕ ಎಂದೆನಲ್ಲ. ದೊಡ್ಡದೊಂದು ಬೇಟೆ ಕಣ್ಣಮುಂದೆ ಇದೆ ಎಂದು ಭಾವಿಸಿದ ರಾಮು ಇದ್ದಕ್ಕಿದ್ದಂತೆ ಕೊಸರಾಡಲಾರಂಭಿಸಿತು. ಕೊಸರಾಡಿದಂತೆಲ್ಲ ವಿನಾಯಕ ತನ್ನ ಹಿಡಿತವನ್ನು ಬಿಗಿ ಮಾಡಿದ್ದ. ಆದರೆ ಕೊನೆಗೊಮ್ಮೆ ಇದ್ದಕ್ಕಿದ್ದಂತೆ ಕುತ್ತಿಗೆ ಪಟ್ಟಿಯಿಂದ ಉಳುಚಿಕೊಂಡ ರಾಮು ಸೀದಾ ಮರಗಳ್ಳರಿದ್ದ ಕಡೆಗೆ ಓಡಿಬಿಟ್ಟಿತ್ತು. `ಅಯ್ಯೋ ಭಾನಗಡಿ ಆಯ್ತಲ್ಲ..' ಎಂದುಕೊಂಡ ವಿನಾಯಕ ತನ್ನ ಹಿಂದೆ ನಿಂತಿದ್ದವರ ಬಳಿ ಓಡಲು ತಯಾರಾಗುವಂತೆ ತಿಳಿಸಿದ. ಈ ಕತ್ತಲಲ್ಲಿ ಗೊತ್ತಿರದ ಕಾಡಿನಲ್ಲಿ ಹೇಗೆ ಓಡುವುದು? ಎಲ್ಲರೂ ತಬ್ಬಿಬ್ಬಾದರು.
            ರಾಮು ಮರಗಳ್ಳರ ಬಳಿ ಓಡಿದ್ದೇ ತಡ. ಒಮ್ಮೆ ಕಾಡೇ ಅದರುವಂತೆ ಕೂಗಿತು. ಮರಗಳ್ಳರು ಒಮ್ಮೆ ಬೆಚ್ಚಿಬಿದ್ದಿದ್ದರು. ಸುಮ್ಮನೆ ಇರದ ರಾಮು ಸೀದಾ ಹೋಗಿ ಒಬ್ಬನ ಕಾಲಿಗೆ ಗಬಕ್ಕನೆ ಕಚ್ಚಿಯೇ ಬಿಟ್ಟಿತು. ಒಮ್ಮೆ ಮರಕಡಿಯುತ್ತಿದ್ದವನೊಬ್ಬ ತನ್ನ ಕಾಲಿಗೆ ನಾಯಿ ಕಚ್ಚಿದ್ದರಿಂದ ತಬ್ಬಿಬ್ಬಾದ. ಕಚ್ಚಿದ್ದು ಏನು ಎನ್ನುವುದು ಗೊತ್ತಾಗದೇ ಕಾಲು ಝಾಡಿಸಿದ. ಆತ ಕಾಲು ಝಾಡಿಸಿದಂತೆಲ್ಲ ರಾಮುವಿನ ಕಡಿತ ಬಿಗಿಯಾಯಿತು. ರಾಮುವಿನ ಬಿಗಿಗೆ ಒಮ್ಮೆ ಜಾರಿ ಬಿದ್ದ ಮರಗಳ್ಳ `ಅಯ್ಯಯ್ಯಪ್ಪಾ...' ಎಂದ. ತಕ್ಷಣ ಜೊತೆಯಲ್ಲಿದ್ದವರೆಲ್ಲ ಹುಷಾರಾದರು. ಏನೋ ಅಪಾಯ ಎದುರಾಗಿದೆ ಎಂದು ಭಾವಿಸಿದರು.
          ಕೆಳಕ್ಕೆ ಬಿದ್ದ ಮರಗಳ್ಳನಿಗೆ ಸಹಾಯ ಮಾಡಲು ಮುಂದಾದರು. ನಾಯಿ ಕಚ್ಚಿ ಹಿಡಿದಿರುವುದು ಗೊತ್ತಾಗಿತ್ತು. ನಾಯಿ ಬಂದಿದ್ದೆ ಎಂದಾದರೆ ಜೊತೆಯಲ್ಲಿ ಇನ್ಯಾರೋ ಇರಬೇಕು. `ಯಾರೋ ಇದ್ದಾರೆ ಹುಡುಕ್ರೋ..' ಎಂದು ಕೂಗಿದ ಒಬ್ಬಾತ. ಇನ್ನೊಬ್ಬಾತ ಕೈಯಲ್ಲಿದ್ದ ಕೊಡಲಿಯಿಂದ ರಾಮುವಿನ ಕಡೆಗೆ ಬೀಸಿದ್ದ. ರಾಮು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತ್ತಾದರೂ ಕೊಡಿಲಿಯ ಏಟು ಕಾಲಿಗೆ ಬಿದ್ದಿತ್ತು. ಕೊಡಲಿಯ ಏಟು ಬಿದ್ದಿದ್ದೇ ಕಚ್ಚಿದ್ದವನನ್ನು ಬಿಟ್ಟ ರಾಮು ಕಂಯೋ ಎಂದು ಕೂಗಿ ಓಡಲು ಆರಂಭಿಸಿತು.
            ಇದೇ ವೇಳೆ ಇನ್ನೊಂದು ಪ್ರಮುಖ ಘಟನೆಯೂ ನಡೆದಿತ್ತು. ರಾಮುವಿಗೆ ಬೀಸಿದ್ದ ಕೊಡಲಿ ರಾಮುವಿನ ಕಾಲಿಗೆ ಗಾಯ ಮಾಡಿ ಸೀದಾ ರಾಮು ಕಚ್ಚಿ ಹಿಡಿದಿದ್ದವನ ಕಾಲಿಗೆ ತಾಗಿತ್ತು. ಆತನ ಕಾಲಿನ ಮೇಲೆ ಬಿದ್ದ ಪರಿಣಾಮ ಕಾಲು ಸಿಗಿದು ಹೋಗಿತ್ತು. ಕೊಡಲಿ ಏಟು ಬಿದ್ದ ಕಾರಣ ಆತ `ಅಯ್ಯಯ್ಯೋ.. ಸತ್ನ್ಯೆಪ್ಪಾ...' ಎಂದು ಕೂಗಿದ. ದಂಟಕಲ್ ಕಾಡು ಒಮ್ಮೆ ಬೆಚ್ಚಿ ಬಿದ್ದಿತ್ತು.
           ನಾಯಿಯ ಜೊತೆಗೆ ಯಾರ ಬಂದಿದ್ದಾರೆ ಎಂದು ಅನುಮಾನ ಪಟ್ಟುಕೊಂಡ ಮರಗಳ್ಳರು ಸುತ್ತಮುತ್ತ ಹುಡುಕಲು ಆರಂಭಿಸಿದ್ದರು. ಅವರ ಕಣ್ಣಿಗೆ ವಿನಾಯಕ ಹಾಗೂ ಅವರ ಜೊತೆಗಾರರು ಕಾಣಿಸಿಕೊಂಡಿದ್ದರು. ಕೂಡಲೇ ಮೂರು ಜನ ವಿನಾಯಕನ ಹಾಗೂ ಜೊತೆಗಾರರನ್ನು ಹಿಂಬಾಲಿಸಿ ಬಂದಿದ್ದರು. ಮರಗಳ್ಳರ ಕೈಗೆ ಸಿಕ್ಕರೆ ತಮ್ಮ ಕಥೆ ಮುಗಿದಂತೆಯೇ ಎಂದುಕೊಂಡು ಎಲ್ಲರೂ ಓಡಲು ಆರಂಭಿಸಿದ್ದರು.
             ವಿಕ್ರಮ, ಪ್ರದೀಪ, ವಿನಾಯಕ ಹಾಗೂ ವಿಷ್ಣು ಹೇಗಾದರೂ ಮಾಡಿ ಓಡಿಬಿಡಬಲ್ಲರು. ಅದರೆ ವಿಜೇತಾ ಹೇಗೆ ತಾನೆ ಓಡಿಯಾಳು. ಗಂಡಸರ ಸರಿಸಮಾನವಾಗಿ ಓಡುವುದೂ ಕಷ್ಟವೇ. ಕತ್ತಲ ಕೂಪದಲ್ಲಿ ಗೊತ್ತಿರದ ಜಾಗದಲ್ಲಿ ಗಂಡಸರೇ ಎದ್ದೋ ಬಿದ್ದೋ, ಎಡವುತ್ತಲೋ ಓಡುತ್ತಿದ್ದರು. ವಿಜೇತಾ ಕೂಡ ಮೊದ ಮೊದಲು ಗಂಡಸರ ವೇಗಕ್ಕೆ ತಕ್ಕಂತೆ ಓಡಿದ್ದಳು. ಆದರೆ ನಿಧಾನವಾಗಿ ಆಕೆಯಲ್ಲಿ ಶಕ್ತಿ ಕಡಿಮೆಯಾಗತೊಡಗಿತ್ತು. ವಿನಾಯಕನ ಹಿಂದೆಯೇ ಓಡುತ್ತಿದ್ದ ಆಕೆ ನಿಧಾನಕ್ಕೆ ಹಿಂದೆ ಬಿದ್ದಿದ್ದಳು. ಇದನ್ನು ಮೊಟ್ಟಮೊದಲು ಗಮನಿಸಿದವನು ಪ್ರದೀಪ.
             ಮರಗಳ್ಳರೂ ವೇಗವಾಗಿಯೇ ಓಡಿಬರುತ್ತಿದ್ದರು. ನಾಲ್ಕು ಜನ. ನಿಧಾನವಾಗಿ ಮರಗಳ್ಳರಿಗೂ ಹಾಗೂ ಯುವ ಪಡೆಗೂ ಇದ್ದ ಅಂತರ ಕಡಿಮೆಯಾಗುತ್ತ ಬಂತು. ಆಗ ಪ್ರದೀಪ ಇದ್ದಕ್ಕಿದ್ದಂತೆ ಆಲೋಚನೆ ಮಾಡಿದ. ಇನ್ನು ತಡ ಮಾಡಿದರೆ ಶತ್ರು ದಾಳಿ ಮಾಡುವುದು ನಿಶ್ಚಿತ. ವಿಜೇತಾಳಲ್ಲಿ ಶಕ್ತಿ ಕಡಿಮೆಯಾಗುತ್ತಿದೆ. ಆಕೆಯನ್ನು ಮರಗಳ್ಳರು ಹಿಡಿದುಕೊಳ್ಳುತ್ತಾರೆ. ಏನಾದರೂ ಮಾಡಬೇಕು ಎಂದುಕೊಂಡ. ತಕ್ಷಣವೇ ತನ್ನ ವೇಗವನ್ನು ಕಡಿಮೆಮಾಡಿಕೊಂಡ. ವಿಜೇತಾಳ ಬಳಿ ಜೋರಾಗಿ ಓಡು ಎಂದ. ಆಕೆ ತುಸು ಮುಂದಕ್ಕೆ ಹೋದಳು ಎಂದ ತಕ್ಷಣ ಪ್ರದೀಪ ಒಮ್ಮೆಲೆ ಗಕ್ಕನೆ ನಿಂತ. ನಿಂತವನೇ ಸೀದಾ ಉಲ್ಟಾ ತಿರುಗಿದ. ಅಷ್ಟೇ ಅಲ್ಲ ಮರಗಳ್ಳರಿಗೆ ಅಭಿಮುಖವಾಗಿ ಓಡ ತೊಡಗಿದ. ಕತ್ತಲೆಯಲ್ಲಿ ಮರಗಳ್ಳರಿಗೆ ಪ್ರದೀಪನ ಈ ರೀತಿಯ ಚರ್ಯೆ ಅರ್ಥವೇ ಆಗಲಿಲ್ಲ.
           ಉಲ್ಟಾ ಓಡುತ್ತಿದ್ದ ಪ್ರದೀಪ ಮರಗಳ್ಳರು ಹತ್ತಿರಕ್ಕೆ ಬರುವವರೆಗೂ ಕಾದ. ನಾಲ್ಕು ಜನರಲ್ಲಿ ಒಬ್ಬಾತ ಹತ್ತಿರ ಬಂದ. ಓಡುತ್ತಿದ್ದ ಪ್ರದೀಪ ತಕ್ಷಣ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ಬಲವಾಗಿ ಬೀಸಿದ. ಹೊಡೆತ ಬಲವಾಗಿ ಮರಗಳ್ಳನ ತಲೆಗೆ ಬಿದ್ದಿತ್ತು. `ವಿಕಾರವಾಗಿ ಕೂಗಿಕೊಂಡ ಮರಗಳ್ಳ ತಕ್ಷಣವೇ ಕುಸಿದು ಬಿದ್ದಿದ್ದ. ಇದನ್ನು ನೋಡಿದವರೇ ಉಳಿದ ಮರಗಳ್ಳರು ಒಮ್ಮೆ ತಬ್ಬಿಬ್ಬಾದರು. ಎದುರಾಳಿ ಈ ರೀತಿ ದಾಳಿ ಮಾಡಬಲ್ಲ ಎನ್ನುವ ಸುಳಿವು ಖಂಡಿತವಾಗಿಯೂ ಇರಲಿಲ್ಲ. ಪ್ರದೀಪ ಹೊಡೆದಿದ್ದನ್ನು ಕಂಡು ಒಮ್ಮೆಲೆ ಹೆದರಿದ ಮರಗಳ್ಳರು ವಿನಾಯಕನ ತಂಡವನ್ನು ಬೆನ್ನಟ್ಟುವುದನ್ನು ಬಿಟ್ಟು ಸೀದಾ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಪ್ರದೀಪ ಮಾತ್ರ ಈಗ ಅವರ ತಿರುಗಿ ಬಿದ್ದಿದ್ದ. ಓಡುತ್ತಿದ್ದವರ ಪೈಕಿ ಒಬ್ಬನ ಬೆನ್ನಟ್ಟಿದ್ದ. ಕಾಡಿನ ದಾರಿಯಲ್ಲಿ ಬಹಳ ದೂರ ಬೆನ್ನಟ್ಟಿದ್ದ. ಆದರೆ ಕೊನೆಗೂ ಮರಗಳ್ಳ ಸಿಗಲಿಲ್ಲ. ತಪ್ಪಸಿಕೊಂಡಿದ್ದ. ಕೈಯಲ್ಲಿದ್ದ ಕಬ್ಬಿಣದ ರಾಡು ಒದ್ದೆ ಓದ್ದೆಯಾಗಿತ್ತು. ಏದುಸಿರು ಬಿಡುತ್ತ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯ ಪಕ್ಕದಲ್ಲಿ ಯಾರೋ ನರಳಿದ ಸದ್ದಾಯಿತು. ಮತ್ತೊಮ್ಮೆ ಪ್ರದೀಪ ಜಾಗೃತನಾಗಿ ಕೈಯಲ್ಲಿದ್ದ ರಾಡನ್ನು ಬೀಸಲು ತಯಾರಾಗಿದ್ದುಕೊಂಡು ಅತ್ತ ಹೊರಳಿದ.
           ಪ್ರದೀಪ ತೀರಾ ಹತ್ತಿರಕ್ಕೆ ಬಂದ ಎನ್ನುವಷ್ಟರಲ್ಲಿ ಬವ್...ಎಂದಿತು ಸದ್ದು. ಪ್ರದೀಪ ಒಮ್ಮೆ ಬೆಚ್ಚಿದ್ದ. ನೋಡಿದರೆ ರಾಮು. ಮರಗಳ್ಳನ ಕೊಡಲಿ ಏಟು ತಾಗಿ ಗಾಯಗೊಂಡಿದ್ದ ರಾಮು ತಪ್ಪಿಸಿಕೊಂಡು ಬಂದು ಮಟ್ಟಿಯೊಂದನ್ನು ಹೊಕ್ಕು ಕುಳಿತಿತ್ತು. ಪ್ರದೀಪ ಬಂದಿದ್ದನ್ನು ಕಂಡು ಮರಗಳ್ಳನೇ ಇರಬೇಕು, ತನ್ನ ಮೇಲೆ ದಾಳಿ ಮಾಡಲು ಬಂದಿರಬೇಕು ಎಂದು ಗುರ್ರೆಂದಿತ್ತು. ಪ್ರದೀಪನಿಗೆ ರಾಮುವಿನ ಪರಿಸ್ಥಿತಿ ಗೊತ್ತಾಗಿ `ರಾಮು... ಕುರೂಯ್..' ಎಂದ. ತನ್ನ ಹೆಸರು ಹಿಡಿದು ಕರೆದಿದ್ದನ್ನು ಕೇಳಿದ ರಾಮು ಇವನ್ಯಾರೋ ತನ್ನ ಪರಿಚಯದವನೇ ಇರಬೇಕು ಎಂದುಕೊಂಡು ನಿಧಾನವಾಗಿ ಹೊರಬಂದಿತು. ರಾಮು ನಿಧಾನವಾಗಿ ಬಂದಿದ್ದನ್ನು ನೋಡಿದ ಪ್ರದೀಪ ರಾಮುವಿಗೆ ದೊಡ್ಡ ಗಾಯವೇ ಆಗಿದೆ ಎಂದುಕೊಂಡ. ತಕ್ಷಣವೇ ಹತ್ತಿರಕ್ಕೆ ಬಂದ ರಾಮುವಿನ ತಲೆ ನೇವರಿಸಿದ. ಪರಿಚಿತರನ್ನು ಕಂಡ ರಾಮು ಒಮ್ಮೆಲೆ ಪ್ರದೀಪನ ಕೈ ನೆಕ್ಕಲು ಆರಂಭಿಸಿತು. ತಕ್ಷಣ ಪ್ರದೀಪ ತನ್ನ ಕೈಯಿಂದ ರಾಮುವನ್ನು ಎತ್ತಿಕೊಂಡು ವಾಪಾಸು ಹೊರಟ.
            ಕತ್ತಲ ದಾರಿಯಲ್ಲಿ ಕಾನನದಲ್ಲಿ ಹಲವಾರು ಸಾರಿ ಪ್ರದೀಪನಿಗೆ ದಾರಿ ತಪ್ಪಿತ್ತು. ಕಾಡಿನಲ್ಲಿ ಅಲೆದು ಅಲೆದು ಕೊನೆಗೊಮ್ಮೆ ದಂಟಕಲ್ಲಿಗೆ ಹೋಗುವ ದಾರಿ ಸಿಕ್ಕಿತ್ತು. ಅದೇ ದಾರಿಯಲ್ಲಿ ಬಹುದೂರ ಸಾಗಿದವನಿಗೆ ಕೊನೆಗೊಮ್ಮೆ ದಂಟಕಲ್ಲಿನ ಮನೆಗಳು ಕಾಣಿಸಿದ್ದವು. ದಡಬಡನೆ ಅತ್ತ ಹೆಜ್ಜೆ ಹಾಕಿದ. ದಂಟಕಲ್ಲಿನ ಮನೆಯನ್ನು ತಲುಪುವ ವೇಳೆಗೆ ಆಗಲೇ ಪ್ರದೀಪನಿಂದ ಧಾರಾಕಾರ ಬೆವರು ಸುರಿಯುತ್ತಿತ್ತು.
            ಕಾಡಿನ ದಾರಿಯಲ್ಲಿ ಓಡಿ ಬಂದಿದ್ದ ವಿನಾಯಕ, ವಿಜೇತಾ, ಪ್ರದೀಪ ಹಾಗೂ ವಿಷ್ಣು ಪ್ರದೀಪ ಬರದಿದ್ದುದನ್ನು ನೋಡಿ ಕಂಗಾಲಾಗಿ ಕಾಯುತ್ತ ಕುಳಿತಿದ್ದರು. ಕಾಡಿನಲ್ಲಿ ಕೇಳಿಸಿದ್ದ ಆರ್ತನಾದಕ್ಕೆ ದಂಟಕಲ್ ಊರಿನ ಜನರೂ ಕೂಡ ನಡು ರಾತ್ರಿಯಲ್ಲಿ ಎದ್ದು ಬಂದಿದ್ದರು. ಪ್ರದೀಪ ಬಂದಿದ್ದನ್ನು ಕಂಡು ವಿನಾಯಕನ ಬಳಗ ಕೊಂಚ ನಿರಾಳವಾದರೂ ರಕ್ತಮಯವಾಗಿದ್ದ ಆತನ ಕೈ ಹಾಗೂ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ನೋಡಿ ಹೌಹಾರಿದರು. ರಾಮುವನ್ನು ಹೊತ್ತುಕೊಂಡು ಬರುತ್ತಿದ್ದುದನ್ನೂ ನೋಡಿ ಮನೆಯವರೆಲ್ಲ ಆಲೋಚನೆಗೆ ಬಿದ್ದರು.

(ಮುಂದುವರಿಯುತ್ತದೆ...)
           

Thursday, July 9, 2015

ಅಘನಾಶಿನಿ ಕಣಿವೆಯಲ್ಲಿ-22

             ದೇವಸ್ಥಾನದಲ್ಲಿ ಪೂಜೆ ಮುಗಿಸಿ ಭಟ್ಟರ ಬಳಿ ಮಾತನಾಡಿ ಹಾಗೆಯೇ ಎಲ್ಲರೂ ವಾಪಾಸಾಗುತ್ತಿದ್ದರು. ವಿಕ್ರಮ, ವಿನಾಯಕ, ವಿಜೇತಾ, ಪ್ರದೀಪರು ದೇವಸ್ಥಾನದಿಂದ ಹೊರಗೆ ಬಂದಿದ್ದರು. ವಿಷ್ಣು ದೇವಸ್ಥಾನದಲ್ಲಿಯೇ ಇದ್ದವನು ಹಾಗೆಯೇ ಹೊರಬರುತ್ತಿದ್ದ. ಇದ್ದಕ್ಕಿದ್ದಂತೆ ದೇವಸ್ಥಾನದ ಬಾಗಿಲ ಪಟ್ಟಿ ಎಡವಿ ದಡಾರನೆ ಬಿದ್ದು ಬಿಟ್ಟ. ಆತ ಬಿದ್ದಿದ್ದನ್ನು ಕಂಡು ಎಲ್ಲರೂ ಒಮ್ಮೆ ಭೀತಿ ಪಟ್ಟುಕೊಂಡರು. ಇದೇನಿದು ಹೀಗಾಯಿತಲ್ಲ ಎಂದುಕೊಂಡರು. ಪ್ರದೀಪ ಬೇಗನೇ ಬಂದು ವಿಷ್ಣುವನ್ನು ಹಿಡಿದು ಎಬ್ಬಿಸಿದ. ಪುಣ್ಯಕ್ಕೆ ವಿಷ್ಣುವಿಗೆ ಏಟು ಬಿದ್ದಿರಲಿಲ್ಲ. ಕಾಲು ಎಡವಿ ಕವುಚಿ ಬಿದ್ದಿದ್ದ ಕಾರಣ ಒಮ್ಮೆ ಮೈ ಕೈ ಜಜ್ಜಿತ್ತು. ಕೆಲಕಾಲ ವಿಷ್ಣು ದೇವಸ್ಥಾನದ ಹೊರಗಿನ ಕಟ್ಟೆಯಲ್ಲಿ ಸಾವರಿಸುತ್ತ ಕುಳಿತ.
          ವಿಷ್ಣು ಬಿದ್ದಿದ್ದನ್ನು ನೋಡಿ ಭಟ್ಟರು ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ ದೇವಸ್ಥಾನದ ಒಳಕ್ಕೆ ಹೋಗಿ ಒಮ್ಮೆ ತುಪ್ಪದ ದೀಪವನ್ನು ಹಚ್ಚಿಟ್ಟರು. ದೇವಸ್ಥಾನದ ಬಾಗಿಲಿನಲ್ಲಿ ಬಿದ್ದಿದ್ದು ಅದು ಗಣಪನಿಗೆ ವಿರುದ್ಧವಾಗಿ ಬಿದ್ದಿದ್ದು ಮಾತ್ರ ಅಪಶಕುನದ ಹಾಗೇ ಅನ್ನಿಸಿತು. ಛೇ ಹೀಗಾಗಬಾರದಿತ್ತು ಎನ್ನಿಸಿತು. `ಯೇ ತಮಾ.. ಒಳಗೆ ಬಾ ಇಲ್ಲಿ.. ಒಂದ್ ಸಾರಿ ದೇವರ ಹತ್ತಿರ ಏನೂ ಕೆಡುಕು ಆಗದೇ ಇರಲಿ ಹೇಳಿ ಬೇಡ್ಕ.. ಒಳ್ಳೇದಾಗ್ತು..' ಎಂದರು ಭಟ್ಟರು.
         ` ನಾನು ಅಪಶಕುನ ನಂಬೋದಿಲ್ಲ ಬಿಡಿ..' ಎಂದ ವಿಷ್ಣು. ಆದರೂ ಭಟ್ಟರು ಹೇಳುದಂತೆ ದೇವರ ಎದುರು ಬಂದು ನಮಸ್ಕರಿಸಿದಂತೆ ಮಾಡಿದ. ವಿಷ್ಣುವಿನ ಉತ್ತರ ಮಾತ್ರ ಎಲ್ಲರಲ್ಲಿಯೂ ಆಶ್ಚರ್ಯವನ್ನು ತಂದಿತ್ತು. ಇದಾದ ಸ್ವಲ್ಪ ಸಮಯದ ನಂತರ ಎಲ್ಲರೂ ದೇವಾಲಯದಿಂದ ವಾಪಾಸು ಹೊರಟರು.
           ಮನುಷ್ಯ ತಾನೇ ಎಲ್ಲರಿಗಿಂತ ಮಿಗಿಲು ಎಂದುಕೊಳ್ಳುತ್ತಾನೆ. ಆದರೆ ಆಗಾಗ ಪ್ರಕೃತಿ ಅಥವಾ ನಮ್ಮ ಮೇಲಿರುವ ಕಾಣದ ಶಕ್ತಿಗಳು ಮುಂದೆ ಆಗುವ ಅನಾಹುತಗಳನ್ನು ಸೂಚ್ಯವಾಗಿ ತಿಳಿಸುತ್ತವೆ. ದೇವರ ಶಕ್ತಿಯನ್ನು ನಂಬುವವರು ಮಾತ್ರ ಇಂತಹ ಸೂಚನೆಗಳಿಂದಾಗಿ ಎಚ್ಚರಿಕೆಯನ್ನು ವಹಿಸಿಕೊಳ್ಳುತ್ತಾರೆ. ವಿಷ್ಣುವಿಗೂ ಕೂಡ ಮುಂದೆ ಆಗುವ ಯಾವುದೋ ಅಪಾಯವನ್ನು ಈ ರೀತಿಯ ಸೂಚನೆಯ ರೂಪದಲ್ಲಿ ದೇವರು ನೀಡಿದನೇ? ಗೊತ್ತಾಗಲಿಲ್ಲ. ಆದರೆ ಉಳಿದವರಿಗೆ ಮಾತ್ರ ಮುಂದೆ ಏನೋ ಅಪಾಯ ಬಂದು ಒದಗಲಿದೆ. ವಿಷ್ಣು ಯಾವುದೋ ತೊಂದರೆಯಲ್ಲಿ ಸಿಲುಕಿಕೊಳ್ಳಲಿದ್ದಾನೆ ಎನ್ನುವುದು ಮಾತ್ರ ಸ್ಪಷ್ಟವಾಗುತ್ತಿತ್ತು. ವಿಷ್ಣು ಇದನ್ನು ನಂಬಲು ತಯಾರಿರಲಿಲ್ಲ. ಇದೇ ಕಥೆಗೆ ತಿರುವನ್ನು ನೀಡಲಿದೆಯೇ? ಆಲೋಚನೆ ಮಾಡಿದಷ್ಟೂ ಗೋಜಲು ಗೋಜಲಾಗಿ ಪರಿಣಮಿಸುತ್ತಿತ್ತು.

****

          `ಎರಡು ತೇಗದ ಮರ ಅರ್ಜೆಂಟು ಬೇಕು. ನಮ್ಮೂರ ಕಾಡಿನಲ್ಲಿ ಇದ್ದಿದ್ದು ಸುಳ್ಳು. ಉಂಚಳ್ಳಿ ಜಲಪಾತದ ಬಳಿ ಬಹಳ ಇದೆ. ಅಲ್ಲಿಗೆ ಹೋಗಿ ಕಡಿದುಕೊಂಡು ಬನ್ನಿ. ನನ್ನ ಬಳಿ ಇರುವ ಅಡ್ರೆಸ್ ಗೆ ತಲುಪಿಸಿ..' ಮುಂದಾಳು ಸೂಚನೆ ನೀಡಿದ್ದ. ಜೊತೆಗಿದ್ದವರು ಒಪ್ಪಿಕೊಂಡಿದ್ದರು. `ನೋಡಿ ಮಾರ್ಗ ಮಧ್ಯದಲ್ಲಿ ಈಗ ಚೆಕ್ ಪೋಸ್ಟ್ ಮಾಡಲಾಗಿದೆ. ಯಾವುದೇ ವಾಹನಗಳನ್ನಾದರೂ ಬಿಗಿಯಾಗಿ ಪಹರೆ ಕಾಯಲಾಗುತ್ತಿದೆ. ಸ್ವಲ್ಪ ಅನುಮಾನ ಬಂದರೂ ಸಾಕು ಹಿಡಿದು ಹಾಕುತ್ತಾರೆ. ಹೇಗೆ ಸಾಗಿಸಬೇಕು, ಯಾವ ಥರ ಹೋಗಬೇಕು ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಿಲ್ಲ ತಾನೆ. ಒಳ ದಾರಿಗಳು, ಕಳ್ಳ ಮಾರ್ಗಗಳೆಲ್ಲ ಗೊತ್ತಿದೆಯಲ್ಲ..' ಎಂದ ಬಾಸ್. ಎಲ್ಲರೂ ತಲೆಯಾಡಿಸಿದರು.
          ಇದಾಗಿ ಒಂದು ದಿನ ಕಳೆಯುತ್ತಿದ್ದಂತೆಯೇ ಉಂಚಳ್ಳಿ ಜಲಪಾತದ ಬಳಿಯ ಕಾಡಿನಲ್ಲಿ ಎರಡು ಬೃಹತ್ ತೇಗದ ಮರಗಳು ಧರಗುರುಳಿದ್ದವು. ದೊಡ್ಡದೊಂದು ಟ್ರಕ್ಕಿನಲ್ಲಿ ಯಾವುದೋ ಪಾರ್ಸಲ್ಲನ್ನು ತುಂಬಿಕೊಂಡು ಹೋಗಲಾಗುತ್ತಿದೆ ಎನ್ನುವಂತೆ ಮಾಡಿ ಅದರೊಳಕ್ಕೆ ತೇಗದ ಮರದ ತುಂಡುಗಳನ್ನು ತುಂಬಿ ಮುಂದಕ್ಕೆ ಒಯ್ಯಲಾಯಿತು. ಟ್ರಕ್ಕಿನ ಚಹರೆಯನ್ನು ಬದಲಿಸಿದ್ದ ಕಾರಣ ಮುಖ್ಯ ರಸ್ತೆಯಲ್ಲಿಯೇ ಹೋಗಬೇಕು ಎನ್ನುವ ತೀರ್ಮಾನ ಕಳ್ಳ ಸಾಗಾಣಿಕೆದಾರರದ್ದಾಗಿತ್ತು. ಅಲ್ಲೊಂದು ಕಡೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇತ್ತು. ಟ್ರಕ್ ಹತ್ತಿರ ಬರುತ್ತಿದ್ದಂತೆಯೇ ಟ್ರಕ್ಕನ್ನು ಇಬ್ಬರು ಗಾರ್ಡುಗಳು ಕೈ ಅಡ್ಡ ಹಾಕಿ ನಿಲ್ಲಿಸಿ ಬಿಟ್ಟರು. ಟ್ರಕ್ಕಿನಲ್ಲಿದ್ದವರಿಗೆ ಒಮ್ಮೆ ಭಯವಾಯಿತಾದರೂ ಜೊತೆಯಲ್ಲಿದ್ದವನೊಬ್ಬ ರೇಶನ್ ಸಾಗಿಸುತ್ತಿದ್ದೇವೆ ಎಂದ.
          ಆದರೆ ಗಾರ್ಡುಗಳಿಗೆ ಮಾತ್ರ ಅನುಮಾನ ಬಂದಂತಾಯಿತು. ಗಾಡಿ ನಿಲ್ಲಿಸಿ ಎಂದವರೇ ಟ್ರಕ್ಕಿನ ಹಿಂಭಾಗಕ್ಕೆ ಹೋಗಿ ತಪಾಸಣೆ ನಡೆಸಲು ಮುಂದಾದರು. ಕೂಡಲೇ ಬೆದರಿಸ ಕಳ್ಳಸಾಗಾಣಿಕೆದಾರರು ಅರಣ್ಯ ಇಲಾಖೆಯವರು ಹಾಕಿದ್ದ ಚೆಕ್ ಪೋಸ್ಟಿನ ಅಡ್ಡ ಕಂಬವನ್ನು ದಡಾರನೆ ಟ್ರಕ್ಕಿನ ಮೂಲಕ ಕಿತ್ತು ಮುಂದಕ್ಕೆ ಗಾಡಿಯನ್ನು ಚಲಾಯಿಸಿಯೇ ಬಿಟ್ಟರು. ತಕ್ಷಣ ಎಚ್ಚೆತ್ತುಕೊಂಡ ಗಾರ್ಡುಗಳು ಟ್ರಕ್ಕಿನ ನಂಬರ್ ಬರೆದುಕೊಂಡರು. ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಲು ಮುಂದಾದರು. ವಯರ್ ಲೆಸ್ ಮೂಲಕ ಹತ್ತಿರದ ಕಚೇರಿಗೆ ವಿಷಯವನ್ನು ತಿಳಿಸಿದರು. ಟ್ರಕ್ಕು, ಬಣ್ಣ, ಟ್ರಕ್ಕಿನಲ್ಲಿ ಏನನ್ನೋ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಕೂಡಲೇ ಹಿಡಿಯಿರಿ ಎಂದಿದ್ದಷ್ಟೇ ಅಲ್ಲದೇ ತಮ್ಮ ಬಳಿ ಇದ್ದ ಬೈಕಿನ ಮೂಲಕ ಲಾರಿಯನ್ನು ಬೆನ್ನತ್ತಿದರು. ಆ ನಂತರ ನಡೆದಿದ್ದು ಮಾತ್ರ ಸಿನೆಮಾ ಮಾದರಿಯ ಕಣ್ಣಾಮುಚ್ಚಾಲೆ. ಲಾರಿಯನ್ನು ಹಿಂಬಾಲಿಸಿ ಹಿಡಿಯಲು ಅನೇಕ ಸಾರಿ ಪ್ರಯತ್ನಿಸಿ ಸೋತರು ಗಾರ್ಡುಗಳು. ಕೊನೆಗೊಮ್ಮೆ ಟ್ರಕ್ಕಿನಲ್ಲಿದ್ದವರು ಏನೋ ಟ್ರಿಕ್ಕು ಮಾಡಿದರು. ಇದರಿಂದಾಗಿ ಟ್ರಕ್ಕನ್ನು ಬೆನ್ನತ್ತಿ ಹೋಗುತ್ತಿದ್ದ ಗಾರ್ಡುಗಳು ರಸ್ತೆ ಪಕ್ಕದ ಕಾಲುವೆಯಲ್ಲಿ ದಬಾರನೆ ಬಿದ್ದರು. ಬಿದ್ದವರೇ ತಮಗಾಗಿದ್ದ ಗಾಯವನ್ನೂ ನೋಡಿಕೊಳ್ಳದೇ ಹಿಗ್ಗಾ ಮುಗ್ಗಾ ಬಯ್ಯಲು ಆರಂಬಿಸಿದರು. ವೇಗವಾಗಿ ಹೋಗುತ್ತಿದ್ದ ಟ್ರಕ್ ರಸ್ತೆಯ ತಿರುವಿನಲ್ಲಿ ಕಣ್ಮರೆಯಾಯಿತು.

***

             ದೇಗುಲ ದರ್ಶನ ಮಾಡಿದವರು ಮನೆಗೆ ವಾಪಾಸಾಗುತ್ತಿದ್ದ ದಾರಿಯಲ್ಲಿ ಕಾಡನ್ನು ವೀಕ್ಷಣೆ ಮಾಡುತ್ತ ಬರುತ್ತಿದ್ದರು. ದಾರಿಯ ಇಕ್ಕೆಲಗಳಲ್ಲಿ ಅದೆಷ್ಟೋ ದೈತ್ಯ ಮರಗಳನ್ನು ಕಡಿದ ದೃಶ್ಯ ಕಾಣಿಸುತ್ತಿತ್ತು. ಮರಗಳ ಬುಡಗಳಷ್ಟೇ ನಿಂತಿದ್ದವು. ದೊಡ್ಡ ದೊಡ್ಡ ಬೊಡ್ಡೆಗಳಿದ್ದವು. ಬರುತ್ತಿದ್ದವರೆಲ್ಲ ಒಮ್ಮೆ ಛೇ ಎಂದುಕೊಂಡು ತಲೆಯನ್ನು ಕೊಡವಿದರು. ಬಂದ ದಾರಿಯಲ್ಲಿಯೇ ನದಿಯನ್ನು ದಾಟಿ ಮುನ್ನಡೆದರು. ವಿಕ್ರಮ ಹಾಗೂ ವಿಜೇತಾರಿಗೆ ಮಾತ್ರ ತಾವು ಮಾಡಬೇಕೆಂದುಕೊಂಡಿದ್ದ ಕೆಲಸ ಮುನ್ನಡೆಯುತ್ತಿಲ್ಲ ಎನ್ನುವ ತಲೆಬಿಸಿ ಹೆಚ್ಚಿತ್ತು. ಯಾವುದೋ ಒಂದು ಜಾಡನ್ನು ಹುಡುಕಿ, ಇನ್ನೇನು ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಛೇ ಅದಲ್ಲ ಇದು  ಬೇರೆ ಮಾರ್ಗ ಬದಲಾಗುತ್ತಿತ್ತು. ಹೊಸ ಪಯಣವನ್ನು ಹುಡುಕಬೇಕಾಗುತ್ತಿತ್ತು. ವಿಕ್ರಮ ಹಾಗೂ ವಿಜೇತಾರು ಅದೆಷ್ಟು ಸಾರಿ ತಲೆ ಕೊಡವಿಕೊಂಡಿದ್ದರೋ.
               ಉಳಿದೆಲ್ಲ ಕೆಲಸವನ್ನು ಖೈದು ಮಾಡಿ ತಾವು ಬಂದ ಕೆಲಸಕ್ಕೇ ಮೊದಲು ಪ್ರಾಶಸ್ತ್ಯವನ್ನು ನೀಡಬೇಕು ಎಂದುಕೊಳ್ಳುತ್ತಿದ್ದಾಗಲೇ ಪಕ್ಕದ ಮನೆಯ ಗಣಪಜ್ಜ ಓಡಿ ಬಂದಿದ್ದ. ಕೈಯಲ್ಲಿ ಕೆಲವು ಕಾಗದಪತ್ರಗಳಿದ್ದವು. ಅಜ್ಜ ಬಂದವರೆ ಹೋಗಿ ಬಂದ್ರಾ ದೇವಸ್ತಾನಕ್ಕೆ..' ಎಂದರು. ಎಲ್ಲರೂ ತಲೆಯಾಡಿಸಿದರು. ಕೈಯಲ್ಲಿದ್ದ ಕಾಗದಪತ್ರವನ್ನು ತೆಗೆಯುತ್ತಾ `ನೋಡಿ. ಯನ್ನ ಅಪ್ಪಯ್ಯ ಗಣೇಶ ಹೆಗಡೆ ಅವರು ಅಡಿಕೆಯಿಂದ ಚಹಾ ಹಾಗೂ ಕಾಫಿಯ ತರಹ ಪೇಯವನ್ನು ತಯಾರು ಮಾಡಿದ್ದರಂತೆ. ಮೈಸೂರಿನ ಆಹಾರ ಗುಣಮಟ್ಟ ಪರಿಷ್ಕರಣ ಮಂಡಳಿಯಿಂದ ಪ್ರಮಾಣ ಮತ್ರ ಕೂಡ ಬಂದಿದೆ ನೋಡಿ.. ಏನೋ ಹುಡುಕುತ್ತಿದ್ದೆ. ಇದು ಸಿಕ್ಕಿತು. ತಕ್ಷಣ ನಿಮಗೆ ತೋರಿಸೋಣ ಎಂದು ತೆಗೆದುಕೊಂಡು ಬಂದಿ..' ಎಂದ ಗಣಪಜ್ಜ.
          ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಯುವ ವಿಜ್ಞಾನಿಯೊಬ್ಬರು ಅಡಿಕೆಯಿಂದ ಪೇಯವನ್ನು ಕಂಡು ಹಿಡಿದಿದ್ದಾರೆ ಎನ್ನುವುದನ್ನು ಓದಿ ತಿಳಿದಿದ್ದ ವಿಜೇತಾ ಹಾಗೂ ವಿಕ್ರಮರಿಗೆ ಇದರಿಂದ ಅಚ್ಚರಿಯಾಯಿತು. ಅರ್ಧ ಶತಕದಷ್ಟು ವರ್ಷಗಳ ಹಿಂದೆಯೇ ಮಲೆನಾಡಿನ ಹಳ್ಳಿ ಮೂಲೆಯಲ್ಲಿ ಅಜ್ಜನೊಬ್ಬ ತಯಾರಿಸಿದ್ದ ಅಡಿಕೆ ಪೇಯ ಇತಿಹಾಸದ ಕಾಲಗರ್ಭದೊಳಗೆ ಮರೆಯಾಗಿ ಹೋಗಿತ್ತು. ಮತ್ತೆ ಎಲ್ಲೋ ಏನೋ ನೆನಪುಗಳು ಮರುಕಳಿಸಿದ ಹಾಗಾಯಿತು. ದಂಟಕಲ್ ಎಂಬ ಹಳ್ಳಿಯಲ್ಲಿ ಯಾವುದೋ ಕಾಲದಲ್ಲಿ ಏನೇನನ್ನೆಲ್ಲಾ ಮಾಡಿದ್ದರಲ್ಲಾ ಎಂದು ಯುವ ಪಡೆ ಹುಬ್ಬೇರಿಸುವ ಹಾಗೆ ಆಯಿತು.
          ಗಣೇಶಜ್ಜ ನ ಹಲವಾರು ಮುಖಗಳ ಅನಾವರಣವಾದಂತಾಗಿತ್ತು. ಸ್ವಾತಂತ್ರ್ಯ ಹೋರಾಟಗಾರನಾಗಿ, ಸಮಾಜ ಸೇವಕನಾಗಿ, ಶಿಕ್ಷಣ ಪ್ರೇಮಿಯಾಗಿ, ಕೃಷಿ ವಿಜ್ಞಾನಿಯಾಗಿ ಗಣೇಶಜ್ಜ ಅನಾವರಣಗೊಂಡಿದ್ದ. ಬಾದಾಮಿ ತೋಟ ಮಾಡಿದ್ದ, ಚಹಾ ಗಿಡಗಳನ್ನು ಬೆಳೆದಿದ್ದ, ಅನಂತ ಭಟ್ಟನ ಅಪ್ಪೆ ಮಿಡಿ ತಳಿ ರಕ್ಷಣೆ ಮಾಡಿದ್ದ, ಅಡಿಕೆಯ ಮೌಲ್ಯವರ್ಧನೆಯಲ್ಲಿ ತೊಡಗಿದ್ದ, ಬಹು ಉತ್ಪನ್ನ ತಯಾರಿಕೆಗೆ ಮುಂದಾಗಿದ್ದ. ಇವೆಲ್ಲ ಯುವ ಪಡೆಯ ಮನಸ್ಸನ್ನು ಸೂರೆಗೊಳಿಸಿತ್ತು. ಎಲ್ಲರೂ ಅಜ್ಜನಿಗೆ ನಮಿಸಿದರು.

(ಮುಂದುವರಿಯುತ್ತದೆ)

(ಗಣೇಶಜ್ಜ ಮಾಡಿದ್ದೆಲ್ಲವೂ ನಿಜವಾದ ಘಟನೆಗಳಾಗಿವೆ. ಯಾವುದೇ ಕಲ್ಪನೆಗಳಲ್ಲ)

Wednesday, July 8, 2015

ಪುನೀತೆ

ಬಾಳಿನಾ ಹರಹಿನಲಿ
ಬದುಕುವುದ ಕಲಿತೆ
ಹೃದಯಾದಾಕಾಶದಲಿ
ಪ್ರೀತಿಯನು ಅರಿತೆ ||

ನೋವಿನ ನಡುವಿನಲಿ
ನಗುವುದನು ಕಲಿತೆ
ನಗು ನಗುವ ಜೊತೆಯಲ್ಲಿ
ಅಳುವುದನು ಮರೆತೆ ||

ಬದುಕಿನ ಬೀದಿಯಲಿ
ಎಡವುವುದ ಮರೆತೆ
ಎಡವಿ ಬಿದ್ದೆಡೆಯಲ್ಲಿ
ಬರೆದೆ ನಾ ಕವಿತೆ ||

ಗೆಲುವಿನ ಚಣದಲ್ಲಿ
ಎಲ್ಲವನೂ ಸೋತೆ
ಸೋತು ಬಸವಳಿದಾಗ
ಗೆಲ್ಲುವುದನು ಕಲಿತೆ ||

ಎಲ್ಲವನು ಮರೆತಾಗ
ಎಲ್ಲವನು ಕಲಿತೆ
ಯಾವುದೋ ಘಟ್ಟದಲಿ
ಆಗಿರುವೆ ಪುನೀತೆ ||

***

(ಈ ಕವಿತೆಯನ್ನು ಬರೆದಿರುವುದು 13-11-2005ರಂದು ದಂಟಕಲ್ಲಿನಲ್ಲಿ)
(2005-06ನೇ ಸಾಲಿನ ಎಂ.ಇ.ಎಸ್. ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ)

Monday, July 6, 2015

ಅಘನಾಶಿನಿ ಕಣಿವೆಯಲ್ಲಿ-21

            ದಂಟಕಲ್ಲಿನಲ್ಲಿ ಪ್ರತಿಯೊಬ್ಬರೂ ಪೊಲೀಸರು ಬಂಧಿಸಿದ ಕಾರಣವನ್ನು ಕೇಳುವವರೇ ಆಗಿದ್ದರು. ಅವರೆಲ್ಲರಿಗೂ ಕಾರಣವನ್ನು ಹೇಳುವಷ್ಟರಲ್ಲಿ ಸುಸ್ತೋ ಸುಸ್ತು. ಪೊಲೀಸರ ದರ್ಪ, ಪ್ರದೀಪನ ಸಮಯಪ್ರಜ್ಞೆ, ಗಪ್ಪಜ್ಜನ ಪ್ರೀತಿ ಇತ್ಯಾದಿಗಳೆಲ್ಲ ಬಾಯಿಂದ ಬಾಯಿಗೆ ರಸವತ್ತಾಗಿ, ರೋಚಕವಾಗಿ ಹರಿದು ಬಂದಿದ್ದು ಮಾತ್ರ ವಿಶೇಷವಾಗಿತ್ತು. ಮಲೆನಾಡಿನ ಹಳ್ಳಿಗೆ ಬಂದಿದ್ದ ಯುವ ಪಡೆ ಮಲೆನಾಡಿನ ತುಂಬೆಲ್ಲ, ಅಷ್ಟೇ ಏಕೆ ರಾಜ್ಯದಾದ್ಯಂತ ಒಂದೇ ಕ್ಷಣದಲ್ಲಿ ಹೆಸರು ಮಾಡಿದ್ದು ಮಾತ್ರ ಸುಳ್ಳಲ್ಲ. ಪೊಲೀಸರಿಗೆ ಅದ್ಯಾರು ಮಾಹಿತಿ ನೀಡಿದ್ದರೋ ಏನೋ, ತಮ್ಮನ್ನು ನಕ್ಸಲರು ಎಂದುಕೊಂಡು ಬಂಧಿಸಿದ್ದು ಮಾತ್ರ ವಿಚಿತ್ರವಾಗಿತ್ತು. ಆದರೂ ಈ ಬಂಧನದ ಹಿಂದೆ ಇನ್ಯಾವುದೋ ಸಂಚಿದೆ ಎಂದು ವಿಕ್ರಮನಿಗೆ ಒಮ್ಮೆ ಅನ್ನಿಸಿತ್ತಾದರೂ ತನ್ನೆದುರು ಇರುವ ಅಗೋಚರ ಶತ್ರು ಇಷ್ಟೆಲ್ಲ ಮುಂದಕ್ಕೆ ಯೋಚಿಸಿರಲಾರ ಎಂದುಕೊಂಡ.
               ಅದ್ಯಾವುದೋ ದೊಡ್ಡ ಕಂಟಕ ಇಷ್ಟು ಚಿಕ್ಕದರಲ್ಲೇ ಹೋಯಿತು ಎಂದುಕೊಂಡರು ಎಲ್ಲರೂ. ಖಂಡಿತವಾಗಿಯೂ ಗುಡ್ಡೇತೋಟದ ಕೋಟೆ ವಿನಾಯಕನ ಶ್ರೀರಕ್ಷಯಿಂದ ದೊಡ್ಡ ಆಪತ್ತು ಚಿಕ್ಕದರಲ್ಲಿಯೇ ಪರಿಹಾರವಾಗಿದೆ ಎಂದುಕೊಂಡರು ಎಲ್ಲರೂ. ಮರುದಿನ ಗುಡ್ಡೇತೋಟಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿ ಬರಬೇಕು ಎಂದು ನಿಶ್ಚಯಿಸಿಕೊಂಡರು.

000000

              `ಗುಡ್.. ಒಳ್ಳೆಯಕ ಕೆಲಸ ಮಾಡಿದ್ದಿರಿ. ಆದರೆ ಇಷ್ಟು ಸುಲಭದಲ್ಲಿ ಅವರು ತಪ್ಪಿಸಿಕೊಂಡು ಬರುತ್ತಾರೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ ನೋಡಿ..' ಎಂದ ಒಬ್ಬಾತ.
             `ನಾವೇನೋ ಸರಿಯಾದ ಮಾಹಿತಿಯನ್ನೇ ಕೊಟ್ಟಿದ್ದೆವು. ಪೊಲೀಸರ ಬಳಿ ದಂಟಕಲ್ಲಿಗೆ ಬಂದಿದ್ದವರು ನಕ್ಸಲರು ಎಂದೇ ಹೇಳಿದ್ದೆವು. ಅಷ್ಟೇ ಅಲ್ಲದೇ ಮೀಡಿಯಾಕ್ಕೂ ತಿಳಿಸಿ ಆಗಿತ್ತು. ಆದರೆ ಬಂಧಿಸಿದವರಲ್ಲಿ ಒಬ್ಬಾತ ಮಾತ್ರ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಹೊಂದಿದ್ದಾನೆ. ಅವನೇ ಇಷ್ಟು ಬೇಗ ಎಲ್ಲರೂ ವಾಪಾಸು ಬರಲು ಪ್ರಮುಖ ಕಾರಣ ನೋಡಿ..' ಎಂದ ಇನ್ನೊಬ್ಬಾತ.
           `ಓಹ್ ಹೌದಾ. ಯಾವುದಕ್ಕೂ ಹುಷಾರಾಗಿರಿ. ಯಾವುದೇ ಅವಕಾಶಕ್ಕಾಗಿ ಕಾಯುತ್ತಿರಿ. ಅನುಕೂಲಕರ ಅವಕಾಶ ಸಿಕ್ಕ ತಕ್ಷಣ ಬಂದಿದ್ದವರನ್ನು ಹಣಿದು ಹಾಕಿ. ಯಾಕೋ ಅವರು ಸುಮ್ಮನೆ ಬಂದಿಲ್ಲ ಎಂಬ ಅನುಮಾನ ಬರುತ್ತಿದೆ. ಪಾತರಗಿತ್ತಿ ಸರ್ವೆ ಮಾಡುವುದು, ಕಾಡು ಸುತ್ತುವುದು ಕೇವಲ ನೆಪ ಇರಬೇಕು. ನಾವು ಎಲ್ಲದಕ್ಕೂ ಸಜ್ಜಾಗಿ ಇರೋಣ. ಸದವಕಾಶ ಸಿಕ್ಕ ತಕ್ಷಣ ಅವರನ್ನು ವಾಪಾಸು ಕಳಿಸುವ ಕೆಲಸ ಮಾಡೋಣ..'ಎಂದು ಮೊದಲನೆಯವನು ಹೇಳಿದ್ದಕ್ಕೆ ಎರಡನೆಯವರು ಒಪ್ಪಿಗೆ ಸೂಚಿಸಿದ. ತಲೆಯಲ್ಲಾಡಿಸಿದ.
            ವಿಕ್ರಮ ಹಾಗೂ ಆತನ ಜೊತೆಗಾರರು ದಂಟಕಲ್ ಹಾಗೂ ಸುತ್ತಮುತ್ತಲ ಹಳ್ಳಿಗೆ ಬಂದಿರುವುದನ್ನು ಗಮನಿಸುವವರೂ ಇದ್ದಾರೆ ಎನ್ನುವುದು ಮಾತ್ರ ಸಾಬೀತಾಗಿತ್ತು. ಅವಕಾಶ ಸಿಕ್ಕರೆ ವಿಕ್ರಮನ ತಂಡವನ್ನು ಹಣಿದು ಹಾಕಲೂ ಸನ್ನದ್ದರಾಗಿದ್ದರು. ಆದರೆ ವಿಕ್ರಮನ ಗುಂಪಿಗೆ ಇದರ ಅರಿವಿದೆಯಾ? ಬಲ್ಲವರ್ಯಾರು?

++++++

          ಮುಂಜಾನೆದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಎಲ್ಲರೂ ಗುಡ್ಡೇತೋಟಕ್ಕೆ ತೆರಳಲು ಸಜ್ಜಾದರು. ಮನೆಯಿಂದ ಹೊರಟು ಅಘನಾಶಿನಿ ನದಿಗುಂಟ ಹಾದು ಬಂದು ಗದ್ದೆಯ ಮನೆ ಬಳಿ ತೆರಳಿದರು. ಅಲ್ಲಿಯೇ ಇರುವ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿ ವಿಶಾಲವಾಗಿ ಹರಿಯುತ್ತಾಳೆ. ಉಳಿದ ಕಡೆಗಳಲ್ಲಿ ಎದೆ ಮಟ್ಟವೋ, ಕುತ್ತಿಗೆ ಮಟ್ಟವೋ ಆಳವಾಗಿ ಹರಿಯುವ ಅಘನಾಶಿನಿ ನದಿ ಕಾಕಾಲ ಗದ್ದೆ ಎಂಬಲ್ಲಿ ಮಾತ್ರ ಪಾದ ಮುಳುಗುವಷ್ಟು ಮಾತ್ರ ಆಳವಾಗಿದ್ದಾಳೆ. ವಿಶಾಲವಾಗಿ ಹರಿಯುವ ಕಾರಣ ಕಾಕಾಲ ಗದ್ದೆಯಲ್ಲಿ ನದಿ ಆಳವಾಗಿಲ್ಲ. ಚಿಕ್ಕ ಮಕ್ಕಳೂ ಕೂಡ ಸಲೀಸಾಗಿ ನದಿಯನ್ನು ನಡೆದುಕೊಂಡು ದಾಟಬಹುದು. ಅಷ್ಟೇ ಏಕೆ ಕೆಲವು ಉತ್ಸಾಹಿ ಹೈದರು ಈ ಕಾಕಾಲ ಗದ್ದೆಯಲ್ಲಿಯೇ ತಮ್ಮ ಬೈಕನ್ನೂ ದಾಟಿಸುವ ಸಾಹಸ ಮಾಡುತ್ತಾರೆ. ಈ ಪ್ರದೇಶಕ್ಕೆ ಕರೆದುಕೊಂಡು ಬಂದ ವಿನಾಯಕ ಹೊಳೆಯನ್ನು ದಾಟಬೇಕು ಎಂದ. ಅಘನಾಶಿನಿಯನ್ನು ದಾಟಲೋಸುಗ ಎಲ್ಲರೂ ನದಿಯಲ್ಲಿ ಕಾಲಿಟ್ಟು. ನದಿ ನೀರು ಅದೆಷ್ಟು ತಣ್ಣಗಿತ್ತು ಎಂದರೆ ಪಾದದ ಮೂಲಕ ನೆತ್ತಿಯೂ ತಂಪಾದಂತೆ ಅನ್ನಿಸಿತು.
            ವಿಜೇತಾ ಹಾಗೂ ಮಹಿಳಾ ಮಣಿಯರು ತಂಪಾದ ನೀರಿನಲ್ಲಿ ಆಡಲು ಮುಂದಾಗಿದ್ದರು. ಆದರೆ ಮೊದಲು ದೇಗುಲ ದರ್ಶನ ಮಾಡಿ ನಂತರ ಮುಂದಿನ ಕೆಲಸ ಎಂದುಕೊಂಡು ನದಿಯನ್ನು ಬೇಗನೇ ದಾಟಲು ಮುಂದಾದರು. ನದಿಯನ್ನು ದಾಟಿದಂತೆಯೇ ದೊಡ್ಡದೊಂದು ಗದ್ದೆ ಬಯಲು ಸಿಗುತ್ತದೆ. ಹಿತ್ತಲಕೈ ಗ್ರಾಮಕ್ಕೆ ಸೇರಿದ ಈ ಗದ್ದೆ ಬಯಲಿನ ಪಕ್ಕದಲ್ಲಿಯೇ ಒಂದೆರಡು ಮನೆಗಳಿರುವ ಕಾಕಾಲಗದ್ದೆ ಎನ್ನುವ ಹಳ್ಳಿ ಇದೆ. ಇಲ್ಲಿ ಹಾದು ಮುಂದಕ್ಕೆ ಅಡಿ ಇಟ್ಟಂತೆಲ್ಲ ನಿಧಾನವಾಗಿ ಕಾಡು ಆವರಿಸತೊಡಗಿತು. ಸರಿಸುಮಾರು 1 ಕಿ.ಮಿ ದೂರದವರೆಗೆ ಕಾಡಿನ ದಾರಿಯಲ್ಲಿ ನದಿಗೆ ಸಮಾನಾಂತರವಾಗಿ ಸಾಗಿದ ನಂತರ ದೊಡ್ಡದೊಂದು ಗುಡ್ಡ ಎದುರಾಯಿತು.
            `ಈ ಗುಡ್ಡದ ಮೇಲೆಯೇ ಗುಡ್ಡೇತೋಟ ಊರಿದೆ. ಇಲ್ಲಿಯೇ ಕೋಟೆ ವಿನಾಯಕನ ದೇವಸ್ಥಾನ ಇದೆ..' ಎಂದ ವಿನಾಯಕ. ಎಲ್ಲರೂ ಗುಡ್ಡವನ್ನು ಏರಲು ಉತ್ಸುಕರಾದರು. ಎದೆಯ ಮಟ್ಟಕ್ಕಿದ್ದ ಗುಡ್ಡವನ್ನು ಏರುವುದು ಸುಲಭವಲ್ಲ ನೋಡಿ. ಪ್ರತಿಯೊಬ್ಬರಿಗೂ ಏದುಸಿರುವ ಬರುತ್ತಿತ್ತು. ಆದರೂ ಗುಡ್ಡವನ್ನೇರುವ ಛಲ ಯಾರಲ್ಲೂ ಕಡಿಮೆಯಾಗಿರಲಿಲ್ಲ. ದೇಹಕ್ಕೆ ಸುಸ್ತಾಗುತ್ತಿತ್ತದ್ದರೂ ಅದನ್ನು ತೋರಿಸಿಕೊಳ್ಳದೇ ಮುಂದಕ್ಕೆ ಹೋಗುತ್ತಿದ್ದರು.
           ಇದ್ದಕ್ಕಿದ್ದಂತೆ `ಅರೇ.. ಅಲ್ಲಿ ನೋಡಿ.. ಅದು ಕಾಡುಕೋಣ ಅಲ್ಲವಾ..' ಎಂದ ಪ್ರದೀಪ.
           ಪ್ರದೀಪ ತೋರಿಸಿದತ್ತ ಎಲ್ಲರೂ ದೃಷ್ಟಿ ಹಾಯಿಸಿದರು. ` ಹೌದು.. ಕಾಡುಕೋಣದ ಹಿಂಡು ಅಲ್ಲಿ ಹುಲ್ಲು ತಿನ್ನುತ್ತಿದೆ ನೋಡಿ.. ಆರು ಇದೆ. ಅಲ್ಲಲ್ಲ.. ಎಂಟು ಇರಬೇಕು ನೋಡಿ..' ಎಂದ ವಿನಾಯಕ.
            ಸನಿಹದಲ್ಲೇ ಇದ್ದ ನೀರಿನ ಒರತೆಯಲ್ಲಿ ಕಾಡೆಮ್ಮೆಗಳ ಹಿಂಡೊಂದು ಹುಲ್ಲು ತಿನ್ನುತ್ತ ಆರಾಮಾಗಿ ನಿಂತಿತ್ತು. ದೇವಸ್ಥಾನ ನೋಡಲು ಹೊರಟಿದ್ದವರನ್ನು ಕಾಡೆಮ್ಮೆಗಳು ಒಮ್ಮೆ ತಲೆಯೆತ್ತಿ ನೋಡಿದವು. ಯುವ ಪಡೆಯ ಮಾತು, ಕತೆಗಳು ಕಾಡೆಮ್ಮೆಗಳಲ್ಲಿಯೂ ವಿಸ್ಮಯ ಮೂಡಿಸಿರಬೇಕು. ಹಾಗೆಯೇ ಕೆಲಕಾಲ ತಲೆ ಎತ್ತಿ ನೋಡುತ್ತಿದ್ ಅವುಗಳು ಯುವ ಪಡೆಯಿಂದ ತಮಗೆ ಯಾವುದೇ ಅಪಾಯ ಆಗುವುದಿಲ್ಲ ಎಂದುಕೊಂಡಿರಬೇಕು. ನಿಧಾನವಾಗಿ ತಮ್ಮ ಕೆಲಸದಲ್ಲಿ ತಾವು ನಿರತವಾದವು. ಯುವ ಪಡೆ ಕೂಡ ಕೆಲ ಕಾಲ ಕಾಡೆಮ್ಮೆಗಳನ್ನು ನೋಡಿ, ಅವುಗಳ ಗಾತ್ರ, ನಿಲುವುಗಳನ್ನೆಲ್ಲ ಲೆಕ್ಖಹಾಕಿ, ಅವುಗಳ ಬಗ್ಗೆ ಮಾತನಾಡುತ್ತ ಮುಂದಕ್ಕೆ ಹೆಜ್ಜೆ ಇಟ್ಟಿತು.
           ಗುಡ್ಡೇತೋಟದ ದೇವಸ್ಥಾನವನ್ನು ದರ್ಶನ ಮಾಡಬೇಕೆಂದರೆ ಎದೆಯ ಎತ್ತರದ ಗುಡ್ಡವನ್ನು ಏರುವುದು ಅನಿವಾರ್ಯ. ಗುಡ್ಡವನ್ನು ಏರಿದ ನಂತರ ಸ್ವಲ್ಪ ವಿಶಾಲ ಎನ್ನಬಹುದಾದ ಸ್ಥಳ ಸಿಕ್ಕಿತು. ಬಯಲಿನಲ್ಲಿ ಒಂದು ಕಡೆ ಗದ್ದೆಯನ್ನು ಬೆಳೆಯಲಾಗಿದದ್ದರೆ ಇನ್ನೊಂದು ಕಡೆಯಲ್ಲಿ ಹಳೆಯದು ಎನ್ನುವಂತಹ ದೇವಾಲಯ ಭವ್ಯವಾಗಿ ನಿಂತಿತ್ತು. ದೇಗುಲದ ಎದುರು ಒಂದು  ದೇವಕಣಗಿಲೆ ಮರವಿತ್ತು. ಅದರಲ್ಲಿ ಬಿಳಿಯ ಬಣ್ಣದ ಹೂವುಗಳು ಸುವಾಸನೆಯನ್ನು ಬೀರುತ್ತ ಅರಳಿ ನಿಂತಿದ್ದವು. ದೇಗುಲದ ಹಿಂಭಾಗದಲ್ಲಿ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಯಾದ ಭೋಜನ ಶಾಲೆಯಿತ್ತು.
            ಗುಡ್ಡೇತೋಟದ ಕೋಟೆ ವಿನಾಯಕನ ಸನ್ನಿಧಾನದ ಒಳಗೆ ಎಲ್ಲರೂ ಕೈ ಕಾಲುಗಳನ್ನು ತೊಳೆದುಕೊಂಡು ಕಣ್ಣಿಗೆ ನೀರನ್ನು ಹಚ್ಚಿಕೊಂಡು ಮುನ್ನಡೆದರು. ದೇಗುಲದ ಅರ್ಚಕರು ಆಗಲೇ ಪೂಜೆಯಲ್ಲಿ ನಿರತರಾಗಿದ್ದರು. ದೇಗುಲದ ಒಳಕ್ಕೆ ಕಾಲಿರಿಸಿದವರೇ ದೇವಾಲಯವನ್ನು ನಾಲ್ಕೈದು ಸಾರಿ ಸುತ್ತು ಹೊಡೆದು ಗಂಟೆಯನ್ನು ಭಾರಿಸಿ ದೇವರಿಗೆ ಉದ್ದಾಂಡ ನಮಸ್ಕಾರವನ್ನೂ ಮಾಡಿದರು. ಇವರಿಗಾಗಿಯೇ ಕಾಯುತ್ತಿದ್ದರೋ ಎನ್ನುವಂತೆ ದೇವಾಲಯದಲ್ಲಿ ಅರ್ಚಕರು ಮಂಗಳಾರತಿಯನ್ನು ಕೈಗೊಂಡರು. ಪ್ರತಿಯೊಬ್ಬರೂ ಹಣ್ಣು-ಕಾಯಿ ಮಾಡಿಸಿಕೊಂಡು ದೇವರಿಂದ ಪ್ರಸಾದ ಪಡೆದು ಒಳ್ಳೆಯದನ್ನು ಮಾಡಪ್ಪ ಭಗವಂತಾ ಎಂದರು.
             ವಿಕ್ರಮ, ವಿಜೇತಾರು ತಾವು ಬಂದಿದ್ದ ಕಾರ್ಯ ಕೈಗೂಡಲಿ ಎಂದು ಬೇಡಿಕೊಂಡರು. ಅಷ್ಟರಲ್ಲಿಯೇ ಗರ್ಭಗುಡಿಯಲ್ಲಿ ಪೂಜಾ ಕೈಂಕರ್ಯವನ್ನು ಮುಗಿಸಿ ಹೊರಬಂದರು. `ಅರೇ ವಿನಾಯಕ.. ಯಾರಪ್ಪಾ ಬಂದವರು ಎಂದುಕೊಂಡೆ.. ಇವರೆಲ್ಲ ಯಾರು...?' ಎಂದರು.
          `ಇವರೆಲ್ಲ ನನ್ನ ಗೆಳೆಯರು ಬೆಂಗಳೂರು ಕಡೆಯಿಂದ ಬಂದಿದ್ದಾರೆ. ನಮ್ಮೂರ ಭಾಗದಲ್ಲಿ ಪಾತರಗಿತ್ತಿ ಹಾಗೂ ವಿವಿಧ ಪ್ರಾಣಿಗಳ ದಾಖಲೆ ಮಾಡಲು ಬಂದಿದ್ದಾರೆ..' ಎಂದ.
            `ಹೌದಾ.. ಯಾರೋ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಇವರೇಯೋ ಹೇಗೆ..' ಎಂದರು. ಎಲ್ಲರೂ ತಲೆಯಾಡಿಸಿದರು.
            ವಿನಾಯಕ ಭಟ್ಟರ ಬಳಿ ದೇವಸ್ಥಾನದ ವಿಶೇಷತೆಗಳನ್ನು ಎಲ್ಲರಿಗೂ ಹೇಳಿ ಎಂದ. ದೇವಸ್ಥಾನದ ವಿಶೇಷತೆಗಳನ್ನು ಹೇಳಲು ಮುಂದಾದ ಭಟ್ಟರು ಎಲ್ಲರನ್ನೂ ಒಂದು ಕಡೆ ಕುಳ್ಳಿರಿಸಿದರು.
          `ನೋಡಿ ಈ ದೇವಸ್ಥಾನಕ್ಕೆ ಕನಿಷ್ಟವೆಂದರೂ 500 ರಿಂದ 600 ವರ್ಷ ಇತಿಹಾಸವಿದೆ. ಬಹಳಾ ಘಟಾಘಟಿ ಜಾಗ. ಈ ಮೊದಲು ಈ ದೇವಸ್ಥಾನ ನಮ್ಮೂರಿಗೆ ಹತ್ತಿರದ ಹೂವಿನಮನೆಯ ಕೋಟೆಗುಡ್ಡ ಎಂಬಲ್ಲಿ ಇತ್ತು. ಆ ನಂತರ ಅದ್ಯಾರಿಗೂ ಕನಸಿನಲ್ಲಿ ಬಂದ ಕಾರಣ ಇಲ್ಲಿಗೆ ದೇವಸ್ಥಾನವನ್ನು ಬದಲಿಸಲಾಯಿತು. ಬಾಳೂರಿನ ಅರಸರ ಆಳ್ವಿಕೆಯ ಕಾಲದಲ್ಲಿ ಈ ದೇವಸ್ಥಾನಕ್ಕೆ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಬಾಳೂರು ಅರಸರು ದೇವಸ್ಥಾನ ನಿರ್ಮಾಣ ಮಾಡಿದ ಕಾರಣದಿಂದಾಗಿ ದೇಗುಲದ ಮುಂದೆ ಒಂದು ನಂದಿ ಆಕೃತಿಯನ್ನು ಸ್ಥಾಪಿಸಲಾಗಿದೆ. ಈ ನಂದಿ ಬಾಳೂರ ಅಸನ ಪ್ರತೀಕ. ಗಣಪನ ದೇವಾಲಯದ ಮುಂದೆ ನಂದಿ ಇರುವ ಕೆಲವೇ ಕೆಲವು ವಿಶಿಷ್ಟ ನಿದರ್ಶನಗಳಲ್ಲಿ ಇದು ಒಂದು ನೋಡಿ..' ಎಂದರು ಭಟ್ಟರು. ಎಲ್ಲರೂ ಅತ್ತ ಕಡೆ ಕಣ್ಣು ಹಾಯಿಸಿದರು.
              `ಈ ದೇವಸ್ಥಾನಕ್ಕೆ ಇನ್ನೂ ಒಂದು ವಿಶೇಷತೆಯಿದೆ ನೋಡಿ. ಈ ಗಣಪನನ್ನು ಎಲೆಕ್ಷನ್ ಗಣಪ ಎಂದೂ ಕರೆಯಲಾಗುತ್ತದೆ. ಅಂದರೆ ಎಲೆಕ್ಷನ್ ಸಮಯದಲ್ಲಿ ನಮ್ಮ ಗಣಪನಿಗೆ ಎಲ್ಲಿಲ್ಲದ ಬೇಡಿಕೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದವರು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡರೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಟಿಕೆಟ್ ಸಿಕ್ಕವರಲ್ಲಿ ಕೆಲವರು ಗೆಲುವಿಗಾಗಿ ಪೂಜೆಯನ್ನು ಮಾಡಿಸುವುದೂ ಇದೆ. ಗೆದ್ದವರೂ ಬಂದು ಪೂಜೆ ಮಾಡಿಸುತ್ತಾರೆ ನೋಡಿ. ಈ ಕಾರಣದಿಂದ ನಮ್ಮ ಗಣಪ ಎಲೆಕ್ಷನ್ ಗಣಪ ಆಗಿದ್ದಾನೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಹಲವರು ಬಂದು ಪೂಜೆ ಮಾಡಿಸಿದ್ದರು ನೋಡಿ..' ಎಂದರು ಭಟ್ಟರು.
             `ದೇವರಿಗೆ ಪೂಜೆ ಸಲ್ಲಿಸಿ, ಗಂಟೆಯನ್ನು ಹರಕೆಯ ರೂಪದಲ್ಲಿ ಒಪ್ಪಿಸುವುದು ಇಲ್ಲಿನ ವಾಡಿಕೆ. ಕಾಡಿನ ಮಧ್ಯದಲ್ಲಿ ಇರುವ ಈ ದೇವರನ್ನು ನೋಡಲು ರಾಜ್ಯದ ಹಲವು ಕಡೆಗಳಿಂದ ಬರುತ್ತಾರೆ ನೋಡಿ. ಇಂತಹ ಈ ದೇವಾಲಯದ ಪ್ರದೇಶ ಗುಡ್ಡದ ಮೇಲಿದ್ದರೂ ಇಲ್ಲಿ ನೀರಿನ ಸೆಲೆ ಚನ್ನಾಗಿದೆ. ಎಲ್ಲ ಭಗವಂತನ ಆಶೀರ್ವಾದ ನೋಡಿ..' ಎಂದರು ಭಟ್ಟರು.
            ಪ್ರತಿಯೊಬ್ಬರೂ ದೇವರ ಮಹಿಮೆಯ ಬಗ್ಗೆ ಅಚ್ಚರಿ ತೋರಿಸುತ್ತಾ ವಾಪಾಸಾಗಲು ಮುಂದಾದರು. ಆಗ ಇದ್ದಕ್ಕಿದ್ದಂತೆ ಅಚಾತುರ್ಯವೊಂದು ಘಟಿಸಿಬಿಟ್ಟಿತು. ಯಾರೂ ಅಂದುಕೊಂಡಿರದ ಘಟನೆಯೊಂದು ಜರುಗಿತು. ಅಚಾನಕ್ ಆಗಿ ನಡೆದ ಘಟನೆ ಎಲ್ಲರ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು.

(ಮುಂದುವರಿಯುತ್ತದೆ.)

Tuesday, June 30, 2015

ಅಘನಾಶಿನಿ ಕಣಿವೆಯಲ್ಲಿ-20

              ಮುಂಜಾನೆಯ ಮಂಜಿನ ಪರದೆ ದಂಟಕಲ್ಲನ್ನು ಆವರಿಸಿಕೊಂಡಿತ್ತು. ಬೆಳ್ಂಬೆಳಿಗ್ಗೆ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಿರುವ ಹೊತ್ತಿನಲ್ಲಿಯೇ ಅದೇನೋ ವಾಹನ ಬಂದ ಸದ್ದಾಯಿತು. ಬೆಳ್ಳಂಬೆಳಿಗ್ಗೆ ಯಾರಿರಬಹುದು ಎನ್ನುವ ಕುತೂಹಲ ಎಲ್ಲರ ಮನಸ್ಸಿನಲ್ಲಿಯೂ ಮೂಡಿತು.
             ಮಂಜಿನ ಪರದೆಯನ್ನು ಹರಿದುಕೊಂಡು ಜೀಪೊಂದು ಬಂದು ಮನೆಯಂಗಳದಲ್ಲಿ ನಿಂತಿತು. ಮನೆಯಂಗಳದಲ್ಲಿ ಹಾಕಿದ್ದ ದೊಡ್ಡ ದೊಡ್ಡ ಕಂಬದ ಮೇಲೆ ಅಟ್ಟ ರಾರಾಜಿಸುತ್ತಿದ್ದರೆ ಗುರುಗುಡುತ್ತ ಬಂದ ಜೀಪು ಅಟ್ಟದ ಕೆಳಗೆ ನಿಂತುಕೊಂಡಿತು. ಧಡ ಧಢ್ ಎಂದು ಇಬ್ಬರು ಇಳಿದರು. ಇಳಿದ ತಕ್ಷಣವೇ ಗೊತ್ತಾಗಿದ್ದು. ಬಂದವರು ಪೊಲೀಸರು ಎಂಬುದು. ಎಲ್ಲರಲ್ಲೂ ಅಚ್ಚರಿ. ಬೆಳ್ಳಂಬೆಳಿಗ್ಗೆ ಪೊಲೀಸರು ಬಂದಿದ್ದಾರೆ ಎನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮೂಡಿತು. ಊರಿನ ಒಂದೆರಡು ಹೈದರಂತೂ ತಮ್ಮೂರಿ ಫಾಸಲೆಯಲ್ಲಿ ಯಾವುದಾದರೂ ಗಲಾಟೆ, ಕಳ್ಳತನಗಳು ನಡೆದಿದೆಯೇ ಎಂದು ಜ್ಞಾಪಿಸಿಕೊಳ್ಳುತ್ತಿದ್ದಾಗಲೇ ಪೊಲೀಸ್ ಅಧಿಕಾರಿಯೊಬ್ಬ `ಈ ಊರಿಗೆ ಯಾರೋ ಒಂದಿಷ್ಟು ಜನ ಬಂದಿದ್ದಾರಂತಲ್ಲ. ಯಾರವರು? ಈಗೆಲ್ಲಿದ್ದಾರೆ? ತೋರಿಸಿ' ಎಂದು ದರ್ಪದಿಂದಲೇ ಹೇಳಿದ.
             ಊರಿನ ನಾಗರಿಕರು ಒಮ್ಮೆ ಬೆಚ್ಚಿಬಿದ್ದು ವಿನಾಯಕನ ಮನೆಯನ್ನು ತೋರಿಸಿದರು. ಬೆಳಗಿನ ಸವಿನಿದ್ದೆಯಲ್ಲಿ ಎಲ್ಲರೂ ಇದ್ದರು. ಬೆಳ್ಳಬೆಳಿಗ್ಗೆ ಬಂದ ಪೊಲೀಸ್ ಜೀಪಿನ ಸದ್ದು ಎಲ್ಲರ ನಿದ್ದೆಯನ್ನು ಹೊಡೆದೋಡಿಸಿತ್ತಾದರೂ ಯಾರೂ ಇನ್ನೂ ಹಾಸಿಗೆಯನ್ನು ಬಿಟ್ಟು ಎದ್ದಿರಲಿಲ್ಲ. ಮನೆಯೊಳಕ್ಕೆ ನುಗ್ಗಿದವರೇ ಪೊಲೀಸರು ವಿಕ್ರಂ, ಪ್ರದೀಪ, ವಿಷ್ಣು ಸೇರಿದಂತೆ ಊರಿಗೆ ಹೊಸದಾಗಿ ಬಂದಿದ್ದವರನ್ನೆಲ್ಲ ಹಿಡಿದುಕೊಂಡರು. ಕಕ್ಕಾಬಿಕ್ಕಿಯಾಗಿ ಎಲ್ಲರೂ ಏನಾಗುತ್ತಿದೆ ಎಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ದರದರನೆ ಎಳೆದು ಜೀಪಿನೊಳಕ್ಕೆ ತುಂಬಿದ ಪೊಲೀಸರು ಭರ್ರೆಂದು ಹೊರಟೇಬಿಟ್ಟಿದ್ದರು. ಯಾರಿಗೂ ಏನಾಗಿದೆ, ಏನಾಗುತ್ತಿದೆ ಎನ್ನುವುದರ ಅರಿವು ಮಾತ್ರ ಇರಲಿಲ್ಲ. ವಿಜೇತಾ ಹಾಗೂ ವಿಕ್ರಂ ಮಾತ್ರ ತಮ್ಮನ್ನು ಯಾಕೆ ಹೀಗೆ ಪೊಲೀಸರು ಎಳೆದುಕೊಂಡು ಹೋಗುತ್ತಿದ್ದಾರೆ ಎಂಬುದು ಗೊತ್ತಾಗದ ಕಾರಣ ಸಾಕಷ್ಟು ಪ್ರತಿಭಟನೆಯನ್ನೂ ಮಾಡಿದರು.
            `ನಮ್ಮನ್ನು ಯಾಕೆ ಹೀಗೆ ಎಳೆದುಕೊಂಡು ಹೋಗುತ್ತಿದ್ದೀರಿ..' ಅಸಹನೆಯಿಂದ ಕೇಳಿದ್ದಳು ವಿಜೇತಾ.
            `ಬಾಯಿಮುಚ್ಚಿಕೊಂಡು ಜೀಪ್ ಹತ್ತಿ. ಪೊಲೀಸ್ ಸ್ಟೇಷನ್ ಗೆ ಹೋದ ಮೇಲೆ ಗೊತ್ತಾಗುತ್ತದೆ..' ಎಂದು ಪೊಲೀಸರು ಗದರಿದ್ದರು.
             `ನೋಡಿ ನಾವು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅರೆಷ್ಟ್ ವಾರಂಟ್ ಇಲ್ಲದೇ ನಮ್ಮನ್ನು ಯಾಕೆ ಹೀಗೆ ಕರೆದೊಯ್ಯುತ್ತಿದ್ದೀರಿ..' ಸಿಟ್ಟಿನಿಂದಲೇ ಕೇಳಿದ್ದ ವಿಕ್ರಂ. ಪ್ರದೀಪ ಮಾತ್ರ ಏನೂ ಮಾತನಾಡದೇ ಸುಮ್ಮನೇ ಇದ್ದ. ಯಾರು ಎಷ್ಟು ಕೇಳಿದರೂ ಪೊಲೀಸರು ಯಾಕೆ ಕರೆದೊಯ್ಯುತ್ತಿದ್ದಾರೆ ಎನ್ನುವುದು ಮಾತ್ರ ಗೊತ್ತಾಗಲಿಲ್ಲ. ವಿಕ್ರಮ ಹಾಗೂ ವಿಜೇತಾ ಇಬ್ಬರಿಗೂ ತಾವು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಬಿಡೋಣ ಎಂದುಕೊಂಡರು. ನಾಲಿಗೆಯ ತುದಿಯವರೆಗೂ ಬಂದಿದ್ದನ್ನು ಹಾಗೇ ಸುಮ್ಮನೇ ಉಳಿದುಬಿಟ್ಟರು. ಪತ್ರಿಕೆಯವರು ತಾವು ಎಂದು ಹೇಳಲೇ ಇಲ್ಲ.
           ಅರ್ಧಗಂಟೆ ಪಯಣದ ನಂತರ ಜೀಪು ಪೊಲೀಸ್ ಸ್ಟೇಶನ್ ಎದುರು ಬಂದು ನಿಂತಿತು. ಶಿರಸಿ ಪೊಲೀಸ್ ಠಾಣೆಗೆ ಕರೆತರಲಾಗುತ್ತದೆ ಎಂದುಕೊಂಡಿದ್ದವರಿಗೆ ಅಚ್ಚರಿಯಾಗಿತ್ತು. ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ಕುರಿತು ವಿಸ್ಮಯದಿಂದ ನೋಡುತ್ತಿದ್ದಾಗಲೇ ದಂಟಕಲ್ ಸಿದ್ದಾಪುರ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಸಿದ್ದಾಪುರ ಠಾಣೆಗೆ ಕರೆತರಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಯಾವ ಕಾರಣಕ್ಕೆ ಹೀಗೆ ಕರೆತರಲಾಗಿದೆ ಎಂಬುದು ಮಾತ್ರ ಗೊತ್ತಾಗಲಿಲ್ಲ.

***

              ಬೆಳ್ಳಂಬೆಳಿಗ್ಗೆ ಪೊಲೀಸರು ದಂಟಕಲ್ಲಿಗೆ ಏಕಾಏಕಿ ಬಂದು ಊರಿಗೆ ಬಂದಿದ್ದವರನ್ನು ಬಂಧಿಸಿ ಕರೆದೊಯ್ದಿದ್ದು ಊರಿನಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಕಾಡನ್ನು ಸುತ್ತಲು ಬಂದಿದ್ದವರು ಭಯೋತ್ಪಾದಕರೇ ಇರಬೇಕು ಎಂದುಕೊಂಡರು ಹಲವರು. ಅಘನಾಶಿನಿ ಅಣೆಕಟ್ಟೆಗೆ ಸರ್ವೆ ಮಾಡಲು ಬಂದಿದ್ದಾರೆ ಎಂದುಕೊಂಡಿದ್ದವರು ಕೆಲವರು. ನಕ್ಸಲರಿರಬೇಕು ಎಂದು ಒಂದಿಬ್ಬರು ಮಾತನಾಡಿಕೊಂಡರು. ಯಾವುದೋ ಊರಿನಲ್ಲಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡು ಬಂದವರು ಇವರು ಎಂದುಕೊಂಡಿದ್ದವರು ಮತ್ತಷ್ಟು ಜನ. ಯಾರಿಗೂ ಕೂಡ ಯಾವ ಕಾರಣಕ್ಕಾಗಿ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಈ ಕಾರಣದಿಂದಾಗಿ ತಲೆಗೊಂದರಂತೆ ಮಾತನಾಡಲು ಆರಂಭಿಸಿದ್ದರು.
            ಪೊಲೀಸರು ಹೀಗೆ ಬಂದು ವಿಜೇತಾ, ವಿಕ್ರಂ, ವಿನಾಯಕ ಹಾಗೂ ವಿಷ್ಣುವನ್ನು ಬಂಧಿಸಿ ಕರೆದೊಯ್ದಿದ್ದರಿಂದ ವಿನಾಯಕ ಹಾಗೂ ಹುಲಿ ಕೊಂದ ಗಣಪಜ್ಜ ಮಾತ್ರ ನಂಬಲು ತಯಾರಿರಲಿಲ್ಲ. ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಪೊಲೀಸರು ಇವರನ್ನು ಬಂಧಿಸಿ 10 ನಿಮಿಷ ಕಳೆಯುವುದರೊಳಗಾಗಿ ಗಣಪಜ್ಜ ಬಂದು ವಿನಾಯಕನನ್ನು ಭೇಟಿ ಮಾಡಿದ್ದ. ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ವಿಚಾರಿಸಿದ್ದನಾದರೂ ವಿನಾಯಕನಿಗೆ ಮಾಹಿತಿ ಇಲ್ಲದ ಕಾರಣ ಸುಮ್ಮನೇ ಉಳಿದಿದ್ದ. ತಾನು ಸಿದ್ದಾಪುರ ಪೊಲೀಸ್ ಸ್ಟೇಷನ್ನಿಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ ಎಂದು ವಿನಾಯಕ ಹೊರಟು ನಿಂತಿದ್ದ. ಅದೇ ಸಂದರ್ಭದಲ್ಲಿ ಗಣಪಜ್ಜನೂ ಕೂಡ ತಾನೂ ಬರುತ್ತೇನೆ ಎಂದು ತಯಾರಾಗಿ ಬಿಟ್ಟಿದ್ದ. ಅಜ್ಜನ ಹುಮ್ಮಸ್ಸು ವಿನಾಯಕನಿಗೆ ಅಚ್ಚರಿಯನ್ನು ತಂದಿತ್ತು.
           ಗಣಪಜ್ಜ ಹೊರಡುವ ಮುನ್ನ ಸುಮ್ಮನೆ ಉಳಿಯಲಿಲ್ಲ. ತನ್ನ ಪರಿಚಯದ ಹಿರಿಯರಿಗೆ, ಹಳೆಯ ತಲೆಮಾರಿನ ರಾಜಕಾರಣಿಗಳಿಗೆಲ್ಲ ಒಮ್ಮೆ ಪೋನಾಯಿಸಿ ಅವರಿಗೆಲ್ಲ ವಿಷಯವನ್ನು ತಿಳಿಸಿದ. ಪೊಲೀಸ್ ಠಾಣೆಗೆ ಬಂದು ಸಹಾಯ ಮಾಡುವಂತೆಯೂ ತಿಳಿಸಿದ. ನಂತರ ವಿನಾಯಕನ ಜೊತೆಗೂಡಿ ಸಿದ್ದಾಪುರದ ಕಡೆಗೆ ತೆರಳಿದ.

****

       ಸಿದ್ದಾಪುರ ಪೊಲೀಸ್ ಠಾಣೆಯ ಬಳಿ ಜೀಪಿನಿಂದ ವಿಕ್ರಂ, ವಿಜೇತಾ, ವಿಷ್ಣು ಹಾಗೂ ಪ್ರದೀಪರು ಇಳಿಯುತ್ತಿದ್ದಂತೆ ಒಂದಿಷ್ಟು ಪೇಪರಿನವರು, ಟಿವಿ ಚಾನಲ್ಲಿನವರು ಮುತ್ತಿಕೊಂಡರು. ಆಗಲೇ ಒಂದೆರಡು ಜನ ಇವರ ಪೋಟೋಗಳನ್ನೂ ಕ್ಲಿಕ್ಕಿಸಿಕೊಂಡು ಬಿಟ್ಟಿದ್ದರು. ಆದರೆ ಯಾರೊಬ್ಬರೂ ಕೂಡ ಸುಖಾಸುಮ್ಮನೆ ಬಂಧಿಸಲ್ಪಟ್ಟವರ ಬಳಿ ಮಾತನಾಡಲು ತಯಾರಿರಲಿಲ್ಲ. ಎಲ್ಲರನ್ನೂ ಪೊಲೀಸ್ ಠಾಣೆಯೊಳಕ್ಕೆ ಕರೆದೊಯ್ಯಲಾಯಿತು. ಇತ್ತ ವಿವಿಧ ಟಿವಿ ಚಾನಲ್ಲುಗಳಲ್ಲಿ ಉತ್ತರ ಕನ್ನಡದಲ್ಲಿ ನಕ್ಸಲೀಯರ ಸೆರೆ, ಸಿದ್ದಾಪುರದ ಕಾನಸೂರಿನ ಹಳ್ಳಿಯಲ್ಲಿ ಅಡಗಿದ್ದ ನಕ್ಷಲರು ಎನ್ನುವ ಸುದ್ದಿ ಬಿತ್ತರವಾಗತೊಡಗಿತ್ತು.
            ಪೊಲೀಸ್ ಠಾಣೆಯೊಳಕ್ಕೆ ಕರೆದೊಯ್ದಿದ್ದೇ ತಡ ಯಾರನ್ನೂ ಒಂದೂ ಮಾತು ಕೇಳದೇ ಕಂಬಿಯ ಕೋಣೆಯೊಳಕ್ಕೆ ಹಾಕಲಾಯಿತು. ವಿಕ್ರಂ ಹಾಗೂ ವಿಷ್ಣುವಿಗೆ ನಾಲ್ಕೇಟನ್ನು ಹಾಕಿಯೂ ಬಿಟ್ಟದ್ದರು. ನೀವು ಯಾವ ಕಡೆಯಿಂದ ಬಂದವರು. ಎಷ್ಟು ಸಮಯದಿಂದ ಇಲ್ಲಿ ಇದ್ದಿರೀ. ನಿಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಹೇಳಿ. ಏನೇನು ಭಾನಗಡಿ ಮಾಡಲು ಆರಂಭಿಸಿದ್ದೀರಿ ಎಂದೆಲ್ಲ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ತಾವು ಕಾಡನ್ನು ಸುತ್ತಲು ಬಂದವರು, ಪಾತರಗಿತ್ತಿಗಳ ಅಧ್ಯಯನಕ್ಕಾಗಿ ಬಂದಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದರೂ ಪೊಲೀಸರು ಮಾತ್ರ ಅದನ್ನು ಕೇಳುತ್ತಿರಲಿಲ್ಲ.
               ಪ್ರದೀಪ ಮಾತ್ರ ಬಹಳ ಸೀರಿಯಸ್ಸಾಗಿದ್ದ. ಮನಸ್ಸಿನಲ್ಲಿ ಅದೇನೋ ಆಲೋಚನೆ. ಪೊಲೀಸರು ಆತನಿಗೂ ಹೊಡೆಯಲು ಬಂದರು. ವಿಚಾರಣೆ ನಡೆಸಲು ಮುಂದಾದರು. ತಕ್ಷಣ ಆತ ಇದ್ದಕ್ಕಿದ್ದಂತೆ ಅರ್ಧ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಅದೇನೋ ಕೋಡ್ ಹೇಳಿದ. ಹೊಡೆಯುತ್ತಿದ್ದ ಪೊಲೀಸರು ಇದ್ದಕ್ಕಿದ್ದಂತೆ ಸುಮ್ಮನಾದರು. ತಕ್ಷಣವೇ ಅವರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಇದ್ದಕ್ಕಿದ್ದಂತೆ ಎಲ್ಲರನ್ನೂ ಇರಿಸಲಾಗಿದ್ದ ಕೋಣೆಗೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರದೀಪನನ್ನು ಒಂದೆಡೆಗೆ ಕರೆದೊಯ್ದರು. ಕೋಣೆಯಿಂದ ಹೊರಕ್ಕೆ ಎಲ್ಲೋ ಕರೆದುಕೊಂಡು ಹೋದರು. ಎಲ್ಲರಿಗೂ ಒಮ್ಮೆಲೆ ಅಚ್ಚರಿಯಾಗಿದ್ದು ಸುಳ್ಳಲ್ಲ.
           ಪ್ರದೀಪನನ್ನು ಹೊರಕ್ಕೆ ಕರೆದುಕೊಂಡು ಹೋದ ಹತ್ತೋ ಹದಿನೈದೋ ನಿಮಿಷದ ನಂತರ ಎಲ್ಲರನ್ನೂ ಇದ್ದಕ್ಕಿದ್ದಂತೆ ಬಿಡುಗಡೆ ಮಾಡಲಾಯಿತು. ಎಲ್ಲರೂ ಹೊರಕ್ಕೆ ಬಂದರು. ಹೊರಭಾಗದಲ್ಲಿ ಪ್ರದೀಪ ಪೊಲೀಸ್ ಅಧಿಕಾರಿಗಳ ಜೊತೆಗೆ ನಗುತ್ತಾ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಗಂಭೀರನಾದ.
            `ಏನಿದು ಪ್ರದೀಪ..ಯಾಕೆ ಹೀಗಾಯ್ತು? ' ವಿಕ್ರಮ ಕೇಳಿದ್ದ.
            `ಇಲ್ಲಿ ಬೇಡ ಮುಂದೆ ಹೇಳುತ್ತೇನೆ..' ಎಂದ ಪ್ರದೀಪ
            `ಏನೋ ತಪ್ಪು ಮಾಹಿತಿಯಿಂದ ನಿಮ್ಮನ್ನು ಬಂಧಿಸಿದ್ದೆವು. ನಮ್ಮನ್ನು ಕ್ಷಮಿಸಿ.. ಮುಂದೆ ಇಂತಹ ತಪ್ಪಾಗುವುದಿಲ್ಲ..' ಎಂದು ಪೊಲೀಸ್ ಅಧಿಕಾರಿ ಇವರ ಬಳಿ ಕೇಳಿಕೊಂಡಾಗಲಂತೂ ಮತ್ತಷ್ಟು ಅಚ್ಚರಿ.
            `ಅಲ್ರೀ.. ನಾವ್ ಅಸ್ಟ್ ಹೇಳ್ತಾ ಇದ್ವಿ ನಾವ್ ನಕ್ಸಲರಲ್ಲ ಅಂತ, ನಮ್ಮ ಮಾತನ್ನು ಯಾಕೆ ಕೇಳಲಿಲ್ಲ ಅಂತ. ನೋಡಿ ಈಗ ..' ಎಂದು ರೇಗಿದ ವಿಕ್ರಮ.
           `ಅಯ್ಯೋ ಗೊತ್ತಾಗಲಿಲ್ಲ ನೋಡಿ. ಇನ್ನು ಮುಂದೆ ಈ ಥರ ಆಗೋದಿಲ್ಲ ಬಿಡಿ..' ಎಂದರು ಪೊಲೀಸ್ ಅಧಿಕಾರಿ. ನಂತರ ಎಲ್ಲರೂ ಪೊಲೀಸ್ ಠಾಣೆಯ ಹೊರಗೆ ಬರುತ್ತಿದ್ದಂತೆಯೇ ಗಣಪಜ್ಜನನ್ನು ಕೂರಿಸಿಕೊಂಡು ಬಂದ ಜೀಪು ಗಕ್ಕನೆ ನಿಂತಿತು. ವಿನಾಯಕ ಜೀಪಿನಿಂದ ಓಡಿದಂತೆ ಇಳಿದ. ಠಾಣೆಯಿಂದ ಹೊರ ಬರುತ್ತಿದ್ದವರ ಬಳಿ ಏನಾಯಿತು ಎಂದು ಕೇಳಿದ. ಅವರು ನಡೆದ ವಿಷಯವನ್ನು ತಿಳಿಸಿದರು.
           ಅಷ್ಟರಲ್ಲಿ ವಿಕ್ರಮನ ಪೋನ್ ರಿಂಗಣಿಸಲು ಆರಂಭವಾಯಿತು. ನೋಡಿದರೆ ಮಂಗಳೂರಿನಿಂದ ನವೀನಚಂದ್ರ ಅವರು ಪೋನ್ ಮಾಡಿದ್ದರು. ವಿಕ್ರಂ `ಹಲೋ..' ಎಂದ.
          `ನೋಡ್ರಿ ವಿಕ್ರಂ ಸಿದ್ದಾಪುರದ ಬಳಿ ನಕ್ಸಲರ ಬಂಧನ ಆಗಿದೆಯಂತೆ. ನೀವು ಅಲ್ಲೇ ಇದ್ದೀರಿ. ಸ್ವಲ್ಪ ಮಾಹಿತಿ ಕಳಿಸಿ ನೋಡೋಣ..' ಎಂದರು. ತಕ್ಷಣ ವಿಕ್ರಮ ನಡೆದಿದ್ದೆಲ್ಲವನ್ನೂ ಹೇಳಿದ. ಆಗ ಸಿಟ್ಟಾದ ನವೀನಚಂದ್ರರು `ಒಂದ್ ಕೆಲಸ ಮಾಡಿ.. ಪೊಲೀಸರು ಹೀಗೆ ಮಾಡಿದರು ಅಂತ ಅದನ್ನೇ ಒಂದು ಸುದ್ದಿ ಮಾಡಿಬಿಡಿ. ಅವರಿಗೆ ಬುದ್ದಿ ಕಲಿಸೋಣ..' ಎಂದರು. ವಿಕ್ರಮ ಒಪ್ಪಿಕೊಂಡ. ಸಿದ್ದಾಪುರದ ಇಂಟರ್ನೆಟ್ ಸೆಂಟರಿನಲ್ಲಿ ಕುಳಿತು ನಡೆದಿದ್ದೆಲ್ಲವನ್ನೂ ವರದಿ ಮಾಡಿ ಮತ್ತೆ ಜೀಪ್ ಹತ್ತಿದ
           ದಾರಿ ಮಧ್ಯದಲ್ಲಿ ಪ್ರದೀಪನ ಬಳಿ ಮಾತಿಗೆ ನಿಂತರು ಎಲ್ಲರೂ. `ಅಲ್ಲ ಪೊಲೀಸರ ಬಳಿ ಅದೇನೋ ಕೋಡ್ ಹೇಳಿದೆಯಲ್ಲ.. ಅದೇನು ಮಾರಾಯಾ? ಆಮೇಲೆ ನಿನ್ನನ್ನು ಅವರು ಇದ್ದಕ್ಕಿದ್ದಂತೆ ದೂರಕ್ಕೆ ಕರೆದುಕೊಂಡು ಹೋದರು. ಅವರ ಬಳಿ ನೀನೇನು ಹೇಳಿದ್ಯೋ. ಹಾಗೇ ನಿನ್ನನ್ನು ಸೇರಿದಂತೆ ಎಲ್ಲರನ್ನೂ ಇದ್ದಕ್ಕಿದ್ದಂತೆ ಬಿಟ್ಟುಬಿಟ್ಟರು. ಅದೆಂತ ಮೋಡಿ ಮಾಡಿದೆ ನೀನು..?' ಎಂದು ಕೇಳಿದ ವಿಕ್ರಮ.
         ಒಮ್ಮೆ ಕಕ್ಕಾಬಿಕ್ಕಿಯಾದರೂ ಸಾವರಿಸಿಕೊಂಡ ಪ್ರದೀಪ `ಅಯ್ಯೋ ಅದು ಪೊಲೀಸ್ ಕೋಡ್ ವರ್ಡ್. ಹಿಂದೆ ನಾನು ಪೊಲೀಸರಿಗೆ ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದೆ. ಆ ಕೋಡ್ ವರ್ಡ್ ಹೇಳಿದ ಕೂಡಲೇ ಏನೋ ಮಹತ್ವದ ವಿಷಯ ಇರಬೇಕು ಎಂದುಕೊಂಡು ನನ್ನನ್ನು ದೂರಕ್ಕೆ ಕರೆದೊಯ್ದರು. ಅದೇ ಅವಕಾಶ ಬಳಸಿಕೊಂಡು ನಮ್ಮ ಪರಿಚಯದ ಮಂತ್ರಿಗಳೊಬ್ಬರಿಗೆ ಪೋನ್ ಮಾಡಿದೆ. ಅವರು ಪೊಲೀಸರಿಗೆ ಎಲ್ಲವನ್ನೂ ತಿಳಿಸಿ ಹೇಳಿದರು. ನಮ್ಮನ್ನು ಬಿಡುಗಡೆಯೂ ಮಾಡಿದರು' ಎಂದ.
            `ಅಲ್ಲ ಮಾರಾಯಾ.. ನಿಂಗೆ ಮಂತ್ರಿಗಳೂ ಗೊತ್ತಾ..?' ಎಂದು ಆಶ್ಚರ್ಯದಿಂದ ಕೇಳಿದ ವಿಕ್ರಮ.
            `ಹು. ಅವರ ಕಾರ್ ಡ್ರೈವರ್ ಆಗಿದ್ದೆ. ಹಾಗಾಗಿ ಗೊತ್ತು. ನಮಗೆ ಸಹಾಯ ಮಾಡಿದರು ನೋಡಿ..' ಎಂದ ಪ್ರದೀಪ.
             ಪ್ರದೀಪ ಸಾಮಾನ್ಯ ಮನುಷ್ಯನೇನಲ್ಲ. ಬಹಳಷ್ಟು ಕೆಲಸಗಳನ್ನು ಮಾಡಿ ಪರಿಚಯವಿದೆ ಎಂದುಕೊಂಡರು ಎಲ್ಲರೂ. ವಿಕ್ರಮನಿಗೆ ಪ್ರದೀಪನ ಮೇಲೆ ಮೊದಲೇ ಇದ್ದ ಅನುಮಾನ ಮತ್ತಷ್ಟು ಹೆಚ್ಚಿತು.  ಪ್ರದೀಪ ಖಂಡಿತ ಏನನ್ನೋ ಮುಚ್ಚಿಡುತ್ತಿದ್ದಾನೆ ಎಂದುಕೊಂಡ.
            ಜೀಪಿನಲ್ಲಿಯೇ ಇದ್ದ ಗಣಪಜ್ಜ ಮಾತ್ರ `ನಂಗೆ ಗೊತ್ತಿತ್ರಾ ತಮಾ.. ನಿಂಗಳದ್ದು ಎಂತದೂ ತಪ್ಪಿಲ್ಲೆ ಹೇಳಿ. ಅದಕ್ಕೆ ಆನು ಬಂದಿದ್ದು. ಬಪ್ಪಕ್ಕಿದ್ರೆ ಎಲ್ಲರಿಗೂ ಪೋನ್ ಮಾಡಿ ರಾಜಕೀಯ ಒತ್ತಡನೂ ತಂದಿದ್ದಿ ನೋಡಿ. ಅಂತೂ ಬಿಡುಗಡೆ ಆತ ಇಲ್ಯ. ದೇವರು ದೊಡ್ಡವ್ವ ನೋಡಿ. ಮನೆಗೆ ಹೋದವ್ವು ಮೊದಲು ಗುಡ್ಡೇತೋಟದ ಗಣಪತಿಗೆ ಹಣ್ಣು ಕಾಯಿ ಮಾಡಿಶಿಕೊಂಡು ಬನ್ನಿ. ಎಂತಾದ್ರೂ ಗ್ರಹಚಾರ ಇದ್ರೆ ತಕ್ಷಣವೇ ಪರಿಹಾರ ಮಾಡ್ತ ಅಂವ. ಬಹಳ ಘಟಾಘಟಿ ದೇವರು. ಒಳ್ಳೆ ಜಾಗನೂ ಹೌದು. ವಿನಾಯ್ಕ ಮೊದ್ಲು ಎಲ್ರನ್ನೂ ಕರ್ಕೊಂಡು ಹೋಗಿ ಬಾರಾ..' ಎಂದ. ಎಲ್ಲರೂ ತಲೆಯಾಡಿಸಿದರು.
             ಎಲ್ಲರನ್ನೂ ಹೊತ್ತ ಜೀಪು ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಆಗಲೇ ಮಧ್ಯಾನದ ಸುಡುಬಿಸಿಲು ರಾಚುತ್ತಿತ್ತು. ನೆತ್ತಿಯನ್ನು ಸುಡಲು ಆರಂಭಿಸಿತ್ತು. ಊರಿನ ಕುತೂಹಲದ ಕಣ್ಣುಗಳು ಪೊಲೀಸ್ ಸ್ಟೇಶನ್ನಿಗೆ ಹೋದಷ್ಟೇ ವೇಗವಾಗಿ ಇವರು ವಾಪಾಸು ಬಂದರು ಎನ್ನುವ ಅಚ್ಚರಿಯೊಂದಿಗೆ ಕಾಯಿತ್ತಿತ್ತು.

Thursday, June 11, 2015

ಮೋಸ

ನಾನಿನ್ನ ಕಂಡೆ, ಅಲ್ಲಿ-ಇಲ್ಲಿ
ಎಲ್ಲೆಲ್ಲೂ ನಿನ್ನ ಕಂಡೆ |
ಆಟದಲಿ ಕಂಡೆ, ಬೇಟದಲ್ಲಿ ಕಂಡೆ
ಮೈಮಾಟದಲಿ ನಿನ ಕಂಡೆ ||

ಗಂಡಿನ ಅಳುವಲ್ಲಿ, ಹೆಣ್ಣಿನ ನಗುವಲ್ಲಿ
ನಿನ್ನಿರವ ಕಂಡೆ |
ಗೋಸುಂಬೆ ರಂಗಿನಲಿ, ಚಿಟ್ಟೆಯಾ ಕಣ್ಣಿನಲಿ
ನಿನ ಮೊಗವ ಕಂಡೆ ||

ಕುರುಕ್ಷೇತ್ರ ಯುದ್ಧದಲಿ, ಕೃಷ್ಣನ ಕೈಯಲ್ಲಿ
ನಿನ್ನನ್ನೇ ಕಂಡೆ |
ಚತು, ಚತುರ್ಯುಗಗಳಲಿ, ಬದುಕಿನಾ ಬೀದಿಯಲಿ
ನಿನ್ನ ನೆರಳು ಕಂಡೆ ||

ವ್ಯಾಪಾರದ ಮಡಿಲಿನಲಿ, ಪ್ರೀತಿಯ ಉಸಿರಿನಲಿ
ನಿನ ಹೆಸರ ಕಂಡೆ |
ದೇಶಗಳ ನಡುವಿನಲಿ, ಧರ್ಮಗಳ ಬಿಡುವಿನಲಿ
ನಿನ ಬದುಕ ಕಂಡೆ ||

ಶೃಂಗದ ತುದಿಯಲ್ಲಿ, ಭೃಂಗದ ನಗುವಲ್ಲಿ
ನಿನ್ನ ಒಲವ ಕಂಡೆ |
ಮಾನವನೆದೆಯಲ್ಲಿ, ದ್ವೇಷಾಸೂಯೆ ಜೊತೆಯಲ್ಲಿ
ನಿನ ಮನೆಯ ಕಂಡೆ ||

***

(ಈ ಕವಿತೆಯನ್ನು ಬರೆದಿರುವುದು 03-11-2005ರಂದು ದಂಟಕಲ್ಲಿನಲ್ಲಿ)



Wednesday, June 10, 2015

ನನ್ನಾಕೆ

ಹಳ್ಳಿಗಾಡಿನ ಹೊಲದ
ಬದುಕುವ ತೆನೆಗಳ
ಆರಿಸಿ ರಾಗಿಯ ತಂದೆ |

ಜೂಳ್ಳು ಹಾರಿಸಿ ಕಾಳು ಕುಟ್ಟಿ
ಪುಡಿಮಾಡಿ ಹಿಟ್ಟು ಮಾಡಿದೆ
ನೀರು ಬೆರೆಸಿ ಹದವಾಗಿ ತಟ್ಟಿದೆ|

ಕಾರುವ ಬೆಂಕಿ ಬಾಣಲೆಯಲ್ಲಿ
ಹಾಕಿ ಸುಟ್ಟೆ. ಬೇಯಿಸಿದೆ
ಗಟ್ಟಿ ಕಡಕ್ ರೊಟ್ಟಿ ಮಾಡಿದೆ|

ನೆಗ್ಗಿದ ಆಲ್ಯೂಮೀನಿಯಂ
ಬಟ್ಟಲಿನಲ್ಲಿ ಹಾಕಿದೆ
ಖಾರದ ಚಟ್ನಿ ಬೆರೆಸಿದೆ|

ಹದವಾಗಿ ಮುರಿದು ಬಾಯಿಗೆ ಇಡುವ
ಮುನ್ನ ನನ್ನಾಕೆ ಎಂದಳು ರೊಟ್ಟಿ
ಬೇಡ ನಾಳೆ ನನ್ನನ್ನು ಅಂಬಲಿ ಮಾಡಿ|


***

(ಈ ಕವಿತೆಯನ್ನು ಬರೆದಿರುವುದು ಶಿರಸಿ ಮಾರಿಕಾಂಬಾ ನಗರದಲ್ಲಿ ಜೂ.10, 2015ರಂದು)

ಪ್ರೀತಿ-ಶಾಂತಿ

ಪ್ರೀತಿ ನನ್ನ ಜೀವನ
ಶಾಂತಿ ನನ್ನ ಸಾಧನ
ಮನದಿ ಹಲವು ಭಾವನ
ಪ್ರೀತಿ-ಶಾಂತಿ ಕ್ಷಣ ಕ್ಷಣ ||

ಪ್ರೀತಿ-ಪ್ರೀತಿ ಭಾವನ
ಮನಸಿಗೊಂದು ಸಿಂಚನ
ಇಂದು ನನ್ನ ಚೇತನ
ಆಯಿತಲ್ಲ ಸ್ಪಂದನ ||

ಬಾಯಲೇನೋ ಹೊಸತನ
ಶಾಂತಿ ಮಂತ್ರ ಮಣ ಮಣ
ಯುದ್ಧ ಭೀತಿ ಬಂಧನ
ಮಾಡು ನೀ ವಿಮೋಚನ ||

ಪ್ರೀತಿ-ಶಾಂತಿ ತನನನ
ಸೇರಿದೆಡೆ ಚಿಂತನ
ಹರಡಲೊಂದು ಗಾಯನ
ಮುರಲಿ ಮುರಲಿ ಮೋಹನ ||

ಪ್ರೀತಿಯೊಂದು ಕೇತನ
ಶಾಂತಿಯೊಂದು ನರ್ತನ
ಪ್ರೀತಿ-ಶಾಂತಿ ಕೀರ್ತನ
ಮಾಡಲಿ ಅನಿಕೇತನ ||

****

(ಈ ಕವಿತೆಯನ್ನು ಬರೆದಿರುವುದು 19-10-2005ರಂದು ಶಿರಸಿಯ ಎಂ.ಇ.ಎಸ್ ಕಾಲೇಜಿನಲ್ಲಿ)
(ಕವಿತೆ ಬರೆಯಲು ಯಾರು, ಯಾವುದು ಸ್ಪೂರ್ತಿ ಎಂದು ಹೇಳುವುದು ಕಷ್ಟ. ಈ ಕವಿತೆಗೂ ಹಾಗೆಯೇ. ಕಾಲೇಜಿನಲ್ಲಿ ಡೆಸ್ಕಿನ ಮೇಲೆ ಹಲವರು ಹಲವು ರೀತಿಯಲ್ಲಿ ಬರೆಯುತ್ತಾರೆ. ಕುತೂಹಲದಿಂದ ನಾನು ಕಾಲೇಜು ದಿನಗಳಲ್ಲಿ ಅವನ್ನು ಓದುತ್ತಿದ್ದೆ. ಹೆಚ್ಚಿನವು ಡಬ್ಬಲ್ ಮೀನಿಂಗು ಆಗಿದ್ದರೆ ಇನ್ನೂ ಬಹಳಷ್ಟು ಸೆನ್ಸಾರ್ ಪ್ರಾಬ್ಲಮ್ಮಿನವುಗಳಾಗಿದ್ದವು. ಕುತೂಹಲದಿಂದ ಓದುತ್ತಿದ್ದ ನನಗೆ ಡೆಸ್ಕಿನ ಮೇಲಿನ ಅನಾಮಧೇಯ ಬರಹಗಳಲ್ಲಿ ಹೇಳಿಕೊಳ್ಳಲಾಗದ ಪ್ರೀತಿ, ಭಗ್ನ ಪ್ರೇಮ, ಕಾಮ ಇತ್ಯಾದಿ ಕಾಣಿಸುತ್ತಿದ್ದವು. ಇದೂ ಕೂಡ ಅಂತದ್ದೇ ಒಂದು ವಾಕ್ಯದಿಂದ ಸ್ಪೂರ್ತಿಯಾಗಿ ಬರೆದ ಕವಿತೆ. ಯಾರೋ ಅನಾಮಧೇಯ ವ್ಯಕ್ತಿ ಡೆಸ್ಕಿನ ಮೇಲೆ ಪ್ರೀತಿ ನನ್ನ ಜೀವನ, ಶಾಂತಿ ನನ್ನ ಸಾಧನ ಎಂದು ಬರೆದಿದ್ದ. ಅದೇ ಎಳೆ ಇಟ್ಟುಕೊಂಡು ಬರೆದಿದ್ದೇನೆ ಅಷ್ಟೆ. ನೋಡಿ)

Wednesday, June 3, 2015

ಮೌನಿಯಾಗು

ಮೌನಿಯಾಗು ಮನವೇ, ನೀ
ಮೌನಿಯಾಗು ಮನವೆ ||

ಅಲ್ಲಿ ಇಲ್ಲಿ ನೀ ನೋಡದೇ
ಅಲ್ಲಿ ಇಲ್ಲಿ ನೀ ಓಡದೇ
ಢ್ಯಾನಿಯಾಗು ಮನವೇ | ನೀ
ಜ್ಞಾನಿಯಾಗು ಮನವೇ ||

ಹಗಲಲಿ ಕನಸು ಕಾಣದೇ , ನೀ
ಮಾತಲಿ ಮನೆಯ ಕಟ್ಟದೇ
ಬಾವಿಯಾಗು ಮನವೇ | ನೀ
ಅನುಭಾವಿಯಾಗು ಮನವೇ ||

ಕಾಡು ಹರಟೆಯಾ ಆಡದೇ, ನೀ
ಪೊಳ್ಳು ಕೆಲಸವಾ ಮಾಡದೇ
ಶುದ್ಧವಾಗು ಮನವೇ | ನೀ
ಪರಿಶುದ್ಧವಾಗು ಮನವೇ ||

ಪ್ರೀತಿ ಸಹನೆಯ ತೊರೆಯದೇ, ನೀ
ಕಷ್ಟ ದುಃಖಗಳ ಮರೆಯದೇ
ಶಕ್ತಿಯಾಗು ಮನವೇ | ನೀ
ಆತ್ಮದ ಭಕ್ತಿಯಾಗು ಮನವೇ ||

***
(ಈ ಕವಿತೆಯನ್ನು ಬರೆದಿರುವುದು 26-05-2005ರಂದು ಕಾನಲೆಯಲ್ಲಿ)
(ಈ ಕವಿತೆಯನ್ನು ಶಿರಸಿ ತಾಲೂಕಿನ ಉಂಚಳ್ಳಿಯ ಓದುಗರ ವೇದಿಕೆ ಹಮ್ಮಿಕೊಂಡಿದ್ದ ಕವಿಗೋಷ್ಟಿಯಲ್ಲಿ ವಾಚನ ಮಾಡಲಾಗಿದೆ. ಇದೊಂದು ಅಂತರ್ಮುಖಿ ಕವಿತೆ ಎಂದು ಖ್ಯಾತ ವಿಮರ್ಷಕ ಆರ್. ಡಿ. ಹೆಗಡೆ ಆಲ್ಮನೆ ಅವರು ನುಡಿದಿದ್ದಾರೆ)

Tuesday, June 2, 2015

ಮಾಸ್ತರ್ ಮಂದಿ-3

ಸೀಮಾ ಟೀಚರ್ :
                   ನಿಜಕ್ಕೂ ಈ ಟೀಚರ್ ರ ಪೂರ್ಣ ಹೆಸರು ನನಗೆ ಗೊತ್ತಿಲ್ಲ. ಕೆಲವರು ಸೀಮಾ ನಾಯ್ಕ ಎಂದು ಹೇಳಿದರೆ ಮತ್ತೆ ಕೆಲವರು ಸೀಮಾ ಮೇಡಮ್ ಕ್ರಿಶ್ಚಿಯನ್ನರು ಎಂದೂ ಹೇಳಿದ್ದಾರೆ. ಅವರ ಪೂರ್ಣ ಹೆಸರು ಏನೇ ಆಗಿರಲಿ ಅದು ಬಿಡಿ. ಆದರೆ ಅವರ ಬಳಿ ನಾನು ಕಲಿತಿದ್ದು 15 ದಿನಗಳಿರಬೇಕು ಅಷ್ಟೇ. ಸೀಮಕ್ಕೋರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಕಳ್ಳಿಯಲ್ಲಿ ನನಗೆ ಟೀಚರ್ ಆಗಿ ಬಂದಿರಲಿಲ್ಲ. ಬದಲಾಗಿ ನಮ್ಮೂರಿನಲ್ಲಿದ್ದ ಕಿರಿಯ ಪ್ರಾಥಮಿಕ ಶಾಲೆ ದಂಟಕಲ್-ಮುತ್ಮೂರ್ಡು ಶಾಲೆಗೆ ಬಂದಿದ್ದರು. ಶಿರಸಿಯಲ್ಲಿ ಉಳಿದುಕೊಂಡಿದ್ದ ಇವರು ಕಾನಸೂರಿಗೋ, ಅಡ್ಕಳ್ಳಿ ಕತ್ರಿಗೋ ಬಂದು ಅಲ್ಲಿಂದ 4 ಕಿ.ಮಿ ದೂರದ ದಂಟಕಲ್ ಶಾಲೆಗೆ ಅಜೋ ಎಂದು ನಡೆದುಕೊಂಡು ಬರುತ್ತಿದ್ದುದು ನನಗಿನ್ನೂ ನೆನಪನಲ್ಲಿದೆ. ಇವರು ನನಗಿಂತ ನನ್ನ ತಂಗಿಗೆ ಕಲಿಸಿದ ಶಿಕ್ಷಕಿ ಎಂದರೆ ತಪ್ಪಿಲ್ಲ ನೋಡಿ.
                ದಂಟಕಲ್ ಶಾಲೆಗೆ ಏಕೈಕ ಶಿಕ್ಷಕರು. ಈ ಶಾಲೆಯಲ್ಲಿ ಮಕ್ಕಳೆಷ್ಟಿದ್ದಾರೆ ಮಹಾ ಎಂದುಕೊಳ್ಳಬೇಡಿ. ಮ್ಯಾಕ್ಸಿಮಮ್ 10 ಮಕ್ಕಳು. ಇಂತಹ ಶಾಲೆ ನಾನು ಮೂರರಲ್ಲೋ ಅಥವಾ ನಾಲ್ಕರಲ್ಲೋ ಇದ್ದಾಗ ಪುನಾರಂಭ ಮಾಡಿತ್ತು. ಗಾಂಧಿ ಶತಾಬ್ದಿ ಕಾಲದಲ್ಲಿ ನಿರ್ಮಾಣಗೊಂದ ಶಾಲೆ ಎನ್ನುವ ಖ್ಯಾತಿ ಪುನಾರಂಭಕ್ಕೆ ಕಾರಣವಾಗಿತ್ತು. ಶಾಲೆ ಆರಂಭಗೊಂಡ ಹೊಸತರಲ್ಲಿ ಒಂದಿಬ್ಬರು ತಾತ್ಕಾಲಿಕ ಶಿಕ್ಷಕರಿದ್ದರು. ಆದರೆ ಕೊನೆಗೆ ಬಂದವರು ಮಾತ್ರ ಸೀಮಕ್ಕೋರು. ಆ ದಿನಗಳಲ್ಲಿ ನನ್ನದೇ ವಾರಗೆಯ ಪಕ್ಕದ ಮನೆಯ ರಂಜನಾ ಎನ್ನುವಾಕೆ ಈ ಶಾಲೆಗೆ ಹೋಗುತ್ತಿದ್ದಳು. ಜೊತೆಗೆ ನನ್ನ ತಂಗಿ, ತಂಗಿಯ ವಾರಗೆಯ ನಂದನ ಎನ್ನುವಾತನೂ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದ. ಹೀಗಾಗಿ ನಾನು ಅಡಕಳ್ಳಿ ಶಾಲೆಗೆ ಹೋಗುವುದನ್ನು ನಿಲ್ಲಿಸಿ ನಮ್ಮೂರ ಶಾಲೆಗೆ ಹೋಗಲು ಆರಂಭಿಸಿದ್ದೆ. ಸರಿಸುಮಾರು 15ದಿನ ನಾನು ಈ ಶಾಲೆಗೆ ಹೋಗಿದ್ದೆ ಎನ್ನಿಸುತ್ತದೆ. ಕೊನೆಗೊಂದು ದಿನ ಅಡಕಳ್ಳೀ ಶಾಲೆಯ ಗಡ್ಕರ್ ಮಾಸ್ತರ್ ಬಂದು ನಿನ್ನ ಟಿಸಿ ತೆಗೆದುಕೊಂಡು ಹೋಗಲು ನಿನ್ನ ತಂದೆಗೆ ತಿಳಿಸು ಎಂದು ಹೇಳಿದ್ದರು. ನಾನು ಅಪ್ಪನ ಬಳಿ ಹೋಗಿ ಹೀಗೆ ಹೇಳಿದ್ದೆ. ಕೊನೆಗೆ ನನ್ನ ಅಪ್ಪನೇ ಓದಿನ ನಡುವೆ ಶಾಲೆ ಬದಲಾಯಿಸುವುದು ಬೇಡ. ಮುಂದೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದರು. ನಾನು ಮರಳಿ ಅಡ್ಕಳ್ಳಿ ಶಾಲೆಗೆ ಹೋಗಲು ಆರಂಭಿಸಿದ್ದೆ. ಸೀಮಕ್ಕೋರು ನಂತರ ನಾನು ಶಾಲೆಯಿಂದ ಮರಳಿ ಮನೆಗೆ ಬರುವಾಗಲೆಲ್ಲ ಸಿಗುತ್ತಿದ್ದರು. ಬಹಳ ಸುಂದರವಾಗಿಯೂ ಇದ್ದರು ಎನ್ನಿ. ಇಂತಿಪ್ಪ ಅಕ್ಕೋರು ಕೊನೆಗೊಂದು ದಿನ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋದರು. ಮತ್ತೆ ಶಾಲೆಗೆ ಶಿಕ್ಷಕರಿಲ್ಲದೇ ಅನೇಕ ದಿನಗಳ ಕಾಲ ಯಾರು ಯಾರೋ ತಾತ್ಕಾಲಿಕವಾಗಿ ಕಲಿಸಲು ಬರುತ್ತಿದ್ದುದೂ ನೆನಪಿನಲ್ಲಿದೆ.

ತಾರಾ ಹೆಗಡೆ :
            ನಾನು ಇಂದಿಗೂ ನೆನಪು ಮಾಡಿಕೊಳ್ಳುವ ಶಿಕ್ಷಕರ ಪೈಕಿ ತಾರಕ್ಕೋರು ಒಬ್ಬರು. ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಅಡ್ಕಳ್ಳಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದವರು ತಾರಕ್ಕೋರು. ಮೊದಲು ಯಾವ ಶಾಲೆಗೆ ಇದ್ದರೋ ಗೊತ್ತಿಲ್ಲ. ನಮ್ಮ ಶಾಲೆಗೆ ಬರುವ ವೇಳೆಗೆ ನನ್ನ ಪರಿಸ್ಥಿತಿ ಮಾತ್ರ ಅತ್ಯಂತ ಹೀನಾಯವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಯಾರೇ ಶಿಕ್ಷಕರು ಬಂದರೂ ನನಗೆ ಯಥಾನುಶಕ್ತಿ ಹೊಡೆಯುತ್ತಿದ್ದರು. ಶಿಕ್ಷಕರ ಪಾಲಿಗೆ ನಾನು ಹೊಡೆತ ತಿನ್ನುವ ಹುಡುಗನಾಗಿದ್ದೆ. ಪ್ರತಿದಿನ ಹೊಡೆತ ಬೀಳುತ್ತಿತ್ತು. ಕೊನೆಗೊಂದು ದಿನ ತಾರಕ್ಕೋರು ನಮ್ಮ ಶಾಲೆಗೆ ಬಂದರು. ನಮ್ಮ ಕ್ಲಾಸಿನ ಜವಾಬ್ದಾರಿ ಅವರಿಗೆ ಸೇರಿತು. ಅಂದಿನಿಂದ ನನಗೆ ಹೊಡೆತ ಬೀಳುವುದು ಕೆಲಕಾಲ ತಪ್ಪಿತು ಎನ್ನಬಹುದು ನೋಡಿ.
              ತಾರಕ್ಕೋರೊಬ್ಬರೇ ಇರಬೇಕು ನನ್ನ ಪ್ರೈಮರಿ ಜೀವನದಲ್ಲಿ ನನ್ನನ್ನು ಪ್ರೀತಿಯಿಂದ ಕಂಡವರು. ನನಗೂ ಭಾವನೆಯಿದೆ. ನನ್ನ ಮಾತನ್ನೂ ಯಾರಾದರೂ ಕೇಳುತ್ತಾರೆ ಎನ್ನಿಸಿದ್ದು ತಾರಕ್ಕೋರು ಬಂದಮೇಲೆಯೇ. ಬಹುಶಃ ಅತ್ಯಂತ ತುಂಟತನದಿಂದ ಕೂಡಿದ್ದ ನನ್ನನ್ನು ಪ್ರೀತಯಿಂದ ಮಾತನಾಡಿಸಿ ನನ್ನಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿದವರು ಎಂದರೆ ಅದು ತಾರಕ್ಕೋರೇ ಎಂದರೆ ಖಂಡಿತ ತಪ್ಪಲ್ಲ. ನಾಲ್ಕೈದು ವರ್ಷ ಅವರೇ ನನಗೆ ಕಲಿಸಿದವರು. ಅವರ ಪ್ರೀತಿಗೆ, ಆದರಕ್ಕೆ ನಾನು ಇಂದಿಗೂ ಋಣಿಯಾಗಿದ್ದೇನೆ.
             ಶಾಲೆಗಳೆಂದರೆ ಓದು, ಕಲಿಕೆ, ಅರ್ಧಗಂಟೆ ಆಟ, ಹೊಡೆತ ಇತ್ಯಾದಿಗಳೇ ಎಂದುಕೊಂಡಿದ್ದ ನಮಗೆ ತಾರಕ್ಕೋರು ಬಂದ ನಂತರ ಶಾಲೆಯಲ್ಲಿ ರಚನಾತ್ಮಕ ಕೆಲಸಗಳು ನಡೆಯುತ್ತವೆ ಎನ್ನುವುದು ಅರಿವಿಗೆ ಬಂದಿತು. ಪ್ರತಿ ಶನಿವಾರ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನೂ ದೊಡ್ಡ ಕೋಣೆಗೆ ಕರೆದುಕೊಂಡು ಬಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಡು, ಡ್ಯಾನ್ಸು, ಮಿಮಿಕ್ರಿ, ಕಥೆ ಹೇಳುವುದು ಹೀಗೆ ಏನುಬೇಕಾದರೂ ಮಾಡಬಹುದಿತ್ತು. ಯಾರೂ ತಪ್ಪಿಸಿಕೊಳ್ಳುವಂತಿಲ್ಲ ಎನ್ನುವುದು ಕಡ್ಡಾಯವಾಗಿತ್ತು. ಆ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಹಾಡು ಹೇಳುತ್ತಿದ್ದೆ. ಮಿಮಿಕ್ರಿ ಮಾಡುತ್ತಿದೆ. ಯಾವುದೋ ಕಥೆಗಳನ್ನೆಲ್ಲ ಹೇಳುತ್ತಿದೆ. ಕ್ರಿಕೆಟ್ ಆಟಗಾರರು ಹೇಗೆ ಆಡುತ್ತಾರೆ ಎನ್ನುವುದನ್ನೆಲ್ಲ ಥೇಟು ಆಟಗಾರರಂತೆ ಮಾಡಿ ತೋರಿಸುತ್ತಿದೆ. ಪ್ರತಿ ಶನಿವಾರ ಒಳ್ಳೆಯ ಕಾರ್ಯಕ್ರಮ ಕೊಟ್ಟವನಿಗೆ ಚಾಕಲೇಟ್ ಒಂದನ್ನು ಪ್ರೈಜ್ ಆಗಿ ಕೊಡುತ್ತಿದ್ದರು. ಇಂತಹ ಚಾಕಲೇಟನ್ನು ಮೂರೋ ನಾಲ್ಕೋ ತೆಗೆದುಕೊಂಡಿದ್ದೇನೆ ನೋಡಿ. ಕೊನೆಗೊಂದು ದಿನ ನಮ್ಮದೇ ಶಾಲೆಗೆ ಶಿಕ್ಷಕರಾಗಿ ಬಂದ ಸಿ. ಎಂ. ಹೆಗಡೆಯವರು `ಅಕ್ಕೋರೆ ನೀವು ಕಲ್ಚರಲ್ಲು ಅದೂ ಇದೂ ಕಾರ್ಯಕ್ರಮ ಮಾಡಿ ಮಕ್ಕಳ ತಲೆ ಹಾಳು ಮಾಡಬೇಡಿ. ನಮಗೂ ಸುಮ್ಮನೆ ತೊಂದರೆ. ಯಾಕ್ ಹಿಂಗಿದ್ದೆಲ್ಲ ಮಾಡ್ತೀರಿ. ಮಕ್ಕಳು ಓದಿಕೊಳ್ಳಲಿ..' ಎಂದು ಜಗಳ ಮಾಡಿದ ನಂತರ ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತ್ತು.
              ತಾರಕ್ಕೋರು ಮದ್ಯಾಹ್ನದ ಬಿಡುವಿನಲ್ಲಿ ನಿದ್ದೆ ಮಾಡುತ್ತಿದ್ದರು. ಆಗೆಲ್ಲ ನಾವು ಸದ್ದಿಲ್ಲದೇ ಕ್ಲಾಸಿನ ಒಳಕ್ಕೆ ಹೋಗಿ ಏನಾದರೂ ಕಿಲಾಡಿ ಮಾಡಿ ಬರುತ್ತಿದ್ದೆವು. ನಾವು ಕಿಲಾಡಿ ಮಾಡುವುದು ತಾರಕ್ಕೋರಿಗೆ ಗೊತ್ತಿದ್ದರೂ ಸುಮ್ಮನೆ ಇರುತ್ತಿದ್ದರು. ಇಂತಹ ತಾರಕ್ಕೋರು ಆಗಾಗ ತಾವು ತಂದಿದ್ದ ತಿಂಡಿಯನ್ನೂ ನಮಗೆ ನೀಡುತ್ತಿದ್ದರು. ತಾರಕ್ಕೋರು ಎಂದ ಕೂಡಲೇ ಇನ್ನೊಂದು ಪ್ರಮುಖ ಘಟನೆ ನೆನಪಿಗೆ ಬರುತ್ತದೆ ನೋಡಿ. ಕ್ಲಾಸು ಎಷ್ಟು ಎನ್ನುವುದು ಸರಿಯಾಗಿ ನೆನಪಿನಲ್ಲಿ ಇಲ್ಲ. ಶಾಲೆಗಳ ನಡುವಿನ ಕ್ರೀಡಾಕೂಟಕ್ಕಾಗಿ ನಾವು ಕಾನಸೂರಿಗೆ ಹೋಗಬೇಕಿತ್ತು. ನಾನು ಹೋಗಿದ್ದೆ. ಆಗೆಲ್ಲ ಉಲ್ಟಾ ಪಲ್ಟಾ ಎನ್ನುವ ಹೆಸರಿನ ಬಡೆಸೊಪ್ಪಿನ ಮಸಾಲಾ ಮಿಕ್ಸ್ ಬಹಳ ಹೆಸರುವಾಸಿಯಾಗಿತ್ತು. ನಾವೆಲ್ಲ ತಿನ್ನುವುದಕ್ಕಾಗಿ ಅದನ್ನು ಕೊಳ್ಳುತ್ತಿರಲಿಲ್ಲ. ಬದಲಾಗಿ ಅದಕ್ಕೊಂದು ಕ್ರಿಕೆಟ್ ಆಟಗಾರರ ಸ್ಟಿಕ್ಕರ್ ಪ್ರೀ ಬರುತ್ತಿತ್ತು. ಅದಕ್ಕಾಗಿ ಕೊಳ್ಳುತ್ತಿದ್ದೆವು. ಆ ದಿನಗಳಲ್ಲಿ ನಾನು ಹೇಗೋ ಒಂದಿಷ್ಟು ದುಡ್ಡನ್ನು ಸಂಗ್ರಹ ಮಾಡಿ ಇಟ್ಟುಕೊಂಡಿದ್ದೆ. ಅದರಲ್ಲಿ ಒಂದು 10ರು. ನೋಟನ್ನು ತೆಗೆದುಕೊಂಡು ಹೋಗಿ ಇಡೀ 10 ರೂಪಾಯಿಗೆ ಉಲ್ಟಾ ಪಲ್ಟಾ ಕೊಂಡುತಂದಿದ್ದೆ.
                        ಆಗ 10 ರು. ಅಂದರೆ ಈಗಿನ 100 ರು.ಗೆ ಸಮಾ ಬಿಡಿ. ನಾನು ಇಡೀ 10 ರು. ಗೆ ಉಲ್ಟಾ ಪಲ್ಟಾ ಕೊಂಡಿದ್ದು ಉಳಿದೆಲ್ಲ ವಿದ್ಯಾರ್ಥಿಗಳಿಗೂ ಗೊತ್ತಾಗಿಬಿಟ್ಟಿತ್ತು. ಅವರು ಸೀದಾ ಬಂದವರೇ ತಾರಕ್ಕೋರ ಬಳಿ ನಾನು ಮಾಡಿದ ಘನ ಕಾರ್ಯವನ್ನು ಹೇಳಿಯೇ ಬಿಟ್ಟರು. ತಾರಕ್ಕೋರಿಂದ ಬುಲಾವ್ ಬಂದಿತು. ನಾನು ಕೊಂಡಿದ್ದ ವಿಷಯವನ್ನು ಅವರೇ ಹೇಳಿ ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಹೇಳು ಎಂದವರೇ ಹೊಡೆಯಲು ಬೆತ್ತ ಎತ್ತಿದರು. ನಾನು ಹೆದರುತ್ತಲೇ ನಾನು ದುಡ್ಡು ಸಂಗ್ರಹ ಮಾಡಿ ಇಟ್ಟುಕೊಂಡಿದ್ದೆ. ಅದರಲ್ಲಿಯೇ ಇವನ್ನು ತೆಗೆದುಕೊಂಡಿದ್ದು ಎಂದಿದ್ದೆ. ಅದಕ್ಕೆ ಪ್ರತಿಯಾಗಿ `ಹೌದಾ? ನೀನೆ ಸಂಗ್ರಹ ಮಾಡಿಕೊಂಡಿದ್ದಾ? ಹಣ ಸಂಗ್ರಹ ಒಳ್ಳೆಯ ಕೆಲಸ. ಗುಡ್. ಆದರೆ ಸಂಗ್ರಹ ಮಾಡಿದ್ದನ್ನ ಹೀಗೆ ಸೊಕಾ ಸುಮ್ಮನೆ ಹಾಳು ಮಾಡಬೇಡ ತಿಳೀತಾ..?' ಎಂದು ಸಮಾಧಾನದಿಂದ ಹೇಳಿದ್ದು ನನಗೆ ಬಹಳ ಸಂತೋಷ ತಂದಿತ್ತು. ಆದರೆ ಅಕ್ಕೋರ ಬಳಿ ಚಾಡಿ ಹೇಳಿದವರಿಗೆ ಇದು ಬಹಳ ಇರಿಸು ಮುರುಸು ಎಂಬಂತಾಗಿತ್ತು.
                 ಅದೇ ಹುಡುಗರು ಸೀದಾ ಹೋಗಿ ನನ್ನ ಅಪ್ಪನ ಬಳಿಯೂ ಚಾಡಿ ಹೇಳಿಬಿಟ್ಟಿದ್ದರು. ಕೆಂಪು ಕಣ್ಣು ಬಿಡುತ್ತಾ ಬಂದಿದ್ದ ಅಪ್ಪ ಸೀದಾ ತಾರಕ್ಕೋರ ಬಳಿ ಬಂದಿದ್ದ. ತಾರಕ್ಕೋರ ಎದುರು ನನ್ನನ್ನು ಬಯ್ಯಲು ಆರಂಭಿಸಿದ್ದ ಅಪ್ಪ ಸಿಕ್ಕಾಪಟ್ಟೆ ಕೂಗಾಡಿದ್ದ. ತಾರಕ್ಕೋರು ನಾನು ಹಣವನ್ನು ಕೂಡಿಟ್ಟಿದ್ದನ್ನು ಹೇಳಿದರೂ ಅಪ್ಪನ ಸಿಟ್ಟು ಕಡಿಮೆಯಾಗಿರಲಿಲ್ಲ. ಕೊನೆಗೆ ಮನೆಗೆ ಹೋದ ನಂತರ ಅಪ್ಪನೇ `ತಮಾ ಎಲ್ಲಿ ಇಟ್ಟಿದ್ದೆ ನೀನು ದುಡ್ಡು ಸಂಗ್ರಹ ಮಾಡಿ. ಯಂಗೂ ತೋರ್ಸು..' ಎಂದಿದ್ದ. ನಾನು ತೋರಿಸಿದ್ದೆ. ಮರುದಿನ ಬೆಳಗಾಗುವ ವೇಳೆಗೆ ನಾನು ಸಂಗ್ರಹ ಮಾಡಿದ್ದ ದುಡ್ಡು ಮಾತ್ರ ಇರಲೇ ಇಲ್ಲ. ಎಲ್ಲವೂ ಅಪ್ಪನ ಓಸಿ ಆಟಕ್ಕೆ ಬಲಿಯಾಗಿದ್ದವು. ಈಗಲೂ ಅಪ್ಪ ತಾನು ಆ ದಿನ ಮಾಡಿದ್ದನ್ನು ನೆನಪು ಮಾಡಿಕೊಂಡು `ತಮಾ ನಾ ಹಾಂಗ್ ಮಾಡಕಾಗಿತ್ತಿಲ್ಲೆ ಆವತ್ತು..' ಎನ್ನುತ್ತಿರುತ್ತಾನೆ. ಆಗ ತಾರಕ್ಕೋರು ನನಗೆ ನೆನಪಾಗುತ್ತಾರೆ.
                ಅದೊಂದು ದಿನ ಆಟದ ಸಮಯದಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತಿದ್ದೆವು. ಅದೇನು ಅನ್ನಿಸಿತೋ ತಾರಕ್ಕೋರು ತಾನೂ ಕ್ರಿಕೆಟ್ ಆಡುತ್ತೇನೆ ಎಂದು ಬಂದೇ ಬಿಟ್ಟರು. ತಾರಕ್ಕೋರು ಬಂದಿದ್ದು ನೋಡಿ ಅಲ್ಲೇ ಇದ್ದ ಇನ್ನೋರ್ವ ಶಿಕ್ಷಕ ಸಿ. ಎಂ. ಹೆಗಡೆಯವರೂ, ಹರೀಶ ನಾಯ್ಕರೂ ಬಂದರು. ನಾನು ಬ್ಯಾಟಿಂಗಿಗೆ ಇಳಿದಿದ್ದೆ. ನನ್ನ ಬ್ಯಾಟಿಂಗಿಗೆ ಎಲ್ಲಿ ಚಕ್ರ ಬಂದು ಬಿಡುತ್ತದೆಯೋ ಎಂದುಕೊಂಡು ಢವ ಢವ ಗುಡುತ್ತಲೇ ಇದ್ದೆ. ಬಂದವರೇ ತಾರಕ್ಕೋರು ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಬ್ಯಾಟಿಂಗಿಗೆ ನಿಂತರು. ಅಯ್ಯೋ ನಾನು ತಾರಕ್ಕೋರ ಜೊತೆ ಬ್ಯಾಟಿಂಗಿಗೆ ನಿಲ್ಲಬೇಕಾ? ನಾನು ರನ್ ಹೊಡೆದರೆ ಅವರ ಕೈಲಿ ಓಡಲು ಆಗುತ್ತದೆಯೇ ಎನ್ನುವ ಆಲೋಚನೆ ಮೂಡಿತು. ಅದಕ್ಕೆ ಸರಿಯಾಗಿ ಸಿ. ಎಂ. ಹೆಗಡೆಯವರು ಬೌಲಿಂಗಿಗೆ ನಿಂತರು. ಹರೀಶ ನಾಯ್ಕರು ಕೀಪಿಂಗಿಗೆ ಬಂದರು. ಸಿ. ಎಂ. ಹೆಗಡೆಯವರಿಗೂ ನನಗೂ ಎಣ್ಣೆ-ಸೀಗೆಕಾಯಿ. ಆಟಕ್ಕೆ ಬರುವ ಮೊದಲೇ ಎಲ್ಲರ ಬಳಿಯೂ ವಿನಯ ಬ್ಯಾಟಿಂಗ್ ಮಾಡುತ್ತಿದ್ದಾನೆ. ತಡೀರೋ ನಾನು ಬೌಲಿಂಗ್ ಮಾಡ್ತೆ ಎಂದು ಹೇಳಿದ್ದರು ಅಷ್ಟೇ ಅಲ್ಲ ನನ್ನನ್ನು ಬೌಲ್ಡ್ ಮಾಡುತ್ತೇನೆ ಎಂದೂ ಹೇಳಿಬಿಟ್ಟಿದ್ದರು.
                  ಯಾವಾಗಲೂ ನನಗೆ ಹೊಡೆಯುವ, ನನ್ನ ವಿರುದ್ಧ ಸಿಟ್ಟು ಮಾಡುವ ಮಾಸ್ತರ್ರು ಬೌಲಿಂಗಿಗೆ ಬಂದಿದ್ದಾರೆ. ಒಮ್ಮೆಯಾದರೂ ಅವರ ಮರ್ಯಾದೆಯನ್ನು ತೆಗೆಯಬೇಡವೇ ಎಂದುಕೊಂಡೆ ನಾನು. ಏನಾದರಾಗಲಿ ಅವರಿಗೆ ಔಟಾಗಬಾರದು ಎಂದುಕೊಂಡೆ. ಅದಕ್ಕೆ ಸರಿಯಾಗಿ ಬೌಲ್ ಮಾಡಿದರು. ಮೊದಲ ಬಾಲಿಗೆ ಬೌಂಡರಿ ಹೊಡೆದೆ. ಎರಡನೇ ಬಾಲಿಗೂ ಹೊಡೆದೆ. ನಾನು ಎರಡು ಬೌಂಡರಿ ಹೊಡೆದಿದ್ದೇ ತಡ ಮಾಸ್ತರಿಗೆ ಸಿಟ್ಟು ಏರಿಬಿಟ್ಟಿತು. ಮೂರನೇ ಬಾಲನ್ನು ಸಿಟ್ಟಿನಿಂದಲೇ ಹಾಕಿದರು. ನಾನು ಅಷ್ಟೇ ಸಿಟ್ಟಿನಿಂದ ಹೊಡೆದೆ. ನನ್ನ ತಾಕತ್ತನ್ನೆಲ್ಲ ಹಾಕಿ ಹೊಡೆದಿದೆ. ಆದರೆ ಚೆಂಡು ಮಾತ್ರ ವೇಗವಾಗಿ ಹೋಗಿ ನಾನ್ ಸ್ಟ್ರೈಕರ್ ಎಂಡಿನಲ್ಲಿ ಬ್ಯಾಟ್ ಹಿಡಿದುಕೊಂಡಿದ್ದ ತಾರಕ್ಕೋರಿಗೆ ಬಡಿಯಿತು. ಬಡಿದ ಹೊಡೆತಕ್ಕೆ ದಬಾರನೆ ಬಿದ್ದರು. ಬಿದ್ದವರೇ ಅಳಲು ಆರಂಭಿಸಿದರು. ನನಗೆ ಮಾತ್ರ ಸಿಕ್ಕಾಪಟ್ಟೆ ಗಾಬರಿಯಾಯಿತು. ಅಕ್ಕೋರಿಗೆ ಹೊಡೆದುಬಿಟ್ಟೆನಲ್ಲ ಎಂದು ಮನಸ್ಸಿನಲ್ಲಿ ಕಾಡಿತು. ಅಕ್ಕೋರು ಸುಧಾರಿಸಿಕೊಳ್ಳಲು ಬಹಳ ಹೊತ್ತು ಬೇಕಾಯಿತು. ಅಷ್ಟರಲ್ಲಿ ಅಕ್ಕೋರಿಗೆ ನಾನು ಬಾಲ್ ಹೊಡೆದೆ ಎನ್ನುವ ಕಾರಣಕ್ಕಾಗಿ ಸಿ. ಎಂ. ಹೆಗಡೆ ಮಾಸ್ತರ್ರು ದಬಾ ದಬಾ ನಾಲ್ಕೇಟು ಹೊಡೆದೂ ಆಗಿತ್ತು. ಅವರು ಹೊಡೆದ ಏಟಿನ ಹಿಂದೆ ನಾನು ಬೌಂಡರಿ ಹೊಡೆದಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ರೊಚ್ಚೂ ಕೂಡ ಇತ್ತು ಎನ್ನಿ. ಸಿ. ಎಂ. ಹೆಗಡೆಯವರ ಹೊಡೆತದ ಸದ್ದಿನ ನಡುವೆ ತಾರಕ್ಕೋರು ವಿನಯಂದೆಂತಾ ತಪ್ಪಿಲ್ಲೆ. ಅವಂಗೆ ಎಂತಕ್ ಹೊಡಿತ್ರಿ ಎಂದು ಹೇಳುತ್ತಿದ್ದುದು ಮಾತ್ರ ಯಾರ ಕಿವಿಗೂ ಬೀಳಲೇ ಇಲ್ಲ.
                ಇಷ್ಟಾದ ಮೇಲೂ ಈ ಅಕ್ಕೋರಿಗೆ ನಾನು ಎಂದರೆ ಅಕ್ಕರೆಯಾಗಿತ್ತು. ನಾನು ಯಾವಾಗಲೂ ಹೋಂವರ್ಕ್ ಮಾಡುವಲ್ಲಿ ಕಳ್ಳಬೀಳುತ್ತಿದ್ದೆ. ಪ್ರತಿದಿನ ಏನಾದರೂ ಪಿಳ್ಳೆನೆವ ಹೇಳುತ್ತಿದ್ದೆ. ಆಗೆಲ್ಲ ಪಾಪ ಅಕ್ಕೋರು ನನಗೆ ಹೊಡೆಯದೇ ಸುಮ್ಮನೇ ಬಿಡುತ್ತಿದ್ದರು. ನಾವು ಒಂದೂ ತಪ್ಪಿಲ್ಲದೇ ಬರೆಯಬೇಕು ಎನ್ನುವ ಕಾರಣಕ್ಕಾಗಿ ಉಕ್ತಲೇಖನ ಬರೆಸುತ್ತಿದ್ದರು. ವಿಶೇಷವಾಗಿ ಇಂಗ್ಲೀಷ್ ಶುದ್ಧಬರಹವನ್ನೂ ಬರೆಸುತ್ತಿದ್ದರು. ಇವರು ಹೀಗೆ ಬರೆಸಿದ್ದರ ಮಹತ್ವ ನಮಗೆ ಆಗ ಆಗಿರಲಿಲ್ಲ. ಈಗ ಪತ್ರಿಕೋದ್ಯಮ ವೃತ್ತಿಗೆ ಕಾಲಿಟ್ಟಮೇಲೆ ಅವರು ಬರೆಸುತ್ತಿದ್ದುದರ ಮಹತ್ವ ಅರಿವಾಗುತ್ತಿದೆ. ತಪ್ಪಿಲ್ಲದೇ ಬರೆಯುವುದರ ಹಿಂದಿನ ಮಹತ್ವ ಗೊತ್ತಾಗುತ್ತಿದೆ.
              ಜಿ. ಎಸ್. ಭಟ್ಟರು ಸತ್ತಾಗ ಮಕ್ಕಳಂತೆ ರೋಧಿಸಿದ್ದ ತಾರಕ್ಕೋರು, ಆಗಿನ್ನೂ ಅಂಬೆಗಾಲೂ ಇಡದಷ್ಟು ಚಿಕ್ಕದಾಗಿದ್ದ ಮಗಳನ್ನು ಶಾಲೆಗೆ ಕರೆದುಕೊಂಡು ಬಂದಾಗ ನೋಡೋ ವಿನಯ ನನ್ ಮಗಳು ಎಂದು ತೋರಿಸಿದ್ದ ಅಕ್ಕೋರು, ನಾನು ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ನೂರಕ್ಕೂ ಹೆಚ್ಚು ಪೇರಲೇ ಹಣ್ಣನ್ನು ಕಿತ್ತುಕೊಂಡು ಹೋದಾಗ ಇಷ್ಟೆಲ್ಲ ನಂಗೆ ಹೇಳಿ ತಂದ್ಯನಾ ವಿನಯಾ. ಒಂದೆರಡು ಸಾಕಾಗಿತ್ತಾ. ಇದೆಲ್ಲ ತಗಂಡು ಹೋಗಿ ಮಾರ್ಕೇಟಲ್ಲಿ ಮಾರಾಟ ಮಾಡವನಾ. ಥೋ ಮಾರಾಯಾ ಎಂದು ಹೇಳಿದ ತಾರಕ್ಕೋರು. ಶಾಲೆಗೆ ಕಳ್ಳಬಿದ್ದಾಗಲೆಲ್ಲ ಪಾಪ ಎಂದು ಸುಮ್ಮನೇ ಬಿಟ್ಟ ಅಕ್ಕೋರು, ತುಂಟತನಗಳನ್ನೆಲ್ಲ ಸಹಿಸಿಕೊಂಡಿದ್ದ ಅಕ್ಕೋರು, ಎಲ್ಲದಕ್ಕೂ ಹೊಡೆತವೇ ಅಂತಿಮ ತೀರ್ಪಲ್ಲ ಎಂದುಕೊಂಡು ಅಕ್ಕರೆಯಿಂದ ಕಾಣುತ್ತಿದ್ದ ಅಕ್ಕೋರು ನಮ್ಮ ಶಾಲೆಯಿಂದ ವರ್ಗವಾದಾಗ ಮಾತ್ರ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಈಗಲೂ ಅಕ್ಕೋರು ಆಗಾಗ ಕಾಣುತ್ತಿರುತ್ತಾರೆ. ಅವರು ಕಂಡಾಗಲೆಲ್ಲ ನಿಲ್ಲಿಸಿ ನಮಸ್ಕರಿಸೋಣ ಎನ್ನಿಸುತ್ತದೆ. ಆದರೆ ಹಾಗೆ ಮಾಡದೇ ನಾನು ಸುಮ್ಮನೇ ಇದ್ದೇನೆ. ತಾರಕ್ಕೋರಿಗೆ ಸಲಾಂ.

ರಮೇಶ ನಾಯ್ಕ :
          ದಂಟಕಲ್ ಶಾಲೆಗೆ ಟೀಚರ್ರಾಗಿದ್ದ ಸೀಮಕ್ಕೋರು ವರ್ಗವಾದ ನಂತರ ಬಂದವರೇ ರಮೇಶ ಮಾಸ್ತರ್ರು. ಇವರು ನನಗೆ ಎಂದೂ ಕಲಿಸಿದವರಲ್ಲ. ಆದರೆ ಆಗೀಗ ಜೊತೆಗೆ ಮಾತಾಡುತ್ತಿದ್ದರು. ಕ್ರಿಕೆಟ್ ಆಡುತ್ತಿದ್ದರು. ಚಸ್ ಕೂಡ ಆಡುತ್ತಿದ್ದರು. ಈ ಮಾಸ್ತರ್ರು ಎಂದಕೂಡಲೇ ತಂಗಿ ಸುಪರ್ಣ `ಕರೀ ರಮೇಶ ಮಾಸ್ತರ್ರು' ಎಂದು ಕರೆಯುತ್ತಿದ್ದುದು ಇನ್ನೂ ನೆನಪಿನಲ್ಲಿದೆ. ನೋಡಲಿಕ್ಕೆ ಒಂದು ಹಳೆಯ ಸಿನೆಮಾ ಹೀರೋ ಥರ ಇದ್ದರೂ ಬಹಳ ಕಪ್ಪಾಗಿದ್ದರು. ಗಡ್ಡ ಬಿಟ್ಟಿದ್ದರು. ನಮ್ಮ ಶಾಲೆಯ ಪಕ್ಕದಲ್ಲೇ ಇದ್ದ ಕ್ವಾಟ್ರಸ್ ಒಂದರಲ್ಲಿ ಉಳಿದುಕೊಂಡಿದ್ದರು. ನಮ್ಮ ಶಾಲೆಯ ಶಿಕ್ಷಕರಾಗಿದ್ದ ಹರೀಶ ಮಾಸ್ತರ್ರ ಜೊತೆಯಲ್ಲಿದ್ದರು. ನಮ್ಮ ಶಾಲೆಯ ಹೆಡ್ ಮಾಸ್ತರ್ರಾಗಿ ಬಂದಿದ್ದ ರಮೇಶ ಗಡಕರ್ ಮಾಸ್ತರ್ರ ಜೊತೆ ಚೆಸ್ ಆಡುತ್ತಿದ್ದರು. ಇವಿಷ್ಟು ಮಾತ್ರ ರಮೇಶ ನಾಯ್ಕರ ಬಗೆಗಿದ್ದ ನೆನಪುಗಳು ನೋಡಿ. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ.

ನೆನಪುಗಳು

ನೆನಪುಗಳು ಮಧುರ
ಕನಸುಗಳು ಮಧುರ |

ಅದೊಂದು ದಿನ ಏಕಾಂತದಿ
ನಾ ಬಲು ಬೇಸರಗೊಂಡಿದ್ದಾಗ
ನನಗೆ ನೆನಪಾಗಿದ್ದು ನೀನೆ |

ನಿನ್ನ ಜೊತೆಯಲಿ ನಾನು
ಎಲ್ಲ ಕಡೆ ತಿರುಗಿದ್ದು
ಈಗ ನೆನಪಾಯ್ತು ಬೇಗ |

ನಿನ್ನೊಡನೆ ನಡೆವಾಗ
ಹಲವು ನುಡಿ ನುಡಿವಾಗ
ಕಳೆದ ಕ್ಷಣವದೇ ಚಂದ |

ನಿನ್ನ ಧ್ವನಿಯನು ಕೇಳಿ
ನಾ ಪುಳಕಗೊಂಡಾಗ
ಮುಗುಳ್ನಗು ಸೂಸಿದ್ದು ನೀನೆ |

ಕನಸು ಕಾಣುವ ಸಮಯ
ಮಡದಿಯಾ ಧ್ವನಿ ಕೇಳಿ
ಬೆಚ್ಚಿ ಬಿದ್ದಿದ್ದು ಮಾತ್ರ ಈಗ ||

****

(ಈ ಕವಿತೆ ಬರೆದಿರುವುದು 10-02-2005ರಂದು ದಂಟಕಲ್ಲಿನಲ್ಲಿ)

Sunday, May 31, 2015

ಅಂತರಾಳ

ಮಾರುತ್ತೇನೆ ರಾತ್ರಿಗಳನು
ನಾನೊಬ್ಬಳು ವೇಶ್ಯೆ
ಹಂಚುತ್ತೇನೆ ಸುಖದ ಗಳಿಗೆ
ಬಾಕಿ ಉಳಿದ ವಿಷಯೆ|

ದಿನ ದಿನವೂ ಮಾಘಸ್ನಾನ
ಜೀವ ಹೃದಯ ತತ್ತರ
ಪುರುಷ ಕೆರಳಿ ಕಾಮ ಅರಳಿ
ಬತ್ತುತಿದೆ ನೆತ್ತರ |

ಒಲವಿಗಿಲ್ಲಿ ಜಾಗವಿಲ್ಲ
ನಿತ್ಯ ಪುರುಷ ನೂತನ
ಹಗಲಿಗೆಂದೂ ಬೆಲೆಯೇ ಇಲ್ಲ
ಇರುಳುಗುದುರೆ ನರ್ತನ |

ಜಾತಿಯಿಲ್ಲ ಬೇಧವಿಲ್ಲ ನನ್ನ
ಪಾಲಿಗೊಂದೇ ಎಲ್ಲರು
ಬದುಕು ಹೀರಿ ಮಾಡಿ ಸೂರೆ
ಛೀ ಥೂ ಎಂದರು|

ಸುಖವ ಮಾರುತ್ತೇನೆ ಬನ್ನಿ
ನೋವನೆಂದು ಮರೆಯಿರಿ
ನಾನು ಬಳಲಿ ನೀವು ಅರಳಿ
ಚರಮ ಸುಖವ ಪಡೆಯಿರಿ |

***

(ಈ ಕವಿತೆಯನ್ನು ಬರೆದಿರುವುದು ಮೇ.31, 2015ರಂದು ಶಿರಸಿಯಲ್ಲಿ)

Saturday, May 30, 2015

ಬಾಲ್ಯ-ನೆನಪು

ಜೀವನದ ಕೊನೆಯ
ಪುಟದಲ್ಲಿದ್ದ ಆತನಿಗೆ
ಅಂದು ನೆನಪಾಯ್ತು
ತನ್ನ ಅಂದದ ಬಾಲ್ಯ ||

ಕಳೆದ ಹೋಗಿರುವ
ನೂರಾರು ಕನಸುಗಳ
ಬಾಲ್ಯದ ಚೇಷ್ಟೆಗಳ
ನೆನೆದಾತ ಹಿಗ್ಗಿದ ||

ಬಾಲ್ಯದಲಿ ಅಂದು
ಮರಕೆ ಕಲ್ಲು ಹೊಡೆದಿದ್ದು
ಕಿಟಕಿ ಗಾಜು ಒಡೆದಿದ್ದು
ನೆನೆನೆದು ನಕ್ಕ ||

ಅಂದು ಆ ಶಾಲೆಯಲಿ
ಆ ದುಷ್ಟ ಮಾಸ್ತರರು
ರೋಲು ದೊಣ್ಣೆಲಿ ಹೊಡೆದ
ವಿಷಯವನು ನೆನೆದ ||

ಬಾಲ್ಯದ ತುಂಟತನ
ಕೆಲವುಸಲ ಮೊಂಡುತನ
ಹಟಮಾರಿ ತನಗಳನು
ಕ್ಷಣ ಕ್ಷಣವೂ ನೆನೆದ ||

ಬಾಲ್ಯ ಮಾತ್ರ ನೆನಪು
ಸನಿಹವಿದೆ ಸಾವು
ಬದುಕು ತಿರುಗುವುದಿಲ್ಲ
ಎಂದವನೇ ಬೆದರಿದ ||

ಅಯ್ಯೋ| ಎಲ್ಲಿ ಹೋಯ್ತು ಬಾಲ್ಯ
ಆ ಕ್ಷಣವದು ಅಮೂಲ್ಯ
ಇನ್ನು ಬಾರದು ತನಗೆ
ಎಂದಾತ ಕೊರಗಿದ ||

***

(ಈ ಕವಿತೆಯನ್ನು ಬರೆದಿರುವುದು 09-02-2005ರಂದು ದಂಟಕಲ್ಲಿನಲ್ಲಿ)

Thursday, May 28, 2015

ಮಾಸ್ತರ್ ಮಂದಿ-2

ಗಂಗಾ ನಾಯ್ಕ :
           ನಾನು ಒಂದು ಹಾಗೂ ಎರಡನೇ ಕ್ಲಾಸ್ ಓದುತ್ತಿದ್ದ ಸಂದರ್ಭದಲ್ಲಿಯೇ ನಮ್ಮ ಶಾಲೆಗೆ ಶಿಕ್ಷಕಿಯಾಗಿ ಬಂದವರು ಗಂಗಾ ನಾಯ್ಕ ಅವರು. ಗಂಗಾ ನಾಯ್ಕ ಅವರು ನಮ್ಮ ಶಾಲೆಗೆ ಬರುವ ವೇಳೆಗೆ ಕುಳ್ಳೀಶ್ವರ ನಾಯ್ಕ ಅವರು ಶಾಲೆಯಿಂದ ವರ್ಗಾವಣೆಯಾಗಿ ಹೋಗಿದ್ದರೆಂದೇ ಹೇಳಬಹುದು. ಒಂದು ಅಥವಾ ಎರಡು ವರ್ಷ ಇವರು ನಮ್ಮ ಶಾಲೆಯಲ್ಲಿದ್ದರು. ನಾನು 2ನೇ ಕ್ಲಾಸಿನಲ್ಲಿದ್ದಾಗ ನನಗೆ ಕಲಿಸಿದ ನೆನಪು. 
                  ಇವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಒಂದು ಘಟನೆ ಇನ್ನೂ ನೆನಪಿದೆ. ಆಗ ನಮ್ಮೂರಿನಲ್ಲಿ ಆಲೆಮನೆಯ ಸಂಭ್ರಮ. ನಮ್ಮ ಮನೆಯದ್ದೇ ಆಲೆಮನೆ ನಡೆಯುತ್ತಿತ್ತು ಎನ್ನಬಹುದು. ನಮ್ಮೂರಿನಿಂದ ಐದಾರು ಜನರು ಶಾಲೆಗೆ ಬರುತ್ತಿದ್ದೆವು. ನಮಗೆಲ್ಲರಿಗೂ ಆಲೆಮನೆಗೆ ಹೋಗುವ ಆಸೆ. ಆದರೆ ಆಲೆಮನೆಗೆ ಹೋಗಬೇಕು ಎಂದು ಹೇಳಿದರೆ ಶಾಲೆಗೆ ರಜಾ ಕೊಡುತ್ತಿರಲಿಲ್ಲ. ಈ ಕಾರಣದಿಂದಲೇ ನಾವೆಲ್ಲ ಸೇರಿ ಐಡಿಯಾ ಮಾಡಿದ್ದೆವು. ನಮ್ಮೂರಿನ ಎಲ್ಲರೂ ಒಂದಲ್ಲ ಒಂದು ನೆಪ ಹೂಡಿ ರಜಾ ಕೇಳಲು ಹೊರಟೆವು. ಇದ್ದವರಲ್ಲಿಯೇ ನಾನು ಚಿಕ್ಕವನು. ನಾನೇ ಮೊದಲು ರಜಾ ಕೇಳಲು ಹೋದೆ. ನಮ್ಮ ಮನೆಯಲ್ಲಿ ಅದೇನೋ ಪೂಜೆ ಇದೆ. ಹಾಗಾಗಿ ಶಾಲೆಯಿಂದ ಸ್ವಲ್ಪ ಬೇಗನೆ ಕಳಿಸಿಕೊಡಿ ಎಂದು ಗಂಗಕ್ಕೋರ ಹತ್ತಿರ ಕೇಳಿಕೊಂಡೆ. ನಾನು ಪುಟ್ಟ ಪುಟ್ಟಗೆ, ಕುಳ್ಳಗಿದ್ದೆನಲ್ಲ. ಅದೇನೆನ್ನಿಸಿತೋ ಏನೋ. ಕಳಿಸಿಕೊಡಲು ಒಪ್ಪಿದರು. ನಾನು ಖುಷಿಯಿಂದ ಹೋಗಲು ತಯಾರಾದೆ. ಆದರೆ ದುರದೃಷ್ಟಕ್ಕೆ ನಮ್ಮೂರಿನ ಉಳಿದ ಯಾರಿಗೂ ರಜಾವನ್ನೇ ಕೊಡಲಿಲ್ಲ. ಅವರ್ಯಾರೂ ಬರಲಿಲ್ಲ-ನಾನೊಬ್ಬನೇ ಯಾಕೆ ಮನೆಗೆ ಹೋಗುವುದು ಎಂದುಕೊಂಡೆ. ಜೊತೆಗೆ ನಮ್ಮೂರಿಗೆ ಹೋಗುವ ದಾರಿ ಕಾಡಿನ ದಾರಿ. ನನಗೆ ಆಗ ಸಿಕ್ಕಾಪಟ್ಟೆ ಹೆದರಿಕೆ ಬೇರೆ. ಹಾಗಾಗಿ ಹೋಗದೇ ಉಳಿದಕೊಂಡು ಬಿಟ್ಟೆ.
               ನಾನು ಮನೆಗೆ ಹೋಗದೇ ಶಾಲೆಯಲ್ಲಿ ಉಳಿದುಕೊಂಡಿದ್ದು ಹಾಗೂ ಮನೆಗೆ ಹೋಗಲು ಸುಳ್ಳು ಹೇಳಿದ ವಿಚಾರ ಅದ್ಹೇಗೆ ಗೊತ್ತಾಯಿತೇನೋ. ಅಥವಾ ನನ್ನ ಹಾಗೆ ಮನೆಗೆ ಬರಲು ರಜಾ ಸಿಗದ ನಮ್ಮೂರಿನ ಹುಡುಗರೇ ಹೇಳಿಬಿಟ್ಟಿದ್ದರೇನೋ ಗೊತ್ತಿಲ್ಲ. ಕ್ಲಾಸ್ ರೂಮಿಗೆ ಬಂದವರೇ `ವಿನಯ ಮನೆಗೆ ಹೋದನಾ?' ಎಂದು ಕೇಳಿದರು. ನಾನು ಹೋಗದೇ ಇರುವ ವಿಚಾರವನ್ನು ಉಳಿದ ಹುಡುಗರು ಹೇಳಿದರು. ಆಗ ಕೊಟ್ಟರು ನೋಡಿ ಏಟನ್ನಾ.. ಯಪ್ಪಾ ಯಪ್ಪಾ.. ದಡಾ ಬಡಾ ಹೊಡೆದರು. `ಸುಳ್ ಹೇಳ್ತಿಯೇನೋ.. ಇನ್ನೊಂದ್ ಸಾರಿ ಹಿಂಗೆ ಮಾಡು. ನಿನ್ ಚರ್ಮ ಸುಲಿದು ಬಿಡ್ತೇನೆ..' ಎಂದು ಬೈದರು. ನಾನು ಅತ್ತು ಅತ್ತು ಬಾಡಿದ್ದು ಇನ್ನೂ ನೆನಪಿನಲ್ಲಿದೆ. ಗಂಗಕ್ಕೋರು ಎಂದರೆ ನನಗೆ ನೆನಪಿದ್ದಿದ್ದು ಇಷ್ಟೇ ನೋಡಿ.
             ಇನ್ನೊಬ್ಬರು ಅಕ್ಕೋರಿದ್ದರು. ಅವರ ಹೆಸರು ಬಹುಶಃ ಸುಮಿತ್ರಕ್ಕೋರು ಇರಬೇಕು. ಕೊಂಕಣಿಗರು. ಮೂರು ತಿಂಗಳೋ ನಾಲ್ಕು ತಿಂಗಳೋ ಕಳಿಸಲು ಬಂದಿದ್ದರು. ಅವರ ಬಗ್ಗೆ ಹೆಚ್ಚಿಗೆ ಏನೂ ವಿಶೇಷವಿಲ್ಲ. ಕಲಿಸಲು ಬಂದವರಿಗೆ ಮದುವೆಯಾಯಿತು. ನಮ್ಮೂರಿನ ಬಳಿಯೇ ಈಗಲೂ ಇದ್ದಾರೆ ಅವರು. ಇಂವ ನನ್ನ ಸ್ಟೂಡೆಂಟ್ ಆಗಿದ್ದ ಎಂದು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅವರ ಬಳಿ ಹೆಸರು ಕೇಳಲು ಮುಜುಗರವಾಗಿ ಸುಮ್ಮನೇ ಇದ್ದೇನೆ.

ಜಿ. ಎಸ್. ಭಟ್ಟ್:
             ಗಣೇಶ ಭಟ್ಟರು ಎಂಬ ಹೆಸರಿನ ಈ ಮಾಸ್ತರ್ರಂತೂ ಯಾವತ್ತಿಗೂ ಮರೆಯೋಕಾಗೋದಿಲ್ಲ ಬಿಡಿ. ಜಿ. ಎಸ್. ಭಟ್ರು ಎನ್ನುವ ಹೆಸರನ್ನು ಕೇಳಿದ ತಕ್ಷಣ ನಾವೆಲ್ಲ ಭಯಂಕರ ಹೆದರುತ್ತಿದ್ದ ಕಾಲವೊಂದಿತ್ತು. ಅವರ ಹೊಡೆತ, ಅವರ ಸಿಟ್ಟು ಅಯ್ಯಪ್ಪಾ ಯಾರಿಗೂ ಬೇಡ. ಜಿ. ಎಸ್. ಭಟ್ಟರು ಶಾಲೆಗೆ ಬರುವಾಗ ಒಂದು ಡಜನ್ ಕೋಲುಗಳನ್ನು ಹೊಡೆತಕ್ಕಾಗಿಯೇ ತರುತ್ತಾರೆ ಎನ್ನುವ ಮಾತುಗಳೂ ಇದ್ದವು. ಡಜನ್ ಕೋಲುಗಳು ಖಾಲಿಯಾಗಿ ಶಾಲೆಯ ಆವರಣದಲ್ಲಿದ್ದ ಗಾಳಿ ಶೆಳಕೆ, ಹುಳಸೇ ಬರಲುಗಳನ್ನೆಲ್ಲ ಮತ್ತಷ್ಟು ಮುರಿದು ತರಲು ಆಜ್ಞಾಪಿಸುತ್ತಿದ್ದರು. ಅವರ ಸಿಟ್ಟಿಗೆ ಬಲಿ ಬೀಳದವರು ಯಾರೂ ಇರಲಿಲ್ಲ ನೋಡಿ. ನಾನು ಅವರ ಬಳಿ ಅದೆಷ್ಟೋ ಹೊಡೆತ ತಿಂದಿದ್ದೇನೆ. ಮೂ, ಕೈ, ಕಾಲುಗಳ ಮೇಲೆಲ್ಲ ಬಾಸುಂಡೆ ಬಂದಿದ್ದಿದೆ.
               ನನಗಿಂತ ಎರಡು ತರಗತಿಗಳ ಮೇಲೆ ಒಬ್ಬ ಹುಡುಗನಿದ್ದ. ಆತನ ಬ್ಯಾಚಿನಲ್ಲಿದ್ದ ಹುಡುಗರೆಲ್ಲ ಭಯಂಕರ ಪುಂಡು ಪೋಕರಿಗಳು. ಗಣಪತಿ ಎಂಬ ಹೆಸರಿನ ಆ ಹುಡುಗ ದೂರದಿಂದ ನನಗೆ ಸಂಬಂಧಿಕನೂ ಆಗಬೇಕು. ಆ ದಿನಗಳಲ್ಲಿ ಆತ ಸಿಕ್ಕಾಪಟ್ಟೆ ತಂಟೆ ಮಾಡುತ್ತಿದ್ದ. ಗಲಾಟೆಯಲ್ಲಿ ಎತ್ತಿದ ಕೈ ಆಗಿತ್ತು. ಭಾನಗಡಿಗೆ ಹೆಸರುವಾಸಿಯೂ ಆಗಿದ್ದ. ಸದಾ ಸುಮ್ಮನಿರಲು ಆಗದ ಆತ ಏನಾದರೂ ಒಂದು ಕಿತಾಪತಿ ಮಾಡುತ್ತಲೇ ಇರುತ್ತಿದ್ದ. ಶಾಲೆಗೆ ಕಳ್ಳ ಬೀಳುವುದು, ಮಾರ್ಕ್ಸ್ ಕಾರ್ಡಿನ ಮೇಲೆ ನಕಲಿ ಸಹಿ ಝಾಡಿಸುವುದು, ಸುಳ್ಳಿನ ಸರಮಾಲೆಗಳನ್ನು ಪೋಣಿಸುವುದು ಇತ್ಯಾದಿಗಳೆಲ್ಲ ಆತನಿಗೆ ನೀರು ಕುಡಿದಷ್ಟು ಸುಲಭವಾಗಿತ್ತು. ಇಂತಹ ಗಣಪತಿಗೆ ಜಿ. ಎಸ್. ಭಟ್ಟರು ಸಿಂಹಸ್ವಪ್ನವಾಗಿದ್ದರು.
               ನಮ್ಮೂರಿನಲ್ಲೇ ಇನ್ನೊಬ್ಬ ಹುಡುಗನಿದ್ದ. ನನಗಿಂತ ಮೂರ್ನಾಲ್ಕು ವರ್ಷ ದೊಡ್ಡವನು. ನಮ್ಮೂರಿನ ಒಬ್ಬರ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದ. ಆತ ಓದಿನಲ್ಲಿ ಅಷ್ಟು ಚುರುಕಾಗಿರಲಿಲ್ಲ. ಆದರೆ ತಂಟೆ ಮಾಡುವುದರಲ್ಲಿ ಎತ್ತಿದ ಕೈ. ಅವನಿಗೂ ಕೂಡ ಜಿ. ಎಸ್. ಭಟ್ಟರೆಂದರೆ ಭಯಂಕರ ಭಯ. ಶ್ರೀಪಾದ ಎನ್ನುವುದು ಆತನ ಹೆಸರು. ಗಣಪತಿ ಹಾಗೂ ಶ್ರೀಪಾದನ ಪಾಲಿಗೆ ಗಣೇಶ ಭಟ್ಟರು ವಿಲನ್ನು. ಈ ಜಿ. ಎಸ್. ಭಟ್ಟರು ಹೇಗಾದರೂ ಸತ್ತು ಹೋದರೆ ಚನ್ನಾಗಿತ್ತು ಎಂದು ಬೈದುಕೊಂಡು ಶಾಪ ಹೊಡೆಯುವಷ್ಟು ಭಟ್ಟರ ಮೇಲೆ ಸಿಟ್ಟಿತ್ತು.
               ಹೀಗಿದ್ದಾಗಲೇ ಗಣೇಶ ಭಟ್ಟರು ಹೊಸದೊಂದು ಬೈಕನ್ನು ಕೊಂಡಿದ್ದರು. ಬೈಕ್ ಪೂಜೆ ಮಾಡಿಸಬೇಕಲ್ಲ. ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳಿ-ಕೋಡ್ಸಿಂಗೆಯ ಎದುರಿಗೆ ದೊಡ್ಡದೊಂದು ಭೂತಪ್ಪನ ಕಟ್ಟೆಯಿದೆ. ಹೊಸ ವಸ್ತುಗಳು, ಹೊಸ ವಾಹನ ಹೀಗೆ ಏನೆ ಇದ್ದರೂ ಅಲ್ಲಿ ಪೂಜೆ ಮಾಡಿಸುವುದು ವಾಡಿಕೆ. ಜಿ. ಎಸ್. ಭಟ್ಟರೂ ಕೂಡ ಹೊಸ ಬೈಕನ್ನು ಅಲ್ಲಿ ಪೂಜೆ ಮಾಡಿಸಿದ್ದರು. ಬೈಕ್ ಪೂಜೆ ಮಾಡಿದ್ದವನು ಅವರಿಂದ ಸಿಕ್ಕಾಪಟ್ಟೆ ಹೊಡೆತ ತಿನ್ನುವ ಗಣಪತಿ. ಭಟ್ಟರ ದುರಾದೃಷ್ಟವೋ ಗೊತ್ತಿಲ್ಲ ಪೂಜೆ ಮಾಡಿಸುವ ಸಂದರ್ಭದಲ್ಲಿ ಕಾಯಿ ಒಡೆಯಲಾಯಿತು. ಒಡೆದ ಕಾಯಿಯಲ್ಲಿ ಒಂದು ಕಾಯಿ ಕೊಳೆತು ಹೋಗಿತ್ತು. ಅದೆಂತಹ ಅಪಶಕುನವೋ ಗೊತ್ತಿಲ್ಲ. ಭಟ್ಟರು ಬೇರೆ ಕಾಯಿ ತಂದು ಒಡೆಸಿದ್ದರು.
                ಅದಾದ ನಂತರ ನಾವು ಶಾಲೆಯಲ್ಲಿ ಪ್ರಾರ್ಥನೆಗೆ ನಿಂತಾಗಲೆಲ್ಲ ಜಿ. ಎಸ್. ಭಟ್ಟರ ಬೈಕಿನ ಸದ್ದಾಗುತ್ತದೆಯೋ ಎಂದು ಆಲಿಸುತ್ತಿದ್ದೆವು. ಪ್ರಾರ್ಥನೆ ಮುಗಿಯುವ ವೇಳೆಗೆ ಬೈಕಿನ ಸದ್ದಾಗದಿದ್ದರೆ ಅವರು ಬಂದಿಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದೆವು. ಬೈಕು ಬಂತೋ ನಮ್ಮ ಜೀವ ಕೈಗೆ ಬರುತ್ತಿತ್ತು. ದೇವರೇ ಇವತ್ತು ಜಿ. ಎಸ್. ಭಟ್ಟರು ಶಾಲೆಗೆ ಬರದಿದ್ದರೆ ಸಾಕಪ್ಪಾ ಎಂದು ಬೇಡಿಕೊಳ್ಳುತ್ತಿದ್ದುದೂ ಇದೆ. ಭಟ್ಟರದ್ದು ಅದೆಂತಹ ಸಿದ್ಧಾಂತವಾಗಿತ್ತೋ ಏನೋ. ಪಾಠವನ್ನು ಮಾತ್ರ ಬಹಳ ಚನ್ನಾಗಿ ಕಲಿಸುತ್ತಿದ್ದರು. ಆದರೆ ನನಗೆ ಮಾತ್ರ ಅವರು ಪಾಠಕ್ಕಿಂತ ಹೆಚ್ಚಿಗೆ ಹೊಡೆತವನ್ನೇ ನೀಡಿದ್ದಾರೆ ಎಂದರೆ ತಪ್ಪಿಲ್ಲ. ಅವರು ನನಗೆ ಹೊಡೆದಾಗಲೂ ನಾನು ಹೆದರಿರಲಿಲ್ಲ. ಆದರೆ ನನ್ನ ಜೊತೆಗೆ ಬರುತ್ತಿದ್ದ ಗಣಪತಿ ಹಾಗೂ ಶ್ರೀಪಾದನ ಮೈಮೇಲಿನ ಬಾಸುಂಡೆಗಳು, ರಕ್ತ ಜಿನುಗುವ ಹೊಡೆತದ ಗಾಯಗಳನ್ನು ನೋಡಿದಾಗಲೆಲ್ಲ ಸಿಕ್ಕಾಪಟ್ಟೆ ಹೆದರಿದ್ದೂ ಇದೆ.
             ಹೊಡೆತ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಗಣಪತಿ ಅನೇಕ ಸಾರಿ ಶಾಲೆ ತಪ್ಪಿಸುತ್ತಿದ್ದ. ಆದರೆ ಮರುದಿನ ಮಾತ್ರ ಸಿಕ್ಕಾಪಟ್ಟೆ ಹೊಡೆತ ಬೀಳುತ್ತಿತ್ತು. ಮನೆಯಲ್ಲಿ ಶಾಲೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದ ಗಣಪತಿ (ನಾವೆಲ್ಲ ಅವನನ್ನು ಗಪ್ಪತಿ ಎನ್ನುತ್ತಿದ್ದೆವು. ಮುಂದೆ ಅವನ ಬಗ್ಗೆ ಬಹಳ ಬರೆಯಲಿಕ್ಕಿದೆ. ಬೇರೆ ಕಂತಿನಲ್ಲಿ ಬರೆಯುತ್ತೇನೆ) ನಮ್ಮ ಜೊತೆಗೆ ಅರ್ಧ ದಾರಿಯ ವರೆಗೆ ಬರುತ್ತಿದ್ದ. ನಮ್ಮೂರಿನಿಂದ ಶಾಲೆಗೆ ಹೋಗುವ ದಾರಿಯಲ್ಲಿ ದೊಡ್ಡದೊಂದು ಕಾಡು ಸಿಗುತ್ತದೆ. ಗಪ್ಪತಿ ಆ ಕಾಡಿನ ಜಾಗ ಬಂದ ತಕ್ಷಣ ಕಾನೊಳಗೆ ನುಸುಳಿ ಬಿಡುತ್ತಿದ್ದ. ಶಾಲೆಗೆ ಕಳ್ಳ ಬೀಳುತ್ತಿದ್ದ ಆತ ನಮ್ಮ ಬಳಿ ಮಾತ್ರ ಮನೆಯಲ್ಲಿ ಹೇಳಬೇಡ ಎಂದು ಹೇಳುತ್ತಿದ್ದ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಆತ ಕಳ್ಳಬೀಳುತ್ತಿದ್ದ ವಿಷಯವನ್ನು ಯಾರಿಗೂ ತಿಳಿಸದಂತೆ ಮ್ಯಾನೇಜ್ ಮಾಡಬೇಕಿತ್ತು ನಾವು. ಶಾಲೆಯಿಂದ ಮರಳುವ ವೇಳೆಗೆ ಆ ಕಾಡಿನ ಜಾಗಕ್ಕೆ ಬಂದ ನಾವು ಆತನ ಹೆಸರು ಹೇಳಿ ದೊಡ್ಡದಾಗಿ ಕೂಗು ಹಾಕಿದಾಗ ಕಾಡಿನೊಳಗಿಂದ ಓಡಿ ಬರುತ್ತಿದ್ದ. `ಗಪ್ಪತಿ ಎಂತಾ ಮಾಡ್ತದ್ಯಲೇ ಕಾಡೊಳಗೆ..' ಎಂದು ನಾವು ಕೇಳಿದರೆ ನಿದ್ದೆ ಮಾಡ್ತಿದ್ದೆ ಮಾರಾಯಾ ಎನ್ನುತ್ತಿದ್ದ.
              ಒಮ್ಮೆ ಹೀಗಾಯಿತು. ನಾಲ್ಕಾರು ದಿನ ಕಳ್ಳಬಿದ್ದಿದ್ದ ಗಪ್ಪತಿ. ಜಿ. ಎಸ್. ಭಟ್ಟರು ಪ್ರತಿದಿನ ನಮ್ಮ ಬಳಿ ಗಪ್ಪತಿ ಶಾಲೆಗೆ ಬರಲಿಲ್ಲವಾ ಎಂದು ಕೇಳುತ್ತಿದ್ದರು. ನಾವು ಅದೇನೋ ನೆಪ ಹೇಳುತ್ತಿದ್ದೆವು. ಅದೊಂದು ದಿನ ಭಟ್ಟರಿಗೆ ಅನುಮಾನ ಬಂದಿತು. ನನ್ನ ಹಿಡಿದು ದನಕ್ಕೆ ಬಡಿಯುವ ಹಾಗೆ ಬಡಿಯಲು ಆರಂಭಿಸಿದರು. ನಾನು ಹೊಡೆತದ ಉರಿಯನ್ನು ತಾಳಲಾರದೇ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವ ವಿಚಾರವನ್ನು ಬಾಯಿ ಬಿಟ್ಟಿದ್ದೆ. ಸಿಟ್ಟಿನಿಂದ ಮತ್ತಷ್ಟು ಬಡಿದ ಜಿ. ಎಸ್. ಭಟ್ಟರು ನನ್ನನ್ನು ಸೀದಾ ಎಳೆದುಕೊಂಡು ಹೋದರು. ಅದೇ ಕಾಡಿನ ಬಳಿ ಹತ್ತಿರ ಬಂದ ತಕ್ಷಣ ಗಪ್ಪತಿಯ ಹೆಸರನ್ನು ದೊಡ್ಡದಾಗಿ ಕೂಗು ಎಂದರು. ನಾನು ಕೂಗಿದೆ. ಗಪ್ಪತಿ ಕಾಡಿನಿಂದ ಹೊರಗೆ ಬಂದ. ಬಂತ ತಕ್ಷಣವೇ ಜಿ. ಎಸ್. ಭಟ್ಟರ ಕೈಗೆ ಸಿಕ್ಕಿಬಿದ್ದ. ಅಲ್ಲಿಂದ ಗಪ್ಪತಿಗೆ ಹೊಡೆಯಲು ಆರಂಭಿಸಿದ ಜಿ. ಎಸ್. ಭಟ್ಟರು ಶಾಲೆಯ ವರೆಗೂ ಹೊಡೆಯುತ್ತಲೇ ಹೋಗಿದ್ದರು. ಆಮೇಲಿಂದ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವುದು ಬಂದಾಗಿತ್ತು. ಕೆಲ ದಿನಗಳ ವರೆಗೆ ಗಪ್ಪತಿ ನನ್ನ ಬಳಿ ಮಾತಾಡುವುದನ್ನೂ ಬಿಟ್ಟು ಬಿಟ್ಟಿದ್ದ.
             ಹೀಗಿದ್ದಾಗ ಒಂದು ದಿನ ನಮಗೆ ಸುದ್ದಿ ಬಂದಿತ್ತು. ಶಿರಸಿ-ಕುಮಟಾ ರಸ್ತೆಯ ಹನುಮಂತಿ ಬಳಿ ಎಕ್ಸಿಡೆಂಟ್ ಆಯ್ತಂತೆ. ಜಿ. ಎಸ್. ಭಟ್ಟರಿಂದ ಬೈಕಿಗೆ ಹಿಂದಿನಿಂದ ಬಂದ ಬಸ್ಸೊಂದು ಡಿಕ್ಕಿ ಹೊಡೆಯಿತಂತೆ. ಡಿಕ್ಕಿ ಹೊಡೆದ ರಭಸಕ್ಕೆ ಜಿ. ಎಸ್. ಭಟ್ಟರು ಸ್ಥಳದಲ್ಲೇ ಸತ್ತು ಹೋದರಂತೆ ಎಂಬ ಸುದ್ದಿ ಬಂದಿತು. ಶಾಲೆಗೆ ನಾನು ಬರುವ ವೇಳೆಗೆ ಎಲ್ಲರೂ ಹೊರಗೆ ಕುಂತಿದ್ದರು. ಒಂದೆರಡು ಶಿಕ್ಷಕಿಯರು ಆಗಲೇ ಅಳುತ್ತಿದ್ದರು. ಕೊನೆಗೆ ಪೂರ್ತಿಯಾಗಿ ಗೊತ್ತಾಗಿದ್ದೇನೆಂದರೆ ಬ್ರೇಕ್ ಫೈಲ್ ಆದ ಕೆಎಸ್ಸಾರ್ಟಿಸಿ ಬಸ್ಸೊಂದು ಜಿ. ಎಸ್. ಭಟ್ಟರ ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಮಧುವೆ ಮಾಡಿಕೊಳ್ಳಬೇಕು ಎಂದು ಹೆಣ್ಣು ನೋಡಲು ಹೊರಟಿದ್ದ ಜಿ. ಎಸ್. ಭಟ್ಟರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಢಿಕ್ಕಿಯಾದ ರಭಸಕ್ಕೆ ಬೈಕಿನಿಂದ ಚಿಮ್ಮಿ ಬಿದ್ದಿದ್ದ ಜಿ. ಎಸ್. ಭಟ್ಟರ ಎದೆಯ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿ ಹೋದ ಪರಿಣಾಮ ಭಟ್ಟರು ಅಪ್ಪಚ್ಚಿಯಾಗಿ ಬಿಟ್ಟಿದ್ದರು. ಭಟ್ಟರ ಜೊತೆಗೆ ಹೋಗುತ್ತಿದ್ದ ಅಡಕಳ್ಳಿಯ ವಿ. ಆರ್. ಹೆಗಡೆ ಎನ್ನುವವರು ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದರು. ಆದರೂ ಅವರಿಗೆ ಅನೇಕ ಕಡೆಗಳಲ್ಲಿ ಮೂಳೆ ಮುರಿತ ಉಂಟಾಗಿತ್ತು. ಆದಿನ ನನಗೆ ಅದೇಕೋ ಸಿಕ್ಕಾಪಟ್ಟೆ ಅಳು ಬಂದಿತ್ತು.
          ಮೌನ ಆಚರಿಸಿದ್ದರು. ಶಾಲೆಗೆ ರಜಾ ಕೊಟ್ಟಿದ್ದರು. ನಾನು ಬೇಜಾರಿನಲ್ಲಿಯೇ ವಾಪಾಸ್ ಬರುತ್ತಿದ್ದ ವೇಳೆ ಜೊತೆಯಲ್ಲಿದ್ದ ಶ್ರೀಪಾದ ಹಾಗೂ ಗಪ್ಪತಿ ಮಾತ್ರ ಕುಣಿದು ಕುಪ್ಪಳಿಸಿದ್ದರು. ಜಿ. ಎಸ್. ಭಟ್ಟರು ಗೋತಾ ಜೊ. ಎಸ್. ಭಟ್ಟರು ಗೋತಾ ಎಂದು ಕುಣಿಯುತ್ತ ಹೋಗುತ್ತಿದ್ದುದು ಇನ್ನೂ ನನ್ನ ಕಣ್ಣೆದುರಿಗಿದೆ. ಆ ದಿನಗಳಲ್ಲಿಯೇ ಕೆಲವು ಸುದ್ದಿಗಳೂ ನನ್ನ ಕಿವಿಗೆ ಬಿದ್ದಿದ್ದವು. ಎಷ್ಟು ಸತ್ಯವೋ, ಅದೆಷ್ಟು ಸುಳ್ಳೋ ಗೊತ್ತಿಲ್ಲ. ಭಟ್ಟರು ಹೊಸ ಬೈಕ್ ತೆಗೆದುಕೊಂಡಾಗ ಭೂತಪ್ಪನ ಕಟ್ಟೆಗೆ ಕಾಯಿ ಒಡೆಸಿದ್ದರು ಎಂದಿದ್ದೆನಲ್ಲ. ಅದು ಕೊಳೆತು ಹೋಗಿತ್ತು ಎಂದೂ ಹೇಳಿದ್ದೆನಲ್ಲ. ಆ ಕಾರಣಕ್ಕಾಗಿಯೇ ಬೈಕ್ ಎಕ್ಸಿಡೆಂಟ್ ಆಗಿತ್ತು ಎಂದು ಅನೇಕರು ಮಾತನಾಡಿಕೊಂಡರು. ಅನೇಕರು ಗಪ್ಪತಿಯ ಬಗ್ಗೆಯೂ ಮಾತನಾಡಿಕೊಂಡು. ಪ್ರತಿ ದಿನ ಭೂತಪ್ಪನ ಕಟ್ಟೆಯಲ್ಲಿ ಜಿ. ಎಸ್. ಭಟ್ಟರು ಸತ್ತು ಹೋಗಲಿ ಎಂದು ಬೇಡಿಕೊಳ್ಳುತ್ತಿದ್ದ, ಹೂವನ್ನು ತಂದು ಭೂತಪ್ಪನಿಗೆ ಹಾಕುತ್ತಿದ್ದ. ಅದೇ ಕಾರಣಕ್ಕೆ ಜಿ. ಎಸ್. ಭಟ್ಟರು ಎಕ್ಸಿಡೆಂಟ್ ನಲ್ಲಿ ಸತ್ತುಹೋದರು ಎಂದು ಅನೇಕ ಜನ ಮಾತನಾಡಿಕೊಂಡರು. ಅನೇಕ ದಿನಗಳ ಕಾಲ ಈ ಸುದ್ದಿ ಅನೇಕರ ಬಾಯಲ್ಲಿಯೂ ಹರಿದಾಡುತ್ತಿತ್ತು. ಆದರೆ ನಿಧಾನವಾಗಿ ಜಿ. ಎಸ್. ಭಟ್ಟರೂ ಮರೆತು ಹೋದರು. ಗಪ್ಪತಿ ಬಗ್ಗೆ ಇದ್ದ ಗಾಸಿಪ್ ಕೂಡ ಮರೆತು ಹೋಗಿತ್ತು. ಆದರೆ ನನಗೆ ಕಲಿಸಿದ ಮಾಸ್ತರ್ ಮಂದಿಯ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಈ ಎಲ್ಲ ಘಟನೆಗಳೂ ನನ್ನ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೇ ಉಳಿದುಕೊಂಡು ಬಿಟ್ಟಿವೆ.

(ಮುಂದುವರಿಯುತ್ತದೆ)

ಶಕ್ತಿವಂತ

ಓ ಮನುಜ
ಈ ಜೀವಕ್ಕುಂಟು ಕೊನೆ
ಜೀವನವಲ್ಲ ಎಂದಿಗೂ ಶಾಶ್ವತ |

ಓ ಮನುಜ ತಿಳಿದಿರುವೆ ನೀನು
ಈ ಭೂಮಿಯಲ್ಲಿ ತಾನೇ ಶಕ್ತಿವಂತನೆಂದು
ಆದರೆ ನೀನು ಮುಂದೆ
ಆಗುವುದನ್ನು ಅರಿಯಬಲ್ಲೆಯಾ?

ಎಲ್ಲೋ ಒಂದೆರಡು ಸಂಶೋಧನೆ ಮಾಡಿ
ಹೊಸದನ್ನು ಹುಡುಕಿದ ಮಾತ್ರಕ್ಕೆ
ನೀನಾಗುವೆಯಾ ಬುದ್ಧಿವಂತ, ಶಕ್ತಿವಂತ?

ನೆನಪಿರಲಿ ಕೇಳು ಮನುಜ
ನನಗಿಂತ, ನಿನಗಿಂತ, ಎಲ್ಲರಿಗಿಂತ
ದೊಡ್ಡವನು, ಶಕ್ತಿವಂತ ಇರುವನು
ಈ ಜಗದೊಳಗೆ.
ಅವನು ಮುನಿದರೆ ಸುಖವಿಲ್ಲ
ಬದುಕಿಲ್ಲ ತಿಳಿ ಮನುಜ
ಅದ ಮರೆತು ನೀನು
ಎಂದೂ ಹೇಳಬೇಡ
ತಾನೇ

ಶಕ್ತಿವಂತನೆಂದು
ಗಟ್ಟಿಗನೆಂದು
ಶಕ್ತಿವಂತನೆಂದು
ಸೃಷ್ಟಿಕರ್ತ ಬ್ರಹ್ಮನೆಂದು..|||

***

(ಈ ಕವಿತೆಯನ್ನು ಬರೆದಿರುವುದು 19-05-2004ರಂದು ಕಾನಲೆಯಲ್ಲಿ)

Monday, May 25, 2015

ಕೋಗಿಲೆಯ ಕೂಗು

ಅದೆಲ್ಲೋ ದೂರದಿ
ವನಸಿರಿಯ ಮಧ್ಯದಿ
ಕೂಗುತಿಹುದು ಕೋಗಿಲೆ ||

ವಸಂತದ ಚೈತ್ರದಿ
ಸುಂದರ ಮಾಮರದಿ
ಉಲಿಯುತಿಹುದು ಕೋಗಿಲೆ ||

ಕುಹೂ ಕುಹೂ ನಾದದಿ
ನನ್ನ ಈ ಹೃದಯದ
ಮಿಡಿತವನ್ನು ಕೇಳೆಲೆ ||

ಮಾಮರದ ಮಧ್ಯದಿ
ಚಿಗುರೆಲೆಯ ಪಕ್ಕದಿ
ಹಾಡುತಿಹುದು ಕೋಗಿಲೆ ||

ಮಾವು ಚಿಗುರಿ ಹೂಬಿಡುವ
ಸುಂದರ ಚಣದಲಿ
ಉಲಿಯುತಿಹುದು ಕೋಗಿಲೆ ||

ಕೋಗಿಲೆಯ ಕೂಗಿನಿಂ
ಹೃದಯ ವೀಣೆ ಮಿಡಿಯಲಿ
ಜೀವ ಪುಳಕವಾಗಲಿ ||

**********

(ಈ ಕವಿತೆಯನ್ನು ಬರೆದಿರುವುದು 09-09-2004ರಂದು ದಂಟಕಲ್ಲಿನಲ್ಲಿ)

Sunday, May 24, 2015

ಮಾಸ್ತರ್ ಮಂದಿ-1

              ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ವ್ಯಕ್ತಿಯ ಬದುಕನ್ನು ರೂಪಿಸುವವರು ಶಿಕ್ಷಕರು ಎಂದರೆ ತಪ್ಪಾಗಲಿಕ್ಕಿಲ್ಲ. ನನ್ನ ಬದುಕಿನಲ್ಲಿ ಅದೆಷ್ಟೋ ಶಿಕ್ಷಕರು ಬಂದು ಹೋಗಿದ್ದಾರೆ. ಬಿನ್ನೆತ್ತಿಯಿಂದ ಹಿಡಿದು ಕಾಲೇಜು ಕೊನೆಯ ವರ್ಷದ ವರೆಗೆ 50ಕ್ಕೂ ಹೆಚ್ಚು ಜನ ನನ್ನ ಬದುಕನ್ನು ರೂಪಿಸಿದವರು. ಅವರ ಬಗ್ಗೆ ಒಂದಿಷ್ಟು ಮಾತು ನಾನು ಹೇಳಿಕೊಳ್ಳಲೇಬೇಕು. ನನಗೆ ನೆನಪಿರುವಷ್ಟು ಶಿಕ್ಷಕರ ಬಗ್ಗೆ ಹೇಳುತ್ತೇನೆ. ಈ ಶಿಕ್ಷಕರು ನನ್ನ ಪಾಲಿಗೆ ಸಿಹಿಯೂ ಆಗಿದ್ದಾರೆ, ಕಹಿಯೂ ಆಗಿದ್ದಾರೆ. ಅಂತವರ ಬಗ್ಗೆ ನೆನಪು ಮಾಡಿಕೊಳ್ಳುವ ಲೇಖನ ಇದು. ಬರೆಯುತ್ತ ಸಾಗುತ್ತೇನೆ. ಕಂತುಗಳ ಲೆಕ್ಕವಾದರೂ ಆದೀತು.

ಸತೀಶ ಮಾಸ್ತರ್ರು :
                     ನನಗೆ ನೆನಪಿರುವಂತೆ ಸತೀಶ ಮಾಸ್ತರ್ರು ನನ್ನ ಶಾಲಾ ಜೀವನದ ಮೊಟ್ಟ ಮೊದಲ ಮಾಸ್ತರ್ರು. ಬಿನ್ನೆತ್ತಿಯಿಂದ ಹಿಡಿದು ಒಂದನೇ ಕ್ಲಾಸಿನಲ್ಲಿ ಕಲಿಸಿದ ಈ ಮಾಸ್ತರ್ರ ನೆನಪು ಅಸ್ಪಷ್ಟವಾಗಿದೆ. 4ನೇ ವರ್ಷದಿಂದ ಬಿನ್ನೆತ್ತಿಗೆ ಹೋಗಲು ಶುರು ಮಾಡಿದ್ದ ನಾನು 6ನೇ ವರ್ಷದ ವರೆಗೂ ಬಿನ್ನೆತ್ತಿಯಲ್ಲೇ ಉಳಿದುಕೊಳ್ಳಲು ಈ ಮಾಸ್ತರ್ರೇ ಪ್ರಮುಖ ಕಾರಣ. ಎಲ್ಲ ಹುಡುಗರಿಗಿಂತ ಕುಳ್ಳಗೆ ಕಾಣುತ್ತಿದ್ದ ನಾನು 6 ವರ್ಷವಾದರೂ 4 ವರ್ಷದ ಹುಡುಗರಂತೆ ಕುಳ್ಳಗೇ ಇದ್ದೆ. ಪ್ರತಿವರ್ಷ ಅವರು ನನ್ನನ್ನು ತಲೆಯ ಮೇಲಿನಿಂದ ಕೈಯನ್ನು ಉದ್ದ ಹಿಡಿದು ಕಿವಿಯನ್ನು ಮುಟ್ಟು ಎನ್ನುತ್ತಿದ್ದರು. ಆದರೆ ನನ್ನ ಕೈ ಕಿವಿಗೆ ತಲುಪುತ್ತಿರಲಿಲ್ಲ. ಇನ್ನೂ ಸಮಾ ವರ್ಷವಾಗಿಲ್ಲ ಎಂದು ಹೇಳಿ ನನ್ನನ್ನು 1ನೇ ಕ್ಲಾಸಿಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದವರು ಈ ಮಾಸ್ತರ್ರು.
                    ಈ ಮಾಸ್ತರ್ರು ನಾನು ಕಲಿಯುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳ-ಕೋಡ್ಸಿಂಗೆಯಿಂದ ರಸ್ತೆ ಮಾರ್ಗದ ಮೂಲಕ ಅನಾಮತ್ತು 6 ಕಿಮಿ ದೂರದ ಕೋಡ್ಸರದಲ್ಲಿ ಉಳಿದುಕೊಳ್ಳುತ್ತಿದ್ದರು. ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ 3 ಕಿ.ಮಿ ನಡೆದು ಪ್ರತಿದಿನ ಶಾಲೆಗೆ ಬರುತ್ತಿದ್ದ ಸತೀಶ ಮಾಸ್ತರ್ರು ಕಪ್ಪಗಿದ್ದರು. ಥಟ್ಟನೆ ನೋಡಿದರೆ ಸಿನಿಮಾ ನಟ, ಹಿರಿಯ ಐಎಎಸ್ ಅಧಿಕಾರಿ ಕೆ. ಶಿವರಾಮು ಅವರನ್ನು ನೆನಪಿಸುವಂತಿದ್ದರು ಅವರು. ಮೂರ್ನಾಲ್ಕು ವರ್ಷ ನಮ್ಮೂರ ಶಾಲೆಯಲ್ಲಿ ಕಲಿಸಿದ್ದರೇನೋ. ಆದರೆ ನಾನು 1ನೇ ಕ್ಲಾಸಿಗೆ ಬರುವ ವೇಳೆಗೆ ಅವರು ವರ್ಗವಾಗಿ ಹೋಗಿದ್ದರು.
                   ಸತೀಶ ಮಾಸ್ತರ್ರು ನಮ್ಮೂರ ಶಾಲೆಗೆ ಕಲಿಸಲು ಬರುವ ವೇಳೆಗೆ ಇಡೀ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಒಬ್ಬರೇ ಶಿಕ್ಷಕರಿದ್ದರು. ಆಗ ನಮ್ಮೂರಿನಲ್ಲಿ ಎಸ್ಎಸ್ಎಲ್ಸಿ ಓದಿ ಮುಗಿಸಿದ್ದ ನನ್ನ ಅತ್ತೆಯಂದಿರು ಇಬ್ಬರನ್ನು ಪಾರ್ಟ್ ಟೈಮಿಗೆ ಕಲಿಸಲು ಬರುವಂತೆ ಹೇಳಿದ್ದು ಇನ್ನೂ ನೆನಪಿದೆ. ಬಿನ್ನೆತ್ತಿ ಓದಲು ಬರುತ್ತಿದ್ದ ನನಗೆ ನನ್ನ ಅತ್ತೆಯಂದಿರು ಶಿಕ್ಷಕಿಯರಾಗಿ ಕಲಿಸುತ್ತಿದ್ದರು. ಸುಧತ್ತೆ ಹಾಗೂ ಶಾಂತಲತ್ತೆ ಎಂಬ ಹೆಸರಿನ ಅವರನ್ನು ನಾನು ಶಾಲೆಯಲ್ಲಿಯೂ ಸುಧತ್ತೆ ಹಾಗೂ ಶಾಂತಲತ್ತೇ ಎಂದೇ ಕರೆಯುತ್ತಿದ್ದೆ. ಒಂದಿನ ಈ ಅತ್ತೆಯರು ನನ್ನನ್ನು ಕರೆದು `ಶಾಲೆಯಲ್ಲಿ ಅತ್ತೆ ಅನ್ನಬೇಡ. ಟೀಚರ್ ಎಂದು ಕರಿ. ನೆಂಟಸ್ತನ ಏನಿದ್ದರೂ ಮನೆಯಲ್ಲಿ ನೋಡಿಕೊ..' ಎಂದು ಹೇಳಿದ್ದಿನ್ನೂ ನನ್ನ ನೆನಪಿನಲ್ಲಿ ಸ್ಪಷ್ಟವಾಗಿಯೇ ಇದೆ. ಬಹುಶಃ ಅತ್ತೆಯರು ಹೀಗೆ ಹೇಳಿದ ನಂತರವೇ ನಮ್ಮ ನೆಂಟರು ಯಾರಾದರೂ ಮಾಸ್ಟರಾಗಿ ನನಗೆ ಕಲಿಸಲು ಬಂದರೆ ಶಾಲೆಯಲ್ಲಿ ಅವರನ್ನು ಸರ್ ಎಂದು ಸಂಬೋಧನೆ ಮಾಡಬೇಕು, ಮನೆಯಲ್ಲಿ ಮಾತ್ರ ನೆಂಟರಾಗಿ ಕಾಣಬೇಕು ಎಂಬುದು ಅರಿವಾದದ್ದು. ಇಂತಹ ಅತ್ತೆಯರಿಗೆ ಸರಿಯಾಗಿ ಸಂಬಳ ಕೊಡಲಿಲ್ಲ ಎಂದು ಅತ್ತೆಯರ ಅಪ್ಪ ಸತೀಶ ಮಾಸ್ತರ್ರ ಬಳಿ ಜಗಳ ಕಾಯ್ದಿದ್ದು ಇನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
                  ಇಂತಹ ಮಾಸ್ತರ್ರು ನಮ್ಮೂರ ಶಾಲೆಯಿಂದ ಟ್ರಾನ್ಸಫರ್ ಆಗುವ ವೇಳೆಗೆ ಕುಳ್ಳೀಶ್ವರ ಮಾಸ್ತರ್ರು ಶಿಕ್ಷಕರಾಗಿ ಬಂದಿದ್ದರು. ಅವರಲ್ಲದೇ ಅನಸೂಯಕ್ಕೋರು, ಗಣೇಶ ಭಟ್ಟರು ಮಾಸ್ತರ್ರಾಗಿ ಬಂದಿದ್ದು ನನಗಿನ್ನೂ ನೆನಪಿದೆ. ಆ ಸಂದರ್ಭದಲ್ಲಿಯೇ ತಾರಕ್ಕೋರು ಕೂಡ ನಮ್ಮ ಶಾಲೆಗೆ ಅಕ್ಕೋರಾಗಿ ಬಂದಿದ್ದರು.
                  ಸತೀಶ ಮಾಸ್ತರ್ರ ಕಾಲದಲ್ಲೇ ನನ್ನ ಬದುಕಿನಲ್ಲೊಂದು ಮಜವಾದ ಸಂಗತಿ ಜರುಗಿತ್ತು. ಅದಿನ್ನೂ ನನ್ನ ನೆನಪಿನಲ್ಲಿ ಹಸಿಯಾಗಿದೆ. ನಾನು ಆವತ್ತೊಂದಿನ ಅದೇನೋ ನೆಪವನ್ನು ಹೂಡಿ ಶಾಲೆಗೆ ಹೋಗಿರಲಿಲ್ಲ. ನನ್ನ ಗ್ರಹಚಾರಕ್ಕೆ ಆ ದಿನವೇ ಶಾಲೆಯಲ್ಲಿ ಕ್ರೀಡಾಕೂಟವನ್ನು ಮಾಡಿಬಿಟ್ಟಿದ್ದರು. ನಾನು ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದೆನಾದರೂ ಕಳ್ಳಬಿದ್ದ ಕಾರಣ ಭಾಗವಹಿಸವುದು ತಪ್ಪಿ ಹೋಗಿತ್ತು. ಆಮೇಲೆ ನಾನು ನನ್ನನ್ನು ಹಳಿದುಕೊಂಡು ಸುಮ್ಮನಾಗಿದ್ದೆ ಮರೆತೂ ಹೋಗಿತ್ತು. ಕೊನೆಗೊಂದು ದಿನ ಶಾಲಾ ವಾರ್ಷಿಕೋತ್ಸವ ಬಂದಿತ್ತು. ಆಗ ಇದ್ದಕ್ಕಿದ್ದಂತೆ ಮೈಕಿನಲ್ಲಿ ನನ್ನ ಹೆಸರನ್ನು ಕರೆದಾಗ ಮಾತ್ರ ನಾನು ಬೆಚ್ಚಿ ಬಿದ್ದಿದ್ದೆ. ಕ್ರೀಡಾಕೂಟದಲ್ಲಿ ನನಗೂ ಒಂದು ಬಹುಮಾನ ಬಂದಿತ್ತು. ಆಟದಲ್ಲಿ ಭಾಗವಹಿಸಿದ್ದಕ್ಕಾಗಿ ಸಮಾಧಾನಕರ ಬಹುಮಾನ ನನಗೆ ಪ್ರಾಪ್ತವಾಗಿತ್ತು. ಅರ್ರೇ ಶಾಲೆಗೆ ಹೋಗದ ನಾನು ಬಹುಮಾನ ಪಡೆದುಕೊಂಡಿದ್ದೆ ಎನ್ನುವುದು ಮಾತ್ರ ಬಹಳ ತಮಾಷೆಯ ವಿಷಯವಾಗಿತ್ತು. ಕೊನೆಗೆ ಗೊತ್ತಾಗಿದ್ದೇನೆಂದರೆ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಕೂಡ ಆಟದಲ್ಲಿ ಭಾಗವಹಿಸಲಿ, ಭಾಗವಹಿಸದೇ ಇರಲಿ, ಯಾವುದೇ ತಾರತಮ್ಯ ಮಾಡದೇ ಪ್ರಶಸ್ತಿ ಪತ್ರ ನೀಡಬೇಕು ಎಂದು ಸತೀಶ ಮಾಸ್ತರ್ರು ಆಲೋಚಿಸಿದ್ದರಂತೆ. ಅದಕ್ಕೆ ತಕ್ಕಂತೆ ಅವರು ನಡೆದುಕೊಂಡಿದ್ದರು. ನನಗೆ ಪ್ರಶಸ್ತಿ ಬಂದಿತ್ತು.
               ಇಂತಹ ಸತೀಶ ಮಾಸ್ತರ್ರು ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ರಾತ್ರಿಯಿಂದ ಬೆಳಗಿನವರೆಗೂ ವಾರ್ಷಿಕೋತ್ಸವದ ನಿಮಿತ್ತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಸಾರಿ ಘಾಟಿ ಮುದುಕಿ ಎನ್ನುವ ನಾಟಕವೂ ನಡೆದಿತ್ತು. ಅದರಲ್ಲಿ ಮಾಸ್ತರ್ರು ಪಾತ್ರ ಮಾಡಿದ್ದರು. ಅವರ ಮನೋಜ್ಞ ನಟನೆಗೆ ಬಹಳಷ್ಟ ಬಹುಮಾನಗಳು ಬಂದಿದ್ದು ನೆನಪಿನಲ್ಲಿದೆ. ಆಗಲೇ ಸ್ಟೇಜ್ ಹತ್ತಿದ್ದ ನಾನು ನಾಲ್ಕೈದು ಡ್ಯಾನ್ಸುಗಳನ್ನೂ ಮಾಡಿದ್ದೆ. ನಮ್ಮೂರಿನ, ನನ್ನದೇ ವಾರಗೆಯ ಕೂಸು ರಂಜನಾ `ಭಾಳ ಒಳ್ಳೇಯೋರ್ ನಮ್ಮಿಸ್ಸು,, ಏನ್ ಕೇಳಿದ್ರೂ ಯೆಸ್ ಯೆಸ್ಸು..' ಎನ್ನುವ ಹಾಡಿಗೆ ಸ್ಟೇಜಿನ ಮೇಲೆ ಹೋಗಿ ಪಕ್ಕದಲ್ಲಿ ನಿಂತಿದ್ದ ಶಿಕ್ಷಕರನ್ನು ನೋಡಿ ಡ್ಯಾನ್ಸ್ ಮಾಡಿದ್ದಿನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
               ಆ ವಾರ್ಷಿಕೋತ್ಸವದ ದಿನವೇ ನಾನು ಮೊಟ್ಟ ಮೊದಲ ಬಾರಿಗೆ ಉಲ್ಕಾಪಾತವನ್ನು ನೋಡಿದ್ದು. ತಾರಕೆಯೊಂದು ಆಗಸದಲ್ಲಿ ಸೊಯ್ಯನೆ ಹಾರಿ ಹೋಗಿ ಉರಿದು ಭಸ್ಮವಾಗಿತ್ತು. ಅದನ್ನು ನೋಡುತ್ತಿದ್ದ ನನ್ನ ಮಿತ್ರ ಮಹೇಶ ಎಂಬಾತ, ನೋಡು ಈಶ್ವರ ತನ್ನ ಮೂರನೇ ಕಣ್ಣನ್ನು ಬಿಟ್ಟಿದ್ದಾನೆ. ಯಾರನ್ನೋ ಸುಟ್ಟು ಹಾಕಿದ್ದ ನೋಡು ಎಂದು ಹೇಳಿದ್ದು ಇನ್ನೂ ನೆನಪಿನಲ್ಲಿಯೇ ಇದೆ.
                 ಸತೀಶ ಮಾಸ್ತರ್ರಿದ್ದಾಗಲೇ ನಮ್ಮೂರ ಶಾಲೆ ಮೊಟ್ಟ ಮೊದಲ ಬಾರಿಗೆ ಕಾನಸೂರು ಕೇಂದ್ರ ಶಾಲಾ ಮಟ್ಟದಲ್ಲಿ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿತ್ತು. ಅಷ್ಟಲ್ಲದೇ ಹೆಗ್ಗರಣಿಯಲ್ಲಿ ನಡೆಯುತ್ತಿದ್ದ ವಲಯ ಮಟ್ಟದಲ್ಲೂ ವೀರಾಗ್ರಣಿಯಾಗಿ ಸಿದ್ದಾಪುರ ತಾಲೂಕಾ ಮಟ್ಟದಲ್ಲೂ ಭಾಗವಹಿಸಿತ್ತು. ಅವರಿದ್ದಾಗಲೇ ಆರಡಿ ಎತ್ತರದ ರವಿ ಹಾಗೂ ಆತನ ತಮ್ಮ ಹರೀಶ ಎಂಬಿಬ್ಬರು 100 ಮೀಟರ್, 200 ಮೀಟರ್, 500 ಮೀಟರ್ ಸೇರಿದಂತೆ ಓಟದ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡು ಬಂದಿದ್ದರು. ನನಗೆ ಇವರು ಆಗ ಬಹಳ ವಿಸ್ಮಯದ ವ್ಯಕ್ತಿಗಳಾಗಿ ಕಂಡಿದ್ದರು. ಶಾಲೆಗೆ ಪ್ರಶಸ್ತಿ ತಂದುಕೊಟ್ಟ ಇವರ ಮೇಲೆ ಭಯಂಕರ ಹೆಮ್ಮೆ ಮೂಡಿತ್ತು. ಇಂತಹ ಪ್ರಶಸ್ತಿ ಬಾಚಿಕೊಂಡು ಬಂದಿದ್ದ ಈ ಸಹೋದರರು ಕೊನೆಗೊಂದು ದಿನ ಸತೀಶ ಮಾಸ್ತರ್ರ ಕೈಯಲ್ಲಿ ಕಳ್ಳ ಎನ್ನುವ ಬಿರುದನ್ನೂ ಪಡೆದುಕೊಂಡಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿತ್ತು.
             ಶಾಲೆಯಲ್ಲಿ ಏನೋ ಒಂದು ಕಳುವಾಗಿತ್ತಂತೆ. ಅದಕ್ಕೆ ಸರಿಯಾಗಿ ಎಲ್ಲರನ್ನೂ ಪ್ರಶ್ನಿಸಿದ್ದರು ಸತೀಶ ಮಾಸ್ತರ್ರು. ಆದರೆ ಹರೀಶ ಹಾಗೂ ರವಿ ಮಾತ್ರ ಸರಿಯಾಗಿ ಉತ್ತರ ಹೇಳಿರಲಿಲ್ಲ. ಅದಕ್ಕೆ ಪ್ರತಿಯಾಗಿ ಸತೀಶ ಮಾಸ್ತರ್ರು ಸಿಕ್ಕಾಪಟ್ಟೆ ಹೊಡೆದು ಹಾಕಿದ್ದರು. ನನಗಿನ್ನೂ ಸತೀಶ ಮಾಸ್ತರ್ರು ಆರು ಅಡಿ ಎತ್ತರದ ರವಿಯನ್ನು ಹೊಡೆಯುತ್ತಿದ್ದುದು ಹಾಗೂ ಆತ ದಿನವಿಡೀ ಅಳುತ್ತಿದ್ದುದು ನೆನಪಿನಲ್ಲಿದೆ.
               ಹೀಗಿದ್ದಾಗ ಒಂದು ದಿನ ನಮ್ಮ ಶಾಲೆಯಲ್ಲೊಂದು ಗಲಾಟೆ ನಡೆದು ಹೋಗಿತ್ತು. 7ನೇ ತರಗತಿ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅದೊಂದು ದಿನ ಅವರು ಶಾಲೆಗೆ ಬರಲು ಲೇಟಾಗಿತ್ತು. ಅದೇ ಸಂದರ್ಭದಲ್ಲಿ ಒಬ್ಬ ಹುಡುಗ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿಬಿಟ್ಟಿದ್ದ. 7ನೇ ತರಗತಿಯಲ್ಲೇ ಲವ್ ನಡೆದಿತ್ತು. ಆ ಹುಡುಗಿ ಅದೇನು ಹೇಳಿದಳೋ. ಬಹುಶಃ ಯೆಸ್ ಅಂದಿರಬೇಕು. ಹುಡುಗ ನಾಯ್ಕರ ಪೈಕಿ. ಹುಡುಗಿ ಬ್ರಾಹ್ಮಣರವಳು. 7ನೇ ತರಗತಿಯ ಲವ್ ಗಲಾಟೆಗೆ ಕಾರಣವಾಗಿತ್ತು. ಅದ್ಹೇಗೆ ಸತೀಶ ಮಾಸ್ತರ್ರಿಗೆ ಗೊತ್ತಾಯಿತೋ. ಶಾಲೆಗೆ ಬಂದವರೇ ಹುಡುಗ, ಹುಡುಗಿ, ಅವರ ಲವ್ವಿಗೆ ಸಹಾಯ ಮಾಡಿದವರು, ಅವರ ಕ್ಲಾಸಿನವರು ಎಲ್ಲರನ್ನೂ ನಿಲ್ಲಿಸಿ ಹೊಡೆತದ ಮೇಲೆ ಹೊಡೆತ ಕೊಟ್ಟಿದ್ದರು. ಸತತ ಮೂರು ದಿನ ಹೊಡೆದಿದ್ದು ನೆನಪಿದೆ. ಶಾಲೆಯಲ್ಲಿ ಸಿಕ್ಕಾಪಟ್ಟೆ ಕಿಲಾಡಿ ಎನ್ನುವ ಬಿರುದನ್ನು ಗಳಿಸಿಕೊಂಡಿದ್ದ ನನಗೆ ಮೂರು ದಿನಗಳ ಸತೀಶ ಮಾಸ್ತರ್ರ ಪ್ರತಾಪ ನೊಡಿ 15 ದಿನ ಪುಂಗಿ ಬಂದಾಗಿತ್ತು.
                ಕೊನೆಗೊಂದು ದಿನ ಸತೀಶ ಮಾಸ್ತರ್ರ ವರ್ಗಾವಣೆಯಾಗಿತ್ತು. ಅವರು ಅದೆಷ್ಟೇ ರುದ್ರ ಪ್ರತಾಪ ತೋರಿಸಲಿ, ಸಿಟ್ಟು ಮಾಡಲಿ, ಪ್ರೀತಿಯನ್ನು ತೋರಿಸಲಿ, ನಮ್ಮಲ್ಲಿ ಅದೇನೋ ಬಂಧ ಬೆಳೆದು ಬಿಟ್ಟಿತ್ತು. ಶಾಲೆ ಬಿಟ್ಟು ಹೋಗುವಾಗ ಮಾತ್ರ ಪ್ರತಿಯೊಬ್ಬರಿಗೂ ಒಂದೊಂದು ಲೋಟವನ್ನು ಕೊಡುಗೆಯಾಗಿ ಕೊಟ್ಟು ಹೋಗಿದ್ದರು. ಪ್ರೀತಿಯ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರ ನೆನಪಿನ ಕಾಣಿಕೆ ಎಂದು ಬರೆದ ಚೂಪಿ ಮುಕುಳಿಯ ಸ್ಟೀಲ್ ಲೋಟ ಮೊನ್ನೆ ಮೊನ್ನೆ ಮೊನ್ನೆಯ ವರೆಗೂ ನನ್ನ ಬಳಿ ಇತ್ತು. ಇಂತಹ ಸತೀಶ ಮಾಸ್ತರ್ರು ಈಗ ಎಲ್ಲಿದ್ದಾರೋ? ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಮೊದಲ ಶಿಕ್ಷಕರು ಸದಾ ನೆನಪಿನಲ್ಲಿದ್ದಾರೆ.

ಅನಸೂಯಕ್ಕೋರು :
             ಅನಸೂಯಕ್ಕೋರಿಗೆ ನಾವು ಯಾವತ್ತೂ ಅನಸೂಯಕ್ಕೋರು ಎಂದು ಕರೆದಿದ್ದೇ ಇಲ್ಲ. ಹೆಡ್ಡಕ್ಕೋರು ಎಂದು ಅಡ್ಡ ಹೆಸರಿನಲ್ಲಿ ಕರೆದೇ ರೂಢಿ. ನಾನು ಬಿನ್ನೆತ್ತಿಯಲ್ಲಿದ್ದಾಗ ಅನಸೂಯಕ್ಕೋರು ನನಗೆ ಕಲಿಸಲು ಬಂದಿದ್ದರು. ಇವರ ಬಗ್ಗೆ ಹೆಚ್ಚೇನೂ ನನಗೆ ಗೊತ್ತಿಲ್ಲ ಬಿಡಿ. ಬಿನ್ನೆತ್ತಿಯಾಗಿದ್ದ ಕಾರಣ ನಾನು ಬಹಳ ಶಾಲೆಗೆ ಕಳ್ ಬೀಳುತ್ತಿದ್ದೆ. ಆವಾಗೆಲ್ಲಾ ಜೊತೆಯಲ್ಲಿದ್ದ ಹುಡುಗರು ಹೆಡ್ಡಕ್ಕೋರು ಹೊಡಿತ್ರು ತಡಿ ಎಂದು ಹೇಳುತ್ತಿದ್ದುದು ನೆನಪಿನಲ್ಲಿರುತ್ತಿತ್ತು. ಆದರೆ ಬಿನ್ನೆತ್ತಿಯಾದ ಕಾರಣ ಅವರು ಮಾಫಿ ಮಾಡುತ್ತಿದ್ದರು.
                  ಇಂತಹ ಸಂದರ್ಭದಲ್ಲಿಯೇ ಬಯಲು ಸೀಮೆಯ ಒಬ್ಬ ಹುಡುಗ ನನ್ನ ಗೆಳೆಯನಾಗಿ ಸಿಕ್ಕಿದ್ದ. ಅವನ ಹೆಸರೂ ವಿನಯನೇ.  ಹಳೆಯ ಶಾಲೆಯಲ್ಲಿ ಇದ್ದಿದ್ದು 2 ರೂಮುಗಳಾಗಿದ್ದವು. ಜೊತೆಗೆ ಹಾಲು ಡೇರಿ ಎಂದು ಕರೆಯುವ ಒಂದು ಔಟ್ ಹೌಸ್ ಶಾಲೆಯಿಂದ ಸ್ವಲ್ಪ ದೂರದಲ್ಲಿತ್ತು. ಬಿನ್ನೆತ್ತಿ, ಒಂದನೇ ಕ್ಲಾಸ್ ಹಾಗೂ 2ನೇ ಕ್ಲಾಸಿನ ಮಕ್ಕಳು ಈ ಔಟ್ ಹೌಸಿನಲ್ಲಿ ಉಳಿದುಕೊಳ್ಳಬೇಕಿತ್ತು. ಸರಿ ಸುಮಾರು 40 ಜನರಿದ್ದೆವೇನೋ. ಒಂದು ದಿನ ನಾನು ಹಾಗೂ ದೋಸ್ತ ವಿನಯ, ಅಡಕಳ್ಳಿಯ ವಿಜಯ ಔಟ್ ಹೌಸ್ ಶಾಲೆಯಲ್ಲಿ ಕುಳಿತಿದ್ದೆವು. ಎಲ್ಲರೂ ಪಾಠ ಕೇಳುತ್ತಿದ್ದರೆ ನಾವು ಮಾತ್ರ ಸುತ್ತ ಮುತ್ತ ಇದ್ದ ಮರ, ಬೆಟ್ಟ ಗುಡ್ಡ ನೋಡುತ್ತಿದ್ದೆವು. ಆಗಲೇ ಶಾಲೆಗೆ ಹೊಂದಿಕೊಂಡಂತೆ ಇದ್ದ ಮರವೊಂದರ ಮೇಲೆ ದೊಡ್ಡದೊಂದು ಹಾವಿರುವುದು ನಮ್ಮ ಕಣ್ಣಿಗೆ ಬಿದ್ದು ಬಿಟ್ಟಿತ್ತು. ದೊಡ್ಡದಾಗಿ ಗಲಾಟೆ ಎಬ್ಬಿಸಿದೆವು. ಗಲಾಟೆಯಿಂದಾಗಿ ಒಮ್ಮೆಲೆ ಎಲ್ಲರಿಗೆ ದಿಗ್ಭ್ರಮೆ. ಕೊನೆಗೆ ಸತೀಶ ಮಾಸ್ತರ್ರು ಯಾರನ್ನೋ ಕರೆಸಿ ಆ ಹಾವನ್ನು ಕೊಲ್ಲಿಸಿದ್ದು ನೆನಪಿನಲ್ಲಿದೆ. ಈ ಘಟನೆಯ ನಂತರ ಔಟ್ ಹೌಸಿನಲ್ಲಿ ಎಲ್ಲರಿಗೂ ಕಲಿಸುವ ಕಾರ್ಯಕ್ಕೆ ಪುಲ್ ಸ್ಟಾಪ್ ಬಿದ್ದಿತ್ತು. ನಾವೆಲ್ಲ ಕಿಕ್ಕಿರಿದು ತುಂಬಿದ್ದ ಶಾಲೆಯ ಮುಖ್ಯ ಕೊಠಡಿಗೆ ವಾಪಾಸಾಗಿದ್ದೆವು.

ಈಶ್ವರ ನಾಯ್ಕರು :
            ಈಶ್ವರ ನಾಯ್ಕರು ಸತೀಶ ಮಾಸ್ತರು ಕಲಿಸುತ್ತಿದ್ದ ಸಂದರ್ಭದಲ್ಲಿಯೇ ಶಾಲೆಗೆ ಬಂದವರು. ಕೇವಲ 5 ಅಡಿ ಎತ್ತರ ಇದ್ದ ಈ ಮಾಸ್ತರ್ರನ್ನು ಎಲ್ಲರೂ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುತ್ತಿದ್ದರು. ಅವರಿಗೆ ಹೀಗೆ ಕರೆಯುವುದಕ್ಕೂ ಮಜವಾದ ಕಾರಣವಿದೆ. ಈಗಿನಂತೆ ಆಗಲೂ ಮಾಸ್ತರ್ರು ಮಕ್ಕಳ, ಜನರ ಗಣತಿ ಮಾಡಲೇಬೇಕಿತ್ತು. ದಂಟಕಲ್ಲಿಗೆ ಬಂದಿದ್ದ ಈ ಶ್ವರ ಮಾಸ್ತರ್ರನ್ನು ನೋಡಿ ನನ್ನ ಪಕ್ಕದ ಮನೆಯ ಅತ್ತೆಯರು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಆಗಷ್ಟೇ ಹೈಸ್ಕೂಲನ್ನು ಮುಗಿಸಿದ್ದ ಅತ್ತೆಯರು ಈಶ್ವರ ಮಾಸ್ತರ್ರು ಕುಳ್ಳಗಿದ್ದಾರೆ ಎಂಬುದನ್ನೇ ದೊಡ್ಡ ಜೋಕ್ ಮಾಡಿ ನಗಲು ಆರಂಭಿಸಿದ್ದರು. ಇದರಿಂದಾಗಿ ಅವಮಾನ ಪಟ್ಟುಕೊಂಡಿದ್ದ ಮಾಸ್ತರ್ರು ನೊಂದುಕೊಂಡು ವಾಪಸಾಗಿದ್ದರು. ಆ ದಿನದ ನಂತರ ಈಶ್ವರ ನಾಯ್ಕರ ಪ್ರಸ್ತಾಪ ಬಂದಾಗಲೆಲ್ಲ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುವುದು ರೂಢಿಯಾಗಿತ್ತು.
               ಈ ಈಶ್ವರ ಮಾಸ್ತರ್ರು ಇದ್ದ ಸಂರ್ಭದಲ್ಲಿಯೇ ಒಂದು ಘಟನೆ ನಡೆಯಿತು. ಶಾಲೆಯಲ್ಲಿ ಎಲ್ಲರೂ ಕ್ರಿಕೆಟ್ ಹುಚ್ಚಿಗೆ ಬಲಿಯಾಗಿದ್ದ ಸಂದರ್ಭದಲ್ಲಿ ಸತೀಶ ಮಾಸ್ತರ್ರು ನಮ್ಮಲ್ಲಿ ಪುಟ್ ಬಾಲ್ ಹುಚ್ಚನ್ನು ಬೆಳೆಸಲು ಮುಂದಾಗಿದ್ದರು. ಎಲ್ಲ ಹುಡುಗರನ್ನೂ ಎದುರಿಗೆ ನಿಲ್ಲಿಸಿ ಪುಟ್ ಬಾಲ್ ಕೊಟ್ಟು ಬಿಟ್ಟಿದ್ದರು. ಎಲ್ಲರ ಜೊತೆ ನಾನೂ ಹುರುಪಿನಿಂದ ಆಡಲು ಶುರು ಮಾಡಿದ್ದೆ. ಹೀಗಿದ್ದಾಗಲೇ ದತ್ತಾತ್ರೆಯ ಎಂಬ ದೈತ್ಯ ಹುಡುಗನೊಬ್ಬ ಜೋರಾಗಿ ಓಡಿಬಂದು ನನಗೆ ಢಿಕ್ಕಿ ಹೊಡೆದು ಬಿಟ್ಟಿದ್ದ. ಢಿಕ್ಕಿ ಹೊಡೆದ ರಭಸಕ್ಕೆ ನಾನು ಹಾರಿ ಹೋಗಿ ದೊಪ್ಪನೆ ಬಿದ್ದಿದ್ದೆ. ಬಿದ್ದ ಹೊಡೆತಕ್ಕೆ ಕಲ್ಲಿಗೆ ಜೋರಾಗಿ ನನ್ನ ತಲೆ ಬಡಿದು ಬಿಟ್ಟಿತ್ತು. ಬಡಿದ ರಭಸಕ್ಕೆ ತಲೆ ಒಡೆದು ಬಳಬಳನೆ ರಕ್ತ ಸುರಿಯಲು ಆರಂಭವಾಗಿತ್ತು. ತಕ್ಷಣವೇ ಹೆದರಿದ ಸತೀಶ ಮಾಸ್ತರ್ರು ಆಟವನ್ನು ಖೈದು ಮಾಡಿದ್ದರು. ಓಡಿ ಹೋದ ಕುಳ್ಳೀಶ್ವರ ಮಾಸ್ತರ್ರು ತಾವು ಚಾ ಮಾಡಲು ಬಳಕೆ ಮಾಡುತ್ತಿದ್ದ ಚಾಸೊಪ್ಪನ್ನು ತಂದು ಗಾಯಗೊಂಡ ನನ್ನ ತಲೆಗೆ ಹಾಕಿದ್ದರು. ರಕ್ತ ಬರುವುದು ನಿಂತಿತ್ತು. ಈಗಲೂ ನನ್ನ ತಲೆಯ ಮೇಲೆ ಚಿಕ್ಕಂದಿನ ಆ ಗಾಯ ಹಾಗೇ ಉಳಿದುಕೊಂಡಿದೆ. ಆ ಗಾಯದ ಕಲೆಯನ್ನು ಮುಟ್ಟಿಕೊಂಡಾಗೆಲ್ಲ ಸತೀಶ ಮಾಸ್ತರ್ರು, ಕುಳ್ಳೀಶ್ವರ ಮಾಸ್ತರ್ರು, ಪುಟಬಾಲ್ ಆಟ ಹಾಗೂ ನನಗೆ ಢಿಕ್ಕಿ ಹೊಡೆದ ದತ್ತಾತ್ರೇಯ ನೆನಪಾಗುತ್ತಿರುತ್ತಾರೆ.

(ಮುಂದುವರಿಯುತ್ತದೆ)

ಚುಟುಕು-ಗುಟುಕು

ದೂರದಿಂದ ಹಕ್ಕಿಯೊಂದು
ತನ್ನ ಮರಿಯ ಮನದಿ ನೆನೆದು
ಚಿಕ್ಕ ಗುಡುಕು ನೀಡಲೆಂದು
ಹಾರಿ ಬಂದಿತು ||

ಕಾಡಿನಲ್ಲಿ ಬೇಟೆಯರಸಿ
ನದಿಗಳಲ್ಲಿ ಮೀನು ಹುಡುಕಿ
ಮರಿಯ ಹಸಿವು ತಣಿಸಲೆಂದು
ಗುಟುಕು ತಂದಿತು ||

ಮರಿಯು ತಾನು ದಾಹದಿಂದ
ತಾಯ ತಾನು ಬೇಗ ಕರೆಯೆ
ಮರಿಯ ಧ್ವನಿಯ ತಾನು ಕೇಳಿ
ಓದಿ ಬಂದಿತು ||

ತಾನು ತಂದ ಬೇಟೆಯನ್ನು
ಚಿಕ್ಕ ಪುಟ್ಟ ಮರಿಗೆ ನೀಡಿ
ತನ್ನ ಮರಿಯ ಹಸಿವು ನೀಗಿ
ಖುಷಿಯ ಹೊಂದಿತು ||

ಈ ದೃಶ್ಯ ಕವಿಗೆ ಕಂಡು
ಕವಿಯ ಹೃದಯ ಪುಳಕಗೊಂಡು
ಕವನವೊಂದು ಹೊರಗೆ ಬರಲು
ತವಕಗೊಂಡಿತು ||

ಕವಿಯು ಬರೆದ ನಾಲ್ಕು ಸಾಲೆ
ಬಾವ ತುಂಬಿ ಹಾಡಿದಾಗ
ಬರೆದ ಬರಹವದು ಆಗ
ಕವನವಾಯಿತು ||

**********

(ಈ ಕವಿತೆಯನ್ನು ಬರೆದಿರುವುದು 26-11-2004ರಂದು ನಾಣೀಕಟ್ಟಾದಲ್ಲಿ)
(ಪಿಯುಸಿ ಓದುತ್ತಿದ್ದ ಸಂದರ್ಭ. ಆಗಷ್ಟೇ ಕವಿತೆಗಳನ್ನು ಬರೆಯಲು ಆರಂಭ ಮಾಡಿದ್ದೆ. ಒಂದಿಷ್ಟು ಬಾಲಿಶ ಕವಿತೆಗಳನ್ನು ಬರೆದು ವಗಾಯಿಸಿದ್ದೆ. ಅದನ್ನು ದೋಸ್ತರು ಕಂಡು ನನಗೆ ಕವಿಯೆಂಬ ಪಟ್ಟವನ್ನೂ ಕಟ್ಟಿಬಿಟ್ಟಿದ್ದರು. ಈ ವಿಷಯ ನಮ್ಮ ಕನ್ನಡ ಉಪನ್ಯಾಸಕರಾದ ವಿ. ಎಸ್. ಹೆಗಡೆಯವರ ಕಿವಿಗೂ ಬಿದ್ದಿತ್ತು. ನನ್ನ ಕವಿತೆ ಯಾವ ರೀತಿ ಇರಬಹುದು ಎಂಬುದನ್ನು ಪರೀಕ್ಷೆ ಮಾಡಲು ಬಹುಶಃ ಇಟ್ಟರೇನೋ ಅನ್ನಿಸುತ್ತಿದೆ. ಒಂದು ಕವನ ಬರೆಯುವ ಸ್ಪರ್ಧೆ ಇಟ್ಟರು. ಹಕ್ಕಿಯ ಚಿತ್ರವೊಂದನ್ನು ಇಟ್ಟರು. ಗುಟುಕು ನೀಡುತ್ತಿದ್ದ ಹಕ್ಕಿಯ ಚಿತ್ರ ಅದು. ಅದನ್ನು ನೋಡಿ ಕವಿತೆ ಬರೆಯಬೇಕಿತ್ತು. ಎಲ್ಲರಿಗಿಂತ ಲೇಟಾಗಿ ಬಂದು ಕವಿತೆ ಬರೆಯಲು ಕುಳಿತು ಏನೋ ಬರೆದು ಕೊಟ್ಟು ಬಂದಿದ್ದೆ. ಮಜಾ ಅಂದರೆ ನನ್ನ ಕವಿತೆಗೆ ಮೊದಲ ಸ್ಥಾನ ಬಂದಿತ್ತು. ನನ್ನ ಕವಿತೆ ಚನ್ನಾಗಿರಲಿಲ್ಲ ಎಂದುಕೊಂಡಿದ್ದೆ. ಮೊದಲ ಪ್ರಶಸ್ತಿ ಬಂದ ನಂತರ ಅನ್ನಿಸಿದ್ದೆಂದರೆ ಉಳಿದವರೆಲ್ಲರೂ ನನಗಿಂತ ಕೆಟ್ಟದಾಗಿ ಬರೆದಿದ್ದರು ಎನ್ನುವುದು. ಅದೇ ಕವಿತೆ ಇಲ್ಲಿದೆ ನೋಡಿ. 2004-05ನೇ ಸಾಲಿನ ಕವಿತಾ ರಚನೆ ಸ್ಪರ್ಧೆಯಲ್ಲಿ ಮೊಟ್ಟಮೊದಲ ಬಹುಮಾನ ತಂದುಕೊಟ್ಟ ಕವಿತೆ)

ಅಘನಾಶಿನಿ ಕಣಿವೆಯಲ್ಲಿ-19

           ತೊಂಭತ್ತು ವಸಂತಗಳ ಮೇಲೆ ನಾಲ್ಕೈದು ವಸಂತಗಳನ್ನು ಕಳೆದಿದ್ದ ಗಣಪಜ್ಜನ ಬಳಿ ಮಾತನಾಡಿದಂತೆಲ್ಲ ಬೆರಗಿಗೆ ಕಾರಣವಾದ. ನಮ್ಮ ಹಿರಿಯರು ಅದೆಷ್ಟೆಲ್ಲ ಕೆಲಗಳಲ್ಲಿ ಕ್ರಿಯಾಶೀಲರಾಗಿ ಇರುತ್ತಿದ್ದರಲ್ಲ ಎನ್ನಿಸಿತು. ಗಣಪಜ್ಜನ ನೆನಪಿನ ಖಜಾನೆಯೊಳಗಿನ ಒಂದೆರಡು ಮುತ್ತುಗಳನ್ನಷ್ಟೇ ಯುವಪಡೆ ಪಡೆದುಕೊಂಡಿತ್ತು. ಅಷ್ಟಕ್ಕೇ ಅಚ್ಚರಿಯೊಂದಿಗೆ ಬಾಯಿ ಬಾಯಿ ಬಿಡಲು ಆರಂಭವಾಗಿತ್ತು. ಖಜಾನೆಯಲ್ಲಿ ಇನ್ನೂ ಲಕ್ಷಾಂತರ ಮುತ್ತುಗಳು ಬಾಕಿಯಿದ್ದವು. ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ರಕ್ಷಣೆ ಮಾಡಿ, ಬೆಳೆಸಿದ ಬಗೆ, ಅಡಿಕೆಯಿಂದ ಪಾನೀಯವನ್ನು ತಯಾರು ಮಾಡಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೆರೆಮನೆ ವಾಸ ಇನ್ನೂ ಅದೆಷ್ಟೋ ವಿಷಯಗಳು ಗಣಪಜ್ಜನ ಬಾಯಿಂದ ಕೇಳಬೇಕೆನ್ನಿಸಿತ್ತು. ಮತ್ತೊಮ್ಮೆ ಇವುಗಳನ್ನು ಕೇಳಲು ಬರುತ್ತೇವೆ ಎಂದು ಎಲ್ಲರೂ ವಾಪಸಾದರು.
              ವಿನಾಯಕನ ಮನೆಗೆ ಮರಳಿದ ನಂತರವೂ ಗಣಪಜ್ಜ ಮಾತುಗಳು ಎಲ್ಲರ ಮನಸ್ಸಿನಲ್ಲಿ ತಕ ಥೈ ಆಡುತ್ತಿತ್ತು. ಮತ್ತೆ ಮತ್ತೆ ಚರ್ಚೆ ಮಾಡಿದರು ಎಲ್ಲರೂ. ಹುಲಿ ಹೊಡೆದ ಗಣಪಜ್ಜ ಜಿಮ್ ಕಾರ್ಬೆಟ್ಟನ ಹಾಗೇ ಆಗಿಬಿಟ್ಟಿದ್ದ. ವಿನಾಯಕನ ಮನೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡುತ್ತಿದ್ದಾಗಲೇ ಒಂದಿಬ್ಬರು ಹಿರಿಯರು ಗಣಪಜ್ಜ ಹುಲಿ ಹೊಡೆದಿರಲಿಲ್ಲವೆಂದೂ ಮುತ್ಮುರ್ಡಿನ ಸುಬ್ಬಜ್ಜ ಹುಲಿ ಹೊಡೆದವನೆಂದೂ ಆಗ ಜೊತೆಯಲ್ಲಿ ಇದ್ದವನು ಮಾತ್ರ ಗಣಪಜ್ಜನೆಂದೂ ಹೇಳಿದರು. ಗಣಪಜ್ಜನೇ ಹುಲಿ ಹೊಡೆದನಾ ಅಥವಾ ಸುಬ್ಬಜ್ಜ ಹೊಡೆದನಾ ಎನ್ನುವ ಬಗ್ಗೆ ಕೆಲಕಾಲ ಚರ್ಚೆಯೂ ನಡೆಯಿತು. ಕೊನೆಗೆ ಯಾರೇ ಹುಲಿ ಹೊಡೆದಿರಲಿ, ಅದೊಂದು ವಿಶೇಷ ಘಟನೆಯೇ ಹೌದು. ಹುಲಿಯನ್ನು ಹೊಡೆಯುವುದು ಸಾಮಾನ್ಯ ಕೆಲಸವಲ್ಲ. ಗಣಪಜ್ಜ ತಾನು ಹುಲಿ ಹೊಡೆದಿದ್ದೇನೆ ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದಾನೆ ಎಂದರೆ ಆತ ಖಂಡಿತವಾಗಿಯೂ ಹೊಡೆದಿರಲೇಬೇಕು ಎಂದುಕೊಂಡರು ಎಲ್ಲರೂ.

***

            `ಹಾಗಾದರೆ ಬಂದವರು ಯಾರು? ಪೋಲೀಸರೇನಲ್ಲವಲ್ಲ.' ಎಂದು ಆ ಗುಂಪಿಗೆ ನಾಯಕನೆನ್ನಿಸಿಕೊಂಡವನು ಕೇಳಿದ್ದ.
            `ಅಲ್ಲ. ಅವರು ಪೊಲೀಸರಲ್ಲ. ಪೊಲೀಸರಿಗೆ ಮಾಹಿತಿ ಕೊಡುವವರೂ ಅಲ್ಲ. ಅದೇನೋ ಕಾಡು ಸುತ್ತುವವರಂತೆ. ಕಾಡಿನ ಬಗ್ಗೆ ರಿಸರ್ಚ್ ಮಾಡುವವರಂತೆ ನೋಡಿ. ಪಾತರಗಿತ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ಬಂದಿದ್ದಾರಂತೆ. ಅವನೊಬ್ಬನಿದ್ದಾನಲ್ಲ ಆ ದಂಟಕಲ್ಲಿನಲ್ಲಿ ಓದಿಕೊಂಡವನು. ವಿನಾಯಕ. ಅವನ ನೆಂಟರಂತೆ ನೋಡಿ. ಒಂದಿಬ್ಬರು ಹೊರಗಿನಿಂದಲೂ ಬಂದಿದ್ದಾರಂತೆ. ಇವರಿಂದ ನಮಗೆ ಏನೂ ತೊಂದರೆಯಾಗಲಿಕ್ಕಿಲ್ಲ' ಎಂದು ಇನ್ನೊಬ್ಬ ಮಾಹಿತಿ ನೀಡಿದ.
              `ಊಹೂ. ಅವರು ಯಾವುದೇ ಕಾರಣಕ್ಕೆ ಬಂದಿರಲಿ. ಅವರನ್ನು ನಂಬುವ ಮುಟ್ಠಾಳತನವಂತೂ ಮಾಡಲೇಬಾರದು. ಮೊದಲು ಅವರನ್ನು ನಮ್ಮ ಕಾಡಿನಿಂದ ದೂರಕ್ಕೆ ಓಡಿಸಲೇಬೇಕಾದ ಅನಿವಾರ್ಯತೆಯಿದೆ. ಅದಕ್ಕೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಿ. ಎಚ್ಚರ ಎಲ್ಲಿಯೂ ಇದು ನಮ್ಮ ಕೆಲಸ ಎಂದು ಗೊತ್ತಾಗದಂತೆ ಮುಂದುವರಿಯಿರಿ. ಮೊದಲು ಅವರನ್ನು ಇಲ್ಲಿಂದ ಕಳಿಸಿ.' ಎಂದು ಆಜ್ಞೆ ನೀಡಿದ್ದ ಮುಖ್ಯಸ್ಥ. ಮಾಹಿತಿ ನೀಡಲು ಬಂದಿದ್ದವನು ಸರಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ.

***

            ದಂಟಕಲ್ ಎಂದ ಕೂಡಲೇ ಗತ ಇತಿಹಾಸದಲ್ಲಿ  ಕಳೆದುಹೋಗಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಹೇಗೆ ನೆನಪಿಗೆ ಬರುತ್ತದೆಯೋ ಅದೇ ರೀತಿ ಅಪ್ಪೆಮಿಡಿಯೂ ಕೂಡ. ಉಪ್ಪಿನಕಾಯಿ ಪ್ರಿಯರಿಗೆಲ್ಲ ಅಪ್ಪೆಮಿಡಿ ಪರಮಾಪ್ತ. ಅಚ್ಚುಮೆಚ್ಚು. ಅಪ್ಪೆಮಿಡಿ ಪ್ರಿಯರೆಲ್ಲ ಅನಂತ ಭಟ್ಟನ ಅಪ್ಪೆಮಿಡಿಯನ್ನು ಇಷ್ಟಪಡುತ್ತಾರೆ. ಇಂತಹ ಅಪ್ಪೆಮಿಡಿ ತಳಿ ಅವಸಾನದ ಅಂಚಿನಲ್ಲಿದ್ದಾಗ ಅದನ್ನು ಉಳಿಸಿ ಬೆಳೆಸಿದ ಕೀರ್ತಿ ದಂಟಕಲ್ಲಿಗೆ ಸಲ್ಲುತ್ತದೆ. ದಂಟಕಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಗಣೇಶಜ್ಜ, ಗಣೇಶಜ್ಜನ ಮಗ ಗಣಪಜ್ಜ, ದೊಡ್ಡಮನೆಯ ವಿಘ್ನೇಶ್ವರ ಹೆಗಡೇರು ಈ ಮುಂತಾದವರೆಲ್ಲ ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ಸಂರಕ್ಷಿಸಿದವರು ಎಂದರೆ ತಪ್ಪಾಗಲಿಕ್ಕಿಲ್ಲ.
              ಹಳೆಯ ಇತಿಹಾಸದ ಘಟನೆಗಳನ್ನು ಈಗಿನ ಜಮಾನಾಕ್ಕೆ ಹೇಳಬೇಕೆಂದರೆ ಗಣಪಜ್ಜ ಮಾತ್ರ ಉಳಿದುಕೊಂಡಿದ್ದ. ಊರಿನಲ್ಲಿ ಶತ ವಸಂತಗಳ ಹತ್ತಿರ ವಯಸ್ಸನ್ನು ಕಂಡಿದ್ದವನು ಗಣಪಜ್ಜ ಮಾತ್ರವೇ. ಆತ ಮಾತ್ರ ತನ್ನೂರಿನಲ್ಲಿ ನಡೆದ 1 ಶತಮಾನದ ಘಟನೆಗಳನ್ನು ಹೇಳಬಲ್ಲವನಾಗಿದ್ದ. ಆದ್ದರಿಂದ ನಮ್ಮ ಕಥೆಯ ನಾಯಕರು ಆತನ ಬೆನ್ನು ಬಿದ್ದಿದ್ದರು. ವಯಸ್ಸಾಗಿದ್ದರೂ ಗಪ್ಪಜ್ಜನಿಗೆ ಹರೆಯದ ಹುಡುಗರು ತನ್ನ ಬಳಿ ಮಾತನಾಡಲು ಬಂದ ತಕ್ಷಣ ಯವ್ವನ ಮರಳಿದಂತೆ ಕ್ರಿಯಾಶೀಲನಾಗಿದ್ದ. ಹೊಸ ಹುರುಪಿನೊಂದಿಗೆ ಕಾರ್ಯಪ್ರವೃತ್ತನೂ ಆಗಿದ್ದ.
             ಅಪ್ಪೆಮಿಡಿಯ ಪರಿಚಯ ಮಾಡಿಕೊಡು ಎಂದು ಯುವಪಡೆ ಹೇಳಿದ ತಕ್ಷಣವೇ ಗಪ್ಪಜ್ಜ ತನ್ನ ತೋಟದ ಕಡೆಗೆ ಎಲ್ಲರನ್ನೂ ಕರೆದೊಯ್ದಿದ್ದ. ತೋಟದ ಸಾಲಿನಲ್ಲಂತೂ ಎತ್ತ ನೋಡಿದರತ್ತ ಅಪ್ಪೆಮಿಡಿಯ ಮರಗಳು. 30-40-50 ವರ್ಷಗಳಾಗಿದ್ದ ಅಪ್ಪೆಯ ಮರಗಳು. ಎಪ್ರಿಲ್ ತಿಂಗಳಾಗಿದ್ದ ಕಾರಣ ಆಗಷ್ಟೇ ಮಾವಿನ ಕಸ್ತ್ರಗಳು ಕಾಯಾಗುತ್ತಿದ್ದವು. ಒಂದೆರಡು ಕಡೆಗಳಲ್ಲಿ ಕಾಯಿಗಳನ್ನು ಕೊಯ್ಯಲೂ ಆರಂಭಿಸಲಾಗಿತ್ತು. ಹೋದವರೇ ಅಜ್ಜ ತಮ್ಮ ಜಮೀನಿನಲ್ಲಿದ್ದ ಅಪ್ಪೆಮಿಡಿಯ ಮರಗಳನ್ನೆಲ್ಲ ತೋರಿಸಿದರು. ಒಂದೆರಡು ಕಡೆಗಳಲ್ಲಿ ಕೊಯ್ಯುತ್ತಿದ್ದ ಅಪ್ಪೆಮಿಡಿಗಳನ್ನು ತಿನ್ನಲೂ ಕೊಟ್ಟರು. `ಮಿಡಿಯನ್ನು ಚೂರು ಮಾಡಿ ಬಾಯಿಗಿಟ್ಟವರಿಗೆ ಒಮ್ಮೆಲೆ ಆಹ್.. ಎನ್ನುವ ಉದ್ಘಾರ. ಅಷ್ಟು ರುಚಿಕರವಾಗಿತ್ತು ಅಪ್ಪೆಮಿಡಿ.
           `ತಮಾ ಯಾರಾದ್ರೂ ಬೆಂಕಿಪೆಟ್ಗೆ ತಂಜ್ರಾ?' ಎಂದು ಕೇಳಿದ್ದ ಗಣಪಜ್ಜ.
           ಪ್ರದೀಪ ತನ್ನ ಬಳಿ ಲೈಟರ್ ಇದೆ ಎಂದು ಹೇಳಿದವನೇ ಕೊಟ್ಟ. `ತಮಾ ನೀ ಲೈಟರ್ ಹಚ್ಚು. ನಾ ಎಂತದ್ದೋ ತೋರಿಸ್ತಿ' ಎಂದರು. ಅಲ್ಲೇ ಇದ್ದ ಅಪ್ಪೆಮಿಡಿಯನ್ನು ಅದರ ಚೊಟ್ಟಿನ ಸಮೇತ ತಂದರು. `ಈಗ ಲೈಟರ್ ಹಚ್ಚು' ಎಂದರು. ಪ್ರದೀಪ ಲೈಟರ್ ಹಚ್ಚಿದ ತಕ್ಷಣ ಅಪ್ಪೆಮಿಡಿಯ ಚೊಟ್ಟನ್ನು ಚಟ್ಟನೆ ಮುರಿದರು. ಮುರಿದ ರಭಸಕ್ಕೆ ಅಪ್ಪೆಮಿಡಿಯ ಸೊನೆ ಭುರ್ರನೆ ಹಾರಿತು. ಲೈಟರ್ ನಲ್ಲಿ ಹೊತ್ತಿಸಿದ್ದ ಬೆಂಕಿಗೆ ಆ ಸೊನೆಯನ್ನು ಹಿಡಿದರು ಗಣಪಜ್ಜ. ಇದ್ದಕ್ಕಿದ್ದಂತೆ ಆ ಸೊನೆಗೆ ಭರ್ರನೆ ಬೆಂಕಿ ಹೊತ್ತಿಕೊಂಡಿತು. ಅಷ್ಟೇ ಅಲ್ಲದೇ ಅಪ್ಪೆಮಿಡಿಯ ಚೊಟ್ಟಿಗೂ ಬೆಂಕಿ ಹಿಡಿದು ಕೆಲಕಾಲ ಸರಸರನೆ ಉರಿಯಿತು. ಎಲ್ಲರ ಕಣ್ಣಲ್ಲೂ ವಿಸ್ಮಯ. `ನೋಡಿ ಯಾವ ಅಪ್ಪೆಮಿಡಿಯ ಸೊನೆಗೆ ಚನ್ನಾಗಿ ಬೆಂಕಿ ಹೊತ್ತಿಕೊಳ್ಳುತ್ತದೆಯೋ ಅಂವು ಅತ್ಯುತ್ತಮ ತಳಿಯ ಅಪ್ಪೆಮಿಡಿ ಎನ್ನುವ ಮಾತಿದ್ದು. ನೋಡಿ ಈ ಅಪ್ಪೆಮಿಡಿಗೆ ಅದ್ಯಾವ್ ರೀತಿ ಬೆಂಕಿ ಹತ್ತಿಗ್ಯಂಜು ಹೇಳಿ. ಹಿಂಗ್ ಇರವು ಅಪ್ಪೆಮಿಡಿ ಅಂದ್ರೆ. ಅಗ್ ದಿ ಹೈಕ್ಲಾಸ್ ಅಪ್ಪೆಮಿಡಿ ಇದು.' ಎಂದರು ಅಜ್ಜ.
            `ಅಪ್ಪೆಮಿಡಿಯ ಸೊನೆಯಲ್ಲಿ ಸ್ಪರಿಟ್ ಇರುತ್ತದೆ ಎಂದು ಕೇಳಿದ್ದೆ..' ಎಂದ ವಿನಾಯಕ
             `ಸ್ಪರಿಟ್ಟೋ ಎಂತದ್ದೋ.. ಯಂಗಂತೂ ಗೊತ್ತಿಲ್ಲೆ ತಮಾ. ಅನಂತಭಟ್ಟನ ಅಪ್ಪೆಮಿಡಿಯ ಸೊನೆಗೆ ಚೊಲೋ ಬೆಂಕಿ ಹತ್ತಿಗ್ಯತ್ತು ನೋಡು. ಅದೇ ರೀತಿ ಜೀರಿಗೆ ವಾಸನೆ, ಯಾಲಕ್ಕಿ ವಾಸನೆ, ಗುಂಡಪ್ಪೆ ಇವ್ಕೂ ಚೊಲೋ ಬೆಂಕಿ ಹತ್ತಿಗ್ಯತ್ತು. ಆದರೆ ವಾಸನೆ ಇಲ್ಲದ್ದೇ ಹೋದ ಅಪ್ಪೆಮಿಡಿಗೆ ಹಿಂಗ್ ಬೆಂಕಿ ತಗತ್ತಿಲ್ಲೆ ನೋಡಿ..' ಎಂದರು ಗಣಪಜ್ಜ.
             ಹಳ್ಳಿಗರ ಜ್ಞಾನ ಅದೆಷ್ಟು ವಿಶಿಷ್ಟವಾಗಿರುತ್ತದೆಯಲ್ಲ ಎಂದುಕೊಂಡರು ಎಲ್ಲರೂ. `ದೇಶಾದ್ಯಂತ ಅಪ್ಪೆಮಿಡಿ ಮರಗಳನ್ನು ನೆಟ್ಟು ಬಿಡೋಣ. ಆಮೇಲೆ ಅದರ ಸೊನೆ ಸಂಗ್ರಹ ಮಾಡಿ ಇಂಧನ ತಯಾರಿಸೋಣ. ದೇಶಕ್ಕೆ ಅಗತ್ಯವಾಗಿರುವ ಪೆಟ್ರೂಲ್, ಡಿಸೇಲ್, ಅಡುಗೆ ಇಂಧನದ ಹೊರೆ ತಪ್ಪುತ್ತದೆ ಅಲ್ಲವಾ?' ಎಂದ ಪ್ರದೀಪ. ಎಲ್ಲರೂ ಒಮ್ಮೆಲೆ ನಕ್ಕರು.
            `ತಮಾ.. ಅಪ್ಪೆಮಿಡಿ ಸೊನೆ ಸಂಗ್ರಹ ಮಾಡೋದು ಸುಲಭ ಅಲ್ಲ. 100 ಎಂ. ಎಲ್ ಸೊನೆ ಸಂಗ್ರಹ ಮಾಡವು ಅಂದ್ರೆ ಹೆಚ್ಚೂ ಕಡಿಮೆ 10 ಸಾವಿರಕ್ಕೂ ಜಾಸ್ತಿ ಅಪ್ಪೆಮಿಡಿ ಬೇಕಾಗ್ತು ನೋಡು. ಒಂದೊಂದು ಮರಕ್ಕೆ 10 ಲಕ್ಷ ಕಾಯಿ ಬಿಟ್ಟರೆ ಹೆಚ್ಚೂ ಕಡಿಮೆ 1 ಲೀಟರ್ ಸೊನೆ ಸಂಗ್ರಹ ಮಾಡ್ಲಕ್ಕು. ಅಪ್ಪೆಮಿಡಿ ಸೊನೆಗೆ 100 ಎಂ.ಎಲ್.ಗೆ ಹೆಚ್ಚೂ ಕಡಿಮೆ 1000 ರೂಪಾಯಿ ಇದ್ದು. ಇದು ಸುಲಭ ಅಲ್ದೋ. ದುಬಾರಿ ಆಗ್ತು. ನಿನ್ ಪ್ಲಾನು ಬಿಟ್ಟಾಕು. ಆದರೆ ಅಪ್ಪೆಮಿಡಿ ಮರ ಬೇಳೆಸು ಅಡ್ಡಿಲ್ಲೆ..' ಎಂದರು ಗಣಪಜ್ಜ.
              ಬೆಂಕಿಗೆ ಅನಂತಭಟ್ಟನ ಅಪ್ಪೆಮಿಡಿ ಸೊನೆ ಸುಟ್ಟ ವಾಸನೆ ಘಮ್ಮೆನ್ನುತ್ತಿತ್ತು. ಅಪ್ಪೆಮಿಡಿ ಚೂರನ್ನು ತಿಂದವರಿಗೆ ಬಾಯೆಲ್ಲ ಅಪ್ಪೆಮಿಡಿ ಸುವಾಸನೆಯಾದಂತೆ ಅನ್ನಿಸುತ್ತಿತ್ತು. ಬಾಯಿಂದ ತೇಗು ಬಂದರೂ ಅಪ್ಪೆಮಿಡಿಯ ಸುವಾಸನೆಯೇ ಬರುತ್ತಿತ್ತು. `ತಮಾ ಇದು ಬಹಳ ಜೀರ್ಣಕಾರಿ. ನೀವ್ ಎಷ್ಟೇ ಊಟ ಮಾಡ್ಕ್ಯಂಡ್ ಬಂದಿದ್ದರೂ ಅಪ್ಪೆಮಿಡಿ ಬೇಗನೇ ಜೀರ್ಣ ಮಾಡಿ ಹಾಕ್ ಬಿಡ್ತು. ಅದ್ಕೇ ಉಪ್ಪಿನಕಾಯಿಗೆ ಅನಂತಭಟ್ಟನ ಮಿಡಿ ಅಂದ್ರೆ ಶ್ರೇಷ್ಟ ಅಂತಾ ಹೇಳ್ತ. ಇಡೀ ಉಪ್ಪಿನಕಾಯಿ ಭರಣಿಗೆ 100 ರು ಅಪ್ಪೆಮಿಡಿ ಹಾಕಿ ಅದರಲ್ಲಿ 5-6 ಅನಂತಭಟ್ಟನ ಅಪ್ಪೆಮಿಡಿ ಮಿಕ್ಸ್ ಮಾಡಿದ್ರೆ ಇಡೀ ಭರಣಿಯ ರುಚಿಯನ್ನೇ ಬದಲು ಮಾಡಿಬಿಡ್ತಿ ಇದು. ಎಲ್ಲ ಅಪ್ಪೆ ಮಿಡಿನೂ ಅನಂತ ಭಟ್ಟನ ಅಪ್ಪೆಮಿಡಿಯೇನೋ ಅಂಬಂತೆ ಮಾಡತು' ನೋಡಿ ಎಂದರು ಗಣಪಜ್ಜ.
              ತಿಂದರೆ ತೆಂಗಿನ ಕಾಯಿಯ ಚೂರಿನಂತೆ ಕರಂ ಕರಂ ಎನ್ನುತ್ತಿದ್ದ ಅಪ್ಪೆಮಿಡಿ ಅಷ್ಟು ಹುಳಿಯೂ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ ಮಿಕ್ಸ್ ಉಪ್ಪಿನಕಾಯಿಯ ನಾಲ್ಕು ಪಟ್ಟು ದರ ಅನಂತ ಭಟ್ಟನ ಅಪ್ಪೆಮಿಡಿ ಉಪ್ಪಿನಕಾಯಿಗೆ ಇದೆ ಎಂಬುದು ಎಲ್ಲರಿಗೂ ನೆನಪಾಯಿತು. `ಅಜ್ಜಾ.. ಈ ಅನಂತಭಟ್ಟನ ಅಪ್ಪೆಮಿಡಿ ತಳಿ ಉಳಿಸಿದ ಸಾಹಸಗಾಥೆ ನಂಗಕ್ಕಿಗೆ ಹೇಳಿ' ಎಂದ ವಿನಾಯಕ.
             `ಅದೊಂದ್ ದೊಡ್ಡ ಕಥೆ. ಈಗ ಇಲ್ಲೆಲ್ಲಾ ಇಷ್ಟೆಲ್ಲಾ ಅನಂತಭಟ್ಟನ ಅಪ್ಪೆಮಿಡಿ ಮರಗಳು ಕಾಣ್ತಲಾ. ಆದರೆ ಮೊದಲು ಇಲ್ಲೆಲ್ಲೂ ಅಪ್ಪೆಮಿಡಿ ಮರ ಇತ್ತಿಲ್ಲೆ. ಬಾಳೂರು ಹತ್ತಿರ ಭಯಂಕರ ಎತ್ತರದ ಮರ ಒಂದಿತ್ತು. ಅದೇ ಈ ನಮ್ಮೆ ಎಲ್ಲಾ ಅನಂತ ಭಟ್ಟನ ಅಪ್ಪೆಮಿಡಿ ಮರಗಳ ಅಪ್ಪ-ಅಮ್ಮ. ಅಂತಹ ದೈತ್ಯ ಮರವನ್ನ ಯಾರೂ ಹತ್ತತ್ವಿದ್ದಿಲ್ಲೆ. ಆದರೆ ಅನಂತಭಟ್ಟ ಹೇಳಂವ ಒಬ್ಬಂವ ಪ್ರತಿ ವರ್ಷ ಆ ಮರ ಹತ್ತಿ ಅಪ್ಪೆಮಿಡಿ ಕೊಯ್ಕಂಡು ಬರ್ತಿದ್ದ. ಒಂದ್ ವರ್ಷ ಅಂವ ಮರದಿಂದ ಉರ್ಡಿ ಬಿದ್ದು ಸತ್ತೋದ. ಆ ಮೇಲೆ ಈ ಅಪ್ಪೆಮಿಡಿಗೆ ಅನಂತಭಟ್ಟನ ಅಪ್ಪೆಮಿಡಿ ಎಂದೂ ಹೆಸರು ಬಂತು. ಮರಕ್ಕೆ ಅನಂತಭಟ್ಟನ ಅಪ್ಪೆಮರ ಅಂತನೂ ಹೆಸರು ಬಂತು. ಮರಕ್ಕೆ ಭಯಂಕರ ವಯಸ್ಸಾಗಿತ್ತು. ಯನ್ನ ಅಪ್ಪಯ್ಯ ಗಣೇಶ ಹೆಗಡೇರು ಆ ಮರದ ಟೊಂಗೆ ತಗಂಡು ಬಂದು ಅದರ ಕಸಿ ಮಾಡಿ ಬೆಳೆಸಿದ್ರು. ಈಗ ದಂಟಕಲ್ ತುಂಬ ಅನಂತಭಟ್ಟನ ಅಪ್ಪೆಮರವೇ ಕಾಣಿಸ್ತು. ಇಷ್ಟೇ ಅಲ್ಲ. ಈ ಅಪ್ಪೆಮರ ಎಲ್ಲ ಕಡೆಗಳಲ್ಲಿ ಸೀಮೋಲ್ಲೋಂಘನವೂ ಮಾಡಿದ್ದು.'
               `ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ. ಶಿವರಾಮ ಕಾರಂತರ ಸಹೋದರ ಕೋ.ಲ. ಕಾರಂತರು ಈ ಅಪ್ಪೆಮಿಡಿ ಕಸಿ ಮಾಡಿ ತಮ್ಮೂರಲ್ಲಿ ಅನಂತಭಟ್ಟನ ಅಪ್ಪೆಮರದ ಫಾರ್ಮನ್ನೇ ಮಾಡಿದ್ದರು. ಆದರೆ ಅವರ ಊರಿನಲ್ಲಿ ಮರಕ್ಕೆ ಒಂದೇ ಒಂದೂ ಕಾಯಿ ಬಂಜಿಲ್ಲೆ. ಅಘನಾಶಿನಿ ನದಿ ದಡದ ಮೇಲೆ ಇದ್ದರೆ ಮಾತ್ರ ಅನಂತಭಟ್ಟನ ಅಪ್ಪೆಮರ ಕಾಯಿ ಬಿಡ್ತು ಹೇಳಿ ಮಾತಿದ್ದು. ಅದ್ಕೆ ಬೇರೆ ಕಡೆ ಎಲ್ಲೂ ಕಾಯಿ ಬಿಡ್ತಿಲ್ಲೆ. ಇಲ್ಲಿ ಇಷ್ಟೆಲ್ಲ ಹುಲುಸಾಗಿ ಬೆಳೆಯುವ ಅಪ್ಪೆಮಿಡಿ, ಅಪ್ಪೆಮರ ಬೇರೆ ಕಡೆ ಇಷ್ಟ ಚೊಲೋ ಬೆಳಿತಿಲ್ಲೆ. ಬಹುಶಃ ಈ ಮಣ್ಣಿನ ಗುಣ ಈ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ಲಕ್ಕು. ಇಲ್ಲಿಯ ಜೈವಿಕ ವಿಕಾಸ ಅನಂತಭಟ್ಟನ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ತಿಕ್ಕು ನೋಡಿ' ಎಂದರು ಗಣಪಜ್ಜ.
             ಅಪ್ಪೇಮಿಡಿಯ ವಿಶಿಷ್ಟತೆಗಳು ಎಲ್ಲರಲ್ಲಿಯೂ ಬೆರಗನ್ನು ತಂದಿತ್ತು. `ತಗಳಿ ಈ ಅಪ್ಪೆಮಿಡಿನ ಮನೆಗೆ ತಗಂಡು ಹೋಗಿ ಚಟ್ನಿ, ಅಪ್ಪೆಹುಳಿ ಮಾಡ್ಕಂಡು ಊಟ ಮಾಡಿ' ಎಂದು 100ಕ್ಕೂ ಹೆಚ್ಚು ಅಪ್ಪೆಮಿಡಿಗಳನ್ನು ಕೊಟ್ಟರು. ಮಾರುಕಟ್ಟೆಯಲ್ಲಿ 1 ಅನಂತಭಟ್ಟನ ಅಪ್ಪೆಮಿಡಿಗೆ ಕನಿಷ್ಟ 10 ರು. ಇದೆ ಎಂದು ವಿನಾಯಕ ಪಿಸುಗುಟ್ಟಿದ. ವಾಪಾಸು ಮನೆಗೆ ಬಂದು ಅಪ್ಪೆಮಿಡಿ ಚಟ್ನಿ ಮಾಡಿಸಿಕೊಂಡು ತಿಂದರು ಎಲ್ಲರೂ. ಅಪ್ಪೆಮಿಡಿಯ ಅಪ್ಪೆಹುಳಿ ಮಾಡಿಸಿಕೊಂಡು ಊಟ ಮಾಡಿದರು. ಪ್ರದೀಪನಂತೂ ಎಂದೂ ಕಾಣದವನಂತೆ ಅಪ್ಪೆಹುಳಿಯನ್ನು ಊಟಕ್ಕೆ ಬಡಿಸಿಕೊಂಡು ಉಂಡ. ಅಷ್ಟೇ ಅಲ್ಲದೇ ಅಪ್ಪೆಹುಳಿಯನ್ನು ಪದೇ ಪದೆ ಕುಡಿದ. ಪ್ರದೀಪ ಅಪ್ಪೆಹುಳಿಯ ಪರಮಾಪ್ತ ಅಭಿಮಾನಿಯಾಗಿಬಿಟ್ಟಿದ್ದ.
           ಅಷ್ಟರಲ್ಲಿ ತುಂಟತನ ಮಾಡಿದ ವಿನಾಯಕ `ಈ ಅಪ್ಪೆಹುಳಿ ಇದೆಯಲ್ಲ ಇದು ಬ್ರಾಹ್ಮಣರ ಪಾಲಿಗೆ ವೈನ್ ಎಂದೇ ಕರೆಸಿಕೊಳ್ಳುತ್ತದೆ. ಅಷ್ಟು ಕಿಕ್ ಕೊಡುತ್ತದೆ ಮಾರಾಯಾ. ಇದನ್ನು ಊಟ ಮಾಡಿದರೆ ಸಿಕ್ಕಾಪಟ್ಟೆ ನಿದ್ದೆ ಬರುತ್ತದೆ. ಅಷ್ಟೇ ಅಲ್ಲ ಮಂಪರೂ ಕೂಡ.. ನೀನು ಅಷ್ಟೆಲ್ಲ ಊಟ ಮಾಡಿದೆಯಲ್ಲ. ಇದೀಗ ನಿನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸುತ್ತೇವೆ ಇರು ' ಎಂದ. ಪ್ರದೀಪ ಹೌಹಾರಿದ. ಊಟ ಮಾಡಿದ ತಕ್ಷಣವೇ ಪ್ರದೀಪನಿಗೆ ಗಡದ್ದು ನಿದ್ದೆ. ಗಣಪಜ್ಜನ ಜೊತೆಯಲ್ಲಿ ಹೀಗೊಂದು ದಿನ ಸಾರ್ಥಕವಾಗಿ ಕಳೆಯಿತು ಎಂದುಕೊಂಡಳು ವಿಜೇತಾ. ಮಾಡುವ ಕೆಲಸ ಇನ್ನೂ ಸಾಕಷ್ಟಿತ್ತು. ಸೂರ್ಯಕುದುರೆಯನ್ನು ಹುಡುಕಬೇಕಿತ್ತು. ಸೂರ್ಯಶಿಖಾರಿಯನ್ನೂ ಕೈಗೊಳ್ಳಬೇಕಿತ್ತು. ನಾಳೆಯಿಂದಲೇ ಈ ಕೆಲಸಕ್ಕೆ ತೊಡಗಿಕೊಳ್ಳಬೇಕು ಎಂದುಕೊಂಡಳು ವಿಜೇತಾ. ಆದರೆ ಮರುದಿನ ಮಾತ್ರ ಎಂದಿನಂತಿರಲಿಲ್ಲ. ಬೆಳ್ಳಂಬೆಳಿಗ್ಗೆ ದೊಡ್ಡದೊಂದು ಶಾಕ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

(ಮುಂದುವರಿಯುತ್ತದೆ)

Wednesday, May 20, 2015

ಪ್ರಕೃತಿ

(ಚಿತ್ರ : ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು)
ಈ ಭೂಮಿಯು ದೇವ ಮಂದಿರ
ಸೃಷ್ಟಿ ಸೊಬಗಿದು ಸುಂದರ
ಜೀವ ಜೀವವು ಸೇರಿ ಇರುವೆಡೆ
ಇರುವ ಬಾನಿನ ಚಂದಿರ ||

ಶಿಲ್ಪಕಲೆಗಳ ಹಾಗೆ ಇರುವ
ಗುಡ್ಡ ಬೆಟ್ಟ ನದಿಗಳು
ಸಾಲು ಸಾಲು ಗಿಡಮರಗಳು
ಬಾಗಿ ತೂಗುತಿರ್ಪವು ||

ಜಗಕೆ ಬೆಳಕೇ ಆಗಿರುವ
ಸರ್ವ ವಂದ್ಯ ಸೂರ್ಯನು
ದಿನ ದಿನವೂ ದಣಿಯದೇ
ಅಮರ ಜೀವ ಕೊಡುವನು ||

ತೇಗ ಮತ್ತಿಯ ಮರಗಳೆಲ್ಲವು
ಹಸಿರ ಹೊನ್ನು ಆಗಿದೆ
ಮಾನವನ ಜೀವದೊಡನೆ
ಪ್ರಕೃತಿಯ ಸೊಬಗು ನರಳಿದೆ ||

***
(ನಾನು ಪಿಯುಸಿ ಓದುವಾಗ ಬರೆದ ಕವಿತೆಗಳ ಮಾಲಿಕೆಯಲ್ಲಿ ಇದೂ ಒಂದು. ಇನ್ನೂ ಕವಿ ಮನಸ್ಸು ಅರಳುತ್ತಿದ್ದ ಕಾಲದ ಕವಿತೆ. ಸ್ವಲ್ಪ ಸುಧಾರಿಸಿಕೊಂಡು ಓದಿ)
(ಈ ಕವಿತೆ ಬರೆದಿರುವುದು 08-07-2004ರಂದು ದಂಟಕಲ್ಲಿನಲ್ಲಿ)
(ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು ಅವರ ಚಿತ್ರವನ್ನು ಅವರ ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದೇನೆ. ಅವರ ಬಳಿ ಕ್ಷಮೆ ಕೋರುತ್ತಾ..)