Thursday, June 6, 2019

ಅನುಮಾನ ಹುಟ್ಟಿಸುತ್ತಿದೆ ಕಾಡುಕೋಣಗಳ ಸರಣಿ ಸಾವು

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದವೇ ವನ್ಯಪ್ರಾಣಿಗಳು?


ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲೂಕು ವ್ಯಾಪ್ತಿಯಲ್ಲಿರುವ ಅಣಶಿ-ದಾಂಡೇಲಿ ಕಾಳಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ  ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಡುಕೋಣಗಳ ಸರಣಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ. ಅಸಹಜ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸುವ ಮೂಲಕ ಅರಣ್ಯ ಇಲಾಖೆ ಯಾವುದೋ ದೊಡ್ಡ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ಮೃತಪಟ್ಟಿದ್ದರೂ ಕೇವಲ 4 ಕಾಡುಕೋಣಗಳು ಮಾತ್ರ ಸತ್ತಿವೆ ಎನ್ನುವ ಮೂಲಕ ಅರಣ್ಯ ಇಲಾಖೆ ನೈಜ ಕಾರಣವನ್ನು ಮುಚ್ಚಿಡಲು ಯತ್ನಿಸುತ್ತಿದೆ. ತನ್ಮೂಲಕ ಯಾವುದೋ ಅಂಶವನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.


ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯ
ಕಾಡುಕೋಣಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕೆಳ ಹಂತದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜೋಯಿಡಾ ಕಾಡಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕಾಡುಕೋಣಗಳು ಮೃತಪಟ್ಟ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ ಕೆಳ ಹಂತದ ಅರಣ್ಯಾಧಿಕಾರಿಗಳು ಸ್ಥಳೀಯ ಹಂತದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಹಜ ಸಾವು ಎಂದು ವರದಿ ಬರುವಂತೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಕಾಡುಕೋಣಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ತಜ್ಞ ವೈದ್ಯರ ಮೊರೆ ಹೋದರು ಎನ್ನುವ ಮಾತುಗಳು ಕೇಳಿ ಬಂದಿದೆ. ಕಾಡುಕೋಣಗಳು ಸಹಜ ಕಾರಣದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಯುವುದಿಲ್ಲಘಿ. ಶಿವಮೊಗ್ಗ ದ ವೈದ್ಯರಿಗೆ ಕಾಡುಕೋಣಗಳ ತಾಜಾ ಮಾಂಸ ಸಿಗದ ಕಾರಣ ವೈದ್ಯಕೀಯ ಪರೀಕ್ಷೆಯಲ್ಲಿ ನಿಖರ ಕಾರಣಗಳು ತಿಳಿದುಬರುವ ಸಾಧ್ಯತೆಗಳು ಕಡಿಮೆ ಎನ್ನುವುದು ಶಿವಮೊಗ್ಗದ ವೈದ್ಯಕೀಯ ಮೂಲಗಳ ಮಾಹಿತಿ.
ಇದೀಗ ಬೆಂಗಳೂರಿನ ಎರಡು ಪ್ರಯೋಗಾಲಯಗಳಿಗೆ ಕಾಡುಕೋಣಗಳ ಅಂಗಾಂಗಗಳನ್ನು ಒಯ್ಯಲಾಗಿದೆ. 10-12 ದಿನಗಳಲ್ಲಿ ಅವುಗಳ ಪರೀಕ್ಷೆಯ ವರದಿಗಳು ಹೊರಬೀಳಲಿದೆ. ನಂತರವಷ್ಟೇ ಕಾಡುಕೋಣಗಳ ಸಾವಿನ ಕಾರಣಗಳು ತಿಳಿದುಬರಲಿದೆ.


ಇನ್ನಷ್ಟು ಕಾಡುಕೋಣಗಳ ಸಾವು
ಕಾಡುಕೋಣಗಳ ಸರಣಿ ಸಾವು ಕೇವಲ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿಲ್ಲಘಿ. ಕಾಡುಕೋಣಗಳು ಕಾಳಿ ನದಿಗೆ ನಿರ್ಮಿಸಲಾಗಿರುವ ಕೊಡಸಳ್ಳಿ ಅಣೆಕಟ್ಟು ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿಯೂ ಮೃತಪಟ್ಟಿವೆ. ನಾಲ್ಕಕ್ಕೂ ಅಧಿಕ ಕಾಡುಕೋಣಗಳು ಕೊಡಸಳ್ಳಿ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲಿ ಸತ್ತಿವೆ ಎನ್ನುವ ಮಾಹಿತಿಗಳು ಹೊಸದಿಗಂತಕ್ಕೆ ಲಭ್ಯವಾಗಿದೆ.
ಅರಣ್ಯ ಸಚಿವರೇ ಇತ್ತ ಗಮನ ಕೊಡಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯೇ ಅರಣ್ಯ ಇಲಾಖೆಯೂ ಇದೆ. ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸರಣಿ ಸಾವಿನ ಕುರಿತು ಕುಮಾರಸ್ವಾಮಿಯವರು ಕ್ರಮ ಕೈಗೊಳ್ಳುವ ಅಗತ್ಯವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡುವ ಮೂಲಕ ವನ್ಯಜೀವಿಗಳ ಸರಣಿ ಸಾವು ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಖಡಕ್ ನಿರ್ಧಾರ ಕೈಗೊಂಡು ಕೆಲವೇ ಸಂಖ್ಯೆಗಳಷ್ಟಿರುವ ಕಾಡುಕೋಣಗಳ ರಕ್ಷಣೆಗೆ ಆದೇಶ ಹೊರಡಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಮನವಿಯಾಗಿದೆ.

ಸಾವಿಗೇನು ಕಾರಣ?
ಕಾಡುಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳೆಲ್ಲ ಕಾಡುಪ್ರಾಣಿಗಳನ್ನು ಕಾಡುವುದೇ ಇಲ್ಲಘಿ. ಕಾಡುಪ್ರಾಣಿಗಳು ಏಕಾಏಕಿ ಬಹಳಷ್ಟು ಸಂಖ್ಯೆಯಲ್ಲಿ ಅಸುನೀಗುತ್ತಿವೆ ಎಂದರೆ ಅದಕ್ಕೆ ಬಲವಾದ ಕಾರಣಗಳೇ ಇರುತ್ತವೆ. ಮಾರಕ ಖಾಯಿಲೆ, ಸೋಂಕು, ವಿಷ ಪ್ರಾಶನ ಅಥವಾ ಇನ್ನಿತರ ಯಾವುದೋ ಕಾರಣಗಳಿಂದ ಕಾಡುಕೋಣಗಳು ಸಾಯುತ್ತಿರಬಹುದು ಎನ್ನುವುದು ಪರಿಸರ ಪ್ರೇಮಿಗಳ ಮನಸ್ಸಿನಲ್ಲಿ ಮೂಡಿರುವ ಶಂಕೆ.
ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಮನುಷ್ಯರ ಅತಿಕ್ರಮ ಪ್ರವೇಶಕ್ಕೆ ಅವಕಾಶವಿಲ್ಲಘಿ. ಇಂತಹ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿರುವ ಕಾಡುಕೋಣಗಳು ಮಾತ್ರ ಮೃತಪಟ್ಟಿವೆ. ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯ ಹೊರಗಿನ, ಅಂದರೆ ಮನುಷ್ಯರ ಓಡಾಟ ಹೆಚ್ಚಿರುವ ಕಾಡುಗಳಲ್ಲಿನ ಕಾಡೆಮ್ಮೆಘಿ, ಕಾಡುಕೋಣಗಳು ಮೃತಪಟ್ಟಿಲ್ಲಘಿ. ಹೀಗಾಗಿ ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸಾವಿಗೆ ಬೇರೇನೋ ಕಾರಣಗಳಿವೆ ಎನ್ನುವ ಸಂಶಯ ಬಲವಾಗಿದೆ.



ಮಾಧ್ಯಮಗಳಿಗೆ ನಿರ್ಬಂಧ
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ ಮೃತಪಟ್ಟಿರುವ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ತಕ್ಷಣ ಅರಣ್ಯ ಇಲಾಖೆ ಈ ಪ್ರದೇಶಗಳಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ. ಯಾವುದೇ ಅಧಿಕಾರಿಗಳಿಗೂ ಕಾಡುಕೋಣಗಳ ಸಾವಿನ ಕುರಿತು ಮಾಹಿತಿ ಹಂಚಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎನ್ನುವ ಮಾಹಿತಿಗಳು ಅಧಿಕಾರಿ ವಲಯದಿಂದ ಕೇಳಿ ಬಂದಿದೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಅರಣ್ಯ ಇಲಾಖೆಯ ನಡೆ ಇನ್ನಷ್ಟು ಅನುಮಾನಕ್ಕೂ ಕಾರಣವಾಗಿದೆ.


------------------
ಕಾಡುಪ್ರಾಣಿಗಳಲ್ಲಿಯೇ ಅತ್ಯಂತ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಪ್ರಾಣಿಗಳೆಂದರೆ ಅದು ಕಾಡುಕೋಣಗಳು. ಆದರೆ ಕಾಳಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಾಡುಕೋಣಗಳು ಮೃತಪಟ್ಟಿರುವುದನ್ನು ಗಮನಿಸಿದರೆ ಇದು ಸಹಜವಾದುದಲ್ಲಘಿ. ಬೇರೇ ಏನೋ ಕಾರಣ ಇದೆ ಎನ್ನಿಸುತ್ತದೆ.
ಸಂಜಯ ಭಟ್ಟ ಬೆಣ್ಣೆ
ಪರಿಸರಪ್ರೇಮಿ

Tuesday, June 4, 2019

ಮತ್ತೆ ಬತ್ತಿದ ಅಘನಾಶಿನಿ

(ಚಿತ್ರ- ಗೋಪಿ ಜಾಲಿ)
ಹರಿವು ನಿಲ್ಲಿಸಿದ ಪಾಪನಾಶಿನಿ ನದಿ/ಜೀವ ಜಗತ್ತಿಗೆ ಆತಂಕ



ಎರಡು ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಹರಿವು ನಿಲ್ಲಿಸಿದ್ದ ಅಘನಾಶಿನಿ ಮತ್ತೊಮ್ಮೆ ಬತ್ತಿ ಹೋಗಿದೆ. ಉತ್ತರ ಕನ್ನಡದ ಜೀವದಾಯಿ ನದಿಗಳಲ್ಲಿ ಒಂದಾಗಿರುವ ಅಘನಾಶಿನಿ ನದಿ ಬತ್ತಿರುವುದರಿಂದ ನದಿ ಪಾತ್ರದ ಜೀವ ಸಂಕುಲಗಳು ಆತಂಕಕ್ಕೆ ಈಡಾಗಿವೆ.
ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುವ ಅಘನಾಶಿನಿ ನದಿಯ ಕವಲು ಒಂದುಗೂಡಿ 98 ಕಿಲೋಮೀಟರ್ ದೂರ ಹರಿದು ಕುಮಟಾ ತಾಲೂಕಿನಲ್ಲಿ ಅರಬಿ ಸಮುದ್ರವನ್ನು ಸೇರುತ್ತದೆ.  ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
2017ರಲ್ಲಿ ಪ್ರಕೃತಿಯ ಮುನಿಸು ಹಾಗೂ ಮನುಷ್ಯನ ದುರಾಸೆಯ ಕಾರಣದಿಂದ ಬತ್ತಿ ಹೋಗಿದ್ದ ಅಘನಾಶಿನಿ ನದಿ ಇದೀಗ ಮತ್ತೊಮ್ಮೆ ಬತ್ತಿದೆ. ಅಘನಾಶಿನಿ ನದಿ ತೀರದಲ್ಲಿ ಈಗ ಕಲರವವಿಲ್ಲಘಿ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲಪಾತ ಜೀವ ಕಳೆದುಕೊಂಡಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ. ಅಘನಾಶಿನಿಯ ತಟದಲ್ಲಿ ಜೀವನ ಸಾಗಿಸುತ್ತಿದ್ದ ಅಪರೂಪದ ನೀರುನಾಯಿಗಳೂ ಕೂಡ ಬದುಕಿಗಾಗಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾರ್ನಬಿಲ್, ಕೆಂಪು ಅಳಿಲು ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವು ಜೀವಿಗಳು ಒದ್ದಾಡುತ್ತಿವೆ.

(ಚಿತ್ರ- ಗೋಪಿ ಜಾಲಿ)
ಕಡಿಮೆಯಾಗಿದೆ ನೀರು, ಸೊರಗಿದೆ ಉಪನದಿಗಳು
ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ತೀವ್ರ ಇಳಿಕೆ ಕಂಡಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ನದಿ ಎರಡನೇ ಬಾರಿ ಬತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆ ಬತ್ತಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯೂ ನೀರಿಲ್ಲದೇ ಸೊರಗಿದೆ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಶಾಲ್ಮಲಾ ನದಿ ಬತ್ತಿ ಹೋಗಿತ್ತುಘಿ. ಯಲ್ಲಾಪುರ ಪಟ್ಟಣಕ್ಕೆ ನೀರನ್ನು ಒದಗಿಸುವ ಬೇಡ್ತಿ ನದಿ ಬತ್ತಿ ಹಲವು ದಿನಗಳೇ ಕಳೆದಿವೆ. ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು ಆತಂಕವನ್ನು ಹೊರಹಾಕಿದ್ದರು. ಇದೀಗ ಮಲೆನಾಡಿನ ಇನ್ನೊಂದು ನದಿ ಬತ್ತಿ ಹೋಗಿದೆ. ಇದರ ನೇರ ಪರಿಣಾಮ ಪರಿಸರದ ಮೇಲಾಗುತ್ತಿದೆ. ನದಿಯನ್ನೇ ನಂಬಿದ್ದ ಜೀವ ಜಗತ್ತುಘಿ, ಪಕ್ಷಿಘಿ, ಪ್ರಾಣಿ ಸಂಕುಲ ಉಸಿರು ಚೆಲ್ಲುತ್ತಿವೆ. 10-12 ದಿನಗಳ ಒಳಗಾಗಿ ಮಳೆಯಾಗದಿದ್ದಲ್ಲಿ ಮಲೆನಾಡಿನ ಪರಿಸ್ಥಿತಿ ಇನ್ನಷ್ಟು ಘೋರವಾಗಿರಲಿದೆ.

(ಚಿತ್ರ- ಗೋಪಿ ಜಾಲಿ)

---------------------
ನದಿ ತೀರಗಳಲ್ಲಿ ಜನಸಂಖ್ಯೆ ಜಾಸ್ತಿಯಾಗಿದೆ. ನದಿಗಳ ಮೇಲಿನ ಅವಲಂಬನೆ ಕೂಡ ಹೆಚ್ಚಾಗಿದೆ. ಪಂಪ್ ಮೂಲಕ ಕೃಷಿಗೆ ನದಿ ನೀರನ್ನು ಬಳಸುವ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನದಿಗಳು ಬತ್ತುತ್ತಿವೆ. ಮಳೆ ನೀರು ಇಂಗಿಸಿದರೆ ಇಂತಹ ಸಮಸ್ಯೆಗೆ ಪರಿಹಾರ ಹುಡುಕಬಹುದು.
ಶಿವಾನಂದ ಕಳವೆ
ಪರಿಸರ ಬರಹಗಾರರು

Monday, June 3, 2019

ಕಾಣದ ರೋಗಕ್ಕೆ ಕಾಡುಕೋಣಗಳ ಬಲಿ


ಮಾರಕ ರೋಗ ಸಾಧ್ಯತೆ/ಮನುಷ್ಯರಿಗೂ ತಗುಲಬಹುದೇ?


ಪ್ರಕರಣ ಮುಚ್ಚಿಡಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ
ಕಾಡುಕೋಣಗಳ ಮೃತದೇಹ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಅಂಗಾಂಗಗಳ ರವಾನೆ
ಹೊಟ್ಟೆ ಹಾಗೂ ಬಾಯಿ ಹುಣ್ಣಿನಿಂದ ಕಾಡುಕೋಣಗಳು ಮೃತಪಟ್ಟಿರುವ ಶಂಕೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ  ಮೃತಪಡುತ್ತಿರುದು ಆತಂಕಕ್ಕೆ ಕಾರಣವಾಗಿದೆ. ಕಾಡುಕೋಣಗಳ ಸರಣಿ ಸಾವು ಮಾರಕ ರೋಗದ ಸಾಧ್ಯತೆಯನ್ನು ಹುಟ್ಟು ಹಾಕಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಅರಣ್ಯ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ನಿಘೂಡ ರೋಗಕ್ಕೆ ಬಲಿಯಾಗಿವೆ. ಅಣಶಿ, ಕ್ಯಾಸಲ್‌ರಾಕ್ ಮುಂತಾದ ಪ್ರದೇಶಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಅಜಮಾಸು 10ರಿಮದ 12 ವರ್ಷ ಪ್ರಾಯದ ಕಾಡುಕೋಣಗಳು ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಮೃತಪಟ್ಟಿವೆ.

ನಿಘೂಡ ರೋಗ?
ಮಲೆನಾಡಿನ ಅನೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಗಗಳು ಮೃತಪಟ್ಟ ಘಟನೆ ಹಸಿಯಾಗಿದೆ. ಈ ಮಂಗಗಳಿಂದಾಗಿ ಮನುಷ್ಯನಿಗೂ ಮಂಗನ ಖಾಯಿಲೆ ಬಂದು ಅನೇಕರನ್ನು ಬಲಿ ತೆಗೆದುಕೊಂಡ ಘಟನೆಗಳು ಜನರ ಮನಸ್ಸಿನಲ್ಲಿ  ಭೀತಿಯನ್ನು ಹೆಚ್ಚಿಸಿರುವ ಬೆನ್ನಲ್ಲೇ ಕಾಡುಕೋಣಗಳ ಸರಣಿ ಸಾವು ಆತಂಕ ತಂದಿದೆ. ಮೃತಪಟ್ಟಿರುವ ಕಾಡುಕೋಣಗಳಿಂದ ಮನುಷ್ಯನಿಗೂ ನಿಘೂಡ ಖಾಯಿಲೆಗಳು ಬರಬಹುದೇ ಎನ್ನುವ ಪ್ರಶ್ನೆಗಳು ಮೂಡಿವೆ.

ಮುಚ್ಚಿಟ್ಟ ಅರಣ್ಯ ಇಲಾಖೆ
ಜೋಯಿಡಾ ಕಾಡಿನಲ್ಲಿ ಸಾಲು ಸಾಲು ಕಾಡುಕೋಣಗಳು ಸತ್ತಿದ್ದರೂ ಅರಣ್ಯ ಇಲಾಖೆ ಅದನ್ನು ಮುಚ್ಚಿಡಲು ಮುಂದಾಗಿದೆ. ಇದುವರೆಗೂ 16ಕ್ಕೂ ಹೆಚ್ಚಿನ ಕಾಡುಕೋಣಗಳು ಬಲಿಯಾಗಿದ್ದರೂ ಅರಣ್ಯ ಇಲಾಖೆ ಕೇವಲ 4 ಕಾಡುಕೋಣ ಮಾತ್ರ ಸತ್ತಿದೆ ಎನ್ನುವ ಮೂಲಕ ಗಂಭೀರ ವಿಷಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕಟ್ಟೆಘಿ, ಕೋಡುಗಾಳಿ, ಕಡಗರ್ಣಿ ಹಾಗೂ ದಿಗಾಳಿಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಇದಲ್ಲದೇ ಅಣಶಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಅನೇಕ ಕಡೆಗಳಲ್ಲಿಯೂ ಕಾಡುಕೋಣಗಳು ಅಸಹಜವಾಗಿ ಸತ್ತಿವೆ ಎನ್ನುವ ಮಾಹಿತಿಯನ್ನು  ಸ್ಥಳೀಯ ಮಟ್ಟದ ಅರಣ್ಯ ಅಧಿಕಾರಿಗಳೇ ನೀಡಿದ್ದಾರೆ.
ಸತ್ತಿರು ಕಾಡುಕೋಣಗಳ ಕಳೆಬರಗಳ ಮರಣೋತ್ತರ ಪರೀಕ್ಷೆಗಾಗಿ ಕಾಡುಕೋಣಗಳ ಅಂಗಾಂಗಗಳನ್ನು  ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಈ ಕಾಡುಕೋಣಗಳು ಹೊಟ್ಟೆ ಹಾಗೂ ಗಂಟಲು ಹುಣ್ಣಿನಿಂದ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ.
ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ಈ ಸಾರಿ ಎಲ್ಲ ಕಡೆಗಳಲ್ಲಿಯೂ ತಲೆದೋರಿದೆ. ಈ ಸಮಸ್ಯೆ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶವನ್ನೂ ಬಿಟ್ಟಿಲ್ಲಘಿ. ಆದರೆ ಕಾಡುಕೋಣಗಳು ಮೃತಪಟ್ಟ ಸ್ಥಳಗಳ ಸುತ್ತಮುತ್ತ ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ತಲೆದೋರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಹೀಗಿದ್ದರೂ  ಕಾಡುಕೋಣಗಳ ಸರಣಿ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಅರಣ್ಯ ಇಲಾಖೆ ಕಾಡುಕೋಣಗಳ ಸಾವಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಂಡು ಸರಣಿ ಸಾವು ತಪ್ಪಿಸಬೇಕಿದೆ. ಈ ಕಾಡುಕೋಣಗಳಿಗೆ ತಗುಲಿರುವ ಸೋಂಕು ಮನುಷ್ಯನಿಗೂ ತಗುಲಬಹುದೇ ಅಥವಾ ಇನ್ನಿತರ ಖಾಯಿಲೆಗಳಿಗೆ ಕಾರಣವಾಗಬಹುದೇ ಎನ್ನುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುವ ಅಗತ್ಯವಿದೆ. ಪ್ರಕರಣ ಮುಚ್ಚಿ ಹಾಕುವ ಬದಲು ಅರಣ್ಯ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಜರೂರತ್ತಿದೆ.


Sunday, April 28, 2019

ಕುಟ್ಣ (ಕಥೆ ಭಾಗ-1)


ಜೊರ ಜೊರ ಸುರಿಯುವ ಮಳೆಯಲ್ಲಿ, ತ್ರಯಂಬಕ ಹೆಗಡೇರ ಗದ್ದೆಯಲ್ಲಿ ಪವರ್ ಟಿಲ್ಲರ್ ಮೂಲಕ ಹೂಡುವ ಕೆಲಸದಲ್ಲಿ ನಿರತನಾಗಿದ್ದ ಕುಟ್ಣ. ಅರಲು ಗದ್ದೆಯಲ್ಲಿ ಆಗಾಗ ಹೂತು ಬೀಳುವ ಟಿಲ್ಲರ್ ನ ಚಕ್ರವನ್ನು ಸರಿಪಡಿಸುತ್ತ, ಸೊಂಯನೆ ಬೀಸುವ ಗಾಳಿಗೆ ಹಾರಿ ಹೋಗುತ್ತಿದ್ದ ಪ್ಲಾಸ್ಟಿಕ್ ಕೊಪ್ಪೆಯನ್ನು ಭದ್ರವಾಗಿ ಹಿಡಿದು ಅದಕ್ಕೊಂದು ಬಳ್ಳಿಯಿಂದ ಕಟ್ಟುತ್ತ, ಬಾಯಲ್ಲಿ ಯಾವುದೋ ಗಾಂವಟಿ ಹಾಡನ್ನು ಹಾಡುತ್ತ ಕೆಲಸದಲ್ಲಿ ನಿರತನಾಗಿದ್ದ ಕುಟ್ಣ. ಹೀಗಿದ್ದಾಗಲೇ ಕುಟ್ಣನ ಬಳಿ ಮಗ ಸತ್ನಾರ್ಣ ಬಂದು ತನ್ನ ವಾರಗೆಯವರು ಕೊಡುತ್ತಿದ್ದ ಕಾಟದ ಬಗ್ಗೆ ಪುಕಾರು ಹೇಳಿದ್ದ.
`ಸತ್ನಾರ್ಣ, ಸತ್ನಾರ್ಣ… ನಿನ್ ಅಪ್ಪನ ಹೆಸರು ಹೇಳೋ…’ ಎಂದು ತನ್ನದೇ ಕ್ಲಾಸಿನ ಹುಡುಗರು ವ್ಯಂಗ್ಯವಾಗಿ ಮಾತನಾಡುವುದರ ಕುರಿತಂತೆ ಸತ್ನಾರ್ಣ ತನ್ನ ಅಪ್ಪ ಕುಟ್ಣನ ಬಳಿ ಬಂದು ಹೇಳಿದ್ದ.
`ಯಾರು ಹಂಗೆ ಮಾತಾಡಿದವರು….’ ಎಂದು ಸಿಟ್ಟಿನಿಂದ ಗುಡುಗಿದ್ದ ಕುಟ್ಣ.
`ನೀನು ನನ್ನ ಅಪ್ಪ ಅಲ್ವಂತೆ… ತ್ರಯಂಬಕ ಹೆಗಡೇರು ನನ್ನ ಅಪ್ಪನಂತೆ… ಹೌದಾ?’ ಮಗ ಗೊಳೋ ಎಂದು ಅಳುತ್ತ ಕುಟ್ಣನ ಬಳಿ ಹೇಳಿದಾಗ ಕುಟ್ಣ ಇದ್ದಕ್ಕಿದ್ದಂತೆ ತಣ್ಣಗಾಗಿ ಹೋಗಿದ್ದ.
ಕುಟ್ಣನ ಧ್ವನಿ ಇದ್ದಕ್ಕಿದ್ದಂತೆ ತೊದಲಲು ಆರಂಭವಾಗಿತ್ತು. `ಯಾ.. ಯಾ.. ಯಾರು ಹಾಗೆ ಹೇಳಿದ್ದು.. ಕ..ಕ.. ಕರ್ಕೊಂಡು ಬಾ…’ ಎಂದು ತೊದಲುತ್ತಲೇ ಹೇಳಿದ್ದ ಕುಟ್ಣ.
`ನನ್ನ ಕ್ಲಾಸಿನವರೆಲ್ಲ ಹೀಗೆ ಹೇಳ್ತಾರೆ ಅಪ್ಪಾ… ನಾನು ನಿಮ್ಮ ಮಗ ಅಲ್ಲವಂತೆ.. ತ್ರಯಂಬಕ ಹೆಗಡೇರ ಮಗನಂತೆ.. ಅದಕ್ಕೆ ನಾನು ತ್ರಯಂಬಕ ಹೆಗಡೇರ ಹಾಗೇ ಕಾಣಿಸುತ್ತೇನಂತೆ… ತ್ರಯಂಬಕ ಹೆಗಡೇರ ಮಗಳಿಗೂ, ಮಗನಿಗೂ, ನನಗೂ ಹೋಲಿಕೆ ಇದೆಯಂತೆ…ಹಾಗೆ ಹೀಗೆ ಎಲ್ಲ ಮಾತಾಡ್ತಿದ್ದಾರೆ ಅಪ್ಪಾ…’ ಎಂದ ಸತ್ನಾರ್ಣ..
ಮತ್ತಷ್ಟು ಕಂಪಿಸಿದ ಕುಟ್ಣ, `ಮತ್ತೆ ಎಂತೆಂತ ಹೇಳಿದರೋ ಅವರು…’ ಕೀರಲು ಧ್ವನಿಯಲ್ಲಿ ಕೇಳಿದ.
`ನಾನು ಅವರ ಮಗನಂತೆ. ಹಾಗಾಗಿ ನನ್ನನ್ನು ತ್ರಯಂಬಕ ಹೆಗಡೇರ ಮಕ್ಕಳ ಜತೆ ಸದಾ ಬೆರೆಯಲು ಬಿಟ್ಟಿದ್ದಾರಂತೆ. ಹಾಗೆ ಹೀಗೆ.. ಏನೇನೋ ಹೇಳಿದರು…’ ಸತ್ನಾರ್ಣನ ಒರಲಾಟ ಹೆಚ್ಚಿತ್ತು. ಮಗನ ಮಾತನ್ನು ಕೇಳಿ ಕುಟ್ಣ ಇನ್ನಷ್ಟು ಕಂಪಿಸಿದ್ದ.
ಮಗನನ್ನು ಹಾಗೂ ಹೀಗೂ ಸಮಾಧಾನ ಮಾಡಿ ಮನೆಗೆ ಕಳಿಸಿದ ಕುಟ್ಣನಿಗೆ ನಂತರ ಕೆಲಸ ಮಾಡಲು ಮನಸ್ಸೇ ಬರಲಿಲ್ಲ. ಮಗ ಹೇಳಿದ ವಿಷಯವೇ ತಲೆಯಲ್ಲಿ ಕೊರೆಯಲು ಆರಂಭಿಸಿತ್ತು.
ಮಗ ಬಂದು ಪುಕಾರು ಹೇಳಿದ ನಂತರ ಕುಟ್ಣನಿಗೆ ಏನೂ ಮಾಡಲೂ ಮನಸ್ಸಿಲ್ಲ ಎಂಬಂತಾಗಿತ್ತು. ಕುಳಿತಲ್ಲಿ ಕುಳಿತಿರಲಾರ, ನಿಂತಲ್ಲಿ ನಿಂತಿರಲಾರ ಎಂಬಂತೆ ಕುಟ್ಣ ಚಡಪಡಿಸಲು ಆರಂಭಿಸಿದ್ದ.
ಆಡುವ ಹುಡುಗರು ತಮಾಷೆ ಮಾಡಿರಬೇಕು ಎಂದುಕೊಂಡು ಕುಟ್ಣ ಪದೇ ಪದೆ ತಲೆ ಕೊಡವಿ ತನ್ನ ಕೆಲಸದಲ್ಲಿ ಮುಂದುವರಿಯಲು ಯತ್ನಿಸಿದ. ಆದರೆ ಏನೂ ಮಾಡಿದರೂ ಮಗ ಹೇಳಿದ ವಿಷಯ ಮಾತ್ರ ತಲೆಯಿಂದ ಹೋಗಲೇ ಇಲ್ಲ. ಮತ್ತೆ ಮತ್ತೆ ಭೂತಾಕಾರವಾಗಿ ಕೊರೆಯಲು ಆರಂಭವಾಗಿತ್ತು.
ಮನಸ್ಸಿನಲ್ಲಿ ಮಗ ಹೇಳೀದ ವಿಷಯ ದೊಡ್ಡದಾದಂತೆಲ್ಲ, ಜೊರಗುಡುವ ಮಳೆಯೂ ಹೆಚ್ಚಳವಾದಂತೆ ಕಂಡಿತು ಕುಟ್ಣನಿಗೆ. ಎಂದೂ ಹಾಳಾಗದ ಪವರ್ ಟಿಲ್ಲರ್ ನಲ್ಲಿ ಏನೋ ಸಮಸ್ಯೆ ಇದೆ ಎಂಬಂತೆಲ್ಲ ಭಾಸವಾಯಿತು.
`ದರಿದ್ರದ ಟಿಲ್ಲರ್..’ ಎಂದು ಬೈದುಕೊಂಡ ಕುಟ್ಣ ಬಾಯಲ್ಲಿದ್ದ ಕವಳದ ರಸವನ್ನು ಪಿಚಿಕ್ಕನೆ ಪಕ್ಕದ ಹಾಳಿಯ ಮೇಲೆ ಉಗಿದು, ಗದ್ದೆಯಿಂದ ದೂರ ಸರಿದು ಬಂದು ಹಾಳಿಯ ಬಳಿ ತುದಿಗಾಲಿನಲ್ಲಿ ಕುಳಿತ.. ಮನಸ್ಸು ಅಂಕೆ ತಪ್ಪಿದಂತಾಗಿತ್ತು.. ದೂರದಲ್ಲೆಲ್ಲೋ ಕೂಗುವ ನವಿಲಿನ `ಕೆಂಯ್ಯೋ… ಧ್ವನಿ.. ಪ್ರತಿದಿನದಂತೆ ಇಂದು ಹಿತವೆನಿಸದೇ ಕರ್ಕಶದಂತೆ ಅನ್ನಿಸಿತು. ಮಳೆಜಿರಲೆಗಳ ಟರ್ ಟರ್ ಸದ್ದಂತೂ ಕುಟ್ಣನ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿತು. ಮಳೆಯ ಹನಿಗಳು ಜೋರಾದಂತೆಲ್ಲ ಕುಟ್ಣನ ಮನಸ್ಸಿನ ಹೊಯ್ದಾಟಗಳೂ ಕೂಡ ಮತ್ತಷ್ಟು ಹೆಚ್ಚಿತು.

***

ಕೃಷ್ಣ ಎಂಬ ಸುಂದರವಾದ ಹೆಸರಿನ ವ್ಯಕ್ತಿ ಕುಟ್ಣ ಆಗಿ ಅದೆಷ್ಟೋ ಕಾಲವೇ ಆಗಿಹೋಗಿದೆ. ಆತ ತ್ರಯಂಬಕ ಹೆಗಡೇರ ಮನೆಗೆ ಕೆಲಸಕ್ಕೆ ಬರಲು ಪ್ರಾರಂಭಿಸಿದ ಹೊಸತರಲ್ಲಿ ಕೃಷ್ಣ ಆಗಿದ್ದ. ತದನಂತರದಲ್ಲಿ ಯಾವುದೋ ಸಂದರ್ಭದಲ್ಲಿ ಕುಟ್ಣನಾಗಿ ಪರಿವರ್ತನೆಯಾದವನು, ಖಾಯಂ ಅದೇ ಹೆಸರಿನಿಂದಲೇ ಕರೆಸಿಕೊಳ್ಳಲು ಆರಂಭಿಸಿದ್ದ. ಸತ್ಯನಾರಾಯಣ ಎನ್ನುವ ಹೆಸರಿನ ಮಗ ಕೂಡ ಸತ್ನಾರ್ಣನಾಗಿ ಬದಲಾಗಿದ್ದ.
ಬಡಕಲು ಶರೀರದ ಕುಟ್ಣ ಸಾಧು ಸ್ವಭಾವದ ವ್ಯಕ್ತಿ. ಕಣ್ಣು ಸಣ್ಣ. ಕೈಕಾಲು ಕೂಡ ಸಣ್ಣ. ವಯಸ್ಸು ಐವತ್ತರ ಆಜೂಬಾಜಿರಬೇಕು. ತಲೆ ಕೂದಲೆಲ್ಲ ಬೆಳ್ಳಗಾಗಿದೆ. ಸದಾ ಬಿಸಿಲಿನಲ್ಲಿ ಹಾಗೂ ಬಯಲಿನಲ್ಲಿ ಕೆಲಸ ಮಾಡಿ ಮಾಡಿ ಆತನ ಬಣ್ಣ ಕಪ್ಪಾಗಿ ಬದಲಾಗಿದೆ. ಇಂತಿಪ್ಪ ಕುಟ್ಣ ಯಾವತ್ತೂ, ಯಾರ ಮೇಲೆಯೂ ಸಿಟ್ಟಾದವನಲ್ಲ. ರೇಗಿದವನಲ್ಲ. ಹಸನ್ಮುಖಿ ಸದಾ ಸುಖಿ ಎನ್ನುವ ಮಾತಿಗೆ ತಕ್ಕಂತೆ ಎದುರು ಕಾಣಿಸಿದವರಿಗೆಲ್ಲ ನಗುವಿನ ಉತ್ತರವನ್ನು ನೀಡಿ ಮುನ್ನಡೆಯುತ್ತಿದ್ದ.
ಕುಟ್ಣ ಮೂಲತಃ ಕರಾವಳಿ ತೀರದ ಯಾವುದೋ ಹಳ್ಳಿಯವನಂತೆ. ಚಿಕ್ಕಂದಿನಲ್ಲಿ ಯಾವುದೋ ಸೇರೂಗಾರನ ಬೆನ್ನಿಗೆ ಬಂದಿದ್ದವನು ತ್ರಯಂಬಕ ಹೆಗಡೆಯವರ ಮನೆಯಲ್ಲಿ ಅದೂ, ಇದೂ ಕೆಲಸವನ್ನು ಮಾಡುತ್ತ ಕಾಲ ತಳ್ಳಲು ಆರಂಭಿಸಿದ್ದ. ತದನಂತರದಲ್ಲಿ ತ್ರಯಂಬಕ ಹೆಗಡೆಯವರ ಮನೆಯ ಖಾಯಂ ಆಳಾಗಿ ಬದಲಾಗಿದ್ದ. ತ್ರಯಂಬಕ ಹೆಗಡೆಯವರು ನಾಲ್ಕೈದು ವರ್ಷ ವಯಸ್ಸಿನ ಅಂತರದ, ಕಿರಿಯವನಾದ ಕುಟ್ಣನನ್ನು ಪ್ರೀತಿಯಿಂದ, ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಮನೆಯ ಆಳಾಗಿ ಉಳಿದುಕೊಂಡ ಕುಟ್ಣನಿಗೆ ನಾಲ್ಕೈದು ಗುಂಟೆ ಜಮೀನನ್ನೂ ಬರೆದುಕೊಟ್ಟಿದ್ದರು. ಅಷ್ಟೇ ಅಲ್ಲದೇ ಮನೆಯನ್ನೂ ಕೂಡ ಕಟ್ಟಿಸಿಕೊಟ್ಟಿದ್ದರು. ತ್ರಯಂಬಕ ಹೆಗಡೆಯವರ ಅಕ್ಕರೆಗೆ ತಕ್ಕಂತೆ ಕುಟ್ಣ ನಂಬಿಕೆಯಿಂದಲೇ ಕೆಲಸ ಮಾಡುತ್ತಿದ್ದ.
ಇಂತಿದ್ದಾಗಲೇ ಯಜಮಾನರಾದ ತ್ರಯಂಬಕ ಹೆಗಡೆಯವರಿಗೆ ಮದುವೆಯಾಗಿತ್ತು. ಮೊದಲ ಹೆರಿಗೆಯಲ್ಲಿ ಹೆಗಡೆಯವರ ಮಡದಿ ಸುಂದರ ಹೆಣ್ಣು ಕೂಸನ್ನೂ, ಎರಡನೇ ಹೆರಿಗೆಯಲ್ಲಿ ಗಂಡು ಕೂಸನ್ನೂ ಹಡೆದುಕೊಟ್ಟಿದ್ದಳು. ಮನೆಯ ಆಳಾಗಿದ್ದರೂ ಕುಟ್ಣ ಈ ಮಕ್ಕಳನ್ನು ಅಕ್ಕರೆಯಿಂದ ಬೆನ್ನ ಮೇಲೆ, ಹೆಗಲ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ ಬೆಳೆಸಿದ್ದ. ಕಾಡು, ಮಳೆ, ಬೆಟ್ಟ, ಬಯಲು, ತೋಟ, ಗದ್ದೆಗಳನ್ನು ಪರಿಚಯಿಸಿದ್ದ. ಇಲಿ ಹಿಡಿಯಲು ಪಂಜರವನ್ನು ಮಾಡುವುದು, ವಾಟೆಗಳವನ್ನು ಕಡಿದು ಅದಕ್ಕೆ ಆರು ಕಣ್ಣುಗಳನ್ನು ಕೊರೆದು ಕೊಳಲನ್ನು ಮಾಡುವುದು, ಕೊಡಸವೋ, ಲಾವಂಚವೋ ಬಳ್ಳಿಯನ್ನು ತಂದು ಅದರಿಂದ ಬುಟ್ಟಿಯನ್ನು ಮಾಡುವುದು ಹೀಗೆ ತನಗೆ ಗೊತ್ತಿದ್ದ ಪ್ರಕೃತಿಯ ಜತೆಗಿನ ವಿಶಿಷ್ಟ ಪಾಠಗಳನ್ನೆಲ್ಲ ಅವರಿಗೂ ಹೇಳಿಕೊಟ್ಟಿದ್ದ. ಹೀಗೆ ಹೇಳಿಕೊಡುತ್ತಿದ್ದ ಕಾರಣಕ್ಕೆ `ಮಕ್ಕಳನ್ನ ಹಾಳು ಮಾಡ್ತಿದ್ದ ಕುಟ್ಣ..’ ಎಂದು ತ್ರಯಂಬಕ ಹೆಗಡೆಯವರ ತಾಯಿಯಿಂದ ಬೈಗುಳಕ್ಕೂ ತುತ್ತಾಗಿದ್ದ.
ಹೀಗಿದ್ದಾಗಲೇ ಒಂದು ದಿನ ತ್ರಯಂಬಕ ಹೆಗಡೆಯವರು ಕುಟ್ಣನಿಗೆ ಮದುವೆ ಮಾಡಬೇಕು ಎಂದು ಹೇಳಿದ್ದರು. `ಹುಡುಗಿ ಹುಡ್ಕಿದರೆ ಮದುವೆ ಆಗ್ತೀಯೇನೋ ಕುಟ್ಣ..’ ಎಂದೂ ಕೇಳೀದ್ದರು. ಕುಟ್ಣ ನಾಚಿಕೆಯಿಂದ ತಲೆ ತಗ್ಗಿಸಿದ್ದ.

(ಮುಂದುವರಿಯುತ್ತದೆ)

Thursday, April 18, 2019

ಅನುರಕ್ತ (ಕಥೆ-6)


ಮೇಲ್ನೋಟಕ್ಕೆ ಸೀದಾ ಸಾದಾ ಹಳ್ಳಿಯಂತೆ ಕಂಡಿತು ವಿಜೋಯ್ ನಗರ. ನಾವು ಮುಂದೆ ಮುಂದಕ್ಕೆ ಹೆಜ್ಜೆ ಇಟ್ಟಂತೆಲ್ಲ ಬಿಸಿಲು ಕಾಯಿಸಿಕೊಳ್ಳುತ್ತಿದ್ದ, ಜಾಗಿಂಗ್ ಮಾಡುತ್ತಿದ್ದ, ವ್ಯಾಯಾಮ ಮಾಡುತ್ತಿದ್ದ ನಿವೃತ್ತ ಮಿಲಿಟರಿ ಅಧಿಕಾರಿಗಳು ಕಾಣಿಸಿಕೊಂಡರು. ನಾವು ಅಪರಿಚಿತರಾಗಿದ್ದರೂ ಆಶ್ನಾಳನ್ನು ನಮ್ಮ ಜತೆ ನೋಡಿ ಕುತೂಹಲಯುಕ್ತ ನಗುವನ್ನು ಅವರು ಮುಖದ ಮೇಲೆ ತೋರ್ಪಡಿಸಿ ಮುಂದಕ್ಕೆ ಸಾಗುತ್ತಿದ್ದರು.

ನಮ್ಮನ್ನು ನಡೆಸಿಕೊಂಡು ಹೋಗುತ್ತಿದ್ದ ಆಶ್ನಾ ಯಾವು ಯಾವುದೋ ರಸ್ತೆಯಲ್ಲಿ, ಅಂಕುಡೊಂಕಾಗಿ ನಮ್ಮನ್ನು ಸುತ್ತಿಸಿ ಒಂದು ಮನೆಯ ಎದುರು ನಮ್ಮನ್ನು ಕರೆದೊಯ್ದು ಅಸ್ಸಾಮಿ ಭಾಷೆಯಲ್ಲಿ ದೊಡ್ಡದಾಗಿ ಕರೆದಳು. ಮನೆಯಿಂದ ಮಧ್ಯಮ ವಯಸ್ಸಿನ ಒಬ್ಬರು ವ್ಯಕ್ತಿ ಹೊರಬಂದು ಆಶ್ನಾಳ ಕಡೆಗೆ ಸಂಭ್ರಮದಿಂದ ನೋಡಿದರು. ಆಶ್ನಾ ಹಾಗೂ ವ್ಯಕ್ತಿಯ ನಡುವೆ ಕೊಂಚ ಮಾತುಕತೆ ನಡೆಯಿತು. ನಂತರ ನಮ್ಮ ಕಡೆಗೆ ಅವರು ತಿರುಗಿದರು. ಆಶ್ನಾ ವ್ಯಕ್ತಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ನಂತರ ಮನೆಯೊಳಕ್ಕೆ ನಾವು ಕಾಲಿರಿಸಿದೆವು.

ಮನೆಯ ಕೆಲವು ಸದಸ್ಯರು ಹೊರಕ್ಕೆ ಬಂದರು. ಒಂದುಬ್ಬರು ನಮಗೆ ಅದೇನೇನೋ ತಿಂಡಿಯನ್ನೋ, ಬೇರೆ ಇನ್ನೇನನ್ನೋ ತಂದುಕೊಟ್ಟರು. ಆಶ್ನಾ ಅದೆಲ್ಲವನ್ನೂ ತೆಗೆದುಕೊಳ್ಳುವಂತೆ ಹೇಳಿ ಒಳಕ್ಕೆ ನಡೆದಳು. ನಾವು ಮೌನವಾಗಿ ಅವರು ಕೊಟ್ಟಿದ್ದನ್ನು ತಿನ್ನುತ್ತ ಕುಳಿತೆವು.

ಮನೆಯ ವ್ಯಕ್ತಿಗಳು ನಮ್ಮ ಬಳಿ ಬಂದು ಅಸ್ಸಾಮಿ ಭಾಷೆಯಲ್ಲಿ ಮಾತನಾಡುತ್ತಿದ್ದರಾದರೂ ನಮಗೆ ಸರಿಯಾಗಿ ಅರ್ಥವಾಗಲಿಲ್ಲ. ನಾವು ನಗುವಿನ ಮೂಲಕವೋ, ತಲೆ ಅಲ್ಲಾಡಿಸುವ ಮೂಲಕವೋ ಉತ್ತರ ನೀಡಿದೆವು. ಕೆಲ ಸಮಯದ ನಂತರ ವಾಪಾಸು ಬಂದ ಆಶ್ನಾ ಮನೆಯ ಎಲ್ಲ ಸದಸ್ಯರನ್ನು ನನಗೆ ಪರಿಚಯಿಸಿದಳು. ನಾವು ಎಲ್ಲಿಂದ ಬಂದೆವು ಎಂಬುದನ್ನೂ, ಯಾಕಾಗಿ ಬಂದಿದ್ದೇವೆ ಎಂಬುದನ್ನೂ ಹೇಳಿದಳು. ಮನೆಯ ಕೆಲವು ವ್ಯಕ್ತಿಗಳು ನಾವು ಬಂದ ಕಾರಣವನ್ನು ಕೇಳಿ ನಮ್ಮನ್ನು ವಿಚಿತ್ರವಾಗಿ ನೋಡಲು ಆರಂಭಿಸಿದರು. ಅಲ್ಲಿಂದ ಇಲ್ಲಿಗೆ ಯಾವುದೋ ಸಂದರ್ಭದಲ್ಲಿ ಪ್ರೀತಿಸಿದ ಹುಡುಗಿಯನ್ನು ಹುಡುಕಿ ಬಂದಿದ್ದಾನಲ್ಲ. ಇವನ್ಯಾರೋ ತಿಕ್ಕಲು ಸ್ವಭಾವದವನಿರಬೇಕು ಎಂದುಕೊಂಡಿದ್ದಾರೇನೋ ಅಂದುಕೊಂಡೆ.

`ನಿಮಗೆ ಇನ್ನೊಬ್ಬ ಪ್ರಮುಖ ವ್ಯಕ್ತಿಯನ್ನು ಪರಿಚಯ ಮಾಡಿಕೊಡಬೇಕು..’ ಎಂದಳು ಆಶ್ನಾ.
ನಾವು ಕುತೂಹಲದಿಂದ ನೋಡುತ್ತಿದ್ದಾಗಲೇ `ಬನ್ನಿ ಒಳಕ್ಕೆ..’ ಎಂದು ಕರೆದೊಯ್ದಳು.
ಕೋಣೆಯೊಂದರ ಒಳಕ್ಕೆ ಸಂಜಯ ಕಾಲಿರಿಸಿದ. ಅವನ ಹಿಂದೆ ಹೋದ ನಾನು ಒಮ್ಮೆ ಬೆಚ್ಚಿ ಬಿದ್ದು ನಿಂತೆ. ನಾನು ನೋಡುತ್ತಿರುವುದು ಸುಳ್ಳೋ, ಸತ್ಯವೋ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ ಆಶ್ನಾ `ಈಕೆ ನನ್ನ ಅಮ್ಮ..’ ಎಂದು ಪರಿಚಯಿಸಿದಳು.
ರೂಮಿನಲ್ಲೊಂದು ಮಂಚವಿತ್ತು. ಆ ಮಂಚದ ಮೇಲೆ ಕೃಷಕಾಯ ಮಹಿಳೆಯೊಬ್ಬಳು ಕುಳಿತಿದ್ದಳು. ಕಣ್ಣಿನ ಸುತ್ತ ಕಪ್ಪು ಕಲೆಗಳು ಗಾಢವಾಗಿದ್ದವು. ಕೆನ್ನೆಗಳು ಇಳಿ ಬಿದ್ದಿದ್ದವು. ಆದರೆ ಕಣ್ಣಿನಲ್ಲಿ ಮಾತ್ರ ಅದೇನೋ ಬೆಳಕು. ಆಕೆಯೂ ನಮ್ಮನ್ನು ನೋಡಿದಳು. ಆಕೆಗೂ ನನ್ನನ್ನು ನೋಡಿ ಅಚ್ಚರಿಯಾಗಿತ್ತು.
ನಾನು ಯಾರನ್ನು ಹುಡುಕಿ ಬಂದಿದ್ದೆನೋ, ಅಸ್ಸಾಮಿನ ತುಂಬೆಲ್ಲ ಹುಡುಕಾಡಲು ಯತ್ನಿಸಿದ್ದೆನೋ ಅವಳೇ, ವಿದ್ಯುಲ್ಲತಾ ಅಲ್ಲಿ ಕುಳಿತಿದ್ದಳು. ಆಕೆಯದೇಹ ಆಕೆಯ ಮಾತನ್ನು ಕೇಳುತ್ತಿರಲಿಲ್ಲ. ಸಾವಿನ ಕದವನ್ನು ತೆರೆಯುತ್ತ ಕಷ್ಟಪಟ್ಟು ಜೀವಿಸಿದ್ದಳು. ಬಹುಶಃ ನಾನು ಬರುತ್ತೇನೆ ಎಂದು ಭಾವಿಸಿಯೇ ಆಕೆ ಜೀವ ಹಿಡಿದಿದ್ದಳೇನೋ ಎನ್ನಿಸಿತು.
`ವಿನೂ… ನೀನು… ಕೊನೆಗೂ ಬಂದೆಯಾ…’ಕಣ್ಣರಳಿಸಿ ಕೇಳಿದಳು.
ನನ್ನ ಬಾಯಿಂದ ಮಾತು ಹೊರಡಲಿಲ್ಲ. ಅಚ್ಚರಿಯಿಂದ ವಿದ್ಯುಲ್ಲತಾಳ ಮಾತು ಕೇಳಿದ ಆಶ್ನಾ `ಅಮ್ಮಾ.. ಇವರು ನಿಮಗೆ ಮೊದಲೇ ಗೊತ್ತಿತ್ತಾ?’ ಎಂದಳು. ವಿದ್ಯುಲ್ಲತಾ ಮಾತಾಡಲಿಲ್ಲ. ಕಣ್ಣಲ್ಲಿ ನೀರು ಸುರಿಯಲಾರಂಭಿಸಿತ್ತು. ನನಗೂ ದುಃಖ ಉಮ್ಮಳಿಸಿತ್ತು.
`ನೀನು ಬಂದೇ ಬರುತ್ತೀಯಾ ಎನ್ನುವುದು ನನಗೆ ಗೊತ್ತಿತ್ತು… ಆದರೆ ಇಷ್ಟ ತಡವಾಗಿ ಬರುತ್ತೀಯಾ ಎನ್ನುವುದು ಗೊತ್ತಿರಲಿಲ್ಲ…’ ಎಂದು ಉಸಿರೆಳೆಯುತ್ತಾ ಹೇಳಿದಳು ವಿದ್ಯುಲ್ಲತಾ.
`ಏನಿದು? ಏನಾಯಿತು ವಿದ್ಯುಲ್ಲತಾ?’ ಎಂದು ಹೇಳಿದವನೇ ಆಕೆಯ ಬಳಿ ಹೋಗಿ ಆಕೆಯ ಮಂಚದ ಮೇಲೆ ಕಳಿತು ಹಿತವಾಗಿ ಭುಜ ನೇವರಿಸಿದೆ. ಆಕೆ ನನ್ನ ಭುಜಕ್ಕೆ ಒರಗಿಕೊಂಡಳು.
`ನಿನ್ನ ಬಿಟ್ಟು ಬಂದ ನಂತರ ಏನೇನೋ ಆಗೋಯ್ತು ವಿನು. ಅಸ್ಸಾಮಿಗೆ ಮರಳಿದಾಗಲೇ ಈಕೆ ನನ್ನ ಗರ್ಭದಲ್ಲಿ ಬೆಳೆಯುತ್ತಿರುವುದು ಅರಿವಾಯಿತು. ಇದನ್ನು ಕೇಳಿ ನನ್ನ ಮನೆಯವರೆಲ್ಲ ಕೆಂಡಾಮಂಡಲರಾದರು. ನನ್ನನ್ನು ಹೊಡೆದು, ಬಡಿದು ಮಾಡಿದರು. ಅಬಾರ್ಷನ್ ಮಾಡಿಸಲು ಯತ್ನಿಸಿದರು. ಆದರೆ ನಾನು ಒಪ್ಪದೇ ಉಳಿಸಿಕೊಂಡೆ. ಆಮೇಲೆ ನನ್ನ ಮನೆಯವರು ಮರ್ಯಾದೆಗೆ ಅಂಜಿ ನನ್ನ ಸಮೇತ ಅಸ್ಸಾಮಿನಿಂದ ಇಲ್ಲಿಗೆ ವಲಸೆ ಬಂದರು. ಇಲ್ಲಿ ನಾನು ಆಶ್ನಾಳಿಗೆ ಜನ್ಮ ಕೊಟ್ಟೆ. ನಂತರ ನನ್ನ ಬದುಕು ಸಂತಸದ ಅಲೆಯಲ್ಲಿ ತೇಲುತ್ತಿತ್ತು. ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ಬದುಕು ಸಾಗಿಸುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ನಾನು ಎಚ್ಚರ ತಪ್ಪಿ ಬಿದ್ದಿದ್ದೆ..’ ಎಂದು ಉಸಿರೆಳೆದುಕೊಂಡಳು ವಿದ್ಯುಲ್ಲತಾ.
`ಎಚ್ಚರ ಬಂದಾಗ ನಾನು ಮಿಲಿಟರಿಯವರೇ ನಡೆಸುವ ಆಸ್ಪತ್ರೆಯಲ್ಲಿದ್ದೆ. ಪರೀಕ್ಷೆ ನಡೆಸಿದಾಗ ನನಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು ತಿಳಿದುಬಂತು. ಆ ನಂತರ ನನ್ನ ಬದುಕು ಹೀಗಾಯಿತು ನೋಡು. ಆ ಪ್ರತಿ ಕ್ಷಣದಲ್ಲಿಯೂ ನೀನು ಬರ್ತೀಯಾ ಅಂತ ಕಾಯುತ್ತಿದ್ದೆ. ಒಳಮನಸ್ಸು ನೀನು ಬರಲ್ಲ ಎನ್ನುತ್ತಿತ್ತು. ಆದರೆ ಕೊನೆಗೂ ಬಂದೆಯಲ್ಲ. ನಾನು ಧನ್ಯ ನಾನು ಧನ್ಯ…’ ಎಂದು ಹಲುಬಿದಳು ವಿದ್ಯುಲ್ಲತಾ.
`ಸಮಾಧಾನ ಮಾಡ್ಕೊ ವಿದ್ಯುಲ್ಲತಾ…’ ಎಂದೆ.
ಆಕೆ ಸುಮ್ಮನಾಗಲಿಲ್ಲ. ಹತ್ತಿರದಲ್ಲಿಯೇ ಇದ್ದ ಆಶ್ನಾಳನ್ನು ಕರೆದು `ನೋಡು, ನೀನು ಅಪ್ಪನ ಬಗ್ಗೆ ವಿಚಾರಿಸಿದಾಗೆಲ್ಲ ನಾನು ಸರಿಯಾಗಿ ಉತ್ತರ ನೀಡುತ್ತಿರಲಿಲ್ಲವಲ್ಲಾ.. ಈಗ ಹೇಳ್ತೇನೆ ನೋಡು. ಇವರೇ ನಿನ್ನ ಅಪ್ಪ.. ನೀನು ಅಪ್ಪ ಇಲ್ಲದ ವ್ಯಕ್ತಿಯಲ್ಲ.. ಇವರೇ, ಇವರೇ ನಿನ್ನ ತಂದೆ..’ ಎಂದು ನನ್ನ ಕಡೆಗೆ ತೋರಿಸಿದಾಗ ಆಶ್ನಾ ಅವಾಕ್ಕಾಗಿದ್ದಳು. ನನ್ನ ಕಣ್ಣಲ್ಲೂ, ವಿದ್ಯುಲ್ಲತಾಳ ಕಣ್ಣಲ್ಲೂ, ಆಶ್ನಾಳ ಕಣ್ಣಲ್ಲೂ ನೀರಿತ್ತು. ಇದೆಲ್ಲವನ್ನು ನೋಡುತ್ತಿದ್ದ ಸಂಜಯನ ಕಣ್ಣಲ್ಲೂ ನೀರಿನ ಹನಿಗಳು ಮೂಡಿದ್ದವು.
`ನೋಡು ವಿನೂ, ನಿನ್ನ ನೆನಪಿಗಾಗಿ, ನಿನ್ನ ಪವಿತ್ರ ಪ್ರೀತಿಯ ಸಲುವಾಗಿ ಇವಳಿಗೆ ಆಶ್ನಾ ಎಂಬ ಹೆಸರಿಟ್ಟಿದ್ದೇನೆ. ಆಶ್ನಾ ಎಂದರೆ ಪವಿತ್ರ ಪ್ರೀತಿಯ ಪ್ರತೀಕ, ಪವಿತ್ರ ಪ್ರೀತಿಯಲ್ಲಿ ನಂಬಿಕೆ ಉಳ್ಳವಳು ಎಂದರ್ಥ.. ನೋಡು ಇನ್ನು ನನಗೆ ಯಾವುದೇ ನಿಶ್ಚಿಂತೆಯಿಲ್ಲ. ನನ್ನ ಮಗಳಿಗಿನ್ನೂ ನೀನಿದ್ದೀಯ. ಇನ್ನು ಯಾವುದೇ ಕ್ಷಣದಲ್ಲಿಯೂ ನಾನು ನಿಶ್ಚಿಂತೆಯಿಂದ ಕಣ್ಮುಚ್ಚಬಹುದು.. ಸಾರ್ಥಕವಾಯಿತು ನನ್ನ ಬದುಕು.. ‘ ಹಲುಬುತ್ತಲೇ ಇದ್ದಳು ವಿದ್ಯುಲ್ಲತಾ.
ನನ್ನಲ್ಲಿ ಮಾತಿರಲಿಲ್ಲ. ನಾನು ಆಕೆಯ ಭುಜವನ್ನು, ತಲೆಯನ್ನು ನೇವರಿಸುತ್ತಲೇ ಇದ್ದೆ.

-------

ಇದಾಗಿ ಐದಾರು ದಿನಗಳ ನಂತರ ವಿದ್ಯುಲ್ಲತಾ ಕಣ್ಮುಚ್ಚಿದಳು. ಕೊನೆಯ ಹಂತದಲ್ಲಿದ್ದ ಬ್ಲಡ್ ಕ್ಯಾನ್ಸರ್ ವಿದ್ಯುಲ್ಲತಾಳನ್ನು ಆಪೋಷನ ತೆಗೆದುಕೊಂಡಿತ್ತು. ನಮ್ಮಲ್ಲಿನ ದುಃಖ ಹೇಳತೀರದಾಗಿತ್ತು. ಅದೇ ವಿಜೋಯ್ ನಗರದಲ್ಲಿ ನಾನು ಹಾಗೂ ಆಶ್ನಾ ಜೊತೆಯಾಗಿ ಆಕೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದೆವು. ನನ್ನ ವಿದ್ಯುಲ್ಲತಾ ಅಗ್ನಿಯಲ್ಲಿ ಲೀನವಾಗಿದ್ದಳು. ಸಿಕ್ಕಿಯೂ ಸಿಗದಂತೆ ಮಾಯವಾಗಿದ್ದಳು.
ಆಕೆಯ ಅಂತ್ಯ ಸಂಸ್ಕಾರ ಮುಗಿದ ಎರಡನೇ ದಿನಕ್ಕೆ ನಾನು ಹಾಗೂ ಸಂಜಯ ವಿಜೋಯ್ ನಗರದಿಂದ ದಿಬ್ರುಘಡಕ್ಕೆ ಹೋಗುವ ವಿಮಾನವನ್ನು ಏರಿದ್ದೆವು. ನಮ್ಮ ಜತೆಯಲ್ಲಿ ಆಶ್ನಾ ಕೂಡ ಇದ್ದಳು. ನನ್ನ ಭುಜಕ್ಕೊರಗಿ ಕಣ್ಣೀರುಗರೆಯುತ್ತಿದ್ದ ಆಕೆಯನ್ನು ಹೇಗೆ ಸಮಾಧಾನ ಮಾಡುವುದು ಎನ್ನುವುದೇ ತಿಳಿಯಲಿಲ್ಲ.
ದಿಬ್ರುಘಡದಲ್ಲಿ ಇಳಿದ ಸಂದರ್ಭದಲ್ಲಿಯೇ ನನ್ನಾಕೆ ಪೋನ್ ಮಾಡಿದ್ದಳು. ಆಕೆಗೆ ನಡೆದ ವಿಷಯವನ್ನೆಲ್ಲ ತಿಳಿಸಿದೆ. ಆಕೆ ನಿಟ್ಟುಸಿರು ಬಿಟ್ಟು ಬನ್ನಿ, ಇಬ್ಬರ ದಾರಿಯನ್ನು ಎದುರು ನೋಡುತ್ತಿರುತ್ತೇನೆ ಎಂದಳು. ನಾವು ದಿಬ್ರುಘಡದಿಂದ ಗುವಾಹಟಿಗೆ ಬಂದು ಬೆಂಗಳೂರಿಗೆ ಬರುವ ವಿಮಾನವನ್ನೇರಿದೆವು.
`ನಿಮ್ಮ ಕಡೆಗೆ ಅದೇನೋ ಆತ್ಮೀಯ ಭಾವ ಮೂಡಿತ್ತು. ಆ ಸಂದರ್ಭದಲ್ಲೆಲ್ಲ ನಿಮ್ಮಂತಹ ಅಪ್ಪ ನನಗಿದ್ದರೇ ಎಂದುಕೊಳ್ಳುತ್ತಿದ್ದೆ. ಕೊನೆಗೊಮ್ಮೆ ನೀವೇ ನನ್ನ ಅಪ್ಪ ಎನ್ನುವುದು ತಿಳಿದಾಗ ನನ್ನ ಮನಸ್ಸಿನಲ್ಲಿ ಸಂತೋಷ, ಸಿಟ್ಟು ಎಲ್ಲವೂ ಮೂಡಿತು. ನೀವು ಸಿಕ್ಕಿದ್ದಕ್ಕೆ ಖುಷಿ, ಇಷ್ಟು ದಿನ ಅಪ್ಪ ಇದ್ದೂ ಇಲ್ಲದಂತಾಗು ಮಾಡಿದ್ದ ನಿಮ್ಮ ಕುರಿತು ಸಿಟ್ಟು ಮೂಡಿತು. ನಾನು ಅಪ್ಪ-ಅಮ್ಮ ಇಬ್ಬರ ಜತೆಗೂ ಖುಷಿಯಾಗಿ ಕಳೆಯೋಣ ಅಂತ ಅಂದುಕೊಂಡಿದ್ದೆ.. ಆದರೆ ಆಗ ಅಮ್ಮ ಇದ್ದಳು ನೀನಿರಲಿಲ್ಲ. ಈಗ ನೀನಿದ್ದೀಯಾ.. ಅಮ್ಮ ಇಲ್ಲ…’ ಎಂದು ಆಶ್ನಾ ಗದ್ಗದಿತವಾಗಿ ಹೇಳುತ್ತಲೇ ಇದ್ದಳು. ನನ್ನಲ್ಲಿ ಮಾತುಗಳಿರಲಿಲ್ಲ.

(ಮುಗಿಯಿತು)