Thursday, November 1, 2018

ಗಡಿನಾಡ ಕನ್ನಡ ಶಾಲೆ ; ಇನ್ನೂ ಮುಕ್ತವಾಗಲಿಲ್ಲ ಸಮಸ್ಯೆ

(ಗುರುಗಳು, ಹಿರಿಯ ಸಾಹಿತಿಗಳೂ, ರಾಯಲ ಸೀಮೆಯ ನೆತ್ತರ ಇತಿಹಾಸವನ್ನು ಕನ್ನಡ ನಾಡಿನ ಓದುಗ ಅಭಿಮಾನಿಗಳ ಎದುರು ತೆರೆದಿಟ್ಟ ಕುಂ. ವೀರಭದ್ರಪ್ಪ ಅವರನ್ನು ಮತ್ತೆ ಮಾತಾಡಿಸುವ ಅವಕಾಶ ಸಿಕ್ಕಿತ್ತು. ಹಿಂದೆ ಶಿರಸಿಯಲ್ಲಿ ಇದ್ದಾಗ ಅವರ ಜತೆ ಒಂದೆರಡು ದಿನ ಉಳಿದಿದ್ದೆ. ಮತ್ತೊಮ್ಮೆ ಆ ದಿನ ನೆನಪಿಸಿ ಅವರನ್ನು ಮಾತನಾಡಿಸಿದೆ. ಖುಷಿಯಿಂದಲೇ ಮಾತನಾಡಿದರು. ಆಂಧ್ರ ಪ್ರದೇಶದ ಕನ್ನಡ ಶಾಲೆಗಳ ಕುರಿತು ಮಾಹಿತಿ ನೀಡಿದರು. ಅವರ ಮಾತುಗಳು ಇಲ್ಲಿದೆ. ಅಂದ ಹಾಗೆ ಇದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

ಗಡಿನಾಡ ಕನ್ನಡ ಶಾಲೆಗಳ ಪರಿಸ್ಥಿತಿ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಹಲವಾರು ಕಾರಣಗಳಿಂದಾಗಿ ಗಡಿನಾಡ ಕನ್ನಡ ಶಾಲೆಗಳು ಒದ್ದಾಾಡುತ್ತಿವೆ. ಅಧ್ಯಾಪಕರು, ಬೋಧಕ ಸಿಬ್ಬಂದಿ, ಕಟ್ಟಡ, ಶಿಕ್ಷಣ ಸಾಮಗ್ರಿಗಳ ಕೊರತೆ ಹೀಗೆ ಹಲವಾರು ಇಲ್ಲಗಳ ನಡುವೆಯೇ ಗಡಿನಾಡಿನಲ್ಲಿ ಕನ್ನಡ ಪ್ರೇಮ ಜೀವಂತವಾಗಿದೆ. ಕನ್ನಡ ಪ್ರೇಮಿಗಳ ಒತ್ತಾಸೆ ಫಲವಾಗಿ ಈ ಶಾಲೆಗಳು ಉಸಿರು ಹಿಡಿದುಕೊಂಡಿವೆ. ಇಂತಹ ಶಾಲೆಗಳ ಉಳಿವಿಗಾಗಿ ಕರ್ನಾಟಕ ಸರ್ಕಾರದ ಸಹಾಯ ಹಸ್ತ ಅತ್ಯಗತ್ಯವಾಗಿದೆ.
ಕುಂ. ವೀರಭದ್ರಪ್ಪ ಕನ್ನಡದ ಸಾಹಿತ್ಯ ಲೋಕದ ಹೆಸರಾಂತ ಬರಹಗಾರರು. ಹಲವು ಪುಸ್ತಕಗಳ ಮೂಲಕ ಕನ್ನಡಿಗರ ಮನಸ್ಸನ್ನು ವೀರಭದ್ರಪ್ಪ ಗೆದ್ದಿದ್ದಾರೆ. ಕಾದಂಬರಿಗಳ ಮೂಲಕ ನೆಲೆ ನಿಂತಿದ್ದಾರೆ. ರಾಯಲಸೀಮೆಯ ಕೆಂಪು ನೆಲದ ಇತಿಹಾಸವನ್ನು, ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಠೊಣ್ಣಿ ಹಾಗೂ ಡೋಮನ ಮೂಲಕ ಹುಲುಲಿ ಹಳ್ಳದ, ಆಂಧ್ರದ ಕರ್ನೂಲಿನ ಬದುಕನ್ನು ತೆರೆದಿಟ್ಟಿದ್ದಾರೆ. ಕುಂ ವೀರಭದ್ರಪ್ಪ ಕರ್ಮಭೂಮಿ ಆಂದ್ರಪ್ರದೇಶ. ರಾಯಲಸೀಮೆಯಲ್ಲಿನ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಾಗಿ ಕನ್ನಡದ ಉಸಿರನ್ನು ಜೀವಂತವಾಗಿ ಇರಿಸಿದವರು.
ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಅಧ್ಯಾಪಕರಾಗಿ ನೇಮಕವಾದವರು ವೀರಭದ್ರಪ್ಪನವರು. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ವಂದವಾಗಿಲಿಯಲ್ಲಿ 11 ವರ್ಷ, ಗೂಳ್ಯಂನಲ್ಲಿ 14 ವರ್ಷ ಹಾಗೂ ಅನಂತಪುರ ಜಿಲ್ಲೆಯ ಹಿರೇಹಾಳು ಗ್ರಾಮದಲ್ಲಿ 11 ವರ್ಷ ಸೇರಿ 36 ವರ್ಷಗಳ ಕಾಲ ತೆಲುಗರ ನಾಡಿನಲ್ಲಿ ಕನ್ನಡ ಬೋಧನೆಯ ಕೆಲಸವನ್ನು ಮಾಡಿದವರು ಕುಂ. ವೀರಭದ್ರಪ್ಪನವರು. ತೆಲುಗರ ನಾಡಿನಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ, ಪ್ರತಿಭಟನೆಗಳನ್ನು ಕೈಗೊಂಡವರು. ಮನೆ ಮನೆಗಳಿಗೆ ತೆರಳಿ, ಕನ್ನಡಿಗರ ಬಳಿ ಸಹಾಯ ಯಾಚಿಸಿ ಗೂಳ್ಯಂನಲ್ಲಿ ಪ್ರೌೌಢಶಾಲೆ ನಿರ್ಮಾಣ ಮಾಡಿದವರು.
ವೀರಭದ್ರಪ್ಪನವರೇ ಹೇಳುವಂತೆ ಆಂಧ್ರಪ್ರದೇಶದ ಕನ್ನಡ ಶಾಲೆಗ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅವರು ಅಧ್ಯಾಪಕರಾಗಿ ಕರ್ನೂಲಿನ ವಂದವಾಗಿಲಿಯಲ್ಲಿ ವೃತ್ತಿ ಆರಂಭಿಸಿದಾಗ ಇದ್ದ ವಿದ್ಯಾರ್ಥಿಗಳು 11. ತದನಂತರದಲ್ಲಿ ಅವರು 300ಕ್ಕೂ ಅಧಿಕ ಕನ್ನಡ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ, ಅವರ ಬದುಕನ್ನು ರೂಪಿಸಿಕೊಟ್ಟಿದ್ದಾರೆ. ಗೂಳ್ಯಂನಲ್ಲಿ ಕುಂ.ವಿ ಅವರು ತಮ್ಮದೇ ಸಮಾನಮನಸ್ಕ ಮೂವರು ಶಿಕ್ಷಕರ ಜತೆಗೂಡಿ ಕನ್ನಡ ಪ್ರೇಮಿಗಳು, ಕನ್ನಡ ಭಾಷಿಕರ ಜತೆಗೂಡಿ ಪ್ರೌಢಶಾಲೆ ಕಟ್ಟಿದ್ದಾರೆ. ಈ ಪ್ರೌಢಶಾಲೆ ಆರಂಭದ 7-8 ವರ್ಷ ಸ್ವಲ್ಪ ಶ್ರಮವನ್ನು ಬೇಡಿದರೂ, ಇದೀಗ ಬಹಳ ಚನ್ನಾಗಿ ನಡೆಯುತ್ತಿದೆ.
ಆಂದ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಭಾಷಾವಾರು ಪ್ರಾಾಂತ್ಯಗಳ ವಿಂಗಡಣೆಗೂ ಮೊದಲು ಬಳ್ಳಾರಿ ಜಿಲ್ಲೆಯದೇ ಭಾಗವಾಗಿದ್ದ ಅಪ್ಪಟ ಕನ್ನಡಿಗ ಪ್ರದೇಶಗಳೆಲ್ಲ ಇದೀಗ ಆಂಧ್ರದಲ್ಲಿ ಸೇರಿ ಹೋಗಿದೆ. ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿ 300-400ರಷ್ಟಿದ್ದ ಕನ್ನಡ ಶಾಲೆಗಳು ಇದೀಗ 80-90ಕ್ಕೆ ಇಳಿದಿದೆ. ಆಂಧ್ರದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಬಹಳ ಇಳಿಕೆಯಾಗಿದೆ. ಇಳಿಯುತ್ತಲೇ ಇದೆ. ನಾನು ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಶಿಕ್ಷಕನಾಗಿ ನೇಮಕವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಆ ರಾಜ್ಯ ಸರ್ಕಾರ ಕನ್ನಡ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಸಾವಿರಾರು ಶಿಕ್ಷಕರ ನೇಮಕ ಆಗಬೇಕಿದೆ ಎಂದು ವೀರಭದ್ರಪ್ಪನವರು ಆಂದ್ರದ ಶಾಲೆಗಳ ಹಾಗೂ ಅಲ್ಲಿನ ಸರ್ಕಾರಗಳ ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ.
ಭಾಷಾವಾರು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಭಾಷಾವಾರು ಸಮಿತಿಯನ್ನೇನೋ ರಚನೆ ಮಾಡಲಾಗಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಯಾವ ಪ್ರದೇಶದಲ್ಲಿ ಯಾವ ಭಾಷೆಯ ಜನರು ಶೇ.60ಕ್ಕಿಿಂತ ಅಧಿಕವಾಗಿದ್ದಾರೋ, ಅಂತಹ ಸ್ಥಳಗಳಲ್ಲಿ ಆಯಾಯಾ ಭಾಷೆಗಳಲ್ಲಿಯೇ ಸುತ್ತೋಲೆ ಹೊರಡಿಸಬೇಕೆಂಬ ನಿಯಮವಿದೆ. ಆದರೆ ಆಂಧ್ರದ ಕನ್ನಡ ಬಹುಸಂಖ್ಯಾತ ಪ್ರದೇಶದಲ್ಲಿ ಇದು ಸಮರ್ಪಕವಾಗಿ ಅನುಷ್ಠಾಾನಗೊಳ್ಳುತ್ತಿಲ್ಲ. ಆಂಧ್ರದ ಕನ್ನಡ ಶಾಲೆಗಳಲ್ಲಿ ಬೋಧನೆ ಮಾಡಲು ಉತ್ಸಾಹಿಗಳಿದ್ದಾರೆ. ಆದರೆ ಕೆಲಸ ಮಾಡಲು ಬೇಕಾದ ಪೀಠೋಕರಣಗಳು, ಪಾಠೋಪಕರಣಗಳನ್ನು ಸರ್ಕಾರ ನೀಡುತ್ತಿಲ್ಲ. ಇತ್ತೀಚೆಗೆ ಆಂಧ್ರ ಸರ್ಕಾರ ಪುಸ್ತಕಗಳನ್ನೇನೋ ನೀಡುತ್ತಿದೆ. ಆದರೆ ಶಾಲೆಗೆ ಕಟ್ಟಡಗಳೇ ಸಮರ್ಪಕವಾಗಿಲ್ಲ ಎಂದು ವೀರಭದ್ರಪ್ಪ ಅಲ್ಲಿನ ಶಾಲೆಗಳ ದುಸ್ಥಿತಿಯನ್ನು ತೆರೆದಿಟ್ಟರು.
ಎರಡು ದೊಡ್ಡ ಕೋಣಗಳ ಕಾದಾಟದ ನಡುವೆ ಸಣ್ಣ ಗಿಡ ಬಲಿ ಆಯ್ತು ಎಂಬ ಅವಸ್ಥೆ ಗಡಿನಾಡ ಕನ್ನಡಿಗರದ್ದಾಗಿದೆ. ಎರಡು ರಾಜ್ಯಗಳ ಗುದ್ದಾಟದ ನಡುವೆ ಮುಗ್ಧ ಮಕ್ಕಳು ಒದ್ದಾಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ಹೊರ ರಾಜ್ಯಗಳ ಭಾಷಿಕರಿಗೆ ಕನ್ನಡ ನಾಡಿನಲ್ಲಿ ಎಲ್ಲ ಸೌಲಭ್ಯ ನೀಡಲಾಗುತ್ತದೆ. ಆದರೆ ಗಡಿನಾಡ ಶಾಲೆಗಳಲ್ಲಿ ಓದುತ್ತಿರುವವರಿಗೆ ಆ ರಾಜ್ಯದವರು ಹಾಗಿರಲಿ, ಕರ್ನಾಟಕದವರು ಸಹಾಯ ಮಾಡುತ್ತಿಲ್ಲ. ಆ ಶಾಲೆಗಳ ಮಕ್ಕಳು ಉಚಿತ ಪುಸ್ತಕ, ಬ್ಯಾಗ ಪಡೆದು ಸಂಭ್ರಮ ಪಟ್ಟುಕೊಂಡರೆ, ಕನ್ನಡ ಶಾಲೆಯ ಮಕ್ಕಳ ಯಾವುದೇ ಸೌಲಭ್ಯ ಇಲ್ಲದಂತೆ ಬೇಸರ ಪಟ್ಟುಕೊಳ್ಳಬೇಕಾಗುತ್ತದೆ. ಕರ್ನಾಟಕ ಸರ್ಕಾರ 1-2 ಕೋಟಿ ಖರ್ಚು ಮಾಡಿದರೆ ಈ ಮಕ್ಕಳ ಮುಖದಲ್ಲಿ ಸಂಭ್ರಮ ಮೂಡಿಸಬಹುದು ಎಂದು ಹೇಳುವ ವೀರಭದ್ರಪ್ಪನವರು, ಆಂಧ್ರದಲ್ಲಿ ಓದಿದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕದ ಶಾಲೆಗಳಿಗೆ ಬಂದರೆ ಅಧಿಕಾರಿಗಳು ನೀಡುವ ಕಿರುಕುಳ, ಹೆಚ್ಚಿನ ಡೊನೇಶನ್ ಹಾವಳಿಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ಪರಸ್ಪರ ಅರ್ಥೈಸಿಕೊಳ್ಳುವಿಕೆಯಿಂದ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಕರ್ನಾಟಕದಲ್ಲಿನ ತೆಲುಗು ಭಾಷಿಕರಿಗೆ ಆಂಧ್ರದ ಸರ್ಕಾರ ಹಾಗೂ ಆಂಧ್ರದಲ್ಲಿನ ಕನ್ನಡ ಭಾಷಿಕರಿಗೆ ಕರ್ನಾಟಕ ಸರ್ಕಾರ ಸಮರ್ಪಕ ಸವಲತ್ತು ಒದಗಿಸಿದರೆ ಹಲವು ಸಮಸ್ಯೆ ಪರಿಹಾರವಾಗಬಲ್ಲದು. ಮಾನವೀಯ ನೆಲೆಯಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡಿದಾಗ ಹಲವು ಸಮಸ್ಯೆಗಳು ತನ್ನಿಿಂದ ತಾನೆ ಕಡಿಮೆಯಾಗುತ್ತದೆ. ಆಂಧ್ರದ ಕನ್ನಡ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಧ್ಯಯನ ಮಾಡುತ್ತೇವೆ ಎಂದು ಹೋರಾಟದ ಹಾದಿ ಹಿಡಿದ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಈ ಹಿಂದೆ ಆಂಧ್ರದ ಕನ್ನಡ ವಿದ್ಯಾಾರ್ಥಿಗಳ ಪರಿಸ್ಥಿತಿ ಅರಿಯಲು ನನ್ನನ್ನು ಏಕವ್ಯಕ್ತಿ ಸಮಿತಿಯ ಮುಖ್ಯಸ್ಥನಾಗಿ ಮಾಡಿ ಸಮೀಕ್ಷೆಗೆ ಕಳುಹಿಸಿದ್ದರು. ನಾನು ವರದಿಕೊಟ್ಟ ನಂತರ ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಉದ್ಯೋಗದಲ್ಲಿ ಶೆ.5ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆೆ ಬಂದಿತ್ತು. ಇಂತಹ ಅಂಶಗಳು ಹೆಚ್ಚಬೇಕು. ಆಂಧ್ರದಲ್ಲಿಯೇ ಇದ್ದು, ಕನ್ನಡ ಮಾಧ್ಯಮದಲ್ಲಿಯೇ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸೇರಿದಂತೆ ಹಲವು ಸವಲತ್ತುಗಳು ಹಾಗೂ ಮೀಸಲಾತಿಗಳನ್ನು ನೀಡಿದಾಗ, ಆ ರಾಜ್ಯಗಳಲ್ಲಿನ ಕನ್ನಡಿಗರ ಬದುಕು ಹಸನಾಗುತ್ತದೆ ಎನ್ನುವುದು ಕುಂ. ವೀರಭದ್ರಪ್ಪನವರು ನೀಡುವ ಸಲಹೆ. ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಾಗ ಗಡಿನಾಡಿನಲ್ಲಿ ಕನ್ನಡದ ಕಹಳೆ ಸ್ಫೂಟವಾಗಿ ಕೇಳಲು ಸಾಧ್ಯ.

Wednesday, October 31, 2018

ದೇಶದ ಹೆಮ್ಮೆಯ ಬಾಕ್ಸರ್ ದುರಂತ ಜೀವನಗಾಥೆ - ಅರ್ಜುನ ಪ್ರಶಸ್ತಿ ಪಡೆದವನೀಗ ಕುಲ್ಫೀ ವ್ಯಾಪಾರಿ

ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಆಟಗಾರನೋರ್ವನ ದುರಂತ ಬದುಕು ಅನಾವರಣಗೊಂಡಿದೆ. ಬಾಕ್ಸಿಿಂಗ್‌ನಲ್ಲಿ ದೇಶಕ್ಕೆ ಪದಕವನ್ನು ಗೆದ್ದುಕೊಟ್ಟ ಬಾಕ್ಸರ್ ಇದೀಗ ಬೀದಿ ಬರಿಯಲ್ಲಿ ವ್ಯಾಪಾರ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾನೆ.
ಭಾರತದಲ್ಲಿ ಕ್ರಿಕೆಟ್ ಆಟಗಾರರ ಯಶಸ್ಸಿನ ಬಗ್ಗೆ ಕೇಳಿದ್ದೇವೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಆಟಗಾರ ಕೂಡ ಯಾವ್ಯಾವುದೋ ವ್ಯಾಪಾರದಲ್ಲಿ ಕೈ ಹಾಕಿ, ದುಡ್ಡು ಮಾಡಿಕೊಳ್ಳುತ್ತಾಾನೆ. ಆದರೆ ಉಳಿದ ಕ್ರೀಡೆಗಳಲ್ಲಿ ಮಿಂಚಿದ ಕ್ರೀಡಾಪಟುಗಳ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ ಎಂಬಂತಾಗಿದೆ.
ಓಟದ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರನೋರ್ವ ತದನಂತರದಲ್ಲಿ ಡಕಾಯಿತರ ತಂದ ನಾಯಕನಾಗಿ, ದುರಂತ ಅಂತ್ಯಕಂಡ ನಿದರ್ಶನ ಕಣ್ಣೆದುರಿದೆ. ಓಟ, ಅಥ್ಲೆಟಿಕ್ಸ್ , ಹಾಕಿ ಹೀಗೆ ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದವರು ತದನಂತರದ ತಮ್ಮ ಬದುಕಿನಲ್ಲಿ ತೀವ್ರ ತೊಂದರೆ ಎದುರಿಸಿದ ಸನ್ನಿವೇಶಗಳೂ ಹೆಚ್ಚಿದೆ. ಅಂತಹ ಸಾಲಿಗೆ ಹೊಸ ಸೇರ್ಪಡೆ ಬಾಕ್ಸರ್ ದಿನೇಶ್ ಕುಮಾರ್.
ಏಷ್ಯನ್ ಗೇಮ್ಸ್ ನಲ್ಲಿ ಬಾಕ್ಸಿಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದ, ಅರ್ಜುನ ಪ್ರಶಸ್ತಿ ವಿಜೇತ ಹರಿಯಾಣದ ದಿನೇಶ್ ಕುಮಾರ್ ಇದೀಗ ಬೀದಿ ಬದಿಯಲ್ಲಿ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುವ ಹಂತ ತಲುಪಿದ್ದಾರೆ.
ಬಾಕ್ಸಿಿಂಗ್‌ನಲ್ಲಿ ದಿನೇಶ್ ಕುಮಾರ್ ಗೆದ್ದ ಪದಕಗಳು ಒಂದೆರಡಲ್ಲ ಬಿಡಿ. ಬಾಕ್ಸಿಿಂಗ್‌ನಲ್ಲಿ ಅವರು ಬರೋಬ್ಬರಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದಿದ್ದಾರೆ. ದಿನೇಶ್ ಕುಮಾರ್ ಅವರ ಸಾಧನೆಯನ್ನು ಗಮನಿಸಿದ ಸರ್ಕಾರ 2010ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ ಇಂತಹ ಸಾಧಕ ದಿನೇಶ್ ಕುಮಾರ್ ಇದೀಗ ತನ್ನ ಬದುಕನ್ನು ಕಟ್ಟಿಕೊಳ್ಳಲು ಒದ್ದಾಟ ನಡೆಸುತ್ತಿದ್ದು, ಅದಕ್ಕಾಗಿ ಕುಲ್ಫಿ ಮಾರಾಟದ ಮಾರ್ಗ ಹಿಡಿದಿದ್ದಾರೆ.
ಹರಿಯಾಣದ ಭಿವಾನಿ ಪ್ರದೇಶದವರಾದ ದಿನೇಶ್ ಕುಮಾರ್  ದೇಶದ ಬಾಕ್ಸಿಿಂಗ್ ಲೋಕದ ಹೊಸ ದ್ರುವತಾರೆ ಎಂದು ಬಿಂಬಿತರಾಗಿದ್ದರು. ಆದರೆ 2014ರಲ್ಲಿ ಸಂಭವಿಸಿದ್ದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗೆ ಕುಟುಂಬಸ್ಥರು ಅಪಾರ ಸಾಲ ಮಾಡಿದ್ದರು. ಅಪಘಾತದಿಂದಾಗಿ ದಿನೇಶ್ ಅವರ ಅದುವರೆಗಿನ ಬಾಕ್ಸಿಿಂಗ್ ವೃತ್ತಿಜೀವನಕ್ಕೆ ಅನಿರೀಕ್ಷಿತ ತೆರೆ ಬಿದ್ದಿತ್ತು.
ಇದೀಗ ದಿನೇಶ್ ಬಾಕ್ಸಿಿಂಗ್ ತರಬೇತಿಗಾಗಿಯೂ, ಅಪಘಾತದಿಂದ ಪಡೆದ ಚಿಕಿತ್ಸೆಗಾಗಿಯೂ ಮಾಡಿದ್ದ ಸಾ ಲವನ್ನು ತೀರಿಸಬೇಕಾಗಿ ಬಂದಿದೆ. ಸಾಲದ ವಿಷಯವನ್ನು ತಿಳಿದ ದಿನೇಶ್ ಕುಮಾರ್ ತಾವೂ ತಂದೆಗೆ ನೆರವಾಗಲು ರಸ್ತೆ ಬದಿಯಲ್ಲಿ ಕುಲ್ಫಿ ಮಾರಾಟಕ್ಕೆ ಇಳಿದಿದ್ದಾರೆ. ದಿನೇಶ್ ಅವರನ್ನು ಕಂಡ, ದಿನೇಶ್ ಅವರ ಬಾಕ್ಸಿಿಂಗ್ ಸಾಧನೆಯ ಮಾಹಿತಿ ಇರುವ ಪಾದಚಾರಿಗಳು, ಕಾರು, ಬೈಕ್ ಸವಾರರು ಅವರಲ್ಲಿ ಕುಲ್ಫಿ ಕರೀದಿಸಿ ಜತೆಯಲ್ಲೊಂದು ಸೆಲ್ಫೀ ತೆಗೆದುಕೊಂಡು ಹೋಗುತ್ತಿದ್ದಾರೆ.
ತಾವು ಕುಲ್ಫಿ ಮಾರಾಟಕ್ಕಿಳಿದ ಆರಂಭದ ದಿನಗಳಲ್ಲಿ ಸರ್ಕಾರ ತಮ್ಮ ಸಹಾಯಕ್ಕೆ ಬರುತ್ತದೆ ಎನ್ನುವ ಆಸೆಯನ್ನು ದಿನೇಶ್ ಕುಮಾರ್ ಹೊಂದಿದ್ದರು. ಆದರೆ ಯಾವುದೇ ಸರ್ಕಾರ ದಿನೇಶ್ ಕುಮಾರ್ ಅವರ ಸಹಾಯಕ್ಕೆ ಮುಂದಾಗಲಿಲ್ಲ. ಇದರಿಂದ ತೀವ್ರ ನಿರಾಸೆ ಹೊಂದಿದ ದಿನೇಶ್ ಕುಮಾರ್ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
ಕುಲ್ಫಿ ಮಾರಾಟ ಮಾಡುತ್ತಿದ್ದರೂ, ಅಪಘಾತದಿಂದಾಗಿ ಬಾಕ್ಸಿಿಂಗ್ ರಿಂಗ್‌ಗೆ ತಮಗೆ ಕಾಲಿರಿಸಲು ಅಸಾಧ್ಯವಾಗಿದ್ದರೂ ದಿನೇಶ್ ಕುಮಾರ್ ಎದೆಗುಂದಿಲ್ಲ. ಬದಲಾಗಿ ತಮ್ಮೊಳಗಿನ ಬಾಕ್ಸಿಿಂಗ್ ಜ್ಞಾನವನ್ನು ಕಿರಿಯರಿಗೆ ಧಾರೆ ಎರೆಯುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಬಾಕ್ಸಿಿಂಗ್ ತರಬೇತಿ ನೀಡುವ ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮೊಳಗಿನ ಜ್ಞಾನವನ್ನು ಇತರರಿಗೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕ್ರಿಕೆಟ್ ಹಾಗೂ ಇತರ ಕೆಲವೇ ಕ್ರೀಡೆಗಳ ಕ್ರೀಡಾಪಟುಗಳಿಗೆ ಭಾರತದಲ್ಲಿ ಬೆಲೆ ಇದೆ ಎನ್ನುವುದು ಹಲವರ ಮಾತು. ಉಳಿದ ಕ್ರೀಡೆಗಳು ಸಾಲು ಸಾಲು ಪದಕಗಳನ್ನು ಗೆದ್ದು ಸಾಧನೆಯ ಶಿಖರವನ್ನು ಏರಿದರೂ ಅವರ ಕುರಿತು ಯಾರೂ ಗಮನ ಹರಿಸುವುದಿಲ್ಲ. ಪದಕಗಳನ್ನು ಗೆದ್ದು ತಂದರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಒದ್ದಾಾಡುತ್ತಿರುವ ದಿನೇಶ್ ಕುಮಾರ್ ಅವರಂತವರ ಬೆನ್ನಿಗೆ ಸರ್ಕಾರ, ಹಾಗೂ ಕ್ರೀಡಾ ಅಭಿಮಾನಿಗಳು ನಿಲ್ಲುವ ಜರೂರತ್ತಿದೆ. ಹೀಗಾದಾಗ ಮಾತ್ರ ಕ್ರೀಡಾಪಟುಗಳ ಬದುಕು ಹಸನಾಗಬಹುದಾಗಿದೆ.
---
ಯಾವ ರಾಜಕಾರಣಿಗಳ ಮೇಲೆ ವಿಶ್ವಾಸವೂ ಇಲ್ಲ. ಕುಟುಂಬವನ್ನು ಸಲಹಲಿಕ್ಕಾಗಿ ಕುಲ್ಫಿ ವ್ಯಾಪಾರ ನಡೆಸಿದ್ದೇನೆ. ನಾನು ಬಾಕ್ಸಿಿಂಗ್ ಜಗತ್ತಿನಲ್ಲಿ ದ್ರುವತಾರೆಯಾಗಬೇಕೆನ್ನುವ ಕನಸನ್ನು ನನ್ನ ತಂದೆ ಕಂಡಿದ್ದರು. ನನಗೆ ಅಪಘಾತವಾಗಿದ್ದು ವೃತ್ತಿ ಜೀವನ ಅಂತ್ಯವಾಗಿದೆ. ಆದರೆ ನನ್ನಲ್ಲಿನ ಬಾಕ್ಸಿಿಂಗ್ ಹಾಗೆಯೇ ಇದೆ. ನಾನೀಗಲೂ ಕಿರಿಯರಿಗೆ ಬಾಕ್ಸಿಿಂಗ್ ತರಬೇತಿ ನೀಡುತ್ತಿದ್ದೇನೆ. ಇನ್ನಾದರೂ ಸರ್ಕಾರದವರು ನನಗೆ ರಾಜ್ಯಮಟ್ಟದ ತರಬೇತುದಾರ ಹುದ್ದೆ ನೀಡಿದರೆ ನಿರ್ವಹಿಸಬಲ್ಲೆ .
ದಿನೇಶ್ ಕುಮಾರ್
ಬಾಕ್ಸರ್

( ಈ ಲೇಖನ ಹೊಸದಿಗಂತದ ಕ್ರೀಡಾ ಪುಟದಲ್ಲಿ ಪ್ರಕಟವಾಗಿದೆ )

Tuesday, October 30, 2018

ಕ್ರಿಕೆಟ್‌ನಲ್ಲಿ ಮುಗಿಯಿತು ತೊಂಭತ್ತರ ಜಮಾನಾ

ಶ್ರೀಲಂಕಾ ಕ್ರಿಕೆಟ್ ದಿಗ್ಗಜ ರಂಗಣ ಹೆರಾತ್ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಹೆರಾತ್ ವಿದಾಯದಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಬಹು ದೊಡ್ಡ ಬದಲಾವಣೆಯೊಂದು ಘಟಿಸುತ್ತಿದೆ. ಹೆರಾತ್ ವಿದಾಯದ ಮೂಲಕ ಕ್ರಿಕೆಟ್ ಲೋಕದಲ್ಲಿ 90ರ ದಶಕದ ಜಮಾನಾದ ಕೊನೆಯ ಕೊಂಡಿ ಕಳಚಿಕೊಳ್ಳುತ್ತಿದೆ.
ಮೊದಲ 15 ಓವರ್‌ಗಳಲ್ಲಿ ಪವರ್ ಪ್ಲೇ, 30 ಯಾರ್ಡ್ ಸರ್ಕಲ್ ನಿಯಮಗಳು, 250-260ರನ್ ಎಂದರೆ ಅಬ್ಬಬ್ಬಾ ಎನ್ನುವ ಸಮಯ, ಆಗ ತಾನೆ ಬಿಳಿ ಬಣ್ಣದ ಧಿರಿಸಿನಿಂದ ಬಣ್ಣ ಬಣ್ಣದ ಜೆರ್ಸಿಗೆ ಕಾಲಿಟ್ಟ ಸಮಯ ಈ ಮುಂತಾದ ಹಲವು ಸಂಗತಿಗಳು 90ರ ದಶಕದ ಕ್ರಿಕೆಟ್ ವೈಭವವನ್ನು ಕಟ್ಟಿಕೊಡುತ್ತವೆ.
90ರ ದಶಕದಲ್ಲಿಯೇ ಪಾಕಿಸ್ಥಾನ ಮೊಟ್ಟ ಮೊದಲ ವಿಶ್ವಕಪ್ ಎತ್ತಿ ಹಿಡಿದಿದ್ದು. ಈ ದಶಕದಲ್ಲಿಯೇ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವವನ್ನೇ ಆಳಿದ್ದು. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿ ಪರಿವರ್ತನೆಯಾಗಿದ್ದು. 90ರ ದಶಕದಲ್ಲಿಯೇ ಆಸ್ಟ್ರೇಲಿಯಾ ಎಂಬುದು ಕ್ರಿಕೆಟ್‌ನ ಏಕಮೇವಾದ್ವಿತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು. ಸಾಲು  ಸಾಲು  ಲೆಜೆಂಡ್‌ಗಳು ಜನಿಸಿದ್ದು.
ತೆಂಡೂಲ್ಕರ್ ಅಲ್ಲದೇ, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ಮಾರ್ಕ್ ವಾ, ಸ್ಟೀವ್ ವಾ, ಜಾಕ್ ಕಾಲಿಸ್, ಹ್ಯಾನ್ಸಿ ಕ್ರೋನಿಯೆ, ಜಾಂಟಿ ರೋಡ್‌ಸ್‌‌, ಕಾರ್ಲ್ ಹೂಪರ್, ಅರ್ಜುನ ರಣತುಂಗಾ, ಅರವಿಂದ ಡಿಸಿಲ್ವಾ, ಗ್ಯಾರಿ ಕರ್ಸ್ಟನ್, ಮೈಕೆಲ್ ಬೆವನ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಾಲ್‌ಶ್‌‌, ಆಂಬ್ರೋಸ್, ಮುತ್ತಯ್ಯ ಮುರಳೀಧರನ್, ಮೆಕ್‌ಗ್ರಾಥ್, ಶೇನ್ ವಾರ್ನೆ, ಅನಿಲ್ ಕುಂಬ್ಳೆ ಹೀಗೆ ಸಾಲು ಸಾಲು ದಿಗ್ಗಜರು 90ರ ದಶಕದಲ್ಲಿಯೇ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಿಂಚಿದವರು. ಅಜರಾಮರವಾಗಿ ಉಳಿದವರು. 10-15 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದವರು.
ಕ್ರಿಕೆಟ್‌ನಲ್ಲಿ ಹಳೆಯ ನೀರು ಹರಿದು ಹೊಸ ನೀರು ಸದಾ ಬರುತ್ತಲೇ ಇರುತ್ತದೆ. 1990ರಿಂದ 1999ರ ವರೆಗಿನ ಕಾಲವೆಂದರೆ ಅತ್ತ ಕ್ಲಾಸಿಕ್ ಅಲ್ಲ, ಇತ್ತ ಮಾಡರ್ನ್ ಅಲ್ಲ. ಕ್ರಿಕೆಟ್ ಎನ್ನುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಸಮಯ. ನಿಧಾನವಾಗಿ ಹೊಸ ರೀತಿಯ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದ ಹೊತ್ತು. ಪ್ರಸಿದ್ಧಿ, ಹಣ, ಜಾಹೀರಾತು ಹೀಗೆ ವಿವಿಧ ರಂಗಗಳಲ್ಲಿ ಕ್ರಿಕೆಟ್ ಕಲಿಗಳು ನಲಿಯುತ್ತಿದ್ದ ಹೊತ್ತು. ಆಟದ ಮಾದರಿಗಳೂ ಬದಲಾಗುತ್ತಿದ್ದ ಸಮಯ. ಹೊಸ ಹೊಸ ನಿಯಮಗಳನ್ನು ಪ್ರಯೋಗಗಳ ರೀತಿಯಲ್ಲಿ ಅಳವಡಿಕೆ ಮಾಡುತ್ತಿದ್ದ ಸಮಯ ಕೂಡ ಹೌದು. ಇಂತಹ 90ರ ದಶಕದ ಕೊಂಡಿಯಾಗಿ ಉಳಿದಿದ್ದರು ಶ್ರೀಲಂಕಾದ ಸ್ಪಿನ್ನರ್ ರಂಗಣ ಹೆರಾತ್.
2010ರಿಂದೀಚೆಗೆ 90ರ ದಶಕದಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಅನೇಕರು ನಿವೃತ್ತರಾಗಿದ್ದಾರೆ. ಈ ಸಂದರ್ಭದಲ್ಲೆಲ್ಲ 90ರ ದಶಕದ ವೈಭವಗಳು ನಿಧಾನವಾಗಿ ತೆರೆಯ ಮರೆಗೆ ಸರಿಯುವ ಲಕ್ಷಣಗಳು ಕಣ್ಣಿಗೆ ಕಾಣಿಸಲು ಆರಂಭಿಸಿದೆ. ದ್ರಾವಿಡ್, ಸಂಗಕ್ಕಾರ, ಜಯವರ್ಧನೆ, ಅಫ್ರೀದಿ, ತೆಂಡೂಲ್ಕರ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಮೆಕ್‌ಗ್ರಾಥ್ ಹೀಗೆ ಹಲವರು ವಿದಾಯ ಹೇಳಿದಾಗಲೂ 90ರ ದಶಕದ ನೆನಪು ಮರುಕಳಿಸಿವೆ. ಇದೀಗ 90ರ ದಶಕದ ಕೊನೆಯ ಕೊಂಡಿಯಾಗಿದ್ದ ಹೆರಾತ್ ವಿದಾಯದ ಮೂಲಕ ಅಂದಿನ ಜಮಾನಾದ ಆಟಗಳು ನೆನಪಾಗಿ ಮಾತ್ರ ಉಳಿಯಲಿವೆ.
ಇಂದಿನ ಕ್ರಿಕೆಟ್ ಅಂದಿನ ಕ್ರಿಕೆಟ್ ಆಗಿ ಉಳಿದಿಲ್ಲ. ಟೆಸ್‌ಟ್‌‌, ಏಕದಿನ ಮಾದರಿಯ ಜತೆಗೆ ಟಿ20 ಎಂಬ ಚುಟುಕಿನ, ಅಬ್ಬರದ ಕ್ರಿಕೆಟ್ ಮಾದರಿ ಎಲ್ಲರ ಮನಸ್ಸಿನಲ್ಲಿ ಉಳಿದುಹೋಗಿದೆ. ನಿಯಮಗಳು ಬದಲಾಗಿದೆ. 300+ ರನ್ ಗಳಿಸಿದರೂ ಅದು ಯಾವುದೇ ತಂಡಗಳಿಗೆ ಸವಾಲಾಗುತ್ತಿಲ್ಲ. ಏಕದಿನ ಮಾದರಿಯಲ್ಲಿ 200+ ರನ್ ಸರಾಗವಾಗಿ ಭಾರಿಸುವ ಬ್ಯಾಟ್‌ಸ್‌‌ಮನ್‌ಗಳ ಉದಯವಾಗಿದೆ. ಬೌಲರ್‌ಗಳು ಹೈರಾಣಾಗುವ ಸಮಯವಂತೂ ತೀರಾ ಹೆಚ್ಚಾಗಿದೆ. ಇಂತಹ ಸಮಯದಲ್ಲಿ 90ರ ದಶಕದ ಆಟಗಳು ಹೆಚ್ಚಿನ ಜನರಿಗೆ ನೆನಪಾಗುವುದಿಲ್ಲ.
ಕ್ರಿಕೆಟ್ ಜಗತ್ತಿನಲ್ಲಿ 90ರ ದಶಕದ ಆಟಗಾರರ ವೈಭವವನ್ನು ಇನ್ನು ಮುಂದೆ ಕಾಣಲು ಸಾಧ್ಯವೇ ಇಲ್ಲ. ಬದಲಾವಣೆ ನಿರಂತರ ಎಂಬ ಸಂದರ್ಭದಲ್ಲಿ ಆ ಸಮಯದ ಆಟಗಾರರು ಸದಾ ನೆನಪಾಗುತ್ತಿರುತ್ತಾರೆ. ಕ್ಲಾಸಿಕ್ ಆಟಗಳು, ರೋಚಕ ಪಂದ್ಯಗಳು ಸದಾ ನೆನಪಾಗುತ್ತಲೇ ಇರುತ್ತವೆ. 90ರ ದಶಕದ ಆಟಗಾರನಿಗೆ ವಿದಾಯ ಹೇಳುತ್ತ, ಹೊಸ ಪರ್ವದ ಕಡೆಗೆ ಹೆಜ್ಜೆ ಹಾಕಬೇಕಿದೆ.





Thursday, October 25, 2018

ಗೆಳತಿ ನೀನಿಲ್ಲದೇ.!

ನಿನ್ನೊಡನೆ
ಮಾತಾಡಲಾಗದೇ
ಪದಗಳು ಬಿಕ್ಕುತ್ತಿವೆ
ಗೆಳತಿ...
ಮನದ ಕದ ಕಿರ್ರೆನ್ನುತ್ತಿದೆ..!!

ನನ್ನಷ್ಟಕ್ಕೆ ನಾನೇ
ಬೆಂದು ಹಣ್ಣಾಗುತ್ತಿದ್ದೇನೆ
ಗೆಳತಿ,
ನಿನ್ನ ಜೊತೆಯಿಲ್ಲದೇ..||

ಕಣ್ಣೆವೆಗಳಲ್ಲಿ
ನೀರು ತೊಟ್ಟಿಕ್ಕಲು
ಸಮಯ ಕಾದಿದೆ
ಗೆಳತಿ
ನೀನಿಲ್ಲದೇ..!!

(Incomplete...!!!)

Monday, October 22, 2018

ಅಡ್ಡ ಹೆಸರಿನ ಅಡ್ಡಾದಲ್ಲಿ…!

ಕಾಲೇಜು ದಿನಗಳಲ್ಲಿ ಅಡ್ಡ ಹೆಸರು ಎನ್ನುವುದು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಇಂತಹ ಅಡ್ಡ ಹೆಸರುಗಳಲ್ಲಿ ಹಲವು ಫನ್ನಿಯಾಗಿದ್ದರೆ, ಇನ್ನೂ ಕೆಲವುಗಳು ಸಿಲ್ಲಿಯಾಗಿರುತ್ತವೆ.
ಪ್ರತಿಯೊಬ್ಬರಿಗೂ ಅವರದೇ ಆದ ನಾಮಧೇಯಗಳಿದ್ದರೂ, ಅವರವರ ಹವ್ಯಾಸ, ಅಭಿನಯ, ಚಟ ಹೀಗೆ ಹಲವು ಕಾರಣಗಳಿಂದಾಗಿ ಹೆಸರಿನ ಮುಂದೆ ಅಡ್ಡ ಹೆಸರುಗಳು ಸೇರಿಕೊಂಡು ಬಿಡುತ್ತವೆ. ಕೆಲವೊಮ್ಮೆ ನಿಜವಾದ ಹೆಸರೇ ಮರೆತು ಹೋಗುವಷ್ಟರ ಮಟ್ಟಿಗೆ ಅಡ್ಡ ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಲವು ಸಾರಿ ಈ ಅಡ್ಡ ಹೆಸರುಗಳಿಗೆ ಎಲ್ಲರೂ ಹೊಂದಿಕೊಂಡು ಬಿಡುತ್ತಾರೆ. ಕೆಲವೊಮ್ಮೆ ಮಾತ್ರ ವಿರೋಧಗಳು ಕೇಳಿ ಬರುತ್ತವೆ ಅಷ್ಟೇ.
ಸುಮ್ಮನೆ ಕಾಲೇಜು ದಿನಗಳ ಗೆಳೆಯರ ಬಳಗವನ್ನು ಗಮನಿಸಿ, ಅವರ ಬಳಗದಲ್ಲಿ ಹೆಚ್ಚಿನ ಮಂದಿ ತಮ್ಮ ನಿಜವಾದ ಹೆಸರುಗಳಿಂದ ಕರೆದುಕೊಳ್ಳುವುದೇ ಇಲ್ಲ. ಕೆಂಪ, ಬಿಡ್ಡ, ಮಚ್ಚಾ, ಮಗಾ, ಕುಂಟ, ಕುಳ್ಳ ಹೀಗೆ ಅವರವರ ಗಾತ್ರಗಳಿಗನುಗುಣವಾಗಿ ಅಡ್ಡ ಹೆಸರುಗಳು ಸ್ಥಾನ ಪಡೆದುಕೊಳ್ಳುತ್ತವೆ. ಇನ್ನು ಗುಂಪಿನಲ್ಲೊಬ್ಬ ಮಂಜ ಎನ್ನುವ ಹೆಸರಿನವನ್ನು ಇದ್ದರಂತೂ ಕೋಳಿ ಎಂಬ ಅಡ್ಡ ಹೆಸರು ಆತನಿಗೆ ಖಾಯಂ ಎಂಬಂತಾಗಿದೆ.
ಗೆಳೆಯರ ಬಳಗದಲ್ಲೊಬ್ಬ ಹುಲಿ ಇರುತ್ತಾನೆ, ದಾಸ ಇರುತ್ತಾ. ಇನ್ನು ಆ ಬಳಗದಲ್ಲಿ ಬ್ರಾಹ್ಮಣರ ಹುಡುಗರು ಇದ್ದರಂತೂ ಅವರಿಗೆ ಭಟ್ಟ, ಹೆಗಡೆ ಅಥವಾ ಪುಳಚಾರ್ ಎಂಬ ಅಡ್ಡ ಹೆಸರು ಖಾಯಂ.
ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಅಡ್ಡ ಹೆಸರುಗಳು ಬದಲಾಗುತ್ತವೆ. ಉತ್ತರ ಕರ್ನಾಟಕದಲ್ಲಿ ಅಡ್ಡ ಹೆಸರುಗಳೂ ರಗಡ್ ಆಗಿರುತ್ತವೆ. ಮೆಣಸಿನಕಾಯಿ, ಬೆಳ್ಳಕ್ಕಿ, ಇಂತಹ ಹೆಸರುಗಳು ಉತ್ತರ ಕರ್ನಾಟಕದಲ್ಲಿಕಾಣಸಿಗುತ್ತವೆ. ಅದೇ ದಕ್ಷಿಣ ಕರ್ನಾಟಕ ಭಾಗಗಳಿಗೆ ಬಂದರೆ ಅಲ್ಲಿ ಕರೆಯುವ ಅಡ್ಡ ಹೆಸರುಗಳು ಭಿನ್ನ. ಬಿಡ್ಡ, ಕೆಂಪ, ಕರಿಯ, ದೊಡ್ಡಣ್ಣ, ಚಿಕ್ಕಣ್ಣ ಇತ್ಯಾದಿಗಳು ಇಲ್ಲಿ ಜಾಸ್ತಿ. ಬೆಂಗಳೂರು ಕಡೆಗಳಲ್ಲಿ ಬಳಕೆಯಾಗುವ ಅಡ್ಡ ಹೆಸರುಗಳಲ್ಲಿ ತಮಿಳು, ತೆಲುಗಿ ಪ್ರಭಾವ ಜಾಸ್ತಿ ಇರುತ್ತವೆ. ಅದೇ ಕಾರಣಕ್ಕೆ ಬೆಂಗಳೂರು ಭಾಗದಲ್ಲಿ ಮಚ್ಚಾ, ಮಗಾ, ಸಿವಾ ಇಂತದ್ದೆಲ್ಲ ಜಾಸ್ತಿ. ಮಂಗಳೂರು, ಉಡುಪಿ, ಉತ್ತರ ಕನ್ನಡಗಳಲ್ಲಿ ಕರೆಯುವ ಅಡ್ಡ ಹೆಸರುಗಳು ಇನ್ನಷ್ಟು ಬೇರೆ ಬೇರೆಯಾಗಿರುತ್ತವೆ.
ಸಿನಿಮಾ ನಟರುಗಳ ಹೆಸರನ್ನು ಅಡ್ಡ ಹೆಸರಾಗಿ ಕರೆಯುವ ವಾಡಿಕೆ ಹಲವು ಸಂದರ್ಭಗಳಲ್ಲಿದೆ. ಯಾವುದೋ ಹುಡುಗನಿಗೆ ಯಾರೋ ಹೀರೋ ಇಷ್ಟವಾದರೆ, ಆ ನಟನ ಚಿತ್ರಗಳ ಹೆಸರನ್ನು ಹೇಳಿ ಕರೆಯುವುದು, ಇನ್ಯಾರಿಗಾದರೂ ಚಿನ್ರನಟನ ಹೋಲಿಕೆ ಇದ್ದರೆ ಅದೇ ಹೆಸರಿನಿಂದ ಕರೆಯುವುದು ಹೀಗೆ. ಇನ್ನು ಆತ/ಆಕೆ ಏನಾದರೂ ತಪ್ಪನ್ನು ಮಾಡಿದರೆ ಅದನ್ನೇ ಅಡ್ಡ ಹೆಸರಿನಿಂದ ಕರೆದಿರುವುದೂ ಇದೆ.
ನಾವು ಹೈಸ್ಕೂಲಿಗೆ ಹೋಗುವಾಗ ಒಬ್ಬ ವಿದ್ಯಾರ್ಥಿ ಇದ್ದ. ಆತನಿಗೆ ಹಕ್ಕಿಗಳನ್ನು ಬೇಟೆಯಾಡುವುದು ಅಂದರೆ ಬಹಳ ಖುಷಿಯ ಸಂಗತಿಯಾಗಿತ್ತು. ಆತನ ಸಾಮರ್ಥ್ಯ ಎಷ್ಟಿತ್ತೆಂದರೆ ಆತ ಕವಣೆ ಕಲ್ಲನ್ನು ಬೀಸಿಯೋ ಅಥವಾ ಚ್ಯಾಟರ್ ಬಿಲ್ಲಿನಿಂದ ಹೊಡೆದೋ ಪಿಕಳಾರ ಹಕ್ಕಿಗಳನ್ನು ಕೊಂದು ಅದನ್ನು ತಿನ್ನುತ್ತಿದ್ದ. ಇದರಿಂದಾಗಿ ಆತನಿಗೆ ಪಿಕಳಾರ ಎಂಬ ಅಡ್ಡ ಹೆಸರೇ ಬಂದಿತ್ತು. ಹಲವು ಸಂದರ್ಭಗಳಲ್ಲಿ ಮದ್ಯಪಾನ ಮಾಡುವವರು, ಮದ್ಯದ ಕಂಪನಿಗಳ ಹೆಸರನ್ನು ಕಿರಿದಾಗಿಸಿ ಅಡ್ಡ ಹೆಸರಿನಿಂದ ಕರೆದಿದ್ದೂ ಇದೆ. ಎಂಸಿ, ಕೆಎಫ್ ಇತ್ಯಾದಿ ಅಡ್ಡ ಹೆಸರುಗಳು ಹಲವರಿಗಿರುತ್ತವೆ. ಹಲವು ಸಂದರ್ಭಗಳಲ್ಲಿ ಯಾರದ್ದಾದರೂ ಒನ್ ವೇ ಲವ್ ಇದ್ದರೆ, ಆ ಹುಡುಗಿಯ ಹೆಸರನ್ನು ಸೇರಿಸಿ ಕೀಟಲೆ ಮಾಡುವುದೂ ಇದೆ.
ಪ್ರತಿ ಗ್ರೂಪನ್ನೂ ಗಮನಿಸಿ. ಅಲ್ಲೊಬ್ಬ ದಾಸ ಇರುತ್ತಾನೆ. ಪುಂಡ ಇರುತ್ತಾನೆ. ಪೋಲೀಸ ಇರುತ್ತಾನೆ. ಮಿಲಿಟ್ರಿ ಇರುತ್ತಾನೆ. ಇಂತಹ ಹೆಸರುಗಳನ್ನು ಆಯಾಯಾ ವಿದ್ಯಾರ್ಥಿಗಳು ತಮ್ಮ ಪಾಲಿಗೆ ಸಿಕ್ಕ ಬಿರುದು, ಬಾವಲಿಗಳೆಂಬಂತೆ ಸಂತಸದಿಂದಲೇ ಸ್ವೀಕಾರ ಮಾಡುತ್ತಾರೆ. ಕಾಲೇಜು ದಿನಗಳಲ್ಲಿ ಆರಂಭವಾದ ಗೆಳೆತನ ಬದುಕಿನುದ್ದಕ್ಕೂ ಮುಂದುವರೆದ ಸಂದರ್ಭದಲ್ಲಿ ಆ ಮಿತ್ರ ಮಂಡಳಿಗಳು ಪರಸ್ಪರರನ್ನು ಅಡ್ಡ ಹೆಸರಿನಿಂದಲೇ ಕರೆದುಕೊಂಡ, ಕರೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.
ಇನ್ನು ಹುಡುಗಿಯರಿಗೂ ಕೂಡ ಅಷ್ಟೇ ವಿಶಿಷ್ಟ ಅಡ್ಡ ಹೆಸರುಗಳಿರುತ್ತವೆ. ಯಾರಾದರೂ ಉದ್ದವಾದ ಹುಡುಗಿ ಇದ್ದರೆ ಅವರನ್ನು ಕೊಕ್ಕರೆ ಎಂತಲೋ, ಒಂಟೆ ಎಂದೋ ಕರೆಯುತ್ತಾರೆ. ದಪ್ಪ ಇದ್ದವಳ ಹೆಸರು ಏನೇ ಇದ್ದರೂ ಆಕೆ ಡುಮ್ಮಿ ಎಂದೋ, ಟೆಡ್ಡಿಯಾಗಿಯೋ, ಕರಡಿಮರಿಯಾಗಿಯೋ ಕರೆಸಿಕೊಳ್ಳುತ್ತಾಳೆ.
ಹಲವು ಸಂದರ್ಭಗಳಲ್ಲಿ ಅಡ್ಡ ಹೆಸರಿನ ಬಳಕೆ ಅತಿರೇಕಕ್ಕೆ ಹೋದದ್ದೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿಗಳ ನಡುವೆ ಹೊಡೆದಾಟಗಳು ನಡೆದಿದ್ದೂ ಇದೆ. ಇಂತಹ ಅಡ್ಡ ಹೆಸರುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದದ್ದೂ ಇದೆ. ಆದರೆ ಇವೆಲ್ಲ ಸುಮ್ಮನೆ ಅತಿರೇಕ ಎನ್ನಿಸಿಕೊಳ್ಳುತ್ತವೆ.
ಕಾಲೇಜು ಬದುಕು ಎಂದ ಮೇಲೆ ಓದು, ಆಟ, ಓಟ, ಸಂತಸ, ಸಂಭ್ರಮಗಳು ಎಷ್ಟು ಸಹಜವೋ ಅದೇ ರೀತಿ ಅಡ್ಡ ಹೆಸರುಗಳೂ ಕೂಡ. ಇವು ಆ ದಿನಗಳ ಬದುಕಿನಲ್ಲಿ ಪ್ರಮುಖ ಭಾಗವಾಗಿ ಬದಲಾಗುತ್ತವೆ. ಇವನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡರೆ ಸುಮ್ಮನೇ ಬೇಸರಕ್ಕೆ ಕಾರಣವಾಗುವುದಷ್ಟೇ. ಬದಲಾಗಿ ಅಡ್ಡ ಹೆಸರುಗಳನ್ನು ಸುಮ್ಮನೇ ಎಂಜಾಯ್ ಮಾಡೋಣ ಬನ್ನಿ. ಕರೆಯುವವರು ಕರೆಯಲಿ, ಹೇಳುವವರು ಹೇಳಿಲಿ, ಖುಷಿಯಾಗಿರೋಣ. ಅಡ್ಡ ಹೆಸರುಗಳನ್ನು ಪ್ರೀತಿಯಿಂದ ಆದರಿಸಿ, ನಾವೂ ಕರೆದು, ಕರೆಸಿಕೊಂಡು ಖುಷಿ ಪಡೋಣ. ಅಡ್ಡ ಹೆಸರುಗಳು ಯಾಕಾಗಿ ಹುಟ್ಟಿಕೊಳ್ಳುತ್ತವೆ ಎನ್ನುವುದು ಕಷ್ಟ. ಅದೇ ರೀತಿ ಅಡ್ಡ ಹೆಸರನ್ನು ಇಡುವುದನ್ನು ತಡೆಯುವುದೂ ಕೂಡ ಕಷ್ಟ. ಯಾರೋ ಅಡ್ಡ ಹೆಸರನ್ನಿಟ್ಟರು ಎಂದು ಬೇಸರಿಸದೇ, ಅದಕ್ಕಾಗಿ ಸಿಟ್ಟು ಮಾಡಿಕೊಳ್ಳದೇ ಆ ಸಂದರ್ಭಗಳನ್ನು ಎಂಜಾಯ್ ಮಾಡೋಣ. ಸೂಕ್ತ ಸಂದರ್ಭ, ಸಮಯಗಳು ಸಿಕ್ಕರೆ ನಾವೂ ಕೂಡ ಯಾರಿಗಾದರೂ ಅಡ್ಡ ಹೆಸರು ಇಡಬಲ್ಲೆವು ಎಂಬುದನ್ನು ತೋರಿಸೋಣ. ತೀರಾ ಬದುಕಿಗೆ ಘಾಸಿಯಾಗದಂತೆ ಅಡ್ಡ ಹೆಸರನ್ನಿಟ್ಟು ಸಂಭ್ರಮಿಸೋಣ. ಅಲ್ಲವೇ.