Thursday, November 1, 2018

ಗಡಿನಾಡ ಕನ್ನಡ ಶಾಲೆ ; ಇನ್ನೂ ಮುಕ್ತವಾಗಲಿಲ್ಲ ಸಮಸ್ಯೆ

(ಗುರುಗಳು, ಹಿರಿಯ ಸಾಹಿತಿಗಳೂ, ರಾಯಲ ಸೀಮೆಯ ನೆತ್ತರ ಇತಿಹಾಸವನ್ನು ಕನ್ನಡ ನಾಡಿನ ಓದುಗ ಅಭಿಮಾನಿಗಳ ಎದುರು ತೆರೆದಿಟ್ಟ ಕುಂ. ವೀರಭದ್ರಪ್ಪ ಅವರನ್ನು ಮತ್ತೆ ಮಾತಾಡಿಸುವ ಅವಕಾಶ ಸಿಕ್ಕಿತ್ತು. ಹಿಂದೆ ಶಿರಸಿಯಲ್ಲಿ ಇದ್ದಾಗ ಅವರ ಜತೆ ಒಂದೆರಡು ದಿನ ಉಳಿದಿದ್ದೆ. ಮತ್ತೊಮ್ಮೆ ಆ ದಿನ ನೆನಪಿಸಿ ಅವರನ್ನು ಮಾತನಾಡಿಸಿದೆ. ಖುಷಿಯಿಂದಲೇ ಮಾತನಾಡಿದರು. ಆಂಧ್ರ ಪ್ರದೇಶದ ಕನ್ನಡ ಶಾಲೆಗಳ ಕುರಿತು ಮಾಹಿತಿ ನೀಡಿದರು. ಅವರ ಮಾತುಗಳು ಇಲ್ಲಿದೆ. ಅಂದ ಹಾಗೆ ಇದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

ಗಡಿನಾಡ ಕನ್ನಡ ಶಾಲೆಗಳ ಪರಿಸ್ಥಿತಿ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಹಲವಾರು ಕಾರಣಗಳಿಂದಾಗಿ ಗಡಿನಾಡ ಕನ್ನಡ ಶಾಲೆಗಳು ಒದ್ದಾಾಡುತ್ತಿವೆ. ಅಧ್ಯಾಪಕರು, ಬೋಧಕ ಸಿಬ್ಬಂದಿ, ಕಟ್ಟಡ, ಶಿಕ್ಷಣ ಸಾಮಗ್ರಿಗಳ ಕೊರತೆ ಹೀಗೆ ಹಲವಾರು ಇಲ್ಲಗಳ ನಡುವೆಯೇ ಗಡಿನಾಡಿನಲ್ಲಿ ಕನ್ನಡ ಪ್ರೇಮ ಜೀವಂತವಾಗಿದೆ. ಕನ್ನಡ ಪ್ರೇಮಿಗಳ ಒತ್ತಾಸೆ ಫಲವಾಗಿ ಈ ಶಾಲೆಗಳು ಉಸಿರು ಹಿಡಿದುಕೊಂಡಿವೆ. ಇಂತಹ ಶಾಲೆಗಳ ಉಳಿವಿಗಾಗಿ ಕರ್ನಾಟಕ ಸರ್ಕಾರದ ಸಹಾಯ ಹಸ್ತ ಅತ್ಯಗತ್ಯವಾಗಿದೆ.
ಕುಂ. ವೀರಭದ್ರಪ್ಪ ಕನ್ನಡದ ಸಾಹಿತ್ಯ ಲೋಕದ ಹೆಸರಾಂತ ಬರಹಗಾರರು. ಹಲವು ಪುಸ್ತಕಗಳ ಮೂಲಕ ಕನ್ನಡಿಗರ ಮನಸ್ಸನ್ನು ವೀರಭದ್ರಪ್ಪ ಗೆದ್ದಿದ್ದಾರೆ. ಕಾದಂಬರಿಗಳ ಮೂಲಕ ನೆಲೆ ನಿಂತಿದ್ದಾರೆ. ರಾಯಲಸೀಮೆಯ ಕೆಂಪು ನೆಲದ ಇತಿಹಾಸವನ್ನು, ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಠೊಣ್ಣಿ ಹಾಗೂ ಡೋಮನ ಮೂಲಕ ಹುಲುಲಿ ಹಳ್ಳದ, ಆಂಧ್ರದ ಕರ್ನೂಲಿನ ಬದುಕನ್ನು ತೆರೆದಿಟ್ಟಿದ್ದಾರೆ. ಕುಂ ವೀರಭದ್ರಪ್ಪ ಕರ್ಮಭೂಮಿ ಆಂದ್ರಪ್ರದೇಶ. ರಾಯಲಸೀಮೆಯಲ್ಲಿನ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಾಗಿ ಕನ್ನಡದ ಉಸಿರನ್ನು ಜೀವಂತವಾಗಿ ಇರಿಸಿದವರು.
ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಅಧ್ಯಾಪಕರಾಗಿ ನೇಮಕವಾದವರು ವೀರಭದ್ರಪ್ಪನವರು. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ವಂದವಾಗಿಲಿಯಲ್ಲಿ 11 ವರ್ಷ, ಗೂಳ್ಯಂನಲ್ಲಿ 14 ವರ್ಷ ಹಾಗೂ ಅನಂತಪುರ ಜಿಲ್ಲೆಯ ಹಿರೇಹಾಳು ಗ್ರಾಮದಲ್ಲಿ 11 ವರ್ಷ ಸೇರಿ 36 ವರ್ಷಗಳ ಕಾಲ ತೆಲುಗರ ನಾಡಿನಲ್ಲಿ ಕನ್ನಡ ಬೋಧನೆಯ ಕೆಲಸವನ್ನು ಮಾಡಿದವರು ಕುಂ. ವೀರಭದ್ರಪ್ಪನವರು. ತೆಲುಗರ ನಾಡಿನಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ, ಪ್ರತಿಭಟನೆಗಳನ್ನು ಕೈಗೊಂಡವರು. ಮನೆ ಮನೆಗಳಿಗೆ ತೆರಳಿ, ಕನ್ನಡಿಗರ ಬಳಿ ಸಹಾಯ ಯಾಚಿಸಿ ಗೂಳ್ಯಂನಲ್ಲಿ ಪ್ರೌೌಢಶಾಲೆ ನಿರ್ಮಾಣ ಮಾಡಿದವರು.
ವೀರಭದ್ರಪ್ಪನವರೇ ಹೇಳುವಂತೆ ಆಂಧ್ರಪ್ರದೇಶದ ಕನ್ನಡ ಶಾಲೆಗ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅವರು ಅಧ್ಯಾಪಕರಾಗಿ ಕರ್ನೂಲಿನ ವಂದವಾಗಿಲಿಯಲ್ಲಿ ವೃತ್ತಿ ಆರಂಭಿಸಿದಾಗ ಇದ್ದ ವಿದ್ಯಾರ್ಥಿಗಳು 11. ತದನಂತರದಲ್ಲಿ ಅವರು 300ಕ್ಕೂ ಅಧಿಕ ಕನ್ನಡ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ, ಅವರ ಬದುಕನ್ನು ರೂಪಿಸಿಕೊಟ್ಟಿದ್ದಾರೆ. ಗೂಳ್ಯಂನಲ್ಲಿ ಕುಂ.ವಿ ಅವರು ತಮ್ಮದೇ ಸಮಾನಮನಸ್ಕ ಮೂವರು ಶಿಕ್ಷಕರ ಜತೆಗೂಡಿ ಕನ್ನಡ ಪ್ರೇಮಿಗಳು, ಕನ್ನಡ ಭಾಷಿಕರ ಜತೆಗೂಡಿ ಪ್ರೌಢಶಾಲೆ ಕಟ್ಟಿದ್ದಾರೆ. ಈ ಪ್ರೌಢಶಾಲೆ ಆರಂಭದ 7-8 ವರ್ಷ ಸ್ವಲ್ಪ ಶ್ರಮವನ್ನು ಬೇಡಿದರೂ, ಇದೀಗ ಬಹಳ ಚನ್ನಾಗಿ ನಡೆಯುತ್ತಿದೆ.
ಆಂದ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಭಾಷಾವಾರು ಪ್ರಾಾಂತ್ಯಗಳ ವಿಂಗಡಣೆಗೂ ಮೊದಲು ಬಳ್ಳಾರಿ ಜಿಲ್ಲೆಯದೇ ಭಾಗವಾಗಿದ್ದ ಅಪ್ಪಟ ಕನ್ನಡಿಗ ಪ್ರದೇಶಗಳೆಲ್ಲ ಇದೀಗ ಆಂಧ್ರದಲ್ಲಿ ಸೇರಿ ಹೋಗಿದೆ. ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿ 300-400ರಷ್ಟಿದ್ದ ಕನ್ನಡ ಶಾಲೆಗಳು ಇದೀಗ 80-90ಕ್ಕೆ ಇಳಿದಿದೆ. ಆಂಧ್ರದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಬಹಳ ಇಳಿಕೆಯಾಗಿದೆ. ಇಳಿಯುತ್ತಲೇ ಇದೆ. ನಾನು ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಶಿಕ್ಷಕನಾಗಿ ನೇಮಕವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಆ ರಾಜ್ಯ ಸರ್ಕಾರ ಕನ್ನಡ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಸಾವಿರಾರು ಶಿಕ್ಷಕರ ನೇಮಕ ಆಗಬೇಕಿದೆ ಎಂದು ವೀರಭದ್ರಪ್ಪನವರು ಆಂದ್ರದ ಶಾಲೆಗಳ ಹಾಗೂ ಅಲ್ಲಿನ ಸರ್ಕಾರಗಳ ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ.
ಭಾಷಾವಾರು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಭಾಷಾವಾರು ಸಮಿತಿಯನ್ನೇನೋ ರಚನೆ ಮಾಡಲಾಗಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಯಾವ ಪ್ರದೇಶದಲ್ಲಿ ಯಾವ ಭಾಷೆಯ ಜನರು ಶೇ.60ಕ್ಕಿಿಂತ ಅಧಿಕವಾಗಿದ್ದಾರೋ, ಅಂತಹ ಸ್ಥಳಗಳಲ್ಲಿ ಆಯಾಯಾ ಭಾಷೆಗಳಲ್ಲಿಯೇ ಸುತ್ತೋಲೆ ಹೊರಡಿಸಬೇಕೆಂಬ ನಿಯಮವಿದೆ. ಆದರೆ ಆಂಧ್ರದ ಕನ್ನಡ ಬಹುಸಂಖ್ಯಾತ ಪ್ರದೇಶದಲ್ಲಿ ಇದು ಸಮರ್ಪಕವಾಗಿ ಅನುಷ್ಠಾಾನಗೊಳ್ಳುತ್ತಿಲ್ಲ. ಆಂಧ್ರದ ಕನ್ನಡ ಶಾಲೆಗಳಲ್ಲಿ ಬೋಧನೆ ಮಾಡಲು ಉತ್ಸಾಹಿಗಳಿದ್ದಾರೆ. ಆದರೆ ಕೆಲಸ ಮಾಡಲು ಬೇಕಾದ ಪೀಠೋಕರಣಗಳು, ಪಾಠೋಪಕರಣಗಳನ್ನು ಸರ್ಕಾರ ನೀಡುತ್ತಿಲ್ಲ. ಇತ್ತೀಚೆಗೆ ಆಂಧ್ರ ಸರ್ಕಾರ ಪುಸ್ತಕಗಳನ್ನೇನೋ ನೀಡುತ್ತಿದೆ. ಆದರೆ ಶಾಲೆಗೆ ಕಟ್ಟಡಗಳೇ ಸಮರ್ಪಕವಾಗಿಲ್ಲ ಎಂದು ವೀರಭದ್ರಪ್ಪ ಅಲ್ಲಿನ ಶಾಲೆಗಳ ದುಸ್ಥಿತಿಯನ್ನು ತೆರೆದಿಟ್ಟರು.
ಎರಡು ದೊಡ್ಡ ಕೋಣಗಳ ಕಾದಾಟದ ನಡುವೆ ಸಣ್ಣ ಗಿಡ ಬಲಿ ಆಯ್ತು ಎಂಬ ಅವಸ್ಥೆ ಗಡಿನಾಡ ಕನ್ನಡಿಗರದ್ದಾಗಿದೆ. ಎರಡು ರಾಜ್ಯಗಳ ಗುದ್ದಾಟದ ನಡುವೆ ಮುಗ್ಧ ಮಕ್ಕಳು ಒದ್ದಾಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ಹೊರ ರಾಜ್ಯಗಳ ಭಾಷಿಕರಿಗೆ ಕನ್ನಡ ನಾಡಿನಲ್ಲಿ ಎಲ್ಲ ಸೌಲಭ್ಯ ನೀಡಲಾಗುತ್ತದೆ. ಆದರೆ ಗಡಿನಾಡ ಶಾಲೆಗಳಲ್ಲಿ ಓದುತ್ತಿರುವವರಿಗೆ ಆ ರಾಜ್ಯದವರು ಹಾಗಿರಲಿ, ಕರ್ನಾಟಕದವರು ಸಹಾಯ ಮಾಡುತ್ತಿಲ್ಲ. ಆ ಶಾಲೆಗಳ ಮಕ್ಕಳು ಉಚಿತ ಪುಸ್ತಕ, ಬ್ಯಾಗ ಪಡೆದು ಸಂಭ್ರಮ ಪಟ್ಟುಕೊಂಡರೆ, ಕನ್ನಡ ಶಾಲೆಯ ಮಕ್ಕಳ ಯಾವುದೇ ಸೌಲಭ್ಯ ಇಲ್ಲದಂತೆ ಬೇಸರ ಪಟ್ಟುಕೊಳ್ಳಬೇಕಾಗುತ್ತದೆ. ಕರ್ನಾಟಕ ಸರ್ಕಾರ 1-2 ಕೋಟಿ ಖರ್ಚು ಮಾಡಿದರೆ ಈ ಮಕ್ಕಳ ಮುಖದಲ್ಲಿ ಸಂಭ್ರಮ ಮೂಡಿಸಬಹುದು ಎಂದು ಹೇಳುವ ವೀರಭದ್ರಪ್ಪನವರು, ಆಂಧ್ರದಲ್ಲಿ ಓದಿದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕದ ಶಾಲೆಗಳಿಗೆ ಬಂದರೆ ಅಧಿಕಾರಿಗಳು ನೀಡುವ ಕಿರುಕುಳ, ಹೆಚ್ಚಿನ ಡೊನೇಶನ್ ಹಾವಳಿಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ಪರಸ್ಪರ ಅರ್ಥೈಸಿಕೊಳ್ಳುವಿಕೆಯಿಂದ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಕರ್ನಾಟಕದಲ್ಲಿನ ತೆಲುಗು ಭಾಷಿಕರಿಗೆ ಆಂಧ್ರದ ಸರ್ಕಾರ ಹಾಗೂ ಆಂಧ್ರದಲ್ಲಿನ ಕನ್ನಡ ಭಾಷಿಕರಿಗೆ ಕರ್ನಾಟಕ ಸರ್ಕಾರ ಸಮರ್ಪಕ ಸವಲತ್ತು ಒದಗಿಸಿದರೆ ಹಲವು ಸಮಸ್ಯೆ ಪರಿಹಾರವಾಗಬಲ್ಲದು. ಮಾನವೀಯ ನೆಲೆಯಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡಿದಾಗ ಹಲವು ಸಮಸ್ಯೆಗಳು ತನ್ನಿಿಂದ ತಾನೆ ಕಡಿಮೆಯಾಗುತ್ತದೆ. ಆಂಧ್ರದ ಕನ್ನಡ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಧ್ಯಯನ ಮಾಡುತ್ತೇವೆ ಎಂದು ಹೋರಾಟದ ಹಾದಿ ಹಿಡಿದ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಈ ಹಿಂದೆ ಆಂಧ್ರದ ಕನ್ನಡ ವಿದ್ಯಾಾರ್ಥಿಗಳ ಪರಿಸ್ಥಿತಿ ಅರಿಯಲು ನನ್ನನ್ನು ಏಕವ್ಯಕ್ತಿ ಸಮಿತಿಯ ಮುಖ್ಯಸ್ಥನಾಗಿ ಮಾಡಿ ಸಮೀಕ್ಷೆಗೆ ಕಳುಹಿಸಿದ್ದರು. ನಾನು ವರದಿಕೊಟ್ಟ ನಂತರ ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಉದ್ಯೋಗದಲ್ಲಿ ಶೆ.5ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆೆ ಬಂದಿತ್ತು. ಇಂತಹ ಅಂಶಗಳು ಹೆಚ್ಚಬೇಕು. ಆಂಧ್ರದಲ್ಲಿಯೇ ಇದ್ದು, ಕನ್ನಡ ಮಾಧ್ಯಮದಲ್ಲಿಯೇ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸೇರಿದಂತೆ ಹಲವು ಸವಲತ್ತುಗಳು ಹಾಗೂ ಮೀಸಲಾತಿಗಳನ್ನು ನೀಡಿದಾಗ, ಆ ರಾಜ್ಯಗಳಲ್ಲಿನ ಕನ್ನಡಿಗರ ಬದುಕು ಹಸನಾಗುತ್ತದೆ ಎನ್ನುವುದು ಕುಂ. ವೀರಭದ್ರಪ್ಪನವರು ನೀಡುವ ಸಲಹೆ. ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಾಗ ಗಡಿನಾಡಿನಲ್ಲಿ ಕನ್ನಡದ ಕಹಳೆ ಸ್ಫೂಟವಾಗಿ ಕೇಳಲು ಸಾಧ್ಯ.

No comments:

Post a Comment