Sunday, November 4, 2018

ಅವರು ರಸ್ತೆಗಳಿಗೆ ಹೆಸರಾಗಲಿಲ್ಲ, ಮನ ಮನಗಳಲ್ಲಿ ನೆಲೆ ನಿಂತರು

ನಾನು ಚಿಕ್ಕವನಾಗಿದ್ದಾಗ, ನಮ್ಮ ಅವಿಭಕ್ತ ಕುಟುಂಬದ ಮನೆಯ ಮಹಡಿಯ ಮೇಲೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕೆಲವು ನಾಯಕರ ಭಾವಚಿತ್ರಗಳು ಕಂಬಗಳಿಗೆ ತೂಗು ಹಾಕಲ್ಪಟ್ಟಿದ್ದವು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಭೋಸ್ ಹೀಗೆ ಹಲವು ನಾಯಕರುಗಳ ಚಿತ್ರಗಳು ಅಲ್ಲಿದ್ದವು. ಅಂತಹ ನಾಯಕರ ಸಾಲಿನಲ್ಲಿದ್ದ ಇನ್ನೊಂದು ಚಿತ್ರ ಸರ್ದಾರ ವಲ್ಲಭ ಭಾಯ್ ಪಟೇಲರದ್ದು.
ಆಜಾದ್, ಭಗತ್, ನೇತಾಜಿ ಮುಂತಾದ ಸ್ವಾತಂತ್ರ್ಯದ ಕಿಡಿಗಳ ಚಿತ್ರಗಳನ್ನು ನೋಡಿದಾಗಲೆಲ್ಲ ನಮಗೆ ಅವರ ಕತೆಗಳು ನೆನಪಾಗುತ್ತಿದ್ದವು. ಬಹುತೇಕ ಯುವ ಭಾವಚಿತ್ರಗಳು ಮನಸ್ಸನ್ನು ಸೂಜಿಗಲ್ಲಿನಂತೆಯೇ ಸೆಳೆಯುತ್ತಿದ್ದವು. ಆದರೆ ಈ ಸಾಲಿನಲ್ಲಿ ವಯಸ್ಸಾಗಿದ್ದ ಸರ್ದಾರ ವಲ್ಲಭ್ ಭಾಯ್ ಪಟೇಲರ ಚಿತ್ರವಿದ್ದುದು ನನ್ನ ಮನಸ್ಸಿನಲ್ಲಿ ಅಚ್ಚರಿಯನ್ನು ಮೂಡಿಸಿ, ನನ್ನ ಅಜ್ಜನ ಬಳಿ ಕೇಳಿಯೂ ಇದ್ದೆ. ಆಗ ಪಟೇಲರ ಕುರಿತು ಸುದೀರ್ಘ ವಿವರಣೆ ನೀಡಿದ್ದ ಅಜ್ಜ ಭಾರತದ ಏಕೀಕರಣದ ರೂವಾರಿಯ ಕುರಿತು ಹೆಮ್ಮೆ ಮೂಡುವಂತೆ ಮಾಡಿದ್ದರು. ಅಂದಿನಿಂದ ಪಟೇಲರ ಕುರಿತು ಕುತೂಹಲ ಇಮ್ಮಡಿಸುತ್ತಲೇ ಇದೆ. ಅಂದ ಹಾಗೇ ನಮ್ಮ ಮನೆಯ ಮಹಡಿಯ ಯಾವುದೇ ಮೂಲೆಯಲ್ಲಿಯೂ ಕೂಡ ಜವಾಹರ ಲಾಲ್ ನೆಹರೂ ಅವರ ಚಿತ್ರಗಳಿರಲಿಲ್ಲ.
ನನ್ನ ಅಜ್ಜ ಕಾಂಗ್ರೆಸ್ ನಲ್ಲಿ ನಂಬಿಕೆ ಇಟ್ಟವರಾಗಿದ್ದರು. ಬಹುಶಃ ಚಿಕ್ಕಂದಿನಿಂದಲೂ ಕಾಂಗ್ರೆಸ್ ನ ಕಾರ್ಯಕರ್ತನಾಗಿಯೋ ಅಥವಾ ಇನ್ಯಾವುದೋ ರೀತಿಯಿಂದಲೋ ಕೆಲಸ ಮಾಡಿರಬೇಕು. ಆದರೆ ಅಂತಹ ಅಜ್ಜ ಕಾಂಗ್ರೆಸ್ ಅಧಿನಾಯಕರಾದ, ಭಾರತದ ಪ್ರಧಾನ ಮಂತ್ರಿಗಳಾದ, ಮಕ್ಕಳ ಪಾಲಿಗೆ ಪ್ರೀತಿಯ ಚಾಚಾ ಆಗಿ ಹೊರಹೊಮ್ಮಿದ ಪಂಡಿತ ಜವಾಹರ ಲಾಲ್ ನೆಹರೂ ಅವರ ಪೋಟೋವನ್ನು ಹಾಕಿರಲಿಲ್ಲ. ಉಳಿದೆಲ್ಲ ನಾಯಕರ ಚಿತ್ರಗಳನ್ನು ಹಾಕಿದ ಕಾಂಗ್ರೆಸ್ಸಿಗ ಅಜ್ಜ ನೆಹರೂ ಪೋಟೋವನ್ನು ಹಾಕದೇ ಬಿಟ್ಟಿದ್ಯಾಕೆ ಎನ್ನುವ ಅಂಶ ಆಗ ಕಾಡದಿದ್ದರೂ, ಇತ್ತೀಚೆಗೆ ಆಲೋಚನೆಗೆ ಹಚ್ಚಿತ್ತು. ಕ್ರಾಂತಿಕಾರಿಗಳೆನ್ನಿಸಿಕೊಂಡು, ಮಂದಗಾಮಿಗಳ ಮಾರ್ಗಕ್ಕಿಂತ ಹೊರತಾಗಿ ದೇಶವನ್ನು ಮುನ್ನಡೆಸಲು ಯತ್ನಿಸಿ, ತಮ್ಮದೇ ತೀವ್ರಗಾಮಿ ಆಲೋಚನೆ ಹಾಗೂ ಮಾರ್ಗಗಳ ಮೂಲಕ ಆಂಗ್ಲರ ದಾಸ್ಯ ಕಿತ್ತೊಗೆಯಲು ಮುಂದಾದ ಭಾರತದ ಕುದಿಬಿಂದುಗಳ ಪೋಟೋಗಳು ಸ್ಫೂರ್ತಿಯ ಸೆಲೆಯಾಗಿ ನಮ್ಮ ಮನೆಯ ಮಹಡಿಯ ಮೇಲೆ ನೆಲೆ ನಿಂತಿದ್ದವು. ಅವುಗಳ ಜತೆಯಲ್ಲಿ ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸಲು ಶ್ರಮಪಟ್ಟು, ಸಾಮ-ಧಾನ-ಬೇಧ ಹಾಗೂ ದಂಡ ಮಾರ್ಗದಿಂದ ಏಕ ಭಾರತವನ್ನು ಸೃಷ್ಟಿ ಮಾಡಿದ ಸರ್ದಾರರ ಪೋಟೋ ಕೂಡ ಗಂಭೀರವಾಗಿ ನೆಲೆನಿಂತಿತ್ತು. ಮುಖ ಸುಕ್ಕುಗಟ್ಟಿದ್ದರೂ ಅವರ ಕಣ್ಣುಗಳಲ್ಲಿನ ಕಾಂತಿ, ತೇಜಸ್ಸು, ದೃಢತೆ ಎಂತವರನ್ನೂ ಕೂಡ ಸೆಳೆಯುವಂತಿತ್ತು. ನನ್ನಂತಹ ಹತ್ತಾರು ಮಕ್ಕಳು ನಮ್ಮ ಮನೆಯ ಮಹಡಿಯನ್ನೇರಿದಾಗಲೆಲ್ಲ ಕುತೂಹಲದಿಂದ ಈ ಎಲ್ಲ ಪೋಟೋಗಳ ಕುರಿತು ಕೇಳಿದಾಗಲೆಲ್ಲ ಅಜ್ಜ ಅಷ್ಟೇ ಸಹನೆಯಿಂದ ವಿವರಿಸುತ್ತಿದ್ದುದು ಕಣ್ಣ ಮುಂದಿದೆ.
ನೆಹರೂ ಹೊರತು ಪಡಿಸಿ ಉಳಿದ ನಾಯಕರಿಗೆ ನನ್ನ ಅಜ್ಜನಂತಹ ಅದೆಷ್ಟೋ ದೇಶವಾಸಿಗಳು ವಿಶೇಷ ಸ್ಥಾನವನ್ನೇ ಕೊಟ್ಟುಬಿಟ್ಟಿದ್ದರು. ನೆಹರೂ ದೇಶವಾಸಿಗಳ ಮನಸ್ಸಿನಲ್ಲಿ ನೆಲೆ ನಿಲ್ಲುವುದು ಹಾಗಿರಲಿ, ಕೋಣೆಯ ಮೂಲೆಯೊಂದರಲ್ಲಿ ಪೋಟೋ ರೂಪದಲ್ಲಿ ನಿಲ್ಲುವುದಕ್ಕೂ ನಾಲಾಯಕ್ ಎನ್ನಿಸುವಂತಹ ಹಂತ ತಲುಪಿದ್ದರು. ನೆಹರೂ ಅಪ್ಪಟ ದೇಶಭಕ್ತ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ಯಾವ ಭಾವನೆಯನ್ನು ಹೊಂದಿದ್ದರು ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆಯಷ್ಟೇ.

--------

ಭಾರತದ ಸ್ವಾತಂತ್ರ್ಯದ ನಂತರ ಹಲವು ಭಾರತೀಯ ಮನಸ್ಸುಗಳು ಸರ್ದಾರ ವಲ್ಲಭ ಭಾಯ್ ಪಟೇಲರೇ ಮುಂದಿನ ಪ್ರಧಾನಿಯಾಗಲಿ ಎಂಬ ಭಾವನೆಯನ್ನು ಹೊಂದಿತ್ತು. ಆದರೆ ಮಹಾತ್ಮಾಗಾಂಧಿಯವರ ಹಠದಿಂದಾಗಿ ಅವರ ಪ್ರೀತಿಪಾತ್ರ ನೆಹರೂ ಪ್ರಧಾನಿಯಾದ ವಿವರಗಳೆಲ್ಲ ಪದೇ ಪದೆ ಇತಿಹಾಸದ ಪುಟಗಳಲ್ಲಿ ಇಣುಕುತ್ತವೆ. ಅದರ ಜತೆ ಜತೆಯಲ್ಲಿಯೇ ಸರ್ದಾರ್ ಪಟೇಲರು ಗೃಹ ಸಚಿವರಾದರು, ದೇಶದ ತುಂಬೆಲ್ಲ ಚಿಕ್ಕ ಚಿಕ್ಕ ರೂಪದಲ್ಲಿ ಹರಿದು ಹಂಚಿಕೊಂಡು, ತಮ್ಮದೇ ಸ್ವತಂತ್ರ ಅಸ್ತಿತ್ವ ಎಂದು ಹೇಳಲು ಹವಣಿಸುತ್ತಿದ್ದ ರಾಜ್ಯಗಳನ್ನು, ಸಂಸ್ಥಾನಗಳನ್ನೆಲ್ಲ ಒಗ್ಗೂಡಿಸಿದರು ಎಂಬುದನ್ನೆಲ್ಲ ಓದಿ ತಿಳಿದುಕೊಂಡಿದ್ದೇವೆ.
ಸ್ವಾತಂತ್ರ ಪೂರ್ವದಲ್ಲಿ ಆಜಾದ್ ಇರಲಿ, ಭಗತ್ ಸಿಂಗ್ ಇರಲಿ ಅಥವಾ ನೇತಾಜಿ ಅವರೇ ಇರಲಿ, ಈ ಧೀಮಂತ ನಾಯಕರುಗಳು ಮಾಡಿದ ಮಹಾನ್ ಕಾರ್ಯದ ಹಾಗೆಯೇ ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೈಗೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ. ಬ್ರಿಟೀಷರ ಎದೆ ನಡುಗಿಸಲು ಕ್ರಾಂತಿ ಮಾರ್ಗ ಹಿಡಿದ ಆಜಾದ್, ಭಗತ್, ನೇತಾಜಿಯವರ ಮಾರ್ಗದಷ್ಟೇ, ದೇಶದಲ್ಲೇ ಇರುವ ಕಿರು ಸಂಸ್ಥಾನಗಳನ್ನು ಮನವೊಲಿಸಿ ಬೃಹದ್ ಭಾರತ ಸೃಷ್ಟಿ ಮಾಡಿದ ಸರ್ದಾರರ ಕಾರ್ಯವೂ ಮಹತ್ವದ್ದೆನ್ನಿಸುತ್ತದೆ.
ಸರ್ದಾರ್ ವಲ್ಲಭ್ ಭಾಯ್ ಪಟೇಲ್. ಭಾರತ ಕಂಡ ಮಹಾನ್ ನಾಯಕರಲ್ಲೊಬ್ಬರು. ಭಾರತದ ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡವರು. ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ, ನಿಜವಾದ ಅರ್ಥದಲ್ಲಿ ಒಬ್ಬ ಪ್ರಧಾನಿ ಮಾಡುವ ಕಾರ್ಯಗಳಿಗಿಂತ ಮಹತ್ತರ ಕಾರ್ಯವನ್ನು ನಿರ್ವಹಿಸಿದವರು. ಅರಾಜಕತೆ ಸೃಷ್ಟಿಯಾಗಿ, ಒಂದು ಭಾರತದೊಳಕ್ಕೆ ನೂರಾರು ಕಿರು ದೇಶಗಳು ಹುಟ್ಟುವ ಸಾಧ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ಚಿವುಟಿ ಹಾಕಿ ಏಕತೆಯನ್ನು ಸೃಷ್ಟಿ ಮಾಡಿದವರು.
ವಲ್ಲಭ್ ಭಾಯ್ ಪಟೇಲ್ ಮಾಡಿದ್ದು ಒಂದೆರಡಲ್ಲ ಬಿಡಿ. ಮೈಸೂರು ಸಂಸ್ಥಾನವನ್ನು ಮನವೊಲಿಸಿ ಭಾರತ ಒಕ್ಕೂಟ ಸೇರುವಂತೆ ಮಾಡಿದರು. ಜುನಾಗಡದ ನವಾಬನನ್ನು ಓಡಿಸಿ, ಆ ಪ್ರದೇಶವನ್ನು ಭಾರತದ ಪಾಲಾಗುವಂತೆ ಮಾಡಿದರು, ಹೈದರಾಬಾದ್ ನಿಜಾಮ ಉದ್ಧಟತನ ತೋರಿದಾಗ ಆತನ ಕಿವಿ ಹಿಂಡಿ, ಯುದ್ಧ ಸಾರಿ ಹೆಡೆಮುರಿ ಕಟ್ಟಿ ಸೋತು ಶರಣಾಗುವಂತೆ ಮಾಡಿದ್ದು ಸರ್ದಾರ್ ವಲ್ಲಭ ಭಾಯ್ ಪಟೇಲ್.
ನನ್ನ ಭಾರತ ಏಕ ಭಾರತವಾಗಿರಬೇಕು. ಶ್ರೇಷ್ಟ ಭಾರತವಾಗಿರಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದ ವಲ್ಲಭ್ ಭಾಯ್ ಪಟೇಲರನ್ನು ಜನರೇ ಪ್ರೀತಿಯಿಂದ ಸರ್ದಾರ ಎಂದು ಕರೆದರು. ಉಕ್ಕಿನ ಮನುಷ್ಯ ಎಂಬ ಬಿರುದನ್ನು ನೀಡಿದರು. ಆದರೆ ಇಂತಹ ಧೀಮಂತ, ನಿಸ್ವಾರ್ಥ ನಾಯಕನನ್ನೂ ತೆರೆಯ ಮರೆಗೆ ಸರಿಸುವ ಯತ್ನ ಕೈಗೊಂಡಿದ್ದು ನೆಹರೂ ಪಟಾಲಂ. ದಿನದಿಂದ ದಿನಕ್ಕೆ ದೇಶದಲ್ಲೆಲ್ಲ ದೊಡ್ಡ ಪ್ರಭೆಯಾಗುತ್ತ ಸಾಗುತ್ತಿದ್ದ ಸರ್ದಾರ ವಲ್ಲಭ ಭಾಯ್ ಪಟೇಲರನ್ನು ತೆರೆ ಮರೆಗೆ ಸರಿಸುವ ಯತ್ನವನ್ನು ಕಾಂಗ್ರೆಸ್ಸು ಕೈಗೊಂಡಿದ್ದಂತೂ ಸುಳ್ಳಲ್ಲ ಬಿಡಿ. ಎಲ್ಲಿಯೂ ಅವರ ಹೆಸಸರಿರಬಾರದು ಎಂದುಕೊಂಡ ಕಾಂಗ್ರೆಸ್ ಪಟೇಲರನ್ನು ಕಡೆಗಣಿಸಿಬಿಟ್ಟಿತು.
ಸರ್ದಾರ್ ಪಟೇಲರು ಯಾವುದೇ ಬೀದಿಗೆ ಹೆಸರಾಗಲಿಲ್ಲ. ವಿಮಾನ ನಿಲ್ದಾಣಗಳಿಗೆ, ಕಾಲೇಜುಗಳಿಗೆ, ವಿಶ್ವವಿದ್ಯಾಲಯಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳಿಗೆ ತಮ್ಮ ಹೆಸರನ್ನಿಡಿ ಎಂದು ಹೇಳಲಿಲ್ಲ. ಕಂಡ ಕಂಡಲ್ಲಿ ಪ್ರತಿಮೆಗಳಾಗಲಿಲ್ಲ. ವೃತ್ತಗಳಿಗೆ ಹೆಸರಾಗಲಿಲ್ಲ. ಜನರ ಮನಸ್ಸಿನ ಮೇಲೆ ತಮ್ಮ ಹೆಸರನ್ನುಒತ್ತಡದ ರೂಪದಲ್ಲಿ ನೆಲೆ ನಿಲ್ಲುವಂತೆ ಮಾಡಲಿಲ್ಲ. ಮಕ್ಕಳನ್ನು ಕರೆದು ಚಾಚಾ ಎಂದು ಹೇಳಿಸಲಿಲ್ಲ. ತಮ್ಮದೇ ಜನ್ಮದಿನ, ಪುಣ್ಯತಿಥಿಗಳಂದು ದೇಶಕ್ಕೆ ರಜಾ ನೀಡಿ, ಉತ್ಸವದ ರೂಪದಲ್ಲಿ ಆಚರಣೆ ಮಾಡಿ ಎನ್ನಲಿಲ್ಲ. ದೇಶದ ಸಾರ್ವಭೌಮತ್ವ, ಐಕ್ಯತೆ ವಿಷಯ ಬಂದಾಗ ರಾಜಿ ಮಾಡಿಕೊಳ್ಳಲಿಲ್ಲ. ದೃಢ ನಿರ್ಧಾರ ತಳೆಯಲು ಹಿಂದೆ ಮುಮದೆ ಯೋಚಿಸಲಿಲ್ಲ. ತನ್ನಿಂದ ತಾನೇ ಪಟೇಲರು ಜನರ ಮನದಲ್ಲಿ ಸದಾ ನೆಲೆ ನಿಂತರು. ಭಾರತದ ಜನರು ಪಟೇಲರನ್ನು ಗುಜರಾತಿ ಎಂದುಕೊಳ್ಳಲಿಲ್ಲ. ಉತ್ತರ ಭಾರತೀಯ ಎಂದೂ ಕರೆಯಲಿಲ್ಲ. ಬದಲಾಗಿ ಅವರು ತಮ್ಮದೇ ಮನೆಯವರು ಎಂದುಕೊಂಡರು. ಮನಸ್ಸಿನಲ್ಲಿ ಉಕ್ಕಿನ ಮನುಷ್ಯನಿಗೆ ಸ್ಥಾನ ಕೊಟ್ಟರು.
ಭಾರತದ್ದೇ ಕೆಲವು ನಾಯಕರು ತಮ್ಮದೇ ಹೆಸರನ್ನು ಹೆಚ್ಚು ಹೆಚ್ಚು ಮೆರೆಸಿಕೊಳ್ಳುವ ಯತ್ನ ನಡೆಸಿದ್ದಾರೆ. ಹೊಟೆಲುಗಳಿಗೆ, ಕ್ಯಾಂಟೀನುಗಳಿಗೆ, ವಿದ್ಯಾರ್ಥಿಗಳ ಸಹಾಯ ಧನಕ್ಕೆ, ಎದೆ ಸೀಳಿದರೆ ಕ್ರೀಡೆಯ ಕುರಿತು ಲವ ಲೇಶವೂ ಗೊತ್ತಿಲ್ಲದಿದ್ದರೂ, ಕ್ರೀಡಾಲೋಕದ ಬಹುಮಾನಗಳಿಗೆ ಅಷ್ಟೇ ಏಕೆ ವಿದ್ಯುತ್ ಸಂಪರ್ಕ ಯೋಜನೆಗಳಿಗೆ, ಶೌಚಾಲಯ ಯೋಜನೆಗಳಿಗೂ ತಮ್ಮ ಹೆಸರುಗಳನ್ನು ಇರಿಸಿಕೊಂಡ ನಾಯಕರಿದ್ದಾರೆ. ಕೆಲಸ ನಾಸ್ತಿ, ಹೆಸರು ಜಾಸ್ತಿ ಎಂದು ಮೆರೆದಾಡಿದವರ ನಡುವೆ ಸರ್ದಾರ ಪಟೇಲರು ವಿಭಿನ್ನವಾಗಿ ನಿಲ್ಲುತ್ತಾರೆ. ಜನನಾಯಕರಾಗೆ ಮೆರೆದಾಡುತ್ತಾರೆ.
ಕೊನೆಗೂ ಸರ್ದಾರ್ ವಲ್ಲಭ ಭಾಯ್ ಪಟೇಲರದ್ದೊಂದು ಭವ್ಯ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಪಟೇಲರು ಜನಿಸಿದ ನಾಡಿನಲ್ಲೇ, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎನ್ನುವ ಖ್ಯಾತಿಯೊಂದಿಗೆ ಜಗತ್ತಿನ ಎದುರು ಅನಾವರಣಗೊಂಡಿದೆ. ಇಂತಹ ಪ್ರತಿಮೆ ನಿರ್ಮಾಣದ ಸಂದರ್ಭದಲ್ಲಿಯೂ ಕಾಂಗ್ರೆಸ್ಸು ಮತ್ತೊಮ್ಮೆ ಪಟೇಲರಿಗೆ ಅವಮಾನ ಮಾಡುವ ಯತ್ನವನ್ನೇ ನಡೆಸಿತು. ಅವರ ಪ್ರತಿಮೆ ನಿರ್ಮಾಣ ಅನಗತ್ಯ ಎಂದು ಹುಯ್ಯಲಿಟ್ಟಿತು. ಪಟೇಲರ ಪ್ರತಿಮೆ ಪೋಟೋ ಜತೆ ಯಾವುದೋ ದೇಶದ ಆಹಾರಕ್ಕಾಗಿ ಪರಿತಪಿಸುತ್ತಿರುವ ಮಕ್ಕಳ ಪೋಟೋವನ್ನು ಅಂಟಿಸಿ, ತಮ್ಮೊಳಗಿನ ವಿಕೃತಿಯನ್ನು ಮೆರೆಯುವ ಯತ್ನ ಕೈಗೊಂಡಿತು. ಆದರೆ ಜನಸಾಮಾನ್ಯರು ತಲೆ ಕೆಡಿಸಿಕೊಳ್ಳಲಿಲ್ಲ ಬಿಡಿ.
ಏಕತೆಯ ಪ್ರತಿಮೆ ಜತೆ ಜತೆಯಲ್ಲಿ ಮತ್ತೊಮ್ಮೆ ಸರ್ದಾರ ವಲ್ಲಭ ಭಾಯ್ ಪಟೇಲರನ್ನು ಭಾರತೀಯರು ನೆನಪು ಮಾಡಿಕೊಂಡು, ಮನದಲ್ಲಿ ಮೌನವಾಗಿ ಪೂಜಿಸುವ ಮೂಲಕ ಮಹಾ ನಾಯಕನಿಗೆ ಗೌರವ ಸಮರ್ಪಣೆ ಮಾಡಿದ್ದು ವಿಶೇಷ.

2 comments:

  1. ಆದರೆ ವಿಶ್ವವೇ ಬೆರಗಾಗಿ ಈ ನಾಯಕನ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿದ್ದು ನಮ್ಮ ನೆಚ್ಚಿನ ಪ್ರಧಾನಿ
    ಮೋದಿಜಿಯವರು.

    ReplyDelete