Tuesday, September 18, 2018

ಮನುಷ್ಯರನ್ನೆ ನಾಯಿಗಳಂತೆ ಕಾಣುವ ಮುಖ್ಯಮಂತ್ರಿಗಳಲ್ಲಿ ಸೂಕ್ಷ್ಮ ಸಂವೇದನೆಗೆ ಜಾಗವಿದೆಯೇ?

ಅವು ಎಷ್ಟು ಅನ್ಯೋನ್ಯ ಎಂದರೆ, ಗಂಡು ಹಾಗೂ ಹೆಣ್ಣು ಹಕ್ಕಿ ಎರಡೂ ಕೂಡಿ ಸರಿಯಾದ ಪೊಟರೆ ಒಂದನ್ನು ಹುಡುಕಿ ಗೂಡು ಕಟ್ಟುತ್ತವೆ. ಆ ಗೂಡಿನಲ್ಲಿ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವಿಗೆ ಕೂತರೆ, ಗಂಡು ಹಕ್ಕಿ ಆ ಪೊಟರೆಯ ಸುತ್ತ ರಕ್ಷಣಾ ಕವಚದ ರೂಪದಲ್ಲಿ ಮಣ್ಣಿನ ಪ್ಲಾಸ್ಟರ್ ಮಾಡಲು ಮುಂದಾಗುತ್ತದೆ. ತನ್ನ ಕೊಕ್ಕಿನ ಮೂಲಕ ಹಸಿ ಮಣ್ಣನ್ನು ಕಿತ್ತು ತಂದು ಅದನ್ನು ಪೊರೆಯ ಸುತ್ತ ನಿಧಾನವಾಗಿ ಮೆತ್ತುತ್ತದೆ. ಪೊಟರೆಯೊಳಗೆ ಹೆಣ್ಣು ಹಕ್ಕಿ ಇರುವಂತೆಯೇ ಮಣ್ಣಿನ ಪ್ಲಾಸ್ಟರ್ ಮಾಡುವ ಗಂಡು ಹಕ್ಕಿ, ಕೊನೆಗೆ ಆಹಾರ ತರಲು ಮುಂದಾಗುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ನೂರಾರು ಕಿಲೋಮೀಟರ್ ಹಾರಾಟ ಮಾಡಿ, ಅಲೆದಾಟ ನಡೆಸಿ ಆಹಾರ ಅರಸಿ ಬರುವ ಗಂಡು ಹಂಕ್ಕಿ, ಆ ಪ್ಲಾಸ್ಟರ್ ಮಧ್ಯದಲ್ಲಿರುವ ಚಿಕ್ಕದೊಂದು ಕಿಂಡಿಯ ಮೂಲಕ ಹೆಣ್ಣು ಹಕ್ಕಿಗೆ ಆಹಾರವನ್ನು ತಂದುಕೊಡುತ್ತದೆ.
ಹೀಗೆ ಒಂದೆರಡು ದಿನವಲ್ಲ, ತಿಂಗಳುಗಳ ಕಾಲ ಮಾಡುತ್ತದೆ. ಯಾವಾಗ ಮೊಟ್ಟೆ ಒಡೆದು ಮರಿಗಳು ಬೆಳೆದು ರೆಕ್ಕೆ ಬಲಿಯುತ್ತದೆಯೋ ಆಗ ಗಂಡು ಹಕ್ಕಿಯೇ ಪ್ಲಾಸ್ಟರ್ ಒಡೆದು ಗೃಹಬಂಧನದಿಂದ ಬಿಡಿಸುತ್ತದೆ. ಒಂದು ವೇಳೆ ಆಹಾರ ತರಲಿಕ್ಕೆ ಹೋದ ಗಂಡು ಹಕ್ಕಿ ಬೇಟೆಗಾರರಿಗೋ, ಇತರ ಪ್ರಾಣಿ ಪಕ್ಷಿಗಳ ದಾಳಿಗೋ ಬಲಿಯಾದರೆ, ಪೊಟರೆಯೊಳಕ್ಕೆ ಬಂಧಿಯಾದ ಹಕ್ಕಿ ಅಲ್ಲೇ ಉಪವಾಸ ಬಿದ್ದು ಸಾಯುತ್ತದೆ. ಇಂತಹದ್ದೊಂದು ವಿಶಿಷ್ಟ ಜೀವನ ಕ್ರಮವನ್ನು ಲಕ್ಷಾಂತರ ವರ್ಷಗಳಿಂದ ಬೆಳೆಸಿಕೊಂಡು ಬಂದು, ಮನುಷ್ಯರಿಗೂ ಆದರ್ಶಪ್ರಾಯವಾಗಿರುವ ಹಕ್ಕಿಯೇ ಹಾರ್ನಬಿಲ್.
ಮಂಗಟ್ಟೆ ಎಂದು ಕನ್ನಡದಲ್ಲಿ ಕರೆಸಿಕೊಳ್ಳುವ ಹಾರ್ನಬಿಲ್ ಗಳು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳು. ಭಾರತದಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮೀಝೋರಾಂ, ಮಣಿಪುರಗಳನ್ನು ಬಿಟ್ಟರೆ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವಂತಹ ಅಪರೂಪದ ಪಕ್ಷಿ. ಕರ್ನಾಟಕದ ದಾಂಡೇಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಇರುವ ವಿಶಿಷ್ಟ ಪಕ್ಷಿ.
ಗ್ರೇಟ್ ಮಲಬಾರ್ ಗ್ರೇ ಹಾರ್ನಬಿಲ್ ಎಂದು ಆಂಗ್ಲ ಭಾಷೆಯಲ್ಲಿ ಕರೆಸಿಕೊಳ್ಳುವ ಮಂಗಟ್ಟೆಗಳು ಅವುಗಳ ಆಕರ್ಷಕ ಬಣ್ಣಗಳು, ಹಾಗೂ ಆಕಾರದಿಂದ ಎಲ್ಲರನ್ನೂ ಸೆಳೆಯುತ್ತವೆ. ಈ ಹಾರ್ನಬಿಲ್ ಗಳು ಅವುಗಳ ವಿಶಿಷ್ಟ ರಚನೆಯ ಕೊಕ್ಕುಗಳಿಂದಲೇ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಆದರೆ ಹಾರ್ನಬಿಲ್ ಗಳ ಆಕಾರ, ಅದರ ಆಕರ್ಷಕ ಪುಕ್ಕಗಳು, ಕೊಕ್ಕುಗಳ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬೇಟೆಗಾರರಿಗೆ ಬಲಿಯಾಗುತ್ತಿವೆ.
ಒಮ್ಮೆಲೆ ಮೂರು-ನಾಲ್ಕು ಮೊಟ್ಟೆಗಳನ್ನು ಇಡುವ ಹಾರ್ನಬಿಲ್ ಗಳು ಬದುಕಿಗಾಗಿ ದಿನಂಪ್ರತಿ ಹೋರಾಟವನ್ನು ನಡೆಸುತ್ತಿವೆ. ಆಹಾರದ ಅಭಾವ, ಪ್ರಾಕೃತಿಕ ಸಮಸ್ಯೆ, ಹಾವು, ಹದ್ದುಗಳಂತಹ ಕಾಡುವ ಶತ್ರುಗಳು, ಯಾವ ಕ್ಷಣದಲ್ಲಿ ಯಾವ ಬೇಟೆಗಾರನ ಬಂದೂಕಿನ ಏಟಿಗೆ ಬಲಿಪಶು ಆಗಬೇಕೋ ಎಂಬ ಆತಂಕದ ನಡುವೆಯೇ ಗುಟುಕು ಜೀವ ಹಿಡಿದುಕೊಂಡಿವೆ.
ಗುಂಪು ಗುಂಪಾಗಿ ವಾಸ ಮಾಡುವ ಹಾರ್ನಬಿಲ್ ಏಕಪತ್ನಿ ವೃತಸ್ಥ. ಗುಬ್ಬಿಗಳಂತೇ ಇವು, ಒಂದು ಸಂಗಾತಿ ಮರಣಿಸಿದರೆ ಇನ್ನೊಂದನ್ನು ಹುಡುಕಿ ಹೋಗುವುದಿಲ್ಲ. ಬದಲಾಗಿ ಜತೆಗಾರ ಹಕ್ಕಿಯ ನೆನಪಿನಲ್ಲೇ ಪ್ರಾಣ ಬಿಡುತ್ತವೆ. ಗಂಡು ಹಕ್ಕಿ ಸತ್ತರೆ ಹೆಣ್ಣು ಹಕ್ಕಿ ಹಾಗೂ ಹೆಣ್ಣು ಹಕ್ಕಿ ಸತ್ತರೆ ಗಂಡು ಹಕ್ಕಿ, ಒಬ್ಬಂಟಿಯಾಗಿ ಉಳಿದು, ಕೊನೆಗೆ ಸಾಯುತ್ತವೆ. ಹಾರ್ನಬಿಲ್ ಸಣ್ಣಪುಟ್ಟ ಕಾಡುಗಳಲ್ಲಿ ವಾಸ ಮಾಡುವುದೇ ಇಲ್ಲ. ಈ ಹಾರ್ನಬಿಲ್ ವಾಸ ಮಾಡುವ ಕಾಡುಗಳು ಅತ್ಯಂತ ಸಮೃದ್ಧವಾದುದು ಎಂದೇ ಹೆಸರಾಗಿದೆ. ಮಾನವನ ಹಸ್ತಕ್ಷೇಪವನ್ನು ಎಳ್ಳಷ್ಟೂ ಸಹಿಸದ ಇವು, ದಟ್ಟ ಕಾನನದ ನಡುವೆ ಎಲ್ಲೋ ಜೀವನ ನಿರ್ವಹಣೆ ಮಾಡುತ್ತವೆ.
ರಾಮಪತ್ರೆ, ಕಾಸರಕನ ಹಣ್ಣು, ಕಾಡು ಹಣ್ಣುಗಳನ್ನು ತಿಂದು ಜೀವಿಸುವ ಹಾರ್ನಬಿಲ್ ತನ್ನ ಆಹಾರ ಹುಡುಕಿಕೊಂಡು ದಿನವೊಂದಕ್ಕೆ ಏನಿಲ್ಲವೆಂದರೂ ಕನಿಷ್ಠ ೧೬೦ಕ್ಕೂ ಹೆಚ್ಚು ಕಿಲೋಮೀಟರ್ ಗಳಷ್ಟು ದೂರ ಹಾರಾಟ ಮಾಡುತ್ತವೆ. ಇವುಗಳ ಆಹಾರ ಸಣ್ಣ ಕಾಡುಗಳಲ್ಲಿ ದೊರಕುವುದಿಲ್ಲ. ದಟ್ಟ, ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಿಲ್ಲದಂತಹ ಕಾಡುಗಳಲ್ಲೇ ಬೆಳೆಯುವುದರಿಂದ, ತಾನು ಗೂಡು ಕಟ್ಟಿದ ಕಾಡಿನಿಂದ ಬಹುದೂರದ ಇನ್ನೊಂದು ದಟ್ಟಾರಣ್ಯಕ್ಕೆ ಹಾರಾಟ ಮಾಡಿ, ಬೇಟೆ ಹಾಗೂ ಆಹಾರವನ್ನು ಅರಸಿ, ಅದೇ ದಿನ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳುತ್ತವೆ. ತಜ್ಞರ ಅಧ್ಯಯನದ ಪ್ರಕಾರ ದಾಂಡೇಲಿಯಲ್ಲಿ ಗೂಡು ಕಟ್ಟಿದ ಹಾರ್ನಬಿಲ್, ಆಹಾರವನ್ನು ಹುಡುಕಿ ಶರಾವತಿ ನದಿಯ ಗೇರುಸೊಪ್ಪೆಯ ಮೌನ ಕಣಿವೆ ಪ್ರದೇಶದವರೆಗೂ ಪ್ರತಿದಿನ ಹಾರಾಟ ನಡೆಸುತ್ತದಂತೆ.
ಇವುಗಳ ಪುಕ್ಕಗಳು ಅದೃಷ್ಟದ ಸಂಕೇತ ಎನ್ನುವ ಮೂಢ ನಂಬಿಕೆ ಇತ್ತು. ಅಲ್ಲದೇ ಇವುಗಳ ಕೊಕ್ಕುಗಳು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಮಾತುಗಳೂ ಇದ್ದವು. ಈ ಕಾರಣದಿಂದಲೇ ಬೇಟೆಗಾರರು ಇವನ್ನು ಬೇಟೆಯಾಡುತ್ತಾರೆ. ಅಲ್ಲದೇ ಇವನ್ನು ಹಿಡಿದು ಕಳ್ಳ ಸಾಗಾಣಿಕೆ ಮಾಡುವವರ ಸಂಖ್ಯೆಗೂ ಹೆಚ್ಚಿದೆ. (ನಾಗಾಲ್ಯಾಂಡ್ ನಲ್ಲಿ ಹಾರ್ನಬಿಲ್ ಹಬ್ಬವೇ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಗಾಲ್ಯಾಂಡಿನ ಗ್ರಾಮಗಳ ಜನರು, ಹಾರ್ನಬಿಲ್ ಪುಕ್ಕಗಳಿಂದ ತಯಾರಿಸಿದ ವಿಚಿತ್ರ ಹಾಗೂ ವಿಶಿಷ್ಟ ಬಗೆಯ ಧಿರಿಸನ್ನು ಧರಿಸುತ್ತಾರೆ. ಇದು ಅದೃಷ್ಟದ ಸಂಕೇತ ಹಾಗೂ ಸಮಾಜದಲ್ಲಿನ ಹೆಸರುಗಳಿಗೂ ಕಾರಣವಾಗುತ್ತದೆ ಎನ್ನುವ ನಂಬಿಕೆ ಇದೆ.) ಅಲ್ಲದೇ ಹಾರ್ನಬಿಲ್ ಗಳಿಗೆ ಪೂರಕವಾದ ಆಹಾರಗಳೂ ಸಿಗುತ್ತಿಲ್ಲ. ಈ ಕಾರಣಗಳಿಂದ ಹಾರ್ನಬಿಲ್ ಅಳಿವಿನ ಅಂಚಿನಲ್ಲಿದೆ.
ಹಿಂದೆ ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾರ್ನಬಿಲ್ ಗಳ ಮಹತ್ವವನ್ನು ಅರಿತು, ದಾಂಡೇಲಿಯನ್ನು ಹಾರ್ನಬಿಲ್ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ಹಾರ್ನಬಿಲ್ ಗಳ ಪ್ರಮುಖ ಆಹಾರವಾದ ರಾಮಪತ್ರೆ ಈ ಮುಂತಾದ ಮರಗಳನ್ನು ಬೆಳೆಸಲು ಅನುವಾಗುವಂತೆ ಸಾಕಷ್ಟು ಅನುದಾನವನ್ನೂ ಘೋಷಣೆ ಮಾಡಿದ್ದರು. ಆ ನಂತರದಲ್ಲಿ ದಾಂಡಡೇಲಿಯ ಪ್ರದೇಶದಲ್ಲಿ ಹಾರ್ನಬಿಲ್ ಸಂರಕ್ಷಿತ ಅರಣ್ಯ ಪ್ರದೇಶ ಎನ್ನುವ ಬೋರ್ಡುಗಳೂ ಕಾಣಿಸಿಕೊಂಡವು. ಆದರೆ ದಿನಗಳೆಂದಂತೆ ಹಾರ್ನಬಿಲ್ ಸಂರಕ್ಷಣೆ ಎನ್ನುವುದು ಕಡತಕ್ಕೆ ಮಾತ್ರ ಸೀಮಿತವಾಯಿತು. ಯಡಿಯೂರಪ್ಪ ಘೋಷಣೆ ಮಾಡಿದ ಅನುದಾನ ಅವರ ಅಧಿಕಾರಾವಧಿಯ ನಂತರದ ದಿನಗಳಲ್ಲಿ ಎಲ್ಲಿಗೆ ಹೋಯಿತೋ ಗೊತ್ತಿಲ್ಲ. ಹಾರ್ನಬಿಲ್ ಗಳಿಗೆ ಅಗತ್ಯವಾದ ರಾಮಪತ್ರೆಯ ಗಿಡಗಳನ್ನು ಬೆಳೆಸುವುದು ಕಡತಗಳಿಗೆ ಮಾತ್ರ ಸೀಮಿತವಾಯಿತು.
ಯಡಿಯೂರಪ್ಪರ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯರಿಗಂತೂ ಹಾರ್ನಬಿಲ್ ಗಳಂತಹ ಪಕ್ಷಿಗಳ, ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಕುರಿತು ಚಿಂತಿಸಲು ಸಮಯವೇ ಇರಲಿಲ್ಲ ಬಿಡಿ. ಅವರು ಅವುಗಳನ್ನೆಲ್ಲ ಕಡೆಗಣನೆ ಮಾಡಿ, ಧರ್ಮ, ಮತ, ಜಾತಿ, ಸಮಾಜ, ಅಹಿಂದ ಹೀಗೆ ಹಲವು ಮಾರ್ಗಗಳನ್ನು ಹಿಡಿದು ಹೊರಟರು. ಇನ್ನು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿಗಳಿಗಂತೂ ಇಂತದ್ದೊಂದು ಪಕ್ಷಿ ಸಂಕುಲ ಇದೆ ಎನ್ನುವುದನ್ನು ಮತ್ತೆ ಮತ್ತೆ ತಿಳಿಸಿಹೇಳಬೇಕೇನೋ. ಬಿಡಿ.
ಯಡಿಯೂರಪ್ಪರು ಹಾರ್ನಬಿಲ್ ಗೆ ಮೀಸಲು ಜಾಗವನ್ನೇನೋ ಘೋಷಣೆ ಮಾಡಿದರು, ಆದರೆ ಕುಮಾರಸ್ವಾಮಿ ಹಕ್ಕಿಗಳಿಗೆ ಸಂಬಂಧಿಸಿದಂತೆ, ತಮ್ಮ ಪಕ್ಷಕ್ಕೆ ಮತ ಹಾಕದ ಪ್ರದೇಶದಲ್ಲಿದೆ. ಆದ್ದರಿಂದ ಅವುಗಳ ಕುರಿತು ತಾನೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳೀದರೂ ಆಶ್ಚರ್ಯವಿಲ್ಲ.
ಮುಖ್ಯಮಂತ್ರಿಗಳಾದವರಿಗೆ ಸೂಕ್ಷ್ಮ ಸಂವೇದನೆ ಇರಬೇಕು. ರಾಜ್ಯದ ಜನರ ಕಡೆಗೆ ಇರುವಷ್ಟು ಉತ್ತಮ ಭಾವನೆಗಳನ್ನು ಪ್ರಾಣಿ, ಪಕ್ಷಿಗಳ ಕಡೆಗೂ ತೋರ್ಪಡಿಸಬೇಕು. ಯಾವುದೇ ವಿಷಯದ ಕುರಿತು ತ್ವರಿತವಾಗಿ ಸ್ಪಂದನೆ ಮಾಡುವ ಗುಣ ಬೆಳೆಸಿಕೊಂಡಿರಬೇಕು. ಆದರೆ ಇಂದಿನ ಮುಖ್ಯಮಂತ್ರಿಗಳು ಹಾಗೂ ಅವರ ಬಳಗ ಮನುಷ್ಯರನ್ನೇ ಪ್ರಾಣಿಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ನೆರೆ ಸಂತ್ರಸ್ಥರಿಗೆ ಆಹಾರವನ್ನೇ ನಾಯಿಗಳಿಗೆ ಎಸೆದಂತೆ ಎಸೆಯುವ ಮಂತ್ರಿಗಳನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಹಾರ್ನಬಿಲ್ ಗಳಂತಹ ನಿಷ್ಪಾಪಿ ಪಕ್ಷಿಗಳು, ಅಳಿವಿನ ಅಂಚಿನಲ್ಲಿರುವ ಜೀವಿ ಜಗತ್ತು ಕಾಣಲು ಸಾಧ್ಯವೇ? ಮೈತ್ರಿಯ ಮೆಟ್ಟಿಲಲ್ಲಿ ಒಂದ ಕಾಲು ಇಟ್ಟು ಗಟ್ಟಿ ನಿಲ್ಲಲ್ಲು ಹೆಣಗಾಡುತ್ತಿರುವ ಮುಖ್ಯಮಂತ್ರಿಗಳು ಹಾಗೂ ಅವರ ಪಕ್ಷದ ಜತೆಗಾರರಿಂದ ಅರಣ್ಯ ಸಂರಕ್ಷಣೆ, ಪಕ್ಷಿಗಳ ಉದ್ಧಾರ ಎನ್ನುವುದು ಕನಸೇ ಸರಿ.

Monday, September 10, 2018

ಭಾರತದ ವಿರುದ್ಧ ಕೊನೆಯ ಟೆಸ್ಟ್ ಆಡಿದ ಐವರು ಕ್ರಿಕೆಟ್ ಲೆಜೆಂಡ್ಸ್

ಕ್ರಿಕೆಟ್ ಜಗತ್ತಿನ ಅದೆಷ್ಟೋ ಲೆಜೆಂಡ್‌ಗಳು ಭಾರತದ ವಿರುದ್ಧವೇ ಮೊದಲ ಟೆಸ್ಟ್  ಆಡಿದ್ದಾರೆ. ಇನ್ನೂ ಅದೆಷ್ಟೋ ಲೆಜೆಂಡ್‌ಗಳು ಭಾರತದ ವಿರುದ್ಧವೇ ತಮ್ಮ ಬದುಕಿನ ಕೊಟ್ಟ ಕೊನೆಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮೊದಲ ಟೆಸ್ಟ್ ಹಾಗೂ ಕೊನೆಯ ಟೆಸ್ಟ್ ಈ ಎರಡಕ್ಕೂ ಭಾರತವೇ ಎದುರಾಳಿ ಆದ ನಿದರ್ಶನ ಹಲವಿದೆ. ಕ್ರಿಕೆಟ್ ಲೋಕದ ಖ್ಯಾತನಾಮ ಆಟಗಾರರು ಭಾರತದ  ವಿರುದ್ಧ ಕೊನೆಯ ಪಂದ್ಯವಾಡುವ ಮೂಲಕ ಭಾರತದ  ಹೆಸರನ್ನು ಅವರ ಜತೆ ಶಾಶ್ವತವಾಗಿ ಇರಿಸಿಕೊಂಡಿದ್ದಾರೆ. 2000ದಿಂದೀಚೆಗೆ ಭಾರತದ  ವಿರುದ್ಧವೇ ಕ್ರಿಕೆಟ್‌ಗೆ ವಿದಾಯ ಹೇಳೀದ ಐವರು ಕ್ರಿಕೆಟ್ ಕಲಿಗಳ ಕುರಿತು ಕಿರುವಿವರ ಇಲ್ಲಿದೆ.

ಸ್ಟೀವ್ ವಾ (2003-04)
ಆಸ್ಟ್ರೇಲಿಯಾ ಕಂಡ ಯಶಸ್ವಿ ನಾಯಕ ಸ್ಟೀವ್ ವಾ. ಕ್ರಿಕೆಟ್ ಲೋಕದ ಹೆಸರಾಂತ ಆಟಗಾರ. ಈ ಸ್ಟೀವ್ ವಾ ಭಾರತದ  ವಿರುದ್ಧ ತಮ್ಮ ಕೊಟ್ಟ ಕೊನೆಯ ಟೆಸ್ಟ್ ಆಡಿದರು. 2003-04ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿಯೇ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸ್ಟೀವ್ ವಾ ಪಾಲಿಗೆ ಕೊನೆಯ ಪಂದ್ಯಾವಳಿಯಾಯಿತು. ಈ ಕಾರಣದಿಂದಲೇ ಈ ಸರಣಿಯನ್ನು ಸ್ಟೀವ್ ವಾ ವಿದಾಯ ಟೂರ್ನಿ ಎಂದೂ ಕರೆಯಲಾಗುತ್ತದೆ. ಈ ಸರಣಿಯನ್ನು ಭಾರತ 1-1ರಿಂದ ಗೆದ್ದು ಸಮಬಲ ಸಾಧಿಸಿ ಸದಾ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಿದೆ. ಸತತ 16 ಟೆಸ್ಟ್ಗಳಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಸ್ಟೀವ್ ವಾ ಕೊನೆಯ ಪಂದ್ಯ ಭಾರತದ  ವಿರುದ್ಧ ನಡೆದಿದ್ದು ಎನ್ನುವುದೇ ವಿಶೇಷ.


ಆ್ಯಡಂ ಗಿಲ್‌ಕ್ರಿಸ್ಟ್
ಆಸ್ಟ್ರೇಲಿಯಾ ಹಾಗೂ ವಿಶ್ವ ಕಂಡ ಸಾರ್ವಕಾಲಿಕ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು ಆ್ಯಡಂ ಗಿಲ್‌ಕ್ರಿಸ್ಟ್. 1999, 2003 ಹಾಗೂ 2007ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದವರು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದವರು. 2007-08ರಲ್ಲಿ ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಾಗ ಗಿಲ್‌ಕ್ರಿಸ್ಟ್  ಕೊನೆಯ ಪಂದ್ಯವನ್ನು ಆಡಿದರು. 2008ರ ಜನವರಿ 26 ಗಿಲ್‌ಕ್ರಿಸ್ಟ್  ಆಡಿದ ಕೊನೆಯ ಪಂದ್ಯ. ಈ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಲ್ಲಿ ಗೆದ್ದುಕೊಂಡಿತು. ಈ ಸರಣಿಯ ನಂತರ ಗಿಲ್‌ಕ್ರಿಸ್ಟ್  ಐಪಿಎಲ್‌ಗಳಲ್ಲಿ ಆಡಿದರಾದರೂ ಪ್ರಭಾವಿ ಎನ್ನಿಸಲಿಲ್ಲ. ಭಾರತದ  ವಿರುದ್ಧ ವಿದಾಯ ಹೇಳಿದ ಎರಡನೇ ಲೆಜೆಂಡ್ ಎನ್ನಿಸಿಕೊಂಡಿದ್ದಾರೆ.

ಮುತ್ತಯ್ಯ ಮುರಳೀಧರನ್ (2010)
ವಿಶ್ವದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧ ರನ್. ಅತ್ಯಂತ ಹೆಚ್ಚು ಏಕದಿನ ಹಾಗೂ ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಆಟಗಾರ. ಭಾರತವು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ  2010ರಲ್ಲಿ ಗಾಲೆಯಲ್ಲಿ ನಡೆದ ಪಂದ್ಯ ಮುರಳೀಧರನ್ ವೃತ್ತಿ ಬದುಕಿನ ಕೊಟ್ಟ ಕೊನೆಯ ಪಂದ್ಯ ಎನ್ನಿಸಿಕೊಂಡಿತು. ಮುರಳೀಧರನ್ ಕೊನೆಯ ಪಂದ್ಯದ ಕೊನೆಯ ಬಾಲ್‌ನಲ್ಲಿ ಭಾರತದ ಪ್ರಗ್ಯಾನ್ ಓಝಾ ವಿಕೆಟ್ ಪಡೆಯುವ ಮೂಲಕ ಚಿರಸ್ಥಾಯಿ ಎನ್ನಿಸಿಕೊಂಡರು. ಇದು ಅವರ 800ನೇ ವಿಕೆಟ್ ಆಗಿತ್ತು. ಈ ಸರಣಿ ಸಮಬಲಗೊಂಡರೂ 1334 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ಮುರಳೀಧರನ್ ವಿದಾಯ ಹೇಳಿದ್ದರಿಂದ ಅಭಿಮಾನಿಗಳ ಪಾಲಿಗೆ ಸದಾ ನೆನಪಿನಲ್ಲಿ ಉಳಿಯಿತು.

ಜಾಕ್ ಕಾಲಿಸ್ (2013)
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆಟಗಾರ ಜಾಕ್ ಕಾಲಿಸ್. ಟೆಸ್ಟ್ ನಲ್ಲಿ  ಅತ್ಯಂತ ಹೆಚ್ಚು ರನ್ ಗಳಿಸಿದವರ ಯಾದಿಯಲ್ಲಿ ಸ್ಥಾನ ಪಡೆದವರು. 13000 ರನ್, 292 ವಿಕೆಟ್ ಹಾಗೂ 200 ಕ್ಯಾಚ್ ಪಡೆದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬ. ಕಾಲಿಸ್ ಕೊನೆಯ ಟೆಸ್ಟ್ ಆಡಿದ್ದು 2013ರಲ್ಲಿ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ ಗೆಲುವಿಗೂ ಕಾರಣರಾದ ಆಟಗಾರ. ತೆಂಡೂಲ್ಕರ್, ಲಾರಾ, ಚಂದ್ರಪಾಲ್, ಸ್ಟೀವ್ ವಾ, ಮುರಳೀಧರನ್, ವಾಲ್ಶ್ ಮುಂತಾದ ದಿಗ್ಗಜರ ಸಾಲಿನಲ್ಲಿ ನಿಲ್ಲುವಂತಹ ಆಟಗಾರ. ಕಾಲೀಸ್ ಕೊನೆಯ ಪಂದ್ಯ ಆಡಿದ್ದುಯ ಭಾರತದ ವಿರುದ್ಧ ಎನ್ನುವ ಸಂಗತಿ ಭಾರತಕ್ಕೆ ಹೆಮ್ಮೆಯ ವಿಷಯವೇ ಸರಿ.

ಕುಮಾರ ಸಂಗಕ್ಕಾರ (2015)
ಶ್ರೀಲಂಕಾ ಕಂಡ ಅತ್ಯುತ್ತಮ ಆಟಗಾರ, ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ. ಅತ್ಯಂತ ಹೆಚ್ಚು ದ್ವಿಶತಕಗಳನ್ನು ಭಾರಿಸಿದ ಆಟಗಾರ ಎನ್ನುವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆಸಿಕೊಂಡಿರುವ ಸಂಗಕ್ಕಾರ 2015ರಲ್ಲಿ ಭಾರತದ  ವಿರುದ್ಧ ಕೊಟ್ಟ ಕೊನೆಯ ಪಂದ್ಯವನ್ನು ಆಡಿದರು. ಮೂರನೇ ಕ್ರಮಾಂಕದಲ್ಲಿ ಆಟವಾಡುತ್ತಿದ್ದ ಸಂಗಕ್ಕಾರ 38 ಶತಕಗಳನ್ನು ಭಾರಿಸಿದ್ದರು. 3 ಪಂದ್ಯಗಳ ಸರಣಿಯನ್ನು ಶ್ರೀಲಂಕಾ 2-1 ಅಂತರದಲ್ಲಿ ಸೋಲನ್ನು ಕಂಡರೂ ಸಂಗಕ್ಕಾರ ಆಟ ಅದ್ಭುತವಾಗಿತ್ತು. ಭಾರತದ  ವಿರುದ್ಧ ಅಂತಿಮ ಪಂದ್ಯವನ್ನಾಡುವ ಸಂದರ್ಭದಲ್ಲಿ  ಸಂಗಕ್ಕಾರ ಕಣ್ಣಾಲಿಗಳು ತುಂಬಿಬಂದಿದ್ದವು. ಭಾರತದ  ಆಟಗಾರರು ಈ ಎಲ್ಲ ಲೆಜೆಂಡ್‌ಗಳಿಗೂ ಗಾರ್ಡ್ ಆಫ್  ಆನರ್ ನೀಡುವ ಮೂಲಕ ಸ್ವರಣೀಯ ವಿದಾಯವನ್ನು ಹೇಳಿದ್ದು ಕೂಡ ಉಲ್ಲೇಖನೀಯ.

Saturday, September 8, 2018

ಮಾಯಾಂಕ್ ಅಗರ್ವಾಲ್‌ರನ್ನು ಪದೇ ಪದೆ ಕಡೆಗಣಿಸಿದ ಬಿಸಿಸಿಐ

ಕಳೆದ ಒಂದೂವರೆ ವರ್ಷದ ಅವಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎಂದರೆ ಅದು ಮಾಯಾಂಕ್ ಅಗರ್ವಾಲ್ ಮಾತ್ರ. ಶತಕಗಳ ಮೇಲೆ ಶತಕ ಭಾರಿಸಿ, ರನ್ ಸುರಿಮಳೆಯನ್ನೇ ಸುರಿಸುತ್ತಿರುವ ಮಾಯಾಂಕ್ ಅಗರ್ವಾಲ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದೇ ಬಿಸಿಸಿಐ ಮಾತ್ರ ಪದೇ ಪದೆ ಕಡೆಗಣನೆ ಮಾಡುತ್ತಿದೆ.
ಕರ್ನಾಟಕ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ದೇಸೀಯ ಕ್ರೀಡೆಗಳಲ್ಲಿ ರನ್ ಸುರಿಮಳೆಯನ್ನೇ ಸುರಿಸಿದ್ದಾರೆ. ರಣಜೀ ಟ್ರೋಫೀ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿ ಹೀಗೆ ವಿವಿಧ  ದೇಸೀಯ ಕ್ರೀಡೆಗಳಲ್ಲಿ ಶತಕಗಳ ಮೇಲೆ ಶತಕ ಭಾರಿಸಿದ್ದಾರೆ. ಇಷ್ಟೇ ಅಲ್ಲದೇ ಭಾರತ ಎ ತಂಡದ ಪರ ಇಂಗ್ಲೆೆಂಡ್ ಎ ವಿರುದ್ಧ ಆಂಗ್ಲರ ನೆಲದಲ್ಲೇ ಎರಡು ಶತಕ ಭಾರಿಸಿ ಸಾಧನೆ ಮಾಡಿದ್ದಾಾರೆ.
ಮಾಯಾಂಕ್ ಅಗರ್ವಾಲ್ ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಜತೆ ಜತೆಯಲ್ಲಿ ಆಸ್ಟ್ರೇಲಿಯಾ ಎ ಹಾಗೂ ವೆಸ್ಟ್  ಇಂಡಿಸ್‌ಎ ನಡುವಿನ ಭಾರತ ಎ ತಂಡದ ಸರಣಿಯಲ್ಲಿಯೂ ಕೂಡ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಕಳೆದ ಒಂದು ವರ್ಷದ ಅವಯಲ್ಲಿ ಲೀಸ್ಟ್  ಎ ತಂಡದ ಪರ ಕೇವಲ 8 ಪಂದ್ಯಗಳಲ್ಲಿ 723 ರನ್ ಗಳಿಸಿದ ಸಾಧನೆ ಮಾಯಾಂಕ್‌ರ ಹೆಸರಲ್ಲಿದೆ. ಇಷ್ಟೇ ಅಲ್ಲ 2017-18ರ ದೇಸೀಯ ಕ್ರೀಡೆಗಳಲ್ಲಿ ಮಾಯಾಂಕ್ ಗಳಿಸಿದ್ದು ಬರೋಬ್ಬರಿ 2141ರನ್. ದೇಸೀಯ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 2000 ರನ್ ದಾಖಲಿಸಿದ ಮೊದಲ ಆಟಗಾರ ಎನ್ನುವ ಖ್ಯಾಾತಿಯೂ ಮಾಯಾಂಕ್ ಬೆನ್ನಿಗಿದೆ. ಇನ್ನೂ ವಿಶೇಷವೆಂದರೆ ಮಾಯಾಂಕ್ ಅಗರ್ವಾಲ್ ವಿಶ್ವದ ಮಟ್ಟದಲ್ಲಿ ದೇಸೀಯ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಸಾಧಕರ ಯಾದಿಯಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಕೂಡ ಮಾಯಾಂಕ್‌ರನ್ನು ಭಾರತ ತಂಡಕ್ಕೆೆ ಆಯ್ಕೆ ಮಾಡದೇ ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಭಾರತದ ನೆಲದಲ್ಲಿ ಮಾತ್ರವಲ್ಲ ವಿದೇಶದ ನೆಲದಲ್ಲಿಯೂ ಅರ್ಗವಾಲ್ ಸಾಕಷ್ಟು ರನ್ ಸುರಿಮಳೆಗೈದಿದ್ದಾರೆ. ಭಾರತ ಟೆಸ್‌ಟ್‌ ತಂಡದಲ್ಲಿನ ಹಲವು ಆಟಗಾರರು ಇಂಗ್ಲೆೆಂಡ್ ನೆಲದಲ್ಲಿ ರನ್ ಗಳಿಸಲು ಪರದಾಡಿದ್ದು ಕಣ್ಣೆದುರಿಗೇ ಇದೆ. ಹೀಗಿರುವ ಸಂದರ್ಭರ್ದಲ್ಲೇ ಮಾಯಾಂಕ್, ಇಂಗ್ಲೆೆಂಡ್ ನೆಲದಲ್ಲಿ ಆಂಗ್ಲ ಯುವ ತಂಡದ ಸ್ವಿಿಂಗ್ ಬಾಲಿಂಗ್‌ನ್ನು ಲೀಲಾಜಾಲವಾಗಿ ಎದುರಿಸ ಶತಕಗಳನ್ನು ಭಾರಿಸಿದ್ದರು. ಇವರನ್ನು ತಂಡಕ್ಕೆೆ ಆಯ್ಕೆ ಮಾಡಿದ್ದರೆ, ಪ್ರಭಾವಿ ಆಗಬಲ್ಲರು ಎನ್ನುವ ಭರವಸೆಯನ್ನು ಹುಟ್ಟು ಹಾಕಿದ್ದರು.
ಶತಕಗಳ ಮೇಲೆ ಶತಕ, ರನ್‌ಗಳ ಸುರಿಮಳೆ ಭಾರಿಸುತ್ತಿರುವ ಮಾಯಾಂಕ್ ಅಗರ್ವಾಲ್ ಭಾರತದ ಟೆಸ್ಟ್ , ಏಕದಿನ ತಂಡಗಳಿಗೆ ಆಯ್ಕೆಯಾಬೇಕಾದರೆ ಇನ್ನೇನು ಮಾಡಬೇಕು ಎನ್ನುವ ಪ್ರಶ್ನೆಗಳು ಹಿರಿಯ ಆಟಗಾರರಿಂದ, ಕ್ರಿಕೆಟ್ ಪ್ರೇಮಿಗಳಿಂದ ಕೇಳಿ ಬಂದಿದೆ. ಪದೇ ಪದೆ ವಿಫಲರಾಗುತ್ತಿರುವ ಆಟಗಾರರಿಗೆ ಪದೇ ಪದೆ ಮಣೆ ಹಾಕಲಾಗುತ್ತಿದೆ. ಆದರೆ ಗಮನಾರ್ಹ ಪ್ರದರ್ಶನ ನೀಡಿ ಮತ್ತೆ ಮತ್ತೆ ಆಯ್ಕೆ ಮಂಡಳಿಯ ಕದ ತಟ್ಟುತ್ತಿದ್ದರೂ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣನೆ ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹರ್ಭಜನ್  ಸಿಂಗ್‌ರಂತಹ ಹಿರಿಯ ಆಟಗಾರರೇ ಮಾಯಾಂಕ್‌ಗೆ ಅವಕಾಶ ನೀಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಬಿಸಿಸಿಐ ಮಾತ್ರ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣಿಸುವ ಮೂಲಕ ಪ್ರತಿಭಾವಂತ ಆಟಗಾರನಿಗೆ ಅನ್ಯಾಯ ಮಾಡುತ್ತಿದೆ.

---
ಬೇಕೆಂದೇ ಕಡೆಗಣನೆ
ಮಾಯಾಂಕ್ ಅಗರ್ವಾಲ್ ಇಷ್ಟೆಲ್ಲ ರನ್ ಗಳಿಸಿದ್ದರೂ ಕೂಡ ಅವರನ್ನು ಕಡೆಗಣನೆ ಮಾಡಿ ಪೃಥ್ವಿ ಶಾ ಹಾಗೂ ಹನುಮ ವಿಹಾರಿಗೆ ಇಂಗ್ಲೆೆಂಡ್ ತಂಡದ ವಿರುದ್ಧ ಟೆಸ್ಟ್  ಸರಣಿಗೆ ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲದೇ ಏಷ್ಯಾ ಕಪ್‌ಗೂ ಅವಕಾಶ ನೀಡಲಿಲ್ಲ. ಇದನ್ನೆಲ್ಲ ಗಮನಿಸಿದಾಗ ಮಾಯಾಂಕ್ ಅಗರ್ವಾಲ್‌ರನ್ನು ಬೇಕೆಂದೇ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪ್ರತಿಭಾವಂತ ಆಟಗಾರನಿಗೆ ಮಣೆ ಹಾಕುವ ಬದಲು ಉಳಿದವರನ್ನು ಆಯ್ಕೆ ಮಾಡುತ್ತಿರುವುದು ಬಿಸಿಸಿಐನಲ್ಲಿನ ರಾಜಕೀಯವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ.

Thursday, September 6, 2018

ಅಂ-ಕಣ -11

ಅರ್ಥ

ತುಟಿಗೊತ್ತಿದ ಮುತ್ತಿಗಿಂತ
ಹಣೆಗೊತ್ತಿದ ಮುತ್ತೇ
ಜಾಸ್ತಿ ಕಾಡಿದರೆ..,
ನಿಮ್ಮ ಪ್ರೀತಿ ಇನ್ನೂ
ಜೀವಂತವಿದೆ ಎಂದೇ ಅರ್ಥ!


ಕೊಂಡಿ 

ಕೆಲವು ದಿನ ಆಯ್ತು,
ಬೆಡ್ ರೂಂ ಲೈಟ್ ಹಾಕಿದ್ರೆ
ಬಾತ್ ರೂಮಲ್ಲಿ ಲೈಟ್
ಆನ್ ಆಗ್ತಿದೆ!
ವಯರ್ ಪಿಟಿಂಗ್ ಪ್ರಾಬ್ಲಮ್ಮೇ?
ಶಾರ್ಟಾಗಿರಬಹುದೇ...?
ಅಥವಾ...


ಭಾಗ್ಯ 

ಕೆಲವರಿಗೆ ಫ್ರೆಂಡ್
ಲೀಸ್ಟಿಗಿಂತ
ಬ್ಲಾಕ್ ಮಾಡಿದ ಲೀಸ್ಟೇ
ಜಾಸ್ತಿ ಇರುತ್ತೆ!


ದೃಷ್ಟಿ ಕೋನ

ನನ್ನನ್ನು ಒಂದೇ
ಕಣ್ಣಿನಿಂದ,
ದೃಷ್ಟಿ ಕೋನದಿಂದ
ನೋಡಬೇಡ
ನನ್ನ
ಇನ್ನೊಂದು ಬದುಕು
ನಿನ್ನೊಡನೆ
ನನ್ನನ್ನೂ ಸುಟ್ಟೀತು!


ಕಾರಣ 

ನನಗೆ ಕಣ್ಣೀರು
ಬಂದಾಗಲೇ
ಅಂದುಕೊಂಡೆ
ನೀನು
ಅಳುತ್ತಿದ್ದೀಯೆಂದು|

Wednesday, September 5, 2018

ಬಡತನದಲ್ಲಿ ಅರಳಿದ ಪ್ರತಿಭೆಗಳು ನೋವಿನಲ್ಲೂ ಚಿನ್ನ ಗೆದ್ದರು

ನೋವಿನಲ್ಲೂ ಚಿನ್ನ ಗೆದ್ದಳು ಸ್ವಪ್ನಾ-ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಮಂಜಿತ್‌ಗೆ ಬಂಗಾರ


ಬಡತನವಿರಲಿ, ಅನಾರೋಗ್ಯವೇ ಇರಲಿ ದೇಶಕ್ಕೆ ಪದಕ ಗೆಲ್ಲಬೇಕೆಂಬ ತವಕ ಇದ್ದರೆ ಎಂತಹ ಸಮಸ್ಯೆಯನ್ನೂ ಮರೆತು ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಏಷ್ಯನ್ ಗೇಮ್ಸ್  ಮತ್ತೊಮ್ಮೆ ಸಾಬೀತು ಪಡಿಸಿದೆ. ಬಡತನ, ಅನಾರೋಗ್ಯದ ನಡುವೆ ಸ್ವಪ್ನಾ ಬರ್ಮನ್ ಚಿನ್ನ ಗೆದ್ದರೆ, ಉದ್ಯೋಗವಿಲ್ಲದೇ ಗದ್ದೆಯಲ್ಲಿ ದುಡಿಯುತ್ತಿದ್ದ ಮಂಜಿತ್ ಸಿಂಗ್ ಕೂಡ ಬಂಗಾರ ಗೆದ್ದು ಸಾಧನೆ ಮಾಡಿದ್ದಾಾರೆ.

ನೋವು ನುಂಗಿ ಗೆದ್ದ ಸ್ವಪ್ನಾ:
ತೀವ್ರ ಪ್ರಮಾಣದ ಜ್ವರ, ಅಸಾಧ್ಯ ಹಲ್ಲು ನೋವು. ಇದರ ನಡುವಲ್ಲೇ ದೇಶಕ್ಕಾಗಿ ಪದಕ ಗೆಲ್ಲುವ ತವಕ. ಮೂರು ದಿನಗಳ ಕಾಲ ಏಳು ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿದ ಸ್ವಪ್ನಾ ಬರ್ಮನ್ ಚಿನ್ನ ಗೆದ್ದು, ವಿಶೇಷ ಸಾಧನೆ ಮಾಡಿದ್ದಾಳೆ.
ಹೆಪ್ಟಾಥ್ಲಾನ್. ಇಂಥದ್ದೊೊಂದು ಹೆಸರಿನ ಆಟವಿದೆ ಎನ್ನುವುದು ಹಲವು ಭಾರತೀಯರಿಗೆ ಗೊತ್ತಿಲ್ಲ. ಆದರೆ ಹೆಪ್ಟಾಥ್ಲಾನ್ ಎಂಬ ಕ್ರೀಡೆ ಇದೆ ಎಂಬುದನ್ನು ತಿಳಿಸಿಕೊಟ್ಟವಳು ಸ್ವಪ್ನಾ ಬರ್ಮನ್. ಏಳು ವಿಭಿನ್ನ ಕ್ರೀಡೆಗಳನ್ನು ಒಳಗೊಂಡ ಹೆಪ್ಟಾಥ್ಲಾನ್‌ನಂತೆಯೇ ಸ್ವಪ್ನಾಳ ಬದುಕು ಕೂಡ ವಿಭಿನ್ನವಾಗಿತ್ತು.
100ಮೀ. ಹರ್ಡಲ್‌ಸ್‌, ಎತ್ತರ ಜಿಗಿತ, ಗುಂಡುಎಸೆತ, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ, 800ಮೀ. ಓಟ ಹೀಗೆ ಒಟ್ಟು ಏಳು ವಿವಿಧ ಕ್ರೀಡೆಗಳನ್ನು ಒಟ್ಟಾಾಗಿಸಿ ಹೆಪ್ಟಾಥ್ಲಾನ್ ಎನ್ನಲಾಗುತ್ತದೆ. ಈ ಕ್ರೀಡೆಗೆ ಏಳು ರೀತಿಯ ಕೌಶಲ್ಯದ ಅಗತ್ಯವಿದೆ.
ಕ್ರೀಡಾಕೂಟಕ್ಕೆೆ ತೆರಳುವ ಮೊದಲೇ, ಆರು ಬೆರಳಿನ ಸ್ವಪ್ನಾ ಬರ್ಮನ್‌ಗೆ ಸರಿ ಹೊಂದುವಂತಹ ಶೂ ಸಿಗದೇ ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆಯ ನಡುವೆಯೂ ಕ್ರೀಡಾಕೂಟದಲ್ಲಿ ಪಾಲ್ಗೊೊಂಡವಳಿಗೆ ಕಾಡಿದ್ದು ತೀವ್ರ ಪ್ರಮಾಣದ ಜ್ವರ ಹಾಗೂ ಹಲ್ಲುನೋವು. ಈ ನೋವಿನ ನಡುವೆಯೂ ಆಟವನ್ನಾಡಿದ ಸ್ವಪ್ನಾ ಚಿನ್ನ ಗೆದ್ದು ಮೆರೆದಿದ್ದಾಳೆ.
ಚಿಕಿತ್ಸೆ ಪಡೆಯುತ್ತಲೇ ಎಲ್ಲಾ ವಿಭಾಗದಲ್ಲೂ ಆಕೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದಳು. ಹೈ ಜಂಪ್‌ನಲ್ಲಂತೂ ಆಕೆ ಅಸಾಧ್ಯ ನೋವಿನ ನಡುವೆ ಆಡಿದ್ದಳು. ಜಾವೆಲಿನ್ ಹಾಗೂ ಶಾಟ್‌ಪುಟ್‌ನಲ್ಲಿ ಆಕೆ ನೀಡಿದ ಅಧ್ಭುತ ಪ್ರದರ್ಶನವೇ ಆಕೆಯನ್ನು ಬಂಗಾರದ ಪದಕವನ್ನು ಇನ್ನಷ್ಟು ಹತ್ತಿರ ಮಾಡಿಸಿತ್ತು.
ಬಡ ಕುಟುಂಬ, ಕಾಯಿಲೆ ಪೀಡಿತ ತಂದೆ:
ಬಡತನದಲ್ಲಿ ಬೆಳೆದು ಬಂದ ಸ್ವಪ್ನಾಳ ಬಾಲ್ಯ ಬಹಳ ಕಷ್ಟಕರವಾಗಿತ್ತು. ಸ್ವಪ್ನಾಳ ತಂದೆ ತಳ್ಳುಗಾಡಿ ನಡೆಸುತ್ತಿದ್ದರು. ತಳ್ಳು ಗಾಡಿಯ ಮೂಲಕ ಬಂದ ದುಡ್ಡಿನಲ್ಲಿ ಬದುಕು ಸಾಗಿಸಬೇಕಿತ್ತು. ಅಂತದ್ದರಲ್ಲಿ 2013ರಲ್ಲಿ ಸ್ವಪ್ನಾ ತಂದೆ ಪಾಶ್ವವಾಯುಗೆ ತುತ್ತಾದರು. ಅಲ್ಲಿಂದ ಅವರು ಹಾಸಿಗೆಯಲ್ಲೇ ಜೀವನ ದೂಡುತ್ತಿದ್ದಾರೆ. ಸ್ವಪ್ನಾ ತಾಯಿ ಹತ್ತಿರದ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಕ್ರೀಡೆಯ ಆರಂಭಿಕ ದಿನಗಳಲ್ಲಿ ಸ್ಪಪ್ನಾ  ಹೈ ಜಂಪ್‌ನಲ್ಲಿ ಆಸಕ್ತಿ ತೋರಿಸಿದ್ದಳು. ಕುಳ್ಳಗಿದ್ದ ಕಾರಣ ಆಕೆಯನ್ನು ಹೈ ಜಂಪ್ ಆಟದಿಂದ ರಿಜೇಕ್ಟ್  ಮಾಡಲಾಗಿತ್ತು. ನಂತರ ಎರಡು ಬಾರಿ ಟ್ರಯಲ್ ನಡೆಸಿ ಆಯ್ಕೆ ಮಾಡಲಾಗಿತ್ತು.ಸ್ವಪ್ನಾಳ ಎರಡೂ ಕಾಲಿಗೆ ಆರು ಬೆರಳುಗಳಿದೆ. ಈ ಕಾರಣದಿಂದ ಧರಿಸಲು ಸರಿಯಾದ ಶೂಗಳೇ ಇರಲಿಲ್ಲ. ಹೀಗಿದ್ದಾಗಲೂ ಉತ್ತಮ ಪ್ರದರ್ಶನ ನೀಡಿದ್ದಾಳೆ.
ಕಷ್ಟದ ನಡುವೆಯೂ ಉತ್ತಮ ತರಬೇತಿ ಪಡೆದು, ನೋವಿನ ನಡುವೆಯೂ ಒಳ್ಳೆಯ ಪ್ರದರ್ಶನ ನೀಡಿದ ಸ್ವಪ್ನಾಳ ಸಾಧನೆಗೆ ಹ್ಯಾಟ್ಸಾಫ್  ಹೇಳೋಣ.

ದನಕಾಯುವ ಮಂಜಿತ್ ಬಂಗಾರ ಗೆದ್ದ:

ಕತ್ತಲಲ್ಲಿ ಇದ್ದೋನು, ಬೆಳಕಲ್ಲಿ ಎದ್ದೋನು
ಮಣ್ಣಲ್ಲಿ ಇದ್ದೋನು, ಬಂಗಾರ ಗೆದ್ದನು...
ಇಂತದ್ದೊೊಂದು ಹಾಡು ಚಿನ್ನಾರಿ ಮುತ್ತಾದಲ್ಲಿದೆ. ಮಂಜಿತ್ ಸಿಂಗ್ ಕಥೆ ಚಿನ್ನಾರಿ ಮುತ್ತಕ್ಕಿಿಂತ ಬೇರೆ ರೀತಿಯೇನೂ ಅಲ್ಲ.
ಹರ್ಯಾಣ ಮೂಲದ ವೇಗದ ಓಟಗಾರ ಮಂಜಿತ್ ಸಿಂಗ್ ಚಿನ್ನ ಗೆಲ್ಲುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಬಿಡಿ. 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ ವ್ಯಕ್ತಿ ಮಂಜಿತ್.
ಮಂಜಿತ್‌ಗೆ ಮಾಡಲು ಉದ್ಯೋಗವೇ ಇಲ್ಲ. ಓಎನ್‌ಜಿಸಿಯಲ್ಲಿ 2 ವರ್ಷದ ಗುತ್ತಿಗೆ ಮೇರೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾನೆ. ಉಳಿದ ಸಮಯದಲ್ಲಿ ಗದ್ದೆಯಲ್ಲಿ ದುಡಿಯುತ್ತಾನೆ. ತದನಂತರದಲ್ಲಿ ದನ ಕಾಯುತ್ತಾನೆ.
ಮಂಜಿತ್ ಸಿಂಗ್ ತಂದೆ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಶಾಟ್‌ಪುಟ್ ಪ್ಲೇಯರ್. ಆದರೆ ಮನೆಯಲ್ಲಿ ಅನುಕೂಲಸ್ಥರಲ್ಲ. ಹೀಗಾಗಿ ಮಂಜಿತ್‌ಗೆ ಆರಂಭಿಕ ದಿನಗಳಲ್ಲಿ ಉತ್ತಮ ತರಬೇತಿಯೂ ಸಿಕ್ಕಿರಲಿಲ್ಲ. ಮಂಜಿತ್ ಆಟವನ್ನು ಗಮನಿಸಿದವರಿಗೆ ಆತ ಆರಂಭದಲ್ಲಿ ಹಿಂದೆ ಬಿದ್ದು, ತದನಂತರ ಏಕಾಏಕಿ ಒಬ್ಬೊಬ್ಬರನ್ನಾಗಿ ಹಿಂದಿಕ್ಕುವುದು ಕಂಡುಬರುತ್ತದೆ. ಆತನ ಬದುಕೂ ಅಷ್ಟೇ. ಆರಂಭದಲ್ಲಿ ಎಲ್ಲರಿಗಿಂತ ಹಿಂದೆ ಬಿದ್ದವನು ನಂತರ ಒಂದೊಂದಾಗಿ ಸಾಧನೆ ಮಾಡಿದ್ದಾನೆ ಎನ್ನುವುದು ಮಂಜಿತ್ ಕುಟುಂಬಸ್ಥರ ಅಭಿಪ್ರಾಯ.

ಬಡತನ, ಕಷ್ಟ, ನೋವು ಇವು ದೇಶದ ಮುಂದೆ ಗೌಣವಾಗುತ್ತವೆ. ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹರಡುವ ಸಂದರ್ಭ ಬಂದರೆ ಇವೆಲ್ಲವನ್ನೂ ಕಡೆಗಣನೆ ಮಾಡಿ ಸಾಧನೆ ಮಾಡುತ್ತಾನೆ ಎನ್ನುವುದಕ್ಕೆ ಈ ಇಬ್ಬರು ಆಟಗಾರರೇ ಸಾಕ್ಷಿ. ಇಂತಹ ಅಸಂಖ್ಯಾತ ಕಷ್ಟಸಹಿಷ್ಣು ಆಟಗಾರರಿಗೊಂದು ಸಲಾಂ.