Tuesday, May 5, 2015

ಅಘನಾಶಿನಿ ಕಣಿವೆಯಲ್ಲಿ-18

(ಜಿಮ್ ಕಾರ್ಬೆಟ್ ತಾನೇ ಹೊಡೆದ ಹುಲಿಯೊಂದಿಗೆ)
                    `ತಮಾ... ಕವಳ ಹಾಕ್ತ್ರನಾ..ತಗಳಿ..' ಎಂದು ಕವಳದ ಬಟ್ಟಲನ್ನು ಎಲ್ಲರ ಮುಂದಕ್ಕೆ ಹಿಡಿದರು. ಎಲ್ಲರೂ ಕವಳ ಹಾಕ್ತ್ನಿಲ್ಲೆ..' ಎಂದರು.
                   `ತಮ್ಮಂದಿಕ್ಕಳಾ.. ಅಡಿಕೆ ಬೆಳೆಗಾರ ಆಕ್ಯಂಡು ನೀವು ಕವಳ ಹಾಕ್ತ್ನಿಲ್ಲೆ ಅಂದ್ರೆ ಬೆಳೆಗಾರರಿಗೆ ಮೋಸ ಮಾಡಿದಾಂಗೆ ಆಗ್ತಾ.. ನಾವು ಬೆಳೆದಿದ್ದು ನಾವೇ ತಿನ್ನದಿಂದ್ರೆ ಹೆಂಗೆ..? ಕವಳ ಹಾಕಡಿ, ಭಂಗಿ ಪಾನಕ ಕುಡಿಯಡಿ.. ನಿಂಗವ್ವು ಈಗಿನವ್ವು ಇಂತದ್ದು ಮಾಡದೇ ಅದೆಂತಾ ನಮನಿ ಬಾಳ್ವೆ ಮಾಡತ್ರೋ..' ಎಂದು ಛೇಡಿಸಿದರು. ಎಲ್ಲರೂ ನಾಚಿಕೆಯಿಂದ ತಲೆತಗ್ಗಿಸಿದರು
                 `ಎಲ್ಲಿ ತಂಕಾ ಹೇಳಿದ್ನಾ..' ಎಂದು ಕೇಳಿದಾಗ `ಕೊಟ್ಟಿಗೆಯಲ್ಲಿ ಹುಲಿ ಅಬ್ಬರ'ದ ಬಗ್ಗೆ ನೆನಪು ಮಾಡಿದ ವಿಕ್ರಮ.
                 `ಕೊಟ್ಗೇಲಿ ಯನ್ನ ಕೈಯಲ್ಲಿದ್ದ ಲಾಟೀನಿನ ಬೆಳಕು ಆಮೇಲೆ ಬ್ಯಾಟರಿ ಲೈಟಿಗೆ ಎಂತದ್ದೂ ಸರಿ ಕಾಣ್ತಾ ಇತ್ತಿಲ್ಲೆ. ಮಸುಬು ಮಸುಬಾಗಿ ಕಾಣ್ತಾ ಇತ್ತು. ಹುಲಿಯದ್ದಾ ಬೇರೆ ಎಂತ್ರದ್ದೋ ಗೊತ್ತಾಜಿಲ್ಲೆ.. ಗ್ವರ್ ಗುಡದೊಂದು ಕೇಳತಿತ್ತು. ಸದ್ದು ಬಂದ್ ಬದಿಗೆ ಬಂದೂಕು ಗುರಿ ಇಟ್ಟು ಢಂ.. ಅನ್ನಿಸಿದಿ.. ಬಂದೂಕಿನಿಂದ ಗುಂಡು ಹಾರುವಾಗ ಒಂದ್ ಸಾರಿ ಬಂದೂಕು ಹಿಂದೆ ವದ್ಚು ನೋಡು.. ಯನ್ನ ಭುಜ ನಾಕ್ ದಿನ ಕೆಂಪಗೆ ಆಕ್ಯಂಡು ಇತ್ತು..ಇಡೀ ಅಘನಾಶಿನಿ ಕಣಿವೆಯಲ್ಲಿ ಅದರ ಶಬ್ದ ಗುಡ್ಡದಿಂದ ಗುಡ್ಡಕ್ಕೆ ಬಡಿದು ಪ್ರತಿಫಲನ ಆಗುತ್ತಿತ್ತು.. ಯಾರಾದ್ರೂ ಶಬ್ದ ಕೇಳಿ ಹೆದರ್ಕಂಡಿರ್ಲಕ್ಕೂ ಸಾಕು.. ಗುಂಡು ಹೊಡೆ ಮೇಲೆ ಎಂತದೋ ಓಡಿ ಹೋದಾಂಗೆ ಅನುಭವ ಆತು. ಹೆಂಗಿದ್ರೂ ಹುಲಿ ಬಿದ್ದಿರ್ತು ತಗಾ.. ಅಂದ್ಕಂಡಿ.. ಲಾಟೀನ್ ಬೆಳಕು ದೊಡ್ಡದು ಮಾಡಿ ನೋಡಿದ್ರೆ ಕೊಟಗೇಲಿ ಎಂತದೂ ಕಂಡಿದ್ದಿಲ್ಲೆ.. ಸುಮಾರ್ ಹೊತ್ತು ಹುಡುಕಿದಿ.. ಊಹೂಂ.. ಕತ್ಲೆಲ್ಲಿ ಯಂತದೂ ಕಂಡಿದ್ದಿಲ್ಲೆ..ಸಾಯ್ಲಿ ಇದು ಹೇಳಿ ಬೈಕ್ಯಂಡು ಆವತ್ತು ಮನಗಿ ಬೆಳಗು ಹಾಯಿಸಿದಿ ನೋಡು..' ಎಂದ ಗಪ್ಪಜ್ಜ ..
                  ಎಲ್ಲರಿಗೂ ಕುತೂಹಲ ಇಮ್ಮಡಿಸಿತ್ತು... ಜಿಮ್ ಕಾರ್ಬೆಟ್ಟನ ಹುಲಿ ಕೊಮದ ಕಥೆಗಳನ್ನು ಓದಿ ತಿಳಿದವರಿಗೆ ಎದುರಿಗೆ ಅಜ್ಜ ಹೇಳುತ್ತಿದ್ದ ಕಥೆ ಮೈಯಲ್ಲಿ ರೂಮಾಂಚನ ಹುಟ್ಟು ಹಾಕಿತ್ತು `ಮುಂದೆಂತಾ ಆತಾ..? ಹುಲಿ ಬಿದ್ದಿತ್ತಾ..?.. ನೀ ಬಾಲ ಕಿತ್ಕಂಡು ಹೋಗಿ ಪಟೇಲಂಗೆ ಕೊಟ್ಯಾ..?' ಗಡಬಡೆಯಿಂದ ಕೇಳಿದ ವಿಕ್ರಮ.
                 `ತಡ್ಯಾ ತಮಾ.. ಸಾವಕಾಶ ಹೇಳ್ತಿ.. ಯಂಗೆ ವಯಸ್ಸಾತು.. ಇಷ್ಟೆಲ್ಲ ಜೋರು ಹೇಳಲಾಗ್ತಿಲ್ಲೆ.. ಎಂದು ಮತ್ತೊಂದು ಕವಳವನ್ನು ಹೊಸೆಯತೊಡಗಿದರು.
                 `ಬೆಳಿಗ್ಗೆ ಎಲ್ಲಾ ಏಳದಕ್ಕಿಂತ ಮುಂಚೆ ಎದ್ದು ನೋಡಿದ್ರೆ ಕ್ವಟ್ಗೆಲಲ್ಲ.. ಅದರ ಸುತ್ತಮುತ್ತಲೆಲ್ಲೂ ಹುಲಿ ಬಿದ್ದ ಕುರುಹು ಇಲ್ಲೆ. ಆ ಗುಂಡು ಹೊಡೆದಿದ್ದು ಎಂತಾ ಆಗಿಕ್ಕು ಹೇಳಿ ಹುಡುಕಾಡದಿ.. ಕ್ವಟ್ಗೆ ಕಂಭಕ್ಕೆ ತಾಗಿತ್ತು. ಆದರೆ ಇಡೀ ಕೊಟ್ಗೆ ತುಂಬಾ ನೆತ್ತರು ಹರಕಂಡು ಇತ್ತು. ಅರೇ ಹುಲಿಗೆ ಗುಂಡು ತಾಗಿಕ್ಕಾ.. ಅಂದ್ಕಂಡ್ರೆ ಒಂದು ಹಂಡಾ ಪಟ್ಟೆ ದನೀಕರ ರಾತ್ರಿ ಹುಲಿ ಬಾಯಿಗೆ ಸಿಕ್ಕು ಸತ್ತುಬಿದ್ದಕಂಡು ಇತ್ತು. ರಾತ್ರಿ ಹುಲಿ ಆ ದನಿಕರದ ಕುತ್ಗಿಗೆ ಬಾಯಿ ಹಾಕಿತ್ತು.. ಅದು ಕಚ್ಚಿದ ಜಾಗದಿಂದ ನೆತ್ತರು ರಾಶಿ ಹರಿದು ಹೋಗಿತ್ತು.. ಕರ ಸತ್ತಬಿದ್ದಿತ್ತು.. ಓಹೋ ರಾತ್ರಿ ಬಂದ ಗ್ವರ ಗ್ವರ ಶಬ್ದ ಇದೇಯಾ ಅಂದಕಂಡಿ..ಥೋ.. ಯಮ್ಮನೆ ಕೊಟ್ಗಿಗೆ ಬಂದು ದನಿಕರ ಕೊಂದಿದ್ದಲಾ ಹುಲಿ.. ಇದರ ಬಿಟ್ರೆ ಸುಖ ಇಲ್ಲೆ ಅಂದ್ಕಂಡು ಕೋವಿ ಎತ್ಗಂಡು ಹೊಂಟಿ.. ಎಲ್ಲೇ ಹೋದ್ರೂ ಆ ಹುಲಿ ಕೊಲ್ಲದೇಯಾ.. ಅಷ್ಟರ ಮೇಲೆ ಆ ಮನಿಗೆ ಬರ್ತಿ ಹೇಳಿ ಅಪ್ಪಯ್ಯಂಗೆ ಹೇಳಿ ಅಂವ ಉತ್ರ ಕೊಡದ್ರೋಳಗೆ ಹೊರಟಿದ್ದಿ.. ಆಸ್ರಿಗೆನೂ ಕುಡದಿದ್ನಿಲ್ಯಾ ಆವತ್ತು ಮಾರಾಯಾ..' ಎಂದ ಗಪ್ಪಜ್ಜ..
                    `ಹುಲಿ ಸಾಮಾನ್ಯವಾಗಿ ಹಿಂಗೇ ಹೋಗಿಕ್ಕು ಹೇಳಿ ಜಾಡು ಹಿಡದು ಹೊಂಟಿ. ಅದು ಮುತ್ಮುರ್ಡ್ ಬದಿಗೆ ಹೋಗಿತ್ತು. ಆನೂ ಅದೇ ಹಾದಿ ಕೂಡದಿ.. ಮುತ್ಮೂರ್ಡ್ ಹತ್ರಕ್ಕೆ ಹೋಪಕಿದ್ರೆ ಯನ್ನ, ಸುಬ್ಬಜ್ಜ ಇದ್ನಲಾ.. ಅಂವ ಕಂಡ..ಎಂತದಾ ಗಪ್ಪತಿ.. ಕೋವಿ ಹಿಡಕಂಡು ಹೊಂಟಿದ್ದೆ.. ಯತ್ಲಾಗೆ ಹೊಂಟಿದ್ಯಾ..? ಎಂದ..
                   `ಆನು ಹುಲಿ ಸುದ್ದಿ ಹೇಳಿ ಹಿಂಗಿಂಗೆ ಅಂದಿ.. ಅಂವ ಹೌದಾ ಮಾರಾಯಾ.. ಮದ್ಯರಾತ್ರಿಯಪ್ಪಗೆ ಬಂದಿತ್ತಾ.. ಅದು ಬಾಳಗಾರ ದಿಕ್ಕಿಗೆ ಹೋದಾಂಗಾಜು ನೋಡು.. ಅಂದ.. ಆ ಇನ್ನೇನು ಹೊರಡವ್ವು ಹೇಳಿ ಇದ್ದಾಗ ಸುಬ್ಬಜ್ಜ ತಡಿಯಾ.. ಆನು ಬತ್ತಿ... ಅಲ್ಲಿಗೆ ಹೋಪನ.. ಆ ಹುಲಿಗೆ ಒಂದ್ ಗತಿ ಕಾಣಿಸದೇ ಇದ್ರೆ ನಮಗೆ ಉಳಿಗಾಲ ಇಲ್ಲೆ.. ಎಂದ ತನ್ನತ್ರ ಇದ್ದಿದ್ದ  ಕೋವೀನು ತಗಂಡು ಬಂದ.. ಯಂಗಳ ಸವಾರಿ ಬಾಳಗಾರ ಬದಿಗೆ ಹೊಂಟ್ಚು.. ಅಲ್ಲಿಗೆ ಹೋಗಿ ಕೇಳದಾಗ ಬೆಳಗಿನ ಜಾವದಲ್ಲಿ ಹುಲಿ ಕೂಗಿದ್ದು ಕೇಳಿದ್ಯ ಅಂದ.. ಬಂದಳಿಕೆ ಬದಿಗೆ ಹೋಗಿಕ್ಕು ನೋಡು ಅಂದ.. ಬಂದಳಿಕೆಗೆ ಬಂದ್ರೆ ಅವರ ಮನೆಯಲ್ಲಿ ಒಂದ್ ದನ ಹಿದಡು ಎಳಕಂಡು ಹೋಗಿತ್ತಡಾ ಹುಲಿ.. ಯಂಗಂತೂ ಪಿತ್ಥ ನೆತ್ತಿಗೆ ಏರಿದಂತಾತು.. ಸಿಟ್ಟು ಸಿಕ್ಕಾಪಟ್ಟೆ ಬಂತು.. ಸುಬ್ರಾಯಾ.. ಇವತ್ತು ಈ ಹುಲಿ ಬಿಡಲಾಗ್ದಾ.. ಎಂದೆ... ಸುಬ್ಬಜ್ಜನೂ ಹೌದಾ.. ಎಂದ'
                  ಮತ್ತೊಮ್ಮೆ ತನ್ನ ಮಾತಿನ ಸರಣಿಗೆ ನಿಲುಗಡೆ ನೀಡಿದ ಗಪ್ಪಜ್ಜ .. ಇಂವ ಇಂತಕ್ಕೆ ಜೋರಾಗಿ ಓಡ್ತಾ ಇರೋ ಬಾಳೆಸರ ಬಸ್ಸು ಆಗಾಗ ನಿತ್ಕಂಡ ಹಾಂಗೆ ನಿತ್ಕತ್ತ ಅಷ್ಟ್ ಅಷ್ಟ್ ಹೊತ್ತೊಗೆ ಸುಮ್ಮನಾಗ್ತಾ ಎಂದು ವಿನಾಯಕನ ಮನಸ್ಸಿನಲ್ಲಿ ಮೂಡಿದರೂ ಕೇಳಿಲು ಹೋಗಲಿಲ್ಲ.
                   `ಬಂದಳಿಕೆಯಲ್ಲಿ ದನವನ್ನು ಎಳಕಂಡ್ ಹೋಗಿದ್ ಹುಲಿ ಅಲ್ಲಿಂದ ಭತ್ತಗುತ್ತಿಗೆ ಹೋಗುವ ಹಾದಿ ಮಧ್ಯದ ದೊಡ್ಡ ಮುರ್ಕಿ ಹತ್ರ ಇರೋ ಮರದ ಹತ್ತಿರ ದನದ ದೇಹ ವಗದಿಕ್ ಹೋಗಿತ್ತು. ಸುಮಾರ್ ಹೊತ್ತು ಯಂಗ ಅಲ್ಲಿ ಸುಳಿದಾಡಿದ್ರೂ ಹುಲಿ ಪತ್ತೆಯಾಜಿಲ್ಲೆ.. ಕೊನೆಗೆ ಬಂದಳಿಕೆಗೆ ವಾಪಸ್ ಹೋಗಿ ಊಟ ಮುಗಿಸ್ಕಂಡು ಮತ್ತೆ ವಾಪಸ್ ಬಂದು ಮರ ಹತ್ತಿ ಕುತ್ಗಂಡ್ಯ. ಮದ್ಯಾಹ್ನ ಆತು, ಸಾಯಂಕಾಲ ಆದ್ರೂ  ಹುಲಿ ಪತ್ತೇನೇ ಇಲ್ಲೆ. ಈ ಹುಲಿ ಹಿಂದ್ ಹೋಪ ಸಾವಾಸ ಸಾಕ್ರೋ.. ಹೇಳಿ ಅನಿಶಿ ಹೋತು. ಹಗೂರ್ಕೆ ಸೂರ್ಯನೂ ಕಂತತಾ ಇದ್ದಿದ್ದ.. ಕಪ್ಪಾಪ್ಲೆ ಆಗ್ತಾ ಇತ್ತು. ಯಂಗಕ್ಕಿಗೆ ಮರ ಇಳಿಯಲೆ ಒಂಥರಾ ಆಪಲೆ ಹಿಡತ್ತು. ಹಂಗೆ ಹೇಳಿ ಅಲ್ಲೇ ಕುತ್ಗಂಡು ಇಪ್ಪಲೂ ಆಗ್ತಿಲ್ಲೆ.. ಹಿಂಗೆ ಸುಮಾರ್ ಹೊತ್ತಾತು. ಕೊನಿಗೆ ಸುಮಾರ್ ಕಪ್ಪಾಗ್ತಾ ಇದ್ದು ಹೇಳ ಹೊತ್ತಿಗೆ ಬಂತು ನೋಡು ಹುಲಿ.. ಅನಾಮತ್ತು 8 ಅಡಿ ಉದ್ದ ಇತ್ತು. ಎಂತಾ ಗಾಂಭೀರ್ಯದಲ್ಲಿ ಅದು ನೆಡ್ಕಂಡು ಬಂತು ಅಂದ್ರೆ.. ಆಹಾ.. ಅದು ಸೀದಾ ದನದ ಹತ್ರಕ್ಕೆ ಬಂತು. ಯಂಗಂತೂ ಮೈ ರೋಮೆಲ್ಲಾ ನೆಟ್ಟಗಾಗಿತ್ತು. ಮೊದಲನೇ ಸಾರಿ ಹುಲಿ ಹೊಡೆತಾ ಇದ್ದಿದ್ನಲಾ.. ಜೊತಿಗೆ ನಿನ್ನೆ ರಾತ್ರಿ ಹಾರಿಸಿದ ಈಡು ಹುಸಿಯಾಗಿತ್ತಲಾ.. ಕೋವಿ ನೆಟ್ಟಗ್ ಮಾಡ್ಕಂಡು ಗುರಿ ಹಿಡದಿ. ಮತ್ತೂ ಹತ್ರಕ್ಕೆ ಬಂತು. ಹಂಗೇ ಢಂ. ಅನ್ಸಿದಿ. ಪಕ್ಕದಲ್ಲಿ ಕುತ್ಗಂಡ್ ಇದ್ದಿದ್ದ ಸುಬ್ಬಜ್ಜ ಒಂದ್ ಸಾರಿ ಕುಮಟಿ ಬಿದ್ದಿದ್ದ. ಮೈಯೆಲ್ಲಾ ಥರಗುಡ್ತಾ ಇತ್ತು. ಹುಲಿಗೆ ಗುಂಡು ತಾಗಿತ್ತು. ಬಿದ್ದಿದ್ದು ಕಾಣ್ತಾ ಇತ್ತು. ಯಾವ್ದಕ್ಕೂ ಇರಲಿ, ಎಲ್ಲಾರೂ ಜೀಂವ ಇದ್ದಿಕ್ಕು ಹೇಳಿ ಇನ್ನೊಂದು ಕೋವಿ ಲೋಡು ಮಾಡ್ಕ್ಯಂಡಿ. ಸುಮಾರ್ ಹೊತ್ತಾತು.. ಹುಲಿ ಬಿದ್ಕಂಡಿದ್ದು ಮಿಸುಕಾಡಿದ್ದಿಲ್ಲೆ.. ಇನ್ನೇನು ಇಳಿಯವು ಹೇಳ ಹೊತ್ತಲ್ಲಿ ಆ ಹುಲಿ ಹತ್ರಕ್ಕೆ ಎಂತದೋ ಅಲ್ಲಾಡಿದ ಹಂಗಾತು. ಸರಿಯಾಗಿ ನೋಡಿದ್ರೆ ಎರಡು ಹುಲಿಮರಿ..' ಎಂದು ಹೇಳಿ ಸುಮ್ಮನಾದ ಗಪ್ಪಜ್ಜ ..
                 ಮುಂದೇನಾಯ್ತು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು ಸುಳ್ಳಲ್ಲ.. ಹುಲಿ ಹೊಡೆದ ಎನ್ನುವ ವಿಷಯವೇನೋ ತಿಳಿಯುತು. ಹುಲಿಮರಿಯನ್ನೂ ಹೊಡೆದ್ನಾ? `ಮುಂದೆಂತ ಆತು..?' ಕುತೂಹಲ ತಡೆಯಲಾಗದೇ ಕೇಳಿದ್ದಳು ವಿಜೇತಾ.
                 `ಆವಾಗ್ಲೆ ಹೇಳಿದ್ನಲೆ.. ಮಧ್ಯ ಬಾಯಿ ಹಾಕಡಾ ಹೇಳಿ.. ಸ್ವಲ್ಪ ಸಂಪ್ರನ್ಶಕತ್ತಿ ತಡಿ..' ಅಂದ. ನಾನು ಸುಮ್ಮನೆ ಕುಳಿತೆ.
                 `ಹ್ವಾ ಗಪ್ಪತಿ... ಹೆಣ್ಣು ಹುಲಿಯಾಗಿತ್ತು ಕಾಣ್ತಾ ಹೊಡೆದಿದ್ದು.. ಮರೀನೂ ಇದ್ದಲಾ.. ಹೊಡೆಯದೇಯನಾ..? ಎರಡಿದ್ದು ಎಂದು ಕೇಳಿದ ಪಕ್ಕದಲ್ಲಿದ್ದ ಸುಬ್ಬಜ್ಜ.
                  `ಮರಿ ಪಾಪದ್ದಲಾ ಬಿಟ್ಹಾಕನನಾ..? ಆನು ಕೇಳಿದಿ.. ಬ್ಯಾಡದಾ ಗಪ್ಪತಿ.. ಹಾವು ಸಣ್ಣದಿದ್ರೂ ದೊಡ್ಡದಿದ್ರೂ ವಿಷನೇ ಅಲ್ದನಾ.. ಹಂಗೇಯಾ ಹುಲಿನೂವಾ ಮಾರಾಯಾ.. ಮರಿ ಇದ್ರೂ ಸೇಡಿಟ್ಕತ್ತಡಾ.. ಮುಂದೆ ದೊಡ್ಡಾಗಿ ತ್ರಾಸು ಕೊಡ್ತ್ವಿಲ್ಯನಾ..? ಒಂದ್ ಹುಲಿ ಒಂದ್ ಬಾಲ ಒಂದೇ  ಇನಾಮು ಸಿಕ್ತಿತ್ತಲಾ.. ಈಗ ಇವೆರಡನ್ನೂ ಕೊಂದ್ರೆ ಮೂರು ಹುಲಿ, ಮೂರು ಬಾಲ, ಮೂರು ಇನಾಮು ಸಿಕ್ತಲಾ.. ಹೊಡಿಯಾ ಗುಂಡ.. ಎಂದ. ಯಂಗೆ ಮನಸಿತ್ತಿಲ್ಲೆ.. ಕೊನಿಗೆ ಹ್ಯಾಂಗಂದ್ರೂ ಕೋವಿ ಲೋಡಾಕ್ಕಂಡಿತ್ತು ಒಂದ್ ಮರಿಗೆ ಹೊಡದಿ. ಅದನ್ನು ನೋಡಿ ಇನ್ನೊಂದು ತಪಶ್ಗ್ಯಂಡ್ ಹೋಪಲೆ ನೋಡಚು.. ಸುಬ್ಬಜ್ಜನ ಕೈಲಿದ್ದ ಬಂದೂಕಿಂದ ಅವನೂ ಗುಂಡು ಹೊಡೆದ  ಅದೂ ಬಿತ್ತು.. ಸುಮಾರ್ ಹೊತ್ತು ಬಿಟ್ಟು ಯಂಗವ್ ಮರ ಇಳಿದ್ಯ. ಅಷ್ಟೊತ್ತಿಗೆ ಯಂಗಳ ಕೋವಿ ಸದ್ದು ಕೇಳಿ ಹುಲಿ ಹೊಡೆದಿಕ್ಕು ಹೇಳಿ ಭತ್ತಗುತ್ತಿಗೆ, ಬಂದಳಿಕೆಯಿಂದ ಒಂದೆರಡು ಜನ ಬಪ್ಪಲೆ ಹಿಡದ.
                     ಆನು ಹುಲಿ ಹತ್ತಿರಕ್ಕೆ ಹೋಗಿ ನೋಡದಿ. ಎಂತಾ ಹುಲಿ ಗೊತ್ತಿದ್ದ. ಅಗಲಕ್ಕಿತ್ತು.. ಉದ್ದವೂ ಇತ್ತು. ಮರಿಗಳು ಚಂದಿದ್ವಾ.. ಆದ್ರೆ ಅವನ್ ಹೊಡೆದಿದ್ದಕ್ಕೆ ಯಂಗೆ ಬೇಜಾರಾಗೋತು.. ಅಷ್ಟೊತ್ತಿಗೆ ಯಲ್ಲಾ ಬಂದಿದ್ವಲಾ... ಯಂಗಳನ್ ಹೊಗಳಲೆ ಹಿಡಿದ್ವಾ.. ಹುಲಿ ಬೇಟೆಯಂತೂ ಆತು.. ಮುಂದಿನ ಕೆಲಸ ಮಾಡಕಾತು ಹೇಳಿ ಅಲ್ಲಿದ್ದವ್ಕೆ ಹೇಳದಿ. ಎಂತೆಂತೋ ತಂದ. ಹುಲಿ ಬಾಲ ತಗಂಡು ಹೊಂಟ್ಯ. ಕೊನಿಗೆ ಇನಾಮೂ ಸಿಕ್ತು. ಹುಲಿ ಚರ್ಮ ಇದ್ದಾ..' ಎಂದ ಗಪ್ಪಜ್ಜ .
                       `ಯಂಗೆ ಹುಲಿ ಬಾಲ ನೋಡಕಾಗಿತ್ತಲಾ.. ತೋರಿಸ್ತ್ಯಾ..?' ಎಂದು ವಿಜೇತಾ ಕೇಳಿದ ತಕ್ಷಣ ಇದ್ದಕ್ಕಿದ್ದಂತೆ ರೇಗಿದ ಗಪ್ಪಜ್ಜ ` ಎಂತದೇ.. ಮಧ್ಯ ಮಾತಾಡಡಾ ಹೇಳಿದ್ನಲೆ.. ಅದೆಂತಾ ಮಧ್ಯ ಮಧ್ಯ ಕಚಪಚ ಹಲುಬ್ತ್ಯೇ? ಸುಮ್ನೆ ಕುತ್ಗ ನೋಡನ' ಎಂದ..
                      ಮುಂದುವರಿದು `ಹುಲಿ ಬಾಲ ಇತ್ತಾ.. ಮೊನ್ನೆ ಮೊನ್ನೆವರೆಗೂ ಇತ್ತು. ಯನ್ನ ಮಗ ಬೆಂಗಳೂರಲ್ಲಿದ್ನಲಾ.. ಅಂವ ಬೇಕು ಹೇಳಿ ತಗಂಡ್ ಹೋದ..' ಅಂದ ಗಪ್ಪಜ್ಜ..
                      `ನಿಂಗವ್ ಬೇಕಾದ್ರೆ ಒಂದ್ ಸಾರಿ ಭತ್ತಗುತ್ತಿಗೆ ಗೆ ಹೋಗ್ ಬನ್ನಿ.. ಆ ಹುಲಿ ಹೊಡೆದ ಜಾಗ ನೋಡ್ಕ್ಯಂಡ್ ಬನ್ನಿ.. ದೊಡ್ ಮರ ಇದ್ದು..  ಭತ್ತಗುತ್ತಿಗೆ ಹೊಳೆ ಇದ್ದಲ್ರಾ ಅದಕ್ಕಿಂತ ಸ್ವಲ್ಪ ಮೇಲೆ ಆಗ್ತು.. ಅಲ್ಲೊಂದು ಯತ್ನಗಾಡಿ ರಸ್ತೆ ಇತ್ತು ಆಗ. ಅಲ್ಲೇ ಆಗ್ತು. ಆಗ ರಾಶಿ ಕಾಡಿತ್ತಾ.. ಕೊನಿಗೆ ಎಲ್ಲಾ ಬೋಳು ಹರಸಿಗಿದ. ಆನು ಮರ ಹತ್ತಗ್ಯಂಡು ಗುಂಡು ಹೊಡೆದ ಮರ ಇದ್ದ, ಕಡದಿಗಿದ್ವ ಗೊತ್ತಿಲ್ಲೆ.. ನಿಂಗವ್ ನೋಡ್ಕ್ಯಂಡು ಬನ್ನಿ.. ಯಂಗೂ ಹೇಳಿ ಹೀಗ ಅಲ್ಲಿ ಹ್ಯಾಂಗಿದ್ದು ಹೇಳಿ ಎಂದು ಸುಮ್ಮನಾದ.
                    ಗಪ್ಪಜ್ಜನ ಸಾಹಸಗಾಥೆ ಎಲ್ಲರಲ್ಲಿಯೂ ಬೆರಗನ್ನು ಮೂಡಿಸಿತು. ಆ ಕಾಲದಲ್ಲಿ ಹೀಗೆಲ್ಲಾ ನಡೆದಿತ್ತಾ ಎಂದುಕೊಂಡರು ಎಲ್ಲರೂ. ಪ್ರತಿಯೊಬ್ಬರಿಗೂ ಜಿಮ್ ಕಾರ್ಬೆಟ್ಟಿನ ಹುಲಿ ಹೊಡೆದ ಕಥೆಯನ್ನು ಕಣ್ಣಾರೆ ಕಂಡೆವೇನೋ ಎನ್ನುವಂತಹ ಅನುಭವ. ಯಾರಿಗೂ ಕ್ಷಣಕಾಲ ಬಾಯಿಂದ ಮಾತು ಹೊರಡಲೇ ಇಲ್ಲ. ಎಲ್ಲರೂ ಅಚ್ಚರಿಯಿಂದ ಕೇಳುತ್ತಲೇ ಇದ್ದರು. ಈಗಲೇ ಗವ್ವೆನ್ನುವ ಕಾಡು ಆಗ ಹೇಗಿ ಇದ್ದಿರಬೇಡ ಎಂದುಕೊಂಡರು ಎಲ್ಲರೂ. ಹಲವು ಕ್ಷಣಗಳ ನಂತರ ಎಲ್ಲರೂ ವಾಸ್ತವಕ್ಕೆ ಮರಳಿದರು.
                 `ಮೂರು ಹುಲಿಗಳದ್ದೂ ಬಾಲ ಕಿತ್ತುಕಂಡು ಹೋಗಿ ಯಂಗವ್ವು ಪಟೇಲಂಗೆ ತೋರ್ಸಿದ್ಯ. ನಂಗಕ್ಕಿಗೆ ಇನಾಮು ಸಿಕ್ಕಿತ್ತು. ಹುಲಿ ಹೊಡೆದ ಎರಡು ದಿನ ಭತ್ತಗುತ್ತಿಗೆ ಯಿಂದ ಹಿಡಿದು ಕುಚಗುಂಡಿ ತನಕ ಎಲ್ಲೆಲ್ಲಿ ಹುಲಿ ಕಾಟ ಇತ್ತೋ ಅಲ್ಲೆಲ್ಲ ಹುಲಿ ಹೊಡೆದ ಯಂಗಳನ್ನು ಮೆರವಣಿಗೆ ಮಾಡಿಸಿದ್ದ. ಹಬ್ಬ ಮಾಡಿದಿದ್ದ. ಅದಿನ್ನೂ ಯನ್ನ ಕಣ್ಣಲ್ಲಿ ಕಟ್ಟಿದ ಹಾಂಗೆ ಇದ್ದು ನೋಡಿ..' ಎಂದರು ಗಣಪಜ್ಜ. ಎಲ್ಲರಿಗೂ ಗಣಪಜ್ಜನ ಎದುರು ಒಮ್ಮೆ ಎದ್ದು ನಿಂತು ಸೆಲ್ಯೂಟ್ ಮಾಡಬೇಕು ಎನ್ನಿಸಿತು. ಒಂದಿಬ್ಬರು ಎದ್ದು ನಿಂತೂ ನಿಂತಿದ್ದರು.

(ಮುಂದುವರಿಯುತ್ತದೆ..)

ಅಘನಾಶಿನಿ ಕಣಿವೆಯಲ್ಲಿ-17

(ಹುಲಿ ಶಿಖಾರಿಯ ಸಾಂದರ್ಭಿಕ ಚಿತ್ರ)
        `ಆ ಕಾಲದ ಬಗ್ಗೆ ಹೇಳೋದು ಅಂದ್ರೆ ಎಷ್ಟು ಖುಷಿಯ ಸಂಗ್ತಿ ಗೊತ್ತಿದ್ದಾ? ಆವಾಗ ನಾವು ಇಲ್ಲಿಂದ ದಿಲ್ಲಿಯವರೆಗಾದ್ರೂ ಬರಿಗಾಲಲ್ಲಿ ನಡ್ಕೊಂಡೇ ಹೋಗ್ತಿದ್ಯಾ. ಈಗಿನ ಹಾಂಗೆ ಬೈಕು-ಕಾರು ಇತ್ತಿಲ್ಲೆ. ರೈಲು ಇತ್ತು. ಆದರೆ ರೈಲು ಹತ್ತಲೆ ಹೋಗವು ಅಂದ್ರೂ ಅದೆಷ್ಟೋ ಕಿಲೋಮೀಟರ್ ದೂರ ಹೋಗಕಾಗಿತ್ತು. ಬಗಲ ಚೀಲದ ತುಂಬ ಊಟ ಕಟ್ಟಿಕ್ಯಂಡು ನಡೆಯಲೆ ಶುರು ಹಚ್ಚಿಕ್ಯಂಡ್ರೆ ಅದೆಷ್ಟು ಮೈಲಿ ದೂರ ಒಂದೇ ಉಸಿರಿಗೆ ನಡ್ಕೊಂಡು ಹೋಗ್ತಿದ್ಯ ಗೊತ್ತಿದ್ದಾ. ನಾ ಆಗ ಸಣ್ಣಕ್ಕಿದ್ದಿದ್ದೆ. ನಂಗಿನ್ನೂ ಅದು ಅಸ್ಪಷ್ಟ ನೆನಪು. ಈಗ ನಮ್ಮೂರ ಹೊಳೆ ದಂಡೆಯ ಮೇಲೆ ವಾಟೆಮಟ್ಟಿ ಬೆಳೆದುಕೊಂಡಿದ್ದಲ್ಲಾ.. ಅಲ್ಲಿ ಮೊದಲು ನಮ್ಮೂರಿನ ಎತ್ತಿನ ಗಾಡಿ ರಸ್ತೆ ಇತ್ತು. ಶಿರಸಿಯಿಂದ ಹೋಗಿ ಬಂದು ಮಾಡವು ಅಂದ್ರ ಅದೇ ರಸ್ತೆ ಅವಲಂಬನೆ ಮಾಡಕಾಗಿತ್ತು. ನಮ್ಮೂರಿನಿಂದ ಹೊಳೆ ತೀರದಲ್ಲಿ ನಡ್ಕೊಂಡು ಹೋಗಿ, ಮುತ್ಮೂರ್ಡು ತಲುಪಿ, ಅಲ್ಲಿಂದ ಬಾಳಗಾರಿಗೆ ಹೋಗಿ ಆಮೇಲೆ ಭತ್ತಗುತ್ತಿಗೆ ತಲುಪಿ ಅಲ್ಲಿಂದ ಶಿರಸಿಗೆ ಹೋಗಕಾಗಿತ್ತು. ನಮ್ಮೂರಲ್ಲಂತೂ ಈಗಿರೋದಕ್ಕಿಂತ ಹತ್ತು ಪಟ್ಟು ಕಾಡಿತ್ತು. ಮನೆ ಬಾಗಿಲಲ್ಲೇ ಹುಲಿಯ ಬಿಡಾರ ಇತ್ತು ಅಂದ್ರೂ ತಪ್ಪಿಲ್ಲೆ ನೋಡಿ. ಆಗ್ಲೇ ನಾನು ಮೂರು ಹುಲಿ ಕೊಂದಿದ್ದಿ ಗೊತ್ತಿದ್ದಾ..' ಎಂದರು ಗಪ್ಪಜ್ಜ.
          ಎಲ್ಲರೂ ಒಮ್ಮೆಲೆ ಬೆಚ್ಚಿ ಬಿದ್ದು `ವಾಟ್...' ಎಂಬ ಉದ್ಗಾರದೊಂದಿಗೆ ಕುಮುಟಿ ಬಿದ್ದರು.
            ಹುಲಿ ಹೊಡೆಯುವುದು ಸಾಮಾನ್ಯವೇ..? ಇಲಿಯನ್ನು ಕೊಲ್ಲಲು ಹಲವರು ಹೆದರುವ ಇಂದಿನ ದಿನಮಾನದಲ್ಲಿ ಹುಲಿ ಹೊಡೆಯುವುದು ಅಂದರೆ ಸುಲಭವೇನಲ್ಲ ಬಿಡಿ. ಗಪ್ಪಜ್ಜ ಇಂತಹ ಸಾಹಸ ಮಾಡಿದ್ದಾನೆ ಎಂದಿದ್ದನ್ನು ಕೇಳಿ ಎಲ್ಲರಿಗೂ ಒಳಗೊಳಗೆ ಖುಷಿ. ಊರಿನ ತುಂಬೆಲ್ಲ ಗಪ್ಪಜ್ಜನಿಗೆ ಹುಲಿ ಹೊಡೆದ ಗಪ್ಪಜ್ಜ ಎನ್ನುವ ಮಾತು ಚಾಲ್ತಿಯಲ್ಲಿ ಬಂದಿತ್ತು. ವಿನಾಯಕನಿಗೆ ಇದು ಒಮ್ಮೆಲೆ ನೆನಪಿಗೆ ಬಂದಿತು. ಅಲ್ಲದೇ ಅಜ್ಜ ಎದುರು ಸಿಕ್ಕಾಗಲೆಲ್ಲ `ಗಪ್ಪಜ್ಜ .. ಹುಲಿ ಹೊಡೆದಿದ್ನಡಾ ಮಾರಾಯಾ..' ಎಂದು ಹೇಳುವ ಮೂಲಕ ಗಪ್ಪಜ್ಜ ನೆಂದರೆ ಕನ್ನಡ ಚಿತ್ರರಂಗದ ವಿಲನ್ನೇ ಇರಬೇಕು ಎಂದು ಅನೇಕರು ನನ್ನಲ್ಲಿ ಭೀತಿಯನ್ನು ಹುಟ್ಟುಹಾಕಿದ್ದರು. ವಿನಾಯಕನಲ್ಲಿ ಈ ಮಾತು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ತಾನು ಚಿಕ್ಕವನಾಗಿದ್ದಾಗ ಸದಾ ಕಿಲಾಡಿ ಮಾಡುವ ನಮ್ಮ ವಿರುದ್ಧ ಗಪ್ಪಜ್ಜ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಆಗಾಗ ತನ್ನ ಊರುಗೋಲಿನಿಂದ ಬಾಸುಂಡೆ ಬರುವಂತೆ ಬಡಿದಿದ್ದೂ ಇದೆ. ಇಂತಹ `ಗಪ್ಪಜ್ಜ ಹುಲಿ ಹೊಡೆದಿದ್ನಡಾ..' ಎಂದು ದಂಟಕಲ್ಲಿನ ಹಿರಿಯರ ಆದಿಯಾಗಿ ಹೇಳುತ್ತಿದ್ದ ಮಾತು ಚಿಕ್ಕಂದಿನಲ್ಲಿ ಭಯವನ್ನು ಹುಟ್ಟಿಸಿದರೂ ದೊಡ್ಡವನಾದ ಮೇಲೆ ಕುತೂಹಲಕ್ಕೆ ಕಾರಣವಾಗಿತ್ತು.
                ವಿನಾಯಕನಿಗೆ ದೊಡ್ಡವನಾದಂತೆಲ್ಲ ಗಪ್ಪಜ್ಜ ನ ಮೇಲಿದ್ದ ಭಯ ದೂರವಾಗಿತ್ತು. ಅಷ್ಟರಲ್ಲಿ ವಯಸ್ಸಾಗಿದ್ದ ಗಪ್ಪಜ್ಜ ತನ್ನ ಸಿಟ್ಟು ಸೆಡವನ್ನು ದೂರ ಮಾಡಿಕೊಂಡು ಪರಿಸ್ಥಿತಿಗೆ ತಕ್ಕಂತೆ ಅಸಹಾಯಕತೆಯನ್ನು, ಸೌಮ್ಯ ಸ್ವಭಾವವನ್ನೂ ಹೊಂದಿದ್ದ. ವಿನಾಯಕ ಕಾಲೇಜಿಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲೆಲ್ಲ ಆಗಾಗ ಮಾತಿಗೆ ಸಿಗುತ್ತಿದ್ದ ಗಣಪಜ್ಜ `ಹ್ವಾ..ಶಿರಸಿಂದ ಬರಕಿದ್ರೆ ಸಂಯುಕ್ತ ಕರ್ನಾಟಕ ತಗಂಡು ಬಾರಾ..ಓದಕಾಗಿತ್ತು..' ಎಂದು ಹೇಳುವ ಮೂಲಕ ಮಾತಿಗೆ ಪೀಠಿಕೆ ಹಾಕುತ್ತಿದ್ದ. ವಿನಾಯಕನೂ ಮೊದ ಮೊದಲು ಭಯದಿಂದ ಮಾತನಾಡುತ್ತಿದ್ದ. ಕೊನೆ ಕೊನೆಗೆ ಮಾತು ಆಪ್ತವಾಗುವ ಹಂತಕ್ಕೆ ಬಂದಿತ್ತು. ಸಲಿಗೆಯೂ, ಕುಶಾಲಿ ಮಾಡುವ ಹಂತವೂ ತಲುಪಿತ್ತು.
                ವಿನಾಯಕ ನೆನಪು ಮಾಡಿಕೊಳ್ಳುತ್ತಿದ್ದಂತೆಯೇ ವಿಜೇತಾ ಹಾಗೂ ವಿಕ್ರಮರು ಗಪ್ಪಜ್ಜನ ಬಳಿ ಹುಲಿ ಹೊಡೆದ ವೃತ್ತಾಂತವನ್ನು ಹೇಳುವಂತೆ ಪೀಡಿಸಲು ಆರಂಭಿಸಿದರು. ತನ್ನ ಯವ್ವನದಲ್ಲಿ ಹುಲಿಯಂತೆಯೇ ಅಬ್ಬರದಿಂದ ಮೆರೆದಿದ್ದ ಗಪ್ಪಜ್ಜ ನ ಬಳಿ ಆತನ ಯವ್ವನದ ದಿನಗಳ ಬಗ್ಗೆ ಹೇಳು ಎಂದಾಗ ಆತ ಬಿಡುತ್ತಾನೆಯೇ..? ವಯಸ್ಸಾದ ಮೇಲೆ ಆತನಿಗೂ ಹೊತ್ತು ಹೋಗಬೇಕು. ಮನೆಯಲ್ಲಿ ಮಾತುಕೆಳುತ್ತಿದ್ದವರೆಲ್ಲ ಈಗ ದೊಡ್ಡವರಾಗಿದ್ದಾರೆ. ಆತನಿಗೆ ಮಾತನಾಡಲು ಒಬ್ಬರು ಬೇಕಿತ್ತು. ಅದೇ ಸಮಯಕ್ಕೆ ಸಿಕ್ಕು ಕೇಳಿದ್ದರು. `ತಡಿರಾ ತಮಾ ಚಾ ಕುಡ್ಕತ್ತ ಮಾತಾಡನಾ..' ಎಂದು ಹೇಳಿ ಮೊಟ್ಟ ಮೊದಲನೇ ಸಾರಿ ತಾನು ಹುಲಿ ಹೊಡೆದ ಕಥೆಯನ್ನು ಹೇಳಲು ಶುರು ಮಾಡಿದ್ದ. ತೊಂಭತ್ತು ವಸಂತಗಳನ್ನು ಮೀರಿದ್ದ ಗಪ್ಪಜ್ಜ ತನ್ನ ಇಪ್ಪತ್ತರ ಹರೆಯದಲ್ಲಿ ಮಾಡಿದ್ದ ಸಾಹಸದ ವಿವರವನ್ನು ಕೇಳಲು ಎಲ್ಲರೂ ಅವರ ಮನೆಯ ಖುರ್ಚಿಯ ತುದಿಯಲ್ಲಿ ಚೂಪಗೆ ಕುಂತಿದ್ದರು..

**
            `ನಂಗಾಗ  ಇಪ್ಪತ್ತೋ ಇಪ್ಪತ್ತೈದೋ.. ಸಮಾ ನೆನಪಿಲ್ಲೆ.. ಆಗ ಆನು ಅಂದ್ರೆ ಸುತ್ತಮುತ್ತಲೆಲ್ಲ ಭಯಂಕರ ಹೆದರ್ತಿದ್ದ. ಉರಾಉರಿ ಕಾಲ.. ಯನ್ನ ಉರಾಉರಿ ನೋಡಿ ಎಷ್ಟ್ ಜನ ಯನ್ನ ಅಪ್ಪಯ್ಯನ ಕೈಲಿ ಬಂದ್ ಪುಕಾರು ಹೇಳಿದ್ವೇನ. ಯನ್ನ ಅಪ್ಪಯ್ಯನೂ ಅಷ್ಟೇ ಅಬ್ಬರದ ಮನುಷ್ಯ ಆಗಿದ್ದ. ಅದಕಾಗೇ ಆ ದಿನಗಳಲ್ಲಿ ಆನು ಬಹಳಷ್ಟು ಹಾರಾಡಿದ್ರೂ ಅಂವ ಯಂಗೆ ಎಂತದ್ದೂ ಮಾಡ್ತಿದ್ನಿಲ್ಲೆ..' ಎಂದ.
`ಹೂಂ.. ಹೂಂ..' ಎಂದರು ಎಲ್ಲರೂ
                     'ಈಗ ಯಂಗೆ ತೊಂಭತ್ತಾತ ಮಾರಾಯಾ.. ಯಂಗೆ ಇಪ್ಪತ್ತು ವರ್ಷದ ಆಜು ಬಾಜಲ್ಲಿ ನಡೆದಿದ್ದು ಅಂದ್ರೆನಿಮಗೆಂತದಾದ್ರೂ ತಲಿಗೆ ಹೋಗ್ಲಕ್ಕ..? ಆಗಿನ ಕಾಲ, ಹೆಂಗಿತ್ತು ಗೊತ್ತಿದ್ದ.. ಈ ಊರಿದ್ದಲಾ ಇದರ ಸುತ್ತಮುತ್ತ ಈಗ ಬೋಳು ಗುಡ್ಡ ಕಾಣ್ತಲಾ.. ಆಗೆಲ್ಲಾ ಬರೀ ಕಾನೇ ಇದ್ದಿತ್ತು.. ಈಗ ಯಮ್ಮನೆ ಕೊಟ್ಗೆ ಇದ್ದಲಾ ಅಲ್ಲೀವರಿಗೆ ಹುಲಿ ಬಂದು ದನ-ಕರ ಎಲ್ಲಾ ಹೊತ್ಕಂಡು ಹೋಗ್ತಿತ್ತು ಹುಲಿ. ಹುಲಿಯ ಅಬ್ಬರಕ್ಕೆ ದನಗಳ ಜೊತೆಗೆ ಜನಗಳೂ ಬೆಚ್ಚಿ ಬಸವಳಿದು ಬಿಟ್ಟಿದಿದ್ದ ಒಂದು ಕಾಲದಲ್ಲಿ.. ಬ್ರಿಟೀಷರ ಕಾಲ ಬೇರೆ ನೋಡು...' ಎಂದರು.
                      ಎಲ್ಲರೂ ಅವರು ಹೇಳಿದಂತೆಲ್ಲ ಕಣ್ಮುಂದೆ ಎಪ್ಪತ್ತು ವರ್ಷಗಳ ಹಿಂದಿನ ಚಿತ್ರಣ ಅಂದರೆ 1930-40ರ ದಶಕದ ಚಿತ್ರಣವನ್ನು ಕಟ್ಟಿಕೊಳ್ಳುತ್ತ ಹೋದರು. ಅವರು ಹುಲಿಯನ್ನು ರೌಧ್ರ ಭಯಂಕರವಾಗಿ ಚಿತ್ರಿಸುತ್ತ ಹೋದರು. ಎಲ್ಲರ ಕಣ್ಣಮುಂದೆ ಹುಲಿಯೆಂದರೆ ರೌದ್ರ ಎನ್ನಿಸಲೇ ಇಲ್ಲ. ಅಂದಿನ ಹಾಗೆ ಹುಲಿ ಕಣ್ಣೆದುರಿಗೆ ಬಂದು ಎಡತಾಕಿ ಹಾಯ್ ಹೇಳಿ ಹೋಗುವುದಿಲ್ಲ ನೋಡಿ. ಹುಲಿಯ ಭಯವೂ ಇಲ್ಲವಲ್ಲ. ಅದಕ್ಕೆ ಹುಲಿಯೆಂದರೆ ಬಹುತೇಕ ದಂತಕಥೆಯಂತೆ, ಚಿಕ್ಕಮಕ್ಕಳ ಪಾಲಿಗೆ ಆಟಿಕೆಯಂತೆ ಅನ್ನಿಸಿತು. ಅದಕ್ಕೆ ತಕ್ಕಂತೆ ಚಿತ್ರಣ ಕೂಡ.
                      `ಯಂಗವ್ವು ನಿಂಗಳ ಹಾಂಗೆ ಇದ್ದ ಕಾಲ ಅದು. ಬ್ರಿಟೀಷ್ ರೂಲಿತ್ತು. ಈಗಿನ ಹಾಂಗೆ ಹುಲಿ ಬೇಟೆ ನಿಷೇಧ ಇತ್ತಿಲ್ಲೆ. ಮತ್ತೊಂದ್ ವಿಷ್ಯ ಅಂದ್ರೆ ಆಗ ಬ್ರಿಟೀಷರೇ ಹುಲಿ ಹೊಡೆಯಲೆ ಅಡ್ಡಿಲ್ಲೆ ಹೇಳಿ ಹೇಳಿದಿದ್ದ. ಹುಲಿ ಹೊಡೆದು ಅದರ ಬಾಲ ತಂದು ಪಟೇಲನ ಬಳಿ ತೋರಿಶಿದವ್ಕೆ ಇನಾಮೂ ಸಿಕ್ತಿತ್ತು. ನಮ್ಮೂರಲ್ಲೂ ಹುಲಿ ಕಾಟ ಇತ್ತಲಾ.. ಹುಲಿ ಹೊಡಿಯದೇ ಸೈ..ಅಂದಕಂಡಿ..ಬಂದೂಕು ಬೇಕು ಹೇಳಿ ಅಪ್ಪಯ್ಯನ ಹತ್ರೆ ಕೇಳದು ಹೆಂಗೆ..? ತಲೆಬಿಶಿ ಶಿಕ್ಕಾಪಟ್ಟೆ ಆಗೋತು. ಅಪ್ಪಯ್ಯನ ಹತ್ರ ಕೇಳಿರೆ ಎಲ್ಲಾದ್ರೂ ಬೈದು ಸುಮ್ಮಂಗಿರಾ.. ನೀ ಹುಲಿ ಉಸಾಬರಿಗೆ ಹೋಗದು ಬ್ಯಾಡಾ.. ಹೇಳಿ ಹೇಳಿದ್ರೆ ಎನ್ನುವ ಹೆದ್ರಿಕೆ ಇತ್ತು.. ಕೊನಿಗೂ ಬಿಟ್ಟಿದ್ನಿಲ್ಲೆ.. ಕೇಳ್ದಿ ಹೇಳಾತು.. ಅಪ್ಪಯ್ಯ ಅಡ್ಡಿಲ್ಲೆ ಅಂದ್ ಬಿಟ್ನಾ..
                   ಈಗಿನ ಹಾಂಗೆ ಬಸ್ಸಿತ್ತಿಲ್ಯಲಾ..ಅದೇ ಖುಷಿಯಲ್ಲಿ ಶಿರಸಿಗೆ ನೆಡ್ಕಂಡು ಹೋಗಿ ಬಂದೂಕು ತಗಂಡ್ ಬಂದಿ.. ತಗಾ.. ಇದೇ ಇಲ್ನೋಡು.. ಇದೇ ಬಂದೂಕು..' ಎಂದು ಗಪ್ಪಜ್ಜ ಬಂದೂಕು ತೋರಿಸಿದಾಗ ಗಪ್ಪಜ್ಜ ಹುಲಿ ಹೇಗೆ ಹೊಡೆದಿರಬಹುದು ಎನ್ನುವ ಕಲ್ಪನೆ ಮನದಲ್ಲಿ ಮೂಡಿ ಎಲ್ಲರಲ್ಲೂ ರೋಮಾಂಚನ..
                   ಹಳೇ ತೇಗದ ಮರದ ದೊಡ್ಡ ಹಿಡಿಕೆ ಹೊಂದಿದ್ದ ಬಂದೂಕು ಅದು. 70 ವರ್ಷ ಹಿಂದಿಂದು ಬೇರೆ. ಈಗತಾನೆ ಎಣ್ಣೆ ಹಾಕಿ ಒರೆಸಿ ಇಟ್ಟಿದ್ದರೋ ಎನ್ನುವಂತೆ ಮಿಂಚುತ್ತಿತ್ತು. ತಗಳ್ರಾ ಎಂದು ಹೇಳಿದವರೇ ಎಲ್ಲರ ಮುಂದೆ ಬಂದೂಕನ್ನು ಹಿಡಿದರು.. ಪ್ರದೀಪ ಎತ್ತಿಕೊಂಡ.. ರಾವಣ ಬಿಲ್ಲನ್ನೆತ್ತಲೂ ಅಷ್ಟು ಕಷ್ಟಪಟ್ಟಿದ್ದನೋ ಇಲ್ಲವೋ.. ಅದರ ಭಾರಕ್ಕೆ ಒಮ್ಮೆ ಆಯ ತಪ್ಪಿದ.. `ತಮಾ.. ನಿಂಗೆ ಎತ್ತಲೆ ಆಗ್ತಿಲ್ಲೆ.. ನೋಡು.. ಆಗ ಯಂಗವ್ವು ಇದನ್ನ ವಂದೇ ಕೈಯಲ್ಲಿ ಹಿಡಕಂಡು ಬೇಟೆ ಮಾಡ್ತಿದ್ಯ.. ಹುಲಿ ಹೊಡೆದಿದ್ದೂ ಇದರಲ್ಲೇಯಾ.. ಅಂದ್ರೆ ನೀ ನಂಬ್ತಿಲ್ಲೆ..' ಎಂದಾಗ ಪ್ರದೀಪ ಕಕ್ಕಾಬಿಕ್ಕಿ.
ಗಪ್ಪಜ್ಜ ಮುಂದುವರಿದ..
                     `ಒಂದು ಚಳಿಗಾಲ ಹುಲಿಗೆ ಗತಿ ಕಾಣ್ಸವು ಹೇಳಿ ಅಂದಕಂಡಿದ್ದಿದ್ದಿ. ಆನು ಬಂದೂಕು ತಂದಿಟ್ಟು ತಿಂಗಳು ಗಟ್ಟಲೆ ಆಗಿತ್ತು.. ಆದರೆ ಎಲ್ಲೋ ಅದಕ್ಕೆ ಸೂಟು ಸಿಕ್ಕಿತ್ತು ಕಾಣ್ತು.. ಹುಲಿಯ ಪತ್ತೇನೆ ಇಲ್ಲೆ.. ಅಪ್ಪಯ್ಯಂತೂ ಗಪ್ಪತಿ ಬಂದೂಕು ತಗಬಂಜಾ ಹೇಳಿ ಹುಲಿಗೆ ಗೊತ್ತಾಗೋಜು ಕಾಣ್ತು.. ಹುಲಿ ಇತ್ಲಾಗೆ ಮಕಾನೆ ಹಾಕಿದ್ದಿಲ್ಲೆ ಹೇಳಿ ಹೇಳಲೆ ಶುರು ಮಾಡಿದ್ದ. ವಾರಕ್ಕೆ ಎರಡು ಸಾರಿಯಾದರೂ ಬಂದು ಕೊಟ್ಗೆ ಮೇಲೆ ದಾಳಿ ಮಾಡ್ತಾ ಇದ್ದಿದ್ ಹುಲಿ ಎತ್ಲಾಗ್ ಹೋತು ಅನ್ನೋ ತಲೆಬಿಸಿ... ಹಿಂಗೆ ಸ್ವಲ್ಪ ದಿನ ಆದ್ಮೇಲೆ ಒಂದಿನ ಮೂರು ಸಂಜೆ ಹೊತ್ತಲ್ಲಿ ನಮ್ಮೂರ್ ಜೀಡೆಹೊಂಡ ಇದ್ದಲಾ ಅಲ್ಲಿ ಹುಲಿ ಗಂವ್ ಅಂತಾ.. ಹೋ ಬಂತು ಹುಲಿ ಅಂದ್ಕಂಡಿ.. ಮೈಯೆಲ್ಲಾ ಚುರು ಚುರುಗುಡಲೆ ಹಿಡತ್ತು.. ಹುಲಿ ಹೊಡೆಯವ್ವು ಹೇಳಿ ಒಂಥರಾ ಖುಷಿ.. ಬಂದೂಕು ಎತ್ತಿ ಲೋಡು ಮಾಡಿಟ್ಗಂಡಿ..
                     `ಸುಮಾರ್ ಹೊತ್ತಾತು..ಜೀಡೆ ಹೊಂಡದಲ್ಲಿ ಕೂಗೋ ಹುಲಿ ಮನೆ ಹತ್ರ ಬತ್ತೇ ಇಲ್ಲೆ.. ಯಂಗಂತೂ ಯದೆಯಲ್ಲಿ ಢವ ಢವ.. ರಾತ್ರಿ ಎಂಟ್ ಗಂಟೆ ಆದ್ರೂ ಹುಲಿ ಬಪ್ಪ ಲಕ್ಷಣನೇ ಇಲ್ಲೆ .. ಈ ಹುಲಿಗೆ ಹುಲಿ ಹಿಡಿಲಿ ಹೇಳಿ ಬೈದು ದಣೀ ಬಂದು ಊಟಕ್ ಕುಂತಿದ್ದಿದ್ದಿ.. ಕ್ವಟ್ಗೇಲಿ ದನ ಕರ ಎಲ್ಲಾ ಹುಯ್ಯಲೆಬ್ಸಿಬಿಟ್ಟ.. ಓಹೋ ಹುಲಿ ಬಂಜು ಅಂದ್ಕಂಡಿ.. ಅದಕ್ ಸರಿಯಾಗಿ ಅಪ್ಪಯ್ಯ.. ತಮಾ ಕೊಟ್ಗಿಗೆ ಹುಲಿ ಬಂಜು ಕಾಣ್ತು.. ನೋಡು.. ಎಂದ.. ಅಲ್ಲೆಲ್ಲೋ ಇಟ್ಟಿದ್ದು ಲಾಟನ್ ಹಿಡ್ಕಂಡು ಕ್ವಟ್ಗಿಗೆ ಹೋದ್ರೆ ಹೌದು.. ಹುಲಿ ಬಂಜು..'
                   ಎಂದು ನಿಟ್ಟುಸಿರಿಟ್ಟರು..
                  ಎಲ್ಲರಿಗೂ ಮುಂದೇನಾಯ್ತು ಅನ್ನುವ ಕುತೂಹಲ.. ಆಮೇಲೆ ಎಂದರು.. ತಡಿರಾ ವಂದಕ್ಕೆ ಹೋಗಿ ಬತ್ತಿ ಎಂದರು ಗಪ್ಪಜ್ಜ .. ಎಲ್ಲರಿಗೂ ಸಿನೆಮಾ ಮಧ್ಯ ಇಂಟರ್ವಲ್ ಬಂದಂಗಾಯ್ತು.. ವಂದಕ್ಕೆ ಹೋದ ಗಪ್ಪಜ್ಜ ವಾಪಾಸು ಬರುವುದರೊಳಗಾಗಿ ಬಂದೂಕನ್ನು ನೋಡಿ ಅದರ ಭಾರದ ಕಾರಣ ಉಸಾಬರಿ ಬ್ಯಾಡ ಎಂದು ಪ್ರದೀಪ ಅದನ್ನು ದೂರಕ್ಕಿಟ್ಟು ಪೆಕರನಂತೆ ನಕ್ಕಿದ್ದ..
                     ಅವರ ಹಳೆಯ ಮನೆಯ ಗೋಡೆಯ ಮೇಲೆ ಹತ್ತು ಹಲವು ತರಹೇವಾರಿ ಕ್ಯಾಲೆಂಡರುಗಳಿದ್ದರೂ ಅಲ್ಲೊಂದು ಕಡೆಗೆ ಪ್ಲಾಸ್ಟಿಕ್ ಹೂವಿನ ಹಾರ ಹಾಕಿದ ಒಂದು ಪೋಟೋ ಹಾಗೂ ಅದರ ಕೆಳಭಾಗದಲ್ಲಿದ್ದ ತಾಮ್ರಪಟ ಕಣ್ಣಿಗೆ ಕಂಡಿತು. ಹತ್ತಿರ ಹೋಗಿ ನೋಡಿದಳು ವಿಜೇತಾ. ಅದು ಗಪ್ಪಜ್ಜ ನ ಅಪ್ಪಯ್ಯ ಗಣೇಶಜ್ಜನ ಪೋಟೋ ಹಾಗೂ ಆತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಭಾರತ ಸರ್ಕಾರ ನೀಡಿದ ಗೌರವ ಫಲಕವಾಗಿತ್ತು.. ಅದರಲ್ಲಿ ಬರೆದಿದ್ದ ಇಂಗ್ಲೀಷ್ ಹಾಗೂ ಹಿಂದಿ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದಿ ಮುಗಿಸುವುದರೊಳಗಾಗಿ ಒಂದು ನಂಬರ್ ಕಾರ್ಯ ಮುಗಿಸಿ ಬಂದ ಗಪ್ಪಜ್ಜ ಅವರ ಮನೆಯ ಕಾಲಮಣೆ ಮೇಲೆ ಕುಳಿತು ಮಾತಿಗೆ ತೊಡಗಿದ್ದರು.

(ಮುಂದುವರಿಯುತ್ತದೆ...)

ಸೆಳೆಯುತ್ತಿದೆ ಕಲ್ಪ-ಶಿಲ್ಪ


             ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿ ಹಲವಾರು ವಿಶೇಷತೆಗಳನ್ನು ಅನಾವರಣಗೊಳಿಸಿತು. ರೈತರು, ತೋಟಿಗರು ಪೋಷಿಸಿಕೊಂಡು ಬಂದಿರುವ ಹಲವಾರು ಕಲೆ, ವೈವಿಧ್ಯತೆಗಳನ್ನು ಅನಾವರಣಗೊಳಿಸಿತು. ಶ್ರೀಮಠದಲ್ಲಿ ಅನಾವರಣಗೊಂಡ ಕಲಾ ವಿಶಿಷ್ಟತೆಯಲ್ಲಿ ಕಲ್ಪ ಶಿಲ್ಪವೂ ಒಂದು.
      ಕುಮಟಾ ತಾಲೂಕಿನ ಮೂರೂರಿನ ಸಿದ್ಧರ ಮಠದ ಶಿವಮೂರ್ತಿ ಭಟ್ಟರ ಕೈಯಲ್ಲರಳಿದ ಬೇರು ಬೊಗಟೆ ಕಲಾಕೃತಿಗಳು, ತೆಂಗಿನ ಚಿಪ್ಪಿನ ಕಲಾಕೃತಿಗಳು, ಮರದ ವಿಶಿಷ್ಟ ಕೆತ್ತನೆಗಳು ಶ್ರೀಮಠದ ಆವರಣದಲ್ಲಿ ಪ್ರದರ್ಶನಕ್ಕಿದ್ದವು. ಹಲವಾರು ವರ್ಷಗಳ ಶ್ರಮದಿಂದ ಮೂಡಿದ್ದ ವಿಶಿಷ್ಟ ಆಕೃತಿಗಳು ಪ್ರದರ್ಶನದಲ್ಲಿದ್ದವು. ಕೃಷಿ ಜಯಂತಿಗೆ ಆಗಮಿಸಿದ್ದ ಕೃಷಿಕರ, ರೈತರ ಹಾಗೂ ತೋಟಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.      

                    ಚಿಕ್ಕ ಕಿರುಬೆರಳ ಗಾತ್ರದ ಆಕೃತಿಗಳಿಂದ ಹಿಡಿದು ಒಂದಡಿ ಎತ್ತರದ ಬೇರು ಬೊಗಟೆ ಕಲಾಕೃತಿಗಳೂ ಕಲ್ಪ ಶಿಲ್ಪದಲ್ಲಿದ್ದವು. ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗಿದ್ದ ಬಗೆ ಬಗೆಯ ಆಕೃತಿಗಳಂತೂ ಎಲ್ಲರನ್ನೂ ಸೆಳೆದವು. ಕಲ್ಲಿನಿಂದಲೇ ಮಾಡಿದ್ದ ಕೊಳಲು ಎಲ್ಲರಲ್ಲಿಯೂ ಬೆರಗು ಮೂಡಿಸಿತು. ಕಲ್ಲಿನಿಂದ ಕೊಳಲನ್ನು ಮಾಡಲು ಸಾಧ್ಯವಿದೆ ಎನ್ನುವುದು ವಿಸ್ಮಯಕ್ಕೆ ಕಾರಣವಾಯಿತು. ಬಿದಿರು, ಶಮೆ ಹಾಗೂ ವಾಟೆ ಬಿದಿರಿನಿಂದ ಕೊಳಲನ್ನು ಮಾಡಲಾಗುತ್ತದೆ. ಆದರೆ ಕಲ್ಲಿನಿಂದ ಕೊಳಲನ್ನು ಮಾಡುವ ಪರಿಕಲ್ಪನೆಯೇ ವಿಶಿಷ್ಟವಾದುದು. ಶಿಲ್ಪ ಕಲ್ಪದ ರೂವಾರಿಯಾದ ಶಿವಮೂರ್ತಿ ಭಟ್ಟರ ತನ್ಮಯತೆ ಕಲ್ಲಿನ ಕೊಳಲಿಗೆ ಕಾರಣವಾಗಿದೆ. ಎರಡು ದಿನಗಳ ಕಾಲ ಶೃದ್ಧೆಯಿಂದ ಕೆಲಸ ಮಾಡಿ ಕಲ್ಲಿನ ಕೊಳಲನ್ನು ತಯಾರಿಸಿದ್ದೇನೆ ಎಂದು ಭಟ್ಟರು ಹೇಳುತ್ತಾರೆ. ಕಲ್ಲಿನ ಕೊಳಲಿನಿಂದ ಧ್ವನಿಯನ್ನು ಹೊರಡಿಸಬಹುದೇ ಎಂದು ಕೃಷಿಜಯಂತಿಗೆ ಆಗಮಿಸಿದ್ದ ಜನಸಾಮಾನ್ಯರು ಪರೀಕ್ಷೆ ಮಾಡಿ, ಕೊಳಲನ್ನು ಊದಿ ನೋಡುತ್ತಿದ್ದುದು ವಿಶೇಷವಾಗಿತ್ತು.  

                           ತನ್ನ ತಂದೆ ಸತ್ಯನಾರಾಯಣ ಭಟ್ಟರು ಬೇರು ಬೊಗಟೆ ಕಲಾಕೃತಿಗಳನ್ನು ಮಾಡುತ್ತಿದ್ದರು. ಅವರೇ ತನಗೆ ಸ್ಪೂರ್ತಿ ಎಂದು ಹೇಳುವ ಶಿವಮೂರ್ತಿ ಭಟ್ಟರು ತೆಂಗಿನಕಾಯಿಯ ಚಿಪ್ಪಿನಿಂದ ಸ್ಪ್ರಿಂಗ್, ಗಣಪತಿ, ವಾಲ್ ಪ್ಲೇಟ್, 50-60ಕ್ಕೂ ಹೆಚ್ಚಿನ ವಿವಿಧ ಕೀಟಗಳು, ಇಲಿ, ಮುಖ, ಆಮೆ, ಪಿಗ್ಮಿ ಮನುಷ್ಯ, ತಾಯಿ-ಮಗು, ಜಿರಾಫೆ, ಸಿಯಾಳದ ಚಿಪ್ಪಿನಿಂದ ಬೇಲೂರು ಶಿಲಾಬಾಲಿಕೆ ಹೀಗೆ ಹಲವು ಬಗೆಯ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಕಳೆದ 10-12 ವರ್ಷಗಳಿಂದ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದೇನೆ ಎಂದು ಭಟ್ಟರು ತಿಳಿಸುತ್ತಾರೆ.
ಶಿವಮೂರ್ತಿ ಭಟ್ಟರು ಓದಿರುವುದು ಕೇವಲ ಎಸ್ಎಸ್ಎಲ್ಸಿ ಆದರೆ ಅವರು ತಮ್ಮ ಕೈಚಳಕದ ಮೂಲಕ ಮಹತ್ತರ ಸಾಧನೆಯ ಹಾದಿಯಲ್ಲಿದ್ದಾರೆ. ಇವರು ತಯಾರಿಸಿರುವ ಅಡಿಕೆ ದಬ್ಬೆಯ ಚಾಕುವಂತೂ ಎಲ್ಲರಲ್ಲಿಯೂ ಬೆರಗನ್ನು ಮೂಡಿಸುತ್ತಿದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಬಳಕೆ ಮಾಡುತ್ತಿದ್ದ ಕತ್ತಿಯಂತೆಯೇ ಇರುವ ಈ ಚಾಕುವಿನ ಮೇಲೆ ಕೆತ್ತಲಾಗಿರುವ ವಿಶಿಷ್ಟ ಕೆತ್ತನೆಗಳು ಎಲ್ಲರನ್ನೂ ಸೆಳೆಯುತ್ತಿದೆ. ಕತ್ತಿಯ ಹಿಡಿಕೆಯ ಮೇಲಿನ ಚಿತ್ತಾರಗಳು ಮತ್ತಷ್ಟು ಆಕರ್ಷಕವಾಗಿದೆ.

               ಮರದ ತುಂಡುಗಳಿಂದ ವ್ಯಾನಿಟಿ ಬ್ಯಾಗ್ ಒಂದನ್ನು ತಯಾರಿಸಿದ್ದು ಮನಮೋಹಕವಾಗಿದೆ. ಹೂಜಿಗಳು, ಹೂದಾನಿಗಳು, ಚಿಕ್ಕ ಪೆಟ್ಟಿಗೆ ಇತ್ಯಾದಿಗಳ ಅಷ್ಟೇ ಸುಂದರವಾಗಿದೆ. ವಾಣಿಜ್ಯ ಉದ್ದೇಶಕ್ಕಾಗಿ ಈ ಕಲಾಕೃತಿಗಳನ್ನು ಮಾಡುತ್ತಿಲ್ಲ. ಬದಲಾಗಿ ಹವ್ಯಾಸವಾಗಿ ಇವನ್ನು ತಯಾರು ಮಾಡುತ್ತಿದ್ದೇನೆ. ಅನೇಕ ಕಡೆಗಳಲ್ಲಿ ಪ್ರದರ್ಶನಕ್ಕಾಗಿ ಒಯ್ದಿದ್ದೇನೆ. ಎಲ್ಲ ಕಡೆಗಳಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಒಂದೆರಡು ಸಾರಿ ಮಾರಾಟಕ್ಕಾಗಿ ಬೇಡಿಕೆಗಳು ಬಂದಿದ್ದವು. ಆದರೆ ಮಾರಾಟ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲಾಕೃತಿಗಳು, ಕಾಷ್ಟಶಿಲ್ಪ ರಚನೆಗಳನ್ನು ಮಾಡುವ ಉದ್ದೇಶವಿದೆ ಎಂದು ಶಿವಮೂರ್ತಿ ಭಟ್ಟರು ಹೇಳುತ್ತಾರೆ.
ಶಿವಮೂರ್ತಿ ಭಟ್ಟರು ತಯಾರಿಸಿದ ಇಂತಹ ಕಲಾಕೃತಿಗಳನ್ನು ವೀಕ್ಷಣೆ ಮಾಡಲು ಮುರೂರಿಗೆ ತೆರಳಬಹುದಾಗಿದೆ. ಇಲ್ಲವಾದಲ್ಲಿ ಅವರನ್ನು 08386-268205 ಅಥವಾ ಮೊಬೈಲ್ ಸಂಖ್ಯೆ 9902451009 ಈ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.


Thursday, April 30, 2015

ಅಬ್ಬರದ ಗಾಳಿ, ಮಳೆಗೆ ನಲುಗಿದ ಉಂಚಳ್ಳಿ

(ಚಲ್ಲಾಪಿಲ್ಲಿಯಾಗಿರುವ ಹಂಚು)
ಎತ್ತ ನೋಡಿದರತ್ತ ಮುರಿದು ಬಿದ್ದು ಭೂಮಿಪಾಲಾಗಿರುವ ಬಾಳೆಯ ಗಿಡಗಳು, ಅಲ್ಲಲ್ಲಿ ನೆಲಕಚ್ಚಿರುವ ತೆಂಗಿನ ಮರಗಳು, ಮುರಿತು ಬಿದ್ದ ಅಡಿಕೆಯ ಮರಗಳು, ಕಿತ್ತುಬಿದ್ದಿರುವ ಮಾವು, ಹಲಸಿನ ಮರಗಳು. ಅಬ್ಬರದ ಗಾಳಿಯ ಪರಿಣಾಮವಾಗಿ ಫಸಲು ಬಿಡುತ್ತಿದ್ದ ಮರಗಳೆಲ್ಲ ಕಿತ್ತು ಬಿದ್ದಿರುವ ದೃಶ್ಯ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಪಳೇಕೊಪ್ಪದಲ್ಲಿ ಕಾಣಸಿಗುತ್ತಿದೆ.
ತಾಲೂಕಿನಾದ್ಯಂತ ಬೀಸಿದ ಗಾಳಿ ಕೆಲವು ಕಡೆಗಳಲ್ಲಿ ತೀವ್ರ ಪ್ರತಾಪವನ್ನೇ ತೋರಿದೆ. ಮಳೆಯಿಂದ ಹಾನಿ ಅಷ್ಟಾಗಿ ಸಂಭವಿಸದೇ ಇದ್ದರೂ ಮಳೆಗೂ ಪೂರ್ವ ಬೀಸಿದ ಅಬ್ಬರದ ಗಾಳಿಗೆ ಉಂಚಳ್ಳಿ, ಕೆರೆಕೊಪ್ಪ ಹಾಗೂ ಉಪಳೇಕೊಪ್ಪಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ. ಕೆರೆಕೊಪ್ಪದಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಮುರಿದು ಬಿದ್ದು ಹಾನಿ ಸಂಭವಿಸಿದ್ದರೆ ಉಂಚಳ್ಳಿಯಲ್ಲಿ 10ಕ್ಕೂ ಅಧಿಕ ತೆಂಗಿನ ಮರಗಳು ನೆಲಕಚ್ಚಿವೆ. ಉಪಳೇಕೊಪ್ಪದಲ್ಲಂತೂ ಗಾಳಿಯ ಹಾನಿ ತೀವ್ರವಾಗಿತ್ತು. ಸಂಜೆ 6 ಗಂಟೆಯ ಸುಮಾರಿಗೆ 20 ರಿಂದ 25 ನಿಮಿಷಗಳ ಕಾಲ ಬೀಸಿದ ಅಬ್ಬರದ ಗಾಳಿಗೆ ಗ್ರಾಮದ 8-10 ಮನೆಗಳ ಹಂಚುಗಳು ಹಾರಿ ಹೋಗಿದೆ. ವಿದ್ಯುತ್ ತಂತಿಗಳ ಮೇಲೂ ಮರಗಳು ಮುರಿದು ಬಿದ್ದಿದ್ದು ತಂತಿಗಳು ತುಂಡಾಗಿದೆ. 5-10 ವಿದ್ಯುತ್ ಕಂಬಗಳು ಮುರಿದು ಹೋಗಿದೆ.
ಉಪಳೇಕೊಪ್ಪದ ವಿಘ್ನೇಶ್ವರ ಗೋವಿಂದ ನಾಯ್ಕ ಅವರು 3 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದರು. ಅವರು ಬೆಳೆದ ಬಾಳೆ ಇನ್ನೊಂದೆರಡು ತಿಂಗಳಿನಲ್ಲಿ ಫಸಲನ್ನು ಬಿಡಲು ತಯಾರಾಗಿತ್ತು. 2 ಲಕ್ಷಕ್ಕೂ ಅಧಿಕ ರು. ಖರ್ಚು ಮಾಡಿ ಬಾಳೆಯನ್ನು ಬೆಳೆದಿದ್ದ ಅವರು ಲಕ್ಷಗಟ್ಟಲೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಬಿರುಗಾಳಿ ಅವರ ಆಸೆಯನ್ನು ಮಣ್ಣುಪಾಲು ಮಾಡಿದೆ. ತೋಟದಲ್ಲಿ ಬಹುತೇಕ ಬಾಳೆಯ ಮರಗಳು ಕಿತ್ತು ಬಿದ್ದಿದೆ. ಇಷ್ಟೂ ಸಾಲದು ಎನ್ನುವಂತೆ ತೋಟದ ಸುತ್ತಮುತ್ತಲೂ ಬೆಳೆದಿದ್ದ ದೈತ್ಯ ಮರಗಳು ಬಾಳೆಯ ತೋಟದ ಮೇಲೆ ಕಿತ್ತು ಬಿದ್ದಿವೆ. ಮನೆಯ ಪಕ್ಕದಲ್ಲೇ ಇದ್ದ ಹಲಸಿನ ಮರವೊಂದು ಕಿತ್ತು ಬಿದ್ದಿದೆ. ಇದರಿಂದಾಗಿ ಇನ್ನೂ ಬೆಳೆಯದ 150ಕ್ಕೂ ಅಧಿಕ ಹಲಸಿನ ಕಾಯಿ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಫಲ ಬರುತ್ತಿದ್ದ ತೆಂಗಿನ ಮರ ಮುರಿದು ಬಿದ್ದಿದೆ. ಎರಡು ಗೇರು ಮರಗಳು ಕಿತ್ತು ಬಿದ್ದಿವೆ. 200 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದೆ.
ಕವಿ, ಬರಹಗಾರ ಎನ್. ವಿ. ಮಂಜುನಾಥ ಅವರ ಮನೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಅವರ ಮನೆಯ 500 ಹಂಚುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿ ಪುಡಿ ಪುಡಿಯಾಗಿದೆ. ಮಾವಿನ ಮರವೊಂದು ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. 25 ವರ್ಷ ಪ್ರಾಯದ ಕಳೆದ 15 ವರ್ಷಗಳಿಂದ ಫಲ ನೀಡುತ್ತಿದ್ದ ತೆಂಗಿನ ಮರ ಅರ್ಧದಲ್ಲಿಯೇ ಮುರಿದು ಬಿದ್ದಿದೆ. ಮೇವಿಗಾಗಿ ಹುಲ್ಲನ್ನು ತಂದು ಪೇರಿಸಿ ಇಡಲಾಗಿತ್ತು. ಅದರ ಮೇಲೆ ದೈತ್ಯ ಮಾವಿನ ಮರ ಉರುಳಿದೆ. ತೋಟದಲ್ಲಿದ್ದ ಬಾಳೆಯ ಗಿಡಗಳಂತೂ ಅರ್ಧದಲ್ಲಿಯೇ ಮುರಿದು ನಿಂತಿದೆ. 25ಕ್ಕೂ ಅಧಿಕ ಅಡಿಕೆಯ ಮರಗಳು ಗಾಳಿಯ ಅಬ್ಬರಕ್ಕೆ ಮುರಿದು ಹೋಗಿದೆ.
      ಉಪಳೇಕೊಪ್ಪದ ಜಾನಕಿ ನಾರಾಯಣ ನಾಯ್ಕ, ಜಗದೀಶ ರಾಮ ನಾಯ್ಕ, ವೀರಭದ್ರ ಶೇಷಗಿರಿ ನಾಯ್ಕ, ನೀಲಕಂಠ ರಾಮ ನಾಯ್ಕ, ಸುರೇಶ ಗಣಪತಿ ನಾಯ್ಕ, ವಿಘ್ನೇಶ್ವರ ಗಣಪತಿ ನಾಯ್ಕ, ಲೋಕೇಶ ಗೋಪಾಲ ನಾಯ್ಕ, ಕೇಶವ ಶ್ರೀಧರ ನಾಯ್ಕ, ಕನ್ನ ಬಡಿಯಾ ನಾಯ್ಕ, ವೆಂಕಟೇಶ ರಾಮ ನಾಯ್ಕ ಅವರ ಮನೆಯ ಹಂಚುಗಳು ಹಾರಿ ಹೋಗಿದೆ. ಫಲ ಬಿಡುತ್ತಿದ್ದ ಹಣ್ಣಿನ ಮರಗಳು ಕಿತ್ತು ಬಿದ್ದಿವೆ. ಅಷ್ಟೇ ಅಲ್ಲದೇ ಬಾಳೆಯ ಮರಗಳು, ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಮುನಿದ ಪ್ರಕೃತಿ ಅದೆಷ್ಟೋ ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಅದೆಷ್ಟೋ ಲಕ್ಷ ರು. ಆದಾಯವನ್ನು ತರಬೇಕಿದ್ದ ಹಣ್ಣಿನ ಮರಗಳು, ತೋಟಗಾರಿಕೆ ಗಿಡಗಳೆಲ್ಲ ಧರಾಶಾಹಿಯಾಗಿವೆ. ಇದರಿಂದಾಗಿ ಉಪಳೇಕೊಪ್ಪದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗಾಳಿಯ ಅಬ್ಬರ ಉಪಳೇಕೊಪ್ಪಕ್ಕೆ ಸೀಮಿತವಾಗದೇ ಹಳೆ ಉಂಚಳ್ಳಿ, ಉಂಚಳ್ಳಿ ಹಾಗೂ ಕೆರೆಕೊಪ್ಪಗಳಲ್ಲಿಯೂ ಪ್ರತಾಪವನ್ನು ತೋರಿದೆ. ಕನಿಷ್ಟ 25 ಲಕ್ಷಕ್ಕೂ ಅಧಿಕ ರು. ಹಾನಿಯಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಬಡ, ಕೂಲಿ ಕಾರ್ಮಿಕರಾದ ಉಪಳೇಕೊಪ್ಪದ ನಿವಾಸಿಗಳು ಪ್ರಕೃತಿಯ ಮುನಿಸಿನ ಪರಿಣಾಮ ಕಂಗಾಲಾಗಿದ್ದಾರೆ. ಜೀವನಾಧಾರವಾಗಿದ್ದ ಬೆಳೆಯೆಲ್ಲ ಮಣ್ಣುಪಾಲಾಗಿರುವ ಕಾರಣ ಮುಂದೆ ಜೀವನವನ್ನು ಯಾವ ರೀತಿ ನಡೆಸಬೇಕು ಎನ್ನುವುದು ತಿಳಿಯದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಕೂಡಲೇ ಬೆಳೆಹಾನಿಯನ್ನು ಅಂದಾಜು ಮಾಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಿರಸಿಯ ತಹಶಿಲ್ದಾರ್ ಬಸಪ್ಪ ಪೂಜಾರ, ಶಾನುಭೋಗರಾದ ಆರ್. ಎಂ. ನಾಯ್ಕ ಹಾಗೂ ಉಂಚಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರೆಯ ಭಟ್ ಅವರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
***
25 ನಿಮಿಷ ಬೀಸಿದ ಗಾಳಿ 25 ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಮನೆಯ ಮಕ್ಕಳಂತೆ ಪ್ರೀತಿಯಿಂದ ಸಲಹಿ ಬೆಳೆಸಿದ್ದ ಗಿಡ ಮರಗಳೆಲ್ಲ ನೆಲಕಚ್ಚಿವೆ. ದೇವರು ನಮ್ಮ ಮೇಲೆ ಯಾಕೆ ಸಿಟ್ಟಾಗಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ರಾತ್ರಿಯ ಅಬ್ಬರದ ಗಾಳಿ ಎಲ್ಲರಲ್ಲೂ ಭಯವನ್ನು ಹುಟ್ಟು ಹಾಕಿದೆ. ಮರಗಳನ್ನೆಲ್ಲ ತಿರುಗಿಸಿ ತಿರುಗಿಸಿ ಒಗೆಯುತ್ತಿತ್ತು. ಮನೆಯ ಹಂಚುಗಳನ್ನೆಲ್ಲ ಹಾರಿಸುತ್ತಿತ್ತು. ನಮಗೆ ಮನೆಯೊಳಗೆ ಕುಳಿತುಕೊಳ್ಳಲೂ ಭಯ, ಮನೆಯಿಂದ ಹೊರಗೆ ಬರಲೂ ಭಯ ಎನ್ನುವಂತಾಗಿತ್ತು.
ರಾಧಾ ವೆಂಕಟ್ರಮಣ ನಾಯ್ಕ
ಉಪಳೇಕೊಪ್ಪ
ಅಧಿಕಾರಿಗಳು ನಮ್ಮೂರಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ಅಂದಾಜು ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟು ಹೋಗಿದ್ದಾರೆ. ಸರ್ಕಾರ ನಮಗೆ ಕೊಡುವ ಪರಿಹಾರ ಸಾವಿರ ಸಾವಿರ ರು.ಗಳ ಮಟ್ಟದಲ್ಲಿರುತ್ತದೆ. ಆದರೆ ನಮಗೆ ಆಗಿರುವ ಹಾನಿ ಮಾತ್ರ ಲಕ್ಷಾಂತರ ರು. ಸರ್ಕಾರ ನೀಡುವ ಪರಿಹಾರವೂ ಇನ್ನೂ ನಾಲ್ಕೈದು ತಿಂಗಳುಗಳ ನಂತರ ನಮ್ಮ ಕೈಗೆ ತಲುಪುತ್ತದೆ. ಆದ್ದರಿಂದ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವನ್ನು ಮಾಡಬಾರದು. ಆಗಿರುವ ಹಾನಿಯನ್ನು ಸರಿಯಾಗಿ ಅಂದಾಜು ಮಾಡಿ ಅದಕ್ಕೆ ತಕ್ಕ ಪರಿಹಾರ ಒದಗಿಸಬೇಕಾಗಿದೆ.
ವೆಂಕಟೇಶ ರಾಮಾ ನಾಯ್ಕ

Tuesday, April 28, 2015

ಅಂ-ಕಣ-5

ಸ್ವಲ್ಪ ವಿಚಿತ್ರ ಬಾಸ್ :

ಮನೆಗಳಿಗೆ ಚಿತ್ರ ವಿಚಿತ್ರ ಹೆಸರಿಡುವುದು ಫ್ಯಾಷನ್..
ಅಂತದ್ದೊಂದು ವಿಚಿತ್ರ ಹೆಸರು
.....
ಪ್ರವೇಶ-ವಿಲ್ಲಾ !!

ಒಟ್ಟಿಗೆ ಓದಿ ಹಾಗೂ ಬಿಡಿಸಿ ಓದಿ

ಇನ್ನೊಂದು ಮನೆಯ ಎದುರು ಕಂಡ ಹೆಸರು
ರಾಧಾ ಕೇ ಶವ್ |


ಸುಮ್ನೆ ಒಂದು ದುರಾಲೋಚನೆ :

ರಾಮಂಗೂ ಮಾರ್ಚ್ ಎಂಡು
ಭೀಮಂಗೂ ಮಾರ್ಚ್ ಎಂಡು..
ನಿಂಗೂ ಮಾರ್ಚ್ ಎಂಡು..
ನನಗೂ ಮಾರ್ಚ್ ಎಂಡು..
ಈ ಮಾರ್ಚ್ ತಿಂಗಳಿಂದಲೇ ಇಷ್ಟೆಲ್ಲ ಸಮಸ್ಯೆ..
ಮಾರ್ಚ್ ತಿಂಗಳು ಇಲ್ಲದೇ ಇರುವ ಕ್ಯಾಲೆಂಡರ್ ತಂದರೆ ಹೇಗೆ?

ಸುಮ್ನೆ ಒಂದ್ ಟಾಂಗು :

ಇವತ್ತು ಮನೆ
ಮನೆಗಳಲ್ಲಿ
ಕ್ಯಾಂಡಲ್ ಲೈಟ್ ಡಿನ್ನರ್
ಕಾರಣ
ವಿದ್ಯುತ್ ವ್ಯತ್ಯಯ ||

ಮತ್ತೊಂಚೂರು ಹಿಡಿಶಾಪ :

ಓಹ್..
ಮತ್ತೊಮ್ಮೆ  ಕ್ಯಾಂಡಲ್
ಲೈಟ್ ಡಿನ್ನರ್ |
ವಿದ್ಯುತ್ ವ್ಯತ್ಯಯದೊಂದಿಗೆ
ಸಹಕರಿಸಿದ್ದಕ್ಕಾಗಿ
ಥ್ಯಾಂಕ್ಸ್ ಟು ಹೆಸ್ಕಾಂ ||