ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟ ಪ್ರಯತ್ನ
/ ಆಯಾಯಾ ರಾಜ್ಯಗಳಿಗೆ ಅಲ್ಲಿನದೇ ಭಾಷೆ ಬಳಕೆ
ದೇವರ ನಾಡು ಕೇರಳದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ
ಹೇಳಿ. ಅಸಂಖ್ಯಾತ ಪ್ರವಾಸಿ ತಾಣಗಳ ತವರು. ಕೇರಳದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ಸೆಳೆಯಲು
ಸಾಕಷ್ಟು ಆಕರ್ಷಕ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ ಕರ್ನಾಟಕ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿಂದುಳಿದಿದೆ.
ಕೇರಳದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ದೇವರ
ನಾಡಿನತ್ತ ಕರೆಸಿಕೊಳ್ಳಲು ಸಾಕಷ್ಟು ಮಾರ್ಗಗಳನ್ನು ಹಾಕಿಕೊಂಡಿದೆ. ಇಲಾಖಾ ವೆಬ್‌ಸೈಟ್‌ಗಳು, ಸಾಮಾಜಿಕ
ಜಾಲತಾಣಗಳಲ್ಲಿ ಪ್ರೊಮೋಷನ್ ಮಾಡುವ ಮೂಲಕ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುವ ಯತ್ನ ಮಾಡುತ್ತಿದೆ.
ಅಷ್ಟೇ ಏಕೆ, ದೇಶದ ಹಾಗೂ ಬೇರೆ ಬೇರೆ ದೇಶಗಳ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ಸಲುವಾಗಿ
ಆಯಾಯಾ ಪ್ರದೇಶದ ಭಾಷೆಗಳನ್ನು ಬಳಸಿಕೊಂಡು, ಆಕರ್ಷಕ ಪ್ರೋಮೋ ಕೈಗೊಳ್ಳುತ್ತಿದೆ. ತನ್ಮೂಲಕ ಪ್ರಾದೇಶಿಕ
ಪ್ರವಾಸಿಗರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ.
ಕರ್ನಾಟಕದ ಪ್ರವಾಸಿಗರನ್ನು ಸೆಳೆಯಲು ಕನ್ನಡ, ಮಹಾರಾಷ್ಟ್ರದ
ಪ್ರವಾಸಿಗರನ್ನು ಸೆಳೆಯಲು ಮರಾಠಿ, ತಮಿಳುನಾಡು ಪ್ರವಾಸಿಗರನ್ನು ಸೆಳೆಯಲು ತಮಿಳು, ಆಂಧ್ರ ಹಾಗೂ ತೆಲಂಗಾಣದ
ಪ್ರವಾಸಿಗರನ್ನು ಸೆಳೆಯಲು ತೆಲುಗು ಭಾಷೆಯಲ್ಲಿಯೇ ಪ್ರಚಾರ ಮಾಡಲಾಗುತ್ತಿದೆ. ಆಯಾಯಾ ರಾಜ್ಯಗಳ ವ್ಯಾಪ್ತಿಯಲ್ಲಿ
ಆಯಾಯಾ ಭಾಷೆಯಲ್ಲಿಯೇ ಪೋಸ್ಟ್‌ಗಳನ್ನು ಹಾಕುವ ಮೂಲಕ ಜನರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಿದೆ.
ಹೆಚ್ಚು ಭಾಷೆ ಬಳಸಿಕೊಳ್ಳದ ಕರ್ನಾಟಕ ಟೂರಿಸಂ
ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಪ್ರವಾಸೋದ್ಯಮ
ಇಲಾಖೆ ಸಾಕಷ್ಟು ಹಿಂದುಳಿದಿದೆ. ಸಹಸ್ರಾರು ಪ್ರವಾಸಿ ತಾಣಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರನ್ನು
ಸೆಳೆಯುವ ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಎಡವುತ್ತಿದೆ. ಕೇವಲ ಕನ್ನಡ ಹಾಗೂ ಇಂಗ್ಲೀಷ್
ಭಾಷೆಯಲ್ಲಿ ಮಾತ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪೋಸ್ಟ್ ಗಳನ್ನು ಹಾಕುವ ಮೂಲಕ ಪ್ರವಾಸಿಗರನ್ನು
ಸೆಳೆಯುತ್ತಿದೆ. ಭಾರತದ ಇತರ ಭಾಷೆಗಳಲ್ಲಿ ಪೋಸ್ಟ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ
ಇಲಾಖೆ ಇನ್ನೂ ಚಿಂತನೆ ನಡೆಸದೇ ಇರುವುದು ಇಲಾಖೆಯ ಕಾರ್ಯವೈಖರಿಯ ಜಡತ್ವಕ್ಕೊಂದು ಉದಾಹರಣೆ.
ಮಲೆಯಾಳಂ, ತೆಲುಗು, ತಮಿಳು, ಮರಾಠಿ, ಒಡಿಸ್ಸಿಘಿ,
ಅಸ್ಸಾಮಿ, ಹಿಂದಿ ಹೀಗೆ ಭಾರತೀಯ ಭಾಷೆಗಳಲ್ಲಿ ಕರ್ನಾಟಕದ ಪ್ರವಾಸಿ ತಾಣಗಳ ಕುರಿತು ಕಿರು ಮಾಹಿತಿ
ನೀಡಿ ಅವುಗಳನ್ನು ತನ್ನ ವೆಬ್ ಸೈಟ್‌ನಲ್ಲೋ ಅಥವಾ ಇನ್ಯಾವುದೇ ಜಾಲತಾಣಗಳಲ್ಲಿಯೋ ಪ್ರಕಟಿಸಿದರೆ ಆಗ
ಅದನ್ನು ಗಮನಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಪ್ರವಾಸಿಗರೂ ಕರ್ನಾಟಕದ ಕಡೆಗೆ ಮುಖ ಮಾಡುತ್ತಾರೆ.
ಆದರೆ ಈ ನಿಟ್ಟಿನಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸದೇ ಇರುವುದು ಬೇಸರದ ಸಂಗತಿ.
ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ತನ್ನ ಕಡೆಗೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ವಿನೂತನ ತಂತ್ರಗಳನ್ನು ಅಳವಡಿಸಿಕೊಳ್ಳಲಿ, ತನ್ಮೂಲಕ
ದೇಶದ ಹಾಗೂ ವಿದೇಶಗಳ ಪ್ರವಾಸಿಗರನ್ನು ಸೆಳೆಯಲಿ. ರಾಜ್ಯದ ಆದಾಯಕ್ಕೆ ಹೆಚ್ಚಿನ ಕಾಣಿಕೆ ನೀಡುವಂತಾಗಲಿ
ಎನ್ನುವುದು ಪ್ರವಾಸ ಪ್ರಿಯರ ಆಶಯವಾಗಿದೆ.
---
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇರಳ
ಪ್ರವಾಸೋದ್ಯಮ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ. ಆಯಾಯಾ ರಾಜ್ಯಗಳ ಮಟ್ಟದಲ್ಲಿ ಅಲ್ಲಿನ
ಭಾಷೆಗಳನ್ನೇ ಬಳಸಿಕೊಂಡು ತನ್ನ ನಾಡಿನ ಪ್ರವಾಸಿ ತಾಣಗಳ ಕುರಿತು ವಿವರ ನೀಡುವ ಕೇರಳ ಪ್ರವಾಸೋದ್ಯಮದ
ತಂತ್ರಗಳನ್ನು ಕರ್ನಾಟಕವೂ ಅಳವಡಿಸಿಕೊಂಡರೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗಳ ಸಂಖ್ಯೆ ಹೆಚ್ಚಳವಾಗುವುದರಲ್ಲಿ
ಸಂಶಯವಿಲ್ಲ.
ನನ್ನಿಂದ ಮೊಟ್ಟ
ಮೊದಲ ಕಾದಂಬರಿ ಪುಸ್ತಕವನ್ನು ಕೊಂಡು, ಆಟೋಗ್ರಾಫ್ ಕೂಡ ಹಾಕಿಸಿಕೊಂಡು, ಓದಿ ಅಭಿಪ್ರಾಯ ತಿಳಿಸಿದವರು
ಗುರುವರ್ಯ ಶಿವರಾಮ ಕಾನಸೇನ್ ಅವರು. ಸಹೋದರ ಗುರುಪ್ರಸಾದ ಕಲ್ಲಾರೆ ಅವರಿಂದ ಪರಿಚಿತರಾದ ಶಿವರಾಮ ಕಾನಸೇನ್
ಅವರು ಆಗಾಗ ನನ್ನ ಜತೆ ಹಲವು ಸಾಹಿತ್ಯ ವಿಷಯಗಳನ್ನು ಹಂಚಿಕೊಂಡವರು. ಬೆಂಗಾಲಿ ಬೆಡಗಿ ಕಾದಂಬರಿ ಓದುವ
ಸಂದರ್ಭದಲ್ಲಿಯೂ `ವಿನಯ್, ನೀವು ಬಾಂಗ್ಲಾಕ್ಕೆ ಹೋಗಿದ್ದಿರಾ?’ ಎಂದು ಕೇಳಿ, ನಾನು ಹೋಗಿಲ್ಲ ಎಂದಾಗ,
ನಂಬಲಿಕ್ಕಾಗುತ್ತಿಲ್ಲ.. ನೀವು ಹೋಗಿ ಬರೆದಂತಿದೆ ಎಂದಿದ್ದವರು.
ಅವರು ನನ್ನ ಬೆಂಗಾಲಿ
ಬೆಡಗಿ ಕಾದಂಬರಿಯನ್ನು ಓದಿ ಅವರ ಅನಿಸಿಕೆಗಳನ್ನು ನನಗೆ ನೀಡಿದ್ದಾರೆ. ಅವನ್ನು ಯಥಾವತ್ ನಿಮ್ಮಮುಂದೆ
ಇಟ್ಟಿದ್ದೇನೆ.
---------------------------
“ಬೆಂಗಾಲಿ ಬೆಡಗಿ” ಕೇವಲ ಬೆರಗುಗೊಳಿಸುವ ಬೆಡಗಿನ ಹೆಣ್ಣೊಬ್ಬಳ ಕಥೆಯಲ್ಲ. ಅಥವಾ ಬೆಡಗಿಯೊಬ್ಬಳ ಹಿಂದೆ ಓಡುವ ಹುಂಬನ ಕಥೆಯಲ್ಲ. ಅವಿಭಜಿತ ವಂಗರಾಜ್ಯವೂ ಸೇರಿದಂತೆ ಅಖಂಡ ಭಾರತದ ಇತಿಹಾಸ, ಭೂಗೋಳ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತ್ಯಂತರಗಳ ಕಥನವಿದೆ. ದೇಶ-ನೆರೆದೇಶಗಳ ನಡುವಿನ ಕೊಡು-ಕೊಳ್ಳುವಿಕೆಯ ಹೊಣೆಗಾರಿಕೆಯೂ ಇದೆ. ಕ್ರೀಡಾಪ್ರೇಮಿಯೊಳಗೊಬ್ಬ ಸಾಹಿತ್ಯಪ್ರಿಯ ಇತಿಹಾಸಕಾರ ಅಡಗಿದ್ದರೆ “ಬೆಂಗಾಲಿ ಬೆಡಗಿ”ಯ ಹುಟ್ಟು ಸಾಧ್ಯವಾಗುತ್ತದೆ.
ಇಲ್ಲಿ ಕತೆಗಾರನಿಗೆ ಕಬಡ್ಡಿ ಒಂದು ನೆಪವಷ್ಟೇ. ಹಾಗಂತ ಕಬಡ್ಡಿಯನ್ನು ಆರಂಭದಲ್ಲೋ, ಮಧ್ಯದಲ್ಲೋ ಕೈಬಿಟ್ಟಿಲ್ಲ ಅಥವಾ ಕೊನೆಯಲ್ಲೆಲ್ಲೋ ಕಬಡ್ಡಿ-ಕಬಡ್ಡಿ ಅಂತಾ ಕೈ-ಕಾಲಾಡಿಸಲು ಮಾತ್ರ ಬಳಸಿಕೊಂಡಿಲ್ಲ. ಆರಂಭದಲ್ಲಿ “ಲೇ ಪುಳಿಚಾರು, ನೀ ಏನ್ ಕಬಡ್ಡಿ ಆಡ್ತೀಯೋ” ಎಂದವರೇ ಮುಂದೊಮ್ಮೆ “ಶಹಬ್ಬಾಸ್” ಎನ್ನುವಂತೆ ಕಬಡ್ಡಿಯ ರೈಡಿಂಗ್-ಕ್ಯಾಚಿಂಗ್-ಡಿಫೆನ್ಸ್ ಮುಂತಾಗಿ ಕಬಡ್ಡಿಯ ಸಕಲ ಆಯಾಮಗಳನ್ನೂ ದಾಖಲಿಸುವ ಕಥೆಗಾರ, ಬದುಕಿನ ಹಲವಾರು ಘಟ್ಟಗಳನ್ನು ಕಬಡ್ಡಿ ಆಟದ ರೀತಿಯಲ್ಲಿಯೇ ಎದುರಿಸುತ್ತಾನೆ.
ಉತ್ತರ ಕನ್ನಡದ ಹವಿಗನ್ನಡಿಗ ಮಾಣಿಯೊಬ್ಬ ಭಾರತದ ಕಬಡ್ಡಿಯಾಡುತ್ತಾ, ಪೂರ್ವದ ಡಾಕಿನಿಯ ಬಾಂಗ್ಲಾಕ್ಕೆ ಭೇಟಿ ನೀಡಿ, ಅಲ್ಲಿನ “ಹಡುಡು” ಹೆಸರಿನ ಕಬಡ್ಡಿ ಆಡುತ್ತಾ, ಅಖಂಡ ಭಾರತೀಯ ಮೂಲದ ಬೆಡಗಿಯೊಡನೆ ಬೆರೆಯುವ ವಿಶಿಷ್ಟ ಕಥಾಹಂದರ ಹಲವು ಆಯಾಮಗಳನ್ನು ತೆರೆದಿಡುತ್ತದೆ.
ಮಗನ ಕಬಡ್ಡಿ ಪ್ರೇಮವನ್ನು ಆರಂಭದಲ್ಲಿ ಪ್ರೋತ್ಸಾಹಿಸದ ಅಪ್ಪ, ಸಾಧನೆಗೈದು ಹೊರನಾಡಿಗೆ ಸ್ಫರ್ಧಿಸಲು ಹೊರಟಾಗ ಬಾಂಗ್ಲಾದೇಶದ ಮ್ಯಾಪು, ಮಾಹಿತಿ ಪುಸ್ತಕ ಕೊಟ್ಟು ಹುರಿದುಂಬಿಸುವುದು, ಸುಶೀಲಮ್ಮನವರ ತಾಯಿಕರುಳು ಮಗನನ್ನು ವಿದೇಶಕ್ಕೆ ಕಳುಹಿಸಲು ಹಿಂಜರಿಯುವುದು ಇವೆಲ್ಲವೂ ಪ್ರತಿ ತಂದೆ-ತಾಯಿಯರ ಮನಃಸ್ಥಿತಿಯನ್ನು ಬಿಂಬಿಸುತ್ತದೆ. ಕಬಡ್ಡಿಯನ್ನು ಕಲಿಯುವಾಗ ಜನಿವಾರ ತೊಡಕಾಗುವುದು, ಪುಳ್ಚಾರ್ ಎಗ್ ರೈಸ್ ತಿನ್ನುವುದು, ಪರಿಸ್ಥಿತಿಯ ಕೈಗೊಂಬೆಯಾಗಿ “ಮುಸಲ ಮುಂಜಿ” ಮಾಡಿಸಿಕೊಳ್ಳುವುದು ವಾಸ್ತವತೆಯನ್ನು ಬಿಂಬಿಸುತ್ತದೆ. “ಮುಂಜಿಯ ಉರಿಗಿಂತ ಮನಸ್ಸಿನ ಉರಿ ಹೆಚ್ಚು ನೋವನ್ನು ಕೊಡುತ್ತದೆ.” ಅಗ್ನಿಯಲ್ಲಿ ಲೀನವಾಗುವ ಸಲೀಂ ಚಾಚಾ ! ಬದುಕಿ ಉಳಿದರೆ ತಾನೆ ನಂಬಿಕೆಗಳು-ಧರ್ಮ ಎಲ್ಲ, ಬದುಕಿ ಉಳಿಯುವುದೇ ಅಸಾಧ್ಯವಾದಾಗ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕಾದ ಅನಿವಾರ್ಯತೆ !
ಕತೆ ಹೆಣೆಯುವಾಗ ಭಾರತಕ್ಕಿಂತ ಬಾಂಗ್ಲಾದೇಶ ಅರ್ಧಗಂಟೆ ಮುಂದಿದೆ ಎಂಬಂತಹ ಸಣ್ಣಪುಟ್ಟ ಮಾಹಿತಿ ಕೊಡುವುದನ್ನು ಕತೆಗಾರ ಮರೆಯುವುದಿಲ್ಲ. ಉತ್ತರಕನ್ನಡವನ್ನು ಕರ್ನಾಟಕದ ಕಾಶ್ಮೀರ ಎನ್ನಲು ಹೆಮ್ಮೆಯೆನಿಸುತ್ತದೆ. ಜಗತ್ತಿನಲ್ಲಿ ಹೆಚ್ಚು ಓದಿಕೊಂಡವರೆಂಬ ಹೆಮ್ಮೆಯೂ ಇದೆ. ಕೆನಡಾದಲ್ಲಿ ಪಂಜಾಬಿಗಳು ಇರುವುದನ್ನೂ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆಯ ರಕ್ಷಣೆ ಮಾಡುವುದನ್ನು ಕರಾವಳಿ ಕನ್ನಡಿಗ ಕಾಣುತ್ತಾನೆ. ಮಳೆಗಾಲವೆಂದರೆ ಬಾಂಗ್ಲಾದಲ್ಲಿ ನರಕ. ಬಾಂಗ್ಲಾದ ಅಡಿಕೆಗೆ ಭಾರತವೇ ಪ್ರಧಾನ ಮಾರುಕಟ್ಟೆ ಎಂದಾಗ ನಮ್ಮ ಕರುನಾಡಿನ ಅಡಿಕೆ ಬೆಳೆಗಾರರ ಹಲವು ಸಮಸ್ಯೆಗಳು ಧುತ್ತನೆ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತವೆ.
ಪರದೇಶಿ ಕ್ರೀಡೆ ಕ್ರಿಕೆಟಿಗರಿಗೆ ನೀಡುವ ಐಷಾರಾಮಿ ಸೌಲಭ್ಯಗಳು ಮತ್ತು ಸ್ವದೇಶಿ ಕ್ರೀಡೆ ಕಬಡ್ಡಿಗೆ ತೋರುವ ತಾರತಮ್ಯವನ್ನು ಕಥೆಗಾರ ಎತ್ತಿತೋರಿಸಿದ್ದಾರೆ. ಪ್ರಸ್ತುತ ಹಾಕಿ ಆಟವೂ ಬಹುಜನರ ಉದಾಸೀನಕ್ಕೆ ಒಳಗಾಗಿರುವುದೂ ಸತ್ಯ.
ಕಬಡ್ಡಿ ಆಟಗಾರನ ಕಣ್ಣಿಗೆ ಡಿ-ಫ್ರಾನ್ಸ್ ಪ್ರಶಸ್ತಿ ವಿಜೇತ ದುರಂತನಾಯಕ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡಾ ಕಂಡಿದ್ದಾನೆ ! ಬಡ ಬಾಂಗ್ಲಾದೇಶದವರೆಲ್ಲ ಭಾರತಕ್ಕೆ ಕದ್ದು ಹೋಗಿ ಅಲ್ಲಿ ಬದುಕು ಜೀವನ ಕಟ್ಟಿಕೊಂಡರೆ ಸಾಕು ಎನ್ನುವ ಕಾಲಘಟ್ಟದಲ್ಲೇ ಭಾರತೀಯ ವಿನಯಚಂದ್ರನಿಗೆ ಕಬಡ್ಡಿ ನೆಪದಲ್ಲಿ ಬಾಂಗ್ಲಾವನ್ನು ನೋಡುವ ಆಸೆ ! ಬಾಂಗ್ಲಾದೇಶದ ಕಾಂತಾಜಿ ದೇಗುಲದಲ್ಲಿನ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಬೀಳುವ ಸಂದರ್ಭದಲ್ಲಿ ನಮ್ಮದೇ ಹಂಪಿಯ ವಿಜಯ ವಿಠಲ ದೇಗುಲದಲ್ಲಿಯೂ ಸೂರ್ಯನ ಕಿರಣಗಳು ಬೀಳುವುದನ್ನು ನೆನೆದರೆ, ಭಾರತ-ಬಾಂಗ್ಲಾ ಸಂಸ್ಕೃತಿ ಬೇರೆಬೇರೆಯಲ್ಲ ಎನಿಸುವುದು ಸಹಜ. ಭಾರತ-ಬಾಂಗ್ಲಾ-ನೇಪಾಳ ನಡುವಿನ ಕೋಳಿ ಕತ್ತು (ಚಿಕನ್ ನೆಕ್) ನೋಡುವ ಹಂಬಲದ ಕತೆಗಾರನೊಳಗೊಬ್ಬ ಇತಿಹಾಸ-ಭೂಗೋಳದ ವಿದ್ಯಾರ್ಥಿಯಿದ್ದಾನೆ. ಅಳಿವಿನಂಚಿನಲ್ಲಿರುವ ಬಂಗಾಲದ ಹುಲಿಗಳ ರಕ್ಷಣೆ, ರಕ್ಷಿತಾರಣ್ಯಗಳಿದ್ದಲ್ಲಿ ಚಂಡಮಾರುತದಂತಹ ವಿಕೋಪಗಳನ್ನು ಕಡಿಮೆ ಮಾಡುವ ನೀತಿಯಿದೆ. “ಭಾರತದ ಪಾಲಿಗೆ ಅಕ್ರಮ ನುಸುಳುಕೋರರು ಎಂದರೆ ಬಾಂಗ್ಲಾ ದೇಶಿಯರು. ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಮುಂದಾದರೆ ವನ್ಯಮೃಗಳಿಗೆ ಸಮಸ್ಯೆಯಾಗುತ್ತದೆ. ಬೇಲಿ ನಿರ್ಮಿಸದಿದ್ದರೆ ನುಸುಳುಕೋರ ಮನುಷ್ಯರು ಸಮಸ್ಯೆಯಾಗುತ್ತಾರೆ” ತನ್ನದಲ್ಲದ ತಪ್ಪಿಗೆ ಭಾರತಕ್ಕೆ ಶಿಕ್ಷೆ !
ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕುತಂತ್ರ-ರಕ್ತದೋಕುಳಿಯಲ್ಲೇ ಜನಿಸಿದ ಧರ್ಮಾಂಧರ ಪಾಕಿಸ್ತಾನ-ಬಾಂಗ್ಲಾ ದೇಶಗಳು ವರ್ತಮಾನದಲ್ಲೂ ಬದಲಾಗಿಲ್ಲ. ತಮ್ಮೊಳಗಿನ ಹಿಂಸಾಚಾರವನ್ನು ಜಗತ್ತಿಗೆ ತಿಳಿಯದಂತೆ, ತಿಳಿದರೂ ದುರಂತ ಪರಿಣಾಮದ ಭೀಕರತೆಯನ್ನು ಮುಚ್ಚಿಡಲೇಬೇಕಾದ ದೈನೇಸಿ ಸ್ಥಿತಿ ಈ ಎರಡೂ ದೇಶಗಳದ್ದು. ಹೀಗಾಗಿ ಪಾಕ್-ಬಾಂಗ್ಲಾ ಎರಡೂ ಅನಿಶ್ಚಿತತೆಯ ತಾಣ ! ಕಾರಣ; ಅವುಗಳ ಹುಟ್ಟು ಮತ್ತು ವರ್ತನೆ. ಯಾವುದೇ ಪಕ್ಷಕ್ಕೆ ನಿಷ್ಠನಾಗಿರದ ಸರ್ಕಾರಿ ನೌಕರನಿಗೆ ಎರಡೂ ಪಕ್ಷದ ಬೆಂಬಲಿಗರಿಂದ ಭಯ. ಒಟ್ಟಾರೆ ಅಲ್ಲಿಯೂ ನಮ್ಮಂತೆ ಬಕೀಟು ಬ್ಯುರೋಕ್ರಾಟ್ ಮಾತ್ರ ಬದುಕಬಲ್ಲ ! ಎಂತಹ ಜನ್ನತ್ ಆಗಿದ್ದರೂ ಅದನ್ನು ಕ್ಷಣದಲ್ಲಿ ಕುಲಗೆಡಿಸುವ ರಾಜಕಾರಣಿಗಳು ನಮ್ಮಲ್ಲಿರುವಂತೆ ಬಾಂಗ್ಲಾದಲ್ಲೂ ಇದ್ದಾರೆ ! ದುರ್ಬಲರ ಮೇಲೆ ರಕ್ಕಸಧರ್ಮೀಯರ ಪೌರುಷ ಪ್ರದರ್ಶನ ಅನಾದಿ ಕಾಲದಿಂದಲೂ ನಡೆದುಬಂದದ್ದೇ.
“ಅಖಂಡ ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಬ್ರಿಟಿಷರು ಯಾವಾಗ ಒಡೆದರೋ, ಆಗಲೇ ಶುರುವಾಯಿತು ನರಕ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಠ 5000ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತದೆ. 1941ರಲ್ಲಿ 28%ರಷ್ಟಿದ್ದ ಹಿಂದೂಗಳು 1974ರಲ್ಲಿ 13.5%ಕ್ಕೆ ಇಳಿದು, 2001ರಲ್ಲಿ 9.6% ಆಗಿದೆ” ಎಂಬುದನ್ನು ದಾಖಲಿಸುವಾಗ ನಿಜಕ್ಕೂ ಭಯೋತ್ಪಾದಕರು ಯಾರು ಮತ್ತು ಭಯಭೀತರಾಗಿರುವುದು ಯಾರು ಎಂಬ ಘೋರಸತ್ಯ ಅರಿವಾಗುತ್ತದೆ. ಬ್ರಹ್ಮಪುತ್ರಾ @ ಜಮುನಾ ನದಿಗೆ ಕಟ್ಟಿರುವ ಬಂಗಬಂಧು ಸೇತುವೆಯು 1971ರ ಸಮಯದಲ್ಲಿ ಪಾಕಿಸ್ತಾನಿಯರಿಗೆ ಹೆದರಿ ಓಡುತ್ತಿದ್ದ ಲಕ್ಷಕ್ಕೂ ಮೀರಿ ಜನರು ಜಲಸಮಾಧಿಯಾಗಿದ್ದಕ್ಕೆ ಸಾಕ್ಷಿಯಾಗಿದೆ. ವಿಶ್ವಸಂಸ್ಥೆ, ಜಾಗತಿಕ ಮಾನವ ಹಕ್ಕುಗಳ ಆಯೋಗ, ವಿಶ್ವ ಮಹಿಳಾ ಆಯೋಗಗಳ ಜಾಣಕುರುಡುತನಕ್ಕೆ ಇದಾವುದೂ ಕಾಣಲೇ ಇಲ್ಲ !
ಬಾಂಗ್ಲಾದೇಶದ ಮುಷ್ಪಿಕರನ ಹೆಂಡತಿಯೇ ತನ್ನ ಗಂಡನ ಮೇಲೆ ಹಲ್ಲೆ ಮಾಡುವುದಕ್ಕೆ ಸಹಕರಿಸುವುದು, ಕಾಮಾಂಧರ ಬಹುಪತ್ನಿತ್ವದ ವಿರುದ್ಧ ಹೆಣ್ಣಿನ ಆಕ್ರೋಶದ ಪ್ರತೀಕ. 75ನೇ ವಯಸ್ಸಿನಲ್ಲೂ ಸೈಕಲ್ ತುಳಿಯುವ ಸಲೀಂ ಚಾಚಾ, “ನಾನು ಸಾಯುವುದು ಮುಖ್ಯವಲ್ಲ, ನೀವು ಬದುಕುವುದು ಮುಖ್ಯ” ಎಂದಾಗ ಆಪದ್ಬಾಂಧವರು ಎಲ್ಲೆಲ್ಲಿ ಯಾರ್ಯಾರ ರೂಪದಲ್ಲಿ ರಕ್ಷಿಸುತ್ತಾರೋ ಬಲ್ಲವರಾರು?
ಬಾಂಗ್ಲಾದೇಶದ ಹಿಂದೂ ಅರ್ಚಕರು “ನನ್ನ ಮಗಳನ್ನು ಎತ್ತಿಕೊಂಡು ಹೋದರು, ಈವರೆಗೆ ಅವಳು ಏನಾದಳು ಎಂಬುದು ಗೊತ್ತಿಲ್ಲ. ಬಾಂಗ್ಲಾದೇಶದಲ್ಲಿ ಹಿಂದುವಾಗಿ ಹುಟ್ಟುವುದು ತಪ್ಪು. ಅದರಲ್ಲೂ ಹಿಂದೂ ಹುಡುಗಿಯಾಗಿ ಹುಟ್ಟುವುದಂತೂ…ಬೇಡ ಬಿಡಿ. ಇಲ್ಲಿನ ದೌರ್ಜನ್ಯಕ್ಕೆ ಹೆದರಿ ನಾನೂ ಭಾರತಕ್ಕೆ ಬಂದರೆ ಈ ದೇವಾಲಯದ ಪೂಜೆಗೆ ಜನ ಸಿಗುವುದಿಲ್ಲ. ನಾನು ಇಲ್ಲೇ ಹುಟ್ಟಿ-ಬೆಳೆದವನು. ತಾಯ್ನಾಡು ಹೇಗೇ ಇರಲಿ, ಅಲ್ಲೇ ಬಾಳಿ ಬದುಕಬೇಕಾದುದು ಅನಿವಾರ್ಯ. ಗಡಿದಾಟಿ ಭಾರತಕ್ಕೆ ಹೋಗಲು ಹಂಬಲಿಸುವವರಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ. ನಾನು ನನ್ನ ತೃಪ್ತಿಗಾಗಿ ಗಡಿ ದಾಟಿಸುವಂತಹ ಸಹಾಯ ಮಾಡುತ್ತೇನೆ” ಎಂದಾಗ ಸ್ವಧರ್ಮರಕ್ಷಣೆಗಾಗಿ ಪ್ರಜ್ಞಾಪೂರ್ವಕ ಬಲಿದಾನವಾದವರ ನೆನಪಾಗುತ್ತದೆ. ಅಂತಹ ಜೀವಿಗಳಿಗೆ ಶತಕೋಟಿ ನಮನಗಳು. ಭಾರತದಲ್ಲಿರುವ ಆಮದು ರಕ್ಕಸ ಧರ್ಮೀಯರು ಮತ್ತು ಅವರ ಜೊತೆ ಕೈಜೋಡಿಸುವ ಕೆಲವು ಸ್ವಘೋಷಿತ ಹಿಂದೂ ಉದಾರವಾದಿಗಳ ಕಣ್ಣಿಗೆ ಇವಾವುದೂ ಕಾಣುವುದೇ ಇಲ್ಲ ! ಭಾರತೀಯರ ವಿಶೇಷವಾಗಿ ಹಿಂದೂಗಳ ಔದಾರ್ಯ ಮತ್ತು ಅತೀವ ಸಹಿಷ್ಣುತೆಯೇ ಮಹಾದೌರ್ಬಲ್ಯ ಎಂಬುದು ಇಂದಿಗೂ ಬಹುಜನರಿಗೆ ಮನವರಿಕೆಯಾಗಿಲ್ಲ. ಬಾಂಗ್ಲಾ ದೇಶೀಯರೂ ಸೇರಿದಂತೆ ಪರದೇಶಗಳಿಗೆಲ್ಲ ಭಾರತ ಸ್ವರ್ಗ. ಒಮ್ಮೆ ಭಾರತಕ್ಕೆ ನುಸುಳಿಬಿಟ್ಟರೆ ಆರಾಮಾಗಿ ಜೀವನ ನಡೆಸಬಹುದು ಎಂಬ ನಂಬಿಕೆ ಅವರೆಲ್ಲರದು.
ವಿನಯಚಂದ್ರ-ಮಧುಮಿತಾ ಎಂಬ ನಾಯಕ-ನಾಯಕಿಯ ಹೆಸರುಗಳ ಆಯ್ಕೆ ಸಹಿತ ಅಪ್ಪ ಶಿವರಾಮ ಹೆಗಡೆ, ಅವ್ವ ಸುಶೀಲಮ್ಮ, ತಂಗಿ ಅಂಜಲಿ,(ತಂಗಿಗೆ ಅಣ್ಣನೇ ವಿಕಿಪೀಡಿಯಾ, ಗೂಗಲ್ ಸರ್ಚ್,…) ಕೋಚ್ ಚಿದಂಬರ, ಒಂದೇ ಒಂದು ಅಂಕಕ್ಕೂ ಮಹತ್ವ ನೀಡುವ ಕೋಚ್ ಜಾಧವ್ ಸರ್, ಸಹಕ್ರೀಡಾವರ್ತಿ ಜೊಲ್ಲುಪಾರ್ಟಿ ರ್ಸೂರ್ಯನ್ ಒಳಗೊಬ್ಬ ಹೃದಯವಂತ, ಹಿತೈಷಿ ಗೆಳೆಯ ಸಂಜಯ, ದೈಹಿಕ ಶಿಕ್ಷಕರು, ಸಲೀಂ ಚಾಚಾ ಎಲ್ಲವೂ ಸದಾ ಕಾಡುವ ಪಾತ್ರಗಳು. ಇಲ್ಲಿನ ಯಾವುದೇ ಘಟನೆ ಅಥವಾ ಪಾತ್ರಗಳು ವಾಸ್ತವದಲ್ಲಿ ಕಾಣುವಂತವೇ ಆಗಿವೆ.
ಬೆಂಗಾಲಿಗಳು ಎಷ್ಟು ಸ್ನೇಹಿತರೋ ಅಷ್ಟೇ ಸಿಟ್ಟಿನವರೂ ಕೂಡಾ ! ಇತಿಹಾಸದ ಪುಟಗಳಲ್ಲಿಯೂ ಬಂಗಾಳಿಗಳ ಕ್ರಾಂತಿಕಾರಿ ಚಟುವಟಿಕೆಗಳದ್ದು ಅಗ್ರಸ್ಥಾನ. ಬಂಕಿಮಚಂದ್ರರ “ಆನಂದಮಠ” (1882) ಓದಿದ್ದವರಿಗೆ 136 ವರ್ಷಗಳ ನಂತರದ “ಬೆಂಗಾಲಿ ಬೆಡಗಿ”ಯ ಘಟನೆಗಳು-ಪಾತ್ರಗಳು, ಸಾಮಾಜಿಕ ಸ್ಥಿತಿಗತಿ ಕಾಲ್ಪನಿಕ ಎನಿಸುವುದಿಲ್ಲ. {ಹಾಗಂತ ಆನಂದಮಠಕ್ಕೂ ಬೆಂಗಾಲಿ ಬೆಡಗಿಗೂ ಇಲ್ಲಿ ಹೋಲಿಕೆ ಮಾಡುತ್ತಿಲ್ಲ}
ತುಂಡುಗುಪ್ಪಳ, ಅಜಮಾಸು, ಮೆತ್ತಿಯನ್ನು ಹತ್ತುವುದು, ತೊಡೆದೇವು ಇತ್ಯಾದಿ ಹವಿಗನ್ನಡ ಪದಗಳ ಬಳಕೆ ಮತ್ತು ಪರಿಚಾರಿಕೆ ಕಾದಂಬರಿಗೆ ಮೆರುಗು ತಂದಿದೆ. ನಗಣ್ಯವೆನಿಸುವ ಮುದ್ರಣ ದೋಷ, ಒಂದೆರೆಡು ಸಿನಿಮೀಯ ಘಟನೆಗಳ ಹೊರತಾಗಿ ಮತ್ತೆಮತ್ತೆ ಮೆಲುಕುಹಾಕುವಂತಹ ಕೃತಿ “ಬೆಂಗಾಲಿ ಬೆಡಗಿ”. ಬೆಂಗಾಲಿ ಬೆಡಗಿಯನ್ನು ಓದುತ್ತಲೇ “ಸ್ಲಾವೋಮಿರ್ ರಾವಿಸ್ ನ ಮಹಾಪಲಾಯನ” ಮತ್ತು ಬಂಕಿಮಚಂದ್ರರ “ಆನಂದ ಮಠ”ವನ್ನೂ ಓದುವಂತೆ ಪ್ರಚೋದಿಸಿದ್ದಾರೆ ಕತೆಗಾರ ವಿನಯ್ ದಂಟಕಲ್ ! ವಿಶ್ವಕ್ಕೆ ಯೋಗವನ್ನು ನೀಡಿದ ಭಾರತದಿಂದಲೇ ಕಬಡ್ಡಿಯೂ ವಿಶ್ವಮಾನ್ಯವಾಗಲಿ. ಲೇಖಕರ ಬಯಕೆಯಂತೆ ಏಳು ಆಟಗಾರರ ಕಬಡ್ಡಿ ಏಳೂ ಖಂಡಗಳಲ್ಲಿ ಪ್ರಾಧಾನ್ಯತೆ ಪಡೆಯಲಿ. ಆ ಮೂಲಕ ವಿಶ್ವಭ್ರಾತೃತ್ವ ಬೆಳೆಯಲಿ. ಬೆಂಗಾಲಿ ಭಾಷೆ ಸೇರಿದಂತೆ ಬಹುಭಾಷೆಗೆ “ಬೆಂಗಾಲಿ ಬೆಡಗಿ” ತರ್ಜುಮೆಯಾಗಲಿ. ವಿನಯ್ ದಂಟಕಲ್ ಮತ್ತು ಪ್ರಕಾಶಕರಾದ ಅರ್ಜುನ್ ದೇವಾಲದಕೆರೆ ರವರಿಂದ ಮತ್ತಷ್ಟು ಸಾಹಿತ್ಯಾತ್ಮಕ ಬೆಡಗು ಸೃಷ್ಟಿಯಾಗಲಿ.
ಅಘನಾಶಿನಿ ನದಿಯಿಂದ ತುಮಕೂರಿಗೆ ಹಾಗೂ ಬೆಂಗಳೂರಿಗೆ ನೀರು ಹರಿಸಬೇಕೆಂಬ ನಿಮ್ಮ ಮನವಿ ಸಂಪೂರ್ಣ ಹಾಸ್ಯಾಸ್ಪದ ಎನ್ನಿಸುತ್ತಿದೆ. ಗುರುತ್ವಾಕರ್ಷಣ ಬಲಕ್ಕೆ ಸೆಡ್ಡು ಹೊಡೆಯುವಂತಹ ನಿಮ್ಮ ಚಿಂತನೆ ವಿಜ್ಞಾನಿಗಳನ್ನೂ ದಂಗು ಪಡಿಸಿದರೆ ಅಚ್ಚರಿ ಪಡಬೇಕಿಲ್ಲಘಿ.
ಎತ್ತಣ ಅಘನಾಶಿನಿ, ಎತ್ತಣ ತುಮಕೂರು, ಎತ್ತಣಂದೆತ್ತಣ ಸಂಬಂ‘ವಯ್ಯಾ? ಬಹುತೇಕ 420 ಕಿಲೋಮೀಟರ್ ದೂರದಲ್ಲಿನ ನದಿಯನ್ನು ಮೂರು ಸಾರಿ ಪಂಪ್ ಮೂಲಕ ಎತ್ತಿ, ಅದನ್ನು ಪೈಪ್ ಮೂಲಕ ತುಮಕೂರಿಗೆ ಹರಿಸುವಂತಹ ವಿಫಲ ಯೋಜನೆಯನ್ನು ಜಯಚಂದ್ರರೇ ಅದ್ಯಾವ ವೈಜ್ಞಾನಿಕ ಆಧಾರದ ಮೇಲೆ ಬೆಂಬಲಿಸಿದಿರಿ ಎನ್ನುವುದು ಅರ್ಥವಾಗುತ್ತಿಲ್ಲ.
ನಿಮ್ಮ ಮನವಿಯಲ್ಲಿ, 1980ರ ಜಲಸಂಬಂ ದೂರಗಾಮಿ ಯೋಜನೆ ಅನ್ವಯ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ನೀಡಿದ ನದಿ ಜೋಡಣಾ ವಿವರಗಳನ್ನು ನೀಡಿದ್ದೀರಿ. ಆದರೆ ನದಿ ಜೋಡಣೆಗೆ ಆದ್ಯತೆ ನೀಡುವ ನೀವು ಅಘನಾಶಿನಿ ನದಿ ಪಾತ್ರದ ವಾಸ್ತವಾಂಶಗಳನ್ನು ಮರೆಮಾಚಿದ್ದೀರಿ. ಅಘನಾಶಿನಿ ನದಿಯಲ್ಲಿ ಮಳೆಗಾಲದಲ್ಲಿ 100 ರಿಂದ 120 ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ ಎಂದು ನಿಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೀರಿ. ಆದರೆ ಅದೇ ನದಿಯ ಇನ್ನೊಂದು ಮುಖವನ್ನು ಗಮನಿಸಿದ್ದೀರಾ?
ಕಳೆದ ನಾಲ್ಕು ವರ್ಷಗಳಲ್ಲಿ ಅಘನಾಶಿನಿ ನದಿ ಎರಡು ಸಾರಿ ಸಂಪೂಣ ಬತ್ತಿ ಹೋಗಿದೆ. ಅಷ್ಟೇ ಏಕೆ ಅಘನಾಶಿನಿ ನದಿ ಕಣಿವೆಯ ಪಾತ್ರದಲ್ಲಿ ಕಳೆದ 10 ವರ್ಷಗಳಿಂದ ಅಸಮರ್ಪಕವಾಗಿ ಮಳೆಯಾಗುತ್ತಿದೆ. ವಾರ್ಷಿಕವಾಗಿ ಬೀಳುತ್ತಿದ್ದ ಮಳೆಯಲ್ಲಿ ಶೆ.20ಕ್ಕೂ ಅಕ ಕೊರತೆ ಕಂಡು ಬಂದಿದೆ. ಅಘನಾಶಿನಿ ನದಿಯಲ್ಲೇ ನೀರಿಲ್ಲ. ಇಲ್ಲದ ನೀರನ್ನು ಬೆಂಗಳೂರಿಗೆ, ತುಮಕೂರಿಗೆ ಹರಿಸುತ್ತೇವೆ ಎನ್ನುತ್ತೀರಲ್ಲ. ನಿಮ್ಮ ತಲೆಯಲ್ಲಿ ಏನಿದೆ ಎನ್ನುವುದೇ ಅರ್ಥವಾಗುತ್ತಿಲ್ಲ.
ನೀವೇ ಹೇಳಿದಂತೆ ಅಘನಾಶಿನಿ ನದಿ 1895 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. 117 ಕಿಲೋಮೀಟರ್ ದೂರ ಹರಿದು ಸಮುದ್ರವನ್ನು ಸೇರುತ್ತದೆ. ಈ ಅಘನಾಶಿನಿ ನದಿಯ ನೀರನ್ನೇ ಶಿರಸಿ, ಕುಮಟಾ ಹಾಗೂ ಹೊನ್ನಾವರ ಪ್ರದೇಶಗಳ ಜನಸಾಮಾನ್ಯರು ನೆಚ್ಚಿಕೊಂಡಿದ್ದಾರೆ. ಸಿದ್ದಾಪುರ ತಾಲೂಕಿನ ಅದೆಷ್ಟೋ ಸಹಸ್ರ ಸಹಸ್ರ ಕುಟುಂಬಗಳು ಕುಡಿಯುವ ನೀರಿಗೆ, ಜಮೀನುಗಳಿಗೆ, ಬೆಳೆ ಬೆಳೆಯಲು ಬಳಸುತ್ತಿದ್ದಾರೆ. ಅಘನಾಶಿನಿ ನದಿಯನ್ನು ತಿರುವು ಮಾಡಿದರೆ ಈ ಪ್ರದೇಶದಲ್ಲಿ ಉಂಟಾಗುವ ಕ್ಷೋಭೆಗೆ ಏನು ಪರಿಹಾರ ಹುಡುಕುತ್ತೀರಿ?
ಭೌಗೋಳಿಕವಾಗಿ ಅಘನಾಶಿನಿ ನದಿ ಹರಿಯುವ ಸ್ಥಳ ಬೆಂಗಳೂರಿಗಿಂತ 450 ಮೀಟರ್‌ಗಳಷ್ಟು ಕೆಳಗಿದೆ. ಇಷ್ಟು ಮೇಲೆ ನೀರನ್ನೆತ್ತುವುದು ಸುಲಭದ ಮಾತಲ್ಲ. ಹೀಗೆ ನೀರು ಹರಿಸುವ ಮಾರ್ಗ ಮಧ್ಯದಲ್ಲಿ ಅಘನಾಶಿನಿ ಸಂರಕ್ಷಿತ ಅರಣ್ಯ ಪ್ರದೇಶ, ಶರಾವತಿ ಸಂರಕ್ಷಿತ ಅರಣ್ಯ ಪ್ರದೇಶಗಳು ಬರುತ್ತವೆ. ಅದಲ್ಲದೇ ಸಾಲು ಸಾಲು ಹೊಲಗಳು, ಅರಣ್ಯ ಪ್ರದೇಶಗಳಿವೆ. ಅದೆಲ್ಲದರ ಮಾರಣಹೋಮ ನಿಶ್ಚಿತ.
ಜಯಚಂದ್ರರೇ,
ನೀವು ತುಮಕೂರಿನ ಶಿರಾ ಕ್ಷೇತ್ರದಲ್ಲಿ 6 ಅವಗೆ ಶಾಸಕರಾಗಿ ಆಯ್ಕೆಯಾಗಿದ್ದೀರಿ, ಮಂತ್ರಿಗಳಾಗಿಯೂ ಕಾರ್ಯ ನಿರ್ವಹಿಸಿದ್ದೀರಿ. ಆ ಸಂದರ್ಭದಲ್ಲಿ ತುಮಕೂರು ಜಿಲ್ಲೆಗಳಲ್ಲಿ ಕೆರೆಗಳನ್ನು ಹೂಳೆತ್ತಬಹುದಿತ್ತು. ಜಲ ಮೂಲಗಳ ಪುನಶ್ಚೇತನ ಮಾಡಬಹುದಿತ್ತು. ಆ ಸಂದರ್ಭದಲ್ಲಿ ಕುಂಭಕರ್ಣನ ನಿದ್ದೆ ಮಾಡಿದ್ದ ನಿಮಗೆ ಈಗ ಥಟ್ಟನೆ ಎಚ್ಚರವಾಯಿತೇ? ಮಲೆನಾಡಿನ ದಿನಗಳ ನೀರನ್ನು ತಿರುಗಿಸಿ ತಂದಾಗ ಮಾತ್ರ ಅನುಕೂಲ ಎಂದುಕೊಂಡಿರೇ? ನಿಮ್ಮಲ್ಲಿಯೇ ಇರುವ ಜಲಮೂಲಗಳ ಸಂರಕ್ಷಣೆಯ ಮಾರ್ಗಗಳನ್ನು ಬಿಟ್ಟು ದೂರದ ನದಿಯ ಮೇಲೇಕೆ ನಿಮ್ಮ ಕಣ್ಣು? ಅದ್ಯಾವ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಬೇಕೆಂದು ಅಘನಾಶಿನಿ ನದಿ ತಿರುವನ್ನು ಬೆಂಬಲಿಸುತ್ತೀರಿ?
ಅಘನಾಶಿನಿ ಇರಲಿ, ಶರಾವತಿ ಇರಲಿ, ಅಲ್ಲಿನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿದೆ. ಶರಾವತಿ ನದಿಗೆ ನಿರ್ಮಿಸಿರುವ ಲಿಂಗನಮಕ್ಕಿಯಲ್ಲಿ ಪ್ರತಿ ವರ್ಷ ನೀರಿನ ಸ್ಟೋರೇಜ್ ಪ್ರಮಾಣ ಇಳಿಕೆಯಾಗುತ್ತಲೇ ಇದೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಪ್ರಮಾಣದಲ್ಲಿ ಬಹುಪಾಲನ್ನು ಉತ್ಪಾದಿಸುವ ಲಿಂಗನಮಕ್ಕಿಯ ಅಣೆಕಟ್ಟೆಯಿಂದ ನೀರು ತಂದರೆ ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗುವುದಿಲ್ಲವೇ?
ಪ್ರವಾಸೋದ್ಯಮಕ್ಕೂ ಹೊಡೆತ
ಅಘನಾಶಿನಿ ನದಿ ಉಂಚಳ್ಳಿ ಜಲಪಾತಕ್ಕೆ ಕಾರಣವಾಗಿದೆ. ಈ ಉಂಚಳ್ಳಿ ಜಲಪಾತಕ್ಕೆ ಪ್ರತಿವರ್ಷ ಲಕ್ಷಾಂತರ ಜನರು ‘ೇಟಿ ನೀಡುತ್ತಾರೆ. ಲೂಷಿಂಗ್ಟನ್ ಫಾಲ್ಸ್ ವಿದೇಶಗಳ ಮಟ್ಟದಲ್ಲಿಯೂ ಹೆಸರಾಗಿರುವ ಪ್ರಮುಖ ಜಲಪಾತಗಳಲ್ಲಿ ಒಂದು. ಅಘನಾಶಿನಿ ನದಿ ತಿರುವು ಮಾಡದರೆ ಉಂಚಳ್ಳಿ ಜಲಪಾತಕ್ಕೆ ನೀರಿನ ಬರ ಉಂಟಾಗಲಿದೆ. ಇದರಿಂದ ರಾಜ್ಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದು ಟಿ. ಬಿ. ಜಯಚಂದ್ರರ ತಲೆಗೆ ಹೋಗಿಲ್ಲವೇ?
ಅಘನಾಶಿನಿ ನದಿ ತಿರುವು ಯೋಜನೆ ಸಮರ್ಪಕ ಎನ್ನುವಂತಹ ಉದ್ಯಮಿ ಸ್ನೇಹಿ ಆಲೋಚನೆಗಳನ್ನು ಬಿಟ್ಟುಘಿ, ತುಮಕೂರಿಗೆ ಹಾಗೂ ಬೆಂಗಳೂರಿಗೆ ನೀರು ಒದಗಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಕಡೆಗೆ ಚಿಂತನೆ ಮಾಡುವುದು ಅಗತ್ಯವಿದೆ. ಜಲಮೂಲಗಳಾದ ಕೆರೆ, ಕುಂಟೆಗಳ ಹೂಳೆತ್ತುವುದರ ಜತೆಗೆ ಕೆರೆಗಳನ್ನು ಅತಿಕ್ರಮಣ ಮಾಡಿ, ಬಿಲ್ಡಿಂಗ್‌ಗಳನ್ನು ಎಬ್ಬಿಸುವವರನ್ನು ತಡೆದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಜರೂರತ್ತಿದೆ. ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಹೊಣೆಗಾರಿಕೆ ಇದೆ. ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕಾಗಿದೆ. ಟಿ. ಬಿ. ಜಯಚಂದ್ರರು ಇಂತಹ ನೀರಿಂಗಿಸುವ ಯೋಜನೆಗಳ ಕುರಿತು ಆಲೋಚನೆ ಮಾಡಬೇಕೇ ಹೊರತು ಪರಿಸರದ ಕತ್ತು ಹಿಸುಕುವಂತಹ ಯೋಜನೆಗಳ ಕುರಿತಲ್ಲಘಿ.
ಭಾರತದ ಇತಿಹಾಸದಲ್ಲಿ ಅದೆಷ್ಟೋ ನರಮೇಧಗಳು ಜರುಗಿದೆ. ಮುಸ್ಲೀಮರ ಧಾಳಿಗೆ ಲಕ್ಷ ಲಕ್ಷ ಜನರು ಬಲಿಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕ್ರೈಸ್ತ ಮಿಷನರಿಗಳ ದಾಳಿಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳು ಜೀವ ತೆತ್ತಿರುವುದು ಬಹುತೇಕರಿಗೆ ತಿಳಿದಿಲ್ಲ. ಹಿಂದೂಗಳ ಸಾವಿಗೆ ಸಾಕ್ಷಿಯಾಗಿರುವುದೇ ನಮ್ಮದೇ ಪಕ್ಕದ ರಾಜ್ಯ ಗೋವಾ.
ಗೋವಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮದೇ ರಾಜ್ಯಕ್ಕೆ ಅಂಟಿಕೊಂಡಿರುವ ಭಾರತದ ಅತ್ಯಂತ ಚಿಕ್ಕ ರಾಜ್ಯ ಗೋವಾ. ಸಮುದ್ರ ತೀರಗಳು, ಅಗ್ಗದ ಮದ್ಯ, ಢಾಳವಾಗಿರುವ ಪೋರ್ಚುಗೀಸ್ ಸಂಸ್ಕೃತಿ ಹೀಗೆ ಹಲವು ಕಾರಣಗಳು ಗೋವಾದ ವೈಶಿಷ್ಟ್ಯತೆಗೆ ಸಾಕ್ಷಿ. ದೇಶ-ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಜನರು ಗೋವಾಕ್ಕೆ ಭೇಟಿ ನೀಡುತ್ತಾರೆ. ಇಂತಹ ಗೋವಾ ಕರಾಳ ಇತಿಹಾಸವನ್ನು ಹೊಂದಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ.
450 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ವಸಾಹತು ವ್ಯವಸ್ಥೆಯಲ್ಲಿ ನಲುಗಿದ ಗೋವಾ ಭಾರತದೊಳಕ್ಕೆ ಸೇರುವವರೆಗೂ ಅಲ್ಲಿ ನಡೆದ ಕರಾಳ ಘಟನೆಗಳು ಹೆಚ್ಚಿನವರಿಗೆ ತಿಳಿಯದಿರುವುದು ದುರಂತ. ಪೋರ್ಚುಗೀಸರ ಆಡಳಿತದ ಅವಧಿಯಲ್ಲಿ ಗೋವಾದಲ್ಲಿ ನಡೆದ ಭಯಾನಕ ಘಟನೆಗಳು ಎಂತವರನ್ನೂ ಬೆಚ್ಚಿ ಬೀಳಿಸುತ್ತವೆ.
1510ರಲ್ಲಿ ಆಲ್ಫೋನ್ಸ್ ಡಿ ಅಲ್ಬುಕರ್ಕ್ ಗೋವಾಕ್ಕೆ ಬಂದಾಗಿನಿಂದ ಅಲ್ಲಿ ದುರಂತದ ಪುಟಗಳು ತೆರೆದುಕೊಳ್ಳುತ್ತವೆ. ಅಲ್ಬುಕರ್ಕ್ ಗೋವಾಕ್ಕೆ ಬರುವುದಕ್ಕೂ ಮೊದಲು ಆ ಪ್ರದೇಶವೆಲ್ಲ ಬಿಜಾಪುರದ ಆದಿಲ್ ಖಾನ್ ಆಡಳಿತಕ್ಕೊಳಪಟ್ಟಿತ್ತು. ಗೋವಾದ ಜನರು ಆದಿಲ್ ಖಾನ್ ಎಂಬ ಮುಸ್ಲೀಂ ಆಡಳಿತಗಾರನ ಅಡಿಯಲ್ಲಿ ಕೆಲಸ ಮಾಡಲು ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಅದಕ್ಕಾಗಿ ಹೊನ್ನಾವರದ ದಂಡನಾಯಕ ತಿಮ್ಮಯ್ಯನ ಸಹಾಯವನ್ನೂ ಪಡದುಕೊಂಡು ಆದಿಲ್ ಖಾನ್‌ನ ವಿರುದ್ಧ ಹೋರಾಟ ನಡೆಸುತ್ತಿರುತ್ತಾರೆ.
ಏಕಾಂಗಿ ತಿಮ್ಮಯ್ಯ ತಾನೊಬ್ಬನೇ ಆದಿಲ್‌ಖಾನ್‌ನನ್ನು ಎದುರಿಸಲು ಕಷ್ಟಪಡುತ್ತಿರುತ್ತಾನೆ. ಈ ವೇಳೆ ಆತ ಆದಿಲ್ ಖಾನ್ ವಿರುದ್ಧ ಯುದ್ಧಕ್ಕೆ ಅಲ್ಬುಕರ್ಕ್ ಬಳಿ ಸಹಾಯ ಯಾಚಿಸುತ್ತಾನೆ. ಬಲಿಷ್ಠ ನೌಕಾಪಡೆ ಹೊಂದಿದ್ದ ಅಲ್ಬುಕರ್ಕ್ ಸಹಾಯದಿಂದ ಆದಿಲ್ ಖಾನ್‌ನನ್ನು ತಿಮ್ಮಯ್ಯ ಸೋಲಿಸುತ್ತಾನೆ. ಆ ನಂತರ ಅಲ್ಬುಕರ್ಕ್‌ನಿಗೆ ತಿಮ್ಮಯ್ಯ ಸಾಕಷ್ಟು ಕೊಡುಗೆಗಳನ್ನು ನೀಡಿ ಕಳಿಸುತ್ತಾನೆ. ಈ ವೇಳೆಗೆ ಗೋವಾದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರು. ಬೆರಳೆಣಿಕೆಷ್ಟು ಮುಸ್ಲೀಮರಿದ್ದರು.
ನಂತರ ಅಲ್ಬುಕರ್ಕ್‌ಗೆ ಗೋವಾದ ಮೇಲೆ ಕಣ್ಣು ಬಿತ್ತು. ಆತ ಅದನ್ನು ತನ್ನ ಕೈವಶ ಮಾಡಿಕೊಳ್ಳಲು ಯತ್ನಿಸಿದ. ಹೊನ್ನಾವರದ ದಂಡನಾಯಕ ತಿಮ್ಮಯ್ಯನನ್ನು ಬೆದರಿಸಿ ಗೋವಾವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದರೊಂದಿಗೆ ಗೋವಾದ 450 ವರ್ಷಗಳ ದುರಂತ ಅಧ್ಯಾಯ ಆರಂಭಗೊಳ್ಳುತ್ತದೆ. ಈ ದುರಂತದ ವಿವರಗಳನ್ನು ಗೋವಾದ ದುರಂತ ಅಧ್ಯಾಯವನ್ನು ಅಂಕಣಕಾರ್ತಿ ಶೆಫಾಲಿ ವೈದ್ಯ ವಿವರವಾಗಿ ಬಿಚ್ಚಿಟ್ಟಿದ್ದಾರೆ.
ಶೆಫಾಲಿ ವೈದ್ಯ ನೀಡಿದ ವಿವಿರಗಳ ಪ್ರಕಾರ, ತಿಮ್ಮಯ್ಯ ಪೋರ್ಚುಗೀಸರ ಬೆದರಿಕೆಗೆ ಮಣಿದ ನಂತರ ಗೋವಾದಲ್ಲಿ ಕರಾಳ ದಿನಗಳು ಆರಂಭಗೊಂಡವು. ಸಾಮೂಹಿಕ ಮತಾಂತರ, ವಿನಾಕಾರಣ ಶಿಕ್ಷೆಯನ್ನು ನೀಡುವ, ಕ್ರಿಶ್ಚಿಯನ್ ಮಿಷನರಿಗಳನ್ನು ವಿರೋಧಿಸುವವರನ್ನು ನೇಣಿಗೆ ಹಾಕುವಂತಹ ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಹಲವರಿಗೆ ತಿಳಿದಿಲ್ಲ.
ಪೋರ್ಚುಗೀಸ್ ಆಡಳಿತ ಆರಂಭವಾದ ನಂತರ ಗೋವಾದಲ್ಲಿ ವ್ಯವಸ್ಥಿತಯವಾಗಿ ಮತಾಂತರಗಳು ಆರಂಭಗೊಂಡವು. ದೇವಸ್ಥಾನಗಳನ್ನು ನೆಲಸಮ ಮಾಡಲಾಯಿತು. ಅಂತಹ ಜಾಗಗಳಲ್ಲಿ ಚರ್ಚುಗಳು ನಿರ್ಮಾಣಗೊಂಡವು. ಬೆದರಿಸುವ ಮುಖಾಂತರ, ಆಮಿಷಗಳನ್ನು ಒಡ್ಡುವ ಮೂಲಕ ಹಾಗೂ ಇತರ ಹಲವು ಮಾರ್ಗಗಳ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಕಾರ್ಯಗಳು ನಡೆದವು.
16ನೇ ಶತಮಾನದಲ್ಲಿಯೇ ಯಾರು ಕ್ರಿಶ್ಚಿಯನ್‌ರನ್ನು ವಿರೋಧಿಸುತ್ತಾರೋ, ಕ್ರಿಶ್ಚಿಯನ್ ಆಚರಣೆಗಳನ್ನು ಕೈಗೊಳ್ಳುವುದಿಲ್ಲವೋ ಅಂತವರನ್ನು ಗೋವಾದಿಂದ ಹೊರಕ್ಕೆ ಓಡಿಸಲಾಯಿತು. ಗೋವಾದಲ್ಲಿ ಹಿಂದೂಗಳನ್ನು ಓಡಿಸಿದ ನಂತರ ಅಲ್ಲಿ ಪೋರ್ಚುಗೀಸರ ಹಿಡಿತ ಇನ್ನಷ್ಟು ಬಲಗೊಂಡಿತು. ಗೋವಾದ ಕೆಲವು ದ್ವೀಪಗಳಿಗೆ ಮಾತ್ರ ಮೊದ ಮೊದಲು ಸೀಮಿತರಾಗಿದ್ದ ಪೋರ್ಚುಗೀಸರು ನಂತರದಲ್ಲಿ ಆ ದ್ವೀಪಗಳಿಂದ ಮುಂದಡಿ ಇಟ್ಟರು. ಪ್ರಮುಖ ಸ್ಥಳಗಳಲ್ಲಿ ತಮ್ಮ ವಸಾಹತು ಸ್ಥಾಪಿಸಿದರು. ವಸಾಹತು ಸ್ಥಳದಲ್ಲಿ ಮತಾಂತರಗಳು ಅವ್ಯಾಹತವಾಗಿ ನಡೆದವು.
ಗೋವಾದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹಲವರು ಬಹುತೇಕ ಸಂದರ್ಭಗಳಲ್ಲಿ ಹಿಂದೂ ಆಚರಣೆಗಳನ್ನು ಮುಂದುವರಿಸಿದ್ದರು. ಮೂರ್ತಿಗೆ ಹೂವುಗಳನ್ನು ಇಡುವುದು, ಹಿಂದೂಗಳಂತೆ ಬಟ್ಟೆಗಳನ್ನು ತೊಡುವುದು, ದೀಪಗಳನ್ನು ಬೆಳಗುವುದು ಹೀಗೆ ಹಲವು ಸಂಪ್ರದಾಯಗಳನ್ನು ಮುಂದುವರಿಸಿದ್ದರು. ಅಲ್ಲದೇ ಕೆಲವರು ಮರಳಿ ಹಿಂದೂ ಧರ್ಮಕ್ಕೆ ಬರುವ ಯತ್ನವನ್ನೂ ಕೈಗೊಂಡರು. ಇದು ಪೋರ್ಚುಗೀಸರಿಗೆ ಸರಿ ಕಾಣಲಿಲ್ಲ.
ವಿಶೇಷವಾಗಿ ಆಗ ಅಲ್ಲಿ ಕ್ರೈಸ್ತ ಮಿಷನರಿಗಳ ಮುಂದಾಳತ್ವ ವಹಿಸಿದ್ದ ಫ್ರಾನ್ಸಿಸ್ ಕ್ಸೇವಿಯರ್‌ಗೆ ಇದು ಸರಿ ಕಾಣಿಸಲಿಲ್ಲ. ಆತ ಹಿಂದೂಗಳನ್ನು ನಂಬಬಾರದು, ಹಿಂದುಗಳು ಎಂದಿಗೂ ನಂಬಿಕೆಗೆ ಅರ್ಹರಲ್ಲ ಎಂದು ಹೇಳಿದ್ದಲ್ಲದೇ, ವ್ಯಾಟಿಕನ್‌ನಲ್ಲಿದ್ದ ಪೋಪ್‌ಗೆ ಒಂದು ಪತ್ರವನ್ನು ಬರೆಯುತ್ತಾನೆ. ಈ ಪತ್ರದಲ್ಲಿ ಧರ್ಮಾಚರಣೆಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಚಾರಣಾ ನ್ಯಾಯಾಲಯವನ್ನು ಆರಂಭಿಸಬೇಕು ಎಂದು ಆಗ್ರಹಿಸುತ್ತಾನೆ.
ಕ್ಯಾಥೋಲಿಕ್ ಆಚರಣೆಗಳನ್ನು ವಿರೋಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಆರಂಭಗೊಂಡ ವಿಚಾರಣಾ ನ್ಯಾಯಾಲಯ (ಕೋರ್ಟ್ ಆಫ್ ಇನ್ಕ್ವಿಸಿಷನ್) ಹಲವು ಕರಾಳ ಅದ್ಯಾಯಗಳನ್ನು ಹೊಂದಿದೆ.
ಫ್ರಾನ್ಸಿಸ್ ಕ್ಸೇವಿಯರ್ ಪತ್ರಕ್ಕೆ ಮನ್ನಣೆ ನೀಡಿದ ಪೋರ್ಚುಗೀಸ್ ಸರ್ಕಾರ ಗೋವಾದಲ್ಲಿ ಕೋರ್ಟ್ ಆಫ್ ಇನ್ಕ್ವಿಸಿಷನ್ ಆರಂಭಕ್ಕೆ ಒಪ್ಪಿಗೆ ನೀಡಿತು. ಹಳೆಯ ಗೋವಾದಲ್ಲಿದ್ದ ಆದಿಲ್ ಖಾನ್ ಅರಮನೆಯಲ್ಲಿ ಕೋರ್ಟ್ ಆಫ್ ಇನ್ಕ್ವಿಸಿಷನ್ ಆರಂಬಿಸಲಾಯಿತು. ಈ ಅರಮನೆ ಆವರಣದಲ್ಲಿಯೇ ಬಹುದೊಡ್ಡ ಸೆರೆಮನೆಯನ್ನೂ ತೆರೆಯಲಾಯಿತು. ಈ ಅರಮನೆಯಲ್ಲಿ ನೆಲ ಮಾಳಿಗೆಗಳೂ ಇದ್ದವು. ಯಾರು ಪೋರ್ಚುಗೀಸರ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಧ್ವನಿ ಎತ್ತಿದರೋ ಅಂತವರನ್ನೆಲ್ಲ ಸರಣಿ ಸರಣಿಯಾಗಿ ಬಂಧಿಸಲಾಯಿತು. ಮೊದಲ ಹಂತದಲ್ಲಿ ವಿರೋಧಿಗಳ ಆಸ್ತಿಯನ್ನು, ಸಂಪತ್ತುಗಳನ್ನು ವಶಪಡಿಸಿಕೊಂಡರೆ, ಎರಡನೇ ಹಂತದಲ್ಲಿ ಕ್ರೂರ ಶಿಕ್ಷೆಯನ್ನು ನೀಡಿ ದಂಡಿಸಲಾಗುತ್ತಿತ್ತು. ವ್ಯಕ್ತಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿತ್ತು. ಬಿಸಿ ನೀರು ಸುರಿಯುವುದು, ಮೈಗೆ ಸೂಜಿಯಿಂದ ಚುಚ್ಚುವುದು, ಗುಪ್ತಾಂಗಗಳಿಗೆ ಸೂಜಿಯಿಂದ ಚುಚ್ಚುವುದು, ಹಗ್ಗದಿಂದ ನೇತುಹಾಕುವುದು ಹೀಗೆ ಹಲವು ಅಮಾನವೀಯ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಯಾರು ಈ ಶಿಕ್ಷೆಗಳಿಗೆ ಹೆದರಿ ಕ್ರಿಶ್ಚಿಯನ್ ಮತಕ್ಕೆ ಸೇರಿಕೊಳ್ಳಲು ಒಪ್ಪುತ್ತಾರೋ ಅಂತವರಿಗೆ ಶಿಕ್ಷೆ ನೀಡುವುದನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಇಂತಹ ಶಿಕ್ಷೆಗೂ ಹೆದರದವರನ್ನು ಸಾರ್ವಜನಿಕ ಸ್ಥಳದಲ್ಲಿ ಜೀವಂತವಾಗಿ ಸುಟ್ಟು ಹಾಕಲಾಗುತ್ತಿತ್ತುಘಿ.
ಫ್ರೆಂಚ್ ಪ್ರವಾಸಿ ಚಾರ್ಲ್ಸ್ ಧಿಲ್ಲೋನ್ ಗೋವಾದಲ್ಲಿ ಕೋರ್ಟ್ ಆಫ್ ಇನ್ಕ್ವಿಸಿಷನ್‌ನಲ್ಲಿ ಒಂದೂವರೆ ವರ್ಷಗಳ ಕಾಲ ಶಿಕ್ಷೆಗೆ ಒಳಗಾಗಿದ್ದಘಿ. ಆದರೆ ಫ್ರೆಂಚ್ ಸರ್ಕಾರದ ಒತ್ತಡಕ್ಕೆ ಮಣಿದ ಪೋರ್ಚುಗೀಸ್ ಸರ್ಕಾರ ಆತನನ್ನು ಬಿಡುಗಡೆ ಮಾಡಿತ್ತು. ಈತ ಪ್ಯಾರಿಸ್‌ಗೆ ಮರಳಿದ ನಂತರ ಕೋರ್ಟ್ ಆಫ್ ಇನ್ಕ್ವಿಸಿಷನ್‌ನ ಕ್ರೂರ ಮುಖವನ್ನು ಪುಸ್ತಕವೊಂದರಲ್ಲಿ ಬರೆಯುವ ಮೂಲಕ ಅನಾವರಣಗೊಳಿಸಿದ್ದಾನೆ. ಕೋರ್ಟ್ ಆಫ್ ಇನ್ಕ್ವಿಸಿಷನ್ ನ ಕ್ರೂರ ಮುಖವನ್ನು ಅನಾವರಣಗೊಳಿಸಲು ಇರುವ ಪ್ರಮುಖ ಸಾಕ್ಷ್ಯಗಳಲ್ಲಿ ಚಾರ್ಲ್ಸ್ ಧಿಲ್ಲೋನ್ ಬರೆದ ಪುಸ್ತಕ ಪ್ರಮುಖ ಸಾಕ್ಷಿ ಎನ್ನಿಸಿಕೊಂಡಿದೆ.
ಗೋವಾದ ಹಿಂದೂಗಳ ದೌರ್ಭಾಗ್ಯ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಅವರು ಗೋವಾದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪದೋನ್ನತಿ ಇರುತ್ತಿರಲಿಲ್ಲ, ಒಳ್ಳೆಯ ಸಂಬಳವಂತೂ ಇಲ್ಲವೇ ಇಲ್ಲ ಎನ್ನಬಹುದು. ಹಿಂದೂಗಳು ಗ್ರಾಮಸಭೆಗಳನ್ನು ನಡೆಸುವಂತಿರಲಿಲ್ಲಘಿ. ಧಾರ್ಮಿಕವಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿರಲಿಲ್ಲಘಿ. ಅಷ್ಟೇ ಏಕೆ ಭಕ್ತಿಗೀತೆಗಳನ್ನೂ ಸಹ ಹಾಡುವಂತಿರಲಿಲ್ಲಘಿ. ಈ ರೀತಿ ಯಾರಾದರೂ ಮಾಡಿದ್ದ ಪಕ್ಷದಲ್ಲಿ ಅಂತವರನ್ನು ಕೋರ್ಟ್ ಆಫ್ ಇನ್ಕ್ವಿಸಿಷನ್ ಹೆಸರಿನಲ್ಲಿ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು.
ಇಂತಹ ಮಾರಣಹೋಮಗಳ ಕಾರಣದಿಂದಲೇ ಕೋರ್ಟ್ ಆಫ್ ಇನ್ಕ್ವಿಸಿಷನ್ ಅತ್ಯಂತ ಹೀನಾಯ ಕಾನೂನು ಎಂದೇ ಕರೆಸಿಕೊಂಡಿದೆ. ಬಹುತೇಕ 252 ವರ್ಷಗಳ ಕಾಲ ಗೋವಾದಲ್ಲಿ ಕೋರ್ಟ್ ಆಫ್ ಇನ್ಕ್ವಿಸಿಷನ್ ಜಾರಿಯಲ್ಲಿತ್ತು. ಪೋರ್ಚುಗೀಸರು ಗೋವಾವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಕೋರ್ಟ್ ಆಫ್ ಇನ್ಕ್ವಿಸಿಷನ್‌ನ ದಾಖಲೆಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟು ಹಾಕಿದ ಕಾರಣ ಈ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲಘಿ. ಆದರೆ ಇರುವ ದಾಖಲೆಗಳ ಪ್ರಕಾರ, ಗೋವಾದಲ್ಲಿ 65 ವರ್ಷಗಳ ಅವಧಿಯಲ್ಲಿ ಕೋರ್ಟ್ ಆಫ್ ಇನ್ಕ್ವಿಸಿಷನ್ ಹೆಸರಿನಲ್ಲಿ ಬಂಧಿಸಿದವರ ಸಂಖ್ಯೆ 16 ಸಾವಿರಕ್ಕೂ ಅಧಿಕ. ಆ ದಿನಗಳ ಸಂದರ್ಭದಲ್ಲಿ ಗೋವಾದ ಜನಸಂಖ್ಯೆಯನ್ನು ಲೆಕ್ಖ ಹಾಕಿದರೆ ಇದು ಬಹುದೊಡ್ಡ ಸಂಖ್ಯೆಯಾದೀತು.
16ನೇ ಶತಮಾನದಿಂದ ಇಂದಿನವರೆಗೂ ಗೋವಾ ಅದೆಷ್ಟೋ ಬದಲಾಗಿದೆ. ಆದರೆ ಗೋವಾದಲ್ಲಿನ ಮಾರಣಹೋಮದ ಕಲೆಗಳು ಮಾತ್ರ ಈಗಲೂ ಕಾಣಿಸಿಕೊಳ್ಳುತ್ತಿವೆ. ಗೋವಾದಲ್ಲಿ ನಡೆದಂತಹ ಹಿಂದೂಗಳ ಮಾರಣಹೋಮಗಳು ಭಾರತದ ನೆಲದಲ್ಲಿ ಆಗಾಗ ನಡೆಯುತ್ತಲೇ ಇದೆ. ಕಾಶ್ಮೀರದಲ್ಲಿಘಿ, ಕೇರಳದಲ್ಲಿ, ಪಶ್ಚಿಮ ಬಂಗಾಳದಲ್ಲಿ, ಅಸ್ಸಾಂನಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮತ್ತೆ ಮತ್ತೆ ನಡೆಯುತ್ತಲೇ ಇದೆ. ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಮಾತನಾಡುವವರು ನಮ್ಮದೇ ಪಕ್ಕದ ಪುಟ್ಟ ರಾಜ್ಯ ಗೋವಾದ ನರಮೇಧಗಳನ್ನು ನೆನಪು ಮಾಡಿಕೊಳ್ಳಲೇಬೇಕಾಗುತ್ತದೆ. ಗೋವಾದ ರಕ್ತ ಸಿಕ್ತ ಇತಿಹಾಸಗಳ ಕುರಿತು ಕಣ್ಣಾಡಿಸುವ ಜರೂರತ್ತಿದೆ. ಶಾಂತಿ ಮಂತ್ರ ಜಪಿಸುವ ಚರ್ಚ್ ಕೋರ್ಟ್ ಆಫ್ ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ಸಹಸ್ರಾರು ಹಿಂದೂಗಳ ಹತ್ಯೆಯ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಿದೆ.
ಕೋರ್ಟ್ ಆಫ್ ಇನ್ಕ್ವಿಸಿಷನ್ ಆರಂಭಿಸಿ ಅದೆಷ್ಟೋ ಸಾವಿರ ಹಿಂದೂಗಳ ಹತ್ಯೆಗೆ ಕಾರಣವಾದ ್ರಾನ್ಸಿಸ್ ಕ್ಸೇವಿಯರ್‌ನ ದೇಹವನ್ನು ಗೋವಾದಲ್ಲಿ ಇಂದಿಗೂ ಸಂರಕ್ಷಿಸಿ ಇಡಲಾಗಿದೆ. ಬಹಳ ಪವಿತ್ರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಿಂದೂಗಳ ಮಾರಣಹೋಮ ಮಾಡಿದ ಇಂತಹ ವ್ಯಕ್ತಿಯನ್ನು ಸಂತ ಪದವಿಗೂ ಏರಿಸಿರುವುದು ದುರಂತವಲ್ಲವೇ?
ಚರ್ಚ್ ಈ ಹಿಂದೆ ರವಾಂಡಾದಲ್ಲಿ ನಡೆಸಿದ ನರಮೇಧಕ್ಕಾಗಿ ಕ್ಷಮೆಯನ್ನು ಕೇಳಿದೆ. ಯೆಹೂದಿಗಳ ಸರಣಿ ಹತ್ಯೆಗೂ ಕೂಡ ಚರ್ಚ್ ಕ್ಷಮೆಯನ್ನು ಯಾಚಿಸಿದೆ. ಆದರೆ ಗೋವಾದಲ್ಲಿ ಚರ್ಚ್ ಕೋರ್ಟ್ ಆಫ್ ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ಹಿಂದೂಗಳ ಹತ್ಯೆಯ ಕುರಿತು ಯಾವತ್ತೂ ಮಾತನಾಡಿಲ್ಲ. ಗೋವಾದಲ್ಲಿ 450 ವರ್ಷಗಳ ಕಾಲ ಹಿಂದೂಗಳಿಗೆ ಶಿಕ್ಷೆ ನೀಡಿ ಅವರನ್ನು ಕ್ರೂರವಾಗಿ ಹಿಂಸಿಸಿ, ಸಾಯಿಸಿದ್ದಕ್ಕೆ ಸಂಬಂಧಿಸಿದಂತೆ ಇದುವರೆಗೂ ಚಕಾರವೆತ್ತಿಲ್ಲಘಿ. ಚರ್ಚ್ ತನ್ನ ಮಾರಣಹೋಮಕ್ಕಾಗಿ ಗೋವಾದ ಜನತೆಯ ಕ್ಷಮೆ ಕೇಳುವುದು ಯಾವಾಗ? ಗೋವಾದ ಜನತೆಯನ್ನು ಹಿಂಸಿಸಿದ್ದಕ್ಕಾಗಿ ಪಾಪ ಪ್ರಾಯಶ್ಚಿತ್ತ, ಪಾಪ ನಿವೇದನೆ ಮಾಡಿಕೊಳ್ಳುವುದು ಯಾವಾಗ? ಚರ್ಚ್ ಗೋವನ್ನರ ಬಳಿ ಕ್ಷಮೆ ಕೇಳಿದಾಗ ಮಾತ್ರ ಅಲ್ಲಿ ನರಳಿ, ಕ್ರೂರವಾಗಿ ಸತ್ತ ಹಿಂದೂಗಳ ಆತ್ಮಕ್ಕೆ ಕೊಂಚ ನೆಮ್ಮದಿ ಸಿಗಲು ಸಾಧ್ಯ.
ರಾಜ್ಯದ ಇನ್ನಷ್ಟು ನದಿಗಳ ಮೇಲೆ ಜನಪ್ರತಿನಿಧಿಗಳ ಹಾಗೂ ಉದ್ಯಮಿಗಳ ಕಣ್ಣು ಬಿದ್ದಿದೆ. ಎತ್ತಿನಹೊಳೆ ತಿರುವು ಎಂಬ ವಿಲ ಯೋಜನೆ ಕಣ್ಣ ಮುಂದಿದೆ. ಹೀಗಿದ್ದಾಗಲೇ ಇನ್ನೆರಡು ನದಿಗಳನ್ನು ತಿರುಗಿಸುವ ಕುರಿತು ಧ್ವನಿ ಎದ್ದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರನ್ನು ನೀಡುತ್ತೇವೆ ಎಂದು ಹೇಳುವ ಮೂಲಕ ಕೆಲವು ವರ್ಷಗಳ ಹಿಂದೆ ಎತ್ತಿನ ಹೊಳೆ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿತು. ಪ್ರತಿ ವರ್ಷ ಈ ಯೋಜನೆಗೆ ಕೋಟಿ ಕೋಟಿ ರೂಪಾಯಿಗಳನ್ನು ನೀಡುತ್ತಲೇ ಹೋಗುತ್ತಿದೆ. ಆದರೆ ಯೋಜನೆ ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿದೆ. ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿ ನದಿ ಪಾತ್ರ ಸಂಪೂರ್ಣ ಬಯಲಾಗಿ ಮತ್ತೆ ಕುಡಿಯುವ ನೀರಿಗೆ ತತ್ವಾರ ಎನ್ನಿಸುವ ಹಂತ ಬಂದರೂ ಅಚ್ಚರಿ ಪಡಬೇಕಿಲ್ಲಘಿ. ಈ ಯೋಜನೆ ವಿಲತೆಯ ಹಾದಿಯಲ್ಲಿ ಮುಖ ಮಾಡುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಇನ್ನಷ್ಟು ನದಿಗಳನ್ನು ತಿರುಗಿಸುವ ಮಾತನಾಡುತ್ತಿರುವುದು ಮಾತ್ರ ದುರಂತದ ಸಂಗತಿ.
ರಾಜ್ಯ ಸರ್ಕಾರ ಇದೀಗ ಪ್ರಮುಖವಾಗಿ ಮೂರು ಯೋಜನೆಗಳ ಅನುಷ್ಟಾನಕ್ಕೆ ಚಿಂತನೆ ನಡೆಸುತ್ತಿದೆ. ಅಘನಾಶಿನಿ ಹಾಗೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತರುವುದು ಒಂದು ಯೋಜನೆಯಾದರೆ, ತುಂಗಭದ್ರಾ ನದಿ ನೀರನ್ನು ರಾಜ್ಯ ರಾಜಧಾನಿ ತರುವುದು ಇನ್ನೊಂದು ಯೋಜನೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರನ್ನು ಘಟಪ್ರಭಾ ಹಾಗೂ ಮಲಪ್ರಭಾ ನದಿಗೆ ಜೋಡಿಸುವುದು ರಾಜ್ಯ ಸರ್ಕಾರದ ಮುಂದಿರುವ ಇನ್ನೊಂದು ಯೋಜನೆ. ಈ ಮೂರು ಯೋಜನೆಗಳ ಮೂಲಕ ಮತ್ತೊಮ್ಮೆ ಪರಿಸರದ ಮಾರಣಹೋಮ ನಡೆಸುವ ಹುನ್ನಾರ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದು.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಯಾಗಿರುವ ಅಘನಾಶಿನಿಯ ಮೇಲೆ ಈಗಾಗಲೇ ರಾಜ್ಯ ನಾಯಕರ ಕಣ್ಣು ಬಿದ್ದಿದೆ. ಈ ನದಿಗೆ ಯಾವುದೂ ಯೋಜನೆಗಳಿಲ್ಲವಲ್ಲ ಎನ್ನುವ ಚಿಂತನೆ ಯಾರದ್ದೋ ತಲೆಯಲ್ಲಿ ಹೊಳೆದಿದ್ದೇ ತಡ, ಈ ನದಿಯನ್ನು ತಿರುಗಿಸುವ ಆಲೋಚನೆಗೆ ರಾಜ್ಯ ಸರ್ಕಾರ ಮುಂದಿಟ್ಟುಕೊಂಡಿದೆ. ಅಘನಾಶಿನಿ ನದಿಗೆ ಅಣೆಕಟ್ಟನ್ನು ಕಟ್ಟಿಘಿ, ಅಲ್ಲಿಂದ ಸುರಂಗ ಮಾರ್ಗದ ಮೂಲಕ 30 ಕಿಲೋಮೀಟರ್ ದೂರದ ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಆ ನೀರನ್ನು ಸರಬರಾಜು ಮಾಡುವುದು ಯೋಜನೆಯ ಮೊದಲ ಹಂತ. ನಂತರ ಲಿಂಗನಮಕ್ಕಿಯಲ್ಲಿನ ನೀರನ್ನು ಪಂಪ್ ಮಾಡಿ ಎತ್ತಿ ಅದನ್ನು 400 ಕಿಲೋಮೀಟರ್ ದೂರದ ಬೆಂಗಳೂರು ನಗರಿಗೆ ತರುವುದು ಹಲವರ ಹುನ್ನಾರ. ಈ ಕುರಿತು ಹಲವು ತಜ್ಞರು ಯೋಜನಾ ವರದಿಯನ್ನು ಮಂಡಿಸಿದ್ದಾರೆ. ತನ್ಮೂಲಕ ಎರಡು ನದಿಗಳ ಹತ್ಯೆಗೆ ಅಂಕಿತವನ್ನೂ ಹಾಕಲಾಗಿದೆ.
ಭೌಗೋಳಿಕವಾಗಿ ನೋಡಿದಾಗ ಈ ಯೋಜನೆ ಅತ್ಯಂತ ಕಷ್ಟಕರವಾದುದು. ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿ ಇರುವ ಭೌಗೋಳಿಕ ಪ್ರದೇಶಕ್ಕಿಂತ ಶರಾವತಿ ನದಿಯ ಲಿಂಗನಮಕ್ಕಿ ಪ್ರದೇಶ ಎತ್ತರದಲ್ಲಿದೆ. ಈ ಲಿಂಗನಮಕ್ಕಿ ಅಣೆಕಟ್ಟಿಗಿಂತಲೂ ಕನಿಷ್ಟ 500ಮೀಟರ್‌ನಷ್ಟು ಎತ್ತರದಲ್ಲಿ ಬೆಂಗಳೂರು ನಗರಿಯಿದೆ. ಹೀಗಿದ್ದಾಗ ಕೆಳಗಿನ ಪ್ರದೇಶದಿಂದ ಮೇಲ್ಮಟ್ಟದಲ್ಲಿರುವ ಪ್ರದೇಶಕ್ಕೆ ನೀರನ್ನು ಹರಿಸುವುದು ಹೇಗೆ ಸಾಧ್ಯ ಎನ್ನುವುದು ಪರಿಸರವಾದಿಗಳ ಪ್ರಶ್ನೆ. ಇದಕ್ಕೆ ಪಂಪ್ ಮೂಲಕ, ಏತ ವ್ಯವಸ್ಥೆ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಯೋಜನೆಯನ್ನು ರೂಪಿಸಿದವರ ಉತ್ತರ. 420 ಕಿಲೋಮೀಟರ್ ದೂರದಿಂದ, ಭೌಗೋಳಿಕ ಸವಾಲುಗಳನ್ನು ಎದುರಿಸಿ ನೀರು ತರುವ ಯೋಜನೆಗೆ ಏನಿಲ್ಲವೆಂದರೂ ಕನಿಷ್ಟ 1000-1500 ಕೋಟಿ ರೂಪಾಯಿಗಳು ಬೇಕೇ ಬೇಕು.
ನೀರು ಹರಿಸಲು ಹಾಕುವ ಪೈಪ್‌ಗಳ ಬಳಕೆ, ಅದಕ್ಕಾಗಿ ದೊಡ್ಡ ದೊಡ್ಡ ಯಂತ್ರಗಳ ಅವಲಂಬನೆ, ನೀರು ಪೈಪ್ ಮಾರ್ಗ ಮಧ್ಯದಲ್ಲಿನ ಅರಣ್ಯಗಳ ನಾಶ, ರೈತರ ಜಮೀನು ವಶಪಡಿಸಿಕೊಳ್ಳುವಿಕೆ ಹೀಗೆ ಹಲವು ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಇದೆಲ್ಲವನ್ನೂ ಮೀರಿ ಬೆಂಗಳೂರಿಗೆ ನೀರು ತರುತ್ತೇನೆ ಎಂದು ನಿಂತರೆ ಅದರಿಂದ ಲಾಭವಾಗುವುದು ಯೋಜನೆಯ ಗುತ್ತಿಗೆ ಹಿಡಿದ ಉದ್ಯಮಿಗೆ ಮಾತ್ರ.
ಮಲೆನಾಡು ಬರಗಾಲದಿಂದ ತತ್ತರಿಸುತ್ತಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಅಘನಾಶಿನಿ ಹಾಗೂ ಶರಾವತಿ ನದಿಗಳಲ್ಲಿ ನೀರು ತೀರಾ ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಘನಾಶಿನಿ ನದಿ ಎರಡು ಸಾರಿ ಹರಿವು ನಿಲ್ಲಿಸಿದೆ. ಶರಾವತಿ ನದಿಗೆ ನಿರ್ಮಿಸಲಾಗಿರುವ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿಯೂ ನೀರು ಸಾಕಷ್ಟಿಲ್ಲ ಎನ್ನುವ ಮಾತುಗಳು ಆಗೀಗ ಕೇಳಿ ಬಂದಿದೆ. ಸಾವಿರಾರು ಕೋಟಿ ಖರ್ಚು ಮಾಡಿದ ನಂತರವಾದರೂ ಬತ್ತಿದ ನದಿಗಳಿಂದ ಬೆಂಗಳೂರಿಗೆ ನೀರು ತಲುಪುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿ?
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ತರುವುದಾಗಿ ಹೇಳಿದ್ದಾರೆ. ತುಂಗಭದ್ರಾ ನದಿಯ ನೀರನ್ನು ಬೆಂಗಳೂರಿಗೆ ತಂದರೆ, ಸಿಲಿಕಾನ್ ಸಿಟಿಯ ಜಲದಾಹ ತೀರಲಿದೆ ಎಂದು ಹೇಳಿದ್ದಾರೆ. ಎತ್ತಣ ತುಂಗಭದ್ರಾ ನದಿ, ಎತ್ತಣ ಬೆಂಗಳೂರು? ಬಕಾಸುರ ನಗರಿ ಬೆಂಗಳೂರಿನ ಜಲದಾಹ ತೀರಿಸಲು 400-500 ಕಿಲೋಮೀಟರ್ ದೂರದ ತುಂಗಭದ್ರಾ ನದಿಯಿಂದ ನೀರು ತರುವ ಯೋಜನೆ ಸಾಧ್ಯವೇ? ಜನಸಾಮಾನ್ಯನೂ ಕೂಡ ಈ ಕುರಿತು ನಕ್ಕುಬಿಡಬಹುದು. ಆದರೆ ರಾಜ್ಯ ಸರ್ಕಾರದ ಕಿವಿಗೆ ಇಂತಹ ಯೋಜನೆಯನ್ನು ತುಂಬುವ, ತನ್ಮೂಲಕ ಉದ್ಯಮಿಗಳ ಕಿಸೆ ಭರ್ತಿ ಮಾಡುವಂತಹ ಕಾರ್ಯಗಳಿಗೆ ಸಲಹೆ ನೀಡುವ ಯೋಜನಾಧಿಕಾರಿಗಳು ಇಂತಹ ಯೋಜನೆಗಳು ಸಾಧ್ಯ ಎನ್ನುತ್ತಾರೆ.
ಅಘನಾಶಿನಿ-ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತರುವಲ್ಲಿ ಎದುರಾಗುವಂತಹ ಭೌಗೋಳಿಕ ಸಮಸ್ಯೆಗಳೇ, ತುಂಗಭದ್ರಾ ನದಿಯಿಂದ ಬೆಂಗಳೂರಿಗೆ ನೀರು ತರುವಂತಹ ಯೋಜನೆಗೂ ಎದುರಾಗುತ್ತವೆ. ಅಲ್ಲದೇ ಮಾರ್ಗ ಮಧ್ಯದಲ್ಲಿ ಲವತ್ತಾದ ಗದ್ದೆಗಳು, ತೋಟಗಳು ಈ ಯೋಜನೆಗೆ ತಲೆಗೊಡಬೇಕಾಗುತ್ತದೆ. ಈ ಯೋಜನೆ ಕೂಡ ಭೌಗೋಳಿಕ ಕಾರಣಗಳಿಂದ ವಿಲವಾಗುವ ಸಾಧ್ಯತೆಗಳೇ ಹೆಚ್ಚು.
ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಕಾಳಿ. ಜೋಯಿಡಾದಲ್ಲಿ ಹುಟ್ಟಿ ಕಾರವಾರದ ಬಳಿ ಸಮುದ್ರ ಸೇರುವ ಪ್ರಮುಖ ನದಿ. ಐದಕ್ಕೂ ಅಧಿಕ ಅಣೆಕಟ್ಟುಗಳನ್ನು ಹೊಂದಿರುವ, ಕೈಗಾ ಅಣುಸ್ಥಾವರಕ್ಕೆ ಪ್ರತಿ ಕ್ಷಣ ನೀರು ಉಣ್ಣಿಸುತ್ತಿರುವ ನದಿ. ಈ ನದಿಯ ನೀರನ್ನು ಅಮೃತಧಾರಾ ಎಂಬ ಯೋಜನೆಯ ಹೆಸರಿನಲ್ಲಿ ಘಟಪ್ರಭಾ-ಮಲ್ರಭಾ ನದಿಗೆ ಜೋಡಿಸುವುದು ಸರ್ಕಾರದ ಇನ್ನೊಂದು ಯೋಜನೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 5400 ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ಇದು. ಕಾಳಿ ನದಿಯಲ್ಲಿ ಹರಿಯುವ 10-20 ಟಿಎಂಸಿ ನೀರನ್ನು ಬಳಸಿಕೊಳ್ಳುವ ಚಿಂತನೆ ಈ ಯೋಜನೆಯದ್ದುಘಿ. ಅಂದಹಾಗೆ ಈ ಯೋಜನೆಗೆ ವರದಿ ಸಲ್ಲಿಸುತ್ತಿರುವುದು ಉದ್ಯಮಿ ಸಂಗಮೇಶ ನಿರಾಣಿಯವರು.
ಬಯಲು ಸೀಮೆಯ ಈ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಲು 10-20 ಟಿಎಂಸಿ ನೀರು ಬಳಸುವುದರಿಂದ ಕಾಳಿ ನದಿ ಬರಿದಾಗುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದಲ್ಲಿ ಪ್ರತಿ ವರ್ಷ ಬೀಳುವ ಮಳೆಯಿಂದ ವಾರ್ಷಿಕ 3,600 ಟಿಎಂಸಿ ನೀರು ದೊರೆಯುತ್ತದೆ. ಅದರಲ್ಲಿ 1,600 ಟಿಎಂಸಿ ನೀರನ್ನು ಮಾತ್ರ ಕೃಷಿ ಕುಡಿವ ನೀರು, ಕೆಗಾರಿಕೆ ನೀರಾವರಿ ಯೋಜನೆ ಗಳಿಗೆ ಬಳಸಿ 2,000 ಟಿಎಂಸಿ ನೀರು ಸಮುದ್ರ ಸೇರುತ್ತದೆ ಎನ್ನುವುದು ನಿರಾಣಿಯವರು ನೀಡುವ ಉತ್ತರ. ಆದರೆ, ನದಿ ತಿರುವಿನಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ಅವರು ಎಂದಿಗೂ ಮಾತನಾಡುವುದಿಲ್ಲಘಿ.
ಕಾಳಿ ನದಿಯಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ನದಿಯನ್ನು ತಿರುಗಿಸುವುದರಿಂದ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಾಗುತ್ತದೆ. ಕಾಳಿ ನದಿಯ ನೀರನ್ನೇ ಬಳಸುವ ದಾಂಡೇಲಿಯ ಕಾಗದ ಕಾರ್ಖಾನೆಗೆ ಸಮಸ್ಯೆ ಆಗಬಹುದು. ಹಳಿಯಾಳ, ದಾಂಡೇಲಿ ನಗರಗಳ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದು. ಅಷ್ಟೇ ಏಕೆ, ಕೈಗಾ ಅಣುಸ್ಥಾವರಕ್ಕೆ ನೀರಿನ ಕೊರತೆಯೂ ಆಗಬಹುದು. ಕೈಗಾ ಅಣುಸ್ಥಾವರಕ್ಕೆ ನೀರಿನ ಸರಬರಾಜು ನಿಂತರೆ ಆಗುವ ಪರಿಣಾಮವನ್ನು ಸಂಗಮೇಶ ನಿರಾಣಿಯವರು ಊಹಿಸಿದ್ದಾರೆಯೇ ಎನ್ನುವುದು ಪರಿಸರವಾದಿಗಳ ಪ್ರಶ್ನೆ.
ಭೌಗೋಳಿಕವಾಗಿ ನೋಡಿದಾಗ ಕಾಳಿ ನದಿಗಿಂತ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಮೇಲ್ಮಟ್ಟದಲ್ಲಿದೆ. ಕಾಳಿ ನದಿಯಿಂದ ಏತ ನೀರಾವರಿಯೋ ಅಥವಾ ಇನ್ಯಾವುದೇ ತಾಂತ್ರಿಕ ವಿಧಾನಗಳ ಮೂಲಕ ನೀರನ್ನು ಎತ್ತುವುದು ಅನಿವಾರ್ಯ. ನಿರಾಣಿಯವರು ಹೇಳಿರುವುದನ್ನೇ ಗಣನೆಗೆ ತೆಗೆದುಕೊಂಡರೆ, ಹೀಗೆ ನೀರೆತ್ತುವ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಸಂರಕ್ಷಿತ ಅರಣ್ಯ ವಲಯದಲ್ಲಿ ಇಂತಹದ್ದೊಂದು ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಅದರಿಂದ ಉಂಟಾಗುವ ಘೋರ ಪರಿಣಾಮವನ್ನು ಅವರು ಆಲೋಚಿಸಿದ್ದಾರೆಯೇ? ಹೀಗಿದ್ದೂ ಇಂತಹ ಯೋಜನೆಗಳನ್ನು ರೂಪಿಸುತ್ತಿರುವುದು ಏಕೆ ಎನ್ನುವುದು ಪರಿಸರವಾದಿಗಳ ಪ್ರಶ್ನೆಘಿ.
ಯೋಜನೆ ರೂಪಿಸುವವರ ತಲೆಯಲ್ಲಿ ಅದ್ಯಾವ ಭೂತ ಹೊಕ್ಕಿದೆಯೋ? ಅಥವಾ ಅವರ ತಲೆಯಲ್ಲಿ ಮೆದುಳು ಇದೆಯೋ ಅಥವಾ ಬೇರೆ ಇನ್ನೇನೋ ಎನ್ನುವ ಅನುಮಾನ ಮೂಡದೇ ಇರುತ್ತದೆಯೇ? ಗುರುತ್ವಾಕರ್ಷಣ ಶಕ್ತಿಗೆ ಸೆಡ್ಡು ಹೊಡೆಯುವಂತಹ ಚಿಂತನೆಗಳು ಇಂತಹ ಅರೆಬೆಂದ ಯೋಜನಾಧಿಕಾರಿಗಳಿಂದ ಮಾತ್ರ ಸಾಧ್ಯಘಿ.
ಉದ್ಯಮಿಗಳಿಗೆ ಲಾಭ ಮಾಡಿಕೊಡುವಂತಹ ಇಂತಹ ಯೋಜನೆಗಳ ಅಗತ್ಯ ರಾಜ್ಯಕ್ಕಿದೆಯೇ? ಕುಡಿಯುವ ನೀರಿನ ಹೆಸರಿನಲ್ಲಿ ಉದ್ಯಮಿಗಳ ಕಿಸೆಯನ್ನೇಕೆ ಭರ್ತಿ ಮಾಡಬೇಕು? ಅದರ ಬದಲು ಜಲ ಮೂಲಗಳಾದ ಕೆರೆ, ಕುಂಟೆಗಳನ್ನು ಹೂಳೆತ್ತಬಹುದಲ್ಲಘಿ? ನೀರಿಂಗಿಸುವ ಯೋಜನೆಗಳನ್ನು ಕೈಗೊಳ್ಳಬಹುದಲ್ಲ. ಕೆರೆ ಒತ್ತುವರಿಯನ್ನು ತೆರವುಗೊಳಿಸಬಹುದಲ್ಲವಾ? ಇಂತಹ ಪರಿಣಾಮಕಾರಿ ಯೋಜನೆಗಳೇಕೆ ಸರ್ಕಾರಕ್ಕೆ ಕಾಣಿಸುತ್ತಿಲ್ಲ? ಇಂತಹ ಯೋಜನೆಗಳ ಮೂಲಕ ಸರ್ಕಾರ ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಆಗುವುದು ಯಾವಾಗ? ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಕಣ್ಣುಕಟ್ಟುವ ಮೂಲಕ ಹಣವನ್ನು ಉದ್ಯಮಿಗಳ ಕಿಸೆಗೆ ಸುರಿಯುವುದನ್ನು ಸರ್ಕಾರ ನಿಲ್ಲಿಸಲಿ ಎನ್ನುವುದು ಜನಸಾಮಾನ್ಯರ ಆಶಯ.