|
ಕಾಂತಾಜಿ ದೇವಾಲಯದ ಗೋಡೆಯ ಮೇಲಣ ಕೆತ್ತನೆಗಳು |
`ನನಗೆ ಬಹಳ ದಿನಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು ಈ ಬೆಂಗಾಲಿ ನಾಡು.. ನಮ್ಮ ಪ್ರೀತಿಯ ಸುಭಾಷ ಚಂದ್ರ ಭೋಸರು ಓಡಾಡಿದ ಸ್ಥಳ. ಇಲ್ಲೇ ಕೂಗಳತೆ ದೂರದಲ್ಲಿ ಅಲ್ಲವಾ ಸುಭಾಷರು ಹುಟ್ಟಿದ್ದು.. ಭಾರತದಲ್ಲಿ ಏನೇ ಬದಲಾವಣೆ ಆಗುತ್ತದೆ ಎಂದಾದರೂ ಮೊದಲು ಬೆಂಗಾಲಿ ನಾಡಿನಲ್ಲೇ ಆಗುತ್ತದೆ ಎನ್ನುತ್ತಾರೆ. ಹೌದಲ್ಲವಾ..? ಬುದ್ಧಿವಂತರ ನಾಡು ಎಂದೂ ಬಂಗಾಲವನ್ನು ಕರೆಯುತ್ತಾರೆ ಅಲ್ಲವಾ..' ಎಂದ ವಿನಯಚಂದ್ರ.
`ಹೌದು ಹೌದು.. ಎಲ್ಲ ಬದಲಾವಣೆಗಳೂ ಇಲ್ಲಿಂದಲೇ ಆಗಿದ್ದು..' ಎಂದವಳೇ `ಮೊಟ್ಟಮೊದಲು ಬ್ರಿಟೀಷರ ದಾಸ್ಯಕ್ಕೆ ಒಳಗಾಗಿದ್ದು ಇದೇ ಬೆಂಗಾಲಿ ಸ್ಥಳವೇ ಅಲ್ಲವಾ..' ಎಂದು ಹೇಳಿ ನಾಲಿಗೆ ಕಚ್ಚಿಕೊಂಡಳು.
ವಿನಯಚಂದ್ರನಿಗೆ ಅಚ್ಚರಿಯಾಯಿತು. ಬೆಂಗಾಲಿ ನಾಡಿನ ಈ ಹುಡುಗಿಗೆ ತನ್ನ ದೇಶದ ಕುರಿತು ಯಾಕೋ ಒಳ್ಳೆ ಭಾವನೆ ಇದ್ದಂತಿಲ್ಲ ಎಂದುಕೊಂಡನಾದರೂ ಕೇಳಲು ಹಿಂಜರಿದ. ಆಕೆಯ ಬಳಿ `ನನಗೆ ಇಲ್ಲಿ ಗಂಗಾನದಿ ಸಮುದ್ರವನ್ನು ಸೇರುವ ಸ್ಥಳವನ್ನು ನೋಡಬೇಕೆಂಬ ಆಸೆಯಿದೆ. ನಮ್ಮ ಪ್ರವಾಸದ ಪಟ್ಟಿಯಲ್ಲಿ ಅದೂ ಉಂಟಾ..?' ಎಂದ.
`ಇಲ್ಲ.. ಇಲ್ಲ.. ನೋಡೋಣ ನಮ್ಮ ಸೀನಿಯರ್ ಗೆ ತಿಳಿಸುತ್ತೇನೆ.. ಅವರೇನಾದರೂ ಕ್ರಮ ಕೈಗೊಳ್ಳಬಹುದು.. ಹೌದು ಅಲ್ಲೆಂತದ್ದು ನೋಡೋದು ನಿಮಗೆ..?'
`ಗಂಗಾನದಿ ಸಮುದ್ರ ಸೇರುವ ಸ್ಥಳದಲ್ಲಿರುವ ಸುಂದರಬನ್ಸ್ ನೋಡಬೇಕು. ಉದ್ದುದ್ದದ ಬೀಳಲುಗಳನ್ನು ಚಾಚಿ ನಿಂತ ಚಿತ್ರ ವಿಚಿತ್ರ ಕಾಂಡ್ಲಾ ಕಾಡನ್ನು ನೋಡಬೇಕು. ಬೆಂಗಾಲಿಯ ಭವ್ಯ ನಿಲುಕಿನ ಬಿಳಿಹುಲಿಗಳನ್ನು ನೋಡಬೇಕು. ಅಳಿವಿನ ಅಂಚಿನಲ್ಲಿದೆಯಂತಲ್ಲಾ.. ಬಹಳ ಕುತೂಹಲವಿದೆ. ನಮ್ಮೂರಿನಲ್ಲೆಲ್ಲ ಹಳದಿ ಪಟ್ಟೆ ಪಟ್ಟೆ ಹುಲಿ ನೋಡಿದ್ದೆ.. ಈ ಬಿಳಿ ಹುಲಿಗಳು ಹೇಳಿರ್ತವೆ ಅನ್ನೊದು ನೋಡಬೇಕೆಂಬ ಆಸೆಯಿದೆ.. ಜೊತೆಗೆ ಗಂಗಾನದಿ ಸಮುದ್ರ ಸೇರಿದ ನಂತರವೂ ಅನೇಕ ಕಿಲೋಮೀಟರ್ ಗಳವರೆಗೆ ಸಮುದ್ರದ ನೀರಿನಲ್ಲಿದ್ದರೂ ಹರಿಯುತ್ತ ಹೋಗುತ್ತದಂತಲ್ಲ ಅಲ್ಲೊಮ್ಮೆ ದೋಣಿ ಯಾತ್ರೆ ಕೈಗೊಳ್ಳಬೇಕು. ಸಮುದ್ರದೊಳಕ್ಕೆ ಸೇರಿದ್ದರೂ ಮೂರ್ನಾಲ್ಕು ಕಿ.ಮಿ ದೂರದ ವರೆಗೆ ಗಂಗೆಯ ನೀರು ಉಪ್ಪಾಗದೇ ಸಿಹಿ ಸಿಹಿಯಾಗಿಯೇ ಉಳಿಯುತ್ತದಂತಲ್ಲ.. ಅದನ್ನು ನೋಡಬೇಕು. ಆ ಸಿಹಿ ನೀರಿನಲ್ಲಿಯೇ ಇರುವ ಅತ್ಯಪರೂಪದ ಡಾಲ್ಫಿನ್ನುಗಳನ್ನು ನೋಡಬೇಕು. ಗಂಗೆಯ ಸೆಳವಿನಲ್ಲಿ ದೋಣಿ ಓಲಾಡುತ್ತಿದ್ದಾಗ ನಾನು ಹೋ ಎಂದು ಕಿರುಚಬೇಕು..' ಎಂದ ವಿನಯಚಂದ್ರ.
`ಎಂತಾ ವಿಚಿತ್ರ ಆಸೆ ನಿಮ್ಮದು.. ಮಜವಾಗಿದೆ ಕೇಳೋದಿಕ್ಕೆ.. ನನಗೆ ನಿಮ್ಮ ಕಡೆ ಕುತೂಹಲ ಮೂಡುತ್ತಿದೆ.. ಕಬ್ಬಡ್ಡಿ ಆಟಗಾರರು ಅಂತೀರಾ.. ನಾನ್ ವೆಜ್ ಆಗೋದಿಲ್ಲ.. ಕೇಳಿದರೆ ಬ್ರಾಹ್ಮಣರು ಅಂತೀರಾ.. ಬ್ರಾಹ್ಮಣರಿಗೂ ಕಬ್ಬಡ್ಡಿಗೂ ಎಂತ ಸಂಬಂಧ..? ಎತ್ತಲ ಕಬ್ಬಡ್ಡಿ ಎತ್ತಲ ನಿಮ್ಮ ಆಹಾರಪದ್ಧತಿ.. ವಿಚಿತ್ರ ಎನ್ನಿಸುತ್ತಿದೆ. ಅದ್ಹೇಗೆ ನಿಮ್ಮ ಶಕ್ತಿಯನ್ನು ಕಾಪಾಡಿಕೊಳ್ಳುತ್ತಿದ್ದೀರೋ.. ಈ ಬಡ ಬಾಂಗ್ಲಾದೇಶದವರೆಲ್ಲ ಭಾರತಕ್ಕೆ ಕದ್ದು ಹೋಗಿ ಅಲ್ಲಿ ಬದುಕಿ ಜೀವನ ಕಟ್ಟಿಕೊಂಡರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಆದರೆ ಬಾಂಗ್ಲಾದೇಶವನ್ನು ನೋಡೋದು ನಿನ್ನ ವಿಚಿತ್ರ ಆಸೆ.. ಗಂಗಾನದಿ ಕೊಳಕೆದ್ದು ಹೋಗಿದೆ ಎನ್ನುವವರ ನಡುವೆ ಗಂಗಾನದಿ ಸಮುದ್ರ ಸೇರುವುದನ್ನು ನೋಡಬೇಕು ಅಂತೀಯಾ.. ನಾಡಿಗೆ ದಾಳಿ ಮಾಡಿ ಹುಲಿ ಅವರಿವರನ್ನು ಕಚ್ಚಿಕೊಂಡು ಹೋಗುತ್ತಿದೆ ಅಂತ ಹುಲಿಯ ಬಗ್ಗೆ ಬೈದುಕೊಂಡು ಓಡಾಡುವವರ ನಡುವಿನಲ್ಲೂ ಹುಲಿಯನ್ನು ನೋಡಬೇಕು ಅಂತೀಯಾ.. ನನಗೆ ಬಹಳ ಅಚ್ಚರಿಯೆನ್ನಿಸುತ್ತಿದೆ ನಿನ್ನ ವ್ಯಕ್ತಿತ್ವ..' ಎಂದಳು ಮಧುಮಿತಾ.. ವಿನಯಚಂದ್ರ ಹೆಮ್ಮೆಯಿಂದ ಬೀಗಿದ.
`ನಿಮ್ಮೂರು ಎಲ್ಲಿ..? ನಿಮ್ಮ ಕುಟುಂಬದ ಕುರಿತು ನನಗೆ ಹೇಳಲೇ ಇಲ್ವಲ್ಲಾ.. ನಾನು ಕೇಳಿದರೆ ತಪ್ಪೇನೂ ಇಲ್ಲ ಅಲ್ಲವಾ..?' ವಿನಯಚಂದ್ರ ಕೇಳಿದ್ದ.
`ಕಿಶೋರ್ ಗಂಜ್ ಅಂತ ನಮ್ಮ ಊರು. ನನ್ನ ಕುಟುಂಬ ಅಲ್ಲಿ ವಾಸ ಮಾಡುತ್ತಿದೆ. ಆದರೆ ನಾನು ಮಾತ್ರ ಹೊಟ್ಟೆಪಾಡಿಗಾಗಿ ಢಾಕಾಕ್ಕೆ ಬಂದು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಬುರಿಗಂಗಾ ನದಿ ತೀರದ ಬಳಿಯ ಅಪಾರ್ಟ್ ಮೆಂಟಿನಲ್ಲಿ ನನ್ನ ವಾಸ. ಮನೆಯಲ್ಲಿ ತಂದೆ-ತಾಯಿ-ಇಬ್ಬರು ತಂಗಿಯರಿದ್ದಾರೆ. ತಂಗಿಯರು ಓದುತ್ತಿದ್ದಾರೆ. ಕಿಶೋರ್ ಗಂಜ್ ಕಾಲೇಜಿನಲ್ಲಿ. ತಂದೆಯವರು ಬೆಂಗಾಲಿ. ಹಿಂದುತ್ವವಾದಿ. ಆದರೆ ಬಾಂಗ್ಲಾದೇಶದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಸುಮ್ಮನಿರಿಸುವುದು ಕಷ್ಟವಾಗಿದೆ. ಅಪ್ಪ ಯಾವಾಗ ತನ್ನ ಧರ್ಮದ ಕುರಿತಂತೆ ಗಲಾಟೆ ಮಾಡಿಕೊಳ್ಳುತ್ತಾನೋ ಎನ್ನುವ ಭಯ ನನ್ನನ್ನು ಕಾಡುತ್ತಿದೆ. ಹಿಂದೂ ಧರ್ಮದ ಕುರಿತು ಮಾತು ಬಂದರೆ ಸಾಕು ಅಪ್ಪ ಗಂಟೆಗಟ್ಟಲೆ ಮಾತನಾಡುತ್ತ ನಿಂತು ಬಿಡುತ್ತಾರೆ. ಬಹಳಷ್ಟು ಸಾರಿ ಅಪ್ಪನಿಗೆ ಹೇಳಿದ್ದೆ ನಮ್ಮ ಈಗಿನ ಪರಿಸ್ಥಿತಿ ನೋಡಿಕೊಂಡು ಹಿಂದುತ್ವದ ಬಗ್ಗೆ ಮಾತನಾಡು ಅಂತ. ಆದರೆ ನಾನು ಆತನಿಗೆ ಹೇಳಿದ ನಂತರ ಆತ ಹಿಂದುತ್ವದ ಕುರಿತು ಮಾತನಾಡುವುದು ಜಾಸ್ತಿಯಾಗಿದೆ. ಇಲ್ಲಿ ರಾಜಕೀಯ ಕಾರಣಗಳಿಗಾಗಿ ಹಿಂದುಗಳಲ್ಲಿಯೇ ಪ್ರಮುಖರಾದವರನ್ನೆಲ್ಲ ಹುಡಕಿ ಹುಡುಕಿ ಕೊಲ್ಲಲಾಗುತ್ತದೆ. ನನ್ನ ಅಪ್ಪನ ಮೇಲೂ ದೃಷ್ಟಿ ಬಿದ್ದಿರಬೇಕು. ಭಯದ ನೆರಳಿನಲ್ಲಿ ಬದುಕುತ್ತಿದೆ ನಮ್ಮ ಕುಟುಂಬ.. ಅಪ್ಪ ಮಾತ್ರ ಎಷ್ಟು ತಿಳಿಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಸುಮ್ಮನಾದಳು ಮಧುಮಿತಾ..
ನಿಟ್ಟುಸಿರುಬಿಟ್ಟ ವಿನಯಚಂದ್ರ. `ಭಾರತ ಸ್ವಾತಂತ್ರ್ಯ ಪಡೆದಾಗ ಭಾರತಕ್ಕೆ ವಲಸೆ ಬಂದಿಲ್ಲ ನಿನ್ನ ತಂದೆ.. ಯಾಕೆ..?'
`ನನಗೆ ಗೊತ್ತಿಲ್ಲ... ಒಂದೆರಡು ಸಾರಿ ಕೇಳಿದ್ದೆ. ಆಗೆಲ್ಲಾ ನಾನು ಹುಟ್ಟಿದ ಸ್ಥಳವನ್ನು ಹೇಗೆ ತೊರೆದು ಹೋಗುವುದು..? ಎಂದು ಪ್ರಶ್ನೆ ಮಾಡಿದ್ದರು. ಈಗಲೂ ಅನೇಕ ಸಾರಿ ಹೇಳಿದ್ದೇನೆ. ಯಾರಾದರೂ ನಿನ್ನ ಪರಿಚಯದವರು ಭಾರತದಲ್ಲಿದ್ದರೆ ಹೇಳು ಅಲ್ಲಿಗೆ ಹೋಗಿ ಬದುಕಿ ಬಿಡೋಣ ಅಂತ.. ಆದರೆ ಕೇಳುತ್ತಿಲ್ಲ.. ಈ ಅಭದ್ರ ಬದುಕು ನನಗೆ ಸಾಕಾಗಿ ಹೋಗಿದೆ. ಭಯದ ನೆರಳಿನಲ್ಲಿ, ಯಾವಾಗ ಸಾಯುತ್ತೇವೋ ಎನ್ನುವ ಹೆದರಿಕೆಯ ನಡುವೆ ಬದುಕುವುದು ಬೇಡ. ನೆಮ್ಮದಿಯನ್ನರಸಿ ಭಾರತಕ್ಕೆ ಹೋಗಿ ಬಿಡೋಣ.. ಯಾವುದಾದರೊಂದು ಸಹಾಯ ಹಸ್ತ ನಮಗಾಗಿ ಕಾಯುತ್ತಿರಬಹುದು. ಕಾಪಾಡಬಹುದು ಎಂದುಕೊಂಡಿದ್ದೇನೆ. ಕಾಯುತ್ತಿದ್ದೇನೆ. ಮನೆಯಲ್ಲೂ ಹೇಳಿದ್ದೇನೆ. ಈಗೀಗ ಅಪ್ಪನೂ ಏನಾದರೂ ಮಾಡಿಕೊ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಆದರೂ ಅವರನ್ನು ತೀರಾ ಒತ್ತಾಯ ಮಾಡುವುದು ಕಷ್ಟ ಅಲ್ಲವಾ.. ಒತ್ತಾಯ ಮಾಡಿದರೆ ಇನ್ನೇನಾದರೂ ಮಾಡಿಕೊಂಡು ಬಿಟ್ಟಾರು ಎನ್ನುವ ಭಯ ಬಿಡದೇ ಕಾಡುತ್ತಿದೆ..'
ಕ್ಷಣಕಾಲ ಸುಮ್ಮನಿದ್ದ ವಿನಯಚಂದ್ರ. ಏನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ. ನಂತರ ಆತ ಮಾತನಾಡಿದ `ನಾನೂ ಅದನ್ನೇ ಹೇಳಬೇಕೆಂದುಕೊಂಡಿದ್ದೆ. ಇಷ್ಟಕ್ಕೂ ಬಾಂಗ್ಲಾದೇಶದಲ್ಲಿ ಯಾಕಾಗಿ ಅರಾಜಕತೆ..? ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಕಾರಣ..? ಅಲ್ಪಸ್ವಲ್ಪ ಗೊತ್ತಿದೆ. ಆದರೆ ಸ್ಪಷ್ಟವಾಗಿಲ್ಲ..'
`ನಾನು ಹೇಳಿದರೆ ತಪ್ಪಾಗುತ್ತದೆ. ಆದರೆ ಹೇಳದಿದ್ದರೆ ಮನಸ್ಸಿಗೆ ಏನೋ ಒಂಥರಾ.. ಇಲ್ಲಿ ಮಹಿಳೆಯರದ್ದೇ ಆಡಳಿತ. ಶೇಖ್ ಹಸೀನಾ ಇಲ್ಲಿಯ ಈಗಿನ ಪ್ರಧಾನಮಂತ್ರಿ. ವಿರೋಧಪಕ್ಷದ ಮುಖಂಡತ್ವವೂ ಮಹಿಳೆಯದ್ದೇ. ಅದರ ಮುಖ್ಯಸ್ಥೆ ಬೇಗಂ ಖಾಲಿದಾ ಜಿಯಾ. ಅವಾಮಿ ಲೀಗ್ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಇಲ್ಲಿನ ಪ್ರಮುಖ ಪಕ್ಷಗಳು. ಹಿಂದುಗಳು ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲರು. ಭಾರತದಲ್ಲಿ ಹೇಗೆ ಅಲ್ಪಸಂಖ್ಯಾತರಿದ್ದಾರೋ ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಈಗ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ನಮಗೆ ಚುನಾವಣೆ ಬಂತೆಂದರೆ ಮಾತ್ರ ಇತ್ತ ದರೆ ಅತ್ತ ಹುಲಿ ಎನ್ನುವಂತಹ ಪರಿಸ್ಥಿತಿ. ಈ ಪಕ್ಷ ಬೆಂಬಲಿಸಿದರೆ ಆ ಪಕ್ಷದವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ.. ಅವರನ್ನು ಬೆಂಬಲಿಸಿದರೆ ಇವರು ನಮ್ಮಮೇಲೆ ದೌರ್ಜನ್ಯ ಎಸಗುತ್ತಾರೆ. ಅನೇಕ ಕಡೆಗಳಲ್ಲಿ ನಮ್ಮ ಜಮೀನುಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಹಿಂದು ಮುಖಂಡರುಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತದೆ. ನಾವು ಮಹಿಳೆಯರು ಅವರ ದೃಷ್ಟಿಗೆ ಮೊದಲು ಬಿದ್ದು ಬದುಕು ದಾರುಣವಾಗುತ್ತದೆ.. ಸಾಕಾಗಿಬಿಟ್ಟಿದೆ ನಮಗೆ. .' ಎಂದು ಅಲವತ್ತುಕೊಂಡಳು ಮಧುಮಿತಾ.
ವಿನಯಚಂದ್ರನಿಗೆ ಮತ್ತೆ ಏನು ಮಾತಾಡಬೇಕು ತಿಳಿಯಲಿಲ್ಲ.. ಸುಮ್ಮನೆ ಕುಳಿತಿದ್ದ.
ಮಧುಮಿತಾ ಮುಂದುವರಿದಳು `ಆದರೆ ಒಂದು ವಿಚಿತ್ರ ಗಮನಕ್ಕಿದೆಯೋ ಇಲ್ಲವೋ ಗೊತ್ತಿಲ್ಲ.. ಇದು ನಿಮ್ಮ ದೇಶದ ಕುರಿತು ಹೇಳುವಂತದ್ದು. ಕಾರಣಗಳು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇಲ್ಲಿ ಈ ಪ್ರಮಾಣದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಬಹುಸಂಖ್ಯಾತ ಹಿಂದೂಗಳ ನಾಡು ಭಾರತ ಮಾತ್ರ ಈ ಕುರಿತು ಮಾತನ್ನೇ ಆಡುತ್ತಿಲ್ಲ. ಅಲ್ಲೆಲ್ಲೋ ಯೂರೋಪಿನಲ್ಲಿ ಕಾರ್ಟೂನುಗಳನ್ನು ಬಿಡಿಸದರೆ ಭಾರತದಲ್ಲಿ ಗಲಾಟೆಯಾಗುತ್ತದೆ. ಚರ್ಚುಗಳ ಮೇಲೆ ದಾಳಿಗಳಾದರೆ ಭಾರತ ಅದಕ್ಕೆ ಉಗ್ರ ಪ್ರತಿಕ್ರಿಯೆ ನೀಡುತ್ತದೆ. ಅಮೆರಿಕಾದ ಅಧ್ಯಕ್ಷ ಭಾರತದಲ್ಲಿನ ಧರ್ಮ ಸಹಿಷ್ಣುತೆ ಸರಿಯಾಗಿರಬೇಕೆಂದು ಮಾತಾಡಿ ಹೋಗುತ್ತಾರೆ. ಆದರೆ ನಾವ್ಯಾಕೆ, ನಮ್ಮ ನೋವ್ಯಾಕೆ ನಿಮ್ಮ ದೇಶದ ಕುರಿತು ಮಾತನಾಡುವವರಿಗೆ, ನಿಮ್ಮ ದೇಶದವರಿಗೆ ಕಾಣುತ್ತಿಲ್ಲ..? ನಾವು ಬಾಂಗ್ಲಾದೇಶವನ್ನು ಬಿಟ್ಟು ಬರುತ್ತೇವೆ. ನಮಗೆ ಭಾರತದಲ್ಲಿ ಅವಕಾಶಕೊಡಿ ಎಂದರೆ ಕೊಡುತ್ತದೆಯೇ..? ಯಾಕೀಥರ ವಿನು..? ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮನ್ಯಾಕೆ ಬಲಿಕೊಡುತ್ತಾರೆ.? ಮತಕ್ಕಾಗಿ ಯಾಕೆ ಓಲೈಕೆ ನಡೆಯುತ್ತಿದೆ..? ಬಾಂಗ್ಲಾದೇಶದವರು ಅಸ್ಸಾಮಿಗೆ ಹೋದರೆ ನಿಮ್ಮ ದೇಶದವರನ್ನೇ ಕೊಲ್ಲುತ್ತಿದ್ದಾರೆ. ಅದಕ್ಕೂ ನೀವು ಉತ್ತರ ಹೇಳುತ್ತಿಲ್ಲವಲ್ಲ.. ಭಾರತದ ಕುರಿತು ಎಂತ ಅಭಿಮಾನವಿದೆ ನನಗೆ ಗೊತ್ತಾ..? ಆದರೆ ಇತ್ತಿಚಿನ ನಡೆಗಳು ನನ್ನೊಳಗಿನ ಅಭಿಮಾನದ ಗೋಡೆಗಳನ್ನು ಕೆಡವುತ್ತಿದೆ.. ಎಂತಾ ನಾಡು ಭಾರತ.. ಆದರೆ ನಿಮ್ಮವರೇಕೆ ನಿಮ್ಮವರ ಕಡೆಗೆ ಮಿಡಿಯುತ್ತಿಲ್ಲ..?'
ಅವಳ ಮಾತಿಗೆ ವಿನಯಚಂದ್ರನಲ್ಲಿ ಉತ್ತರವಿರಲಿಲ್ಲ.. ಸುಮ್ಮನೆ ಉಳಿದಿದ್ದ.. ಏನು ಮಾತಾನಾಡಬೇಕು ಎನ್ನುವುದು ಅರ್ಥವಾಗಲಿಲ್ಲ..? ಅವಳಿಗೆ ಏನು ಹೇಳಲಿ.? ಎಂಬ ದ್ವಂದ್ವದಲ್ಲಿ ಉಳಿದಿದ್ದ. ಭಾರತವೆಂದರೆ ಭವ್ಯ ರಾಷ್ಟ್ರ. ಸೂಪರ್ ಪವರ್ ಆಗುತ್ತಿದೆ.. ಹಾಗೆ ಹೀಗೆ ಎನ್ನುವ ಮಾತುಗಳೆಲ್ಲ ಕೇಳಿಬರುತ್ತವೆ. ಆದರೆ ಭಾರತದಲ್ಲಿ ನಡೆಯುತ್ತಿರುವ ವೈರುಧ್ಯಗಳ ಕುರಿತು ಏನು ಹೇಳಲಿ..? ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರೇಮಿಗಳಿರುವ ದೇಶ ಭಾರತ ಎನ್ನಲಾಗುತ್ತಿದೆ. ಆದರೆ ಒಳಗಿಂದೊಳಗೆ ಭಾರತದ ಪ್ರೇಮಸೌಧ ಕುಸಿದು ಬೀಳುತ್ತಿದೆ. ತನ್ನೊಳಗೆ ನೂರಾರು ಸಣ್ಣ ಸಣ್ಣ ಗಾಯಗಳಾಗುತ್ತಿವೆ. ತನಗೆ ಬೇಕು ಎಂದಾದರೆ ಭಾರತದಲ್ಲಿ ಹೊಸ ಹೊಸ ರಾಜ್ಯಗಳೇ ದಿನ ಬೆಳಗಾಗುವುದರೊಳಗೆ ಹುಟ್ಟಿ ಬಿಡುತ್ತವೆ. ಅಸ್ಸಾಮಿನಲ್ಲಿ ದಿನವಹಿ ಮಾರಣಹೋಮ ನಡೆಯುತ್ತಿದ್ದರೂ ಅದರ ಬಗ್ಗೆ ಮಾತನಾಡುವುದಿಲ್ಲ. ಕಾಶ್ಮೀರ ಮತ್ತೆ ಮತ್ತೆ ಕಾಡುತ್ತಿದೆ. ಇಷ್ಟಕ್ಕೆ ನಿಲ್ಲದೇ ಪಕ್ಕದ ಡ್ರಾಗನ್ ಚೀನಾ ಪದೆ ಪದೆ ಭಾರತದ ಗಡಿಯೊಳಗೆ ಕಾಲಿಟ್ಟು ರೆಡಿ ಆಟವನ್ನು ಆಡುತ್ತಿದ್ದರೂ ಅದರ ವಿರುದ್ಧ ಮಾತಾಡುವ ತಾಕತ್ತಿಲ್ಲದಂತೆ ವರ್ತನೆ ಮಾಡುತ್ತಿದೆ.. ಆದರೂ ಬಾಯಿ ಮಾತಿನಲ್ಲಿ ದೇಶ ಬದಲಾಗುತ್ತಿದೆ.. ಅಭಿವೃದ್ಧಿಯ ಪಥದಲ್ಲಿದೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.. ಎಲ್ಲವೂ ಅಂದುಕೊಂಡಂತಿಲ್ಲ ಎಂದು ಅವಳಿಗೆ ಹೇಳೋಣ ಅನ್ನಿಸಿತು ವಿನಯಚಂದ್ರನಿಗೆ. ಆದರೆ ಹೇಳಲಿಕ್ಕೆ ಆಗಲಿಲ್ಲ.
`ನನ್ನನ್ನೊಮ್ಮೆ ನಿನ್ನ ಮನೆಗೆ ಕರೆದೊಯ್ಯುತ್ತೀಯಾ..? ಯಾಕೋ ನಿಮ್ಮವರನ್ನು ನೋಡಬೇಕು ಎನ್ನಿಸುತ್ತಿದೆ..' ಮಾತು ಹೊರಳಿಸುತ್ತ ಕೇಳಿದ ವಿನಯಚಂದ್ರ.
`ಖಂಡಿತ ವಿನೂ.. ನೋಡೋಣ ಯಾವಾಗಲಾದರೂ ಕರೆದೊಯ್ಯುತ್ತೇನೆ. ನಿಮ್ಮ ವಿಶ್ವಕಪ್ಪಿದೆಯಲ್ಲ.. ಅಷ್ಟರೊಳಗೆ ಸಾಧ್ಯವಾದರೆ ಕರೆದೊಯ್ಯುತ್ತೇನೆ.. ಇಲ್ಲವಾದರೆ ಆ ನಂತರ ನೋಡೋಣ..' ಎಂದಳು.
ನಂತರ ಮಾತು ಹಲವಾರು ವಿಷಯಗಳ ಕಡೆಗೆ ಸರಿಯಿತು. ಮಾತಿನ ಭರದಲ್ಲಿ ವಿನಯಚಂದ್ರ ತಾನು ಹಾಗೂ ತನ್ನ ಕಬ್ಬಡ್ಡಿ ಪ್ರೇಮದ ಬಗ್ಗೆ ಹೇಳಿದ. ಜಗತ್ತಿನಲ್ಲಿ ಅತ್ಯುತ್ತಮ ಕ್ರೀಡೆಯೆಂದರೆ ಕಬ್ಬಡ್ಡಿ ಎನ್ನುವಂತೆಯೂ ಮಾತನಾಡಿದ. ಕ್ರಿಕೆಟ್ಟಿಗೆ ಹೇಗೆ ವಿವಿಧ ದೂರದರ್ಶನ ವಾಹಿನಿಗಳಿವೆಯೋ ಅದೇ ರೀತಿ ಕಬ್ಬಡ್ಡಿಗೂ ಒಂದು 24*7 ವಾಹಿನಿ ಮಾಡಿ ಕಬ್ಬಡ್ಡಿ ಪಂದ್ಯಗಳನ್ನು ಪ್ರಸಾರ ಮಾಡುವ ಕನಸಿದೆ ಎಂಬ ಮಾತುಗಳನ್ನೂ ಆಡಿದ. ಕಬ್ಬಡ್ಡಿಗೆ ಹೆಚ್ಚಿನ ಗೌರವವನ್ನು ನೀಡಿ ಕಬ್ಬಡ್ಡಿಯನ್ನು ಜಗದ್ವಿಖ್ಯಾತ ಮಾಡುವ ಕನಸಿನ ಬಗ್ಗೆ ಮಧುಮಿತಾಳ ಜೊತೆ ಹಲವಾರು ಸಂಗತಿಗಳನ್ನು ಹಂಚಿಕೊಂಡ ವಿನಯಚಂದ್ರ.
ಮಾತು ಸಾಗಿದಂತೆ ಬಸ್ಸೂ ಎಗ್ಗಿಲ್ಲದೇ ಸಾಗುತ್ತಿತ್ತು. ಸೂರ್ಯ ಪಶ್ಚಿಮದಲ್ಲಿ ನಿಧಾನವಾಗಿ ಇಳಿಯುತ್ತಿದ್ದ. ಕೆಂಪು ಕೆಂಪಾಗಿ ಸುಲಿದ ಕಿತ್ತಳೆ ಹಣ್ಣಿನಂತೆ ಕಾಣುತ್ತಿದ್ದ ಸಂದರ್ಭದಲ್ಲಿಯೇ ಬಸ್ಸು ಕೂಡ ಕಾಂತಾಜಿ ದೇವಸ್ಥಾನವಿರುವ ಊರಿನ ಫಾಸಲೆಯತ್ತ ಬರುತ್ತಿತ್ತು. ದಿನಾಜ್ ಪುರದಿಂದ ಕಾಂತಾನಗರದತ್ತ ತಿರುಗುವ ವೇಳೆಗೆ ಕತ್ತಲೆ ಸುಳಿ ಸುಳಿದು ಬರತೊಡಗಿತ್ತು.
ಕಾಂತಾನಗರಕ್ಕೆ ಬರುವ ಮಾರ್ಗದಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಯಾವುದೋ ಯುಗಗಳ ಗೆಳೆಯರಂತಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಇಬ್ಬರೂ ಒಬ್ಬರಿಗೊಬ್ಬರು ಕುತೂಹಲಕ್ಕೆ ಕಾರಣವಾಗಿದ್ದರು. ಇವರ ಆಪ್ತತೆ ಸೂರ್ಯನ್ ಗೆ ಖುಷಿಯನ್ನು ತಂದಿತ್ತು. ಇಬ್ಬರ ನಡುವೆ ತಾನು ಬಂದು ತೊಂದರೆ ಕೊಡಬಾರದೆಂದು ದೂರವೇ ಉಳಿದಿದ್ದ.
**
ಕಾಂತಾನಗರದ ಮುಖ್ಯ ಆಕರ್ಷಣೆ ಕಾಂತಾಜಿ ದೇವಾಲಯ. ನಗರದ ಪ್ರಮುಖ ಸ್ಥಳವಾದ ಇದು ಅಪ್ಪಟ ಹಿಂದೂ ಶೈಲಿಯಲ್ಲಿದೆ. ಥಟ್ಟನೆ ನೋಡಿದರೆ ಅಸ್ಸಾಮಿನ ಯಾವುದೋ ದೇವಾಲಯದಂತೆ ಕಾಣುತ್ತದೆ. ಅಸ್ಸಾಮಿಗಳ ಪ್ರಭಾವ ಸಾಕಷ್ಟಿದ್ದಂತೆ ಅನ್ನಿಸುತ್ತದೆ. ಕಾಂತಾನಗರ ಹಿಂದುಗಳೇ ಬಹುಸಂಖ್ಯೆಯಲ್ಲಿರುವ ಊರು. ಭಾರತದ ಗಡಿಯಲ್ಲಿರುವ ಸ್ಥಳವೂ ಹೌದು. ದೂರದಿಗಂತದಲ್ಲಿ ಪರ್ವತಗಳ ಸಾಲು ಕಾಣಿಸುತ್ತದೆ. ಕೊರೆಯುವ ಚಳಿಯೂ ಇಲ್ಲಿದೆ. ಭಾರತದ ಗಡಿ ಹತ್ತಿರವಿರುವ ಕಾರಣ ಭಾರತದ ನಗರಕ್ಕೂ ಇಲ್ಲಿಗೂ ಬಸ್ ಸೌಕರ್ಯವಿದೆ. ಭಾರತದಿಂದಲೂ ಹಲವರು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆಂದು ಮಧುಮಿತಾ ಹೇಳಿದ್ದಳು.
ಶ್ರದ್ಧಾಭಕ್ತಿಯ ತಾಣವಾದ ಕಾಂತಾಜಿ ದೇವಾಲಯ ನವರತ್ನ ಶೈಲಿಯಲ್ಲಿ ನಿರ್ಮಾಣವಾಗಿತ್ತು. ಕಾಂತಾಜಿ ದೇವಾಲಯದ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದಂತೆ ಅನ್ನಿಸಿತು. ಬೆಳಕಿನ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿತ್ತು. ಸಂಜೆಗತ್ತಲಿನಲ್ಲಿ ಹಾಕಿದ್ದ ಬೆಳಕಿನಲ್ಲಿ ದೇಗುಲ ಬೆಳಗುತ್ತಿತ್ತು. ದೇವಾಲಯದ ಒಳಗೆ ತೆರಳಿ ಆಟಗಾರರೆಲ್ಲ ಪೂಜೆಯನ್ನು ಕೈಗೊಂಡರು. ವಿಶ್ವಕಪ್ಪು ಶುಭತರಲಿ ಎಂದು ಬೇಡಿಕೊಂಡರು. ವಿನಯಚಂದ್ರನೂ-ಮಧುಮಿತಾರೂ ಪೂಜೆಯಲ್ಲಿ ಪಾಲ್ಗೊಂಡಿದ್ದರೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಇಬ್ಬರೂ ಒಟ್ಟಾಗಿ ತಿರುಗಾಡಿದ್ದು ಮಾತ್ರ ವಿಶೇಷ ಸಂಗತಿಗಳಲ್ಲಿ ಒಂದಾಗಿತ್ತು. ಈ ವಿಶೇಷತೆ ಉಳಿದ ಆಟಗಾರರಿಗೆ ಅಚ್ಚರಿತಂದಿತ್ತು. ಸೂರ್ಯನ್ ಮಾತ್ರ ಸಹಜವಾಗಿದ್ದಿದ್ದ.
`ಹಗಲಿನಲ್ಲಿ ನೋಡಬೇಕು ಈ ದೇವಾಲಯವನ್ನು..'
`ರಾತ್ರಿಯೇ ಇಷ್ಟು ಚಂದ ಕಾಣ್ತಾ ಇದೆ.. ಖಂಡಿತ ಬೆಳಗ್ಗೆ ಇನ್ನೂ ಚನ್ನಾಗಿರಬಹುದಲ್ವಾ..?'
`ಹುಂ.. ವಿಶಾಲ ದೇವಾಲಯ, ದೈತ್ಯ ಕಂಬಗಳು.. ಕಂಬಗಳ ಮೇಲೆ ವಿಶಿಷ್ಟ ಕೆತ್ತನೆಗಳು.. ಬೆಳಗ್ಗೆ ಸೂರ್ಯನ ಕಿರಣ ನೇರವಾಗಿ ಗರ್ಭಗುಡಿಯಲ್ಲಿ ಕಾಂತಾಜಿ ಮೂರ್ತಿಯ ಮೇಲೆ ಬಿದ್ದಾಗ ಕಾಣುವ ದೃಶ್ಯವಂತೂ ಬಣ್ಣಿಸಲು ಅಸಾಧ್ಯ. ನಾಳೆ ಬೆಳಿಗ್ಗೆ ನೀನ್ನನ್ನು ನಾನು ಖಂಡಿತ ಕರೆದುಕೊಂಡು ಬರುತ್ತೇನೆ..'
`ಅಷ್ಟು ಮಾಡು ಮಾರಾಯ್ತಿ.. ನನಗೆ ಬಹಳ ಕುತೂಹಲವಿದೆ..' ವಿನಯಚಂದ್ರನಿಗೆ ಹಂಪಿಯನ್ನು ನೋಡಿದ್ದು ನೆನಪಾಯಿತು. ಹಂಪಿಯ ವಿಜಯ ವಿಠಲ ದೇವಾಲಯದ ಮೇಲೆ ಸೂರ್ಯನ ಮೊದಲ ಕಿರಣ ಬಿದ್ದು ಮೆರಗು ಮೂಡುವುದು ಕಣ್ಣಿಗೆ ಅಂದವನ್ನು ತಂದಿತ್ತು. ಅದೇ ಅಚ್ಚರಿ ಈ ದೇವಾಲಯದಲ್ಲೂ ಆಗುತ್ತದೆಯಾ ಎಂದುಕೊಂಡ ವಿನಯಚಂದ್ರ.
`ಖಂಡಿತ..'
ಮಧುಮಿತಾ-ವಿನಯಚಂದ್ರರ ಮಾತುಕತೆ ಸಾಗಿತ್ತು.
(ಮುಂದುವರಿಯುತ್ತದೆ..)