ಎಲ್ಲ ಮರೆತಿರುವಾಗ
ಭಾಗ-8
(ಇಲ್ಲಿಯವರೆಗೆ- ರಚನಾಳಿಗೆ ತನ್ನ ಬದುಕಿನ ದುರಂತ ದಿನಗಳನ್ನು ಹೇಳುತ್ತಿರುವ ಜೀವನ್..)
ರಚನಾ ನೀನು ಏನೇ ಹೇಳು ಕಾಲೇಜು ಲೈಫಿದೆಯಲ್ಲ ಅದರಂತಹ ಸುಂದರ ಜೀವನ ಇನ್ನೊಂದಿಲ್ಲ. ಅಲ್ಲಿ ನಾವು ಏನೆಲ್ಲ ಮಾಡಬಹುದು. ಸಾಧಿಸಬಹುದು. ಬಹುಶಃ ಬದುಕನ್ನು ಸಂಪೂರ್ಣವಾಗಿ ರೂಪಿಸುವುದೇ ಕಾಲೇಜು ಎನ್ನಬಹುದು. ಅಲ್ವಾ?
ರಚನಾ ಸುಮ್ಮನೆ ತಲೆಯಾಡಿಸಿದಳು.
ಜೀವನ್ ಮುಂದುವರಿಸಿದ.
ನನ್ನ ಕಾಲೆಜು ಲೈಫು ಪ್ರಾರಂಭದ ಇರಡು ತಿಂಗಳು ಸೀದಾ ಸಾದಾ ಆಗಿಯೇ ಇತ್ತು. ಹೊಸ ಪರಿಚಯ, ಹೊಸ ವಾತಾವರಣ, ಹೊಸ ಗೆಳೆಯರು, ಹೀಗೆಯೇ ಸಾಗುತ್ತಿತ್ತು. ಯಥಾ ಪ್ರಕಾರ ಲೇಟ್ ಕಮ್ಮರ್ ನಾನಾದ್ದರಿಂದ ಶಿರಸಿಯಲ್ಲಿ ಸೂರ್ಯ ಹೇಗೆ ಹುಟ್ಟುತ್ತಾನೆ ಎಂಬುದು ನನಗೆ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲಿ ಬಿಡು.
ಕಾಲೇಜಿನ ದಿನಗಳು ಸರಿದಂತೆಲ್ಲ ಒಮ್ಮೆ ಆ ದಿನದ ಕ್ಲಾಸುಗಳನ್ನು ಮುಗಿಸಿ ಬೇಗ ಮನೆಗೆ ಹೋಗುವ ತರಾತುರಿಯಲ್ಲಿದ್ದೆ. ಆಫ್ಶನಲ್ ಇಂಗ್ಲೀಶ್ ಆದ್ದರಿಂದ ಹುಡುಗರು ಕಡಿಮೆಯಿದ್ದರು. ಮುಂದಿನ ಕ್ಲಾಸಿಗೆ ಬಂಕ್ ಮಾಡುವುದೆಂದು ತೀರ್ಮಾನಿಸಿ ಹೊರಡಲನುವಾಗಿದ್ದೆ.
ನಾನು 3 ಗಂಟೆಯ ನಂತರ ಕಾಲೇಜಿನಲ್ಲಿರೋದಿಲ್ಲ ಎಂಬ ಸಂಗತಿ ಹೆಚ್ಚಿನ ಹುಡುಗರಿಗೆ ಗೊತ್ತಿತ್ತಾದ್ದರಿಂದ ನನ್ನೆಡೆಗಿನ ಜೋಕುಗಳಲ್ಲಿ ಅದೂ ಒಂದಾಗಿ ಸೇರಿ ಹೋಗಿತ್ತು. ಹೀಗಿರಲು ಅವಳು ಬಂದು ಇದ್ದಕ್ಕಿದ್ದಂತೆ ನನ್ನನ್ನು ಪರಿಚಯ ಮಾಡಿಕೊಂಡಳು. ಹೆಸರು ಸಂಗೀತಾ.
ಪರಿಚಯಕ್ಕೆ ಮುನ್ನ ಅನೇಕ ಸಾರಿ ಕ್ಲಾಸಿನಲ್ಲಿ ಕಂಡಿದ್ದೆ. ಮಾತನಾಡಲು ಮುಜುಗರ. ಇನ್ನೂ ಮುಖ್ಯ ಸಂಗತಿ ಎಂದರೆ ನಾನಾಗಿ ಯಾರನ್ನೂ ಮಾತನಾಡಿಸದ ವ್ಯಕ್ತಿ. ಅದಕ್ಕಿಂತ ಹೆಚ್ಚಾಗಿ ನಾನು ಗುಮ್ಮನಗುಸ್ಕನಾಗಿದ್ದೆ. ಅದ್ಯಾರು ನನ್ನ ಬಗ್ಗೆ ಹೇಳಿದ್ದರೋ, ಅಥವಾ ನನ್ನ ಮೇಲಿನ ಲೇಟ್ ಕಮ್ಮರ್ ಜೋಕುಗಳು ಅವಳ ಕಿವಿಗೂ ಬಿದ್ದಿದ್ದವೋ ಏನೋ.. ಪರಿಚಯ ಮಾಡಿಕೊಂಡಳು. ನಾನು ದೊಡ್ಡ ಶಾಕಿನೊಂದಿಗೆ ನನ್ನನ್ನು ಪರಿಚಯಿಸಿಕೊಂಡಿದ್ದೆ.
ಬಹುಶಃ ಆಕೆ ಪರಿಚಯ ಆದ ಗಳಿಗೆಯಲ್ಲಿ ಆಕಾಶದಲ್ಲಿ ಅದ್ಯಾವುದೋ ದೇವತೆಗಳು ನಮ್ಮನ್ನು ಹರಸಿದ್ದವು ಅಂತ ಕಾಣುತ್ತದೆ. ಒಂದೆರಡು ದಿನಗಳಲ್ಲಿ ಸಂಗೀತಾ ನನ್ನ ಪರಮಾಪ್ತ ಗೆಳತಿಯಾಗಿಬಿಟ್ಟಳು. ರಚನಾ ಇನ್ನೊಂದು ತಮಾಶೆಯ ಸಂಗತಿ ಏನ್ ಗೊತ್ತಾ., ಆಕೆ ಮೊದಲ ದಿನ ನನ್ನ ಪರಿಚಯ ಮಾಡಿಕೊಂಡಿದ್ದಳಲ್ಲ, ಮರು ದಿನ ಮತ್ತೆ ಸಿಕ್ಕಳು. ನನಗೆ ಅವಳು ಪರಿಚಯ ಮಾಡ್ಕೊಂಡಿದ್ದು ಮರೆತಿತ್ತು. ಹಾಯ್ ಅಂದಳು. ನಾನೊಮ್ಮೆ ತಲೆ ಕೆರೆದುಕೊಂಡಿದ್ದೆ. ಹೆಸರೂ ನೆನಪಾಗಿರಲಿಲ್ಲ. ಕೊನೆಗೆ ಪೆಕರನಂತೆ ಹಾಯ್ ಅಂದು ಮತ್ತೊಮ್ಮೆ ಹೆಸರು ಕೇಳಿದ್ದೆ.
ಸಂಗೀತಾ ಕುರಿತು ಒಂದೆರಡು ಸಂಗತಿ ಹೇಳಲೇ ಬೇಕು. ನನ್ನದೇ ಕ್ಲಾಸಿನ ಹುಡುಗಿ. ನನ್ನೂರಿನ ಬಸ್ಸಿಗೆ ಬರುತ್ತಿದ್ದಳು ಎಂಬುದು ನನ್ನ ಪರಿಚಯ ಆದ ಮೇಲೆ ಗೊತ್ತಾದ ಸಂಗತಿ. ಮನೆಯಲ್ಲಿ ಬೇಜಾನ್ ಆಸ್ತಿ ಇದೆ. ಅಲ್ಲದೆ ಅವರ ಅಪ್ಪ ಸ್ಥಳೀಯ ರಾಜಕಾರಣಿಯಾಗಿ ಹೆಸರು ಮಾಡಿದವರು. ದುಡ್ಡಿಗೆ ಕೊರತೆಯಿರಲಿಲ್ಲ. ಮಗಳು ಆಸೆಪಟ್ಟಿದ್ದರೆ ಎಂಜಿನಿಯರಿಂಗೋ ಅಥವಾ ಇನ್ಯಾವುದೋ ದೊಡ್ಡ ಹೆಸರಿನ ಕೋರ್ಸಿಗೆ ಸೇರಿಸಬಲ್ಲ ತಾಕತ್ತನ್ನು ಹೊಂದಿದ್ದವನು.
ಆದರೆ ಸಂಗೀತಾಳೇ ವಿಚಿತ್ರ ಸ್ವಭಾವದವಳು. ಆಕೆಗೆ ಇಷ್ಟವಿರಲಿಲ್ಲವೋ, ಅಥವಾ ಅಂತಹ ದೊಡ್ಡ ದೊಡ್ಡ ಕೋರ್ಸುಗಳನ್ನು ಮಾಡಿಕೊಂಡರೆ ಕಾಲೇಜು ಲೈಫಿನಲ್ಲಿ ಬರೀ ಓದು ಓದು ಎಂದು ಆ ಕಾಲದ ರಸನಿಮಿಷಗಳ ಸಂತಸ ಕಳೆದುಹೋಗುತ್ತದೆ ಎಂದುಕೊಂಡಿದ್ದಳೋ ಏನೋ.. ಅಂತೂ ನನ್ನ ಕ್ಲಾಸಿಗೆ ಬರ್ತಿದ್ದಳು. ನನ್ನದೇ ಆಫ್ಶಿನಲ್ ಇಂಗ್ಲೀಶ್ ಕ್ಲಾಸೂ ಆಗಿದ್ದರಿಂದ ನನ್ನ ಪರಿಚಯವಾದಳು ಎನ್ನಬಹುದು.
ಮುಂದಿನ ದಿನಗಳು ಬಹಳ ಸಂತಸದಿಂದ ಕೂಡಿದ್ದವು. ಕಾಲೇಜಿನಲ್ಲಿ ನಾವಿಬ್ಬರೂ ಪರಮಾಪ್ತರಾಗಿದ್ದೆವು. ಒಂದೆ ಬಸ್ ಆದ್ದರಿಂದ ಬಸ್ಸಿನಲ್ಲೂ ಒಟ್ಟಿಗೆ ಬರುತ್ತಿದ್ದೆವು. ಇಬ್ಬರು ಹೊಸದಾಗಿ ಮಿತ್ರರಾದರೆ ಪರಸ್ಪರ ಪ್ರಭಾವ ಬೀರುತ್ತಾರೆ ಎಂಬ ಮಾತಿದೆಯಲ್ಲ.. ಅವಳು ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿದಳೋ ಗೊತ್ತಾಗಲಿಲ್ಲ.ಆದರೆ ಆಕೆ ಮಾತ್ರ ನನ್ನಂತೆಯೇ ಕ್ಲಾಸಿಗೆ ಬಂಕ್ ಹೊಡೆಯಲು ಪ್ರಾರಂಭಿಸಿದ್ದಂತೂ ಸತ್ಯ. ಬೆಳಿಗ್ಗೆ 11ಕ್ಕೆ ಕ್ಲಾಸಿಗೆ ಹೋಗುವುದು, ಮದ್ಯಾಹ್ನ 3ಕ್ಕೆ ವಾಪಸ್ಸು.
ಆ ದಿನಗಳಲ್ಲಿ ಮಾತು, ಮಾತು ಮಾತು ಇವುಗಳೇ ನಮ್ಮ ಜೊತೆಗೆ ಇದ್ದಿದ್ದು. ಇಬ್ಬರು ಹುಡುಗಿಯರೂ ಆ ರೀತಿ ನಾನ್ ಸ್ಟಾಪ್ ಮಾತಾಡುವುದಿಲ್ಲವೇನೋ.. ಆದರೆ ನಾವಿಬ್ಬರು ಹಂಗೆ ಮಾತಾಡ್ತಿದ್ದೆವು.
ನಮ್ಮಿಬ್ಬರ ಈ ದೋಸ್ತಿ ನಿಧಾನವಾಗಿ ಕಾಲೇಜಿನಲ್ಲಿ ಮನೆಮಾತಾಯಿತು. ಅದಕ್ಕೆ ತಕ್ಕಂತೆ ಗಾಸಿಪ್ಪಾಯಣ, ರೂಮರಾಯಣಗಳೂ ಹುಟ್ಟಿಕೊಂಡವು. ಇದಕ್ಕೆ ನಾನು ತಲೆಕೆಡಿಸಿಕೊಂಡಿದ್ದೆನಾದರೂ ಆಕೆ ತಲೆಬಿಸಿ ಮಾಡಿಕೊಳ್ಳಲಿಲ್ಲ. ಹಾಗಾಗಿ ನಮ್ಮ ದೋಸ್ತಿಗೆ ಭಂಗ ಬರಲಿಲ್ಲ. ಜೊತೆಗೆ ದೋಸ್ತಿಯಲ್ಲಿ ಅಪಸವ್ಯಗಳೂ ಕಾಣಲಿಲ್ಲ.
ಈ ಕುರಿತು ಇನ್ನೂ ಹೇಳಬೇಕು. ಈ ಸಂಗೀತಾಳಿಂದಲೇ ನನ್ನ ಬದುಕು ಟರ್ನಾಗಿದ್ದು ಎಂದರೆ ನೀನು ನಂಬಲೇ ಬೇಕು. ಎಂದೋ ಆಕೆಯ ಎದುರು ಒಮ್ಮೆ ಹಾಡು ಗುನುಗಿದ್ದನ್ನು ಕೇಳಿ ಅದನ್ನು ಬೆಳೆಸಿದ್ದೇ ಆಕೆ.
ಅದೇ ರೀತಿ ಒಂದು ಖಯಾಲಿಯ ದಿನ ಕಾಲೇಜಿನಲ್ಲಿ ಕ್ಲಾಸು ಆಫಾಗಿತ್ತು.
ಮನಸ್ಸು ಯಾವುದೋ ಲಹರಿಯಲ್ಲಿತ್ತು.
ಸುಮ್ಮನೆ ಚಾಕ್ ಪೀಸ್ ಪಡೆದುಕೊಂಡು ಬೋರ್ಡಿನ ಮೇಲೆ
`ನಿನ್ನ ಪ್ರೀತಿಗೆ ನಾನು ಒಳ್ಳೆಯವನಲ್ಲ..
ನಿಜ ಗೆಳತಿ..ಖಂಡಿತವಾಗಿಯೂ
ಒಳ್ಳೆಯವನಲ್ಲ..."
ಎನ್ನುವ ಸಾಲುಗಳನ್ನು ಬರೆದೆ.
ಈ ಸಾಲುಗಳು ಆಕೆಯ ಕಣ್ಣಿಗೆ ಬಿದ್ದವು. ಆಗಿಂದ ಶುರುವಾಯಿತು ನೋಡಿ..ಜೀವನ್ ನೀನು ಬಹಳ ಚನ್ನಾಗಿ ಬರೀತಿಯಾ ಕಣೋ.. ಕೀಪ್ ಇಟ್ ಅಪ್.. ಎಂದು ಮೊದಲು ಅಪ್ರಿಸಿಯೇಶನ್ ಮಾಡಿದ ಆಕೆ ಆ ನಂತರ ನನ್ನಲ್ಲಿ ಬರವಣಿಗೆಯ ಸಾಲುಗಳು ಮೂಡಲು ಕಾರಣವಾದಳು. ಅವಳ ದೆಸೆಯಿಂದಲೇ ನಾನು ಅದೆಂತೆಂತದ್ದೋ ಕವಿತೆಗಳನ್ನು ಬರೆದೆ. ಸಂಗ್ರಹ ಮಾಡಿಯೂ ಇಟ್ಟಿದ್ದೆ. ಈಗ ಅದೆಲ್ಲಿ ಹೋಗಿದೆಯೋ ಗೊತ್ತಿಲ್ಲ.
ಒಂದೊಳ್ಳೆ ಸಂಗತಿಯೆಂದರೆ ಆಕೆ ನನಗೆ ಅದೆಷ್ಟು ಒಳ್ಳೊಳ್ಳೆ ಕಾದಂಬರಿಗಳನ್ನು ಸಜೆಸ್ಟ್ ಮಾಡಿದ್ಲು ಗೊತ್ತಾ. ಆ ದಿನಗಳಲ್ಲಿಯೇ ನಾನು `ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ, ಕರ್ವಾಲೋ, ಭಾರತೀಪುರ, ಚಿದಂಬರ ರಹಸ್ಯ, ಒಂದು ಬದಿ ಕಡಲು, ಆವರಣ, ತಂತು, ಭಿತ್ತಿ ಈ ಮುಂತಾದ ಕನ್ನಡದ ಮೇರು ಕೃತಿಗಳನ್ನು ಓದಿದ್ದೆ. ಈಗಲೂ ನೀನು ನೋಡಬಹುದು ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ನನ್ನ ಐಕಾರ್ಡ್ ನಂಬರ್ 184 ಇದ್ದಷ್ಟು ಬೇರೆ ಯಾರ ನಂಬರುಗಳೂ ಲೈಬ್ರರಿಯ ಪುಸ್ತಕದಲ್ಲಿಲ್ಲ.
ಇಷ್ಟೇ ಅಲ್ಲ. ಇಂಗ್ಲೀಷು ನನಗೆ ಬಹಳ ತಲೆ ತಿನ್ನುವ ವಿಷಯ ಆಗಿತ್ತು. ಆದರೂ ಕಾಲೇಜಿನಲ್ಲಿ ಅದನ್ನೇ ಒಂದು ವಿಷಯವಾಗಿ ತಗೊಂಡಿದ್ದೆ.
ಆ ದಿನಗಳಲ್ಲಿ ಕಾರ್ನಾಡರ ತುಘಲಕ್, ಈ ಮುಂತಾದ ನಾಟಕಗಳು ನಮಗೆ ಸಿಲಬಸ್ ಆಗಿ ಇದ್ದವು. ಇಂಗ್ಲೀಷಿನ ಈ ಪುಸ್ತಕಗಳನ್ನು ಕೋಳ್ಳಲು ನನ್ನ ಬಳಿ ದುಡ್ಡಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಇವಳೇ ನನಗೆ ಈ ಪುಸ್ತಕಗಳನ್ನು ಎರವಲು ನೀಡಿದ್ದು. ಈ ಪುಸ್ತಕಗಳೆಲ್ಲ ಕನ್ನಡದಿಂದ ಇಂಗ್ಲೀಷಿನಲ್ಲಿ ಅನುವಾದ ಆಗಿರುವ ಕಾರಣ ನಾನು ಕನ್ನಡದಲ್ಲಿ ಓದುತ್ತಿದ್ದೆ. ನಂತರ ಪರೀಕ್ಷೆಗಳಲ್ಲಿ ನನ್ನದೇ ವಾಕ್ಯಗಳನ್ನು ಬಳಸಿ ಇಂಗ್ಲೀಷಿನಲ್ಲಿ ಬರೆಯುತ್ತಿದ್ದೆ. ಇದರಿಂದಾಗೀ ತೀರಾ 70-80 ಮಾರ್ಕುಗಳು ಬೀಳದಿದ್ದರೂ 45-50ಕ್ಕಂತೂ ಕೊರತೆಯಾಗುತ್ತಿರಲಿಲ್ಲ. ಇದನ್ನು ಅರಿಯದ ಸಂಗೀತಾ ಹಾಗೂ ಇತರ ಮಿತ್ರರು ಯದ್ವಾ ತದ್ವಾ ಓದಿಯೂ ನನ್ನಷ್ಟೇ ಮಾರ್ಕು ಪಡೆಯುತ್ತಿದ್ದರು. ಕೊನೆಗೆ ನನ್ನ ಈ ಐಡಿಯಾವನ್ನು ಹೇಳಿದ್ದೇ ತಡ ಎಲ್ಲರೂ ಅದನ್ನು ಪಾಲಿಸಿ ಮಾರ್ಕುಗಳನ್ನು ಪಡೆದ ಮೇಲೆಯೇ ನನ್ನ ಕುರಿತು ಜೋಕುಗಳನ್ನು ಆಡುತ್ತಿದ್ದುದು ಕಡಿಮೆಯಾಗಿದ್ದು.
(ಮುಂದುವರಿಯುವುದು..)