Monday, November 18, 2024

ಯಕ್ಷಗಾನ-ತಾಳಮದ್ದಲೆಯ ಸ್ವಾರಸ್ಯಕರ ಘಟನೆಗಳು

1960ರ ದಶಕದ ಚಳಿಗಾಲದ ಒಂದು ಸಂಜೆ. ಆಗತಾನೆ ಕರ್ಕಿ ಮೇಳದವರು ಆಟ ಮುಗಿಸಿ ಊರ ಕಡೆ ಹೊರಟಿತ್ತು. ಆಗೆಲ್ಲ ನಡೆದುಕೊಂಡೇ ಊರು ತಲುಪುವುದು ವಾಡಿಕೆ. ಮುಂದಿನ ಆಟ ಎಲ್ಲೋ, ಯಾವಾಗಲೋ ಎಂದು ಮೇಳದ ಮೇಲ್ವಿಚಾರಕರು ಮಾತಾಡಿಕೊಳ್ಳುತ್ತ ಸಾಗಿದ್ದರು. ನಿಧಾನವಾಗಿ ಸೂರ್ಯ ಕಂತಿದ್ದ.
ಬಹಳ ದೂರ ನಡೆದುಕೊಂಡು ಹೋಗುತ್ತಿದ್ದ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ಇನ್ನೂ ತಮ್ಮ ತಮ್ಮ ಊರು ತಲುಪುವುದು ತುಂಬಾ ದೂರ ಉಳಿದಿತ್ತು. ಹೀಗಿದ್ದಾಗ ಅದ್ಯಾವುದೋ ಒಂದು ಊರಿನ ಹೊರವಲಯ, ಅಲ್ಲೊಬ್ಬರು ಮಹನೀಯರು ಈ ಮೇಳದವರನ್ನು ಎದುರಾದರು. ಊಭಯಕುಶಲೋಪರಿಯೆಲ್ಲ ನಡೆಯಿತು.
ಎದುರಾದ ಆಗಂತುಕರು ಮೇಳದ ಬಳಿ ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ಅದಕ್ಕೆ ಮೇಳದವರು ತಮ್ಮ ಕಥೆಯನ್ನೆಲ್ಲ ಹೇಳಿದರು. ಕೊನೆಗೆ ಅಲ್ಲಿ ಸಿಕ್ಕ ಆಗಂತುಕರು, ʻತಮ್ಮೂರಿನಲ್ಲೂ ಒಂದು ಆಟ ಆಡಿʼ ಎಂದರು.
ಮೇಳದವರು ʻಆಟಕ್ಕೆ ಸ್ಥಳ ಬೇಕು.. ಜನ ಎಲ್ಲ ಬರಬೇಕಲ್ಲʼ ಎಂದರು.
ʻಜಾಗ ಎಲ್ಲ ತಯಾರಿದೆ.. ಜನರೂ ಬರುತ್ತಾರೆ. ನೀವು ವೇಷ ಕಟ್ಟಿಕೊಳ್ಳುವ ವೇಳೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ..ʼ ಎಂದರು ಆ ವ್ಯಕ್ತಿ.
ಎಲ್ಲರೂ ಒಪ್ಪಿಕೊಂಡು, ಆ ಆಗಂತುಕನ ಹಿಂಬಾಲಿಸಿ ಮುನ್ನಡೆದರು. ಅರ್ಧ ಫರ್ಲಾಂಗಿನಷ್ಟು ದೂರ ಸಾಗಿದ ನಂತರ ಅಲ್ಲೊಂದು ಕಡೆ ಯಕ್ಷಗಾನದ ಆಟ ನಡೆಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೇಳದ ಮಹನೀಯರು ಮೆಚ್ಚುಗೆ ಸೂಚಿಸಿ, ವೇಷ ಕಟ್ಟಲು ಹೊರಟರು.
ಕೆಲ ಸಮಯದಲ್ಲಿ ವೇಷ ಕಟ್ಟಿ ಮುಗಿಯಿತು. ಭಾಗವತರು ಹಾಡಲು ಶುರುಮಾಡಿದರು.
ಕೆಲ ಸಮಯದ ತನಕ ಆಟ ಸಾಂಗವಾಗಿ ನೆರವೇರಿತು. ಅಷ್ಟರಲ್ಲಿ ಮುಖ್ಯ ಪಾತ್ರಧಾರಿಯ ಪ್ರವೇಶವೂ ನಡೆಯಿತು. ಚಂಡೆಯ ಸದ್ದು ಮುಗಿಲು ತಲುಪುವಂತಿತ್ತು. ಆರ್ಭಟದೊಂದಿಗೆ ಮುಕ್ಯ ಪಾತ್ರಧಾರಿ ರಂಗವನ್ನು ಪ್ರವೇಶಿಸಿದ್ದಲ್ಲದೇ ಮಂಡಿಕುಣಿತವನ್ನೂ ಶುರು ಹಚ್ಚಿಕೊಂಡರು.
ಪಾತ್ರಧಾರಿಯ ಆರ್ಭಟ ಹೇಗಿತ್ತೆಂದರೆ ವೇದಿಯ ಮುಂದೆ ಕುಳಿತು ಆಟವನ್ನು ನೋಡುತ್ತಿದ್ದವರೆಲ್ಲ ಒಮ್ಮೆಲೆ ಆವೇಶ ಬಂದವರಂತೆ ಕುಣಿಯಲು ಶುರು ಮಾಡಿದರು. ಕ್ಷಣಕ್ಷಣಕ್ಕೂ ಪಾತ್ರಧಾರಿಯ ಕುಣಿತ ಹೆಚ್ಚಾಯಿತು. ಭಾಗವತರ ಭಾಗವತಿಕೆ, ಚಂಡೆಯ ಸದ್ದು ಹೆಚ್ಚಿದಂತೆಲ್ಲ ನೋಡುತ್ತಿದ್ದ ಜನಸಮೂಹ ಕೂಡ ಜೋರು ಜೋರಾಗಿ ಕುಣಿಯ ಹತ್ತಿದರು.
ಭಾಗವತಿಕೆ ಮಾಡುತ್ತಿದ್ದ ಭಾಗವತರು ಈ ಜನಸಮೂಹದ ನರ್ತನವನ್ನು ನೋಡಿದವರೇ ದಂಗಾಗಿ ಹೋದರು.
ʻಇದೇನಿದು ಈ ರೀತಿ ಜನರು ಕುಣಿಯುತ್ತಿದ್ದಾರಲ್ಲʼ ಎಂದು ಒಮ್ಮೆ ವಿಸ್ಮಯವಾದರೂ ನಿಜವಾದ ಕಾರಣ ತಿಳಿದು ದಂಗಾಗಿ ಹೋದರು.
ತಕ್ಷಣವೇ ʻಗಂಟು ಮೂಟೆಯ ಕಟ್ಟಿರೋ..ʼ ಎಂದು ಜೋರಾಗಿ ಪದ ಹಾಡಲು ಶುರು ಮಾಡಿದರು.
ಇದುವರೆಗೂ ಸರಿಯಾಗಿ ಹಾಡುತ್ತಿದ್ದ ಭಾಗವತರು ಇದೇನು ಹೊಸದಾಗಿ ಗಂಟು ಮೂಟೆಯ ಕಟ್ಟಿರೋ ಎನ್ನುವ ಪದ ಹಾಡುತ್ತಿದ್ದಾರಲ್ಲ ಎನ್ನುವ ಅನುಮಾನದಲ್ಲಿ ಪಾತ್ರಧಾರಿಗಳು ಭಾಗವತರನ್ನು ನೋಡಲು ಆರಂಭಿಸಿದರು.
ಆಗ ಭಾಗವತರು
ʻಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..ʼ ಎಂದು ಇನ್ನೊಮ್ಮೆ ರಾಗವಾಗಿ ಹಾಡಿದರು. ಆಗಲೂ ಪಾತ್ರಧಾರಿಗಳಿಗೆ ಅರ್ಥವಾಗಿರಲಿಲ್ಲ.
ಭಾಗವತರು ಮತ್ಯೊಮ್ಮೆ
'ಗಮನಿಸಿ ಕೇಳೊರೋ
ಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..' ಎಂದು ಹಾಡಿದರು.
ತಕ್ಷಣವೇ ಎಚ್ಚೆತ್ತ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಕಟ್ಟಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಓಡಲು ಆರಂಭಿಸಿದರು.
ಭಾಗವತರ ಪದಕ್ಕೆ ಕುಣಿಯುತ್ತಿದ್ದ ಭೂತಗಳ ಗುಂಪು ಊರ ಹೊರಗಿನ ಸ್ಮಷಾನದಲ್ಲಿ ಬಹಳ ಹೊತ್ತಿನ ತನಕ ಕುಣಿಯುತ್ತಲೇ ಇತ್ತು.

(ಹಿರಿಯರು ಅನೇಕ ಸಾರಿ ಹೇಳಿದ್ದ ಈ ಕಥೆ.. ಯಲ್ಲಾಪುರ ಭಾಗದಲ್ಲಿ ಪ್ರಚಲಿತದಲ್ಲಿದೆ. ಪ್ರತಿಯೊಬ್ಬರೂ ಈ ಕಥೆ ನಿಜವೆಂದೇ ಹೇಳುತ್ತಾರೆ. ಹೀಗಾಗಿ ನಾನು ಕೇಳಿದ ಕಥೆಯನ್ನು ಯಥಾವತ್ತಾಗಿ ಇಲ್ಲಿಟ್ಟಿದ್ದೇನೆ. ಯಾರಿಗಾದರೂ ಈ ಬಗ್ಗೆ ಗೊತ್ತಿದ್ದರೆ ಸವಿಸ್ತಾರವಾಗಿ ತಿಳಿಸಿ)



********************

ತೊಂಭತ್ತರ ದಶಕದಲ್ಲಿ ನಡೆದ ಕತೆ ಇದು

ಆಗಿನ ದಿನಗಳಲ್ಲಿ ಕನ್ನಡ ಶಬ್ದಗಳ ಮದ್ಯ ಚಿಕ್ಕ ಚಿಕ್ಕ ಇಂಗ್ಲೀಷ್‌ ಶಬ್ದಗಳ ಬಳಕೆ ದಣಿ ದಣೀ ಶುರುವಾಗುತ್ತಿದ್ದ ಸಮಯ.
ಯಲ್ಲಾಪುರದ ಯಾವುದೋ ಒಂದು ಊರಿನಲ್ಲಿ ತಾಳಮದ್ದಲೆ ಸಂಭ್ರಮ. ರಾತ್ರಿ ಇಡೀ ತಾಳಮದ್ದಲೆ ನಡೆಯುವ ಸಂಭ್ರಮ. ತಾಳಮದ್ದಲೆಯನ್ನು ಸವಿಯುವ ಸಲುವಾಗಿ ಇಡಿಯ ಊರಿಗೆ ಊರೆ ನಲಿದಿತ್ತು. ಶ್ರೀಕೃಷ್ಣ ಸಂಧಾನದ ಪ್ರಸಂಗ.
ಶ್ರೀಕೃಷ್ಣ ಸಂಧಾನಕ್ಕಾಗಿ ವಿಧುರನ ಮನೆಗೆ ಬಂದು, ನಂತರ ದುರ್ಯೋಧನನ ಸಭೆಯಲ್ಲಿ ಸಂಧಾನದ ಮಾತುಕತೆಯನ್ನೆಲ್ಲ ಆಡಿ ಮುಗಿದಿತ್ತು. ಕೃಷ್ಣ-ದುರ್ಯೋಧನನ ಪಾತ್ರಧಾರಿಗಳೆಲ್ಲ ಭಾರಿ ಭಾರಿಯಾಗಿ ತಮ್ಮ ವಾಗ್ಝರಿಯನ್ನು ಹರಿಸಿದ್ದರು.
ಶ್ರೀಕೃಷ್ಣ ದುರ್ಯೋಧನನ ಜತೆ ಸಂಧಾನ ವಿಫಲವಾಗಿ ತೆರಳಿದ ನಂತರ ದುರ್ಯೋಧನ ವಿಧುರನನ್ನು ಜರಿಯುವ ಸಂದರ್ಭ ಬಂದಿತ್ತು. ಶ್ರೀಕೃಷ್ಣ ದುರ್ಯೋಧನನ ಸಭೆಗೆ ಮೊದಲು ಬರದೇ ವಿಧುರನ ಮನೆಗೆ ಹೋಗಿದ್ಯಾಕೆ ಎಂದೆಲ್ಲ ಪ್ರಶ್ನಿಸಿ ನಾನಾ ರೂಪದಿಂದ ವಿಧುರನನ್ನು ಬೈದು ಆಗಿತ್ತು.
ಇದರಿಂದ ಮನನೊಂದ ವಿಧುರ ಆಪತ್ಕಾಲದಲ್ಲಿ ಕೌರವರ ರಕ್ಷಣೆಗಾಗಿ ಇರಿಸಿದ್ದ ಬಿಲ್ಲು-ಬಾಣಗಳನ್ನು ಮುರಿದು ಹಾಕುವ ಸಂದರ್ಭವೂ ಬಂದಿತ್ತು. ಸಭಾಸದರೆಲ್ಲ ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ಸವಿಯುತ್ತಿದ್ದರು.
ಭಾಗವತರ ಹಾಡುಗಾರಿಕೆ, ಪಾತ್ರಧಾರಿಗಳ ವಾದ-ಪ್ರತಿವಾದಗಳೆಲ್ಲ ಉತ್ತಮವಾಗಿ ನಡೆಯುತ್ತಿದ್ದವು. ನೋಡುಗರು ವಾಹ್‌ ವಾಹ್‌ ಎನ್ನುವಂತೆ ತಾಳಮದ್ದಲೆ ಸಾಗುತ್ತಿತ್ತು.
ಹೀಗಿದ್ದಾಗಲೇ ದುರ್ಯೋಧನನ ಮಾತುಗಳಿಗೆ ವಿಧುರ ಉತ್ತರ ನೀಡಬೇಕು. ಆದರೆ ಆ ಸಂದರ್ಭದಲ್ಲಿ ವಿಧುರನಿಗೆ ಮಾತನಾಡಲು ಆಗುತ್ತಲೇ ಇಲ್ಲ. ಆತನಿಗೆ ತಾನು ಏನು ಮಾತನಾಡಬೇಕು ಎನ್ನುವುದು ಮರೆತು ಹೋಗಿದೆ. ವಾಸ್ತವದಲ್ಲಿ ವಿಧುರನ ಪಾತ್ರಧಾರಿ ʻಹೌದು.. ಹೌದು..ʼ ಎನ್ನಬೇಕಿತ್ತು. ಆದರೆ ಆ ಮಾತು ಮರೆತು ಹೋಗಿದೆ.
ದುರ್ಯೋಧನ ಎರಡು ಸಾರಿ ತನ್ನ ಮಾತನ್ನಾಡಿದರೂ ವಿಧುರನಿಂದ ಉತ್ತರ ಬರಲೇ ಇಲ್ಲ. ಕೊನೆಗೆ ದುರ್ಯೋಧನ ಪಾತ್ರಧಾರಿ ಭಾಗವತರಿಗೆ ಸನ್ನೆ ಮಾಡಿದ್ದಾಯ್ತು. ಭಾಗವತರು ವಿಧುರನ ಪಾತ್ರಧಾರಿ ಕಡೆ ನೋಡಿ ಹಾಡಿನ ರೂಪದಲ್ಲಿ ಎಚ್ಚರಿಸಿದರು.
ಕೊನೆಗೆ ಎಚ್ಚೆತ್ತುಕೊಂಡ ವಿಧುರನ ಪಾತ್ರಧಾರಿ ʻYes Yes..' ಎಂದ. ಕನ್ನಡದ ತಾಳಮದ್ದಲೆಯಲ್ಲಿ ಇಂಗ್ಲೀಷ್‌ ಶಬ್ದ ಬಂದಿದ್ದು ಪ್ರೇಕ್ಷಕರಾದಿಯಾಗಿ ಎಲ್ಲರಿಗೂ ಒಮ್ಮೆ ಅಚ್ಚರಿಯಾಗಿತ್ತು. ಇದೇನಿದು ಎಂದು ಆಲೋಚನೆ ಶುರು ಮಾಡಲು ಆರಂಭಿಸಿದ್ದರು.
ತಕ್ಷಣವೇ ಭಾಗವತರು ʻ ವಿಧುರ ಯೆಸ್‌ ಎಂದ....ʼ ಎಂದು ರಾಗವಾಗಿ ಹಾಡಲು ಶುರು ಮಾಡಿದರು.
ಈ ಪ್ರಸಂಗ ಮುಗಿದ ಕೆಲವು ದಿನಗಳವರೆಗೂ ವಿಧುರ ಯೆಸ್‌ ಎಂದ ಎನ್ನುವ ಸಂಗತಿ ಜನರ ಬಾಯಲ್ಲಿ ಚರ್ಚೆಯಾಗುತ್ತಲೇ ಇತ್ತು. ತಾಳಮದ್ದಲೆಯ ಸವಿಯನ್ನುಂಡವರು ಆಗೀಗ ಈ ಸನ್ನಿವೇಶದ ಕುರಿತು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದುದೂ ಜಾರಿಯಲ್ಲಿತ್ತು. ಯಲ್ಲಾಪುರದ ಕೆಲವರಿಗೆ ಈಗಲೂ ವಿಧುರ ಯೆಸ್‌ ಎಂದ ಎನ್ನುವ ತಾಳಮದ್ದಲೆಯ ಸನ್ನಿವೇಶ ನೆನಪಾಗಬಹುದು. ಯಲ್ಲಾಪುರದ ಭಾಗದ ಜನರಿಗೆ ಈ ಬಗ್ಗೆ ಜಾಸ್ತಿ ಗೊತ್ತಿದ್ದರೆ ತಿಳಿಸಿ.
ಇಂತಹ ಯಕ್ಷಗಾನ ಹಾಗೂ ತಾಳಮದ್ದಲೆಯ ತಮಾಷೆಯ ಸನ್ನಿವೇಶಗಳಿದ್ದರೆ ನೀವೂ ತಿಳಿಸಿ

Sunday, July 2, 2023

ಪಾರು (ಕಥೆ ಭಾಗ-2 )

ಬರಬಳ್ಳಿ ಗುಡ್ಡ ಬೆಟ್ಟಗಳ ನಡುವೆ ಅರಳಿನಿಂತ ಊರು ಎನ್ನುವುದನ್ನು ಆಗಲೇ ಹೇಳಿದೆನಲ್ಲ. ವಿಶಾಲ ಜಾಗದಲ್ಲಿ 400 ರಷ್ಟು ಕುಟುಂಬಗಳು ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಡಿಕೆ ಇವರ ಜೀವನದ ಆಧಾರವಾಗಿದ್ದರೆ, ಜಮೀನಿನಲ್ಲಿ ಬೆಳೆಯುವ ಬೃಹತ್ ಗಾತ್ರದ ತೆಂಗು ಇವರ ಬದುಕಿನ ಆಹಾರವನ್ನು ಪೂರೈಸುತ್ತಿತ್ತು.

ದೂರದಲ್ಲಿ ಕರಿಬಣ್ಣದ ಕಾಳಿ ಹರಿದು ಹೋಗುತ್ತಿತ್ತು. ಊರಿಗೂ ಕಾಳಿ ನದಿಗೂ ನಡುವೆ ವಿಶಾಲವಾದ ಗದ್ದೆ ಬಯಲಿತ್ತು. ಬೈಲುಗದ್ದೆ ಎಂದೇ ಕರೆಸಿಕೊಂಡ ಈ ಗದ್ದೆಯ ಬಯಲು ಸಾತೊಡ್ಡಿ ಹಳ್ಳದಿಂದ ಕಳಚೆಯ ತನಕವೂ ಇತ್ತು. ಇಲ್ಲಿ ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಿದ್ದರು.

ಗಣಪತಿ ಭಟ್ಟರು, ಚಿದಂಬರ, ನಾರಾಯಣ, ಶಂಕರ ಮುಂತಾದ ತನ್ನ ಜತೆಗಾರರ ಜೊತೆಗೆ ಈ ವಿಸ್ತಾರವಾದ ಬಯಲುಗಡ್ಡೆಯನ್ನು ದಾಟಿದರು. ಸೀದಾ ಕಾಳಿ ನದಿಯ ತೀರಕ್ಕೆ ಬಂದರು.

ಚಿಕ್ಕ ಚಿಕ್ಕ ನದಿಗಳನ್ನು ಸುಲಭವಾಗಿ ದಾಟಬಹುದು. ಆದರೆ ದೊಡ್ಡ ದೊಡ್ಡ ನದಿಗಳನ್ನು ದಾಟುವುದು ಸುಲಭವಲ್ಲ. ಆಳವಾಗಿ ಹಾಗೂ ವೇಗವಾಗಿ ಹರಿಯುವ ಈ ನದಿಯನ್ನು ದಾಟಲು ದೋಣಿಯ ಅವಲಂಬನೆ ಅತ್ಯಗತ್ಯ. ಆದರೆ ಕೆಲವು ನದಿಗಳಲ್ಲಿ ಕೆಲವು ಕಡೆ ನದಿಯ ಹರಿವು ಬೇರೆ ರೀತಿಯಲ್ಲಿರುತ್ತವೆ. ಎಲ್ಲ ಕಡೆಗಳಲ್ಲಿ ಆಳವಾಗಿ ಹರಿಯುವ ನದಿಯು ಭೌಗೋಲಿಕ ರಚನೆಗೆ ಅನುಗುಣವಾಗಿ ತನ್ನ ಅಳವನ್ನು ಕಳೆದುಕೊಂಡು ವಿಸ್ತಾರವಾಗಿ ಹರಿಯುತ್ತವೆ. ಇಂತಹ ಸ್ಥಳಗಳಲ್ಲಿ ಸೆಳವು ಕೂಡ ಕಡಿಮೆ ಇರುತ್ತದೆ. ಇಂತಹ ಜಾಗವನ್ನು ಪಾರು ಎಂದು ಕರೆಯುತ್ತಾರೆ.

ಕಾಳಿ ನದಿಯಲ್ಲಿಯೂ ಹಲವು ಕಡೆಗಳಲ್ಲಿ ನದಿಯನ್ನು ದಾಟಲು ಅನುಕೂಲವಾಗುವಂತೆ ಪಾರುಗಳಿದ್ದವು. ಶಾಟ ಶತಮಾನಗಳಿಂದ ಸ್ಥಳೀಯರು ಇಂತಹ ಪಾರುಗಳನ್ನು ದಾಟಿ ನದಿಯ ಇನ್ನೊಂದು ತೀರಕ್ಕೆ ಹೋಗುತ್ತಿದ್ದರು. ಗಣಪತಿ ಭಟ್ಟರು ಅವರ ಜತೆಗಾರರ ಜೊತೆಗೆ ನಸುಕಿನಲ್ಲಿ ಈ ಪಾರಿನ ಜಾಗಕ್ಕೆ ಬಂದರು.

ಕರಿ ಕಾಳಿಯಲ್ಲಿನ ಪಾರನ್ನು ಕೆಲವು ನಿಮಿಷಗಳ ಅಂತರದಲ್ಲಿ ದಾಟಿ ನದಿಯಾಚೆಗಿನ ಪ್ರದೇಶಕ್ಕೆ ತೆರಳಿದ್ದರು. ಭಟ್ಟರ ಬಳಗ ಇನ್ನೂ ಹೋಗುವ ದೂರ ಬಹಳಷ್ಟಿತ್ತು. ಮುಂದಿನ ಒಂದು ತಾಸುಗಳ ನಡಿಗೆಯ ಮೂಲಕ ಕೊಡಸಳ್ಳಿಯನ್ನು ಹಾದು ಹೋಗಿದ್ದರು.

ಸೂರ್ಯ ಬಾನಂಚಿನಲ್ಲಿ ಮೂಡಿ ಮೊದಲ ಕಿರಣಗಳು ಭೂಮಿಗೆ ಬೀಳುವ ವೇಳೆಗಾಗಲೇ ಗಣಪತಿ ಭಟ್ಟರ ಬಳಗ ಬೀರ್ಕೋಲ್ ತಲುಪಿಯಾಗಿತ್ತು.

``ಇಲ್ಲಿಂದಾಚೆಗೆ ಹೆಬ್ಬಗುಳಿ, ದೇವಕಾರು, ಬಾಳೆಮನೆ.. ಆಮೇಲೆ ಸೋಮವಾರ ಸಂತೆ ಬಯಲು.. ಅಲ್ಲಿಂದ ಸ್ವಲ್ಪದೂರ ಹೋದರೆ ಬಸ್ಸು ಸಿಕ್ತು.. ಆಮೇಲೆ ನೇಸರ ನೆತ್ತಿಗೇರುವ ಹೊತ್ತಿಗೆಲ್ಲ ಕಾರವಾರ ಹೋಗುಲಾಗ್ತು..'' ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತ ಹೊರಟವರು ತಮ್ಮೂರಿನಿಂದ ಆಗಲೇ ಹತ್ತಾರು ಕಿಲೋಮೀಟರ್ ದೂರವನ್ನು ಸವೆಸಿದ್ದರು.

ಸೋಮವಾರ ಸಂತೆಯನ್ನು ತಲುಪುವ ವೇಳೆಗಾಗಲೇ ಅಲ್ಲಿ ನಿಂತಿದ್ದ ಕೆಂಪುಬಸ್ಸು ಎರಡು ಸಾರಿ ಪೊಂ ಪೊಂ ಎಂದು ಸದ್ದು ಮಾಡಿ ಹೋರಾಡಲು ಅನುವಾಗಿತ್ತು. ತುಸು ಓಡುತ್ತಲೇ ಬಸ್ಸನ್ನೇರಿದರು.

``ವಾಪಾಸ್ ಬರಕಿದ್ರೆ ದೇವಕಾರು ಗೌಡಂದಿಕ್ಕಳ ಮನೆಗೆ ಹೋಗಿ ಬರುವ. ನಮ್ಮನೆ ಬೆಳ್ಳಿ, ಕೆಂಪಿ, ಕೆಂಚಿ, ಸರಸು ಎಲ್ಲ ಎಂತ ಮಾಡ್ತಿದ್ದು ನೋಡ್ಕಂಡು ಬರುವ'' ಎಂದು ಭಟ್ಟರು ಶಂಕರನ ಬಳಿ ಹೇಳಿದ್ದರು.

``ಗಣಪಣ್ಣ, ಗೌಡಂದಿಕ್ಕಳ ಬಳಿ ಎಷ್ಟು ದನ ಹೊಡೆದುಹಾಕಿದ್ಯೋ..'' ಶಂಕರ ಕೇಳಿದ್ದ.

``ನಿತ್ಯ ಪೂಜೆಗೆ ಎರಡು ಕಾಲ್ನಡೆ ಇಟಕಂಡು, ಬಾಕಿ ಎಲ್ಲ ದೇವಕಾರು ಬಯಲಿಗೆ ಹೊಡೆದಿಕ್ಕಿದೆ ನೋಡು'' ಭಟ್ಟರು ಉತ್ತರ ನೀಡಿದ್ದರು.

ಜಾನುವಾರುಗಳನ್ನು ಸಾಕಿ ಸಲಹುವ ನಿಟ್ಟಿನಲ್ಲಿ ಬರಬಳ್ಳಿಗೂ, ದೇವಕಾರು, ಹೆಬ್ಬಗುಳಿ ಹಾಗೂ ಕೈಗಾಕ್ಕೂ ವಿಶೇಷ ಸಂಬಂಧವಿತ್ತು. ಪ್ರತಿ ಬೇಸಿಗೆಯ ವೇಳೆಗೆ ಕೈಗಾ, ಹೆಬ್ಬಗುಳಿ ಹಾಗೂ ದೇವಕಾರಿನ ಗೌಡರು ಭುಜದ ಮೇಲೆ ದೊಡ್ಡ ಬಡಿಗೆಯನ್ನು ಕಟ್ಟಿಕೊಂಡು ಅದರ ಊದ್ದಕ್ಕೆ ವಿವಿಧ ಗಾತ್ರಗಳ ಮಡಿಕೆಯನ್ನು ತ್ತೋಗುಬಿಟ್ಟುಕೊಂಡು ಬರುತ್ತಿದ್ದರು. ಬರಬಳ್ಳಿ ಹಾಗೂ ಸುತ್ತಲಿನ ಊರುಗಳಲ್ಲಿ ಈ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಅದರ ಜೊತೆಗೆ ವಿವಿಧ ಬಗೆಯ ತರಕಾರಿ, ಮೆಣಸು, ಮದ್ದುಗಳನ್ನು ಕೂಡ ತಂದು ಮಾರಾಟ ಮಾಡಿ ಕೊಂಚ ಕಾಸು ಮಾಡಿಕೊಳ್ಳುತ್ತಿದ್ದರು. 

ವಾಪಸು ಹೋಗುವಾಗ ಬರಬಳ್ಳಿಗರ ಮಲೆನಾಡು ಗಿಡ್ಡ ತಳಿಯ ರಾಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಈ ದನಗಳು ಮುಂದಿನ ಆರು-ಎಂಟು ತಿಂಗಳುಗಳ ಕಾಲ ದೇವಕಾರು, ಹೆಬ್ಬಗುಳಿ, ಕೈಗಾ ಗೌಡರುಗಳ ಕೊಟ್ಟಿಗೆಯಲ್ಲಿ ಜೀವನ ಸವೆಸಬೇಕಿತ್ತು. ಅವುಗಳನ್ನು ನೋಡಿಕೊಳ್ಳುವ ಜೊತೆಗೆ ಈ ದನಗಳ ಸಂತಾನೋತ್ಪತ್ತಿ ಕಾರ್ಯ ಮಾಡಿಸಿ, ಅವುಗಳು ಕರು ಹಾಕುವ ತನಕದ ಕಾರ್ಯ ಈ ಗೌಡರದ್ದಾಗಿತ್ತು. ಇದಕ್ಕೆ ಪ್ರತಿಯಾಗಿ ಬರಬಳ್ಳಿಗರು ದುಡ್ಡು ಕೊಡುತ್ತಿದ್ದರು. ಅಲ್ಲದೆ ಗಂಡುಗರು ಹುಟ್ಟಿದರೆ ಅದನ್ನು ಉಚಿತವಾಗಿ ಗೌಡರಿಗೆ ನೀಡುತ್ತಿದ್ದರು. ಹೆಣ್ಣು ಕರು ಹಾಕಿದರೆ ವಿಶೇಷ ಬಳುವಳಿ ಕೂಡ ಸಿಗುತ್ತಿತ್ತು. ಇದರ ಜೊತೆಗೆ ಈ ಜಾನುವಾರುಗಳ ಸಗಣಿ, ಗೊಬ್ಬರಗಳು ಗೌಡರ ಪಾಲಿಗೆ ವಿಶೇಷ ಆದಾಯ ತರುತ್ತಿದ್ದವು. ತಮ್ಮ ತೋಟಕ್ಕೆ ಇವುಗಳನ್ನು ಬಳಸುವ ಜೊತೆಗೆ ಗೊಬ್ಬರ ಮಾರಾಟ ಮಾಡಿ ಆದಾಯವನ್ನು ಮಾಡಿಕೊಳ್ಳುತ್ತಿದ್ದರು.

ಇಷ್ಟಲ್ಲದೆ ಬರಬಳ್ಳಿಗರ ಎತ್ತುಗಳು, ಹೋರಿಗಳನ್ನೂ ಈ ಗೌಡರು ಸಾಕುತ್ತಿದ್ದರು. ಬೇಸಿಗೆ ವೇಳೆಗೆ ಬರಬಳ್ಳಿಗೆ ಎಡತಾಕುವ ಗೌಡರುಗಳು ಬಯಲುಗದ್ದೆಯನ್ನು ಹೂಡುವ ಕಾರ್ಯವನ್ನೂ ಕೈಗೊಳ್ಳುತ್ತಿದ್ದರು. ಹೀಗೆ ಬರಬಳ್ಳಿಗರ ಪಾಲಿಗೆ ಕೈಗಾ, ಹೆಬ್ಬಗುಳಿ, ದೇವಕಾರು ಗ್ರಾಮದ ನಿವಾಸಿಗಳು ಅನಿವಾರ್ಯವಾಗಿದ್ದರು. ಆ ಗ್ರಾಮಗಳವರಿಗೆ ಬರಬಳ್ಳಿಯವರೂ ಕೂಡ ಅಷ್ಟೇ ಅಗತ್ಯವಾಗಿದ್ದರು. ಪರಸ್ಪರ ಸಹಕಾರ ಶತ ಶತಮಾನಗಳಿಂದ ಬೆಳೆದುಬಂದಿತ್ತು.

ಗುಡ್ಡೆ ಗಣಪತಿ ಭಟ್ಟರ ಹತ್ತಾರು ಕಾಲ್ನಡೆಗಳನ್ನು ದೇವಕಾರಿನ ಗೌಡನೊಬ್ಬ ಹೊಡೆದುಕೊಂಡು ಹೋಗಿದ್ದ. ಹೀಗಾಗಿ ಭಟ್ಟರ ಮನೆಯಲ್ಲಿ ನಿತ್ಯ ಪೂಜೆಗೆ ಹಾಲು, ಹೈನಿಗಾಗಿ ಒಂದೆರಡು ಆಕಳುಗಳು ಮಾತ್ರ ಇದ್ದವು. ಭಟ್ಟರದ್ದೇ ಎಡಿಎ ಒಂದು ಎತ್ತಿನ ಜೋಡಿಯೂ ದೇವಕಾರಿನ ಬಯಲು ಸೇರಿತ್ತು. ಕಾರವಾರದಿಂದ ವಾಪಸು ಬರುವಾಗ ದೇವಕರಿಗೆ ತೆರಳಿ ತಮ್ಮ ಮನೆಯ ರಾಸುಗಳನ್ನು ನೋಡಿ ಬರಬೇಕು ಎಂದು ಭಟ್ಟರು ಅಂದುಕೊಂಡಿದ್ದರು. ಆದರೆ ಹೀಗೆ ಭಟ್ಟರು ದೇವಕರಿಗೆ ಹೋಗಿ ಬರಬೇಕು ಎಂದು ನಿಶ್ಚಯಿಸಿದ್ದೆ ಅವರ ಬದುಕಿನಲ್ಲಿ ಎಂದೂ ಮರೆಯಲಾಗದ ಅಪರೂಪದ ಘಟನೆಗೆ ಸಾಕ್ಷಿಯಾಗಲಿತ್ತು..


(ಮುಂದುವರಿಯುತ್ತದೆ..)

Thursday, June 1, 2023

ಪಾರು (ಕಥೆ)

``ಸಾವಿತ್ರಿ, ನಾಳೆ ಆನು ಕಾರವಾರಕ್ಕೆ ಹೋಗಿ ಬರ್ತಿ. ಮಠದಗಡ್ಡೆದು ಕಾಗದಪತ್ರದ ಕೆಲಸ ಇದ್ದು ಬಿಲ್ಯ. ಉದಿಯಪ್ಪಾಗ ಹೋಗಿ ಕಾರವಾರದ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮುಗ್ಸಿ ಬರ್ತೆ. ನಾಳೆ ಕಾರವರದಲ್ಲೇ ಉಳ್ಕಂಬುದು ಬಂದ್ರು ಬಂತು ಬಿಲ್ಯ. ನಾಡಿದ್ದು ಸಂಜೇಗೆಲ್ಲ ಮನಿಗೆ ಬರ್ತಿ'' ಎಂದು ಮಡದಿ ಅಮ್ಮಕ್ಕಳ ಬಳಿ ಗಣಪತಿ ಭಟ್ಟರು ಹೇಳುವ ವೇಳೆಗಾಗಲೇ ಬಾನಿನಲ್ಲಿ ಕತ್ತಲಾಗಿತ್ತು.

ಮರುದಿನ ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ಕಾರವಾರದ ಕಡೆಗೆ ಹೊರಡುವ ಪತಿಯ ಬೆಳಗಿನ ಆಸ್ರಿಗೆಗಾಗಿ ತಯಾರಿ ಮಾಡುವಲ್ಲಿ ಅಮ್ಮಕ್ಕ ತೊಡಗಿಕೊಂಡಳು. ಭಟ್ಟರು ಸಾಯಿಂಕಾಲದ ಅನುಷ್ಠಾನಕ್ಕೆ ತೆರಳಿದರು.

ಮರುದಿನದ ಕಾರವಾರದ ಕಡೆಗಿನ ಭಟ್ಟರ ಪ್ರಯಾಣ, ಅವರ ಬದುಕಿನ ಅನೂಹ್ಯವಾದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ ಎನ್ನುವುದರ ಸಣ್ಣ ಕುರುಹೂ ಕೂಡ ಅವರಿಗಿರಲಿಲ್ಲ. ಬದುಕಿನಲ್ಲಿ ಹಲವು ತಿರುವುಗಳನ್ನು ಕಂಡಿದ್ದ ಭಟ್ಟರು ಇನ್ನೊಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದರು. 


******


ಭರತಖಂಡ ಭಾರತವರ್ಷಕ್ಕೆ ಹಸಿರ ಸೀರೆಯನ್ನು ಉಟ್ಟಂತೆ ಹಾದುಹೋಗಿದೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿಯ ಸಾಲು. ಈ ಸಹ್ಯಾದ್ರಿಯ ಮಡಿಲಿನಲ್ಲಿ ಕರಿಬಣ್ಣವನ್ನು ಹೊಂದಿ ಮೈಮನಗಳಲ್ಲಿ ಭಯವನ್ನು ಹುಟ್ಟಿಸುತ್ತ ಹರಿದುಹೋಗುತ್ತಿದೆ ಕಾಳಿನದಿ. 

ಜೋಯಿಡಾದ ಕಾಡಿನ ನಡುವೆಯೆಲ್ಲೋ ಹುಟ್ಟಿ ಕಡವಾಡದ ಬಳಿ ಸಮುದ್ರ ಸೇರುವ ಮೊದಲು ಅದೆಷ್ಟೋ ಪ್ರದೇಶಗಳನ್ನು ಬಳಸಿ, ಹಾದು ಹೋಗುವ ಕಾಳಿನದಿ ಸಾವಿರಾರು ಕುಟುಂಬಗಳ ಪಾಲಿಗೆ ಜೀವ ನದಿಯೂ ಹೌದು. ಮಳೆಗಾಲದಲ್ಲಿ ಅದೆಷ್ಟೋ ಜನರ ಬದುಕುಗಳನ್ನು ದುರ್ಭರ ಮಾಡಿದ ಕಣ್ಣೀರ ನದಿಯೂ ಹೌದು. ಇಂತಹ ಕರಿ ಕಾಳಿ ನದಿಯ ಆಗ್ನೇಯ ದಿಕ್ಕಿನ ದಡದಲ್ಲಿ ಇರುವ ಊರು ಬರಬಳ್ಳಿ. ಮೂರು ದಿಕ್ಕುಗಳಲ್ಲಿ ಎತ್ತರದ ಘಟ್ಟ, ದಟ್ಟ ಕಾಡು. ಇನ್ನೊಂದು ಕಡೆಯಲ್ಲಿ ಕಾಳಿ ನದಿ. ಅಡಿಕೆ, ತೆಂಗು ಮುಖ್ಯ ಬೆಳೆಗಳಾದರೂ, ಕೆಲವರು ಭತ್ತ ಬೆಳೆಯುತ್ತಾರೆ. ಮಾವು ಹಲಸುಗಳು ಹುಲುಸಾಗಿ ಬೆಳೆಯುತ್ತವೆ. ಹಣ್ಣು ಹಂಪಲುಗಳಿಂದ ತುಂಬಿಕೊಂಡು, ಎಂದೂ ಬರಿದಾಗದಂತಹ ಹಳ್ಳಿ. ಸಾತೊಡ್ಡಿಯಿಂದ ಹಿಡಿದು ಕೊಡಸಳ್ಳಿಯ ತನಕ ಬೆಳೆದು ನಿಂತಿದ್ದ ಊರು ಅದು.

ದಟ್ಟ ಕಾಡಿನ ನಡುವೆ ನಾಲ್ಕೈದು ಕಿಲೋಮೀಟರುಗಳಷ್ಟು ಅಗಲವಾಗಿ ಹಬ್ಬಿ 400 ಕುಟುಂಬಗಳನ್ನು ಹೊಂದಿರುವ ಈ ಬರಬಳ್ಳಿಯ ಆರಾಧ್ಯದೈವ ಬಲಮುರಿ ಗಣಪತಿ. ಭಕ್ತಿಯಿಂದ ಬೇಡಿಕೊಂಡವರನ್ನು ಸದಾಕಾಲ ಹರಸುವ, ಕಾಪಾಡುವ ದೇವರು.

ಈ ಬಲಮುರಿ ಗಣಪತಿಗೆ ನಿತ್ಯಪೂಜೆ ಗಣಪತಿ ಭಟ್ಟರ ಕೈಯಿಂದಲೇ ನಡೆಯಬೇಕಿತ್ತು. ದೇವಸ್ಥಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಗುಡ್ಡೇಮನೆಯಿಂದ ಆಗಮಿಸುವ ಗಣಪತಿ ಭಟ್ಟರು ದಿನನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುತ್ತಿದ್ದರು.

ಜೀವನದ ಮಧ್ಯಘಟ್ಟವನ್ನು ತಲುಪಿದ್ದ ಗಣಪತಿ ಭಟ್ಟರ ಮಡದಿಯೇ ಅಮ್ಮಕ್ಕ. ಭಟ್ಟರು ತಮ್ಮ ಮಡದಿಯನ್ನು ಪ್ರೀತಿಯಿಂದ ಸಾವಿತ್ರಿ ಎಂದೇ ಸಂಬೋಧಿಸುತ್ತಿದ್ದರು. ಈ ದಂಪತಿಗಳಿಗೆ ಪರಮೇಶ್ವರ, ಶಂಕರ ಹಾಗೂ ಮೂಕಾಂಬಿಕಾ ಎನ್ನುವ ಮೂವರು ಮಕ್ಕಳು. ಇವರಲ್ಲಿ ಪರಮೇಶ್ವರನಿಗೆ ನಾಲ್ಕೈದು ವರ್ಷ ವಯಸ್ಸಾಗಿದ್ದರೆ, ಪರಮೇಶ್ವರನಿಗಿಂತ ಶಂಕರ ಒಂದೂವರೆ ವರ್ಷ ಚಿಕ್ಕವನು. ಶಂಕರನಿಗಿಂತ ಎರಡು ವರ್ಷ ಚಿಕ್ಕವಳಾದ ಮೂಕಾಂಬಿಕೆ ಆಗಿನ್ನೂ ಅಂಬೆಗಾಲಿಡುತ್ತಿದ್ದ ಕೂಸು. ಗಣಪನ ಪೂಜೆ, ಮಠದಗದ್ದೆಯಲ್ಲಿ ದುಡಿತ, ಗುಡ್ಡೇಮನೆಯಲ್ಲಿ ಸಂಸಾರ ಹೀಗೆ ಸಾಗುತ್ತಿದ್ದಾಗಲೇ ತುರ್ತು ಕಾಗದಪತ್ರದ ಜರೂರತ್ತು ಗಣಪತಿ ಭಟ್ಟರಿಗೆ ಒದಗಿಬಂದಿತ್ತು. ಅದಕ್ಕಾಗಿ ಕಾರವಾರಕ್ಕೆ ಹೊರಟಿದ್ದರು.


****


ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಆಸ್ರಿಗೆ ಕುಡಿದು, ಮಡದಿ ಕಟ್ಟಿಕೊಟ್ಟ ತುತ್ತಿನ ಚೀಲವನ್ನು ಗಂಟಿನಲ್ಲಿ ಹಾಕಿ ಭುಜಕ್ಕೇರಿಸಿ ಬರಿಗಾಲಿನಲ್ಲಿ ಮನೆಯಿಂದ ಹೋರಾಟ ಗಣಪತಿ ಭಟ್ಟರು ಕಾರವಾರವನ್ನು ತಲುಪಲು ಹರಸಾಹಸ ಪಡಬೇಕಿತ್ತು.

ಕಾರವಾರಕ್ಕೆ ತಾವೂ ಬರುತ್ತೇವೆ, ತುರ್ತಿನ ಕೆಲಸವಿದೆ ಎಂದು ಹೇಳಿದ್ದರಿಂದ ತಮ್ಮದೇ ಊರಿನ ಚಿದಂಬರ, ನಾರಾಯಣ ಹಾಗೂ ಇನ್ನಿತರರ ಮನೆಯ ಕಡೆ ಭಟ್ಟರು ಎಡತಾಕಿದರು. ದಟ್ಟಕಾಡಿನ ನಡುವೆ, ಕಾಡುಪ್ರಾಣಿಗಳ ಹಾವಳಿಯ ನಡುವೆ ಒಬ್ಬರೇ ಸಾಗುವುದಕ್ಕಿಂತ ಗುಂಪಾಗಿ ತೆರಳುವುದು ಲೇಸು ಎನ್ನುವ ಕಾರಣಕ್ಕಾಗಿ ಭಟ್ಟರು ತಮ್ಮ ಸಹವರ್ತಿಗಳ ಜತೆ ಸೇರಿದ್ದರು.


(ಮುಂದುವರಿಯುವುದು)

Thursday, August 18, 2022

ಗಾಳಿಪಟ-2 ಮೂಲಕ ಮತ್ತೆ ಮೋಡಿ ಮಾಡಿದ ಯೋಗರಾಜ್ ಭಟ್-ಗಣೇಶ್(ನಾನು ನೋಡಿದ ಚಿತ್ರಗಳು -7)

ಇತ್ತೀಚಿನ ದಿನಗಳಲ್ಲಿ ನೋಡಲೇಬೇಕು ಅನ್ನಿಸಿ ಕಾದು ಕಾದು ನೋಡಿದ ಸಿನಿಮಾ ಅಂದರೆ ಅದು ಗಾಳಿಪಟ 2. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ ಚಿತ್ರ ಎನ್ನುವುದು ಈ ಚಿತ್ರದ ಕಡೆಗೆ ಇದ್ದ ಮೊದಲ ಕಾರಣವಾಗಿದ್ದರೆ, ಗಾಳಿಪಟ ಸಿನಿಮಾದ ಮೊದಲ ಭಾಗಕ್ಕೆ ಸಿಇಕ್ವೆಲ್ ಬರುತ್ತಿದೆ ಎನ್ನುವುದು ಇನ್ನೊಂದು ಕಾರಣ.

ಸಿನಿಮಾದಲ್ಲಿ ಬಹಳಷ್ಟು ಇಷ್ಟವಾದವು. ಕೆಲವಷ್ಟು ಕಷ್ಟವಾದವು. ಸಿನಿಮಾದಲ್ಲಿ ನಮಗೆ ಇಷ್ಟವಾಗಲು ಹಲವು ಸಂಗತಿಗಳಿವೆ. ಅದರಲ್ಲಿ ಮೊದಲನೆಯದು ಯೋಗರಾಜ್ ಭಟ್ ಅವರ ನವಿರಾದ ಚಿತ್ರಕಥೆ. ಸರಳ ಕಥಾ ಹಂದರ. 

ಮೊದಲ ಭಾಗದಲ್ಲಿ ಮುಗಿಲು ಪೇಟೆಯನ್ನು ನೋಡಿದ್ದ ನಾವು ಇಲ್ಲಿ ನೀರು ಕೋಟೆಯನ್ನು ನೋಡುತ್ತೇವೆ, ಅದೇ ರೀತಿ ಟರ್ಕಿ ದೇಶದ ಹಿಮದ ಸಾಲಿನ ಮೇಲೆ ಓಡಾಡುತ್ತೇವೆ. ನೀರು, ಐಸು, ಆಗೊಮ್ಮೆ ಈಗೊಮ್ಮೆ ಬರುವ ಬೆಂಗಾಡಿನ ಪ್ರದೇಶ ಇವೆಲ್ಲವೂ ಸೆಳೆಯುತ್ತವೆ. ಆದರೆ ಸಿನಿಮಾದ ಮೊದಲರ್ಧ ಸ್ವಲ್ಪ ಸುದೀರ್ಘವಾಯಿತು ಎನ್ನಿಸುತ್ತದೆ. ಅಲ್ಲದೆ ಮೊದಲಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಬರುವ ಹಾಡುಗಳು ಕಥೆಯ ಓಟಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ.

ಗಣೇಶ್ ಹಾಗೂ ದಿಗಂತ್ ಕಾಲೇಜಿಗೆ ಮರಳಿ ಬರಲು ಕಾರಣಗಳಿದ್ದವು. ಆದರೆ ಪವನ್ ಯಾಕೆ ಬಂದರು ಎನ್ನುವುದು ಗೊತ್ತಾಗಲಿಲ್ಲ. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಾದ ಮೇಲೆ ಗಣೇಶ್ ನಾಯಕಿಯನ್ನು ಪಟಾಯಿಸಲು ನದಿಯಲ್ಲಿ ಈಜು ಬರದಂತೆ ನಟಿಸುವ ಸನ್ನಿವೇಶವೊಂದಿದೆ. ಪಕ್ಕದಲ್ಲೇ ಸೇತುವೆ ಇದ್ದರೂ ನಾಯಕ, ನಾಯಕಿ ನದಿಯೊಳಕ್ಕೆ ಇಳಿದು ದಾಟಲು ಹೊರಟಿದ್ದು ಸ್ವಲ್ಪ ವಿಚಿತ್ರ ಅನ್ನಿಸಿತು. 

ಇನ್ನು ಹಾಡುಗಳಂತೂ ಆಹಾ. ಜಯಂತ್ ಕಾಯ್ಕಿಣಿ ಬರೆದ ನೀನು ಬಗೆಹರಿಯದ ಹಾಡು, ನಾನಾಡದ ಮತ್ತೆಲ್ಲವ ಕದ್ದಾಲಿಸು ಹಾಗೂ ಯೋಗರಾಜ್ ಭಟ್ಟರು ಬರೆದ ನಾವು ಬದುಕಿರಬಹುದು ಪ್ರಾಯಶಃ ಈ ಹಾಡುಗಳಂತೂ ಪದೇ ಪದೇ ಗುನುಗುವಂತೆ ಮಾಡುತ್ತವೆ. ಭಟ್ಟರು ಬರೆದ ದೇವ್ಲೇ ದೇವ್ಲೇ ಹಾಡಂತೂ ಪಡ್ಡೆ ಹುಡುಗರ ಪಾಲಿಗೆ ಒಳ್ಳೆಯ ಕಿಕ್ ನೀಡುತ್ತದೆ. ಹಾಗೆಯೆ ಎಕ್ಸಾಂ ಕುರಿತಾದ ಹಾಡು ಸಹ ಇಷ್ಟವಾಗುತ್ತವೆ. ಗಣೇಶ್ ಮಗ ವಿಹಾನ್ ದು ಇಲ್ಲಿ ಚಿಕ್ಕ ಪಾತ್ರ. ಒಳ್ಳೆಯ ಎಂಟ್ರಿ. ಇನ್ನು ವಿಜಯ್ ಸೂರ್ಯ ಮಾತ್ರ ಸರ್ಪ್ರೈಸ್ ಎಂಟ್ರಿ.

ಸಿನಿಮಾ ಲೊಕೇಷನ್ನುಗಳು ಬಹಳ ಚನ್ನಾಗಿದೆ. ಕುದುರೆಮುಖ, ಟರ್ಕಿ ಇತ್ಯಾದಿ ಸ್ಥಳಗಳು ಕಣ್ಣಿಗೆ ಮುದ ನೀಡುತ್ತವೆ. ಆದರೆ ಚಿತ್ರದಲ್ಲಿ ಜೋಗ ಜಲಪಾತವನ್ನು ಸುಮ್ಮನೆ ಮೂರು ಸೆಕೆಂಡ್ ಕಾಲ ತೋರಿಸಿದರು ಅಷ್ಟೇ. ಜೋಗ ಜಲಪಾತವಲ್ಲದೆ ಬೇರೆ ಯಾವುದೇ ಜಲಪಾತ ತೋರಿಸಿದ್ದರೂ ಯಾವೂದೇ ನಷ್ಟವಿರಲಿಲ್ಲ. 

ಕಾರಣಾಂತರಗಳಿಂದ ಕಾಲೇಜಿಗೆ ಬಂದು ಕನ್ನಡ ಕಲಿಯಲು ಮುಂದಾಗುವ ಮೂವರು ಯುವಕರು, ಅವರಿಗೊಬ್ಬ ಕನ್ನಡ ಲೆಕ್ಚರು, ಆ ಲೆಕ್ಚರ್ ಗೆ ಒಬ್ಬ ಕಾಣೆಯಾದ ಮಗ.. ಇಂತಹ ಕಥಾ ಹಂದರದಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ನಗೆಯ ಚಿಲುಮೆಯೇ ಇದೆ. ಭಾವನಾತ್ಮಕ ಸನ್ನಿವೇಶಗಳಿವೆ, ತಾಯಿಯ ಪ್ರೀತಿ ಇದೆ. ಗುರು - ಶಿಷ್ಯರ ಅವಿನಾಭಾವ ಸಂಬಂಧವೂ ಇದೆ. ಎರಡು ಮೂರು ಸಾಧಾರಣ ಚಿತ್ರಗಳನ್ನು ಮಾಡಿದ್ದ ಯೋಗರಾಜ ಭಟ್ಟರು ಇನ್ನೊಮ್ಮೆ ಒಳ್ಳೆಯ ಕಥೆಯ ಮೂಲಕ ಮರಳಿ ಬಂದಿದ್ದಾರೆ. 

ಇನ್ನು ನಟನೆ ವಿಷಯಕ್ಕೆ ಬಂದರೆ ಹಲವಾರು ಫುಲ್ ಮಾರ್ಕ್ಸ್ ಪಡೆಯುತ್ತಾರೆ. ಕನ್ನಡ ಲೆಕ್ಚರ್ ಪಾತ್ರಧಾರಿ ಅನಂತ್ ನಾಗ್ ಅಂತೂ ವಾಹ್.. ಅವರ ಅಭಿನಕ್ಕೆ ಸಾಟಿಯೇ ಇಲ್ಲ. ಇನ್ನು ಗಣೇಶ್. ಇಂದಿನ ತಮ್ಮ ನಗಿಸುವ, ನಗಿಸುತ್ತಲೇ ಅಳಿಸುವ ಪಾತ್ರದಲ್ಲಿ ಮತ್ತೊಮ್ಮೆ ಮೋದಿ ಮಾಡಿದ್ದಾರೆ. ಗಂಭೀರ ಪಾತ್ರದಲ್ಲಿ ಪವನ್ ಇಷ್ಟವಾಗುತ್ತಾರೆ. ಗಣೇಶ್ ಅಂತಹ ಕಚಗುಳಿ ನಟರು ಇದ್ದರೂ ಸಿನಿಮಾದಲ್ಲಿ ಅತ್ಯಂತ ಹೆಚ್ಚು ನಗಿಸುವವರು ದಿಗಂತ್. ದಿಗಂತ್ ಅವರನ್ನು ಅಘೋರಿ ರೂಪದಲ್ಲಿ ನೋಡುವುದೇ ಮಜಾ. ದಿಗಂತ್ ತೆರೆಯ  ಮೇಲೆ ಇದ್ದಷ್ಟು ಹೊತ್ತು ನಗುವಿಗೆ ನಗುವಿಗೆ ಕೊರತೆಯೇ ಇಲ್ಲ. ರಂಗಾಯಣ  ರಘು, ಸುಧಾ ಬೆಳವಾಡಿ, ಪದ್ಮಜಾ, ಶ್ರೀನಾಥ್ ಅವರುಗಳು ಬಹಳ ಇಷ್ಟವಾಗುತ್ತಾರೆ. ಬುಲೆಟ್ ಪ್ರಕಾಶ್ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ವೈಭವೀ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 

ಪ್ಯಾನ್ ಇಂಡಿಯಾ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಇತ್ಯಾದಿ ಸಿನಿಮಾಗಳಗಳ ಅಬ್ಬರಗಳ ನಡುವೆ ಅಚ್ಚ ಕನ್ನಡದ ಸಿನಿಮಾ ಬಹಳ ಇಷ್ಟವಾಗುತ್ತದೆ. ಈ ನೋಡುಗರಿಗಂತೂ ಪೈಸೆ ವಸೂಲ್ ಪಕ್ಕಾ. ಸಾಧ್ಯವಾದರೆ ಸಿನಿಮಾ ಮಂದಿರಗಳಿಗೆ ತೆರಳಿ ಈ ಚಿತ್ರ ವೀಕ್ಷಿಸಿ.

Sunday, August 7, 2022

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (ನಾನು ನೋಡಿದ ಚಿತ್ರಗಳು -6)

 ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳನ್ನು ನಾನು ನೋಡಿದ್ದರೂ, ಕನ್ನಡ ಭಾಹೆಯ ಸಿನಿಮಾ ನೋಡಿದ್ದು ಒಂದೇ ಒಂದು. ಅದೇ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ. ಈ ಸಿನಿಮಾ ಬಿಡುಗಡೆಯಾದ ವೇಳೆ ನಾನು ಶಿರಸಿಯ ನಟರಾಜ ಟಾಕೀಸಿನಲ್ಲಿ ಇದನ್ನು ನೋಡಬೇಕು ಎಂದುಕೊಂಡಿದ್ದೆ. ಕೊನೆಗೂ ಆ ಟಾಕೀಸಿಗೆ ಈ ಸಿನಿಮಾ ಬರಲೇ ಇಲ್ಲ. ಕೊನೆಗೆ OTT ಯಲ್ಲಿ ನೋಡಿದ್ದಾಯ್ತು.

ವಿನಾಯಕ ಕೋಡ್ಸರ ಅವರ ಹಲವು ಪ್ರಯತ್ನಗಳಲ್ಲಿ ಇದೂ ಒಂದು. ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಸಿನಿಮಾ ಹಲವು ವಿಷಯಗಳಲ್ಲಿ ಆಪ್ತ ಎನ್ನಿಸಿತು.
2300 ಈಗಿನ ದಿನಮಾನದಲ್ಲಿ ತೀರಾ ದೊಡ್ಡ ಮೊತ್ತವೇನಲ್ಲ. ಕೇವಲ 2300 ರೂಪಾಯಿಗೆ ನಾಯಕ ಅಷ್ಟೆಲ್ಲ ಒದ್ದಾಡುತ್ತಾನಾ ಎನ್ನುವ ಭಾವನೆ ನನ್ನ ಮನಸ್ಸಿನಲ್ಲಿ ಕಾದಿದ್ದು ಸುಳ್ಳಲ್ಲ. ಕೇವಲ 2300 ರೂಪಾಯಿಗಾಗಿ ನಾಯಕ ಹೋರಾಟ ನಡೆಸುವ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ, ಲಕ್ಷ, ಕೋಟಿಗಳಲ್ಲಿ ಹಣ ಲೆಖ್ಖ ಮಾಡುವ ದಿನಮಾನದಲ್ಲಿ ನಿರ್ದೇಶಕರು ಸಾವಿರ ರೂಪಾಯಿಗಾಗಿ ಹೋರಾಡುವ ಕಥೆ ಮಾಡಿದ್ದೂ ಸರಿಯಲ್ಲ ಎನ್ನುವ ಭಾವನೆ ಸಿನಿಮಾ ನೋಡುವಾಗ ನನಗೆ ಅನ್ನಿಸಿದ್ದು ಸುಳ್ಳಲ್ಲ. ಆದರೆ ಸಿನಿಮಾ ಮುಂದುವರಿದಂತೆಲ್ಲ ಈ ಭಾವನೆಗಳು ಬದಲಾದವು.
ನನ್ನ ಪರಿಚಯದ ಗೆಳೆಯನೊಬ್ಬ ಸೈಬರ್ ಜಾಲಕ್ಕೆ ಸಿಲುಕಿ ಅಪಾರ ಹಣ ಕಳೆದುಕೊಂಡಿದ್ದ. ಆ ವೇಳೆ ಅನೇಕರು ಸೈಬರ್ ಜಾಲದಲ್ಲಿ ಸಿಲುಕಿ ಕಳೆದುಕೊಂಡ ಹಣ ಯಾವತ್ತೂ ಮರಳಿ ಬರುವುದಿಲ್ಲ ಎಂದಿದ್ದರಂತೆ. ಆದರೆ ಆ ಗೆಳೆಯ ಪೊಲೀಸ್ ಕಂಪ್ಲೇಂಟ್ ಕೊಟ್ಟು, ನ್ಯಾಯಾಲಯದ ಮೆಟ್ಟಿಲು ಏರಿ, ಹಲವು ತಿಂಗಳುಗಳ ಕಾಲ ಪೊಲೀಸ್ ಸ್ಟೇಷನ್ ಹಾಗೂ ಬ್ಯಾಂಕ್ ಮೆಟ್ಟಿಲು ಸವೆಸಿ ಕೊನೆಗೂ ಆ ಹಣವನ್ನು ಖದೀಮರಿಂದ ವಾಪಾಸ್ ಕಕ್ಕಿಸುವಲ್ಲಿ ಯಶಸ್ವಿಯಾಗಿದ್ದ. ಈ ಸಿನಿಮಾ ನೋಡಿದ ತಕ್ಷಣ ಆ ಗೆಳೆಯನ ಬಳಿ, `ಇದು ನಿನ್ನದೇ ಕಥೆ' ಎಂದಿದ್ದೆ.
ಮಲೆನಾಡು, ಶರಾವತಿ ನದಿ, ಅಡಿಕೆ ಕೊಯ್ಲು, ಹವ್ಯಕ ಸಂಸ್ಕೃತಿ ಹೀಗೆ ಹಲವು ವಿಷಯಗಳಲ್ಲಿ ಸಿನಿಮಾ ಬಹಳ ಆಪ್ತವಾಯಿತು. ನನ್ನ ಇಷ್ಟದ ನಟರಲ್ಲಿ ಒಬ್ಬನಾದ ದಿಗಂತ್ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾನೆ. ಐಂದ್ರಿತಾ ಕೂಡ ಸೊಗಸಾಗಿ ನಟಿಸಿದ್ದಾಳೆ. ನಮ್ಮ ನಡುವೆಯೇ ಇದ್ದು, ಆಗಾಗ ಭೇಟಿಯಾಗುವ ಗೋಕರ್ಣ ಪುರಾಣದ ರೂವಾರಿ ಎಂ. ಎ. ಹೆಗ್ದೆಯವರದ್ದು ಅಚ್ಚರಿಯ ನಟನೆ. ಹಿತ್ಲಕೈ ಗಣಪತಿ ಭಟ್ಟರು, ವಿದ್ಯಾಮೂರ್ತಿ, ರಂಜಿನಿ ರಾಘವನ್, ಬಾಳೇಸರ ವಿನಾಯಕ ಹೀಗೆ ಎಲ್ಲರೂ ಲೀಲಾಜಾಲವಾಗಿ ನಟಿಸಿ ನೋಡುಗರನ್ನು ಖುಷಿ ಪಡಿಸುತ್ತಾರೆ.
ವಿನಾಯಕ ಕೋಡ್ಸರ ಅವರ ಮೊದಲ ಸಿನಿಮಾ ಇದಾಗಿರುವ ಕಾರಣ ಸಿನಿಮಾದಲ್ಲಿ ಇರುವ ಕೆಲವು ಚಿಕ್ಕಪುಟ್ಟ ಲೋಪ ದೋಷಗಳಿಗೆ ಮಾಫಿ. ಬೇರೆ ರೀತಿಯ ಮಾತು, ಸಂಸ್ಕೃತಿ, ಆಚರಣೆ, ನಡೆ ನುಡಿಯನ್ನು ಹೊಂದಿರುವ ಹವ್ಯಕರ ಬದುಕನ್ನು ಬಹಳ ಚನ್ನಾಗಿ ಚಿತ್ರಿಸಿದ್ದಾರೆ. ಮಲೆನಾಡಿಗೆ ಬಹಳಷ್ಟು ಬಣ್ಣ ತುಂಬಿದ್ದಾರೆ. ಇವರ ಮುಂದಿನ ಚಿತ್ರ ಯಾವುದಿರಬಹುದು? ಮಲೆನಾಡಿನ ಆಚೆಗಿನ ಚಿತ್ರವನ್ನು ಮಾಡಬಹುದೇ ಎನ್ನುವ ಕುತೂಹಲ ಇದೆ.
ನಮ್ಮೂರ ಮಂದಾರ ಹೂವೆ ಸಿನಿಮಾದ ನಂತರ ಮತ್ತೊಮ್ಮೆ ಈ ಚಿತ್ರ ಹವ್ಯಕರ ಸಂಸ್ಕೃತಿ ಅನಾವರಣ ಮಾಡಿದೆ ಅನ್ನುವುದನ್ನು ಹೆಮ್ಮೆಯಿಂದ ಹೇಳಬಹುದು. ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದೆ. ಇನ್ನೂ ನೋಡಿಲ್ಲ ಅಂದ್ರೆ ತಪ್ಪದೆ ನೋಡಿ.