ನನ್ನಿಂದ ಮೊಟ್ಟ ಮೊದಲ ಕಾದಂಬರಿ ಪುಸ್ತಕವನ್ನು ಕೊಂಡು, ಆಟೋಗ್ರಾಫ್ ಕೂಡ ಹಾಕಿಸಿಕೊಂಡು, ಓದಿ ಅಭಿಪ್ರಾಯ ತಿಳಿಸಿದವರು ಗುರುವರ್ಯ ಶಿವರಾಮ ಕಾನಸೇನ್ ಅವರು. ಸಹೋದರ ಗುರುಪ್ರಸಾದ ಕಲ್ಲಾರೆ ಅವರಿಂದ ಪರಿಚಿತರಾದ ಶಿವರಾಮ ಕಾನಸೇನ್ ಅವರು ಆಗಾಗ ನನ್ನ ಜತೆ ಹಲವು ಸಾಹಿತ್ಯ ವಿಷಯಗಳನ್ನು ಹಂಚಿಕೊಂಡವರು. ಬೆಂಗಾಲಿ ಬೆಡಗಿ ಕಾದಂಬರಿ ಓದುವ ಸಂದರ್ಭದಲ್ಲಿಯೂ `ವಿನಯ್, ನೀವು ಬಾಂಗ್ಲಾಕ್ಕೆ ಹೋಗಿದ್ದಿರಾ?’ ಎಂದು ಕೇಳಿ, ನಾನು ಹೋಗಿಲ್ಲ ಎಂದಾಗ, ನಂಬಲಿಕ್ಕಾಗುತ್ತಿಲ್ಲ.. ನೀವು ಹೋಗಿ ಬರೆದಂತಿದೆ ಎಂದಿದ್ದವರು.
ಅವರು ನನ್ನ ಬೆಂಗಾಲಿ
ಬೆಡಗಿ ಕಾದಂಬರಿಯನ್ನು ಓದಿ ಅವರ ಅನಿಸಿಕೆಗಳನ್ನು ನನಗೆ ನೀಡಿದ್ದಾರೆ. ಅವನ್ನು ಯಥಾವತ್ ನಿಮ್ಮಮುಂದೆ
ಇಟ್ಟಿದ್ದೇನೆ.
“ಬೆಂಗಾಲಿ ಬೆಡಗಿ” ಕೇವಲ ಬೆರಗುಗೊಳಿಸುವ ಬೆಡಗಿನ ಹೆಣ್ಣೊಬ್ಬಳ ಕಥೆಯಲ್ಲ. ಅಥವಾ ಬೆಡಗಿಯೊಬ್ಬಳ ಹಿಂದೆ ಓಡುವ ಹುಂಬನ ಕಥೆಯಲ್ಲ. ಅವಿಭಜಿತ ವಂಗರಾಜ್ಯವೂ ಸೇರಿದಂತೆ ಅಖಂಡ ಭಾರತದ ಇತಿಹಾಸ, ಭೂಗೋಳ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತ್ಯಂತರಗಳ ಕಥನವಿದೆ. ದೇಶ-ನೆರೆದೇಶಗಳ ನಡುವಿನ ಕೊಡು-ಕೊಳ್ಳುವಿಕೆಯ ಹೊಣೆಗಾರಿಕೆಯೂ ಇದೆ. ಕ್ರೀಡಾಪ್ರೇಮಿಯೊಳಗೊಬ್ಬ ಸಾಹಿತ್ಯಪ್ರಿಯ ಇತಿಹಾಸಕಾರ ಅಡಗಿದ್ದರೆ “ಬೆಂಗಾಲಿ ಬೆಡಗಿ”ಯ ಹುಟ್ಟು ಸಾಧ್ಯವಾಗುತ್ತದೆ.
ಇಲ್ಲಿ ಕತೆಗಾರನಿಗೆ ಕಬಡ್ಡಿ ಒಂದು ನೆಪವಷ್ಟೇ. ಹಾಗಂತ ಕಬಡ್ಡಿಯನ್ನು ಆರಂಭದಲ್ಲೋ, ಮಧ್ಯದಲ್ಲೋ ಕೈಬಿಟ್ಟಿಲ್ಲ ಅಥವಾ ಕೊನೆಯಲ್ಲೆಲ್ಲೋ ಕಬಡ್ಡಿ-ಕಬಡ್ಡಿ ಅಂತಾ ಕೈ-ಕಾಲಾಡಿಸಲು ಮಾತ್ರ ಬಳಸಿಕೊಂಡಿಲ್ಲ. ಆರಂಭದಲ್ಲಿ “ಲೇ ಪುಳಿಚಾರು, ನೀ ಏನ್ ಕಬಡ್ಡಿ ಆಡ್ತೀಯೋ” ಎಂದವರೇ ಮುಂದೊಮ್ಮೆ “ಶಹಬ್ಬಾಸ್” ಎನ್ನುವಂತೆ ಕಬಡ್ಡಿಯ ರೈಡಿಂಗ್-ಕ್ಯಾಚಿಂಗ್-ಡಿಫೆನ್ಸ್ ಮುಂತಾಗಿ ಕಬಡ್ಡಿಯ ಸಕಲ ಆಯಾಮಗಳನ್ನೂ ದಾಖಲಿಸುವ ಕಥೆಗಾರ, ಬದುಕಿನ ಹಲವಾರು ಘಟ್ಟಗಳನ್ನು ಕಬಡ್ಡಿ ಆಟದ ರೀತಿಯಲ್ಲಿಯೇ ಎದುರಿಸುತ್ತಾನೆ.
ಉತ್ತರ ಕನ್ನಡದ ಹವಿಗನ್ನಡಿಗ ಮಾಣಿಯೊಬ್ಬ ಭಾರತದ ಕಬಡ್ಡಿಯಾಡುತ್ತಾ, ಪೂರ್ವದ ಡಾಕಿನಿಯ ಬಾಂಗ್ಲಾಕ್ಕೆ ಭೇಟಿ ನೀಡಿ, ಅಲ್ಲಿನ “ಹಡುಡು” ಹೆಸರಿನ ಕಬಡ್ಡಿ ಆಡುತ್ತಾ, ಅಖಂಡ ಭಾರತೀಯ ಮೂಲದ ಬೆಡಗಿಯೊಡನೆ ಬೆರೆಯುವ ವಿಶಿಷ್ಟ ಕಥಾಹಂದರ ಹಲವು ಆಯಾಮಗಳನ್ನು ತೆರೆದಿಡುತ್ತದೆ.
ಮಗನ ಕಬಡ್ಡಿ ಪ್ರೇಮವನ್ನು ಆರಂಭದಲ್ಲಿ ಪ್ರೋತ್ಸಾಹಿಸದ ಅಪ್ಪ, ಸಾಧನೆಗೈದು ಹೊರನಾಡಿಗೆ ಸ್ಫರ್ಧಿಸಲು ಹೊರಟಾಗ ಬಾಂಗ್ಲಾದೇಶದ ಮ್ಯಾಪು, ಮಾಹಿತಿ ಪುಸ್ತಕ ಕೊಟ್ಟು ಹುರಿದುಂಬಿಸುವುದು, ಸುಶೀಲಮ್ಮನವರ ತಾಯಿಕರುಳು ಮಗನನ್ನು ವಿದೇಶಕ್ಕೆ ಕಳುಹಿಸಲು ಹಿಂಜರಿಯುವುದು ಇವೆಲ್ಲವೂ ಪ್ರತಿ ತಂದೆ-ತಾಯಿಯರ ಮನಃಸ್ಥಿತಿಯನ್ನು ಬಿಂಬಿಸುತ್ತದೆ. ಕಬಡ್ಡಿಯನ್ನು ಕಲಿಯುವಾಗ ಜನಿವಾರ ತೊಡಕಾಗುವುದು, ಪುಳ್ಚಾರ್ ಎಗ್ ರೈಸ್ ತಿನ್ನುವುದು, ಪರಿಸ್ಥಿತಿಯ ಕೈಗೊಂಬೆಯಾಗಿ “ಮುಸಲ ಮುಂಜಿ” ಮಾಡಿಸಿಕೊಳ್ಳುವುದು ವಾಸ್ತವತೆಯನ್ನು ಬಿಂಬಿಸುತ್ತದೆ. “ಮುಂಜಿಯ ಉರಿಗಿಂತ ಮನಸ್ಸಿನ ಉರಿ ಹೆಚ್ಚು ನೋವನ್ನು ಕೊಡುತ್ತದೆ.” ಅಗ್ನಿಯಲ್ಲಿ ಲೀನವಾಗುವ ಸಲೀಂ ಚಾಚಾ ! ಬದುಕಿ ಉಳಿದರೆ ತಾನೆ ನಂಬಿಕೆಗಳು-ಧರ್ಮ ಎಲ್ಲ, ಬದುಕಿ ಉಳಿಯುವುದೇ ಅಸಾಧ್ಯವಾದಾಗ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕಾದ ಅನಿವಾರ್ಯತೆ !
ಕತೆ ಹೆಣೆಯುವಾಗ ಭಾರತಕ್ಕಿಂತ ಬಾಂಗ್ಲಾದೇಶ ಅರ್ಧಗಂಟೆ ಮುಂದಿದೆ ಎಂಬಂತಹ ಸಣ್ಣಪುಟ್ಟ ಮಾಹಿತಿ ಕೊಡುವುದನ್ನು ಕತೆಗಾರ ಮರೆಯುವುದಿಲ್ಲ. ಉತ್ತರಕನ್ನಡವನ್ನು ಕರ್ನಾಟಕದ ಕಾಶ್ಮೀರ ಎನ್ನಲು ಹೆಮ್ಮೆಯೆನಿಸುತ್ತದೆ. ಜಗತ್ತಿನಲ್ಲಿ ಹೆಚ್ಚು ಓದಿಕೊಂಡವರೆಂಬ ಹೆಮ್ಮೆಯೂ ಇದೆ. ಕೆನಡಾದಲ್ಲಿ ಪಂಜಾಬಿಗಳು ಇರುವುದನ್ನೂ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆಯ ರಕ್ಷಣೆ ಮಾಡುವುದನ್ನು ಕರಾವಳಿ ಕನ್ನಡಿಗ ಕಾಣುತ್ತಾನೆ. ಮಳೆಗಾಲವೆಂದರೆ ಬಾಂಗ್ಲಾದಲ್ಲಿ ನರಕ. ಬಾಂಗ್ಲಾದ ಅಡಿಕೆಗೆ ಭಾರತವೇ ಪ್ರಧಾನ ಮಾರುಕಟ್ಟೆ ಎಂದಾಗ ನಮ್ಮ ಕರುನಾಡಿನ ಅಡಿಕೆ ಬೆಳೆಗಾರರ ಹಲವು ಸಮಸ್ಯೆಗಳು ಧುತ್ತನೆ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತವೆ.
ಪರದೇಶಿ ಕ್ರೀಡೆ ಕ್ರಿಕೆಟಿಗರಿಗೆ ನೀಡುವ ಐಷಾರಾಮಿ ಸೌಲಭ್ಯಗಳು ಮತ್ತು ಸ್ವದೇಶಿ ಕ್ರೀಡೆ ಕಬಡ್ಡಿಗೆ ತೋರುವ ತಾರತಮ್ಯವನ್ನು ಕಥೆಗಾರ ಎತ್ತಿತೋರಿಸಿದ್ದಾರೆ. ಪ್ರಸ್ತುತ ಹಾಕಿ ಆಟವೂ ಬಹುಜನರ ಉದಾಸೀನಕ್ಕೆ ಒಳಗಾಗಿರುವುದೂ ಸತ್ಯ.
ಕಬಡ್ಡಿ ಆಟಗಾರನ ಕಣ್ಣಿಗೆ ಡಿ-ಫ್ರಾನ್ಸ್ ಪ್ರಶಸ್ತಿ ವಿಜೇತ ದುರಂತನಾಯಕ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡಾ ಕಂಡಿದ್ದಾನೆ ! ಬಡ ಬಾಂಗ್ಲಾದೇಶದವರೆಲ್ಲ ಭಾರತಕ್ಕೆ ಕದ್ದು ಹೋಗಿ ಅಲ್ಲಿ ಬದುಕು ಜೀವನ ಕಟ್ಟಿಕೊಂಡರೆ ಸಾಕು ಎನ್ನುವ ಕಾಲಘಟ್ಟದಲ್ಲೇ ಭಾರತೀಯ ವಿನಯಚಂದ್ರನಿಗೆ ಕಬಡ್ಡಿ ನೆಪದಲ್ಲಿ ಬಾಂಗ್ಲಾವನ್ನು ನೋಡುವ ಆಸೆ ! ಬಾಂಗ್ಲಾದೇಶದ ಕಾಂತಾಜಿ ದೇಗುಲದಲ್ಲಿನ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಬೀಳುವ ಸಂದರ್ಭದಲ್ಲಿ ನಮ್ಮದೇ ಹಂಪಿಯ ವಿಜಯ ವಿಠಲ ದೇಗುಲದಲ್ಲಿಯೂ ಸೂರ್ಯನ ಕಿರಣಗಳು ಬೀಳುವುದನ್ನು ನೆನೆದರೆ, ಭಾರತ-ಬಾಂಗ್ಲಾ ಸಂಸ್ಕೃತಿ ಬೇರೆಬೇರೆಯಲ್ಲ ಎನಿಸುವುದು ಸಹಜ. ಭಾರತ-ಬಾಂಗ್ಲಾ-ನೇಪಾಳ ನಡುವಿನ ಕೋಳಿ ಕತ್ತು (ಚಿಕನ್ ನೆಕ್) ನೋಡುವ ಹಂಬಲದ ಕತೆಗಾರನೊಳಗೊಬ್ಬ ಇತಿಹಾಸ-ಭೂಗೋಳದ ವಿದ್ಯಾರ್ಥಿಯಿದ್ದಾನೆ. ಅಳಿವಿನಂಚಿನಲ್ಲಿರುವ ಬಂಗಾಲದ ಹುಲಿಗಳ ರಕ್ಷಣೆ, ರಕ್ಷಿತಾರಣ್ಯಗಳಿದ್ದಲ್ಲಿ ಚಂಡಮಾರುತದಂತಹ ವಿಕೋಪಗಳನ್ನು ಕಡಿಮೆ ಮಾಡುವ ನೀತಿಯಿದೆ. “ಭಾರತದ ಪಾಲಿಗೆ ಅಕ್ರಮ ನುಸುಳುಕೋರರು ಎಂದರೆ ಬಾಂಗ್ಲಾ ದೇಶಿಯರು. ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಮುಂದಾದರೆ ವನ್ಯಮೃಗಳಿಗೆ ಸಮಸ್ಯೆಯಾಗುತ್ತದೆ. ಬೇಲಿ ನಿರ್ಮಿಸದಿದ್ದರೆ ನುಸುಳುಕೋರ ಮನುಷ್ಯರು ಸಮಸ್ಯೆಯಾಗುತ್ತಾರೆ” ತನ್ನದಲ್ಲದ ತಪ್ಪಿಗೆ ಭಾರತಕ್ಕೆ ಶಿಕ್ಷೆ !
ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕುತಂತ್ರ-ರಕ್ತದೋಕುಳಿಯಲ್ಲೇ ಜನಿಸಿದ ಧರ್ಮಾಂಧರ ಪಾಕಿಸ್ತಾನ-ಬಾಂಗ್ಲಾ ದೇಶಗಳು ವರ್ತಮಾನದಲ್ಲೂ ಬದಲಾಗಿಲ್ಲ. ತಮ್ಮೊಳಗಿನ ಹಿಂಸಾಚಾರವನ್ನು ಜಗತ್ತಿಗೆ ತಿಳಿಯದಂತೆ, ತಿಳಿದರೂ ದುರಂತ ಪರಿಣಾಮದ ಭೀಕರತೆಯನ್ನು ಮುಚ್ಚಿಡಲೇಬೇಕಾದ ದೈನೇಸಿ ಸ್ಥಿತಿ ಈ ಎರಡೂ ದೇಶಗಳದ್ದು. ಹೀಗಾಗಿ ಪಾಕ್-ಬಾಂಗ್ಲಾ ಎರಡೂ ಅನಿಶ್ಚಿತತೆಯ ತಾಣ ! ಕಾರಣ; ಅವುಗಳ ಹುಟ್ಟು ಮತ್ತು ವರ್ತನೆ. ಯಾವುದೇ ಪಕ್ಷಕ್ಕೆ ನಿಷ್ಠನಾಗಿರದ ಸರ್ಕಾರಿ ನೌಕರನಿಗೆ ಎರಡೂ ಪಕ್ಷದ ಬೆಂಬಲಿಗರಿಂದ ಭಯ. ಒಟ್ಟಾರೆ ಅಲ್ಲಿಯೂ ನಮ್ಮಂತೆ ಬಕೀಟು ಬ್ಯುರೋಕ್ರಾಟ್ ಮಾತ್ರ ಬದುಕಬಲ್ಲ ! ಎಂತಹ ಜನ್ನತ್ ಆಗಿದ್ದರೂ ಅದನ್ನು ಕ್ಷಣದಲ್ಲಿ ಕುಲಗೆಡಿಸುವ ರಾಜಕಾರಣಿಗಳು ನಮ್ಮಲ್ಲಿರುವಂತೆ ಬಾಂಗ್ಲಾದಲ್ಲೂ ಇದ್ದಾರೆ ! ದುರ್ಬಲರ ಮೇಲೆ ರಕ್ಕಸಧರ್ಮೀಯರ ಪೌರುಷ ಪ್ರದರ್ಶನ ಅನಾದಿ ಕಾಲದಿಂದಲೂ ನಡೆದುಬಂದದ್ದೇ.
“ಅಖಂಡ ಭಾರತದ ಅವಿಭಾಜ್ಯ ಅಂಗವಾಗಿದ್ದ ಈ ನಾಡನ್ನು ಬ್ರಿಟಿಷರು ಯಾವಾಗ ಒಡೆದರೋ, ಆಗಲೇ ಶುರುವಾಯಿತು ನರಕ. ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಠ 5000ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗುತ್ತದೆ. ಅದಕ್ಕೂ ಹೆಚ್ಚು ಮತಾಂತರವಾಗುತ್ತದೆ. ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತದೆ. 1941ರಲ್ಲಿ 28%ರಷ್ಟಿದ್ದ ಹಿಂದೂಗಳು 1974ರಲ್ಲಿ 13.5%ಕ್ಕೆ ಇಳಿದು, 2001ರಲ್ಲಿ 9.6% ಆಗಿದೆ” ಎಂಬುದನ್ನು ದಾಖಲಿಸುವಾಗ ನಿಜಕ್ಕೂ ಭಯೋತ್ಪಾದಕರು ಯಾರು ಮತ್ತು ಭಯಭೀತರಾಗಿರುವುದು ಯಾರು ಎಂಬ ಘೋರಸತ್ಯ ಅರಿವಾಗುತ್ತದೆ. ಬ್ರಹ್ಮಪುತ್ರಾ @ ಜಮುನಾ ನದಿಗೆ ಕಟ್ಟಿರುವ ಬಂಗಬಂಧು ಸೇತುವೆಯು 1971ರ ಸಮಯದಲ್ಲಿ ಪಾಕಿಸ್ತಾನಿಯರಿಗೆ ಹೆದರಿ ಓಡುತ್ತಿದ್ದ ಲಕ್ಷಕ್ಕೂ ಮೀರಿ ಜನರು ಜಲಸಮಾಧಿಯಾಗಿದ್ದಕ್ಕೆ ಸಾಕ್ಷಿಯಾಗಿದೆ. ವಿಶ್ವಸಂಸ್ಥೆ, ಜಾಗತಿಕ ಮಾನವ ಹಕ್ಕುಗಳ ಆಯೋಗ, ವಿಶ್ವ ಮಹಿಳಾ ಆಯೋಗಗಳ ಜಾಣಕುರುಡುತನಕ್ಕೆ ಇದಾವುದೂ ಕಾಣಲೇ ಇಲ್ಲ !
ಬಾಂಗ್ಲಾದೇಶದ ಮುಷ್ಪಿಕರನ ಹೆಂಡತಿಯೇ ತನ್ನ ಗಂಡನ ಮೇಲೆ ಹಲ್ಲೆ ಮಾಡುವುದಕ್ಕೆ ಸಹಕರಿಸುವುದು, ಕಾಮಾಂಧರ ಬಹುಪತ್ನಿತ್ವದ ವಿರುದ್ಧ ಹೆಣ್ಣಿನ ಆಕ್ರೋಶದ ಪ್ರತೀಕ. 75ನೇ ವಯಸ್ಸಿನಲ್ಲೂ ಸೈಕಲ್ ತುಳಿಯುವ ಸಲೀಂ ಚಾಚಾ, “ನಾನು ಸಾಯುವುದು ಮುಖ್ಯವಲ್ಲ, ನೀವು ಬದುಕುವುದು ಮುಖ್ಯ” ಎಂದಾಗ ಆಪದ್ಬಾಂಧವರು ಎಲ್ಲೆಲ್ಲಿ ಯಾರ್ಯಾರ ರೂಪದಲ್ಲಿ ರಕ್ಷಿಸುತ್ತಾರೋ ಬಲ್ಲವರಾರು?
ಬಾಂಗ್ಲಾದೇಶದ ಹಿಂದೂ ಅರ್ಚಕರು “ನನ್ನ ಮಗಳನ್ನು ಎತ್ತಿಕೊಂಡು ಹೋದರು, ಈವರೆಗೆ ಅವಳು ಏನಾದಳು ಎಂಬುದು ಗೊತ್ತಿಲ್ಲ. ಬಾಂಗ್ಲಾದೇಶದಲ್ಲಿ ಹಿಂದುವಾಗಿ ಹುಟ್ಟುವುದು ತಪ್ಪು. ಅದರಲ್ಲೂ ಹಿಂದೂ ಹುಡುಗಿಯಾಗಿ ಹುಟ್ಟುವುದಂತೂ…ಬೇಡ ಬಿಡಿ. ಇಲ್ಲಿನ ದೌರ್ಜನ್ಯಕ್ಕೆ ಹೆದರಿ ನಾನೂ ಭಾರತಕ್ಕೆ ಬಂದರೆ ಈ ದೇವಾಲಯದ ಪೂಜೆಗೆ ಜನ ಸಿಗುವುದಿಲ್ಲ. ನಾನು ಇಲ್ಲೇ ಹುಟ್ಟಿ-ಬೆಳೆದವನು. ತಾಯ್ನಾಡು ಹೇಗೇ ಇರಲಿ, ಅಲ್ಲೇ ಬಾಳಿ ಬದುಕಬೇಕಾದುದು ಅನಿವಾರ್ಯ. ಗಡಿದಾಟಿ ಭಾರತಕ್ಕೆ ಹೋಗಲು ಹಂಬಲಿಸುವವರಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ. ನಾನು ನನ್ನ ತೃಪ್ತಿಗಾಗಿ ಗಡಿ ದಾಟಿಸುವಂತಹ ಸಹಾಯ ಮಾಡುತ್ತೇನೆ” ಎಂದಾಗ ಸ್ವಧರ್ಮರಕ್ಷಣೆಗಾಗಿ ಪ್ರಜ್ಞಾಪೂರ್ವಕ ಬಲಿದಾನವಾದವರ ನೆನಪಾಗುತ್ತದೆ. ಅಂತಹ ಜೀವಿಗಳಿಗೆ ಶತಕೋಟಿ ನಮನಗಳು. ಭಾರತದಲ್ಲಿರುವ ಆಮದು ರಕ್ಕಸ ಧರ್ಮೀಯರು ಮತ್ತು ಅವರ ಜೊತೆ ಕೈಜೋಡಿಸುವ ಕೆಲವು ಸ್ವಘೋಷಿತ ಹಿಂದೂ ಉದಾರವಾದಿಗಳ ಕಣ್ಣಿಗೆ ಇವಾವುದೂ ಕಾಣುವುದೇ ಇಲ್ಲ ! ಭಾರತೀಯರ ವಿಶೇಷವಾಗಿ ಹಿಂದೂಗಳ ಔದಾರ್ಯ ಮತ್ತು ಅತೀವ ಸಹಿಷ್ಣುತೆಯೇ ಮಹಾದೌರ್ಬಲ್ಯ ಎಂಬುದು ಇಂದಿಗೂ ಬಹುಜನರಿಗೆ ಮನವರಿಕೆಯಾಗಿಲ್ಲ. ಬಾಂಗ್ಲಾ ದೇಶೀಯರೂ ಸೇರಿದಂತೆ ಪರದೇಶಗಳಿಗೆಲ್ಲ ಭಾರತ ಸ್ವರ್ಗ. ಒಮ್ಮೆ ಭಾರತಕ್ಕೆ ನುಸುಳಿಬಿಟ್ಟರೆ ಆರಾಮಾಗಿ ಜೀವನ ನಡೆಸಬಹುದು ಎಂಬ ನಂಬಿಕೆ ಅವರೆಲ್ಲರದು.
ವಿನಯಚಂದ್ರ-ಮಧುಮಿತಾ ಎಂಬ ನಾಯಕ-ನಾಯಕಿಯ ಹೆಸರುಗಳ ಆಯ್ಕೆ ಸಹಿತ ಅಪ್ಪ ಶಿವರಾಮ ಹೆಗಡೆ, ಅವ್ವ ಸುಶೀಲಮ್ಮ, ತಂಗಿ ಅಂಜಲಿ,(ತಂಗಿಗೆ ಅಣ್ಣನೇ ವಿಕಿಪೀಡಿಯಾ, ಗೂಗಲ್ ಸರ್ಚ್,…) ಕೋಚ್ ಚಿದಂಬರ, ಒಂದೇ ಒಂದು ಅಂಕಕ್ಕೂ ಮಹತ್ವ ನೀಡುವ ಕೋಚ್ ಜಾಧವ್ ಸರ್, ಸಹಕ್ರೀಡಾವರ್ತಿ ಜೊಲ್ಲುಪಾರ್ಟಿ ರ್ಸೂರ್ಯನ್ ಒಳಗೊಬ್ಬ ಹೃದಯವಂತ, ಹಿತೈಷಿ ಗೆಳೆಯ ಸಂಜಯ, ದೈಹಿಕ ಶಿಕ್ಷಕರು, ಸಲೀಂ ಚಾಚಾ ಎಲ್ಲವೂ ಸದಾ ಕಾಡುವ ಪಾತ್ರಗಳು. ಇಲ್ಲಿನ ಯಾವುದೇ ಘಟನೆ ಅಥವಾ ಪಾತ್ರಗಳು ವಾಸ್ತವದಲ್ಲಿ ಕಾಣುವಂತವೇ ಆಗಿವೆ.
ಬೆಂಗಾಲಿಗಳು ಎಷ್ಟು ಸ್ನೇಹಿತರೋ ಅಷ್ಟೇ ಸಿಟ್ಟಿನವರೂ ಕೂಡಾ ! ಇತಿಹಾಸದ ಪುಟಗಳಲ್ಲಿಯೂ ಬಂಗಾಳಿಗಳ ಕ್ರಾಂತಿಕಾರಿ ಚಟುವಟಿಕೆಗಳದ್ದು ಅಗ್ರಸ್ಥಾನ. ಬಂಕಿಮಚಂದ್ರರ “ಆನಂದಮಠ” (1882) ಓದಿದ್ದವರಿಗೆ 136 ವರ್ಷಗಳ ನಂತರದ “ಬೆಂಗಾಲಿ ಬೆಡಗಿ”ಯ ಘಟನೆಗಳು-ಪಾತ್ರಗಳು, ಸಾಮಾಜಿಕ ಸ್ಥಿತಿಗತಿ ಕಾಲ್ಪನಿಕ ಎನಿಸುವುದಿಲ್ಲ. {ಹಾಗಂತ ಆನಂದಮಠಕ್ಕೂ ಬೆಂಗಾಲಿ ಬೆಡಗಿಗೂ ಇಲ್ಲಿ ಹೋಲಿಕೆ ಮಾಡುತ್ತಿಲ್ಲ}
ತುಂಡುಗುಪ್ಪಳ, ಅಜಮಾಸು, ಮೆತ್ತಿಯನ್ನು ಹತ್ತುವುದು, ತೊಡೆದೇವು ಇತ್ಯಾದಿ ಹವಿಗನ್ನಡ ಪದಗಳ ಬಳಕೆ ಮತ್ತು ಪರಿಚಾರಿಕೆ ಕಾದಂಬರಿಗೆ ಮೆರುಗು ತಂದಿದೆ. ನಗಣ್ಯವೆನಿಸುವ ಮುದ್ರಣ ದೋಷ, ಒಂದೆರೆಡು ಸಿನಿಮೀಯ ಘಟನೆಗಳ ಹೊರತಾಗಿ ಮತ್ತೆಮತ್ತೆ ಮೆಲುಕುಹಾಕುವಂತಹ ಕೃತಿ “ಬೆಂಗಾಲಿ ಬೆಡಗಿ”. ಬೆಂಗಾಲಿ ಬೆಡಗಿಯನ್ನು ಓದುತ್ತಲೇ “ಸ್ಲಾವೋಮಿರ್ ರಾವಿಸ್ ನ ಮಹಾಪಲಾಯನ” ಮತ್ತು ಬಂಕಿಮಚಂದ್ರರ “ಆನಂದ ಮಠ”ವನ್ನೂ ಓದುವಂತೆ ಪ್ರಚೋದಿಸಿದ್ದಾರೆ ಕತೆಗಾರ ವಿನಯ್ ದಂಟಕಲ್ ! ವಿಶ್ವಕ್ಕೆ ಯೋಗವನ್ನು ನೀಡಿದ ಭಾರತದಿಂದಲೇ ಕಬಡ್ಡಿಯೂ ವಿಶ್ವಮಾನ್ಯವಾಗಲಿ. ಲೇಖಕರ ಬಯಕೆಯಂತೆ ಏಳು ಆಟಗಾರರ ಕಬಡ್ಡಿ ಏಳೂ ಖಂಡಗಳಲ್ಲಿ ಪ್ರಾಧಾನ್ಯತೆ ಪಡೆಯಲಿ. ಆ ಮೂಲಕ ವಿಶ್ವಭ್ರಾತೃತ್ವ ಬೆಳೆಯಲಿ. ಬೆಂಗಾಲಿ ಭಾಷೆ ಸೇರಿದಂತೆ ಬಹುಭಾಷೆಗೆ “ಬೆಂಗಾಲಿ ಬೆಡಗಿ” ತರ್ಜುಮೆಯಾಗಲಿ. ವಿನಯ್ ದಂಟಕಲ್ ಮತ್ತು ಪ್ರಕಾಶಕರಾದ ಅರ್ಜುನ್ ದೇವಾಲದಕೆರೆ ರವರಿಂದ ಮತ್ತಷ್ಟು ಸಾಹಿತ್ಯಾತ್ಮಕ ಬೆಡಗು ಸೃಷ್ಟಿಯಾಗಲಿ.
- ಶಿವರಾಮ್ ಕಾನ್ ಸೇನ್
ಕಾದಂಬರಿ ಬೇಕಾದರೆ
https://www.instamojo.com/vindyapoonacha/
ಈ ಲಿಂಕ್ ನ್ನು ತೆರೆದು ಬುಕ್ ಮಾಡಬಹುದು.. ಮನೆ ಬಾಗಿಲಿಗೆ ಪುಸ್ತಕ ತಲುಪುತ್ತದೆ
https://www.instamojo.com/vindyapoonacha/
ಈ ಲಿಂಕ್ ನ್ನು ತೆರೆದು ಬುಕ್ ಮಾಡಬಹುದು.. ಮನೆ ಬಾಗಿಲಿಗೆ ಪುಸ್ತಕ ತಲುಪುತ್ತದೆ