`ಸರ್ ನೀವು ಹುಡುಕುತ್ತಿರುವ
ವ್ಯಕ್ತಿಯ ಕುರಿತು ಪೋಟೋ ಏನಾದರೂ ಇದೆಯಾ? ಇತರ ಮಾಹಿತಿ ಇದ್ದರೆ ಹೇಳೀ..’ ಎಂದಳು ಆಶ್ನಾ.
ನನ್ನ ಬಳಿ ಫೋಟೋ ಇರಲಿಲ್ಲ… ಆಶ್ನಾಳ ಬಳಿ
ಅದನ್ನೇ ಹೇಳಿದೆ.
ಆಕೆ ನನ್ನನ್ನು ವಿಚಿತ್ರವಾಗಿ ನೋಡಿದವಳೇ, ಓಹೋ.. ಕಷ್ಟವಿದೆ ಹುಡುಕೋದು.. ಎಂದಳು.
`ಅಂದಹಾಗೆ ಇದು ದಾಮ್ವೇ ಅಥವಾ ದೆಮ್ಚೇ
ಅಲ್ಲ. ಇದರ ಸರಿಯಾದ ಉಚ್ಛಾರ ದೆಮಾಜಿ ಅಂತ. ದೆಮಾಜಿ ಇದೆಯಲ್ಲ ಇದು ಸಾಕಷ್ಟು ದೊಡ್ಡ ಜಿಲ್ಲೆ.
ನೀವು ಮನೆ ಮನೆಗೂ ಹೋಗಿ ಹುಡುಕೋದು ಅಸಾಧ್ಯವೇ ಸರಿ. ಹೋಗಲಿ ನಿಮ್ಮ ಬಳಿ ಅಡ್ರೆಸ್ ಇದೆಯಾ… ‘
ಸ್ವಲ್ಪ ಸಿಟ್ಟಿನಿಂದಲೇ ಕೇಳಿದ್ದಳು ಆಶ್ನಾ.
ಚಿಕ್ಕ ಹುಡುಗಿಗೆ ಅರ್ಥವಾದ ಅಂಶ ನಮಗೆ ಅರ್ಥವಾಗಲಿಲ್ಲ
ಎಂದು ಪೆಚ್ಚೆನಿಸಿತು.
`ಇರು..’ ಎಂದವನೇ ನನ್ನ ಬ್ಯಾಗಿನಲ್ಲಿದ್ದ
ಪತ್ರವೊಂದನ್ನು ತೆಗೆದೆ. ವಿದ್ಯುಲ್ಲತಾ ಆ ಪತ್ರದಲ್ಲಿ ಬರೆದಿದ್ದ ಸಾಳುಗಳನ್ನು ಓದಿದೆ.
`ವಿನು… ನನ್ನ ಮನೆ ದೆಮಾಜಿಯಿಂದ ಮುಂದೆ
ನಾಲ್ಕೈದು ಕಿಲೋಮೀಟರ್ ಫಾಸಲೆಯಲ್ಲಿದೆ. ಬೋಂಗಾಲ್ ಮರಿ ಹರಿ ಮಂದಿರದಿಂದ ಮುಂದಕ್ಕೆ ಬಂದರೆ ಮಾಟಿಕುಲಾ
ಪೋಸ್ಟ್ ಆಫೀಸ್ ಸಿಗುತ್ತದೆ. ಅದನ್ನು ಹಾದು ಬರೂಹಾ ಘಾಟ್ ಎಂಬ ನೀರಿನ ಕೊಳವೊಂದಿದೆ. ಅಲ್ಲಿಂದ
ಮುಂದೆ ಬಂದರೆ ಬೋಟುವಾ ಮುಖ್ ಮಿರಿ ಎಂಬ ಊರು ಸಿಗುತ್ತದೆ. ಅಲ್ಲೇ ಇದೆ ನನ್ನ ಮನೆ. ಊರಿನ ಮಗ್ಗುಲಿನಲ್ಲಿಯೇ
ಬ್ರಹ್ಮಪುತ್ರಾ ನದಿಯ ಉಪ ನದಿಯೊಂದು ಹರಿದುಹೋಗುತ್ತದೆ. ಅಲ್ಲೇ ಇದೆ ನನ್ನ ಮನೆ. ಮನೆಗೆ ಕೆಂಪು
ಬಣ್ಣ ಬಳಿದಿದ್ದಾರೆ. ದೊಡ್ಡ ಮನೆ. ಆ ಸುತ್ತಮುತ್ತಲಿನಲ್ಲಿ ಇರುವ ದೊಡ್ಡ ಮನೆ ಅಂದರೆ ನಮ್ಮ ಮನೆ…
ಎಂದು ಬರೆದಿದ್ದಳು.
ಇದನ್ನು ಕೇಳಿದ ಆಶ್ನಾ… ಇಷ್ಟು ಮಾಹಿತಿ ಇದೆಯಲ್ಲ ಇದೇ
ಸಾಕು ಬನ್ನಿ.. ಎಂದು ಮತ್ತೆ ಜೀಪು ಹತ್ತಿಸಿದಳು.
ಸೀದಾ ಬೋಟುವಾ ಮುಖ್ ಮಿರಿಯತ್ತ ಗಾಡಿ ಓಡಿಸುವಂತೆ
ಹೇಳಿದಳು. ಅವಳ ಚುರುಕುತನ ಮತ್ತೊಮ್ಮೆ ನನ್ನ ಹಾಗೂ ಸಂಜಯನನ್ನು ಸೆಳೆದಿತ್ತು. ಅಂಕುಡೊಂಕಿನ
ದಾರಿಯಲ್ಲಿ ಜೀಪು ಸಾಗುತ್ತಿತ್ತು. ಆಶ್ನಾ ಒಂದಿಬ್ಬರ ಬಳಿ ಅಸ್ಸಾಮಿ ಭಾಷೆಯಲ್ಲಿಯೇ ಕೇಳೀದಳು.
ಸೀದಾ ಹೋಗಿ ಒಂದು ಕಡೆ ಜೀಪು ನಿಂತಿತು. ಮುಂದಕ್ಕೆ ನದಿಯೊಂದು ಹರಿಯುತ್ತಿತ್ತು. ರಸ್ತೆ ಅಲ್ಲಿಗೆ
ಕೊನೆಗೊಂಡಿತ್ತು.
ಜೀಪು ಇಳಿದವಳೇ ಅಲ್ಲಿ ಒಂದಿಬ್ಬರ ಬಳಿ ಆಶ್ನಾ
ಕೇಳಿದಳು. ಅವರು ಪಡೆದ ಮಾಹಿತಿಯನ್ನು ಆದರಿಸಿ ಒಂದಷ್ಟು ಕಡೆ ನಮ್ಮನ್ನು ಕರೆದೊಯ್ದಳು. ಅಲ್ಲಿ
ಇಲ್ಲಿ ಒಂದೆರಡು ಮನೆಗಳನ್ನು ಹಾದ ನಂತರ ಕೆಂಪು ಬಣ್ಣದ ದೊಡ್ಡ ಮನೆ ನಮ್ಮೆದುರು ಕಾಣಿಸಿತು. ನಾನು
ಭಯ, ಆತಂಕ, ಕುತೂಹಲಗಳೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೆ.
ಆದರೆ ಮನೆಯ ಮುಂದೆ ಹೋಗಿ ನಿಂತಾಗ ನಮಗೆ ಇನ್ನಷ್ಟು
ಅಚ್ಚರಿ ಕಾಣಿಸಿತ್ತು.
ದೊಡ್ಡ ಬಾಗಿಲಿನ ಮನೆ ಅದಾಗಿದ್ದರೂ, ಅದಕ್ಕೆ ಹಾಕಿದ್ದ
ಅಷ್ಟೇ ದೊಡ್ಡದಾದ ಬೀಗ ನಮ್ಮನ್ನು ಸ್ವಾಗತಿಸಿತು. `ಏನಿದು..?’ ಎಂದು ಪ್ರಶ್ನಾರ್ಥಕವಾಗಿ ನಾನು
ಆಶ್ನಾಳನ್ನು ನೋಡಿದೆ. ನನ್ನ ಮನಸ್ಸಿನ ಭಾವನೆಯನ್ನು ಅರಿತವಳಂತೇ ಆಕೆ ಸೀದಾ ಪಕ್ಕದ ಮನೆಗೆ ಹೋಗಿ,
`ಈ ಮನೆಯವರೆಲ್ಲಿ’ ಎಂದು ವಿಚಾರಿಸಿದಳು.
ಅದಕ್ಕೆ ಅವರು ಏನೇನೋ ಉತ್ತರವನ್ನು ಹೇಳೀದರು. ತದನಂತರ
ಆಶ್ನಾ ನನ್ನ ಬಳಿ ಬಂದು `ಈ ಮನೆಯವರು 12-13 ವರ್ಷಗಳ ಹಿಂದೆ ಬೀಗ ಹಾಕಿ ಹೋದರಂತೆ. ಹೋಗುವ ಮುನ್ನ
ಯಾರಿಗೋ ಮನೆ ಮಾರಿದರಂತೆ.. ಮನೆಯನ್ನು ಕೊಂಡವರು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದಾರೆ
ಅಷ್ಟೇ..’ ಎಂಬ ಮಾಹಿತಿ ನೀಡಿದಳು.
`ಯಾಕೆ ಮನೆ ಬಿಟ್ಟರು? ಎಲ್ಲಿಗೆ ಹೋದರು? ಕೇಳು
ಪ್ಲೀಸ್..’ ಎಂದೆ.
ಆಶ್ನಾ ಮತ್ತೆ ಹೋಗಿ ಮಾತನಾಡಿದಳು.
ಮರಳಿ ಬಂದವಳೇ `ಈ ಮನೆಯಲ್ಲಿ ಒಬ್ಬಳು ಹುಡುಗಿ
ಇದ್ದಳಂತೆ. ಅವಳಿಗೆ ಮದುವೆ ಆಗಿರಲಿಲ್ಲವಂತೆ.. ಆಕೆ ಗರ್ಭಿಣಿಯಾಗಿದ್ದಳಂತೆ. ಮನೆಯಲ್ಲಿ ಬಹಳ
ದಿನಗಳ ಕಾಲ ಗಲಾಟೆ ನಡೆಯಿತಂತೆ. ಅವಿಭಕ್ತ ಕುಟುಂಬ ಒಡೆದು ಚೂರು ಚೂರಾಯಿತಂತೆ. ಆ ಹುಡುಗಿಗೆ
ಮನೆಯವರು ಸಾಕಷ್ಟು ಹೊಡೆದು, ಬಡಿದು ಮಾಡಿದರಂತೆ. ಅಬಾರ್ಷನ್ ಮಾಡಿಸಿಕೋ ಎಂದರಂತೆ. ಆದರೆ ಆಕೆ
ಮಾಡಿಸಿಕೊಳ್ಳಲಿಲ್ಲವಂತೆ. ಕೊನೆಗೆ ಮರ್ಯಾದೆಗೆ ಅಂಜಿ ಈ ಮನೆಯವರು ಎತ್ತಲೋ ಹೋದರಂತೆ. ಆ
ಹುಡುಗಿಯನ್ನೂ ಅವರು ಕರೆದೊಯ್ದರಂತೆ. ಆಮೇಲೆ ಅವರನ್ನು ಈ ಸುತ್ತಮುತ್ತ ಯಾರೂ ನೋಡಿಲ್ಲ. ಎಲ್ಲಿಗೆ
ಹೋಗಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ.. ಬದುಕಿದ್ದಾರೋ ಇಲ್ಲವೋ ಅದೂ ಗೊತ್ತಿಲ್ಲ..’
ಎಂದಳು.
ನನಗೆ ಒಮ್ಮೆ ತಲೆಯೆಲ್ಲ ತಿರುಗಿದಂತಾಯಿತು. ಛೇ.. ಎಂತ
ಆಗೋಯ್ತು… ಪ್ರೀತಿಸಿದ್ದ, ಪ್ರೀತಿಯ ಉತ್ತುಂಗದಲ್ಲೇ ಆಕೆಯನ್ನು ತೊರೆದಿದ್ದ, ಇದೀಗ ಮತ್ತೆ
ಹುಡುಕಿ ಬಂದಿದ್ದ ನನಗೆ ಆಕೆಯ ದರ್ಶನ ಭಾಗ್ಯ ಇಲ್ಲದಾಯಿತೇ ಎಂದುಕೊಂಡು ಆ ಮನೆಯ ಕಟ್ಟೆಯ ಮೇಲೆ
ಕುಳಿತೆ. ಕಣ್ಣಲ್ಲಿ ನನಗೆ ಅರಿವಿಲ್ಲದಂತೆಯೇ ನೀರು ಬರಲಾರಂಭಿಸಿತ್ತು.
ಆಶ್ನಾಳಿಗೆ ಏನನ್ನಿಸಿತೋ ಏನೋ.. ಸೀದಾ ಬಂದು ನನ್ನ
ಪಕ್ಕ ಕುಳಿತಳು. ಬಂದವಳೇ ನನ್ನ ಕೈ ಹಿಡಿದುಕೊಂಡು, `ನೀವು ಹುಡುಕಿ ಬಂದ ವ್ಯಕ್ತಿ ಯಾರು
ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಿಮಗೆ ಆಕೆ ಎಷ್ಟು ಅನಿವಾರ್ಯ ಆಗಿದ್ದಳು ಎನ್ನುವುದು ನನಗೆ
ಅರ್ಥವಾಗುತ್ತಿದೆ..’ ಎಂದಳು.
`ಹು… ನಾನವಳನ್ನು ಪ್ರೀತಿಸಿದ್ದೆ.. ಅವಳು ನನ್ನ
ಮೈ-ಮನಗಳನ್ನು ತುಂಬಿದ್ದಳು. ಆದರೆ ಯಾವುದೋ ಹೊತ್ತಿನಲ್ಲಿ ನಮಗರಿವಿಲ್ಲದಂತೆ ಏನೇನೋ ಆಗೋಯ್ತು.
ನಂತರ ನಾನೂ ಪರಿಸ್ಥಿತಿಯ ಕಟ್ಟಿಗೆ ಬಿದ್ದು ಬಿಟ್ಟೆ. ಆಕೆ ನನ್ನಿಂದ ದೂರ ಬಂದಳು. ನಾನು ಆಕೆಯ
ಪಾಲಿಗೆ ಮೋಸಗಾರನಾಗಿಬಿಟ್ಟೆ. ಆದರೆ ನಾನು ಮೋಸ ಮಾಡಿಲ್ಲ, ದಶಕಗಳು ಉರುಳಿದರೂ ನನ್ನ ಮನದಲ್ಲಿ
ಶಾಶ್ವತವಾಗಿ ನೀನು ಉಳಿದಿದ್ದೀಯಾ ಎಂದು ಹೇಳುವ ಕಾರಣಕ್ಕಾಗಿ ಇಲ್ಲಿಯವರೆಗೂ ಹುಡುಕಿ ಬಂದೆ. ಆದರೆ
ಅವಳನ್ನು ನೋಡುವ ಭಾಗ್ಯ ನನಗಿಲ್ಲವಾಯಿತೇ.. ನನ್ನನ್ನು ಕ್ಷಮಿಸು ಎಂದು ಹೇಳುವ ಅವಕಾಶ ನನಗೆ
ಸಿಗದಾಯಿತೆ…’ ಎಂದು ಹಲುಬಿದೆ.
`ಸರ್…’ ಎಂದವಳೇ ನನ್ನ ತಲೆಯನ್ನೊಮ್ಮೆ ನೇವರಿಸಿದ ಆಕೆ,
`ನಿಮ್ಮನ್ನು ನೋಡಿದರೆ ಬಹಳ ಮರುಕ ಉಂಟಾಗುತ್ತಿದೆ. ತಿಳಿದೋ, ತಿಳಿಯದೆಯೋ ನೀವು ತಪ್ಪು
ಮಾಡಿದ್ದಿರಿ, ಅದಕ್ಕೆ ಪಶ್ಚಾತ್ತಾಪವನ್ನೂ ಪಟ್ಟಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಯಾವುದೇ ದೋಷ
ಇರಲಿಲ್ಲ ಎನ್ನುವುದಕ್ಕೆ ಈ ನಿಮ್ಮ ಕಣ್ಣೀರು ಸಾಕ್ಷಿಯಾಗಿದೆ. ಅಳಬೇಡಿ… ಎದೆಗುಂದಬೇಡಿ..
ಓಳ್ಳೆಯದಾಗುತ್ತದೆ…’ ಎಂದಳು.
ನನಗೆ ಸಮಾಧಾನವಾಗಲಿಲ್ಲ. ನಾನು ಸುಮ್ಮನೇ ಇದ್ದೆ.
ಆಕೆಯೂ ಮೌನವಾಗಿಯೇ ಇದ್ದಳು. ಎಷ್ಟೋ ಹೊತ್ತಿನ ನಂತರ ಸಂಜಯ ನನ್ನ ಬಳಿ ಬಂದು… `ಹೊರಡೋಣ ದೋಸ್ತ…
ಇಲ್ಲಿ ಇನ್ನು ಉಳಿದು ಮಾಡುವಂತದ್ದೇನಿಲ್ಲ…’ ಎಂದ.
ಸರಿ ಎಂದು ನಾನು ತಯಾರಾದೆ. ಹೀಗಿದ್ದಾಗಲೇ ಆಶ್ನಾ…
ನನ್ನ ಬಳಿ ತಿರುಗಿದಳು. `ನಾನು ಇಲ್ಲಿಯವರೆಗೂ ಬಂದಿದ್ದೇನೆ.. ನನ್ನ ಮನೆ ಇಲ್ಲಿಂದ
ನೂರು-ನೂರೈವತ್ತು ಕಿಲೋಮೀಟರ್ ದೂರದಲ್ಲಿದೆ. ನಾನು ಅಲ್ಲಿಗೆ ಹೋಗಿ ಬರಲೇ?.. ನೀವು ಬರುವಿರಾ?’
ಎಂದಳು.
`ನೀನು ಹೋಗಿ ಬರುವುದು ಸರಿ.. ಆದರೆ ನಾವ್ಯಾಕೆ
ಬರೋದು..?’ ಸಂಜಯ ಕೇಳಿದ್ದ,
`ನಾನು ಅನೇಕ ಜನರನ್ನು ನೋಡಿದ್ದೇನೆ. ಅದೆಷ್ಟೋ ಜನರಿಗೆ
ಗೈಡ್ ಆಗಿಯೂ ಕೆಲಸ ಮಾಡಿದ್ದೇನೆ. ಎಲ್ಲರೂ ಅಸ್ಸಾಂ ನೋಡಲು ಬರುತ್ತಿದ್ದರು. ಅರುಣಾಚಲ ಸುತ್ತಲು
ಬರುತ್ತಿದ್ದರು. ತವಾಂಗ್ ನೋಡಲು ಹೋಗುತ್ತಿದ್ದರು. ಮಣಿಪುರವೋ, ಮಿಜೋರಾಮ್, ತ್ರಿಪುರಾ,
ನಾಗಾಲ್ಯಾಂಡಿಗೆ ಹೋಗುತ್ತಿದ್ದರು. ಆದರೆ ನೀವು, ನಿಮ್ಮ ಗತಕಾಲದ ಗೆಳತಿಯನ್ನು, ಪ್ರೇಯಸಿಯನ್ನು
ಹುಡುಕಿಕೊಂಡು ಬಂದಿದ್ದೀರಿ. ಅವಳು ಸಿಗದೇ ವಿಲಿ ವಿಲಿ ಒದ್ದಾಡುತ್ತಿದ್ದೀರಿ. ಸಿಗದೇ ಹತಾಶೆಗೆ ಒಳಗಾಗಿದ್ದೀರಿ.
ನನಗೆ ಯಾಕೋ ನಿಮ್ಮ ನಡೆ ನುಡಿ ಮೊದಲಿಗೆ ವಿಚಿತ್ರವೆನ್ನಿಸಿದರೂ ಈಗ ಗೌರವ, ಆದರದ ಭಾವ
ಹುಟ್ಟಿಸಿದೆ. ಅದೇನೋ ವಿಶಿಷ್ಟ ವ್ಯಕ್ತಿತ್ವ ನಿಮ್ಮದು…’ ಎನ್ನುತ್ತಿದ್ದಂತೆ ಸಂಜಯ ನಗಲು
ಆರಂಭಿಸಿದ..
`ನಗಬೇಡಿ.. ನಿಜ ಹೇಳಿದೆ ನಾನು.. ನಾನು ಪ್ರತಿ ಸಾರಿ
ಮನೆಗೆ ಹೋದಾಗಲೂ ಆ ಸಂದರ್ಭದಲ್ಲಿ ನಾನು ಯಾರ್ಯಾರನ್ನು ಭೇಟಿ ಮಾಡುತ್ತೀನೋ ಅದನ್ನೆಲ್ಲ ನನ್ನ
ಮನೆಯವರ ಎದುರು, ನನ್ನ ಅಮ್ಮನ ಎದುರು ಹೇಳುತ್ತೇನೆ. ಅವರು ಅದನ್ನೆಲ್ಲ ಅರಳಿದ ಕಣ್ಗಳೊಂದಿಗೆ
ಕೇಳುತ್ತಾರೆ. ಪ್ರತಿ ಸಾರಿಯೂ ನೀನು ಅವರನ್ನು ಕರೆದುಕೊಂಡು ಬರಬೇಕಿತ್ತು, ಇವರನ್ನು ಕರೆದುಕೊಂಡು
ಬರಬೇಕಿತ್ತು ಎನ್ನುತ್ತಾರೆ. ಈಗ ನಾವು ಹೇಗೂ ಇಲ್ಲಿಯತನಕ ಬಂದಿದ್ದೇವೆ.. ಅಲ್ಲಿಗೆ ಹೋಗಿ ಬರೋಣವೇ…’
ಎಂದಳು. ಅವಳ ಧ್ವನಿಯಲ್ಲಿ ಅದೇನೋ ಯಾಚನೆಯಿತ್ತು, ಪ್ರೀತಿ, ಆತ್ಮೀಯತೆ ಇತ್ತು.
`ಅದ್ಸರಿ, ಯಾವುದು ನಿಮ್ಮೂರು…’ ಎಂದು ಸಂಜಯ ಕೇಳಿದ್ದ.
`ವಿಜೋಯ್ ನಗರ..’ ಎಂದಳು ಆಕೆ..
`ವಿಜೋಯ್ ನಗರ….’ ಎಂದವನೇ… `ವಾವ್… ಎಂತಹ ಊರು ಅದು…’
ಎಂದು ಉದ್ಗರಿಸಿ ಸಂಜಯ `ನಡಿ ಹೋಗೋಣ..’ ಎಂದ.
ಆಶ್ನಾಳ ಕಣ್ಣು ಅರಳಿತು.
ನಾನು ಅಚ್ಚರಿಯಿಂದ `ಏನಪ್ಪಾ ವಿಶೇಷ..’ ಎಂದೆ.
ಅದಕ್ಕೆ ಸಂಜಯ `ಅಯ್ಯೋ ಈ ವಿಜೋಯ್ ನಗರ ಇದೆಯಲ್ಲ… ಎಂತಹ
ಅದ್ಭುತ ಊರು ಅಂತೀಯ.. ಭಾರತದಲ್ಲಿ ಮೊಟ್ಟ ಮೊದಲು ಸೂರ್ಯೋದಯ ಕಾಣುವುದು ಇದೇ ಊರಿನಲ್ಲಂತೆ. ಈ
ಊರಿನಲ್ಲಿ ವೃದ್ಧರ ಸಂಖ್ಯೆ ಜಾಸ್ತಿ ಇದೆಯಂತೆ. ಅಲ್ಲದೇ ಅವರಲ್ಲಿ ಹೆಚ್ಚಿನವರು ಸೈನ್ಯದಿಂದ
ನಿವೃತ್ತಿ ಆದವರು. ಪ್ರಕೃತಿ ಸೌಂದರ್ಯದ ಖನಿಯಾದ ಈ ಊರಿಗೆ ಹೋಗಲು ರಸ್ತೆ ಮಾರ್ಗವೇ ಇಲ್ಲ.
ವಿಮಾನದ ಮೂಲಕ ಹೋಗಬೇಕಷ್ಟೇ…’ ಎಂದ.
ಅಷ್ಟರಲ್ಲಿ ಆಶ್ನಾ `ಈಗ ಊರಿಗೆ ಕಚ್ಚಾ ರಸ್ತೆ
ಮಾಡಿದ್ದಾರೆ… ಅದರಲ್ಲಿ ಹೋಗಬಹುದು..’ ಎಂದಳು. ನಾನು ಸರಿ ಎಂದು ಒಪ್ಪಿಕೊಂಡೆ.
ಇಷ್ಟೆಲ್ಲ ಆಗುವ ವೇಳೆಗೆ ಸೂರ್ಯ ಅದಾಗಲೇ ಪಶ್ಚಿಮದ
ದಿಗಂತದಲ್ಲಿ ಅಸ್ತಂಗತನಾಗುತ್ತಿದ್ದ.
`ಸರ್ ನಾಳೆ ಮುಂಜಾನೆ ಹೊರಡೋಣ… ರಾತ್ರಿ ಪ್ರಯಾಣ
ಕಷ್ಟ..’ ಎಂದಳು ಆಶ್ನಾ. ಸರಿ ಎಂದು ನಾವಿಬ್ಬರೂ ತಲೆಯಲ್ಲಾಡಿಸಿದೆವು. ಸೀದಾ ದೆಮಾಜಿಗೆ ಮರಳಿ
ಅಲ್ಲೊಂದು ಚಿಕ್ಕ ಹೊಟೆಲಿನಲ್ಲಿ ರೂಮು ಮಾಡಿ ವಿರಮಿಸಲು ಮುಂದಾದೆವು.
ಊಟದ ನಂತರ ಸಂಜಯ ಹಾಸಿಗೆಗೆ ತೆರಳಿದ. ಅಷ್ಟರಲ್ಲಿ ನನ್ನ
ಪೋನು ರಿಂಗಣಿಸಿತ್ತು. ಅತ್ತಲಿಂದ ನನ್ನಾಕೆ `ಸಿಕ್ಕಿದ್ಲಾ..?` ಎಂದಳು. ನಾನು ನಡೆದ
ವಿಷಯವನ್ನೆಲ್ಲ ಹೇಳಿದೆ. ಆಕೆ ಕೂಡ ನಿಟ್ಟುಸಿರು ಬಿಟ್ಟು `ಹೋಗಲಿ ಬಿಡಿ…’ ಎಂದಳು.
ಆಕೆ ಪೋನ್ ಇಟ್ಟ ನಂತರ ನನಗೆ ನಿದ್ದೆಯೇ ಬರಲಿಲ್ಲ.
ಹೀಗಾಗಿ ನಾನು ಹೊಟೆಲಿನಿಂದ ಹೊರಗೆ ಬಂದು ಕುಳಿತೆ. ಸದ್ದಿಲ್ಲದೇ ನನ್ನ ಹಿಂದೆ ಬಂದಿದ್ದ ಆಶ್ನಾ
ನನ್ನ ಪಕ್ಕ ಬಂದು `ನಿದ್ದೆ ಬಂದಿಲ್ಲವ..’ ಎಂದಳು. `ಊಹೂ..’ ಅಂದೆ.
`ಆತ್ಮೀಯರು ಇಲ್ಲವಾದಾಗ ಹೀಗೆಯೇ ಅನ್ನಿಸುತ್ತದೆ… ನನಗೂ
ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ…’ ಎಂದಳು ಕ್ಷೀಣವಾಗಿ.
`ಯಾಕಮ್ಮಾ… ಏನಾಯ್ತು? ಓದುತ್ತಿರುವ ಹುಡುಗಿ ನೀನು..
ನಿನಗೆ ಅದೇನು ಚಿಂತೆ?’ ಎಂದೆ.
ದೀರ್ಘ ನಿಟ್ಟುಸಿರು ಬಿಟ್ಟ ನಂತರ ಆಶ್ನಾ.. `ಮನೆಯಲ್ಲಿ
ನನಗೆ ಎಲ್ಲವೂ ಇದೆ. ಎಲ್ಲರೂ ನನ್ನನ್ನು ಬಹಳ ಪ್ರೀತಿಸುತ್ತಾರೆ.. ಕೇಳಿದ್ದನ್ನು ಕೊಡಿಸುತ್ತಾರೆ.
ನಾನು ಚನ್ನಾಗಿ ಓದಬೇಕು, ತದನಂತರ ನಮ್ಮೂರಿಗೆ ಮರಳಿ ಶಿಕ್ಷಕಿಯಾಗಿ, ಶಾಲೆಯನ್ನು ಆರಂಭಿಸಬೇಕು…
ಇಂತದ್ದೇ ಕನಸು ನನ್ನ ಅಮ್ಮನದ್ದು. ನಾವು ಖುಷ್ ಖುಷಿಯಿಂದಲೇ ಇದ್ದೆವು. ಆದರೆ ಅಮ್ಮನಿಗೆ
ನಾಲ್ಕೈದು ವರ್ಷಗಳಿಂದ ಸತತ ಕೆಮ್ಮು.. ಪರೀಕ್ಷೆ ಮಾಡಿದರೆ ಶ್ವಾಸಕೋಶದ ಕ್ಯಾನ್ಸರ್ ಎನ್ನುವುದು
ಗೊತ್ತಾಯಿತು.. ತದನಂತರ ನಮ್ಮ ಬದುಕೇ ನರಕದ ಕಡೆಗೆ ಹೊರಳಿತು…’ ಎಂದಳು.
ನಾನು ತಲೆ ಕೊಡವಿದೆ. `ಅಮ್ಮ ಆಗಲೂ, ಈಗಲೂ ನನ್ನನ್ನು
ಬಹಳ ಪ್ರೀತಿಸುತ್ತಾಳೆ. ಆದರೂ ನನಗೆ ಅಪ್ಪ ಇರಬೇಕಿತ್ತು ಅನ್ನಿಸುತ್ತಿದೆ. ನೀವು ನಿಮ್ಮ
ಆತ್ಮೀಯರನ್ನು ಕಳೆದುಕೊಂಡು ದುಃಖ ಪಡ್ತಿದ್ದೀರಲ್ಲ.. ನಾನು ಅಪ್ಪನನ್ನು ಕಳೆದುಕೊಂಡು ಅಷ್ಟೇ
ದುಃಖವನ್ನು ಅನುಭವಿಸುತ್ತಿದ್ದೇನೆ. ಅಕ್ಕರೆಯ ಅಮ್ಮ ನನ್ನ ಬದುಕಿನಲ್ಲಿದ್ದಾರೆ. ಧೈರ್ಯದ ಅಪ್ಪನೇ
ಇಲ್ಲ. ಪ್ರೀತಿಸುವ ಅಮ್ಮ ಇದ್ದಾಳೆ. ಗದರಿಸುವ, ಗದರಿಕೆಯ ಬೆನ್ನಲ್ಲೇ ಮುದ್ದುಗರೆಯುವ ಅಪ್ಪ
ಇಲ್ಲ. ಛೇ.. ಅಪ್ಪ ಇರಬೇಕಿತ್ತು… ಅಪ್ಪನ ನೆನಪಿನಲ್ಲಿಯೇ ಪ್ರತಿ ದಿನ ನನಗೆ ನಿದ್ದೆಯೇ
ಬರುತ್ತಿಲ್ಲ…’ ಎಂದಳು.
ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ ಅವಳ ಮುಖವನ್ನು
ಹಿಡಿದು ನನ್ನ ಒದೆಗೆ ಒರಗಿಸಿಕೊಂಡೆ. ಅದೇನೋ ಆತ್ಮೀಯ ಭಾವ ನಮ್ಮನ್ನು ಕಾಡಿದ್ದು ಸುಳ್ಳಲ್ಲ. ಆ
ರಾತ್ರಿಯಿಡೀ ಹಾಗೆಯೇ ಕುಳಿತಿದ್ದೆವು. ಆಕೆ ನನ್ನ ಎದೆಗೊರಗಿಯೇ ನಿದ್ದೆಗೆ ಜಾರಿದ್ದಳು. ಅವಳ
ಭುಜವನ್ನು ಬಾಚಿ ಹಿಡಿದಿದ್ದ ನನಗೂ ಹಾಗೆಯೇ ನಿದ್ದೆ ಬಂದಿತ್ತು. ಅವಳ ಕೈ ನನ್ನ ಕೈಯನ್ನು
ಭದ್ರವಾಗಿ ಹಿಡಿದಿತ್ತು.
ಬೆಳಿಗ್ಗೆ ಸಂಜಯ ನಮ್ಮನ್ನು ತಟ್ಟಿ ಎಬ್ಬಿಸಿದಾಗಲೇ
ನಮಗೆ ಎಚ್ಚರವಾಗಿದ್ದು.. ಪ್ರಾತರ್ವಿಧಿ ಮುಗಿದ ನಂತರ ನಮ್ಮ ಅಂದಿನ ಪಯಣ ಆರಂಭವಾಗಿತ್ತು. ವಿಜೋಯ್
ನಗರ ಎಂಬ ಪ್ರಕೃತಿಯ ಸುಂದರ ಸೃಷ್ಟಿಯ ಕಡೆಗೆ ನಮ್ಮ ಪಯಣ ಹೊರಟಿತ್ತು.