Monday, April 1, 2019

ಅನುರಕ್ತ (ಕಥೆ-3)


ಜೀಪು ಗುವಾಹಟಿಯಿಂದ 410 ಕಿಲೋಮೀಟರ್ ದೂರದ ದಾಮ್ಚೆ ಕಡೆಗೆ ಹೊರಟಿತು. ವಿಶಾಲವಾಗಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಯ ಪಕ್ಕದಲ್ಲಿನ ರಸ್ತೆಯಲ್ಲಿ ಜೀಪು ಸಾಗುತ್ತಿತ್ತು. ಜೀಪನ್ನು ಏರಿದ ನಂತರ ನಮಗೆ ಸುಮ್ಮನೇ ಹೊತ್ತು ಹೋಗಲಿಲ್ಲ.
ಆಶ್ನಾಳನ್ನು ಸಂಜಯ ಮಾತಿಗೆ ಎಳೆದ. ಹಿಂದಿ ಹಾಗೂ ಇಂಗ್ಲೀಷಿನಲ್ಲಿ ನಾವು ಕೇಳುತ್ತಿದ್ದ ಪ್ರಶ್ನೆಗಳಿಗೆ ಆಶ್ನಾ ಚುಟುಕಾಗಿ ಹಾಗೂ ಚುರುಕಾಗಿ ಉತ್ತರ ನೀಡುತ್ತಿದ್ದಳು. ಆಕೆಯ ಬಳಿ ಸಂವಹನ ನಡೆಸಿದ ನಂತರ ಆಕೆ ಹೈಸ್ಕೂಲು ಓದುತ್ತಿರುವವಳೆಂದೂ, ಆಗ ತಾನೇ ಪ್ರಾಥಮಿಕ ಶಾಲೆ ಮುಗಿಸಿರುವವಳೆಂದೂ ತಿಳಿಯಿತು. ಹೊಟ್ಟೆ ಪಾಡಿಗೆ ಹಾಗೂ ಹೊಸ ಹೊಸ ಜನರನ್ನು ಪರಿಚಯ ಮಾಡಿಕೊಳ್ಳುವ, ತಿಳಿದುಕೊಳ್ಳುವ ಸಲುವಾಗಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆಂದೂ ಹೇಳಿದಳು.
ನಾನು ಹಾಗೂ ಸಂಜಯ ಆಕೆಯ ಬಳಿ ಮಾತನಾಡಿದಂತೆಲ್ಲ ಆಕೆ ನಮಗೆ ಅಸ್ಸಾಮಿನ ಸಂಸ್ಕೃತಿ, ಜನಪದ ಇತ್ಯಾದಿಗಳನ್ನೆಲ್ಲ ತಿಳಿಸುತ್ತ ಹೋದಳು. ಚಿಕ್ಕ ಹುಡುಗಿ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎನ್ನಿಸಿತು ನನಗೆ.
`ಆಶ್ನಾ… ನಿನ್ ಹೆಸರು ಬಹಳ ವಿಶಿಷ್ಟವಾಗಿದೆ. ಏನಿದರ ಅರ್ಥ..?’ ಎಂದು ಕೇಳಿದೆ.
ಆಶ್ನಾ ಅದಕ್ಕೆ ಇಂಗ್ಲೀಷಿನಲ್ಲಿಯೇ Beloved, Devoted to Love, Friend, The one to be acknowledged or praised; beloved; devoted to love ಎನ್ನುವ ಅರ್ಥವಿದೆ ನನ್ನ ಹೆಸರಿಗೆ ಎಂದಳು. ನಾನು ಅಚ್ಚರಿ ಪಟ್ಟೆ. ನನಗರಿವಿಲ್ಲದಂತೆ `ಅರ್ಥ ಎಷ್ಟು ಚನ್ನಾಗಿದೆ ಅಲ್ಲವಾ…’ ಎಂದೆ ಕನ್ನಡದಲ್ಲಿ.
ಆಕೆ ತಕ್ಷಣವೇ `ಕನ್ನಡ್…’ ಎಂದಳು.
ನಾನು ಹಾಗೂ ಸಂಜಯ ಇಬ್ಬರೂ `ಹೌದು..’ ಎಂದೆವು.
`ಯಾಕೆ ನಿಂಗೆ ಕನ್ನಡ ಬರುತ್ತಾ?’ ಸಂಜಯ ಕೇಳಿದ್ದ.
`ಹು… ಥೋಡಾ ಥೋಡಾ…’ ಎಂದಳು ಆಶ್ನಾ.
`ಹೇಗೆ? ಕನ್ನಡ ಹೇಗೆ ಗೊತ್ತು ನಿಂಗೆ?’ ಅಚ್ಚರಿಯಿಂದಲೇ ಕೇಳಿದ್ದೆ ನಾನು.
`ನಾನು ಕನ್ನಡ ಕಲಿತಿದ್ದೇನೆ. ಅಲ್ಪ, ಸ್ವಲ್ಪ.. ಹೀಗೆ ಯಾರಾದರೂ ಬಂದಾಗ ಮಾತನಾಡಲು ಬೇಕಾಗುತ್ತದೆ ಎನ್ನುವ ಕಾರಣಕ್ಕೆ.. ಕಲಿತಿದ್ದೇನೆ.. ಇನ್ನೂ ಕೆಲವು ಭಾಷೆಗಳು ಬರುತ್ತವೆ ನನಗೆ… ‘ ಎಂದು ಆಶ್ನಾ ಹೇಳಿದಾಗ ನಾವು ಮತ್ತಷ್ಟು ಅಚ್ಚರಿಗೆ ಒಳಗಾಗಿದ್ದೆವು.
`ಯಾವ್ಯಾವ ಭಾಷೆ ಬರುತ್ತೆ ನಿಂಗೆ..?’ ಎಂದು ಕೇಳಿದೆ.
`ಹಿಂದಿ, ಇಂಗ್ಲೀಷ್, ಅಸ್ಸಾಮಿ, ಬೋಡೋ, ಮಣಿಪುರಿ, ಬೆಂಗಾಲಿ, ಕನ್ನಡ..’ ಎಂದಳು ಆಶ್ನಾ.
`ಇಷ್ಟೆಲ್ಲ ಹೇಗೆ? ಯಾವಾಗ ಕಲಿತೆ?’
`ನಮ್ಮದು ಅಸ್ಸಾಮ್. ಸಹಜವಾಗಿ ಮಾತ್ರಭಾಷೆ ಅಸ್ಸಾಮ್, ಜತೆಗೆ ಇಲ್ಲಿನ ಎಲ್ಲರಿಗೂ ಬೆಂಗಾಲಿ ಬಂದೇ ಬರುತ್ತೆ. ಬೆಂಗಾಲಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರಲ್ಲ. ಅವರ ಜತೆ ಮಾತನಾಡಬೇಕಲ್ಲ.. ಜತೆಗೆ ನಮ್ಮ ಈಶಾನ್ಯ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳನ್ನು ಸಹಜವಾಗಿಯೇ ನಾವು ಮಾತನಾಡುತ್ತೇವೆ. ಮಣಿಪುರಿ, ಮಿಜೋ, ಬೋಡೋ ಹೀಗೆ ಹಲವು. ಇವು ಆಡುನುಡಿಯಂತೆ. ನಾನೂ ಕಲಿತೆ.. ಇನ್ನು ಹಿಂದಿ, ಇಂಗ್ಲೀಷ್ ಶಾಲೆಯಲ್ಲಿ ಕಲಿಸಿದರು. ನಾನು ಸ್ವಲ್ಪ ಚನ್ನಾಗಿ ಕಲಿತುಕೊಂಡೆ…’ ಎಂದಳು ಆಶ್ನಾ..
`ಅದು ಸರಿ… ಕನ್ನಡ.. ಕನ್ನಡ ಹೇಗೆ ಕಲಿತದ್ದು..?’ ನಾನು ಕುತೂಹಲದಿಂದ ಕೇಳಿದ್ದೆ. ಯಾವುದೋ ಅಸ್ಸಾಮಿ ಹುಡುಗಿ ಕನ್ನಡ ಮಾತನಾಡಿದ್ದು ನನಗೂ ಸಂಜಯನಿಗೂ ತೀವ್ರ ಅಚ್ಚರಿಯನ್ನು ತಂದಿದ್ದಲ್ಲದೇ ಆಕೆಯ ಬಗ್ಗೆ ಕುತೂಹಲವನ್ನು ಹುಟ್ಟು ಹಾಕಿತ್ತು.
`ಯಾಕೋ ಗೊತ್ತಿಲ್ಲ.. ಹೀಗೆ ಒಂದು ದಿನ ಶಾಲೆಯಲ್ಲಿ ಶಿಕ್ಷಕರು ಏನನ್ನೋ ಕಲಿಸುತ್ತಿದ್ದಾಗ ಕನ್ನಡ ಎನ್ನುವ ಭಾಷೆ ಇದೆ, ಅದು ದಕ್ಷಿಣ ಭಾರತದ್ದು… ಭಾರತದ ಅಧಿಕೃತ ಭಾಷೆಗಳಲ್ಲಿ ಒಂದು ಎಂದರು. ತಮಿಳು, ತೆಲಗು, ಮಲೆಯಾಳಂ ಕುರಿತೂ ಅವರು ಹೇಳಿದ್ದರಾದರೂ, ಅವುಗಳ ಕುರಿತು ಗಮನ ಹೋಗಲಿಲ್ಲ. ಕನ್ನಡದ ಬಗ್ಗೆ ಅಲ್ಲಿ, ಇಲ್ಲಿ ಅಂತರ್ಜಾಲದಲ್ಲಿ ಹುಡುಕಿ ತಿಳಿದೆ. ಒಂದಷ್ಟು ಸಾರಿ ಕೆಲವು ಕನ್ನಡದವರು ಇಲ್ಲಿ ಪ್ರವಾಸಕ್ಕೆ ಬಂದಿದ್ದರು. ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ ಬಳಿ ನಾನು ಕಲಿತೆ…’ ಎಂದಳು ಆಶ್ನಾ.
ನಮಗೆ ಆಶ್ನಾಳ ಬಗ್ಗೆ ವಿಶೇಷ ಗೌರವ ಹುಟ್ಟಿತು. ಚಿಕ್ಕ ಹುಡುಗಿ ಎಷ್ಟೆಲ್ಲ ತಿಳಿದಿದ್ದಾಳ್ಲ, ಏನೆಲ್ಲ ಕಲಿತುಕೊಂಡಿದ್ದಾಳಲ್ಲ.. ಎಂದುಕೊಂಡೆ.
`ಸರಿ ನಿನ್ನ ಕುಟುಂಬದ ಬಗ್ಗೆ ಹೇಳು..’ ನಾನು ಕೇಳಿದೆ.
`ನಮ್ಮದು ಬಹು ದೊಡ್ಡ ಕುಟುಂಬ.. ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಹಲವರು ಇದ್ದಾರೆ… ಅವಿಭಕ್ತ ಕುಟುಂಬ ನಮ್ಮದು..’ ಎಂದಳು.
`ನಿನ್ನ ತಂದೆ… ಏನು ಮಾಡುತ್ತಿದ್ದಾರೆ? ಯಾವ ಊರು ನಿನ್ನದು?’ ಎಂದೆ.
`ನನ್ನ ತಂದೆ…. ನನ್ನ ತಂದೆ… ನನಗೆ ತಂದೆ ಇಲ್ಲ…’ ಎಂದು ಕ್ಷೀಣವಾಗಿ ಹೇಳಿದಳು. ಛೇ… ಪಾಪ… ಎಂದು ಗೊಣಗಿದ ಸಂಜಯ. ನನಗೂ ಒಂಥರಾ ಅನ್ನಿಸಿತು.
`ನಿನ್ನ ತಾಯಿ…?’ ಎಂದೆ
`ಆಕೆ ಊರಿನಲ್ಲಿದ್ದಾರೆ. ಅರುಣಾಚಲ ಪ್ರದೇಶದ ವಿಜೋಯ್ ನಗರ ಎಂಬಲ್ಲಿ ನನ್ನ ಮನೆ ಇದೆ. ಅಲ್ಲಿ ಎಲ್ಲ ವಾಸಿಸುತ್ತಿದ್ದಾರೆ.’ ಎಂದಳು.
`ತಾಯಿ ಏನು ಮಾಡುತ್ತಾರೆ..’ ಎಂದೆ
`ಅವರಿಗೆ ಹುಷಾರಿಲ್ಲ. ಅದೇನೋ ಖಾಯಿಲೆ ಆಕೆಯನ್ನು ಬಾಧಿಸುತ್ತಿದೆ. ಒಂದೆರಡು ವರ್ಷಗಳಾದವು ಆಕೆ ಹಾಸಿಗೆ ಹಿಡಿದು… ‘ ಎಂದಾಗ ನಮ್ಮ ಮನಸ್ಸಿನಲ್ಲಿ ಉಂಟಾದ ಆಘಾತ ಅಷ್ಟಿಷ್ಟಲ್ಲ. ನಾನು ಹಾಗೂ ಸಂಜಯ ಇಬ್ಬರೂ ಮೌನವಾಗಿ ಮುಖ ಮುಖ ನೋಡಿಕೊಂಡು ನಿಟ್ಟುಸಿರು ಬಿಟ್ಟೆವು.
ತದನಂತರದಲ್ಲಿ ಆಕೆ ನಮ್ಮ ಜೀಪು ಪ್ರತಿ ಊರನ್ನು ಹಾದು ಹೋಗುವಾಗಲೂ ಆ ಊರಿನ ವಿಶೇಷತೆಗಳು, ಅಲ್ಲಿನ ಸಂಪ್ರದಾಯ, ಸಂಸ್ಕೃತಿ, ಆಚರಣೆ ಹೀಗೆ ಹೇಳುತ್ತಲೇ ಹೋದಳು. ಈಗ ಸೌಮ್ಯವಾಗಿ ಹರಿಯುವ ಬ್ರಹ್ಮಪುತ್ರಾ ನದಿ ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಇಕ್ಕೆಲಗಳ ಅದೆಷ್ಟೋ ಕಿಲೋಮೀಟರ್ ಗಳನ್ನು ಆಪೋಶನ ತೆಗೆದುಕೊಳ್ಳುವುದು ಇತ್ಯಾದಿಗಳ ಬಗ್ಗೆ ಕೂಡ ಸವಿಸ್ತಾರವಾಗಿ ಹೇಳಿದಾಗ ನನಗೆ ಆಕೆಯ ಕುರಿತು ಮೂಡಿದ್ದ ಗೌರವದ ಭಾವನೆ ಇನ್ನಷ್ಟು ಹೆಚ್ಚಿತು.
ಗುವಾಹಟಿಯಿಂದ ಹೊರಟಿದ್ದ ನಮ್ಮ ಜೀಪು ಬೆಜೇರಾ, ಸಿಪಾಜಾರ್, ಮಂಗಲ್ ದೋಯಿ, ರೋವ್ಟಾ, ಓರಾಂಗ್, ಸಿರಾಜುಲಿ ಮೂಲಕ ತೇಜ್ಪುರಕ್ಕೆ ಬಂದಿತ್ತು. ಅಲ್ಲಿ ಊಟ ಮಾಡಿದೆವು… ತದನಂತರ ಮುಂದುವರಿದೆವು. ದಾಮ್ವೆ ಹತ್ತಿರ ಬಂದಂತೆಲ್ಲ ನನ್ನೆದೆ ಇನ್ನಷ್ಟು ವೇಗವಾಗಿ ಹೊಡೆದುಕೊಳ್ಳಲು ಆರಂಭಿಸಿತ್ತು.
ತೇಜ್ಪುರದ ನಂತರ ನಮ್ಮ ಜೀಪು ದಲೈಬಿಲ್, ಬೆಹಲಿ, ಗೋಹ್ಪುರ್, ಬಿಹ್ಪುರ್, ನಾರ್ತ್ ಲಖೀಮ್ಪುರ, ಗೋಗಾಮುಖ್ ಗಳನ್ನು ಹಾದು ದಾಮ್ವೇ/ದಾಮ್ಚೇಯನ್ನು ತಲುಪಿತು.
ಅಲ್ಲಿ ಜೀಪು ಇಳಿಯುತ್ತಿದ್ದ ಹಾಗೆ ಆಶ್ನಾ ನನ್ನ ಬಳಿ ` ಸರ್ ಇದು ದಾಮ್ವೇ ಅಥವಾ ದಾಮ್ಚೇ ಅಲ್ಲ.. ಇದನ್ನು ದೇಮ್ಜಿ ಎಂದು ಕರೆಯುತ್ತಾರೆ..’ ಎಂದಳು. ನಂತರ ನಿಮಗೆ ಎಲ್ಲಿ ಹೋಗಬೇಕು ಹೇಳಿ ಎಂದಳು. ನಾನು ತಬ್ಬಿಬ್ಬಾದೆ..

(ಮುಂದುವರಿಯುವುದು)

Sunday, March 31, 2019

ಅನುರಕ್ತ (ಕಥೆ-2)



ನಂತರ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ನಾನು ಆತಂಕಕ್ಕೆ ಈಡಾದೆ. ಆಕೆ ನಾಪತ್ತೆಯಾದ ಹಲವು ದಿನಗಳ ನಂತರ ಆಕೆಯಿಂದ ಒಂದು ಪತ್ರ ಬಂತು. ಅದರಲ್ಲಿ ಆಕೆ ತಾನು ಊರಿಗೆ ಮರಳಿದ್ದೇನೆಂದೂ, ತನ್ನ ತಂದೆಗೆ ವಿಷಯ ಗೊತ್ತಾಗಿ ಬಲವಂತದಿಂದ ಕರೆದುಕೊಂಡು ಬಂದಿದ್ದಾರೆಂದೂ ತಿಳಿಸಿದ್ದಳು. ನಾನು ಒಮ್ಮೆ ನಿರಾಳನಾದರೂ ತದನಂತರದಲ್ಲಿ ಸ್ವಲ್ಪ ಬೇಜಾರೇ ಆಗಿತ್ತು.
ಅದೇ ಪತ್ರದಲ್ಲಿ, ತಂದೆ ತನ್ನನ್ನು ಬೇರೊಂದು ಮದುವೆಗೆ ಒತ್ತಾಯ ಮಾಡುತ್ತಿದ್ದಾರೆಂದೂ, ತಾನದಕ್ಕೆ ಒಪ್ಪಿಲ್ಲವೆಂದೂ, ನನಗಾಗಿ ಕಾಯುತ್ತಿರುತ್ತೇನೆ ಎಂದೂ ತಿಳಿಸಿದ್ದಳು. ಅಲ್ಲದೇ ಆಕೆಯ ಗರ್ಭಿಣಿಯಾದ ವಿಷಯವನ್ನೂ ತಿಳಿಸಿದ್ದಳು. ನನಗೆ ಅದು ಆತಂಕಕ್ಕೆ ಈಡುಮಾಡಿತ್ತು.
ನಾನಿನ್ನೂ ಬದುಕಿನಲ್ಲಿ ನೆಲೆ ಕಂಡುಕೊಂಡಿರಲಿಲ್ಲ. ಓದು ಆಗತಾನೆ ಮುಗಿದಿತ್ತು. ಆದರೆ ಜೀವನ ನಡೆಸಲು ಯಾವುದೇ ಉದ್ಯೋಗವೂ ಸಿಕ್ಕಿರಲಿಲ್ಲ. ನಾನು ಉದ್ಯೋಗಕ್ಕಾಗಿ ಹಲವು ಕಂಪನಿಗಳಿಗೆ ನನ್ನ ಸ್ವವಿವರಗಳನ್ನು ಕಳಿಸಿದ್ದೆ. ಹಲವು ಸಂದರ್ಶನಗಳನ್ನೂ ಎದುರಿಸಿದ್ದೆ. ಆಕೆ ನಂತರದ ದಿನಗಳಲ್ಲಿ ಮತ್ತೂ ಕೆಲವು ಪತ್ರಗಳನ್ನು ಬರೆದಿದ್ದಳು. ನಾನು ಒಂದೆರಡು ಸಾರಿ ಉತ್ತರ ಕೊಟ್ಟರೂ ನಂತರದಲ್ಲಿ ಅವುಗಳನ್ನು ನಿರ್ಲಕ್ಷ್ಯ ಮಾಡಿದ್ದೆ.
ಹೀಗಿದ್ದಾಗಲೇ ನನಗೆ ಜಾಬ್ ಕೂಡ ಸಿಕ್ಕಿತು. ಆ ನಂತರದಲ್ಲಿ ಆಕೆ ನನ್ನ ಮನಸ್ಸಿನಿಂದ ಕಾರಣವಿಲ್ಲದೇ ದೂರಾಗತೊಡಗಿದಳು. ಬಹುಶಃ ನನಗೆ ಉದ್ಯೋಗ ಸಿಕ್ಕಿತ್ತಲ್ಲ. ಹಾಗಾಗಿ ಅದರಲ್ಲಿ ಬ್ಯುಸಿಯೂ ಆಗಿದ್ದೂ ಕಾರಣವಾಗಿರಬೇಕು. ಒಟ್ಟಿನಲ್ಲಿ ನನಗೆ ಅವಳ ನೆನಪು ಮರೆಯತೊಡಗಿತ್ತು. ಆಕೆ ಮಾತ್ರ ಪತ್ರಗಳ ಮೇಲೆ ಪತ್ರಗಳನ್ನು ಬರೆಯುತ್ತಲೇ ಇದ್ದಳು. ಪ್ರತಿ ಪತ್ರದ ಕೊನೆಯಲ್ಲಿಯೂ ನಾನು ಸದಾ ನಿನಗಾಗಿ ಕಾಯುತ್ತಲೇ ಇರುತ್ತೇನೆ ಎನ್ನುವ ಸಾಲುಗಳಿರುತ್ತಿದ್ದವು. ಆಮೇಲೆ ಕೆಲವು ದಿನಗಳ ನಂತರ ಆಕೆಯಿಂದ ಪತ್ರ ಬರುವುದು ನಿಂತು ಹೋಯಿತು. ನನಗೆ ಆಗ ಆತಂಕವಾದರೂ ದಿನಕಳೆದಂತೆಲ್ಲ ನಾನು ಅವಳ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ.
ಆ ಸಂದರ್ಭದಲ್ಲೇ ನನಗೆ ಮನೆಯಲ್ಲಿ ಹೆಣ್ಣು ನೋಡಲು ಆರಂಭಿಸಿದ್ದರು. ಮನೆಯವರಿಗೆ ಕೊನೆಗೆ ಒಬ್ಬ ಹುಡುಗಿ ಇಷ್ಟವಾಗಿ ನನ್ನ ಬಳಿ ಕೇಳೀದ್ದರು. ನಾನು ಮೊದ ಮೊದಲು ಬೇಡ ಎಂದರೂ ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಮದುವೆಗೆ ಒಪ್ಪಿಕೊಂಡೆ. ಶುಭ ಮುಹೂರ್ತ ಒಂದರಲ್ಲಿ ನನಗೆ ಮದುವೆಯೂ ಆಯಿತು. ಮದುವೆಯ ನಂತರದ ಒಂದೆರಡು ವರ್ಷಗಳಲ್ಲಿ ನಮ್ಮ ಬದುಕಿನ ಘಳಿಗೆ ಬಹಳ ರಸಮಯವಾಗಿತ್ತು. ಆ ಸಂದರ್ಭದಲ್ಲೆಲ್ಲೂ ಅವಳು ನನಗೆ ನೆನಪಾಗಲೇ ಇಲ್ಲ. ದಿನ ಕಳೆಯಿತು, ತಿಂಗಳುಗಳು ಉರುಳಿದವು. ಒಂದು ಆರಾಯಿತು. ಆರು ಹನ್ನೆರಡಾಯಿತು. ನೋಡ ನೋಡುತ್ತ ವರ್ಷಗಳೂ ಸಂದವು. ನಮ್ಮ ಬದುಕು ಕಳೆಯುತ್ತಲೇ ಇತ್ತು. ಆದರೆ ನಮಗೆ ಎಲ್ಲ ಸಂತಸದ ನಡುವೆ ಕೂಡ ಒಂದು ಕೊರಗು ಕಾಡುತ್ತಲೇ ಇತ್ತು. ನಮಗೆ ಮಕ್ಕಳಾಗಿರಲಿಲ್ಲ.
ಮದುವೆಯಾದ ಹೊಸತರಲ್ಲಿ ಈಗ ಬೇಡ, ಈಗ ಮಕ್ಕಳು ಬೇಡ ಎಂದುಕೊಂಡೆವು. ಆಮೇಲಾಮೇಲೆ ಮಕ್ಕಳ ಆಸೆ ಹೆಚ್ಚಾಯಿತು. ಮದುವೆಯಾಗಿ ದಶಕಗಳು ಕಳೆಯುತ್ತ ಬಂದವು. ಆಗ ಮಕ್ಕಳನ್ನು ಮಾಡಿಕೊಳ್ಳೋಣ ಎಂದುಕೊಂಡರೆ ಊಹೂ.. ಆಗಲೇ ಇಲ್ಲ. ಕೊನೆಗೊಮ್ಮೆ ವೈದ್ಯರನ್ನು ಭೇಟಿ ಮಾಡಿದೆವು. ಆಗ ವೈದ್ಯರು ನನ್ನಾಕೆಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದಾಗ ನನಗೆ ಆಕಾಶವೇ ಒಮ್ಮೆ ಧರೆಗೆ ಇಳಿದು ಬಂದಿತ್ತು. ತದನಂತರದಲ್ಲಿ ನಮ್ಮ ಬದುಕು ಯಾಂತ್ರಿಕವಾಗಿ ಸಾಗುತ್ತಿತ್ತು.
ಊಟ, ತಿಂಡಿ, ನಿದ್ದೆ, ಸಹಜೀವನ, ಮಿಲನ, ಉದ್ಯೋಗ ಇವುಗಳೆಲ್ಲ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದವು. ನನ್ನಾಕೆ ಕೂಡ ಒಂದೆರಡು ಸಾರಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯೋಣವಾ ಎಂದೂ ಕೇಳಿದ್ದಳು. ಅದಕ್ಕೆ ನಾನು ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಇಬ್ಬರ ಮನಸ್ಸಿನಲ್ಲಿಯೂ ಕೊರಗಂತೂ ಇದ್ದೇ ಇತ್ತು.
ಹೀಗೆ ಬದುಕು ಸಾಗುತ್ತಿದ್ದ ಸಂದರ್ಭದಲ್ಲಿ ವಿದ್ಯುಲ್ಲತಾ ನೆನಪಾಗಿದ್ದಳು. ಇದೀಗ 13-14 ವರ್ಷಗಳಾದ ಮೇಲೆ ಈಗ ವಿದ್ಯುಲ್ಲತಾಳ ನೆನಪು ನನ್ನ ಬಿಡದೇ ಕಾಡುತ್ತಿದೆ. ಆಕೆ ಹೇಗಿದ್ದಾಳೋ, ಏನು ಮಾಡುತ್ತಿದ್ದಾಳೋ ಎನ್ನುವುದು ನನ್ನ ಒಂದೇ ಸಮನೆ ಕಾಡುತ್ತಿದೆ. ಒಮ್ಮೆ ಆಕೆಯನ್ನು ನೋಡಬೇಕೆಂಬ ತುಡಿತ ಹೆಚ್ಚುತ್ತಿದೆ. ಅವಳನ್ನು ನೋಡಬೇಕು, ಹೇಗಿದ್ದೀಯಾ ಅಂತ ಕೇಳಬೇಕು, ಯಾಕೋ ಆ ದಿನಗಳಲ್ಲಿ ನಾನು ನಿನ್ನನ್ನು ದೂರ ಮಾಡಿಕೊಳ್ಳಬಾರದಿತ್ತು ಅಂತೆಲ್ಲ ಹೇಳಬೇಕು ಅನ್ನಿಸುತ್ತಿದೆ ಗೆಳೆಯಾ… ನನ್ನ ತಪ್ಪಿಗೆಲ್ಲ ಕ್ಷಮೆ ಕೇಳಬೇಕು ಅನ್ನಿಸುತ್ತಿದೆ… ಎಂದು ಸಂಜಯನ ಬಳಿ ಒಂದೇ ಉಸಿರಿಗೆ ಹೇಳಿದೆ.
ಸಂಜಯ ಒಮ್ಮೆ ತಲೆ ಕೊಡವಿಕೊಂಡ.
ಆ ದಿನಗಳಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನೀನು ತಪ್ಪಂತೂ ಮಾಡಿದ್ದೆ ದೋಸ್ತ… ಆಗಲೇ ನೀನು ಇದನ್ನು ಸರಿಪಡಿಸಿಕೊಳ್ಳಬೇಕಿತ್ತು… ಎಂದ…
ಹೇಗೆ ಮಾಡಬೇಕಿತ್ತು ದೋಸ್ತ? ಅಪ್ಪ ಅಮ್ಮನ ಮಾತಿಗೆ ಕಟ್ಟು ಬಿದ್ದಿದ್ದೆನಲ್ಲ. ವಿದ್ಯುಲ್ಲತಾಳಿಗಿಂತ ಅವರೇ ಮುಖ್ಯವಾಗಿದ್ದರಲ್ಲ… ಎಂದು ನಿಡುಸುಯ್ದೆ.
ಹ್ಮ್… ಅದೂ ಹೌದು.. ಆಗ ಮಾಡಿದ್ದು ಆವಾಗಿನದ್ದು.. ಅದರ ಸರಿ-ತಪ್ಪುಗಳ ಲೆಕ್ಕಾಚಾರ ಈಗ ಮಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಬಿಡು… ಅದ್ ಸರಿ, ನಿನ್ನ ಮನೆಯವಳಿಗೆ ವಿದ್ಯುಲ್ಲತಾಳ ಬಗ್ಗೆ ಗೊತ್ತಾ… ಎಂದು ಕೇಳಿದ ಸಂಜಯ..
ಹು… ತೀರಾ ಇತ್ತೀಚೆಗೆ ಅವಳಿಗೆ ವಿದ್ಯುಲ್ಲತಾಳ ಬಗ್ಗೆ ಹೇಳಿದೆ. ಮೊದಲ ಸಾರಿ ಸಿಟ್ಟಾದಳು, ಮಾತು ಬಿಟ್ಟಳು. ಆ ನಂತರದಲ್ಲಿ ಅವಳಿಗೆ ಆ ದಿನಗಳ ಬದುಕು, ವಾಸ್ತವವನ್ನು ವಿಸ್ತಾರವಾಗಿ ತಿಳಿಸಿದೆ. ಅರ್ಥ ಮಾಡಿಕೊಂಡಳು. ನಾನು ಈಗ ಅಸ್ಸಾಮಿಗೆ ಹೊರಟಿದ್ದೀನಲ್ಲ, ಅದಕ್ಕೆ ಪ್ರಮುಖ ಕಾರಣಕರ್ತೆ ಅವಳೇ.. ಒಮ್ಮೆ ಹೋಗಿ ನೋಡಿ ಬನ್ನಿ ಎಂದಳು. ಸಾಧ್ಯವಾದರೆ ಆಕೆಯನ್ನು ಕರೆದುಕೊಂಡು ಬನ್ನಿ ಎಂದಳು… ಹೀಗಾಗಿ ಹೊರಟಿದ್ದೇನೆ ನೋಡು ಎಂದೆ..
ನಿನ್ನಾಕೆ ಬಹಳ ದೊಡ್ಡ ಮನಸ್ಸಿನವಳು… ಎಂದ ಸಂಜಯ..

--
ಇದಾಗಿ ಎರಡೂವರೆ ದಿನಗಳ ನಂತರ ನಮ್ಮನ್ನು ಹೊತ್ತಿದ್ದ ರೈಲು ಆಂಧ್ರ, ಒಡಿಶಾ, ಕೋಲ್ಕತ್ತಾ, ಸಿಲಿಗುರಿ ಮುಂತಾದ ಊರುಗಳನ್ನು ದಾಟಿ ಅಸ್ಸಾಮನ್ನು ತಲುಪಿತು. ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೇ ಅತ್ಯಂತ ದೊಡ್ಡ ಮಹಾನಗರವಾದ ಗುವಾಹಟಿಯನ್ನು ನಾವು ತಲುಪಿದ್ದೆವು.
`ಇಲ್ಲಿಂದ ಎಲ್ಲಿಗೆ ಹೋಗೋದು..?’ ಎಂದು ಕೇಳಿದ್ದ ಸಂಜಯ.
ಸತ್ಯವಾಗಿ ಹೇಳಬೇಕು ಎಂದರೆ ನನಗೆ ಎಲ್ಲಿಗೆ ಹೋಗಬೇಕು ಎನ್ನೋದು ಗೊತ್ತಿಲ್ಲ… ಎಂದೆ.
ವಾಟ್.. ಎಂದು ಬೆಚ್ಚಿ ಬಿದ್ದ ಸಂಜಯ, ನಿಂಗೆ ಮಂಡೆ ಸಮಾ ಇಲ್ಲೆ ಎಂದು ಬೈದ. ಇಲ್ಲಿವರೆಗೆ ಬಂದ ಮೇಲೆ ಎಲ್ಲಿಗೆ ಹೋಗೋದು ಅಂತ ಕೇಳ್ತೀಯಲ್ಲ ಎಂದು ಸಿಟ್ಟಿನಿಂದ ನನಗೆ ಬಯ್ಯಲು ಆರಂಭಿಸಿದ.
ಇರು ಮಾರಾಯಾ.. ಆಕೆ ಬರೆದ ಪತ್ರದಲ್ಲಿ ಯಾವುದೋ ಊರಿನ ಹೆಸರನ್ನು ಹೇಳಿದ್ದಳು. ಆದರೆ ಅದು ಮರೆತು ಹೋಗಿದೆ. ಅದೇನೋ ದಾಮ್ವೇ ಅಂತಲೋ, ದಾಮ್ಚೇ ಅಂತಲೋ ಏನೋ ಒಂದು ಹೆಸರು ಹೇಳಿದ್ದಳು. ಬ್ರಹ್ಮಪುತ್ರಾ ನದಿಯ ಪಕ್ಕದಲ್ಲಿದೆ ನಮ್ಮೂರು ಅಂತ ಹೇಳೀದ್ದಳು ಎಂದೆ.
ತಥ್.. ಇಂವನ ನಂಬಿಕೊಂಡು ಇಲ್ಲಿಗೆ ಬಂದೆ. ಇಂವನಿಗೆ ಸರಿಯಾದ ಅಡ್ರೆಸ್ಸೇ ಗೊತ್ತಿಲ್ಲ.. ಹಲ್ಕಟ್ ನನ್ಮಗ.. ಅಂತ ಸಂಜಯ ಬೈದವನೇ, ಸರಿ ಮುಂದೆ ಏನು ಮಾಡೋದು ಅಂದ.
ಇಲ್ಲಿ ಸ್ಥಳೀಯ ಗೈಡ್ ಗಳು ಸಿಕ್ತಾರಂತೆ. ಅವರನ್ನು ಕರೆದುಕೊಂಡು ದಾಮ್ವೇಯೋ ದಾಮ್ಚೇಯೋ ಏನೋ ಒಂದು ಊರಿದೆಯಲ್ಲ ಅಲ್ಲಿಗೆ ಹೋಗೋಣ. ಆಕೆಯನ್ನು ಹುಡುಕೋಣ.. ಎಂದೆ.
ಇದು ಆಗಿ, ಹೋಗುವ ಮಾತಲ್ಲ… ಎಂದ ಸಂಜಯ..
ಮಾಡೋಣ ಮಾರಾಯಾ, ನನಗ್ಯಾಕೋ ಆಕೆಯನ್ನು ಹುಡುಕುತ್ತೇವೆ, ನಾನು ಅವಳನ್ನು ಭೇಟಿಯಾಗುತ್ತೇನೆ ಎಂಬ ದೃಢ ನಂಬಿಕೆ ಹೊಂದಿದ್ದೇನೆ. ಮೊದಲು ಇಲ್ಲಿ ಗೈಡ್ಗಳನ್ನು ಒದಗಿಸುವ ಸ್ಥಳಕ್ಕೆ ಹೋಗೋಣ ನಡಿ.. ಎಂದೆ.
ಗೊಣಗುತ್ತಲೇ ನನ್ನ ಜತೆ ಬಂದ ಸಂಜಯ. ನಾನು ಗುವಾಹಟಿಯ ಪ್ರಮುಖ ಬೀದಿಯಲ್ಲಿರುವ, ಟೂರಿಸ್ಟ್ ಆಫೀಸಿಗೆ ಹೋದೆ. ಅಲ್ಲಿದ್ದ ವ್ಯಕ್ತಿ ಮೊದಲು ಅಸ್ಸಾಮಿಯಲ್ಲಿ ಮಾತನಾಡಿದ, ನಂತರ ಬೆಂಗಾಲಿಯಲ್ಲಿ ಮಾತನಾಡಿದ. ನಾವು ಹಿಂದಿ ಹಾಗೂ ಇಂಗ್ಲೀಷಿನಲ್ಲಿ ಮಾತನಾಡಲು ಆರಂಭಿಸಿದ ಕೂಡಲೇ ಆತನೂ ಹಿಂದಿ ಹಾಗೂ ಇಂಗ್ಲೀಷ್ ಶುರುಹಚ್ಚಿಕೊಂಡ. ನಾನು ಅವನ ಬಳಿ ದಾಮ್ವೇ ಎನ್ನುವ ಊರಿಗೆ ಹೋಗಬೇಕೆಂದೂ, ಯಾರಾದರೂ ಸ್ಥಳೀಯ ಭಾಷೆ ಹಾಗೂ ಹಿಂದಿ-ಇಂಗ್ಲೀಷ್ ಭಾಷೆ ಗೊತ್ತಿರುವ ಗೈಡ್ ಇದ್ದರೆ ಬೇಕೆಂದೂ ಹೇಳಿದೆ.
ಆತ ಯಾರು ಯಾರಿಗೂ ಪೋನ್ ಮಾಡಿದ. ಹಲವು ಕಡೆ ಪೋನ್ ಮಾಡಿದ ನಂತರ ನಮ್ಮ ಕಡೆ ತಿರುಗಿ `ನೋಡಿ ಒಬ್ಬರು ಸಿಕ್ಕಿದ್ದಾರೆ. ಅವರು ವೃತ್ತಿಪರ ಗೈಡ್ ಅಲ್ಲ. ಪ್ರೌಢಶಾಲೆ ಓದುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಗೈಡ್ ಆಗಿ ಕೆಲಸ ಮಾಡ್ತಾರೆ. ಅವರಿಗೆ ಐದಾರು ಭಾಷೆಗಳು ಬರುತ್ತವೆ. ಅವರನ್ನು ನಿಮ್ಮ ಜತೆ ಕಳಿಸಬಹುದು. ಆದರೆ ನಿಮ್ಮ ಜತೆ ಗೈಡ್ ಆಗಿ ಬರುತ್ತಿರುವವರು ಒಬ್ಬಳು ಹುಡುಗಿ. ನೀವು ಆಕೆಯ ಜತೆಯಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು.. ಹಾಗೆ ಹೀಗೆ ಎಂದೆಲ್ಲ ಉದ್ದನೆಯ ಭಾಷಣ ಬಿಗಿದ.
ಸರಿ.. ಕಳಿಸಿ ಎಂದೆ. ನಂತರ ಹಲವಾರು ಫಾರ್ಮುಗಳಿಗೆ ಸಹಿ ಹಾಕಿಸಿಕೊಂಡ. ಮುಂಗಡ ಹಣ ಕೊಡಿ ಎಂದ. ಎಲ್ಲವನ್ನೂ ಕೊಟ್ಟೆವು. ತದನಂತರ ಅಸ್ಸಾಮಿನ ಒಂದು ಮ್ಯಾಪ್ ಕೊಟ್ಟು ನಿಮ್ಮ ಅನುಕೂಲಕ್ಕಿರಲಿ ಇದು ಎಂದ.
ಇದಾಗಿ ಒಂದು ತಾಸಿನ ನಂತರ ಒಬ್ಬ ಬಾಲಕಿ ನಾವಿದ್ದ ಆಫೀಸಿನ ಬಳಿ ಬಂದಳು. ಬಂದವಳೇ ಆ ಆಫೀಸಿನಲ್ಲಿದ್ದ ವ್ಯಕ್ತಿಯ ಬಳಿ ಕೆಲವು ಸಮಯ ಮಾತನಾಡಿದಳು. ತದನಂತರ ನಮ್ಮ ಬಳಿ ತಿರುಗಿ ಮುಗುಳ್ನಕ್ಕಳು. ನಾವೂ ಪ್ರತಿಯಾಗಿ ನಕ್ಕೆವು.
ಹಾಯ್.. ಮೈ ನೇಮ್ ಈಸ್ ಆಶ್ನಾ.. ಎಂದಳು.
ನಾವು ಪರಿಚಯ ಮಾಡಿಕೊಂಡೆವು. ಬನ್ನಿ ಎಂದು ಇಂಗ್ಲೀಷಿನಲ್ಲಿಯೇ ಹೇಳಿ ಗುವಾಹಟಿಯ ಬೀದಿಯಲ್ಲಿ ನಡೆಯತೊಡಗಿದಳು. ನಾವು ಹಿಂಬಾಲಿಸಿದೆವು.
ಹೈಸ್ಕೂಲು ಓದುತ್ತಿರುವ ಬಾಲಕಿಯಂತೆ ಕಾಣುತ್ತಿದ್ದ ಆಕೆ ಅಸ್ಸಾಮಿಗರಂತೆ ತೆಳ್ಳಗಿದ್ದಳು. ಚುರುಕಾಗಿದ್ದಳು. `ನಾವು ಬಸ್ಸಿನಲ್ಲಿ ಹೋಗೋದಾ..? ಅಥವಾ ಇನ್ಯಾವುದಾದರೂ ಗಾಡಿ ಮಾಡಿಸಬೇಕಾ ಎಂದು ಕೇಳೀದಳು. ಆಕೆಯ ಇಂಗ್ಲೀಷು ಸ್ಫುಟವಾಗಿತ್ತು. ನಾನು ಆಕೆಯ ಇಂಗ್ಲೀಷಿಗೆ ತಲೆದೂಗಿದೆ.
ಬಸ್ಸು, ಇತರ ವಾಹನಗಳ ಕುರಿತು ಮಾತು ಕತೆ ನಡೆಸಿದ ನಾವು ತದನಂತರ ಒಂದು ಜೀಪನ್ನು ಬಾಡಿಗೆಗೆ ಪಡೆದು ಹೋಗೋಣ ಎಂದು ನಿರ್ಧರಿಸಿದೆವು. ಇನ್ನೊಂದು ಟ್ರಾವೆಲ್ ಆಫೀಸಿಗೆ ಹೋಗಿ ಜೀಪನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೊರಟೆವು..
ಇಲ್ಲಿಂದ ನಮ್ಮ ಬದುಕು ಇನ್ನೊಂದು ಮಗ್ಗುಲಿನತ್ತ ಹೊರಟಿತ್ತು..

(ಮುಂದುವರಿಯುವುದು…)

Sunday, March 24, 2019

ಅಘನಾಶಿನಿಯ ಸ್ವಗತ. . .



(ಅಶ್ವಿನಿಕುಮಾರ್ ಭಟ್ ಹಾಗೂ ಸಹನಾ ಬಾಳಕಲ್ ಅವರು ಚಿತ್ರಿಸಿದ ಅಘನಾಶಿನಿ ಎಂಬ ಸಾಕ್ಷ್ಯಚಿತ್ರದ ಪ್ರಮುಖ ಅಂಶಗಳೇ ಈ ಲೇಖನಕ್ಕೆ ಮೂಲ. ಈ ಸಾಕ್ಷ್ಯಚಿತ್ರಕ್ಕೆ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ. ಲಕ್ಷಾಂತರ ವ್ಯೂವರ್ಸ್  ಪಡೆದಿದೆ)


ನಾನು ಅಘನಾಶಿನಿ....
ಮಲೆನಾಡಿನ ನಟ್ಟ ನಡುವೆ, ಪಶ್ಚಿಮ ಘಟ್ಟ ಸಾಲಿನ ಒಡಲಿನಲ್ಲಿ ಹರಿದು ಅರಬ್ಬಿ ಸಮುದ್ರದೊಡಲನ್ನು ಸೇರುವ ಪುಟ್ಟ ನದಿ, ಶುದ್ಧ ನದಿ. ನನ್ನಲ್ಲಿ ಕಲ್ಮಶಗಳಿಲ್ಲ. ನನ್ನ ಹರಿವಿಗೆ ತಡೆಯಿಲ್ಲ. ನನ್ನೊಡಲು ಕುತೂಹಲಗಳ ಆಗರ. ನನ್ನ ಇಕ್ಕೆಲಗಳು ಹಲವು ವಿಶಿಷ್ಟತೆಗಳ ಸಾಗರ. ನನ್ನ ಬಗ್ಗೆ ಸುಮ್ಮನೇ ಹೇಳಿಕೊಳ್ಳೋಣ ಎನ್ನಿಸುತ್ತಿದೆ. ನನ್ನ ಬದುಕನ್ನು ಅನಾವರಣಗೊಳಿಸಿಕೊಳ್ಳೋಣ ಎನ್ನಿಸುತ್ತಿದೆ. ನನ್ನ ಕಥೆಯನ್ನು ಕೇಳ್ತೀರಲ್ಲ?
ನಾನು ಉತ್ತರ ಕನ್ನಡದ ಪಂಚ ನದಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದೇನೆ. ಶಿರಸಿಯ ಶಂಕರಹೊಂಡದ ಬಳಿ ನಾನು ಹುಟ್ಟುತ್ತೇನೆ. ಕುಮಟಾ ತಾಲೂಕಿನ ಅಘನಾಶಿನಿ ಎಂಬ ಗ್ರಾಮದ ಬಳಿ ಸಮುದ್ರವನ್ನು ಸೇರುವ ಮುನ್ನ ನಾನು ಸೃಜಿಸುವ ಬೆರಗಿನ ಲೋಕವಿದೆಯಲ್ಲ. ಅದು ಬಣ್ಣನೆಗೆ ನಿಲುಕದ್ದು. ಅದೆಷ್ಟೋ ಜನರಿಗೆ ಜೀವನಾಧಾರವಾಗಿ, ಪಶು-ಪಕ್ಷಿ- ಕೀಟ- ವನ್ಯ- ವೃಕ್ಷ ಸಮೂಹಗಳಿಗೆಲ್ಲ ಜೀವನಾಧಾರವಾಗಿ ನಾನು ಹರಿಯುತ್ತೇನೆ. ಉಸಿರಾಗುತ್ತೇನೆ.
ಕರ್ನಾಟಕದ ತಿರುಪತಿ ಎಂದೇ ಖ್ಯಾತಿ  ಪಡೆದಿರುವ, ವೆಂಕಟರಮಣನ ಸನ್ನಿಧಿಯಾದ ಶಿರಸಿ ತಾಲೂಕಿನ ಮಂಜುಗುಣಿಯಲ್ಲಿ ನನ್ನ ಇನ್ನೊಂದು ಜೀವಸೆಲೆಯಿದೆ. ಇದನ್ನೂ ನನ್ನ ಜನ್ಮಸ್ಥಾನ ಎಂದೇ ಕರೆಯುತ್ತಾರೆ. ಶಂಕರಹೊಂಡದಿಂದ ಹರಿಯುವ ನಾನು ಹಾಗೂ ಮಂಜುಗುಣಿಯಿಂದ ಹರಿಯುವ ನಾನು ಸಿದ್ದಾಪುರ ತಾಲೂಕಿನ ಮಾನಿಹೊಳೆ ಎಂಬಲ್ಲಿ ಒಂದಾಗುತ್ತೇವೆ. ಅಲ್ಲಿಂದ ನನಗೊಂದು ಭವ್ಯ ರೂಪ ದೊರೆಯುತ್ತದೆ. ಇಲ್ಲೇ ನನ್ನ ಅಸ್ತಿತ್ವಕ್ಕೆ ಮಹತ್ವದ ಸ್ಥಾನ ದೊರೆಯುತ್ತದೆ. ನನ್ನ ಹರಿವಿನ 98 ಕಿಲೋಮೀಟರ್ ಅವಧಿಯಲ್ಲಿ ನಾನು ಸೃಷ್ಟಿಸುವ ಕಲಾಲೋಕ ಅದ್ಭುತವಾದುದು. ಬಣ್ಣನೆಗೆ ನಿಲುಕದ್ದು.
ಪಶ್ಚಿಮ ಘಟ್ಟದ ದಟ್ಟ ಕಾನನದ ನಡುವೆ ಹುಟ್ಟುವ ನಾನು ಬಳುಕುತ್ತ, ಅಂಕುಡೊಂಕಾಗಿ ಹರಿಯುವ ಪರಿಯಂತೂ ರಮ್ಯವಾದುದು. ಗಗನದಿಂದ ನೋಡಿದರೆ ನಾನು ಬಳುಕುವ ಕನ್ಯೆಯಂತೆ, ನಿಧಾನವಾಗಿ ಸರಿದು ಹೋಗುವ ಹಾವಿನಂತೆ ಕಾಣುತ್ತೇನೆ. ಕವಿಗಳ ಪಾಲಿಗಂತೂ ಅದೆಷ್ಟೋ ಕವಿತೆಗಳಿಗೆ ಕಾರಣವಾಗಿದ್ದೇನೆ.
ಅಣೆಕಟ್ಟುಗಳಿಲ್ಲದ, ಮಲಿನಗೊಳ್ಳದ ಅಪರೂಪದ ನದಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ನನ್ನ ಪಾಲಿಗಿದೆ. ನನ್ನ ಸಹೋದರ-ಸಹೋದರಿ ನದಿಗಳಾದ ಪಕ್ಕದ ಕಾಳಿ, ಗಂಗಾವಳಿ, ಶರಾವತಿ ನದಿಗಳು ಈಗಾಗಲೇ ಆಧುನೀಕತೆಯ ರಕ್ಕಸ ಕೈಗೆ ಸಿಲುಕಿ ನಲುಗುತ್ತಿವೆ. ಕಾಳಿ ಹಾಗೂ ಶರಾವತಿ ನದಿಗಳು ಅಣೆಕಟ್ಟುಗಳ ಕೂಪಕ್ಕೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದರೆ, ಗಂಗಾವಳಿ ಹಾಗೂ ಕಾಳಿಯ ಒಡಲು ಆಗಲೇ ಮಲಿನಗೊಂಡು ಹುಣ್ಣುಗಳಾಗಿದೆ. ನನ್ನ ಅದೃಷ್ಟ, ನನಗೆ ಇನ್ನೂ ಇಂತಹ ದೌರ್ಭಾಗ್ಯ ಬಂದಿಲ್ಲ.
ನನಗೆ ಉಪನದಿಗಳೂ ಕೆಲವಿದೆ. ಪಶ್ಚಿಮ ಘಟ್ಟದಲ್ಲೇ ಹುಟ್ಟುವ ಬೆಣ್ಣೆ ಹೊಳೆ, ಚಂಡಿಕಾ ಹೊಳೆ, ಬೀಳಗಿ ಹೊಳೆಗಳು ನನ್ನ ಉಪನದಿಗಳು. ನಾನು ನೀರಿಲ್ಲದೇ ಸೊರಗುವ ಹಂತ ತಲುಪಿದ ಸಂದರ್ಭಗಳಲ್ಲಿ ಇವುಗಳೇ ನನ್ನೊಡಲಿಗೆ ಜೀವಜಲವನ್ನು ನೀಡಿ ಚಿರಂಜೀವಿಯಾಗುವಂತೆ ಮಾಡಿದ್ದು. ಇವುಗಳಲ್ಲಿ ಕೆಲವು ನನ್ನನ್ನು ಘಟ್ಟದ ಮೇಲೆ ಜತೆಗೂಡಿದರೆ ಇನ್ನೂ ಕೆಲವುಗಳು ಘಟ್ಟದ ಕೆಳಗಿನ ಭಾಗದಲ್ಲಿ ನನ್ನೊಡಲನ್ನು ಸೇರಿಕೊಳ್ಳುತ್ತವೆ. ಗಂಭೀರವಾಗಿ ಹರಿಯುವ ನನಗೆ ಇವುಗಳೇ ಇನ್ನಷ್ಟು ಗಂಭೀರತೆಯನ್ನು ಒದಗಿಸುತ್ತವೆ.
ಋತುಮಾನಗಳಿಗೆ ತಕ್ಕಂತೆ ನನ್ನ ನಿಲುವು ಬದಲಾಗುತ್ತದೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಕಾವಿಗೆ ಸೊರಗುವ ನಾನು ಮಳೆಗಾಲ ಬಂತೆಂದರೆ ಭವ್ಯವಾಗುತ್ತೇನೆ. ರೌದ್ರ ರಮಣೀಯ ರೂಪವನ್ನು ತಾಳುತ್ತೇನೆ. ಬೇಸಿಗೆಯಲ್ಲಿ ಶುದ್ಧ ರೂಪದ ನಾನು ಮಳೆಗಾಲದಲ್ಲಿ ಕೆಂಪಾಗಿ ಕಿಡಿಕಾರುತ್ತೇನೆ. ಬೇಸಿಗೆಯಲ್ಲಿ ಕಿಲ-ಕಿಲ ಕಲರವ ಮಾಡುವ ನಾನು ಮಳೆಗಾಲದಲ್ಲಂತೂ ಕಿವಿ ಗಡಚಾಗುವಂತೆ ಸದ್ದು ಮಾಡುತ್ತೇನೆ. ಮಳೆಗಾಲದ ನನ್ನ ಆರ್ಭಟಕ್ಕೆ ಇಕ್ಕೆಲದ ದಡಗಳ ಅನೇಕ ಸ್ಥಳಗಳು ಮುಳುಗುತ್ತವೆ. ಅದೆಷ್ಟೋ ಮರಗಳು ಕೊಚ್ಚಿ ಹೋಗುತ್ತವೆ. ಮಳೆಗಾಲದ ಆರ್ಭಟದ ಸಂದರ್ಭದಲ್ಲೆಲ್ಲ ದಡದಲ್ಲಿನ ನಿವಾಸಿಗಳು ನನ್ನ ರೌದ್ರಾವತಾರ ಇಳಿಯಲಿ ಎನ್ನುವ ಕಾರಣಕ್ಕೆ ನನ್ನೊಡಲಿಗೆ ಅರಶಿಣ-ಕುಂಕುಮವನ್ನು ಹಾಕಿ ಭಾಗಿನವನ್ನು ನೀಡಿ ಸೌಮ್ಯಳಾಗು ಎಂದು ಬೇಡಿಕೊಳ್ಳುವ ಸಂದರ್ಭಗಳೂ ಇದೆ.
ನಾನು ಜಲಪಾತಗಳ ಆಗರ. ನಾನು ಹಾಗೂ ನನ್ನ ಉಪನದಿಗಳು ಸೃಷ್ಟಿಸಿದ ಜಲಪಾತಗಳ ಸರಣಿ ಬೆರಗಿನ ಇನ್ನೊಂದು ಲೋಕ ಎಂದರೆ ತಪ್ಪಾಗಲಿಕ್ಕಿಲ್ಲಘಿ. ಜಾರ್ಜ್ ಲೂಷಿಂಗ್‌ಟನ್ ಎಂಬ ಬ್ರಿಟೀಷ್ ಸರ್ವೇಯರ್ ಅಧಿಕಾರಿಯನ್ನು ಸೆಳೆದ ಉಂಚಳ್ಳಿ ಜಲಪಾತ, ಬೆಣ್ಣೆಹೊಳೆ ಜಲಪಾತ, ವಾಟೆಹೊಳೆ ಜಲಪಾತ, ಮಜ್ಜಿಗೆಹೊಳೆ ಜಲಪಾತ, ಬುರುಡೆ ಜಲಪಾತ ಹೀಗೆ ಹಲವು ಜಲಪಾತಗಳು ಸೃಷ್ಟಿಯಾಗಿದೆ. ನನ್ನ ಸಹೋದರಿಯರು ನನಗಿಂತ ದೊಡ್ಡ ದೊಡ್ಡ ಜಲಪಾತಗಳನ್ನು ಸೃಷ್ಟಿಸಿದ್ದರೂ ನನ್ನಷ್ಟು ಸಂಖ್ಯೆಯಲ್ಲಿ ಜಲಪಾತಗಳನ್ನು ಸೃಷ್ಟಿಸಿಲ್ಲ ಎನ್ನುವ ಹೆಗ್ಗಳಿಕೆ ನನ್ನದು. ನನ್ನ ಸೃಷ್ಟಿಯಾದ ಜಲಪಾತಗಳನ್ನು ವೀಕ್ಷಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುತ್ತಾರೆ. ಮನದಣಿಯೆ ಜಲಪಾತಗಳನ್ನು ವೀಕ್ಷಿಸಿ ಸಂಥಸ ಸಂಭ್ರಮವನ್ನು ಹೊಂದುತ್ತಾರೆ.
ಸಹಸ್ರ ಸಹಸ್ರ ವರ್ಷಗಳಿಂದ ಹರಿಯುತ್ತ ಬಂದಿರುವ ನಾನು ನನ್ನ ವಲಯದಲ್ಲಿ ವಿಶೇಷ ಸಸ್ಯ ಸಂಕುಲಕ್ಕೆ ಜೀವದಾಯಿಯಾಗಿದ್ದೇನೆ. ಅಪರೂಪದ ರಾಮಪತ್ರೆ ಜಡ್ಡಿಗಳು, ದೇವರಕಾಡುಗಳಿಗೆ ನೀರುಣಿಸಿ ಭೂಮಾತೆಯನ್ನು ಸಸ್ಯಶಾಮಲೆಯನ್ನಾಗಿ ಮಾಡಿದ್ದೇನೆ. ನಾನು ಸಮುದ್ರವನ್ನು ಸೇರುವ ಸ್ಥಳದಲ್ಲಿ ತಲೆ ಎತ್ತಿ ನಿಂತಿರುವ ಕಾಂಡ್ಲಾ ಸಸ್ಯ ಸಂಕುಲವಂತೂ ತನ್ನದೇ ವನ್ಯ ಸಂಕುಲವನ್ನು ಸೃಷ್ಟಿಸಿದೆ. ತನ್ನ ಬೆರಗಿನ ಲೋಕವನ್ನು ನಿರ್ಮಾಣ ಮಾಡಿದೆ. ಅದೆಷ್ಟೋ ಅಸಂಖ್ಯಾತ ದೈವಗಳು, ದೇವರುಗಳು ನನ್ನ ಹರಿವಿನ ಪಕ್ಕದಲ್ಲಿವೆ. ಮಾಸ್ತಿಘಿ, ಬೀರಲು, ಚೌಡಿ, ಜಟಕ ಹೀಗೆ ಜನಪದರ ದೇವರುಗಳೆಲ್ಲ ನನ್ನ ಹರಿವಿನ ಸಾಲಿನ ಪಕ್ಕದಲ್ಲಿ ನೆಲೆ ನಿಂತಿವೆ. ಪ್ರತಿದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಹೀಗೆ ವಿವಿಧ ರೂಪದಲ್ಲಿ ಪೂಜೆಯನ್ನು ಸ್ವೀಕರಿಸುತ್ತ, ಹಬ್ಬ-ಹರಿದಿನಗಳಿಗೆ ಕಾರಣವಾಗುತ್ತ ಜನಪದರನ್ನು ಹರಸುತ್ತಿವೆ.

ಇಂತಹ ದೈವಗಳ ತಾಣಕ್ಕೆ ಹೋಗುವ ಸಂದರ್ಭದಲ್ಲಿ ಕೆಲವೊಮ್ಮೆ ದೋಣಿ ಬಳಕೆಯೂ ಆಗಬೇಕು ಎನ್ನುವುದು ವಿಶೇಷ. ಕಷ್ಟ ಪಟ್ಟಾದರೂ ಸರಿ ಜನಪದರು ತಮ್ಮ ದೈವಗಳಿಗೆ ನಡೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಇದು ಅವರ ನಂಬಿಕೆ.
ನನ್ನೊಡಲ ಪರೀಧಿಯಲ್ಲಿ ಅದೆಷ್ಟೋ ಅಪರೂಪದ ಪ್ರಾಣಿ ಸಂಕುಲವಿದೆ. ಪಕ್ಷಿ ಸಮೂಹವಿದೆ. ಸಿಂಹ ಬಾಲದ ಮಂಗ ಎಂಬ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ವಾನರ ಸಮೂಹಕ್ಕೆ ನಾನು ಆಶ್ರಯ ನೀಡಿದ್ದೇನೆ. ಏಷ್ಯಾದ ಕಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ವಾಸಸ್ಥಾನ ಮಾಡಿಕೊಂಡ ವಾನರ ಬಳಗ ಎಂಬ ಖ್ಯಾತಿಗೆ ಸಿಂಹ ಬಾಲದ ಲಂಗೂರ್‌ಗಳು ಹೆಸರಾಗಿವೆ.
ವಿಶ್ವದಲ್ಲಿ ಕೇವಲ 400ರಷ್ಟು ಸಂಖ್ಯೆಯಲ್ಲಿ ಮಾತ್ರ ಬದುಕಿರುವ ಈ ಸಿಂಹಬಾಲದ ಲಂಗೂರ್‌ಗಳು ನನ್ನ ಬಿಟ್ಟರೆ ಸಹೋದರಿ ಶರಾವತಿಯ ಪಕ್ಕದ ಕಾಡಿನಲ್ಲಿ ಮಾತ್ರ ನೋಡಲು ಸಾಧ್ಯಘಿ. ಈ ಕಾರಣದಿಂದಲೇ ವಿಜ್ಞಾನಿಗಳ ಹಾಗೂ ಪರಿಸರ ಪ್ರೇಮಿಗಳ ಒತ್ತಾಸೆ, ಒತ್ತಾಯದಿಂದ ನನ್ನ ಹಾಗೂ ಶರಾವತಿಯ ನಡುವಿನ ಕಾಡನ್ನು ಸಿಂಹಬಾಲದ ಲಂಗೂರ್‌ಗಳ ಸಂರಕ್ಷಿತ ಅರಣ್ಯ ಎಂದು ಮಾರ್ಪಾಡು ಮಾಡಲಾಗಿದೆ. ಹೀಗೆ ಘೋಷಣೆಯಾದ ನಂತರವೇ ಈ ವಾನರಗಳ ಸಂಖ್ಯೆ ನಿಧಾನವಾಗಿ ವೃದ್ಧಿಯಾಗುತ್ತಿದೆ.
ಲೈನ್ ಟೇಲ್ ಲಂಗೂರ್‌ಗಳಂತೆಯೇ ಅಳಿವಿನ ಅಂಚಿನಲ್ಲಿರುವ ಪ್ರಾಣೀಗಳು ನೀರು ನಾಯಿಗಳು. ಗುಂಪು ಗುಂಪಾಗಿ, ಶುದ್ಧ ನೀರಿನಲ್ಲಿ ವಾಸ ಮಾಡುವ ನೀರುನಾಯಿಗಳು ಕರ್ನಾಟಕದಲ್ಲಿಯೇ ಕೆಲವೇ ಕೆಲವು ನದಿಗಳಲ್ಲಿ ವಾಸ ಮಾಡುತ್ತವೆ. ಅಂತಹ ಕೆಲವು ನದಿಗಳಲ್ಲಿ ಒಂದು ನಾನು. ಅತ್ಯಂತ ನಾಚಿಕೆಯ, ಸೂಕ್ಷ್ಮ ಜೀವಿ ನೀರುನಾಯಿ ನನ್ನೊಡಲಲ್ಲಿ ಈಜುತ್ತಘಿ, ಆಡುತ್ತಮ ಬದುಕು ನಡೆಸುತ್ತಘಿ, ಸಂಸಾರ ಕಟ್ಟಿಕೊಂಡಿವೆ. ಬೇಟೆಯಾಡುವವರ ಕಣ್ಣು ತಪ್ಪಿಸಿ ಗೂಡು ನಿರ್ಮಿಸಿಕೊಂಡಿವೆ.
ಪಕ್ಷಿ ಲೋಕದ ಅಪರೂಪದ ಹಕ್ಕಿ ಎನ್ನುವ ಖ್ಯಾತಿಯನ್ನು ಪಡೆದಿರುವ ಹಾರ್ನಬಿಲ್‌ಗೂ ನಾನು ಆಶ್ರಯ ನೀಡಿದ್ದೇನೆ. ನನ್ನ ಹರಿವಿನ ಇಕ್ಕೆಲಗಳಲ್ಲಿ ಬಾನನ್ನು ಚುಂಬಿಸುವಂತೆ ಬೆಳೆದು ನಿಂತ ಮರಗಳಲ್ಲಿ ಹಾರ್ನಬಿಲ್ (ಮಂಗಟ್ಟೆ) ಹಕ್ಕಿಗಳು ಜೀವನ ನಡೆಸುತ್ತಿವೆ. ಇಂತಹ ಮಂಗಟ್ಟೆಗಳಿಗೆ ಅತ್ಯಾವಶ್ಯಕವಾದ ರಾಮಪತ್ರೆ ಮುಂತಾದ ಕಾಡು ಹಣ್ಣುಗಳು ಬೆಳೆಯಲು ನಾನು ಕಾರಣನಾಗಿದ್ದೇನೆ.
ನನ್ನ ಎರಡೂ ದಡಗಳಲ್ಲಿ ವಿಶಾಲವಾದ ಭತ್ತದ ಗದ್ದೆಗಳಿವೆ. ಹಸಿರಿನ ಗಿರಿಗಳಿವೆ. ಸಮೃದ್ಧ ಕಾಡುಗಳಿವೆ. ಸುದೀರ್ಘವಾದ ಅಡಿಕೆಯ ತೋಟಗಳ ಸಾಲಿದೆ. ಇನ್ನೂ ಹಲವು ಕಡೆಗಳಲ್ಲಿ ಮತ್ತಷ್ಟು ಬೆಳೆಗಳಿಗೆ ನೀರುಣಿವ ಕಾರ್ಯದಲ್ಲಿ ನಾನು ತೊಡಗಿದ್ದೇನೆ. ನನ್ನದೇ ತೀರದಲ್ಲಿ ಅಪರೂಪದ ಅಪ್ಪೆಯ ಮಿಡಿಗಳಿವೆ. ಅನಂತಭಟ್ಟನ ಅಪ್ಪೆಯಂತಹ ಅಪರೂಪದ ತಳಿಯ ಅಪ್ಪೆ ಮಿಡಿಗಳು ನನ್ನ ತೀರದಲ್ಲಿ ಮಾತ್ರ ಬೆಳೆಯುತ್ತವೆ ಎನ್ನುವುದು ಇಲ್ಲಿನ ಜೈವಿಕ ಸಮೃದ್ಧತೆಗೆ ಸಾಕ್ಷಿಘಿ. ಮಲೆನಾಡಿನಲ್ಲಿ ನನ್ನ ತೀರದಲ್ಲಿ ಬೆಳೆಯುವ ಬೆಳೆಗಳದ್ದು ಒಂದು ತೂಕವಾದರೆ ಕರಾವಳಿ ತೀರದಲ್ಲಿ ಬೆಳೆಯುವ ಬೆಳೆಗಳು ಇನ್ನೊಂದು ತೂಕದವು.
ಬದಲಾಗುವ ವಾತಾವರಣ, ಹವೆ, ಉಪ್ಪಿನ ಅಂಶಗಳನ್ನು ಒಳಗೊಂಡಿದ್ದರೂ ಕರಾವಳಿ ತೀರದಲ್ಲಿ ವಿಶೇಷ ಬೆಳೆಗಳನ್ನು ಬೆಳೆಯುತ್ತಾರೆ. ಗಜನಿಗಳು ಎಂದು ಕರೆಯಲ್ಪಡುವ ಭತ್ತದ ಗದ್ದೆಗಳಲ್ಲಿ 3000 ವರ್ಷಗಳಿಂದ ಕಗ್ಗ ಎನ್ನುವ ತಳಿಯ ಭತ್ತವನ್ನು ಜನಪದರು ಬೆಳೆಯುತ್ತ ಬಂದಿದ್ದಾರೆ. ಅತ್ಯುತ್ಕೃಷ್ಟ ತಳಿಗಳಲ್ಲಿ ಒಂದಾದ ಕಗ್ಗ ಭತ್ತವನ್ನು ಬೆಳೆಯಲು ಹಾಗೂ ಕೊಯ್ಲು ಮಾಡಲು ದೋಣಿಯ ಮೂಲಕವೇ ತೆರಳುವುದು ವಿಶೇಷ. ಕಗ್ಗ ಭತ್ತದ ಬೆಳೆಗಾಗಿ ನನ್ನೊಡಲ ಮೇಲೆ ದೋಣಿಯನ್ನು ಹಾಕಿ, ನನ್ನ ಸೆಳವನ್ನು ಹರಿವನ್ನು ಸೀಳುತ್ತ ಹೋಗುತ್ತಿದ್ದರೆ ನನಗಾಗುವ ಕಚಗುಳಿ, ಸಂಭ್ರಮ ಅನಿರ್ವಚನೀಯವಾದುದು.
ಘಟ್ಟವನ್ನು ಇಳಿಯುವ ನಾನು ಕರಾವಳಿ ಪ್ರದೇಶದಲ್ಲಿ ಮಂದಗಮನೆಯಾಗಿ ಹರಿಯುತ್ತೇನೆ. ಕರಾವಳಿಗರ ಮನಸ್ಸನ್ನು ಗೆಲ್ಲುವ ನಾನು ಅವರ ಪ್ರಮುಖ ಉದ್ಯಮಕ್ಕೆ ಜೀವ ನೀಡುತ್ತೇನೆ. ನನ್ನ ಒಡಲಿನಲ್ಲಿ ಕರಾವಳಿಗರು ಚಿಪ್ಪು ಉದ್ಯಮವನ್ನು ಕೈಗೊಳ್ಳುತ್ತಾರೆ. ಚಿಪ್ಪನ್ನು ಬೆಳೆದು ದುಡ್ಡು ಮಾಡಿಕೊಳ್ಳುತ್ತಾರೆ. ಅಲ್ಲದೇ ನನ್ನ ಎರಡೂ ತೀರಗಳಲ್ಲಿ ಗಜನಿ ಭೂಮಿಯಲ್ಲಿ ರೈತಾಪಿ ವರ್ಗದವರು ಸಿಗಡಿಯನ್ನು ಬೆಳೆಯುತ್ತಾರೆ. ಸಿಗಡಿಯನ್ನು ಮಾರಾಟ ಮಾಡಿ ತದನಂತರದಲ್ಲಿ ಲಾಭವನ್ನು ಮಾಡಿಕೊಂಡು ಹಸನ್ಮುಖರಾಗಿದ್ದನ್ನು ನಾನು ನೋಡಿದ್ದೇನೆ. ಕರಾವಳಿಯ ತೀರದಲ್ಲಿ ಆಗಾಗ ಸಮುದ್ರದ ನೀರು ನನ್ನೊಡಲಿನ ಒಳಕ್ಕೆ ನುಗ್ಗುತ್ತದೆ. ಹಲವಾರು ಕಿಲೋಮೀಟರುಗಳಷ್ಟು ಒಳಕ್ಕೆ ನುಗ್ಗುವ ಉಪ್ಪು ನೀರು ಹಲವಾರು ರೀತಿಯ ಜೈವಿಕ ಬದಲಾವಣೆಗಳಿಗೂ ಕಾರಣವಾಗುತ್ತದೆ. ದಿನಕ್ಕೆ ಎರಡು ಸಾರಿ ಅಂದರೆ ಉಬ್ಬರ ಹಾಗೂ ಇಳಿತದ ಸಂದರ್ಭದಲ್ಲಿ ಉಪ್ಪು ನೀರು ನನ್ನೊಳಕ್ಕೆ ನುಗ್ಗುವುದು ವಿಶೇಷ.
ಇಂಧ್ರಧನುಷ್ ಅಥವಾ ಕಾಮನಬಿಲ್ಲು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೂರ್ಯ, ಮಳೆ ಹಾಗೂ ಮೋಡಗಳು ಮಾಡುವ ಬಾನಂಚಿನಲ್ಲಿನ ಬಣ್ಣದ ಚಿತ್ತಾರ ಇದು. ಅನೇಕ ಜಲಪಾತಗಳ ಒಡಲಿನಲ್ಲಿ ಧುಮ್ಮಿಕ್ಕುವ ನೀರು ಕೂಡ ಕಾಮನಬಿಲ್ಲನ್ನು ಸೃಷ್ಟಿಸುತ್ತದೆ. ಆದರೆ ನನ್ನೊಡಲಿನಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತಹ ಚಂದ್ರಧನುಷ್ ಕಾಣಿಸುತ್ತದೆ. ವಿಶ್ವದಲ್ಲಿ ಚಂದ್ರಧನುಷ್ ಕಾಣಿಸಿಕೊಳ್ಳುವ ಸ್ಥಳಗಳಿರುವುದು ಒಂದೋ ಎರಡೋ ಅಷ್ಟೇಘಿ. ಅಂತಹ ಸ್ಥಳಗಳಲ್ಲಿ ಒಂದು ನನ್ನೊಡಲು. ನನ್ನ ಸೃಷ್ಟಿಯಾದ ಉಂಚಳ್ಳಿ ಜಲಪಾತದಲ್ಲಿ ನಿರ್ದಿಷ್ಠ ಸಮಯದಲ್ಲಿ ಚಂದ್ರಧನುಷ್ ಕಾಣಿಸಿಕೊಳ್ಳುತ್ತದೆ. ಅಂದರೆ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಧುಮ್ಮಿಕ್ಕುವ ನೀರಿನಿಂದ ಬಣ್ಣಗಳ ಪರದೆ ಸೃಷ್ಟಿಯಾಗುತ್ತದೆ. ಇದು ವಿಶ್ವವಿಸ್ಮಯ. ಇತ್ತೀಚೆಗಷ್ಟೇ ಇದರ ಛಾಯಾಚಿತ್ರಗ್ರಹಣ ಕೂಡ ನಡೆದಿದೆ. ಈ ಕಾರಣಕ್ಕಾಗಿಯೇ ನಾನು ಇನ್ನೊಮ್ಮೆ ವಿಶ್ವವಲಯದಲ್ಲಿ ಖ್ಯಾತಿ ಪಡೆಯುತ್ತಿದ್ದೇನೆ.
ನನ್ನ ತೀರದ ಇಕ್ಕೆಲಗಳಲ್ಲಿ ಹವ್ಯಕರು, ನಾಯಕರು, ನಾಡವರು, ಕುಣಬಿಗಳು, ಹಾಲಕ್ಕಿಗಳು ಹೀಗೆ ಹಲವು ಜಾತಿ-ಜನಾಂಗಗಳವರು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮದೇ ಆದ ವಿಶಿಷ್ಟ ಪದ್ಧತಿಯನ್ನು ಅವರು ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅಡಿಕೆ, ಕಾಳುಮೆಣಸು, ಯಾಲಕ್ಕಿಘಿ, ವೆನಿಲ್ಲಾಘಿ, ಭತ್ತಘಿ, ಕಬ್ಬುಘಿ ಹೀಗೆ ಬೆಳೆಗಳನ್ನು ಬೆಳೆಯುತ್ತ ಬದುಕುತ್ತಿದ್ದಾರೆ. ಅವರ ಮನಸ್ಸನ್ನು ಸೆಳೆಯುವಂತಹ ಯಕ್ಷಗಾನ ನನ್ನ ತೀರದಲ್ಲಿ ಬಹು ಕಾಲದಿಂದ ಬೇರೂರಿದೆ. ಚಂಡೆ ಮದ್ದಲೆಗಳ ಸದ್ದಿನೊಂದಿಗೆ ಭಾಗವತರುಗಳ ರಾಗಬದ್ಧ ಹಾಡುಗಾರಿಕೆಗೆ ಯಕ್ಷಗಾನ ಪಟುಗಳ ಧಿತ್ತೋಂ ನರ್ತನಕ್ಕೆ ಲ್ಲ ಮೆಚ್ಚಿ ತಲೆದೂಗುತ್ತಿದ್ದರೆ ನನಗೆ ಎಲ್ಲಿಲ್ಲದ ಸಂತೋಷ ಸಂಭ್ರಮ. ಯಕ್ಷಗಾನದ ಚಂಡೆಯ ಸದ್ದು ನನ್ನ ಅಲೆಗಳ ಮೇಲ್ಪದರಕ್ಕೆ ತಾಗಿ ಮೈಮನಗಳನ್ನು ನರ್ತಿಸುವಂತೆ ಮಾಡುತ್ತಿದ್ದರೆ ಆಹಾ... ಅಂತಹ ವಿಶಿಷ್ಟ ಭಾವವೊಂದನ್ನು ವಿವರಿಸಲು ಪದಗಳು ಸಾಲುವುದಿಲ್ಲಘಿ.
ಅಘನಾಶಿನಿ ಎಂದರೆ ಪಾಪವನ್ನು ತೊಳೆಯುವವಳು ಎನ್ನುವ ಅರ್ಥವಿದೆಯಂತೆ. ಅದೆಷ್ಟೋ ಜನರ ಪಾಪಗಳನ್ನುಘಿ ತೊಳೆದು ಪರಿಶುದ್ಧರನ್ನಾಗಿ ಮಾಡಿದ್ದೇನೆ. ಬದುಕು ಕಟ್ಟಿಕೊಟ್ಟಿದ್ದೇನೆ. ಹೊಸ ಹುಟ್ಟನ್ನು ನೀಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಮಾರಿ ನನ್ನನ್ನೂ ಬಿಡುತ್ತಿಲ್ಲಘಿ. ಶಿರಸಿಯ ಶಂಕರಹೊಂಡ ಈಗಾಗಲೇ ಮಲಿನಗೊಂಡಿದೆ. ಶಿರಸಿಯಿಂದ ಕೆಲವು ಕಿಲೋಮೀಟರುಗಳ ವರೆಗೆ ನಾನು ಹರಿದು ಬಂದರೂ ನನ್ನಲ್ಲಿನ ಕೊಳೆ ಹಾಗೂ ಮಲಿನತೆ ಕರಗದೇ ಇರುತ್ತದೆ. ಶಿರಸಿಯ ನಾಗರಿಕ ಜಗತ್ತು ಬಳಸಿ ಬಿಸಾಡಿದ ತ್ಯಾಜ್ಯಗಳು, ಪ್ಲಾಸ್ಟಿಕ್ ಮುಂತಾದ ಕಸಗಳು ನನ್ನನ್ನು ಇನ್ನಷ್ಟು ಹಾಳು ಮಾಡುತ್ತಿದೆ. ನನ್ನೊಳಗಿನ ಜಲಚರ ಸಂಕುಲಗಳು ನರಳುವಂತೆ ಮಾಡುತ್ತಿದೆ.
ನಾಗರಿಕ ಜಗತ್ತಿನ ಸದಸ್ಯರು ನನ್ನೊಡನ್ನು ಮಲಿನ ಮಾಡುವುದನ್ನು ನಾನು ಮೌನವಾಗಿ ಗಮನಿಸುತ್ತಿದ್ದೇನೆ. ಮಾನವನದ್ದೇ ಕಾರಣದಿಂದ ನಾನು ನೀರಿಲ್ಲದೇ ಸೊರಗುವ ಹಂತಕ್ಕೂ ಬಂದಿದ್ದೇನೆ. ಇದರಿಂದಾಗಿ ನನ್ನೊಡಲಿನಲ್ಲಿರುವ ಜಲಚರಗಳು ಈಗಾಗಲೇ ಜೀವಬಿಡುತ್ತಿದ್ದರೆ ಅಪರೂಪದ ಪ್ರಾಣೀ, ಪಕ್ಷಿ ಸಂಕುಲಗಳು, ವೃಕ್ಷ ಸಮೂಹಗಳು ನನ್ನಿಂದ ದೂರವಾಗುತ್ತಿವೆ. ಹೀಓಗಾಗಿ ನಾನು ಮೂಕವಾಗಿ ರೋದಿಸುತ್ತಿದ್ದೇನೆ. ನನ್ನನ್ನು ಅದೆಷ್ಟೋ ವರ್ಷಗಳಿಂದ ಗಮನಿಸಿಕೊಂಡು ಬರುತ್ತಿರುವ ಹಿರಿಯ ಜೀವಗಳು ನಾನು ಮೊದಲಿನಂತಿಲ್ಲಘಿ, ಸೊರಗಿದ್ದೇನೆ ಎಂಬುದನ್ನು ಆಗಾಗ ಮಾತನಾಡಿಕೊಳ್ಳುತ್ತಿರುವುದು ನನ್ನ ಕಿವಿಗೆ ಬೀಳುತ್ತದೆ. ಕೃಷಕಾಯಳಾದ ನನ್ನೆದುರು ಹಿರಿಯರ ನಿಟ್ಟುಸಿರು ನನ್ನ ಪಾಲಿಗೆ ಅದೇನೋ ಆತಂಕವನ್ನೂ ಹುಟ್ಟು ಹಾಕುತ್ತದೆ. ತಿಳಿದೂ ತಿಳಿದೂ ಮಾಡುವ ದ್ರೋಹಗಳು ನನ್ನನ್ನು ಕೊಲ್ಲುತ್ತಿವೆ. ಓ ಮಾನವ ನೀನು ನನ್ನನ್ನು ಮುಂದಿನ ಜನಾಂಗಕ್ಕೆ ಉಳಿಸಲಾರೆಯಾ ಎಂದು ಬೇಡುವಂತೆ ಅನ್ನಿಸುತ್ತದೆ. ನನ್ನನ್ನು ಉಳಿಸಲಾರೆಯಾ?



Saturday, March 9, 2019

ನಮ್ಮೂರ ಅಜ್ಜಿ (ನಮ್ಮೂರ ಚಿತ್ರಗಳು-3)


ಪ್ರತಿ ಮನೆಯಲ್ಲಿಯೂ ಅಜ್ಜಿಯರು ಇರುತ್ತಾರೆ. ಎಲ್ಲ ಅಜ್ಜಿಯರೂ ಒಂದಲ್ಲ ಒಂದು ಕಾರಣಕ್ಕೆ ವಿಶಿಷ್ಟವಾಗಿರುತ್ತಾರೆ. ನಮ್ಮೂರಿನಲ್ಲಿ ಇದ್ದ ಅಜ್ಜಿಯರು ವಿಶಿಷ್ಟವಾಗಿದ್ದು. ನನ್ನ ನೆನಪಿನಲ್ಲಿ ಇರುವಂತೆ, ನಾನು ನೋಡಿದ ಅಜ್ಜಿಯ ವಿಶೇಷ ಗುಣಗಳನ್ನು ಹಂಚಿಕೊಳ್ಳದಿದ್ದರೆ ಅದೇನೋ ಕಳೆದುಕೊಂಡಂತಹ ಬಾವ.
ಅಜ್ಜಿಯರು ಎಂದರೆ ಊರಿನ ಪಾಲಿಗೆ ಹೆಮ್ಮರದಂತೆ. ಅವರು ಆಲದಮರವಾಗಿ ನಿಂತು ತಮ್ಮ ಬೀಳಲುಗಳಲ್ಲಿ ಆಟವಾಡಲು, ಅದೆಷ್ಟೋ ಮೊಮ್ಮಕ್ಕಳು, ಮರಿಮಕ್ಕಳಿಗೆ ಅವಕಾಶ ನೀಡುತ್ತಾರೆ. ಆಗಾಗ ಗದರುವ, ಬಹುಕಾಲ ಪ್ರೀತಿಯಿಂದ, ಅಕ್ಕರೆಯಿಂದ ಮಾತನಾಡುತ್ತ ಇರುವ ಅಜ್ಜಿಯರು ಮೊಮ್ಮಕ್ಕಳ ಪಾಲಿಗೆ ಬಹಳ ಆಪ್ತರಾಗುತ್ತಾರೆ.
ನಮ್ಮೂರಲ್ಲಿ ಇರುವುದು ಐದಾರು ಮನೆಗಳಷ್ಟೇ. ಈ ಐದಾರು ಮನೆಗಳಲ್ಲಿಯೇ ಐದಾರು ಅಜ್ಜಿಯರು ಬಹಳ ಚಿರಪರಿಚಿತರಾಗಿ ನಿಂತಿದ್ದಾರೆ. ನಾನು ಈಗ ಹೇಳ ಹೊರಟಿರುವ ಅಜ್ಜಿಯರ್ಯಾರೂ ಬದುಕಿಲ್ಲ. ನನ್ನ ಬಾಲ್ಯದ ಹಸಿರ ನೆನಪುಗಳಲ್ಲಿ ಈ ಅಜ್ಜಿಯರು ಸದಾ ನಿಂತಿದ್ದಾರೆ.
ನಮ್ಮೂರ ಅಜ್ಜಿಯರ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವವರು ಸಾವಿತ್ರಜ್ಜಿ, ಬಂಗಾರಜ್ಜಿ, ಮಂಕಾಳಜ್ಜಿ ಮತ್ತಿತರರು. ತಮ್ಮದೇ ಆದ ವಿಶಿಷ್ಟ ಗುಣಗಳಿಂದ ಇವರು ಸದಾ ನೆನಪಿನಲ್ಲಿ ಉಳಿದಿದ್ದಾರೆ. ಇವರಲ್ಲಿ ನಾನು ಸಾವಿತ್ರಜ್ಜಿ ಕುರಿತು ವಿಶೇಷವಾಗಿ ಹೇಳಬೇಕು. 
ನಮ್ಮೂರ ಅಜ್ಜಿಯರ ಕುರಿತು ಹೇಳುವಾಗ ಪ್ರಮುಖ ಸಾಲಿನಲ್ಲಿ ನಿಲ್ಲುವವರು ಸಾವಿತ್ರಜ್ಜಿ. ನಾನು ನೋಡುವ ವೇಳೆಗೆ ಆ ಅಜ್ಜಿಗೆ 85 ವಯಸ್ಸಾಗಿತ್ತೇನೋ. ವಯಸ್ಸು ಅಷ್ಟಾಗಿದ್ದರೂ ಬಹಳ ಗಟ್ಟುಮುಟ್ಟಿನ ಅಜ್ಜಿ ಅವರಾಗಿದ್ದರು. ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಆ ಅಜ್ಜಿ ನಮ್ಮ ಪಾಲಿಗೆ ಪರಮ ವಿಸ್ಮಯದ ಸಂಗತಿಯಾಗಿದ್ದರು.
ಆ ಸಾವಿತ್ರಜ್ಜಿಗೆ ನಮ್ಮೂರು ತವರು ಮನೆ. ಬಾಲ್ಯದಲ್ಲೇ ಆಕೆಗೆ ವಿವಾಹವಾಗಿತ್ತು. ನಮ್ಮೂರಿನಿಂದ ಕೊಂಚ ದೂರದಲ್ಲೇ ಇರುವ ಹೂವಿನಮನೆ ಎಂಬಲ್ಲಿಗೆ ಸಾವಿತ್ರಜ್ಜಿಯನ್ನು ಮದುವೆ ಮಾಡಿಕೊಟ್ಟಿದ್ದರು. ಆ ದಿನಗಳಲ್ಲಿ ರೋಗಗಳೂ ಜಾಸ್ತಿಯಾಗಿದ್ದವಂತೆ. ಈ ಕಾರಣದಿಂದ ಸಾವಿತ್ರಜ್ಜಿಯ ಪತಿ ತೀರಿಕೊಂಡಿದ್ದರು. ಏನೂ ಅರಿಯದ ವಯಸ್ಸಿನಲ್ಲಿ ಮದುವೆ ಮಾಡಿದ್ದರಿಂದ, ಅಕಾಲದಲ್ಲಿ ಪತಿ ತೀರಿಕೊಂಡಿದ್ದರಿಂದ ಸಾವಿತ್ರಜ್ಜಿ ನಂತರದ ದಿನಗಳಲ್ಲಿ ತವರುಮನೆಗೆ ವಾಪಾಸಾಗಿದ್ದರು.
ತವರಿಗೆ ಅಜ್ಜಿ ವಾಪಾಸಾಗಿದ್ದರೂ ಮನೆಯವರ ಮೇಲೆ ಹೊರೆಯಾಗಿ ಬದುಕಬಾರದು ಎನ್ನುವುದು ಆಕೆ ರೂಢಿಸಿಕೊಂಡ ನೀತಿ. ಅದಕ್ಕಾಗಿ ತನ್ನ ಅನ್ನವನ್ನು ತಾನೇ ದುಡಿದುಕೊಳ್ಳಬೇಕು ಎಂಬ ಛಲ ತೊಟ್ಟಿದ್ದಳು. ಆಕೆ ಮನೆಗೆ ಮರಳಿದಾಗ ಆಕೆ ಹರೆಯಕ್ಕೆ ಆಗತಾನೆ ಕಾಲಿಟ್ಟಿರಬಹುದು. ಆಕೆಗೆ ಇಬ್ಬರು ತಮ್ಮಂದಿರು ಇದ್ದರು. ಅವರೂ ಚಿಕ್ಕವರು. ಅವರ ನಡುವೆ ತಾನು ಅವರಂತೆ ಬಾಳಿದಳು, ಬದುಕಿದಳು.
ಆಗೆಲ್ಲ ಗಂಡ ಸತ್ತರೆ ತಲೆಯನ್ನು ಬೋಳಿಸಿ, ಕೆಂಪು ಸೀರೆಯನ್ನೋ ಅಥವಾ ಇನ್ಯಾವುದೋ ರೀತಿಯ ಸೀರೆಯನ್ನು ಉಡಿಸುತ್ತಿದ್ದರು. ತನ್ನ ಬದುಕಿನ ಕೊನೆಯ ಉಸಿರು ಇರುವ ತನಕವೂ ಸಾವಿತ್ರಜ್ಜಿ ಆ ಬಟ್ಟೆಯನ್ನೇ ತೊಟ್ಟಿದ್ದಳು. ಅಷ್ಟೇ ಏಕೆ ತನ್ನ ಬದುಕಿನ ಅಮೂಲ್ಯ, ಆಸೆಗಳು ಬಲಿಯುವ ಸಂದರ್ಭದಲ್ಲಿ ಕೂಡ ಯಾವುದೇ ತಪ್ಪು ದಾರಿ ಹಿಡಿಯದಂತೆ ಜೀವನ ಸವೆಸಿದವರು.

ಸದಾ ಕ್ರಿಯಾಶೀಲವಾಗಿದ್ದ ಸಾವಿತ್ರಜ್ಜಿ ಒಂದಿಲ್ಲೊಂದು ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು. ಬೇಸಿಗೆ ಬಂದಾಗ ತೋಟಕ್ಕೆ ಹೋಗಿ ಅಲ್ಲಿನ ದೇಖರಿಕೆಯನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಗೆ ಮಳೆಗಾಲ ಬಂತೆಂದರೆ ಸಾಕು ಅದೆಷ್ಟೋ ಕೆಲಸಗಳು. ಕಾಡಿಗೆ ಹೋಗುತ್ತಿದ್ದ ಅಜ್ಜಿ ಮುರುಗಲ, ಉಪ್ಪಾಗೆಯನ್ನು ಹೆಕ್ಕಿ ತರುತ್ತಿದ್ದರು. ಗಂಡಸರಂತೆ ವೀರಗಚ್ಚೆಯನ್ನು ಹಾಕಿ ಮರವನ್ನು ಏರುತ್ತಿದ್ದುದು ವಿಶೇಷ. ನಮ್ಮೂರ ಫಾಸಲೆಯಲ್ಲಿನ ಉಪ್ಪಾಗೆ, ಮುರುಗಲ, ಹಲಸಿನ ಮರಗಳನ್ನೆಲ್ಲ ಸಲೀಸಾಗಿ ಏರಿಳಿಯುತ್ತಿದ್ದರಂತೆ ಸಾವಿತ್ರಜ್ಜಿ
ಅರಶಿಣ, ಕೋವೆ ಗೆಡ್ಡೆ, ಶುಂಟಿಗಳನ್ನು ಮನೆಯ ಹಿತ್ತಿಲಿನಲ್ಲಿ ಬೆಳೆಯುತ್ತಿದ್ದ ಈ ಅಜ್ಜಿ ಆಯಾಯಾ ಋತುಗಳಿಗೆ ತಕ್ಕಂತೆ ಸೌತೆಬಳ್ಳಿಯನ್ನೂ, ಮೊಗೆ ಬಳ್ಳಿಯನ್ನೂ ಹಾಕಿ ಹೇರಳ ಬೆಳೆತೆಗೆಯುತ್ತಿದ್ದರು.ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಸಾವಿತ್ರಜ್ಜಿ ಉದ್ದನೆಯ ದೋಟಿ ಗಳವನ್ನು ಹಿಡಿದು ದಾರಿಯ ಅಕ್ಕಪಕ್ಕದಲ್ಲಿದ್ದ ಗೇರು ಮರಗಳಲ್ಲಿದ್ದ ಗೇರು ಪೀಕಗಳನ್ನು ಕೊಯ್ಯುತ್ತಿದ್ದುದು ನನಗಿನ್ನೂ ನೆನಪಿನಲ್ಲಿದೆ.
ಅಜ್ಜಿ ಮುರುಗಲು, ಉಪ್ಪಾಗೆಯನ್ನು ಸಂಗ್ರಹಿಸಿ, ಅದನ್ನು ಒಣಗಿಸಿ ಮನೆಬಾಗಿಲಿಗೆ ಬರುತ್ತಿದ್ದ ಹೇರೂರು ಸಾಬನಿಗೋ ಅಥವಾ ಇನ್ನಿತರ ವ್ಯಾಪಾರಿಗಳಿಗೋ ಮಾರಾಟ ಮಾಡಿ ಕಾಸು ಮಾಡಿಕೊಳ್ಳುತ್ತಿದ್ದರು. ಈ ಕಾಸನ್ನು ಆಕೆ ತನ್ನ ಸಹೋದರರಿಗೆ ಕೊಡುತ್ತಿದ್ದರು. ಇಂತಹ ಅಜ್ಜಿ ಎಂದಿಗೂ ಮನೆಯವರಿಗೆ ಹೊರೆಯಾಗುವಂತೆ ಬದುಕಲಿಲ್ಲ.
ಇನ್ನುಳಿದಂತೆ ಸೂಜಿ ಮೆಣಸನ್ನೋ, ಹಲಸಿನ ಹಪ್ಪಳವನ್ನೋ ಸದಾ ಮಾಡುತ್ತಿರುತ್ತಿದ್ದ ಸಾವಿತ್ರಜ್ಜಿ ಚಿಕ್ಕ ಮಕ್ಕಳಿಗೆ ಕಲಿಸುತ್ತಿದ್ದ ಸಂಸ್ಕಾರ ಮಾತ್ರ ಆಹಾ.. ಸದಾ ನೆನಪಿನಲ್ಲಿ ಇರುತ್ತದೆ. ಸಂಪ್ರದಾಯದ ಮಟ್ಟಿಗೆ ಬಂದರೆ ಅಜ್ಜಿ ತುಸು ಹೆಚ್ಚೇ ಸ್ಟ್ರಿಕ್ಟ್ ಆಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ಮಾಡಬೇಕು ಎಂದರೆ ಮಾಡಲೇಬೇಕು. ಅದರಲ್ಲಿ ಸ್ವಲ್ಪವೇ ಹೆಚ್ಚೂ ಕಡಿಮೆ ಆದರೂ ಅಜ್ಜಿ ಕೆಂಡಾಮಂಡಲವಾಗುತ್ತಿದ್ದರು.
ನನಗೀಗಲೂ ನೆನಪಿದೆ. ಸಾವಿತ್ರಜ್ಜಿಯ ಮನೆಯಲ್ಲಿ ಚಿಕ್ಕ ಮಗುವೊಂದಿತ್ತು. ನಾಲ್ಕೈದು ವರ್ಷ ವಯಸ್ಸಿನದ್ದೇನೋ. ಅದೊಂದು ದಿನ ಊಟಕ್ಕೆ ಕುಳಿತಿದ್ದಾಗ ತುಂಬ ಹಠ ಮಾಡಿತ್ತು. ಊಟವನ್ನು ಅರ್ಧಕ್ಕೆ ಬಿಟ್ಟು ಹೋಗಲು ಮುಂದಾಗಿತ್ತು. ಸಾವಿತ್ರಜ್ಜಿ ತುಂಬ ಎಚ್ಚರಿಕೆ ನೀಡಿದ್ದರು. ಅನ್ನ ದೇವರ ಸ್ವರೂಪ, ಅನ್ನವನ್ನು ಹಾಳು ಮಾಡಬಾರದು. ಅನ್ನವನ್ನು ಬಿಟ್ಟು ಹೋದರೆ ಅದನ್ನು ತಲೆಗೆ ಹಾಕಿ ಕಟ್ಟುತ್ತೇನೆ ಎಂದರು. ನಾನು ಚಿಕ್ಕಂದಿನಿಂದಲೂ ಅನ್ನವನ್ನು ಬಾಳೆಯಲ್ಲಿ ಬಿಟ್ಟು ಎದ್ದರೆ ತಲೆಗೆ ಹಾಕಿ ಕಟ್ಟುತ್ತೇನೆ ಎನ್ನುವುದು ಹಿರಿಯರು ನೀಡುವ ಎಚ್ಚರಿಕೆಯಾಗಿತ್ತು. ಆದರೆ ಯಾರೊಬ್ಬರೂ ಹಾಗಿ ಮಾಡಿದ್ದನ್ನು ನೋಡಿರಲಿಲ್ಲ. ಆದರೆ ಆ ಮಗು ಹಠ ಮುಂದುವರಿಸಿ, ಊಟವನ್ನು ಬಿಟ್ಟು ಅರ್ಧದಲ್ಲಿಯೇ ಎದ್ದು ಹೋದಾಗ ಮಾತ್ರ ಆ ಬಾಳೆಯಲ್ಲಿನ ಅನ್ನವನ್ನು ಕಟ್ಟಿಕೊಂಡು ಸೀದಾ ತಂದು ಆ ಮಗುವಿನ ತಲೆಗೆ ಕಟ್ಟಿ ಬಿಟ್ಟಿದ್ದರು. ಇದು ಎಲ್ಲರಿಗೂ ಆಘಾತವನ್ನು ತಂದಿತ್ತು. ಆದರೆ ಆ ಮಗು ಮಾತ್ರ ಅಂದಿನಿಂದ ಅಂದಿನವರೆಗೂ ಊಟವನ್ನು ಅರ್ಧಕ್ಕೆ ಬಿಟ್ಟಿದ್ದು, ಅನ್ನವನ್ನು ಹಾಳು ಮಾಡಿದ್ದನ್ನು ಯಾರೂ ಕಂಡಿಲ್ಲ ನೋಡಿ.
ಈ ಸಾವಿತ್ರಜ್ಜಿ ತನ್ನ ಕೊನೆಯ ದಿನಗಳಲ್ಲಿ ತೀವ್ರ ಕೃಷಕಾಯರಾಗಿದ್ದರು. ಸಹಜವೆಂಬಂತೆ ಅನಾರೋಗ್ಯವೂ ಕಾಡಿತ್ತು. ಕಾಡಿನ ನಡುವೆಯೋ, ನಮ್ಮೂರ ರಸ್ತೆಯಲ್ಲೋ, ಅಥವಾ ನದಿಯ ಬಳಿಯೋ ಥಟ್ಟನೆ ಪ್ರತ್ಯಕ್ಷವಾಗಿ ಕೈಯಲ್ಲಿ ಯಾವುದೋ ತರಕಾರಿಯೋ ಅಥವಾ ಇನ್ನೇನನ್ನೋ ಹಿಡಿದು ಕಾಣಿಸಿಕೊಳ್ಳುತ್ತಿದ್ದ ಸಾವಿತ್ರಜ್ಜಿ ಅನರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಾಗ ನಾವು ಏನನ್ನೋ ಕಳೆದುಕೊಂಡಂತೆ ಆಡಿದ್ದೆವು.
ಅಜ್ಜಿ ತೀರಿಕೊಂಡಾಗ ಸ್ವಲ್ಪಸಮಸ್ಯೆಯೂ ಆಗಿತ್ತು. ಅಜ್ಜಿಗೆ ನಮ್ಮೂರು ತವರುಮನೆಯಾಗಿದ್ದ ಕಾರಣ ಆಕೆಯ ಅಂತ್ಯ ಸಂಸ್ಕಾರವನ್ನು ಎಲ್ಲಿ ಮಾಡಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಕೊನೆಗೆ ಆಕೆಯ ಅಂತ್ಯ ಸಂಸ್ಕಾರವನ್ನು ನಮ್ಮೂರ ನದಿ ತೀರದಲ್ಲಿ ಮಾಡಿದ್ದರು. ಸಾವಿತ್ರಜ್ಜಿ ಸದ್ದಿಲ್ಲದೇ ನಮ್ಮ ನಡುವೆ ಅಜರಾಮರ ಆಗಿಹೋಗಿದ್ದರು. ಈಗಲೂ ಸಾವಿತ್ರಜ್ಜಿ ನೆನಪಾಗುತ್ತಿರುತ್ತಾರೆ. ಅನ್ನ ಹಾಳು ಮಾಡಬಾರದು ಎಂಬ ಆಕೆಯ ಪಾಠ ನಮ್ಮೂರಿಗರನ್ನು ಸದಾ ನೆನಪಿನಲ್ಲಿ ಇರುತ್ತದೆ.

Saturday, February 23, 2019

ಒಳ್ಳೆಯ ಕಥೆ... ಕೆಟ್ಟ ನಿರೂಪಣೆ - ಮೆಹಬೂಬಾ (ನಾನು ನೋಡಿದ ಚಿತ್ರಗಳು-೫)

ಪ್ರೇಮಕಾವ್ಯ ಕಟ್ಟುವಲ್ಲಿ ಎಡವಿದ ಪುರಿ


ಒಂದು ಪೂರ್ವ ಜನ್ಮದ ಕಥೆ... ಆಗಾಗ ಬೀಳುವ ಕನಸು.. ಕನಸಿನಲ್ಲೇ ಕನವರಿಸುವ ಹುಡುಗ... ಥಟ್ಟನೆ ಪೂರ್ವ ಜನ್ಮದ ಹುಡುಗಿ ಕಣ್ಣೆದುರು ಬಂದರೆ....

ಇಂತದ್ದೊಂದು ಕಥೆ ಇಟ್ಟುಕೊಂಡು, ಭಾರತ ಹಾಗೂ ಪಾಕಿಸ್ಥಾನದ ಸಂಬಂಧದ ಕುರಿತು ತಿಳಿಸುವ ಸಿನಿಮಾ ಮೆಹಬೂಬಾ.

೧೯೭೧ ರ ಯುದ್ಧದ ಸಂದರ್ಭದಲ್ಲಿ ನಡೆಯುವ ಕಥೆ ಒಂದೆಡೆಯಾದರೆ, ೨೦೧೮ರ ವೇಳೆಗೆ ನಡೆಯುವ ಕಥೆ ಇನ್ನೊಂದು ಕಡೆ.

೧೯೭೧ರಲ್ಲಿ ಕಥಾ ನಾಯಕ ಪಾಕಿಸ್ಥಾನಿ ಸೈನಿಕ. ಆಗ ನಾಯಕಿ ಭಾರತದ ಹಿಂದೂ ಯುವತಿ. ೨೦೧೮ರಲ್ಲಿ ನಾಯಕ ಭಾರತದ ಸೈನಿಕನಾಗುವ ಮಹತ್ವಾಕಾಂಕ್ಷೆ ಉಳ್ಳವನು. ನಾಯಕಿ ಪಾಕಿಸ್ಥಾನಿ.

ನಾಯಕನಿಗೆ ಹಾಗೂ ನಾಯಕಿಗೆ ತನ್ನ ಹಿಂದಿನ ಜನ್ಮದ ಕಥೆ ಆಗಾಗ ಕನಸಿನಲ್ಲಿ ಕಾಡುತ್ತಿರುತ್ತದೆ. ವಾಸ್ತವದಲ್ಲಿ ನಾಯಕ- ನಾಯಕಿ ಎದುರಾಗುತ್ತಾರೆ. ಟ್ರೆಕ್ಕಿಂಗ್ ಹುಚ್ಚಿನ ನಾಯಕನಿಗೆ ಹಿಮಾಲಯದ ಪರ್ವತದ ನಡುವಿನ ಕಮರಿಯ ಆಳದಲ್ಲಿ ಸಿಗುವ ಹಿಂದಿನ ಜನ್ಮದ ನಾಯಕಿಯ ಮೃತದೇಹ. ಆಗ ಸಿಗುವ ಡೈರಿ, ಹಳೆಯ ಕಥೆ.. ಪ್ರಸ್ತುತ ಜನ್ಮದಲ್ಲಿ ನಾಯಕಿಯನ್ನು ಹುಡುಕಿ ಪಾಕಿಸ್ಥಾನ ಕ್ಕೆ ಹೊರಡುವುದು ಇತ್ಯಾದಿ..

ಕಥೆಯ ಒನ್ ಲೈನ್ ಚನ್ನಾಗಿದೆ. ಆದರೆ ನಿರ್ದೇಶಕರು ಅಲ್ಲಲ್ಲಿ ಸಿನಿಮಾವನ್ನು ಬಕ್ವಾಸ್ ಆಗಿಸಿದ್ದಾರೆ.

ಭಾರತ - ಪಾಕ್ ನಡುವೆ ಸಂಸ್ಕೃತಿ ವಿನಿಮಯದ ರೂಪದಲ್ಲಿ ವಿದ್ಯಾರ್ಥಿನಿ ಭಾರತಕ್ಕೆ ಬರುತ್ತಾಳೆ ಎನ್ನುವಂತದ್ದನ್ನು ನಿರ್ದೇಶಕರು ತೋರಿಸಿದ್ದಾರೆ.

ಸಿನಿಮಾ ಅಂತ್ಯದಲ್ಲಿ ಭಾರತದ ಮಹಿಳಾ ಸೈನಿಕರು ಗಡಿ ಕಾಯುವ ಅಂಶ ತೋರಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಪಾಕಿ ಸೈನಿಕರ ಆಕ್ರೋಶ, ಸುಮ್ಮ ಸುಮ್ಮನೆ ಗುಂಡು ಹಾರಿಸುವುದು ಇತ್ಯಾದಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕರು ಚಿತ್ರದ ಮೇಲೆ ತಮ್ಮ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಗಟ್ಟಿ ನಿರೂಪಣೆ ಇದ್ದಿದ್ದರೆ ಕ್ಲೈಮ್ಯಾಕ್ಸ್ ಇನ್ನಷ್ಟು ಸುಂದರ ಹಾಗೂ ಸಹಜವಾಗಿ ಮೂಡಿ ಬರುತ್ತಿತ್ತು.

ಇಸ್ಲಾಂ ಜಿಂದಾಬಾದ್... ಎನ್ನುವುದು ನೋಡುಗರನ್ನು ಇನ್ನೊಂದು ಹಂತಕ್ಕೆ ತಲುಪಿಸುತ್ತದೆ. ಪಾಕಿಸ್ಥಾನಕ್ಕೆ ಜಿಂದಾಬಾದ್ ಹೇಳು ಎಂದು ಖಳ ನಾಯಕ, ನಾಯಕನ ಮೇಲೆ ಒತ್ತಡ ಹೇರಿದಾಗ ತಿರುಗಿ ಬೀಳುವ ನಾಯಕ ಸನ್ನಿವೇಶವನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಆದರೆ ಭಾರತೀಯ ಮಹಿಳಾ ಸೈನಿಕರನ್ನು ಕಾಮಿಡಿಯನ್ನಾಗಿಸಿದ್ದಾರೆ. ಇದು ಖಂಡಿತ ಸರಿಯಾದುದಲ್ಲ.

ತೆಲುಗಿನಲ್ಲಿ ಕಳೆದ ವರ್ಷ ತೆರೆಕಂಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಹೆಸರಾಂತ ನಿರ್ದೇಶಕ ಪುರಿ ಜಗನ್ನಾಥ್.

ಪುರಿ ಜಗನ್ನಾಥ್ ತಮ್ಮ ಪುತ್ರ ಆಕಾಶ್ ಪುರಿಯನ್ನು ಬೆಳ್ಳಿ ತೆರೆಗೆ ತರಲು ಆಯ್ದುಕೊಂಡ ಸಿನಿಮಾ ಮೆಹಬೂಬಾ. ಮೊದಲ ಚಿತ್ರದಲ್ಲಿ ಆಕಾಶ್ ಉತ್ತಮವಾಗಿ ನಟಿಸಿದ್ದಾರೆ. ಆದರೆ ಮತ್ತಷ್ಟು ಪಳಗುವ ಅಗತ್ಯವಿದೆ. ಮೊದಲ ಚಿತ್ರದ ಕಾರಣಕ್ಕೆ ಆಕಾಶ್ ಗೆ ಭೇಷ್ ಎನ್ನಬಹುದು.

ಚಿತ್ರದ ನಾಯಕಿ ಕನ್ನಡತಿ ನೇಹಾ ಶೆಟ್ಟಿ. ಮುಂಗಾರು ಮಳೆಯಲ್ಲಿ ನಟಿಸಿದ್ದ ಮಾದಕ ಚಲುವೆ ಚಿತ್ರದಲ್ಲಿ ಉತ್ತಮ ನಟನೆಯೊಂದಿಗೆ ಸೆಳೆಯುತ್ತಾಳೆ. ಮುಸ್ಲಿಂ ಯುವತಿಯಾಗಿ ನಟಿಸಿದ ಈಕೆ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಾಳೆ. ಕನ್ನಡದ ಚಲನಚಿತ್ರ ರಂಗದವರು ನೇಹಾ ಶೆಟ್ಟಿಯವರಿಗೆ ಅವಕಾಶ ಯಾಕೆ ಕೊಡಲಿಲ್ಲ ಎನ್ನುವುದು ಇನ್ನೂ ನನಗೆ ಕಾಡುತ್ತಿದೆ.

ಉಳಿದಂತೆ ರಾಹುಲ್ ಶರ್ಮಾ, ಸಯ್ಯಾಜಿ ಶಿಂಧೆ, ಪ್ರಮೋದಿನಿ ನಟನೆ ಚನ್ನಾಗಿದೆ.

ಕನ್ನಡದವರೇ ಆದ ಅಜನೀಶ್ ಲೋಕನಾಥ್ ಸಂಗೀತ ಒಂದು ಮಟ್ಟಿಗೆ ಇದೆ. ಆದರೆ ಹಾಡುಗಳು ನೆನಪಿನಲ್ಲಿ ಇರುವುದಿಲ್ಲ.

ಎಲ್ಲ ತೆಲುಗು ಚಿತ್ರಗಳಂತೆ ನಾಟಕೀಯತೆ ಸಾಕಷ್ಟಿದೆ. ಸರಿಯಾಗಿ ಕೆತ್ತಿದ್ದರೆ ಪ್ರೇಮಕಾವ್ಯ ಆಗಬಹುದಿತ್ತು. ಆದರೆ ಮೆಹಬೂಬಾಳನ್ನು ನಿರ್ದೇಶಕರು ಕುರೂಪಿ ಮಾಡಿದ್ದಾರೆ. ಕನ್ನಡವೂ ಸೇರಿ ಹಲವು ಭಾಷೆಗಳಲ್ಲಿ ಒಳ್ಳೆಯ ಚಿತ್ರ ಕೊಟ್ಟ ಪುರಿ ಜಗನ್ನಾಥ್ ಹಲವು ಸಂದರ್ಭಗಳಲ್ಲಿ ಎಡವಿದ್ದಾರೆ. ಹಿಡಿತ ಕಳೆದುಕೊಂಡಿದ್ದಾರೆ.

ಚಿತ್ರ ಅತ್ಯುತ್ತಮವಲ್ಲ. ಆದರೆ ಒಮ್ಮೆ ನೋಡಬಹುದು ಅಷ್ಟೇ.
ಚಿತ್ರಕ್ಕೆ ನಾನು ಕೊಡುವ ಅಂಕ ೫ ಕ್ಕೆ ೨.೫