ಪ್ರತಿ ಮನೆಯಲ್ಲಿಯೂ ಅಜ್ಜಿಯರು ಇರುತ್ತಾರೆ. ಎಲ್ಲ ಅಜ್ಜಿಯರೂ ಒಂದಲ್ಲ ಒಂದು ಕಾರಣಕ್ಕೆ ವಿಶಿಷ್ಟವಾಗಿರುತ್ತಾರೆ. ನಮ್ಮೂರಿನಲ್ಲಿ ಇದ್ದ ಅಜ್ಜಿಯರು ವಿಶಿಷ್ಟವಾಗಿದ್ದು. ನನ್ನ ನೆನಪಿನಲ್ಲಿ ಇರುವಂತೆ, ನಾನು ನೋಡಿದ ಅಜ್ಜಿಯ ವಿಶೇಷ ಗುಣಗಳನ್ನು ಹಂಚಿಕೊಳ್ಳದಿದ್ದರೆ ಅದೇನೋ ಕಳೆದುಕೊಂಡಂತಹ ಬಾವ.
ಅಜ್ಜಿಯರು ಎಂದರೆ ಊರಿನ ಪಾಲಿಗೆ ಹೆಮ್ಮರದಂತೆ. ಅವರು ಆಲದಮರವಾಗಿ ನಿಂತು ತಮ್ಮ ಬೀಳಲುಗಳಲ್ಲಿ ಆಟವಾಡಲು, ಅದೆಷ್ಟೋ ಮೊಮ್ಮಕ್ಕಳು, ಮರಿಮಕ್ಕಳಿಗೆ ಅವಕಾಶ ನೀಡುತ್ತಾರೆ. ಆಗಾಗ ಗದರುವ, ಬಹುಕಾಲ ಪ್ರೀತಿಯಿಂದ, ಅಕ್ಕರೆಯಿಂದ ಮಾತನಾಡುತ್ತ ಇರುವ ಅಜ್ಜಿಯರು ಮೊಮ್ಮಕ್ಕಳ ಪಾಲಿಗೆ ಬಹಳ ಆಪ್ತರಾಗುತ್ತಾರೆ.
ನಮ್ಮೂರಲ್ಲಿ ಇರುವುದು
ಐದಾರು ಮನೆಗಳಷ್ಟೇ. ಈ ಐದಾರು ಮನೆಗಳಲ್ಲಿಯೇ ಐದಾರು ಅಜ್ಜಿಯರು ಬಹಳ ಚಿರಪರಿಚಿತರಾಗಿ ನಿಂತಿದ್ದಾರೆ.
ನಾನು ಈಗ ಹೇಳ ಹೊರಟಿರುವ ಅಜ್ಜಿಯರ್ಯಾರೂ ಬದುಕಿಲ್ಲ. ನನ್ನ ಬಾಲ್ಯದ ಹಸಿರ ನೆನಪುಗಳಲ್ಲಿ ಈ ಅಜ್ಜಿಯರು
ಸದಾ ನಿಂತಿದ್ದಾರೆ.
ನಮ್ಮೂರ ಅಜ್ಜಿಯರ
ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವವರು ಸಾವಿತ್ರಜ್ಜಿ, ಬಂಗಾರಜ್ಜಿ, ಮಂಕಾಳಜ್ಜಿ ಮತ್ತಿತರರು. ತಮ್ಮದೇ
ಆದ ವಿಶಿಷ್ಟ ಗುಣಗಳಿಂದ ಇವರು ಸದಾ ನೆನಪಿನಲ್ಲಿ ಉಳಿದಿದ್ದಾರೆ. ಇವರಲ್ಲಿ ನಾನು ಸಾವಿತ್ರಜ್ಜಿ ಕುರಿತು ವಿಶೇಷವಾಗಿ ಹೇಳಬೇಕು.
ನಮ್ಮೂರ ಅಜ್ಜಿಯರ
ಕುರಿತು ಹೇಳುವಾಗ ಪ್ರಮುಖ ಸಾಲಿನಲ್ಲಿ ನಿಲ್ಲುವವರು ಸಾವಿತ್ರಜ್ಜಿ. ನಾನು ನೋಡುವ ವೇಳೆಗೆ ಆ ಅಜ್ಜಿಗೆ
85 ವಯಸ್ಸಾಗಿತ್ತೇನೋ. ವಯಸ್ಸು ಅಷ್ಟಾಗಿದ್ದರೂ ಬಹಳ ಗಟ್ಟುಮುಟ್ಟಿನ ಅಜ್ಜಿ ಅವರಾಗಿದ್ದರು. ಸದಾ ಚಟುವಟಿಕೆಯಿಂದ
ಕಾರ್ಯ ನಿರ್ವಹಣೆ ಮಾಡುತ್ತಿದ್ದ ಆ ಅಜ್ಜಿ ನಮ್ಮ ಪಾಲಿಗೆ ಪರಮ ವಿಸ್ಮಯದ ಸಂಗತಿಯಾಗಿದ್ದರು.
ಆ ಸಾವಿತ್ರಜ್ಜಿಗೆ
ನಮ್ಮೂರು ತವರು ಮನೆ. ಬಾಲ್ಯದಲ್ಲೇ ಆಕೆಗೆ ವಿವಾಹವಾಗಿತ್ತು. ನಮ್ಮೂರಿನಿಂದ ಕೊಂಚ ದೂರದಲ್ಲೇ ಇರುವ
ಹೂವಿನಮನೆ ಎಂಬಲ್ಲಿಗೆ ಸಾವಿತ್ರಜ್ಜಿಯನ್ನು ಮದುವೆ ಮಾಡಿಕೊಟ್ಟಿದ್ದರು. ಆ ದಿನಗಳಲ್ಲಿ ರೋಗಗಳೂ ಜಾಸ್ತಿಯಾಗಿದ್ದವಂತೆ.
ಈ ಕಾರಣದಿಂದ ಸಾವಿತ್ರಜ್ಜಿಯ ಪತಿ ತೀರಿಕೊಂಡಿದ್ದರು. ಏನೂ ಅರಿಯದ ವಯಸ್ಸಿನಲ್ಲಿ ಮದುವೆ ಮಾಡಿದ್ದರಿಂದ,
ಅಕಾಲದಲ್ಲಿ ಪತಿ ತೀರಿಕೊಂಡಿದ್ದರಿಂದ ಸಾವಿತ್ರಜ್ಜಿ ನಂತರದ ದಿನಗಳಲ್ಲಿ ತವರುಮನೆಗೆ ವಾಪಾಸಾಗಿದ್ದರು.
ತವರಿಗೆ ಅಜ್ಜಿ ವಾಪಾಸಾಗಿದ್ದರೂ
ಮನೆಯವರ ಮೇಲೆ ಹೊರೆಯಾಗಿ ಬದುಕಬಾರದು ಎನ್ನುವುದು ಆಕೆ ರೂಢಿಸಿಕೊಂಡ ನೀತಿ. ಅದಕ್ಕಾಗಿ ತನ್ನ ಅನ್ನವನ್ನು
ತಾನೇ ದುಡಿದುಕೊಳ್ಳಬೇಕು ಎಂಬ ಛಲ ತೊಟ್ಟಿದ್ದಳು. ಆಕೆ ಮನೆಗೆ ಮರಳಿದಾಗ ಆಕೆ ಹರೆಯಕ್ಕೆ ಆಗತಾನೆ ಕಾಲಿಟ್ಟಿರಬಹುದು.
ಆಕೆಗೆ ಇಬ್ಬರು ತಮ್ಮಂದಿರು ಇದ್ದರು. ಅವರೂ ಚಿಕ್ಕವರು. ಅವರ ನಡುವೆ ತಾನು ಅವರಂತೆ ಬಾಳಿದಳು, ಬದುಕಿದಳು.
ಆಗೆಲ್ಲ ಗಂಡ ಸತ್ತರೆ
ತಲೆಯನ್ನು ಬೋಳಿಸಿ, ಕೆಂಪು ಸೀರೆಯನ್ನೋ ಅಥವಾ ಇನ್ಯಾವುದೋ ರೀತಿಯ ಸೀರೆಯನ್ನು ಉಡಿಸುತ್ತಿದ್ದರು.
ತನ್ನ ಬದುಕಿನ ಕೊನೆಯ ಉಸಿರು ಇರುವ ತನಕವೂ ಸಾವಿತ್ರಜ್ಜಿ ಆ ಬಟ್ಟೆಯನ್ನೇ ತೊಟ್ಟಿದ್ದಳು. ಅಷ್ಟೇ ಏಕೆ
ತನ್ನ ಬದುಕಿನ ಅಮೂಲ್ಯ, ಆಸೆಗಳು ಬಲಿಯುವ ಸಂದರ್ಭದಲ್ಲಿ ಕೂಡ ಯಾವುದೇ ತಪ್ಪು ದಾರಿ ಹಿಡಿಯದಂತೆ ಜೀವನ
ಸವೆಸಿದವರು.
ಸದಾ ಕ್ರಿಯಾಶೀಲವಾಗಿದ್ದ
ಸಾವಿತ್ರಜ್ಜಿ ಒಂದಿಲ್ಲೊಂದು ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು. ಬೇಸಿಗೆ
ಬಂದಾಗ ತೋಟಕ್ಕೆ ಹೋಗಿ ಅಲ್ಲಿನ ದೇಖರಿಕೆಯನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಗೆ ಮಳೆಗಾಲ ಬಂತೆಂದರೆ
ಸಾಕು ಅದೆಷ್ಟೋ ಕೆಲಸಗಳು. ಕಾಡಿಗೆ ಹೋಗುತ್ತಿದ್ದ ಅಜ್ಜಿ ಮುರುಗಲ, ಉಪ್ಪಾಗೆಯನ್ನು ಹೆಕ್ಕಿ ತರುತ್ತಿದ್ದರು.
ಗಂಡಸರಂತೆ ವೀರಗಚ್ಚೆಯನ್ನು ಹಾಕಿ ಮರವನ್ನು ಏರುತ್ತಿದ್ದುದು ವಿಶೇಷ. ನಮ್ಮೂರ ಫಾಸಲೆಯಲ್ಲಿನ ಉಪ್ಪಾಗೆ,
ಮುರುಗಲ, ಹಲಸಿನ ಮರಗಳನ್ನೆಲ್ಲ ಸಲೀಸಾಗಿ ಏರಿಳಿಯುತ್ತಿದ್ದರಂತೆ ಸಾವಿತ್ರಜ್ಜಿ
ಅರಶಿಣ, ಕೋವೆ ಗೆಡ್ಡೆ,
ಶುಂಟಿಗಳನ್ನು ಮನೆಯ ಹಿತ್ತಿಲಿನಲ್ಲಿ ಬೆಳೆಯುತ್ತಿದ್ದ ಈ ಅಜ್ಜಿ ಆಯಾಯಾ ಋತುಗಳಿಗೆ ತಕ್ಕಂತೆ ಸೌತೆಬಳ್ಳಿಯನ್ನೂ,
ಮೊಗೆ ಬಳ್ಳಿಯನ್ನೂ ಹಾಕಿ ಹೇರಳ ಬೆಳೆತೆಗೆಯುತ್ತಿದ್ದರು.ನಾನು ಶಾಲೆಗೆ ಹೋಗುತ್ತಿದ್ದ
ಸಂದರ್ಭದಲ್ಲಿ ಈ ಸಾವಿತ್ರಜ್ಜಿ ಉದ್ದನೆಯ ದೋಟಿ ಗಳವನ್ನು ಹಿಡಿದು ದಾರಿಯ ಅಕ್ಕಪಕ್ಕದಲ್ಲಿದ್ದ ಗೇರು
ಮರಗಳಲ್ಲಿದ್ದ ಗೇರು ಪೀಕಗಳನ್ನು ಕೊಯ್ಯುತ್ತಿದ್ದುದು ನನಗಿನ್ನೂ ನೆನಪಿನಲ್ಲಿದೆ.
ಅಜ್ಜಿ ಮುರುಗಲು,
ಉಪ್ಪಾಗೆಯನ್ನು ಸಂಗ್ರಹಿಸಿ, ಅದನ್ನು ಒಣಗಿಸಿ ಮನೆಬಾಗಿಲಿಗೆ ಬರುತ್ತಿದ್ದ ಹೇರೂರು ಸಾಬನಿಗೋ ಅಥವಾ
ಇನ್ನಿತರ ವ್ಯಾಪಾರಿಗಳಿಗೋ ಮಾರಾಟ ಮಾಡಿ ಕಾಸು ಮಾಡಿಕೊಳ್ಳುತ್ತಿದ್ದರು. ಈ ಕಾಸನ್ನು ಆಕೆ ತನ್ನ ಸಹೋದರರಿಗೆ
ಕೊಡುತ್ತಿದ್ದರು. ಇಂತಹ ಅಜ್ಜಿ ಎಂದಿಗೂ ಮನೆಯವರಿಗೆ ಹೊರೆಯಾಗುವಂತೆ ಬದುಕಲಿಲ್ಲ.
ಇನ್ನುಳಿದಂತೆ ಸೂಜಿ ಮೆಣಸನ್ನೋ, ಹಲಸಿನ ಹಪ್ಪಳವನ್ನೋ ಸದಾ ಮಾಡುತ್ತಿರುತ್ತಿದ್ದ ಸಾವಿತ್ರಜ್ಜಿ ಚಿಕ್ಕ ಮಕ್ಕಳಿಗೆ ಕಲಿಸುತ್ತಿದ್ದ ಸಂಸ್ಕಾರ ಮಾತ್ರ ಆಹಾ.. ಸದಾ ನೆನಪಿನಲ್ಲಿ ಇರುತ್ತದೆ. ಸಂಪ್ರದಾಯದ ಮಟ್ಟಿಗೆ ಬಂದರೆ ಅಜ್ಜಿ ತುಸು ಹೆಚ್ಚೇ ಸ್ಟ್ರಿಕ್ಟ್ ಆಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ಮಾಡಬೇಕು ಎಂದರೆ ಮಾಡಲೇಬೇಕು. ಅದರಲ್ಲಿ ಸ್ವಲ್ಪವೇ ಹೆಚ್ಚೂ ಕಡಿಮೆ ಆದರೂ ಅಜ್ಜಿ ಕೆಂಡಾಮಂಡಲವಾಗುತ್ತಿದ್ದರು.
ನನಗೀಗಲೂ ನೆನಪಿದೆ.
ಸಾವಿತ್ರಜ್ಜಿಯ ಮನೆಯಲ್ಲಿ ಚಿಕ್ಕ ಮಗುವೊಂದಿತ್ತು. ನಾಲ್ಕೈದು ವರ್ಷ ವಯಸ್ಸಿನದ್ದೇನೋ. ಅದೊಂದು ದಿನ
ಊಟಕ್ಕೆ ಕುಳಿತಿದ್ದಾಗ ತುಂಬ ಹಠ ಮಾಡಿತ್ತು. ಊಟವನ್ನು ಅರ್ಧಕ್ಕೆ ಬಿಟ್ಟು ಹೋಗಲು ಮುಂದಾಗಿತ್ತು.
ಸಾವಿತ್ರಜ್ಜಿ ತುಂಬ ಎಚ್ಚರಿಕೆ ನೀಡಿದ್ದರು. ಅನ್ನ ದೇವರ ಸ್ವರೂಪ, ಅನ್ನವನ್ನು ಹಾಳು ಮಾಡಬಾರದು.
ಅನ್ನವನ್ನು ಬಿಟ್ಟು ಹೋದರೆ ಅದನ್ನು ತಲೆಗೆ ಹಾಕಿ ಕಟ್ಟುತ್ತೇನೆ ಎಂದರು. ನಾನು ಚಿಕ್ಕಂದಿನಿಂದಲೂ
ಅನ್ನವನ್ನು ಬಾಳೆಯಲ್ಲಿ ಬಿಟ್ಟು ಎದ್ದರೆ ತಲೆಗೆ ಹಾಕಿ ಕಟ್ಟುತ್ತೇನೆ ಎನ್ನುವುದು ಹಿರಿಯರು ನೀಡುವ
ಎಚ್ಚರಿಕೆಯಾಗಿತ್ತು. ಆದರೆ ಯಾರೊಬ್ಬರೂ ಹಾಗಿ ಮಾಡಿದ್ದನ್ನು ನೋಡಿರಲಿಲ್ಲ. ಆದರೆ ಆ ಮಗು ಹಠ ಮುಂದುವರಿಸಿ,
ಊಟವನ್ನು ಬಿಟ್ಟು ಅರ್ಧದಲ್ಲಿಯೇ ಎದ್ದು ಹೋದಾಗ ಮಾತ್ರ ಆ ಬಾಳೆಯಲ್ಲಿನ ಅನ್ನವನ್ನು ಕಟ್ಟಿಕೊಂಡು ಸೀದಾ
ತಂದು ಆ ಮಗುವಿನ ತಲೆಗೆ ಕಟ್ಟಿ ಬಿಟ್ಟಿದ್ದರು. ಇದು ಎಲ್ಲರಿಗೂ ಆಘಾತವನ್ನು ತಂದಿತ್ತು. ಆದರೆ ಆ ಮಗು
ಮಾತ್ರ ಅಂದಿನಿಂದ ಅಂದಿನವರೆಗೂ ಊಟವನ್ನು ಅರ್ಧಕ್ಕೆ ಬಿಟ್ಟಿದ್ದು, ಅನ್ನವನ್ನು ಹಾಳು ಮಾಡಿದ್ದನ್ನು
ಯಾರೂ ಕಂಡಿಲ್ಲ ನೋಡಿ.
ಈ ಸಾವಿತ್ರಜ್ಜಿ
ತನ್ನ ಕೊನೆಯ ದಿನಗಳಲ್ಲಿ ತೀವ್ರ ಕೃಷಕಾಯರಾಗಿದ್ದರು. ಸಹಜವೆಂಬಂತೆ ಅನಾರೋಗ್ಯವೂ ಕಾಡಿತ್ತು. ಕಾಡಿನ
ನಡುವೆಯೋ, ನಮ್ಮೂರ ರಸ್ತೆಯಲ್ಲೋ, ಅಥವಾ ನದಿಯ ಬಳಿಯೋ ಥಟ್ಟನೆ ಪ್ರತ್ಯಕ್ಷವಾಗಿ ಕೈಯಲ್ಲಿ ಯಾವುದೋ
ತರಕಾರಿಯೋ ಅಥವಾ ಇನ್ನೇನನ್ನೋ ಹಿಡಿದು ಕಾಣಿಸಿಕೊಳ್ಳುತ್ತಿದ್ದ ಸಾವಿತ್ರಜ್ಜಿ ಅನರೋಗ್ಯಕ್ಕೀಡಾಗಿ
ಹಾಸಿಗೆ ಹಿಡಿದಾಗ ನಾವು ಏನನ್ನೋ ಕಳೆದುಕೊಂಡಂತೆ ಆಡಿದ್ದೆವು.
ಅಜ್ಜಿ ತೀರಿಕೊಂಡಾಗ
ಸ್ವಲ್ಪಸಮಸ್ಯೆಯೂ ಆಗಿತ್ತು. ಅಜ್ಜಿಗೆ ನಮ್ಮೂರು ತವರುಮನೆಯಾಗಿದ್ದ ಕಾರಣ ಆಕೆಯ ಅಂತ್ಯ ಸಂಸ್ಕಾರವನ್ನು
ಎಲ್ಲಿ ಮಾಡಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಕೊನೆಗೆ ಆಕೆಯ ಅಂತ್ಯ ಸಂಸ್ಕಾರವನ್ನು ನಮ್ಮೂರ
ನದಿ ತೀರದಲ್ಲಿ ಮಾಡಿದ್ದರು. ಸಾವಿತ್ರಜ್ಜಿ ಸದ್ದಿಲ್ಲದೇ ನಮ್ಮ ನಡುವೆ ಅಜರಾಮರ ಆಗಿಹೋಗಿದ್ದರು. ಈಗಲೂ ಸಾವಿತ್ರಜ್ಜಿ
ನೆನಪಾಗುತ್ತಿರುತ್ತಾರೆ. ಅನ್ನ ಹಾಳು ಮಾಡಬಾರದು
ಎಂಬ ಆಕೆಯ ಪಾಠ ನಮ್ಮೂರಿಗರನ್ನು ಸದಾ ನೆನಪಿನಲ್ಲಿ ಇರುತ್ತದೆ.
No comments:
Post a Comment